Tag: donald trump

  • ಚಾರ್ಲಿ ಕಿರ್ಕ್‌ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್‌ ಟ್ರಂಪ್‌

    ಚಾರ್ಲಿ ಕಿರ್ಕ್‌ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್‌ ಟ್ರಂಪ್‌

    ವಾಷಿಂಗ್ಟನ್: ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ (Charlie Kirk) ಹತ್ಯೆಯ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.

    ಈ ಕುರಿತು ಫಾಕ್ಸ್‌ ನ್ಯೂಸ್‌ಗೆ ಲೈವ್‌ ಸ್ಟುಡಿಯೋ ಸಂದರ್ಶನದಲ್ಲಿ ಟ್ರಂಪ್‌, ಶಂಕಿತ ಆರೋಪಿ ಸಿಕ್ಕಿಬಿದ್ದಿದ್ದಾನೆಂದು ನಾನು ಖಚಿತವಾಗಿ ಹೇಳಬಲ್ಲೆ. ಆರೋಪಿಗೆ ಹತ್ತಿರವಿದ್ದವರೇ ಆತನನ್ನು ಹಿಡಿದು ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಬಂದೂಕು ಸಂಸ್ಕೃತಿ ವಿರೋಧಿಸಿ ಮಾತನಾಡುವಾಗಲೇ ಟ್ರಂಪ್‌ ಸ್ನೇಹಿತ, ಉದ್ಯಮಿ ಗುಂಡೇಟಿಗೆ ಬಲಿ

    ಬುಧವಾರ ಉತಾಹ್‌ನಲ್ಲಿ ಭಾಷಣ ಮಾಡುತ್ತಿದ್ದಾಗ ಅನಾಮಿಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕಿರ್ಕ್ ಸಾವನ್ನಪ್ಪಿದ್ದರು. ಅಲ್ಲಿನ ಗವರ್ನರ್ ಇದನ್ನು ರಾಜಕೀಯ ಪ್ರೇರಿತ ಹತ್ಯೆ ಎಂದು ಕರೆದಿದ್ದಾರೆ. ಟ್ರಂಪ್ ಅವರ ಆಪ್ತ ಮತ್ತು ಕಟ್ಟಾ ಬಲಪಂಥೀಯ ಕಾರ್ಯಕರ್ತ ಕಿರ್ಕ್, ‘ಟರ್ನಿಂಗ್ ಪಾಯಿಂಟ್ USA’ ರಾಜಕೀಯ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದರು.

    ಬುಧವಾರ ಚಾರ್ಲಿ ಕಿರ್ಕ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯಗಳು ಮತ್ತು ಫೋಟೋಗಳ ಸರಣಿಯನ್ನು ಎಫ್‌ಬಿಐ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ನೇಪಾಳದ ಪ್ರಧಾನಿ ರೇಸ್‌ನಲ್ಲಿ ಬೆಂಗ್ಳೂರು ನಂಟಿನ ಬಲೇನ್ ಶಾ ಹೆಸರು ಮುನ್ನಲೆಗೆ

  • Explained| ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಅಮೆರಿಕದ ʼವರಿʼ ಏನು?

    Explained| ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಅಮೆರಿಕದ ʼವರಿʼ ಏನು?

    ಭಾರತವನ್ನು ಡೆಡ್‌ ಎಕಾನಮಿ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ವರಸೆ ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತ. ಅವರ ಜೊತೆ ಮಾತನಾಡಲು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಎರಡು ಬಾರಿ ಮೋದಿ ನನ್ನ ಸ್ನೇಹಿತ ಎಂದು ಕರೆಯುವ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ್ದಾರೆ. ಹೀಗಾಗಿ ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಟ್ರಂಪ್‌ ಮಾತನ್ನು ನಾವು ನಂಬಬಹುದೇ? ಅಮೆರಿಕದ ʼವರಿʼ ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.

    ತಲೆ ಕೆಡಿಸಿಕೊಳ್ಳದ ಭಾರತ:
    ಡೊನಾಲ್ಡ್‌ ಟ್ರಂಪ್‌ (Donald Trump) ತೆರಿಗೆ ಸಮರ ಆರಂಭಿಸಿದ ಬಳಿಕ ಯುರೋಪ್‌ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಅಮೆರಿಕಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಬೇರೆ ದೇಶಗಳಂತೆ ಭಾರತವು (India) ಅಮೆರಿಕದ ಜೊತೆ ಮಾತುಕತೆ ನಡೆಸುತ್ತಿತ್ತು. ಮಾತುಕತೆಯ ವೇಳೆ ಡೈರಿ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿತ್ತು. ಹಲವು ಸುತ್ತಿನ ಮಾತುಕತೆ ನಡೆದರೂ ಭಾರತ ತನ್ನ ಹಠವನ್ನು ಬಿಟ್ಟಿರಲಿಲ್ಲ. ಇದಕ್ಕೆ ಸಿಟ್ಟಾದ ಟ್ರಂಪ್‌ ಭಾರತದ ಕೆಲ ವಸ್ತುಗಳ ಮೇಲೆ 25% ಸುಂಕ ವಿಧಿಸಿದರು.

    ಅಮೆರಿಕ ಸುಂಕ ವಿಧಿಸುತ್ತಿದ್ದಂತೆ ಭಾರತ ಆಫ್ರಿಕಾ, ಏಷ್ಯಾ, ಯರೋಪ್‌ ಜೊತೆ ವ್ಯಾಪಾರ ಮಾತುಕತೆ ನಡೆಸಲು ಮುಂದಾಯಿತು. ಈ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ ಟ್ರಂಪ್‌ ಮತ್ತೆ 25% ಸುಂಕ ಹೇರಿದರು. ಪರಿಣಾಮ ಆಮದಾಗುವ ಭಾರತದ ಕೆಲ ವಸ್ತುಗಳಿಗೆ ಈಗ ಅಮೆರಿಕದಲ್ಲಿ 50% ಸುಂಕ ವಿಧಿಸಲಾಗಿದೆ. ಇದನ್ನೂ ಓದಿ: ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್‌

     

    ಭಾರತ ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ನೀಡದೇ ಇದ್ದರೂ ಮೋದಿ (Narendra Modi) ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯಲ್ಲಿ ಭಾಗಿಯಾಗಿದರು. 7 ವರ್ಷದ ಬಳಿಕ ಚೀನಾಗೆ ಭೇಟಿ ನೀಡಿದರು. ಮೋದಿ, ಕ್ಸಿ ಜಿನ್‌ಪಿಂಗ್‌, ಪುಟಿನ್‌ ಮಾತುಕತೆ ವಿಶ್ವದಲ್ಲಿ ಸಂಚಲನ ಮೂಡಿಸಿತು. ಅದರಲ್ಲೂ ಮೋದಿ ಮತ್ತು ಪುಟಿನ್‌ ಕಾರಿನಲ್ಲಿ ಇಬ್ಬರೇ ಸುಮಾರು 30 ನಿಮಿಷ ಮಾತನಾಡಿದ್ದು ದೊಡ್ಡ ಸುದ್ದಿಯಾಯಿತು. ಈ ಸಭೆಯ ಮುಗಿದ ಕೆಲ ದಿನದ ಬಳಿಕ ಟ್ರಂಪ್‌ ಅವರು ನಮ್ಮ ಸ್ನೇಹಿತನಾಗಿದ್ದ ಭಾರತ ಮತ್ತು ರಷ್ಯಾವನ್ನು ಚೀನಾಗೆ ಬಿಟ್ಟುಕೊಟ್ಟಿದ್ದೇವೆ ಎಂದು ಪೋಸ್ಟ್‌ ಮಾಡಿದ್ದರು.

    ಇನ್ನೊಂದು ಕಡೆ ಟ್ರಂಪ್‌ ಅವರ ವ್ಯಾಪಾರ ಸಲಹೆಗಾರ ಪೀಟರ್‌ ನವರೋ, ಭಾರತವು ಬ್ಲಡ್‌ ಮನಿ ನೀಡಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕ ಏನೇ ಮಾತನಾಡಿದರೂ ತಲೆ ಕೆಡಿಸಿಕೊಳ್ಳದ ಭಾರತ ಜಿಎಸ್‌ಟಿ ದರವನ್ನು ಪರಿಷ್ಕರಿಸಿತು ಮತ್ತು ಬೇರೆ ದೇಶಗಳ ಜೊತೆ ವ್ಯಾಪಾರ ಮಾತುಕತೆ ನಡೆಸುತ್ತಿದೆ.

    ಟ್ರಂಪ್‌ಗೆ ಭಾರತದ ಮೇಲೆ ಸಿಟ್ಯಾಕೆ?
    ಟ್ರಂಪ್‌ ಸಿಟ್ಟಿಗೆ ಹಲವು ಕಾರಣಗಳನ್ನು ನೀಡಬಹುದು. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಟ್ಯಾರಿಫ್‌ ಹಾಕುವ ದೇಶ ಎಂದು ಟ್ರಂಪ್‌ ಮೊದಲ ಅವಧಿಯಲ್ಲೇ ದೂರಿದ್ದರು. ಎರಡನೇಯದ್ದಾಗಿ ಭಾರತ ಈಗ ಮೊದಲಿನಂತೆ ಇಲ್ಲ. ಚೀನಾದಂತೆ ಉತ್ಪದನಾ ವಲಯ ದೇಶವಾಗಿ ನಿಧಾನವಾಗಿ ಬದಲಾಗುತ್ತಿದೆ. ಅಮೆರಿಕ ಮತ್ತು ಯರೋಪಿಯನ್‌ ಯೂನಿಯನ್‌ಗಳು ಮೊದಲಿನಿಂದಲೂ ಭಾರತ ಬಡ ದೇಶ ಎಂದು ಹೇಳುತ್ತಾ ಬಂದಿದ್ದವು. ಆದರೆ ಈಗ ಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಬದಲಾಗಿದೆ. ಅಷ್ಟೇ ಅಲ್ಲೇ ವಿಶ್ವದ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಿರಂತರವಾಗಿ ಮೊದಲ ಸ್ಥಾನದಲ್ಲೇ ಮುನ್ನಡೆಯುತ್ತಿದೆ. ಇದನ್ನು ಅರಗಿಸಿಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಭಾರತವನ್ನು ಮತ್ತೊಂದು ಚೀನಾ ಆಗಲು ನಾನು ಬಿಡುವುದಿಲ್ಲ. ಅಮೆರಿಕದ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಬೇಡಿಕೆಯನ್ನು ಟ್ರಂಪ್‌ ಮುಂದಿಟ್ಟಿದ್ದಾರೆ.

    ಇನ್ನೊಂದು ಮುಖ್ಯ ಕಾರಣ ಆಪರೇಷನ್‌ ಸಿಂಧೂರ ಕಾರ್ಯಾಚರಣೆ. ಆಪರಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಮುಖ್ಯವಾಗಿ ರಾವಲ್ಪಿಂಡಿ ಬಳಿಯ ನೂರ್‌ ಖಾನ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು ಅಮೆರಿಕಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮೆರಿಕ ನಿರ್ಮಿತ ಎಫ್‌16 ಯುದ್ಧ ವಿಮಾನಗಳಿದ್ದ ಈ ನೆಲೆಯ ಮೇಲೆ ಭಾರತ ದಾಳಿ ಮಾಡಿತ್ತು. ದಾಳಿಯಿಂದಾಗಿ ಹಲವು ಎಫ್‌16 ಯುದ್ಧ ವಿಮಾನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಇದನ್ನು ಅಮೆರಿಕದ ಅನಧಿಕೃತ ವಾಯು ನೆಲೆ ಎಂದೇ ಕರೆಯಲಾಗುತ್ತದೆ.

    ಕೆಲ ರಕ್ಷಣಾ ವಿಶ್ಲೇಷಕರ ಪ್ರಕಾರ, ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ ಅಮೆರಿಕದ ಪರ್ಲ್‌ ಹರ್ಬರ್‌ ನೌಕಾ ನೆಲೆಯ ಮೇಲೆಯ ದಾಳಿ ನಡೆಸಿತ್ತು. ಈ ದಾಳಿಯ ನಂತರ ಅಮೆರಿಕ ನಿರ್ಮಿತ ಯುದ್ಧ ವಿಮಾನಗಳ ಮೇಲೆ ನಡೆದ ಭೀಕರ ದಾಳಿ ಇದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಭಾರತ ಮತ್ತು ಪಾಕ್‌ ನಡುವಿನ ಯುದ್ಧ ನಿಲ್ಲಿಸಲು ನಾನು ಕಾರಣ ಎಂದು ಟ್ರಂಪ್‌ ಹೇಳುತ್ತಾ ಬಂದಿದ್ದಾರೆ. ಆದರೆ ಭಾರತ ಇಲ್ಲಿಯವರೆಗೆ ಟ್ರಂಪ್‌ಗೆ ಯಾವುದೇ ಕ್ರೆಡಿಟ್‌ ನೀಡಿಲ್ಲ. ಆದರೆ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದಕ್ಕೆ ಟ್ರಂಪ್‌ ಹೆಸರನ್ನು ನೊಬೆಲ್‌ ಪ್ರಶಸ್ತಿಗೆ ಶಿಫಾರಸು ಮಾಡಿದೆ.

    ಪ್ರಧಾನಿ ಮೋದಿ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿಯಾಗಲು ಕೆನಡಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಟ್ರಂಪ್‌ ಮೋದಿ ಅವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಮೋದಿ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವ ಕಾರಣ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಟ್ರಂಪ್‌ ಆಹ್ವಾನ ನೀಡುವಾಗ ಪಾಕ್‌ ಸೇನಾ ಮುಖ್ಯಸ್ಥ ಆಸೀಫ್‌ ಮುನೀರ್‌ ಸಹ ಅಮೆರಿಕದಲ್ಲೇ ಇದ್ದರು. ಒಂದು ವೇಳೆ ಅಮೆರಿಕಕ್ಕೆ ತೆರಳಿದ್ದರೆ ಮೋದಿ ಮತ್ತು ಮುನೀರ್‌ ಜೊತೆ ನಿಂತು ಯುದ್ಧ ನಿಲ್ಲಿಸಿದ್ದು ನಾನು ಎಂದು ಪೋಸ್‌ ಕೊಡಲು ಟ್ರಂಪ್‌ ಮುಂದಾಗಿದ್ದರು. ಆದರೆ ಮೋದಿ ನಯವಾಗಿ ಟ್ರಂಪ್‌ ಆಹ್ವಾನವನ್ನು ತಿರಸ್ಕರಿಸಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ಅಜರ್‌ಬೈಜನ್‌ ಮತ್ತು ಅರ್ಮೇನಿಯಾದ ಮಧ್ಯೆ ಕಿತ್ತಾಟ ನಡೆದಾಗ ಟ್ರಂಪ್‌ ಈ ಎರಡು ದೇಶಗಳ ಮುಖ್ಯಸ್ಥರನ್ನು ಶ್ವೇತ ಭವನಕ್ಕೆ ಕರೆಸಿ ಮಾತನಾಡಿದ್ದರು. ರಷ್ಯಾ- ಉಕ್ರೇನ್‌ ಮಧ್ಯೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪುಟಿನ್‌ ಜೊತೆ ಕರೆ ಮಾಡುವಾಗ ಯುರೋಪಿನ ನಾಯಕರನ್ನು ತನ್ನ ನಿವಾಸಕ್ಕೆ ಟ್ರಂಪ್‌ ಕರೆಸಿ ನಾನು ಬಾಸ್‌ ಎಂಬಂತೆ ವರ್ತಿಸಿದ್ದರು.

    ಟ್ರಂಪ್‌ ಮಧ್ಯಸ್ಥಿತಿಕೆಯಲ್ಲಿ ಕದನ ವಿರಾಮ ಘೋಷಿಸಿದ ಅಜರ್‌ಬೈಜನ್, ಅರ್ಮೇನಿಯಾ
    ಟ್ರಂಪ್‌ ಮಧ್ಯಸ್ಥಿತಿಕೆಯಲ್ಲಿ ಕದನ ವಿರಾಮ ಘೋಷಿಸಿದ ಅಜರ್‌ಬೈಜನ್, ಅರ್ಮೇನಿಯಾ

    ಭಾರತದ ಜೊತೆಗಿನ ವ್ಯಾಪಾರ ಮಾತುಕತೆ ವಿಫಲವಾದ ನಂತರ ಟ್ರಂಪ್‌ ನಾಲ್ಕು ಬಾರಿ ಮೋದಿ ಅವರಿಗೆ ಕರೆ ಮಾಡಿದ್ದರು. ಆದರೆ ಮೋದಿ ಅವರು ಟ್ರಂಪ್‌ ಕರೆಯನ್ನು ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಈ ಎಲ್ಲಾ ಕಾರಣಕ್ಕೆ ಟ್ರಂಪ್‌ ಭಾರತದ ವಿರುದ್ಧ ಸಿಟ್ಟಾಗಿರಬಹುದು ಎನ್ನಲಾಗುತ್ತಿದೆ.

    ಯುರೋಪಿಯನ್‌ ನಾಯಕರ ಜೊತೆ ಟ್ರಂಪ್‌ ಮಾತು

    ಈಗ ಭಾರತದ ಜಪ ಯಾಕೆ?
    ಅಣುಬಾಂಬು ಸ್ಫೋಟ ಮಾಡಿದ್ದಕ್ಕೆ ಸಿಟ್ಟಾದ ಅಮೆರಿಕ ನಿರ್ಬಂಧ ಹೇರಿದ್ದರಿಂದ ಭಾರತ ರಷ್ಯಾದ ಕಡೆ ವಾಲಿತ್ತು. ಆದರೆ 2000ದ ಬಳಿಕ ಭಾರತ ಮತ್ತು ಅಮೆರಿಕ ಸಂಬಂಧ ನಿಧಾನವಾಗಿ ಸುಧಾರಣೆಯಾಗತೊಡಗಿತು. ಅದರಲ್ಲೂ ಮೋದಿ ಅವರ ಅವಧಿಯಲ್ಲಿ ಒಬಾಮಾ ಭಾರತಕ್ಕೆ ಬಂದಿದ್ದರು. ಅಷ್ಟೇ ಅಲ್ಲದೇ ಟ್ರಂಪ್‌ ಭಾರತಕ್ಕೆ ಆಗಮಿಸಿ ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಉದ್ಘಾಟಿಸಿದ್ದರು. ಮೋದಿ ಅವರು ಟ್ರಂಪ್‌ ಅವರ ಪರ ಅಮೆರಿಕದಲ್ಲಿ ಪ್ರಚಾರ ಸಹ ನಡೆಸಿದ್ದರು. ಭಾರತ ಮತ್ತು ಅಮೆರಿಕದ ಸಂಬಂಧ ಉತ್ತಮವಾಗುತ್ತಿರುವ ಸಮಯದಲ್ಲೇ ಟ್ರಂಪ್‌ ಸುಂಕ ಸಮರ ಹೇರಿದ್ದರು.

    ಸುಂಕ ಸಮರದ ಬಳಿಕ ಯಾರೂ ನೀರಿಕ್ಷೆ ಮಾಡದ ರೀತಿಯಲ್ಲಿ ಭಾರತ, ಚೀನಾ ಒಂದಾಗಿದೆ. ಸದ್ಯ ವಿಶ್ವದಲ್ಲಿ ಸದ್ಯ ಅಮೆರಿಕಕ್ಕೆ ಸಡ್ಡು ಹೊಡೆಯಬಲ್ಲ ಸಾಮರ್ಥ್ಯ ಇರುವ ದೇಶ ಯಾವುದು ಎಂದರೆ ಅದು ಚೀನಾ ಮಾತ್ರ. ಇನ್ನೊಂದು ಕಡೆ ಏಷ್ಯಾದಲ್ಲಿ ಚೀನಾಗೆ ಪ್ರತಿಸ್ಪರ್ಧಿಯಾಗಬಲ್ಲ ದೇಶ ಯಾವುದು ಎಂದರೆ ಅದು ಭಾರತ. ಹೀಗಾಗಿ ಭಾರತದ ಜೊತೆ ಅಮೆರಿಕದ ಸಂಬಂಧ ಸುಧಾರಿಸಿತ್ತು. ಆದರೆ ಟ್ರಂಪ್‌ ನೀತಿಯಿಂದಾಗಿ ಭಾರತ ಅಮೆರಿಕದ ಸಂಬಂಧ ಈಗ ಹಾಳಾಗಿದೆ.

    ಭಾರತ, ಚೀನಾ, ರಷ್ಯಾದ ನಾಯಕರು ಒಂದಾಗಿ ಮಾತುಕತೆ ನಡೆಸಿದ ಬಳಿಕ ಅಮೆರಿಕದ ಮಾಜಿ ಅಧಿಕಾರಿಗಳು ಟ್ರಂಪ್‌ ನೀತಿಯನ್ನು ಪ್ರತಿನಿತ್ಯ ಟೀಕಿಸುತ್ತಿದ್ದಾರೆ. ರಷ್ಯಾ, ಚೀನಾಕ್ಕಿಂತಲೂ ಸದ್ಯ ಭಾರತ ನಮಗೆ ಅಗತ್ಯವಿದೆ. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತವನ್ನು ನಾವು ಕಳೆದುಕೊಂಡರೆ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

    ಅಮೆರಿಕದವರು ಭಾರತದ ಪರ ಮಾತನಾಡಲು ಕಾರಣ ಸಹ ಇದೆ. ವಿಶ್ವದ ಆರ್ಥಿಕತೆಯಲ್ಲಿ ಅಮೆರಿಕ ನಂಬರ್‌ ಒನ್‌ ಹೌದು. ಆದರೆ ವಿಶ್ವದ ಜನಸಂಖ್ಯೆಯಲ್ಲಿ ಭಾರತ, ಚೀನಾ, ರಷ್ಯಾದ ರಾಷ್ಟ್ರಗಳ ಜನಸಂಖ್ಯೆ ಶೇ.34 ರಷ್ಟಿದೆ. ಅಮೆರಿಕದ ಜನಸಂಖ್ಯೆ 34 ಕೋಟಿ ಇದ್ದರೆ ಭಾರತದಲ್ಲಿ 144 ಕೋಟಿ, ಚೀನಾದಲ್ಲಿ 143 ಕೋಟಿ, ರಷ್ಯಾದಲ್ಲಿ 14.6 ಕೋಟಿ ಜನರಿದ್ದಾರೆ. ಅಂದರೆ ಅಮೆರಿಕ ಜನಸಂಖ್ಯೆಯ 9 ಪಟ್ಟು ಜನಸಂಖ್ಯೆ ಈ ದೇಶಗಳಲ್ಲಿ ಇದೆ. ಹಿಂದೆ ಜನಸಂಖ್ಯೆಯನ್ನು ನಾವು ಶಾಪ ಎಂದುಕೊಂಡಿದ್ದೆವು. ಆದರೆ ಈಗ ಜನಸಂಖ್ಯೆಯೇ ನಮ್ಮ ಶಕ್ತಿಯಾಗಿದೆ. ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ ಭಾರತ ಮತ್ತು ಚೀನಾದಲ್ಲಿದೆ. ಭಾರತ ಮತ್ತು ಚೀನಾ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದರೆ ತೈಲವನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಆದರೆ ಈಗ ತೈಲಕ್ಕೂ ನಮಗೆ ರಷ್ಯಾದಂತಹ ಸ್ನೇಹಿತ ಸಿಕ್ಕಿದ್ದಾನೆ.

    ಅಮೆರಿಕ ಮತ್ತು ಯುರೋಪ್‌ ದೇಶಗಳು ವಿಶ್ವವನ್ನು ಹೇಗೆ ಬೇಕಾದರೂ ಆಡಿಸಬಹುದು ಎಂದು ಅಹಂಕಾರದಿಂದ ವರ್ತಿಸುತ್ತಿದ್ದವು. ಆದರೆ ರಷ್ಯಾ ಉಕ್ರೇನ್‌ ಯುದ್ಧದಿಂದ ಈ ದೇಶಗಳಿಗೂ ನಮ್ಮ ಆಟ ಇನ್ನುಮುಂದೆ ನಡೆಯುವುದಿಲ್ಲ ಎನ್ನುವುದು ಗೊತ್ತಾಗಿದೆ. ರಷ್ಯಾದ ಖಾತೆಯನ್ನು ಫ್ರೀಜ್‌ ಮಾಡಿದಾಗ ರಷ್ಯಾದ ಆರ್ಥಿಕತೆ ಪತನವಾಗಿ ಯುದ್ಧದಲ್ಲಿ ಸೋಲಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಆದರೆ ಕಥೆ ಬದಲಾಗಿದ್ದು ಭಾರತ ಮತ್ತು ಚೀನಾ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿತು. ಪರಿಣಾಮ ಆರ್ಥಿಕತೆ ಅಷ್ಟೊಂದು ಸಮಸ್ಯೆಯಾಗಲಿಲ್ಲ ಮತ್ತು ವಿಶ್ವದ ಕಚ್ಚಾ ತೈಲ ಬೆಲೆಯೂ ಏರಲಿಲ್ಲ.

    ಒಂದು ವೇಳೆ ಅಮರಿಕ ಯುರೋಪ್‌ ಒತ್ತಡಕ್ಕೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿಯಾಗಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 150 ರಿಂದ 200 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿತ್ತು. ಆದರೆ ಭಾರತ, ಚೀನಾದ ಪ್ರಯತ್ನದಿಂದ ಕಚ್ಚಾ ತೈಲ ದರ ನಿಯಂತ್ರಣದಲ್ಲಿದೆ. ಭಾರತ ತನ್ನ ಮಾತನ್ನು ಕೇಳುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಟ್ರಂಪ್‌ ಈಗ ಸ್ವಲ್ಪ ಸಾಫ್ಟ್‌ ಆದಂತೆ ಕಾಣುತ್ತಿದೆ.

     

     

    ಅಮೆರಿಕವನ್ನು ನಂಬಬಹುದೇ?
    ಈಗ ಏನೋ ಟ್ರಂಪ್‌ ಮೋದಿ ನನ್ನ ಮಿತ್ರ ಎಂದು ಹೇಳುತ್ತಿದ್ದರೂ ಶ್ವೇತ ಭವನದ ಅಧಿಕಾರಿಗಳು ಭಾರತವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಟ್ರಂಪ್‌ ಯುರೋಪ್‌ ದೇಶಗಳಿಗೆ ಭಾರತದಿಂದ ಆಮದಾಗುವ ವಸ್ತುಗಳಿಗೆ 100% ತೆರಿಗೆ ವಿಧಿಸುವಂತೆ ಹೇಳಿರುವುದಾಗಿ ವರದಿಯಾಗಿದೆ.

    ಆಪರೇಷನ್ ಸಿಂಧೂರದ ಬಳಿಕ ಟ್ರಂಪ್‌ ಪಾಕಿಸ್ತಾನಕ್ಕೆ ಆಪ್ತರಾಗಿದ್ದಾರೆ. ತನ್ನ ನಿವಾಸದಲ್ಲೇ ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌ಗೆ ಔತಣ ನೀಡಿದ್ದಾರೆ. ಅಷ್ಟೇ ಅಲ್ಲದೇ ಟ್ರಂಪ್‌ ಕುಟುಂಬದ ಕ್ರಿಪ್ಟೋ ವ್ಯವಹಾರ ನಡೆಸಲು ಪಾಕ್‌ ಸರ್ಕಾರ ಸಹ ಒಪ್ಪಿಗೆ ನೀಡಿದೆ. ಹೀಗಾಗಿ ಟ್ರಂಪ್‌ ತನಗೆ ಏನು ಲಾಭ ಸಿಗುತ್ತೆ ಅದನ್ನು ನೋಡಿಕೊಂಡು ವ್ಯವಹಾರ ನಡೆಸುತ್ತಾರೆ. ಹಾಗೆ ನೋಡಿದರೆ ವ್ಯಾಪಾರ ವಹಿವಾಟಿನಲ್ಲಿ ಭಾರತದಿಂದ ಅಮೆರಿಕಕ್ಕೆ ಹೆಚ್ಚಿನ ವಸ್ತುಗಳು ರಫ್ತಾಗುತ್ತದೆ. ಈ ಕಾರಣಕ್ಕೆ ಟ್ರಂಪ್‌ ಹಾಲಿನ ಉತ್ಪನ್ನ ಮತ್ತು ಕೃಷಿ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ನುಗ್ಗಿಸಲು ಬಹಳ ಪ್ರಯತ್ನ ಪಟ್ಟಿದ್ದರು. ಆದರೆ ಸರ್ಕಾರ ಅಮೆರಿಕದ ಒತ್ತಡಕ್ಕೆ ಬಗ್ಗಿರಲಿಲ್ಲ.

    ಆಪರೇಷನ್‌ ಸಿಂಧೂರದ ಬಗ್ಗೆ ಭಾರತ ಅಧಿಕೃತವಾಗಿ ನಿರ್ಧಾರ ಪ್ರಕಟಿಸುವ ಮೊದಲೇ ಟ್ರಂಪ್‌ ಕದನ ವಿರಾಮ ನಡೆದಿದೆ. ನನ್ನಿಂದಾಗಿ ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಕಾದಾಟ ನಿಂತಿದೆ ಎಂದು ಹಲವು ಬಾರಿ ಹೇಳಿದ್ದಾರೆ. ಟ್ರಂಪ್‌ ಮಾತಿಗೆ ಪಾಕ್‌ ಧ್ವನಿಗೂಡಿಸಿದ್ದರೆ ಭಾರತ ಪಾಕ್‌ ಮನವಿಯ ಮೇರೆಗೆ ಕದನ ವಿರಾಮ ಘೋಷಣೆಯಾಗಿದೆ ಎಂದು ಹೇಳಿದೆ. ಸದ್ಯ ಟ್ರಂಪ್‌ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸ್ನೇಹಿತ ಎಂದು ಈಗ ಕರೆದರೂ ಕೆಲ ದಿನಗಳ ಹಿಂದೆ ಭಾರತವನ್ನ ಡೆಡ್‌ ಎಕಾನಮಿ ಎಂದು ಟ್ರಂಪ್‌ ಕರೆದು ವ್ಯಂಗ್ಯವಾಡಿದ್ದರು. ನಂಬಿಕೆ ಇದ್ದಲ್ಲಿ ವಿಶ್ವಾಸ ಇರುತ್ತದೆ. ಆದರೆ ಟ್ರಂಪ್‌ ಅವರ ಮೇಲೆ ಇಟ್ಟಿದ್ದ ನಂಬಿಕೆ ಹೋಗಿದೆ. ಹೀಗಾಗಿ ಭಾರತ ಅದರಲ್ಲೂ ಟ್ರಂಪ್‌ ಅವಧಿಯಲ್ಲಿ ಅಮೆರಿಕದ ಜೊತೆ ವ್ಯವಹಾರ ನಡೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

  • ಕ್ಯಾಂಪಸ್‌ನಲ್ಲಿ ಬಂದೂಕು ಸಂಸ್ಕೃತಿ ವಿರೋಧಿಸಿ ಮಾತನಾಡುವಾಗಲೇ ಟ್ರಂಪ್‌ ಸ್ನೇಹಿತ, ಉದ್ಯಮಿ ಗುಂಡೇಟಿಗೆ ಬಲಿ

    ಕ್ಯಾಂಪಸ್‌ನಲ್ಲಿ ಬಂದೂಕು ಸಂಸ್ಕೃತಿ ವಿರೋಧಿಸಿ ಮಾತನಾಡುವಾಗಲೇ ಟ್ರಂಪ್‌ ಸ್ನೇಹಿತ, ಉದ್ಯಮಿ ಗುಂಡೇಟಿಗೆ ಬಲಿ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಆಪ್ತ 31 ವರ್ಷದ ಚಾರ್ಲಿ ಕಿರ್ಕ್ (Charlie Kirk) ಅವರನ್ನು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

    ಚಾರ್ಲ್ಸ್ ಕಿರ್ಕ್ ಬಲಪಂಥೀಯ ರಾಜಕೀಯ ಕಾರ್ಯಕರ್ತರಾಗಿದ್ದರು. 2012 ರಲ್ಲಿ ʼಟರ್ನಿಂಗ್ ಪಾಯಿಂಟ್ʼ ಹೆಸರಿನಲ್ಲಿ ಸಂಘಟನೆಯನ್ನು ಸ್ಥಾಪಿಸಿದ್ದರು. ಟರ್ನಿಂಗ್ ಪಾಯಿಂಟ್ ಆಕ್ಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಾಷ್ಟ್ರೀಯ ನೀತಿ ಮಂಡಳಿಯ ಸದಸ್ಯರಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

    ಚಾರ್ಲಿ ಕಿರ್ಕ್ ಅವರು ತಮ್ಮ ಲಾಭರಹಿತ ರಾಜಕೀಯ ಸಂಸ್ಥೆ ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಗುಂಡಿನ ದಾಳಿಗೆ ಮೊದಲು ಕಿರ್ಕ್ ಸಾಮೂಹಿಕ ಗುಂಡಿನ ದಾಳಿ ಮತ್ತು ಬಂದೂಕು ಹಿಂಸಾಚಾರದ ಬಗ್ಗೆ ಪ್ರೇಕ್ಷಕರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು.

    ಕಳೆದ 10 ವರ್ಷಗಳಲ್ಲಿ ಎಷ್ಟು ಟ್ರಾನ್ಸ್‌ಜೆಂಡರ್ ಅಮೆರಿಕನ್ನರು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆಂದು ನಿಮಗೆ ತಿಳಿದಿದೆಯೇ ಎಂಬ ಪ್ರಶ್ನೆಗೆ ಕಿರ್ಕ್‌ ಬಹಳ ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಿದಾರೆ ಎಂದು ಉತ್ತರಿಸಿದ್ದರು. ಗುಂಡಿನ ದಾಳಿ ಕುರಿತ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ನೀಡುವಾಗಲೇ ಅವರ ಎದೆಗೆ ಗುಂಡು ಬಿದ್ದಿದೆ.

    ಚಾರ್ಲಿ ಕಿರ್ಕ್ ಅವರ ಕಾರ್ಯಕ್ರಮಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕಿರ್ಕ್ ಅವರ ಕ್ಯಾಂಪಸ್‌ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಸಾವಿರಕ್ಕೂ ಹೆಚ್ಚು ಮಂದಿ ಆನ್‌ಲೈನ್‌ ಮೂಲಕ ಸಹಿ ಹಾಕಿದ್ದರು.

    ಟ್ರಂಪ್‌ ಪ್ರತಿಕ್ರಿಯಿಸಿ, ದಂತಕಥೆಯೂ ಆಗಿರುವ ಚಾರ್ಲಿ ಕಿರ್ಕ್ ನಿಧನರಾಗಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಚಾರ್ಲಿಗಿಂತ ಉತ್ತಮವಾಗಿ ಯಾರೂ ಯುವಕರ ಹೃದಯವನ್ನು ಅರ್ಥಮಾಡಿಕೊಂಡಿಲ್ಲ ಅಥವಾ ಹೊಂದಿರಲಿಲ್ಲ. ಅವರನ್ನು ಎಲ್ಲರೂ, ವಿಶೇಷವಾಗಿ ನಾನು ಪ್ರೀತಿಸುತ್ತಿದ್ದೆ ಮತ್ತು ಮೆಚ್ಚುತ್ತಿದ್ದೆ ಮತ್ತು ಈಗ ಅವರು ನಮ್ಮೊಂದಿಗೆ ಇಲ್ಲ. ಗುಂಡೇಟಿಗೆ ಬಲಿಯಾದ ಚಾರ್ಲಿ ಕಿರ್ಕ್‌ಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕು ಎಂದು ಪೋಸ್ಟ್‌ ಮಾಡಿದ್ದಾರೆ.

  • ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್‌

    ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್‌

    – ಟ್ರಂಪ್‌ ಜೊತೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ: ಮೋದಿ

    ವಾಷಿಂಗ್ಟನ್‌/ನವದೆಹಲಿ: ಭಾರತದ ಮೇಲೆ ಸುಂಕ ಸಮರ ಆರಂಭಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ವಾರದಲ್ಲಿ ಎರಡನೇ ಬಾರಿ ಪ್ರಧಾನಿ ನರೇಂದ್ರ ಮೋದಿ (Narendra Modi) ನನ್ನ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ.

    ತನ್ನ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಭಾರತ (India) ಮತ್ತು ಅಮೆರಿಕ (USA) ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಪ್ರಕಟಿಸಲು ಸಂತೋಷವಾಗುತ್ತಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಟ್ರಂಪ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮೋದಿ, ಭಾರತ ಮತ್ತು ಅಮೆರಿಕ ಆಪ್ತ ಸ್ನೇಹಿತರು ಮತ್ತು ಪಾಲುದಾರರಾಗಿದ್ದೇವೆ. ಶ್ರೀಘ್ರವೇ ನಮ್ಮ ತಂಡ ಭಾರತ-ಅಮೆರಿಕ ವ್ಯಾಪಾರ ಮಾತುಕತೆಯನ್ನು ಪೂರ್ಣಗೊಳಿಸಬಹುದು ಎಂವ ವಿಶ್ವಾಸವಿದೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಸಹ ಎದುರು ನೋಡುತ್ತಿದ್ದೇನೆ. ಎರಡು ದೇಶದ ಜನರಿಗಾಗಿ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ಕೆಲವು ದಿನಗಳ ನಂತರ, ಡೊನಾಲ್ಡ್ ಟ್ರಂಪ್ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಕುಸಿದಿದೆ ಎಂದು ಹೇಳಿದ್ದರು. ನಾವು ಭಾರತ (India) ಮತ್ತು ರಷ್ಯಾವನ್ನು (Russia) ಚೀನಾಗೆ (China) ಬಿಟ್ಟು ಕೊಟ್ಟಿದ್ದೇವೆ. ಎರಡು ದೇಶಗಳ ಭವಿಷ್ಯ ಉಜ್ವಲವಾಗಿರಲಿ ಎಂದು ವ್ಯಂಗ್ಯವಾಗಿ ಹಾರೈಸಿದರು.

    ಚೀನಾದ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮೂವರು ನಾಯಕರ ಭೇಟಿ ವಿಶ್ವಕ್ಕೆ ಒಂದು ಸಂದೇಶವನ್ನು ಕಳುಹಿಸಿತ್ತು. ಟ್ರಂಪ್‌ ಸುಂಕ ಸಮರದ ವಿರುದ್ಧ ಹೋರಾಡಲು ಮೂವರು ನಾಯಕರು ಒಂದಾಗಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ:  ಇದನ್ನೂ ಓದಿ: PublicTV Explainer: ಮತ್ತೊಮ್ಮೆ ಇಂಡೋ-ಚೀನಾ ಭಾಯಿ ಭಾಯಿ- ಭಾರತಕ್ಕೆ ಚೀನಾ ಯಾಕೆ ಬೇಕು?

    ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೋದಿ ಭಾಗವಹಿಸುವುದಿಲ್ಲ. ವಿದೇಶಾಂಗ ಸಚಿವ ಜೈಶಂಕರ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕೇಂದ್ರ ಕಚೇರಿ ಇರುವ ಕಾರಣ ಸಾಧಾರಣವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರು ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗುತ್ತಾರೆ. ಆದರೆ ಈ ಬಾರಿ ತೆರಳದ ಕಾರಣ ಟ್ರಂಪ್‌ ಮತ್ತು ಮೋದಿ ಎಲ್ಲಿ ಮಾತನಾಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

    ಭಾರತ ಮತ್ತು ಅಮೆರಿಕದ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಸುಧಾರಣೆಯಾಗುವ ಹಂತಕ್ಕೆ ತಲುಪಿತ್ತು. ಸುಧಾರಣೆಯಾಗುತ್ತಿರುವ ಸಂಬಂಧವನ್ನು ಟ್ರಂಪ್‌ ಹಾಳು ಮಾಡಿದ್ದಾರೆ. ರಷ್ಯಾ, ಚೀನಾದ ಜೊತೆ ಭಾರತ ಸೇರಿದರೆ ಮುಂಬರುವ ದಿನಗಳಲ್ಲಿ ಅಮೆರಿಕಕ್ಕೆ ಕಷ್ಟವಾಗಬಹುದು. ಪ್ರಸ್ತುತ ಈಗ ವಿಶ್ವದ ಬಹುತೇಕ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶಗಳು ಅಮೆರಿಕವನ್ನು ಎದುರುಹಾಕಿಕೊಂಡಿದೆ. ಭಾರರತ ವಿಶ್ವದ ದೊಡ್ಡ ಗ್ರಾಹಕ ಮಾರುಕಟ್ಟೆ ದೇಶ. ಭಾರತವನ್ನು ಎದುರು ಹಾಕಿಕೊಂಡರೆ ನಮಗೆ ಕಷ್ಟವಾಗಲಿದೆ ಎಂದು ಅಮೆರಿಕ ಸರ್ಕಾರದ ಮಾಜಿ ಅಧಿಕಾರಿಗಳು ಆತಂಕವನ್ನು ಹೊರಹಾಕಿದ್ದರು.

  • ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಟ್ರಂಪ್ ಸಕಾರಾತ್ಮಕ ನಡೆ ಶ್ಲಾಘನೀಯ: ಮೋದಿ

    ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಟ್ರಂಪ್ ಸಕಾರಾತ್ಮಕ ನಡೆ ಶ್ಲಾಘನೀಯ: ಮೋದಿ

    ನವದೆಹಲಿ: ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಸಕಾರಾತ್ಮಕ ನಡೆ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ನಾನು ಮೋದಿ ಅವರೊಂದಿಗೆ ಯಾವಾಗಲೂ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಮಹಾನ್ ಪ್ರಧಾನಿ. ಅವರು ಅದ್ಭುತ ವ್ಯಕ್ತಿ. ಆದರೆ, ಈ ನಿರ್ದಿಷ್ಟ ಸಂದರ್ಭದಲ್ಲಿ ಅವರು ಇಟ್ಟಿರುವ ಹೆಜ್ಜೆ ನನಗೆ ಇಷ್ಟವಿಲ್ಲ. ಆದರೆ, ಭಾರತ (India) ಮತ್ತು ಅಮೆರಿಕ (America) ನಡುವೆ ವಿಶೇಷ ಸಂಬಂಧವಿದೆ. ಚಿಂತಿಸುವ ಅಗತ್ಯವಿಲ್ಲ ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಹೇಳಿದ್ದರು. ಈ ಬೆನ್ನಲ್ಲೇ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ರಂಪ್ ನಡೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್‌ ಹೊಡೆದ ಟ್ರಂಪ್‌

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಸಮಗ್ರ ಹಾಗೂ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಭಾರತ ಹಾಗೂ ಅಮೆರಿಕ ಎದುರುನೋಡುತ್ತಿವೆ ಎಂದಿದ್ದಾರೆ. ಇದನ್ನೂ ಓದಿ: ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

    ಮೋದಿ-ಪುಟಿನ್-ಜಿನ್‌ಪಿಂಗ್ ಭೇಟಿಗೆ ಟ್ರಂಪ್ ಬೇಸರ:
    ಕಳೆದ ವಾರ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಸ್ಪಷ್ಟ ಸ್ನೇಹಪರತೆಯ ಬಗ್ಗೆ ಟ್ರಂಪ್ ಟೀಕಾತ್ಮಕ ಮಾತುಗಳನ್ನಾಡಿದ್ದರು. ನಾವು ಭಾರತ ಮತ್ತು ರಷ್ಯಾವನ್ನು ಚೀನಾಗೆ ಬಿಟ್ಟುಕೊಟ್ಟಿದ್ದೇವೆ ಎಂದೂ ಕೂಡ ಹೇಳಿದ್ದರು. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ ಎಂದು ಟ್ರಂಪ್ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌

  • ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

    ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

    ವಾಷಿಂಗ್ಟನ್: ಭಾರತ ಇನ್ನೆರಡು ತಿಂಗಳಲ್ಲಿ ನಮಗೆ ಕ್ಷಮೆಯಾಚಿಸುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್‌ ಲುಟ್ನಿಕ್‌ ಹೇಳಿಕೆ ನೀಡಿದ್ದಾರೆ.

    ರಷ್ಯಾದ ತೈಲವನ್ನು ಖರೀದಿಸದಂತೆ ಅಮೆರಿಕದ ಒತ್ತಡಕ್ಕೆ ಭಾರತ ಮಣಿದಿಲ್ಲ. ಆದರೂ, ಕೆಲವೇ ತಿಂಗಳುಗಳಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಮತ್ತೆ ಬರುತ್ತದೆ ಎಂದು ಲುಟ್ನಿಕ್‌ ತಿಳಿಸಿದ್ದಾರೆ. ಇದನ್ನೂ ಓದಿ: ಟೆಕ್‌ ದಿಗ್ಗಜರಿಗೆ ಟ್ರಂಪ್‌ ಡಿನ್ನರ್‌ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ

    ಒಂದು ಅಥವಾ ಎರಡು ತಿಂಗಳಲ್ಲಿ ಭಾರತ ಮಾತುಕತೆಗೆ ಬರಲಿದೆ ಎಂದು ನಾನು ಭಾವಿಸುತ್ತೇನೆ. ಕ್ಷಮಿಸಿ ಅಂತ ಕೇಳುತ್ತಾರೆ. ಡೊನಾಲ್ಡ್ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮತ್ತೆ ಪ್ರಯತ್ನಿಸುತ್ತಾರೆಂದು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ಒಂದು ವೇಳೆ ಅಮೆರಿಕವನ್ನು ಬೆಂಬಲಿಸದಿದ್ದರೆ, ರಫ್ತಿನ ಮೇಲೆ ಶೇ.50 ರಷ್ಟು ಸುಂಕವನ್ನು ಭಾರತ ಪಾವತಿಸಬೇಕಾಗುತ್ತದೆ. ಭಾರತವು ತನ್ನ ಮಾರುಕಟ್ಟೆಯನ್ನು ತೆರೆಯಲು, ರಷ್ಯಾದ ತೈಲ ಖರೀದಿ ನಿಲ್ಲಿಸಲು ಮತ್ತು ಬ್ರಿಕ್ಸ್‌ನ ಭಾಗವಾಗುವುದನ್ನು ನಿಲ್ಲಿಸಲು ಬಯಸುವುದಿಲ್ಲ. ನೀವು ರಷ್ಯಾ ಮತ್ತು ಚೀನಾ ನಡುವೆ ಸೇತುವೆಯಾಗಲು ಬಯಸಿದರೆ, ಹೋಗಿ. ಆದರೆ ಡಾಲರ್ ಅನ್ನು ಬೆಂಬಲಿಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವನ್ನು ಬೆಂಬಲಿಸಿ. ನಿಮ್ಮ ಅತಿದೊಡ್ಡ ಕ್ಲೈಂಟ್ ಅನ್ನು ಬೆಂಬಲಿಸಿ. ಇಲ್ಲದಿದ್ದರೆ, 50% ಸುಂಕಗಳನ್ನು ಪಾವತಿಸಿ. ಇದು ಎಷ್ಟು ಕಾಲ ಇರುತ್ತದೆ ಎಂದು ನೋಡೋಣ ಎಂದಿದ್ದಾರೆ.

    ರಷ್ಯಾದ ಕಚ್ಚಾತೈಲವು ನಿಜಕ್ಕೂ ಅಗ್ಗವಾಗಿದೆ. ತೈಲ ಖರೀದಿಗೆ ರಷ್ಯನ್ನರು ಜನರನ್ನು ಹುಡುಕುತ್ತಿದ್ದಾರೆ. ಅಗ್ಗವಾದ ತೈಲ ಖರೀದಿಸಿ ಹಣ ಸಂಪಾದಿಸೋಣ ಅಂತ ಭಾರತ ತೀರ್ಮಾನಿಸಿದೆ ಎಂದು ಲುಟ್ನಿಕ್‌ ಮಾತನಾಡಿದ್ದಾರೆ. ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌

  • ಟೆಕ್‌ ದಿಗ್ಗಜರಿಗೆ ಟ್ರಂಪ್‌ ಡಿನ್ನರ್‌ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ

    ಟೆಕ್‌ ದಿಗ್ಗಜರಿಗೆ ಟ್ರಂಪ್‌ ಡಿನ್ನರ್‌ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ

    – ಅಮೆರಿಕದಲ್ಲಿ ನೀವು ಎಷ್ಟು ಹೂಡಿಕೆ ಮಾಡುತ್ತೀರಿ?

    ವಾಷಿಂಗ್ಟನ್‌: ವಿಶ್ವದ ಮೇಲೆ ತೆರಿಗೆ ಸಮರ ಹಾಕಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ (White House) ಟೆಕ್‌ ಕಂಪನಿಯ ಮುಖ್ಯಸ್ಥರಿಗೆ ಭೋಜನ ಕೂಟ (Dinner) ಆಯೋಜನೆ ಮಾಡಿದ್ದರು.

    ಈ ಔತಣಕೂಟದಲ್ಲಿ ಭಾರತೀಯ ಮೂಲದ ಸಿಇಒಗಳಾದ ಸುಂದರ್‌ ಪಿಚೈ(ಆಲ್ಫಾಬೆಟ್ ಇಂಕ್ -ಗೂಗಲ್), ಸತ್ಯ ನಾಡೆಲ್ಲಾ (ಮೈಕ್ರೋಸಾಫ್ಟ್), ಸಂಜಯ್ ಮೆಹ್ರೋತ್ರಾ (ಮೈಕ್ರಾನ್ ಟೆಕ್ನಾಲಜಿ), ವಿವೇಕ್ ರಣದಿವೆ – ಟಿಐಬಿಸಿಒ ಸಾಫ್ಟ್‌ವೇರ್‌ನ ಅಧ್ಯಕ್ಷ ಮತ್ತು ಸಿಇಒ), ಶ್ಯಾಮ್ ಶಂಕರ್ (ಪಲಂತಿರ್ ಟೆಕ್ನಾಲಜೀಸ್‌) ಭಾಗಿಯಾಗಿದ್ದರು.  ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌


    ಭಾಗಿಯಾದ ಉಳಿದವರು ಯಾರು?
    ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಟಿಮ್ ಕುಕ್, ಸ್ಯಾಮ್ ಆಲ್ಟ್‌ಮನ್, ಸೆರ್ಗೆ ಬ್ರಿನ್ ಮತ್ತು ಸಫ್ರಾ ಕ್ಯಾಟ್ಜ್‌ರಂತಹ ಪ್ರಭಾವಿ ವ್ಯಕ್ತಿಗಳು ಈ ಡಿನ್ನರ್‌ ಭಾಗವಹಿಸಿದ್ದರು. ಚುನಾವಣಾ ಸಮಯದಲ್ಲಿ ಆಪ್ತನಾಗಿದ್ದ ಎಲೋನ್‌ ಮಸ್ಕ್‌ ಭಾಗಿಯಾಗಿರಲಿಲ್ಲ.

    ಎಐ, ತಂತ್ರಜ್ಞಾನ ಹೂಡಿಕೆ, ಜಾಗತಿಕ ಮಟ್ಟದಲ್ಲಿ ಅಮೆರಿಕ ಕಂಪನಿಗಳ ಪ್ರಭಾವದ ಬಗ್ಗೆ ಮಾತುಕತೆ ನಡೆದಿದೆ. ಗೂಗಲ್, ಮೆಟಾ ಮತ್ತು ಆಪಲ್ ಅಮೆರಿಕದಲ್ಲಿ ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿವೆ.  ಇದನ್ನೂ ಓದಿ:  ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    ನೀವು ಅಮೆರಿಕದಲ್ಲಿ ಎಷ್ಟು ಹೂಡಿಕೆ ಮಾಡುತ್ತಿದ್ದೀರಿ? ಅಮೆರಿಕಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ಟ್ರಂಪ್‌ ಕಂಪನಿಗಳ ಮುಖ್ಯಸ್ಥರ ಜೊತೆ ನೇರವಾಗಿ ಕೇಳಿದ್ದಾರೆ.

  • ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌

    ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಮತ್ತೆ ಭಾರತ, ಚೀನಾ, ರಷ್ಯಾವನ್ನು ಕೆಣಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಂಘೈ ಸಹಕಾರ ಒಕ್ಕೂಟದಲ್ಲಿ (SCO) ಈ ಮೂರು ದೇಶಗಳ ನಾಯಕರು ಭಾಗಿಯಾಗಿದ್ದನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಮೊದಲ ಭಾರಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಾವು ಭಾರತ (India)  ಮತ್ತು ರಷ್ಯಾವನ್ನು (Russia)  ಚೀನಾಗೆ (China) ಬಿಟ್ಟು ಕೊಟ್ಟಿದ್ದೇವೆ. ಎರಡು ದೇಶಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಟ್ರಂಪ್‌ ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ಅಪ್ಲೋಡ್‌ ಮಾಡಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    ಟಿಯಾಂಜಿನ್‌ನಲ್ಲಿ ನಡೆದ ಶಾಂಗೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ಕೆಲವು ದಿನಗಳ ನಂತರ, ಡೊನಾಲ್ಡ್ ಟ್ರಂಪ್ ಶುಕ್ರವಾರ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಕುಸಿದಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಚೀನಾದ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮೂವರು ನಾಯಕರ ಭೇಟಿ ವಿಶ್ವಕ್ಕೆ ಒಂದು ಸಂದೇಶವನ್ನು ಕಳುಹಿಸಿದೆ. ಟ್ರಂಪ್‌ ಸುಂಕ ಸಮರದ ವಿರುದ್ಧ ಹೋರಾಡಲು ಮೂವರು ನಾಯಕರು ಒಂದಾಗಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ.

    ಮೊದಲ ಅವಧಿ ಚುನಾವಣೆಯ ಸಂದರ್ಭದಲ್ಲಿ ರಷ್ಯಾ ಸಹಾಯದಿಂದ ಟ್ರಂಪ್‌ ಗೆದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಎರಡನೇ ಬಾರಿ ಟ್ರಂಪ್‌ ಚುನಾವಣೆಗೆ ನಿಂತಾಗ ಅಮೆರಿಕದಲ್ಲಿ ಹೌಡಿ ಮೋಡಿ ಹೆಸರಿನಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ (Narendra Modi) ಟ್ರಂಪ್‌ ಪರ ಮಾತನಾಡಿದ್ದರು. ಆದರೆ ಟ್ರಂಪ್‌ ಎರಡನೇ ಅವಧಿಯಲ್ಲಿ ಭಾರೀ ತೆರಿಗೆ ವಿಧಿಸಿ ಪುಟಿನ್‌ ಮತ್ತು ಮೋದಿ ವಿರುದ್ಧವೇ ಮಾತನಾಡಿ ಸಂಬಂಧವನ್ನು ಹಾಳು ಮಾಡಿಕೊಂಡಿದ್ದಾರೆ.

  • ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    – ಅಮೆರಿಕದ ನಡೆ ಮೋದಿಯನ್ನು ರಷ್ಯಾ & ಚೀನಾಗೆ ಹತ್ತಿರವಾಗಿಸಿದೆ: ಬೋಲ್ಟನ್‌ ಬೇಸರ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ, ಈಗ ಅದು ಇಲ್ಲವಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ.

    ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಹುಶಃ ಅತ್ಯಂತ ಕೆಟ್ಟ ಹಂತದ ಹಿನ್ನೆಲೆಯಲ್ಲಿ ಬೋಲ್ಟನ್ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಸುಂಕ ನೀತಿ ಮತ್ತು ಭಾರತದ ಮೇಲಿನ ನಿರಂತರ ಟೀಕೆಗಳಿಂದ ಈ ಬಿಕ್ಕಟ್ಟು ಎದುರಾಗಿದೆ.

    ಟ್ರಂಪ್‌ ಅಂತರರಾಷ್ಟ್ರೀಯ ಸಂಬಂಧಗಳನ್ನು ನಾಯಕರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯದ ಮೂಲಕವೇ ನೋಡುತ್ತಾರೆ. ಪುಟಿನ್‌ ಜೊತೆ ಟ್ರಂಪ್‌ ಉತ್ತಮ ಸಂಬಂಧ ಹೊಂದಿದ್ದರೆ, ಅಮೆರಿಕದೊಂದಿಗೆ ರಷ್ಯಾ ಉತ್ತಮ ಬಾಂಧವ್ಯದಲ್ಲಿದೆ ಎಂದರ್ಥ. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

    ಈ ಮೊದಲ ಟ್ರಂಪ್ ಆಡಳಿತದಲ್ಲಿ NSA ಆಗಿ ಬೋಲ್ಟನ್ ಸೇವೆ ಸಲ್ಲಿಸಿದ್ದರು. ಈಗ ಟ್ರಂಪ್‌ ಅವರನ್ನೇ ನೇರವಾಗಿ ಟೀಕಿಸುತ್ತಿದ್ದಾರೆ. ಟ್ರಂಪ್ ಅವರು ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಅದು ಈಗ ಇಲ್ಲವಾಗಿದೆ. ಇದು ಎಲ್ಲರಿಗೂ ಒಂದು ಪಾಠವಾಗಿದೆ. ಉದಾಹರಣೆಗೆ (ಯುಕೆ ಪ್ರಧಾನಿ) ಕೀರ್ ಸ್ಟಾರ್ಮರ್, ಒಳ್ಳೆಯ ವೈಯಕ್ತಿಕ ಸಂಬಂಧವು ಕೆಲವೊಮ್ಮೆ ಸಹಾಯ ಮಾಡಬಹುದು. ಆದರೆ ಅದು ನಿಮ್ಮನ್ನು ಕೆಟ್ಟದ್ದರಿಂದ ರಕ್ಷಿಸುವುದಿಲ್ಲ ಎಂದು ಟ್ರಂಪ್‌ಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

    ಟ್ರಂಪ್ ಸೆಪ್ಟೆಂಬರ್ 17 ರಿಂದ 19 ರವರೆಗೆ ಯುಕೆಗೆ ಭೇಟಿ ನೀಡಲಿದ್ದಾರೆ. ಭಾರತದ ಸಂಬಂಧವನ್ನು ಯುಎಸ್‌ ದಶಕಗಳ ಹಿಂದಕ್ಕೆ ತಳ್ಳಿದೆ. ಈ ನಡೆ ಮೋದಿಯನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿಸಿದೆ. ಯುಎಸ್ ಮತ್ತು ಡೊನಾಲ್ಡ್ ಟ್ರಂಪ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಚೀನಾ ಬಿಂಬಿಸಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ.

  • ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    – ವರ್ಷಗಳ ಹಿಂದೆಯೇ ಭಾರತ ಈ ಹೆಜ್ಜೆಯನ್ನಿಡಬೇಕಿತ್ತು
    – ಭಾರತದೊಂದಿಗೆ ನೇರ ಯುದ್ಧಕ್ಕಿಳಿದ್ರಾ ಟ್ರಂಪ್‌?

    ವಾಷಿಂಗ್ಟನ್‌: ಭಾರತದ ಆಮದು ಸರಕುಗಳ ಮೇಲೆ 50% ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದೀಗ ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ʻಏಕಪಕ್ಷೀಯ ವಿಪತ್ತುʼ ಒನ್‌ ಡೈಡ್‌ ಡಿಸಾಸ್ಟರ್‌ (one-sided disaster) ಎಂದು ಕರೆದಿದ್ದಾರೆ.

    ಭಾರತದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತು ಸೋಮವಾರ ಟ್ರಂಪ್ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು (Good) ರಫ್ತು ಮಾಡುತ್ತದೆ. ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ. ಇದು ಬಹಳ ಕಡಿಮೆ ಜನರಿಗೆ ತಿಳಿದಿದೆ. ಅವರು ನಮಗೆ ಬೃಹತ್‌ ಪ್ರಮಾಣದ ಸರಕುಗಳನ್ನು ರಫ್ತು ಮಾಡುವುದರಿಂದ ಭಾರತದ ಅತಿದೊಡ್ಡ ಕ್ಲೈಂಟ್‌ ನಾವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಭಾರತ ನಮಗೆ ಬೃಹತ್‌ ಪ್ರಮಾಣದ ಸರಕು ರಫ್ತು ಮಾಡುತ್ತದೆ. ಆದ್ರೆ ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ. ಕಡಿಮೆ ಸರಕುಗಳನ್ನ ರಫ್ತು (US Goods) ಮಾಡುತ್ತೇವೆ. ಇಲ್ಲಿಯವರೆಗೆ ಸಂಪೂರ್ಣವಾಗಿ ಏಕಪಕ್ಷೀಯ ಸಂಬಂಧ ಇದಾಗಿದೆ. ಇದು ಹಲವು ದಶಕಗಳಿಂದ ನಡೆತ್ತಿರುವ ‘ಏಕಪಕ್ಷೀಯ ವಿಪತ್ತು’ ಎಂದು ಟ್ರಂಪ್ ಕರೆದಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಭಾರತದ ಸುಂಕವು ವಿಶ್ವದಲ್ಲೇ ಅತ್ಯಧಿಕವಾಗಿದೆ
    ಅಲ್ಲದೇ ಇಲ್ಲಿಯವರೆಗೆ ಭಾರತವು (India) ವಿಶ್ವದಲ್ಲೇ ಅತ್ಯಧಿಕ ಆಮದು ಸುಂಕವನ್ನು (Tariffs) ವಿಶಿಸುತ್ತಿದೆ. ಆದ ಕಾರಣ ಅಮೆರಿಕದ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಕಷ್ಟಕರವೆನಿಸಿದೆ. ಅಲ್ಲದೇ ಭಾರತವು ರಷ್ಯಾದಿಂದ ಬೃಹತ್‌ ಪ್ರಮಾಣದಲ್ಲಿ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತದೆ. ಆದ್ರೆ ಅಮೆರಿಕದಿಂದ ಕಡಿಮೆ ಖರೀದಿ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.

    ಮುಂದುವರಿದು.. ಭಾರತವು ಈಗ ಅಮೆರಿಕದ ಆಮದುಗಳ ಮೇಲಿನ ಸುಂಕ ಕಡಿಮೆ ಮಾಡಲು ಮುಂದಾಗಿದೆ. ಆದ್ರೆ ಇದು ತುಂಬಾ ತಡವಾಗಿದೆ. ಭಾರತ ಈ ಹೆಜ್ಜೆಯನ್ನು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ – Video Of The Day ಎಂದ ರಷ್ಯಾ

    ಪಾಕ್‌ಗಿಂತಲೂ ಭಾರತಕ್ಕೆ ಸುಂಕ ಅಧಿಕ
    ಈ ಹಿಂದೆ 25% ಆಮದು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಬಳಿಕ ಆಗಸ್ಟ್‌ 27ರಿಂದ ಅನ್ವಯವಾಗುವಂತೆ 50% ಸುಂಕ ವಿಧಿಸಿದ್ದಾರೆ. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್‌ 19% ಸುಂಕ ಮಾತ್ರ ವಿಧಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಸೋಮವಾರ ಷೇರುಪಟೆ ಚೇತರಿಕೆ ಕಂಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ