Tag: Dowry

  • ಫ್ಯಾನಿಗೆ ಕೈ ಕಟ್ಟಿ 3-4 ಗಂಟೆ ಹಲ್ಲೆ ಮಾಡಿ ವಿಡಿಯೋ ಮಾಡ್ದ – ಪತ್ನಿಯ ಪೋಷಕರಿಗೆ ಕಳುಹಿಸಿ ಬೆದರಿಸಿದ ಪತಿರಾಯ

    ಫ್ಯಾನಿಗೆ ಕೈ ಕಟ್ಟಿ 3-4 ಗಂಟೆ ಹಲ್ಲೆ ಮಾಡಿ ವಿಡಿಯೋ ಮಾಡ್ದ – ಪತ್ನಿಯ ಪೋಷಕರಿಗೆ ಕಳುಹಿಸಿ ಬೆದರಿಸಿದ ಪತಿರಾಯ

    ಲಕ್ನೋ: ಕ್ರೂರ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೈಯನ್ನು ಸೀಲಿಂಗ್ ಫ್ಯಾನ್‍ಗೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟೆನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆಯು ಉತ್ತರಪ್ರದೇಶದ ಷಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದ್ದು, ತವರು ಮನೆಯಿಂದ ವರದಕ್ಷಿಣೆ ತರುವಂತೆ ಹೇಳಿ ಈ ರೀತಿ ಮೃಗೀಯವಾಗಿ ವರ್ತಿಸಿದ್ದಾನೆ.

    ಘಟನೆ ವಿವರ: ಕ್ರೂರ ಪತಿ ತನ್ನ ಪತ್ನಿಗೆ ತವರು ಮನೆಯಿಂದ 50,000 ರೂ. ಹಣವನ್ನು ತರುವಂತೆ ಹೇಳಿದ್ದಾನೆ. ಆದರೆ ಪತ್ನಿ ಈ ವಿಚಾರವನ್ನು ನಿರಾಕರಿಸಿದ್ದರು. ಇದರಿಂದ ಸಿಟ್ಟುಗೊಂಡ ಪತಿರಾಯ ಈ ರೀತಿ ಕ್ರೂರ ವರ್ತನೆ ತೋರಿದ್ದಾನೆ.

    ಪತಿ ತನ್ನ ಪತ್ನಿಯ ಕೈಗಳನ್ನು ಆಕೆಯ ದುಪ್ಪಟ್ಟದಿಂದಲೇ ಫ್ಯಾನಿಗೆ ಕಟ್ಟಿ ಹಾಕಿದ್ದಾನೆ. ನಂತರ ಬೆಲ್ಟ್ ನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ್ದಾನೆ. ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪವರೆಗೂ ಬಿಡದೆ ಹಲ್ಲೆ ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪತಿ ಮಹಾಶಯ ತಾನು ಮಾಡಿದ ಹೀನ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಆ ವಿಡಿಯೋವನ್ನು ಪತ್ನಿಯ ಸಹೋದರು ಮತ್ತು ಪೋಷಕರಿಗೆ ಕಳುಹಿಸಿದ್ದಾನೆ. ಅಲ್ಲದೇ ತನ್ನ ಬೇಡಿಕೆಯನ್ನು ಪೂರ್ಣಗೊಳಿಸದಿದ್ದರೆ ಮತ್ತೆ ಇದೇ ರೀತಿಯ ಘಟನೆ ಮುಂದುವರೆಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.

    ಸುಮಾರು 3-4 ಗಂಟೆಗಳ ಕಾಲ ಹೊಡೆದಿದ್ದು, ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಬಳಿಕ ನನಗೆ ಎಚ್ಚರವಾಗ ನನ್ನ ಕೈಗಳು ಸೀಲಿಂಗ್ ಫ್ಯಾನ್ ಗೆ ಕಟ್ಟಿ ಹಾಕಲಾಗಿತ್ತು. ನಾನು ವಿದ್ಯಾವಂತಳಲ್ಲ. ಆದ್ದರಿಂದ ನಾನು ಈ ಸ್ಥಿತಿಯಲ್ಲಿದ್ದೇನೆ ಎಂದು ನೊಂದ ಮಹಿಳೆ ಹೇಳಿದ್ದಾರೆ.

    ಆ ವಿಡಿಯೋ ಮೂಲಕ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿ ಪತಿ ಮತ್ತು ಅವನ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ದೂರು ದಾಖಲಿಸುತ್ತಿದ್ದಂತೆಯೇ ಇತ್ತ ಎಲ್ಲರೂ ತಲೆಮರೆಸಿಕೊಂಡಿದ್ದಾರೆ.ಹೀಗಾಗಿ ಇದೂವರೆಗೂ ಪತಿ ಮತ್ತು ಆತನ ಕುಟುಂಬದವರನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  • ಪ್ರೀತಿಸಿ ಮದ್ವೆಯಾಗಿ ಸಾಲಕ್ಕಾಗಿ ಸ್ನೇಹಿತನಿಗೆ ಪತ್ನಿಯನ್ನೇ ನೀಡಿದ

    ಪ್ರೀತಿಸಿ ಮದ್ವೆಯಾಗಿ ಸಾಲಕ್ಕಾಗಿ ಸ್ನೇಹಿತನಿಗೆ ಪತ್ನಿಯನ್ನೇ ನೀಡಿದ

    ಜೈಪುರ: ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ರಾಜಸ್ಥಾನದ ಸಿಖರ್ ನಗರದಲ್ಲಿ ನಡೆದಿದೆ.

    ಈಗ ಸಂತ್ರಸ್ತೆ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಹಲ್ಲೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. 2010ರಲ್ಲಿ ಜೈಪುರ ಯುವಕನ ಜೊತೆ ಮಹಿಳೆಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಸುಮಾರು ಐದು ಲಕ್ಷ ರೂಪಾಯಿ ನಗದು ಹಾಗೂ ಬಂಗಾರವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.

    ಮದುವೆಯ ನಂತರ ಪತಿ ಕುಟುಂಬಸ್ಥರು ವರದಕ್ಷಿಣೆಗಾಗಿ ಪ್ರತಿದಿನ ಆಕೆಗೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ ರೂಮಿನಲ್ಲಿ ಕೂಡಿ ಹಾಕಿ ಪತಿ, ಅತ್ತೆ, ಮಾವ, ಮೈದುನ ಸೇರಿದಂತೆ ಮನೆಯವರೆಲ್ಲ ಹೊಡೆಯುತ್ತಿದ್ದರು ಅಂತಾ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಮದ್ಯವ್ಯಸನಿ ಪತಿ ಮೈತುಂಬ ಸಾಲ ಮಾಡಿಕೊಂಡಿದ್ದನು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಬದಲಿಗೆ ನನ್ನನ್ನು ಸ್ನೇಹಿತರಿಗೆ ನೀಡಿದ್ದಾನೆ. ಸ್ನೇಹಿತರಿಂದ ಅತ್ಯಾಚಾರವೆಸಗಿಸಿದ್ದಾನೆ. ನನಗೆ ನಶೆ ಬರುವ ಪದಾರ್ಥವನ್ನು ತಿನ್ನಿಸುತ್ತಿದ್ದನು ಎಂದು ಸಂತ್ರಸ್ತೆ ದೂರಿದ್ದಾರೆ.

    ಇಷ್ಟು ಮಾಡಿದರೂ ಪತ್ನಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅನಾಥಾಶ್ರಮದಲ್ಲಿ ಬಿಟ್ಟು ಹೋಗಿದ್ದನು. ನಂತರ ಸಂತ್ರಸ್ತೆ ಎಲ್ಲ ವಿಚಾರವನ್ನೂ ಪೋಷಕರಿಗೆ ತಿಳಿಸಿದ್ದು, ಬಳಿಕ ಪೋಷಕರು ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮದ್ವೆಯಾಗಿ ಮೂರು ತಿಂಗಳಾದ್ರು ಗುಡ್ ನ್ಯೂಸ್ ನೀಡದಕ್ಕೆ ಸೆಕ್ಸ್ ಫಿಲ್ಮ್ ತೋರಿಸಿ ಡಾಕ್ಟರ್ ಪತಿಯ ಕಿರುಕುಳ

    ಮದ್ವೆಯಾಗಿ ಮೂರು ತಿಂಗಳಾದ್ರು ಗುಡ್ ನ್ಯೂಸ್ ನೀಡದಕ್ಕೆ ಸೆಕ್ಸ್ ಫಿಲ್ಮ್ ತೋರಿಸಿ ಡಾಕ್ಟರ್ ಪತಿಯ ಕಿರುಕುಳ

    ಬೆಂಗಳೂರು: ಮದುವೆಯಾಗಿ ಮೂರು ತಿಂಗಳಾದ್ರೂ ಗರ್ಭಿಣಿಯಾಗಿಲ್ಲ ಅಂತಾ ವೈದ್ಯ ಪತಿಯೊಬ್ಬ ಪತ್ನಿಗೆ ಸೆಕ್ಸ್ ಫಿಲ್ಮ್ ಗಳನ್ನು ತೋರಿಸಿ ಕಿರುಕುಳ ನೀಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಂಜುನಾಥ್ ಕಿರುಕುಳ ನೀಡಿದ ವೈದ್ಯ ಪತಿ. ಮಂಜುನಾಥ್ ಮೂರು ವರ್ಷಗಳ ಹಿಂದೆ ಸ್ವಾತಿ (ಹೆಸರು ಬದಲಾಯಿಸಲಾಗಿದೆ) ಎಂಬವರನ್ನು ಮದುವೆ ಆಗಿದ್ದನು. ಆದ್ರೆ ಮದುವೆಯಾಗಿ ಮೂರು ತಿಂಗಳಾದ್ರು ಪತ್ನಿ ಗುಡ್ ನ್ಯೂಸ್ ನೀಡಿಲ್ಲ ಅಂತಾ ಸೆಕ್ಸ್ ಫಿಲ್ಮ್ ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ ಅಂತಾ ಸ್ವಾತಿ ಆರೋಪಿಸಿದ್ದಾರೆ.

    ಸೆಕ್ಸ್ ಫಿಲ್ಮ್ ಗಳಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ಮಕ್ಕಳು ಆಗುತ್ತವೆ ಅಂತಾ ಹಿಂಸೆ ನೀಡುತ್ತಿದ್ದನಂತೆ. ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸದೇ ಹೋದ್ರೆ ನಿನ್ನ ಜೊತೆಗಿನ ಲೈಂಗಿಕ ಕ್ರಿಯೆ ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಇಷ್ಟು ದಿನಗಳಾದ್ರು ಮಕ್ಕಳಾಗದಕ್ಕೆ ಮಾವನ ಜೊತೆ ಮಲಗಬೇಕೆಂದು ಸಹ ಪತಿ ಮಂಜುನಾಥ್ ಬಲವಂತ ಮಾಡುತ್ತಿದ್ದ ಅಂತಾ ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಮಂಜನಾಥ್ ಸೋದರ ಪಾರೆಸ್ಟರ್ ರಂಗನಾಥ್ ಮತ್ತು ಅತ್ತೆ-ಮಾವ ಸಹ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಎಂದು ಸ್ವಾತಿ ದೂರಿನಲ್ಲಿ ದಾಖಲಿಸಿದ್ದಾರೆ.

    ಮೆಜೆಸ್ಟಿಕ್ ನಲ್ಲಿರುವ ನನ್ನ ತಂದೆಯ ಮನೆಯನ್ನು ಮಾರಾಟ ಮಾಡಿ ಹಣ ತಂದುಕೊಡನೇಕೆಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಪತಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಮಾತ್ರ ಮೂರು ತಿಂಗಳವರೆಗೂ ಎಫ್ ಐಆರ್ ದಾಖಲಿಸಿಕೊಂಡಿಲ್ಲ. ಎಫ್ ಐಆರ್ ದಾಖಲಿಸಿದ್ದನು ಪ್ರಶ್ನೆ ಮಾಡಿದ ನನ್ನ ತಂದೆಯ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಅಂತಾ ಸ್ವಾತಿ ಆರೋಪ ಮಾಡಿದ್ದಾರೆ.

    ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪತ್ನಿಯನ್ನ ಕಟ್ಟಿ ಹಾಕಿ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ!

    ಪತ್ನಿಯನ್ನ ಕಟ್ಟಿ ಹಾಕಿ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ!

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಂದಲೇ ಪತ್ನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಪತಿ ವರದಕ್ಷಿಣೆ ಕೊಡಲಿಲ್ಲ ಎಂದು ಪ್ರತಿದಿನ ಬೈದು ಹೊಡೆಯುತ್ತಿದ್ದು, ವರದಕ್ಷಿಣೆ ಸರಿಯಾಗಿ ನೀಡಿಲ್ಲ ಎನ್ನುವ ಕಾರಣಕ್ಕೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ನಡೆದಿದ್ದೇನು?
    ಸಂತ್ರಸ್ತೆ 2015 ನವೆಂವರ್ ನಲ್ಲಿ ಉತ್ತರ ಪ್ರದೇಶದ ಕರಾಜಿನಾ ಪಟ್ಟಣದ ನಿವಾಸಿ ಜೊತೆ ಮದುವೆಯಾಗಿದ್ದರು. ಮದುವೆ ನಂತರ ವರದಕ್ಷಿಣೆ ವಿಚಾರಕ್ಕೆ ಪತಿ ಹಾಗೂ ಆತನ ಮನೆಯವರು ಮಹಿಳೆಗೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಒಂದು ತಿಂಗಳಿಂದ ಪತಿ ತನ್ನ ಸ್ನೇಹಿತನ ಜೊತೆ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡುತ್ತಿದ್ದನು. ಆದರೆ ಸಂತ್ರಸ್ತೆ ಇದಕ್ಕೆ ನಿರಾಕರಿಸಿದ್ದಾರೆ.

    ಪತಿಯ ಮಾತನ್ನ ವಿರೋಧಿಸಿದ್ದಕ್ಕೆ ಪ್ರತಿದಿನ ಸಂತ್ರಸ್ತೆ ಹೊಡೆಯುತ್ತಿದ್ದನು ಎನ್ನಲಾಗಿದೆ. ಮಾರ್ಚ್ 17ರಂದು ಪತ್ನಿಯನ್ನು ಬಲವಂತವಾಗಿ ರೂಮಿನಲ್ಲಿ ಕಟ್ಟಿ ಹಾಕಿದ್ದಾನೆ. ನಂತರ ತನ್ನ ಸ್ನೇಹಿತ ಆಶಿಶ್ ಶ್ರೀವಾಸ್ತವ್ ನನ್ನು ಕೋಣೆಗೆ ಕಳುಹಿಸಿ ಅತ್ಯಾಚಾರ ಮಾಡಿಸಿದ್ದಾನೆ ಎಂದು ನೊಂದ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ಸಂತ್ರಸ್ತೆ ಆರೋಪಿ ಪತಿ ಮತ್ತು ಸುಭಾಶ್ ನಗರದ ನಿವಾಸಿ ಸ್ನೇಹಿತನ ವಿರುದ್ಧ ವರದಕ್ಷಿಣೆ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪತಿ ಹಾಗೂ ಸ್ನೇಹಿತ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

  • ವರದಕ್ಷಿಣೆಗಾಗಿ ಪತ್ನಿಯ ಕೊಲೆ- ಅನುಮಾನ ಬರಬಾರೆಂದು ನೇಣು ಬಿಗಿದು ಅಕ್ರಮ ಸಂಬಂಧವಿತ್ತು ಎಂದ ಪತಿ!

    ವರದಕ್ಷಿಣೆಗಾಗಿ ಪತ್ನಿಯ ಕೊಲೆ- ಅನುಮಾನ ಬರಬಾರೆಂದು ನೇಣು ಬಿಗಿದು ಅಕ್ರಮ ಸಂಬಂಧವಿತ್ತು ಎಂದ ಪತಿ!

    ಹುಬ್ಬಳ್ಳಿ: ವರದಕ್ಷಿಣೆಗೆ ಅಮಾಯಕ ಜೀವವೊಂದು ಬಲಿಯಾದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದಿದೆ.

    ಲೀವಿನಾ ಜೋಷಪ್ ಗಂಡ ಹೀನ ಕೃತ್ಯಕ್ಕೆ ಬಲಿಯಾದ ಮಹಿಳೆ. ಗಂಡ ಕಿಶೋರ್ ತನ್ನ ಪತ್ನಿ ಲೀವಿನಾಳನ್ನು ಉಸಿರುಗಟ್ಟಸಿ ಸಾಯಿಸಿ ನೇಣು ಹಾಕಿದ್ದಾನೆ.ಶುಕ್ರವಾರ ರಾತ್ರಿ ಲೀವಿನಾಳ ಪತಿ ಕಿಶೋರ್ ಕುಮಾರ್ ಕಂಠ ಪೂರ್ತಿ ಕುಡಿದು ಬಂದು ಪತ್ನಿಯ ಜೊತೆ ಜಗಳ ತೆಗೆದಿದ್ದಾನೆ.

    ತಾನು ಮಾಡುತ್ತಿದ್ದ ವ್ಯವಹಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಕಿಶೋರ್ ಪತ್ನಿಗೆ ಕೂಡಲೇ ತವರು ಮನೆಯಿಂದ ಹಣ ತರುವಂತೆ ಹೇಳಿದ್ದಾನೆ. ಆದರೆ ಅದಕ್ಕೆ ಒಪ್ಪದ ಹಿನ್ನಲೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಯಾರಿಗೂ ಅನುಮಾನ ಬರಬಾರೆಂದು ನೇಣು ಬಿಗಿದು ತಾನೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಕೂಡ ಮೊದಲಿಗೆ ಇದೊಂದು ಸೂಸೈಡ್ ಕೇಸ್ ಎಂದು ತಿಳಿದಿದ್ದಾರೆ.

    ಸಾಲದಕ್ಕೆ ಆಕೆಗೆ ಅಕ್ರಮ ಸಂಬಂಧವಿತ್ತು ಅದನ್ನ ಪ್ರಶ್ನಸಿದ್ದಕ್ಕೆ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಿ ಪೊಲೀಸರನ್ನು ನಂಬಿಸಿದ್ದ. ಆದರೆ ಇಂದು ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಆತ್ಮಹತ್ಯೆಯಿಂದ ಮೃತಪಟ್ಟಿಲ್ಲ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎನ್ನುವ ವರದಿ ಬಂದಿದೆ.

    ಈ ಲೀವಿನಾ ಕುಟುಂಬಸ್ಥರು ಪತಿ ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಕಾಲುವೆಯಲ್ಲಿ 27ರ ಮಹಿಳೆಯ ಶವ ಪತ್ತೆ- ಪತಿ, ಅತ್ತೆ-ಮಾವನ ಬಂಧನ

    ಕಾಲುವೆಯಲ್ಲಿ 27ರ ಮಹಿಳೆಯ ಶವ ಪತ್ತೆ- ಪತಿ, ಅತ್ತೆ-ಮಾವನ ಬಂಧನ

    ಚಂಡೀಘಡ: 27 ವರ್ಷದ ಮಹಿಳೆಯ ಶವವೊಂದು ಭಕ್ರಾ ಕಾಲುವೆಯಲ್ಲಿ ಪತ್ತೆಯಾಗಿದ್ದು, ಇದೀಗ ಈ ಸಂಬಂಧ ಮೃತಳ ಪತಿ ಹಾಗೂ ಅತ್ತೆ-ಮಾವನನ್ನು ಪೊಲೀಸರು ಬಂಧಿಸಿದ್ದಾರೆ.

    ಹಿಮಾಚಲ ಪ್ರದೇಶದ ಕಾಂಗ್ರ ನಿವಾಸಿಯಾಗಿರೋ ನಿಖಿತಾ ಶರ್ಮಾ ಅವರು ಫೆಬ್ರವರಿ 18ರಿಂದ ನಾಪತ್ತೆಯಾಗಿದ್ದು, ಬಳಿಕ ಫೆಬ್ರವರಿ 27ರಂದು ಪಟಿಯಾಲ ಸಮೀಪದ ಸಮನಾದಲ್ಲಿರೋ ಭಕ್ರಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಈ ಸಂಬಂಧ ಕೇಸ್ ದಾಖಲಾದ ಬಳಿಕ ನಿಖಿತಾ ಕುಟುಂಬಸ್ಥರು ಬುರೈಲ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ನಿಖಿತಾ ಅವರು ಚಂಡೀಘಢ ನಿವಾಸಿ ಹೇಮಂತ್ ಶರ್ಮಾರನ್ನು 6 ವರ್ಷದ ಹಿಂದೆ ಮದುವೆಯಾಗಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಅವರು 3 ವರ್ಷದ ಮಗಳನ್ನು ಅಗಲಿದ್ದಾರೆ.

    ಫೆಬ್ರವರಿ 18ರಂದು ಕೆಲಸಕ್ಕೆಂದು ಹೊರ ಹೋದ ನಿಖಿತಾ ಆ ಬಳಿಕ ಕಾಣೆಯಾಗಿದ್ದರೆಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಇನ್ನು ನಿಖಿತಾ ಅವರ ತಂದೆ ಸುರೇಂದ್ರ ಶರ್ಮಾ, ನಮ್ಮ ಮಗಳು ಹೇಮಂತ್ ನನ್ನು ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಪ್ರತಿದಿನ ಕಿರುಕುಳ ಕೊಡುತ್ತಿದ್ದನು. ಅಲ್ಲದೇ ಆಕೆಗೆ ಮಗಳು ಹುಟ್ಟಿದ ಬಳಿಕ ಗಂಡನಿಂದ ಅನೇಕ ತೊಂದರೆಗಳನ್ನು ಕೂಡ ಅನುಭವಿಸಿದ್ದಾಳೆ ಅಂತ ಹೇಳಿದ್ದಾರೆ.

    ಮಗಳು ನಿಖಿತಾ ನಾಪತ್ತೆಯಾದ ಬಳಿಕ ಹಲವು ಬಾರಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ದಾಖಲಿಸಲು ಹೋದೆವು. ಆದ್ರೆ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ.

    ಮೃತ ಮಹಿಳೆಯ ತಂದೆಯ ಹೇಳಿಕೆಯಂತೆ ಆಕೆಯ ಪತಿ ಹೇಮಂತ್ ಹಗೂ ಆತನ ಕುಟುಮಬಸ್ಥರ ವಿರುದ್ಧ ನಾವು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ ಅಂತ ಡಿಎಸ್‍ಪಿ ದೀಪಕ್ ಯಾದವ್ ರಾಷ್ಟೀಯ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ಸದ್ಯ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಿಖಿತಾ ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

  • ಗಂಡನ ಹಿಂಸೆ ತಾಳಲು ಆಗುತ್ತಿಲ್ಲ, ಇಂದು ನನ್ನ ಕೊನೆ ದಿನ- ತಂಗಿಗೆ ಮಸೇಜ್ ಮಾಡಿ ಟೆಕ್ಕಿ ಆತ್ಮಹತ್ಯೆ

    ಗಂಡನ ಹಿಂಸೆ ತಾಳಲು ಆಗುತ್ತಿಲ್ಲ, ಇಂದು ನನ್ನ ಕೊನೆ ದಿನ- ತಂಗಿಗೆ ಮಸೇಜ್ ಮಾಡಿ ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಗಂಡನ ಹಿಂಸೆ ತಾಳಲು ಆಗುತ್ತಿಲ್ಲ. ಇಂದು ನನ್ನ ಕೊನೆ ದಿನ ಎಂದು ಮಹಿಳಾ ಟೆಕ್ಕಿಯೊಬ್ಬರು ತನ್ನ ತಂಗಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ಆತ್ಮಹತ್ಯೆ ಮಾಡಿಕೊಂಡ 28 ವರ್ಷದ ರಶ್ಮಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಮೂಲತಃ ಕೋಲಾರದವರಾಗಿದ್ದು, ಅದೇ ಊರಿನ ಸತೀಶ್ ಎಂಬುವರನ್ನು ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಒಂದು ವರ್ಷದ ಮಗು ಕೂಡ ಇದೆ. ಈ ದಂಪತಿ ರಾಮಮೂರ್ತಿನಗರದ ಕೆಂಪೇಗೌಡ ರಸ್ತೆಯಲ್ಲಿರುವ ಸಫೈರ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಮಹದೇವಪುರದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಅವರಿಬ್ಬರೂ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು.

    ಶನಿವಾರ ರಶ್ಮಿ ರಾತ್ರಿ ತಾಯಿ ಮನೆಗೆ ಹೋಗಿದ್ದರು. ಮನೆಗೆ ವಾಪಸ್ ಬರುವಾಗ ಮಗುವನ್ನು ಅಲ್ಲೇ ಬಿಟ್ಟು ಬಂದಿದ್ದರು. ಆದರೆ ಅಲ್ಲಿಂದ ಬಂದು ಅಪಾರ್ಟ್‍ಮೆಂಟ್‍ನಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮತ್ತು ಅತ್ತೆಯ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಶ್ಮಿ ತಾಯಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಅಳಿಯ ಮತ್ತು ಅತ್ತೆ ಸೇರಿಕೊಂಡು ಸಣ್ಣ ಪುಟ್ಟ ವಿಷಯಗಳಿಗೂ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಅವರಿಂದ ಹಿಂಸೆ ಅನುಭವಿಸುತ್ತಿರುವುದಾಗಿ ನನ್ನ ಜೊತೆ ಹೇಳಿಕೊಂಡಿದ್ದಳು. ಶನಿವಾರ ರಾತ್ರಿ ಕೂಡ ತುಂಬಾ ಬೇಸರದಿಂದ ಪತಿಯ ವರ್ತನೆಯನ್ನು ಹೇಳಿಕೊಂಡಿದ್ದಳು. ಆದರೆ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಶ್ಮಿ ತಾಯಿ ಹೇಳಿದ್ದಾರೆ.

    ನಾನು ಕೆಲಸಕ್ಕೆ ಹೋಗಿದ್ದೆ. ನನ್ನ ತಾಯಿ ಸಂಬಂಧಿಕರ ಮನೆಗೆ ಹೋಗಿದ್ದರು. ತಾಯಿ ಮನೆಗೆ ಹೋಗುತ್ತಿರುವುದಾಗಿ ರಶ್ಮಿ ಹೇಳಿದ್ದಳು. ಆದರೆ ಕೆಲಸದಿಂದ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ನಮ್ಮ ನಡುವೆ ಯಾವುದೇ ಮನಸ್ತಾಪ ಇರಲಿಲ್ಲ. ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ ಎಂದು ಪತಿ ಸತೀಶ್ ಪೊಲೀಸರಿಗೆ ತಿಳಿಸಿದ್ದಾರೆ.

    ರಶ್ಮಿ ಆತ್ಮಹತ್ಯೆಗೂ ಮುನ್ನ ಅಮೆರಿಕದಲ್ಲಿದ್ದ ಸಹೋದರಿಗೆ ಕೊನೆಯ ಮೆಸೇಜ್ ಮಾಡಿದ್ದಾರೆ. ನನ್ನ ಪತಿ ಸತೀಶ್ ನೀವಂದುಕೊಂಡಷ್ಟು ಒಳ್ಳೆಯವನಲ್ಲ. ಪತಿ ಮತ್ತು ಅತ್ತೆ ಪ್ರತಿದಿನ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆ. ನನ್ನ ಮಗುವನ್ನ ಇವರ ಬಳಿ ಕಳಿಸಬೇಡಿ. ನೀವು ಚೆನ್ನಾಗಿ ನೋಡಿಕೊಳ್ಳಿ ಎಂದು ಸಹೋದರಿಗೆ ಮೆಸೇಜ್ ಮಾಡಿದ್ದಾರೆ. ಸಹೋದರಿ ಮಾಡಿದ ಮೆಸೇಜ್ ನೋಡಿದ ಕೂಡಲೇ ಭಾವ ಸತೀಶ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದು ಪತಿ ಮನೆಗೆ ಹೋಗುವಷ್ಟರಲ್ಲಿ ರಶ್ಮಿ ನೇಣಿಗೆ ಶರಣಾಗಿದ್ದರು ಎನ್ನಲಾಗಿದೆ.

    ಮೃತಳ ತಾಯಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

    ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ರಶ್ಮಿ(30) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಮೂರು ವರ್ಷಗಳ ಹಿಂದೆ ಸತೀಶ್ ಎಂಬಾತನೊಂದಿಗೆ ಮದುವೆಯಾಗಿದ್ದ ರಶ್ಮಿ, ರಾಮಮೂರ್ತಿನಗರದ ಕೆಂಪೆಗೌಡ ರಸ್ತೆಯ ಸಫೈರ್ ಅಪಾರ್ಟ್‍ಮೆಂಟ್‍ನ ಮನೆಯಲ್ಲಿ ವಾಸವಾಗಿದ್ದರು.

    ರಶ್ಮಿ ಶನಿವಾರ ರಾತ್ರಿ ಮನೆಯಲ್ಲಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಶ್ಮಿಯ ಪೋಷಕರು ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ಗಂಡ ಸತೀಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಮದ್ವೆಯ 1 ವರ್ಷದ ಬಳಿಕ ಗೊತ್ತಾಯ್ತು, ಅವನಲ್ಲ ಅವಳು – ಹೆಣ್ತನ ಮರೆ ಮಾಡಲು ಬಳಸಿದ್ದಳು ಸೆಕ್ಸ್ ಟಾಯ್

    ಮದ್ವೆಯ 1 ವರ್ಷದ ಬಳಿಕ ಗೊತ್ತಾಯ್ತು, ಅವನಲ್ಲ ಅವಳು – ಹೆಣ್ತನ ಮರೆ ಮಾಡಲು ಬಳಸಿದ್ದಳು ಸೆಕ್ಸ್ ಟಾಯ್

    ಲಕ್ನೋ: ಮಹಿಳೆಯೊಬ್ಬಳು ಹಣದ ಆಸೆಗಾಗಿ ಪುರುಷನ ವೇಷ ಧರಿಸಿ ಇಬ್ಬರು ಯುವತಿಯರನ್ನು ಮದುವೆ ಆಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಬಿಜ್ನೋರ್ ಜಿಲ್ಲೆಯ ಧಾಮಪುರ ಎಂಬಲ್ಲಿ ನಡೆದಿದೆ. ಎರಡನೇ ಪತ್ನಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ದೂರಿನ್ವಯ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    26 ವರ್ಷದ ಸ್ವೀಟಿ ಸೇನ್ ಹುಡುಗರ ವೇಷ ಧರಿಸಿ ಎರಡು ಮದುವೆಯಾದ ಮಹಿಳೆ. ಸ್ವೀಟಿ ಮೊದಲಿನಿಂದಲೂ ಹುಡುಗರಂತೆ ಕೂದಲು ಕಟ್ ಮಾಡಿಸಿಕೊಂಡು, ಸಿಗರೇಟ್ ಸೇದುತ್ತಾ, ಬೈಕ್ ಸ್ಟಂಟ್ ಮಾಡಿಕೊಂಡು ಯುವಕರಂತೆ ಬಿಂಬಿತವಾಗಿದ್ದಳು. 2013ರಲ್ಲಿ ಕೃಷ್ಣಾ ಸೇನ್ ಎಂಬ ಹೆಸರಲ್ಲಿ ಫೇಸ್‍ಬುಕ್ ಖಾತೆಯನ್ನು ತರೆದು ಅಲ್ಲಿಯೂ ತಾನು ಪುರುಷ ಎಂದು ಹೇಳಿಕೊಂಡಿದ್ದಳು. 2014ರಲ್ಲಿ ಸ್ವೀಟಿ ತನ್ನ ಕುಟುಂಬಸ್ಥರೊಂದಿಗೆ ಉತ್ತರಾಖಂಡ್‍ನ ಕಥ್‍ಗೊದಮ್ ಗೆ ಪ್ರಯಾಣಿಸುವಾಗ ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದ 22 ವರ್ಷದ ಯುವತಿಯನ್ನು ಭೇಟಿಯಾಗಿದ್ದಾಳೆ. ಈ ವೇಳೆ ಸ್ವೀಟಿ ತಾನು ಗಂಡಸು ಎಂಬುವುದನ್ನು ಮನವರಿಕೆ ಮಾಡಿಸಿ, 2014ರಲ್ಲಿ ಆಕೆಯನ್ನು ಮದುವೆ ಆಗಿದ್ದಾಳೆ ಎಂದು ನೈನಿತಾಲ್ ಎಸ್‍ಎಸ್‍ಪಿ ಜನ್ಮೇಜಯ್ ಖಂದುರಿ ತಿಳಿಸಿದ್ದಾರೆ.

    ಮೊದಲ ಪತ್ನಿ ಜೊತೆ ಸ್ವೀಟಿ ನೈನಿ ತಾಲ್ ಜಿಲ್ಲೆಯ ಹಲದ್ವಾನಿ ಪಟ್ಟಣದಲ್ಲಿ ಬಾಡಿಗೆ ಮನೆ ಪಡೆದುಕೊಂಡು ವಾಸವಾಗಿದ್ದಳು. ಆದ್ರೆ ಸ್ವೀಟಿ ಮೊದಲ ಪತ್ನಿಗೆ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಳು.

    2016ರಲ್ಲಿ ಸ್ವೀಟಿ ನೈನಿತಾಲ್ ಜಿಲ್ಲೆಯ ಕಲಧುಂಗಿ ಪ್ರದೇಶದ ನಿವಾಸಿಯಾಗಿರುವ 20 ವರ್ಷದ ಯುವತಿಯೊಂದಿಗೆ ಎರಡನೇ ಮದುವೆ ಆಗಿದ್ದಾಳೆ. ಮದುವೆ ಬಳಿಕ ಎರಡನೇ ಪತ್ನಿಯೊಂದಿಗೆ ಹರದ್ವಾರ್ ಪಟ್ಟಣದಲ್ಲಿ ವಾಸವಾಗಿದ್ದಳು.

    ಹೆಣ್ತನವನ್ನು ಮರೆ ಮಾಡಿದ್ದು ಹೀಗೆ: ಮದುವೆ ಬಳಿಕ ಸ್ವೀಟಿ ತನ್ನ ಇಬ್ಬರೂ ಪತ್ನಿಯರಿಗೆ ದೇಹವನ್ನು ಮುಟ್ಟಲು ಬಿಡುತ್ತಿರಲಿಲ್ಲ. ಆದರೆ ಲೈಂಗಿಕ ಸಾಧನಗಳನ್ನು ಬಳಸಿಕೊಂಡು ಇಬ್ಬರೊಂದಿಗೂ ಸೆಕ್ಸ್ ನಡೆಸಿದ್ದಳು. ಹೀಗಾಗಿ ಬಹಳ ಸಮಯದವರೆಗೂ ಇಬ್ಬರೂ ಪತ್ನಿಯರಿಗೆ ತಾವು ಮದುವೆಯಾಗಿದ್ದು, ಹುಡುಗನನ್ನು ಹುಡುಗಿಯನ್ನು ಎಂದು ಅರಿವಿಗೆ ಬಂದಿರಲಿಲ್ಲ.

    ಗುಟ್ಟು ರಟ್ಟಾಗಿದ್ದು ಹೀಗೆ: 2017ರಲ್ಲಿ ಸ್ವೀಟಿಯ ಮೊದಲ ಪತ್ನಿ ಕಥ್‍ಗೊದಮ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನು ದಾಖಲಿಸುತ್ತಾರೆ. ಇದೂವರೆಗೂ ನನ್ನ ಪತಿ 8.5 ಲಕ್ಷ ಹಣವನ್ನು ವರದಕ್ಷಿಣೆಯಾಗಿ ಪಡೆದುಕೊಂಡು ಕಾರ್ಖಾನೆಯೊಂದನ್ನು ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಬುಧವಾರ ಪೊಲೀಸರು ಸ್ವೀಟಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ತಾನು ಗಂಡು ಅಲ್ಲ ಹೆಣ್ಣು ಎಂಬ ರಹಸ್ಯ ತಿಳಿಸಿದ್ದಾಳೆ.

    ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಯ ಕೇಸಿಗೆ ಸಂಬಂಧಿಸಿದಂತೆ ಸ್ವೀಟಿಯನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿತ್ತು. ಆಕೆ ಹೆಣ್ಣು ಎಂಬುವುದು ನಮ್ಮ ಕಲ್ಪನೆಯಲ್ಲಿಯೂ ಇರಲಿಲ್ಲ. ವಿಚಾರಣೆಯನ್ನು ತೀವ್ರಗೊಳಿಸಿದಾಗ ಆಕೆ ತಾನು ಹೆಣ್ಣು ಅಂತಾ ಹೇಳಿಕೊಂಡಿದ್ದಾಳೆ. ಈ ಸಂಬಂಧ ಬುಧವಾರ ಸಂಜೆ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸ್ವೀಟಿ ಅವನಲ್ಲ ಅವಳು ಅಂತಾ ಗೊತ್ತಾಗಿದೆ ಎಂದು ಕಥಗೊದಮ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

    ಆರೋಪಿ ಸ್ವೀಟಿಯನ್ನು ಹಲ್‍ದ್ವಾನಿ ಜೈಲಿನಲ್ಲಿ ಇರಿಸಲಾಗಿದೆ. ಸ್ವೀಟಿಯ ಪೋಷಕರು ಮತ್ತು ಸಂಬಂಧಿಕರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಎರಡು ಮದುವೆಯಲ್ಲಿಯೂ ಸ್ವೀಟಿಯ ಪೋಷಕರು ಭಾಗಿಯಾಗಿದ್ದರು. ಈ ಸಂಬಂಧ ಸ್ವೀಟಿಯ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

  • ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ- ಪತಿ ಮನೆಯ ವಿರುದ್ಧ ಕೊಲೆ ಆರೋಪ

    ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ- ಪತಿ ಮನೆಯ ವಿರುದ್ಧ ಕೊಲೆ ಆರೋಪ

    ಕೊಪ್ಪಳ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಸ ದುರ್ಗಾ ಗ್ರಾಮದಲ್ಲಿ ನೆಡದಿದೆ.

    ಲಕ್ಷ್ಮಿ ನೇಣು ಬಿಗಿದುಕೊಂಡು ಮೃತಪಟ್ಟ ಮಹಿಳೆ. ಆಕೆಯ ಗಂಡನ ಮನೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಲಕ್ಷ್ಮಿಯ ತವರು ಮನೆಯವರು ಇದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ.

    ಗಂಗಾವತಿ ತಾಲೂಕಿನ ಮೈಲಾಪುರ್ ಲಕ್ಷ್ಮಿಯ ತವರು ಮನೆಯಾಗಿದ್ದು, 5 ವರ್ಷದ ಹಿಂದೆ ಹಂಪಸ ದುರ್ಗಾ ಗ್ರಾಮದ ರವಿಯಪ್ಪ ಎಂಬಾತನ ಜೊತೆ ಮದುವೆಯಾಗಿತ್ತು. ಮದುವೆ ಆದಾಗಿನಿಂದ ಕೂಡ ಲಕ್ಷ್ಮಿಗೆ ವರದಕ್ಷಿಣೆ ಕಿರುಕುಳವನ್ನು ಕೊಡಲಾಗುತ್ತಿತ್ತು. ಈ ಸಂಬಂಧ ನಮ್ಮ ಮಗಳನ್ನು ಅವರೇ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ ಎಂದು ಲಕ್ಷ್ಮಿಯ ತವರು ಮನೆ ಕಡೆಯವರು ಆರೋಪ ಮಾಡುತ್ತಿದ್ದಾರೆ.

    ಈ ಬಗ್ಗೆ ಗಂಗಾವತಿಯ ಗ್ರಾಮೀಣ ಠಾಣೆಗೆ ದೂರು ನೀಡಲು ಹೋದರೆ ಲಕ್ಷ್ಮಿ ಪತಿ ರವಿಕುಮಾರ್ ಮತ್ತು ಮನೆಯವರು ಕೆಲವು ಮುಖಂಡರು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಪತಿ ಸಿದ್ದಪ್ಪ ನಿರಲೂಟಿ ಇವರುಗಳಿಂದ ದೂರು ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.

    ಲಕ್ಷ್ಮಿಯನ್ನು ಕಳೆದುಕೊಂಡಿರುವ ಕುಟುಂಬ ಪೊಲೀಸ್ ಠಾಣೆ ಮುಂದೆ ಕೇಸ್ ದಾಖಲಿಸಲು ಒತ್ತಾಯಿಸಿ, ಕೆಲಸಮಯ ಪೊಲೀಸರ ನಡುವೆ ಮಾತಿನ ಚಕಮಕಿ ನೆಡೆದಿದೆ. ಆದ್ರೆ ಲಕ್ಷ್ಮಿ ಮನೆಯ ಕಡೆಯುವರು ಮಾತ್ರ ಇದು ಆತ್ಮಹತ್ಯೆ ಅಲ್ಲ ಕೊಲೆ. ಈ ಕುರಿತು ತನಿಖೆ ಆಗಬೇಕು ಅಲ್ಲಿಯವರೆಗೂ ನಾವು ಠಾಣೆ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.