Tag: donation

  • ಅಪ್ಪ ಅಮ್ಮ ನೀಡಿದ್ದ ಚಿಲ್ಲರೆ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಚಿಣ್ಣರು

    ಅಪ್ಪ ಅಮ್ಮ ನೀಡಿದ್ದ ಚಿಲ್ಲರೆ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಚಿಣ್ಣರು

    – ಐದು ಸಾವಿರಕ್ಕೂ ಅಧಿಕ ಹಣ ನೀಡಿದ ಸಹೋದರಿಯರು
    – ಚಿಣ್ಣರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ

    ಶಿವಮೊಗ್ಗ: ದೇಶಾದ್ಯಂತ ಜನ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಇದೆ ಹಾದಿಯಲ್ಲಿ ಸಾಗಿರುವ ಸಹೋದರಿಯರಿಬ್ಬರು ಅಪ್ಪ, ಅಮ್ಮ ಕೊಟ್ಟ ಹಣವನ್ನೆಲ್ಲ ಕೂಡಿಟ್ಟು ಇದೀಗ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ.

    ಶಿವಮೊಗ್ಗದ ಗಾಡಿಕೊಪ್ಪ ಬಡಾವಣೆಯ ಶಂಕರ್ ಮತ್ತು ನೇತ್ರಾವತಿಯ ದಂಪತಿಯ ಪುತ್ರಿಯರಾದ ಛಾಯಾಶ್ರೀ ಹಾಗೂ ಅನುಶ್ರೀ ದೇಣಿಗೆ ನೀಡಿರುವ ಸಹೋದರಿಯರು. ತಮ್ಮ ಹುಟ್ಟುಹಬ್ಬಕ್ಕೆ ಖರ್ಚಿಗೆಂದು ಅಪ್ಪ ಅಮ್ಮ ನೀಡಿದ ಹಣ ಮತ್ತು ಆಗಾಗ ಇತರೆ ವಸ್ತುಗಳ ಖರೀದಿ ಮತ್ತು ಖರ್ಚಿಗಾಗಿ ಹೆತ್ತವರು ನೀಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದರು. ಚಿಲ್ಲರೆ ಹಣವನ್ನು ಸಣ್ಣದೊಂದು ಅಕ್ವೇರಿಯಂನಲ್ಲಿ ಸಂಗ್ರಹಿಸಿ, ನೋಟುಗಳನ್ನು ಹುಂಡಿಯಲ್ಲಿ ಹಾಕಿ ಭದ್ರ ಮಾಡಿದ್ದರು. ಇದೀಗ ರಾಮ ಮಂದಿರಕ್ಕೆ ನಿಧಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ತಂದೆ ಶಂಕರ್ ಜೀವನ ನಿರ್ವಹಣೆಗಾಗಿ ಪೈಂಟರ್ ಕೆಲಸ ಮಾಡುತ್ತಿದ್ದರೆ ತಾಯಿ ನೇತ್ರಾವತಿ ಗೃಹಿಣಿಯಾಗಿದ್ದು, ಛಾಯಾಶ್ರೀ ಹಾಗೂ ಅನುಶ್ರೀ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಜೊತೆಗೆ ತಮಗೆ ಬೇಕಾದಾಗ ಖರ್ಚು ಸಹ ಮಾಡುತ್ತಿದ್ದರು. ಆದರೆ ಯಾವಾಗ ರಾಮ ಮಂದಿರ ನಿರ್ಮಾಣ ಮಾಡುತ್ತಾರೆ ಎಂಬ ವಿಷಯ ತಿಳಿದ ಮೇಲೆ ಅಂದಿನಿಂದ ಈ ಚಿಣ್ಣರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕು ಎಂದು ನಿರ್ಧರಿಸಿ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿದ್ದರು.

    ಇದುವರೆಗೆ ಐದು ಸಾವಿರಕ್ಕೂ ಅಧಿಕ ಹಣ ಸಂಗ್ರಹಿಸಿದ್ದು ಈ ಹಣವನ್ನು ಸಚಿವ ಕೆ.ಎಸ್.ಈಶ್ವರಪ್ಪ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಅರ್ಪಣೆ ಮಾಡಿದ್ದಾರೆ. ಚಿಣ್ಣರ ಈ ಕಾರ್ಯಕ್ಕೆ ಸಚಿವ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ- 2ರ ಬಾಲಕನಿಂದ ಮಾನವೀಯತೆ ಕಾರ್ಯ

    ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ- 2ರ ಬಾಲಕನಿಂದ ಮಾನವೀಯತೆ ಕಾರ್ಯ

    ಅಬುಧಾಬಿ: 2 ವರ್ಷದ ಬಾಲಕ ತನ್ನ ಕೇಶರಾಶಿಯನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.

    ತಕ್ಷ್ ಜೈನ್(2) ಕೂದಲು ದಾನ ಮಾಡಿದ ಬಾಲಕ. ಫ್ರೆಂಡ್ಸ್ ಆಫ್ ಕ್ಯಾನ್ಸ್‍ರ್ ಪೇಷೆಂಟ್ ಹೆಸರಿನ ಚ್ಯಾರಿಟಿ ಕೂದಲು ದಾನ ಮಾಡಿ ಎನ್ನುವ ಆಂದೋಲನವನ್ನು ಆರಂಭಿಸಿತ್ತು. ಈ ಆಂದೋಲನಕ್ಕೆ ಪುಟ್ಟ ಬಾಲಕ ತನ್ನ ಕೇಶವನ್ನು ದಾನ ಕೊಡುವ ಮೂಲಕವಾಗಿ ಬೆಂಬಲ ಸೂಚಿಸಿದ್ದಾನೆ.

    ಭಾರತ ಮೂಲದ ತಕ್ಷ್ ಯುಎಇ ನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೂದಲನ್ನು ದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗುವ ಮೂಲಕ ಮಾದರಿಯಾಗಿದ್ದಾನೆ. ಕ್ಯಾನ್ಸರ್ ರೋಗಿಗಳಿಗೆ ಕೂದಲು ನೀಡಿದ ಸಣ್ಣ ವಯಸ್ಸಿನ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

    2019ರಲ್ಲಿ ತಕ್ಷ್ ಸಹೋದರಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಳು. ಇದರಿಂದ ಸ್ಫೂರ್ತಿ ಪಡೆದ ತಕ್ಷ್ ನಾನು ಕೂದಲು ನೀಡುತ್ತೇನೆ ಎಂದು ಹೇಳುತ್ತಿದ್ದನು. ಸದ್ಯ ಬಾಲಕ ಕೂದಲು ದಾನ ಮಾಡಿದ್ದು, ಇದರಿಂದ ನಮಗೆ ಖುಷಿ ತಂದಿದೆ ಎಂದು ತಕ್ಷ್ ಪೋಷಕರು ಹೇಳಿದ್ದಾರೆ.

  • ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಪಿಎಂ ಕೇರ್ಸ್ ಫಂಡ್ ಕುರಿತು ಹಲವು ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಪಿಎಂ ಕೇರ್ಸ್ ಫಂಡ್‍ಗೆ 2.25 ಲಕ್ಷ ರೂ. ದಾನ ನೀಡಿದ್ದಾರೆ. ಅಲ್ಲದೆ ಈವರೆಗೆ ಪ್ರಧಾನಿ ಮೋದಿ ದೇಶಕ್ಕಾಗಿ 103 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬುಧವಾರವಷ್ಟೇ ಪಿಎಂ ಕೇರ್ಸ್ ಫಂಡ್‍ನ ಆಡಿಟ್ ರಿಪೋರ್ಟ್ ನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ 2.25 ಲಕ್ಷ ರೂ.ಗಳನ್ನು ದಾನ ನೀಡಿರುವುದು ಬೆಳಕಿಗೆ ಬಂದಿದೆ.

    ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಮಾರ್ಚ್ 27ರಂದು ಪಿಎಂ ಕೇರ್ಸ್ ಫಂಡ್ ರಚಿಸಿತ್ತು. ಈ ಮೂಲಕ ದಾನಿಗಳಿಂದ ಸಹಾಯ ಕೋರಿತ್ತು. ಇದಕ್ಕೆ ದೇಶಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿ ಹಲವು ಗಣ್ಯರು, ನಟ, ನಟಿಯರು ಸೇರಿ ವಿವಿಧ ಕ್ಷೇತ್ರದ ಶ್ರೀಮಂತರು ಸಹಾಯ ಮಾಡಿದ್ದರು. ಈ ಮೂಲಕ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದರು.

    ಪ್ರಧಾನಿ ಮೋದಿಯವರ 2.25 ಲಕ್ಷ ರೂ. ಹೊರತುಪಡಿಸಿ, ಪಿಎಂ ಕೇರ್ಸ್ ರಚಿಸಿದ ಐದೇ ದಿನಗಳಲ್ಲಿ ಬರೋಬ್ಬರಿ 3,076 ಕೋಟಿ ರೂ. ಸಂಗ್ರಹವಾಗಿತ್ತು. ಇದಕ್ಕಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಸ್ಮೃತಿ ಇರಾನಿ ಸೇರಿ ಬಿಜೆಪಿಯ ಬಹುತೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಮೊದಲಲ್ಲ ಈ ಹಿಂದೆ ಸಹ ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ಹಲವು ಬಾರಿ ದಾನ ನೀಡಿದ್ದಾರೆ. ಈ ಮೂಲಕ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ.

    ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕ್ರಮಗಳಿಂದ ಹಿಡಿದು, ಸ್ವಚ್ಛ ಗಂಗಾ(ಕ್ಲೀನ್ ಗಂಗಾ) ಯೋಜನೆಯವರೆಗೆ ಕೊಡುಗೆ ನೀಡಿದ್ದಾರೆ. ಅಲ್ಲದೆ ದೇಶದ ದೀನ ದಲಿತರ ಉದ್ಧಾರಕ್ಕೂ ಹಣ ನೀಡಿದ್ದಾರೆ. ಹೀಗೆ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ದಾನ ನೀಡಿದ್ದು, ಇದರ ಒಟ್ಟು ಮೊತ್ತ 103 ಕೋಟಿ ರೂ.ಗೂ ಅಧಿಕವಾಗಿದೆ. 2019ರಲ್ಲಿ ಕುಂಭ ಮೇಳದ ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಉಳಿತಾಯದ ನಿಧಿಯಿಂದ 21 ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ.

    ದಕ್ಷಿಣ ಕೋರಿಯಾ ನೀಡಿದ ಸಿಯೋಲ್ ಶಾಂತಿ ಪ್ರಶಸ್ತಿಯ ಒಟ್ಟು 1.3 ಕೋಟಿ ರೂ.ಗಳ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ನೀಡಿದ್ದರು. ಈ ಮೂಲಕ ನದಿಯನ್ನು ಸ್ವಚ್ಛಗೊಳಿಸಲು ತಮ್ಮದೆಯಾದ ಕೊಡುಗೆ ನೀಡಿದ್ದರು.

    ಪ್ರಧಾನಿ ಮೋದಿ ತಮಗೆ ನೀಡಿದ ಮೊಮೊಂಟೋಗಳನ್ನು ಹರಾಜು ಹಾಕಿದ್ದು, ಇದರಿಂದ 3.40 ಕೋಟಿ ರೂ. ಸಂಗ್ರಹವಾಗಿತ್ತು. ಇದರ ಸಂಪೂರ್ಣ ಮೊತ್ತವನ್ನು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‍ಗೆ ದಾನವಾಗಿ ನೀಡಿದ್ದಾರೆ. ಅಲ್ಲದೆ ಹೆಚ್ಚುವರಿಯಾಗಿ 2015ರ ವರೆಗೆ ತಮಗೆ ಬಂದ ಉಡುಗೊರೆ ಹಾಗೂ ಮೊಮೆಂಟೋಗಳನ್ನು ಹಾರಾಜು ಮಾಡಿದ್ದು, ಇದರಿಂದ ಸಹ 8.35 ಕೋಟಿ ರೂ.ಸಂಗ್ರಹವಾಗಿದೆ. ಇದರ ಸಂಪೂರ್ಣ ಮೊತ್ತವನ್ನು ಸಹ ನಮಾಮಿ ಗಂಗಾ ಯೋಜನೆಗೆ ನೀಡಿದ್ದಾರೆ.

    ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಂಡ ಬಳಿಕ 21 ಲಕ್ಷ ರೂ.ಗಳ ತಮ್ಮ ವೈಯಕ್ತಿಕ ಉಳಿತಾಯದ ಹಣವನ್ನು ಗುಜರಾತ್‍ನ ಸರ್ಕಾರಿ ಸಿಬ್ಬಂದಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದರು. ಮುಖ್ಯಮಂತ್ರಿಯಾಗಿದ್ದಾಗ ತಮಗೆ ನೀಡಿದ ಎಲ್ಲ ಉಡುಗೊರೆಗಳನ್ನು ಹರಾಜು ಮಾಡಿದಾಗ ಬಂದ ಒಟ್ಟು 89.96 ಕೋಟಿ ರೂ.ಗಳನ್ನು ಕನ್ಯಾ ಕೇಲವಾನಿ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ ಇತರ ನಾಯಕರಿಗೆ ಮಾದರಿಯಾಗಿದ್ದಾರೆ.

  • ತನ್ನ ಪ್ರತಿ ಸೆಂಚುರಿಗೆ ಲಕ್ಷ ರೂ. ಸೇರಿಸಿ ದೇಣಿಗೆ ಕೊಟ್ಟ ಗವಾಸ್ಕರ್

    ತನ್ನ ಪ್ರತಿ ಸೆಂಚುರಿಗೆ ಲಕ್ಷ ರೂ. ಸೇರಿಸಿ ದೇಣಿಗೆ ಕೊಟ್ಟ ಗವಾಸ್ಕರ್

    ಮುಂಬೈ: ಟೀಂ ಇಂಡಿಯಾ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ 59 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

    ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಎಂ.ಎಸ್.ಧೋನಿ ಸೇರಿದಂತೆ ಅನೇಕ ಕ್ರಿಕೆಟಿಗರು, ಸ್ಟಾರ್ ಸಿನಿಮಾ ನಟರು ರೌಂಡ್ ಫಿಗರ್ ಮೊತ್ತವನ್ನು ಪಿಎಂ-ಕೇರ್ಸ್ ಫಂಡ್‍ಗೆ ದೇಣಿಗೆ ನೀಡಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಅವರು ಮಾತ್ರ ಏಕೆ 59 ಲಕ್ಷ ರೂ.ಗಳನ್ನ ನೀಡಿದ್ದರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಗವಾಸ್ಕರ್ ಏಕೆ 59 ಲಕ್ಷ ರೂ.ಗಳನ್ನು ನೀಡಿದ್ದಾರೆ ಎಂದು ಅವರ ಪುತ್ರ ರೋಹನ್ ಗವಾಸ್ಕರ್ ರಿವೀಲ್ ಮಾಡಿದ್ದಾರೆ.

    ಸುನಿಲ್ ಗವಾಸ್ಕರ್ ನೀಡಿರುವ 59 ಲಕ್ಷ ರೂ. ದೇಣಿಗೆಯಲ್ಲಿ 35 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಹಾಗೂ ಉಳಿದ 24 ಲಕ್ಷ ರೂ.ಗಳನ್ನು ಪ್ರಧಾನಿಗಳ ನಿಧಿಗೆ ನೀಡಿದ್ದಾರೆ. ಈ ದೇಣಿಗೆ ಹಿಂದಿರುವ ಕಥೆಯನ್ನು ರಿವೀಲ್ ಮಾಡಿರುವ ರೋಹನ್ ಅವರು, ಭಾರತದ ಪರ 1971ರಿಂದ 1987ರವರೆಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದ ಗವಾಸ್ಕರ್ 35 ಶತಕ ಸಿಡಿಸಿದ್ದರು. ಅಲ್ಲದೇ ಮುಂಬೈ ಪರ ಆಡಿದ್ದ ಪಂದ್ಯಗಳಲ್ಲಿ 24 ಶತಕಗಳನ್ನು ಗವಾಸ್ಕರ್ ಸಿಡಿಸಿದ್ದರು. ಪರಿಣಾಮ ಈ ಶತಕಗಳ ಅನ್ವಯ ಗವಾಸ್ಕರ್ ದೇಣಿಗೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ 3 ಕೋಟಿ ರೂ., ರೋಹಿತ್ ಶರ್ಮಾ 80 ಲಕ್ಷ ರೂ., ರೈನಾ 52 ಲಕ್ಷ ರೂ. ಸಚಿನ್ 50 ಲಕ್ಷ ರೂ., ರಹಾನೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಇತ್ತ ಚೇತೇಶ್ವರ ಪೂಜಾರ ಕೂಡ ದೇಣಿಗೆ ನೀಡಿದ್ದು, ಆದರೆ ಎಷ್ಟು ಮೊತ್ತವನ್ನು ನೀಡಿದ್ದಾರೆ ಎಂದು ಮಾತ್ರ ತಿಳಿಸಿಲ್ಲ.

    ಭಾರತದ ಪರ 124 ಟೆಸ್ಟ್ ಪಂದ್ಯಗಳನ್ನು ಆಡಿರುವ ಗವಾಸ್ಕರ್ 34 ಶತಕ ಸಿಡಿಸಿದ್ದಾರೆ. ಈ ವೇಳೆಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಗವಾಸ್ಕರ್ ನಿರ್ಮಿಸಿದ್ದರು. ಬರೋಬ್ಬರಿ 29 ವರ್ಷಗಳ ಬಳಿಕ ಸಚಿನ್ 2005 ರಲ್ಲಿ ಈ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಉಳಿದಂತೆ ಗವಾಸ್ಕರ್ ಆಡಿರುವ 108 ಏಕದಿನ ಪಂದ್ಯಗಳಲ್ಲಿ 1 ಶತಕ ಗಳಿಸಿದ್ದಾರೆ.

  • ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಬೆಂಗಳೂರು: ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ಸಹಾಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ನೆರವಾಗುತ್ತಿದ್ದಾರೆ.

    ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ ಮಂಗಳಮುಖಿಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಲ್ಲದೆ ಲಾಕ್‍ಡೌನ್ ಸುಳಿಗೆ ಹಲವು ದಿನಗೂಲಿ ಕಾರ್ಮಿಕರು ಸಹ ಸಿಲುಕಿಕೊಂಡಿದ್ದಾರೆ. ಅಂತಹವರಿಗೆ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

    ಮಂಗಳಮುಖಿಯರು ಹಾಗೂ ಬಡವರನ್ನು ಹುಡುಕಿಕೊಂಡು ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ನಟಿ ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ವಿಶೇಷವಾಗಿ ಮಂಗಳ ಮುಖಿಯರಿಗೆ ರಾಧಿಕಾ, ದಿನಸಿ ಹಂಚಿದ್ದಾರೆ.

    ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದು, ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇನ್ನೂ ಕೆಲವರು ನೇರವಾಗಿ ಸಿನಿಮಾ ದಿನಗೂಲಿ ಕಾರ್ಮಿಕರು ಹಾಗೂ ಬಡವರ ಖಾತೆಗೆ ನೇರವಾಗಿ ಹಣ ಹಾಕಿದ್ದಾರೆ. ಇನ್ನೂ ಹಲವರು ಅಗತ್ಯ ಇರುವವರ ಮನೆಗಳಿಗೆ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

  • ಲಕ್ಷಗಟ್ಟಲೆ ಡೊನೇಷನ್ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಬಿಎಂಪಿ ಬಿಗ್ ಶಾಕ್

    ಲಕ್ಷಗಟ್ಟಲೆ ಡೊನೇಷನ್ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಬಿಎಂಪಿ ಬಿಗ್ ಶಾಕ್

    ಬೆಂಗಳೂರು: ಲಕ್ಷಗಟ್ಟಲೆ ಡೊನೇಷನ್ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಗ್ ಶಾಕ್ ನೀಡಲು ಬಿಬಿಎಂಪಿ ಮುಂದಾಗಿದೆ.

     ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಕಾಯ್ದೆ 110 ಜಿ ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ಮತ್ತಿತರ ಸವಲತ್ತುಗಳ ವಿನಾಯ್ತಿ ಪಡೆದಿದ್ದರೂ ಲಕ್ಷಾಂತರ ಡೊನೇಷನ್ ಪಡೆಯುತ್ತಿವೆ. ಇಂತಹ ಸುಮಾರು 3,000ಕ್ಕೂ ಅಧಿಕ ಶಾಲಾಕಾಲೇಜುಗಳ ಮಾಹಿತಿ ಬಿಬಿಎಂಪಿ ಸಂಗ್ರಹಿಸಿದೆ. ಅಧಿಕ ಡೊನೇಷನ್ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಲು ಪಾಲಿಕೆ ಅಧಿಕಾರಿಗಳು ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಮೇಯರ್ ಗೌತಮ್‍ಕುಮಾರ್ ಜೈನ್ ಶಿಕ್ಷಣ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸುವ ಪ್ರಸ್ತಾವನೆಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರ ಮುಂದೆ ಸಲ್ಲಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಸರ್ಕಾರ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದರೆ ಬಿಬಿಎಂಪಿ ಖಜಾನೆಗೆ 50ರಿಂದ 80 ಕೋಟಿ ರೂ. ಆದಾಯ ಹರಿದುಬರಲಿದೆ ಎಂದು ನಿರೀಕ್ಷಿಸಲಾಗಿದೆ.

    ಖಾಸಗಿ ವಿದ್ಯಾಸಂಸ್ಥೆಗಳು ಬಿಬಿಎಂಪಿ, ಸರ್ಕಾರದಿಂದ ತೆರಿಗೆ ವಿನಾಯ್ತಿ ಹಾಗೂ ಸವಲತ್ತುಗಳನ್ನು ಪಡೆದು ವಿದ್ಯಾರ್ಥಿಗಳಿಂದ ಡೊನೇಶನ್ ಪೀಕುತ್ತಿವೆ. ಹೀಗಾಗಿ ಇಂತಹ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿಧಿಸುವುದು ಸೂಕ್ತ ಎಂಬುದು ಬಿಬಿಎಂಪಿಯ ಲೆಕ್ಕಾಚಾರವಾಗಿದೆ.

  • ನಿಶ್ಚಿತಾರ್ಥ ನಿಲ್ಲಿಸಿ ಬಾಂಗ್ಲಾದಿಂದ ಬೆಂಗ್ಳೂರಿಗೆ ಬಂದು ಮಗಳಿಂದ ತಾಯಿಗೆ ಕಿಡ್ನಿ ದಾನ

    ನಿಶ್ಚಿತಾರ್ಥ ನಿಲ್ಲಿಸಿ ಬಾಂಗ್ಲಾದಿಂದ ಬೆಂಗ್ಳೂರಿಗೆ ಬಂದು ಮಗಳಿಂದ ತಾಯಿಗೆ ಕಿಡ್ನಿ ದಾನ

    ಬೆಂಗಳೂರು: ಇತ್ತೀಚೆಗೆ ಗೆಳೆಯನ ಜೊತೆ ಸೇರಿಕೊಂಡು ಮಗಳೇ ತಂದೆಯನ್ನು ಕೊಲೆ ಮಾಡಿರುವ ಘಟನೆ ನಡೆದಿತ್ತು. ಆದರೆ ಇಲ್ಲೊಬ್ಬ ಮಗಳು ತನ್ನ ತಾಯಿಗಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಿಲ್ಲಿಸಿ ಬಾಂಗ್ಲಾದೇಶದಿಂದ ನಗರಕ್ಕೆ ಬಂದು ಕಿಡ್ನಿ ದಾನ ಮಾಡಿದ್ದಾಳೆ.

    ಸೊರ್ಬೋಜಯ ಸಿತಿ ದೇಬ್(26) ತಾಯಿಗೆ ಕಿಡ್ನಿ ದಾನ ಮಾಡಿದ ಮಗಳು. ದೇಬ್ ತಾನು ಮದುವೆಯಾಗುವ ಹುಡುಗನ ವಿರೋಧದ ನಡುವೆಯೂ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ತಾಯಿ ಶಿಖಾ ರಾಣಿಗೆ ತನ್ನದೊಂದು ಕಿಡ್ನಿ ದಾನ ಮಾಡಿದ್ದಾಳೆ. ಈ ಮೂಲಕ ತಾಯಿಯ ಪ್ರಾಣ ಉಳಿಸಿದ್ದಾಳೆ. “ತಾಯಿ ಇಲ್ಲದೆ ನನ್ನ ಜೀವನವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲಿಗೆ ಅಮ್ಮ ಇದಕ್ಕೆ ಒಪ್ಪಿರಲಿಲ್ಲ. ಕೊನೆಗೆ ಅವರನ್ನು ಒಪ್ಪಿಸಲು ಒಂದು ವರ್ಷ ಬೇಕಾಯಿತು” ಎಂದು ಓಲ್ಡ್ ಏರ್‌ಪೋರ್ಟ್‌ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ತಾಯಿ ಜೊತೆಗೆ ಚೇತರಿಸಿಕೊಳ್ಳುತ್ತಿರುವ ಮಗಳು ವೇಬ್ ತಿಳಿಸಿದ್ದಾಳೆ. ಇದನ್ನೂ ಓದಿ: ತಾಯಿಯಿಂದಲೇ ಮಗ ದಗ್ಗುಬಾಟಿಗೆ ಕಿಡ್ನಿ ದಾನ

    “ನನ್ನ ತಾಯಿ ತಾನು ಕಿಡ್ನಿ ಸಮಸ್ಯೆಯಿಂದ ಸಾಯುತ್ತೇನೆಂದು ನನ್ನ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು. ಆದರೆ ಅವರು ಕಿಡ್ನಿ ಪಡೆಯಲು ಒಪ್ಪಿದ ನಂತರ, ನಾನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದ ಹುಡುಗನ ಕುಟುಂಬಕ್ಕೆ ನನ್ನ ನಿರ್ಧಾರವನ್ನು ತಿಳಿಸಿದೆ. ಆದರೆ ಇದಕ್ಕೆ ಅವರು ಒಪ್ಪಲಿಲ್ಲ. ಕೊನೆಗೆ ನಾನು ನಿಶ್ಚಿತಾರ್ಥ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಯಾಕೆಂದರೆ ನನ್ನ ತಾಯಿಗಿಂತ ನನಗೆ ಬೇರೆನೂ ಮುಖ್ಯವಲ್ಲ” ಎಂದು ಹೇಳಿದ್ದಾಳೆ. ಇದನ್ನೂ ಓದಿ: ಈ ತಾಯಿ ತನ್ನ ಮಗಳಿಗಾಗಿ ಮಾಡಿದ ತ್ಯಾಗಕ್ಕೆ ಮಹಿಳಾ ದಿನಾಚರಣೆಯಂದು ಸನ್ಮಾನ

    ಇದೊಂದು ಅಪರೂಪದ ಸಂಗತಿಯಾಗಿದೆ, ಯಾಕೆಂದರೆ ಸಾಮಾನ್ಯವಾಗಿ ಮಹಿಳೆಯರು ತಮ್ಮ ಅಂಗಾಂಗಗಳನ್ನು ದಾನ ಮಾಡುತ್ತಾರೆ. ಆದರೆ ಅವಿವಾಹಿತ ಯುವತಿಯ ಕಿಡ್ನಿ ದಾನಕ್ಕೆ ಒಪ್ಪುವುದಿಲ್ಲ. ಇದರಿಂದ ಭವಿಷ್ಯದಲ್ಲಿ ಅವರ ಆರೋಗ್ಯದ ಪರಿಣಾಮ ಬೀರುತ್ತದೆ ಎಂದು ಯಾರು ಒಪ್ಪುವುದಿಲ್ಲ. ದೇಬ್ ಕಿಡ್ನಿ ದಾನ ಮಾಡಲು ನಿರ್ಧರಿಸಿದಾಗ ಆಕೆಯ ಜೊತೆ ಅನೇಕ ಬಾರಿ ಸಮಾಲೋಚನೆ ನಡೆಸಿದ್ದೇನೆ. ನಂತರ ನಾವು ಕಿಡ್ನಿ ದಾನ ಮಾಡಲು ಒಪ್ಪಿಕೊಳ್ಳಲಾಯಿತು. ಅಂತಹ ಮಗಳನ್ನು ಪಡೆದ ಪೋಷಕರನ್ನು ಅಭಿನಂದಿಸುವುದಾಗಿ ನೆಪ್ರೋಲಾಜಿಸ್ಟ್ ಡಾ. ಶಂಕರನ್ ಸುಂದರ್ ತಿಳಿಸಿದ್ದಾರೆ.

    2015 ರಲ್ಲಿ ಶಿಖಾ ರಾಣಿಗೆ ಬಾಂಗ್ಲಾದೇಶದಲ್ಲಿ ಕಿಡ್ನಿ ಕಾಯಿಲೆ ಕಂಡು ಬಂದಿತ್ತು. ನಂತರ ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ತೋರಿಸಲಾಗಿತ್ತು. ವೈದ್ಯರು ಅವರಿಗೆ ಕಿಡ್ನಿ ಬದಲಾಯಿಸಬೇಕೆಂದು ಸೂಚಿಸಿದ್ದರು. ಆದರೆ ಹಣದ ಕೊರತೆಯಿಂದ ದಾನಿಗಳು ಸಿಗಲಿಲ್ಲ. ಕೊನೆಗೆ 2018 ರಲ್ಲಿ ದಂಪತಿಯ ಕಿರಿಯ ಮಗಳಾದ ವೇಬ್ ಕಿಡ್ನಿಯನ್ನು ದಾನ ಮಾಡಲು ನಿರ್ಧರಿಸಿದ್ದಳು. ಈಗ ತಾಯಿ ಮತ್ತು ಮಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ.

  • ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ- 2 ಕೋಟಿ ನೆರವು ನೀಡಲು ಮುಂದಾದ ಅಕ್ಷಯ್ ಕುಮಾರ್

    ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ- 2 ಕೋಟಿ ನೆರವು ನೀಡಲು ಮುಂದಾದ ಅಕ್ಷಯ್ ಕುಮಾರ್

    ನವದೆಹಲಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂಗೆ ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂಪಾಯಿಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಲು ಮುಂದಾಗಿದ್ದಾರೆ.

    ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಘೋಷಿಸಿಕೊಂಡಿರುವ ಅಕ್ಷಯ್ ಕುಮಾರ್, ಅಸ್ಸಾಂನಲ್ಲಿ ಪ್ರವಾಹದಿಂದ ಎದುರಾಗಿರುವ ಪರಿಸ್ಥಿತಿ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಪ್ರವಾಹ ಪೀಡಿತರಾದ ಎಲ್ಲಾ ಮನುಷ್ಯರು ಹಾಗೂ ಪ್ರಾಣಿಗಳು, ಈ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಅರ್ಹ. ಆದ್ದರಿಂದ ನಾನು ಸಿಎಂ ಪರಿಹಾರ ನಿಧಿಗೆ ಹಾಗೂ ಕಾಜಿರಂಗ ಪಾರ್ಕ್ ರಕ್ಷಣೆಗೆ ತಲಾ ಒಂದು ಕೋಟಿ ರೂ. ದಾನ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡ ಸಂತ್ರಸ್ಥರಿಗೆ ಸಹಾಯ ಹಸ್ತಚಾಚಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇತ್ತ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳದಲ್ಲಿ ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂಗೆ ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದು, ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

    ಬ್ರಹ್ಮಪುತ್ರ ನದಿಯ ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಭೂಕುಸಿತವಾಗಿ ಈವೆರೆಗೆ 15 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಪ್ರವಾಹದಿಂದ 46 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿದ್ದಾರೆ. ಕಾಜಿರಂಗದಲ್ಲಿ 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳ ಮೇಲೆ ಪ್ರವಾಹ ಪರಿಣಾಮ ಬೀರಿದೆ.

    ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇ.90ರಷ್ಟು ಭಾಗವು ಜಲಾವೃತವಾಗಿದೆ ಎನ್ನಲಾಗಿದೆ. ಅಲ್ಲದೆ ಪ್ರಾಣಿಗಳು ಸುರಕ್ಷಿತ ಸ್ಥಳವನ್ನು ಹುಡುಕಿ ಸಾಗುವಾಗ ಹೆದ್ದಾರಿ ಮೇಲೆ ಹೋಗುತ್ತದೆ. ಹೀಗಾಗಿ ಉದ್ಯಾನವನವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಸವಾರರು ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಅಸ್ಸಂನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸುಮಾರು 4,175 ಹಳ್ಳಿಗಳು ಜಲಾವೃತಗೊಂಡಿದ್ದು, ಸುಮಾರು 90 ಸಾವಿರ ಹೆಕ್ಟರ್ ಕೃಷಿ ಭೂಮಿ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ.

  • ಡೊನೇಷನ್ ಕಟ್ಟದ್ದಕ್ಕೆ ಆರ್‌ಟಿಇ ಅಡಿ ಸೇರಿದ್ದ ವಿದ್ಯಾರ್ಥಿನಿ ಶಾಲೆಯಿಂದಲೇ ಔಟ್

    ಡೊನೇಷನ್ ಕಟ್ಟದ್ದಕ್ಕೆ ಆರ್‌ಟಿಇ ಅಡಿ ಸೇರಿದ್ದ ವಿದ್ಯಾರ್ಥಿನಿ ಶಾಲೆಯಿಂದಲೇ ಔಟ್

    ರಾಮನಗರ: ಆರ್‌ಟಿಇ ಕಾಯ್ದೆಯಡಿ ನಾಲ್ಕು ವರ್ಷಗಳ ಕಾಲ ಶಾಲೆಯಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯೋರ್ವಳನ್ನು ಡೊನೇಷನ್ ಕಟ್ಟಲಿಲ್ಲವೆಂದು ಶಾಲೆಯಿಂದ ಹೊರಹಾಕಿದ ಅಮಾನವೀಯ ಘಟನೆ ರಾಮನಗರದಲ್ಲಿ ನಡೆದಿದೆ.

    ನಗರದ ಖಾಸಗಿ ಶಾಲೆ ಶರತ್ ಮೆಮೋರಿಯಲ್ ಆಂಗ್ಲ ಶಾಲೆಯಲ್ಲಿ ಐದನೇ ತರಗತಿ ವ್ಯಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಲಾವಣ್ಯಳನ್ನು ಶಾಲೆಯಿಂದ ಹೊರಹಾಕಲಾಗಿದೆ. ಅಂದಹಾಗೇ ಹುಟ್ಟಿದಾಗಲೇ ಹೆತ್ತವರಿಂದ ದೂರವಾಗಿರುವ ಬಾಲಕಿಯನ್ನು ನಗರದ ಚಂದ್ರಮ್ಮ ಎಂಬುವವರು ಸಾಕಿ ಬೆಳೆಸುತ್ತಿದ್ದಾರೆ. ಮಗಳಿಗೆ ಯಾವುದೇ ಕೊರತೆಯಾಗದಂತೆ ಆರ್‌ಟಿಇ ಅಡಿಯಲ್ಲಿ ಶರತ್ ಮೆಮೋರಿಯಲ್ ಶಾಲೆಗೆ ಚಂದ್ರಮ್ಮ ದಾಖಲಿಸಿದ್ದಾರೆ. ಆದರೆ ಉಚಿತ ಶಿಕ್ಷಣದ ಸೀಟು ಪಡೆದಿದ್ದರೂ ಶಾಲಾ ಮಂಡಳಿ ವಿದ್ಯಾರ್ಥಿನಿ ಬಳಿ ಡೊನೇಷನ್ ಕೇಳಿದೆ.

    ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ನೀಡಿರುವ ಶಾಲಾ ಆಡಳಿತ ಮಂಡಳಿ ಇದೀಗ 25,500 ರೂಪಾಯಿ ಶಾಲಾ ಶುಲ್ಕ ಕಟ್ಟಿ, ಪರೀಕ್ಷಾ ಶುಲ್ಕ ಹಾಗೂ ಸಮವಸ್ತ್ರದ ಶುಲ್ಕ ಕಟ್ಟಿ ಎನ್ನುತ್ತಿದೆ. ಹಣ ಕಟ್ಟಲು ಸಾಮರ್ಥ್ಯವಿಲ್ಲದ ಚಂದ್ರಮ್ಮ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಣ ಕಟ್ಟಿ ಆಮೇಲೆ ನಿಮ್ಮ ಲಾವಣ್ಯಳನ್ನು ಶಾಲೆಗೆ ಕಳುಹಿಸಿ ಎಂದು ಶಾಲಾ ಸಿಬ್ಬಂದಿ ಹೇಳಿದ್ದಾರೆ.

    ಅಷ್ಟೇ ಅಲ್ಲದೆ 5 ಸಾವಿರ ಕಟ್ಟಿ ಟಿಸಿ ತೆಗೆದುಕೊಂಡು ಹೋಗಿ ಎಂದು ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯ ಕೈ ಬಿಟ್ಟಿದೆ. ವಿದ್ಯಾರ್ಥಿನಿಯ ಭವಿಷ್ಯ ರೂಪಿಸುವ ಶಾಲೆ ಈಗ ಆಕೆಯ ಭವಿಷ್ಯಕ್ಕೆ ಮುಳುವಾಗಿ ನಿಂತಿದೆ. ದೇವರು ವರ ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವಂತೆ, ಸರ್ಕಾರ ಆರ್‌ಟಿಇ ಅಡಿ ಉಚಿತ ಸೀಟು ನೀಡಿದ್ದರೂ ಖಾಸಗಿ ಶಾಲೆ ಮಾತ್ರ ಇದಕ್ಕೆ ಒಪ್ಪದೇ ಹಣದ ಹಿಂದೆ ಬಿದ್ದಿದೆ.

    ಈ ರೀತಿ ಜಿಲ್ಲೆಯಲ್ಲಿ ಆರ್‌ಟಿಇ ಮಕ್ಕಳಿಂದಲೂ ಹಣ ವಸೂಲಿ ಮಾಡುತ್ತಿದ್ದರೂ ಅಧಿಕಾರಿಗಳು ಯಾವುದಕ್ಕೂ ಕೂಡಾ ಕ್ಯಾರೇ ಎನ್ನದೆ ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ.

  • ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಜೈಪುರ: ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸರ್ಕಾರ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಆದರೆ ರಾಜಸ್ಥಾನದ ಅಜ್ಮೇರ್‍ದಲ್ಲಿ ಬದುಕಿದ್ದಾಗ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ ಅಜ್ಜಿಯೊಬ್ಬರ ಹಣವೂ ಈಗ ಯೋಧರ ಕುಟುಂಬಕ್ಕೆ ಸಹಾಯವಾಗಿದೆ.

    ಭಿಕ್ಷುಕಿ ನಂದಿನಿ ಶರ್ಮಾ ಸಂಪಾದನೆ ಮಾಡಿದ್ದ ಹಣವನ್ನು ಈಗ ಹುತಾತ್ಮರ ಕುಟುಂಬಕ್ಕೆ ನೀಡಲಾಗಿದೆ. ನಂದಿನಿ ಶರ್ಮಾ 2018 ಆಗಸ್ಟ್ ರಲ್ಲಿ ಮೃತಪಟ್ಟಿದ್ದು, ಮೃತಪಡುವುದಕ್ಕೂ ಮೊದಲು ನನ್ನ ಬಳಿ ಇರುವ ಹಣವನ್ನು ದೇಶ ಮತ್ತು ಸಮಾಜಕ್ಕಾಗಿ ಬಳಸಬೇಕೆಂಬುದು ಹೇಳಿಕೊಂಡಿದ್ದರಂತೆ. ಹೀಗಾಗಿ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ 6.61 ಲಕ್ಷ ಹಣವನ್ನು ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ್ದ ಕುಟುಂಬದವರಿಗೆ ನೀಡಲಾಗಿದೆ.

    ಮೃತ ನಂದಿನಿ ಶರ್ಮಾ ಅಜ್ಮೇರ್  ಬಜರಂಗಢದಲ್ಲಿರುವ ಅಂಬೆ ಮಾತೆ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದರು. ಅವರು ಪ್ರತಿದಿನ ಗಳಿಸುತ್ತಿದ್ದ ಹಣವನ್ನು ಅಂದೇ ಬ್ಯಾಂಕಿಗೆ ಹೋಗಿ ಜಮಾ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಾವು ಸಂಪಾದಿಸಿ ಹಣವನ್ನು ಸುರಕ್ಷಿತವಾಗಿ ಬಳಸಬೇಕೆಂದು ಇಬ್ಬರು ಟ್ರಸ್ಟಿಗಳ ಬಳಿ ಸಹ ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಮೃತಪಟ್ಟ ನಂತರ ಈ ಹಣ ದೇಶಕ್ಕಾಗಿ ವಿನಿಯೋಗಿಸಬೇಕು ಎಂದು ವಿಲ್ ಬರೆದಿಟ್ಟಿದ್ದರು.

    ಶರ್ಮಾ 2018 ಮೃತಪಟ್ಟಿದ್ದಾರೆ. ಆದರೆ ಟ್ರಸ್ಟಿಗಳು ಸೂಕ್ತ ಸಮಯ ಬಂದಾಗ ಹಣವನ್ನು ದಾನ ಮಾಡಲು ಕಾಯುತ್ತಿದ್ದರು. ಇತ್ತೀಚೆಗೆ ಪುಲ್ವಾಮಾ ಉಗ್ರ ದಾಳಿಯಲ್ಲಿ 44 ಯೋಧರು ಮೃತಪಟ್ಟಿದ್ದರು. ಇದೇ ಸೂಕ್ತ ಸಮಯ ಎಂದು ಟ್ರಸ್ಟಿಗಳು ನಿರ್ಧಾರ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹುತಾತ್ಮ ಸೈನಿಕರ ಕುಟುಂಬಕ್ಕೆ ನೀಡಲಾಗುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಟ್ರಸ್ಟ್ ಗಳಿಂದ ಹಣವನ್ನು ಪಡೆದು ಅವರಿಗೆ ರಶೀದಿ ನೀಡಲಾಗಿದೆ ಎಂದು ಅಜ್ಮೇರ್ ಜಿಲ್ಲಾಧಿಕಾರಿ ವಿಶ್ವ ಮೋಹನ್ ಶರ್ಮಾ ತಿಳಿಸಿದ್ದಾರೆ.

    ಮೃತ ಅಜ್ಜಿ ಸಂಪಾದನೆ ಮಾಡಿದ್ದ ಹಣವನ್ನು ಹುತಾತ್ಮರ ಕುಟುಂಬಕ್ಕೆ ನೀಡಲಾದ ವಿಷಯ ತಿಳಿದು ದೇವಾಲಯ ಭಕ್ತರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರಿಗೆ ಭಕ್ತರು ಯಾವಾಗಲೂ ಗೌರವ ಕೊಡುತ್ತಿದ್ದರು. ಶರ್ಮಾ ಅವರಿಗೆ ಹಣದ ಜತೆ ಊಟ, ಬಟ್ಟೆಯನ್ನು ಸಹ ದಾನ ಮಾಡುತ್ತಿದ್ದರು. ಅವರು ಪ್ರತಿದಿನ ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡುತ್ತಿದ್ದ ವಿಚಾರ ಬಗ್ಗೆ ನಮಗೆಲ್ಲ ತಿಳಿದಿತ್ತು ಎಂದು ದೇವಸ್ಥಾನದ ಪುರೋಹಿತರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv