Tag: Dowry

  • ಜೂ.ಹುಡುಗಿ ಜೊತೆ ಲವ್ವರ್ ಮದ್ವೆ ನಿಗದಿ – ವಾಟ್ಸಪ್‍ನಲ್ಲಿ ಫೋಟೋ ನೋಡಿ ವಿಷ ಕುಡಿದ್ಳು!

    ಜೂ.ಹುಡುಗಿ ಜೊತೆ ಲವ್ವರ್ ಮದ್ವೆ ನಿಗದಿ – ವಾಟ್ಸಪ್‍ನಲ್ಲಿ ಫೋಟೋ ನೋಡಿ ವಿಷ ಕುಡಿದ್ಳು!

    – ವಿಷ ಸೇವಿಸಿ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ತಿರುವನಂತಪುರಂ: ಎರಡು ದಿನಗಳ ಹಿಂದೆ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಳು. ಇದೀಗ ಆಕೆಯ ಕುಟುಂಬದವರು ಗೆಳೆಯ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

    ಈ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದ್ದು, ಶುಕ್ರವಾರ ಅರಟ್ಟುಪುಳ ಮೂಲದ ಅರ್ಚನಾ (21) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನರ್ಸಿಂಗ್ ವಿದ್ಯಾರ್ಥಿನಿ. ಪ್ರೀತಿಸಿದ ಹುಡುಗ ಹೆಚ್ಚಿನ ವರದಕ್ಷಿಣೆ ಬೇಕೆಂದು ಕೇಳಿದ್ದನು. ಇದರಿಂದ ಮನನೊಂದು ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಕರು ಕೇಳಿದ್ದಾರೆ.

    ಏನಿದು ಪ್ರಕರಣ?
    ಅರ್ಚನಾ ಮತ್ತು ಯುವಕ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಏಳು ತಿಂಗಳ ಹಿಂದೆ ಯುವಕ ಮತ್ತು ಅವನ ಕುಟುಂಬವು ಮದುವೆಯ ಪ್ರಸ್ತಾಪದೊಂದಿಗೆ ನಮ್ಮ ಮನೆಗೆ ಬಂದಿದ್ದರು. ಈ ವೇಳೆ 100 ಗ್ರಾ ಚಿನ್ನವನ್ನು ವರದಕ್ಷಿಣೆಯಾಗಿ ನೀಡುವಂತೆ ಒತ್ತಾಯಿಸುತ್ತಿದ್ದರು. ನನ್ನ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ನಾವು ಅಷ್ಟು ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಮತ್ತು ಮದುವೆಗೆ ಕೇವಲ 30 ಗ್ರಾಂ ಚಿನ್ನವನ್ನು ಮಾತ್ರ ನೀಡಬಹುದು ಎಂದು ಹೇಳಿದೆವು. ಆದರೆ ಯುವಕನ ಮನೆಯವರು ಇದಕ್ಕೆ ಒಪ್ಪಿಕೊಂಡಿಲ್ಲ ಎಂದು ಅರ್ಚನಾಳ ಸಹೋದರಿ ತಿಳಿಸಿದ್ದಾಳೆ.

    ಕೆಲವು ವಾರಗಳ ಹಿಂದೆ ಯುವಕನ ಕುಟುಂಬದವರು ಬೇರೆ ಹುಡುಗಿಯೊಂದಿಗೆ ಅವನ ಮದುವೆಯನ್ನು ನಿಶ್ಚಯಿಸಿದ್ದರು. ಆತನಿಗೆ ನಿಶ್ಚಯ ಮಾಡಿದ್ದ ಹುಡುಗಿ ಕೂಡ ಅರ್ಚನಾ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದು, ಜೂನಿಯರ್ ವಿದ್ಯಾರ್ಥಿನಿಯಾಗಿದ್ದಳು. ಶುಕ್ರವಾರ ಯಾರೋ ಇಬ್ಬರಿಗೂ ವಿವಾಹ ನಿಶ್ಚಯ ಮಾಡುವ ಫೋಟೋವನ್ನು ಅರ್ಚನಾಗೆ ಕಳುಹಿಸಿದ್ದಾರೆ. ಅದೇ ದಿನ ಅವಳು ವಿಷ ಸೇವಿಸಿದ್ದು, ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೆವು. ಅಷ್ಟರಲ್ಲಿಯೇ ಅರ್ಚನಾ ಸಾವನ್ನಪ್ಪಿದ್ದಳು ಅರ್ಚನಾ ಚಿಕ್ಕಪ್ಪ ಶ್ರೀಕುಮಾರ್ ಹೇಳಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ. ಅರ್ಚನಾ ವಿಷ ಕುಡಿಯುವ ಮುನ್ನ ಸ್ನೇಹಿತರಿಗೆ ವಾಟ್ಸಪ್ ಆಡಿಯೋ ಸಂದೇಶವನ್ನು ರವಾನಿಸಿದ್ದಾಳೆ. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ನಾವು ಈ ಕುರಿತು ಎಲ್ಲ ಆಯಾಮಾಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಈ ಪ್ರಕರಣದಲ್ಲಿ ಯಾರನ್ನೂ ಆರೋಪಿ ಎಂದು ಪರಿಗಣಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮದ್ವೆಯಾದ 8ನೇ ದಿನಕ್ಕೆ ಪತ್ನಿಗೆ ತಲಾಖ್ ನೀಡಿದ ಪತಿ

    ಮದ್ವೆಯಾದ 8ನೇ ದಿನಕ್ಕೆ ಪತ್ನಿಗೆ ತಲಾಖ್ ನೀಡಿದ ಪತಿ

    -ಪತಿ ಸೇರಿ 8 ಜನರ ವಿರುದ್ಧ ದೂರು ದಾಖಲು

    ಲಕ್ನೊ: ಮದುವೆಯಾದ ಎಂಟನೇ ದಿನಕ್ಕೆ ಪತ್ನಿಗೆ ಪತಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಹಸನಪುರದಲ್ಲಿ ನಡೆದಿದೆ. ಮದುವೆಯಾದ ಮೂರನೇ ದಿನಕ್ಕೆ ಶಬನಂ ತವರು ಮನೆಗೆ ಹಿಂದಿಗಿದ್ದರು. ಎಂಟನೇ ದಿನಕ್ಕೆ ಪತ್ನಿಯ ಮನೆಗೆ ಆಗಮಿಸಿದ ಸದ್ದಾಂ ತಲಾಖ್ ಹೇಳಿ ಹೋಗಿದ್ದಾನೆ.

    ಆಗಸ್ಟ್ 10ರಂದು ಹಸನಪುರದ ನಿವಾಸಿ ಶಬನಂ ಮದುವೆ ಮುರಾದಾಬಾದ್ ಜಿಲ್ಲೆಯ ಮಾವೂ ಗ್ರಾಮದ ಸದ್ದಾಂ ಜೊತೆ ನಡೆದಿತ್ತು. ವರದಕ್ಷಿಣೆ ನೀಡದ ಹಿನ್ನೆಲೆ ಸದ್ದಾಂ ಪತ್ನಿಗೆ ತಲಾಖ್ ನೀಡಿದ್ದಾನೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಬೈಕ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ನೀಡಿ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ವರನ ಕುಟುಂಬಸ್ಥರಿಗೆ ವರೋಪಚಾರ ಸಮಾಧಾನ ತಂದಿರಲಿಲ್ಲ ಎಂದು ಶಬನಂ ತಂದೆ ಪೊಲೀಸರ ಮುಂದೆ ಹೇಳಿದ್ದಾರೆ.

    ಸದ್ದಾಂ ಪೋಷಕರು ಮದುವೆಯಲ್ಲಿ 5 ಲಕ್ಷ ನಗದು ಮತ್ತು ಒಂದು ಕಾರ್ ನೀಡಬೇಕೆಂದು ಡಿಮ್ಯಾಂಡ್ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ವರದಕ್ಷಿಣೆ ತರದ ಹಿನ್ನೆಲೆ ಮೂರನೇ ದಿನಕ್ಕೆ ಶಬನಂಳನ್ನ ತವರು ಮನೆಗೆ ಕಳುಹಿಸಲಾಗಿತ್ತು. ಆಗಸ್ಟ್ 18ರಂದು ಮನೆಯ ಬಳಿ ಬಂದ ಸದ್ದಾಂ ಪತ್ನಿಯನ್ನ ಕರೆದು ಮೂರು ಬಾರಿ ತಲಾಖ್ ಹೇಳಿ ಹೋಗಿದ್ದಾನೆ.

    ಮಹಿಳೆಯ ತಂದೆ ದೂರಿನನ್ವಯ ಸದ್ದಾಂ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • 9 ತಿಂಗಳ ಮಗುವನ್ನ ಎಸೆದು ಕಟ್ಟಡದಿಂದ ಜಿಗಿದು ಮಹಿಳಾ ಟೆಕ್ಕಿ ಆತ್ಮಹತ್ಯೆ

    9 ತಿಂಗಳ ಮಗುವನ್ನ ಎಸೆದು ಕಟ್ಟಡದಿಂದ ಜಿಗಿದು ಮಹಿಳಾ ಟೆಕ್ಕಿ ಆತ್ಮಹತ್ಯೆ

    – ಮೂರು ವರ್ಷದ ಹಿಂದೆಯಷ್ಟೇ ಮದ್ವೆ
    – ಚಿನ್ನ, ಮನೆ, ಹಣ, ಭೂಮಿ ನೀಡಿದ್ರೂ ಸಾಕಾಗಿಲ್ಲ

    ಹೈದರಾಬಾದ್: ತಾಯಿಯೊಬ್ಬಳು ತನ್ನ 9 ತಿಂಗಳ ಮಗುವನ್ನು ಐದು ಅಂತಸ್ತಿನ ಕಟ್ಟಡದಿಂದ ಎಸೆದು ಕೊಲೆ ಮಾಡಿದ್ದಾಳೆ. ನಂತರ ತಾನೂ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಗುಂಟೂರಿನಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೃತಳನ್ನು ಮನೋಗ್ನಾ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟರೆ, ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮೃತ ಮಹಿಳೆಯ ಕುಟುಂಬದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಏನಿದು ಪ್ರಕರಣ?
    ಮೂರು ವರ್ಷಗಳ ಹಿಂದೆ ಪ್ರಕಾಶಂ ಜಿಲ್ಲೆಯ ಪಂಗಲೂರು ಗ್ರಾಮದ ಮನೋಗ್ನಾ ಅದೇ ಜಿಲ್ಲೆಯ ನರ್ರಾ ಕಲ್ಯಾಣ್‍ಚಂದ್ರ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ತುಳಸಿ ಎಂಬ ಒಂಬತ್ತು ತಿಂಗಳ ಹೆಣ್ಣು ಮಗುವಿದೆ. ಕಲ್ಯಾಣ್ ಚಂದ್ರ ನೌಕಾಪಡೆಯ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ಮನೋಗ್ನಾ ಹೈದರಾಬಾದ್‍ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.

    ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ಸಂದರ್ಭದಲ್ಲಿ ಪತಿ ಕಲ್ಯಾಣ್ ತನ್ನ ಪೋಷಕರೊಂದಿಗೆ ಗುಂಟೂರಿನ ಲಕ್ಷ್ಮಿಪುರಂ ಕಮಲೇಶ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ಆದರೆ ಶನಿವಾರ ಮನೋಗ್ನಾ ಮೊದಲು ಮಗಳನ್ನು ಐದು ಅಂತಸ್ತಿನ ಕಟ್ಟಡದಿಂದ ಎಸೆದಿದ್ದು, ನಂತರ ತಾನೂ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ಸಬ್‌-ಇನ್ಸ್‌ಪೆಕ್ಟರ್ ಸತ್ಯನಾರಾಯಣ ತಿಳಿಸಿದ್ದಾರೆ.

    ವಿವಾಹದ ಸಮಯದಲ್ಲಿ ಮೃತ ಮನೋಗ್ನಾಗೆ 50 ಗ್ರಾಂ ಚಿನ್ನ, ಐದು ಗುಂಟೆ ಭೂಮಿ, 2 ಲಕ್ಷ ರೂ. ನಗದು ಮತ್ತು ವರದಕ್ಷಿಣೆ ರೂಪದಲ್ಲಿ ಮನೆಯನ್ನು ಕೂಡ ನೀಡಲಾಗಿತ್ತು ಎಂದು ತಿಳಿದುಬಂದಿದೆ. ವರದಕ್ಷಿಣೆಗಾಗಿ ನನ್ನ ಮಗಳಿಗೆ ಪತಿ ಮತ್ತು ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಪತಿ ಮತ್ತು ಅತ್ತೆ-ಮಾವನ ಕಿರುಕುಳವನ್ನು ಸಹಿಸಲಾಗದೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮನೋಗ್ನಾ ಪೋಷಕರು ಆರೋಪಿಸಿದ್ದಾರೆ.

    ಸದ್ಯಕ್ಕೆ ಮೃತಳ ಪೋಷಕರು ನೀಡಿದ ದೂರಿನ ಅನ್ವಯ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವರದಕ್ಷಿಣೆ ದಾಹಕ್ಕೆ ಕತ್ತರಿಯಿಂದ ಪತ್ನಿಯನ್ನು ಕೊಲೆಗೈದ ಪತಿ ಅರೆಸ್ಟ್

    ವರದಕ್ಷಿಣೆ ದಾಹಕ್ಕೆ ಕತ್ತರಿಯಿಂದ ಪತ್ನಿಯನ್ನು ಕೊಲೆಗೈದ ಪತಿ ಅರೆಸ್ಟ್

    ಬೆಂಗಳೂರು: ವರದಕ್ಷಿಣೆ ದಾಹಕ್ಕಾಗಿ ಕತ್ತರಿಯಿಂದ ಹೆಂಡತಿಯ ಕೊಲೆ ಮಾಡಿದ್ದ ಪಾಪಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಪತಿಯನ್ನು ಯಲಹಂಕದ ಅಳ್ಳಾಲಸಂದ್ರ ನಿವಾಸಿ ಜಾನ್ಸನ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ನಂದಿನಿಯನ್ನು ಕತ್ತರಿಯಿಂದ ಚುಚ್ಚು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಕೇಸ್ ಅನ್ನು ವಿಚಾರಣೆ ಮಾಡುತ್ತಿದ್ದ ಯಲಹಂಕ ಪೊಲೀಸರು ಜಾನ್ಸನ್ ಅನ್ನು ಬಂಧಿಸಿದ್ದಾರೆ.

    ಜಾನ್ಸನ್ ಮತ್ತು ನಂದಿನಿ 2015ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಸುಂದರವಾಗಿತ್ತು. ಆದರೆ ನಂತರ ಪ್ರತಿದಿನ ಕುಡಿದು ಬರುತ್ತಿದ್ದ ಜಾನ್ಸನ್ ಹೆಂಡತಿ ಬಳಿ ಜಗಳ ಆಡುತ್ತಿದ್ದ. ಆಗಸ್ಟ್ 16ರಂದು ವರದಕ್ಷಿಣೆ ವಿಚಾರಕ್ಕಾಗಿ ಗಲಾಟೆ ಮಾಡಿದ್ದ ಜಾನ್ಸನ್, ಮನೆಯಲ್ಲಿದ್ದ ಕತ್ತರಿಯಿಂದ ಹೆಂಡತಿಯ ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದ. ನಂದಿನಿ ತೀವ್ರ ರಕ್ತಸ್ರಾವವಾಗಿ ಸ್ತಳದಲ್ಲೇ ಪ್ರಾಣಬಿಟ್ಟಿದ್ದಳು.

    ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಜಾನ್ಸನ್‍ನನ್ನು ಇಂದು ಯಲಹಂಕ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

  • 4 ತಿಂಗಳ ಹಿಂದೆಯಷ್ಟೆ ಪ್ರೀತಿಸಿ ಮದ್ವೆ – ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಪತ್ತೆ

    4 ತಿಂಗಳ ಹಿಂದೆಯಷ್ಟೆ ಪ್ರೀತಿಸಿ ಮದ್ವೆ – ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಪತ್ತೆ

    ಹಾಸನ: ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯಾಂಕಾ (23) ಮೃತ ಗೃಹಿಣಿ. ಆಕೆಯ ಗಂಡ ಹಾಗೂ ಅತ್ತೆ-ಮಾವ ಸೇರಿಕೊಂಡು ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿ, ನೇಣು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪ್ರಿಯಾಂಕಾ ಆಲೂರು ತಾಲೂಕಿನ ಪುರಬೈರವನಹಳ್ಳಿ ಗ್ರಾಮದ ಕಿರಣ್ ಜೊತೆ ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಳು. ನಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ, ಮಾವ ವರದಕ್ಷಿಣೆ ತಂದುಕೊಡು ಎಂದು ಕಿರುಕುಳ ನೀಡುತ್ತಿದ್ದರು. ಕೊನೆಗೆ ಆಗಸ್ಟ್ 5 ರಂದು ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ. ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ನೇಣು ಬಿಗಿದಿದ್ದಾರೆ ಎಂದು ಪ್ರಿಯಾಂಕಾ ಸಂಬಂಧಿಕರು ಆರೋಪ ಮಾಡಿದ್ದಾರೆ.

    ಈ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಲೂರು ಪೊಲೀಸರು ಪ್ರಿಯಾಂಕಾಳ ಪತಿ ಕಿರಣ್, ಆತನ ತಂದೆ ಲೋಕೇಶ್ ಹಾಗೂ ತಾಯಿ ರುಕ್ಮಿಣಿ ಮೂವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

    ಮದುವೆಯಾದ ನಂತರ ನನ್ನ ಮಗಳ ಪತಿ ಮತ್ತೊಂದು ಯುವತಿಯನ್ನು ಪ್ರೀತಿಸುತ್ತಿದ್ದು, ತನ್ನ ಮಗಳಿಗೆ ಮೋಸ ಮಾಡುತ್ತಿದ್ದ ಎಂದು ಪ್ರಿಯಾಂಕಾಳ ತಂದೆ ಆರೋಪಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಕ್ಷಿಣೆ ತರದ್ದಕ್ಕೆ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಪತಿ ಕಿರುಕುಳ

    ವರದಕ್ಷಿಣೆ ತರದ್ದಕ್ಕೆ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಪತಿ ಕಿರುಕುಳ

    – ಕಾರ್, ಹೆಚ್ಚು ವರದಕ್ಷಿಣೆ ತರುವಂತೆ ಕಿರುಕುಳ

    ಅಹ್ಮದಾಬಾದ್: ಹೆಚ್ಚು ವರದಕ್ಷಿಣೆ ತರದ್ದಕ್ಕೆ ತನ್ನ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಮಹಿಳೆಗೆ ಪತಿ ಕಿರುಕುಳ ನೀಡಿ, ಅಮಾನವೀಯವಾಗಿ ವರ್ತಿಸಿದ ಘಟನೆ ನಡೆದಿದೆ.

    ಗುಜರಾತ್‍ನ ಅಹ್ಮದಾಬಾದ್‍ನ 43 ವರ್ಷದ ಮಹಿಳೆ ಈ ಕುರಿತು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವರದಕ್ಷಿಣೆ ನೀಡುವಂತೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಪೀಡಿಸುತ್ತಾನೆ, ಆತನೂ ಸಹ ತನ್ನ ಸ್ನೇಹಿತರ ಪತ್ನಿಯೊಂದಿಗೆ ಫ್ಲರ್ಟ್ ಮಾಡುತ್ತಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ.

    ಅನುಪಮಾ(ಹೆಸರು ಬದಲಿಸಲಾಗಿದೆ) ಹಾಗೂ ಪಾರ್ಥ್(ಹೆಸರು ಬದಲಿಸಲಾಗಿದೆ) 2002ರಲ್ಲಿ ವಿವಾಹವಾಗಿದ್ದು, ಈ ವೇಳೆ ಮಹಿಳೆಯ ಕುಟುಂಬದವರು 50 ತೊಲೆ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದಾರೆ. ವಿವಾಹದ ವೇಳೆ ಮಹಿಳೆಯ ಅಳಿಯಂದಿರು ಸುಳ್ಳು ಹೇಳಿದ್ದು, ಪಾರ್ಥ್ ಎಂಬಿಎ ಓದಿದ್ದಾನೆ. ಅಲ್ಲದೆ ಬಟ್ಟೆ ಮಿಲ್ ಒಡೆಯ ಎಂದು ಹೇಳಿದ್ದಾರೆ. ವಿವಾಹವಾಗಿ 6 ತಿಂಗಳಾಗುತ್ತಿದ್ದಂತೆ ಕುಟುಂಬಸ್ಥರು ಕಾರ್ ಹಾಗೂ ಇನ್ನೂ ಹೆಚ್ಚು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಪಾರ್ಥ್ ನನ್ನನ್ನು ಹೊಡೆದಿದ್ದಾನೆ. 2005ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದೆ. ಈ ವೇಳೆ ಪತಿ ಎಂಬಿಎ ಓದಿಲ್ಲ ಎಂಬುದು ತಿಳಿಯಿತು ಎಂದು ಮಹಿಳೆ ಆರೋಪಿಸಿದ್ದಾಳೆ.

    ಪತಿಯ ಬ್ಯುಸಿನೆಸ್ ಸರಿಯಾಗಿ ನಡೆಯದ ಕಾರಣ ನಾನೇ ಟ್ವಾವೆಲ್ ಏಜೆನ್ಸಿ ಪ್ರಾರಂಭಿಸಿದೆ. ಈ ವೇಳೆ ಪತಿ ವಿಪರೀತ ಕುಡಿಯುವುದು ಹಾಗೂ ಜೂಜು ಆಡುವುದರಲ್ಲಿ ತೊಡಗಿದ. ಅಲ್ಲದೆ ತನ್ನ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಒತ್ತಾಯ ಮಾಡಲು ಪ್ರಾರಂಭಿಸಿದ. ಇದಕ್ಕೆ ಪ್ರತಿಯಾಗಿ ಆತನೂ ತನ್ನ ಸ್ನೇಹಿತರ ಪತ್ನಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದ. ನಂತರ 2019ರಲ್ಲಿ ಪತಿ ಅಮೆರಿಕಕ್ಕೆ ತೆರಳಿದ ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾಳೆ.

    ಲಾಕ್‍ಡೌನ್‍ನಿಂದಾಗಿ ಮಹಿಳೆ ನಡೆಸುತ್ತಿದ್ದ ಟ್ರಾವೆಲ್ ಏಜೆನ್ಸಿ ಸಹ ನಷ್ಟದಲ್ಲಿ ಮುಳುಗಿತು. ಈ ವೇಳೆ ತನ್ನ ಅಳಿಯಂದಿರ ಬಳಿ ವರದಕ್ಷಿಣೆಯಾಗಿ ನೀಡಿದ ಚಿನ್ನವನ್ನು ಮರಳಿ ನೀಡಲು ಮಹಿಳೆ ಕೇಳಿಕೊಂಡಿದ್ದಾಳೆ. ಆದರೆ ಅವರು ಒಪ್ಪಿಲ್ಲ, ಚಿನ್ನ ನೀಡದೆ ಮನೆಯಿಂದ ಹೊರ ಹಾಕಿದ್ದಾರೆ. ಹೀಗಾಗಿ ಮಹಿಳೆ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾಳೆ.

  • ವರದಕ್ಷಿಣೆ ತರಲಿಲ್ಲ ಅಂತ ಮೊದ್ಲ ಪತ್ನಿ ಬಿಟ್ಟ – ಹೆಣ್ಣು ಮಗುವಾಗಿದ್ದಕ್ಕೆ 2ನೇ ಹೆಂಡ್ತಿ ಬಿಟ್ಟು ಮತ್ತೆ ಮದ್ವೆ

    ವರದಕ್ಷಿಣೆ ತರಲಿಲ್ಲ ಅಂತ ಮೊದ್ಲ ಪತ್ನಿ ಬಿಟ್ಟ – ಹೆಣ್ಣು ಮಗುವಾಗಿದ್ದಕ್ಕೆ 2ನೇ ಹೆಂಡ್ತಿ ಬಿಟ್ಟು ಮತ್ತೆ ಮದ್ವೆ

    – ಮೂವರು ಯುವತಿಯರ ಜೊತೆ ಶಿಕ್ಷಕ ವಿವಾಹ

    ಹೈದರಾಬಾದ್: ಶಿಕ್ಷಕನೊಬ್ಬ ವರದಕ್ಷಿಣೆಗಾಗಿ ಮೂವರು ಯುವತಿಯರ ಜೊತೆ ಮದುವೆ ಆಗಿದ್ದು, ಇದೀಗ ಮೋಸ ಮಾಡಿ ಪರಾರಿಯಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಆರೋಪಿಯನ್ನು ಶೀಲಂ ಸುರೇಶ್ ಎಂದು ಗುರುತಿಸಲಾಗಿದೆ. ಈತ ಮೂವರು ಯುವತಿಯರನ್ನು ಮದುವೆಯಾಗಿದ್ದು, ವರದಕ್ಷಿಣೆಗಾಗಿ ಮೋಸ ಮಾಡಿದ್ದಾನೆ. ಇದೀಗ ಎರಡನೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಏನಿದು ಪ್ರಕರಣ?
    ವಿಜಯವಾಡದ ಮೂಲದ ಆರೋಪಿ ಸುರೇಶ್ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಈತ 2011ರಲ್ಲಿ ಶಾಂತಿಪ್ರಿಯಾ ಯುವತಿಯನ್ನು ಮದುವೆಯಾಗಿದ್ದನು. ಸ್ವಲ್ಪ ದಿನದ ನಂತರ ಹೆಚ್ಚುವರಿ ವರದಕ್ಷಿಣೆ ತರಲಿಲ್ಲ ಎಂದು ಆಕೆಯನ್ನು ದೂರ ಮಾಡಿದ್ದ. ನಂತರ ಮೊದಲ ಮದುವೆಯ ಬಗ್ಗೆ ಹೇಳದೆ 2015ರಲ್ಲಿ ಶೈಲಜಾ ಜೊತೆ ಎರಡನೇ ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎರಡನೇ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ನಾಲ್ಕು ಲಕ್ಷ ಹಣ ಮತ್ತು ಹತ್ತು ತೊಲ ಚಿನ್ನವನ್ನು ತೆಗೆದುಕೊಂಡಿದ್ದನು. ಆದರೆ ಎರಡನೇ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಆಕೆಯನ್ನು ಬಿಟ್ಟು ಹೋಗಿದ್ದ. ಬಳಿಕ 2019ರಲ್ಲಿ ಮೂರನೇ ಬಾರಿಗೆ ಶಿಕ್ಷಕಿ ಅನುಷಾ ಜೊತೆ ರಹಸ್ಯವಾಗಿ ಮದುವೆಯಾಗಿದ್ದಾನೆ. ಈ ಬಗ್ಗೆ ತಿಳಿದ ಎರಡನೇ ಪತ್ನಿ ಶೈಲಜಾ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ದಿಶಾ ಪೊಲೀಸರಿಗೆ ದೂರು ನೀಡಿದ್ದಾರೆ.

    ಸುರೇಶ್ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಮೂರು ಮದುವೆಗಳಿಗೆ ಸಹಕರಿಸುತ್ತಿದ್ದ ಸುರೇಶ್ ಪೋಷಕರು, ಹಿರಿಯ ಸಹೋದರನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಬ್ಬ ಯುವತಿಗೆ ಮೋಸ ಮಾಡುವ ಮೊದಲು ಸುರೇಶ್‍ನನ್ನು ಬಂಧಿಸುವಂತೆ ಎರಡನೇ ಪತ್ನಿ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

    ಈ ಬಗ್ಗೆ ತಿಳಿದ ಮಹಿಳಾ ಸಂಘಗಳು ಎರಡನೇ ಪತ್ನಿ ಶೈಲಜಾ ಬೆಂಬಲಕ್ಕೆ ನಿಂತಿವೆ. ಇತ್ತ ಮೊದಲ ಪತ್ನಿ ಕೂಡ ಕೂಡಲೇ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ಅರ್ಧ ಕೋಟಿ ಕೊಟ್ಟು ಟೆಕ್ಕಿ ಜೊತೆ ಮದ್ವೆ – ಮೊದಲ ರಾತ್ರಿಯೇ ದೂರ ಉಳಿದ ವರ

    ಅರ್ಧ ಕೋಟಿ ಕೊಟ್ಟು ಟೆಕ್ಕಿ ಜೊತೆ ಮದ್ವೆ – ಮೊದಲ ರಾತ್ರಿಯೇ ದೂರ ಉಳಿದ ವರ

    – ನಂಗೆ ಹೆಣ್ಣು ಅಂದ್ರೆ ಇಷ್ಟವಿಲ್ಲ ಎಂದ ಪತಿ
    – ಗೆಳೆಯನೊಂದಿಗೆ ಸಂಸಾರ ಮಾಡು ಎಂದ ಗಂಡ

    ಹೈದರಾಬಾದ್: ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯೊಬ್ಬ ಸಲಿಂಗಕಾಮಿ ಎಂದು ತಿಳಿದಿದ್ದು, ಇದೀಗ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಗುಂಟೂರು ಜಿಲ್ಲೆಯ ಎಟಿ ಅಗ್ರಹಾರದ ಯುವತಿಯನ್ನು ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಅರ್ಧ ಕೋಟಿ ವರದಕ್ಷಿಣೆ ನೀಡಿ ವಿವಾಹ ಮಾಡಿದ್ದರೂ ಪತಿ ಮೋಸ ಮಾಡಿದ್ದಾನೆ. ಈಗ ಯುವತಿ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?
    ಯುವತಿ ಕಳೆದ ಮಾರ್ಚ್‍ನಲ್ಲಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಆರ್‌ಟಿಸಿ ಕಾಲೋನಿಯ ಯುವಕನನ್ನು ಮದುವೆಯಾಗಿದ್ದಳು. ಮದುವೆ ಸಂದರ್ಭದಲ್ಲಿ ಯುವತಿಯ ಪೋಷಕರು ಆಸ್ತಿ ಮತ್ತು ಹೊಲ ಮಾರಿ 50 ಲಕ್ಷ ರೂ. ನಗದು ಮತ್ತು 55 ಗ್ರಾಂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದಾರೆ. ಅಲ್ಲದೇ ಮದುವೆ ಮಾಡಲು 15 ಲಕ್ಷ ರೂ. ಖರ್ಚು ಕೂಡ ಮಾಡಿದ್ದರು ಎಂದು ತಿಳಿದುಬಂದಿದೆ.

    ಮೊದಲ ರಾತ್ರಿಯಂದು ವರ ತನಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪತ್ನಿಯಿಂದ ದೂರ ಉಳಿದಿದ್ದನು. ದಿನ ಕಳೆದಂತೆ ಪತ್ನಿಯ ಜೊತೆ ಇರಲು ನಿರಾಕರಿಸಿದ್ದಾನೆ. ಇದರಿಂದ ಗಾಬರಿಯಾದ ಪತ್ನಿ, ಪತಿಯ ಬಳಿ ಕಾರಣ ಕೇಳಿದ್ದಾಳೆ.

    ಆಗ ಪತಿ, ನನಗೆ ಹೆಣ್ಣು ಅಂದರೆ ಇಷ್ಟವಿಲ್ಲ. ಅಮೆರಿಕದಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಆತನಿಗಾಗಿಯೇ ನಾನು ಮದುವೆ ಮಾಡಿಕೊಂಡಿದ್ದೇನೆ. ನಾನು ಮತ್ತು ನೀನು ಅಮೆರಿಕಕ್ಕೆ ಹೋಗೋಣ ಅಲ್ಲಿ ನಿನ್ನನ್ನು ಆತನಿಗೆ ನಿನ್ನನ್ನು ಒಪ್ಪಿಸುವೆ. ನೀನು ಆತನೊಂದಿಗೆ ಸಂಸಾರ ಮಾಡಬೇಕು. ಮೂವರು ಸೇರಿ ಎಂಜಾಯ್ ಮಾಡೋಣ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಪತ್ನಿ ಆತಂಕಗೊಳಗಾಗಿದ್ದಾಳೆ.

    ಅಷ್ಟೇ ಅಲ್ಲದೇ ತನ್ನನ್ನು ಯಾಕೆ ಮದುವೆಯಾದೆ ಎಂದು ಪತ್ನಿ ಪ್ರಶ್ನೆ ಮಾಡಿದ್ದಾಳೆ. ಆಗ ಪತಿ, ನಮ್ಮ ಪೋಷಕರು ವರದಕ್ಷಿಣೆಗಾಗಿ ಮದುವೆ ಮಾಡಿಕೊಳ್ಳುವಂತೆ ಬಲವಂತ ಮಾಡಿದರು. ಅದಕ್ಕೆ ನಾನು ವಿವಾಹವಾಗಿದ್ದೇನೆ ಎಂದು ಹೇಳಿದ್ದಾನೆ. ಕೊನೆಗೆ ಪತ್ನಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.

    ಈ ವಿಷಯವನ್ನು ಅತ್ತೆ-ಮಾವನಿಗೆ ಹೇಳಿದೆ. ಆದರೆ ಅವರು ಅಸಭ್ಯವಾಗಿ ಮಾತನಾಡಿದರು. ಅಷ್ಟರಲ್ಲಿ ನನ್ನ ಪತಿ ಅಮೆರಿಕಕ್ಕೆ ಹೋಗಿದ್ದನು. ನಾನು ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಇತ್ತ ಅತ್ತೆ ಮತ್ತು ಮಾವ ಮತ್ತೆ 10 ಲಕ್ಷ ಹೆಚ್ಚುವರಿ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಮನೆಯಿಂದ ಹೊರ ಹಾಕಿದ್ದಾರೆ ಎಂದು ನೋಂದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

    ಅಲ್ಲದೇ ಈ ವಿಚಾರವನ್ನು ನಮ್ಮ ಪೋಷಕರಿಗೂ ಹೇಳಿಲ್ಲ. ಈಗ ನ್ಯಾಯ ಒದಗಿಸುವಂತೆ ಯುವತಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಸದ್ಯಕ್ಕೆ ಪೊಲೀಸರು ಯುವತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಯುವತಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

  • ಮದ್ವೆಯಾದ 4 ತಿಂಗಳಿಗೆ ಬಾವಿಗೆ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ

    ಮದ್ವೆಯಾದ 4 ತಿಂಗಳಿಗೆ ಬಾವಿಗೆ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ

    – ಪತ್ನಿಗೆ ಅಶ್ಲೀಲ ಮೆಸೇಜ್ ಮಾಡಿ ಪತಿಯಿಂದ ಕಿರುಕುಳ
    – 10 ಲಕ್ಷ, 20 ತೊಲ ಚಿನ್ನ ಕೊಟ್ಟಿದ್ರೂ ಸಾಕಾಗಿಲ್ಲ

    ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಮದುವೆಯಾದ ನಾಲ್ಕು ತಿಂಗಳಿಗೆ ಸಾಫ್ಟ್‌ವೇರ್‌ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ  ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಧರ್ಮಪುರಂ ಗ್ರಾಮದ ನಿವಾಸಿ ದಿವ್ಯಾ (22) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಮೃತ ದಿವ್ಯಾ ಹೈದರಾಬಾದ್‍ನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಇದೇ ವರ್ಷ ಫೆಬ್ರವರಿ 22 ರಂದು ಅದೇ ಗ್ರಾಮದ ಪ್ರವೀಣ್ ರೆಡ್ಡಿ ಜೊತೆ ವಿವಾಹವಾಗಿದ್ದಳು.

    ಮದುವೆಯ ಸಮಯದಲ್ಲಿ ದಿವ್ಯಾ ಪೋಷಕರು 10 ಲಕ್ಷ ರೂ. ನಗದು, 20 ತೊಲ ಚಿನ್ನ ಮತ್ತು ಒಂದು ಎಕರೆ ಭೂಮಿಯನ್ನು ವರದಕ್ಷಿಣೆಯಾಗಿ ಪ್ರವೀಣ್ ರೆಡ್ಡಿಗೆ ನೀಡಲಾಗಿತ್ತು. ಮದುವೆ ನಂತರವೂ ದಿವ್ಯಾ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಪತಿ ಪ್ರವೀಣ್ ರೆಡ್ಡಿ ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದನು.

    ವಿವಾಹವಾದ ಕೆಲವೇ ದಿನಗಳಲ್ಲಿ ಹೆಚ್ಚುವರಿ ವರದಕ್ಷಿಣೆ ತರುವಂತೆ, ಇಲ್ಲವಾದರೆ ಜಮೀನನ್ನು ಮಾರಾಟ ಮಾಡುವಂತೆ ಪತಿ, ಅತ್ತೆ ಮತ್ತು ಮಾವ ದಿವ್ಯಾಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ವಾಟ್ಸಾಪ್ ಮೂಲಕ ಪತಿ ಅಶ್ಲೀಲ ಮೆಸೇಜ್ ಕಳುಹಿಸುವ ಮೂಲಕ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ದಿವ್ಯಾ ನಾಲ್ಕು ದಿನಗಳ ಹಿಂದೆ ಹೈದರಾಬಾದ್‍ನಿಂದ ತನ್ನ ಗ್ರಾಮಕ್ಕೆ ಹಿಂದಿರುಗಿ ಪೋಷಕರಿಗೆ ನಡೆದ ಎಲ್ಲಾ ವಿಚಾರವನ್ನು ತಿಳಿಸಿದ್ದಾಳೆ.

    ಮಂಗಳವಾರ ದಿವ್ಯಾ ಪೋಷಕರು ಮಗಳನ್ನು ಕರೆದುಕೊಂಡು ಪ್ರವೀಣ್ ರೆಡ್ಡಿ ಮನೆಗೆ ಹೋಗಿ ಮಾತನಾಡಿದ್ದಾರೆ. ಈ ವೇಳೆ ಎರಡು ಕುಟುಂಬದವರ ಮಧ್ಯೆ ಜೋರಾಗಿ ಗಲಾಟೆ ನಡೆದಿದೆ. ಇದರಿಂದ ನೊಂದ ದಿವ್ಯಾ ಗ್ರಾಮದ ಹೊರವಲಯದಲ್ಲಿ ತನ್ನ ತಾಯಿಯ ಜಮೀನಿನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮೃತ ದಿವ್ಯಾ ಪೋಷಕರು ಪತಿ ಮತ್ತು ಅತ್ತೆ-ಮಾವ ಮೂವರ ವಿರುದ್ಧ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹೆಚ್ಚುವರಿ ವರದಕ್ಷಿಣೆ ನೀಡುವಂತೆ ನನ್ನ ಮಗಳಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತ ಮದುವೆಯಾದ ನಾಲ್ಕು ತಿಂಗಳಿಗೆ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಮದ್ವೆಯಾದ ಎರಡೇ ದಿನಕ್ಕೆ ಮದುಮಗಳು ತವರಿಗೆ- ಕಾಡಿ ಬೇಡಿ ವಿವಾಹವಾಗಿ ಕೈಕೊಟ್ಟ ಭೂಪ

    ಮದ್ವೆಯಾದ ಎರಡೇ ದಿನಕ್ಕೆ ಮದುಮಗಳು ತವರಿಗೆ- ಕಾಡಿ ಬೇಡಿ ವಿವಾಹವಾಗಿ ಕೈಕೊಟ್ಟ ಭೂಪ

    ಮಂಡ್ಯ: ಲಾಕ್‍ಡೌನ್ ನಡುವೆ ಲಕ್ಷಾಂತರ ಹಣ ಸಾಲ ಮಾಡಿ ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಸೋದರತ್ತೆ ಮಗನೇ ಯುವತಿಗೆ ವಂಚಿಸಿದ್ದು, ಮದುವೆಯಾದ ಎರಡೇ ದಿನಕ್ಕೆ ತವರಿಗೆ ಕಳುಹಿಸಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಹರೀಶ್ ಮದುವೆಯಾದ ಎರಡು ದಿನಕ್ಕೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾನೆ. ಈತ ಮೈಸೂರು ಜಿಲ್ಲೆಯ ಬೆಳವಾಡಿ ಗ್ರಾಮದವನು. ಜೂನ್ 1ರಂದು ಜಿಲ್ಲೆಯ KRS ಸಮೀಪದ ಹೊಂಗಹಳ್ಳಿ ನಿವಾಸಿಗಳಾದ ತಾಯಮ್ಮ-ಈರಪ್ಪ ಮಗಳ ಜೊತೆ ವಿವಾಹವಾಗಿದ್ದನು.

    ಹರೀಶ್ ಮದುವೆಯಾದ ಎರಡೇ ದಿನಕ್ಕೆ ಹುಡುಗಿ ಮಾನಸಿಕ ರೋಗದಿಂದ ಬಳಲುತ್ತಿದ್ದಾಳೆ. ನಿಶಕ್ತಿ ಇರುವುದರಿಂದ ಮಗು ಆಗುವುದಿಲ್ಲ. ಇವಳ ಜೊತೆ ನನ್ನಿಂದ ಬಾಳೋಕೆ ಆಗೋದಿಲ್ಲ ಎಂದು ತವರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ಯುವತಿ, ನಾನು ಗಂಡನ ಜೊತೆಯಲ್ಲೇ ಬದುಕಬೇಕು. ಇಲ್ಲವಾದರೆ ಆತ್ಮಹತ್ಯೆಯೊಂದೇ ದಾರಿ ಎಂದು ಹೇಳುತ್ತಿದ್ದಾಳೆ.

    ಕಾಡಿ ಬೇಡಿ ಮದುವೆಯಾಗಿ ಕೈಕೊಟ್ಟ ಭೂಪ
    ಮಗಳಿಗೆ ಸದ್ಯಕ್ಕೆ ಮದುವೆ ಯೋಜನೆ ಇರಲಿಲ್ಲ. ಆದರೆ ಈರಪ್ಪ ಅವರ ಅಕ್ಕನ ಮಗ ಹರೀಶ್ ಮದುವೆ ಮಾಡಿಕೊಡಿ, ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಬೀಡಿಸುತ್ತಿದ್ದನು. ಗೊತ್ತಿಲ್ಲದವರಿಗೆ ಮದುವೆ ಮಾಡಿಕೊಡುವುದಕ್ಕಿಂತ ಸಂಬಂಧಿಕರಿಗೆ ಮದುವೆ ಮಾಡಿಕೊಟ್ಟರೆ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ನಂಬಿದ್ದೆ. ಲಾಕ್‍ಡೌನ್ ನಡುವೆಯೂ ಸಾಲ ಮಾಡಿ 6 ಲಕ್ಷ ಹಣ ಹಾಗೂ 80 ಗ್ರಾಂ ಚಿನ್ನ ನೀಡಿ ಮದುವೆ ಮಾಡಿಕೊಟ್ಟಿದ್ದೆವು. ಆದರೆ ಎರಡೇ ದಿನಕ್ಕೆ ಮಗಳನ್ನು ತವರು ಮನೆಗೆ ಕಳುಹಿಸಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸುತ್ತಿದ್ದಾರೆ.

    ತಾಯಮ್ಮ ಹಾಗೂ ಈರಪ್ಪ ದಂಪತಿಗೆ ಇಬ್ಬರು ಪುತ್ರಿಯರು. ಮೊದಲ ಮಗಳಿಗೆ 8 ವರ್ಷದ ಹಿಂದೆಯೇ ಮದುವೆಯಾಗಿದೆ. ಸದ್ಯಕ್ಕೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

    ಈ ಘಟನೆ ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.