Tag: Dowry

  • ಭರತನಾಟ್ಯ ಕಲಿಯಲು ಬಂದ ಯುವತಿಯನ್ನ ಪ್ರೀತಿಸಿ ಮದ್ವೆ

    ಭರತನಾಟ್ಯ ಕಲಿಯಲು ಬಂದ ಯುವತಿಯನ್ನ ಪ್ರೀತಿಸಿ ಮದ್ವೆ

    – ನ್ಯಾಯಕ್ಕಾಗಿ ಠಾಣೆ ಮೇಟ್ಟಿಲೇರಿದ ಚಿಲಿ ದೇಶದ ಮಹಿಳೆ

    ಬೆಂಗಳೂರು: ಚಿಲಿ ದೇಶದ ಮಹಿಳೆಯೊಬ್ಬರು ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾನೆ ಎಂದು ಆತನ ವಿರುದ್ಧ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾಳೆ.

    ಪತಿ ವಿಕ್ರಂಮಾಡ ವರದಕ್ಷಿಣೆ ನೀಡುವಂತೆ ನಿತ್ಯ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಮಹಿಳೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ನೀಡಿದ್ದಾರೆ.

    ಮಹಿಳೆ 2017 ಭರತ ನಾಟ್ಯ, ಕಥಕ್ಕಳಿ ಕಲಿಯಲು ದೂರದ ಚಿಲಿ ದೇಶದಿಂದ ಬೆಂಗಳೂರಿಗೆ ಬಂದಿದ್ದರು. ಭರತ ನಾಟ್ಯ ತರಬೇತಿಗೆ ಹೋಗುತ್ತಿರುವಾಗ ಹೈದರಾಬಾದ್ ಮೂಲದ ವಿಕ್ರಂಮಾಡ ಜೊತೆ ಪ್ರೀತಿಯಾಗಿದೆ. ಪ್ರೀತಿ ಮಾಡಿದ ಒಂದು ವರ್ಷದ ಒಳಗಡೆ ಇಬ್ಬರು ಪರಸ್ಪರ ಒಪ್ಪಿ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ ಬಳಿಕ ನವ ದಂಪತಿ ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು.

    ನಾನು 2019ರಲ್ಲಿ ದಕ್ಷಿಣ ಅಮೇರಿಕದ ಚಿಲಿ ದೇಶಕ್ಕೆ ಅಂದರೆ ತವರು ಮನೆಗೆ ಹೋಗಿದ್ದೆ. ಚಿಲಿ ದೇಶದಿಂದ ಬಂದ ಬಳಿಕ ಗಂಡ ವಿಕ್ರಂಮಾಡ ವರದಕ್ಷಿಣೆ ಹಣ ತರುವಂತೆ ನಿತ್ಯ ಕಿರುಕುಳ ಕೊಡುತ್ತಾನೆ. ವರದಕ್ಷಿಣೆ ಹಣ ತರದಿದ್ದರೆ ನಾನು ಡಿವೋರ್ಸ್ ನೀಡುವುದಾಗಿ ಬೆದರಿಸುತ್ತಾನೆ. ಅಷ್ಟೇ ಅಲ್ಲದೇ ಪ್ರತಿ ನಿತ್ಯ ಕೆಲಸದಿಂದ ಮನೆಗೆ ಬಂದು ಫೋನ್ ಚಕ್ ಮಾಡಿ ಚಿತ್ರಹಿಂಸೆ ನೀಡುತ್ತಿದ್ದಾನೆಂದು ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಗೃಹಿಣಿ ಅನುಮಾನಾಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ಗೃಹಿಣಿ ಅನುಮಾನಾಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯಲ್ಲಿ ಸುಮಲತಾ ಎಂಬ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ಸುಮಲತಾ ಹಾಗೂ ಶಿವಕುಮಾರ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೂಲತಃ ಆಂಧ್ರದ ಪೆನುಗೊಂಡದವರಾದ ಸುಮಲತಾ, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯ ನಿವಾಸಿ ಶಿವಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾಗಿ ಕೆಲ ತಿಂಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದ ಜೋಡಿಗಳ ಮಧ್ಯೆ ಇದ್ದಕ್ಕಿದ್ದಂತೆ ಜಗಳ ಶುರುವಾಗಿದೆ. ಪಾಪಿ ಪತಿ ಶಿವಕುಮಾರ್ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಅವನ ತಾಯಿ ಸರೋಜಮ್ಮ ಸಾಥ್ ನೀಡಿದ್ದರಂತೆ. ಬೆಂಗಳೂರಿನಲ್ಲಿ ಮನೆ ಲೀಸ್‍ಗೆ ಹಾಕಿಸಿಕೊಡು, ಹಣ ತೆಗೆದುಕೊಂಡು ಬಾ ಅಂತಾ ಪೀಡಿಸುತ್ತಿದ್ದರು ಎನ್ನಲಾಗಿದೆ.

    ಆದರೂ ಸುಮಲತಾ ತಮ್ಮ ಮನೆಯಲ್ಲಿ ತಿಳಿಸದೇ ಬಾಳುತ್ತಿದ್ದರು. ಯಾಕೆಂದರೆ ಸುಮಲತಾ ಮನೆಯಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು, ಕಿತ್ತು ತಿನ್ನುವ ಬಡತನ ತಾನು ವಾಪಸ್ ಮನೆಗೆ ಹೋದರೆ ತಂಗಿಯರಿಗೆ ಮದುವೆಯಾಗಲ್ಲ ಎಂಬ ಭಯದಿಂದ ಸುಮ್ಮನಿದ್ದರು. ಜೊತೆಗೆ ಕಳೆದ ಒಂದು ತಿಂಗಳಿನಿಂದ ತವರು ಮನೆಗೆ ಹೋಗುವ ವಿಚಾರವಾಗಿ ಜಗಳವಾಡಿ ಪತಿ ಶಿವಕುಮಾರ್ ಆಕೆಯನ್ನು ಮನೆಯಿಂದ ಆಚೆ ಹಾಕಿದ್ದನಂತೆ. ನಂತರ ಪೊಲೀಸ್ ಠಾಣೆಗೆ ಹೋಗಿ ರಾಜೀ ಸಂಧಾನ ಕೂಡ ಆಗಿ ಬಳಿಕ ಜಗಳ ಮಾಡಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಬಂದಿದ್ದಾರೆ.

    ಆದರೆ ತಡರಾತ್ರಿ ಪತಿ ಶಿವಕುಮಾರ್ ಸುಮಲತಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಳಿಕ ಶಿವಕುಮಾರ್ ತಡರಾತ್ರಿಯೇ ಪೊಲೀಸರಿಗೆ ಶರಣಾಗಿದ್ದು, ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇದು ಕೊಲೆಯೋ, ಆತ್ಮಹತ್ಯೆಯೋ ಅನ್ನೋ ಸತ್ಯ ಬಹಿರಂಗವಾಗಲಿದೆ.

  • ಮದ್ವೆಯಾದ 4 ವರ್ಷಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

    ಮದ್ವೆಯಾದ 4 ವರ್ಷಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

    – ಪತಿ, ಅತ್ತೆ ಮನೆ ಬಿಟ್ಟು ಪರಾರಿ

    ಮಂಡ್ಯ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.

    ನಂದಿನಿ (32) ಮೃತ ಗೃಹಿಣಿ. ವರದಕ್ಷಿಣೆಗಾಗಿ ಪತಿ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಆರ್ ಪೇಟೆ ತಾಲೂಕಿನ ವಸಂತಪುರ ಗ್ರಾಮದ ಶಿವಣ್ಣರ ಮಗಳಾದ ನಂದಿನಿಯನ್ನು ಕಿಕ್ಕೇರಿ ಗ್ರಾಮ ನಿವಾಸಿ ವಿನಯ್ ಜೊತೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು.

    ಮದುವೆ ವೇಳೆ ಕಾಲು ಕೆಜಿ ಚಿನ್ನ ಮತ್ತು ಒಂದು ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ವಿವಾಹದ ಬಳಿಕ ನಂದಿನಿ ಮತ್ತು ವಿನಯ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕೆಲವು ತಿಂಗಳ ಹಿಂದೆ ದಂಪತಿ ಕಿಕ್ಕೇರಿಗೆ ಬಂದು ನೆಲೆಸಿದ್ದರು.

    ದಂಪತಿಯ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಶನಿವಾರ ನಂದಿನಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪತಿ ವಿನಯ್, ಅವರ ತಾಯಿ, ಪತಿಯ ಸಹೋದರರು ಮನೆ ಬಿಟ್ಟು ಪರಾರಿಯಾಗಿದ್ದರು.

    ಮಗಳ ಸಾವಿನ ವಿಚಾರ ತಿಳಿದ ನಂದಿನಿ ಪೋಷಕರು ಮನೆಯ ಬಳಿ ಬಂದು ಗಲಾಟೆಯನ್ನು ಮಾಡಿದ್ದರು. ಅಲದೇ ವರದಕ್ಷಿಣೆಗಾಗಿ ಪತಿ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಸಂಬಂಧ ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆಯನ್ನು ಕೈಗೊಂಡಿದ್ದಾರೆ.

  • ಪತಿಯಿಂದ ನಟಿಗೆ ವರದಕ್ಷಿಣೆ ಕಿರುಕುಳ

    ಪತಿಯಿಂದ ನಟಿಗೆ ವರದಕ್ಷಿಣೆ ಕಿರುಕುಳ

    ಬೆಂಗಳೂರು: ಪತಿಯಿಂದ ನನಗೆ ಕಿರುಕುಳವಾಗುತ್ತಿದೆ. ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾನೆ ಎಂದು ಪತಿಯ ವಿರುದ್ಧ ತಮಿಳು ನಟಿಯೊಬ್ಬರು ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ತಮಿಳು ನಟಿ ರಮ್ಯಾ ಪತಿಯ ವಿರುದ್ಧ ದೂರು ನೀಡಿದ್ದಾರೆ. ನಟಿ ರಮ್ಯಾಗೆ 2017ರಲ್ಲಿ ಕೊರಿಯೋಗ್ರಾಫರ್ ವರದರಾಜನ್ ಜೊತೆ ಮದುವೆಯಾಗಿತ್ತು. ವಿವಾಹದ ಸಂದರ್ಭದಲ್ಲಿ 25 ಲಕ್ಷ ಮೌಲ್ಯದ ಸೈಟ್, ಚಿನ್ನಾಭರಣ ಮತ್ತು ನಗದನ್ನು ಕೊಡಲಾಗಿತ್ತು.

    ಇತ್ತೀಚೆಗೆ ಡ್ಯಾನ್ಸ್ ಅಕಾಡೆಮಿ ತೆರೆಯಲು ಮತ್ತಷ್ಟು ಹಣ ತರುವಂತೆ ಪತಿ ಮತ್ತು ಪತಿಯ ಕುಟುಂಬದವರು ಪೀಡಿಸಲಾರಂಭಿಸಿದ್ದಾರೆ. ಮದುವೆಯಾದ ಬಳಿಕ ನನ್ನ ಮನೆಗೆ ಕರೆದುಕೊಂಡು ಹೋಗದೆ ಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಕೋ ಡ್ಯಾನ್ಸರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

    ನಟಿ ರಮ್ಯಾ ತಮಿಳಿನ ‘ಮಾಂಡಾ ಮಾಯಿಲ’ ರಿಯಾಲಿಟಿ ಶೋನಲ್ಲಿ ವಿಜೇತರಾಗಿದ್ದರು. ಸದ್ಯಕ್ಕೆ ವರದಕ್ಷಿಣೆ ಕೇಸ್‍ನಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ವರದಕ್ಷಿಣೆ ಕಿರುಕುಳ ಆರೋಪ – ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ ಆರೋಪ – ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಶಿವಮೊಗ್ಗ: ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ಗೃಹಿಣಿಯನ್ನು ದೀಪ (25) ಎಂದು ಗುರುತಿಸಲಾಗಿದೆ. ಚನ್ನಗಿರಿ ತಾಲೂಕು ಕತ್ತಲಗೆರೆಯ ದೀಪ ಹಾಗೂ ಭದ್ರಾವತಿ ತಾಲೂಕು ಮೈದೊಳಲು ಗ್ರಾಮದ ಪ್ರದೀಪ್ ಜೊತೆ ಕಳೆದ 5 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.

    ಮದುವೆಯಾದ ಆರಂಭದಲ್ಲಿ ಇಬ್ಬರ ಸಂಸರ ಚನ್ನಾಗಿಯೇ ಇತ್ತು. ಆದರೆ ವರ್ಷ ಕಳೆದಂತೆ ದೀಪಾಳಿಗೆ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದರು ಎಂದು ದೀಪ ಕುಟುಂಬಸ್ಥರು ಆರೋಪಿಸಿದ್ದಾರೆ.

    ದೀಪ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗಿಯಲ್ಲ. ಆಕೆಯನ್ನು ಶುಕ್ರವಾರ ಮಧ್ಯರಾತ್ರಿ ಗಂಡ, ಅತ್ತೆ ಮಾವ ಸೇರಿಕೊಂಡು ಹೊಡೆದು ನೇಣು ಹಾಕಿದ್ದಾರೆ ಎಂದು ಮೃತ ದೀಪ ಕುಟುಂಬದವರ ಆರೋಪವಾಗಿದೆ. ಈ ಘಟನೆ ನಂತರ ಪತಿ, ಅತ್ತೆ – ಮಾವ ಪರಾರಿಯಾಗಿದ್ದಾರೆ.

    ಸದ್ಯ ಈ ವಿಷಯ ತಿಳಿದ ಹೊಳೆಹೊನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹಲ್ಲೆ ಮಾಡಿ ಕೊಲೆಗೈದು ಮಹಿಳೆಯ ಅರ್ಧ ದೇಹ ಸುಟ್ಟರು

    ಹಲ್ಲೆ ಮಾಡಿ ಕೊಲೆಗೈದು ಮಹಿಳೆಯ ಅರ್ಧ ದೇಹ ಸುಟ್ಟರು

    ಪಾಟ್ನಾ: ವರದಕ್ಷಿಣೆಗಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಬಿಹಾರದ ಇಸ್ಲಾಂಪುರದದಲ್ಲಿ ನಡೆದಿದೆ.

    ವಿಭಾ ಕುಮಾರಿ ಮೃತಪಟ್ಟ ಮಹಿಳೆ. ಮೂರು ವರ್ಷಗಳ ಹಿಂದೆ ವಿಭಾ, ರಾಜೇಶ್ ರವಿದಾಸ್ ಎಂಬವನನ್ನು ಮದುವೆಯಾಗಿದ್ದಳು. 6 ತಿಂಗಳ ಹಿಂದೆ ವಿಭಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಎರಡು ದಿನದಲ್ಲೇ ಆ ಮಗು ಮೃತಪಟ್ಟಿತ್ತು.

    ಮದುವೆಯಾದ ನಂತರ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಒಂದೂವರೆ ಲಕ್ಷ ನಗದು, ಚಿನ್ನದ ಸರ ಹಾಗೂ ಉಂಗುರವನ್ನು ವರದಕ್ಷಿಣೆಯಾಗಿ ತರುವಂತೆ ವಿಭಾ ಕುಮಾರಿಗೆ ಕಿರುಕುಳ ನೀಡುತ್ತಿದ್ದರು. ವಿಭಾ ವರದಕ್ಷಿಣೆ ತರದಿದ್ದಾಗ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಆಕೆಯನ್ನು ಕೊಲೆ ಮಾಡಿದ್ದಾರೆ.

    ವಿಭಾ ಪೋಷಕರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ವಿಭಾ ಅರ್ಧ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮಹಿಳೆಯ ಮೃತದೇಹವನ್ನು ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

    ಪೊಲೀಸರಿಗೆ ವಿಭಾ ಕೊಲೆ ಪ್ರಕರಣ ತಿಳಿಯುತ್ತಿದ್ದಂತೆ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಪರಾರಿಯಾಗಿದ್ದಾರೆ.

  • ಮದ್ವೆಯಾಗಿ 7 ತಿಂಗಳು – 18 ವರ್ಷದ 5 ತಿಂಗ್ಳ ಗರ್ಭಿಣಿ ಆತ್ಮಹತ್ಯೆ

    ಮದ್ವೆಯಾಗಿ 7 ತಿಂಗಳು – 18 ವರ್ಷದ 5 ತಿಂಗ್ಳ ಗರ್ಭಿಣಿ ಆತ್ಮಹತ್ಯೆ

    ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಮದುವೆಯಾದ ಏಳು ತಿಂಗಳಲ್ಲೇ 5 ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಸೌಮ್ಯ (18) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ದತ್ತಾತ್ರೇಯ ನಗರದ ಶೈಕ್‍ಪೇಟೆಯ ಪ್ರಭಾಕರ್ ಮತ್ತು ಶೇಷಮ್ಮ ಅವರ ಮಗಳು ಸೌಮ್ಯಗೆ ಕಳೆದ ಏಳು ತಿಂಗಳ ಹಿಂದೆ ತಮ್ಮ ಹತ್ತಿರದ ಸಂಬಂಧಿ ಫಿಲ್ಮ್ ನಗರದ ಶಿವಕುಮಾರ್ ಜೊತೆ ವಿವಾಹವಾಗಿತ್ತು. ಮದುವೆಯಾದ ನಂತರ ಸೌಮ್ಯ ಪತಿ ಶಿವಕುಮಾರ್, ಅತ್ತೆ ರುಕ್ಕಮ್ಮ ಮತ್ತು ಚಿಕ್ಕಮ್ಮ ಭೂಶಿ ಜೊತೆ ವಾಸಿಸುತ್ತಿದ್ದಳು. ಈ ವೇಳೆ ಸೌಮ್ಯಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.

    ಸೌಮ್ಯ ಐದು ತಿಂಗಳ ಗರ್ಭಿಣಿಯಾಗಿದ್ದಳು. ಆದರೂ ಮನೆಯವರು ಕರುಣೆಯಿಲ್ಲದೆ ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸಲಾಗದೇ ಒಂದು ತಿಂಗಳಿನಿಂದ ಸೌಮ್ಯ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಆದರೆ ಸೌಮ್ಯ ಕಿರುಕುಳದಿಂದ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮನೆಯವರು ಬಂದು ಸೌಮ್ಯಗಾಗಿ ಹುಡುಕಾಡಿದ್ದಾರೆ. ಕೊನೆಗೆ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಗಾಬರಿಯಾದ ಕುಟುಂಬಸ್ಥರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿಯೇ ಸೌಮ್ಯ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ನಮ್ಮ ಮಗಳಿಗೆ ಹೆಚ್ಚಾಗಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಷಕರು ದೂರು ನೀಡಿದ ಆಧಾರದ ಮೇರೆಗೆ ಗೋಲ್ಕೊಂಡಾ ಇನ್ಸ್‌ಪೆಕ್ಟರ್ ಚಂದ್ರಶೇಖರ್ ರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತ ಮದುವೆಯಾದ ಏಳು ತಿಂಗಳಲ್ಲೇ ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ವರ ತಡವಾಗಿ ಮದುವೆಗೆ ಬಂದ ಎಂದು ಬೇರೆಯವನನ್ನು ಮದುವೆಯಾದ ವಧು

    ವರ ತಡವಾಗಿ ಮದುವೆಗೆ ಬಂದ ಎಂದು ಬೇರೆಯವನನ್ನು ಮದುವೆಯಾದ ವಧು

    ಲಕ್ನೋ: ವರ ಮದುವೆ ಮನೆಗೆ ತಡವಾಗಿ ಬಂದ ಎಂದು ವಧು ಬೇರೆ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂಗಲ್ಜತ್ ಎಂಬ ಹಳ್ಳಿಯಲ್ಲಿ ನಡೆದಿದೆ.

    ಈ ಘಟನೆ ಒಂದು ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಈ ಜೋಡಿಯು ಅಕ್ಟೋಬರ್ ನಲ್ಲಿ ಸಾಮೂಹಿಕ ವಿವಾಹವೊಂದರಲ್ಲಿ ಮದುವೆಯಾಗಿದೆ. ಆದರೆ ಸಂಪ್ರಾದಯಿಕವಾಗಿ ಮತ್ತೊಮ್ಮೆ ಮದುವೆಯಾಗಲು ಡಿಸೆಂಬರ್ 4ರಂದು ಮದುವೆ ನಿಶ್ಚಯ ಮಾಡಿದ್ದಾರೆ.

    ಈ ಮದುವೆಗೆ ವಧುವಿನ ಮನೆಗೆ ಮಧ್ಯಾಹ್ನ 2 ಗಂಟೆಗೆ ಬರಬೇಕಾದ ವರನ ಕಡೆಯವರು ರಾತ್ರಿಯ ವೇಳೆಗೆ ಮದುವೆ ಮನೆಗೆ ಬಂದಿದ್ದಾರೆ. ಇದರಿಂದ ಕೋಪಗೊಂಡ ವಧುವಿನ ಕಡೆಯವರು ಗಲಾಟೆ ಮಾಡಿದ್ದಾರೆ. ಇದಕ್ಕೂ ಮುಂಚೆಯೇ ವರದಕ್ಷಿಣೆ ವಿಚಾರವಾಗಿ ವಧು ವರನ ಕುಟುಂಬದ ನಡುವೆ ಜಗಳ ಆಗಿತ್ತು. ಆ ಕಾರಣದಿಂದಲ್ಲೇ ಗಲಾಟೆಯಾಗಿ ಮದುವೆ ಮರಿದು ಬಿದ್ದಿದೆ.

    ತಡವಾಗಿ ಮದುವೆ ಮನೆಗೆ ಬಂದ ವರದ ಕಡೆಯವರನ್ನು ವಧುವಿನ ಕುಟುಂಬದವರು ಒಂದು ಮನೆಯಲ್ಲಿ ಕೂಡಿಹಾಕಿ ಥಳಿಸಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ ಎಂದು ವರನ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಎರಡು ಕುಟುಂಬದವರು ರಾಜಿ ಮಾಡಿಕೊಳ್ಳಲು ಬಂದಿದ್ದರು. ಆದರೆ ವಧು ವರನೊಂದಿಗೆ ಹೋಗಲು ಇಷ್ಟವಿಲ್ಲ ಎಂದರು. ಹೀಗಾಗಿ ಎರಡೂ ಕಡೆಯಿಂದ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

    ಈ ಘಟನೆ ರಾಜಿ ಪಂಚಾಯಿತಿ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ. ಇದಾದ ನಂತರ ವರ ತನ್ನ ಸಂಬಂಧಿಕರ ಜೊತೆ ತನ್ನ ಊರಿಗೆ ಹಿಂದುರಿಗಿದ್ದಾನೆ. ನಂತರ ವಧು ಗ್ರಾಮದ ಹಿರಿಯ ಸಮ್ಮುಖದಲ್ಲಿ ಅದೇ ಹಳ್ಳಿಯ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.

  • ವರದಕ್ಷಿಣೆ ನೀಡದ್ದಕ್ಕೆ ಅಪ್ರಾಪ್ತೆ ಗೆಳತಿಯನ್ನ ಜೀವಂತವಾಗಿ ಸುಟ್ಟ ಪ್ರಿಯಕರ

    ವರದಕ್ಷಿಣೆ ನೀಡದ್ದಕ್ಕೆ ಅಪ್ರಾಪ್ತೆ ಗೆಳತಿಯನ್ನ ಜೀವಂತವಾಗಿ ಸುಟ್ಟ ಪ್ರಿಯಕರ

    ಅಗರ್ತಲಾ: ವರದಕ್ಷಿಣೆ ತಂದಿಲ್ಲವೆಂದು ಪ್ರಿಯಕರ ಹಾಗೂ ಅವನ ತಾಯಿ ಸೇರಿ 17ರ ಬಾಲಕಿಯನ್ನು ಜೀವಂತವಾಗಿ ಸುಡುವ ಮೂಲಕ ವಿಕೃತಿ ಮೆರೆದಿದ್ದಾರೆ.

    ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಾಲಕಿಯ ದೇಹ ಶೇ.90ರಷ್ಟು ಸುಟ್ಟಿದ್ದು, ಶನಿವಾರ ಜಿ.ಪಿ.ಪಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಪರೀತ ಗಾಯವಾಗಿದ್ದರಿಂದ ಬದುಕುಳಿಯಲಿಲ್ಲ. ಆರೋಪಿಯನ್ನು ಅಜೋಯ್ ರುದ್ರ ಪಾಲ್(21) ಹಾಗೂ ಅವನ ತಾಯಿ ಮಿನಾತಿ ಎಂದು ಗುರುತಿಸಲಾಗಿದೆ. ಸಂತೀರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಕುಟುಂಬಸ್ಥರು ದೂರು ನೀಡಿದ್ದು, ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಚಂದ್ರ ಸಹಾ ಅವರು ಈ ಕುರಿತು ಮಾಹಿತಿ ನೀಡಿ, ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಕ್ಟೋಬರ್ 28ರಂದು ಪಾಲ್ ಬಾಲಕಿಯೊಂದಿಗೆ ಓಡಿ ಹೋಗಿದ್ದ. ನಂತರ ಡಿಸೆಂಬರ್ 11ರಂದು ಶಾಸ್ತ್ರೋಕ್ತವಾಗಿ ಮದುವೆಯಾಗಬೇಕು ಎಂದು ನಿಶ್ಚಯಿಸಿದ್ದ. ನಂತರ ಆರೋಪಿ ಪಾಲ್ ತಾಯಿ ಡಿಸೆಂಬರ್ 6ರಂದು ಬಾಲಕಿಯ ಪೋಷಕರನ್ನು ಭೇಟಿಯಾಗಿದ್ದಳು. ಆಗ 50 ಸಾವಿರ ರೂ. ವರದಕ್ಷಿಣೆ ಕೊಡುವಂತೆ ಒತ್ತಾಯಿಸಿದ್ದಳು ಎಂದು ಮಾಹಿತಿ ನೀಡಿದ್ದಾರೆ.

    ಇಷ್ಟು ದೊಡ್ಡ ಪ್ರಮಾಣದ ಹಣವನ್ನು ನೀಡಲು ನಮ್ಮಿಂದ ಸಾದ್ಯವಿಲ್ಲ. 15 ಸಾವಿರ ರೂ.ಗಳನ್ನು ನೀಡಲು ನಾವು ಶಕ್ತರಾಗಿದ್ದೇವೆ ಎಂದು ಪಾಲ್ ಹಾಗೂ ಕುಟುಂಬಕ್ಕೆ ಅಪ್ರಾಪ್ತೆಯ ಪೋಷಕರು ತಿಳಿಸಿದ್ದಾರೆ. ಪೋಷಕರು ಹೇಳಿದ ಕೆಲವೇ ಗಂಟೆಗಳ ನಂತರ ಪ್ರಿಯಕರ ಹಾಗೂ ಆತನ ತಾಯಿ ಬಾಲಕಿಗೆ ಬೆಂಕಿ ಹಚ್ಚಿದ್ದಾರೆ, ಬಾಲಕಿಯ ದೇಹ ಶೇ.90ರಷ್ಟು ಸುಟ್ಟಿತ್ತು, ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವಿವರಿಸಿದ್ದಾರೆ.

    ಆದರೆ ಪೊಲೀಸರ ವಿಚಾರಣೆ ವೇಳೆ ಪಾಲ್ ಬೇರೆಯದೇ ಕಥೆ ಹೇಳಿದ್ದು, ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನೆ. ಪಾಲ್‍ನ ಆರೋಪವನ್ನು ಬಾಲಕಿಯ ಕುಟುಂಬಸ್ಥರು ಒಪ್ಪಿಲ್ಲ.

    ಘಟನೆ ಕುರಿತು ಸಂತ್ರಸ್ತೆಯ ತಾಯಿ ಪ್ರತಿಕ್ರಿಯಿಸಿ, ಆರೋಪಿಯ ತಾಯಿಯು 50 ಸಾವಿರ ರೂ. ಕೇಳಿದಳು. ಆದರೆ ನಮ್ಮಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಹೇಳಿದೆವು. ರಾತ್ರಿ ನಾನು ಕರೆ ಮಾಡಿ ನನ್ನ ಮಗಳ ಬಳಿ ಮಾತನಾಡಬೇಕು ಎಂದು ಹೇಳಿದೆ. ಆದರೆ ಆರೋಪಿ ಪಾಲ್ ಅವಳನ್ನು ಮಾತನಾಡಲು ಬಿಡಲಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ.

  • ಡಿವೋರ್ಸ್ ಕೊಡದೇ 3ನೇ ಮದ್ವೆಗೆ ತಯಾರಿ – ಮಂಟಪಕ್ಕೆ ಬಂದ 2ನೇ ಪತ್ನಿ

    ಡಿವೋರ್ಸ್ ಕೊಡದೇ 3ನೇ ಮದ್ವೆಗೆ ತಯಾರಿ – ಮಂಟಪಕ್ಕೆ ಬಂದ 2ನೇ ಪತ್ನಿ

    ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿಗೆ ವಿಚ್ಛೇದನ ನೀಡದೆ ಮೂರನೇ ಮದುವೆಯಾಗಲು ಮುಂದಾಗಿದ್ದನು. ಇದೀಗ ಎರಡನೇ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಜೈಪುರ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಾನಿಕೋಯಿಲಿ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 2016ರಲ್ಲಿ ಜೈಪುರ್ ಜಿಲ್ಲೆಯ ಕೋರೆ ಪ್ರದೇಶದ ಮಹಿಳೆಯನ್ನು ಮದುವೆಯಾಗಿದ್ದನು. ನಂತರ ಆರೋಪಿ ತನ್ನ ಮೊದಲ ಪತ್ನಿಗೆ ತಲಾಕ್ ನೀಡಿ, 2017ರಲ್ಲಿ ಜಿಲ್ಲೆಯ ಕಟಿಯಾ ಗ್ರಾಮದ ಇನ್ನೊಬ್ಬ ಮಹಿಳೆಯನ್ನು ವಿವಾಹವಾದನು ಎಂದು ಇನ್ಸ್ ಪೆಕ್ಟರ್ ರಂಜಿತ್ ಕುಮಾರ್ ಮೊಹಂತಿ ತಿಳಿಸಿದ್ದಾರೆ.

    ಎರಡನೇ ಮದುವೆಯಾದ ಕೆಲವೇ ತಿಂಗಳುಗಳ ನಂತರ ಆರೋಪಿ ವಿದೇಶಕ್ಕೆ ಹೋದನು. ಈ ವೇಳೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪತಿ ವಿದೇಶಕ್ಕೆ ಹೋದ ಮೇಲೆ ಪತಿಯ ಮನೆಯವರು ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಕೊನೆಗೆ ಅವರು ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ, ಆಕೆ ಪೋಷಕರ ಮನೆಗೆ ಹೋಗಿದ್ದು, ಅವರೊಟ್ಟಿಗೆ ವಾಸಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


    ನನ್ನ ಪತಿಗೆ ಮನೆಯವರು ಮೂರನೇ ಮದುವೆಗೆ ತಯಾರಿ ಮಾಡಿಕೊಂಡಿದ್ದರು. ನನಗೆ ಈ ಬಗ್ಗೆ ತಿಳಿದು ಮದುವೆ ನಿಲ್ಲಿಸಲು ಹೋಗಿದ್ದೆ. ಆದರೆ ಆತನ ಕುಟುಂಬದವರು ಮತ್ತು ಸಂಬಂಧಿಕರು ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡರು. ಕೊನೆಗೆ ನಾನು ಪೊಲೀಸರಿಗೆ ದೂರು ನೀಡಿದೆ. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ನಾನು ಜೈಪುರ್ ದ ಪೊಲೀಸ್ ಅಧೀಕ್ಷಕರ (ಎಸ್‍ಪಿ) ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.

    ಕೊನೆಗೆ ಎಸ್‍ಪಿ ನಿರ್ದೇಶನದ ಮೇರೆಗೆ ಕೋರೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ದೂರಿನ ಆಧಾರದ ಮೇಲೆ ಪತಿಯ ಜೊತೆ ಆತನ ಕುಟುಂಬದವರನ್ನು ಬಂಧಿಸಿದ್ದಾರೆ.