Tag: donate

  • ನನ್ನ ಸ್ತನಗಳನ್ನ ದಾನ ಮಾಡಿ ಪ್ರೀತಿ ಹರಡುತ್ತೇನೆ: ರಾಖಿ ಸಾವಂತ್

    ನನ್ನ ಸ್ತನಗಳನ್ನ ದಾನ ಮಾಡಿ ಪ್ರೀತಿ ಹರಡುತ್ತೇನೆ: ರಾಖಿ ಸಾವಂತ್

    ಮುಂಬೈ: ನನ್ನ ಸ್ತನಗಳನ್ನು ದಾನ ಮಾಡಿ ವಿಶ್ವದಾದ್ಯಂತ ಪ್ರೀತಿಯನ್ನು ಹರಡುತ್ತೇನೆ ಎಂದು ಬಾಲಿವುಡ್ ಮೋಹಕ ಬೆಡಗಿ ರಾಖಿ ಸಾವಂತ್ ವಿಡಿಯೋವೊಂದರಲ್ಲಿ ಹೇಳಿ ಅದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಡಿಯೋ ಆರಂಭದಲ್ಲಿ ಐಶ್ವರ್ಯ ಅವರ ಈ ಕೆಲಸವನ್ನು ಹೊಗಳಿದ ರಾಖಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಐಶ್ವರ್ಯ ಅವರ ಈ ಕೆಲಸದಿಂದ ಸಾಕಷ್ಟು ಮಂದಿ ಸ್ಫೂರ್ತಿಗೊಂಡಿದ್ದು, ಅದರಲ್ಲಿ ನಾನು ಒಬ್ಬಳಾಗಿದ್ದೇನೆ. ನನ್ನಲ್ಲಿರುವ ಅಮೂಲ್ಯವಾದ ಸ್ತನಗಳನ್ನು ದಾನ ಮಾಡಲು ನಿರ್ಧರಿಸಿದ್ದೇನೆ ಅಂತಾ ರಾಖಿ ಹೇಳಿಕೊಂಡಿದ್ದಾರೆ.

    ನನಗೆ ಐಶ್ವರ್ಯ ರೈ ಅವರ ಕಣ್ಣುಗಳು ಇಷ್ಟ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಜಗತ್ತಿನಲ್ಲಿ ತುಂಬಾ ಒಳ್ಳೆಯವರಿದ್ದು, ಕೆಲವರು ತಮ್ಮ ಶ್ವಾಸಕೋಶ, ಕಿಡ್ನಿ, ಕಣ್ಣುಗಳನ್ನು ದಾನ ಮಾಡುತ್ತಾರೆ. ಎಲ್ಲರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದು, ನಾನು ಸಮಾಜಕ್ಕೆ ಸೇವೆ ಮಾಡಲು ನಿರ್ಧರಿಸಿದ್ದೇನೆ. ಜನರು ಒಬ್ಬರನ್ನೊಬ್ಬರು ತುಂಬಾ ಪ್ರೀತಿ ತೋರಿಸುವಾಗ ನಾನು ಏಕೆ ತೋರಿಸಬಾರದು ಎಂದು ಅನಿಸಿತು. ನನ್ನ ಬಳಿ ನನ್ನ ಸ್ತನ ಬಿಟ್ಟರೆ ಬೇರೆ ಏನೂ ಇಲ್ಲ. ಹಾಗಾಗಿ ನಾನು ನನ್ನ ಸ್ತನಗಳನ್ನು ದಾನ ಮಾಡಿ ಪ್ರೀತಿ ಹರಡಿಸುತ್ತೇನೆ. ಸದ್ಯ ನನ್ನ ಸ್ತನ ಯಾರಿಗೆ ಬೇಕೆಂದು ನನಗೆ ಗೊತ್ತಿಲ್ಲ. ಆದರೆ ಅವಶ್ಯಕತೆ ಇರುವವರಿಗೆ ನಾನು ನನ್ನ ಸ್ತನ ದಾನ ಮಾಡುತ್ತೇನೆ ಎಂದು ರಾಖಿ ವಿಡಿಯೋದಲ್ಲಿ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.

    ಸದ್ಯ ರಾಖಿ ಸಾವಂತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

     

    View this post on Instagram

     

    #aishwaryaraibachchan #aishwaryarai

    A post shared by Rakhi Sawant Official (@rakhisawant2511) on

  • ಉಡುಪಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಸಾಮೂಹಿಕ ನಮಾಜ್, ಕೊಡಗಿಗೆ ದಾನ

    ಉಡುಪಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಸಾಮೂಹಿಕ ನಮಾಜ್, ಕೊಡಗಿಗೆ ದಾನ

    ಉಡುಪಿ: ಜಿಲ್ಲೆಯಲ್ಲಿ ಸೌಹಾರ್ದತೆಯ ಅರ್ಥ ಪೂರ್ಣ ಬಕ್ರೀದ್ ಆಚರಣೆ ಮಾಡಲಾಗಿದ್ದು, ಈ ಬಾರಿ ನೂರಾರು ಮುಸ್ಲಿ ಬಾಂಧವರು ಕೊಡಗು ಹಾಗೂ ಕೇರಳ ಸಂತ್ರಸ್ತರಿಗಾಗಿ ನಗರದ ಇಂದ್ರಾಣಿ ನೂರಾನಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

    ತ್ಯಾಗ ಮತ್ತು ಬಲಿದಾನದ ಹೆಸರಾಗಿರುವ ಬಕ್ರೀದ್ ಹಬ್ಬವನ್ನು ನಗರದಲ್ಲಿ ಆಚರಿಸಲಾಗಿದ್ದು, ಈ ವೇಳೆ ನೂರಾರು ಮುಸ್ಲಿಂ ಬಾಂಧವರು ನೆರೆ ಪೀಡಿತ ಕೊಡಗು ಮತ್ತು ಕೇರಳ ರಾಜ್ಯದಲ್ಲಿನ ಸಂತ್ರಸ್ತರಿಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಅಲ್ಲದೇ ಈ ವೇಳೆ ಸ್ಥಳದಲ್ಲಿ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಕಾರ್ಯವನ್ನು ಮಾಡಿದರು.

    ಪಾರ್ಥನೆಯ ವೇಳೆ ಧರ್ಮಗುರುಗಳು ಜಲಪ್ರಳಯದ ಕುರಿತು ಪ್ರಸ್ತಾಪಿಸಿ ಪ್ರವಚನ ನೀಡಿದರು. ಈ ವೇಳೆ ಎಲ್ಲಾ ಮುಸ್ಲಿಂ ಬಾಂಧವರಿಗೆ ಕೊಡಗು ಹಾಗೂ ಕೇರಳದ ಅಣ್ಣ-ತಮ್ಮಂದಿರು ಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ನಿಜವಾದ ಮಾನವ ಧರ್ಮ, ನಾವೆಲ್ಲರೂ ಅವರಿಗಾಗಿ ಸಹಾಯ ಮಾಡೋಣ ಎಂದು ತಿಳಿಸಿದ್ದಾರೆ.

    ಪ್ರಾರ್ಥನೆಯ ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಸೀದಿ ಧರ್ಮಗುರುಗಳಾದ ಮಸೀಯುಲ್ಲಾ ಖಾನ್ ರವರು ಮಾತನಾಡಿ, ಬಕ್ರೀದ್ ಹಬ್ಬವನ್ನು ಮುಸ್ಲಿಮರು ಹೆಚ್ಚು ಸಂತೋಷದಿಂದ ಆಚರಿಸುತ್ತೇವೆ, ಅಲ್ಲದೇ ಈ ಹಬ್ಬಕ್ಕೆ ಸ್ವಲ್ಪ ಹೆಚ್ಚು ಹಣವನ್ನೇ ಖರ್ಚು ಮಾಡುತ್ತಾರೆ. ಆದರೆ ಈ ಬಾರಿ ಸಂಭ್ರಮಕ್ಕೆಂದು ಖರ್ಚು ಮಾಡುವ ಒಂದು ಅಂಶವನ್ನು ಪರಿಹಾರ ರೂಪದಲ್ಲಿ ಕೊಡಲು ಕರೆ ನೀಡಲಾಗಿದೆ ಎಂದು ಹೇಳಿದರು.

    ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳಾಗಿದ್ದೇವೆ. ಕೊಡಗು ಜನರಿಗೆ ಈಗಾಗಲೇ ಮಸೀದಿಯಲ್ಲಿ ದುಡ್ಡು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕೇರಳ ಜನರಿಗೆ ಸಹಾಯಮಾಡಲು ಮುಂದಾಗಿದ್ದೇವೆ. ನಮ್ಮ ಹಬ್ಬದ ಖುಷಿಯನ್ನು ದಾನ-ಧರ್ಮದ ಮೂಲಕ ಆಚರಿಸಿದರೆ, ಅದು ಅಲ್ಲಾನಿಗೆ ಪ್ರಿಯವಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತ್ಯಾಗ ಬಲಿದಾನದ ಸಂಕೇತ ಬಕ್ರೀದ್: ಈ ಹಬ್ಬದ ವಿಶೇಷತೆ ಏನು? ಇಲ್ಲಿದೆ ವಿವರ

    ತ್ಯಾಗ ಬಲಿದಾನದ ಸಂಕೇತ ಬಕ್ರೀದ್: ಈ ಹಬ್ಬದ ವಿಶೇಷತೆ ಏನು? ಇಲ್ಲಿದೆ ವಿವರ

    ಮುಸ್ಲಿಮ್ ಬಾಂಧವರಿಗೆ ಹಬ್ಬಗಳು ಅಂದರೆ ಎರಡೇ. ಒಂದು ಈದ್ ಉಲ್ ಫಿತ್ರ್ ಅಥವಾ ರಂಜಾನ್ ಹಬ್ಬ ಹಾಗೂ ಈದ್ ಅಲ್ ಅಧಾ (ಈದ್ ಉಲ್ ಧುಹಾ) ಅಥವಾ ಬಕ್ರೀದ್ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್‍ ನ ಒಂಬತ್ತನೆಯ ತಿಂಗಳಲ್ಲಿ ಒಂದು ತಿಂಗಳ ಉಪವಾಸ ಆಚರಣೆಯ ಬಳಿಕ ರಂಜಾನ್ ರಬ್ಬ ಆಚರಿಸಿದರೆ ಕಡೆಯ ತಿಂಗಳಾದ ದುಲ್ ಹಜ್ ನ ಹತ್ತನೆಯ ದಿನದಂದು (ಚಂದ್ರದರ್ಶನವಾದ ಹತ್ತನೆಯ ದಿನ) ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.

    ಇತಿಹಾಸ: ಬಕ್ರೀದ್ ಆಚರಣೆಗೆ ಕಾರಣವಾದ ಕಥೆಗೆ ನಾಲ್ಕು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಮೆಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹ ಮುಂದಾಗುತ್ತಾರೆ. ಕನಸಿನಲ್ಲಿ ಬರುವ ಅಲ್ಲಾಹ ಜಗತ್ತಿನಲ್ಲಿ ನಿಮಗೆ ಅತ್ಯಂತ ಪ್ರಿಯರು ಯಾರು ಎಂದು ಕೇಳಿದಾಗ, ನನ್ನ ಪುತ್ರ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿಯೆಂದು ಇಬ್ರಾಹಿಂ(ಸ) ಹೇಳ್ತಾರೆ. ಹಾಗಾದರೆ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಗುತ್ತದೆ.

    ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಸ) ಮಗನನ್ನು ಬಲಿ ನೀಡಲು ಮುಂದಾಗುತ್ತಾರೆ. ತಂದೆಯ ಮಾತನ್ನು ಇಸ್ಮಾಯಿಲ್ ಸಹ ಒಪ್ಪಿಕೊಂಡು ಬಲಿಗೆ ನಗುಮೊಗದಲ್ಲಿಯೇ ಸಿದ್ಧಗೊಳ್ಳುತ್ತಾನೆ. ಆದರೆ ಇಬ್ರಾಹಿಂ(ಸ) ಅವರಿಗೆ ಮಗನನ್ನು ಬಲಿ ಕೊಡಲು ಪುತ್ರ ವಾತ್ಸಲ್ಯ ಅಡ್ಡಿಯಾಗುತ್ತದೆ. ಈ ಸದರ್ಭದಲ್ಲಿ ಕಣ್ಣಿಗೆ ಕಪ್ಪು ಪಟ್ಟಿಕೊಂಡ ಅವರು ಮಗನ ಕುತ್ತಿಗೆಗೆ ಕತ್ತಿ ಬೀಸಲು ಸಿದ್ಧರಾಗುತ್ತಾರೆ.

    ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‍ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯ ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ. ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಇದೇ ಕಥೆಯನ್ನು ಹಲವರು ತಮ್ಮದೇ ಶೈಲಿಯಲ್ಲಿ ಭಿನ್ನ ಭಿನ್ನವಾಗಿ ಹೇಳುತ್ತಾರೆ.

    ಈದ್ ನಮಾಜ್: ಮುಂಜಾನೆಯ ಪ್ರಾರ್ಥನೆ ಬಕ್ರೀದ್ ಹಬ್ಬದ ಬೆಳಗ್ಗೆ ಊರಿನ ಜನರೆಲ್ಲರೂ ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಈದ್ಗಾ ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರಮುಖ ಮಸೀದಿಗಳಲ್ಲಿಯೇ ಈದ್ ಪ್ರಾರ್ಥನೆಯನ್ನು ಮಾಡುತ್ತಾರೆ. ತೆರೆದ ಮೈದಾನದಲ್ಲಿ ಊರಿನ ಅಷ್ಟೂ ಜನರು ಒಂದಾಗಿ ಈದ್ ನಮಾಜ್ ನಿರ್ವಹಿಸುವ ಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಸೀದಿಯಲ್ಲಿ ಮೊದಲೇ ನಿರ್ಣಯಿಸಿದ ಸಮಯಕ್ಕೆ ಎಲ್ಲರೂ ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಾರೆ. ನಮಾಜ್ ಬಳಿಕ ಎಲ್ಲರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

    ಕುರ್ಬಾನಿ: ಈದ್ ನಮಾಜ್ ಬಳಿಕ ನಾಲ್ಕು ಕಾಲುಗಳ್ಳ ಪ್ರಾಣಿಯೊಂದನ್ನು ಬಲಿ ನೀಡಲಾಗುತ್ತದೆ. ಆದ್ರೆ ಕುರ್ಬಾನಿಗೆ ಪ್ರಾಣಿಗಳನ್ನು ಬಳಸುವಾಗ ಕೆಲವು ಮಾನದಂಡಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಬಲಿ ನೀಡುವ ಪ್ರಾಣಿಗೆ ಯಾವುದೇ ರೀತಿಯಲ್ಲಿ ಗಾಯಗೊಂಡಿರಬಾರದು ಅಥವಾ ಸಾವಿನ ಸ್ಥಿತಿಯಲ್ಲಿರಬಾರದು ಎಂಬಿತ್ಯಾದಿ ಮಾನದಂಡಗಳನ್ನು ಅವಶ್ಯಕವಾಗಿ ಕುರ್ಬಾನಿ ನೀಡುವವರು ಪಾಲಿಸಬೇಕಾಗುತ್ತದೆ.

    ಕುರ್ಬಾನಿಯ ಬಳಿಕ ದೊರಕುವ ಮಾಂಸದಲ್ಲಿ ಮೂರು ಪಾಲು ಮಾಡಲಾಗುತ್ತದೆ. ಒಂದು ಪಾಲು ಬಡವರಿಗೆ, ಇನ್ನೊಂದು ಸಂಬಂಧಿಕರಿಗೆ ಮತ್ತು ಮೂರನೆಯ ಪಾಲನ್ನು ಸ್ವಂತಕ್ಕಾಗಿ ಎಂದು ವಿಂಗಡಿಸಲಾಗುತ್ತದೆ. ಕುರ್ಬಾನಿ ಮಾಡಲು ಅನುಕೂಲತೆ ಇಲ್ಲದವರು ಅಥವಾ ಊರಿನಿಂದ ದೂರವಿರುವ ಅಥವಾ ಬೇರಾವುದೋ ಕಾರಣದಿಂದ ನೀಡಲು ಸಾಧ್ಯವಾಗದಿರುವವರು ಇದೇ ಕಾರ್ಯಕ್ಕಾಗಿ ನಿಯೋಜಿಸಿರುವ ಸಂಸ್ಥೆಗಳಿಗೆ ದಾನದ ರೂಪದಲ್ಲಿ ಹಣ ನೀಡಬಹುದು. ಹಣ ನೀಡುವುದರಿಂದ ದೇಶದ ಬಡಜನತೆ ಪೌಷ್ಠಿಕವಾದ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಹಾಯಕ್ಕೆ ಸಹಾಯ ತತ್ವದ ಮೂಲಕ ಮಾನವೀಯತೆ ಮೆರೆದ ಲಿನಿ ನರ್ಸ್ ಪತಿ!

    ಸಹಾಯಕ್ಕೆ ಸಹಾಯ ತತ್ವದ ಮೂಲಕ ಮಾನವೀಯತೆ ಮೆರೆದ ಲಿನಿ ನರ್ಸ್ ಪತಿ!

    ತಿರುವನಂತಪುರಂ: ಒಬ್ಬರಿಂದ ಸಹಾಯ ಪಡೆದ ಮೇಲೆ, ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದು ಮಾನವೀಯತೆ ತತ್ವ. ಈ ತತ್ವವನ್ನು ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಪತಿ ಪಾಲಿಸಿ ಮಾನವೀಯತೆ ಮೆರೆದಿದ್ದಾರೆ.

    ಕೇರಳದ ನರ್ಸ್ ಲಿನಿ ನಿಪಾ ವೈರಸ್ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. ಹೀಗಾಗಿ ಅವರ ಕುಟುಂಬಕ್ಕೆ 20 ಲಕ್ಷ ರೂ. ಹಾಗೂ ಪತಿಗೆ ಉದ್ಯೋಗ ನೀಡುವ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ್ದರು.

    ಸರ್ಕಾರ ತನ್ನ ಭರವಸೆ ಪ್ರಕಾರ ನರ್ಸ್ ಲಿನಿ ಪತಿ ಸಂಜೇಶ್‍ಗೆ ರಾಜ್ಯ ಆರೋಗ್ಯ ಇಲಾಖೆ ಕ್ಲರ್ಕ್ (ಗುಮಾಸ್ತ) ಕೆಲಸವನ್ನು ನೀಡಲಾಗಿದೆ. ಸೇವೆಗೆ ಸೇರಿದ ಸಂಜೇಶ್ ಅವರು ತಮ್ಮ ಮೊದಲ ತಿಂಗಳ ವೇತನವನ್ನು ಕೇರಳ ರಾಜ್ಯದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ.

    ಯಾರು ಲಿನಿ ನರ್ಸ್?
    ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಜಾಗತೀಕ ಮಟ್ಟದಲ್ಲಿ ಆತಂಕ ಹುಟ್ಟಿಸಿದ್ದ ನಿಪಾ ವೈರಸ್ ಗೆ ಕೇರಳದ ನರ್ಸ್ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು.

    ಲಿನಿ ಡೆತ್ ನೋಟ್:
    ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ.

    ಕೇರಳದಲ್ಲಿ ನಿಲ್ಲದ ಮಳೆ:
    ದೇವರನಾಡಲ್ಲಿ ಮಳೆ ಆರ್ಭಟ ಹೆಚ್ಚಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಂಪ್‍ಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಆಶ್ರಯ ಹಾಗೂ ಆಹಾರ ವ್ಯವಸ್ಥೆ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಒಟ್ಟು 8 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಬುಧವಾರ ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಂ.ಸುಧೇರನ್ ನಿವಾಸವು ಸಂಪೂರ್ಣ ಜಲಾವೃತವಾಗಿತ್ತು. ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನ್ನ ತಂದೆಯ ಜೀವ ಉಳಿಸಲು ಮಗನಿಂದ ಸೈಕಲ್ ಸವಾರಿ!

    ತನ್ನ ತಂದೆಯ ಜೀವ ಉಳಿಸಲು ಮಗನಿಂದ ಸೈಕಲ್ ಸವಾರಿ!

    ಮೈಸೂರು: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಆದರೆ ಇಲ್ಲೊಬ್ಬ ಯುವಕ ತನ್ನ ತಂದೆಗಾಗಿ ಲಿವರ್ ದಾನ ಮಾಡುತ್ತಿದ್ದು, ಆದರ್ಶ ಮಗನಾಗಿದ್ದಾರೆ.

    ಮೈಸೂರಿನ ವೀರನಗರ ನಿವಾಸಿಯಾಗಿರುವ ಪ್ರೀತೇಶ್ ಜೈನ್ ತನ್ನ ಅಪ್ಪನಿಗೆ ಲಿವರ್ ದಾನ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಲಿವರ್ ದಾನಕ್ಕೆ ತನ್ನ ದೇಹದ ತೂಕ ಅಡ್ಡಿ ಆಗಿತ್ತು. ಹೀಗಾಗಿ ಸದ್ಯ ದೇಹದ ತೂಕ ಇಳಿಸುತ್ತಿದ್ದಾರೆ. ಪ್ರೀತೇಶ್ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಯಾಗಿದ್ದು, ತಂದೆ ಅಶೋಕ್ ಜೈನ್ ಅವರು ಕಳೆದ ಎಂಟು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಎಷ್ಟೆ ಚಿಕಿತ್ಸೆ ಪಡೆದರು ಗುಣಮುಖವಾಗಲಿಲ್ಲ.

    ಕೊನೆಗೆ ವೈದ್ಯರು ತಂದೆ ಅಶೋಕ್ ಜೈನ್ ಅವರ ಯಕೃತ್ ಅನ್ನು ಸಂಪೂರ್ಣವಾಗಿ ತೆಗೆದು ಹೊಸ ಲಿವರ್ ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೊಸ ಲಿವರ್ ನೀಡುವ ದಾನಿಗಳು ರಕ್ತ ಸಂಬಂಧಿಗಳು ಆದರೆ ಉತ್ತಮ ಎಂಬ ಸಲಹೆಯನ್ನು ನೀಡಿದ್ದಾರೆ. ಈ ಕಾರಣಕ್ಕೆ ಮಗ ಪ್ರೀತೇಶ್ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ತಮ್ಮ ಲಿವರ್ ದಾನ ಮಾಡಲು ಮುಂದಾಗಿದ್ದಾರೆ.

    ವೈದ್ಯರ ಸಲಹೆ ಮೇರೆಗೆ ಲಿವರ್ ದಾನ ಮಾಡಲು ಮುಂದಾದ ನನಗೆ ದೇಹದ ತೂಕ ಅಡ್ಡಿಯಾಗಿದೆ. ತಾವು 90 ಕೆ.ಜಿ. ತೂಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ದೇಹದ ತೂಕವನ್ನ 70 ರಿಂದ 75 ಕೆ.ಜಿ.ತೂಕಕ್ಕೆ ಇಳಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಈಗ ನಾನು ಪ್ರತಿದಿನ ದೇಹ ದಂಡಿಸುತ್ತಿದ್ದು, ದಿನದ ವ್ಯಾಯಾಮದ ಜೊತೆ ಪ್ರತಿದಿನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸೈಕಲ್ ತುಳಿಯುತ್ತಿದ್ದೇನೆ. ಈಗಾಗಲೇ ಕಳೆದ 27 ದಿನಗಳಿಂದ ದೇಹ ದಂಡಿಸುತ್ತಿದ್ದು, 7 ಕೆ.ಜಿ.ತೂಕ ಕಡಿಮೆ ಮಾಡಿಕೊಂಡಿದ್ದೇನೆ ಎಂದು ಪ್ರೀತೇಶ್ ಹೇಳಿದ್ದಾರೆ.

    ತನ್ನ ತಂದೆಯ ಜೀವ ಉಳಿಸಿಕೊಳ್ಳಲು ಮಗನು ಮಾಡುತ್ತಿರುವ ಕಸರತ್ತು ನಿಜಕ್ಕು ಎಲ್ಲರು ಮೆಚ್ಚುವಂತಹದ್ದಾಗಿದೆ. ಒಂದು ತಿಂಗಳ ಅವದಿಯಲ್ಲಿ 10 ಕೆ.ಜಿ. ತೂಕ ಇಳಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ.

  • ಲಕ್ಷಾಂತರ ಬೆಲೆ ಬಾಳುವ ಭೂಮಿಯನ್ನ ದೇವಾಸ್ಥಾನಕ್ಕೆ ದಾನ ಮಾಡಿದ್ರು

    ಲಕ್ಷಾಂತರ ಬೆಲೆ ಬಾಳುವ ಭೂಮಿಯನ್ನ ದೇವಾಸ್ಥಾನಕ್ಕೆ ದಾನ ಮಾಡಿದ್ರು

    ಧಾರವಾಡ: ಇಂದಿನ ಕಾಲದಲ್ಲಿ ಜಮೀನು ಅಂದರೆ ಯಾರೂ ಬಿಟ್ಟು ಕೊಡಲ್ಲ. ಅಲ್ಲದೇ ಬೇರೆಯವರ ಜಮೀನನ್ನೇ ಲಪಟಾಯಿಸಲಿಕ್ಕೆ ನೋಡುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.

    ಹುಬ್ಬಳ್ಳಿ ಮೂಲದ ನರಸಿಂಗರಾವ್ ಧಾರವಾಡಕರ್ ಅವರು ಧಾರವಾಡದ ಮುರುಘಾಮಠದ ಬಳಿಯ ತೆಲಗರ ಕಾಲೋನಿಯಲ್ಲಿರುವ ವೆಂಕಮ್ಮ ದೇವಸ್ಥಾನಕ್ಕೆ ಮೂರು ಗುಂಟೆ ಭೂಮಿಯನ್ನ ದಾನ ಮಾಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಮೂರುಗುಂಟೆ ಜಾಗಕ್ಕೆ ಸುಮಾರು 60 ಲಕ್ಷ ಬೆಲೆ ಇದೆ. ಈ ಜಾಗದ ಪಕ್ಕದಲ್ಲಿ ವೆಂಕಮ್ಮ ದೇವಸ್ಥಾನ ಇದೆ.

    ಈ ದೇವಸ್ಥಾನಕ್ಕೆ ಧಾರವಾಡಕರ್ ಅವರ ಕುಂಟುಬಸ್ಥರು ಕಳೆದ 25 ವರ್ಷಗಳ ಹಿಂದೆ ಭೂಮಿಯನ್ನ ದಾನವಾಗಿ ನೀಡುವುದಾಗಿ ಮಾತು ಕೊಟ್ಟಿದ್ದರಂತೆ. ಆದರೆ ದಾಖಲೆಗಳು ಮಾತ್ರ ಭೂಮಿಯ ಮಾಲೀಕರ ಹೆಸರಲ್ಲಿತ್ತು. ಈ ಜಾಗವನ್ನ ಸುತ್ತಲಿನವರು ಅತಿಕ್ರಮಣ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ಜಾಗದ ದಾಖಲೆಗಳನ್ನ ಪರಿಶೀಲಿಸಿದ್ದಾನೆ. ಆಗ ಈ ಜಾಗ ಹುಬ್ಬಳ್ಳಿಯ ಧಾರವಾಡಕರ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ.

    ಯುವಕ ಮಾಲೀಕರಿಗೆ ಈ ಬಗ್ಗೆ ತಿಳಿಸಿದಾಗ, ಜಾಗದ ಮಾಲೀಕರು ನರಸಿಂಗರಾವ್ ಅವರು ಭೂಮಿಯನ್ನ ದೇವಸ್ಥಾನಕ್ಕೆ ಬಿಟ್ಟು ಕೊಟ್ಟು, ದಾಖಲೆಗಳನ್ನ ದೇವಸ್ಥಾನದ ಹೆಸರಿನಲ್ಲಿ ಮಾಡಿ ಕೊಡುವ ಭರವಸೆ ನೀಡಿದ್ದಾರೆ. ಸದ್ಯ ಈ ಸುದ್ದಿ ತಿಳಿದ ಸ್ಥಳೀಯರಿಗೆ ಕೂಡಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು

    ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು

    ಬೆಂಗಳೂರು: ರ‍್ಯಾಗಿಂಗ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಮೇಘನಾಳ ಕಣ್ಣನ್ನು ಪೋಷಕರು ದಾನ ಮಾಡಿದ್ದಾರೆ.

    ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಮೇಘನಾ(18) ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿ ಇಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು.

    ಮೇಘನಾ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಪತಿಯನ್ನ ಕೆಲಸಕ್ಕೆ ಬಿಡಲು ಹೋಗಿದ್ದ ವೇಳೆ ಮೇಘನಾ ಆತ್ಮಹತ್ಯೆಗೆ ಶರಣಾಗಿದ್ದಳು. ಈ ವೇಳೆ ಮೇಘನಾ ಪೋಷಕರು ಮೇಘನಾ ಕಣ್ಣನ್ನು ದಾನ ಮಾಡಿ, ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ಮೇಘನಾ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್‍ನಲ್ಲಿ ಸೋತಿದ್ದ ಹಿನ್ನೆಲೆ ತರಗತಿಯಲ್ಲಿ ಬೇರೆ ವಿದ್ಯಾರ್ಥಿಗಳು ರ‍್ಯಾಗ್ ಮಾಡುತ್ತಿದ್ದರು. ನೀನು ಬ್ಯಾಡ್ ಗರ್ಲ್ ಎಂದು ಪದೇ-ಪದೇ ಹೇಳುತ್ತಿದ್ದರಂತೆ. ಅದಕ್ಕೆ ಮನನೊಂದ ಮೇಘನಾ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ರೇಗಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್‍ಒಡಿ ರಾಜಕುಮಾರ ಬೆಂಬಲ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

  • ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಕೊಯಮತ್ತೂರು: ಮೆದುಳು ನಿಷ್ಕ್ರಿಯಗೊಂಡಿದ್ದ 56 ವರ್ಷದ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಕೊಯಮತ್ತೂರಿನ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಮೃತಪಡುವ ಮೊದಲು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

    ನವೆಂಬರ್ 30 ರಂದು ಇವರು ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಸಹ ಉದ್ಯೋಗಿಗಳು ಕೂಡಲೇ ಇವರನ್ನು ಸಮೀಪದ ಕೆ.ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಪರೀಕ್ಷೆ ಮಾಡಿದ ಬಳಿಕ ಅವರಿಗೆ ಅಧಿಕ ರಕ್ತ ಒತ್ತಡ, ಕಾರ್ಡಿಯೊ-ವ್ಯಾಸ್ಕೂಲರ್ (ಹೃದಯ-ರಕ್ತನಾಳದ ಸಮಸ್ಯೆ) ಮತ್ತು ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ವೈದ್ಯರಿಗೆ ತಿಳಿಯಿತು.

    ಪರಿಣಿತ ವೈದ್ಯರ ತಂಡವೊಂದು ಭಾನುವಾರ ಆಕೆಯನ್ನ ಆಪರೇಷನ್ ಮಾಡಿ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆಯ ಮೆದುಳು ನಿಷ್ಕ್ರಿಯವಾಯಿತು. ಅಷ್ಟೇ ಅಲ್ಲದೇ ಮತ್ತೆ ಅದನ್ನು ಸರಿ ಮಾಡಲು ಸಾಧ್ಯವಾಗದಷ್ಟು ಹಾನಿಯಾಯಿತು ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ ಭಕ್ತವತ್ಸಲಂ ಹೇಳಿದರು.

    ವೈದ್ಯರು ಮತ್ತೆ ಎರಡು ಪರೀಕ್ಷೆಗಳನ್ನು ಮಾಡಿ ಸಂಜೆ ಹೊತ್ತಿಗೆ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದ್ದಾರೆ. ನಂತರ ಮಹಿಳೆಯ ಮಗ ಮತ್ತು ಮಗಳ ಇಬ್ಬರ ಅನುಮತಿಯನ್ನು ಪಡೆದು ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಆಸ್ಪತ್ರೆ ಪಡೆದುಕೊಂಡಿತು.

    ಮಹಿಳೆಯಿಂದ ಪಡೆದುಕೊಂಡ ಅಂಗಾಂಗಗಳನ್ನು, ತಮಿಳು ನಾಡಿನ ಟ್ರಾನ್ಸ್ ಪ್ಲಾಂಟ್ ಅಥಾರಿಟಿ, ಯಕೃತ್ತು, ಮತ್ತು ಒಂದು ಕಿಡ್ನಿ ಕೆ.ಜಿ. ಆಸ್ಪತ್ರೆಗೆ, ಮತ್ತೊಂದು ಕಿಡ್ನಿಯನ್ನು ಶ್ರೀ ರಾಮಕೃಷ್ಣ ಆಸ್ಪತ್ರೆಗೆ, ಕಣ್ಣುಗಳನ್ನು ಅರವಿಂದ್ ಕಣ್ಣಿನ ಆಸ್ಪತ್ರೆಗೆ, ಚರ್ಮ ಮತ್ತು ಎಲುಬುಗಳನ್ನು ಗಂಗಾ ಆಸ್ಪತ್ರೆ, ಹೃದಯ ಮತ್ತು ಶ್ವಾಸಕೋಶ ಫೊರ್ಟಿಸ್ ಆಸ್ಪತ್ರೆ/ಗ್ಲೋಬಲ್ ಆಸ್ಪತ್ರೆ ಹಸ್ತಾಂತರಿಸಲಾಗುವುದು. ಇದರಿಂದ 9 ಜನರ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಭಕ್ತವತ್ಸಲಂ ಹೇಳಿದ್ದಾರೆ.