Tag: donald trump

  • ಫಸ್ಟ್ ಟೈಂ – ಅಮೆರಿಕ ಚುನಾವಣೆಯಲ್ಲಿ ಹಿಂದೂಗಳ ಓಲೈಕೆ

    ಫಸ್ಟ್ ಟೈಂ – ಅಮೆರಿಕ ಚುನಾವಣೆಯಲ್ಲಿ ಹಿಂದೂಗಳ ಓಲೈಕೆ

    ವಾಷಿಂಗ್ಟನ್‌: ಅಮೆರಿಕ ಚುನಾವಣೆಯ ಪ್ರಚಾರ ತೀವ್ರಗೊಳ್ಳುತ್ತಿರುವಂತೆ ಇದೇ ಮೊದಲ ಬಾರಿಗೆ ಡೆಮಾಕ್ರೆಟಿಕ್‌ ಮತ್ತು ರಿಪಬ್ಲಿಕ್‌ ಪಕ್ಷಗಳು ಹಿಂದೂಗಳ ಓಲೈಕೆಗೆ ಇಳಿದಿವೆ.

    ಹೌದು. ಇಡಿ ವಿಶ್ವವೇ ಎದುರು ನೋಡುತ್ತಿರುವ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡೆಮಾಕ್ರೆಟಿಕ್‌ನಿಂದ ಜೋ ಬೈಡನ್ ಅಭ್ಯರ್ಥಿಗಳಾಗಿದ್ದು ಪ್ರಚಾರ ಜೋರಾಗಿದೆ.

    ಸಾಧಾರಣವಾಗಿ ಅಮೆರಿಕ ಚುನಾವಣೆ ಅಲ್ಲಿನ ಸಮಸ್ಯೆ ಜೊತೆಗೆ ವಿಶ್ವದ ಸಮಸ್ಯೆಗಳನ್ನು ನಾವು ಹೇಗೆ ಪರಿಹಾರ ಮಾಡುತ್ತೇವೆ ಎಂಬುದನ್ನು ಅಧ್ಯಕ್ಷ ಅಭ್ಯರ್ಥಿಗಳು ಹೆಚ್ಚಾಗಿ ಪ್ರಸ್ತಾಪಿಸಿ ಮತದಾರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಆದರೆ ಈ ಬಾರಿ ಈ ವಿಚಾರಗಳ ಜೊತೆಗೆ ಭಾರತೀಯರ ಮತದಾರರ ಓಲೈಸಲು ಎರಡೂ ಪಕ್ಷಗಳು ಭರವಸೆ ನೀಡಲು ಆರಂಭಿಸಿವೆ.

     

    ಹಾಲಿ ಅಧ್ಯಕ್ಷ ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಭಾರತೀಯರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್‌ ಬೆಂಬಲಿಗರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲೆಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

    ಈ ಪ್ರಕಾರ, ‘ಅಮೆರಿಕ ಕಾ ನೇತಾ ಕೈಸಾ ಹೋ, ಜೋ ಬೈಡನ್‌ ಜೈಸಾ ಹೋ’(ಅಮೆರಿಕದ ನಾಯಕ ಹೇಗಿರಬೇಕು ಎಂದರೆ ಅದು ಬೈಡನ್‌ ರೀತಿ) ಎಂಬ ಘೋಷ ವಾಕ್ಯಗಳೊಂದಿಗೆ ಈಗಾಗಲೇ ಅಮೆರಿಕಾದ್ಯಂತ ಪ್ರಚಾರ ನಡೆಸಲಾಗುತ್ತಿದೆ.

    ಜೋ ಬೈಡೆನ್‍ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಕ್ಯಾಲಿರ್ಫೋನಿಯಾದ ಸಂಸದೆ ಕಮಲ ಹ್ಯಾರಿಸ್‍ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ನೇಮಿಸಿದ್ದಾರೆ. ಈ ಮೂಲಕ ಭಾರತೀಯರ ಮತ್ತು ಕಪ್ಪು ವರ್ಣೀಯರ ಮತ ಸೆಳೆಯಲು ಮುಂದಾಗಿದ್ದಾರೆ.

    ಯಾರ ಭರವಸೆ ಏನು?
    ಟ್ರಂಪ್ ಪರ ಪ್ರಚಾರಕರು ನಮ್ಮ ಪಕ್ಷವನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಅಮೆರಿಕದಲ್ಲಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಅಡೆತಡೆಗಳನ್ನು ನಿವಾರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇತ್ತ ಜೋ ಬೈಡನ್ ಪರ ಪ್ರಚಾರಕರು ಹಿಂದೂಗಳ ನಂಬಿಕೆಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿ ಓಲೈಸಿದ್ದಾರೆ.

    ಮೂರು ದಿನಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಅಮೆರಿಕದ ಹಿಂದೂ ಸಮುದಾಯದ ಪ್ರಮುಖ ನಾಯಕಿ ನೀಲಿಮಾ ಗೋಣುಗುಂಟ್ಲಾ ಅವರು ಭಾಗವಹಿಸಿದ್ದರು. ಹಿಂದೂ ಸಮುದಾಯದ ಬೆಂಬಲವನ್ನು ಸೂಚಿಸುವ ಸಲುವಾಗಿ ನೀಲಿಮಾ ಭಾಗವಹಿಸಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.

    ಯಾಕೆ ಈ ಓಲೈಕೆ?
    2016ರ ಪ್ರಕಾರ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟಿರುವ ಹಿಂದೂ ಸಮುದಾಯದವರಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಬಲಪಂಥಿಯ ಹಿಂದೂಗಳು ಟ್ರಂಪ್‌ ಪರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ನಡೆಸಿದ್ದರು. ಸಾಮಾಜಿಕ ಜಾಲತಾಣಗಳು ಚುನಾವಣೆಯಲ್ಲಿ ಭಾರೀ ಪ್ರಭಾವ ಬೀರುವ ಪರಿಣಾಮ ಈ ರೀತಿಯ ಪ್ರಚಾರ ಟ್ರಂಪ್‌ಗೆ ನೆರವು ನೀಡಿತ್ತು.

    ಅಮೆರಿಕ ನಂಬರ್‌ ಒನ್‌ ದೇಶವಾಗಿರುವ ಹಿಂದೆ ಭಾರತೀಯರ ಶ್ರಮವೂ ಇದೆ. ಅಮೆರಿಕಕ್ಕೆ ಎರಡನೇ ಅತಿ ಹೆಚ್ಚು ವಲಸೆ ಬಂದಿರುವುದು ಭಾರತೀಯರಿಂದ. ಬೌದ್ಧಿಕ ವಲಸೆಯಿಂದ ಅಮೆರಿಕಕ್ಕೆ ಅತ್ಯುತ್ತಮ ಶ್ರಮಿಕ ವರ್ಗ ಭಾರತದಿಂದ ಸಿಕ್ಕಿದೆ. ಪರಿಣಾಮ ತಂತ್ರಜ್ಞಾನ, ವೈದ್ಯಕೀಯ, ಸಂಶೋಧನೆ.. ಇತ್ಯಾದಿ ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆಯಿದೆ.

    ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಮ್ಯಾಡಿಸನ್‌ ಸ್ಕ್ಯಾರ್‌ ಭಾಷಣ, ಕಳೆದ ವರ್ಷ ಹ್ಯೂಸ್ಟನ್‍ನಲ್ಲಿ ನಡೆದ ಹೌಡಿ ಮೋಡಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಭಾರತೀಯರ ಸಂಘಟನೆ ಮತ್ತು ಶಕ್ತಿ ಏನು ಎನ್ನುವುದು ಅಮೆರಿಕನ್ನರಿಗೆ ಗೊತ್ತಾಗಿದೆ. ಈ ಎಲ್ಲ ಕಾರಣಕ್ಕೆ ಈ ವರ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಎರಡೂ ಪಕ್ಷಗಳು ಭಾರತೀಯರ ಓಲೈಕೆಗೆ ಮುಂದಾಗಿದೆ.

    ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮೊದಲ ಬಾರಿಗೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ್ದರು. ಮೋದಿ ಪ್ರಧಾನಿಯಾದ ಬಳಿಕ ಅಮೆರಿಕ ಭಾರತದ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ.

    2015ರಲ್ಲಿ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬರಾಕ್‍ ಒಬಾಮಾ ಆಗಮಿಸಿದ್ದರು. ಈ ವರ್ಷ ಟ್ರಂಪ್‍ ಭಾರತದ ಪ್ರವಾಸಕ್ಕೆ ಬಂದಾಗ ಅಹಮದಾಬಾದ್‍ನಲ್ಲಿ ‘ನಮಸ್ತೇ ಟ್ರಂಪ್‍’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಕೋವಿಡ್‍ 19 ವೇಳೆ ಮೇ ತಿಂಗಳಿನಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಅಂಗವಾಗಿ ಶ್ವೇತ ಭವನದಲ್ಲಿ ವೇದ ಮಂತ್ರ ಪಠಣ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮ್ ಭಟ್ ಅವರು ವೇದ ಮಂತ್ರ ಪಠಣ, ಯಜುರ್ವೇದ ಮಂತ್ರ ಪಠಣ ಮಾಡಿದ್ದರು.

  • ವೈಟ್ ಹೌಸ್ ಬಳಿ ಗೋಲಿಬಾರ್- ಸುರಕ್ಷಿತ ಸ್ಥಳಕ್ಕೆ ಟ್ರಂಪ್ ಶಿಫ್ಟ್

    ವೈಟ್ ಹೌಸ್ ಬಳಿ ಗೋಲಿಬಾರ್- ಸುರಕ್ಷಿತ ಸ್ಥಳಕ್ಕೆ ಟ್ರಂಪ್ ಶಿಫ್ಟ್

    ವಾಷಿಂಗ್ಟನ್: ಅಮೆರಿಕದ ವೈಟ್ ಹೌಸ್ ಬಳಿ ಗೋಲಿಬಾರ್ ನಡೆದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.

    ಗೋಲಿಬಾರ್ ನಡೆದ ವೇಳೆ ಟ್ರಂಪ್ ವೈಟ್ ಹೌಸ್ ನಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಗೋಲಿಬಾರ್ ಬಗ್ಗೆ ಸ್ವತಃ ಟ್ರಂಪ್ ಅವರೇ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

    ಗುಂಡಿನ ಸದ್ದು ಕೇಳುತ್ತಿದ್ದಂತೆ ಸೀಕ್ರೆಟ್ ಹೌಸ್ ಅಧಿಕಾರಿ ಕೂಡಲೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಗೆ ಗುಂಡು ತಗುಲಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    ವೈಟ್ ಹೌಸ್ ಹೊರಗಡೆ ಗೋಲಿಬಾರ್ ಆಗಿದ್ದು, ಪರಿಸ್ಥಿತಿ ಕಂಟ್ರೋಲ್ ನಲ್ಲಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಹೌಸ್ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಸೀಕ್ರೆಟ್ ಹೌಸ್ ಗುರಿಯಾಗಿಸಿ ಶೂಟ್ ಮಾಡಿದ ವ್ಯಕ್ತಿ ಗುಂಡಿನ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

  • ಅಮೆರಿಕದಲ್ಲಿ ಟಿಕ್‌ಟಾಕ್‌ ನಿಷೇಧಿಸುತ್ತೇವೆ – ಡೊನಾಲ್ಡ್‌ ಟ್ರಂಪ್‌

    ಅಮೆರಿಕದಲ್ಲಿ ಟಿಕ್‌ಟಾಕ್‌ ನಿಷೇಧಿಸುತ್ತೇವೆ – ಡೊನಾಲ್ಡ್‌ ಟ್ರಂಪ್‌

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ನಡೆಯನ್ನು ಅನುಸರಿದ್ದು ಚೀನಾದ ಟಿಕ್‌ಟಾಕ್‌ ಅಪ್ಲಿಕೇಶನ್‌ ಅನ್ನು ನಿಷೇಧಿಸುತ್ತೇನೆ ಎಂದು ಹೇಳಿದ್ದಾರೆ. ಟ್ರಂಪ್‌ ಯಾವಾಗ ನಿಷೇಧ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಯಾವುದೇ ವಿಚಾರವನ್ನು ತಿಳಿಸಿಲ್ಲ.

    ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಜುಲೈ ಮೊದಲ ವಾರದಲ್ಲಿ, ಟಿಕ್‌ಟಾಕ್‌ ಸೇರಿದಂತೆ ಚೀನಾದ ಹಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದರು.

    ಚೀನಾದ ಕಮ್ಯುನಿಸ್ಟ್‌ ಪಕ್ಷದಿಂದ ನಿಯಂತ್ರಿಸಲ್ಪಡುವ ಗುಪ್ತಚರ ಸಂಸ್ಥೆಗಳಿಗೆ ಅಲ್ಲಿನ ಕಂಪನಿಗಳು ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದರು.ಬೈಟ್‌ ಡ್ಯಾನ್ಸ್‌ ಕಂಪನಿಯ ಜನಪ್ರಿಯ ಕಿರು ವಿಡಿಯೋ ಅಪ್ಲಿಕೇಶನ್‌ ಟಿಕ್‌ಟಾಕ್‌ ಅನ್ನು ಅಮೆರಿಕದಲ್ಲಿ 8 ಕೋಟಿ ಜನ ಬಳಕೆ ಮಾಡುತ್ತಿದ್ದಾರೆ.

    ಈ ನಡುವೆ ಜಪಾನ್‌ನಲ್ಲಿ ಕೂಡ ಚೀನಾದ ಟಿಕ್‌ಟಾಕ್ ನಿಷೇಧಿಸಲು ಸರ್ಕಾರ ಮುಂದಾಗಿದೆ. ಜಪಾನ್‌ನ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಚೀನಾ ಮೂಲದ ಟಿಕ್‌ಟಾಕ್ ಅನ್ನು ನಿಷೇಧಿಸುವ ಕುರಿತು ಈಗಾಗಲೇ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ತೆಕ್ಕೆಗೆ ಟಿಕ್‌ಟಾಕ್‌ – ಖರೀದಿ ಮಾತುಕತೆ ಆರಂಭ

    ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಟಿಕ್‌ಟಾಕ್‌ ಅಪ್ಲಿಕೇಶನ್‌ ಭದ್ರತೆ ಮತ್ತು ದೇಶ ಪ್ರಜೆಗಳ ಖಾಸಗಿತನವನ್ನು ರಕ್ಷಿಸುವ ಸಂಬಂಧ ಟಿಕ್‌ಟಾಕ್‌ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಮೂಲಕ ಡಿಜಿಟಲ್‌ ಸ್ಟ್ರೈಕ್‌ ಮಾಡಿತ್ತು.

  • ಮೈಕ್ರೋಸಾಫ್ಟ್‌ ತೆಕ್ಕೆಗೆ ಟಿಕ್‌ಟಾಕ್‌ – ಖರೀದಿ ಮಾತುಕತೆ ಆರಂಭ

    ಮೈಕ್ರೋಸಾಫ್ಟ್‌ ತೆಕ್ಕೆಗೆ ಟಿಕ್‌ಟಾಕ್‌ – ಖರೀದಿ ಮಾತುಕತೆ ಆರಂಭ

    ವಾಷಿಂಗ್ಟನ್‌: ಮಾಹಿತಿ ತಂತ್ರಜ್ಞಾನ ಕಂಪನಿ ಮೈಕ್ರೋಸಾಫ್ಟ್‌ ಚೀನಿ ಟಿಕ್‌ಟಾಕ್‌ ಅಪ್ಲಿಕೇಶನ್‌ ಖರೀದಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಬೈಟ್‌ಡ್ಯಾನ್ಸ್‌ ಕಂಪನಿಯ ಟಿಕ್‌ಟಾಕ್‌ ಅಪ್ಲಿಕೇಶನ್‌ ಖರೀದಿ ಸಂಬಂಧ ಮಾತುಕತೆ ಆರಂಭವಾಗಿದೆ. ಸೋಮವಾರ ಈ ವಿಚಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

    ಮೈಕ್ರೋಸಾಫ್ಟ್‌ ಇಲ್ಲಿಯವರೆಗೂ ಸಾಮಾಜಿಕ ಜಾಲತಾಣಕ್ಕೆ ಮಾರುಕಟ್ಟೆಯ ಮೇಲೆ ಕಾಲಿಟ್ಟಿಲ್ಲ. ಈ ನಿಟ್ಟಿನಲ್ಲಿ ವಿಡಿಯೋ ಶೇರಿಂಗ್‌ ಖರೀದಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಖರೀದಿ ವಿಚಾರವಾಗಿ ಮೈಕ್ರೋಸಾಫ್ಟ್‌ ಮತ್ತು ಬೈಡ್‌ ಡ್ಯಾನ್ಸ್‌ ಕಂಪನಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ವಿದೇಶಿ ಹೂಡಿಕೆ ಇರುವ ಕಂಪನಿಯನ್ನು ಖರೀದಿಸಬೇಕಾದರೆ ಅಮೆರಿಕ ಸರ್ಕಾರದ ಅನುಮತಿ ಅಗತ್ಯವಾಗಿದೆ. ಅಮೆರಿಕ ಮತ್ತು ಚೀನಾ ಸಂಬಂಧ ಮೊದಲೇ ವ್ಯಾಪಾರ ಸಮರದಿಂದ ಹಳಸಿತ್ತು. ಈಗ ಕೋವಿಡ್‌ 19ನಿಂದಾಗಿ ಸಂಬಂಧ ಮತ್ತಷ್ಟು ಹಳಸಿದೆ. ಹೀಗಿರುವಾಗ ಸರ್ಕಾರ ಈ ಖರೀದಿ ಮಾತುಕತೆಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಎದ್ದಿದೆ.

    ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಜುಲೈ ಮೊದಲ ವಾರದಲ್ಲಿ, ಟಿಕ್‌ಟಾಕ್‌ ಸೇರಿದಂತೆ ಚೀನಾದ ಹಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದರು.

    ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಟಿಕ್‌ಟಾಕ್‌ ಅಪ್ಲಿಕೇಶನ್‌ ಭದ್ರತೆ ಮತ್ತು ದೇಶ ಪ್ರಜೆಗಳ ಖಾಸಗಿತನವನ್ನು ರಕ್ಷಿಸುವ ಸಂಬಂಧ ಟಿಕ್‌ಟಾಕ್‌ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಮೂಲಕ ಡಿಜಿಟಲ್‌ ಸ್ಟ್ರೈಕ್‌ ಮಾಡಿತ್ತು.

  • ಚೀನಾದ ಅಣತಿಯಂತೆ ವರ್ತಿಸುತ್ತಿರುವ ಆರೋಪ- WHOದಿಂದ ಹೊರ ಬರಲು ಅಮೆರಿಕ ಸಿದ್ಧತೆ

    ಚೀನಾದ ಅಣತಿಯಂತೆ ವರ್ತಿಸುತ್ತಿರುವ ಆರೋಪ- WHOದಿಂದ ಹೊರ ಬರಲು ಅಮೆರಿಕ ಸಿದ್ಧತೆ

    – ವಿಶ್ವ ಆರೋಗ್ಯ ಸಂಸ್ಥೆ ಚೀನಾದ ನಿಯಂತ್ರಣದಲ್ಲಿದೆ ಎಂದ ಟ್ರಂಪ್

    ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಚೀನಾದ ಅಣತಿಯಂತೆ ವರ್ತಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಅಮೆರಿಕ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಡಬ್ಲ್ಯೂಎಚ್‍ಒದಿಂದ ಹೊರಬರುವ ಅಧಿಕೃತ ಪ್ರಕ್ರಿಯೆಯನ್ನು ಆರಂಭಿಸಿದೆ.

    ಅಮೆರಿಕಾ ತನ್ನ 2,993 ಕೋಟಿ ರೂ.(400 ಮಿಲಿಯನ್ ಡಾಲರ್) ನಿಧಿಯನ್ನು ವಾಪಸ್ ಪಡೆಯುವುದಾಗಿ ಡಬ್ಲ್ಯುಎಚ್‍ಒಗೆ ಹೇಳಿದ ಬೆನ್ನಲ್ಲೇ, ಇದೀಗ ಡಬ್ಲ್ಯುಎಚ್‍ಒದಿಂದ ಹೊರ ಬರುವ ಅಧಿಕೃತ ಪ್ರಕ್ರಿಯೆಯನ್ನು ಆರಂಭಿಸಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಡಬ್ಲ್ಯುಎಚ್‍ಒ ಚೀನಾದೊಂದಿಗೆ ಶಾಮಿಲಾಗಿದ್ದು, ಹೀಗಾಗಿಯೇ ಕೊರೊನಾ ವೈರಸ್‍ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸುವಲ್ಲಿ ತಡ ಮಾಡಿತು ಎಂದು ಅಮೆರಿಕ ಆರೋಪಿಸಿದೆ. ಅಲ್ಲದೆ ಟ್ರಂಪ್ ನೇತೃತ್ವದ ಸರ್ಕಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರಿಗೆ ಅಧಿಕೃತ ನೋಟಿಸ್ ಕಳುಹಿಸಿದೆ.

    ವಿಶ್ವಸಂಸ್ಥೆಯ ಮುಖ್ಯ ವಕ್ತಾರ ಹಾಗೂ ಡಬ್ಲ್ಯುಎಚ್‍ಒ ಈ ಕುರಿತು ಖಚಿತಪಡಿಸಿದ್ದು, ಜಿನಿವಾದ ಮುಖ್ಯ ಕಚೇರಿಗೆ ಅಮೆರಿಕ ನೋಟಿಸ್ ನೀಡಿದೆ. ಇನ್ನೊಂದು ವರ್ಷದಲ್ಲಿ ಅಂದರೆ 2021ರ ಜುಲೈ 6ರಿಂದ ಬಿಡುಗಡೆ ಜಾರಿಗೆ ಬರಲಿದೆ ಎಂದು ತಿಳಿಸಿದೆ.

    ಅಮೆರಿಕ ಸರ್ಕಾರದ ಈ ನಿರ್ಧಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ಕುರಿತು ಅಮೆರಿಕದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. 2020ರ ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಡಬ್ಲ್ಯುಎಚ್‍ಒದಿಂದ ಹೊರ ಬರುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ಅಲ್ಲಿನ ಡೆಮೊಕ್ರೆಟಿಕ್ ಪಕ್ಷ ಗುಡುಗಿದೆ.

    ಜಾಗತಿಕ ಮಟ್ಟದಲ್ಲಿ ಆರೋಗ್ಯ ಬಲಪಡಿಸಲು ಅಮೆರಿಕ ತೊಡಗಿಕೊಂಡಾಗ ಅಮೆರಿಕನ್ನರು ಸುರಕ್ಷಿತವಾಗಿರುತ್ತಾರೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದ ಮೊದಲ ದಿನವೇ ಡಬ್ಲ್ಯುಎಚ್‍ಒಗೆ ಅಮೆರಿಕವನ್ನು ಮತ್ತೆ ಸೇರ್ಪಡೆಗೊಳಿಸುತ್ತೇನೆ. ವಿಶ್ವ ಮಟ್ಟದಲ್ಲಿ ನಮ್ಮ ನಾಯಕತ್ವವನ್ನು ಮರು ಸ್ಥಾಪಿಸುತ್ತೇನೆ ಎಂದು ಅಮೆರಿಕ ವಿರೋಧ ಪಕ್ಷದ ನಾಯಕ ಬಿಡೇನ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಆರಂಭವಾದಾಗಿನಿಂದ ಡಬ್ಲ್ಯುಎಚ್‍ಒ ಹಾಗೂ ಅಮೆರಿಕದ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದು, ವಿಶ್ವ ಸಂಸ್ಥೆಯ ಅಂಗಸಂಸ್ಥೆ ಡಬ್ಲ್ಯುಎಚ್‍ಒ ಚೀನಾದೊಂದಿಗೆ ಶಾಮೀಲಾಗಿದೆ, ಒಳ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಕೊರೊನಾ ವೈರಸ್‍ನ್ನು ಸಾಂಕ್ರಾಮಿಕ ರೋಗ ಎಂದು ಘೊಷಿಸುವಲ್ಲಿ ಡಬ್ಲುಎಚ್‍ಒ ತಡ ಮಾಡಿತು ಎಂದು ಟ್ರಂಪ್ ಆರೋಪಿಸಿದ್ದರು. ಅಲ್ಲದೆ ಡಬ್ಲುಎಚ್‍ಒನಲ್ಲಿರುವ ಅಮೆರಿಕದ 400 ಮಿಲಿಯನ್ ಡಾಲರ್ ಹಣವನ್ನು ಹಿಂಪಡೆಯುವುದಾಗಿ ಬೆದರಿಕೆ ಹಾಕಿತ್ತು. ಈ ಹಣವನ್ನು ವಿಶ್ವಾದ್ಯಂತ ಹಾಗೂ ಅರ್ಹ, ತುರ್ತು, ಜಾಗತಿಕ ಸಾರ್ವಜನಿಕ ಆರೋಗ್ಯದ ಅಗತ್ಯತೆಗಳಿಗೆ ಬಳಸುವುದಾಗಿ ಹೇಳಿದ್ದರು.

    ವಿಶ್ವ ಆರೋಗ್ಯ ಸಂಸ್ಥೆಯನ್ನು ಚೀನಾ ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು. ಆದರೆ ಡೆಮಾಕ್ರೆಟಿಕ್ ಪಕ್ಷದ ಸಂಸದರು ಟ್ರಂಪ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೊರೊನಾ ವೈರಸ್ ನಿಯಂತ್ರಿಸಲಾಗದೆ ಈ ರೀತಿ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • ಟೆಕ್ಕಿಗಳಿಗೆ ಬಿಗ್‌ ಶಾಕ್‌ ನೀಡಿದ ಟ್ರಂಪ್ – ಭಾರತದ ಕಂಪನಿಗಳ ಮೇಲೆ ಪರಿಣಾಮ ಏನು?

    ಟೆಕ್ಕಿಗಳಿಗೆ ಬಿಗ್‌ ಶಾಕ್‌ ನೀಡಿದ ಟ್ರಂಪ್ – ಭಾರತದ ಕಂಪನಿಗಳ ಮೇಲೆ ಪರಿಣಾಮ ಏನು?

    ‌- ವರ್ಷಾಂತ್ಯದವರೆಗೆ ಎಚ್‌1ಬಿ ವೀಸಾ ಸಿಗಲ್ಲ
    – ಅಮೆರಿಕದ ಹಿತ ಕಾಪಾಡಲು ನಿರ್ಧಾರ ಎಂದ ಟ್ರಂಪ್

    ವಾಷಿಂಗ್ಟನ್‌: ಭಾರತೀಯ ಟೆಕ್ಕಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶಾಕ್‌ ನೀಡಿದ್ದಾರೆ. ಈ ವರ್ಷಾಂತ್ಯದವರೆಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳುವ ಮಂದಿಗೆ ವೀಸಾ ನೀಡದೇ ಇರಲು ಟ್ರಂಪ್‌ ತೀರ್ಮಾನ ಕೈಗೊಂಡಿದ್ದಾರೆ.

    ಎಚ್‌1ಬಿ, ಎಲ್‌ ಮತ್ತು ತಾತ್ಕಾಲಿಕ ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುತ್ತಿದ್ದ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ವೀಸಾವನ್ನು ಡಿಸೆಂಬರ್‌ ಅಂತ್ಯದವರೆಗೆ ನೀಡದೇ ಇರಲು ಅಮೆರಿಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಕೋವಿಡ್‌ 19ನಿಂದಾಗಿ ದೇಶದಲ್ಲಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಜನರ ಉದ್ಯೋಗವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಟ್ರಂಪ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್‌ 31ರವರೆಗೆ ವೀಸಾ ನಿರ್ಬಂಧಿಸುವ ನಿರ್ಧಾರಕ್ಕೆ ಟ್ರಂಪ್‌ ಸೋಮವಾರ ಸಹಿ ಹಾಕಿದ ಕಾರಣ ಇನ್ನು ಮುಂದೆ ಡಿಸೆಂಬರ್‌ ವರೆಗೆ ವಿದೇಶದ ಯಾವ ವ್ಯಕ್ತಿ ಅಮೆರಿಕದಲ್ಲಿ ತೆರಳಿ ಉದ್ಯೋಗ ಮಾಡಲು ಸಾಧ್ಯವಿಲ್ಲ.

    2020ರ ಫೆಬ್ರವರಿ ಮತ್ತು ಏಪ್ರಿಲ್‌ ನಲ್ಲಿ 2 ಕೋಟಿಗೂ ಹೆಚ್ಚು ಅಮೆರಿಕದ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಪತಿಗಳು ಈ ಜಾಗವನ್ನು ಭರ್ತಿ ಮಾಡಲು ಎಚ್‌-1ಬಿ ಮತ್ತು ಎಲ್‌ ವೀಸಾ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಅಮೆರಿಕದ ಯುವ ಜನತೆ ಉದ್ಯೋಗವನ್ನು ಕಳೆದುಕೊಂಡಿದ್ದಾರ. ಈ ನಿಟ್ಟಿನಲ್ಲಿ ಅವರನ್ನೆಲ್ಲ ರಕ್ಷಿಸಲು ಉದ್ಯೋಗ ವೀಸಾವನ್ನು ನಿರ್ಬಂಧಿಸಲಾಗಿದೆ ಎಂದು ಟ್ರಂಪ್‌ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಟ್ರಂಪ್‌ ನಿರ್ಧಾರಕ್ಕೆ ಈಗಾಗಲೇ ಭಾರೀ ವಿರೋಧ ವ್ಯಕ್ತವಾಗಿದೆ. ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಅಮೆರಿಕದ ಆರ್ಥಿಕತೆಯ ಯಶಸ್ಸಿಗೆ ವಲಸೆ ಬಹಳಷ್ಟು ನೆರವಾಗಿದೆ. ಟೆಕ್ನಾಲಜಿಯಲ್ಲಿ ಗೂಗಲ್‌ ಜಾಗತಿಕ ನಾಯಕನಾಗಲು ವಲಸೆ ಬಹಳಷ್ಟು ನೆರವಾಗಿದೆ. ಇಂದಿನ ಘೋಷಣೆಯಿಂದ ನಮಗೆ ನಿರಾಸೆಯಾಗಿದೆ. ನಾವು ವಲಸಿಗರ ಪರವಾಗಿ ಇರುತ್ತೇವೆ ಮತ್ತು ಎಲ್ಲರಿಗೂ ಕೆಲಸದ ಅವಕಾಶವನ್ನು ವಿಸ್ತರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏನಿದು ಎಚ್‌-1ಬಿ, ಎಚ್‌-2ಬಿ, ಎಲ್‌-1 ವೀಸಾ?
    ವಲಸಿಗರಿಗೆ ದೇಶದಲ್ಲಿ ಉದ್ಯೋಗ ನೀಡಲು ಅಮೆರಿಕ ಸರ್ಕಾರ ಮೂರು ರೀತಿಯ ವೀಸಾಗಳನ್ನು ನೀಡುತ್ತದೆ. 1952 ರಿಂದ ಅಮೆರಿಕ ಸರ್ಕಾರ ವಲಸಿಗರಿಗೆ ಉದ್ಯೋಗ ವೀಸಾವನ್ನು ನೀಡಿದೆ. ಹೆಚ್-1ಬಿ, ಹೆಚ್-2ಬಿ ಮತ್ತು ಎಲ್-1 ವೀಸಾ ಈ ಮೂರೂ ಕೂಡ ವರ್ಕ್ ವೀಸಾ ಮಾತ್ರ ಆಗಿದ್ದು ತಾತ್ಕಾಲಿಕವಾಗಿ ನೀಡಲಾಗುತ್ತದೆ. ಐಟಿ ಮತ್ತು ಇತರೇ ಕ್ಷೇತ್ರಗಳ ಉನ್ನತ ಮಟ್ಟ ಉದ್ಯೋಗಿಗಳಿಗೆ ಎಚ್‌1ಬಿ ವೀಸಾ ನೀಡುತ್ತದೆ. 7 ವರ್ಷದ ಅವಧಿಯವರೆಗೆ ಉದ್ಯೋಗ ಮಾಡಲು ಎಲ್‌1 ವೀಸಾ ನೀಡುತ್ತದೆ. ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಎಚ್‌2ಬಿ ವೀಸಾ ನೀಡುತ್ತದೆ.

    ಭಾರತೀಯರ ಮೇಲೆ ಪರಿಣಾಮ ಏನು?
    ಅಮೆರಿಕ ಸರ್ಕಾರ ಒಂದು ವರ್ಷಕ್ಕೆ ಗರಿಷ್ಟ 85 ಸಾವಿರ ಮಂದಿಗೆ ಮಾತ್ರ ಎಚ್‌-1ಬಿ ವೀಸಾ ನೀಡುತ್ತದೆ. ಭಾರತ ಐಟಿ ಕಂಪನಿಗಳು ಎಚ್‌-1ಬಿ ವೀಸಾದ ಅಡಿಯಲ್ಲಿ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುತ್ತದೆ. ವೀಸಾ ಅವಧಿ ವಿಸ್ತರಿಸದೇ ಇರುವ ಮತ್ತು ಜೂನ್‌ 23ಕ್ಕೆ ವೀಸಾ ಅವಧಿ ಅಂತ್ಯವಾಗುತ್ತದೋ ಅವರಿಗೆ ಮತ್ತೆ ವೀಸಾ ಸಿಗುವುದಿಲ್ಲ. 2020ರ ಏಪ್ರಿಲ್‌ 1 ರ ವೇಳೆ ಅಮೆರಿಕದ ಪೌರತ್ವ ಮತ್ತು ವಲಸೆ ವಿಭಾಗಕ್ಕೆ ಒಟ್ಟು 2.5 ಲಕ್ಷ ಮಂದಿ ಎಚ್‌-1ಬಿ ವೀಸಾಕ್ಕೆ ಅರ್ಜಿ ಹಾಕಿದ್ದು ಈ ಪೈಕಿ 1.84 ಲಕ್ಷ ಭಾರತೀಯರೇ ಆಗಿದ್ದಾರೆ.

    ಇಲ್ಲಿಯವರೆಗೆ ಲಾಟರಿ ಆಯ್ಕೆ ಮೂಲಕ ಅಮೆರಿಕದ ವೀಸಾ ಸಿಗುತ್ತಿತ್ತು. ಆದರೆ ಇನ್ನು ಮುಂದೆ ಕಂಪನಿಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಹೆಚ್ಚು ಕೌಶಲ್ಯ ಇರುವ ಉದ್ಯೋಗಿಗಳಿಗೆ ಮಾತ್ರ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಭಾರತದ ಐಟಿ ಕಂಪನಿಗಳು ಕಡಿಮೆ ಸಂಬಳ ನೀಡುವ ಮೂಲಕ ಭಾರತೀಯ ಟೆಕ್ಕಿಗಳನ್ನು ಉದ್ಯೋಗಕ್ಕೆ ಕಳುಹಿಸುತಿತ್ತು. ಒಂದು ವೇಳೆ ಅಮೆರಿಕದವರಿಗೆ ಉದ್ಯೋಗ ನೀಡಿದರೆ ಹೆಚ್ಚು ಸಂಬಳ ನೀಡಬೇಕಿತ್ತು.

    ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
    ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ 2017ರಲ್ಲಿ ನಿರ್ಧಾರ ಕೈಗೊಂಡಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

    ಈ ಮೊದಲು ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ 2017ರವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.

  • ನೀರು ಕುಡಿಯುತ್ತಿರುವ ವಿಡಿಯೋ ವೈರಲ್‌ – ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ?

    ನೀರು ಕುಡಿಯುತ್ತಿರುವ ವಿಡಿಯೋ ವೈರಲ್‌ – ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ?

    – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡು ಜನ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

    ಟ್ರಂಪ್‌ ಗ್ಲಾಸ್‌ನಲ್ಲಿ ನೀರು ಕುಡಿಯತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಿಂದಾಗಿ ಟ್ರಂಪ್‌ ಆರೋಗ್ಯ ಸಮಸ್ಯೆಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    ನಡೆದಿದ್ದು ಏನು?
    ಶನಿವಾರ ಅಮೆರಿಕ ಸೇನಾ ಅಕಾಡೆಮಿಯಲ್ಲಿನ ಪದವಿ ಸಮಾರಂಭದಲ್ಲಿ ಟ್ರಂಪ್‌ ಭಾಷಣ ಮಾಡುತ್ತಿದ್ದರು. ಈ ವೇಳೆ ಬಲಗೈಯಿಂದ ನೀರು ಕುಡಿಯಲು ಯತ್ನಿಸಿದ್ದು ಸಾಧ್ಯವಾಗದಿದ್ದಾಗ ಎಡಗೈ ಸಹಾಯ ಪಡೆದಿದ್ದಾರೆ. ನೀರು ಕುಡಿಯಲು ಬಹಳ ಕಷ್ಟ ಪಟ್ಟಿದ್ದನ್ನು ನೋಡಿ ಜನ ಈಗ ತಮ್ಮದೇ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮ ಮುಗಿಸಿ ಟ್ರಂಪ್‌ ಮೆಟ್ಟಿಲುಗಳಿಂದ ಇಳಿಯಲು ಬಹಳ ಕಷ್ಟಪಟ್ಟಿರುವ ವಿಡಿಯೋ ಸಹ ಹರಿದಾಡುತ್ತಿದೆ.

    ವಿಡಿಯೋ ಬಗ್ಗೆ ಚರ್ಚೆ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಟ್ರಂಪ್‌ ಇಳಿಯುವ ಸಂದರ್ಭದಲ್ಲಿ ಹಿಡಿದುಕೊಳ್ಳಲು ಹ್ಯಾಂಡ್ರೈಲ್‌ ಇರಲಿಲ್ಲ. ಹೀಗಾಗಿ ಜಾರಿ ಬೀಳದೇ ಇರಲು ನಿಧಾನವಾಗಿ ಇಳಿಯುತ್ತಿದ್ದೆ. ಫೇಕ್‌ ನ್ಯೂಸ್‌ ಗಳು ಇದನ್ನು ಸಂಭ್ರಮಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ವರ್ಣತಾರತಮ್ಯ ಗಲಾಟೆ ಜೋರಾಗಿದೆ. ಈ ವರ್ಷವೇ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಕಾರಣ ಟ್ರಂಪ್‌ ಈಗ ಏನೇ ಎಡವಟ್ಟು ಮಾಡಿದರೂ ಅದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತದೆ.

    ಈ ಹಿಂದೆ ಟ್ರಂಪ್‌ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ನಾನು ಮಾತ್ರೆಯನ್ನು ಸೇವಿಸಿದ್ದು, ಈ ಮಾತ್ರೆಯ ಬಗ್ಗೆ ನಾನು ಬಹಳಷ್ಟು ತಿಳಿದಿರುವುದಾಗಿ ಹೇಳಿದ್ದರು. ಭಾರತ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧಿಗಳನ್ನು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಿದೆ.

  • ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಕರೆ – ಮಹತ್ವದ ಮಾತುಕತೆ

    ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಕರೆ – ಮಹತ್ವದ ಮಾತುಕತೆ

    ನವದೆಹಲಿ: ಅಮೆರಿಕಾದಲ್ಲಿ ನಡೆಯಲಿರುವ ಜಿ-7 ಶೃಂಗ ಸಭೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದ ಟ್ರಂಪ್ ಜಿ-7 ದೇಶಗಳ ಗುಂಪನ್ನು ವಿಸ್ತರಿಸಲು ನಿರ್ಧರಿಸಿದ್ದು ಭಾರತವೂ ಸೇರಿದಂತೆ ಹಲವು ದೇಶಗಳಿಗೆ ಸದಸ್ಯತ್ವ ನೀಡುವುದಾಗಿ ತಿಳಿಸಿದ್ದಾರೆ.

    ಟ್ರಂಪ್ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದು, ಅಮೆರಿಕ ನೇತೃತ್ವದಲ್ಲಿ ಜಿ-7 ದೇಶಗಳ ಜೊತೆಗೆ ಕಾರ್ಯನಿರ್ವಹಿಸಲು ಭಾರತ ಉತ್ಸುಕವಾಗಿದೆ ಎಂದಿದ್ದಾರೆ. ಉಭಯ ನಾಯಕರ ಮಾತುಕತೆ ವೇಳೆ ಅಮರಿಕಾದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ, ಅಮೆರಿಕಾ-ಭಾರತದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸುಧಾರಣೆಗಳ ಬಗ್ಗೆ ಚರ್ಚಿಸಿದ್ದಾರೆ.

    ಇದೇ ವೇಳೆ ಲಡಾಕ್ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗಳ ಬಗ್ಗೆಯೂ ಮಹತ್ವದ ಮಾತುಕತೆ ನಡೆದಿದೆ. ಈ ಬೆಳವಣಿಗೆ ಭಾರತ ಮತ್ತು ಅಮೆರಿಕದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

  • ವೈಟ್‍ಹೌಸ್ ಮುಂದೆ ಉಗ್ರ ಪ್ರತಿಭಟನೆ:  ಭೂಗತ  ಬಂಕರ್‌ನಲ್ಲಿ ಅಡಗಿದ ಟ್ರಂಪ್

    ವೈಟ್‍ಹೌಸ್ ಮುಂದೆ ಉಗ್ರ ಪ್ರತಿಭಟನೆ: ಭೂಗತ ಬಂಕರ್‌ನಲ್ಲಿ ಅಡಗಿದ ಟ್ರಂಪ್

    ವಾಷಿಂಗ್ಟನ್: ಅಮೆರಿಕದಲ್ಲಿ ಜನರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಅವರನ್ನು ಟ್ರಂಪ್ ಶ್ವೇತ ಭವನದ ನೆಲಮಹಡಿಯಲ್ಲಿರುವ ಭೂಗತ ಬಂಕರ್ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.

    ಶುಕ್ರವಾರ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಶ್ವೇತಭವನದ ಮುಂಭಾಗದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಭದ್ರತಾ ಅಧಿಕಾರಿಗಳ ಸಲಹೆ ಹಿನ್ನೆಲೆಯಲ್ಲಿ ಟ್ರಂಪ್ ನೆಲಮಹಡಿ ಬಂಕರ್‌ಗೆ ತೆರಳಿದ್ದರು ಎಂದು ವರದಿಯಾಗಿದೆ.

    ಎಲ್ಲಿದೆ?
    ಶ್ವೇತಭವನದ ಪೂರ್ವ ಭಾಗದ ನೆಲಮಹಡಿಯಲ್ಲಿ ಈ ಬಂಕರ್ ನಿರ್ಮಾಣಗೊಂಡಿದೆ. ಇದನ್ನು ಅಧ್ಯಕ್ಷೀಯ ತುರ್ತು ಕಾರ್ಯಾಚರಣೆ ಕೇಂದ್ರ(Presidential Emergency Operations Center -PEOC) ಎಂದು ಕರೆಯಲಾಗುತ್ತದೆ. ತುರ್ತು ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರನ್ನು ರಕ್ಷಿಸಲೆಂದೇ ಈ ಬಂಕರ್ ನಿರ್ಮಾಣ ಮಾಡಲಾಗಿದೆ. ಎಲ್ಲ ಆಧುನಿಕ ಸಂವಹನ ಸಾಧನಗಳು ಬಂಕರ್ ನಲ್ಲಿದೆ.

    ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಾಷಿಂಗ್ಟನ್ ಮೇಲೆ ವಾಯುದಾಳಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಅಧ್ಯಕ್ಷ ಫ್ರಾಂಕ್ಲಿನ್ ರೂಸ್‍ವೆಲ್ಟ್ ಈ ಬಂಕರ್ ನಲ್ಲಿ ಆಶ್ರಯ ಪಡೆದಿದ್ದರು. 2001ರ ಸೆಪ್ಟೆಂಬರ್ 11 ರಂದು ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಅಲ್‍ಖೈದಾ ಉಗ್ರರಿಂದ ದಾಳಿ ನಡೆದ ಬಳಿಕ ಅಮೆರಿಕದ ಹಲವು ಕಚೇರಿಗಳು ಈ ಬಂಕರ್ ಗೆ ಶಿಫ್ಟ್ ಆಗಿತ್ತು.

    ಪ್ರತಿಭಟನೆ ಯಾಕೆ?
    ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬ ನಕಲಿ ನೋಟು ಚಲಾವಣೆಯ ಆರೋಪಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ. ಕುತ್ತಿಗೆ ಮೇಲೆ ಮೊಣಕಾಲನ್ನು ಇರಿಸಿ ಹತ್ಯೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕ್ರೂರತ್ವಕ್ಕೆ ಆಫ್ರಿಕನ್ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಬಲಿಯಾಗಿದ್ದನ್ನು ಖಂಡಿಸಿ ಅಲ್ಲಿನ ಜನ ದಂಗೆ ಎದ್ದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅಮೆರಿಕದ ವಿವಿಧ ನಗರಗಳಲ್ಲಿ ಜಸ್ಟೀಸ್ ಫಾರ್ ಫ್ಲಾಯ್ಡ್, ಐ ಕಾಂಟ್ ಬ್ರೀತ್ ಹೆಸರಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ.

    https://twitter.com/kishkindha/status/1267360169773748224

    ಅನೇಕ ಕಡೆ ಪೊಲೀಸ್ ವಾಹನಗಳು, ರೆಸ್ಟೋರೆಂಟ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಆಶ್ರುವಾಯು, ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ. ಆದರೆ ಇದನ್ನು ಜನ ಲೆಕ್ಕಿಸುತ್ತಿಲ್ಲ. ಅಮೆರಿಕ ಸರ್ಕಾರ, ಫ್ಲಾಯ್ಡ್ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ.

    ಮುಂಜಾಗ್ರತಾ ಕ್ರಮವಾಗಿ ಲಾಸ್ ಏಂಜಲೀಸ್, ಡೆನ್ವೆರ್, ಮಿಯಾಮಿ, ಅಟ್ಲಾಂಟಾ, ಚಿಕಾಗೋ, ಲೂಯಿಸ್‍ವಿಲ್ಲೆ, ಮಿನಿಯಾಪೊಲೀಸ್, ಸೈಂಟ್ ಪೌಲ್, ಕೊಲಂಬಸ್, ಫಿಲಿಡೆಲ್ಫಿಯಾ, ಸಿಯಾಟೆಲ್ ಸೇರಿ ಹಲವು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ಸ್ ಗಳನ್ನು  ಬಳಸಲಾಗುತ್ತಿದೆ.

  • ಟ್ರಂಪ್‍ರನ್ನ ಭಾರತಕ್ಕೆ ಕರೆತರದಿದ್ದರೆ ಕೊರೊನಾ ಹೆಚ್ಚಾಗ್ತಿರಲಿಲ್ಲ: ಸಿದ್ದರಾಮಯ್ಯ

    ಟ್ರಂಪ್‍ರನ್ನ ಭಾರತಕ್ಕೆ ಕರೆತರದಿದ್ದರೆ ಕೊರೊನಾ ಹೆಚ್ಚಾಗ್ತಿರಲಿಲ್ಲ: ಸಿದ್ದರಾಮಯ್ಯ

    – ಪಿಪಿಇ ಕಿಟ್ ಕೊಡಿ ಅಂದ್ರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾರೆ
    – ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ವಾಗ್ದಾಳಿ
    – ಬಿಎಸ್‍ವೈ ಸರ್ಕಾರ ಬಿದ್ರೆ ನಮ್ಮ ಕೈವಾಡ ಇರಲ್ಲ

    ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನ ಭಾರತಕ್ಕೆ ಕರೆದುಕೊಂಡು ಬಾರದಿದ್ದರೆ ಕೊರೊನಾ ವೈರಸ್ ಹೆಚ್ಚಾಗುತ್ತಿರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಕುಮಾರಕೃಪ ನಂಬರ್ 1 ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಹಬ್ಬಿದ್ದನ್ನು ತಬ್ಲಿಘಿಗಳ ಮೇಲೆ ಡೈವರ್ಟ್ ಮಾಡಲಾಯಿತು. ಅಮೆರಿಕ, ಇಟಲಿ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತಬ್ಲಿಘಿಗಳು ಇದ್ರಾ? ಕೊರೊನಾ ಸಂಕಷ್ಟದ ಸಮಯದಲ್ಲೂ ರಾಜಕೀಯ ಮಾಡಿದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.

    ದೇಶದಲ್ಲಿ ಮಾರ್ಚ್ 1ರಿಂದಲೇ ವಿಮಾನ ಸಂಪೂರ್ಣ ಬಂದ್ ಮಾಡಬೇಕಿತ್ತು. ತಬ್ಲಿಘಿಗಳಿಗೆ ಯಾಕೆ ಸಮಾವೇಶ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದರು. ಕೇಂದ್ರ ಸರ್ಕಾರದ ಗುಪ್ತಚರ ಏನಾಗಿತ್ತು? ಇಲ್ಲಿನ ತಬ್ಲಿಘಿಗಳಿಗೆ ಬೇರೆ ದೇಶದಿಂದ ಬಂದವರಿಂದ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದರು.

    ನರೇಂದ್ರ ಮೋದಿ ಅವರು 2019ರ ಮೇ 30ರಲ್ಲಿ ಎರಡನೇ ಅವಧಿಗೆ ಪ್ರಧಾನಿಯಾದರು. ದೇಶದ ಜನ ಅವರಿಗೆ ಎರಡನೇ ಅವಧಿಗೂ ಅವಕಾಶ ಕಲ್ಪಿಸಿದ್ದಾರೆ. ಮೊದಲ ಅವಧಿಯಲ್ಲಿ ಅವರ ಆಡಳಿತ ಸಂಪೂರ್ಣವಾಗಿ ವೈಪಲ್ಯವನ್ನು ಕಂಡಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಕೆಲಮಟ್ಟಕ್ಕೆ ಹೋಗಿತ್ತು. ಮೊದಲ 5 ವರ್ಷದಲ್ಲಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಸುಳ್ಳುಗಳನ್ನು ಹೇಳುತ್ತಿದ್ದರು. 6ನೇ ವರ್ಷದಲ್ಲೂ ಕೂಡ ಅವರ ಸುಳ್ಳು ಮುಂದುವರಿದಿದೆ. ಇದೇ ಅವರ ಒಂದು ವರ್ಷದ ಸಾಧನೆ ಎಂದು ವಾಗ್ದಾಳಿ ನಡೆಸಿದರು.

    ಕೋವಿಡ್ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ. ಮಾರ್ಚ್ 8ರಂದು ಕರ್ನಾಟಕದಲ್ಲಿ ಮೊದಲ ಕೇಸ್ ಬಂದಿತ್ತು. ನಮ್ಮ ರಾಜ್ಯಕ್ಕೆ ಪಿಪಿಇ ಕಿಟ್ ಯಾವಾಗ ಬಂತು? ಹತ್ತು ಲಕ್ಷದಲ್ಲಿ ಹತ್ತು ಸಾವಿರ ಜನರಿಗೆ ಟೆಸ್ಟ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ದೇಶದಲ್ಲಿ 2,800, ರಾಜ್ಯದಲ್ಲಿ 4,100 ಜನರಿಗೆ ಮಾತ್ರ ಟೆಸ್ಟ್ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ನಂಬರ್ 1 ಅಂತ ಹೇಳುತ್ತಿದ್ದಾರೆ. ಆದರೆ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಪಿಪಿಇ ಕಿಟ್ ಕೊಡಿ ಅಂದ್ರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾರೆ. ಇದು ಅವರ ಸಾಧನೆ ಎಂದು ದೂರಿದರು.

    ಲಾಕ್‍ಡೌನ್ ಆಗಿ ಕೆಲಸವೇ ಇಲ್ಲದವರಿಗೆ ದುಡ್ಡು ಎಲ್ಲಿಂದ ಬರುತ್ತದೆ? ವೃತ್ತಿಪರ ಸಮುದಾಯಕ್ಕೆ 10 ಸಾವಿರ ರೂ. ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ 10 ಸಾವಿರ ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ ಅವರು ಮಾಡಿದ್ದೇನು? ಏನು ಮಾಡಲಿಲ್ಲ ಎಂದು ಕಿಡಿಕಾರಿದರು.

    ಬಿಎಸ್‍ವೈ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳು ಆಯ್ತು. ಪ್ರವಾಹ ಸಂತ್ರಸ್ಥರಿಗೆ ಮನೆ ಕಟ್ಟಿಕೊಟ್ಟಿಲ್ಲ. ಇದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಿಲ್ಲ. ಒಂದು ಲಕ್ಷ ಕೋಟಿ ನಷ್ಟ ಆಗಿತ್ತು. ಒಂದು ಸರ್ವೇ ಕೂಡ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕೇಳುವ ಧೈರ್ಯ ಸಿಎಂ ಅವರಿಗೆ ಇದೆಯಾ ಎಂದು ಪ್ರಶ್ನಿಸಿದರು.

    ಸಿಎಂ ಯಡಿಯೂರಪ್ಪ ನಮ್ಮ ಲೀಡರ್ ಅಲ್ಲ. ಮುಖ್ಯಮಂತ್ರಿ ಮಾತ್ರ ಅಂತ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರು ನಾಯಕರಲ್ಲ ಅಂತ ಒಪ್ಪಿಕೊಂಡಿಲ್ಲ. ಅವರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಿಜೆಪಿಯವರ ಆಂತರಿಕ ಕಚ್ಚಾಟದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದರು.

    ಮಾಜಿ ಸಚಿವ ಉಮೇಶ್ ಕತ್ತಿ ನನ್ನ ಸ್ನೇಹಿತ. ಜೆ.ಎಚ್.ಪಟೇಲ್ ಸರ್ಕಾರದಲ್ಲಿ ನಾನು ಡಿಸಿಎಂ, ಅವರು ಲೋಕೋಪಯೋಗಿ ಸಚಿವರಾಗಿದ್ದರು. ಹಾಗಾಗಿ ನಮ್ಮಿಬ್ಬರ ಸ್ನೇಹ ಚೆನ್ನಾಗಿದೆ. ಉಮೇಶ್ ಕತ್ತಿ ನನ್ನ ಭೇಟಿಯಾಗಿಲ್ಲ. ಇಂತಹ ಭ್ರಷ್ಟ ಸರ್ಕಾರ ಹೋಗಬೇಕು. ಅವತ್ತು ಪ್ರಧಾನಿ ಮೋದಿ ಶೇ.10 ಸರ್ಕಾರ ಅಂತ ನಮ್ಮ ಮೇಲೆ ಆರೋಪ ಮಾಡಿದ್ದರು. ಇವತ್ತು ಎಷ್ಟು ಪರ್ಸೆಂಟ್ ಸರ್ಕಾರ ಎನ್ನುವುದನ್ನ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಈ ಕೆಟ್ಟ ಸರ್ಕಾರ ಇರಬಾರದು, ಹೋಗಬೇಕು ಎಂದು ಗುಡುಗಿದರು.

    ಬಿಜೆಪಿ ಅಸಮಾಧಾನ ಶುರುವಾಗಿದೆ. ಹೀಗಾಗಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳಿದ್ದಾರೆ. ಅವರ ಜೊತೆಗೆ ಮಹೇಶ್ ಕುಮಟಳ್ಳಿ ಬಿಟ್ರೆ ಬೇರೆ ಯಾರು ಹೋಗಲಿಲ್ಲ. ಆದ್ರೆ ಕುಮಟಳ್ಳಿ ಅವರನ್ನು ಮಂತ್ರಿ ಮಾಡಲಿಲ್ಲ. ಈ ಸರ್ಕಾರ ಬಿಜೆಪಿ ಅವರಿಂದಲೇ ಬೀಳುವ ಸಾಧ್ಯತೆ ಇದೆ. ಸರ್ಕಾರ ಬಿದ್ರೆ ನಮ್ಮ ಕೈವಾಡ ಇರಲ್ಲ. ಇಷ್ಟೊಂದು ಕೆಟ್ಟ ಭ್ರಷ್ಟ ಸರ್ಕಾರ ನಾನು ನೋಡಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸರ್ಕಾರ ಹೋಗುವುದು ಉತ್ತಮ ಎಂದು ವಾಗ್ದಾಳಿ ನಡೆಸಿದರು.

    ನನ್ನ ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎನ್ನುವುದು ಸುಳ್ಳು. ಒಂದು ವೇಳೆ ಕೊಟ್ಟಿದ್ದರೆ ದಾಖಲೆ ತೋರಿಸಲಿ. ನಾನು ಒಬ್ಬ ಶಾಸಕ, ಸರ್ಕಾರದಿಂದ ಅನುದಾನ ಪಡೆಯುವುದಕ್ಕೆ ಅರ್ಹ ಎಂದು ಹೇಳಿದರು.