Tag: donald trump

  • ಅಮೆರಿಕ ಶಟ್‌ಡೌನ್‌ -7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ!

    ಅಮೆರಿಕ ಶಟ್‌ಡೌನ್‌ -7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ!

    – ರಿಪಬ್ಲಿಕನ್, ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೆ
    – ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳಿಗೆ ಸಮಸ್ಯೆಯಿಲ್ಲ

    ವಾಷಿಂಗ್ಟನ್‌: ವಿಶ್ವದ ದೊಡ್ಡಣ್ಣ ಅಂತ ಹೇಳಿಕೊಳ್ಳುವ ಅಮೆರಿಕ (USA) ಇದೀಗ ಹಿಂದೆಂದೂ ಕಾಣದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ.

    ಆಡಳಿತಾರೂಢ ಡೊನಾಲ್ಡ್‌ ಟ್ರಂಪ್‌ (Donald Trump) ರಿಪಬ್ಲಿಕನ್ ಪಕ್ಷ (Republican Party) ಮತ್ತು ವಿರೋಧ ಪಕ್ಷವಾದ ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದೆ. ಆರೋಗ್ಯ ಸೇವಾ ಅನುದಾನದ ಭಿನ್ನಾಭಿಪ್ರಾಯದಿಂದ ಮಧ್ಯಂತರ ಅನುದಾನದ ಮಸೂದೆಗೆ ಬಹುಮತ ಸಿಗದೇ ಬಿಲ್ ಪಾಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಶಟ್‌ಡೌನ್ ಆಗಿದ್ದು 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಭವಿಷ್ಯ ಅತಂತ್ರವಾಗಿದೆ.

    ರಿಪಬ್ಲಿಕನ್ ಪಕ್ಷವು ಮಂಡಿಸಿದ ಮಧ್ಯಂತರ ಅನುದಾನ ಮಸೂದೆಯನ್ನು ಡೆಮಾಕ್ರೆಟಿಕ್ (Democartic) ಸದಸ್ಯರು ಸೆನೆಟ್‌ನಲ್ಲಿ ವಿರೋಧಿಸಿದರು. ತಮ್ಮ ಪ್ರಮುಖ ಬೇಡಿಕೆಗಳನ್ನು ಈ ಮಸೂದೆಯಲ್ಲಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿಬಾಗ್ರಾಮ್‌ ವಾಯುನೆಲೆ | ಅಮೆರಿಕ ವಿರುದ್ಧ ಯುದ್ಧಕ್ಕೂ ಸೈ ಎಂದ ತಾಲಿಬಾನ್‌ – ಏನಿದು ವಿವಾದ?

    ಅಫೋರ್ಡಬಲ್ ಕೇರ್ ಆಕ್ಟ್ ಅಂದರೆ ಒಬಾಮಾಕೇರ್ ಅಡಿಯಲ್ಲಿ ಲಕ್ಷಾಂತರ ಜನರಿಗೆ ನೀಡಲಾಗುತ್ತಿರುವ ಹೆಲ್ತ್ ಇನ್ಸೂರೆನ್ಸ್ ಸಬ್ಸಿಡಿಗಳನ್ನು ಮುಂದುವರಿಸಬೇಕು ಎನ್ನುವುದು ಡೆಮಾಕ್ರೆಟಿಕ್‌ಗಳ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ರಿಪಬ್ಲಿಕನ್ನರು ಒಪ್ಪದ ಕಾರಣ ಸೆನೆಟ್‌ನಲ್ಲಿ 55-45 ಮತಗಳ ಅಂತರದಿಂದ ಬಿಲ್ ಬಿದ್ದು ಹೋಯಿತು. ಇದರ ಪರಿಣಾಮವಾಗಿ ಆಡಳಿತ ಕಾರ್ಯನಿರ್ವಹಣೆಗೆ ಸರ್ಕಾರದ ಬಳಿ ಹಣವಿಲ್ಲದೇ ಬುಧವಾರ ಮಧ್ಯರಾತ್ರಿ 12:01ಕ್ಕೆ ಅಧಿಕೃತವಾಗಿ ಶಟ್‌ಡೌನ್ (US Shutdown) ಘೋಷಿಸಲಾಗಿದೆ.

    ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿಂದೆ ಈ ಹಿಂದೆ 2018ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿಯೇ 35 ದಿನಗಳ ಕಾಲ ಕೊನೆಯ ಬಾರಿ ಶಟ್‌ಡೌನ್ ಸಂಭವಿಸಿತ್ತು. ಈಗ ಎಷ್ಟು ದಿನ ಈ ಶಟ್‌ಡೌನ್ ಇರಲಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ.

    ಅಮೆರಿಕ ಶಟ್‌ಡೌನ್ ಏನೆಲ್ಲಾ ಎಫೆಕ್ಟ್?
    ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳು ಮುಂದುವರಿಯಲಿದ್ದು ಕಾನೂನಿನ ಪ್ರಕಾರ, ಅಗತ್ಯ ಸೇವೆಗಳ ನೌಕರರು ಕೆಲಸ ಮಾಡಲೇಬೇಕು. ಆದರೆ ಅವರಿಗೆ ಶಟ್‌ಡೌನ್ ಮುಗಿಯುವವರೆಗೂ ವೇತನ ಸಿಗುವುದಿಲ್ಲ. ಸೇನಾ ಸಿಬ್ಬಂದಿ, ಗಡಿ ಭದ್ರತಾ ಪಡೆ, ಮತ್ತು ಕಾನೂನು ಜಾರಿ ಸಂಸ್ಥೆಗಳು ಕರ್ತವ್ಯದಲ್ಲಿರುತ್ತವೆ.

    ಆಸ್ಪತ್ರೆಗಳಲ್ಲಿನ ವೈದ್ಯಕೀಯ ಆರೈಕೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಮುಂದುವರಿಯುತ್ತದೆ. ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್ ಚೆಕ್‌ಗಳನ್ನು ಫಲಾನುಭವಿಗಳಿಗೆ ಕಳುಹಿಸಲಾಗುತ್ತದೆ. ನಾಸಾದ ಬಾಹ್ಯಾಕಾಶ ಯೋಜನೆಗಳು ಮತ್ತು ಅಧ್ಯಕ್ಷ ಟ್ರಂಪ್‌ರ ವಲಸೆ ನೀತಿಗೆ ಸಂಬಂಧಿಸಿದ ಕಾರ್ಯಗಳು ಮುಂದುವರಿಯಲಿವೆ. ಇದನ್ನೂ ಓದಿ:  ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ಅಗತ್ಯವಲ್ಲದ ಎಂದು ಪರಿಗಣಿಸಲಾದ ಸುಮಾರು 7.50 ಲಕ್ಷ ನೌಕರರನ್ನು ವೇತನರಹಿತ ಕಡ್ಡಾಯ ರಜೆ ಮೇಲೆ ಕಳಿಸಲಾಗುತ್ತದೆ. ಶಿಕ್ಷಣ ಇಲಾಖೆಯ ಶೇ. 90ರಷ್ಟು ಸಿಬ್ಬಂದಿ ರಜೆಯಲ್ಲಿರುತ್ತಾರೆ. ರಾಷ್ಟ್ರೀಯ ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ.

    ಸಣ್ಣ ಉದ್ಯಮಗಳಿಗೆ ನೀಡುವ ಸಾಲ ಸ್ಥಗಿತಗೊಳ್ಳಲಿದೆ. ಆಹಾರ ನೆರವು ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನ ವಿತರಣೆ, ಮತ್ತು ಆಹಾರ ತಪಾಸಣಾ ಕಾರ್ಯಗಳಿಗೆ ಅಡ್ಡಿಯಾಗಲಿದೆ. ದೇಶದ ಆರ್ಥಿಕತೆಯ ಪ್ರಮುಖ ಸೂಚಕವಾದ ಕಾರ್ಮಿಕ ಇಲಾಖೆಯ ಮಾಸಿಕ ನಿರುದ್ಯೋಗ ವರದಿ ಕೂಡ ಪ್ರಕಟವಾಗುವುದಿಲ್ಲ.

  • ಬಾಗ್ರಾಮ್‌ ವಾಯುನೆಲೆ | ಅಮೆರಿಕ ವಿರುದ್ಧ ಯುದ್ಧಕ್ಕೂ ಸೈ ಎಂದ ತಾಲಿಬಾನ್‌ – ಏನಿದು ವಿವಾದ?

    ಬಾಗ್ರಾಮ್‌ ವಾಯುನೆಲೆ | ಅಮೆರಿಕ ವಿರುದ್ಧ ಯುದ್ಧಕ್ಕೂ ಸೈ ಎಂದ ತಾಲಿಬಾನ್‌ – ಏನಿದು ವಿವಾದ?

    ಮುಖ್ಯಾಂಶಗಳು
    * ಕಂದಹಾರ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಮೆರಿಕಕ್ಕೆ ಬಾಗ್ರಾಮ್ ವಾಯುನೆಲೆಯನ್ನು ಮರಳಿ ನೀಡಲು ತಾಲಿಬಾನ್ ನಿರಾಕರಿಸಿದೆ.
    * ಬಾಗ್ರಾಮ್‌ನ್ನು ಮರಳಿ ಪಡೆಯಲು ಪ್ರಯತ್ನಿಸಿದರೆ ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧರಾಗುವುದಾಗಿ ತಾಲಿಬಾನ್ ಪ್ರತಿಜ್ಞೆ ಮಾಡಿದೆ.
    * ಪಾಕಿಸ್ತಾನ, ಅಮೆರಿಕಕ್ಕೆ ಸಹಕರಿಸಿದರೆ ʻಶತ್ರು ರಾಷ್ಟ್ರʼ ಪಟ್ಟಿಗೆ ಸೇರಿಸುವ ಎಚ್ಚರಿಕೆ
    * ಬಾಗ್ರಾಮ್‌ ವಿಚಾರದಲ್ಲಿ ಟ್ರಂಪ್‌ ಬೆದರಿಕೆ ಉದ್ವಿಗ್ನ ಪರಿಸ್ಥಿತಿ ಉಂಟುಮಾಡುವ ಸಾಧ್ಯತೆ ಇದೆ.
    * ಇದೆಲ್ಲದರ ನಡುವೆ ದೋಹಾ ಒಪ್ಪಂದವನ್ನುಅಮೆರಿಕಕ್ಕೆ ತಾಲಿಬಾನ್‌ ನೆನಪಿಸಿದೆ.

    ದುರ್ಯೋದನ ಪಾಂಡವರಿಗೆ ಐದು ಸೂಜಿ ಮೊನೆ ಚುಚ್ಚುವಷ್ಟು ಜಾಗವನ್ನೂ ಕೊಡಲ್ಲ ಎಂದ ಹಾಗೇ ಬಾಗ್ರಾಮ್‌ ವಾಯುನೆಲೆ (Bagram Air Base) ಕೇಳಿದ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ (Donald Trump) ತಾಲಿಬಾನ್ ಸರ್ಕಾರ  ಒಂದಿಂಚೂ ಜಾಗವನ್ನು ಕೊಡಲ್ಲ ಎಂದು ಎಚ್ಚರಿಸಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ದೊಡ್ಡಣ್ಣ ಎಂದು ಬೀಗುತ್ತಿರುವ ಅಮೆರಿಕಕ್ಕೆ ತೀವ್ರ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಏನಾದ್ರೂ ಕೆಣಕಿದ್ರೆ ಅದಕ್ಕೂ ಸೈ ಎನ್ನುವಂತೆ ಯುದ್ಧಕ್ಕೂ ತಾಲಿಬಾನ್‌ ಸಿದ್ಧವಾಗಿಯೇ ಇದೆ.  

    ವಾಯುನೆಲೆ ಕೇಳಿದ ಅಮೆರಿಕಕ್ಕೆ ಅಫ್ಘಾನಿಸ್ತಾನದ (Afghanistan) ತಾಲಿಬಾನ್ ಸರ್ಕಾರದ (Taliban Government) ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Aamir Khan Muttaki) ಅವರು, ತಮ್ಮ ದೇಶದ ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ನಮ್ಮ ಭೂಮಿಯ ಒಂದೇ ಒಂದು ತುಂಡನ್ನೂ ಯಾರಿಗೂ ಬಿಟ್ಟುಕೊಡುವುದಿಲ್ಲ ಎನ್ನುವ ಮೂಲಕ ಟ್ರಂಪ್​ ವಿರುದ್ಧ ಗುಡುಗಿದ್ದಾರೆ. ಇದರ ಜೊತೆ ಪಾಕಿಸ್ತಾನವೇನಾದ್ರೂ ಅಮೆರಿಕದ ಜೊತೆ ಕೈಜೊಡಿಸಿದ್ರೆ ಅದನ್ನು ಶತ್ರು ದೇಶವಾಗಿ ಘೋಷಿಸುವುದಾಗಿ ಅಫ್ಘಾನ್‌ ಎಚ್ಚರಿಸಿದೆ.  ಇದನ್ನೂ ಓದಿ: ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

    ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದ ಬಳಿಕ ಬಾಗ್ರಾಮ್ ವಾಯುನೆಲೆಯನ್ನು ಮರಳಿ ಪಡೆಯಲು ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಈ ನೆಲೆಯನ್ನು ಮರಳಿಸದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕದ ಬೆದರಿಕೆಗೆ ತಾಲಿಬಾನ್‌ ಯಾವುದೇ ಸೊಪ್ಪು ಹಾಕದೇ, ಮುಲಾಜಿಲ್ಲದೇ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.  

    ಅಮೆರಿಕಕ್ಕೆ ಈ ವಾಯುನೆಲೆ ಏಕೆ ಮುಖ್ಯ?
    ಈ ವಾಯುನೆಲೆಯನ್ನು ಅಮೆರಿಕ ನಿರ್ಮಾಣ ಮಾಡಿದ್ದು, ವಿಶ್ವದ ಶಕ್ತಿಶಾಲಿ ಪ್ರಮುಖ ವಾಯುನೆಲೆಗಳಲ್ಲಿ ಒಂದಾಗಿದೆ. ಇಲ್ಲಿ ಸೇನೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಇದ್ದು, ರಷ್ಯಾ ಮತ್ತು ಚೀನಾ ಮೇಲೆ ಅಮೆರಿಕಕ್ಕೆ ಕಣ್ಣಿಡಲು ಇದು ಮುಖ್ಯವಾಗಿದೆ. 

    ಸುಮಾರು 20 ವರ್ಷಗಳ ಕಾಲ  ಅಮೆರಿಕ ಇಲ್ಲಿ ಮಿಲಿಟರಿಯನ್ನು ಇರಿಸಿ ನಿಯಂತ್ರಣದಲ್ಲಿಟ್ಟುಕೊಂಡಿತ್ತು. ತನ್ನ ಸೇನಾ ಪಡೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡಿದ್ದ ಅಮೆರಿಕ ಮತ್ತೆ ವಾಯುನೆಲೆಯನ್ನು ಮರಳಿ ಕೇಳುತ್ತಿದೆ.  ಈ ಬೇಡಿಕೆಯನ್ನು ತಾಲಿಬಾನ್‌ ಸಾರಾಸಗಟಾಗಿ ತಿರಸ್ಕರಿಸಿದೆ. ಇದು ಅಮೆರಿಕ ಹಾಗೂ ತಾಲಿಬಾನ್‌ ಮಧ್ಯೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಆದರೂ ಸಹ ತಾಲಿಬಾನ್‌ ಮಾತ್ರ ಇಟ್ಟ ಹೆಜ್ಜೆ ಹಿಂದಿಡಲ್ಲ ಎಂದು ಧೈರ್ಯವಾಗಿ ಹೇಳಿಕೊಂಡಿದೆ. 

    ಟ್ರಂಪ್‌ ತಾಲಿಬಾನ್‌ಗೆ ಹೇಳಿದ್ದೇನು? 
    ವಾಯುನೆಲೆಯನ್ನು ಶೀಘ್ರದಲ್ಲೇ ಮರಳಿ ಪಡೆಯಲು ಬಯಸಿದ್ದೇವೆ. ಒಂದು ವೇಳೆ ಇದಕ್ಕೆ ತಾಲಿಬಾನ್ ಒಪ್ಪದಿದ್ದರೆ ನಾನು ಏನು ಮಾಡಲಿದ್ದೇನೆ ಎಂಬುದನ್ನು ನೀವೇ ನೋಡಲಿದ್ದೀರಿ ಎಂದು  ಟ್ರಂಪ್‌ ಬೆದರಿಕೆ ಹಾಕಿದ್ದಾರೆ. 

    ಅಮೆರಿಕದ ಪ್ರಭಾವ ಮರುಸ್ಥಾಪನೆಗೆ ಬಾಗ್ರಾಮ್ ಏಕೆ ಮುಖ್ಯ?
    ಬಾಗ್ರಾಮ್ ವಾಯುನೆಲೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ಸಮೀಪವೇ ಇದೆ. ಇದು ಇರಾನ್, ಪಾಕಿಸ್ತಾನ, ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯ ಮತ್ತು ಮಧ್ಯ ಏಷ್ಯಾದ ನಡುವಿನ ಪ್ರಮುಖ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ತನ್ನ ಹಿಡಿತದಲ್ಲಿದ್ದರೆ ಅಮೆರಿಕದ ಪ್ರಭಾವ ಮರುಸ್ಥಾಪನೆಗೊಳ್ಳಲಿದೆ ಎಂಬುದು ಟ್ರಂಪ್‌ ಲೆಕ್ಕಾಚಾರ.

    ದೋಹಾ ಒಪ್ಪಂದ
    ಇದೆಲ್ಲದರ ನಡುವೆ ತಾಲಿಬಾನ್ ಸರ್ಕಾರ ಅಮೆರಿಕಕ್ಕೆ ದೋಹಾ ಒಪ್ಪಂದವನ್ನು ನೆನಪಿಸಿದೆ. 2020ರಲ್ಲಿ ಅಮೆರಿಕ ಮತ್ತು ತಾಲಿಬಾನ್ ನಡುವೆ  ನಡೆದ ಒಪ್ಪಂದದ ಪ್ರಕಾರ, ಅಮೆರಿಕವು ಅಫ್ಘಾನಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದಾಗಿ ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಒಪ್ಪಿಕೊಂಡಿತ್ತು. 

    ಪಾಕ್‌ಗೂ ಎಚ್ಚರಿಕೆ ನೀಡಿದ ತಾಲಿಬಾನ್‌
    ಬಾಗ್ರಾಮ್ ವಾಯುನೆಲೆ ವಿಚಾರವಾಗಿ ಅಮೆರಿಕಕ್ಕೆ ಪಾಕಿಸ್ತಾನವೇನಾದರೂ ಸಹಾಯ ಮಾಡಿದರೆ ಅದನ್ನು ಶತ್ರುರಾಷ್ಟ್ರವೆಂದು ಪರಿಗಣಿಸುವುದಾಗಿ ತಾಲಿಬಾನ್‌ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ಸಂಬಂಧ ವೃದ್ಧಿಗೊಂಡಿದೆ. ಇದು ಅಲ್ಲಿನ ಖನಿಜ ಮತ್ತು ಕಚ್ಚಾ ತೈಲದ ಮೇಲೆ ಅಮೆರಿಕ ಕಣ್ಣಿಟ್ಟಿದ್ದಕ್ಕೆ ಮಾಡಿಕೊಂಡ ಸಂಬಂಧ ಎನ್ನಲಾಗುತ್ತಿದೆ.  ಆದರೂ ಈ ಸಂಬಂಧ ಭಾರತ ಸೇರಿದಂತೆ ಬೇರೆ ರಾಷ್ಟ್ರಗಳಿಗೂ ಸಮಸ್ಯೆಯೇ ಆಗಿ ಕಾಣುತ್ತಿದೆ.  ಇದನ್ನೂ ಓದಿ: ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

  • ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    – ಮಕ್ಕಳಿಂದ ಕ್ಯಾಂಡಿ ಕದಿಯುವಂತೆ ನಮ್ಮ ಉದ್ಯಮ ದೋಚಿದ್ದಾರೆಂದ ಅಮೆರಿಕ ಅಧ್ಯಕ್ಷ

    ವಾಷಿಂಗ್ಟನ್: ಭಾರತ ಸೇರಿದಂತೆ ವಿದೇಶಗಳ ಮೇಲಿನ ಟ್ರಂಪ್‌ ಸುಂಕ ಸಮರ ಮುಂದುವರಿದಿದೆ. ವಿದೇಶಗಳ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

    ಅಮೆರಿಕವು ತನ್ನ ದೇಶದ ಹೊರಗೆ ತಯಾರಾಗುವ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ವಿಧಿಸುತ್ತದೆ ಎಂದು ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಘೋಷಿಸಿದ್ದಾರೆ.

    ಅಮೆರಿಕದ ಚಲನಚಿತ್ರ ವ್ಯವಹಾರವನ್ನು ವಿದೇಶಗಳ ಸ್ಪರ್ಧಿಗಳು ಆಕ್ರಮಿಸಿಕೊಂಡಿದ್ದಾರೆ. ಮಕ್ಕಳಿಂದ ಕ್ಯಾಂಡಿ ಕದಿಯುವ ರೀತಿಯಲ್ಲಿ ಅಮೆರಿಕದ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಇತರೆ ದೇಶಗಳು ಕದ್ದಿವೆ ಎಂದು ತಿಳಿಸಿದ್ದಾರೆ.

    ವಿದೇಶ ಚಲನಚಿತ್ರಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಲು ವಾಣಿಜ್ಯ ಇಲಾಖೆ ಮತ್ತು ಯುಎಸ್‌ ವ್ಯವಹಾರ ಪ್ರತಿನಿಧಿಗೆ ಟ್ರಂಪ್‌ ಅಧಿಕಾರ ನೀಡಿದ್ದಾರೆ. ಅಮೆರಿಕನ್‌ ಚಲನಚಿತ್ರೋದ್ಯಮವು ಅತ್ಯಂತ ವೇಗವಾಗಿ ಸಾಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಟ್ರಂಪ್‌ ಕ್ರಮವು ಹಾಲಿವುಡ್‌ಗೆ ಮತ್ತಷ್ಟ ಸಮಸ್ಯೆ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಸ್ನಿ, ಪ್ಯಾರಾಮೌಂಟ್ ಮತ್ತು ವಾರ್ನರ್ ಬ್ರದರ್ಸ್ ಸೇರಿದಂತೆ ಅನೇಕ ಯುಎಸ್ ಸ್ಟುಡಿಯೋಗಳು ವೆಚ್ಚವನ್ನು ಕಡಿತಗೊಳಿಸಲು ಆಗಾಗ್ಗೆ ವಿದೇಶಗಳಲ್ಲಿ ಚಿತ್ರೀಕರಣ ಮಾಡುತ್ತವೆ. ಇದರಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.

  • ಟ್ರಂಪ್‌ ದಿಟ್ಟತನದಿಂದ ಭಾರತದ ಜೊತೆ ಕದನ ವಿರಾಮ ಸಾಧ್ಯವಾಯ್ತು: ಹಾಡಿ ಹೊಗಳಿದ ಪಾಕ್‌ ಪ್ರಧಾನಿ

    ಟ್ರಂಪ್‌ ದಿಟ್ಟತನದಿಂದ ಭಾರತದ ಜೊತೆ ಕದನ ವಿರಾಮ ಸಾಧ್ಯವಾಯ್ತು: ಹಾಡಿ ಹೊಗಳಿದ ಪಾಕ್‌ ಪ್ರಧಾನಿ

    – ಭಯೋತ್ಪಾದನೆ ತಡೆಗೆ ಪಾಕ್‌ನಲ್ಲಿ ಸ್ಥಾಪನೆಯಾಗಲಿದೆಯಂತೆ ಸ್ಪೆಷಲ್‌ ಕಮಾಂಡ್‌
    – ಅಮೆರಿಕ-ಪಾಕ್‌ ನಡುವೆ ದ್ವಿಪಕ್ಷೀಪ ಒಪ್ಪಂದ

    ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif), ಫೀಲ್ಡ್‌ ಮಾರ್ಷಲ್‌ ಅಸೀಮ್‌ ಮುನೀರ್‌ ಶ್ವೇತಭವನದ ಓವಲ್‌ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಭೇಟಿಯಾಗಿದ್ದು, ಸುಮಾರು 90 ನಿಮಿಷಗಳ ಕಾಲ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

    ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಭಾಗಿಯಾಗಲು ಅಮೆರಿಕ ಪ್ರವಾಸದಲ್ಲಿರುವ ಷರೀಫ್ ಅವರಿಂದು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಮುನ್ನವೇ ಸೇನಾ ಮುಖಸ್ಥರೊಟ್ಟಿಗೆ ಟ್ರಂಪ್‌ ಅವರನ್ನ ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಭದ್ರತೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಅನೇಕ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಭಯೋತ್ಪಾದನೆ ನಿಗ್ರಹ ಒಪ್ಪಂದಕ್ಕೂ ಸಹಿ ಮಾಡಲಾಗಿದ್ದು, ಪರಸ್ಪರ ಸಹಕಾರದೊಂದಿಗೆ ಮುಂದುವರಿಯಲು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸುಂಕ ಸುಂಕ ಸುಂಕ; ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌ – ಭಾರತಕ್ಕೇನು ಎಫೆಕ್ಟ್‌?

    ಉಭಯ ದೇಶಗಳ ಒಪ್ಪಂದಗಳು ಭದ್ರತೆ, ಆರ್ಥಿಕತೆ, ಕಾರ್ಯತಂತ್ರದ ಪಾಲುದಾರಿಕೆ, ಭಯೋತ್ಪಾದನಾ ನಿಗ್ರಹ ಹಾಗೂ ಪಾಕ್‌ನಲ್ಲಿ (Pakistan) ಖನಿಜ ಸಂಪತ್ತಿನ ಶೋಧನೆ ತೈಲ ಪರಿಶೋಧನೆಯನ್ನು ಕೇಂದ್ರೀಕರಿಸಿತ್ತು. ಜೊತೆಗೆ ಬಾಗ್ರಾಮ್‌ ವಾಯುನೆಲೆ ಹಾಗೂ ಆ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವದ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಇದನ್ನೂ ಓದಿ: ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ಪಾಕ್‌ನಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪನೆ
    ಪಹಲ್ಗಾಮ್‌ ಉಗ್ರರಿಗೆ ಕುಮ್ಮಕ್ಕು ನೀಡಿದ್ದ ಪಾಕಿಸ್ತಾನ ಇದೀಗ ಅಮೆರಿಕದೊಟ್ಟಿಗೆ ಭಯೋತ್ಪಾದನೆ ನಿಗ್ರಹ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಪಾಕಿಸ್ತಾನದಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪಿಸುವ ನಿರ್ಧಾರವನ್ನೂ ಕೈಗೊಂಡಿದೆ. ‌ಇದೇ ವೇಳೆ ಟ್ರಂಪ್‌ ಅಫ್ಘಾನ್‌ನಿಂದ ಬರುತ್ತಿರುವ ಉಗ್ರ ಬೆದರಿಕೆಗಳನ್ನು ಪರಿಹರಿಸುವುದಾಗಿ ಟ್ರಂಪ್‌ ಪಾಕ್‌ ಪ್ರಧಾನಿ, ಅಸಿಮ್‌ ಮುನೀರ್‌ಗೆ ಭರವಸೆ ನೀಡಿದ್ದಾರೆ.

    ಇನ್ನೂ ಸಭೆಯ ಬಳಿಕ ಮಾತನಾಡಿದ ಟ್ರಂಪ್‌, ಭಾರತ ಪಾಕಿಸ್ತಾನ ನಡುವಿನ ಭೀಕರ ಯುದ್ಧ ನಿಲ್ಲಿಸಿದ್ದು ನಾನೇ ಅಂತ ಬಾಯಿ ಬಡಿದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ ನಮ್ಮ ಶಿಬಿರವನ್ನ ನಾಶಮಾಡಿದೆ – ಜೈಶ್ ಬಳಿಕ ಆಪರೇಷನ್ ಸಿಂಧೂರ ಸತ್ಯ ಒಪ್ಪಿಕೊಂಡ ಲಷ್ಕರ್ ಉಗ್ರ

    ಕದನ ವಿರಾಮ ಹೇಳಿಕೆಗೆ ಪಾಕ್ ಪ್ರಧಾನಿ ಪ್ರತಿಧ್ವನಿ
    ಟ್ರಂಪ್‌ ಭೇಟಿ ಬಳಿಕ ಮಾತನಾಡಿದ ಷರೀಫ್‌, ಕದನ ವಿರಾಮ ಉಲ್ಲೇಖಿಸಿ ಟ್ರಂಪ್‌ ಅವರನ್ನ ಶ್ಲಾಘಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ದಿಟ್ಟತನ ಮತ್ತು ನಿರ್ಣಾಯಕ ನಾಯಕತ್ವ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಅನುಕೂಲ ಮಾಡಿಕೊಟ್ಟಿತು. ಅಲ್ಲದೇ ಗಾಜಾದಲ್ಲಿನ ಸಂಘರ್ಷ ಕೊನೆಗೊಳಿಸಲು ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ಪುನಸ್ಥಾಪಿಸುವ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದು ಟ್ರಂಪ್‌ ಪರ ಹಾಡಿಹೊಗಳಿದರು.

  • ಸುಂಕ ಸುಂಕ ಸುಂಕ; ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌ – ಭಾರತಕ್ಕೇನು ಎಫೆಕ್ಟ್‌?

    ಸುಂಕ ಸುಂಕ ಸುಂಕ; ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌ – ಭಾರತಕ್ಕೇನು ಎಫೆಕ್ಟ್‌?

    – ಅಡುಗೆಮನೆ, ಸ್ನಾನಗೃಹ ಪೀಠೋಪಕರಣ, ಹೆವಿ ಟ್ರಕ್‌ಗಳ ಮೇಲೂ ಸುಂಕ

    ವಾಷಿಂಗ್ಟನ್‌: 2ನೇ ಬಾರಿಗೆ ಅಮೆರಿಕ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಸುಂಕ ಸುಂಕ ಅಂತಲೇ ಕನವರಿಸುತ್ತಿರುವ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಮತ್ತೊಂದು ವರಸೆ ತೆಗೆದಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಔಷಧಗಳ (Pharmaceutical Product) ಆಮದಿನ ಮೇಲೆ ಶೇ.100ರಷ್ಟು ಸುಂಕ ಘೋಷಿಸಿದ್ದಾರೆ. ಇದು ಅಕ್ಟೋಬರ್ 1ರಿಂದ ಜಾರಿಯಾಗಲಿದೆ.

    ಅಲ್ಲದೇ ಅಡುಗೆ ಮನೆಗೆ ಬಳಸುವ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್‌ – heavy trucks) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಜೊತೆಗೆ ಹಣದುಬ್ಬರಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ಸುಂಕ ನಿಯಮ ಏನು?
    ಹೌದು. ಅಕ್ಟೋಬರ್‌ 1ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇ. 100ರಷ್ಟು ಸುಂಕ ವಿಧಿಸುತ್ತೇವೆ. ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದ್ರೆ ಮಾತ್ರ ಈ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಂಪನಿಗಳಿಗೂ ಇದರಿಂದ ವಿನಾಯ್ತಿ ಸಿಗಲಿದೆ ಎಂದು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ

    ಟ್ರಂಪ್‌ ಪೋಸ್ಟ್‌ನಲ್ಲಿ ಏನಿದೆ?
    ಔಷಧಗಳ ಆಮದಿನ ಮೇಲೆ 100%, ಅಡುಗೆಮನೆ ಪಿಠೋಪಕರಣಗಳ ಮೇಲೆ 50%, ಸ್ನಾನಗೃಹ ಪಿಠೋಪಕರಣಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್‌) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ವಿದೇಶಿ ಉತ್ಪನ್ನಗಳು ಅಮೆರಿಕಕ್ಕೆ ಪ್ರವಾಹ ರೀತಿಯಲ್ಲಿ ಹರಿದುಬರುತ್ತಿದೆ, ಇದು ತುಂಬಾ ಅನ್ಯಾಯ. ಅಲ್ಲದೇ ರಾಷ್ಟ್ರೀಯ ಭದ್ರತೆಯ ಕಾರಣದಿಂದಲೂ ಸುಂಕ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಅದೇ ರೀತಿ ಪೀಟರ್‌ಬಿಲ್ಟ್, ಕೆನ್‌ವರ್ತ್, ಫ್ರೈಟ್‌ಲೈನರ್, ಮ್ಯಾಕ್ ಸೇರಿದಂತೆ ನಮ್ಮ ಇತರ ಟ್ರಕ್‌ ತಯಾರಕರನ್ನು ರಕ್ಷಿಸಲು ಹಾಗೂ ಅವರನ್ನು ಆರ್ಥಿಕ ಬಲಶಾಲಿಗಳನ್ನಾಗಿಸಲು ಹೆವಿ ಟ್ರಕ್‌ ಮೇಲೆ 25% ಸುಂಕ ವಿಧಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಹಾಂಗ್‌ಕಾಂಗ್‌ಗೆ ಅಪ್ಪಳಿಸಿದ ರಗಾಸಾ ಚಂಡಮಾರುತ – 20ಕ್ಕೂ ಹೆಚ್ಚು ಜನರ ಸಾವು

  • ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ

    ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ

    – ತೈಲ ಖರಿದಿ ಕೊಲ್ಲುವವರಿಗೆ ಫಂಡಿಂಗ್‌ ಮಾಡಿದಂತೆ ಎಂದ ಕ್ರಿಸ್‌ ರೈಟ್‌

    ವಾಷಿಂಗ್ಟನ್‌: ನಾನು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ (Chris Wright೦, ಭಾರತವು ರಷ್ಯಾದ ತೈಲ (Russian Oil) ಖರೀದಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡುತ್ತಾ, ಭಾರತದ ಜೊತೆಗೆ ಇಂಧನ, ವ್ಯಾಪಾರದಂತಹ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (S Jaishankar0 ಅವರೊಂದೊಗೆ ಚರ್ಚಿಸಿದ್ದೇನೆ. ಆದ್ರೆ ಅವರು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿರುತ್ತಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

    ನಾವು ಭಾರತದ ಜೊತೆಗೆ ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿದ್ದೇವೆ. ಆದ್ರೆ ಉಕ್ರೇನ್‌ ಸಂಘರ್ಷದಲ್ಲಿ ರಷ್ಯಾ ಜೊತೆಗಿನ ಹೊಂದಾಣಿಕೆಯನ್ನು ಅವರು ಕೈಬಿಡಬೇಕು ಕ್ರಿಸ್‌ ರೈಟ್‌ ತಿಳಿಸಿದ್ರು. ಇದನ್ನೂ ಓದಿ: ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಯುದ್ಧ ಕೊನೆಗೊಳ್ಳುವುದನ್ನ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ. ಯುರೋಪ್‌ ರಾಷ್ಟ್ರಗಳು ಈಗಾಗಲೇ ಯುದ್ಧ ನಿಲ್ಲಿಸೋದಕ್ಕಾಗಿ ರಷ್ಯಾದ ಮೇಲೆ ಒತ್ತಡ ಹೇರಲು ಎಲ್ಲಾ ಮಾರ್ಗಗಳನ್ನ ಹುಡುಕುತ್ತಿವೆ. ಭಾರತ ತೈಲ ಖರೀದಿ ನಿಲ್ಲಿಸಿದ್ರೆ ಸಂಘರ್ಷ ನಿಲ್ಲಿಸಲು ಹೆಚ್ಚು ಪ್ರಯೋಜನವಾಗುತ್ತದೆ. ಭಾರತದ ಜೊತೆಗೆ, ಇಂಧನ ಮತ್ತು ಮುಕ್ತ ವ್ಯಾಪಾರ ಸಹಕಾರದ ವಿಷಯದಲ್ಲಿ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ಇನ್ನೂ ಭಾರತವು ನಿರಂತರವಾಗಿ ತೈಲ ಖರೀದಿಸುತ್ತಿರುವ ಬಗ್ಗೆ ಮಾತನಾಡಿದ ಕ್ರಿಸ್‌ ರೈಟ್‌, ಭಾರತವು ರಷ್ಯಾದ ತೈಲ ಖರೀದಿ ಮಾಡುವ ಅಗತ್ಯವಿಲ್ಲ. ಏಕೆಂದ್ರೆ ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲ ಖರೀದಿ ಮಾಡುವುದು, ಪ್ರತಿವಾರ ಸಾವಿರಾರು ಜನರನ್ನು ಕೊಲ್ಲುವ ವ್ಯಕ್ತಿಗೆ ಹಣ ನೀಡಿದಂತಾಗುತ್ತಿದೆ. ಅಮೆರಿಕ ಭಾರತವನ್ನು ಶಿಕ್ಷಿಸಲು ಬಯಸುವುದಿಲ್ಲ, ಬದಲಾಗಿ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಹಾಗಾಗಿ ರಷ್ಯಾದ ತೈಲ ಖರೀದಿ ನಿಲ್ಲಿಸಬೇಕು. ಅಮೆರಿಕ ಬಳಿ ಮಾರಾಟ ಮಾಡಲು ತೈಲ ಇದೆ. ಭಾರತ ನಮ್ಮ ಸಂಬಂಧವನ್ನು ಬಯಸಿದ್ರೆ, ರಷ್ಯಾದ ತೈಲ ಖರೀದಿ ನಿಲ್ಲಿಸಲಿ ಎಂದು ಮನವಿ ಮಾಡಿದ್ದಾರೆ.

  • ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ವಾಷಿಂಗ್ಟನ್‌: ಅಮೆರಿಕ (America) ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೆಚ್-1ಬಿ ವೀಸಾ (H-1B Visa) ವಾರ್ಷಿಕ ಶುಲ್ಕವನ್ನು ದಿಢೀರ್ 1 ಲಕ್ಷ ಡಾಲರ್‌ಗೆ (ಅಂದಾಜು 88 ಲಕ್ಷ ರೂ.) ಹೆಚ್ಚಿಸಿ ಆದೇಶ ಹೊರಡಿಸಿ ವಿದೇಶಿ ಉದ್ಯೋಗಿಗಳಿಗೆ ಶಾಕ್‌ ಕೊಟ್ಟಿದ್ದರು. ಇದರ ನಡುವೆಯೇ ಅಮೆರಿಕ ಕಂಪನಿಗಳು ಭಾರತೀಯರಿಗೆ ಮಣೆ ಹಾಕುತ್ತಿರುವುದು ಮುಂದುವರಿದಿದೆ. ಇಬ್ಬರು ಭಾರತೀಯರನ್ನು ಅಮೆರಿಕದ ಕಂಪನಿಗಳು ಸಿಇಒ ಆಗಿ ನೇಮಕ ಮಾಡಿವೆ. ಅದರಲ್ಲಿ ಒಬ್ಬರು ನಮ್ಮ ರಾಜ್ಯದ ಮೈಸೂರಿನಲ್ಲಿ ವ್ಯಾಸಂಗ ಮಾಡಿದ್ದರು ಎಂಬುದು ಕನ್ನಡಿಗರ ಹೆಮ್ಮೆಯ ವಿಷಯ.

    ಭಾರತದ ಮೂಲದ ರಾಹುಲ್ ಗೋಯಲ್ (Rahul Goyal) ಡೆನ್ವರ್‌ನಲ್ಲಿ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳುವ ಮುನ್ನ ಮೈಸೂರಿನಲ್ಲಿ (Mysuru) ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಬಳಿಕ ಅವರು ಅಮೆರಿಕ, ಯುಕೆಯ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಅವರನ್ನು ಚಿಕಾಗೋ ಮೂಲದ ಪಾನೀಯ ಕಂಪನಿ ಮೊಲ್ಸನ್ ಕೂರ್ಸ್ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಹೊಸ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಿಸಿದೆ. ಗೋಯಲ್ ಅವರು ಕಂಪನಿಯಲ್ಲಿ 24 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಂಪನಿ ನಿರ್ಧಾರದ ಬಗ್ಗೆ, ಸವಾಲುಗಳನ್ನು ಎದುರಿಸಲು ಸಿದ್ಧ ಎಂದು ಗೋಯಲ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ಮತ್ತೊಬ್ಬ ಭಾರತೀಯ ಮೂಲದ ಶ್ರೀನಿವಾಸ್ ಗೋಪಾಲನ್ (55) (Srinivas Gopalan) ಅಮೆರಿಕದ ಟೆಲಿಕಾಂ ದೈತ್ಯ ಟಿ-ಮೊಬೈಲ್‌ನಲ್ಲಿ ಸಿಇಒ ಆಗಿ ನೇಮಕಗೊಂಡಿದ್ದಾರೆ. ನವೆಂಬರ್ 1 ರಂದು ಅವರು ಸಿಇಒ ಹುದ್ದೆ ಅಲಂಕರಿಸಲಿದ್ದಾರೆ. ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿರುವ ಗೋಪಾಲನ್, ಪ್ರಸ್ತುತ ಟಿ-ಮೊಬೈಲ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಾಲನ್‌, ಟಿ-ಮೊಬೈಲ್‌ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಲು ನನಗೆ ಬಹಳ ಹೆಮ್ಮೆ ಇದೆ. ಈ ಕಂಪನಿಯ ಸಾಧನೆಗಳ ಬಗ್ಗೆ ನಾನು ಬಹಳ ದಿನಗಳಿಂದ ತಿಳಿದುಕೊಂಡಿದ್ದೆ ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

    ಗೋಪಾಲನ್ ತಮ್ಮ ವೃತ್ತಿಜೀವನವನ್ನು ಹಿಂದೂಸ್ತಾನ್ ಯೂನಿಲಿವರ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಪ್ರಾರಂಭಿಸಿ, ಭಾರ್ತಿ ಏರ್‌ಟೆಲ್, ವೊಡಾಫೋನ್, ಕ್ಯಾಪಿಟಲ್ ಒನ್ ಮತ್ತು ಡಾಯ್ಚ ಟೆಲಿಕಾಮ್‌ನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಈ ಅವಧಿಯಲ್ಲಿ ಲಕ್ಷಾಂತರ ಮನೆಗಳಿಗೆ ಫೈಬರ್ ನೆಟ್‌ವರ್ಕ್‌ ಒದಗಿಸಿದ್ದರು. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

  • PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ಹೊರದೇಶದಲ್ಲಿ ನಿರಂತರ ದುಡಿಮೆ.. ಅಪರೂಪಕ್ಕೆ ಸ್ವದೇಶಕ್ಕೆ ಬಂದು ಕುಟುಂಬಸ್ಥರನ್ನು ಕಾಣಲು ವಿಮಾನ ಏರಿದ್ದರು.. ಎಷ್ಟೋ ಮಂದಿ ತವರಿಗೆ ಬಂದು ಹಬ್ಬ-ಹರಿದಿನಗಳಲ್ಲಿ ಭಾಗವಹಿಸಿ ಖುಷಿಯಲ್ಲಿದ್ದರು.. ಮನೆಯಲ್ಲಿ ಮದುವೆ ಸಂಭ್ರಮದಲ್ಲಿದ್ದರು.. ಈ ಎಲ್ಲರಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಘೋಷಣೆಯೊಂದು ಬರಸಿಡಿಲಿನಂತೆ ಭಾಸವಾಯಿತು. ಅಮೆರಿಕದ ಐಟಿ ವಲಯದ ಕಂಪನಿಗಳಲ್ಲಿ ದುಡಿಯುತ್ತಿದ್ದ ಲಕ್ಷಾಂತರ ವಿದೇಶಿ ಉದ್ಯೋಗಿಗಳಲ್ಲಿ ಅರೆಕ್ಷಣ ದಿಗಿಲುಟ್ಟಿಸಿತು. ಇವರನ್ನೆಲ್ಲ ಕೆಲಸಕ್ಕಿಟ್ಟುಕೊಂಡಿದ್ದ ಕಂಪನಿಗಳು ಸಹ ಶಾಕ್ ಆಗಿದ್ದುಂಟು. ‘ಸ್ವದೇಶಕ್ಕೆ ಹೊರಟಿರುವವರು, ಈಗಾಗಲೇ ಹೋಗಿರುವವರು ತಕ್ಷಣ ಅಮೆರಿಕಗೆ ವಾಪಸ್ ಬನ್ನಿ’ ಅಂತ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟವು. ಊರಿಗೆ ಹೊರಟಿದ್ದವರು ವಾಪಸ್ ಆದರು. ಬಂದಿದ್ದವರು ಬೇಸರದಿಂದಲೇ ಗಂಟುಮೂಟೆ ಕಟ್ಟಿದರು. ಸಂಭ್ರಮದಲ್ಲಿದ್ದವರು ಮದುವೆ ರದ್ದುಗೊಳಿಸಿ ಕಣ್ಣೀರಿಟ್ಟರು. ಇದಕ್ಕೆಲ್ಲ ಕಾರಣ, ಹೆಚ್-1ಬಿ ವೀಸಾ.

    ಹೌದು, ಹೆಚ್-1ಬಿ ವೀಸಾ (H-1B Visa) ವಾರ್ಷಿಕ ಶುಲ್ಕವನ್ನು ದಿಢೀರ್ 1 ಲಕ್ಷ ಡಾಲರ್‌ಗೆ (ಅಂದಾಜು 88 ಲಕ್ಷ ರೂ.) ಹೆಚ್ಚಿಸಿ ಟ್ರಂಪ್ ಆದೇಶ ಹೊರಡಿಸಿದ್ದೇ ಇದಕ್ಕೆಲ್ಲ ಕಾರಣ. ‘ಅಮೆರಿಕವೇ ಮೊದಲು’ ಎಂಬುದು ಟ್ರಂಪ್ ಸರ್ಕಾರದ ಧ್ಯೇಯ. ಈ ವೀಸಾ ನೀತಿಯಲ್ಲೂ ಅದನ್ನು ಪ್ರತಿಪಾದಿಸಲು ಹೊರಟಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಟ್ರಂಪ್ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಟ್ಯಾರಿಫ್ ಅಸ್ತ್ರ ಪ್ರಯೋಗಿಸಿದರು. ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದ ಟ್ಯಾರಿಫ್ (ಶೇ.50) ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಅದರ ಬೆನ್ನಲ್ಲೇ ಈಗ ಹೆಚ್-1ಬಿ ವೀಸಾ ಶುಲ್ಕ ಹೆಚ್ಚಳ ಮೂಲಕ ಭಾರತದ ವಿರುದ್ಧ ಟ್ರಂಪ್ ಅಸ್ತ್ರ ಪ್ರಯೋಗಿಸಿದ್ದಾರೆ. ಏಕೆಂದರೆ, ಈ ವೀಸಾದಡಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಉದ್ಯೋಗಿಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಪ್ರತಿ ವರ್ಷ ಈ ವೀಸಾದಡಿ ಅಮೆರಿಕಗೆ ಹೋಗುವವರ ಸಂಖ್ಯೆಯಲ್ಲೂ ಭಾರತೀಯರದ್ದೇ ಸಿಂಹಪಾಲು. ಈಗ ಶುಲ್ಕ ಹೆಚ್ಚಿಸಿರುವುದು ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ಅಮೆರಿಕಗೆ ಹೋಗ ಬಯಸುವ ಯುವಸಮೂಹದ ಕನಸನ್ನು ನುಚ್ಚು ನೂರು ಮಾಡಿದಂತಿದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ಅಷ್ಟಕ್ಕೂ ಏನಿದು ಹೆಚ್-1ಬಿ ವೀಸಾ? ಇದರ ಉದ್ದೇಶ ಏನು? ಅಮೆರಿಕ ಕಂಪನಿಗಳಿಗೆ ಇದು ಏಕೆ ಮುಖ್ಯ? ಭಾರತೀಯ ವೃತ್ತಿಪರ ಪರಿಣಿತರಿಗೆ ಇದರಿಂದ ಪ್ರಯೋಜನ ಎಷ್ಟು? ಶುಲ್ಕ ಹೆಚ್ಚಿಸಿದ್ಯಾಕೆ? ಇದರಿಂದಾಗುವ ಪರಿಣಾಮಗಳೇನು?

    ಹೆಚ್-1ಬಿ ವೀಸಾ ಎಂದರೇನು?
    ಹೆಚ್-1ಬಿ ವಲಸೆಯೇತರ ವೀಸಾ.

    ಜಾರಿಗೆ ಬಂದಿದ್ದು ಯಾವಾಗ?
    ಹೆಚ್-1ಬಿ ವೀಸಾ ಕಾರ್ಯಕ್ರಮವು 1990 ರ ವಲಸೆ ಕಾಯ್ದೆಯೊಂದಿಗೆ (IMMACT90) ಪ್ರಾರಂಭವಾಯಿತು.

    ಆಗಿನ ಅಧ್ಯಕ್ಷರು ಯಾರು?
    ಈ ನೀತಿಗೆ ಆಗಿನ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಅವರು 1990ರ ನವೆಂಬರ್ 20 ರಂದು ಸಹಿ ಹಾಕಿದರು. ಹೆಚ್-1 ವೀಸಾವನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು. ಹೆಚ್-1ಎ ವೀಸಾ ನರ್ಸ್‌ಗಳಿಗೆ.

    ಹೆಚ್-1ಬಿ ವೀಸಾ ಯಾರಿಗೆ ಸಿಗುತ್ತೆ?
    ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ನೀಡಲು ಅಲ್ಲಿನ ಕಂಪನಿಗಳಿಗೆ ಈ ವೀಸಾ ಅವಕಾಶ ನೀಡುತ್ತದೆ. ಎಂಜಿನಿಯರಿಂಗ್, ತಂತ್ರಜ್ಞಾನ, ವೈದ್ಯಕೀಯ, ವ್ಯವಹಾರದಂತಹ ಕ್ಷೇತ್ರಗಳಲ್ಲಿ ಪರಿಗಣತರಿಗೆ ಈ ವೀಸಾ ಸೌಲಭ್ಯ ಸಿಗುತ್ತದೆ.

    ವೀಸಾ ಅವಧಿ ಎಷ್ಟು?
    ಇದು ತಾತ್ಕಾಲಿಕ ವೀಸಾ. ಇದಕ್ಕೆ 3 ರಿಂದ 6 ವರ್ಷಗಳ ಅವಧಿ ಇರುತ್ತದೆ. ಅವಧಿ ಮುಗಿದ ಮೇಲೆ ಮತ್ತೆ ವೀಸಾ ನವೀಕರಿಸಬಹುದು.

    ಅರ್ಹತೆ, ನಿಯಮಗಳೇನು?
    ವಿದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ಅಭ್ಯರ್ಥಿಯು ವಿಶೇಷತೆಯ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ಉದ್ಯೋಗ ನೀಡುವ ಕಂಪನಿಗಳೇ ತನ್ನ ಉದ್ಯೋಗಿಯ ವೀಸಾ ಅರ್ಜಿ ಶುಲ್ಕವನ್ನು ಭರಿಸಬೇಕು. ಕಂಪನಿ ಕಾರ್ಮಿಕ ಇಲಾಖೆಯಲ್ಲಿ ಎಲ್‌ಎಸಿ ಸಲ್ಲಿಸುತ್ತದೆ. ವೇತನ ಮತ್ತು ಕೆಲಸದ ಪರಿಸ್ಥಿತಿಗಳನ್ನು ದೃಢೀಕರಿಸುತ್ತದೆ. ನಂತರ ಅಭ್ಯರ್ಥಿ ಪರವಾಗಿ USCIS ಗೆ ಅರ್ಜಿ ಸಲ್ಲಿಸುತ್ತದೆ. ಕೆಲಸಕ್ಕೆ ವಿಶೇಷ ಪರಿಣತಿ ಮತ್ತು ಪದವಿ, ಅನುಭವದ ಅಗತ್ಯವಿರುತ್ತದೆ. ಅದನ್ನು ಅಭ್ಯರ್ಥಿ ಪೂರೈಸಬೇಕು. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    ವರ್ಷಕ್ಕೆ ಎಷ್ಟು ವೀಸಾ ಹಂಚಿಕೆ?
    ಪ್ರತಿ ವರ್ಷ 65,000 ವೀಸಾಗಳನ್ನು ಹಂಚಲಾಗುತ್ತದೆ. ಅಮೆರಿಕ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಹೊಂದಿದವರಿಗೆ 20,000 ಹೆಚ್ಚುವರಿ ವೀಸಾಗಳನ್ನು ನೀಡಲಾಗುತ್ತದೆ.

    ಶುಲ್ಕ ಎಷ್ಟಿತ್ತು?
    ಈ ವೀಸಾ ಪಡೆಯಲು 2,000 ದಿಂದ 8,000 ಡಾಲರ್ ವರೆಗೆ ಶುಲ್ಕ ಇತ್ತು.

    ಹೊಸ ಶುಲ್ಕ ಎಷ್ಟು?
    ಟ್ರಂಪ್ ಹೊಸ ಶುಲ್ಕ ಘೋಷಿಸಿದ್ದು, ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿದ್ದಾರೆ. ಇದು ಪೂರ್ಣಾವಧಿ ಶುಲ್ಕವಾಗಿರುತ್ತದೆ.

    ಶುಲ್ಕ ಹೆಚ್ಚಿಸಿದ್ದು ಯಾಕೆ?
    ಕಂಪನಿಗಳು ಈ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸ್ಥಳೀಯರಿಗೆ ಹೆಚ್ಚಿನ ಸಂಬಳ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡದೇ, ಹೊರದೇಶಗಳಿಂದ ಕಡಿಮೆ ಸಂಬಳಕ್ಕೆ ವೃತ್ತಿಪರರನ್ನು ಕರೆಸಿಕೊಂಡು ಉದ್ಯೋಗ ನೀಡುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ.

    ಯಾವ ದೇಶದ ಜನತೆ ಹೆಚ್ಚು ವೀಸಾ ಪಡೆದಿದ್ದಾರೆ?
    ಹೆಚ್-1ಬಿ ವೀಸಾವನ್ನು ಪಡೆದ ದೇಶಗಳಲ್ಲಿ ಭಾರತವೇ ನಂ.1. ಈ ದೇಶವೇ ಶೇ.71 ರಷ್ಟು ಪಾಲನ್ನು ಹೊಂದಿದೆ. ಶೇ.12 ರಷ್ಟನ್ನು ಚೀನಾ ಹೊಂದಿದೆ. ಶೇ.17 ರಷ್ಟನ್ನು ಜಗತ್ತಿನ ಇತರೆ ದೇಶಗಳು ಹೊಂದಿವೆ.

    ವೀಸಾಕ್ಕಾಗಿ ಎಷ್ಟು ಅರ್ಜಿ ಸಲ್ಲಿಕೆ?
    ಕಳೆದ ವರ್ಷ ಮಾರ್ಚ್ನಲ್ಲಿ ನೋಂದಣಿ ಮುಕ್ತಾಯಗೊಂಡ ಕೊನೆಯ ಹೆಚ್-1ಬಿ ಲಾಟರಿ ಸುತ್ತಿಗೆ ಸುಮಾರು 3,39,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ವಾರ್ಷಿಕ ಮಿತಿಯನ್ನು ಮೀರಿದೆ. ಯುಎಸ್‌ಸಿಐಎಸ್ ದತ್ತಾಂಶದ ಪ್ರಕಾರ, ಆ ಪೈಕಿ 1,20,141 ಅರ್ಜಿಗಳನ್ನು ಲಾಟರಿಗೆ ಆಯ್ಕೆ ಮಾಡಲಾಗಿದೆ. (ಹೊಸ ಶುಲ್ಕವು ಆ ಅರ್ಜಿದಾರರ ಮೇಲೂ ಪರಿಣಾಮ ಬೀರಲ್ಲ).

    ಹೆಚ್ಚು ವೀಸಾ ಹೊಂದಿರುವ ಕಂಪನಿಗಳು ಯಾವುವು?
    ಅಮೆಜಾನ್: 10,044
    ಟಿಸಿಎಸ್: 5,505
    ಮೈಕ್ರೋಸಾಫ್ಟ್: 5,189
    ಮೆಟಾ: 5,123
    ಆ್ಯಪಲ್: 4,202
    ಗೂಗಲ್: 4,181
    ಜೆಪಿಮಾರ್ಗನ್: 2,440
    ಅಮೆಜಾನ್ ವೆಬ್ ಸರ್ವಿಸಸ್: 2,347
    ಇನ್ಫೊಸಿಸ್: 2,004
    ಮೈಂಡ್‌ಟ್ರೀ: 1,807

    ಹೊಸ ಶುಲ್ಕ ಯಾರಿಗೆ ಅನ್ವಯ?
    ಹೊಸ ಶುಲ್ಕವು ಹೊಸ ಅರ್ಜಿಗಳಿಗಷ್ಟೇ ಅನ್ವಯವಾಗುತ್ತದೆ (ಮುಂದಿನ ಲಾಟರಿ ಸೈಕಲ್‌ಗೆ).

    ಈಗಾಗಲೇ ಈ ವೀಸಾ ಹೊಂದಿರುವವರ ಕಥೆ ಏನು?
    ಹೆಚ್-1ಬಿ ವೀಸಾದಡಿ ಈಗಾಗಲೇ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಿಲ್ಲ. ವೀಸಾ ಅವಧಿ ಮುಕ್ತಾಯಗೊಂಡ ಬಳಿಕ ಸಲ್ಲಿಸುವ ನವೀಕರಣ ಅರ್ಜಿಗೂ ಇದು ಅನ್ವಯಿಸಲ್ಲ.

    ಯಾರ ಮೇಲೆ ಹೆಚ್ಚು ಎಫೆಕ್ಟ್?
    ಈ ವೀಸಾದಡಿ ಅಮೆರಿಕಗೆ ತೆರಳುವವರಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ನಂತರದ ಸ್ಥಾನದಲ್ಲಿ ಚೀನೀಯರು ಬರುತ್ತಾರೆ. ಅಮೆರಿಕದಲ್ಲಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳಲ್ಲಿ ಈ ಎರಡು ದೇಶಗಳ ಜನರೇ ಹೆಚ್ಚು. ಒಂದು ದಶಕಕ್ಕೂ ಹೆಚ್ಚು ಕಾಲ ಪ್ರತಿವರ್ಷ ಅನುಮೋದಿಸಲಾದ ಹೆಚ್-1ಬಿ ವೀಸಾದಡಿ ಹೋಗುತ್ತಿರುವವರಲ್ಲಿ ಶೇ.60 ರಷ್ಟು ಮಂದಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳನ್ನೇ ಹೊಂದಿದ್ದಾರೆ. 2010 ರಿಂದ ಹೆಚ್ಚಿನ ಹೆಚ್-1ಬಿ ವೀಸಾ ಅನುಮೋದನೆಗಳು ಭಾರತೀಯರಿಗೆ ಸಿಕ್ಕಿವೆ ಎಂದು ಪ್ಯೂ ರಿಸರ್ಚ್ ತಿಳಿಸಿದೆ. ಇದನ್ನೂ ಓದಿ: H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    ತಜ್ಞರು ಹೇಳೋದೇನು?
    ಹೊಸ ಶುಲ್ಕ ಕ್ರಮದಿಂದ ಅಮೆರಿಕಗೆ ತುಂಬಾ ನಷ್ಟ. ಯುಎಸ್‌ನಲ್ಲಿರುವ ಭಾರತದ ಐಟಿ ಕಂಪನಿಗಳು ಸುಮಾರು ಶೇ.50ರಿಂದ ಶೇ.80 ರಷ್ಟು ಸ್ಥಳೀಯರನ್ನೇ ನೇಮಿಸಿಕೊಂಡಿವೆ. ಹೊಸ ಶುಲ್ಕ ನೀತಿಯಿಂದ ಭಾರತೀಯರನ್ನು ನೇಮಿಸಿಕೊಳ್ಳಲು ಕಂಪನಿಗಳು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಈ ಹೊರೆಯನ್ನು ತಪ್ಪಿಸಲು ಕಂಪನಿಗಳು ಹೊರದೇಶಗಳಿಂದಲೇ ತಮ್ಮ ಕಂಪನಿಗಳ ಕಾರ್ಯಾಚರಣೆಯನ್ನು ಹೆಚ್ಚಿಸಬಹುದು. ಇದರಿಂದ ಅಮೆರಿಕಗೆ ತುಂಬಾ ನಷ್ಟವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

    ಭವಿಷ್ಯದ ಯುವಜನರ ಕನಸು ಭಗ್ನ
    ಅಮೆರಿಕದಲ್ಲಿ ದುಡಿದು ಹಣ ಸಂಪಾದಿಸಬೇಕೆಂದು ಪ್ರತಿಭಾವಂತ ಯುವಸಮುದಾಯ ಕನಸು ಕಾಣುತ್ತದೆ. ಅಂತಹವರಿಗೆ ಹೆಚ್-1ಬಿ ವೀಸಾ ಸಂಪರ್ಕ ಸೇತುವೆಯಂತೆ ಇದೆ. ಈ ವೀಸಾ ಮೂಲಕ ಯುಎಸ್‌ಗೆ ತೆರಳಿ ಒಂದಷ್ಟು ವರ್ಷ ಕೆಲಸ ಮಾಡಿ, ಹೆಚ್ಚಿನ ಸಂಪಾದನೆ ಮಾಡಿ ನಂತರ ಪೌರತ್ವ ಪಡೆದು ಅಲ್ಲಿಯೇ ನೆಲೆಸಿರುವವರ ಸಂಖ್ಯೆಯೂ ಹೆಚ್ಚಿದೆ. ಅದೇ ರೀತಿಯ ಕನಸನ್ನು ಈಗಿನ ಯುವಸಮುದಾಯವೂ ಕಾಣುತ್ತಿರುತ್ತದೆ. ಆದರೆ, ಟ್ರಂಪ್ ನೀತಿಯು ಅಂತಹ ಲಕ್ಷಾಂತರ ಕೌಶಲ್ಯಯುಕ್ತ ಯುವಕ-ಯುವತಿಯರ ಕನಸಿಗೆ ತಣ್ಣೀರೆರಚಿದೆ.

  • ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

    ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

    ಕಾಬೂಲ್‌: ಅಫ್ಘಾನಿಸ್ತಾನದಿಂದ (Afghanistan) ತನ್ನ ಸೇನಾ ಪಡೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡಿರುವ ಅಮೆರಿಕ ಇದೀಗ ಮತ್ತೆ ಅಫ್ಫಾನಿಸ್ತಾನದ ಮೇಲೆ ಕಣ್ಣಿಟ್ಟಿದೆ. ಅಫ್ಘಾನಿಸ್ತಾನದ ಬಾಗ್ರಾಮ್ ವಾಯುನೆಲೆಯ ನಿಯಂತ್ರಣವನ್ನು ಅಮೆರಿಕ ಮರಳಿ ಪಡೆಯಬೇಕು ಎಂಬ ಬೇಡಿಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾನುವಾರ ಪುನರುಚ್ಚರಿಸಿದ್ದಾರೆ. ಆದ್ರೆ ಈ ಬೇಡಿಕೆಯನ್ನು ತಾಲಿಬಾನ್‌ ನಿರಾಕರಿಸಿದೆ.

    ಅಮೆರಿಕದ ಯಾವ್ದೇ ಬೆದೆರಿಕೆಗೂ ನಾವು ಹೆದರಲ್ಲ ಎಂದಿದೆ. ಅಲ್ಲದೇ ಒಂದೇ ಒಂದಿಂಚು ಜಾಗವನ್ನೂ ಬಿಡಲ್ಲ ಎಂದು ತಿರುಗೇಟು ನೀಡಿದೆ. ಇದು ಅಮೆರಿಕ ಹಾಗೂ ತಾಲಿಬಾನ್‌ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ.

    Donald Trump 3

    ಅಫ್ಘಾನ್‌ಗೆ ಟ್ರಂಪ್‌ ಎಚ್ಚರಿಕೆ
    ಟ್ರಂಪ್‌ ಆಡಳಿತವು ಪ್ರಸ್ತುತ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗೆ ವಾಯುನೆಲೆಯನ್ನು ಅಮೆರಿಕದ ನಿಯಂತ್ರಣಕ್ಕೆ ತರುವ ಸಾಧ್ಯತೆಗಳ ಕುರಿತು ಚರ್ಚಿಸುತ್ತಿದೆ. ನಾವು ಶೀಘ್ರದಲ್ಲೇ ವಾಯುನೆಲೆಯನ್ನು ಮರಳಿ ಪಡೆಯಲು ಬಯಸಿದ್ದೇವೆ. ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ ನಾನು ಏನು ಮಾಡಲಿದ್ದೇನೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ಅಫ್ಘಾನಿಸ್ತಾನವು ಬಾಗ್ರಾಮ್ ವಾಯುನೆಲೆಯನ್ನು ಅದನ್ನು ನಿರ್ಮಿಸಿದವರಿಗೆ ಮರಳಿ ನೀಡದಿದ್ದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಲಿದೆ ಎಂದು ಟ್ರಂಪ್‌ ಅವರು ತಾಲಿಬಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ವಾಯುನೆಲೆ ಮೇಲೆ ಟ್ರಂಪ್ ಕಣ್ಣೇಕೆ?
    ಬಾಗ್ರಾಮ್ ಏರ್ ಬೇಸ್ (Bagram Air Base) 2021ರಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡ ನಂತರ ತಾಲಿಬಾನ್ ನಿಯಂತ್ರಣಕ್ಕೆ ಬಂದಿತ್ತು. ಜುಲೈ 2021 ರಲ್ಲಿ ಬಾಗ್ರಾಮ್ ವಾಯುನೆಲೆಯನ್ನು ಅಧಿಕೃತವಾಗಿ ಖಾಲಿ ಮಾಡಿದ ಅಮೆರಿಕ ಪಡೆಗಳು ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಮಿಲಿಟರಿ ಉಪಸ್ಥಿತಿಯ ಸಾಂಕೇತಿಕ ಅಂತ್ಯವೆಂದು ಪರಿಗಣಿಸಲಾಯಿತು. ನೆಲೆಯ ಮೇಲಿನ ಅಮೆರಿಕದ ನಿಯಂತ್ರಣವನ್ನು ತ್ಯಜಿಸಿರುವುದನ್ನು ಟ್ರಂಪ್ ಹಲವಾರು ಸಂದರ್ಭಗಳಲ್ಲಿ ಟೀಕಿಸಿದ್ದಾರೆ. ಜೊತೆಗೆ ದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮಾಜಿ ಅಧ್ಯಕ್ಷ ಜೋ ಬಿಡೆನ್ ಸರ್ಕಾರದ ನಿರ್ಧಾರವನ್ನು ʻಸಂಪೂರ್ಣ ದುರಂತʼ ಎಂದು ಕರೆದಿದ್ದಾರೆ. ನಾವು ಅದನ್ನು ಅವರಿಗೆ ವ್ಯರ್ಥವಾಗಿ ನೀಡಿದ್ದೇವೆ. ನಾವು ಆ ನೆಲೆಯನ್ನು ಮರಳಿ ಬಯಸುತ್ತೇವೆ ಎಂದು ಟ್ರಂಪ್‌ ತಮ್ಮ ಟ್ರುತ್‌ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

    ಅಫ್ಘಾನ್‌ ಖಡಕ್‌ ರಿಯಾಕ್ಷನ್‌ ಏನು?
    ಟ್ರಂಪ್‌ ಹೇಳಿಕೆಗೆ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಮುಖ್ಯಸ್ಥ ಫಸಿಹುದ್ದೀನ್ ಫಿತ್ರಾತ್ ಪ್ರತಿಕ್ರಿಯಿಸಿದ್ದು, ಕೆಲವರು ರಾಜಕೀಯ ಒಪ್ಪಂದದ ಮೂಲಕ ವಾಯುನೆಲೆಯನ್ನು ಹಿಂದಕ್ಕೆ ಪಡೆಯಲು ಬಯಸುತ್ತಿದ್ದಾರೆ. ಬಾಗ್ರಾಮ್ ವಾಯುನೆಲೆಯನ್ನ ವಾಪಸ್ ಪಡೆಯಲು ಅಫ್ಘಾನಿಸ್ತಾನದೊಂದಿಗೆ ಮಾತುಕತೆ ನಡೆಸಿದ್ದಾರೆ. ಆದ್ರೆ ಅಫ್ಘಾನಿಸ್ತಾನದ ಒಂದು ಇಂಚು ಮಣ್ಣನ್ನೂ ನಾವು ಬಿಟ್ಟುಕೊಡಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

  • ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಲಂಡನ್: ಅಮೆರಿಕದ (USA) ತೀವ್ರ ವಿರೋಧದ ನಡುವೆಯೂ ಬ್ರಿಟನ್ ಸರ್ಕಾರವು ಪ್ಯಾಲೆಸ್ಟೀನ್‌ಗೆ (Palestine) ದೇಶದ ಮಾನ್ಯತೆ ನೀಡಲು ಮುಂದಾಗಿದೆ.

    ಗಾಜಾದಲ್ಲಿ ನಡೆಸುತ್ತಿರುವ ಯುದ್ಧ ಸಂಬಂಧ ಬ್ರಿಟನ್ ಸರ್ಕಾರ ಇಸ್ರೇಲ್‌ಗೆ (Israel) ಕೆಲ ನಿಬಂಧನೆ ವಿಧಿಸಿತ್ತು. ಆದ್ರೆ ಇಸ್ರೇಲ್‌ ನಿಬಂಧನೆ ಪಾಲಿಸದ ಹಿನ್ನೆಲೆ ಬ್ರಿಟನ್‌ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

    ಸೋಮವಾರದಿಂದ (ಸೆ.22) ವಿಶ್ವಸಂಸ್ಥೆಯ (United Nations) 80ನೇ ಸಾಮಾನ್ಯ ಸಭೆ ಆರಂಭವಾಗಲಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧ, ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಅದಕ್ಕೂ ಮುನ್ನ ಬ್ರಿಟನ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಪೋರ್ಚುಗಲ್ ಸೇರಿದಂತೆ ಸುಮಾರು 140 ದೇಶಗಳು ಪ್ಯಾಲೆಸ್ಟೀನ್ ಅನ್ನು ಪ್ರತ್ಯೇಕ ದೇಶವನ್ನಾಗಿ ಪರಿಗಣಿಸಲು ಮುಂದಾಗಿವೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ಇದೊಂದು ಸಾಂಕೇತಿಕ ನಡೆಯಾಗಲಿದೆಯಾದರೂ ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಈ ನಿರ್ಧಾರವು ರಾಜತಾಂತ್ರಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು. ಇದರಿಂದ ಗಾಜಾದಲ್ಲಿ ಶಾಂತಿ ನೆಲಸಬಹುದು ಎಂದು ಬ್ರಿಟನ್ ಆಶಿಸಿದೆ. ಫ್ರಾನ್ಸ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಇಸ್ರೇಲ್‌ನಲ್ಲಿರುವ ಶಾಂತಿಪರ ಹೋರಾಟಗಾರರು ಸ್ವಾಗತಿಸಿದ್ದಾರೆ. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    ಈ ಬೆಳವಣಿಗೆ ನಡುವೆಯೇ ಗಾಜಾ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಒಂದೇ ದಿನ 91 ಸಾವು ಸಾವನ್ನಪ್ಪಿದ್ದಾರೆ. ಇದರಿಂದ ಟೆಲ್ ಅವೀವ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳಲು ವಾಯು ಮತ್ತು ಭೂಸೇನಾ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಇಸ್ರೇಲಿ ಪಡೆಗಳು ಒಂದೇ ದಿನದಲ್ಲಿ ಗಾಜಾದಲ್ಲಿ 91 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿವೆ. ಪ್ರಮುಖ ವೈದ್ಯರ ಕುಟುಂಬ ಸದಸ್ಯರು ಮತ್ತು ಉತ್ತರ ಗಾಜಾ ನಗರದ ಹಲವಾರು ಜನರು ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.