Tag: Dosti budget

  • ಇದು ರಾಮನಗರ, ಹಾಸನದ ಅಣ್ಣ-ತಮ್ಮನ ಬಜೆಟ್: ಬಿಎಸ್‍ವೈ ವ್ಯಂಗ್ಯ

    ಇದು ರಾಮನಗರ, ಹಾಸನದ ಅಣ್ಣ-ತಮ್ಮನ ಬಜೆಟ್: ಬಿಎಸ್‍ವೈ ವ್ಯಂಗ್ಯ

    ಬೆಂಗಳೂರು: ದೋಸ್ತಿ ಬಜೆಟ್ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಇದು ರಾಮನಗರ ಹಾಗೂ ಹಾಸನದ ಅಣ್ಣ ತಮ್ಮಂದಿರ ಬಜೆಟ್ ಎಂದು ವ್ಯಂಗ್ಯ ಮಾಡಿದರು.

    ನಾಡಿನ ರೈತ ಸಮುದಾಯಕ್ಕೆ ಸಿಎಂ ಕುಮಾರಸ್ವಾಮಿ ದ್ರೋಹ ಮಾಡಿದ್ದಾರೆ. ನೀವು 34 ಸಾವಿರ ಕೋಟಿ ಮನ್ನಾ ಮಾಡುತ್ತೇವೆ ಅಂತಾ ಹೇಳಿದ್ರೂ, ಹಣಕಾಸಿನ ಹೊಂದಾಣಿಕೆ ಎಲ್ಲಿ ಮಾಡಿದ್ದೀರಿ. ಸುಸ್ತಿ ಸಾಲ ಬಗ್ಗೆ ಮಾತ್ರ ಮಾತನಾಡಿದ್ದಾರೆ ಅಂತಾ ಆರೋಪಿದ್ರು.

    ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಏರಿಕೆ ಮಾಡಿ ರೈತ ಶ್ರೀಸಾಮಾನ್ಯನ ಮೇಲೆ ಬರೆ ಎಳೆದಿದ್ದಾರೆ. ಸಿಎಂ ರಾಜಕೀಯ ದೊಂಬರಾಟ ಮಾಡಿದ್ದಾರೆ. ಇದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ ಎಂದರು. ಬಜೆಟ್‍ನಲ್ಲಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿಗೆ ಅನ್ಯಾಯವಾಗಿದೆ. ಈ ಬಜೆಟ್ ರಾಮನಗರ, ಹಾಸನ ಅಣ್ಣ ತಮ್ಮಂದಿರ ಬಜೆಟ್. ಇದಕ್ಕಾಗಿ ಇವರನ್ನ ಸಿಎಂ ಮಾಡಿದ್ರಾ..? ಇದಕ್ಕೆ ಸಿಎಂ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

    ಬಜೆಟ್ ಬಗ್ಗೆ ಸದನದಲ್ಲಿ ಚರ್ಚೆಗಳಾಗುತ್ತದೆ. ಇದಾದ ಬಳಿಕ ರಾಜ್ಯದ ಉದ್ದಗಲಕ್ಕೂ ಹೋಗುತ್ತೇವೆ. ನಾನು ರಾಜ್ಯದ ಜನರಿಗೆ ಈ ಬಜೆಟ್ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡುತ್ತೇನೆ. ಎಚ್‍ಡಿಕೆ ಅವರು ಎಲ್ಲೂ 34 ಸಾವಿರ ಕೋಟಿ ರೂಪಾಯಿ ಎಲ್ಲಿಂದ ತರುತ್ತಾರೆ ಎಂದು ಹೇಳಿಲ್ಲ. ಅನ್ನಭಾಗ್ಯ ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಇಳಿಕೆ ಮಾಡಿದ್ದೀರಿ. ವೃದ್ಧಾಪ್ಯ ವೇತನ 6 ಸಾವಿರ ಕೊಡುತ್ತೇನೆ ಎಂದು ಈಗ 600 ರಿಂದ 1000 ರೂ.ಗೆ ಏರಿಸಿದ್ದೀರಿ. ಇದು ನಿಮ್ಮ ಸಾಧನೇನಾ ಎಂದು ಪ್ರಶ್ನಿಸಿದರು.

    ಅಲ್ಲದೆ ಸಿಎಂ ಮೀನುಗಾರರ ಸಾಲ ಮನ್ನಾ ಮಾಡಿಲ್ಲ. ಇದನ್ನ ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು ಅಂತಾ ಕರೆ ನೀಡಿದರು.

  • ಸಿ.ಎಸ್.ಪುಟ್ಟರಾಜು ಸಾರಥ್ಯದ ಸಣ್ಣ ನೀರಾವರಿಗೆ ಸಿಕ್ಕಿದ್ದೇನು?

    ಸಿ.ಎಸ್.ಪುಟ್ಟರಾಜು ಸಾರಥ್ಯದ ಸಣ್ಣ ನೀರಾವರಿಗೆ ಸಿಕ್ಕಿದ್ದೇನು?

    ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಹಲವು ಕೊಡುಗೆಗಳನ್ನು ನೀಡಿದೆ.

    ಹೇಮಾವತಿ ನದಿಯಿಂದ ಹಾಸನ ತಾಲೂಕಿನ ದುದ್ದ ಹಾಗೂ ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆ ತುಂಬಿಸುವ ಯೋಜನೆಗೆ 70 ಕೋಟಿ ರೂ. ಘೋಷಿಸಿದೆ. ಈ ಮೂಲಕ ಕುಡಿಯುವ ನೀರು ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

    ಅದೇ ರೀತಿ, ಮಂಡ್ಯ ಜಿಲ್ಲೆಯ ಲೋಕಪಾವನಿ ನದಿಯಿಂದ ದುದ್ದ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸಲು ಹಾಗೂ ಮಂಡ್ಯ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 30 ಕೋಟಿ ರೂ.ಗಳ ಯೋಜನೆಯನ್ನು ಘೋಷಿಸಿದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೊಡಿ, ನಾಗರಾಳ, ನೇಜ ಇತ್ಯಾದಿ ಗ್ರಾಮಗಳ 10225 ಹೆಕ್ಟೇರ್ ಜಮೀನಿಗೆ ಏತ ನೀರಾವರಿ ಯೋಜನೆಗಾಗಿ ಕೃಷ್ಣಾ ನದಿಯಿಂದ 100 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯನ್ನು ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿಯವರು ಘೋಷಿಸಿದ್ದಾರೆ.

  • ಸ್ವ ಉದ್ಯೋಗಕ್ಕೆ ‘ಕಾಯಕ’, ಬೀದಿ ವ್ಯಾಪಾರಿಗಳಿಗೆ ‘ಬಡವರ ಬಂಧು’..!

    ಸ್ವ ಉದ್ಯೋಗಕ್ಕೆ ‘ಕಾಯಕ’, ಬೀದಿ ವ್ಯಾಪಾರಿಗಳಿಗೆ ‘ಬಡವರ ಬಂಧು’..!

    – ಮೀನುಗಾರಿಕೆ ಹಾಗೂ ಸಹಕಾರಿ ಇಲಾಖೆಗೆ ಸಿಎಂ ಕೊಟ್ಟಿದ್ದೇನು..?

    ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಮೀನುಗಾರಿಕೆ ಹಾಗೂ ಸಹಕಾರಿ ಇಲಾಖೆಗೆ ಕುಮಾರಸ್ವಾಮಿ ಅವರು ಹಲವು ಕೊಡುಗೆಗಳನ್ನು ನೀಡಿದ್ದಾರೆ.

    ಮೀನುಗಾರಿಕೆ: ರಾಜ್ಯದ 20,000 ಹೆಕ್ಟೇರ್ ಜಲ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 2000 ಬಲಿತ ಬಿತ್ತನೆ ಮೀನುಮರಿಗಳನ್ನು ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಉಚಿತವಾಗಿ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಲು ‘ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ’ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ 4 ಕೋಟಿ ಮೀನು ಮರಿಗಳನ್ನು ಬಿತ್ತನೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

    ಸಹಕಾರ: ಸ್ವಸಹಾಯ ಗುಂಪುಗಳಲ್ಲಿ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆಯನ್ನು ವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಸ್ವ-ಉದ್ಯೋಗವನ್ನು ಪ್ರೋತ್ಸಾಹಿಸಿ, ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ‘ಕಾಯಕ’ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿ ಸ್ವ-ಸಹಾಯ ಗುಂಪುಗಳು ಸಮೂಹ ಮಾದರಿಯಲ್ಲಿ ಅಥವಾ ವೈಯಕ್ತಿಕವಾಗಿ ಸ್ವಂತ ಉದ್ಯೋಗ ಕೈಗೊಳ್ಳಲು ಸಹಕಾರ ಸಂಸ್ಥೆಗಳ ಮೂಲಕ ಪ್ರತಿ ಗುಂಪಿಗೆ ಗರಿಷ್ಟ 10 ಲಕ್ಷ ರೂ. ಗಳವರೆಗೆ ಸಾಲ ನೀಡಲಾಗುವುದು.

    ‘ಕಾಯಕ’ ಯೋಜನೆಯಡಿ 5 ಲಕ್ಷ ರೂ. ವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ ಹಾಗೂ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ದರ ನಿಗದಿಪಡಿಸಿದ್ದಾರೆ. ಈ ಯೋಜನೆಯಡಿ ಪ್ರಾರಂಭಿಕವಾಗಿ ಒಟ್ಟು 3000 ಸ್ವ ಸಹಾಯ ಗುಂಪುಗಳಿಗೆ ಸಾಲ ಇದಗಿಸಲು 5 ಕೋಟಿ ರೂ. ಅನುದಾನ ನೀಡಲಾಗಿದೆ.

    45. ಬೀದಿ ವ್ಯಾಪಾರಿಗಳು/ ಸಣ್ಣ ವ್ಯಾಪಾರಿಗಳು ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದಲ್ಲಿದ್ದು. ಇವರಿಗೆ ಸಾಂಸ್ಥಿಕ ಹಣಕಾಸು ವ್ಯವಸ್ಥೆ ಇಲ್ಲದೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಇವರ ಕಷ್ಟಗಳಿಗೆ ಸರ್ಕಾರವು ಸ್ಪಂದಿಸಿದ್ದು, ರಾಜ್ಯದ 5 ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು / ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ‘ಬಡವರ ಬಂಧು’ ಸಂಚಾರಿ ಸೇವೆಯನ್ನು ಪ್ರಾರಂಭಿಸಲಾಗುವುದು.

  • ಡಿಕೆಶಿಯ ಜಲಸಂಪನ್ಮೂಲ ಇಲಾಖೆಗೆ ಸಿಕ್ಕಿದ್ದೇನು?

    ಡಿಕೆಶಿಯ ಜಲಸಂಪನ್ಮೂಲ ಇಲಾಖೆಗೆ ಸಿಕ್ಕಿದ್ದೇನು?

    ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಡಿಕೆ ಶಿವಕುಮಾರ್ ನೇತೃತ್ವ ವಹಿಸಿರುವ ಜಲಸಂಪನ್ಮೂಲ ಇಲಾಖೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ನೋಡುವುದಾದರೆ, ಮೇಕೆದಾಟು ಯೋಜನೆಗೆ ಚುರುಕು, ಯೋಜನೆ ಕಾರ್ಯಗತಗೊಳಿಸಲು ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

    ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆ.ಆರ್.ಎಸ್ ಅಭಿವೃದ್ಧಿಗೆ ಕಾರ್ಯಯೋಜನೆ ಸಿದ್ಧಪಡಿಸಲು 5 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಬಂಡವಾಳ ಹೂಡಲು ವಿಶ್ವಮಟ್ಟದ ಉದ್ಯಮಿಗಳು ಉತ್ಸುಕರಾಗಿದ್ದಾರೆ.

    ಮಹದಾಯಿ ನದಿ ವಿವಾದದ ತೀರ್ಪು ಇದೇ ಆಗಸ್ಟ್ ನಲ್ಲಿ ಬರಲಿದ್ದು ಇದಾದ ಬಳಿಕ ನ್ಯಾಯಾಧಿಕರಣ ತೀರ್ಪಿನಂತೆ ಕಾಮಗಾರಿ ಕೈಗೊಳ್ಳಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡಸಲು ತೀರ್ಮಾನ. ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಕ್ಕೆ ಒತ್ತು. ಈಗ ಪ್ರಗತಿಯಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಮುಂದಿನ 5 ವರ್ಷಗಳಲ್ಲಿ ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ.

    ಒಟ್ಟಾಗಿ ಜಲಸಂಪನ್ಮೂಲ ಕ್ಷೇತ್ರಕ್ಕೆ ಕುಮಾರಸ್ವಾಮಿಯವರು ಒಟ್ಟು 18,142 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.