Tag: dovtor

  • ಹಬ್ಬಕ್ಕೆ ಗಣೇಶನ ಮೂಲಕ ವೈದ್ಯರಿಗೆ ಗೌರವ ಅರ್ಪಣೆ

    ಹಬ್ಬಕ್ಕೆ ಗಣೇಶನ ಮೂಲಕ ವೈದ್ಯರಿಗೆ ಗೌರವ ಅರ್ಪಣೆ

    – ಗಣೇಶ ಚತುರ್ಥಿಗೆ ವಿಶೇಷ ಮೂರ್ತಿ

    ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ವೈದ್ಯರು, ಆಶಾ ಕಾರ್ಯಕರ್ತೆಯರು ರಾತ್ರಿ-ಹಗಲು ಎನ್ನದೆ ಶ್ರಮ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಬಾರಿ ಗಣೇಶ ವೈದ್ಯರ ರೂಪ ತಾಳಿದ್ದಾನೆ.

    ಹೌದು. ಕೋವಿಡ್ 19 ಹೋಗಲಾಡಿಸಲು ಆಶಾ ಕಾರ್ಯಕರ್ತರು, ವೈದ್ಯರು ತಮ್ಮ ಜೀವವನ್ನು ಲೆಕ್ಕಿಸದೆ ನಮ್ಮನ್ನು ಸುರಕ್ಷಿತವಾಗಿಡಲು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ಬೆಂಗಳೂರಿನ ಮೂರ್ತಿ ತಯಾರಕರೊಬ್ಬರು ಗಣೇಶ ಚತುರ್ಥಿ ಹಬ್ಬಕ್ಕೆ ಮುಂಚಿತವಾಗಿ ವಿಶೇಷವಾಗಿ ಅವರಿಗೆ ವಂದನೆ ಸಲ್ಲಿಸಿದ್ದಾರೆ.

    ವೈದ್ಯನಾದ ಗಣೇಶ:
    ಮೂರ್ತಿ ತಯಾರಕ ಶ್ರೀಧರ್ ಅವರು ಗಣೇಶನನ್ನು ವೈದ್ಯನನ್ನಾಗಿ ಮಾಡಿದ್ದಾರೆ. ಬೆಡ್‍ನಲ್ಲಿ ಮಲಗಿರುವ ಕೊರೊನಾ ರೋಗಿಯನ್ನು ಗಣೇಶ ಪರೀಕ್ಷೆ ಮಾಡುತ್ತಾನೆ. ಗಣೇಶನ ವಾಹನ ಇಲಿ, ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುವ ದಾದಿಯಂತೆ ಮಾಡಲಾಗಿದೆ. ಮತ್ತೊಂದು ಮೂರ್ತಿಯು ಕೊರೊನಾ ವೈರಸ್ ಆಕಾರದ ರಾಕ್ಷಸನನ್ನು ತೋರಿಸುತ್ತಿದ್ದು, ಗಣೇಶ ಅದನ್ನು ಕೆಡವುವಂತೆ ಬಿಂಬಿಸಲಾಗಿದೆ.

    ಈ ಬಗ್ಗೆ ಶ್ರೀಧರ್ ಮಾತನಾಡಿ, ಸದ್ಯ ನಾವು ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೇವೆ. ಈ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತ ಪರಿಸ್ಥಿತಿಯ ಸುಧಾರಣೆಗಾಗಿ ಗಣೇಶನನ್ನು ಪ್ರಾರ್ಥಿಸುವಂತೆ ನಾವು ಜನರಿಗೆ ಹೇಳಬೇಕಾಗಿದೆ. ಹೀಗಾಗಿ ಈ ರೀತಿಯ ಐಡಿಯಾ ಬಂತು ಎಂದು ಹೇಳಿದ್ದಾರೆ.

    ಈ ವರ್ಷ ಗಣೇಶ ಹಬ್ಬವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಪ್ರತಿವರ್ಷ ಬಹಳ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ 19 ನಿಂದಾಗಿ ತುಂಬ ಸರಳವಾಗಿ ಆಚರಿಸುವಂತಹ ಸಂದರ್ಭ ಎದುರಾಗಿದೆ.