Tag: donate

  • ಅಪ್ರಾಪ್ತ ಪುತ್ರಿಯ ಅಂಡಾಣು ದಾನ ಮಾಡಲು ಒತ್ತಾಯಿಸಿದ ಪಾಪಿ ತಾಯಿ!

    ಅಪ್ರಾಪ್ತ ಪುತ್ರಿಯ ಅಂಡಾಣು ದಾನ ಮಾಡಲು ಒತ್ತಾಯಿಸಿದ ಪಾಪಿ ತಾಯಿ!

    ಚೆನ್ನೈ: ಪಾಪಿ ತಾಯಿಯೊಬ್ಬಳು ತನ್ನ 16 ವರ್ಷದ ಪುತ್ರಿಗೆ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಆರೋಪಿ ತಾಯಿಯನ್ನು ಇಂದ್ರಾಣಿ ಅಲಿಯಾಸ್ ಸುಮಯ್ಯಾ(33) ಎಂದು ಗುರುತಿಸಲಾಗಿದೆ. ಈಕೆಯ ಜೊತೆಗೆ ಪತಿ ಸೈಯದ್ ಅಲಿ (40) ಹಾಗೂ ಮಾಲತಿ (30) ಎಂಬಿಬ್ಬರನ್ನು ಕೂಡ ಬಂಧಿಸಿ ಜೈಲಿಗಟ್ಟಲಾಗಿದೆ. ಸೈಯದ್ ಅಲಿಯನ್ನು ಇಂದ್ರಾಣಿ ಎರಡನೇ ಮದುವೆಯಾಗಿದ್ದಾಳೆ. ಈಕೆ ಖಾಸಗಿ ಫರ್ಟಿಲಿಟಿ ಕೇಂದ್ರಕ್ಕೆ ಅಂಡಾಣು ದಾನ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾಳೆ.

    ಇಂದ್ರಾಣಿಯ ಮೊದಲ ಪತಿಯಲ್ಲಿ ಓರ್ವ ಮಗಳಿದ್ದಾಳೆ. ಇದೀಗ 16 ವರ್ಷದ ತನ್ನ ಮಗಳನ್ನು ಅಂಡಾಣು ದಾನ ಮಾಡುವಂತೆ ತಾಯಿ ಇಂದ್ರಾಣಿ ಒತ್ತಾಯಿಸಿದ್ದಾಳೆ. ಇದಕ್ಕೆ ಅಪ್ರಾಪ್ತೆಯ ಮಲ ತಂದೆಯಾಗಿರುವ ಸೈಯದ್ ಅಲಿ ಕೂಡ ಸಾಥ್ ನೀಡಿದ್ದಾನೆ. ಅಲ್ಲದೆ ಈತ ಹವಾರು ಬಾರಿ ಹುಡುಗಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ

    ಸದ್ಯ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಅಪ್ರಾಪ್ತೆ ಪರಾರಿಯಾಗುವ ಮುನ್ನ 8 ಬಾರಿ ಅಂಡಾಣು ದಾನ ಮಾಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಪ್ರತಿ ಅಂಡಾಣು ದಾನದಲ್ಲಿಯೂ ಸುಮಯ್ಯ 20 ಸಾವಿರ ಹಾಗೂ ಮಾಲತಿ 5 ಸಾವಿರ ಕಮಿಷನ್ ತೆಗೆದುಕೊಳ್ಳುತ್ತಿದ್ದರು ಎಂದು ಈರೋಡ್ ದಕ್ಷಿಣ ಪೊಲೀಸ್ ಇನ್ಸ್ ಪೆಕ್ಟರ್ ಪಿ ವಿಜಯಾ ತಿಳಿಸಿದ್ದಾರೆ.

    ಈ ಸಂಬಂಧ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣ ಕುರಿತು ತನಿಖೆ ಕೈಗೊಳ್ಳಲಾಗಿದೆ. ಖಾಸಗಿ ಕೇಂದ್ರ ಬಲವಂತವಾಗಿ ಅಂಡಾಣು ದಾನ ಮಾಡಿರುವುದು ಕಂಡುಬಂದಲ್ಲಿ ಅದರ ವಿರುದ್ಧವೂ ಕಠೀನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಬಹುಮಾನದ ಮೊತ್ತವನ್ನು ದೇಶಕ್ಕೆ ದೇಣಿಗೆ ಕೊಟ್ಟ ಉಕ್ರೇನ್ ಟೆನ್ನಿಸ್ ತಾರೆ- ದೇಣಿಗೆ ಸಂಗ್ರಹಕ್ಕೆ ಅಭಿಯಾನ ಶುರು

    ಬಹುಮಾನದ ಮೊತ್ತವನ್ನು ದೇಶಕ್ಕೆ ದೇಣಿಗೆ ಕೊಟ್ಟ ಉಕ್ರೇನ್ ಟೆನ್ನಿಸ್ ತಾರೆ- ದೇಣಿಗೆ ಸಂಗ್ರಹಕ್ಕೆ ಅಭಿಯಾನ ಶುರು

    ವಾಷಿಂಗ್ಟನ್: ರಷ್ಯಾ ದಾಳಿಗೊಳಗಾದ ಯುದ್ಧಪೀಡಿತ ಉಕ್ರೇನ್ ತೀವ್ರ ಸಂಕಷ್ಟಕ್ಕೊಳಗಾಗಿದೆ. ಉಕ್ರೇನ್ ರಕ್ಷಣೆಗೆ ಸೈನಿಕರು ಪ್ರತಿ ಕ್ಷಣ ಹೋರಾಟ ಮಾಡುತ್ತಿದ್ದಾರೆ. ಉಕ್ರೇನ್ ಸಂಕಷ್ಟಕ್ಕೆ ನೆರವಾಗಲು ಉದ್ಯಮಿಗಳು, ಸೆಲೆಬ್ರಿಟಿಗಳು, ಸಂಘ, ಸಂಸ್ಥೆಗಳು ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ.

    ಬಲಾಢ್ಯ ರಷ್ಯಾ ವಿರುದ್ಧ ಕಾದಾಡುತ್ತಿರುವ ಉಕ್ರೇನ್ ಪರ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಆ ದೇಶಕ್ಕೆ ಬಲ ತುಂಬುವ ಉದ್ದೇಶದಿಂದ ದೇಣಿಗೆ ಸಂಗ್ರಹ ಅಭಿಯಾನವೂ ನಡೆಯುತ್ತಿದೆ. ಉಕ್ರೇನ್ ಪರ ಹಲವು ಸಸ್ಥೆಗಳು ಅಭಿಯಾನವನ್ನು ಆರಂಭಿಸಿವೆ. ಬ್ಲಾಕ್‍ಚೈನ್ ವಿಶ್ಲೇಷಣಾ ಸಂಸ್ಥೆ ಎಲ್ಲಿಪ್ಟಿಕ್ ಅಂಕಿ – ಅಂಶಗಳ ಪ್ರಕಾರ , ಉಕ್ರೇನ್ ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳಿಗೆ 30 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಪ್ಟೋಕರೆನ್ಸಿ ಹರಿದು ಬಂದಿದೆ. ಅಮೆರಿಕದ ಉದ್ಯಮಿ ಸ್ಯಾಮ್ ಬ್ಯಾಂಕ್‍ಮ್ಯಾನ್ ಫ್ರೈಡ್ ಅವರ ಕಂಪನಿ ಪ್ರತಿ ಉಕ್ರೇನ್ ಪ್ರಜೆಗೆ 1900 ರೂಪಾಯಿ ನೀಡುವುದಾಗಿ ಘೋಷಿಸಿದೆ.

    ಬಹುಮಾನದ ಮೊತ್ತವನ್ನು ದೇಶಕ್ಕೆ ದೇಣಿಗೆ ಕೊಟ್ಟ ಉಕ್ರೇನ್ ಟೆನಿಸ್ ತಾರೆ: ಎಲಿನಾ ಸ್ವಿಟೋಲಿನಾ ಟೆನ್ನಿಸ್ ಅಸೋಷಿಯೇಶನ್ ಪಂದ್ಯಾವಳಿಯಿಂದ ತನಗೆ ಬರಲಿರುವ ಬಹುಮಾನ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ಮಾನವೀಯ ನೆರವು ಒದಗಿಸುವ ನಿಟ್ಟಿನಲ್ಲಿ ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ವಿಶ್ವದ ನಂಬರ್ 16ನೇ ಸ್ಥಾನದಲ್ಲಿರುವ ಎಲಿನಾ, ಉಕ್ರೇನಿನಲ್ಲಿದ್ದು ದೇಶವನ್ನು ರಕ್ಷಿಸುವ ಹೋರಾಡುತ್ತಿರುವ ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಸಹಾಯ ಮಾಡಲು ಬಯಸುತ್ತೇನೆ. ನನ್ನ ದೇಶದಲ್ಲಿ ಕೆಲವು ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಮೆಕ್ಸಿಕೊ ಹಾಗೂ ಅಮೆರಿಕದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ನಾನು ಪಡೆಯುವ ಬಹುಮಾನ ಎಲ್ಲ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ನೀಡುತ್ತೇನೆ ಎಂದಿದ್ದಾರೆ.

  • ಇಬ್ಬರ ಬಾಳಿಗೆ ಬೆಳಕಾದ ಅಪ್ಪು

    ಇಬ್ಬರ ಬಾಳಿಗೆ ಬೆಳಕಾದ ಅಪ್ಪು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ಕಣ್ಣುಗಳನ್ನ ಇಬ್ಬರಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.

    PUNEET RAJKUMAR

    ಪುನೀತ್ ಅವರು ದಾನ ಮಾಡಿದ್ದ ಕಣ್ಣುಗಳನ್ನು ನಿನ್ನೆ ಒಬ್ಬರಿಗೆ, ಇಂದು ಒಬ್ಬರಿಗೆ ನೀಡಲಾಗಿತ್ತು. ಚಿಕಿತ್ಸೆ ಯಶಸ್ವಿಯಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‍ಕುಮಾರ್ ಅವರು ತಂದೆ ರಾಜ್‍ಕುಮಾರ್ ಹಾದಿಯಲ್ಲೇ ಸಾಗಿದ್ದಾರೆ. ವೈದ್ಯರು ಪುನೀತ್ ಕಣ್ಣುಗಳನ್ನ ಇಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

    ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಿನ್ನೆ ಒಬ್ಬರಿಗೆ ಆಪರೇಷನ್ ಮಾಡಲಾಗಿದೆ ಮತ್ತು ಇಂದು ಮತ್ತೊಬ್ಬರಿಗೆ ಆಪರೇಷನ್ ಮಾಡಲಾಗಿದೆ. ಈ ಮೂಲಕ ಪುನೀತ್ ಅವರ ಎರಡೂ ಕಣ್ಣುಗಳ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಾವಿನ ಬಳಿಕವೂ ಇಬ್ಬರ ಬಾಳಿನಲ್ಲಿ ಅಪ್ಪು ಬೆಳಕಾಗಿದ್ದಾರೆ. ನಾರಾಯಣ ನೇತ್ರಾಲಯ ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    PUNEET

    ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಬಳಿಕ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿತ್ತು. ಇದೀಗ ಅವರ ಕಣ್ಣುಗಳಿಂದ ಇಬ್ಬರ ಬಾಳಲ್ಲಿ ಬೆಳಕು ಮೂಡಿದೆ. ಇಂದು ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆಯನ್ನು ಈಡಿಗ ಸಂಪ್ರದಾಯದ ಮೂಲಕವಾಗಿ ನೆರವೇರಿಸಲಾಗಿದೆ. ಪುನೀತ್ ಅವರನ್ನು ಕಳೆದುಕೊಂಡ, ಅಭಿಮಾನಿಗಳು, ಕುಟುಂಬಸ್ಥರು, ಕಲಾವಿದರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್ 

  • ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ

    ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ

    – ಜೀವ ಹೋದ ನಂತರ ಇನ್ನೊಂದು ಜೀವ ಉಳಿಸೋಣ

    ಉಡುಪಿ: ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ನೀವು ಸಹಿ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

    ಇಂದು ವಿಶ್ವ ಅಂಗಾಂಗ ದಾನ ದಿನ. ಈ ದಿನ ನಾನು ಕೂಡ ಅಂಗಾಂಗ ದಾನ ಪತ್ರಕ್ಕೆ ಸಹಿ ಹಾಕುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಉಡುಪಿಯ ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕಿಡ್ನಿ ಸಹಿತ ಬೇರೆ ಬೇರೆ ಅಂಗಾಂಗ ದಾನ ಮಾಡುವುದು ಮತ್ತು ಅಂಗಾಂಗಗಳನ್ನು ಯಶಸ್ವಿಯಾಗಿ ಕಸಿ ಮಾಡುವುದು ನಡೆಯುತ್ತಿದೆ ಎಂದರು. ಇದನ್ನೂ ಓದಿ: BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

    ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದೆ ಬಂದರೆ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಇವತ್ತು ವಿಶ್ವ ಅಂಗಾಂಗ ದಾನ ದಿನದಂದು ನಾನೂ ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ. ಅಂಗಾಂಗ ದಾನಕ್ಕೆ ಎಲ್ಲರಿಗೂ ಕರೆ ಕೊಡುತ್ತಿದ್ದೇನೆ ಎಂದರು. ಅಂಗಾಂಗ ದಾನ ಮಾಡುವ ಮೂಲಕ ಮಣ್ಣಲ್ಲಿ ಮಣ್ಣಾಗುವ ಅಂಗಾಂಗಗಳು ಉಪಯೋಗವಾಗಿ ಇನ್ನೊಂದು ಜೀವ ಉಳಿಯಲು ಸಾಧ್ಯವಿದ್ದರೆ ಯಾಕೆ ಹಾಗೆ ಮಾಡಬಾರದು? ಆದ್ದರಿಂದ ಎಲ್ಲರೂ ವಿಶ್ವ ಅಂಗಾಂಗ ದಿನದಂದು ಎಲ್ಲರೂ ಅಂಗಾಂಗ ದಾನ ಮಾಡಲು ಸಂಕಲ್ಪ ಮಾಡೋಣ ಎಂದರು.

    ಜೀವ ಉಳಿಸುವ ಈ ಪುಣ್ಯ ಕಾರ್ಯಕ್ಕೆ ಎಲ್ಲರೂ ಮುಂದೆ ಬರಬೇಕು. ಸಂಕಷ್ಟದಲ್ಲಿ ಇರುವ ಜೀವ ಉಳಿಸಲು ಸಹಕಾರಿಯಾಗಬೇಕು. ಕುಟುಂಬದವರ ಮನವೊಲಿಸಿ. ಜೀವ ಹೋದ ನಂತರ ಇನ್ನೊಂದು ಜೀವ ಉಳಿಸಿ ಎಂದು ಸಿಎಂ ಹೇಳಿದರು.

  • ಅಂಗಾಂಗ ದಾನ ಮಾಡಿ ಇಬ್ಬರು ರೋಗಿಗಳ ಪ್ರಾಣ ಉಳಿಸಿದ 27ರ ಯುವಕ

    ಅಂಗಾಂಗ ದಾನ ಮಾಡಿ ಇಬ್ಬರು ರೋಗಿಗಳ ಪ್ರಾಣ ಉಳಿಸಿದ 27ರ ಯುವಕ

    ಚೆನ್ನೈ: ಇತ್ತೀಚೆಗೆ ಕರ್ನಾಟಕದಲ್ಲಿ ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ಅವರು ಅಪಘಾತಕ್ಕೀಡಾಗಿ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ 4 ಜನರ ಪ್ರಾಣ ಉಳಿಸಿದ್ದರು. ಇದೀಗ ಇಂತದ್ದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

    ಹೌದು. ಬ್ರೈನ್ ಡೆಡ್ ಆಗಿರುವ ಯುವಕನೋರ್ವ ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಪ್ರಾಣ ಉಳಿಸುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾನೆ. ಯುವಕನನ್ನು ಸಲೀಂ ಎಂದು ಗುರುತಿಸಲಾಗಿದೆ. ರಸ್ತೆ ಅಪಘಾತಕ್ಕೀಡಾಗಿ ಸಲೀಂ ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲೇ ಅವರ ಬ್ರೈನ್ ಡೆಟ್ ಆಗಿರುವುದಾಗಿ ವೈದ್ಯರು ತಿಳಿಸಿದ್ದರು.

    ಇತ್ತ ಸಲೀಂ ಬ್ರೈನ್ ಡೆಡ್ ಆದ ವಿಚಾರ ತಿಳಿಯುತ್ತಿದ್ದಂತೆಯೇ ವೈದ್ಯರು ಆತನ ಕುಟುಂಬಕ್ಕೆ ಹೇಳಿದ್ದಾರೆ. ಈ ವೇಳೆ ಸಲೀಂ ಕುಟುಂಬಸ್ಥರು ಆತನ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಅನುಮತಿ ನೀಡಿದ್ದಾರೆ. ಈ ಮೂಲಕ ಬೇರೆಯವರ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಕುಟುಂಬಸ್ಥರು ಒಪ್ಪಿಗೆ ನೀಡಿದ ಬಳಿಕ ಸೇಲಂನ ತಜ್ಞರ ತಂಡ ಸಲೀಂ ಹೃದಯ ಹಾಗೂ ಶ್ವಾಸಕೋಶವನ್ನು ತೆಗೆದಿದ್ದಾರೆ. ಬಳಿಕ ಅಂಗಾಂಗಳನ್ನು ಅಗತ್ಯ ಇರುವವರಿಗೆಂದು ಸೇಲಂ ವಿಮಾನ ನಿಲ್ದಾಣದಿಂದ ಸಾಗಿಸಲಾಯಿತು. ಹೆಲಿಕಾಪ್ಟರ್ ಮೂಲಕ ಚೆನ್ನೈಗೆ ಸಾಗಿಸಲಾಯಿತು ಎಂದು ಎಂಜಿಎಂ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಯುವಕರಿಗೆ ಸಂಚಾರಿ ವಿಜಯ್ ಕಣ್ಣು ಜೋಡಣೆ

    ಇತ್ತ ಇಬ್ಬರು ರೋಗಿಗಳಿಗೆ ಅಂಗಾಂಗಗಳನ್ನು ಕಸಿ ಮಾಡುವ ಮೂಲಕ ಅವರ ಜೀವ ಉಳಿಸುವ ಕಾರ್ಯದಲ್ಲಿ ತಜ್ಞರ ತಂಡ ಯಶಸ್ವಿಯಾಯಿತು. ಕೋವಿಡ್ -19 ಪ್ರೋಟೋಕಾಲ್‍ಗಳನ್ನು ಅನುಸರಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಸಲೀಂನ ಉಳಿದ ಅಂಂಗಗಳನ್ನು ಇತರ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಇದನ್ನೂ ಓದಿ:  ಶಂಕರ್ ನಾಗ್, ಸುನಿಲ್, ಈಗ ಸಂಚಾರಿ ವಿಜಯ್ -ಅಪಘಾತದಲ್ಲೇ ಬದುಕು ಮುಗಿಸಿದ ಕನ್ನಡ ನಟರು

  • ವೃದ್ಧಾಶ್ರಮಕ್ಕೆ 1 ಲಕ್ಷ ನೀಡಿ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ವೃದ್ಧಾಶ್ರಮಕ್ಕೆ 1 ಲಕ್ಷ ನೀಡಿ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ಮಂಗಳೂರು: ಹಲವರು ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಈ ದಂಪತಿ ವೃದ್ಧಾಶ್ರಮಕ್ಕೆ 1 ಲಕ್ಷ ರೂ. ದೇಣಿಗೆ ನೀಡುವ ಮೂಲಕ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

    ನಗರದ ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿಯಾಗಿರುವ ಪುಷ್ಪಾವತಿ ಮತ್ತು ಶ್ರೀನಿವಾಸ್ ಅವರು ವೃದ್ಧಾಶ್ರಮಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ 42ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ದಂಪತಿ ತಮ್ಮ ಮದುವೆಯ ದಿನದ ಸವಿನೆನಪಿಗಾಗಿ ತಮ್ಮ ವೈಯಕ್ತಿಕವಾಗಿ ಶ್ರೀ ಸಭಾದ ಪುತ್ತೂರಿನ ಶಿವಸದನ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ.

    ಇವರ ಕೊಡುಗೆಯನ್ನು ಸುಬ್ರಹ್ಮಣ್ಯ ಸಭಾದ ಕಾರ್ಯದರ್ಶಿ ಕರುಣಾಕರ ಬೆಳ್ಳೆ, ಸಂತೋಷ ಕುಮಾರ್ ಮತ್ತು ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ ಕುಮಾರ್, ಉಪಾಧ್ಯಕ್ಷೆ ಸ್ನೇಹ ಲತಾ ದಿವಾಕರ್ ಸ್ವೀಕರಿಸಿದರು.

    ಇದೇ ವೇಳೆ ದಂಪತಿ ವಿವಾಹ ವಾರ್ಷಿಕೋತ್ಸವ ದಿನವನ್ನು ಹಾರ ಬದಲಾಯಿಸಿ, ರಾಗಿ ಹಾಲುಬಾಯಿ ಕಟ್ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಮಾತ್ರವಲ್ಲದೆ ಈ ದಂಪತಿ ಮಹಿಳಾ ವೇದಿಕೆ ಸದನ, ಸುರತ್ಕಲ್ ಸ್ಥಾನಿಕ ಸಂಘ ಹಾಗೂ ಚಿತ್ರಾಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಹಲವಾರು ವರ್ಷಗಳಿಂದ ಉಚಿತ ನೋಟ್ ಬುಕ್, ಪುಸ್ತಕ ವಿತರಣೆ ಸೇರಿದಂತೆ ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಿಗೆ ಹತ್ತು ಹಲವು ರೀತಿಯಲ್ಲಿ ತನುಮನ, ಧನ ಸಹಾಯ ನೀಡಿದ್ದಾರೆ.

    ನಿಮ್ಮ ಸೇವಾ ಮನೋಭಾವಕ್ಕೆ ಶ್ರೀ ಸುಬ್ರಹ್ಮಣ್ಯ ಸಭಾ ಮತ್ತು ಮಹಿಳಾ ವೇದಿಕೆಯಿಂದ ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ್ ಕುಮಾರ್ ಅಭಿನಂದನೆ ತಿಳಿಸಿದರು. ಅಲ್ಲದೆ ದಾಂಪತ್ಯ ಜೀವನ ಸುವರ್ಣ ಮಹೋತ್ಸವದತ್ತ ಸಾಗಲಿ ಎಂದು ಹಾರೈಸಿದರು.

  • ಉಪೇಂದ್ರ ಕೆಲ್ಸಕ್ಕೆ ಅಣ್ಣನ ಸಾಥ್ – ವಿವಾಹ ವಾರ್ಷಿಕೋತ್ಸವದ ಹಣ ನೀಡಿದ ಸುಧೀಂದ್ರ

    ಉಪೇಂದ್ರ ಕೆಲ್ಸಕ್ಕೆ ಅಣ್ಣನ ಸಾಥ್ – ವಿವಾಹ ವಾರ್ಷಿಕೋತ್ಸವದ ಹಣ ನೀಡಿದ ಸುಧೀಂದ್ರ

    ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೆ ಅವರ ಅಣ್ಣ ಸುಧೀಂದ್ರ ಅವರು ಉಪೇಂದ್ರ ಅವರ ಜೊತೆಗೆ ಕೈ ಜೋಡಿಸಿದ್ದಾರೆ.

    ಉಪೇಂದ್ರ ಅವರ ಅಣ್ಣ ಸುಧೀಂದ್ರ ಹಾಗೂ ಅತ್ತಿಗೆ ವೀಣಾ ಅವರು ಇಂದು 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಆಟೋ ಚಾಲಕರಿಗೆ ದಿನಸಿ ಕಿಟ್‍ಗಳನ್ನು ನೀಡುವ ಸಲುವಾಗಿ ಈ ದಿನ ಮೂರು ಲಕ್ಷ ರೂಪಾಯಿಗಳನ್ನು ಉಪೇಂದ್ರ ಅವರ ಕೈಗೆ ನೀಡಿದ್ದಾರೆ. ವಿವಾಹ ವಾರ್ಷೀಕೋತ್ಸವ ಅಂಗವಾಗಿ ಆರ್ಥಿಕ ನೆರವನ್ನು ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈ ಬಗ್ಗೆ ಉಪೇಂದ್ರ ಅವರು ಬಹಳ ಖುಷಿ ಹಾಗೂ ಹೆಮ್ಮೆಯಿಂದಲೇ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದು, ಅಣ್ಣ ಸುಧೀಂದ್ರ ಮತ್ತು ಅತ್ತಿಗೆ ವೀಣಾ ಅವರ 26 ನೇ ಮದುವೆ ವಾರ್ಷಿಕೋತ್ಸವ ಸಲುವಾಗಿ ಮೂರು ಲಕ್ಷ ರೂಗಳನ್ನು ಆಟೋ ಚಾಲಕರಿಗೆ ಕಿಟ್ ವಿತರಿಸಲು ನೀಡಿದ್ದಾರೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    ಉಪೇಂದ್ರ ಅವರು, ಹಿರಿಯ ಕಲಾವಿದರು, ಬಡವರು , ಆಟೋಚಾಲಕರು ಹೀಗೆ ಹಲವು ಮಂದಿಗೆ ದಿನಸಿ ಕಿಟ್ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉಪೆಂದ್ರ ಅವರ ಸಾಮಾಜಿಕ ಕಾರ್ಯಕ್ಕೆ ಹಲವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

  • 5 ಮಂದಿಯ ಬಾಳಿಗೆ ಬೆಳಕಾದ 20 ತಿಂಗಳ ಹೆಣ್ಣು ಮಗು!

    5 ಮಂದಿಯ ಬಾಳಿಗೆ ಬೆಳಕಾದ 20 ತಿಂಗಳ ಹೆಣ್ಣು ಮಗು!

    – 5 ಮಂದಿ ರೋಗಿಗಳ ಜೀವ ಉಳಿಸಿದ ದೇವತೆ
    – ಬಾಲ್ಕನಿಯಿಂದ ಬಿದ್ದ ಮೃತಪಟ್ಟಿದ್ದ ಧನಿಷ್ಠಾ

    ನವದೆಹಲಿ: 20 ತಿಂಗಳ ಪುಟ್ಟ ಕಂದಮ್ಮ 5 ಮಂದಿಯ ಪ್ರಾಣ ಉಳಿಸುವ ಮೂಲಕ ಭಾರತದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

    ಧನಿಷ್ಠಾ ತಾನು ಸಾವಿಗೀಡಾದರೂ 5 ಮಂದಿಯ ಪ್ರಾಣ ಉಳಿಸಿದ ಪುಟ್ಟ ಕಂದಮ್ಮ. ನವದೆಹಲಿಯ ರೋಹಿಣಿ ಮೂಲದವಳಾಗಿರುವ ಈಕೆ, ಮನೆಯ ಬಾಲ್ಕನಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಳು. ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಪೋಷಕರು ಕೂಡಲೇ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪುಟ್ಟ ಕಂದಮ್ಮನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಕೆ ಬದುಕುಳಿಯುವುದು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ದೇಹದ ಅಂಗಾಂಗಗಳನ್ನು ದಾನ ಮಾಡಲು ಹೆತ್ತವರು ನಿರ್ಧಾರ ಮಾಡಿದರು. ಅಂತೆಯೇ ಪುಟ್ಟ ಕಂದಮ್ಮ ಸದ್ಯ 5 ಮಂದಿ ರೋಗಿಗಳ ಪ್ರಾಣ ಉಳಿಸಿದ ದೇವತೆಯಾಗಿದ್ದಾಳೆ.

    ಪುಟಾಣಿಯ ಹೃದಯ, ಲಿವರ್ ಹಾಗೂ ಎರಡೂ ಕಿಡ್ನಿಗಳು ಮುಂತಾದ ದೇಹದ ಮುಖ್ಯವಾದ ಅಂಗಾಂಗಗಳನ್ನು ಆಸ್ಪತ್ರೆ ಸಿಬ್ಬಂದಿ 5 ಮಂದಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜೀವ ಉಳಿಸಿದ್ದಾರೆ.

    ಜನವರಿ 8 ರಂದು ಧನಿಷ್ಠಾ ಆಟವಾಡುತ್ತಿದ್ದ ಸಂದರ್ಭದಲ್ಲಿ ಮನೆಯ ಬಾಲ್ಕನಿಯ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಳು. ಗಂಭೀರ ಗಾಯಗೊಂಡಿದ್ದ ಆಕೆ ಜನವರಿ 11ರಂದು ಮೃತಪಟ್ಟಿದ್ದಾಳೆ. ಅವಳ ದೇಹದ ಅಂಗಾಂಗಗಳು ಅತ್ಯುತ್ತಮ ಸ್ಥಿತಿಯಲ್ಲಿದ್ದವು. ತಮ್ಮ ಮಗಳನ್ನು ಮತ್ತೆ ಎಂದಿಗೂ ಕಾಣದೇ ಇರುವುದನ್ನು ಮನಗಂಡ ಪೋಷಕರಾದ ಆಶಿಶ್ ಕುಮಾರ್ ಹಾಗೂ ಬಬಿತಾ ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.

    ನಾವು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಅಂಗಾಂಗಗಳ ಅವಶ್ಯಕತೆ ಇರುವ ಅನೇಕ ರೋಗಿಗಳನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ನಾವು ನಮ್ಮ ಮಗುವನ್ನು ಕಳೆದುಕೊಂಡರೂ ಆಕೆ ಬದುಕು ಮುಂದುವರಿಸುತ್ತಾಳೆ. ಈ ಮೂಲಕ ಆಕೆ ಬೇರೆಯವರಿಗೆ ಜೀವ ನೀಡುತ್ತಾಳೆ ಎಂದು ತಂದೆ ಆಶಿಶ್ ಕುಮಾರ್ ಗದ್ಗದಿತರಾದರು.

    ಪುಟ್ಟ ಕಂದಮ್ಮನ ಕುಟುಂಬದ ಈ ಉದಾತ್ತ ಕಾರ್ಯವು ನಿಜವಾಗಿಯೂ ಪ್ರಶಂಸನೀಯವಾಗಿದೆ. ಈ ಮಹತ್ತರ ಕಾರ್ಯ ಇತರರನ್ನು ಪ್ರೇರೇಪಿಸಬೇಕು. ನಮ್ಮ ದೇಶದಲ್ಲಿ ಅಂಗಾಂಗ ದಾನ ಮಾಡುವುದು ಅತ್ಯಂತ ವಿರಳ. ಅಂಗಾಂಗಗಳ ಕೊರತೆಯಿಂದ ಪ್ರತಿ ವರ್ಷ ಸರಾಸರಿ ಐದು ಲಕ್ಷ ಭಾರತೀಯರು ಸಾಯುತ್ತಾರೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಿ.ಎಸ್ ರಾಣಾ ತಿಳಿಸಿದ್ದಾರೆ.

  • ಗುಣಮುಖರಾದವರು ಧರ್ಮ ಮರೆತು ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿ: ಕೇಜ್ರಿವಾಲ್

    ಗುಣಮುಖರಾದವರು ಧರ್ಮ ಮರೆತು ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿ: ಕೇಜ್ರಿವಾಲ್

    ನವದೆಹಲಿ: ಕೊರೊನಾ ವೈರಸ್‍ನಿಂದ ಚೇತರಿಸಿಕೊಂಡ ವ್ಯಕ್ತಿಗಳು, ಸೋಂಕಿತ ರೋಗಿಗಳಿಗೆ ಧರ್ಮ ಮೀರಿ ಪ್ಲಾಸ್ಮಾ ದಾನ ಮಾಡಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಮಾತನಾಡಿರುವ ಅವರು, ಕೊರೊನಾ ವಿರುದ್ಧ ಹೋರಾಟಕ್ಕೆ ಪ್ಲಾಸ್ಮಾ ಥೆರಪಿ ಹೊಸ ಆಯುಧ, ರಕ್ತಕ್ಕೆ ಯಾವುದೇ ಧರ್ಮ ಬೇಧವಿಲ್ಲ, ಹಿಂದೂ ರಕ್ತ ಮುಸ್ಲಿಂರನ್ನು, ಮುಸ್ಲಿಂ ರಕ್ತ ಹಿಂದೂಗಳನ್ನು ಉಳಿಸವುದು, ಪೂರ್ವಾಗ್ರಹ ಪೀಡಿತರಾಗದೆ ಪ್ಲಾಸ್ಮಾ ದಾನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

    ನಾವೇಲ್ಲರೂ ಕೊರೊನಾ ಸಂಕಷ್ಟದಿಂದ ಹೊರ ಬಂದು ಬದುಕಲು ಪ್ರಯತ್ನಿಸುತ್ತೇವೆ. ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಬೇಕು. ನೀವು ನೀಡುವ ಪ್ಲಾಸ್ಮಾ ಹಿಂದೂ, ಮುಸ್ಲಿಂ ಯಾರ ಜೀವ ಉಳಿಸಬಹುದು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ, ನಾವು ಜೀವ ಉಳಿಸುವ ಕೆಲಸ ಮಾಡಬೇಕು ಎಂದರು.

    ಕೊರೊನಾ ಸೋಂಕಿತ ವ್ಯಕ್ತಿಗಳಲ್ಲಿ ಪ್ಲಾಸ್ಮಾ ಥೆರಪಿ ಬಳಿಕ ಚೇತರಿಕೆ ಕಂಡು ಬಂದಿದ್ದು, ದೆಹಲಿಯಲ್ಲಿ ಹಲವು ರೋಗಿಗಳು ಗುಣ ಮುಖರಾಗಿದ್ದಾರೆ. ಈ ಹಿನ್ನಲೆ ಕೊರೊನಾದಿಂದ ಗುಣಮುಖರಾದ ಜನರಿಗೆ ಪ್ಲಾಸ್ಮಾ ದಾನ ಮಾಡಲು ಕೋರಿದ್ದಾರೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

  • ವರ್ಷಪೂರ್ತಿ ಕೂಲಿ ಮಾಡಿ ಉಳಿಸಿದ್ದ ಹಣವನ್ನ ದೇಣಿಗೆ ನೀಡಿದ ಅಜ್ಜಿ

    ವರ್ಷಪೂರ್ತಿ ಕೂಲಿ ಮಾಡಿ ಉಳಿಸಿದ್ದ ಹಣವನ್ನ ದೇಣಿಗೆ ನೀಡಿದ ಅಜ್ಜಿ

    – ಖರ್ಚು ಮಾಡಲು ಮನಸ್ಸಾಗಿಲ್ಲ ಎಂದ ಅಜ್ಜಿ
    – ಕೂಲಿ ಮಾಡಿ ಏಕಾಂಗಿಯಾಗಿ ವಾಸ

    ತಿರುವನಂತಪುರಂ: ಕೊರೊನಾ ವೈರಸ್ ಹೋರಾಟಕ್ಕೆ ಈಗಾಗಲೇ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ 70 ವರ್ಷದ ಅಜ್ಜಿಯೊಬ್ಬರು ಕೂಲಿ ಮಾಡಿ ಉಳಿತಾಯ ಮಾಡಿದ್ದ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಲಲಿತಮ್ಮ ದೇಣಿಗೆ ನೀಡಿದ ಅಜ್ಜಿ. ಇವರು ಪ್ರತಿವರ್ಷ ತಮ್ಮ ವರ್ಷಪೂರ್ತಿ ಮಾಡಿದ್ದ ಉಳಿತಾಯವನ್ನು ಹತ್ತಿರದ ದೇವಸ್ಥಾನದಲ್ಲಿ ನಡೆಯುವ ಹಬ್ಬಕ್ಕಾಗಿ ದಾನ ಮಾಡುತ್ತಿದ್ದರು. ಇವರಿಗೆ ಮಾಸಿಕ 1,200 ರೂ. ಪಿಂಚಣಿ ಬರುತ್ತದೆ. ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಬರುವ ವೇತನದಿಂದ ಸ್ವಲ್ಪ ಉಳಿತಾಯ ಮಾಡಿದ್ದರು.

    ಕೊರೊನಾದಿಂದ ಈ ವರ್ಷ ದೇವಾಲಯ ಉತ್ಸವ ನಡೆಯಲಿಲ್ಲ. ಹೀಗಾಗಿ ಅವರು ತಮ್ಮ ಉಳಿತಾಯದ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಿದರು. 70 ವರ್ಷದ ಲಲಿತಮ್ಮ ಕೊಲ್ಲಂ ಜಿಲ್ಲೆಯ ಅರಿನಲ್ಲೂರ್ ನಲ್ಲಿರುವ ಒಂದು ಶೆಡ್‍ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಲಲಿತಮ್ಮ 2009 ರವರೆಗೆ ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

    ಇದು ನನ್ನ ಕಳೆದ ಒಂದು ವರ್ಷದ ಉಳಿತಾಯ. ಆದರೆ ನನ್ನ ಸ್ವಂತ ಬಳಕೆಗಾಗಿ ಹಣವನ್ನು ಖರ್ಚು ಮಾಡಬೇಕು ಎಂದು ನನಗೆ ಅನಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಕೊರೊನಾ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಹೀಗಾಗಿ ನಾನು ಅದೇ ಹಣವನ್ನು ದೇಣಿಗೆಯಾಗಿ ನೀಡಿದ್ದೇನೆ. ಮೊದಲಿಗೆ ನಾನು ಈ ಹಣವನ್ನು ಹೇಗೆ ಪರಿಹಾರ ನಿಧಿಗೆ ನೀಡುವುದು ಎಂದು ಯೋಚಿಸಿದೆ. ನಮ್ಮ ಮನೆಯ ಜಂಕ್ಷನ್‍ನಲ್ಲಿ ಪ್ರತಿದಿನ ಪೊಲೀಸ್ ವಾಹನ ಹೋಗುತ್ತದೆ. ಒಂದು ದಿನ ಆ ವಾಹನವನ್ನು ನಿಲ್ಲಿಸಿ, ಪೊಲೀಸ್ ಅಧಿಕಾರಿಗೆ ನಾನು ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಬೇಕು ಎಂದು ಕೇಳಿದೆ. ಅವರು ನಿಮ್ಮ ಬಳಿಗೆ ಅಧಿಕಾರಿಗಳು ಬರುವುದಾಗಿ ಹೇಳಿ ಹೋದರು.

    ಎರಡು ದಿನಗಳ ನಂತರ ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಕುಮಾರ್ ಮತ್ತು ಅವರ ಸಹೋದ್ಯೋಗಿಗಳು ಹಣವನ್ನು ಪಡೆದುಕೊಂಡರು ಎಂದು ತಿಳಿಸಿದ್ದಾರೆ. ಲಲಿತಮ್ಮ ವರ್ಷ ಪೂರ್ತಿ ಉಳಿಸಿದ್ದ 5,101 ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

    ನನ್ನ ಮಗಳು ಮತ್ತು ಮಗ ಮದುವೆಯಾಗಿ ಹತ್ತಿರದಲ್ಲೇ ವಾಸಿಸುತ್ತಿದ್ದಾರೆ. ಆದರೆ ನಾನು ಯಾರನ್ನೂ ಅವಲಂಬಿಸದೆ ಏಕಾಂಗಿಯಾಗಿ ಬದುಕಲು ಇಷ್ಟಪಡುತ್ತೇನೆ. ಸದ್ಯಕ್ಕೆ ದೇಶ ಕೊರೊನಾ ವೈರಸ್‍ನಿಂದ ಮುಕ್ತವಾಗಬೇಕು. ಆಗ ದೈನಂದಿನ ಕೂಲಿ ಕಾರ್ಮಿಕರಾಗಿರುವ ನನ್ನಂತ ಜನರು ಮತ್ತೆ ಕೆಲಸಕ್ಕೆ ಹೋಗಬಹುದು ಎಂದು ಲಲಿತಮ್ಮ ಹೇಳಿದರು.