Tag: Double Engine

  • ಮರಾಠಿಗೆ ರೀಮೇಕ್ ಆಗುತ್ತಾ ಡಬ್ಬಲ್ ಇಂಜಿನ್?

    ಮರಾಠಿಗೆ ರೀಮೇಕ್ ಆಗುತ್ತಾ ಡಬ್ಬಲ್ ಇಂಜಿನ್?

    ಬೆಂಗಳೂರು: ಚಂದ್ರಮೋಹನ್ ನಿರ್ದೇಶನದ ಡಬ್ಬಲ್ ಇಂಜಿನ್ ಬಿಡುಗಡೆಯಾಗಿ ವಾರಗಳು ಕಳೆಯುತ್ತಲೇ ಗೆಲುವಿನ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಹ್ಯೂಮರಸ್ ಕಾಮಿಡಿ, ಭಿನ್ನವಾದ ಕಥಾ ಹಂದರದಿಂದಲೇ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಈ ಚಿತ್ರದ ಡಬ್ಬಿಂಗ್ ಹಕ್ಕುಗಳಿಗಾಗಿ ಪರಭಾಷೆಗಳಲ್ಲಿಯೂ ಬೇಡಿಕೆ ಬರುತ್ತಿರುವ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಬೇರೆ ಭಾಷೆಗಳಲ್ಲಿ ಈ ಚಿತ್ರವನ್ನು ರೀಮೇಕ್ ಮಾಡಲೂ ಕೂಡಾ ಪೈಪೋಟಿ ಶುರುವಾಗಿದೆ!

    ಈ ಚಿತ್ರವನ್ನು ನೋಡಿ ಖುಷಿಗೊಂಡು ರೀಮೇಕ್ ಹಕ್ಕಿಗಾಗಿ ಉತ್ಸುಕರಾದವರಲ್ಲಿ ಮುಂಚೂಣಿಯಲ್ಲಿರುವವರು ಮರಾಠಿಯ ಖ್ಯಾತ ನಿರ್ಮಾಪಕ ಪ್ರಮೋದ್ ಬಕಾಡಿಯಾ. ಈ ಬಗ್ಗೆ ಪ್ರಮೋದ್ ಈಗಾಗಲೇ ಡಬ್ಬಲ್ ಇಂಜಿನ್ ಚಿತ್ರದ ನಿರ್ದೇಶಕರನ್ನು ಸಂಪರ್ಕಿಸಿದ್ದಾರೆ. ಒಂದು ಸುತ್ತಿನ ಮಾತುಕತೆಗಳೂ ನಡೆದಿವೆ. ಹೆಚ್ಚೂ ಕಡಿಮೆ ಡಬ್ಬಲ್ ಇಂಜಿನ್ ಮರಾಠಿಗೆ ರೀಮೇಕ್ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

    ಇತ್ತೀಚೆಗಷ್ಟೇ ಪ್ರಮೋದ್ ಬಕಾಡಿಯಾ ಡಬಲ್ ಇಂಜಿನ್ ಚಿತ್ರವನ್ನು ನೋಡಿದ್ದರು. ಖುಷಿಗೊಂಡ ಅವರು ಆ ಕ್ಷಣವೇ ಈ ಚಿತ್ರವನ್ನು ಮರಾಠಿಯಲ್ಲಿ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕೂಡಲೇ ನಿರ್ದೇಶಕರ ಚಂದ್ರಮೋಹನ್ ಮತ್ತು ಹಂಚಿಕೆದಾರರಾದ ಉದಯ್ ಮೆಹ್ತಾರನ್ನು ಸಂಪರ್ಕಿಸಿದ್ದಾರೆ. ಇನ್ನು ಅಂತಿಮ ಹಂತದ ಮಾತುಕತೆಯಷ್ಟೇ ಬಾಕಿ ಉಳಿದುಕೊಂಡಿದೆ.

    ಕನ್ನಡ ಚಿತ್ರ ಈ ರೀತಿಯಲ್ಲಿ ಬೇರೆ ಭಾಷೆಗಳನ್ನೂ ಪ್ರಭಾವಿಸುತ್ತಿರೋದು ನಿಜಕ್ಕೂ ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯ ವಿಚಾರ. ಡಬಲ್ ಇಂಜಿನ್ ರೀಮೇಕ್ ಮತ್ತು ಡಬ್ಬಿಂಗ್ ಹಕ್ಕುಗಳಿಗಾಗಿ ದಿನನಿತ್ಯ ಬೇರೆ ಬೇರೆ ಭಾಷೆಗಳಿಂದ ಬೇಡಿಕೆಗಳು ಬರುತ್ತಲೇ ಇರೋದರಿಂದ ಚಿತ್ರ ತಂಡದ ಮುಖದಲ್ಲಿ ಮಂದಹಾಸ ಮೂಡಿಕೊಂಡಿದೆ.

  • ಡಬಲ್ ಇಂಜನ್ನಿನ ಮಜವೇ ಬೇರೆ!

    ಡಬಲ್ ಇಂಜನ್ನಿನ ಮಜವೇ ಬೇರೆ!

    – ನಗುವಿನೊಂದಿಗೆ ಗಾಢ ಕುತೂಹಲಗಳ ನಾಕಾಬಂಧಿ!

    ರೇಟಿಂಗ್: 4/5 
    ಬೆಂಗಳೂರು: ನೋಡುಗರನ್ನೆಲ್ಲ ಟ್ರೈಲರ್ ಮೂಲಕವೇ ತುದಿಗಾಲಲ್ಲಿ ನಿಲ್ಲಿಸಿದ್ದ ಚಂದ್ರ ಮೋಹನ್ ನಿರ್ದೇಶನದ ‘ಡಬಲ್ ಇಂಜಿನ್’ ಚಿತ್ರ ಬಿಡುಗಡೆಯಾಗಿದೆ. ತೆಳುವಾದ ಡಬಲ್ ಮೀನಿಂಗ್ ಡೈಲಾಗುಗಳ ಮೂಲಕವೇ ಕಚಗುಳಿ ಇಟ್ಟಿದ್ದರಿಂದ ಅಂಥಾ ನಿರೀಕ್ಷೆಯಿಟ್ಟುಕೊಂಡು ಬಂದವರನ್ನೂ ಮತ್ತೊಂದು ಜಗತ್ತಿಗೆ ಕರೆದೊಯ್ದು ಭರಪೂರ ನಗುವಿನ ಜೊತೆಗೇ ಗಂಭೀರ ವಿಚಾರಗಳನ್ನೂ ಪ್ರಸ್ತುತ ಪಡಿಸೋದು ಈ ಚಿತ್ರದ ನಿಜವಾದ ಸ್ಪೆಷಾಲಿಟಿ!

    ಭರಪೂರ ಹಾಸ್ಯದ ಮೂಲಕವೇ ಅತ್ಯಂತ ಗಂಭೀರ ವಿಚಾರವೊಂದನ್ನು ಹೇಳೋದು ಸವಾಲಿನ ವಿಚಾರ. ಆದರೆ ಅಂಥಾ ಕಲೆಯನ್ನು ಕರತಲಾಮಲಕ ಮಾಡಿಕೊಂಡಿರುವ ಚಂದ್ರಮೋಹನ್ ಅದರಲ್ಲಿ ಗೆದ್ದಿದ್ದಾರೆ. ಪ್ರತೀ ಹಳ್ಳಿಗಳಲ್ಲಿಯೂ ಸಾಮಾನ್ಯವಾಗಿ ಇರುವ ಪಡ್ಡೆಗಳಂಥಾದ್ದೇ ವ್ಯಕ್ತಿತ್ವ ಹೊಂದಿರುವ ಮೂವರು ಹುಡುಗರು. ತಲತಲಾಂತರಗಳಿಂದ ಮಾಡಿಕೊಂಡು ಬಂದರೆ ಹೊಲದ ಮಣ್ಣು ಬಾಯಿಗೆ ಬೀಳಬಹುದೇ ಹೊರತು ಕೈ ತುಂಬಾ ಕಾಸು ಮಾಡಲಾಗೋದಿಲ್ಲ ಎಂಬುದನ್ನು ಬಲವಾಗಿ ನಂಬಿ ಅಡ್ಡಾಡಿಕೊಂಡಿರೋ ಆ ಮೂವರು ಊರವರ ಕಣ್ಣಲ್ಲಿ ಕೆಲಸಕ್ಕೆ ಬಾರದವರು. ಇಂಥಾ ಮೂವರು ಹುಡುಗರೂ ಇದ್ದಕ್ಕಿದ್ದಂತೆ ಒಂದೇ ಏಟಿಗೆ ಕೋಟಿ ಕೋಟಿ ಕಾಸು ಮಾಡೋ ಆಸೆಯೊಂದಿಗೆ ಚಕ್ರಸುಳಿಯೊಂದಕ್ಕೆ ಪ್ರವೇಶ ಮಾಡುತ್ತಾರೆ.

    ಹೀಗೆಂದಾಕ್ಷಣ ಆ ಮೂವರು ಕೊಲೆ, ಸುಲಿಗೆ ಕಳ್ಳತನದಂಥಾ ಮಾಮೂಲಿ ಅನಾಹುತಕ್ಕೆ ಕೈ ಹಾಕುತ್ತಾರೆಂದುಕೊಂಡರೆ ಅದನ್ನು ಈ ಚಿತ್ರ ಸುಳ್ಳು ಮಾಡುತ್ತದೆ. ಈ ಹುಡುಗರು ತಕ್ಷಣಕ್ಕೆ ಊಹಿಸಲಾಗದಂಥಾದ್ದೊಂದು ಕೆಲಸಕ್ಕೆ ಕೈ ಹಾಕುತ್ತಾರೆ. ಅದುವೇ ಇಡೀ ಚಿತ್ರದ ಅಸಲೀ ಶಕ್ತಿ. ಡಬಲ್ ಎಂಜಿನ್ ಚಿತ್ರದಲ್ಲಿ ಕ್ಷಣ ಕ್ಷಣಕ್ಕೂ ಕುತೂಹಹಲವಿದೆ, ಯಾರೂ ಊಹಿಸಲು ಸಾಧ್ಯವಾಗದಂಥಾ ತಿರುವುಗಳಿವೆ. ಆದರೆ ಕಥೆ ಅದೆಷ್ಟೇ ಗಂಭೀರವಾಗಿ ಸಾಗಿದರೂ ಪ್ರತೀ ಕ್ಷಣವೂ ನಗುವಿಗೇನೂ ಕೊರತೆ ಇಲ್ಲ. ಮೂವರು ಹುಡುಗರ ಜೊತೆಗೊಬ್ಬಳು ಸುಂದರಾಂಗಿ, ಅವರ ಜೊತೆಗೆ ಪೊಲೀಸ್ ಅಧಿಕಾರಿಗಳು, ಪ್ರೀತಿಯನ್ನು ದಕ್ಕಿಸಿಕೊಳ್ಳುವ ಪಡಿಪಾಟಲು, ಯಾರನ್ನೋ ತೃಪ್ತಿಪಡಿಸುವ ಪ್ರಾಮಾಣಿಕತೆ, ಹೃದಯ ಮಿಡಿಯುವ ಸನ್ನಿವೇಶ ಎಲ್ಲವೂ ಇದೆ. ಅದೆಲ್ಲ ಇದ್ದರೂ ಎಲ್ಲಿಯೂ ಗೊಂದಲ ಕಾಡದಂತೆ, ಒಂದರೆ ಕ್ಷಣವೂ ಕಥೆಯನ್ನು ಸಡಿಲ ಬಿಡದಂತೆ ನಗುವಿನ ಜೊತೆಗೇ ರೋಚಕವಾಗಿ ಕಟ್ಟಿ ಕೊಡಲಾಗಿದೆ.

    ಮಗನ ಏಳಿಗೆಯನ್ನೇ ಏದುರು ನೋಡುವ ತಾಯಿ, ಒಂಟಿ ಹೆಣ್ಣನ್ನು ಬೇರೆಯದ್ದೇ ದೃಷ್ಟಿಯಿಂದ ಅಳೆಯೋ ಸಮಾಜ, ಹೆಣ್ಣೊಬ್ಬಳು ಸಿಕ್ಕರೆ ಬೇರೆಯದ್ದೇ ದಂಧೆಗಿಳಿಸಲು ಹಾತೊರೆಯೋ ದುಷ್ಟತನ… ಇದೆಲ್ಲವೂ ಡಬಲ್ ಎಂಜಿನ್‍ನಲ್ಲಿದೆ. ಡಬಲ್ ಮೀನಿಂಗಿನಾಚೆಗೆ ಸಮಾಜದ ಅಂಕುಡೊಂಕುಗಳಿಗೂ ಹಾಸ್ಯದ ಮೂಲಕವೇ ಕಣ್ಣಾಗಿರೋ ಈ ಚಿತ್ರ ಬಹುಶಃ ಎಷ್ಟು ಸಲ ನೋಡಿದರೂ ಒಂದು ಕುತೂಹಲವನ್ನು ಖಂಡಿತಾ ಉಳಿಸಿಕೊಳ್ಳುತ್ತದೆ!

  • ಗ್ಲಾಮರ್ ಗೊಂಬೆಗಳ ಜೊತೆ ಬರ್ತಿದ್ದಾರೆ ಕಾಮಿಡಿ ಕಿಲಾಡಿಗಳು!

    ಗ್ಲಾಮರ್ ಗೊಂಬೆಗಳ ಜೊತೆ ಬರ್ತಿದ್ದಾರೆ ಕಾಮಿಡಿ ಕಿಲಾಡಿಗಳು!

    ಬೆಂಗಳೂರು: ಈ ವಾರ ಥಿಯೇಟರ್ ಅಖಾಡದಲ್ಲಿ ಗ್ಲಾಮರ್ ಗೊಂಬೆಗಳು ಹಾಗೂ ಕಾಮಿಡಿ ಕಿಂಗ್‍ಗಳದ್ದೇ ದರ್ಬಾರ್. ಹೀರೋಗಳಿಗೆ ನಾವೇನು ಕಮ್ಮಿಯಿಲ್ಲ ಅಂತ ತೋರ್ಸೋದಕ್ಕೆ ಐದು ಜನ ನಟಿಮಣಿಯರು ರೆಡಿಯಾಗಿದ್ದಾರೆ. ಇತ್ತ ಡಬಲ್ ಇಂಜಿನ್ ಮೂಲಕ ಕಾಮಿಡಿ ಟಾನಿಕ್ ನಿಡೋಕೆ ಚಿಕ್ಕಣ್ಣ ಮತ್ತು ಗ್ಯಾಂಗ್ ಸಜ್ಜಾಗಿದೆ.

    ಸಿನಿ ಶುಕ್ರವಾರದಂದು ಚಿತ್ರಮಂದಿರಕ್ಕೆ ಭಿನ್ನ-ವಿಭಿನ್ನ ಸಿನಿಮಾಗಳು ಲಗ್ಗೆ ಇಡುತ್ತವೆ. ಶಿಳ್ಳೆ-ಚಪ್ಪಾಳೆಯನ್ನ ಗಿಟ್ಟಿಸಿಕೊಳ್ಳೋಕೆ ಎಂಎಂಸಿಎಚ್ ಹಾಗೂ ಡಬಲ್ ಇಂಜಿನ್ ಸಿನಿಮಾಗಳು ಸಜ್ಜಾಗಿವೆ. `ಎಂಎಂಸಿಎಚ್’ ಟೈಟಲ್‍ನಿಂದಲೇ ಈ ಸಿನಿಮಾ ಕೂತೂಹಲ ಮೂಡಿಸಿದೆ. ಮೇಘನಾ ರಾಜ್, ಸಂಯುಕ್ತಾ ಬೆಳವಾಡಿ, ನಕ್ಷತ್ರಾ, ಪ್ರಥಮಾ ಲೀಡ್ ರೋಲ್‍ನಲ್ಲಿ ಮಿಂಚಿದ್ದು, ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ರಾಗಿಣಿ ಖದರ್ ತೋರ್ಸೋಕೆ ಹೊರಟಿದ್ದಾರೆ.

    ನೈಜ ಘಟನೆ ಆಧಾರಿತ ಸಿನಿಮಾಗಳನ್ನು ತೆರೆ ಮೇಲೆ ಅದ್ಭುತವಾಗಿ ಕಟ್ಟಿಕೊಡುವ ನಿರ್ದೇಶಕ ಮುಸ್ಸಂಜೆ ಮಹೇಶ್, ಮತ್ತೊಮ್ಮೆ ರಿಯಲ್ ಇನ್ಸಿಡೆಂಟ್ ಬೇಸ್ಡ್ ಕಥೆಯನ್ನೊಳಗೊಂಡಿರುವ ಎಂಎಂಸಿಎಚ್ ಚಿತ್ರವನ್ನ ಪ್ರೇಕ್ಷಕರಿಗೆ ಉಣಬಡಿಸಲು ಹೊರಟಿದ್ದಾರೆ. ಕಾಲೇಜ್ ಲವ್‍ಸ್ಟೋರಿ ಜತೆಗೆ ಮರ್ಡರ್ ಮಿಸ್ಟರಿ ಕಥೆಯನ್ನು ಬ್ಲೆಂಡ್ ಮಾಡಿ ಎಂಎಂಸಿಎಚ್ ಚಿತ್ರಕಥೆಯನ್ನ ಹೆಣೆದಿದ್ದಾರೆ. ಯೂಟ್ಯೂಬ್‍ನಲ್ಲಿ ಟ್ರೇಲರ್ ಸೂಪರ್ ಹಿಟ್ಟಾಗಿದ್ದು, ಸಿನಿಮಾ ಬಗ್ಗೆ ಕೂತೂಹಲ ಕಾಯ್ದಿರಿಸಿದೆ.

    ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಿರುವ `ಡಬಲ್ ಇಂಜಿನ್’ ಸಿನಿಮಾ ಕೂಡ ಈ ವಾರ ತೆರೆಗೆ ಬರ್ತಿದೆ. ಕಾಮಿಡಿ ಡ್ರಾಮವನ್ನೊಳಗೊಂಡಿರುವ ಈ ರೊಮ್ಯಾಂಟಿಕ್ ಸಿನಿಮಾದಲ್ಲಿ ಚಿಕ್ಕಣ್ಣ, ಅಶೋಕ್, ಪ್ರಭು, ಸುಮನ್ ರಂಗನಾಥ್, ಪ್ರಿಯಾಂಕಾ ಮಲ್ನಾಡ್, ದತ್ತಣ್ಣ, ಸಾಧು ಕೋಕಿಲ ಸೇರಿದಂತೆ ಹಲವರು ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಎಸ್‍ಆರ್‍ಎಸ್ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ `ಡಬಲ್ ಇಂಜಿನ್’ ರೆಡಿಯಾಗಿದೆ. ಒಟ್ಟಿನಲ್ಲಿ ಟ್ರೇಲರ್ ಮೂಲಕ ಸೌಂಡ್ ಮಾಡಿದಂತಹ ಈ ಎರಡು ಸಿನಿಮಾಗಳು ಥಿಯೇಟರ್ ಅಖಾಡದಲ್ಲಿ ಯಾವ ರೀತಿ ಸದ್ದು ಮಾಡುತ್ತವೆ ಅನ್ನೋದನ್ನ ಕಾದುನೋಡಬೇಕಿದೆ.

  • ಡಬಲ್ ಇಂಜಿನ್, ಅಥರ್ವ ಈ ವಾರ ಬಿಡುಗಡೆ

    ಡಬಲ್ ಇಂಜಿನ್, ಅಥರ್ವ ಈ ವಾರ ಬಿಡುಗಡೆ

    ಬೆಂಗಳೂರು: ಎಸ್ ಆರ್ ಎಸ್ ಲಾಂಛನದಲ್ಲಿ ತಯಾರಾಗಿರುವ ಮನರಂಜನಾತ್ಮಕ ಚಿತ್ರ ‘ಡಬಲ್ ಇಂಜಿನ್’ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ ಬಾಂಬೆ ಮಿಠಾಯಿ ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡ ಚಂದ್ರ ಮೋಹನ್ ಈ ಚಿತ್ರವನ್ನೂ ಸಂಪೂರ್ಣ ಮನರಂಜನೆಯ ಅಂಶಗಳೊಂದಿಗೆ ತಯಾರು ಮಾಡಿದ್ದಾರೆ.

    ಅರುಣ್ ಕುಮಾರ್ ಎನ್, ಶ್ರೀಕಾಂತ್ ಮಠಪತಿ, ಮಂದಾರ ಎ, ಮಧು ಎಸ್ ಆರ್ ಎಸ್ ಶುಂಠಿ ಕಾಫಿ, ಮಂಜುನಾಥ್ ನಂಜಪ್ಪ, ಪದ್ಮ ಕೃಷ್ಣಮೂರ್ತಿ, ರಾಜು ಪಟೇಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಈ ಚಿತ್ರದ ವಿತರಣೆಯನ್ನು ಮಾಡುತ್ತಿದ್ದಾರೆ.

    ಸುಮನ್ ರಂಗನಾಥ್, ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕ ಮಲ್ನಾಡ್, ಸಾಧು ಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ತಾರಾಗಣದ ಈ ಚಿತ್ರದಲ್ಲಿ ಮೂವರು ಯುವಕರು ಹಳ್ಳಿಯಲ್ಲಿ ವ್ಯವಸಾಯವನ್ನು ಬಿಟ್ಟು ಬಹುಬೇಗ ಶ್ರೀಮಂತರಾಗಲು ಹೊರಟು ಅನುಭವಿಸುವ ಸಂದರ್ಭಗಳು ಪ್ರಮುಖವಾದವು. ಸೂರ್ಯ ಕಿರಣ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    ಇದೇ ವಾರ ಅಥರ್ವ ಬರುತ್ತಿದ್ದಾನೆ: ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದಿಂದ ಬರುತ್ತಿರುವ ಮತ್ತೊಬ್ಬ ನಾಯಕ. ಅವರೇ ಪವನ್ ತೇಜ. ಮಹಾ ಸಿಂಹ ಮೂವೀಸ್ ಅಡಿಯಲ್ಲಿ ವಿನಯ್ ಕುಮಾರ್ ಎಚ್ ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶಕರು ಅರುಣ್. ರಕ್ಷಯ್ ಎಸ್ ವಿ ಸಹ ನಿರ್ಮಾಪಕರು. ಇದನ್ನೂ ಓದಿ: ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

    ಹಲವು ತಾಕತ್ತುಗಳ ಸಂಗಮವನ್ನು ಪ್ರಥಮ ಪ್ರಯತ್ನದಲ್ಲೇ ಪವನ್ ತೇಜ ನಿಭಾಯಿಸುತ್ತಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ, ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

    ರಾಘವೇಂದ್ರ ಸಂಗೀತ ನಿರ್ದೇಶನ, ಶಿವ ಸೇನಾ ಛಾಯಾಗ್ರಹಣ, ಮೋಹನ್ ನೃತ್ಯ, ರಾಜು ಕಲಾ ನಿರ್ದೇಶನ, ಸಂತೋಷ್ ಎಂ ಸಂಭಾಷಣೆ, ವಿಜೇತ ಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ.