Tag: donald trump

  • ಕೊರೊನಾ ವಿರುದ್ಧ ಮೋದಿ-ಟ್ರಂಪ್ ಜಂಟಿ ಹೋರಾಟ

    ಕೊರೊನಾ ವಿರುದ್ಧ ಮೋದಿ-ಟ್ರಂಪ್ ಜಂಟಿ ಹೋರಾಟ

    ನವದೆಹಲಿ: ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಸಂಭಾಷಣೆಯಲ್ಲಿ, ಭಾರತ ಮತ್ತು ಅಮೆರಿಕ ಜಂಟಿಯಾಗಿ ಕೊರೊನಾ ವಿರುದ್ಧ ಪೂರ್ಣ ಬಲದಿಂದ ಹೋರಾಡಲು ಒಪ್ಪಿಕೊಂಡಿವೆ.

    ಅಮೆರಿಕದಲ್ಲಿ ಈವರೆಗೆ 2.78 ಲಕ್ಷಕ್ಕೂ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 7,100ಕ್ಕೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭಾರತದಲ್ಲಿಯೂ ಇದುವರೆಗೆ ಸುಮಾರು 3,200ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, 87 ಜನರು ಬಲಿಯಾಗಿದ್ದಾರೆ.

    ಕೊರೊನಾದ ಕಾರಣದಿಂದಾಗಿ ಉಭಯ ದೇಶಗಳ ಪರಿಸ್ಥಿತಿಯನ್ನು ಮೋದಿ ಮತ್ತು ಟ್ರಂಪ್ ವಿವರವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯ ನಂತರ ಮೋದಿ ಟ್ವೀಟ್ ಮಾಡಿ, ನಾವು ಉತ್ತಮ ಚರ್ಚೆ ನಡೆಸಿದ್ದೇವೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ ಕೋವಿಡ್ -19 ವಿರುದ್ಧ ಪೂರ್ಣ ಬಲದಿಂದ ಹೋರಾಡಲಿದೆ ಎಂದು ತಿಳಿಸಿದ್ದಾರೆ.

    ವಿಪಕ್ಷ ನಾಯಕರೊಂದಿಗೆ ಮೋದಿ ಮಾತು:
    ಕೊರೊನಾ ವೈರಸ್‍ನಿಂದ ಉದ್ಭವಿಸಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡಲಿದ್ದಾರೆ. ಲಾಕ್‍ಡೌನ್ ಘೋಷಿಸಿದ ನಂತರ, ಲೋಕಸಭೆ ಮತ್ತು ರಾಜ್ಯಸಭೆಯ ಐದಕ್ಕೂ ಹೆಚ್ಚು ನಾಯಕರೊಂದಿಗೆ ಮೊದಲ ಬಾರಿಗೆ ಚರ್ಚೆ ನಡೆಸಲಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಈ ಮಾಹಿತಿ ನೀಡಿದ್ದಾರೆ.

    ದೇಶದಲ್ಲಿ ಕಳೆದ ಒಂದು ವಾರದಿಂದ 1,973 ಕೊರೊನಾ ಸೋಂಕಿತರು ಹೆಚ್ಚಾಗಿದೆ. ಮಾರ್ಚ್ 29ರಂದು ಕೊರೊನಾ ಸೋಂಕಿತರ ಸಂಖ್ಯೆ 1,139 ಆಗಿತ್ತು. ಆದರೆ ಶನಿವಾರದ ವೇಳೆಗೆ 3,229ಕ್ಕೆ ಏರಿಕೆ ಕಂಡಿದೆ.

  • ವಿಶ್ವವ್ಯಾಪಿ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ – ಅಮೆರಿಕದಲ್ಲಿ ಒಂದೇ ದಿನಕ್ಕೆ 1,169 ಮಂದಿ ಬಲಿ

    ವಿಶ್ವವ್ಯಾಪಿ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ – ಅಮೆರಿಕದಲ್ಲಿ ಒಂದೇ ದಿನಕ್ಕೆ 1,169 ಮಂದಿ ಬಲಿ

    ವಾಷಿಂಗ್ಟನ್: ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‍ಗೆ ಅಮೆರಿಕ ಕೂಡ ತತ್ತರಿಸಿ ಹೋಗಿದ್ದು, ಕಳೆದ 24 ಗಂಟೆಗಳಲ್ಲಿ 1,169 ಮಂದಿಯನ್ನು ಕೊರೊನಾ ವೈರಸ್ ಬಲಿ ಪಡೆದಿದೆ.

    ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಬಳಿಕ ವಿಶ್ವವ್ಯಾಪಿ ಹರಡಿತು. ಈ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದಕ್ಕೆ ಇಟಲಿಯಲ್ಲಿ ಹೆಚ್ಚಿನ ಸಾವು ಸಂಭವಿಸಿತ್ತು. ಆದರೆ ಈಗ ಚೀನಾ, ಇಟಲಿಯನ್ನು ಹಿಂದಿಕ್ಕಿ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕು ಅಮೆರಿಕದಲ್ಲಿ ಹರಡುತ್ತಿದೆ. ಈವರೆಗೆ ಅಮೆರಿಕದಲ್ಲಿ ಸುಮಾರು 2,26,374 ಜನರಿಗೆ ಕೊರೊನಾ ವೈರಸ್ ತಗುಲಿದ್ದು, 6,075 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲೂ ಕಳೆದ 24 ಗಂಟೆಗಳಲ್ಲಿ 1,169 ಮಂದಿ ಸಾವನ್ನಪ್ಪಿದ್ದು ರಾಷ್ಟ್ರದಲ್ಲಿ ಆತಂಕವನ್ನು ಹೆಚ್ಚಿಸಿದೆ.

    ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿ ಕೇಳಿ ಬಂದಿತ್ತು. ಈ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಟ್ರಂಪ್ ಅವರಿಗೆ ಸೋಂಕು ತಟ್ಟಿಲ್ಲ ಎಂಬುದು ದೃಢಪಟ್ಟಿತ್ತು. ಈಗ ಎರಡನೇ ಬಾರಿಗೆ ಟ್ರಂಪ್ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದು, ಈ ಬಾರಿಯೂ ವರದಿ ನೆಗೆಟಿವ್ ಬಂದಿದೆ.

    ವಿಶ್ವಾದ್ಯಂತ ರಣಕೇಕೆ ಹಾಕುತ್ತಿರುವ ಸೋಂಕಿಗೆ ಈವರೆಗೆ ಸುಮಾರು 10,16,330 ಮಂದಿ ತುತ್ತಾಗಿದ್ದಾರೆ. ಕೊರೊನಾ ವೈರಸ್‍ನಿಂದ 53,238 ಮಂದಿ ಸಾವನ್ನಪ್ಪಿದ್ದರೆ, 2,13,132 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

    ಇಟಲಿಯಲ್ಲಿ ಈವರೆಗೆ 1,15,242 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 13,919 ಮಂದಿ ಬಲಿಯಾಗಿದ್ದಾರೆ. ಇತ್ತ ಸ್ಪೇನ್‍ನಲ್ಲಿ 1,12,065 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 10,348 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ 81,620 ಮಂದಿಗೆ ಸೋಂಕು ತಟ್ಟಿದ್ದು, 3,322 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಭಾರತದಲ್ಲಿ 2,301 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, 56 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಪಾಕಿಸ್ತಾನದಲ್ಲಿ 2,450 ಮಂದಿ ಸೋಂಕಿಗೆ ತುತ್ತಾಗಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ.

  • ಕೊರೊನಾಗೆ ಲಸಿಕೆ ಸಂಶೋಧಿಸುತ್ತಿರುವ ಕಂಪನಿ ಖರೀದಿಗೆ ಟ್ರಂಪ್ ಯತ್ನ

    ಕೊರೊನಾಗೆ ಲಸಿಕೆ ಸಂಶೋಧಿಸುತ್ತಿರುವ ಕಂಪನಿ ಖರೀದಿಗೆ ಟ್ರಂಪ್ ಯತ್ನ

    – ಅಮೆರಿಕದ ಜನತೆಗೆ ಮಾತ್ರ ಲಸಿಕೆ ನೀಡಬೇಕು
    – ಟ್ರಂಪ್ ವಿರುದ್ಧ ಜರ್ಮನಿಯಲ್ಲಿ ಆಕ್ರೋಶ

    ಬರ್ಲಿನ್: ಕೊರೊನಾ ವೈರಸಿಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿರುವ ಜರ್ಮನಿ ಕಂಪನಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖರೀದಿಸಲು ಮುಂದಾಗಿರುವ ವಿಚಾರ ಈಗ ಪ್ರಕಟವಾಗಿದೆ.

    ಜರ್ಮನಿಯ ಕ್ಯುರೆವಾಕ್ ಕಂಪನಿ ಪ್ರಯೋಗಾಲಯದಲ್ಲಿ ಹಲವು ಮಾದರಿಯ ಔಷಧಿಗಳನ್ನು ತಯಾರಿಸಿದ್ದು ಈ ಪೈಕಿ ಅಂತಿಮವಾಗಿ ಎರಡು ಔಷಧಿಗಳನ್ನು ಕ್ಲಿನಿಕಲ್ ಪರೀಕ್ಷೆಗೆ ಪ್ರಯೋಗಿಸಲು ಮುಂದಾಗುತ್ತಿದೆ.

    ಅಮೆರಿಕದಲ್ಲಿ ಕೊರೊನ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈಗ ಇದರಲ್ಲೂ ಲಾಬಿ ಮಾಡಲು ಮುಂದಾಗಿದ್ದು ಕಂಪನಿಯನ್ನು ಖರೀದಿಸುವ ಪ್ರಸ್ತಾಪ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕದ ಜನತೆಗೆ ಮಾತ್ರ ಔಷಧಿ ನೀಡಬೇಕೆಂದು ಮಾತುಕತೆ ನಡೆಸಿರುವ ವಿಚಾರವನ್ನು ಮಾಧ್ಯಮ ಪ್ರಕಟಿಸಿದೆ.

    ಈ ವಿಚಾರ ಪ್ರಕಟವಾಗುತ್ತಿದ್ದಂತೆ ಜರ್ಮನಿಯ ಜನತೆ ಡೊನಾಲ್ಡ್ ಟ್ರಂಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ “ಜರ್ಮನಿ ಮಾರಾಟಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜರ್ಮನಿ ವಿದೇಶಾಂಗ ಸಚಿವ ಹೀಕೊ ಮಾಸ್ ಅವರು, “ಜರ್ಮನಿ ವಿಜ್ಞಾನಿಗಳಿಗೆ ಲಸಿಕೆ ಸಂಶೋಧನೆಗೆ ಹಲವು ರಾಷ್ಟ್ರಗಳಿಂದ ಸಹಕಾರ ಸಿಗುತ್ತಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಯನ್ನು ಬಿಡಬೇಕು” ಎಂದು ಟ್ರಂಪ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಕ್ಯುರೆವಾಕ್  ಕಂಪನಿಗೆ ಟ್ರಂಪ್ 7,424 ಕೋಟಿ ರೂ. ಆಫರ್ ನೀಡಿದ್ದು, ಲಸಿಕೆಯನ್ನು ಅಭಿವೃದ್ಧಿಪಡಿಸಿ ಕೇವಲ ಅಮೆರಿಕಕ್ಕೆ ಮಾತ್ರ ನೀಡಬೇಕು ಎಂಬುದಾಗಿ ಒತ್ತಾಯಿಸಿದ್ದರು ಎಂದು ವಾರ ಪತ್ರಿಕೆ ವರದಿ ಪ್ರಕಟಿಸಿತ್ತು.

    ಮಾರ್ಚ್ 2 ರಂದು ಕ್ಯುರೆವಾಕ್ ಕಂಪನಿಯ ಸಿಇಒ ಡೇನಿಯಲ್ ಮೆನಿಚಿಲ್ಲಾ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.

    ಮಾಧ್ಯಮಗಳಲ್ಲಿ ಬಂದ ವರದಿಯನ್ನು ಕ್ಯುರೆವಾಕ್ ನಿರಾಕರಿಸಿದ್ದು, ಅಮೆರಿಕದ ಅಧ್ಯಕ್ಷ ಟ್ರಂಪ್ ಯಾವುದೇ ಆಫರ್ ನೀಡಿಲ್ಲ. ಮಾಧ್ಯಮಗಳ ಆರೋಪ ಸುಳ್ಳು ಎಂದು ಹೇಳಿದೆ.

  • ಕೊರೊನಾ ಕೋಲಾಹಲ – ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

    ಕೊರೊನಾ ಕೋಲಾಹಲ – ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಟ್ರಂಪ್

    – ಅಮೆರಿಕದಲ್ಲಿ 48 ಸಾವು, 2 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆ

    ವಾಷಿಂಗ್ಟನ್: ಮಹಾಮಾರಿ ಕೊರೊನಾ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದ್ದು, ಅಭಿವೃದ್ಧಿ ಹೊಂದಿದ ದೇಶಗಳು ಸಹ ಇದಕ್ಕೆ ನಲುಗಿ ಹೋಗುತ್ತಿವೆ. ಈ ವೈರಸ್‍ನಿಂದಾಗಿ ಅಮೆರಿಕಾ ತಲ್ಲಣಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ಈ ಕುರಿತು ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿಯವರು ಸಹ ಈ ಕುರಿತು ಸಹಕರಿಸಬೇಕು. ಶಂಕಿತರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಬೇಕು ಎಂದು ಪರೀಕ್ಷಾ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಡಲು ಫೆಡರಲ್ ಸರ್ಕಾರಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನಿಡಲಾಗಿದ್ದು, ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದಾರೆ. ಅಲ್ಲದೆ ಪರಿಸ್ಥಿತಿ ನಿಭಾಯಿಸಲು 3.69 ಲಕ್ಷ ಕೋಟಿ ರೂ.(50 ಬಿಲಿಯನ್ ಡಾಲರ್) ಘೋಷಿಸಿರುವುದಾಗಿ ಎಂದು ಸ್ಪಷ್ಟಪಡಿಸಿದ್ದಾರೆ.

    ಮುಂದಿನ ಎಂಟು ವಾರಗಳ ಕಾಲ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಈ ವೈರಸ್‍ನ್ನು ನಾವು ಹತ್ತಿಕ್ಕುವಲ್ಲಿ ಯಶಸ್ವಿಯಾಗಲಿದ್ದೇವೆ. ಎಲ್ಲ ರಾಜ್ಯಗಳು ತುರ್ತು ಆಪರೇಷನ್ ಕೇಂದ್ರಗಳನ್ನು ತೆರೆಯಬೇಕು. ಖಾಸಗಿಯವರ ಜೊತೆಗೂ ಸರ್ಕಾರ ಸಹಭಾಗಿಯಾಗಲಿದೆ. ಪರೀಕ್ಷಾ ಕೇಂದ್ರಗಳ ಕೊರತೆಯಿದೆ ಎಂಬ ಟೀಕೆ ಕೇಳಿಬರುತ್ತಿದ್ದು, ವೈರಸ್ ಪರೀಕ್ಷಾ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸಿ ಎಂದು ಕರೆ ನೀಡಿದ್ದಾರೆ.

    ಅಮೆರಿಕನ್ನರ ಅಗತ್ಯತೆಗಳನ್ನು ಪೂರೈಸಲು ದೇಶದ ಪ್ರತಿ ಆಸ್ಪತ್ರೆಯಲ್ಲಿ ತುರ್ತು ಸಿದ್ಧತೆ ಕೈಗೊಳ್ಳಬೇಕು. ಜನತೆಗೆ ಅಗತ್ಯವಿರುವ ಎಲ್ಲ ಬಗೆಯ ಕ್ರಮಗಳನ್ನು, ಅಗತ್ಯ ಕಾಳಜಿ, ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಇದಕ್ಕೆ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಾವು ನಿವಾರಿಸುತ್ತೇವೆ ಎಂದು ತಿಳಿಸಿದ್ದಾರೆ.

    ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವುದರಿಂದ ಎಲ್ಲ ರೀತಿಯ ಹಕ್ಕುಗಳನ್ನು ಹಾಗೂ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಆರೋಗ್ಯ ಕಾರ್ಯದರ್ಶಿಗೆ ನೀಡಲಾಗಿದೆ. ಅಲ್ಲದೆ ಎಲ್ಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಟೆಲಿ ಮೆಡಿಸಿನ್ ಹಾಗೂ ಆಸ್ಪತ್ರೆಗಳಿಗೆ ಹೆಚ್ಚುವರಿ ವೈದ್ಯರನ್ನು ಒದಗಿಸುವ ಸ್ವಾತಂತ್ರ್ಯವನ್ನು ಸಹ ಕಾರ್ಯದರ್ಶಿಗೆ ನೀಡಲಾಗಿದೆ.

    ಅಮೆರಿಕದಲ್ಲಿ ಒಟ್ಟು 2,100 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 48 ಜನ ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.

  • ಅಮೆರಿಕದ ಮಿಲಿಟರಿ ವುಹಾನ್‍ನಲ್ಲಿ ಕೊರೊನಾ ವೈರಸ್ ತಂದಿರಬಹುದು – ಚೀನಾ

    ಅಮೆರಿಕದ ಮಿಲಿಟರಿ ವುಹಾನ್‍ನಲ್ಲಿ ಕೊರೊನಾ ವೈರಸ್ ತಂದಿರಬಹುದು – ಚೀನಾ

    – ಕೊರೊನಾ ವಿಚಾರದಲ್ಲಿ ಅಮೆರಿಕ, ಚೀನಾ ಕಿತ್ತಾಟ
    – ಪ್ರತಿಯೊಂದಕ್ಕೂ ನಮ್ಮನ್ನು ದೂರಬೇಡಿ
    – ಅಮೆರಿಕದಿಂದ ಬೇಜವಾಬ್ದಾರಿ ಹೇಳಿಕೆ
    – ಕೊರನಾ ಮೊದಲು ಸೃಷ್ಟಿಯಾಗಿದ್ದು ಅಮೆರಿಕದಲ್ಲಿ

    ಬೀಜಿಂಗ್: ಹುಬೆ ಪ್ರಾಂತ್ಯದ ವುಹಾನ್ ನಲ್ಲಿ ಕೊರೊನಾ ವೈರಸ್ ಹಬ್ಬಲು ಅಮೆರಿಕ ಸೇನೆ ಕಾರಣವಾಗಿರಬಹುದು ಎಂದು ಚೀನಾ ಶಾಕಿಂಗ್ ಹೇಳಿಕೆ ನೀಡಿದೆ. ಕಳೆದ ವರ್ಷ ವ್ಯಾಪಾರ ಸಮರ ಆರಂಭಿಸಿದ್ದ ಅಮೆರಿಕ ಮತ್ತು ಚೀನಾ ಈಗ ಕೊರೊನಾ ವಿಚಾರದಲ್ಲೂ ಆರೋಪ ಪ್ರತ್ಯರೋಪ ನಡೆಸಲು ಆರಂಭಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

    ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ತಡವಾಗಿ ಎಚ್ಚೆತ್ತ ಕಾರಣ ಈಗ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ

    ಈ ವಿಚಾರಕ್ಕೆ ಗರಂ ಆದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಅವರು ಅಮೆರಿಕ್ಕೆ ಖಾರವಾದ ಪ್ರಶ್ನೆಗಳನ್ನು ಕೇಳಿದ್ದಾರೆ.

    ಅಮೆರಿಕದಲ್ಲಿ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ? ಯಾವ ಆಸ್ಪತ್ರೆಯಲ್ಲಿ ಪೀಡಿತರು ದಾಖಲಾಗಿದ್ದಾರೆ. ಅಮೆರಿಕದ ಸೈನಿಕರು ವುಹಾನ್ ನಲ್ಲಿ ಈ ಮಾರಣಾಂತಿಕ ವೈರಸ್ ತಂದಿರಬಹುದು. ಈ ವಿಚಾರದಲ್ಲಿ ನೀವು ಪಾರದರ್ಶಕವಾಗಿ ನಡೆದುಕೊಳ್ಳಿ. ಸಾರ್ವಜನಿಕವಾಗಿ ಡೇಟಾವನ್ನು ಬಿಡುಗಡೆ ಮಾಡಿ. ನಾವು ಮಾಹಿತಿಗಳನ್ನು ತಿಳಿಸಿದಂತೆ ನೀವು ಯಾಕೆ ತಿಳಿಸುತ್ತಿಲ್ಲ ಎಂದು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ

    ಅಮೆರಿಕ ಚೀನಾವನ್ನು ದೂರುವ ಬದಲು ಕೊರೊನಾ ವೈರಸ್ ತಡೆಗಟ್ಟಲು ಕ್ರಮಕೈಗೊಳ್ಳಲಿ. ನಮ್ಮನ್ನು ದೂರುವುದರಿಂದ ಅಮೆರಿಕದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕೊರೊನಾ ವಿಶ್ವವ್ಯಾಪಿಯಾಗಿ ಹರಡಲು ಆರಂಭಗೊಳ್ಳುತ್ತಿದ್ದಂತೆ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾಗಳು ಬಿಗಿಯಾದ ಕ್ರಮಗಳನ್ನು ಅನುಸರಿಸಿದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಪ್ರತಿಯೊಂದು ವಿಚಾರಕ್ಕೆ ಅಮೆರಿಕ ಚೀನಾವನ್ನು ದೂರುವುದನ್ನು ಮೊದಲು ನಿಲ್ಲಿಸಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ಝಹೊ ಲಿಜಿಯನ್ ಅವರು ಈ ವೈರಸ್ ಚೀನಾದಲ್ಲಿ ಮೊದಲು ಸೃಷ್ಟಿಯಾಗಿಲ್ಲ ಮೊದಲು ಅಮೆರಿಕದಲ್ಲಿ ಸೃಷ್ಟಿಯಾಗಿದೆ ಎಂದು ತಿಳಿಸಲು ಕೆಲವೊಂದು ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದು ಅಮೆರಿಕ ಸೇನೆಯ ಲ್ಯಾಬ್ ಒಂದು ಮುಚ್ಚಲ್ಪಟ್ಟಿತ್ತು. ಅಪಾಯಕಾರಿ ವಸ್ತುಗಳು ಇದೆ ಎನ್ನುವ ಕಾರಣಕ್ಕೆ ಅಮರಿಕ  ಲ್ಯಾಬ್ ಅನ್ನು ಸ್ಥಗಿತಗೊಳಿಸಿತ್ತು ಎನ್ನುವ ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದಾರೆ.

    ಅಮೆರಿಕದ ಅಧಿಕಾರಿಗಳು ಅನೈತಿಕ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ ಕೊರೊನಾ ತಡೆಗಟ್ಟಲು ನೆರವಾಗಲಿ ಎಂದು ಚೀನಾದ ವಿದೇಶಾಂಗ ಇಲಾಖೆ ಖಾರವಾಗಿ ಪ್ರತಿಕ್ರಿಯಿಸಿದೆ.

  • ಕೊರೊನಾಗೆ ಬೆಚ್ಚಿದ ಯುರೋಪ್ – ಇಟಲಿ ಬಳಿಕ ಈಗ ಡೆನ್ಮಾರ್ಕ್ ಲಾಕ್

    ಕೊರೊನಾಗೆ ಬೆಚ್ಚಿದ ಯುರೋಪ್ – ಇಟಲಿ ಬಳಿಕ ಈಗ ಡೆನ್ಮಾರ್ಕ್ ಲಾಕ್

    – ಶಾಲಾ, ಕಾಲೇಜುಗಳು ಬಂದ್, ಒಂದೇ ವಾರದಲ್ಲಿ 442 ಕೇಸ್ ದಾಖಲು
    – ಯುರೋಪ್ ದೇಶಗಳ ಪ್ರವಾಸಿಗರ ಭೇಟಿಗೆ ಟ್ರಂಪ್ ನಿರ್ಬಂಧ
    – ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಡಬ್ಲ್ಯೂಎಚ್‍ಒ
    – ಇಟಲಿಯಲ್ಲಿ ಆಹಾರ, ಮೆಡಿಕಲ್ ಶಾಪ್ ತೆರೆಯಲು ಮಾತ್ರ ಅನುಮತಿ

    ಕೋಪನ್ ಹೇಗನ್/ ಜಿನೀವಾ/ ವಾಷಿಂಗ್ಟನ್: ಇಟಲಿ ಬಳಿಕ ಯುರೋಪ್ ಖಂಡದ ಡೆನ್ಮಾರ್ಕ್ ಈಗ ಭಾಗಶ: ಲಾಕ್ ಆಗಿದೆ. ಈ ವಾರದಲ್ಲಿ 442 ಪ್ರಕರಣಗಳು ದಾಖಲಾಗುತ್ತಿದ್ದಂತೆ ಡೆನ್ಮಾರ್ಕ್ ಸರ್ಕಾರ 2 ವಾರಗಳ ಕಾಲ ಎಲ್ಲ ಶಾಲೆ, ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ಆದೇಶಿಸಿದೆ.

    ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು 100ಕ್ಕೂ ಹೆಚ್ಚು ಜನ ಭಾಗವಹಿಸುವ ಸಾರ್ವಜನಿಕ ಸಮಾರಂಭವನ್ನು ನಿಷೇಧಿಸಿದೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಬೇಕೆಂದು ಕಂಪನಿಗಳಿಗೆ ಸೂಚಿಸಿದೆ.

    ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡೆನ್ಮಾರ್ಕ್ ಪ್ರಧಾನಿ ಫ್ರೆಡಿರಿಕ್ಸೆನ್, ಬಹಳ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ನಿಯಮ ಪಾಲನೆ ಮಾಡುವುದು ಅಗತ್ಯವಾಗಿದೆ. ಉದ್ಯಮಗಳು ಮುಚ್ಚಬೇಕು. ಕೆಲವರು ಉದ್ಯೋಗ ಕಳೆದುಕೊಳ್ಳಬಹುದು. ಆದರೆ ರೋಗ ನಿಯಂತ್ರಿಸಲು ನಾವೆಲ್ಲರೂ ಸಹಕರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

    ಡೆನ್ಮಾರ್ಕಿನಲ್ಲಿ ಇಲ್ಲಿಯವರೆಗೆ 514 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತಿರುವ ಕಾರಣ ಡೆನ್ಮಾರ್ಕ್ ಎಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ.

    ಸಾಂಕ್ರಾಮಿಕ ರೋಗ: ಕೊರೊನಾ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿರುವುದರಿಂದ ಕೋವಿಡ್ 19 ಸಾಂಕ್ರಾಮಿಕ ರೋಗ ಎಂದು ಘೋಷಿಸಬಹುದು ಎಂದು ವಿಶ್ವ ಆರೋಗ್ಯ (ಡಬ್ಲ್ಯೂಎಚ್‍ಒ) ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಸೋಂಕು ತ್ರೀವ್ರವಾಗಿ ಹರಡುತ್ತಿದ್ದರೂ ಸರ್ಕಾರಗಳು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಇದು ಕಳವಳಕಾರಿ ವಿಚಾರ ಎಂದು ಹೇಳಿದರು.

    ಸಾಧಾರಣವಾಗಿ ಒಂದು ರೋಗವನ್ನು ಡಬ್ಲ್ಯೂಎಚ್‍ಒ ಸಾಂಕ್ರಾಮಿಕ ರೋಗ ಎಂದು ಘೋಷಿಸುವುದಿಲ್ಲ. ಆರಂಭದಲ್ಲಿ ಅದು ‘ಅಪಾಯಕಾರಿ’ ಅಥವಾ ‘ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು’ ಎಂದು ಹೇಳುತ್ತದೆ. ಆದರೆ ಈಗ ಕೊರೊನಾ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಡಬ್ಲ್ಯೂಎಚ್‍ಒ ಇದನ್ನು ಸಾಂಕ್ರಾಮಿಕ ರೋಗ ಎಂದು ಕರೆದಿದೆ.

    ಯುರೋಪಿಯನ್ನರಿಗೆ ನಿರ್ಬಂಧ: ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳು ಕೊರೊನಾ ತಟೆಗಟ್ಟಲು ವಿಫಲವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಎಲ್ಲ ರಾಷ್ಟ್ರಗಳು ಎಚ್ಚೆತ್ತುಕೊಳ್ಳುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಷ್ಟ್ರವನ್ನು ಉದ್ದೇಶಿಸಿ, ಶುಕ್ರವಾರ ಮಧ್ಯರಾತ್ರಿಯಿಂದ ಯುರೋಪ್ ರಾಷ್ಟ್ರಗಳ ಪ್ರವಾಸಿಗರು ಅಮೆರಿಕಕ್ಕೆ ಬರುವುದಕ್ಕೆ ನಿರ್ಬಂಧ ಹೇರಿದ್ದಾರೆ. 30 ದಿನಗಳ ಕಾಲ ಈ ಆದೇಶ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ತಮ್ಮ ಭಾಷಣದಲ್ಲಿ ಯುರೋಪ್ ರಾಷ್ಟ್ರಗಳ ವಿರುದ್ಧ ಕಿಡಿಕಾರಿದ ಟ್ರಂಪ್, ಯುರೋಪ್ ರಾಷ್ಟ್ರಗಳು ಕೊರೊನಾ ಹರಡದಂತೆ ತಡೆಯಲು ವಿಫಲವಾಗಿದೆ ಎಂದು ದೂರಿದರು.

    ಎಲ್ಲ ಅಂಗಡಿ ಕ್ಲೋಸ್: ಯುರೋಪ್ ಖಂಡದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದ್ದು ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸರ್ಕಾರ ಆಹಾರ ಮತ್ತು ಫಾರ್ಮಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು ಎಲ್ಲ ಹೋಟೆಲ್, ಬಾರ್ ಸೇರಿದಂತೆ ಎಲ್ಲ ಅಂಗಡಿಗಳು ಮಾರ್ಚ್ 25ರವರೆಗೆ ಮುಚ್ಚಬೇಕು ಎಂದು ಸರ್ಕಾರ ಆದೇಶಿಸಿದೆ.

    ಎಷ್ಟು ಕೇಸ್?
    ಇಲ್ಲಿಯವರೆಗೆ ಚೀನಾ(90,796 ಕೇಸ್, 3,169 ಸಾವು), ಇಟಲಿ(12,462 ಕೇಸ್, 827 ಸಾವು), ಇರಾನ್ (9 ಸಾವಿರ ಕೇಸ್, 354 ಸಾವು) ದಕ್ಷಿಣ ಕೊರಿಯಾ(7,869 ಕೇಸ್, 66 ಸಾವು), ಫ್ರಾನ್ಸ್ (2,281 ಕೇಸ್, 48 ಸಾವು), ಸ್ಪೇನ್(2,277 ಕೇಸ್, 55 ಸಾವು), ಜರ್ಮನಿ(1,966 ಕೇಸ್, 3 ಸಾವು), ಅಮೆರಿಕ(1,329 ಕೇಸ್, 38 ಸಾವು) ಭಾರತ(73 ಕೇಸ್) ದಾಖಲಾಗಿದೆ.

  • ಟ್ರಂಪ್ ಭಾರತದ ಸಂಪತ್ತು ಲೂಟಿ ಮಾಡದೇ ಇರಲಿ- ಎಚ್‍ಡಿಕೆ ಲೇವಡಿ

    ಟ್ರಂಪ್ ಭಾರತದ ಸಂಪತ್ತು ಲೂಟಿ ಮಾಡದೇ ಇರಲಿ- ಎಚ್‍ಡಿಕೆ ಲೇವಡಿ

    ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಲೇವಡಿ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಟ್ವೀಟರ್ ನಲ್ಲಿ ಟ್ರಂಪ್ ಅವರಿಗಾಗಿ ಗೋಡೆ ಕಟ್ಟಿದ್ದಕ್ಕೆ ಕಟುವಾಗಿ ಟೀಕೆ ಮಾಡಿದ್ದರು. ಈಗ ಟ್ರಂಪ್ ಭೇಟಿಯಿಂದ ಭಾರತದ ಸಂಪತ್ತು ಲೂಟಿ ಆಗದೇ ಇರಲಿ ಅಂತ ಮತ್ತೆ ಲೇವಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

    ಟ್ರಂಪ್ ಭೇಟಿ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಮ್ಮ ದೇಶಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ ಇದೇನು ಹೊಸದಲ್ಲ. ಇಲ್ಲಿಯವರೆಗೆ 7 ಜನ ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರತಿ ದೇಶಕ್ಕೂ ಅಕ್ಕ-ಪಕ್ಕದ ದೇಶಗಳು, ಬೇರೆ ಬೇರೆ ದೇಶಗಳ ನಡುವೆ ಉತ್ತಮ ಸಂಬಂಧ ಇರಬೇಕು ಅಂತ ತಿಳಿಸಿದರು. ಕೆಲವೇ ತಿಂಗಳಲ್ಲಿ ಅಮೆರಿಕಾದಲ್ಲಿ ಚುನಾವಣೆ ಇದೆ.ಅದರ ಉದ್ದೇಶಕ್ಕೆ ಬಂದಿದ್ದಾರೆ ಅಂತ ಕೆಲವರು ಮಾತಾಡ್ತಿದ್ದಾರೆ ಅಂತ ಟೀಕಿಸಿದರು. ಇದನ್ನೂ ಓದಿ: ಟ್ರಂಪ್ ಭೇಟಿಯಾದ ಬಿಎಸ್‍ವೈ

    ಕಷ್ಟಕ್ಕೆ ಸುಮ್ಮನೆ ಆಗದ ಕುಮಾರಸ್ವಾಮಿ, ಪ್ರಧಾನಿ ಮೋದಿ ಅಮೇರಿಕಾದಲ್ಲಿ ಟ್ರಂಪ್ ರನ್ನ ಹೊಗಳಿದ್ರು. ಟ್ರಂಪ್ ಭಾರತದಲ್ಲಿ ಮೋದಿರನ್ನ ಹೊಗಳುತ್ತಿದ್ದಾರೆ. ಇದರಲ್ಲೇನು ವ್ಯತ್ಯಾಸ ಇಲ್ಲ ಅಂತ ಕುಹಕವಾಡಿದ್ರು.ಭಾರತ ಅತ್ಯಂತ ಸಮೃದ್ಧ ದೇಶ. ಇಲ್ಲಿ ವ್ಯಾಪಾರ ವಹಿವಾಟು ಮಾಡಲು ಸೂಕ್ತವಾಗಿದೆ ಅಂತ ಟ್ರಂಪ್ ಹೇಳಿದ್ದಾರೆ. ಆದ್ರೆ ಅವರ ಭೇಟಿಯಿಂದ ದೇಶಕ್ಕೆ ಒಳ್ಳೆಯದಾಗಬೇಕು. ಅದರ ಬದಲಾಗಿ ದೇಶದ ಸಂಪತ್ತು ಲೂಟಿ ಹೊಡೆಯಲು ಅವಕಾಶ ನೀಡಬಾರದು ಅಂತ ಲೇವಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟರು.

    ಮೋದಿ ಶಕ್ತಿಯಿಂದ ಭಾರತಕ್ಕೆ ಟ್ರಂಪ್ ಬಂದಿದ್ದಾರೆ ಅನ್ನೋ ವಿಚಾರಕ್ಕೆ ಟೀಕೆ ಮಾಡಿದ ಕುಮಾರಸ್ವಾಮಿ ಕೆಲವೊಂದು ದಿನ ಜನ ಇಂತಹ ಮಾತುಗಳು ಆಡ್ತಾನೆ ಇರುತ್ತಾರೆ. ಸ್ವಲ್ಪ ದಿನ ಆದ ಮೇಲೆ ಹೀಗೆ ಮಾತಾಡೋದು ನಿಂತು ಹೋಗುತ್ತದೆ ಅಂತ ಮೋದಿ ವಿರುದ್ದ ಲೇವಡಿ ಮಾಡಿದರು.

  • ಟ್ರಂಪ್ ಭೇಟಿಯಾದ ಬಿಎಸ್‍ವೈ

    ಟ್ರಂಪ್ ಭೇಟಿಯಾದ ಬಿಎಸ್‍ವೈ

    ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.

    ಭಾರತದ ಪ್ರವಾಸದ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ರಾಷ್ಟ್ರಪತಿ ಭವನದ ಔತಣಕೂಟಕ್ಕೆ ಆಗಮಿಸಿದ ಟ್ರಂಪ್ ದಂಪತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ ಆತ್ಮೀಯವಾಗಿ ಆಮಂತ್ರಿಸಿದ್ದರು. 8 ಗಂಟೆಗೆ ನಿಗದಿಯಾಗಿದ್ದ ಔತಣಕೂಟಕ್ಕೆ 20 ನಿಮಿಷ ಮುಂಚಿತವಾಗಿಯೇ ಅಮೆರಿಕದ ಅಧ್ಯಕ್ಷರು ಆಗಮಿಸಿದ್ದರು. ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದ ಬಗ್ಗೆ ಕೋವಿಂದ್ ಅವರೇ ಮಾಹಿತಿ ನೀಡಿದರು.

    ಈ ಔತಣಕೂಟದಲ್ಲಿ ಟ್ರಂಪ್ ಅವರಿಗೆ ಸಿಎಂ ಯಡಿಯೂರಪ್ಪ ಹಸ್ತಲಾಘವ ಮಾಡಿದರು. ಟ್ರಂಪ್ ಸ್ವಾಗತಕ್ಕಾಗಿ ಇಡೀ ರೈಸಿನಾ ಹಿಲ್ ಸಂಪೂರ್ಣ ವರ್ಣರಂಜಿತವಾಗಿತ್ತು. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕವಾಗಿ ಔಪಚಾರಿಕ ಸ್ವಾಗತ ನೀಡಲಾಗಿತ್ತು.

    ಟ್ರಂಪ್ ಅವರಿಗೆ ಸೇನಾ ಪಡೆಯಿಂದ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಈ ವೇಳೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಮೂರು ಪಡೆಗಳ ಮುಖ್ಯಸ್ಥರು ಹಾಜರಾಗಿದ್ದರು. ಇವಾಂಕಾ ದಂಪತಿ ಸೇರಿದಂತೆ ಅಮೆರಿಕದ ನಿಯೋಗವೂ ಉಪಸ್ಥಿತಿ ಇತ್ತು. ಬಳಿಕ ರಾಜಘಾಟ್‍ನತ್ತ ಪಯಣಿಸಿದ ಟ್ರಂಪ್, ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಭಾರತೀಯರ ಜೊತೆ ಅಮೆರಿಕನ್ನರು ದೃಢವಾಗಿ ನಿಲ್ಲುತ್ತೆ ಅಂತ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು.

  • ಭಾರತ ಸೇನೆಗೆ ಅಪಾಚೆ, ಸೀಹಾಕ್ ಬಲ- ಬರಲಿದೆ ನೈಸರ್ಗಿಕ ಅನಿಲ: ಏನೇನು ಒಪ್ಪಂದ ನಡೆದಿದೆ? ಇಲ್ಲಿದೆ ಪೂರ್ಣ ವರದಿ

    ಭಾರತ ಸೇನೆಗೆ ಅಪಾಚೆ, ಸೀಹಾಕ್ ಬಲ- ಬರಲಿದೆ ನೈಸರ್ಗಿಕ ಅನಿಲ: ಏನೇನು ಒಪ್ಪಂದ ನಡೆದಿದೆ? ಇಲ್ಲಿದೆ ಪೂರ್ಣ ವರದಿ

    – ಭಾರತ, ಅಮೆರಿಕ ಮಧ್ಯೆ 3 ಶತಕೋಟಿ ಡಾಲರ್ ಒಪ್ಪಂದ
    – ಗ್ಯಾಸ್, ಔಷಧ, 5ಜಿ ಸ್ಪೆಕ್ಟ್ರಂ ಬಗ್ಗೆ ಚರ್ಚೆ
    – ಔಷಧ, ವೈದ್ಯಕೀಯ ಉಪಕರಣಗಳ ಅಕ್ರಮ ಸರಬರಾಜಿಗೆ ತಡೆ

    ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2 ದಿನಗಳ ಭಾರತ ಪ್ರವಾಸವನ್ನು ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿತ್ತು. ಟ್ರಂಪ್ ಪ್ರವಾಸದ ಭಾಗವಾಗಿ ಇಂದು ಮಹಾ ಮಾತುಕತೆಯೂ ನಡೆದಿದೆ. ಅಮೆರಿಕ ಹಾಗೂ ಭಾರತದ ಮಧ್ಯೆ ಭಾರೀ ಒಪ್ಪಂದ ನಡೆದಿದ್ದು, 21,625 ಕೋಟಿ ರೂ. ಒಪ್ಪಂದಕ್ಕೆ ಎರಡು ದೇಶಗಳು ಸಹಿ ಹಾಕಿವೆ.

    ದೆಹಲಿಯ ಹೈದ್ರಾಬಾದ್ ಹೌಸ್‍ನಲ್ಲಿ ಇಂದು ಬೆಳಗ್ಗೆ ಒಂದೂವರೆ ತಾಸು ನಡೆದ ಮಾತುಕತೆಯಲ್ಲಿ ರಕ್ಷಣೆ, ಇಂಧನ ಹಾಗೂ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ 3 ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ ಬಲಪಡಿಸುವಿಕೆಯೇ ಇವತ್ತಿನ ಮಾತುಕತೆ ಪ್ರಮುಖ ಅಂಶವಾಗಿದೆ.

    ವಿಶ್ವದ ಅತ್ಯಾಧುನಿಕ ಎಂಹೆಚ್ 60 ಸೀಹಾಕ್ ರೋಮಿಯೋ ಹೆಲಿಕಾಪ್ಟರ್‌ನಿಂದ ನೌಕಾಪಡೆಗೆ ಆನೆಬಲ ಬಂದಂತಾಗಿದೆ. ಮಾತುಕತೆ ವೇಳೆ ಸಿಎಎ ಬಗ್ಗೆ ನೇರವಾಗಿ ಪ್ರಸ್ತಾಪವಾಗದಿದ್ದರೂ, ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆದಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಕೈಗೊಂಡಿರುವ ಕ್ರಮಗಳನ್ನು ಟ್ರಂಪ್ ಪ್ರಶಂಸಿದ್ದಾರೆ. ಪಾಕಿಸ್ತಾನ ನೆಲದಿಂದ ಉಂಟಾಗುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಯಂತ್ರಿಸಲು ಉಭಯ ದೇಶಗಳು ಸಂಕಲ್ಪ ಮಾಡಿವೆ.

    ಮೂರು ಒಪ್ಪಂದಗಳು:
    ನೌಕಾಪಡೆಗೆ ಆನೆಬಲ ನೀಡಲಿರುವ ‘ಅಮೆರಿಕದ ರೋಮಿಯೋ’ ಭಾರತದ ಬತ್ತಳಿಕೆ ಸೇರಿದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್ ಮೆರೀನ್ ನಿರೋಧಕ ಹಾಗೂ ಬಹುವಿಧ ಕಾರ್ಯವೈಖರಿಯ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್‌ಗಳ ಸೇರ್ಪಡೆ ಭಾರತ ಇನ್ನಷ್ಟು ಬಲಿಷ್ಠವಾಗಿದೆ.

    ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್‌

    ‘ರೋಮಿಯೋ’ ವೈಶಿಷ್ಟತೆ:
    24 ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಖರೀದಿಸಲು ಒಪ್ಪಂದ ನಡೆದಿದೆ. ಈಗ ಲಭ್ಯವಿರುವ ನೌಕಾ ಹೆಲಿಕಾಪ್ಟರ್‌ಗಳಲ್ಲೇ ಇದು ಅತ್ಯಂತ ಆಧುನಿಕವಾಗಿರುವುದು ವಿಶೇಷ. ಭಾರತೀಯ ನೌಕಾಪಡೆಯಲ್ಲಿ ಈಗ ಇಂಗ್ಲೆಂಡಿನ ಹಳೆಯ ಮಾದರಿ ಹೆಲಿಕಾಪ್ಟರ್‌ಗಳಿವೆ. ಸೀಹಾಕ್ ಖರೀದಿ ಸಂಬಂಧ 2.6 ಬಿಲಿಯನ್ ಡಾಲರ್ (18,683 ಕೋಟಿ ರೂ.) ಮೊತ್ತದ ವ್ಯವಹಾರ ನಡೆದಿದ್ದು, ಸಾಗರದಾಳದ ಸಬ್ ಮೆರೀನ್‍ಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಈ ಹೆಲಿಕಾಪ್ಟರ್ ಗಳಿಗಿವೆ. ಸಮುದ್ರದಲ್ಲಿ ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಲಿರುವುದರಿಂದ ಭಾರತದ ಜಲ ಪ್ರದೇಶ ಇನ್ನಷ್ಟು ಬಲಿಷ್ಠವಾಗಲಿದೆ. ವಿಶೇಷವಾಗಿ ಚೀನಾ ಯುದ್ಧನೌಕೆಗಳ ಮೇಲೆ ಕಣ್ಗಾವಲು ಇಡಲಿದೆ. ಅಮೆರಿಕದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟ ಸಂಸ್ಥೆ ಲಾಕ್ ಹೀಡ್ ಮಾರ್ಟಿನ್ ಈ ಹೆಲಿಕಾಪ್ಟರ್ ನಿರ್ಮಾಣ ಮಾಡುತ್ತಿದೆ.

    ಅಪಾಚೆ ಹೆಲಿಕಾಪ್ಟರ್:
    ನೌಕಾಪಡೆಯಂತೆ ಭಾರತೀಯ ವಾಯುಪಡೆಗೂ ಆನೆಬಲ ಬಂದಿದೆ. `ಹಾರುವ ಯುದ್ಧ ಟ್ಯಾಂಕ್‍ಗಳೆಂದೇ’ ಪ್ರಸಿದ್ಧಿ ಪಡೆದಿರುವ ಅಪಾಚೆ ಹೆಲಿಕಾಪ್ಟರ್‌ಗಳು ಖರೀದಿಗೆ ಒಪ್ಪಂದ ನಡೆಯಿತು. ಶತ್ರು ರಾಷ್ಟ್ರಗಳನ್ನು ನಡುಗಿಸುವ ಅಪಾಚೆ ಹೆಲಿಕಾಪ್ಟರ್ ಅನ್ನು ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡಿದೆ.

    ಅಪಾಚೆ ಹೆಲಿಕಾಪ್ಟರ್

    ಅಪಾಚೆ ವಿಶೇಷತೆಗಳು:
    ಭಾರತದ ಮೊದಲ ಪೂರ್ಣ ಪ್ರಮಾಣದ ಅಟ್ಯಾಕ್ ಹೆಲಿಕಾಪ್ಟರ್ ಇದಾಗಿದ್ದು, 2015ರಲ್ಲಿ 1.4 ಶತಕೋಟಿ ಡಾಲರ್ ಮೊತ್ತದ 22 ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ ಒಪ್ಪಂದ ನಡೆದಿದೆ. ಈಗಾಗಲೇ ಭಾರತೀಯ ವಾಯುಸೇನೆಯಲ್ಲಿ 17 ಅಪಾಚೆ ಹೆಲಿಕಾಪ್ಟರ್‌ಗಳ ಬಳಕೆ ಆಗುತ್ತಿದ್ದು, ಇದೇ ಮಾರ್ಚ್ ನಲ್ಲಿ ಉಳಿದ 5 ಹೆಲಿಕಾಪ್ಟರ್‌ಗಳು ಭಾರತಕ್ಕೆ ರವಾನೆ ಆಗಲಿದೆ.

    ಭೂ ಸೇನೆಗಾಗಿ 6 ಹೆಲಿಕಾಪ್ಟರ್‌ಗಳ ಖರೀದಿಗೆ 6,680 ಕೋಟಿ ರೂ. ಒಪ್ಪಂದ ನಡೆದಿದೆ. 30 ಎಂಎಂ ಚೈನ್‍ಗನ್, ಎಐಎಂ- 92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್, ಸ್ಟೈಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಹೆಲಿಕಾಪ್ಟರಿಗೆ ಇದೆ. ನಿಖರ, ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡಬಹುದಾಗಿದೆ. ಬಿರುಗಾಳಿ, ಮಳೆ ಸೇರಿದಂತೆ ಯಾವುದೇ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆ ಮಾಡಬಲ್ಲದು. ಗುಡ್ಡಗಾಡು, ಕಿರಿದಾದ ಪ್ರದೇಶಗಳಲ್ಲೂ ಸುಲಭವಾಗಿ ಇಳಿಯಬಲ್ಲದು. ಯುದ್ಧಭೂಮಿಯಿಂದ ನಿಯಂತ್ರಣ ಭೂಮಿಗೆ ನೇರವಾಗಿ ಚಿತ್ರಗಳನ್ನು ಕಳುಹಿಸುವ ಸಾಮಥ್ರ್ಯ ಈ ಹೆಲಿಕಾಪ್ಟರ್‌ಗೆ ಇದೆ.

    ದ್ರವೀಕೃತ ನೈಸರ್ಗಿಕ ಅನಿಲ ಖರೀದಿ
    ಮೂರನೇ ಒಪ್ಪಂದ ಇದಾಗಿದ್ದು, ಅಮೆರಿಕದ ಎಕ್ಸಾನ್ ಮೊಬಿಲ್-ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಡುವೆ ಈ ಒಪ್ಪಂದ ನಡೆದಿದೆ. ಪೈಪ್‍ಲೈನ್, ರಸ್ತೆ, ರೈಲು ಮಾರ್ಗ, ಸಮುದ್ರ ಮಾರ್ಗಗಳಲ್ಲಿ ಕಂಟೈನರ್‍ಗಳ ಮೂಲಕ ದ್ರವೀಕೃತ ನೈಸರ್ಗಿಕ ಅನಿಲ(ಎಲ್‍ಎನ್‍ಜಿ) ಸರಬರಾಜು ಆಗಲಿದೆ. ಅಮೆರಿಕದಿಂದ ಅತೀ ಹೆಚ್ಚು ಇಂಧನ ಖರೀದಿ ಮಾಡುತ್ತಿರುವ 6ನೇ ದೇಶ ಭಾರತವಾಗಿದ್ದು 2018ರಲ್ಲಿ 609 ದಶಲಕ್ಷ ಡಾಲರ್ ಮೌಲ್ಯದ ಕಚ್ಚಾತೈಲವನ್ನು ಭಾರತ ಖರೀದಿಸಿದೆ. ಜಗತ್ತಿನಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಖರೀದಿಸುತ್ತಿರುವ ನಾಲ್ಕನೇ ಅತೀ ದೊಡ್ಡ ರಾಷ್ಟ್ರ ಭಾರತವಾಗಿದ್ದು, ಸುವರ್ಣ ಚತುಷ್ಪತ ರಸ್ತೆಯಲ್ಲಿ ಎಲ್‍ಎನ್‍ಜಿ ಕೇಂದ್ರ ಸ್ಥಾಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಡೀಸೆಲ್ ಬದಲು ಭವಿಷ್ಯದಲ್ಲಿ ಟ್ರಕ್ ವಾಹನಗಳು ಎಲ್‍ಎನ್‍ಜಿ ಬಳಸಲು ಸರ್ಕಾರ ಉತ್ತೇಜಿಸಲಿದ್ದು, ಇಂಧನ ಬಳಕೆಯಲ್ಲಿ ಎಲ್‍ಎನ್‍ಜಿ ಪಾಲು 10 ವರ್ಷಗಳಲ್ಲಿ ಈಗಿರುವ ಶೇ.6.2ರಿಂದ ಶೇ 15 ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. -168 ಡಿಗ್ರಿ ಸೆಲ್ಸಿಯಸ್‍ನಲ್ಲಿ ದ್ರವೀಕೃತ ನೈಸರ್ಗಿಕ ಅನಿಲವನ್ನ ಪೂರೈಸಲಾಗುತ್ತದೆ.

    ಬೇರೆ ಏನು ಒಪ್ಪಂದ ನಡೆದಿದೆ?
    ಮೇಲೆ ತಿಳಿಸಿದ ಮೂರು ಒಪ್ಪಂದಗಳ ಜೊತೆಗೆ ಹಲವು ವಿಷಯಗಳೂ ಚರ್ಚೆ ಆಗಿವೆ. ಭಾರತ-ಅಮೆರಿಕ ನಡುವೆ ಔಷಧ ಸಹಕಾರ ಒಪ್ಪಂದ ನಡೆದಿದೆ. ಈ ಮೂಲಕ ಭಾರತದಿಂದ ಅಕ್ರಮವಾಗಿ ಔಷಧ, ವೈದ್ಯಕೀಯ ಉಪಕರಣಗಳ ಸರಬರಾಜು ತಡೆಗೆ ಉಭಯ ದೇಶಗಳು ಸಹಿ ಹಾಕಿವೆ. ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಹಾಗೂ ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಜೊತೆ ಒಡಂಬಡಿಕೆ ನಡೆದಿದೆ.

    ಬೇರೊಂದು ರಾಷ್ಟ್ರದ ಮೂಲಕ ಅಕ್ರಮವಾಗಿ ಭಾರತದಿಂದ ಅಮೆರಿಕಕ್ಕೆ ಔಷಧ, ವೈದ್ಯಕೀಯ ಉಪಕರಣಗಳ ಪೂರೈಕೆ ಆಗುತ್ತಿದೆ. 2019ರಲ್ಲಿ ಈ ರೀತಿಯ 50 ಬಗೆಯ ಔಷಧಗಳು, ಉಪಕರಣಗಳ ಅಕ್ರಮ ಸಾಗಾಟ ನಡೆದಿದೆ. ಹೆಚ್‍ಐವಿ, ಕ್ಯಾನ್ಸರ್ ಮುಂತಾದ ರೋಗಗಳಿಗೆ ಅಮೆರಿಕ ನಿಗದಿಪಡಿಸಿದ ಗುಣಮಟ್ಟಕ್ಕಿಂತ ಕಡಿಮೆ ಗುಣಮಟ್ಟದ ಔಷಧ, ವೈದ್ಯಕೀಯ ಉಪಕರಣಗಳ ಮಾರಾಟ ನಡೆದಿದೆ.

    5ಜಿ ಚರ್ಚೆ:
    5ಜಿ ತರಂಗಾಂತರದ ಬಗ್ಗೆಯೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಭಾರತದಲ್ಲಿ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಬಾಕಿ ಇದ್ದು ಚೀನಾ ಮೂಲದ ಹುವಾವೇ ಕಂಪನಿಗೆ ಉಪಕರಣಗಳ ಬಳಕೆ ಅನುಮತಿ ನೀಡಲಾಗಿದೆ. ವಿಶ್ವದಲ್ಲಿ ಅತೀ ಹೆಚ್ಚು 5ಜಿ ಉಪಕರಣಗಳನ್ನು ಉತ್ಪಾದಿಸುತ್ತಿರುವ ಹುವವೇ ಒಟ್ಟು 60 ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಅಮೆರಿಕದಲ್ಲಿ ಹುವಾವೇ ಕಂಪನಿಗೆ ಟ್ರಂಪ್ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಭಾರತ ಸರ್ಕಾರ ಹುವಾವೇ ಕಂಪನಿಯನ್ನು 5ಜಿ ವ್ಯವಹಾರ ನಿಷೇಧಿಸಬೇಕೆಂದು ಟ್ರಂಪ್ ಪ್ರಸ್ತಾಪ ಮಾಡಿದ್ದಾರೆ ಎಂದು ವರದಿಯಾಗಿದೆ.

  • ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ: ಡಿಸಿಎಂ

    ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ: ಡಿಸಿಎಂ

    – 3 ಸಾವಿರ ಕೋಟಿ ರೂ. ವೆಚ್ಚವಾಗಿಲ್ಲ

    ರಾಯಚೂರು: ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ 3 ಸಾವಿರ ಕೋಟಿ ಅನ್ನೋದು ಸುಳ್ಳು, ಇಂತಹ ಭವ್ಯ ಸ್ವಾಗತ ಕೊಡುವ ಸಾಮಥ್ರ್ಯ ಯಾರ ಹತ್ತಿರವೂ ಇರಲಿಲ್ಲ ಮೋದಿ ಮಾಡಿದ್ದಾರೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಜೊತೆಗೆ ಇತರ ರಾಷ್ಟಗಳೊಂದಿಗೂ ಸಂಬಂಧ ಬೆಸೆಯುವ ಕೆಲಸ ಆಗಿದೆ. ಇತರ ದೇಶಗಳೊಂದಿಗಿನ ಬಾಂಧವ್ಯ ಮುಖ್ಯ. ಅಮೇರಿಕಕ್ಕೆ ಹೋದರೆ ಅಲ್ಲಿಯೂ ಸಮಸ್ಯೆ ಇರುತ್ತೆ. ಸಮಸ್ಯೆ ಮುಚ್ಚಿಟ್ಟುಕೊಳ್ಳುವ ಪ್ರಶ್ನೆಯಿಲ್ಲ, ಎಲ್ಲ ಸಮಸ್ಯೆ ಒಂದೇ ಬಾರಿಗೆ ಬಗೆಹರಿಯುವುದಿಲ್ಲ. ದೇಶದ ಅಭಿವೃದ್ಧಿಗೆ ಉತ್ತಮ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಪಾಕಿಸ್ತಾನವನ್ನು ಕೈಬಿಟ್ಟರೆ ಪೂರ್ಣ ಕೈತಪ್ಪುತ್ತದೆ ಎಂದು ಅಮೆರಿಕ ಜೊತೆಗಿಟ್ಟುಕೊಂಡಿದೆ. ದೇಶದ ಹಿತಾಸಕ್ತಿ ಕಾಪಾಡಲು ನಮ್ಮ ನಾಯಕರು ಇದ್ದಾರೆ ಎಂದರು.

    30 ಜನ ಬಿಜೆಪಿ ಶಾಸಕರು ರಾಜಿನಾಮೆ ನೀಡುತ್ತಾರೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ, ನಾವು ಒಗ್ಗಟ್ಟಾಗೇ ಇದ್ದೇವೆ ಎಂದು ತಿರುಗೇಟು ನೀಡಿದರು.

    ರಾಯಚೂರು ವಿಶ್ವವಿದ್ಯಾಲಯ, ಐಐಐಟಿ ಸ್ಥಳ ವಿಕ್ಷಣೆ, ಮಹಿಳಾ ಪದವಿ ಕಾಲೇಜು ಕಟ್ಟಡ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಡಿಸಿಎಂ ಅಶ್ವತ್ ನಾರಾಯಣ ಭಾಗವಹಿಸಿದರು.