Tag: donald trump

  • ಮೋದಿ ಅಮೆರಿಕ ಪ್ರವಾಸದಿಂದ ಭಾರತಕ್ಕೆ ಏನು ಲಾಭವಾಯ್ತು: ಸಿದ್ದರಾಮಯ್ಯ ಪ್ರಶ್ನೆ

    ಮೋದಿ ಅಮೆರಿಕ ಪ್ರವಾಸದಿಂದ ಭಾರತಕ್ಕೆ ಏನು ಲಾಭವಾಯ್ತು: ಸಿದ್ದರಾಮಯ್ಯ ಪ್ರಶ್ನೆ

    ಕಲಬುರಗಿ: ಭಾರತಕ್ಕೆ ಟ್ರಂಪ್ ಆಗಮನದಿಂದ ಏನೂ ಆಗಲ್ಲಾ. ಒಂದು ದೇಶದ ಅಧ್ಯಕ್ಷರು ಬಂದರೆ ಅವರಿಗೆ ಒಳ್ಳೆಯ ಸ್ವಾಗತ ಮಾಡೋದು ನಮ್ಮ ಕರ್ತವ್ಯ. ಆದರೆ ಅದು ಅಗತ್ಯಕ್ಕಿಂತ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಮೆರಿಕ ಪ್ರವಾಸ ಮಾಡಿದ್ದಾರೆ. ಅದರಿಂದ ಭಾರತಕ್ಕೆ ಏನು ಲಾಭವಾಯ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

    ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಭಾರತ ಅಮೆರಿಕದೊಂದಿಗೆ ಯಾವುದೇ ಆಮದು ಒಪ್ಪಂದಕ್ಕೆ ಮುಂದಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆಯೇ ಟ್ರಂಪ್ ಆಗಮನದಿಂದ ಭಾರತಕ್ಕೆ ಏನೂ ಲಾಭವಾಗುವುದಿಲ್ಲ, ಯಾಕೆಂದರೆ ಈ ಹಿಂದೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸದಿಂದ ಭಾರತಕ್ಕೆ ಏನು ಲಾಭವಾಗಿದೆ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಇದೇ ವೇಳೆ ಎಐಸಿಸಿ ಅಧ್ಯಕ್ಷರ ವಿಚಾರವಾಗಿ ಮಾತನಾಡಿ, ರಾಹುಲ್ ಗಾಂಧಿ ಅವರೇ ಮತ್ತೆ ಎಐಸಿಸಿ ಅಧ್ಯಕ್ಷರಾಗಬೇಕು. ಇದು ನನ್ನ ಬೇಡಿಕೆ ಸಹ ಆಗಿದೆ. ಇತ್ತ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಶೀಘ್ರದಲ್ಲಿ ಆಗುತ್ತದೆ ಎಂದರು. ಬಳಿಕ ಸಿದ್ದರಾಮಯ್ಯ ಹೊಸ ಪಕ್ಷ ಪ್ರಾರಂಭಿಸ್ತಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ರಾಜಕೀಯ ಅನುಭವ ಕಡಿಮೆ ಅವರ ಮಾತಿಗೆ ನಾನು ರಿಯಾಕ್ಟ್ ಮಾಡಲ್ಲ ಎಂದು ಟಾಂಗ್ ಕೊಟ್ಟರು.

    15ನೇ ಹಣಕಾಸಿನ ಆಯೋಗದಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ವರ್ಷ 9 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ಮುಂದಿನ ವರ್ಷ 11,258 ಕೋಟಿ ರೂ. ಕಡಿಮೆಯಾಗಲಿದೆ. ಯಡಿಯೂರಪ್ಪ ಮತ್ತು 25 ಜನ ಎಂಪಿಗಳು ಏನು ಮಾಡ್ತಿದ್ದಾರೆ? ಇದರ ಬಗ್ಗೆ ಯಾರಾದರೂ ಧ್ವನಿ ಎತ್ತುತ್ತಿದ್ದಾರಾ? ಪ್ರವಾಹ ಬಂದಾಗಲೂ ರಾಜ್ಯಕ್ಕೆ ಹೆಚ್ಚಿನ ಪರಿಹಾರ ನೀಡಲಿಲ್ಲ. ಯಡಿಯೂರಪ್ಪ ನಿಯೋಗ ಕರೆದುಕೊಂಡು ಹೋಗಲಿಲ್ಲಾ. ಯಾಕೆಂದರೆ ಮೋದಿ ಮತ್ತು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಹೆದರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಯಡಿಯೂರಪ್ಪ ವೀಕೆಸ್ಟ್ ಮುಖ್ಯಮಂತ್ರಿ ನಾನು ರಾಜಕೀಯ ಜೀವನದಲ್ಲಿ ಅಧಿಕಾರದ ಹಿಂದೆ ಹೋಗಲ್ಲ. ಬಿಜೆಪಿಯ ಅನೇಕರು ಅವರ ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ. ಇದರಿಂದ ಬಿಜೆಪಿಯಲ್ಲಿ ತಳಮಳ ಪ್ರಾರಂಭವಾಗಿದೆ, ಅಧಿಕಾರದ ಕಚ್ಚಾಟ ಪ್ರಾರಂಭವಾಗಿದೆ. ಬಿಜೆಪಿ ಕಚ್ಚಾಟದಿಂದ ಸರ್ಕಾರ ಬಿದ್ದರೆ ಮತ್ತೆ ಅಧಿಕಾರ ಹಿಡಿಯುವ ಯೋಚನೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

  • ಟ್ರಂಪ್ ತಂಗಲಿರುವ ‘ಚಾಣಕ್ಯ’ ಸೂಟ್ ವಿಶೇಷತೆ ಏನು? ಒಂದು ದಿನದ ಬಾಡಿಗೆ ಎಷ್ಟು?

    ಟ್ರಂಪ್ ತಂಗಲಿರುವ ‘ಚಾಣಕ್ಯ’ ಸೂಟ್ ವಿಶೇಷತೆ ಏನು? ಒಂದು ದಿನದ ಬಾಡಿಗೆ ಎಷ್ಟು?

    ನವದೆಹಲಿ: ಅಹಮದಾಬಾದ್, ಆಗ್ರಾ ಪ್ರವಾಸದ ಬಳಿಕ ದೆಹಲಿ ತೆರಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ದಾರ್ ಪಟೇಲ್ ರಸ್ತೆಯಲ್ಲಿರುವ ಐಟಿಸಿ ಮೌರ್ಯ ಹೋಟೆಲ್‍ನಲ್ಲಿ ಟ್ರಂಪ್ ವಾಸ್ತವ್ಯ ಹೂಡಲಿದ್ದಾರೆ. ‘ಚಾಣಕ್ಯ’ ಹೆಸರಿನ ಎರಡು ಬೆಡ್‍ರೂಂಗಳ ಐಷಾರಾಮಿ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‍ನಲ್ಲಿ ಟ್ರಂಪ್ ತಂಗಲಿದ್ದು ಮಂಗಳವಾರ ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

    ‘ಚಾಣಕ್ಯ’ ಹೆಸರಿನ ಪ್ರೆಸಿಡೆನ್ಶಿಯಲ್ ಸೂಟ್ ಒಂದು ಖಾಸಗಿ ಡ್ರಾಯಿಂಗ್ ರೂಮ್, ಒಂದು ಖಾಸಗಿ ಟೆರೇಸ್, ಜಿಮ್, ಖಾಸಗಿ ಪ್ರವೇಶ ಭಾಗವಿರುವ 12 ಆಸನಗಳ ಭೋಜನ ಸ್ಥಳ, ಅತಿ ವೇಗದ ಎಲಿವೆಟರ್, ಬೃಹತ್ ಸ್ನಾನದ ಕೊಠಡಿ, ಮಿನಿ ಸ್ಪಾ ಮತ್ತು ವಿಶೇಷ ಪರಿಣತ ಬಾಣಸಿಗ ಹಾಗೂ ಅತ್ಯುನ್ನತ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

    ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಡೊನಾಲ್ಡ್ ಟ್ರಂಪ್, ಈ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಳ್ಳಲಿರುವ ಅಮೆರಿಕದ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್, ಬರಾಕ್ ಒಬಾಮ ಈ ಹೋಟೆಲ್‍ನಲ್ಲಿ ಆತಿಥ್ಯ ಸ್ವೀಕರಿಸಿದ್ದರು. ಸುಮಾರು 4,600 ಚದರ ಅಡಿ ವಿಸ್ತೀರ್ಣ ಇರುವ ಈ ಚಾಣಕ್ಯ ಸೂಟ್‍ನಲ್ಲಿ ಒಂದು ರಾತ್ರಿ ಕಳೆಯಲು 8 ಲಕ್ಷ ರೂಪಾಯಿ ವೆಚ್ಚವಾಗಲಿದೆ.

    ಟ್ರಂಪ್ ವಾಸ್ತವ್ಯದ ಹಿನ್ನಲೆ ಎರಡು ವಾರಕ್ಕೂ ಮುಂಚಿನಿಂದಲೇ ಹೋಟೆಲ್ ನಲ್ಲಿ ಎನ್‍ಎಸ್‍ಜಿ ಕಮಾಂಡೋಗಳು ಭದ್ರತಾ ವ್ಯವಸ್ಥೆ ಮೇಲೆ ನಿಗಾ ವಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಾಸ್ತವ್ಯದ ಸಂದರ್ಭದಲ್ಲಿ ಇಲ್ಲಿ ಇತರೆ ಅತಿಥಿಗಳ ವಾಸ್ತವ್ಯಕ್ಕೆ ಅವಕಾಶ ನೀಡದೇ ಹೋಟೆಲ್‍ನಲ್ಲಿರುವ ಎಲ್ಲ 438 ಕೊಠಡಿಗಳನ್ನು ಕೂಡ ಟ್ರಂಪ್ ಅವರಿಗಾಗಿಯೇ ಕಾಯ್ದಿರಿಸಲಾಗಿದೆ.

    ಬಿಲ್ ಕ್ಲಿಂಟನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಶೇಷವಾಗಿ ಕ್ಲಿಂಟನ್ ಪ್ಲಾಟರ್ ಮತ್ತು ಚೆಲ್ಸಾ ಪ್ಲಾಟರ್ ಹೆಸರಿನ ವಿಶೇಷ ಆಹಾರವನ್ನು ಈ ಹೋಟೆಲ್ ಸಿದ್ದಪಡಿಸಿತ್ತು. ಬರಾಕ್ ಒಬಾಮ ಭಾರತಕ್ಕೆ ಎರಡು ಬಾರಿ ಭೇಟಿ ವೇಳೆ ಕೂಡ ಹೋಟೆಲ್ ‘ಒಬಾಮ ಪ್ಲಾಟರ್’ ಸಿದ್ಧಪಡಿಸಿತ್ತು. ಸದ್ಯ ಟ್ರಂಪ್ ಗಾಗಿ ‘ಟ್ರಂಪ್ ಪ್ಲಾಟರ್’ ಹೆಸರಿನ ವಿಶೇಷ ಸಸ್ಯಾಹಾರ ತಯಾರಿ ಮಾಡಲಾಗಿದೆ.

    ಮೌರ್ಯ ಹೋಟೆಲಿನ 14ನೇ ಅಂತಸ್ತಿನಲ್ಲಿ ಟ್ರಂಪ್ ಉಳಿದುಕೊಳ್ಳಲಿದ್ದಾರೆ. ಸದ್ಯಕ್ಕೆ ವಿಶ್ವಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಗುಣಮಟ್ಟದ ಶುದ್ಧಗಾಳಿ ಒದಗಿಸುವ ಏಕೈಕ ಹೋಟೆಲ್ ಐಟಿಸಿ ಮೌರ್ಯ ಆಗಿದ್ದು, ಈ ಹಿಂದೆ ಟಿಬೆಟ್ ಧರ್ಮ ಗುರು ದಲೈ ಲಾಮಾ, ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ಸಹ ಈ ಹೋಟೆಲಿನಲ್ಲೇ ತಂಗಿದ್ದರು.

  • ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ಆಗ್ರಾ: 2 ದಿನ ಭಾರತ ಪ್ರವಾಸ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ಐತಿಹಾಸಿಕ ಪ್ರೇಮಸೌಧ ತಾಜ್‍ಮಹಲ್‍ಗೆ ಭೇಟಿಕೊಟ್ಟಿದ್ದು, ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ ಎಂದು ಹಾಡಿ ಹೊಗಳಿದ್ದಾರೆ.

    ಕುಟುಂಬದೊಂದಿಗೆ ಆಗ್ರಾಕ್ಕೆ ಬಂದ ಟ್ರಂಪ್ ಅವರಿಗೆ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯ್ತು. ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕ ಹಾಗೂ ಅಳಿಯ ಜ್ಯಾರಿದ್‍ನೊಂದಿಗೆ ತಾಜ್‍ಮಹಲ್ ವೀಕ್ಷಿಸಿ ಪ್ರೇಮಸೌಧದ ಅಂದವನ್ನು ಕಣ್ತುಂಬಿಕೊಂಡರು.

    ಈ ವೇಳೆ ಸಂದರ್ಶಕ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆದ ಟ್ರಂಪ್ ತಾಜ್‍ಮಹಲ್ ಅಂದವನ್ನು ಹೊಗಳಿದ್ದಾರೆ. ತಾಜ್‍ಮಹಲ್ ಪ್ರೇರಣೆಯ ವಿಸ್ಮಯ, ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಹಾಗೂ ಅನಂತತೆಯ ವಿಸ್ಮಯ ಎಂದು ಬರೆದಿದ್ದಾರೆ.

    ತಾಜ್‍ಮಹಲ್ ಇತಿಹಾಸ, ಭವ್ಯತೆಯ ಬಗ್ಗೆ ಟ್ರಂಪ್ ಕುಟುಂಬಕ್ಕೆ ಮಾರ್ಗದರ್ಶಕರು ಮಾಹಿತಿ ನೀಡಿದರು. ಅಲ್ಲದೆ ತಾಜ್‍ಮಹಲ್ ಆವರಣದಲ್ಲಿ ಟ್ರಂಪ್ ದಂಪತಿ ನಡೆದುಕೊಂಡು ಹೋಗಿಯೇ ಅದರ ಅಂದವನ್ನು ಕಣ್ತುಂಬಿಕೊಂಡರು. ಜೊತೆಗೆ ಪ್ರೇಮಸೌಧದ ಮುಂದೆ ಫೋಟೋವನ್ನು ತೆಗೆಸಿಕೊಂಡು ಖುಷಿಪಟ್ಟರು.

    ತಾಜ್ ಮಹಲ್ ಗೇಟಿನ 500 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಸಂಚಾರಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿ ಎಕೋ ಫ್ರೆಂಡ್ಲಿ ಗಾಲ್ಫ್ ಕಾರ್ಟ್ ಮೂಲಕ ಸ್ಥಳಕ್ಕೆ ಬಂದು ನಂತರ ತಾಜ್ ಮಹಲ್ ಬಳಿ ನಡೆದುಕೊಂಡು ಹೋದರು.

  • ಬಾಟಲ್ ಒಳಗೆ ಅರಳಿದ ಮೋದಿ, ಟ್ರಂಪ್ ಚಿತ್ರ – ಬೆಂಗ್ಳೂರು ಕಲಾವಿದನಿಂದ ಸ್ವಾಗತ

    ಬಾಟಲ್ ಒಳಗೆ ಅರಳಿದ ಮೋದಿ, ಟ್ರಂಪ್ ಚಿತ್ರ – ಬೆಂಗ್ಳೂರು ಕಲಾವಿದನಿಂದ ಸ್ವಾಗತ

    ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಇಡೀ ವಿಶ್ವದ ಗಮನ ಸೆಳೆದಿದೆ. ಈ ಹಿನ್ನೆಲೆ ಬೆಂಗಳೂರಿನ ಕಲಾವಿದ ಬಾಟಲ್ ಬಸವರಾಜ್ ಅವರು ಬೃಹತ್ ಗಾತ್ರದ ಬಾಟಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ.

    ಈ ಬಾಟಲಿ ಆರ್ಟ್ ಅತ್ಯಂತ ಕಠಿಣವಾಗಿದ್ದು, ಜಾಗರುಕತೆಯಿಂದ ಭಾವಚಿತ್ರವನ್ನು ಚಿತ್ರಿಸಬೇಕಾಗುತ್ತದೆ. ನಗರದ ಮಹಾಲಕ್ಷ್ಮಿ ಲೇಔಟ್‍ನ ಬಸವರಾಜ್ ಇದುವರೆಗೂ ಈ ರೀತಿಯ ಸುಮಾರು 150 ಭಾವಚಿತ್ರವನ್ನು ತಯಾರಿಸಿರಿದ್ದಾರೆ. ಇನ್ನು ಇದಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಸಿಎಂ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಭಾವಚಿತ್ರವನ್ನು ಸಹ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಬಸವರಾಜ್ ಅವರು ಗಾಂಧೀ ಜಯಂತಿ ಅಂಗವಾಗಿ ಸ್ವಚ್ಛ ಭಾರತ, ಗಾಂಧೀಜಿ ಫೋಟೋವನ್ನು ಬಾಟಲಿಯಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

    2 ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು. ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು.

  • ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು, ಎಲ್ಲವನ್ನ ಕಾಮಾಲೆ ಕಣ್ಣಿನಲ್ಲಿ ನೋಡೋದು ಬಿಡಿ: ಸೋಮಣ್ಣ ಟಾಂಗ್

    ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು, ಎಲ್ಲವನ್ನ ಕಾಮಾಲೆ ಕಣ್ಣಿನಲ್ಲಿ ನೋಡೋದು ಬಿಡಿ: ಸೋಮಣ್ಣ ಟಾಂಗ್

    ಬೆಂಗಳೂರು: ಇಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಸತಿ ಸಚಿವ ವಿ.ಸೋಮಣ್ಣ ಗೇಲಿ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಗ್ರಹಾರ ಪಾಳ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ತಿರುಗೇಟು ನೀಡಿದರು. ಈ ವಿಚಾರದಲ್ಲಿ ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು ಟ್ರಂಪ್ ಎಲ್ಲಿ, ಸಿದ್ದರಾಮಯ್ಯ ಎಲ್ಲಿ. ಅಮೆರಿಕ ದೇಶ ಎಲ್ಲಿ, ಸಿದ್ದರಾಮಯ್ಯ ಎಲ್ಲಿ. ಸಿದ್ದರಾಮಯ್ಯ ಸಿದ್ದರಾಮಯ್ಯನೇ, ಟ್ರಂಪ್ ಟ್ರಂಪ್ ಅವರೇ, ಮೋದಿ ಮೋದಿಯವರೇ ಎಂದು ಟೀಕೆಗೆ ತಿರುಗೇಟು ನೀಡಿದರು.

    ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ, ಚಿಂತನೆಯಿಂದ ಅವರ ರಾಷ್ಟ್ರಕ್ಕೆ ಕೊಡಬೇಕಾದ ದೊಡ್ಡ ಸಂದೇಶ ಕೊಡುತ್ತಾರೆ. ಆದರೆ ಟ್ರಂಪ್ ಏನು ಮಾಡುತ್ತಾರೆ ಅನ್ನೊದಕ್ಕಿಂತ ಅವರು ಹಿರಿಯಣ್ಣ. ನಮ್ನ ಭಾರತಕ್ಕೆ ಬಂದಿರುವುದು ನಮಗೆ ಸಂತೋಷ ಉಂಟುಮಾಡಿದೆ. ಆದರೆ ಸಿದ್ದರಾಮಯ್ಯ ಎಲ್ಲವನ್ನ ಕಾಮಾಲೆ ಕಣ್ಣಿನಲ್ಲಿ ನೋಡೋದನ್ನ ಬಿಡಬೇಕು ಎಂದು ಸೋಮಣ್ಣ ಅವರು ಕಿಡಿಕಾರಿದರು.

    ಅಲ್ಲದೇ ತಾವು ದೂರ ದೃಷ್ಟಿಯಲ್ಲಿ ನೋಡಬೇಕು. ರಾಜ್ಯದ 5 ವರ್ಷ ಮುಖ್ಯಮಂತ್ರಿಯಾಗಿದ್ದವರು ನೀವು, ಈ ರೀತಿಯಲ್ಲಿ ಮಾತನಾಡೋದು ಬೇಡ. ನೀವು ಎತ್ತರಕ್ಕೆ ಬೆಳೆದ ವ್ಯಕ್ತಿ ಎಂದು ನಗುಮುಖದಲ್ಲಿಯೇ ಸಿದ್ದರಾಮಯ್ಯರ ವಿರುದ್ಧ ಸೋಮಣ್ಣ ಮಾತಿನ ಚಾಟಿ ಬೀಸಿದರು.

  • ಭಾರತದ ರಕ್ಷಣಾ ವಲಯದಲ್ಲಿ ಮೂರು ಶತಕೋಟಿ ಯುಎಸ್ ಡಾಲರ್ ಹೂಡಿಕೆಗೆ ಅಮೆರಿಕ ಒಪ್ಪಂದ

    ಭಾರತದ ರಕ್ಷಣಾ ವಲಯದಲ್ಲಿ ಮೂರು ಶತಕೋಟಿ ಯುಎಸ್ ಡಾಲರ್ ಹೂಡಿಕೆಗೆ ಅಮೆರಿಕ ಒಪ್ಪಂದ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಉಭಯ ದೇಶಗಳ ನಡುವಿನ ಹೊಸ ಒಪ್ಪಂದಗಳಿಗೆ ವೇದಿಕೆಯಾಗಿದೆ. ನಾಳೆ ದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ಉಭಯ ರಾಷ್ಟ್ರಗಳು ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಡೊನಾಲ್ಡ್ ಟ್ರಂಪ್ ಮೂರು ಶತಕೋಟಿ ಯುಎಸ್ ಡಾಲರ್ ಯುದ್ಧ ಹೆಲಿಕಾಪ್ಟರ್ ಮತ್ತು ರಕ್ಷಣಾ ಸಾಮಾಗ್ರಿಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದಿದ್ದಾರೆ.

    ಮಾಹಿತಿಯ ಪ್ರಕಾರ, ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡುವ ಬಗ್ಗೆ ಭಾರತ ಮತ್ತು ಅಮೆರಿಕ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಭಾರತದಲ್ಲಿ ನಿಖರವಾದ ಬುದ್ಧಿ ಮತ್ತೆ ಕೊರತೆಯು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಮುಖ ಸಮಸ್ಯೆಯಾಗಿದೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಯುಎಸ್ ಹೋಮ್ಲ್ಯಾಂಡ್ ಸೆಕ್ಯೂರಿಟಿ ಮತ್ತು ಭಾರತದ ಗುಪ್ತಚರ ಬ್ಯೂರೋ ನಡುವೆ ಪರಿಹಾರವನ್ನು ತಲುಪಬಹುದು. ಇದರ ಅಡಿಯಲ್ಲಿ ಉಭಯ ದೇಶಗಳು ಭಯೋತ್ಪಾದಕರಿಗೆ ಸಂಬಂಧಿಸಿದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುತ್ತವೆ ಎನ್ನಲಾಗಿದೆ. ಇದನ್ನೂ ಓದಿ: ಮೋದಿ ಜೊತೆ ಚೌಕಾಸಿ ಮಾಡೋದು ತುಂಬಾ ಕಷ್ಟ – ಭಾರತವನ್ನು ಹಾಡಿ ಹೊಗಳಿದ ಟ್ರಂಪ್

    ಅಲ್ಲದೆ ಎರಡು ದೊಡ್ಡ ರಕ್ಷಣಾ ಒಪ್ಪಂದಗಳ ನಿರೀಕ್ಷೆಯೂ ಇದೆ ಎನ್ನಲಾಗಿದೆ. 24 ಯುಎಸ್ ಹೆಲಿಕಾಪ್ಟರ್‍ಗಳನ್ನು ಭಾರತೀಯ ನೌಕಾಪಡೆಗೆ 18 ಸಾವಿರ 200 ಕೋಟಿ ಮತ್ತು ಭಾರತೀಯ ಸೇನೆಗೆ 6 ಅಪಾಚೆ ಹೆಲಿಕಾಪ್ಟರ್‍ಗಳನ್ನು 5600 ಕೋಟಿಗಳಿಗೆ ಖರೀದಿಸಬಹುದು. ಈ ಒಪ್ಪಂದವು ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಮಿಲಿಟರಿ ಶಸ್ತ್ರಾಸ್ತ್ರಗಳ ಕೊರತೆಯನ್ನು ತುಂಬುತ್ತದೆ ಮತ್ತು ಇದು ಭಾರತದ ಮಿಲಿಟರಿ ಬಲವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಬಾಲಿವುಡ್ ಸೂಪರ್ ಹಿಟ್ ಸಿನ್ಮಾ ನೆನಪು ಮಾಡ್ಕೊಂಡ ಟ್ರಂಪ್

    ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಭಾರತ ಮತ್ತು ಅಮೆರಿಕ ನಡುವೆ ಒಂದು ಪ್ರಮುಖ ಒಪ್ಪಂದವನ್ನು ಮಾಡಿಕೊಳ್ಳಬಹುದು. ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಗಮನಿಸಿದರೆ, ಈ ಪ್ರದೇಶದ ಸುರಕ್ಷತೆ ಭಾರತ ಮತ್ತು ಅಮೆರಿಕ ಎರಡಕ್ಕೂ ಅವಶ್ಯಕವಾಗಿದೆ. ಅಫ್ಘಾನಿಸ್ತಾನದಲ್ಲಿ ಯುಎಸ್ ಮತ್ತು ತಾಲಿಬಾನ್ ನಡುವೆ ಕೆಲವೇ ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಭಾರತದ ಪಾತ್ರ ಮಹತ್ವದ್ದಾಗಿರುತ್ತದೆ. ಇದನ್ನೂ ಓದಿ: ಚಪ್ಪಲಿ, ಶೂ ತೆಗೆದು ಗಾಂಧಿ ಆಶ್ರಮದಲ್ಲಿ ಚರಕವನ್ನು ಸುತ್ತಿ ಸಂಭ್ರಮಿಸಿದ ಟ್ರಂಪ್ ದಂಪತಿ

    ಅಫ್ಘಾನಿಸ್ತಾನದಲ್ಲಿ ತನ್ನ ಕಾರ್ಯಾಚರಣೆಯಲ್ಲಿ ಭಾರತದ ಸಹಾಯವನ್ನು ಅಮೆರಿಕ ಬಯಸಿದೆ ಮತ್ತು ಚೀನಾ ವಿರುದ್ಧ ಹೋರಾಡಲು ಭಾರತಕ್ಕೂ ಅಮೆರಿಕದ ಅಗತ್ಯವಿದೆ. ಎಚ್ 1-ಬಿ ವೀಸಾ ಕೂಡ ಟ್ರಂಪ್ ಮತ್ತು ಮೋದಿ ನಡುವಿನ ಪ್ರಮುಖ ಚರ್ಚೆಯ ವಿಷಯವಾಗಲಿದೆ. ಟ್ರಂಪ್ ಅಧ್ಯಕ್ಷರಾದಾಗಿನಿಂದ ಈ ವಿಷಯ ವಿವಾದದಲ್ಲಿದೆ. ವರದಿಯ ಪ್ರಕಾರ, ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯರ ವೀಸಾ ವಜಾಗೊಳಿಸುವ ಪ್ರಮಾಣ ಹೆಚ್ಚಾಗಿದೆ. 2015ರಲ್ಲಿ ಕೇವಲ 1 ಪ್ರತಿಶತದಷ್ಟು ಭಾರತೀಯ ವೀಸಾ ಅರ್ಜಿಗಳನ್ನು ರದ್ದುಪಡಿಸಲಾಗಿದ್ದು, ಇದು 2019ರಲ್ಲಿ 8 ರಿಂದ 10 ಪ್ರತಿಶತಕ್ಕೆ ಏರಿದೆ. ಟ್ರಂಪ್ ಪ್ರವಾಸದ ನಂತರ ಈ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಆಶಿಸಲಾಗಿದೆ. ಇದನ್ನೂ ಓದಿ: ಕಲಾ ತಂಡದಿಂದ ನೃತ್ಯ, ಟ್ರಂಪ್‍ಗೆ ಮೋದಿಯಿಂದ ಪ್ರೀತಿಯ ಅಪ್ಪುಗೆ

    ಇದಲ್ಲದೆ ಐಪಿಆರ್ ಕುರಿತ ಒಪ್ಪಂದವೂ ಆಗುವ ಸಾಧ್ಯತೆ ಇದೆ. ಪೇಟೆಂಟ್ ಮತ್ತು ಹಕ್ಕು ಸ್ವಾಮ್ಯದಂತಹ ವಿಷಯಗಳನ್ನು ಐಪಿಆರ್ ಅಡಿಯಲ್ಲಿ ಒಳಗೊಂಡಿದೆ. ಯುಎಸ್ ವರದಿಯ ಪ್ರಕಾರ, ಅತಿ ಹೆಚ್ಚು ಐಪಿಆರ್ ಉಲ್ಲಂಘನೆ ವರದಿಯಾದ 10 ದೇಶಗಳಲ್ಲಿ ಭಾರತವೂ ಸೇರಿದೆ. ಭಾರತಕ್ಕಾಗಿ ಈ ಒಪ್ಪಂದದ ನಂತರ, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪೇಟೆಂಟ್ ಮತ್ತು ಹಕ್ಕು ಸ್ವಾಮ್ಯಗಳ ಅಗತ್ಯವಿರುವ ಇಂತಹ ಎಲ್ಲಾ ಸಂಶೋಧನೆಗಳು ಸುಲಭವಾಗುತ್ತವೆ. ಮತ್ತು ಭಾರತೀಯ ಕಂಪನಿಗಳಿಗೆ ಔಷಧಿಗಳ ಪರೀಕ್ಷೆಯನ್ನು ಪಡೆಯುವುದು ಮತ್ತು ಅವುಗಳಿಗೆ ಸಂಬಂಧಿಸಿದ ಪೇಟೆಂಟ್‍ಗಳನ್ನು ಪಡೆಯುವುದು ಸುಲಭವಾಗುತ್ತದೆ.

    ಟ್ರಂಪ್ ಪ್ರವಾಸವು ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಒಪ್ಪಂದ ಎಂದು ನಿರೀಕ್ಷಿಸಲಾಗಿದ್ದರೂ, ಇದು ಸ್ವಲ್ಪ ಸಮಯದವರೆಗೆ ಮುಂದುಡಲ್ಪಟ್ಟಿದೆ. ಅಮೆರಿಕ ಭಾರತದೊಂದಿಗೆ ತನ್ನ ಔಷಧೀಯ ವ್ಯವಹಾರವನ್ನು ಹೆಚ್ಚಿಸಲು ಬಯಸಿದೆ ಮತ್ತು ಕೃಷಿ ಉತ್ಪನ್ನಗಳನ್ನು, ವಿಶೇಷವಾಗಿ ಡೈರಿ ಉತ್ಪನ್ನಗಳನ್ನು ಭಾರತಕ್ಕೆ ಪ್ರವೇಶಿಸಲು ಬಯಸಿದೆ. ಆದರೆ ಭಾರತವು ತನ್ನ ಉತ್ಪನ್ನಗಳ ರಫ್ತು ಮೇಲೆ ವಿಶೇಷ ಸ್ಥಾನಮಾನವನ್ನು ಅಮೆರಿಕಗೆ ಹಿಂದಿರುಗಿಸಬೇಕೆಂದು ಭಾರತ ಬಯಸಿದೆ.

  • ಮೋದಿ ಜೊತೆ ಚೌಕಾಸಿ ಮಾಡೋದು ತುಂಬಾ ಕಷ್ಟ – ಭಾರತವನ್ನು ಹಾಡಿ ಹೊಗಳಿದ ಟ್ರಂಪ್

    ಮೋದಿ ಜೊತೆ ಚೌಕಾಸಿ ಮಾಡೋದು ತುಂಬಾ ಕಷ್ಟ – ಭಾರತವನ್ನು ಹಾಡಿ ಹೊಗಳಿದ ಟ್ರಂಪ್

    – ಮೋದಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ, ಆದರೆ ಬಹಳ ಕಠಿಣ ವ್ಯಕ್ತಿ
    – ರಕ್ಷಣ ಒಪ್ಪಂದದ ಬಗ್ಗೆ ಟ್ರಂಪ್ ಮಾತು

    ಅಹಮದಾಬಾದ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಎಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಭಾರತ ಅಮೆರಿಕವನ್ನು ಗೌರವಿಸುತ್ತದೆ. ಅಮೆರಿಕ ಭಾರತವನ್ನು ಗೌರವಿಸುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೊಟೆರಾ ಸ್ಟೇಡಿಯಂನಲ್ಲಿ ನೆರೆದಿದ್ದ ಲಕ್ಷಾಂತರ ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವವೇ ನಿಬ್ಬೆರಾಗುವಂತೆ ನಮಗೆ ಆತ್ಮೀಯ ಸ್ವಾಗತ ಸಿಕ್ಕಿದೆ. ಇದಕ್ಕೆ ನಾವು ಧನ್ಯವಾದ ಹೇಳುತ್ತೇನೆ ಎಂದರು.

    ಭಾರತದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಸೇರಿದಂತೆ ಹಲವು ಧರ್ಮಗಳ ಆಗರ. ವಿವಿಧತೆಯಲ್ಲಿ ಏಕತೆಯನ್ನು ಸಾರಿಕೊಂಡು ಅಭಿವೃದ್ಧಿ ಹೊಂದುತ್ತಿರುವ ಭಾರತ ವಿಶ್ವಕ್ಕೆ ಮಾದರಿ ಎಂದು ಹೇಳಿದರು.

    ತಮ್ಮ ಭಾಷಣದಲ್ಲಿ ನಾಳೆ ರಕ್ಷಣಾ, ವ್ಯಾಪಾರ ಜೊತೆ ಬಾಹ್ಯಾಕಾಶ ಸೇರಿದಂತೆ ಹಲವು ವಿಚಾರಗಳ ಒಪ್ಪಂದಕ್ಕೆ ಸಹಿ ಬೀಳಲಿದೆ. ಜಗತ್ತಿನ ಅತ್ಯುತ್ತಮ ಮಿಲಿಟರಿ ಉಪಕರಣವನ್ನು ನಾವು ತಯಾರಿಸುತ್ತಿದ್ದೇವೆ. 3 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಕ್ಕೆ ನಾಳೆ ಸಹಿ ಹಾಕಲಿದ್ದೇವೆ. ಅತ್ಯುತ್ತಮ ಉಪಕರಣಗಳು ಹೆಲಿಕಾಪ್ಟರ್ ಗಳು ಒಪ್ಪಂದದಲ್ಲಿ ಇರಲಿದೆ ಎಂದು ಹೇಳಿ, ಮೋದಿ ಜೊತೆ ಚೌಕಾಶಿ ಮಾಡುವುದು ತುಂಬಾ ಕಷ್ಟ ಎಂದು ವ್ಯಂಗ್ಯವಾಗಿ ಹೇಳಿದರು.

    ಟೀ ಮಾರುತ್ತಿದ್ದ ಮೋದಿ ಇಂದು ಪ್ರಧಾನಿ ಆಗಿದ್ದಾರೆ. ಎರಡನೇ ಬಾರಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದಾರೆ. ಮೋದಿಯಂತೆ ಬಾಳುವುದು ಬಹಳ ಕಷ್ಟ. ರಾತ್ರಿ, ಹಗಲು ಭಾರತದ ಅಭಿವೃದ್ಧಿ ವಿಚಾರದ ಬಗ್ಗೆ ಯೋಚನೆ ಮಾಡುತ್ತಾರೆ. 70 ವರ್ಷದಲ್ಲಿ ಭಾರತ ಬಹಳ ವೇಗದಲ್ಲಿ ಅಭಿವೃದ್ಧಿ ಆಗುತ್ತಿದೆ. ಬಡತನವನ್ನು ಮೇಲಕ್ಕೆ ಎತ್ತಲು ಮೋದಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠವಾಗಿದ್ದು, ಇಷ್ಟೊಂದು ದೊಡ್ಡ ಸ್ವಾಗತ ನಮಗೆ ಸಿಗುತ್ತದೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಹಾಡಿ ಹೊಗಳಿದರು.

    ತಮ್ಮ ಭಾಷಣದಲ್ಲಿ ವಿವೇಕಾನಂದರನ್ನು ಸ್ಮರಿಸಿದ ಟ್ರಂಪ್, ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಕ್ರಿಕೆಟ್ ಆಟಗಾರರನ್ನು ಹೊಂದಿದ ದೇಶ ಭಾರತ. ಬಾಲಿವುಡ್ ಸಿನಿಮಾಗಳಾದ ಡಿಡಿಎಲ್‍ಜೆ, ಶೋಲೆ ಸಿನಿಮಾಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು.

    ಉಗ್ರರನ್ನು ಹೊಡೆದು ಹಾಕಲು ಭಾರತ ಮತ್ತು ಅಮೆರಿಕ ಹೊರಾಡುತ್ತಿದೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಹಿಂದೆಂದು ಕಾಣದ ರೀತಿಯಲ್ಲಿ ಏರಿಕೆಯಾಗಿದೆ. ಭಾರತ ನಮ್ಮ ಅತಿ ದೊಡ್ಡ ರಫ್ತು ರಾಷ್ಟ್ರವಾಗಿದ್ದರೆ, ಭಾರತಕ್ಕೆ ಅಮೆರಿಕ ಅತಿ ದೊಡ್ಡ ರಫ್ತು ರಾಷ್ಟ್ರ ಎಂದು ತಿಳಿಸಿದರು.

    ನಮಸ್ತೆ ಟ್ರಂಪ್ ಎಂದು ಮೂರು ಬಾರಿ ಹೇಳಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, 5 ತಿಂಗಳ ಹಿಂದೆ ಅಮೆರಿಕದ ಹ್ಯೂಸ್ಟನ್ ನಲ್ಲಿ ನನಗೆ ದೊಡ್ಡ ಸ್ವಾಗತ ನೀಡಲಾಗಿತ್ತು. ಅದೇ ರೀತಿಯಾಗಿ ಇಂದು ಅಮೆರಿಕದ ಅಧ್ಯಕ್ಷರು ಮತ್ತು ಕುಟುಂಬದವರಿಗೆ ಸ್ವಾಗತ ನೀಡಲಾಗುತ್ತಿದೆ ಎಂದರು.

    ವಿಶ್ವ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಒಂದಾಗುತ್ತಿದೆ. ಕಾರ್ಯಕ್ರಮ ಗುಜರಾತಿನಲ್ಲಿ ನಡೆಯುತ್ತಿದ್ದರೂ ಹಿಂದೂಸ್ತಾನದಲ್ಲಿ ಜೋಶ್ ಇದೆ. ಭಾರತ ಅಮೆರಿಕ ಸ್ನೇಹ ಚಿರಾಯುವಾಗಲಿ. ಇದೊಂದು ಐತಿಹಾಸಿಕ ದಿನವಾಗಿದ್ದು, ಗುಜರಾತಿನ ಜನ ಮತ್ತು ಗುಜರಾತಿಗೆ ಆಗಮಿಸಿದ ಬೇರೆ ರಾಜ್ಯಗಳ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿ ಡೊನಾಲ್ಡ್ ಟ್ರಂಪ್ ಅವರನ್ನು ವೇದಿಕೆಗೆ ಸ್ವಾಗತಿಸಿದರು.

  • ಬಾಲಿವುಡ್ ಸೂಪರ್ ಹಿಟ್ ಸಿನ್ಮಾ ನೆನಪು ಮಾಡ್ಕೊಂಡ ಟ್ರಂಪ್

    ಬಾಲಿವುಡ್ ಸೂಪರ್ ಹಿಟ್ ಸಿನ್ಮಾ ನೆನಪು ಮಾಡ್ಕೊಂಡ ಟ್ರಂಪ್

    ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಬಾಲಿವುಡ್ ಸೂಪರ್ ಹಿಟ್ ಸಿನಿಮಾವನ್ನು ನೆನಪು ಮಾಡಿಕೊಂಡರು.

    ಮೊಟೆರಾದ ಸ್ಟೇಡಿಯಂಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ದೇಶದ ಪ್ರತಿಯೊಂದು ಕ್ಷೇತ್ರಗಳ ಸಾಧನೆಯನ್ನು ತಿಳಿಸಿ ನಾನು ಭಾರತವನ್ನು ಪ್ರೀತಿಸುತ್ತೇನೆ. ಬಾಲಿವುಡ್ ಮತ್ತು ಹಾಲಿವುಡ್ ಹೊಸತನಕ್ಕೆ ಮಾದರಿಯಾಗಿವೆ. ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ‘ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇಂಗೆ’ (ಡಿಡಿಎಲ್‍ಜೆ) ಚಿತ್ರದ ಯಶಸ್ಸು ಭಾರತೀಯ ಸಿನಿಮಾ ಏನು ಎಂಬುದನ್ನು ತೋರಿಸುತ್ತದೆ ಎಂದರು.

    ಭಾಷಣದ ವೇಳೆ ಸ್ವಾಮಿ ವಿವೇಕಾನಂದರನ್ನು ಮರೆಯುವುದುಂಟೆ ಎಂದರು. ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

    2 ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು.ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ನಂತರ ಮೋದಿ ಅಧಿಕಾರಿ ವರ್ಗದ ಸದಸ್ಯರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಟ್ರಂಪ್ ಅವರಿಗೆ ಪರಿಚಯಿಸಿದರು.

  • ಚಪ್ಪಲಿ, ಶೂ ತೆಗೆದು ಗಾಂಧಿ ಆಶ್ರಮದಲ್ಲಿ ಚರಕವನ್ನು ಸುತ್ತಿ ಸಂಭ್ರಮಿಸಿದ ಟ್ರಂಪ್ ದಂಪತಿ

    ಚಪ್ಪಲಿ, ಶೂ ತೆಗೆದು ಗಾಂಧಿ ಆಶ್ರಮದಲ್ಲಿ ಚರಕವನ್ನು ಸುತ್ತಿ ಸಂಭ್ರಮಿಸಿದ ಟ್ರಂಪ್ ದಂಪತಿ

    ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಚರಕವನ್ನು ಸುತ್ತಿ ಸಂಭ್ರಮಿಸಿದ್ದಾರೆ.

    ಮಧ್ಯಾಹ್ನ 12 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಹೊರಟ ಟ್ರಂಪ್ ದಂಪತಿಯನ್ನು ಜನ ರಸ್ತೆಯಲ್ಲಿ ನಿಂತು ಸ್ವಾಗತಿಸಿದರು. 22 ಕಿ.ಮೀ ರೋಡ್ ಶೋ ಮುಗಿಸಿದ ಬಳಿಕ ಟ್ರಂಪ್ ಅವರಿದ್ದ ಕಾರು ಮಧ್ಯಾಹ್ನ 12.20ಕ್ಕೆ ಸಬರಮತಿ ಆಶ್ರಮಕ್ಕೆ ತಲುಪಿತು.

     

    ಟ್ರಂಪ್ ಕಾರು ಆಗಮಿಸುವ ಮೊದಲೇ ಪ್ರಧಾನಿ ಮೋದಿ ಸಬರಮತಿ ಆಶ್ರಮ ತಲುಪಿದ್ದರು. ಟ್ರಂಪ್ ದಂಪತಿ ಕಾರಿನಿಂದ ಇಳಿದ ಕೂಡಲೇ ಮೋದಿ ಶಾಲು ರೂಪದಲ್ಲಿರುವ ಖಾದಿ ಬಟ್ಟೆಯನ್ನು ಟ್ರಂಪ್ ದಂಪತಿಯ ಕುತ್ತಿಗೆಗೆ ಹಾಕಿ ಸ್ವಾಗತಿಸಿದರು.

    ವಿಶೇಷ ಏನೆಂದರೆ ಮೆಲಾನಿಯಾ ಟ್ರಂಪ್ ತಮ್ಮ ಹೈ ಹೀಲ್ಸ್ ಚಪ್ಪಲಿಯನ್ನು ಮತ್ತು ಡೊನಾಲ್ಡ್ ಟ್ರಂಪ್ ಶೂ ಹೊರಗಡೆ ಇರಿಸಿ ಸಬರಮತಿ ಆಶ್ರಮವನ್ನು ಪ್ರವೇಶಿಸಿದರು. ಸಬರಮತಿ ಆಶ್ರಮ ಪ್ರವೇಶಿಸುತ್ತಿದ್ದಂತೆ ಗಾಂಧೀಜಿಯ ಭಾವಚಿತ್ರಕ್ಕೆ ಮೋದಿ ಮತ್ತು ಟ್ರಂಪ್ ಹಾರವನ್ನು ಹಾಕಿ ನಮಿಸಿದರು. ಈ ಸಂದರ್ಭದಲ್ಲಿ ಟ್ರಂಪ್ ಅವರಿಗೆ ಮೋದಿ ಸಬರಮತಿ ಆಶ್ರಮದ ಬಗ್ಗೆ ವಿವರಣೆ ನೀಡುತ್ತಿದ್ದರು. ಭೇಟಿ ಸಂದರ್ಭದಲ್ಲಿ ಗಾಂಧೀಜಿಯವರ ಪ್ರಸಿದ್ಧ ರಘುಪತಿ ರಾಘವ ರಾಜರಾಂ ಭಜನೆ ಹಾಡು ಹಿಂದುಗಡೆಯಿಂದ ಮೊಳಗುತಿತ್ತು.

     

    ಇದಾದ ಬಳಿಕ ಹೊರಗಡೆ ಬಂದ ದಂಪತಿಗೆ ಮೋದಿ ಗಾಂಧೀಜಿ ಬಳಸುತ್ತಿದ್ದ ಚರಕವನ್ನು ತೋರಿಸಿದರು. ನಂತರ ಟ್ರಂಪ್ ದಂಪತಿ ಚರಕವನ್ನು ಸುತ್ತಿ ಆನಂದಿಸಿದರು. ಚರಕ ಸುತ್ತಿದ ಬಳಿಕ ಮೂವರು ಆಶ್ರಮದ ಹೊರಗಿನ ಆವರಣದಲ್ಲಿ ಕೆಲ ನಿಮಿಷಗಳ ಕಾಲ ಕುಳಿತುಕೊಂಡರು. ಕೊನೆಗೆ ಟ್ರಂಪ್ ಅತಿಥಿಗಳ ಪುಸ್ತಕದಲ್ಲಿ ಹಸ್ತಾಕ್ಷರ ಹಾಕಿದರು. “ಪ್ರೈಮ್ ಮಿನಿಸ್ಟರ್ ಮೋದಿ, ಥಾಂಕ್ಯೂ ಫಾರ್ ದಿಸ್ ವಂಡರ್ ಫುಲ್ ವಿಸಿಟ್” ಎಂಬುದಾಗಿ ಟ್ರಂಪ್ ಹಸ್ತಾಕ್ಷರ ಹಾಕಿ ನಂತರ ಕಾರಿನ ಮೂಲಕ ಅಹಮದಾಬಾದ್ ಕಡೆಗೆ ತೆರಳಿದರು.

  • ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸೇರುತ್ತೇನೆ: ಹಿಂದಿಯಲ್ಲಿ ಟ್ರಂಪ್ ಟ್ವೀಟ್

    ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸೇರುತ್ತೇನೆ: ಹಿಂದಿಯಲ್ಲಿ ಟ್ರಂಪ್ ಟ್ವೀಟ್

    ನವದೆಹಲಿ: ನಾನು ಈಗಾಗಲೇ ಹೊರಟಿದ್ದೇನೆ, ದಾರಿ ಮಧ್ಯೆ ಇದ್ದೇನೆ ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸೇರುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

    ಹಿಂದಿಯಲ್ಲಿ ಟ್ವೀಟ್ ಮಾಡಿ ಈ ಮಾಹಿತಿ ನೀಡಿರುವ ಅವರು, ಭಾರತಕ್ಕೆ ಆಗಮಿಸಲು ಕಾತುರನಾಗಿದ್ದು, ದಾರಿ ಮಧ್ಯೆ ಇದ್ದೇನೆ ಇನ್ನೇನು ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸೇರುತ್ತೇನೆ. ನಾವೆಲ್ಲರೂ ಸೇರೋಣ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಅತಿಥಿ ದೇವೋ ಭವಃ ಎಂದು ಟ್ವೀಟ್‍ಗೆ ಉತ್ತರಿಸಿದ್ದಾರೆ.

    ಟ್ರಂಪ್ ಆಗಮನಕ್ಕಾಗಿ ಗುಜರಾತ್ ಸಂಪೂರ್ಣ ಸನ್ನದ್ಧವಾಗಿದ್ದು, ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಅಹಮದಾಬಾದ್‍ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್ ವಿಮಾನ ನಿಲ್ದಾಣಕ್ಕೆ ತೆರಳಿ ಟ್ರಂಪ್ ದಂಪತಿಯನ್ನು ಬರಮಾಡಿಕೊಳ್ಳಲಿದ್ದಾರೆ. ಇಂದು ಬೆಳಗ್ಗೆ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‍ನ ಅಮೆರಿಕ ಅಧ್ಯಕ್ಷರ ಏರ್‍ಫೋರ್ಸ್ ಒನ್ ವಿಮಾನ ಬಂದಿಳಿಯಲಿದೆ. ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಮತ್ತು ಅಳಿಯ ಜ್ಯಾರೆಡ್ ಕುಶ್ನರ್ ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ನಿಯೋಗದೊಂದಿಗೆ ಟ್ರಂಪ್ ಆಗಮಿಸುತ್ತಿದ್ದಾರೆ.

    ನಂತರ ಏರ್‍ಪೋರ್ಟ್‍ನಿಂದ ಮೋದಿ ಮತ್ತು ಟ್ರಂಪ್ 22 ಕಿ.ಮೀ. ರೋಡ್ ಶೋ ಮೂಲಕ ಮೊಟೆರಾ ಸ್ಟೇಡಿಯಂಗೆ ಸಾಗಲಿದ್ದಾರೆ. ಸ್ವಾಗತ ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ಅದ್ಧೂರಿ ಅಲಂಕಾರ ಮಾಡಲಾಗಿದ್ದು, ಇಕ್ಕೆಲಗಳಲ್ಲಿ ಜಮಾಯಿಸಲಿರುವ ಲಕ್ಷಾಂತರ ಜನ ದೊಡ್ಡಣ್ಣನಿಗೆ ಜೈಕಾರ ಕೂಗಲಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕಾಗಿ ಭರ್ಜರಿಯಾಗಿಯೇ ಸಿದ್ಧತೆ ನಡೆಸಲಾಗಿದೆ. ಇದೇ ವೇಳೆ ಮಧ್ಯಾಹ್ನ 12.15ಕ್ಕೆ ಮಹಾತ್ಮ ಗಾಂಧೀಜಿಯವರ ಸಾಬರಮತಿ ಆಶ್ರಮಕ್ಕೆ ಟ್ರಂಪ್ ಭೇಟಿ ನೀಡಲಿದ್ದು, ಅಲ್ಲಿ ಅರ್ಧಗಂಟೆ ಕಾಲ ಕಳೆಯಲಿದ್ದಾರೆ.

    `ನಮಸ್ತೆ ಟ್ರಂಪ್’ ಕಾರ್ಯಕ್ರಮ
    ರೋಡ್ ಶೋ ಬಳಿಕ ವಿಶ್ವದಲ್ಲೇ ಅತೀ ದೊಡ್ಡದಾಗಿರುವ ಮೊಟೆರಾ ಸ್ಟೇಡಿಯಂನ್ನು ಟ್ರಂಪ್ ಉದ್ಘಾಟಿಸಲಿದ್ದಾರೆ. ತರುವಾಯ 1 ಲಕ್ಷ ಜನ ಸಾಕ್ಷಿ ಆಗಲಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಇದಕ್ಕಾಗಿ ಮೊಟೆರಾ ಸರ್ವಾಂಗ ಸುಂದರವಾಗಿ ಸಜ್ಜಾಗಿದೆ. ಈ ಹಿಂದೆ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಮೋದಿಗಾಗಿ ‘ಹೌಡಿ ಮೋದಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಇದೀಗ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿದೆ.