Tag: Dowry

  • ದೇವರ ದರ್ಶನಕ್ಕೆಂದು ಕರೆದೊಯ್ದು ಟೆಕ್ಕಿಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

    ದೇವರ ದರ್ಶನಕ್ಕೆಂದು ಕರೆದೊಯ್ದು ಟೆಕ್ಕಿಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಟೆಕ್ಕಿ ಪತಿಯೊಬ್ಬ ದೇವರ ದರ್ಶನಕ್ಕೆಂದು ಪತ್ನಿಯನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ನವೀನ್ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಟೆಕ್ಕಿ. ನವೀನ್ ದಂಪತಿ ರಾಜಾಜಿನಗರದಲ್ಲಿ ವಾಸವಾಗಿದ್ದರು. ಕೆಲ ದಿನಗಳಿಂದ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಆರೋಪಿ ನವೀನ್ ಪದೇ ಪದೇ ವರದಕ್ಷಿಣೆ ಕೊಡುವಂತೆ ಪತ್ನಿಯನ್ನ ಪೀಡಿಸುತ್ತಿದ್ದನು ಎಂದು ತಿಳಿದುಬಂದಿದೆ.

    ಮೂರು ದಿನಗಳ ಹಿಂದೆ ನವೀನ್ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರೋಣ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದನು. ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಅಲ್ಲಿಂದ ವಾಪಸ್ ಬರುತ್ತಿದ್ದಾಗ ಕುಣಿಗಲ್ ಬಳಿ ನವೀನ್ ಏಕಾಏಕಿ ರಾಡ್ ನಿಂದ ನನಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.

    ಈ ವೇಳೆ ಅದೃಷ್ಟವಶಾತ್ ನವೀನ್ ಕೈಯಿಂದ ತಪ್ಪಿಸಿಕೊಂಡು ಬಂದು ಸಾರ್ವಜನಿಕರ ಸಹಾಯದಿಂದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ನಡೆದ ವಿಚಾರದ ಬಗ್ಗೆ ತಮ್ಮ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಪೋಷಕರು ಈ ಕುರಿತು ನೆಲಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಇದೀಗ ಪೋಷಕರ ದೂರಿನ ಮೇರೆಗೆ ನೆಲಮಂಗಲ ಪೊಲೀಸರು ಆರೋಪಿ ನವೀನ್‍ನನ್ನು ಬಂಧಿಸಿದ್ದಾರೆ.

  • ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ

    ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ

    ಹೈದರಾಬಾದ್: ಪತಿ ಹಾಗೂ ಆತನ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ ಮಾಡಿಸಿದ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ರಾಜೇಶ್ವರಿ (23) ಕಿರುಕುಳಕ್ಕೆ ಒಳಗಾದ ಮಹಿಳೆ. ರಾಜೇಶ್ವರಿ ಹಾಗೂ ಆಕೆಯ ಸಹೋದರ ಚಂದ್ರಶೇಖರ್ ವಿಶಾಖಪಟ್ಟಣದ ದಾಬಾ ಗಾರ್ಡನ್‍ನಲ್ಲಿರುವ ಪ್ರೇಮಾ ಸಮಾಜಂ ಅನಾಥಶ್ರಮದಲ್ಲಿ ಬೆಳೆದಿದ್ದರು. ರಾಜೇಶ್ವರಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತನ್ನದೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು.

    ರಾಜೇಶ್ವರಿ ಪತಿ ದಾಮೋದರ್ ಹಾಗೂ ಆತನ ತಾಯಿ ಲಲಿತಾ ತನ್ನ ಅಜ್ಜಿಯನ್ನು ನೋಡಲು ಅನಾಥಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರು ರಾಜೇಶ್ವರಿಯನ್ನು ನೋಡಿ ಮದುವೆ ಪ್ರಸ್ತಾಪವನ್ನು ಮಾಡಿದ್ದಾರೆ. ಆದರೆ ಮದುವೆಗೆ ಒಪ್ಪಿಗೆ ಇದೆ ಆದರೆ ವರದಕ್ಷಿಣೆ ನೀಡಲು ನನ್ನ ಬಳಿ ಹಣವಿಲ್ಲ ಎಂದು ರಾಜೇಶ್ವರಿ ಹೇಳಿದ್ದಳು. ಆಗ ದಾಮೋದರ್ ಹಾಗೂ ಆತನ ತಾಯಿ ನಮಗೆ ಯಾವುದೇ ಹಣ ಬೇಡ ಎಂದು ಹೇಳಿದ್ದರು. ಆದರೆ ಮದುವೆಯ ಸಮಯದಲ್ಲಿ ದಾಮೋದರ್ 1.5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ. ರಾಜೇಶ್ವರಿ ಹಾಗೂ ಚಂದ್ರಶೇಖರ್ ಹೇಗೋ ಹಣ ಹೊಂದಿಸಿ ದಾಮೋದರ್ ಗೆ ನೀಡಿದ್ದರು.

    ವರದಕ್ಷಿಣೆ ಕಿರುಕುಳ:
    ಮದುವೆಯಾದ ಕೆಲವೇ ತಿಂಗಳಿನಲ್ಲಿ ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಗೆ 25 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಶುರು ಮಾಡಿದ್ದರು. ಅಲ್ಲದೆ ಮದುವೆಯಾಗಿ 2 ವರ್ಷದಲ್ಲಿ ಮೂರು ಬಾರಿ ಭ್ರೂಣ ಹತ್ಯೆ ಮಾಡಿಸಿದ್ದಾರೆ. ದಾಮೋದರ್ ಹಾಗೂ ಲಲಿತಾ ದಿನನಿತ್ಯ ರಾಜೇಶ್ವರಿಗೆ ನಿಂದಿಸಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಯ ಬ್ಯೂಟಿ ಪಾರ್ಲರ್ ಮಾರಾಟ ಮಾಡಿ ಹೊಸ ಕಾರು ಕೂಡ ಖರೀದಿಸಿದ್ದರು.

    ಮೊದಲ ಪತ್ನಿಯ ಕರೆ:
    ರಾಜೇಶ್ವರಿ ಮತ್ತೆ ನಾಲ್ಕನೇ ಬಾರಿ ಗರ್ಭಿಣಿ ಆದಾಗ ದಾಮೋದರ್ ಮೊದಲ ಪತ್ನಿ ಸ್ವಾತಿ ಕರೆ ಮಾಡಿದ್ದಳು. ನೀನು ಈ ಮಗುವಿಗೆ ಜನ್ಮ ನೀಡಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಳು. ಆಗ ರಾಜೇಶ್ವರಿ ಮೊದಲ ಪತ್ನಿ ಬಗ್ಗೆ ದಾಮೋದರ್ ಬಳಿ ಕೇಳಿದ್ದಾಳೆ. ಇದರಿಂದ ಕೋಪಗೊಂಡ ದಾಮೋದರ್ ಆಕೆಯ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ರಾಜೇಶ್ವರಿ ಮನೆಯಿಂದ ಹೊರ ಬಂದು ಬೇರೆ ಕಡೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

    ಕಾರಿನಲ್ಲಿ ಹಲ್ಲೆ:
    ಮಂಗಳವಾರ ಮಧ್ಯಾಹ್ನ ದಾಮೋದರ್ 6 ತಿಂಗಳ ಗರ್ಭಿಣಿ ಪತ್ನಿ ರಾಜೇಶ್ವರಿಗೆ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ದಾರಿ ಮಧ್ಯೆ ಕಾರಿನಲ್ಲಿದ್ದ ಅತ್ತೆ ಲಲಿತಾ ರಾಜೇಶ್ವರಿ ಮೇಲೆ ಹಲ್ಲೆ ಮಾಡಿದ್ದಾಳೆ. ಲಲಿತಾ ಮೊದಲು ರಾಜೇಶ್ವರಿ ಹೊಟ್ಟೆ ಭಾಗಕ್ಕೆ ಹೊಡೆದಿದ್ದಾಳೆ. ಬಳಿಕ ದುಪ್ಪಟ್ಟಾದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಇಬ್ಬರು ಚೂಪಾದ ವಸ್ತುವಿನಿಂದ ಆಕೆಯ ಕೈ ಮುರಿದು ಹಾಕಿದ್ದಾರೆ.

    ರಾಜೇಶ್ವರಿ ತನ್ನ ಪತಿ ಹಾಗೂ ಅತ್ತೆಯಿಂದ ತಪ್ಪಿಸಿಕೊಂಡು ತನ್ನ ಸಹೋದರ ಚಂದ್ರಶೇಖರ್ ಬಳಿ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಇಬ್ಬರು ಪೆಂದೂರ್ತಿ ಪೊಲೀಸ್ ಠಾಣೆಗೆ ಹೋಗಿ ದಾಮೋದರ್ ಹಾಗೂ ಆತನ ತಾಯಿಯ ವಿರುದ್ಧ ದೂರು ನೀಡಿದ್ದಾರೆ. ರಾಜೇಶ್ವರಿ ಸ್ಥಿತಿ ನೋಡಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದ್ದಾರೆ.

  • ಮೊದ್ಲ ರಾತ್ರಿಯೇ ಪತಿ, ಆತನ ಸಂಬಂಧಿಯಿಂದ ಗ್ಯಾಂಗ್‍ರೇಪ್

    ಮೊದ್ಲ ರಾತ್ರಿಯೇ ಪತಿ, ಆತನ ಸಂಬಂಧಿಯಿಂದ ಗ್ಯಾಂಗ್‍ರೇಪ್

    ಲಕ್ನೋ: ಮದುವೆಯಾದ ಮೊದಲ ರಾತ್ರಿಯೇ ನವವಧುವಿನ ಮೇಲೆ ಆಕೆಯ ಪತಿ ಮತ್ತು ಆತನ ಸಂಬಂಧಿ ಇಬ್ಬರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಪ್ಫರ್ ನಗರದಲ್ಲಿ ನಡೆದಿದೆ.

    ಈ ಘಟನೆ ಮುಜಪ್ಫರ್ ನಗರದ ಹೊರವಲಯದಲ್ಲಿ ಮಾರ್ಚ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ನವವಧುವಿನ ಮೇಲೆ ಆಕೆಯ ಪತಿ ಮತ್ತು ಆತನ ಸೋದರಳಿಯ ಮದುವೆಯ ಮೊದಲ ರಾತ್ರಿಯೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಹೋದರಿಯ ಪತಿ ಕುಟುಂಬದವರಿಗೆ ಹಣದ ದುರಾಸೆ ಇದೆ. ಮದುವೆಯ ವೇಳೆ ವರದಕ್ಷಿಣೆಯನ್ನು ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೇ ಮದುವೆಗೆ ನಾನು 7 ಲಕ್ಷ ರೂ. ಖರ್ಚು ಮಾಡಿದ್ದೆ. ಆದರೂ ಹಣದ ಆಸೆಗಾಗಿ ನನ್ನ ಸಹೋದರಿಯ ಮೇಲೆ ಇಬ್ಬರು ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ.

    ಈ ಕುರಿತು ಪೊಲೀರು ಐಪಿಸಿ ಮತ್ತು ವರದಕ್ಷಿಣೆ ಕಾಯ್ದೆಗೆ ಸಂಬಂಧಿಸಿದಂತೆ ಆರೋಪಿಗಳು ಮತ್ತು ಕುಟುಂಬದ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮಾಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾಗಿ ಮಗುವಾದ್ರೂ ತೀರದ ವಕೀಲನ ಹಣದ ದಾಹ – ಅನುಮಾನಸ್ಪದವಾಗಿ ಗೃಹಿಣಿ ಸಾವು

    ಮದ್ವೆಯಾಗಿ ಮಗುವಾದ್ರೂ ತೀರದ ವಕೀಲನ ಹಣದ ದಾಹ – ಅನುಮಾನಸ್ಪದವಾಗಿ ಗೃಹಿಣಿ ಸಾವು

    ಕೋಲಾರ: ವರದಕ್ಷಿಣೆ ಕಿರುಕುಳ ತಾಳಲಾರದೆ ವಕೀಲನೊಬ್ಬನ ಪತ್ನಿ ನೇಣು ಬಿಗಿದುಕೊಂಡ ರೀತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ.

    ಅನುಷಾ (28) ಮಾಲೂರು ಪಟ್ಟಣದ ಅರಳೇರಿ ರಸ್ತೆಯ ಸಾಯಿ ಬಾಬಾ ಟೆಂಪಲ್ ಬೀದಿಯಲ್ಲಿ ಗೃಹಿಣಿ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಾಲೂರು ಸರ್ಕಾರಿ ಆಸ್ಪತ್ರೆಯ ಶವಗಾರದ ಬಳಿ ಮೃತಳ ಸಂಬಂಧಿಕರು ಜಮಾಯಿಸಿದ್ದರು. ವರದಕ್ಷಿಣೆಗಾಗಿ ಪತಿ ರವೀಂದ್ರಗೌಡ ಹಾಗೂ ಆತನ ಪೋಷಕರು ಕೊಲೆ ಮಾಡಿದ್ದಾರೆಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

    ಎರಡು ವರ್ಷದಿಂದ ಅನುಷಾಳ ಅತ್ತೆ ಮಂಜುಳ ಹಾಗೂ ಪತಿ ಇಬ್ಬರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಲ್ಲದೆ, ಗಂಡ ರವೀಂದ್ರ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅದೇ ರೀತಿ ಬುಧವಾರ ಕೂಡ ಕಂಠಪೂರ್ತಿ ಕುಡಿದ ಬಂದಿದ್ದ ಗಂಡ ಅನುಷಾಳನ್ನ ಮನಬಂದಂತೆ ಥಳಿಸಿದ್ದು, ಬಳಿಕ ಅತ್ತೆ, ಪತಿ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಮಗುವಿನೊಂದಿಗೆ ಪತಿ ರವೀಂದ್ರಗೌಡ ಸೇರಿದಂತೆ ಅವರ ಪೋಷಕರು ಪರಾರಿಯಾಗಿದ್ದಾರೆ ಎಂದು ಮೃತ ಅನುಷಾ ದೊಡ್ಡಪ್ಪ ಮುನಿಯಪ್ಪ ಹೇಳಿದ್ದಾರೆ.

    ಎರಡು ವರ್ಷಗಳ ಹಿಂದೆ ಮಾಲೂರು ತಾಲೂಕಿನ ಬೈರನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಾಪಣ್ಣನ ಮಗ ರವೀಂದ್ರ ಜೊತೆ ತಮಿಳುನಾಡಿನ ಗೆದಲನದೊಡ್ಡಿ ಮೂಲದ ಅನುಷಾಳನ್ನ ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಲಾಗಿತ್ತು. ಮದುವೆ ಹೊಸದರಲ್ಲಿ ಅನ್ಯೋನ್ಯವಾಗಿದ್ದ ಗಂಡ-ಹೆಂಡತಿ ಬಳಿಕ ಆಗಾಗ ವರದಕ್ಷಿಣೆ ಗಲಾಟೆ ನಡೆಯುತ್ತಿತ್ತು. ಇದರ ಮಧ್ಯೆ ಈ ದಂಪತಿಗೆ ಒಂದು ವರ್ಷದ ಗಂಡು ಮಗು ಸಹ ಆಗಿತ್ತು.

    ಮಗುವಾದರೂ ಗಂಡ ಹಾಗೂ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದಿದ್ದ ಅನುಷಾ ಎರಡು ತಿಂಗಳ ಹಿಂದೆ ತವರು ಮನೆಗೆ ಬಂದಿದ್ದಳು. ನಂತರ ತವರು ಮನೆಯವರು ಬುದ್ಧಿವಾದ ಹೇಳಿ ಪತಿಯ ಮನೆಗೆ ಅನುಷಾಳನ್ನ ಕಳುಹಿಸಿ ಕೊಟ್ಟಿದ್ದರು. ಬುಧವಾರ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಅನುಷಾ ಪೋಷಕರು ಮಾತ್ರ ಇದು ಆತ್ಮಹತ್ಯೆ ಅಲ್ಲ ಕೊಲೆ ಎನ್ನುತ್ತಿದ್ದಾರೆ.

    ಸದ್ಯ ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ ಎಂದು ಎಸ್‍ಪಿ ರೋಹಿಣಿ ಕಠೋಚ್ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಮಹತ್ಯೆ

    ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಮಹತ್ಯೆ

    ಮೈಸೂರು: ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ತಾಲೂಕಿನ ಉದ್ಬೂರಿನಲ್ಲಿ ನಡೆದಿದೆ.

    26 ವರ್ಷದ ಭಾಗ್ಯ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ. ಘಟನೆಯಿಂದ ತೀವ್ರ ಸುಟ್ಟಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾಗ್ಯ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಭಾಗ್ಯ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಕಳೆದ ನಾಲ್ಕು ವರ್ಷಗಳ ಹಿಂದೆ ಉದ್ಬೂರು ಗ್ರಾಮದ ಸುರೇಶ್ ಎಂಬಾತನೊಂದಿಗೆ ಮೈಸೂರಿನ ಶಾರದಾದೇವಿನಗರ ನಿವಾಸಿಯಾಗಿರೋ ಭಾಗ್ಯ ಅವರ ವಿವಾಹ ನಡೆದಿತ್ತು. ಭಾಗ್ಯ ಅವರಿಗೆ ಒಂದೂವರೆ ವರ್ಷದ ಗಂಡು ಮಗು, ಎರಡೂವರೆ ವರ್ಷದ ಹೆಣ್ಣುಮಗು ಇದೆ.

    ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ಮಂಡ್ಯ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ನಡೆದಿದೆ.

    ಶಿಲ್ಪಾ(24) ಮೃತ ದುರ್ದೈವಿ. 2016ರಲ್ಲಿ ಮೈಸೂರಿನ ಸೋಮೇಶ್ವರಪುರ ಗ್ರಾಮದ ಶಿಲ್ಪಾ ಅವರನ್ನು ಬೇಬಿ ಗ್ರಾಮದ ತಮ್ಮಯ್ಯ ಎಂಬವರ ಜೊತೆ ಮದುವೆ ಮಾಡಲಾಗಿತ್ತು. 2 ಲಕ್ಷ ವರದಕ್ಷಿಣೆ, ಚಿನ್ನ ನೀಡಿ ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು.

    ಗುರುವಾರ ಶಿಲ್ಪಾ ಗಂಡನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಮಗಳು ನೇಣಿಗೆ ಶರಣಾಗಿದ್ದಾಳೆ ಎಂದು ಶಿಲ್ಪಾ ಪೋಷಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಶಿಲ್ಪಾ ಪೋಷಕರು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮದ ವಿಶೇಷ ಜಾತ್ರೆಯಲ್ಲಿ ಗ್ರಾ.ಪಂ ಸದಸ್ಯನ ಭೀಕರ ಹತ್ಯೆ

    ಗ್ರಾಮದ ವಿಶೇಷ ಜಾತ್ರೆಯಲ್ಲಿ ಗ್ರಾ.ಪಂ ಸದಸ್ಯನ ಭೀಕರ ಹತ್ಯೆ

    – ತಮ್ಮನ ಮಗ್ಳ ಪ್ರೇಮ ವಿವಾಹದಿಂದ ಕೊಲೆಯಾದ್ರಾ.?

    ಮಂಡ್ಯ: ಹಳೇ ವೈಷಮ್ಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.

    ತಿಮ್ಮೇಗೌಡ(50) ಮೃತ ಪಂಚಾಯಿತಿ ಸದಸ್ಯ. ಗ್ರಾಮದೇವತೆ ದೇವೀರಮ್ಮನಿಗೆ ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ದೇವಿಗೆ ಪೂಜೆ ಸಲ್ಲಿಸುವ ವಿಶೇಷ ಜಾತ್ರೆ ನಡೆಯಲಿದ್ದು, ಜಾತ್ರೆಯ ಸಂದರ್ಭದಲ್ಲೇ ಹಳೇ ದ್ವೇಷ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಗಲಾಟೆ ತೆಗೆದು ಗ್ರಾಪಂ ಸದಸ್ಯನ ಭೀಕರ ಹತ್ಯೆ ಮಾಡಲಾಗಿದೆ.

    ಕೊಲೆಯಾದ ತಿಮ್ಮೇಗೌಡರಿಗೆ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿ ಬಳಿಕ ಚಾಕು ಇರಿದು ಕೊಲೆ ಮಾಡಲಾಗಿದೆ. ಬಿಡಿಸಲು ಬಂದ ನಾಲ್ಕು ಮಂದಿಗೂ ಗಂಭೀರ ಗಾಯಗಳಾಗಿವೆ. ವಿನಾಯಕ, ಗೌತಮ್, ಮಹೇಶ್, ಸ್ವಾಮೀಗೌಡಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ತಿಮ್ಮೇಗೌಡರ ತಮ್ಮನ ಮಗಳನ್ನು ಅದೇ ಗ್ರಾಮದ ಮದನ್ ಪ್ರೇಮ ವಿವಾಹ ವಾಗಿದ್ದನು. ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತಿಮ್ಮೇಗೌಡರು ನ್ಯಾಯ ಪಂಚಾಯಿತಿ ಮಾಡಿಸಿದ್ದರು. ವಿಚ್ಛೇದನ ನೀಡುವಂತೆ ಪಂಚಾಯಿತಿಯಲ್ಲಿ ತೀರ್ಮಾನ ಆಗಿತ್ತು. ಈ ಹಳೇ ದ್ವೇಷದ ಹಿನ್ನೆಲೆಯಿಂದ ಮದನ್ ಮತ್ತು ಸಹಚರರು ಉತ್ಸವದ ವೇಳೆ ಗಲಾಟೆ ಮಾಡಿ ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಈ ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ವಿರುದ್ಧ ವರದಕ್ಷಿಣೆ ಕೇಸ್ ದಾಖಲು

    ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ವಿರುದ್ಧ ವರದಕ್ಷಿಣೆ ಕೇಸ್ ದಾಖಲು

    ತುಮಕೂರು: ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಜಾವೀದ್ ಕೆ. ಕಾರಂಗಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ.

    ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಪತ್ನಿ ನೀಡಿದ ದೂರಿನನ್ವಯ ತುಮಕೂರು ಮಹಿಳಾ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ತುಮಕೂರು ಮೂಲದ ಆಸ್ಮಾ ತಾಜ್ ಹಾಗೂ ಬಳ್ಳಾರಿ ಮೂಲದ ಜಾವೀದ್ ಕಾರಂಗಿಗೆ 2008ರಲ್ಲಿ ಆಗಸ್ಟ್ 26ರಂದು ಮದುವೆಯಾಗಿತ್ತು.

    ಮದುವೆ ಆದಾಗಿನಿಂದಲೂ ಕೂಡಾ ಜಾವೀದ್ ತನ್ನ ಪತ್ನಿ ಅಸ್ಮಾ ತಾಜ್‍ಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜಾವೀದ್ ಹಾಗೂ ಅವರ ತಂದೆ ಖಾಜಾ ಮೋಹಿದ್ದಿನ್, ತಾಯಿ ಫಾತಿಮಾ ಸೇರಿದಂತೆ ಒಟ್ಟು ಐದು ಜನರ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಸಿ ಮದ್ವೆಯಾಗಿ ಒಂದೇ ವರ್ಷದಲ್ಲಿ ಹೆಣವಾದ್ಳು.!

    ಪ್ರೀತಿಸಿ ಮದ್ವೆಯಾಗಿ ಒಂದೇ ವರ್ಷದಲ್ಲಿ ಹೆಣವಾದ್ಳು.!

    ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ 23 ವರ್ಷದ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಗುಂಟೂರು ಗ್ರಾಮದಲ್ಲಿ ನಡೆದಿದೆ.

    ಪ್ರಿಯಾಂಕ ಆತ್ಮಹತ್ಯೆಗೆ ಶರಣಾದ ವಿವಾಹಿತೆ. ಪ್ರಿಯಾಂಕ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ತಾಯಿ ನೋಡಿದ್ದು, ತಕ್ಷಣ ಕುಟುಂಬದವರು ಚಿಲಕಲುರಿಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಾಂಕ ಮೃತಪಟ್ಟಿದ್ದಾರೆ.

    ಮೃತ ಪ್ರಿಯಾಂಕ ಕಳೆದ ವರ್ಷ ಮಾರ್ತೂರ್ ನಿವಾಸಿ ನವೀನ್ ಜೊತೆ ವಿವಾಹವಾಗಿದ್ದರು. ಪ್ರಿಯಾಂಕ ಮತ್ತು ನವೀನ್ ಪ್ರೀತಿಸಿದ್ದು, ಪ್ರಿಯಾಂಕ ಕುಟುಂಬದವರು ಮೊದಲಿಗೆ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಪೋಷಕರು ಮಗಳಿಗಾಗಿ ಒಪ್ಪಿ ಇಬ್ಬರಿಗೂ ಮದುವೆ ಮಾಡಿಸಿದ್ದರು. ಆದರೆ ಮದುವೆಯಾದ ಒಂದು ವರ್ಷದಲ್ಲಿ ಪ್ರಿಯಾಂಕ ಮೃತಪಟ್ಟಿದ್ದಾಳೆ. ಪ್ರಿಯಾಂಕ ಕುಟುಂಬದ ಸದಸ್ಯರು ಆಕೆಯ ಪತಿ ಮನೆಯವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನವೀನ್ ಗ್ರಾನೈಟ್ ವ್ಯವಹಾರ ಮಾಡಿಕೊಂಡು ಮಾರ್ತುರ್ ನಲ್ಲಿ ನೆಲೆಸಿದ್ದನು. ಮದುವೆಯಾದ ನಂತರ ಪ್ರಿಯಾಂಕಳಿಗೆ ಅವಳ ಅತ್ತೆ-ಮಾವ ವರದಕ್ಷಿಣೆ ತರಲು ಒತ್ತಾಯಿಸುತ್ತಿದ್ದರು. ಇದರಿಂದ ನವೀನ್ ಮತ್ತು ಪ್ರಿಯಾಂಕ ನಡುವೆ ಭಿನ್ನಾಭಿಪ್ರಾಯವಿತ್ತು. ಅಷ್ಟೇ ಅಲ್ಲದೇ ವರದಕ್ಷಿಣೆ ವಿಷಯದಲ್ಲಿ ನವೀನ್ ಪ್ರತಿದಿನ ಕಿರುಕುಳ ನೀಡುತ್ತಿದ್ದನು ಎಂದು ಪ್ರಿಯಾಂಕ ತಾಯಿ ರೋಜರಮಣಿ ಹೇಳಿದ್ದಾರೆ.

    ತಾಯಿ ತಮ್ಮ ಮನೆಯ ಕಾರ್ಯಕ್ರಮಕ್ಕೆ ಕರೆಯಲೆಂದು ಮಗಳಿಗೆ ಕರೆ ಮಾಡಿದ್ದಾರೆ. ಆದರೆ ಪ್ರಿಯಾಂಕ ಫೋನ್ ರಿಸೀವ್ ಮಾಡಲಿಲ್ಲ. ಈ ವೇಳೆ ಅನುಮಾನಗೊಂಡ ತಾಯಿ ಅವರ ಮನೆಗೆ ಹೋಗಿದ್ದಾರೆ. ಆಗ ಮಗಳು ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅವರ ಅತ್ತೆ-ಮಾವನೇ ನಮ್ಮ ಮಗಳನ್ನು ಕೊಂದಿದ್ದಾರೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಪ್ರಿಯಾಂಕ ಪೋಷಕರು ಮನವಿ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದಕ್ಕೆ ‘ತಲಾಖ್’ ನೀಡಿದ ಪತಿ

    ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದಕ್ಕೆ ‘ತಲಾಖ್’ ನೀಡಿದ ಪತಿ

    ಲಕ್ನೌ: ಪತ್ನಿ ತನ್ನ ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದ್ದಕ್ಕೆ ಪತಿ ಆಕೆಗೆ ಫೋನಿನಲ್ಲೇ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಈಟಾದಲ್ಲಿ ನಡೆದಿದೆ.

    ಅಫ್‍ರೋಜ್ ಪತ್ನಿ ತಲಾಖ್ ನೀಡಿದ ಪತಿ. ಅಫ್‍ರೋಜ್ ಹೈದರಾಬಾದ್‍ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದೂವರೆ ವರ್ಷದ ಹಿಂದೆ ಅಫ್‍ರೋಜ್, ಶಂಬುಲ್ ಬೇಗಂಳನ್ನು ಮದುವೆ ಆಗಿದ್ದನು. ಮದುವೆಯ ನಂತರ ಆತ ವರದಕ್ಷಿಣೆ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ.

    ಶಂಬುಲ್ ಬೇಗಂ ಜನವರಿ 18ರಂದು ಅನಾರೋಗ್ಯದಿಂದ ಬಳುತ್ತಿದ್ದ ತನ್ನ ಅಜ್ಜಿಯನ್ನು ನೋಡಲು ತವರು ಮನೆಗೆ ಹೋಗಿದ್ದಳು. ಅಫ್‍ರೋಜ್ ತನ್ನ ಪತ್ನಿ ತವರು ಮನೆಗೆ ಹೋಗಲು ಕೇವಲ 30 ನಿಮಿಷ ಕಾಲಾವಕಾಶ ನೀಡಿದ್ದನು. ಆದರೆ ಶಂಬುಲ್ 10 ನಿಮಿಷ ತಡ ಮಾಡಿದ್ದಾಳೆ. ಆಗ ಅಫ್‍ರೋಜ್ ತನ್ನ ಸಹೋದರನನ್ನು ಪತ್ನಿಯ ತವರು ಮನೆಗೆ ಕಳುಹಿಸಿ ಅಲ್ಲಿ ಶಂಬುಲ್ ಜೊತೆ ಫೋನಿನಲ್ಲಿ ಮಾತನಾಡಿಸುವುದಾಗಿ ಹೇಳಿದ್ದಾನೆ. ಬಳಿಕ ಅಫ್‍ರೋಜ್ ಫೋನಿನಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.

    ಒಂದೂವರೆ ವರ್ಷದ ಹಿಂದೆ ನನ್ನ ಪೋಷಕರು ಶಂಬುಲ್ ಜೊತೆ ಮದುವೆ ಮಾಡಿಸಿದ್ದರು. ಮದುವೆ ಆದ ದಿನದಿಂದ ಈವರೆಗೂ ನನ್ನ ಪತಿ ಹಾಗೂ ಆತನ ಮನೆಯವರು ನನಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ಆದರೆ ನನ್ನ ತವರು ಮನೆಯವರು ವರದಕ್ಷಿಣೆ ನೀಡಲು ನಿರಾಕರಿಸಿದ್ದರು. ಹಾಗಾಗಿ ನನ್ನ ಪತಿ ನನಗೆ ತವರು ಮನೆಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ ಎಂದು ಶಂಬುಲ್ ಪೊಲೀಸರ ಬಳಿ ಹೇಳಿದ್ದಾಳೆ.

    ಫೋನಿನಲ್ಲಿ ತಲಾಖ್ ಪಡೆದ ಬಳಿಕ ನಾನು ನನ್ನ ಪತಿಯ ಮನೆಗೆ ಹೋದೆ. ಅಲ್ಲಿ ನನ್ನ ಪತಿ ಹಾಗೂ ಆತನ ಕುಟುಂಬದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಂಬುಲ್ ಹೇಳಿದ್ದಾಳೆ. ಪೊಲೀಸರು ಈ ಪ್ರಕರಣವನ್ನು ತಲಾಖ್ ಎಂದು ದಾಖಲಿಸಿಲ್ಲ. ವರದಕ್ಷಿಣೆ ಕಿರುಕುಳ ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ರೋಮಸಿಯಾ ಮೌರ್ಯ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv