Tag: Dowry

  • ವರದಕ್ಷಿಣೆ ಕಿರುಕುಳದ ಆರೋಪಿಗೆ ಕೊರೊನಾ ಶಂಕೆ- ಪೊಲೀಸ್ ಠಾಣೆ ಸೀಲ್‍ಡೌನ್

    ವರದಕ್ಷಿಣೆ ಕಿರುಕುಳದ ಆರೋಪಿಗೆ ಕೊರೊನಾ ಶಂಕೆ- ಪೊಲೀಸ್ ಠಾಣೆ ಸೀಲ್‍ಡೌನ್

    ಕೋಲಾರ: ವರದಕ್ಷಿಣೆ ಕಿರುಳದ ಆರೋಪಿಗೆ ಕೊರೊನಾ ಸೋಂಕು ಬಂದಿರುವ ಶಂಕೆ ವ್ಯಕ್ತವಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ನಗರ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಠಾಣೆಯಲ್ಲಿದ್ದ ಆರೋಪಿ ಸೋಂಕು ತಗಲಿರುವ ಶಂಕೆ ಇರುವ ಕಾರಣ, ಮುಳಬಾಗಿಲು ನಗರ ಠಾಣೆಯ ಪಿಎಸ್‍ಐ ಸೇರಿದಂತೆ 22 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ವರದಕ್ಷಿಣೆ ಕಿರುಕುಳ ಹಿನ್ನೆಲೆ ಬೆಂಗಳೂರಿನ ಕೆ.ಅರ್.ಪುರ ಮೂಲದ ಆರೋಪಿಯನ್ನು ಪೋಲಿಸರು ಬಂಧಿಸಿದ್ದರು. ಆತನಿಗೆ ಕೊರೊನಾ ಇದ್ದು, ಈ ಬಗ್ಗೆ ನಾಳೆಯ ಬುಲೆಟಿನ್ ಅಲ್ಲಿ ಅಧಿಕೃತವಾಗಿ ಘೋಷಣೆಯಾಲಿದೆ.

    ಆರೋಪಿಯನ್ನು ಬಂಧಿಸಿ ಮೂರು ದಿನ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗಿತ್ತು. ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಈ ಕಾರಣ ಠಾಣೆ ಸುತ್ತಾ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಮುಳಬಾಗಿಲು ವೈಎಸ್‍ಪಿ ನಾರಾಯಣಸ್ವಾಮಿ, ಪಿಎಸ್‍ಐ ಶ್ರೀನಿವಾಸ್ ಸೇರಿ 22 ಜನ ಹೋಂ ಕ್ವಾರಂಟೈನ್ ಮಾಡಲಾಗಿದೆ.

  • 22 ವರ್ಷದ ಗೃಹಿಣಿ ಆತ್ಮಹತ್ಯೆಗೆ ಶರಣು

    22 ವರ್ಷದ ಗೃಹಿಣಿ ಆತ್ಮಹತ್ಯೆಗೆ ಶರಣು

    ಕೋಲಾರ: 22 ವರ್ಷದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಹೈದರಿ ನಗರದಲ್ಲಿ ನಡೆದಿದೆ.

    22 ವರ್ಷದ ತಸ್ಮಿಯಾಖಾನಂ ಆತ್ಮಹತ್ಯೆಗೆ ಶರಣಾದ ಗೃಹಿಣಿ. ತಸ್ಮಿಯಾಖಾನಂರನ್ನು ಬೆಂಗಳೂರಿನ ಕೆ.ಅರ್.ಪುರಂನ ಗಾಂಧೀನಗರದ ಶೋಯಬ್ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಪತಿಯ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ತಸ್ಮಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

    ಒಂದೂವರೆ ವರ್ಷದ ಹಿಂದೆ ತಸ್ಲಿಯಾಖಾನಂ ಮತ್ತು ಶೋಯಬ್ ಮದುವೆ ಆಗಿತ್ತು. ವರದಕ್ಷಿಣೆ ಕಿರುಕುಳ ಹಿನ್ನೆಲೆ ತಸ್ಮಿಯಾ ತವರು ಮನೆ ಸೇರಿದ್ದರು. ಮುಳಬಾಗಿಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 10 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಗರ್ಭಿಣಿ ಆತ್ಮಹತ್ಯೆ

    10 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಗರ್ಭಿಣಿ ಆತ್ಮಹತ್ಯೆ

    ಮೈಸೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಕಲ್ಕುಣಿಕೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿಯನ್ನು ಲಕ್ಷ್ಮಿ (23) ಎಂದು ಗುರುತಿಸಲಾಗಿದೆ. ನಂಜನಗೂಡು ತಾಲೂಕು ಮಂಚಳ್ಳಿ ಗ್ರಾಮದ ನಿವಾಸಿಯಾದ ಲಕ್ಷ್ಮಿ 10 ತಿಂಗಳ ಹಿಂದೆ ಹುಣಸೂರಿನ ಯೋಗೇಶ್ ಜೊತೆ ಮದುವೆಯಾಗಿದ್ದರು. ಆದರೆ ತಮ್ಮ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಯೋಗೇಶ್ ಅನ್ನು ಮದುವೆಯಾಗುವ ವೇಳೆ ಲಕ್ಷ್ಮಿ ಪೋಷಕರು ವರದಕ್ಷಿಣೆ ಎಂದು 50 ಲಕ್ಷ ದುಡ್ಡು, 400 ಗ್ರಾಂ ಚಿನ್ನ ನೀಡಿದ್ದರು. ಆದರೆ ಮದುವೆ ಸಮಯದಲ್ಲಿ ಒಂದು ನಿವೇಶನ ಕೊಡುತ್ತೇವೆ ಎಂದು ಲಕ್ಷ್ಮಿಯ ಪೋಷಕರು ಒಪ್ಪಿಕೊಂಡಿದ್ದರಂತೆ. ಆದರೆ ನಿವೇಶನ ನೀಡುವುದು ವಿಳಂಬವಾಗಿತ್ತು. ಈ ಕಾರಣದಿಂದ ಲಕ್ಷ್ಮಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಪೋಷಕರು ಆರೋಪ ಮಾಡಿದ್ದಾರೆ.

    ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಲಕ್ಷ್ಮಿ ಗರ್ಭಿಣಿಯಾಗಿದ್ದರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಕ್ಷಿಣೆ ಕಿರುಕುಳ ಆರೋಪ- ಗೃಹಿಣಿ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳ ಆರೋಪ- ಗೃಹಿಣಿ ನೇಣಿಗೆ ಶರಣು

    ತುಮಕೂರು: ವರದಕ್ಷಿಣೆ ಕಿರುಕುಳ ಆರೋಪದಿಂದ ಗೃಹಿಣಿ ನೇಣಿಗೆ ಶರಣಾದ ಘಟನೆ ತುಮಕೂರು ನಗರದ ಉಪ್ಪಾರಹಳ್ಳಿಯಲ್ಲಿ ನಡೆದಿದೆ.

    ಕಾವ್ಯ(23) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಗುಬ್ಬಿ ಮೂಲದವಳಾಗಿರುವ ಕಾವ್ಯ ಕಳೆದ ನಾಲ್ಕು ವರ್ಷಗಳ ಹಿಂದೆ ಅಂಜನ್ ಎಂಬವನ ಜೊತೆ ಮದುವೆ ಮಾಡಿಕೊಂಡಿದ್ದಳು. ವರದಕ್ಷಿಣೆ ಕಿರುಕುಳಕ್ಕೆ ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿ ಬರುತ್ತಿದೆ.

    ಪ್ರತಿದಿನ ಅಂಜನ್ ವರದಕ್ಷಿಣೆಗಾಗಿ ಕಾವ್ಯಗೆ ಕಾಟ ನೀಡುತ್ತಿದ್ದನು. ಇದಕ್ಕೆ ಬೇಸತ್ತು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾವ್ಯ ಕುಟುಂಬಸ್ಥರು ಪತಿ ಅಂಜನ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡುತ್ತಿದ್ದಾರೆ.

    ತಡರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಾವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಸ್ಥಳಕ್ಕೆ ಜಯನಗರ ಪೋಲೀಸರು ಭೇಟಿ ನೀಡಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿಯಿಟ್ಟ ಪಾಪಿ ಪತಿ

    ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿಯಿಟ್ಟ ಪಾಪಿ ಪತಿ

    -ಇಡೀ ರಾತ್ರಿ ಮನೆಯಲ್ಲಿ ಕೂಡಿ ಹಾಕಿ ವಿಕೃತಿ

    ಬೆಂಗಳೂರು: ವರದಕ್ಷಿಣೆಯ ದಾಹಕ್ಕೆ ಪಾಪಿ ಪತಿಯೊಬ್ಬ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ ಅಮಾನುಷ ಘಟನೆ ತಡವಾಗಿ ಬೆಳಕಿದೆ ಬಂದಿದೆ.

    ಮಂಡ್ಯದ ಅರೆಚಾಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪತಿಯ ಕ್ರೌರ್ಯಕ್ಕೆ ನಲುಗಿ ಪತ್ನಿ ಗೀತಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಇದೇ ಫೆ. 21ರಂದು ರಾತ್ರಿ 9 ಗಂಟೆಗೆ ಮಂಡ್ಯದ ಅರೆಚಾಕನಹಳ್ಳಿಯಲ್ಲಿ ವರದಕ್ಷಿಣೆ ವಿಚಾರಕ್ಕೆ ಮನೆಯಲ್ಲಿ ಪತಿ, ಗೀತಾಳೊಂದಿಗೆ ಮಹಾದೇವಸ್ವಾಮಿ ಗಲಾಟೆ ತೆಗೆದಿದ್ದಾನೆ. ಇದ್ದಕ್ಕಿದ್ದಂತೆ ಪತ್ನಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ್ದಾನೆ.

    ಬೆಂಕಿಯ ಕೆನ್ನಾಲಿಗೆ ಬೆಂದು ಗೀತಾ ಕಿರುಚಾಡುವಾಗ ಪಾಪಿ ಪತಿಯೇ ನೀರು ಸುರಿದು ಬೆಂಕಿ ನಂದಿಸಿದ್ದಾನೆ. ನಂತರ ಈ ವಿಷಯ ಬೇರೆಯವರಿಗೆ ತಿಳಿಸಿದರೆ ಸಾಯಿಸಿಬಿಡ್ತಿನಿ. ಬೆಳಗ್ಗೆ ಮೈಗೆ ಬ್ಯಾಂಡೇಜ್ ಹಾಕ್ತೇನೆ ಏನಾಗಲ್ಲ ಎಂದು ಹೆದರಿಸಿ, ಆ ರಾತ್ರಿಯೆಲ್ಲಾ ಮನೆಯಲ್ಲೇ ಕೂಡಿ ಹಾಕಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾಗೆ ಚಿಕಿತ್ಸೆ ನಡೆಯುತ್ತಿದೆ. ಶೇ. 40ಕ್ಕೂ ಹೆಚ್ಚರಷ್ಟು ದೇಹ ಸುಟ್ಟಿದ್ದರಿಂದ ವೈದ್ಯರು ಅಸಹಾಯಕತೆ ವ್ಯಕ್ತಪಡಿಸ್ತಿದ್ದಾರೆ.

    ಪತಿ, ಗೀತಾಳಿಗೆ ಬೆಂಕಿ ಹಚ್ಚಿದ ಮರುದಿನ ಬೆಳಗ್ಗೆ ಮನೆಯಿಂದ ವಾಸನೆ ಬರುವುದನ್ನು ಕಂಡು ಪಕ್ಕದ ಮನೆಯವರು ಆಕೆಯ ಮನೆಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯ ಗೀತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯರು ಕೂಡ ತಮ್ಮ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದಾರೆ. ಗೀತಾ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದ್ದ ಒಬ್ಬ ಮಗಳಿಗೆ ಹೀಗಾಯ್ತಾಲ್ಲ ಎಂದು ಹೆತ್ತ ತಾಯಿ ಕರುಳ ಬಳ್ಳಿಯ ಸಂಕಟಪಡುತ್ತಿದ್ದಾರೆ.

    ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಗೀತಾಳ ಆರೋಗ್ಯವನ್ನು ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ. ಸಿ.ಎನ್ ಜಯಂತಿ ವಿಚಾರಿಸಿದರು. ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರುಗಳಾದ ಡಾ. ರಮೇಶ್, ಡಾ. ಸ್ಮಿತಾ ಸೇರಿದಂತೆ ಒಟ್ಟು 12 ವೈದ್ಯರ ತಂಡದಿಂದ ಚಿಕಿತ್ಸೆ ನಡೆಯುತ್ತಿದೆ. ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಾ. ಜಯಂತಿ ಶೇ. 45ರಷ್ಟು ದೇಹ ಸುಟ್ಟಿದೆ. ಸದ್ಯ ಗೀತಾ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ. ಇಂದು ಅವರು ಮಾತನಾಡ್ತಿದ್ದಾರೆ. ಸರ್ಕಾರ ಹಾಗೂ ಆಸ್ಪತ್ರೆಯೇ ಈ ಚಿಕಿತ್ಸೆಯ ವೆಚ್ಚವನ್ನ ಭರಿಸಲಿದೆ. ಎಲ್ಲಾ ವೈದ್ಯರು ಕೂಡ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

  • ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    – ಪತಿ, ಅತ್ತೆ ವಿರುದ್ಧ ಕೊಲೆ ಆರೋಪ

    ಬೆಂಗಳೂರು: ನವ ವಿವಾಹಿತೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

    ಬ್ಯಾಡರಹಳ್ಳಿಯ ನಿವಾಸಿ ವನಿತಾ (25) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನವ ವಿವಾಹಿತೆ. ಆರು ತಿಂಗಳ ಹಿಂದೆಯಷ್ಟೇ ವನಿತಾ ಅವರನ್ನು ಟೆಕ್ಕಿ ಕಿರಣ್ ಕುಮಾರ್ ಮದುವೆಯಾಗಿದ್ದ. ಆದರೆ ಮದುವೆಯಾದ ದಿನದಿಂದ ವರದಕ್ಷಿಣೆ ಹಣಕ್ಕಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

    ಕಿರಣ್ ಕುಮಾರ್ ಪ್ರತಿದಿನವೂ ಪತ್ನಿ ವನಿತಾ ಅವರಿಗೆ ಕಿರುಕುಳ ಕೊಡುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ವನಿತಾ ಮೂರು ಬಾರಿ ಸಹಾಯವಾಣಿಯಲ್ಲಿ ಕೌನ್ಸೆಲಿಂಗ್ ಮಾಡಿದ್ದರು. ಆದರೂ ಕಿರಣ್ ಕುಮಾರ್ ತನ್ನ ವರ್ತನೆ ನಿಲ್ಲಿಸಿರಲಿಲ್ಲ. ಇಂದು ವಿಕೃತಿ ಮೆರೆದ ಪತಿ ಹಾಗೂ ಅತ್ತೆ ವನಿತಾಳನ್ನು ಹೊಡೆದು ನೇಣು ಹಾಕಿದ್ದಾರೆ ಎಂದು ವನಿತಾ ಸಂಬಂಧಿಕರು ದೂರಿದ್ದಾರೆ.

    ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಕೇಸ್ ಅಡಿ ಪ್ರಕರಣ ದಾಖಲಾಗಿದೆ. ವನಿತಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ತ್ರಿವಳಿ ತಲಾಕ್ ನೀಡಿ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    ತ್ರಿವಳಿ ತಲಾಕ್ ನೀಡಿ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    – ವರದಕ್ಷಿಣೆ ನೀಡಲಿಲ್ಲ ಎಂದು ಮನೆಯಿಂದ ಹೊರಗೆ ಕಳುಹಿಸಿದ
    – ಮನೆಯಿಂದ ಹೋಗಲು ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿದ

    ಲಕ್ನೋ: ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ರಾಮ್‍ಪುರದಲ್ಲಿ ನಡೆದಿದೆ.

    ಸೀಮಾ ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆ. ವರದಕ್ಷಿಣೆ ನೀಡಲಿಲ್ಲ ಎಂದು ಸೀಮಾ ಪತಿ ಮೊಹಮ್ಮದ್ ಆರೀಫ್ ಹಾಗೂ ಆತನ ಕುಟುಂಬಸ್ಥರು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಸೀಮಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ಮೊಹಮ್ಮದ್ ಆರೀಫ್ ಜೊತೆ ಸೀಮಾಳ ಮದುವೆಯಾಗಿತ್ತು. ಮದುವೆಯಾದ ನಂತರ ಆರೀಫ್ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಸೀಮಾಳಿಗೆ ಕಿರುಕುಳ ನೀಡುತ್ತಿದ್ದರು. ಭಾನುವಾರ ಈ ವಿಷಯಕ್ಕಾಗಿ ಸೀಮಾ ಹಾಗೂ ಆರೀಫ್ ಕುಟುಂಬಸ್ಥರ ನಡುವೆ ಜಗಳ ನಡೆಯಿತು. ಈ ವೇಳೆ ಪತಿ ಆರೀಫ್, ಸೀಮಾಳನ್ನು ಮನೆಯಿಂದ ಹೊರಗೆ ಕಳುಹಿಸಲು ಮುಂದಾದನು. ಮನೆಯಿಂದ ಹೊರ ಹೋಗಲು ಸೀಮಾ ನಿರಾಕರಿಸಿದ್ದಕ್ಕೆ ಆರೀಫ್ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

    ಸೀಮಾಳ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಬಳಿಕ ಬೆಂಕಿಯನ್ನು ಆರಿಸಿ ಸೀಮಾಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರು. ಮಹಿಳೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಜಿಲ್ಲಾಸ್ಪತ್ರೆ ವೈದ್ಯರು ಆಕೆಯನ್ನು ಮೂರದಾಬಾದ್‍ನ ಟಿಎಂಯೂ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಈ ಘಟನೆಯಿಂದ ಮಹಿಳೆಯ ದೇಹ ಶೇ. 80ರಷ್ಟು ಸುಟ್ಟು ಹೋಗಿದೆ. ಇನ್ನು ಸೀಮಾಳ ಪೋಷಕರು ಆರೀಫ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.

    ಈ ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ಅಮರೀಶ್ ಕುಮಾರ್ ಪ್ರತಿಕ್ರಿಯಿಸಿ, ಪತಿಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಮ್ಯಾಜಿಸ್ಟ್ರೇಟ್ ಜೊತೆ ನಮ್ಮ ತಂಡವೊಂದು ಮಹಿಳೆ ಹೇಳಿಕೆ ಪಡೆಯಲು ಟಿಎಂಯೂ ಮೆಡಿಕಲ್ ಕಾಲೇಜಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

  • ಒಂದೂವರೆ ತಿಂಗ್ಳ ಹಿಂದೆ ಮದ್ವೆಯಾಗಿದ್ದ MBA ಪದವೀಧರೆ ಆತ್ಮಹತ್ಯೆ

    ಒಂದೂವರೆ ತಿಂಗ್ಳ ಹಿಂದೆ ಮದ್ವೆಯಾಗಿದ್ದ MBA ಪದವೀಧರೆ ಆತ್ಮಹತ್ಯೆ

    ಹೈದರಾಬಾದ್: ಒಂದೂವರೆ ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ನವವಿವಾಹಿತೆ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವನಸ್ಥಾಲಿಪುರಂನಲ್ಲಿ ನಡೆದಿದೆ.

    ಪಲ್ಲವಿ ಅಲಿಯಾಸ್ ಪಿಂಕಿ (25) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಶ್ರೀನಿವಾಸ್‍ನಗರ ಕಾಲೋನಿಯಲ್ಲಿರುವ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಕಿರುಕುಳದಿಂದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತ ಪಿಂಕಿಯ ಪೋಷಕರು ಆರೋಪಿಸಿದ್ದಾರೆ.

    ಏನಿದು ಪ್ರಕರಣ?
    ಮಲಕ್ಪೇಟೆ ನಿವಾಸಿ ಪಲ್ಲವಿ ಡಿಸೆಂಬರ್ 8 ರಂದು ವನಸ್ಥಾಲಿಪುರಂನ ಬಿಸಿನೆಸ್ ಮ್ಯಾನ್ ಸಂತೋಷ್ ಜೊತೆ ವಿವಾಹವಾಗಿದ್ದಳು. ಮದುವೆಯ ಸಂದರ್ಭದಲ್ಲಿ ವರನ ಕುಟುಂಬದವರಿಗೆ 2 ಲಕ್ಷ ಹಣ, ಮನೆಯ ವಸ್ತುಗಳು ಮತ್ತು ಆಭರಣವನ್ನು ವರದಕ್ಷಿಣೆಯಾಗಿ ಕೊಡಲಾಗಿತ್ತು. ಆದರೂ ಪಲ್ಲವಿಯ ಅತ್ತೆ ಮನೆಯವರು ಹೆಚ್ಚಾಗಿ ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಇನ್ಸ್ ಪೆಕ್ಟರ್ ವೆಂಕಟಯ್ಯ ತಿಳಿಸಿದ್ದಾರೆ.

    ಪಲ್ಲವಿ ಎಂಬಿಎ ಪದವೀಧರೆಯಾಗಿದ್ದಳು. ಪತಿಯ ಮನೆಯವರು ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ತನ್ನ ರೂಮಿನಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ. ಈ ವೇಳೆ ಅತ್ತೆ-ಮಾವ ಆಸ್ಪತ್ರೆಗೆ ಹೋಗಿದ್ದರು. ಇತ್ತ ಪತಿ ಕೆಲಸಕ್ಕೆಂದು ಹೊರಗೆ ಹೋಗಿದ್ದನು ಎಂದು ತಿಳಿದು ಬಂದಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ವನಸ್ಥಾಲಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿಯ ಮನೆಯವರ ಕಿರುಕುಳದಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಮೊದ್ಲ ಪತ್ನಿಗೆ ವಿಷ ಕುಡಿಸಿ 2ನೇ ಮದ್ವೆಯಾಗಲು ಸಿದ್ಧನಾದ ಪತಿರಾಯ

    ಮೊದ್ಲ ಪತ್ನಿಗೆ ವಿಷ ಕುಡಿಸಿ 2ನೇ ಮದ್ವೆಯಾಗಲು ಸಿದ್ಧನಾದ ಪತಿರಾಯ

    ಚಿತ್ರದುರ್ಗ: ಹುಟ್ಟುವ ಪ್ರತಿಯೊಂದು ಹೆಣ್ಣಿಗೆ ಬಾಲ್ಯದಲ್ಲಿ ತಂದೆಯ ಆಸರೆ, ಬೆಳೆದಾಗ ಗಂಡನ ಆಸರೆ ಹಾಗೂ ಮುಪ್ಪಿನಲ್ಲಿ ಮಕ್ಕಳ ಆಸರೆ ಎಂಬ ಮಾತಿದೆ. ಆದರೆ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಲೋಹಿತ್‍ಕುಮಾರ್ ಮಾತ್ರ ಹಣದ ದಾಹ ತೀರಿಸಲಿಲ್ಲ ಎಂದು ತನ್ನ ಪತ್ನಿಗೆ ವಿಷ ಕುಡಿಸಿ ಇನ್ನೊಂದು ಮದುವೆಯಾಗಲು ಸಜ್ಜಾಗಿದ್ದನು.

    ಕಳೆದ ಮೂರು ವರ್ಷಗಳ ಹಿಂದೆ ಲೋಹಿತ್ ಕುಮಾರನಿಗೆ ಸಾಸಲಹಳ್ಳದ ನೇತ್ರಾವತಿ ಅವರನ್ನು ಮದುವೆ ಮಾಡಿ ಕೊಡಲಾಗಿತ್ತು. ಆರಂಭದ ದಿನಗಳಲ್ಲಿ ಲೋಹಿತ್ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ದಿನಗಳದಂತೆ ಇವನಿಗೆ ಹಣದ ಭೂತ ಮೆಟ್ಟಿದ್ದು, ನಿತ್ಯ ವರದಕ್ಷಿಣೆ ಹಣ ಕೇಳಿ ನೇತ್ರಾರಿಗೆ ಕಿರುಕುಳ ನೀಡುತ್ತಿದ್ದ. ಆದರೆ ನೇತ್ರಾರ ತವರು ಮನೆಯಲ್ಲೂ ಸಹ ಕಿತ್ತುತಿನ್ನುವ ಬಡತನ, ಕುಟುಂಬಕ್ಕೆ ಆಸರೆಯಾಗಿದ್ದ ಈಕೆಯ ತಂದೆ ಇದ್ದಕ್ಕಿದ್ದಂತೆ ಮನೆಬಿಟ್ಟು ಹೋಗಿದ್ದಾರೆ.

    ಎಷ್ಟೇ ಕಷ್ಟ ಬಂದರೂ ಎದೆಗುಂದದ ಅನಾರೋಗ್ಯದಿಂದ ಬಳಲುತ್ತಿರುವ ನೇತ್ರಾರ ತಾಯಿ ಪುಷ್ಪವತಿಯವರು, ತನ್ನ ಚಿಕ್ಕ ಮಗನ ಸಹಾಯದಿಂದ ಮಗಳು ಚೆನ್ನಾಗಿ ಇರಲಿ ಎಂದು ಕೇಳಿದಾಗಲ್ಲೆಲ್ಲ ಹಣ ಕೊಟ್ಟು ಖಾಲಿಯಾಗಿದ್ದರು. ಇಷ್ಟದರೂ ಸುಮ್ಮನಾಗದ ಲೋಹಿತ್ ಕಿರುಕುಳ ನೀಡುತ್ತಿದ್ದ. ಪರಿಣಾಮ ಕಿರುಕುಳ ತಾಳಲಾರದೆ ನೇತ್ರಾ ತವರು ಬಂದಿದ್ದರು. ಈ 2ನೇ ಮದುವೆ ಆಗಲು ಸಜ್ಜಾಗಿದ್ದ ಲೋಹಿತ್, ಭರ್ಜರಿ ವರದಕ್ಷಿಣೆ ಪಡೆಯಬೇಕು ಎಂದು ಪ್ಲಾನ್ ಮಾಡಿದ್ದ. ಹೀಗಾಗಿ ತವರು ಮನೆಯಲ್ಲಿದ್ದ ಪತ್ನಿಯ ಮನೆಗೆ ಸಂಬಂಧಿಕರೊಂದಿಗೆ ಬಂದಿದ್ದ ಲೋಹಿತ್, ನೇತ್ರಾರ ಬಾಯಿಗೆ ವಿಷ ಸುರಿದು ಕೊಲ್ಲಲು ಯತ್ನಿಸಿದ್ದಾನೆ. ಅಲ್ಲದೆ ನೇತ್ರಾರ ತಾಯಿಯ ಮೇಲೂ ಹಲ್ಲೆ ಮಾಡಿ ಕೊಲೆ ಯತ್ನಕ್ಕೆ ಮುಂದಾಗಿದ್ದಾನೆ.

    ಈ ಘಟನೆಯಲ್ಲಿ ನೇತ್ರಾಳ ಪರಿಸ್ಥಿತಿ ಗಂಭೀರವಾಗಿದ್ದೂ, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಲೋಹಿತ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

  • ಹೆಂಡ್ತಿ ಸುಂದರವಾಗಿದ್ದು ತಪ್ಪಾಯ್ತು- ಪತಿಯ ಕಿರುಕುಳಕ್ಕೆ ಹೋಯ್ತು ಜೀವ

    ಹೆಂಡ್ತಿ ಸುಂದರವಾಗಿದ್ದು ತಪ್ಪಾಯ್ತು- ಪತಿಯ ಕಿರುಕುಳಕ್ಕೆ ಹೋಯ್ತು ಜೀವ

    ಬೆಂಗಳೂರು: ಅನುಮಾನಾಸ್ಪದವಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಬಳಿಯ ಮಾದಪ್ಪನಹಳ್ಳಿಯಲ್ಲಿ ನಡೆದಿದೆ.

    ಜಯಶ್ರೀ ಸಾವನ್ನಪ್ಪಿದ ಗೃಹಿಣಿ. ಮಾದಪ್ಪನಹಳ್ಳಿಯ ಸುಬ್ರಮಣಿ ಎರಡು ವರ್ಷಗಳ ಹಿಂದೆ ಹೊಸಕೋಟೆಯ ಜಯಶ್ರೀಯನ್ನು ಮದುವೆ ಆಗಿದ್ದನು. ಮದುವೆ ಮುಂಚೆ ಪತ್ನಿಯ ರೂಪಕ್ಕೆ ಮನಸೋತಿದ್ದ ಸುಬ್ರಮಣಿ ಹೆಂಡತಿಯನ್ನು ಅನುಮಾನಿಸ ತೊಡಗಿದ್ದನು. ಪತ್ನಿ ಸುಂದರವಾಗಿದ್ದರಿಂದಲೇ ಅನುಮಾನಿಸುತ್ತಿದ್ದ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೇ ನಾನು ಸಿನಿಮಾ ಮಾಡಬೇಕು. ಹಾಗಾಗಿ ತವರು ಮನೆಯಿಂದ ಹಣ ತರುವಂತೆ ವರದಕ್ಷಿಣೆ ಕಿರುಕುಳ ಸಹ ನೀಡುತ್ತಿದ್ದನು.

    ದೇವಸ್ಥಾನಕ್ಕೆ ತೆರಳಿದ್ರೆ ತಾನು ಸ್ಪೆಷಲ್ ಪ್ರವೇಶ ಪಡೆದು, ಪತ್ನಿಯನ್ನು ಸಾಮಾನ್ಯ ಸಾಲಿನಲ್ಲಿ ನಿಲ್ಲಿಸಿ ಮಾನಸಿಕವಾಗಿಯೂ ಕಿರುಕುಳ ನೀಡುತ್ತಿದ್ದನು. ಹೆಜ್ಜೆ ಹೆಜ್ಜೆಗೂ ಪತ್ನಿಯನ್ನು ಅನುಮಾನಿಸುತ್ತಿದ್ದ ವಿಷಯವನ್ನು ತಿಳಿದು ಕುಟುಂಬಸ್ಥರು ಪಂಚಾಯ್ತಿ ನಡೆಸಿ ತಿಳಿ ಹೇಳಿದ್ದರು. ಆದರೂ ಸುಬ್ರಮಣಿ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಶನಿವಾರ ಪೋಷಕರಿಗೆ ಕರೆ ಮಾಡಿದ್ದ ಜಯಶ್ರೀ ತನ್ನನ್ನು ಕರೆದುಕೊಂಡು ಹೋಗುವಂತೆ ಕಣ್ಣೀರಿಟ್ಟಿದ್ದರು.

    ಪೋಷಕರು ಬರೋವಷ್ಟರಲ್ಲಿಯೇ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸುಬ್ರಮಣಿ ಹೇಳುತ್ತಿದ್ದಾನೆ. ಇತ್ತ ಜಯಶ್ರೀ ಪೋಷಕರು, ನೀನೇ ಹೊಡೆದು ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದೀಯಾ ಎಂದು ಆರೋಪಿಸುತ್ತಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.