Tag: Dope Test

  • ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

    ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

    ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ವೇಟ್‍ಲಿಫ್ಟರ್ ಮೀರಾಬಾಯಿ ಅವರ ಬೆಳ್ಳಿ ಪದಕ ಇದೀಗ ಚಿನ್ನದ ಪದಕವಾಗುವ ಸಾಧ್ಯತೆಯೊಂದು ದಟ್ಟವಾಗಿದೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದಿದ್ದರು. ಆದರೆ ಇದೀಗ ಚೀನಾದ ಹೊ ಜಿಹೂಹು ಡೋಪಿಂಗ್ ಪರೀಕ್ಷೆಯಲ್ಲಿ ಫೈಲ್ ಆಗಿರುವುದರಿಂದಾಗಿ ಅವರು ಅನರ್ಹರಾಗಿ ಅವರ ಬಳಿಕ ದ್ವೀತಿಯ ಸ್ಥಾನ ಪಡೆದ ಮೀರಾಬಾಯಿಗೆ ಚಿನ್ನದ ಪದಕ ಸಿಗುವ ಕುರಿತು ವರದಿಯಾಗಿದೆ.

    ಟೋಕಿಯೋ ಒಲಿಂಪಿಕ್ಸ್ ಸಮಿತಿ ತಿಳಿಸಿರುವಂತೆ, ಹೊ ಜಿಹೂಹು ಮೊದಲ ಡೋಪಿಂಗ್ ಪರೀಕ್ಷೆಯಲ್ಲಿ ಫೈಲ್ ಆಗಿದ್ದು, ಅವರು ಸ್ಪರ್ಧೆಗು ಮುಂಚೆ ಯಾವುದಾದರು ಔಷಧಿಯನ್ನು ತೆಗೆದುಕೊಂಡಿದ್ದಾರಾ ಎಂದು ತಿಳಿಯಲು ಎರಡನೇ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಯಶಸ್ವಿಯಾಗಿ ತನ್ನ ಸ್ಪರ್ಧೆ ಮುಗಿಸಿರುವ ಮೀರಾಬಾಯಿ ಚಾನು ಇಂದು ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರು ಬರುತ್ತಿದ್ದಂತೆ ದೇಶದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. 84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್‍ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.

  • ಡೋಪ್ ಟೆಸ್ಟ್‌ಗೆ  ನಾನು ರೆಡಿ- ಆಪ್ ಮುಖಂಡನ ಚಾಲೆಂಜ್ ಸ್ವೀಕರಿಸಿದ ಪಂಜಾಬ್ ಸಿಎಂ

    ಡೋಪ್ ಟೆಸ್ಟ್‌ಗೆ ನಾನು ರೆಡಿ- ಆಪ್ ಮುಖಂಡನ ಚಾಲೆಂಜ್ ಸ್ವೀಕರಿಸಿದ ಪಂಜಾಬ್ ಸಿಎಂ

    ಚಂಡೀಗಢ: ಸರ್ಕಾರಿ ನೌಕರರಿಗೆ ಡೋಪ್ ಟೆಸ್ಟ್ ಕಡ್ಡಾಯಗೊಳಿಸಿ ಆದೇಶ ನೀಡಿದ ಬಳಿಕ ನಾನು ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.

    ಪಂಜಾಬ್ ರಾಜ್ಯವನ್ನು ಡಗ್ಸ್ ಮುಕ್ತ ರಾಜ್ಯವಾಗಿ ರೂಪಿಸಲು ಪಣತೊಟ್ಟಿರುವ ಸಿಎಂ ಅಮರಿಂದರ್ ಸಿಂಗ್ ಕಳೆದ ಎರಡು ದಿನಗಳ ಹಿಂದೆ ಎಲ್ಲಾ ಸರ್ಕಾರಿ ನೌಕರರಿಗೆ ಡೋಪಿಂಗ್ ಟೆಸ್ಟ್ ಕಡ್ಡಾಯ ಮಾಡಿ ಆದೇಶ ನೀಡಿದ್ದರು. ಆದರೆ ಸರ್ಕಾರದ ಈ ಆದೇಶಕ್ಕೆ ವಿರೋಧ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

    ಸದ್ಯ ತಾವು ಡೋಪಿಂಗ್ ಪರೀಕ್ಷೆ ಎದುರಿಸಲು ಸಿದ್ಧ ಎಂದು ವಿರೋಧಿ ಪಕ್ಷಗಳಿಗೆ ಟಾಂಗ್ ನೀಡಿರುವ ಸಿಎಂ ಅಮರಿಂದರ್ ಸಿಂಗ್, ಸರ್ಕಾರಿ ನೌಕರರು ಈ ಪರೀಕ್ಷೆ ಎದುರಿಸಲು ನಾನು ಮೊದಲು ಡೋಪಿಂಗ್ ಪರೀಕ್ಷೆ ಮಾಡಿಕೊಳ್ಳುತ್ತೇನೆ. ಈ ಮೂಲಕ ನೌಕರರಲ್ಲಿ ಇರುವ ಭಾವನೆಯನ್ನು ದೂರ ಮಾಡಲು ಯತ್ನಿಸಲು ಸಿದ್ಧ ಎಂದು ಹೇಳಿದ್ದಾರೆ.

    ಇದೇ ವೇಳೆ ರಾಜ್ಯದ ರಾಜಕೀಯ ಮುಖಂಡರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಇದುವರೆಗೂ ಯಾವೊಬ್ಬ ರಾಜಕೀಯ ನಾಯಕರು ಸಹ ಸ್ವತಃ ಡೋಪಿಂಗ್ ಪರೀಕ್ಷೆಗೆ ಒಳಗಾಗುವುದಾಗಿ ಕೈ ಎತ್ತಿಲ್ಲ. ನನ್ನ ಬಳಿಕವಾದರೂ ಶಾಸಕರು ಪರೀಕ್ಷೆ ಎದುರಿಸಲು ಸಿದ್ಧವಾದರೆ ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಸ್ವತಃ ಡೋಪ್ ಪರೀಕ್ಷೆಗೆ ಒಳಗಾಗಿದ್ದ ಆಪ್ ನಾಯಕ ಅಮನ್ ಆರೋರಾ ನೈತಿಕ ಮೌಲ್ಯದ ಮೇಲೆ ಪರೀಕ್ಷೆ ಎದುರಿಸಿದ್ದೇನೆ. ಸಾಧ್ಯವಾದರೆ ಸಿಎಂ ಹಾಗೂ ಆಡಳಿತ ಪಕ್ಷದ ಶಾಸಕರು ಪರೀಕ್ಷೆ ಎದುರಿಸಲಿ ಎಂದು ಚಾಲೆಂಜ್ ಮಾಡಿದ್ದರು. ಅಲ್ಲದೇ ಸರ್ಕಾರದ ನೀತಿಯ ವಿರುದ್ಧ ನನಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಇದು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಏಕೆ ಅನ್ವಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಏನಿದು ಡೋಪ್ ಟೆಸ್ಟ್ ಆದೇಶ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ಕಳ್ಳಸಾಗಣೆ ಕುರಿತು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿ, ಡ್ರಗ್ಸ್ ಕಳ್ಳಸಾಗಾಣೆ ಮಾಡುವವರಿಗೆ ಮರಣ ದಂಡನೆ ವಿಧಿಸುವ ನಿಯಮವನ್ನು ಜಾರಿಗೆ ತರುವ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಆದಾದ ಬಳಿಕ ಉಂಟಾದ ಬೆಳವಣಿಗೆಯಲ್ಲಿ ಸರ್ಕಾರಿ ನೌಕರರಿಗೆ ಎಲ್ಲರಿಗೂ ಡೋಪಿಂಗ್ ಪರೀಕ್ಷೆ ಕಡ್ಡಾಯಗೊಳಿಸಿದ್ದರು. ಪ್ರಮುಖವಾಗಿ ಸೇವೆಯ ವಿವಿಧ ಹಂತಗಳಲ್ಲಿ ಇದನ್ನು ನಿರಂತವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದರು. ಅಲ್ಲದೇ ಸರ್ಕಾರಿ ಸೇವೆ ಸೇರುವ ಹಾಗೂ ಭಡ್ತಿ ವೇಳೆಯೂ ಡೋಪಿಂಗ್ ಪರೀಕ್ಷೆ ಕಡ್ಡಾಯಗೊಳಿಸಿದ್ದರು.