Tag: Dowry

  • ಮದ್ವೆಯಾಗಿ 8 ವರ್ಷಗಳ ಬಳಿಕ ಹೆಂಡತಿಗೆ ವಂಚನೆ

    ಮದ್ವೆಯಾಗಿ 8 ವರ್ಷಗಳ ಬಳಿಕ ಹೆಂಡತಿಗೆ ವಂಚನೆ

    ಚಿತ್ರದುರ್ಗ: ಆರೋಗ್ಯ ನಿರೀಕ್ಷಕನೊಬ್ಬ ಗರ್ಭಿಣಿಯಾಗಿರುವ ಹೆಂಡತಿಗೆ ಕೈಕೊಟ್ಟು ಮತ್ತೊಬ್ಬಳನ್ನ ಮದುವೆಯಾಗಿದ್ದಾನೆ ಎಂದು ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

    ಹೆಲ್ತ್ ಇನ್ಸ್ ಪೆಕ್ಟರ್ ಹನುಮಂತರಾಯ ಪತ್ನಿಗೆ ಮೋಸ ಮಾಡಿದ ಪತಿ. ಹಿರಿಯೂರು ತಾಲೂಕಿನ ಮೇಟಿಕುರ್ಕೆ ಗ್ರಾಮದ ಪುಟ್ಟಮ್ಮ ಅಲಿಯಾಸ್ ಸುಲೋಚನಾ ಸುಮಾರು 9 ವರ್ಷಗಳ ಹಿಂದೆ ತನ್ನ ಸಂಬಂಧಿಯಾದ ಹನುಮಂತರಾಯಪ್ಪನನ್ನ ಮದುವೆಯಾಗಿದ್ದರು. ವೃತ್ತಿಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆದ ಹನುಮಂತರಾಯ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದನು. ಇದೀಗ ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾನೆ.

    ಮದುವೆಯಾಗಿ ಎಂಟು ವರ್ಷಗಳ ಬಳಿಕ ನಾನು ಗರ್ಭಿಣಿಯಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ನನ್ನನ್ನು ತವರಿಗೆ ಕಳುಹಿಸಿದ ಬಳಿಕ ನನ್ನೊಂದಿಗೆ ಒಡನಾಟ ಕಡಿಮೆ ಮಾಡಿಕೊಂಡಿದ್ದನು. ಈಗ ಬೇರೊಬ್ಬಳನ್ನ ಮದುವೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನನ್ನನ್ನ ಏನು ಮಾಡೋಕಾಗಲ್ಲ. ದುಡ್ಡೆಷ್ಟು ಬೇಕು ಹೇಳು ಬಿಸಾಕುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ ಎಂದು ಪುಟ್ಟಮ್ಮ ಹೇಳಿದ್ದಾರೆ.

    ತನ್ನ ಗಂಡನ ಆಸೆಯಂತೆ ಒಂದೇ ಊರಿನಲ್ಲಿರುವ ಅವರ ತಂಗಿ ಮಗನಿಗೆ ನನ್ನ ಮಗಳನ್ನ ಕೊಟ್ಟು ಮದುವೆ ಮಾಡಿದೆ. ಮಗಳು ಚೆನ್ನಾಗಿರುತ್ತಾಳೆ ಎಂದುಕೊಂಡಿದ್ದೆ. ಆದರೆ ಸೋದರ ಸಂಬಂಧಿಗಳಾದ ಅತ್ತೆ ಮಾವ ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಆದರು ನನ್ನ ಮಗಳ ಸಂಸಾರ ಸರಿ ಹೋಗಲಿ ಎಂದು ಅವರು ಕೇಳಿದ್ದಕ್ಕೆಲ್ಲಾ ಒಪ್ಪಿಕೊಂಡಿದ್ದೇವೆ. ನನ್ನ ಅಳಿಯ ತುಂಬು ಗರ್ಭಿಣಿಯಾದ ನನ್ನ ಮಗಳಿಗೆ ವಂಚಿಸಿ ಮತ್ತೊಬ್ಬಳನ್ನ ಮದುವೆಯಾಗಿದ್ದಾನೆ. ನಮ್ಮ ಬೆಂಬಲಕ್ಕೆ ಯಾರು ಇಲ್ಲ, ದಯಮಾಡಿ ನಮಗೆ ನ್ಯಾಯ ಸಿಗುವಂತೆ ಮಾಡಿ ಅಂತ ಸಂತ್ರಸ್ತೆಯ ತಾಯಿ ಕಣ್ಣೀರು ಹಾಕಿಕೊಂಡು  ಕೇಳಿಕೊಂಡಿದ್ದಾರೆ.

    ಸೋದರ ಮಾವನನ್ನು ಮದುವೆಯಾದ ಅಮಾಯಕಿ ಈಗ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ಮತ್ತೊಬ್ಬಳನ್ನ ಮದುವೆಯಾಗಿರುವ ಗಂಡ ಹೊಸ ಹೆಂಡತಿ ಜೊತೆ ನಾಪತ್ತೆಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಟ್ಸಪ್ ಕಾರಣದಿಂದ ನಿಂತೇ ಹೋಯ್ತು ಮದುವೆ!

    ವಾಟ್ಸಪ್ ಕಾರಣದಿಂದ ನಿಂತೇ ಹೋಯ್ತು ಮದುವೆ!

    ಲಕ್ನೋ: ಮದುವೆ ನಾನಾ ಕಾರಣಗಳಿಂದ ನಿಂತು ಹೋಗುವುದು ಸಾಮಾನ್ಯವಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ವಧು ಅತಿ ಹೆಚ್ಚಾಗಿ ವಾಟ್ಸಪ್ ನಲ್ಲಿ ಸಮಯ ಕಳೆಯುತ್ತಾಳೆ ಎಂಬ ಕಾರಣದಿಂದ ಮದುವೆ ನಿಂತು ಹೋಗಿರುವ ವಿಚಿತ್ರ ಘಟನೆ ನಡೆದಿದೆ.

    ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯ ನವ್ಗಾನ್ ಸದತ್ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸದತ್ ಗ್ರಾಮದ ಯುವತಿಗೆ ತಮ್ಮ ಸಂಬಂಧದ ಹುಡುಗನ ಜೊತೆ ಬುಧವಾರ ಮದುವೆ ನಿಶ್ಚಯವಾಗಿತ್ತು. ವಧುವಿನ ಕಡೆಯವರು ಆರತಕ್ಷತೆಗಾಗಿ ವರ ಮತ್ತು ವರನ ಕಡೆಯವರಿಗಾಗಿ ಕಾಯುತ್ತಿದ್ದರು. ಆದರೆ ಅವರು ಬರಲೇ ಇಲ್ಲ. ಕೊನೆಗೆ ಫೋನ್ ಮಾಡಿದಾಗ ನಿಮ್ಮ ಹುಡುಗಿ ಹೆಚ್ಚಾಗಿ ವಾಟ್ಸಪ್ ಬಳಸುತ್ತಾಳೆ. ಆದ್ದರಿಂದ ನಮಗೆ ಈ ಮದುವೆ ಇಷ್ಟ ಇಲ್ಲ ಎಂದು ನಿರಾಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಇತ್ತ ವಧುವಿನ ಪೋಷಕರು, ಅವರು ಮಾಡುತ್ತಿರುವ ಆರೋಪವನ್ನು ತಳ್ಳಿ ಹಾಕಿದ್ದು, ವರನ ಕಡೆಯವರು ಕೊನೆ ಕ್ಷಣದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು. ನಮ್ಮಿಂದ ಕೊಡಲು ಸಾಧ್ಯವಾಗಿಲ್ಲ ಅದಕ್ಕಾಗಿ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಫಕೇರ್ಪುರಾದ ಖಮರ್ ಹೈದರ್ ಅವರ ಮಗನೊಂದಿಗೆ ತನ್ನ ಮಗಳ ಮದುವೆ ನಿಶ್ಚಯವಾಗಿತ್ತು. ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ಎಲ್ಲರೂ ಮದುವೆಗೆಂದು ಬಂದಿದ್ದು, ವರನ ಕಡೆಯವರನ್ನು ಸ್ವಾಗತಿಸಲು ಕಾಯುತ್ತಿದ್ದೆವು. ಆದರೆ ವರನ ತಂದೆ ಕರೆ ಮಾಡಿ ಈ ಮದುವೆ ಇಷ್ಟವಿಲ್ಲ ಅಂತ ಕ್ಯಾನ್ಸಲ್ ಮಾಡಿದ್ದಾರೆ ಎಂದು ವಧುವಿನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

    ಈ ಸಂಬಂಧ ವಧವಿನ ತಂದೆ ಉರೋಜ್ ಮೆಹಂದಿ ಅವರು, 65 ಲಕ್ಷ ರೂ. ವರದಕ್ಷಿಣೆಗಾಗಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ವರನ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ನವವಿವಾಹಿತೆ ಆತ್ಮಹತ್ಯೆ!

    ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ನವವಿವಾಹಿತೆ ಆತ್ಮಹತ್ಯೆ!

    ಶಿವಮೊಗ್ಗ: ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗ ತಾಲೂಕು ಶೆಟ್ಟಿಕೆರೆಯ ಜ್ಯೋತಿ(22) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಮದುವೆಯಾಗಿ ನಾಲ್ಕು ತಿಂಗಳಲ್ಲಿ ವರದಕ್ಷಿಣೆ ಕಿರುಕುಳ ತಾಳಲಾಗದೇ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ವಿಷ ಸೇವಿಸಿದ ಬಳಿಕ ತನ್ನ ತವರು ಮನೆಗೆ ಫೋನ್ ಮಾಡಿದ್ದ ಜ್ಯೋತಿ, ಗಂಡನ ಮನೆಯಲ್ಲಿ ಕಿರುಕುಳ ತಡೆಯಲಾಗುತ್ತಿಲ್ಲ. ವಿಷ ಕುಡಿದಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಫೋನ್ ಮಾಡಿದ್ದಾಳೆ ಎಂದು ಸಹೋದರ ಸಂತೋಷ ತಿಳಿಸಿದ್ದಾರೆ.

    ವಿಷ ಸೇವಿಸಿದ ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಜ್ಯೋತಿ ಮೃತಪಟ್ಟಿದ್ದಾರೆ. ಸದ್ಯ ಈ ಬಗ್ಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಾಗರ ತಾಲೂಕಿನ ಜಂಬೂರುಮನೆಯ ಪುನೀತ್ ಕುಮಾರ್ ಜೊತೆ ನಾಲ್ಕು ತಿಂಗಳ ಹಿಂದೆ ಜ್ಯೋತಿ ಮದುವೆ ಆಗಿತ್ತು. ಮದುವೆ ಆದ ಕೆಲವೇ ದಿನಗಳಲ್ಲಿ ಗಂಡ ಪುನೀತ್ ಹಾಗೂ ಅತ್ತೆ ಲಲಿತಮ್ಮ ಕಿರುಕುಳ ನೀಡಲು ಆರಂಭಿಸಿದ್ದಾರೆ. ನೀನು ಚೆನ್ನಾಗಿಲ್ಲ, ಇನ್ನಷ್ಟು ವರದಕ್ಷಿಣೆ ಬೇಕು, ಟ್ರ್ಯಾಕ್ಟರ್ ಖರೀದಿಸಲು ಹಣ ಬೇಕು ಇತ್ಯಾದಿ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಜ್ಯೋತಿ ತವರಿಗೆ ಬಂದಿದ್ದಳು. ಆಗ ಆಕೆಗೆ ಹೊಂದಿಕೊಂಡು ಹೋಗುವಂತೆ ಬುದ್ದಿವಾದ ಹೇಳಿ ಮತ್ತೆ ಕಳುಹಿಸಿದ್ದೇವೆ. ಆದರೆ ಪತಿಯ ಮನೆಯಲ್ಲಿ ಮತ್ತೆ ಕಿರುಕುಳ ಹೆಚ್ಚಾದಾಗ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜ್ಯೋತಿ ತಂದೆ ನಾರಾಯಣಪ್ಪ ಹೇಳಿದ್ದಾರೆ.

  • ಬೆಂಕಿ ಹಚ್ಚಿಕೊಂಡು 2 ವರ್ಷದ ಕಂದಮ್ಮನೊಂದಿಗೆ ತಾಯಿ ಆತ್ಮಹತ್ಯೆ!

    ಬೆಂಕಿ ಹಚ್ಚಿಕೊಂಡು 2 ವರ್ಷದ ಕಂದಮ್ಮನೊಂದಿಗೆ ತಾಯಿ ಆತ್ಮಹತ್ಯೆ!

    ಮೈಸೂರು: ವರದಕ್ಷಣೆ ಕಿರುಕುಳ ತಾಳಲಾರದೇ ತಾಯಿ ತನ್ನ ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮಹದೇವಪುರದಲ್ಲಿ ನಡೆದಿದೆ.

    24 ವರ್ಷದ ಗೌರಮ್ಮ ತನ್ನ 2 ವರ್ಷದ ಮಗ ನಿಯಾಲ್ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ ಆರ್ ಪೇಟೆ ಮೂಲದ ಗೌರಮ್ಮ, 3 ವರ್ಷದ ಹಿಂದೆ ಮೈಸೂರಿನ ಲೋಹಿತ್ ರನ್ನು ಮದುಮೆಯಾಗಿದ್ದರು. ಪತಿ ಲೋಹಿತ್ ಮಾಲೂರಿನಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಮದುವೆ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ನೀಡಲಾಗಿದ್ದು, ಆದರೂ ಹಣಕ್ಕಾಗಿ ಪತಿ ಮನೆಯಿಂದ ಕಿರುಕುಳ ನೀಡಲಾಗಿತ್ತು. ಹಾಗಾಗಿ ಕಿರುಕುಳ ತಾಳಲಾರದೇ ಗೌರಮ್ಮ ಕೊಠಡಿಯೊಳಗೆ ಹೋಗಿ ಮೊದಲು ಮಗ ನಿಯಾಲ್‍ಗೆ ಬೆಂಕಿ ಹಚ್ಚಿ, ಬಳಿಕ ತಾನೂ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವರದಕ್ಷಿಣೆ ತರಲಿಲ್ಲ ಎಂದು ಗರ್ಭಿಣಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ!

    ವರದಕ್ಷಿಣೆ ತರಲಿಲ್ಲ ಎಂದು ಗರ್ಭಿಣಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ!

    ಬೆಳಗಾವಿ: ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಗಂಡ, ಅತ್ತೆ, ಮಾವ, ನಾದಿನಿ ಸೇರಿಕೊಂಡು ಜೀವಂತವಾಗಿ ನಾಲ್ಕು ತಿಂಗಳ ಗರ್ಭಿಣಿಯನ್ನ ಸುಡಲು ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತಪಸ್ಸಿ ಗ್ರಾಮದಲ್ಲಿ ನಡೆದಿದೆ.

    ಅನುಸೂಯಾ(27) ವರ್ಷದ ಗೃಹಿಣಿ ಮೇಲೆ ಈ ರೀತಿ ಅಮಾನುಷವಾಗಿ ಕೊಲೆ ಮಾಡಲು ಗಂಡನ ಮನೆಯವರು ಯತ್ನಿಸಿದ್ದಾರೆ. ಅನುಸೂಯಾರಿಗೆ 4 ವರ್ಷದ ಹಿಂದೆ ಮದುವೆಯಾಗಿದ್ದು, ಈಗಾಗಲೇ ಒಂದೂವರೆ ವರ್ಷದ ಹೆಣ್ಣು ಮಗು ಕೂಡ ಇದೆ. ಜೊತೆಗೆ ಅನುಸೂಯಾ 4 ತಿಂಗಳ ಗರ್ಭಿಣಿ ಕೂಡ ಆಗಿದ್ದಾರೆ. ಆದರೆ ಇದ್ಯಾವುದಕ್ಕೂ ಲೆಕ್ಕಿಸದ ರಾಕ್ಷಸ ಮನಸ್ಥಿತಿಯ ಗಂಡನ ಮನೆಯವರು ಆಕೆಯನ್ನ ಸುಟ್ಟು ಕೊಲೆ ಮಾಡಲು ಯತ್ನಿಸಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ರಾತ್ರಿ ಗಂಡ ಸಿದ್ದಪ್ಪ ಹೆಂಡತಿಗೆ ತವರು ಮನೆಗೆ ಹೋಗಿ ಬಂಗಾರ ತರುವಂತೆ ಹಾಗೂ ಅನುಸೂಯಾ ತಂದೆ ಹೆಸರಿನಲ್ಲಿರುವ ಜಮೀನನ್ನ ತನ್ನ ಹೆಸರಿಗೆ ಬರೆಸುವಂತೆ ಕಿರುಕುಳ ನೀಡಿದ್ದಾನೆ. ಇದ್ಯಾವುದಕ್ಕೂ ಹೆಂಡತಿ ಅನುಸೂಯಾ ಒಪ್ಪದಿದ್ದಾಗ ಗಂಡ ಸಿದ್ದಪ್ಪ, ಮಾವ ಕಾಮೇಶ್, ಅತ್ತೆ ಪಾರ್ವತಿ ಹಾಗೂ ಗಂಡನ ಅಣ್ಣ ಹಾಗೂ ಹೆಂಡತಿ ಸೇರಿಕೊಂಡು ಸೀಮೆ ಎಣ್ಣೆ ಸುರಿದು ಅನುಸೂಯಾರ ಕೊಲೆ ಮಾಡಲು ಯತ್ನಿಸಿದ್ದಾರೆ.

    ಶೇಕಡಾ 90ರಷ್ಟು ಬೆಂಕಿಯಲ್ಲಿ ಬೆಂದಿರುವ ಅನುಸೂಯಾರನ್ನು ನಂತರ ಎಚ್ಚೆತ್ತುಕೊಂಡ ಗಂಡ ಸಿದ್ದಪ್ಪನೇ ಗೋಕಾಕ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತಂದೆ, ತಾಯಿ, ಅಣ್ಣನ ಜೊತೆಗೆ ಪರಾರಿಯಾಗಿದ್ದಾನೆ. ಇತ್ತ ಗ್ರಾಮಸ್ಥರು ಗೋಕಾಕ್ ತಾಲೂಕಿನ ತಳಕಟ್ನಾಳ ಗ್ರಾಮದಲ್ಲಿದ್ದ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.

    ಆಸ್ಪತ್ರೆಗೆ ಬಂದ ಅನುಸೂಯಾರ ಕುಟುಂಬಸ್ಥರು ಆಕೆಯ ಸ್ಥಿತಿ ನೋಡಿ ತಕ್ಷಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಅನುಸೂಯಾ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ.

  • ತಲಾಖ್ ನೀಡಿದ್ದಕ್ಕೆ ಅನ್ನ, ನೀರು ಕೊಡದೇ ಪತಿಯಿಂದಲೇ ಪತ್ನಿ ಕೊಲೆ!

    ತಲಾಖ್ ನೀಡಿದ್ದಕ್ಕೆ ಅನ್ನ, ನೀರು ಕೊಡದೇ ಪತಿಯಿಂದಲೇ ಪತ್ನಿ ಕೊಲೆ!

    ಲಕ್ನೋ: ತಲಾಖ್ ನೀಡಿದ್ದಕ್ಕೆ ರೊಚ್ಚಿಗೆದ್ದ ಪತಿ ಅನ್ನ ನೀರು ನೀಡದೇ ಪತ್ನಿಯನ್ನು ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ರಜೀಯಾ ಮೃತ ದುರ್ದೈವಿ ನಹಿಮ್ ಕೂಡಿ ಹಾಕಿದ್ದ ಪತಿ. ದಂಪತಿಗೆ 6 ವರ್ಷದ ಮಗುವಿದೆ. ರಜೀಯಾ ಅವರನ್ನು ಕೂಡಿ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ರಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಜೀಯಾ ಅವರು ಮಂಗಳವಾರ ಮೃತ ಪಟ್ಟಿದ್ದಾರೆ.

    ರಜೀಯಾ ಅವರ ಪತಿ ನಹಿಮ್ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ರಜೀಯಾ ತ್ರಿವಳಿ ತಲಾಖ್ ನೀಡಿದ್ದರು. ಇದರಿಂದ ಕೋಪಗೊಂಡ ನಹಿಮ್ ರಜೀಯಾ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದ. ಅಷ್ಟೇ ಅಲ್ಲದೆ ಆಕೆಗೆ ಅನ್ನ ನೀರು ಕೊಡುತ್ತಿರಲಿಲ್ಲ ಎಂದು ರಜೀಯಾ ಸಹೋದರಿ ದೂರಿದ್ದಾರೆ.

    ರಜೀಯಾ ಅವರನ್ನು ನೋಡಲು ಮನೆಗೆ ಹೋದಾಗ ಪತಿಯ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ರಜೀಯಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಹಿಮ್ ವಿರುದ್ಧ ಪ್ರಕರಣ ದಾಖಲಿಸಲು ಠಾಣೆಗೆ ಹೋಗಿದ್ದೇವು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.

    ನಹಿಮ್ ತನ್ನ ಮೊದಲ ಪತ್ನಿಗೂ ವರದಕ್ಷಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ಅವರು ವಿಚ್ಛೇದನ ಪಡೆದು ಬೆರೆಯಾಗಿದ್ದರು ಎಂದು ಮೇರಾ ಹಕ್ ಎನ್‍ಜಿಓ ಸಂಸ್ಥಾಪಕಿ ಫರ್ಹಾತ್ ನಖ್ವಿ ತಿಳಿಸಿದರು.

    ರಜೀಯಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಲಕ್ನೋಗೆ ಕಳುಹಿಸಲಾಗಿತ್ತು. ಆದರೆ ರಜೀಯಾ ಅವರ ಸ್ಥಿತಿ ಗಂಭೀರವಾಗಿತ್ತು ಹೀಗಾಗಿ ಮೃತಪಟ್ಟಿದ್ದಾರೆ ಎಂದು ಫರ್ಹಾತ್ ನಖ್ವಿ ವಿವರಿಸಿದರು.

  • ಪತ್ನಿಯ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ, ವಿಷ ಕುಡಿಸಿದ ಹಾಸನ ಪೇದೆ!

    ಪತ್ನಿಯ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ, ವಿಷ ಕುಡಿಸಿದ ಹಾಸನ ಪೇದೆ!

    ಹಾಸನ: ರಕ್ಷಣೆ ನೀಡಬೇಕಾದ ಆರಕ್ಷಕನೇ ವರದಕ್ಷಿಣೆಗಾಗಿ ಪತ್ನಿಯೊಂದಿಗೆ ಪೈಶಾಚಿಕವಾಗಿ ವರ್ತಿಸಿ, ವಿಷ ಕುಡಿಸಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

    ಅರಕಲಗೂಡು ತಾಲೂಕಿನ ಮಸ್ಸತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಪೇದೆ ಅರುಣ್ ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿದ ಪರಿಣಾಮ ಪತ್ನಿಯನ್ನು ಈಗ ಐಸಿಯುನಲ್ಲಿ ದಾಖಲಿಸಲಾಗಿದೆ.

    ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯ ಪೇದೆಯಾಗಿರುವ ಅರುಣ್ ಜೊತೆ ಕಳೆದ ಎಂಟು ತಿಂಗಳ ಹಿಂದೆ ಅಷ್ಟೇ ಮಗಳ ಜೊತೆ ಮದುವೆ ನಡೆದಿತ್ತು. ಈಗ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಈ ರೀತಿ ಪೈಶಾಚಿಕವಾಗಿ ವರ್ತಿಸಿದ್ದಾನೆಂದು ಪಾಲಕರು ದೂರಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನೊಂದ ಮಹಿಳೆ, ನನ್ನ ಪತಿ ತಾಯಿಯ ಮಾತನ್ನು ಕೇಳಿ ಹಿಂಸೆ ನೀಡುತ್ತಿದ್ದ. ನೀನು ತಂದ ವರದಕ್ಷಿಣೆ ಕಡಿಮೆಯಾಯಿತು ಎಂದು ಹೊಡೆಯುತ್ತಿದ್ದ. ನಿನ್ನ ಕಾಲುಗುಣ ಸರಿಯಿಲ್ಲ, ನಿನ್ನ ಸೊಂಟ ಮುರಿದು ಮೂಲೆಗೆ ಕೂಡಿಸುತ್ತೇನೆ ಎಂದು ಹೇಳಿ ತನಗೆ ವಿಷ ಕುಡಿಸಿದ್ದಾನೆ ಎಂದು ಆರೋಪಿಸಿದ್ದಾರೆ.

    ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ನೊಂದ ಮಹಿಳೆಯ ಪಾಲಕರು ಈ ಹಿಂದೆ ಹಲವಾರು ಬಾರಿ ನಮ್ಮ ಮಗಳಿಗೆ ಅವರ ಅತ್ತೆ ಹಿಂಸೆ ನೀಡಿದ್ದರು. ಆಗ ನಾವೇ ಹೋಗಿ ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದೆವು. ನಿಮ್ಮ ತಾಯಿಯ ಜೊತೆ ಹೊಂದಾಣಿಕೆ ಆಗದಿದ್ದರೆ ಬೇರೆ ಹೋಗು ಎಂದೂ ಅರುಣ್ ಗೆ ಹೇಳಿದ್ದೆವು. ಅದನ್ನು ಕೇಳದೇ ಈ ರೀತಿ ಅರುಣ್ ತಮ್ಮ ಮಗಳಿಗೆ ಹಿಂಸೆ ನೀಡಿದ್ದಾನೆ ಎಂದರು.

    ಇನ್ನು ಪೇದೆ ರಮೇಶ್ ವಿರುದ್ಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೇದೆ ರಮೇಶ್ ಪರಾರಿಯಾಗಿದ್ದು, ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ.

    https://www.youtube.com/watch?v=iQSZ5G8aTRY

  • ಮದ್ವೆಗೆ ವಿಶೇಷ ವರದಕ್ಷಿಣೆ ಬೇಡಿಕೆಯಿಟ್ಟ ವರ- ಬಂದ ಅತಿಥಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ!

    ಮದ್ವೆಗೆ ವಿಶೇಷ ವರದಕ್ಷಿಣೆ ಬೇಡಿಕೆಯಿಟ್ಟ ವರ- ಬಂದ ಅತಿಥಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ!

    ಭುವನೇಶ್ವರ್: ವರನೊಬ್ಬ ತನ್ನ ಮದುವೆಗೆ 1,000 ಸಸಿಗಳನ್ನು ವರದಕ್ಷಿಣೆಯಾಗಿ ಪಡೆದ ಘಟನೆ ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ಬಲ್‍ಬದ್ರಪುರ ಗ್ರಾಮದಲ್ಲಿ ನಡೆದಿದೆ.

    ಸರೋಜ್ ಪೇಶೆ, ಸಸಿಗಳನ್ನು ವರದಕ್ಷಿಣೆ ಆಗಿ ಪಡೆದ ವರ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಸರೋಜ್ ಅವರಿಗೆ ತಮ್ಮ ಮದುವೆಯಲ್ಲಿ ಪಟಾಕಿ ಸಿಡಿಸುವುದು ಹಾಗೂ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುವುದು ಇಷ್ಟವಿಲ್ಲ. ಬದಲಾಗಿ ಸಿಂಪಲ್ ಆಗಿ ಮದುವೆ ಆಗೋ ಇಚ್ಚೆಯಿತ್ತು.

    ತನ್ನ ಮದುವೆ ಮಾತುಕತೆ ನಡೆಯುತ್ತಿದ್ದಾಗ ಸರೋಜ್ ಒಂದು ಷರತ್ತು ಹಾಕಿದ್ದರು. ವಧು ಕಡೆಯವರು 1,000 ಸಸಿಗಳನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಸರೋಜ್ ಬೇಡಿಕೆ ಇಟ್ಟಿದ್ದರು. ಸರೋಜ್ ಬಿಸ್ವಾಲ್ ‘ಗಾಚಾ ಟಾಯಿ ಸಾಥಿ ಟಾಯಿ (ಮರ ಒಂದು ಸಂಗಾತಿ)’ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಸಂಸ್ಥೆ ಸಸಿ ನೆಡುವ ಜಾಗೃತಿ ಮೂಡಿಸುತ್ತದೆ. ಇದಕ್ಕೆ ವಧು ರಶ್ಮಿರೇಖಾ ಕೂಡ ಸಾಥ್ ನೀಡಿದ್ದರು. ವಿಶೇಷವೆಂದರೆ ರಶ್ಮಿರೇಖಾ ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ.

    ಜೂನ್ 22ರಂದು ಸರೋಜ್ ಹಾಗೂ ರಶ್ಮಿರೇಖಾ ಅವರ ಮದುವೆ ನಡೆಯಿತು. ಮದುವೆ ನಡೆಯುತ್ತಿದ್ದ ಸ್ಥಳದಲ್ಲೇ ವಧುವಿನ ಮನೆಯವರು ಒಂದು ಟ್ರಕ್‍ನಲ್ಲಿ ಸಸಿ ತರಿಸಿದ್ದರು. ಆ ಸಸಿಗಳಲ್ಲಿ ಹೆಚ್ಚು ಹಣ್ಣಿನ ಸಸಿಗಳು ಇದ್ದಿದು ವಿಶೇಷವಾಗಿತ್ತು. ಮದುವೆಯಲ್ಲಿ ಎಲ್ಲ ಶಾಸ್ತ್ರಗಳು ಮುಗಿದ ನಂತರ ಸರೋಜ್ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಆ ಸಸಿಗಳನ್ನು ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲ ಅತಿಥಿಗಳಿಗೆ ಉಡುಗೊರೆಯಾಗಿ ನೀಡಿದ್ದರು.

    ವಿವಿಧ ರೀತಿಯಲ್ಲಿ ಕೊಡುವ ವರದಕ್ಷಿಣೆಗೆ ನನ್ನ ವಿರೋಧವಿದೆ. ಆದರೆ ನಾನು ಪರಿಸರವನ್ನು ರಕ್ಷಿಸಲು ಹಾಗೂ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲು ಇಷ್ಟಪಡುತ್ತೇನೆ. ಹೀಗಾಗಿ ಸಂಬಂಧಿಕರಿಗೆ ಹಾಗೂ ಗ್ರಾಮಸ್ಥರಿಗೆ ಈ ಸಂದೇಶ ನೀಡೋಕೆ ನನ್ನ ಮದುವೆಗಿಂತ ಒಳ್ಳೆಯ ಅವಕಾಶವಿಲ್ಲ ಎಂದು ವರ ಸರೋಜ್ ತಿಳಿಸಿದ್ದಾರೆ.

    ನಾನು ಹಾಗೂ ನನ್ನ ಪತ್ನಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಒಳ್ಳೆಯ ಪ್ರೇರಣೆ ಸಿಗಲಿದೆ. ಸಸಿ ನೆಡುವುದರಿಂದ ಪರಿಸರವನ್ನು ಉಳಿಸಬಹುದು ಎಂದು ವರ ಸರೋಜ್ ಹೇಳಿದ್ದಾರೆ.

  • ಹಾವೇರಿಯಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು

    ಹಾವೇರಿಯಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು

    ಹಾವೇರಿ: ಗೃಹಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದಲ್ಲಿ ನಡೆದಿದೆ.

    ಸುವರ್ಣ ಹೊನ್ನತ್ತಿ(27) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. ನೆಲೋಗಲ್ ಗ್ರಾಮದ ಆಶೋಕ್ ಹೊನ್ನತ್ತಿ ಜೊತೆ ಸುವರ್ಣ ಅವರ ಮದುವೆ ಮಾಡಿಕೊಡಲಾಗಿತ್ತು. ಕಳೆದ 9 ವರ್ಷಗಳಿಂದ ಅತ್ತೆ, ಮಾವ ಹಾಗೂ ಪತಿ ಆಶೋಕ್ ವರದಕ್ಷಿಣೆ ಕಿರುಕುಳವನ್ನು ನೀಡುತ್ತಿದ್ದರು ಎಂದು ಸುವರ್ಣ ಪೋಷಕರು ಆರೋಪ ಮಾಡಿದ್ದಾರೆ.

    ಈಗ ಸುವರ್ಣ ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ನಮಗೆ ಫೋನ್ ಮಾಡಿದ್ದಾರೆ. ಆದರೆ ಅಶೋಕ್ ಕುಟುಂಬಸ್ಥರು ನಮ್ಮ ಮಗಳನ್ನು ಹೊಡೆದು ಕೊಲೆ ಮಾಡಿದ್ದಾರೆ. ನಮಗೆ ನ್ಯಾಯಕೊಡಿಸಿ ಎಂದು ಮೃತಳ ಪೋಷಕರ ಆಗ್ರಹಿಸುತ್ತಿದ್ದಾರೆ.

    ಸದ್ಯ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

  • ಲವ್ ಮ್ಯಾರೇಜ್ ಆಗಿ ಮೂರು ತಿಂಗಳಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

    ಲವ್ ಮ್ಯಾರೇಜ್ ಆಗಿ ಮೂರು ತಿಂಗಳಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

    ಹೈದರಾಬಾದ್: ಮದುವೆಯಾದ ಮೂರು ತಿಂಗಳಿಗೆ ನವವಿವಾಹಿತೆಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಜಮ್ಮಲಮಡುಗು ನಗರದಲ್ಲಿ ನಡೆದಿದೆ.

    ಮಾಬುಚಾನ್ ಮೃತ ನವವಿವಾಹಿತೆ. ಪತಿ ಇಮ್ತಿಯಾಜ್ ವರದಕ್ಷಿಣೆಗಾಗಿ ಕೊಲೆ ಮಾಡಿ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾನೆ ಎಂದು ಮೃತ ಮಾಬುಚಾನ್ ಪೋಷಕರು ಆರೋಪಿಸಿದ್ದಾರೆ.

    ಇವರಿಬ್ಬರು ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೀತಿಸಿ ಮದುವೆಯಾಗಲು ನಿರ್ಧಸಿದ್ದರು. ಇವರಿಬ್ಬರ ಪ್ರೀತಿ ಮನೆಯವರಿಗೆ ತಿಳಿದು ಪೋಷಕರು ಎಚ್ಚರಿಕೆ ಸಹ ನೀಡಿದ್ದರು. ಆದರೆ ಪೋಷಕರ ವಿರೋಧದ ನಡುವೆಯೂ ಇಬ್ಬರು ವಿವಾಹವಾಗಲು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು. ಈ ಬಗ್ಗೆ ಪೋಷಕರು ತಿಳಿದುಕೊಂಡು ಎರಡು ಕುಟುಂಬಸ್ಥರ ಒಪ್ಪಿಗೆ ಮೆರೆಗೆ ಫೆಬ್ರವರಿ 8 ರಂದು ಮದುವೆ ಮಾಡಿಸಿದ್ದರು.

    ಮದುವೆ ಸಂದರ್ಭದಲ್ಲಿ ಮೃತ ಮಾಬುಚಾನ್ ಪೋಷಕರು ವರದಕ್ಷಿಣೆಯಾಗಿ 10 ತೊಲಾ ಬಂಗಾರ ಮತ್ತು ನಗದು ಹಣವನ್ನು ನೀಡಿದ್ದರು. ಮದುವೆ ನಂತರ ಪತಿ, ಮಾವ ಬಾಶ್ಮಾಹುದ್ದಿನ ಮತ್ತು ಚಿಕ್ಕಮ್ಮ ಹಬೀಬೂನ್ ವರದಕ್ಷಿಣೆ ತರುವಂತೆ ಹಿಂಸೆ ನೀಡಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

    ವರದಕ್ಷಿಣೆ ತರಲು ಮಗಳಿಗೆ ಹಿಂಸೆ ನೀಡುವುದನ್ನು ನೋಡಲು ಸಾಧ್ಯವಾಗದೆ 50 ಸಾವಿರ ರೂ. ಹೆಚ್ಚುವರಿ ನಗದು ನೀಡಿದ್ದಾರೆ. ಆದರೆ ಬಳಿಕವೂ ಪತಿಯ ಮನೆಯವರು ಮತ್ತೆ ಹಣ ತರುವಂತೆ ಬಲವಂತ ಮಾಡಿದ್ದು, ಇದಕ್ಕೆ ವಿರೋಧಿಸಿದ್ದಕ್ಕೆ ಮಾಬುಚಾನ್ ಮೇಲೆ ಹಲ್ಲೆ ಮಾಡಿ ಕೊಂದು ಬಳಿಕ ನೇಣು ಬಿಗಿದಿದ್ದಾರೆ. ರಾತ್ರಿ ನಾವು ಮನೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಮ್ಮ ಮಗಳ ಮೃತ ದೇಹ ಪತ್ತೆಯಾಗಿದೆ ಎಂದು ಮೃತಾಳ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯಕ್ಕೆ ಈ ಘಟನೆ ಸಂಬಂಧ ಜಮ್ಮಲಮಡುಗು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.