ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಟ್ವಿಟ್ಟರ್ ಕಂಪನಿಯ ವಿರುದ್ಧವೇ ಕಿಡಿಕಾರಿದ್ದಾರೆ.
ಮಂಗಳವಾರ ಟ್ರಂಪ್ ಅಮೆರಿಕ ಚುನಾವಣೆಯಲ್ಲಿ ಪೋಸ್ಟಲ್ ಮೂಲಕ ಚಲಾವಣೆಯಾಗುವ ಮತಗಳಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಟ್ರಂಪ್ ಅವರು ಈ ಆರೋಪ ಮಾಡಿದ ಬೆನ್ನಲ್ಲೇ ಮೊದಲ ಬಾರಿಗೆ ಟ್ವಿಟ್ಟರ್ ಈ ವಿಚಾರದ ಬಗ್ಗೆ ಫ್ಯಾಕ್ಟ್ ಚೆಕ್ ಬಟನ್ ಸೇರಿಸಿದೆ. ಟ್ರಂಪ್ ಅವರ ಟ್ವೀಟ್ ಕೆಳ ಭಾಗದಲ್ಲಿ ಫ್ಯಾಕ್ಟ್ ಚೆಕ್ ಸೇರಿಸಿದ್ದಕ್ಕೆ ಟ್ರಂಪ್ ಈಗ ಕಿಡಿಕಾರಿದ್ದಾರೆ. ಈ ಫ್ಯಾಕ್ಟ್ ಚೆಕ್ ಬಟನ್ ಕ್ಲಿಕ್ ಮಾಡಿದರೆ ಟ್ರಂಪ್ ಅವರ ಹೇಳಿಕೆ ಸುಳ್ಳು ಎಂದು ತಿಳಿಸುವ ಹಲವು ಮಾಧ್ಯಮಗಳ ವರದಿ ಕಾಣಿಸುತ್ತದೆ. ಇದನ್ನೂ ಓದಿ: ‘ನನಗಲ್ಲ, ಚೈನಾಗೆ ಈ ಪ್ರಶ್ನೆ ಕೇಳಿ’ – ಅರ್ಧದಲ್ಲೇ ಸುದ್ದಿಗೋಷ್ಠಿ ಮುಗಿಸಿದ ಟ್ರಂಪ್
ಟ್ರಂಪ್ ಅವರ ಈ ಟ್ವೀಟ್ ಗೆ ಮೊದಲ ಬಾರಿಗೆ ಟ್ವಿಟ್ಟರ್ ಈ ರೀತಿ ಫ್ಯಾಕ್ಟ್ ಚೆಕ್ ಬಟನ್ ನೀಡಿದ್ದು ಅಮೆರಿಕ ಅಧ್ಯಕ್ಷರ ಕೋಪಕ್ಕೆ ಕಾರಣವಾಗಿದೆ.
ಈ ಸಂಬಂಧ ಟ್ವಿಟ್ಟರ್ ಉದ್ದೇಶಿಸಿ ಬುಧವಾರ ಟ್ವೀಟ್ ಮಾಡಿರುವ ಟ್ರಂಪ್ 2020ರ ಅಧ್ಯಕ್ಷ ಚುನಾವಣೆಗೆ ಟ್ವಿಟ್ಟರ್ ಎಂಟ್ರಿ ಕೊಟ್ಟಿದೆ. ಮೇಲ್ – ಇನ್ ಬ್ಯಾಲೆಟ್ಸ್ ನಲ್ಲಿ ಭಾರೀ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ. ಆದರೆ ಫೇಕ್ ನ್ಯೂಸ್‍ಗಳಾದ ಸಿಎನ್‍ಎನ್, ಅಮೆಜಾನ್, ವಾಷಿಂಗ್ಟನ್ ಪೋಸ್ಟ್ ವರದಿಯನ್ನು ಫ್ಯಾಕ್ಟ್ ಚೆಕ್ ನಲ್ಲಿ ತೋರಿಸುತ್ತಿದೆ. ಟ್ಟಿಟ್ಟರ್ ಪೂರ್ಣವಾಗಿ ನನ್ನ ವಾಕ್ ಸ್ವಾತಂತ್ರ್ಯ ನಿಗ್ರಹಿಸಲು ಮುಂದಾಗುತ್ತಿದೆ. ಈ ರೀತಿ ಮಾಡಲು ನಾನು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ನವದೆಹಲಿ: ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ಮೋದಿ ಮತ್ತು ಭಾರತದ ಜೊತೆಗೆ ಇದ್ದೇವೆ. ನಾವು ಇಂಡಿಯಾಗೆ ವೆಂಟಿಲೇಟರ್ ಗಳನ್ನು ಸಪ್ಲೈ ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತದಲ್ಲಿ 85,000 ಸಾವಿರಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯ ಚೀನಾಗಿಂತ ಭಾರತದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಈಗ 83 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈಗ ಅಮೆರಿಕ ಕೂಡ ಕೊರೊನಾ ವಿರುದ್ಧ ಹೋರಾಟದಲ್ಲಿ ಇಂಡಿಯಾ ಜೊತೆ ಕೈ ಜೋಡಿಸುವುದಾಗಿ ಘೋಷಣೆ ಮಾಡಿದೆ.
I am proud to announce that the United States will donate ventilators to our friends in India. We stand with India and @narendramodi during this pandemic. We’re also cooperating on vaccine development. Together we will beat the invisible enemy!
ಈ ವಿಚಾರವಾಗಿ ಟ್ವೀಟ್ ಮಾಡಿರುವ ಟ್ರಂಪ್ ಅವರು, ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಅಮೆರಿಕ ವೆಂಟಿಲೇಟರ್ ಗಳನ್ನು ದಾನ ಮಾಡುತ್ತದೆ ಎಂದು ಘೋಷಿಸಲು ನನಗೆ ಹೆಮ್ಮೆ ಇದೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು ಭಾರತ ಮತ್ತು ನರೇಂದ್ರ ಮೋದಿ ಅವರ ಜೊತೆಗೆ ನಿಲ್ಲುತ್ತೇವೆ. ಜೊತೆಗೆ ಕೊರೊನಾಗೆ ಲಸಿಕೆ ತಯಾರಿಸಲು ನಾವು ಭಾರತದ ಜೊತೆ ಸಹಕರಿಸುತ್ತಿದ್ದೇವೆ. ನಾವು ಒಟ್ಟಾಗಿ ಕಣ್ಣಿಗೆ ಕಾಣದ ಶತ್ರುವನ್ನು ಸೋಲಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಭಾರತ ಮತ್ತು ಅಮೆರಿಕದ ಸಂಬಂಧ ಚೆನ್ನಾಗಿದ್ದು, ಟ್ರಂಪ್ ಅವರ ಕೋರಿಕೆಯ ಮೇರೆಗೆ ಭಾರತವು ಕಳೆದ ತಿಂಗಳು 50 ಮಿಲಿಯನ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಗೆ ರಫ್ತು ಮಾಡಿತ್ತು. ಅಮೆರಿಕದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ರೋಗಿಗಳಿಗೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಬೇಕೆಂದು ಟ್ರಂಪ್ ಭಾರತಕ್ಕೆ ಮನವಿ ಮಾಡಿದ್ದರು. ಭಾರತ ಕೂಡ ಮಾತ್ರೆಗಳನ್ನು ರಫ್ತು ಮಾಡಿತ್ತು.
ಭಾರತಕ್ಕೆ ವೆಂಟಿಲೇಟರ್ ನೀಡುವ ವಿಚಾರದಲ್ಲಿ ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ, ನಮ್ಮ ಅಧ್ಯಕ್ಷರು ಭಾರತದೊಂದಿಗೆ ನಮ್ಮ ಉತ್ತಮ ಸಂಬಂಧವನ್ನು ಶ್ಲಾಘಿಸಿದರು. ಭಾರತದ ನಮಗೆ ಉತ್ತಮ ಸ್ನೇಹಿ ದೇಶವಾಗಿದೆ. ಅವರಿಗೆ ವೆಂಟಿಲೇಟರ್ ಗಳನ್ನು ನೀಡುತ್ತಿದ್ದೇವೆ. ಜೊತೆಗೆ ಬೇರೆ ದೇಶಗಳಿಗೂ ನಾವು ವೆಂಟಿಲೇಟರ್ ನೀಡುತ್ತಿದ್ದೇವೆ ಎಂದು ಹೇಳಿದರು. ಆದರೆ ಭಾರತಕ್ಕೆ ಎಷ್ಟು ವೆಂಟಿಲೇಟರ್ ನೀಡುತ್ತೇವೆ ಎಂದು ಅಮೆರಿಕ ತಿಳಿಸಿಲ್ಲ.
ಇದೇ ವೇಳೆ ಭಾರತದ ಪ್ರಧಾನಿ ಮೋದಿ ಅವರನ್ನು ಹಾಡಿಹೊಗಳಿರುವ ಟ್ರಂಪ್, ಇಂಡಿಯಾ ತುಂಬ ವಿಶಾಲವಾದ ದೇಶ. ನಿಮಗೆ ತಿಳಿದಿರುವಂತೆ ಭಾರತದ ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ನಾನು ಈ ಹಿಂದೆ ಭಾರತಕ್ಕೆ ಹೋಗಿ ಬಂದಿದ್ದೆ. ನಾವು ಒಟ್ಟಿಗೆ ಇದ್ದೇವೆ ಎಂದು ಹೇಳುವ ಮೂಲಕ ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಮಯವನ್ನು ಟ್ರಂಪ್ ಅವರು ನೆನಪು ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಭಾರತದೊಂದಿಗೆ ಸೇರಿಕೊಂಡು ಕೊರೊನಾಗೆ ಲಸಿಕೆ ಕಂಡುಹಿಡಿಯಲು ಟ್ರಂಪ್ ಅವರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಭಾರತ ಮತ್ತು ಅಮೆರಿಕ ತಜ್ಞರನ್ನೊಳಗೊಂಡ ಒಂದು ತಂಡವನ್ನು ರಚಿಸಿದ್ದಾರೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ ನಾವು ಕೊರೊನಾಗೆ ನಿರ್ದಿಷ್ಟ ಲಸಿಕೆಯನ್ನು ಸಿದ್ಧ ಪಡಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ವಾಷಿಂಗ್ಟನ್: “ಈ ಪ್ರಶ್ನೆಯನ್ನು ಚೀನಾ ಜೊತೆ ಕೇಳಿ” ಎಂದು ಹೇಳಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಕೋವಿಡ್ 19 ಹಿನ್ನೆಲೆಯಲ್ಲಿ ಈಗ ಶ್ವೇತಭವನದ ಒಳಗಡೆ ನಡೆಯದೇ ರೋಸ್ ಗಾರ್ಡನ್ ನಲ್ಲಿ ಅಮೆರಿಕ ಅಧ್ಯಕ್ಷರ ಸುದ್ದಿಗೋಷ್ಠಿ ನಡೆಯುತ್ತಿದೆ. ಇಂದಿನ ಸುದ್ದಿಗೋಷ್ಠಿಯಲ್ಲೂ ಟ್ರಂಪ್ ಅವರು ಕೋವಿಡ್ 19 ಪರೀಕ್ಷೆಯಲ್ಲಿ ವಿಶ್ವದಲ್ಲೇ ಅಮೆರಿಕ ಮುಂದಿದೆ ಎಂದು ಪ್ರಸ್ತಾಪಿಸಿದ್ದಾರೆ.
ಈ ವೇಳೆ ಮಹಿಳಾ ಪ್ರತಕರ್ತೆ ಜಿಯಾಂಗ್, ಅಮೆರಿಕದಲ್ಲಿ ಜನ ಸಾಯುತ್ತಿರುವಾಗ ಇದರಲ್ಲೂ ಸ್ಪರ್ಧೆ ಯಾಕೆ? ಪ್ರತಿ ದಿನವೂ ಹೆಚ್ಚು ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವಾಗ ಈ ವಿಚಾರವನ್ನು ಯಾಕೆ ಪ್ರಸ್ತಾಪ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ, ಹೌದು, ವಿಶ್ವದೆಲ್ಲೆಡೆ ಹಲವು ಮಂದಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪ್ರಶ್ನೆಯನ್ನು ನೀವು ನನ್ನ ಜೊತೆಯಲ್ಲ, ಚೀನಾಗೆ ಕೇಳಿ. ಚೈನಾಗೆ ಕೇಳಿದರೆ ನೀವು ಅವರಿಂದ ಅಸಾಮಾನ್ಯ ಉತ್ತರವನ್ನು ಪಡೆಯಬಹುದು ಎಂದು ಟ್ರಂಪ್ ಉತ್ತರಿಸಿದ್ದಾರೆ.
ಇದಾದ ಬಳಿಕ ಸಿಎನ್‍ಎನ್ ವಾಹಿನಿಯ ಪತ್ರಕರ್ತೆ ಕೈಟ್ಲಾನ್ ಕಾಲಿನ್ಸ್ ಗೆ ಪ್ರಶ್ನೆ ಕೇಳಲು ಟ್ರಂಪ್ ಅವಕಾಶ ನೀಡಿದರು. ಈ ವೇಳೆ ಪತ್ರಕರ್ತೆ, ಯಾಕೆ ನೀವು ವಿಶೇಷವಾಗಿ ನನ್ನನ್ನು ಉದ್ದೇಶಿಸಿ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಟ್ರಂಪ್, ನಾನು ಯಾರನ್ನು ನಿರ್ದಿಷ್ಟವಾಗಿ ಉದ್ದೇಶಿಸಿ ಹೇಳಿಲ್ಲ. ಈ ರೀತಿಯ ಅಸಹ್ಯ ಪ್ರಶ್ನೆಯನ್ನು ಯಾರು ಕೇಳುತ್ತಾರೋ ಅವರನ್ನು ಉದ್ದೇಶಿಸಿ ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಕಾಲಿನ್ಸ್ ಮರು ಪ್ರಶ್ನೆ ಕೇಳಲು ಮುಂದಾದಾಗ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧದಲ್ಲೇ ಮುಗಿಸಿ ತೆರಳಿದ್ದಾರೆ.
ಟ್ರಂಪ್ ವಿಶೇಷವಾಗಿ ಏಷ್ಯಾ ಮೂಲದ ಅದರಲ್ಲೂ ಚೀನಾದ ಮತ್ತು ಚೀನಾದ ಜೊತೆ ಉತ್ತಮ ಸಂಬಂಧ ಹೊಂದಿರುವ ದೇಶಗಳ ಪತ್ರಕರ್ತರ ಪ್ರಶ್ನೆಗೆ ಸರಿಯಾಗಿ ಉತ್ತರಿಸುವುದಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ.
ಆರಂಭದಲ್ಲಿ ಟ್ರಂಪ್‍ಗೆ ಪ್ರಶ್ನೆಗೆ ಕೇಳಿದ ಜಿಯಾಂಗ್ ಮೂಲತಃ ಚೀನಾದವರಾಗಿದ್ದು, 2 ವರ್ಷವಿದ್ದಾಗ ಅಮೆರಿಕಕ್ಕೆ ಬಂದಿದ್ದು, ಈಗ ಅಮೆರಿಕದ ನಿವಾಸಿಯಾಗಿದ್ದಾರೆ.
ಸುದ್ದಿಗೋಷ್ಠಿಯ ಆರಂಭದಲ್ಲಿ ಟ್ರಂಪ್, ವಿಶ್ವದಲ್ಲಿ ಎಲ್ಲಿಯೂ ನಮ್ಮ ದೇಶದಲ್ಲಿ ನಡೆದಷ್ಟು ಹೆಚ್ಚು ಪರೀಕ್ಷೆಗಳು ನಡೆದಿಲ್ಲ ಮತ್ತು ನಮ್ಮ ಸರಿಸಾಟಿ ಯಾರೂ ಇಲ್ಲ. ನಮ್ಮ ಹತ್ತಿರಕ್ಕೆ ಯಾರು ಬರುವುದಿಲ್ಲ. ಈಗಾಗಲೇ 90 ಲಕ್ಷ ಪರೀಕ್ಷೆಗಳನ್ನು ನಡೆಸಿದ್ದೇವೆ. ಮೂರು ವಾರಗಳ ಹಿಂದೆ 1.50 ಲಕ್ಷ ಪರೀಕ್ಷೆ ನಡೆಯುತ್ತಿತ್ತು. ಆದರೆ ಈಗ ಪ್ರತಿ ದಿನ ಮೂರು ಲಕ್ಷ ಪರೀಕ್ಷೆಗಳನ್ನು ನಡೆಸುತ್ತಿದ್ದು ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದರು.
Trump abruptly ends news conference after exchange with CBS reporter. Reporter: "Why is this a global competition to you if every day Americans are still losing their lives and we’re still seeing more cases?”
ಕೋವಿಡ್ 19ಗೂ ಮುನ್ನ ಮೈಕ್‍ಗಳನ್ನು ಹಸ್ತಾಂತರಿಸುವ ಮೂಲಕ ಸುದ್ದಿಗೋಷ್ಠಿ ನಡೆಯುತ್ತಿತ್ತು. ಆದರೆ ಈಗ ಪತ್ರಕರ್ತರ ಸಾಲಿನಲ್ಲಿ ಒಂದು ಕಡೆ ಮೈಕ್ ನಿಲ್ಲಿಸಲಾಗುತ್ತದೆ. ಟ್ರಂಪ್ ಯಾರಿಗೆ ಪ್ರಶ್ನೆ ಕೇಳಲು ಅವಕಾಶ ನೀಡುತ್ತಾರೋ ಅವರು ಮೈಕ್ ಮುಂದೆ ಬಂದು ಪ್ರಶ್ನೆಯನ್ನು ಕೇಳಬೇಕಾಗುತ್ತದೆ.
ವಾಷಿಂಗ್ಟನ್: ಕೋವಿಡ್-19 ಗೆ ಲಸಿಕೆ ಕಂಡು ಹಿಡಿಯಲು ಹಲವು ದೇಶಗಳು ಪ್ರಯತ್ನಿಸುತ್ತಿದ್ದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಸಿಕೆ ಇಲ್ಲದೆ ಈ ಸೋಂಕು ಹೋಗುತ್ತದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ವೈರಸ್ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಹಲವು ವೈರಸ್ ಗಳು ಬಂದಿವೆ. ಈ ವೈರಸ್ ಗಳಿಗೆ ಔಷಧಿ ಕಂಡು ಹಿಡಿಯುವ ವೇಳೆ ವೈರಸ್ ಗಳು ಮಾಯವಾಗಿರುತ್ತದೆ. ಇದು ಎಲ್ಲಿಯೂ ಕಾಣಿಸುವುದಿಲ್ಲ. ಈ ವೈರಸ್ ಸಹ ಸಾಯುತ್ತದೆ. ಹೀಗಾಗಿ ಕೋವಿಡ್ 19 ಸಹ ಹೋಗುತ್ತದೆ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಹೀಗೆ ಹೇಳಿಕೆ ನೀಡಿದ್ದರೂ ಅಮೆರಿಕ ಸರ್ಕಾರ ಲಕ್ಷಗಟ್ಟಲೇ ಡಾಲರ್ ಹಣವನ್ನು ಕೋವಿಡ್ 19 ಔಷಧಿಗಾಗಿ ಸುರಿಯುತ್ತಿದೆ. ಚೀನಾ ಮತ್ತು ಅಮೆರಿಕದ ಮಧ್ಯೆ ಕೋವಿಡ್ 19 ಔಷಧಿ ಪತ್ತೆ ಹಚ್ಚುವ ವಿಷಯದಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದ್ದು ಯಾರು ಮೊದಲು ಔಷಧಿ ಕಂಡು ಹಿಡಿಯುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ಈ ವರ್ಷವೇ ಮೇಡ್ ಇನ್ ಇಂಡಿಯಾ ಕೋವಿಡ್-19 ಔಷಧಿ ಲಭ್ಯ – ಕಿರಣ್ ಮಜುಂದಾರ್ ಶಾ
ಈ ನಡುವೆ ಭಾರತಲ್ಲೂ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಮೌನವಾಗಿದ್ದುಕೊಂಡೇ ಭಾರತದ ಕಂಪನಿಗಳು ಔಷಧಿ ಕಂಡುಹಿಡಿಯುವ ಕೆಲಸ ಮಾಡುತ್ತಿವೆ.
ಈ ವರ್ಷದಲ್ಲೇ ಮೇಡ್ ಇನ್ ಇಂಡಿಯಾ ಕೋವಿಡ್ -19 ಔಷಧಿ ಲಭ್ಯವಾಗಲಿದೆ ಎಂದು ಬಯೋಕಾನ್ ಕಂಪನಿಯ ಆಡಳಿತ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ. ಈಗಾಗಲೇ ಎರಡು, ಮೂರು ಸಣ್ಣ ಕಂಪನಿಗಳು ಔಷಧಿ ಅಭಿವೃದ್ಧಿ ಪಡಿಸುತ್ತಿವೆ. ಈ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಔಷಧಿ ತಯಾರಿಸುವ ಕೆಲಸ ಮಾಡುತ್ತಿವೆ. ನಾವು ಔಷಧಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ತಿಳಿಸಿದ್ದಾರೆ.
ವಾಶಿಂಗ್ಟನ್: ಅಮೆರಿಕದ ಸಂಸತ್ ಭವನದ ವೈಟ್ ಹೌಸ್‍ನಲ್ಲಿ ವೈದಿಕ ಶಾಂತಿ ಮಂತ್ರ ಮೊಳಗಿದೆ.
ರಾಷ್ಟ್ರೀಯ ಪ್ರಾರ್ಥನಾ ದಿನದ ಅಂಗವಾಗಿ ವೈಟ್‍ಹೌಸ್‍ನ ರೋಸ್ ಗಾರ್ಡನ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿಕೊಟ್ಟರು. ಈ ವೇಳೆ ಹಿಂದೂ ಧರ್ಮದ ವೈದಿಕ ಶಾಂತಿ ಮಂತ್ರವನ್ನು ಪಠಿಸಲಾಯಿತು. ನ್ಯೂ ಜರ್ಸಿಯ ಸ್ವಾಮಿನಾರಾಯಣ ಮಂದಿರದ ಹರೀಶ್ ಬ್ರಹ್ಮಭಟ್ ಅವರು ಶಾಂತಿ ಮಂತ್ರವನ್ನು ಪಠಿಸಿದರು.
Jai Swaminarayan!
Shri Harish Bhai Brahmbhatt of *BAPS Swaminarayan, recites Peace Prayer in White House on the occasion of National Day of Prayer.* pic.twitter.com/6mCb19sUDk
ಕೊರೊನಾ ಮಹಾಮಾರಿ ತೊಲಗಿ ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಭಾರತದ ಪರವಾಗಿ ಈ ಮಂತ್ರವನ್ನು ಪಠಿಸಲಾಯಿತು. ರಾಷ್ಟ್ರೀಯ ಪ್ರಾರ್ಥನಾ ದಿನವು ಅಮೆರಿಕದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಮೊದಲ ಬಾರಿಗೆ 1988ರಲ್ಲಿ ಸಾರ್ವಜನಿಕವಾಗಿ ಈ ದಿನವನ್ನು ಆಚರಿಸಲಾಗಿತ್ತು. ಇದೀಗ ಡಿಜಿಟಲ್ ರೂಪದಲ್ಲಿ ಪ್ರಾರ್ಥನಾ ದಿನವನ್ನು ಆಚರಿಸಿದ್ದು, ಈ ಕಾರ್ಯಕ್ರಮಕ್ಕೆ ಮೊದಲ ಮಹಿಳೆಯಾಗಿ ಮಿಲಾನಿಯಾ ಟ್ರಂಪ್ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಹರೀಶ್ ಬ್ರಹ್ಮಭಟ್, ಶಾಂತಿ ಮಂತ್ರ ವಿಶ್ವವು ಶ್ರೀಮಂತವಾಗಲಿ, ಗೆಲುವು ಸಾಧಿಸಲಿ ಎಂದು ಬಯಸುವುದಲ್ಲ, ಎಲ್ಲೆಡೆ ಶಾಂತಿ ನೆಲೆಸಲು ಹಿಂದೂಗಳು ಪಠಿಸುವ ಮಂತ್ರವಾಗಿದೆ. ಇದನ್ನು ಯಜುರ್ವೇದದಿಂದ ಪಡೆಯಲಾಗಿದೆ ಎಂದು ತಿಳಿಸಿದರು. ಅಲ್ಲದೆ ಮೊದಲು ಸಂಸ್ಕøತದಲ್ಲಿ ಪಠಿಸಿ ನಂತರ ಇಂಗ್ಲಿಷ್‍ನಲ್ಲಿ ಭಾಷಾಂತರಿಸಿ ಹೇಳಿದರು.
ಸವಾಲಿನ ಸಂದರ್ಭದಲ್ಲಿ ನಮ್ಮ ಜನರು ಯಾವಾಗಲೂ ನಂಬಿಕೆ, ಆಶೀರ್ವಾದ, ಪ್ರಾರ್ಥನಾ ಶಕ್ತಿಯೊಂದಿಗೆ ದೇವರನ್ನು ನೆನೆಯುತ್ತಾರೆ. ಶಕ್ತಿ ಮತ್ತು ಸಾಂತ್ವನಕ್ಕಾಗಿ, ಧೈರ್ಯ ಮತ್ತು ಸೌಕರ್ಯಕ್ಕಾಗಿ, ಭರವಸೆ ಮತ್ತು ಚಿಕಿತ್ಸೆಗಾಗಿ, ಚೇತರಿಕೆ ಮತ್ತು ನವೋದಯಕ್ಕಾಗಿ ಸ್ವರ್ಗದಲ್ಲಿರುವ ದೇವರನ್ನು ಪ್ರಾರ್ಥಿಸುತ್ತಾರೆ. ಎಲ್ಲ ಅಮೆರಿಕನ್ನರು ಸಹ ನಮ್ಮೊಂದಿಗೆ ನಮ್ಮ ಆಧ್ಯಾತ್ಮದೊಂದಿಗೆ ಬೆರೆಯಬೇಕು ಎಂದು ಹರೀಶ್ ಬ್ರಹ್ಮಭಟ್ ಮನವಿ ಮಾಡಿದ್ದಾರೆ. ಅವರು ಮಾತನಾಡುವುದು ಪೂರ್ಣಗೊಳ್ಳುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ.
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನ ಅನ್ ಫಾಲೋ ಮಾಡಿದೆ.
ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ಕಚೇರಿಯ ಖಾತೆ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಟ್ವಿಟ್ಟರ್ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಫಾಲೋ ಮಾಡಿತ್ತು. ಆದರೆ ಈಗ ಏಕಾಏಕಿ ಟ್ವಿಟ್ಟರ್ ನಲ್ಲಿ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಅನ್ ಫಾಲೋ ಮಾಡಿದೆ.
ವೈಟ್ ಹೌಸ್ ಅಮೆರಿಕ ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತು ಪಡಿಸಿದ ಬೇರೆ ಯಾರ ಖಾತೆಯನ್ನು ಫಾಲೋ ಮಾಡುವುದಿಲ್ಲ. ಆದರೆ ಅಚ್ಚರಿ ಎಂಬಂತೆ ಮೂರು ವಾರಗಳ ಹಿಂದೆ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಫಾಲೋ ಮಾಡಿತ್ತು. ಈ ಎರಡು ಖಾತೆಗಳನ್ನು ಅನ್‍ಫಾಲೋ ಮಾಡುವುರ ಜೊತೆಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ವಾಷಿಂಗ್ಟನ್ ನಲ್ಲಿರುವ ಭಾರತ ರಾಯಭಾರ ಕಚೇರಿಯನ್ನು ಅನ್ ಫಾಲೋ ಮಾಡಿದೆ.
ಪ್ರಸ್ತುತ 13 ಖಾತೆಗಳನ್ನು ವೈಟ್ ಹೌಸ್ ಫಾಲೋ ಮಾಡುತ್ತಿದ್ದು, 2.2 ಕೋಟಿ ಜನ ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.
Extraordinary times require even closer cooperation between friends. Thank you India and the Indian people for the decision on HCQ. Will not be forgotten! Thank you Prime Minister @NarendraModi for your strong leadership in helping not just India, but humanity, in this fight!
ಕೋವಿಡ್-19 ಹಿನ್ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇರಿದಂತೆ ಹಲವು ಔಷಧಿಗಳ ರಫ್ತನ್ನು ನಿಷೇಧಿಸಿತ್ತು. ಈ ಸಮಯದಲ್ಲಿ ಕೋವಿಡ್-19ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪರಿಣಾಮ ಬೀರುತ್ತದೆ ಎಂಬ ಸಲಹೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕಳುಹಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಭಾರತ ಅಮೆರಿಕಕ್ಕೆ ಮಾತ್ರೆಗಳನ್ನು ರಫ್ತು ಮಾಡಿತ್ತು. ಇದಾದ ಬಳಿಕ ಟ್ರಂಪ್ ಸಂತೋಷಗೊಂಡು ಮೋದಿ ಅವರನ್ನು ಹೊಗಳಿದ್ದರು. ಟ್ರಂಪ್ ಹೊಗಳಿಕೆಯ ಟ್ವೀಟ್ ಬೆನ್ನಲ್ಲೇ ವೈಟ್ ಹೌಸ್ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಪಿಎಂಓ ಖಾತೆಯನ್ನು ಫಾಲೋ ಮಾಡಿತ್ತು.
ವಾಷಿಂಗ್ಟನ್: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಇಂತಹ ಪತಿಸ್ಥಿತಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ರೀಡಾಕೂಟ ಆರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಮಂಗಳವಾರ ಮಾತನಾಡಿ, ನಾವು ನಮ್ಮ ಕ್ರೀಡೆಗಳನ್ನು ಪುನಾರಂಭಿಸಬೇಕಿದೆ. ನಾನು 14 ವರ್ಷ ವಯಸ್ಸಿ ಆಟಗಾರರ ಬೇಸ್‍ಬಾಲ್ ಆಟಗಳನ್ನು ನೋಡುವುದರಿಂದ ಬೇಸತ್ತಿದ್ದೇನೆ ಎಂದು ಹೇಳಿದ್ದಾರೆ.
ಉತಾಹ್ ಜಾಝ್ ಸೆಂಟರ್‍ನ ರೂಡಿ ಗೊಬರ್ಟ್ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅಂದ್ರೆ ಮಾರ್ಚ್ 11ರಂದು ಎನ್‍ಬಿಎ (ನ್ಯಾಷನಲ್ ಬಾಸ್ಕೆಟ್‍ಬಾಲ್ ಅಸೋಸಿಯೇಷನ್) ಸ್ಥಗಿತಗೊಂಡಿತು. ಅಂದಿನಿಂದ ಯುಎಸ್‍ಎ, ಎನ್‍ಬಿಎ, ನ್ಯಾಷನಲ್ ಹಾಕಿ ಲೀಗ್, ಫುಟ್ಬಾಲ್ ಲೀಗ್ ಮತ್ತು ಬೇಸ್ ಬಾಲ್ ಲೀಗ್ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಮುಂದೂಡಲಾಗಿದೆ. ಇತ್ತ ಜಪಾನ್‍ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಮತ್ತು ಭಾರತದಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.
ಫ್ಲೋರಿಡಾದಲ್ಲಿ ಬೇಸ್‍ಬಾಲ್ ಲೀಗ್‍ನಲ್ಲಿ 30 ತಂಡಗಳು ಆಡಲಿವೆ. ಈಗಾಗಲೇ ಪಂದ್ಯ ಆರಂಭವಾಗಿದ್ದರಿಂದ ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲಿ ನಡೆಸಲು ಆಯೋಜಕರು ಮುಂದಾಗಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಮೇಜರ್ ಲೀಗ್ ಸಾಕರ್ (ಎಂಎಲ್‍ಬಿ) ಕಮಿಷನರ್ ರಾಬ್ ಮೆನ್‍ಫ್ರೆಡ್, ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಯಾವುದೇ ಯೋಜನೆಗಳಿಲ್ಲ. ಸಾಕಷ್ಟು ಯೋಜನೆಗಳನ್ನು ಪರಿಗಣಿಸಲಾಗುತ್ತಿದೆ. ಇವುಗಳಲ್ಲಿ ಯಾವುದು ಫಲಿತಾಂಶವಾಗಿ ಬದಲಾಗುತ್ತದೆ ಎಂಬುದನ್ನು ತಿಳಿಯುತ್ತಿಲ್ಲ. ಜನರ ಜೀವನ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದರು.
ಅಮೆರಿಕಾದಲ್ಲಿ ಬುಧವಾರ ಬೆಳಗ್ಗೆಯವರೆಗೆ ಕೊರೊನಾ ವೈರಸ್‍ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 26 ಸಾವಿರಕ್ಕೂ ಅಧಿಕವಾಗಿದೆ. ಸೋಂಕಿತರ ಸಂಖ್ಯೆ 6.14 ಲಕ್ಷ ಮೀರಿದೆ. ವಿಶ್ವದಾದ್ಯಂತ 19,97, 906 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 1,26,604 ಮಂದಿ ಮೃತಪಟ್ಟಿದ್ದಾರೆ.
– ಮೊದಲೇ ಎಚ್ಚರಿಕೆ ನೀಡದ್ದರಿಂದ ವಿಶ್ವದಲ್ಲಿ ಅವಾಂತರ
– ಅಮೆರಿಕದಿಂದಲೇ ಅತಿ ಹೆಚ್ಚು ಫಂಡ್
ವಾಷಿಂಗ್ಟನ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಪತ್ತೆಯಾದಾಗ ಇದು ಅತೀ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ ವಿಶ್ವಕ್ಕೆ ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಕ್ಕೆ ಅಮೆರಿಕ ಡಬ್ಲ್ಯೂಎಚ್‍ಒಗೆ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದೆ.
ಚೀನಾ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡಾಗ ಅದು ವೇಗವಾಗಿ ಹಬ್ಬುತ್ತಿರುವ ಬಗ್ಗೆ ಡಬ್ಲ್ಯೂಎಚ್‍ಒ ಮೊದಲೇ ಎಚ್ಚರಿಕೆ ನೀಡದೆ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮತ್ತು ತೀವ್ರವಾಗಿ ನಿಗಾವಹಿಸುವಲ್ಲಿ ವಿಫಲವಾಗಿದೆ. ಡಬ್ಲ್ಯೂಎಚ್‍ಒ ಮೊದಲೇ ಸರಿಯಾಗಿ ಮಾಹಿತಿ ಕೊಟ್ಟಿದ್ದರೆ ವೈರಸ್ ಈ ರೀತಿ ವಿಶ್ವದಲ್ಲಿ ಅಟ್ಟಹಾಸ ಮೆರೆಯುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬಹುದಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.
ಶ್ವೇತ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಟ್ರಂಪ್ ಅವರು, ಕೊರೊನಾ ಬಗ್ಗೆ ಮಾಹಿತಿ ನೀಡುವಲ್ಲಿ ಡಬ್ಲ್ಯೂಎಚ್‍ಒ ವಿಫಲವಾಗಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಡಬ್ಲ್ಯೂಎಚ್‍ಒಗೆ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
ಅಮೆರಿಕದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಹಬ್ಬುತ್ತಿದೆ. ಈ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ಡಬ್ಲ್ಯೂಎಚ್‍ಒ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ಇದೆ ಎನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಡಬ್ಲ್ಯೂಎಚ್‍ಒಗೆ ಅಮೆರಿಕದಿಂದ ಹೆಚ್ಚು ಧನಸಹಾಯವನ್ನು ಮಾಡಲಾಗುತ್ತಿತ್ತು. ಅಮೆರಿಕದ ಮಂದಿ ವಿಶ್ವ ಆರೋಗ್ಯ ಸಂಸ್ತೆಗೆ ಹೆಚ್ಚು ಫಂಡ್ ನೀಡುತ್ತಿದ್ದರು. ಕಳೆದ ವರ್ಷ ಸಂಸ್ಥೆಗೆ ಅಮೆರಿಕ 400 ದಶಲಕ್ಷ ಯುಎಸ್ ಡಾಲರ್(3,056 ಕೋಟಿ) ನೆರವನ್ನು ನೀಡಿತ್ತು. ಪ್ರತಿ ವರ್ಷ 400ರಿಂದ 500 ದಶಲಕ್ಷ ಯುಎಸ್ ಡಾಲರ್ ನೆರವನ್ನು ಡಬ್ಲ್ಯೂಎಚ್‍ಒಗೆ ಅಮೆರಿಕ ನೀಡುತ್ತದೆ. ಆದರೆ ಚೀನಾ ಡಬ್ಲ್ಯೂಎಚ್‍ಒಗೆ 40 ದಶಲಕ್ಷ ಯುಎಸ್ ಡಾಲರ್ ಗಿಂತ ಕಡಿಮೆ ಹಣವನ್ನು ನೀಡುತ್ತದೆ. ಆದರೂ ಡಬ್ಲ್ಯೂಎಚ್‍ಒ ಚೀನಾ ಪರವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಬಗ್ಗೆ ಸರಿಯಾಗಿ ಮಾಹಿತಿ ವಿಶ್ವಕ್ಕೆ ನೀಡುತ್ತಿಲ್ಲ. ರಾಷ್ಟ್ರಗಳ ನಡುವಿನ ಬಾಂಧವ್ಯ ಹೆಚ್ಚಿಸಲು, ಸ್ನೇಹವನ್ನು ಹೆಚ್ಚಿಸಲು ಡಬ್ಲ್ಯೂಎಚ್‍ಒ ಕೆಲಸ ಮಾಡಬೇಕು. ಯಾವ ರಾಷ್ಟ್ರದ ಸ್ಥಿತಿ ಹೇಗಿದೆ ಎಂದು ವಿಶ್ವಕ್ಕೆ ಮಾಹಿತಿ ನೀಡಬೇಕು. ಆದರೆ ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಹುಟ್ಟಿಕೊಂಡ ರಾಷ್ಟ್ರದಲ್ಲಿ ಯಾವ ಹೊಸ ನಿಯಮ ಪಾಲಿಸುತ್ತಿದ್ದಾರೆ? ವಿಜ್ಞಾನಿಗಳ ಸಂಶೋಧನೆ ಏನಾಯಿತು? ವೈದ್ಯರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇತರೆ ರಾಷ್ಟ್ರಗಳಿಗೆ ನೀಡುತ್ತಿಲ್ಲ. ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ನಿಂತಿದೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.
ಸದ್ಯ ವಿಶ್ವಾದ್ಯಂತ 1,17,217 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ಅಮೆರಿಕದಲ್ಲಿಯೇ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5,94,207 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ.
ನವದೆಹಲಿ: ಆ್ಯಂಟಿ ಮಲೇರಿಯಾ ಔಷಧಿಗಾಗಿ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಮಾನವೀಯತೆ ದೃಷ್ಟಿಯಲ್ಲಿ ಆ್ಯಂಟಿ ಮಲೇರಿಯಾ (ಹೈಡ್ರೋಕ್ಸಿಕ್ಲೋರೋಕ್ವೀನ್) ಔಷಧಿ ರಫ್ತು ಮಾಡುವುದಾಗಿ ಭಾರತ ಹೇಳಿದೆ. 26 ಜೆನರಿಕ್ ಔಷಧಿಗಳ ರಫ್ತಿಗೆ ಕಳೆದ ತಿಂಗಳಷ್ಟೇ ಭಾರತ ನಿರ್ಬಂಧ ಹೇರಿತ್ತು. ಆದರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆ್ಯಂಟಿ ಮಲೇರಿಯಾ ಔಷಧಿಯನ್ನು ತ್ವರಿತವಾಗಿ ರಫ್ತು ಮಾಡುವಂತೆ ಅಮೆರಿಕ ಕೇಳಿತ್ತು. ಅಲ್ಲದೆ ಒಂದೊಮ್ಮೆ ರಫ್ತು ಮಾಡದಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳೋದಾಗಿ ಟ್ರಂಪ್ ಬೆದರಿಸಿದ್ದರು. ಇದಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗಿದೆ. ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ ಅಂತ ಕಾಂಗ್ರೆಸ್‍ನ ಶಶಿತರೂರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು – ಟ್ರಂಪ್ ಈ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ?
I spoke to him (PM Modi), Sunday morning & I said we appreciate it that you are allowing our supply (of Hydroxychloroquine) to come out, if he doesn't allow it to come out, that would be okay, but of course, there may be retaliation, why wouldn't there be?: US Pres Donald Trump pic.twitter.com/kntAqATp4J
ವಿಶ್ವಾದ್ಯಂತ ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 13.60 ಲಕ್ಷಕ್ಕೆ ಏರಿದ್ದು, 75,910 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 3 ಲಕ್ಷ ಜನ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಂತೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ದೇಶ ಸೋಂಕಿತರು ಸಾವು
ಅಮೆರಿಕ 3.67 ಲಕ್ಷ 10,934 (ಮಂಗಳವಾರ 72)
ಸ್ಪೇನ್ 1.40 ಲಕ್ಷ 13,798 (ಮಂಗಳವಾರ 457)
ಇಟಲಿ 1.32 ಲಕ್ಷ 16,523
ಜರ್ಮನಿ 1.03 ಲಕ್ಷ 1,810
ಫ್ರಾನ್ಸ್ 98 ಸಾವಿರ 8,911
ಬೆಲ್ಜಿಯಂನಲ್ಲಿ 22 ಸಾವಿರಕ್ಕೇರಿದೆ, 2,035 ಜನ ಸತ್ತಿದ್ದಾರೆ. ಇವತ್ತೊಂದೇ ಜನ 403 ಮಂದಿ ಜೀವಬಿಟ್ಟಿದ್ದಾರೆ.
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಒಪ್ಪಿಗೆ ಸೂಚಿಸಿದೆ.
ಭಾರತ ಸರ್ಕಾರ ದೇಶದಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ ರೋಗದ ವಿರುದ್ಧವಾಗಿ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಸೇರಿದಂತೆ 16 ಮಾತ್ರೆಗಳ ರಫ್ತಿಗೆ ನಿಷೇಧ ಹೇರಿತ್ತು. ಈ ಮಧ್ಯೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿಂದ ಕೊರೊನಾ ಪೀಡಿತ ರೋಗಿಗಳು ಗುಣವಾಗುತ್ತಾರೆ ಎನ್ನುವ ವಿಚಾರ ಅಧ್ಯಯನದಿಂದ ತಿಳಿದು ಬಂದಿತ್ತು.
ಅಮೆರಿಕದಲ್ಲಿ ಕೊರೊನಾ ಸಾವು ನೋವು ಪ್ರಮಾಣ ತೀವ್ರವಾಗುತ್ತಿರುವ ಬೆನ್ನಲ್ಲೇ ಈ ವರದಿಯಿಂದ ಎಚ್ಚೆತ್ತ ಟ್ರಂಪ್ ಪ್ರಧಾನಿ ಮೋದಿಗೆ ಕರೆ ಮಾಡಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಬೇಕೆಂದು ಕೇಳಿಕೊಂಡಿದ್ದರು.
ಟ್ರಂಪ್ ಮನವಿಯ ಬೆನ್ನಲ್ಲೇ ಭಾರತ ಸರ್ಕಾರ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಮಾತ್ರೆಗಳ ಮೇಲಿನ ರಫ್ತನ್ನು ಹಿಂದಕ್ಕೆ ಪಡೆದಿದೆ.
I may take it too, will have to talk to my doctors: US President Donald Trump in White House press conference after he announced he requested PM Narendra Modi for more Hydroxychloroquine tablets. pic.twitter.com/HkuiDGknCe
ಈ ಸಂಬಂಧ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿ, ಕೊರೊನಾ ಸಂಕಷ್ಟದ ಸಮಯಯದಲ್ಲಿ ಮಾನವೀಯ ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಮಾತ್ರೆಗಳನ್ನು ಹತ್ತಿರದ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ ಎಂದು ತಿಳಿಸಿದೆ.
ಕಳೆದ ವಾರವೇ ಟ್ರಂಪ್ ಮನವಿ ಮಾಡಿದ್ದರೂ ಭಾರತ ಈ ಬಗ್ಗೆ ಶೀಘ್ರವೇ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ.
We will also be supplying these essential drugs to some nations who have been particularly badly affected by the pandemic. We would therefore discourage any speculation in this regard or any attempts to politicise the matter: Ministry of External Affairs (MEA) #COVID19https://t.co/T4BPoXkLDM
ಇಂದು ವಿದೇಶಾಂಗ ಇಲಾಖೆಯ ವಕ್ತಾರ ಶ್ರೀವತ್ಸವ ಪ್ರತಿಕ್ರಿಯಿಸಿ, ಆ ದೇಶದ ಪ್ರಜೆಗಳ ರಕ್ಷಣೆ ಮಾಡುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಮೊದಲ ಕೆಲಸ. ಹೀಗಾಗಿ ಔಷಧಿಗಳು ನಮ್ಮ ಬೇಡಿಕೆಗೆ ತಕ್ಕಂಥೆ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ನಾವು ತಾತ್ಕಾಲಿಕವಾಗಿ ಔಷಧಿಗಳ ರಫ್ತಿಗೆ ನಿಷೇಧವನ್ನು ಹೇರಲಾಗಿತ್ತು. ಈಗ ನಮ್ಮ ಬೇಡಿಕೆಯನ್ನು ನೋಡಿಕೊಂಡು ಔಷಧಗಳ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಮೇಲೆ ಪರಿಣಾಮ ಬೀರುತ್ತಾ?
ಅಮೆರಿಕದಲ್ಲಿ 3.60 ಲಕ್ಷ ಮಂದಿಗೆ ಕೊರೊನಾ ಬಂದಿದ್ದು ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾಗೆ ಸಧ್ಯಕ್ಕೆ ಯಾವುದೇ ಔಷಧಿ ಇಲ್ಲ. ಹೀಗಾಗಿ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಎನ್ನವ ಪ್ರಶ್ನೆ ಏಳುವುದು ಸಹಜ.
ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.
ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.
ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.
ಅಧ್ಯಯನ ಹೇಳಿದ್ದು ಏನು?
ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.
ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.
ಟ್ರಂಪ್ ಹೇಳಿದ್ದು ಏನು?
ಇಂದಿನ ತುರ್ತು ಪರಿಸ್ಥಿತಿಯಲ್ಲಿ ಲ್ಯಾಬ್‍ನಲ್ಲಿ ಕೊರೊನಾಗೆ ಔಷಧಿ ಕಂಡು ಹುಡುಕುವುದು ಬಹಳ ಸವಾಲಿನ ಕೆಲಸ. ಹೀಗಿರುವಾಗ ಅಮೆರಿಕನ್ನರ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಎರಡು ಮೆಡಿಕಲ್ ಇತಿಹಾಸದಲ್ಲಿ ಗೇಮ್ ಚೇಂಜರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಾನು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.