Tag: donald trump

  • ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್ ಬಿಸಿನೆಸ್ ಪಾರ್ಟ್ನರ್

    ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್ ಬಿಸಿನೆಸ್ ಪಾರ್ಟ್ನರ್

    ಮಂಗಳೂರು: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವ್ಯಾವಹಾರಿಕ ಪಾಲುದಾರ ಶಶಿಭೂಷಣ್ ಅವರು ಮಂಗಳೂರಿಗೆ ಭೇಟಿ ನೀಡಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ (Kukke Shri Subrahmanya Temple) ದರ್ಶನ ಪಡೆದರು.

    ಚಂಪಾಷಷ್ಠಿ ದಿನ ಶಶಿಭೂಷಣ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಮೆರಿಕಾದಲ್ಲಿ ನೆಲೆಸಿರುವ ಇವರು ಹೈದರಾಬಾದ್‌ನ ಮೂಲದವರು. ಶಶಿಭೂಷಣ್ ಅಮೆರಿಕದಲ್ಲಿ 500 ಎಕರೆ ಜಾಗದಲ್ಲಿ 3,000 ಕೋಟಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ಕಟ್ಟಿಸುತ್ತಿದ್ದಾರೆ.

    ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ಮುನ್ನಡೆಸಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಈಗ ಅತ್ಯಂತ ಇತಿಹಾಸ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ.

  • 16ನೇ ವರ್ಷಕ್ಕೆ ಸ್ಕೂಲ್‌ ಡ್ರಾಪ್‌ಔಟ್‌ – ಬಿಲಿಯನೇರ್‌, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!

    16ನೇ ವರ್ಷಕ್ಕೆ ಸ್ಕೂಲ್‌ ಡ್ರಾಪ್‌ಔಟ್‌ – ಬಿಲಿಯನೇರ್‌, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಜ್ಜಾಗುತ್ತಿರುವ ಡೊನಾಲ್ಡ್‌ ಟ್ರಂಪ್‌ (Donald Trump) ತಮ್ಮ ಕಾರ್ಯವರ್ಗಕ್ಕೆ ಈಗ ನಾಸಾ (NASA) ಮುಖ್ಯಸ್ಥರಾಗಿ ಬಿಲಿಯನೇರ್, ಗಗನಯಾತ್ರಿ ಜೇರೆಡ್ ಐಸಾಕ್‌ಮನ್  ಅವರನ್ನು (Jared Isaacman) ಆಯ್ಕೆ ಮಾಡಿದ್ದಾರೆ.

    ಜೇರೆಡ್ ಐಸಾಕ್‌ಮನ್ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರ ಉದ್ದಿಮೆ ಪಾಲುದಾರರಾಗಿದ್ದಾರೆ. ಸ್ಪೇಸ್ ಎಕ್ಸ್ ಚಟುವಟಿಕೆಯಲ್ಲಿ ಜೆರ್ಡ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜೇರೆಡ್ ನೇಮಕ ಈಗ ಭಾರೀ ಟೀಕೆ-ಟಿಪ್ಪಣಿಗಳಿಗೆ ಕಾರಣವಾಗಿದೆ.

     

    ಟ್ರಂಪ್‌ ಹೇಳಿದ್ದೇನು?
    ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥರಾಗಿ ಲೋಕೋಪಕಾರಿ, ಪೈಲಟ್ ಮತ್ತು ಗಗನಯಾತ್ರಿ ಜೇರೆಡ್ ಐಸಾಕ್‌ಮನ್ಅ ವರನ್ನು ನಾಮನಿರ್ದೇಶನ ಮಾಡಲು ನಾನು ಸಂತೋಷಪಡುತ್ತೇನೆ.

    ಕಳೆದ 25 ವರ್ಷಗಳಲ್ಲಿ Shift4 ನ ಸಂಸ್ಥಾಪಕ ಮತ್ತು CEO ಆಗಿ ಜೇರೆಡ್ ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಜಾಗತಿಕ ಹಣಕಾಸು ತಂತ್ರಜ್ಞಾನ ಕಂಪನಿಯನ್ನು ನಿರ್ಮಿಸಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ಬೆಂಬಲಿಸುವ ಡಿಫೆನ್ಸ್ ಏರೋಸ್ಪೇಸ್ ಕಂಪನಿಯಾದ ಡ್ರೇಕನ್ ಇಂಟರ್‌ನ್ಯಾಷನಲ್‌ ಸ್ಥಾಪಿಸಿದ್ದಾರೆ. ಜೇರೆಡ್‌ನ ಬಾಹ್ಯಾಕಾಶ, ಗಗನಯಾತ್ರಿ ಅನುಭವ ಬ್ರಹ್ಮಾಂಡದ ರಹಸ್ಯಗಳನ್ನು ತಿಳಿಯಲು ಮತ್ತು  ನಾಸಾವನ್ನು ಹೊಸ ಯುಗದಲ್ಲಿ ಮುನ್ನಡೆಸಲು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಟ್ರಂಪ್‌ ಬಣ್ಣಿಸಿದ್ದಾರೆ.

    ಯಾರು ಈ ಐಸಾಕ್‌ಮನ್?
    41 ವರ್ಷದ ಜೇರೆಡ್ ಐಸಾಕ್‌ಮನ್ ಒಬ್ಬ ಪ್ರಮುಖ ಅಮೇರಿಕನ್ ವಾಣಿಜ್ಯೋದ್ಯಮಿ, ಪೈಲಟ್ ಮತ್ತು ಗಗನಯಾತ್ರಿಯಾಗಿದ್ದಾರೆ. ನ್ಯೂಜೆರ್ಸಿಯಲ್ಲಿ ಜನಿಸಿದ ಇವರು 16ನೇ ವಯಸ್ಸಿನಲ್ಲಿ ಪ್ರೌಢಶಾಲೆಗೆ ಗುಡ್‌ಬೈ ಹೇಳಿ ಪೋಷಕರ ನೆರವಿನಿಂದ Shift4 ಪಾವತಿ ಕಂಪನಿ ಸ್ಥಾಪಿಸಿದ್ದರು. ಇದನ್ನೂ ಓದಿ: ಒತ್ತೆಯಾಳುಗಳನ್ನ ಬಿಡುಗಡೆ ಮಾಡದಿದ್ರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ: ಹಮಾಸ್‌ಗೆ ಟ್ರಂಪ್‌ ವಾರ್ನಿಂಗ್

    ಈ ಪಾವತಿ ಸಂಸ್ಕರಣಾ ಕಂಪನಿಯು ಈಗ ಸರಿಸುಮಾರು 7.4 ಶತಕೋಟಿ ಡಾಲರ್‌ ಮೌಲ್ಯವನ್ನು ಹೊಂದಿದೆ. ಹಿಲ್ಟನ್ ಮತ್ತು KFC ನಂತಹ ಪ್ರಮುಖ ಬ್ರಾಂಡ್‌ಗಳಿಗೆ ಪಾವತಿ ವ್ಯವಸ್ಥೆಯಾಗಿ ಬಳಕೆಯಾಗುತ್ತಿದೆ.

    ವಾಯುಯಾನದ ಬಗ್ಗೆ ಅಪಾರವಾದ ಆಸಕ್ತಿ ಬೆಳೆಸಿದ್ದ ಇವರು 2009ರಲ್ಲಿ ಲೆಟ್‌ ಜೆಟ್‌ನಲ್ಲಿ 62 ಗಂಟೆ ಸುತ್ತಿ ವಿಶ್ವದಾಖಲೆ ಬರೆದಿದ್ದರು.

    ಸೆಪ್ಟೆಂಬರ್ 2024 ರಲ್ಲಿ ಸ್ಪೇಸ್‌ಎಕ್ಸ್‌ನಿಂದ (SpaceX Polaris Dawn Mission) ಹಮ್ಮಿಕೊಂಡಿದ್ದ ‘ಪೋಲಾರಿಸ್‌ ಡಾನ್‌ ಮಿಷನ್’‌ ಬಾಹ್ಯಾಕಾಶ ನಡಿಗೆ (Spacewalk) ಯಶಸ್ವಿಯಾಗಿತ್ತು ಮತ್ತು ನಾಲ್ವರು ಗಗನಯಾತ್ರಿಕರು ಅಂತರಿಕ್ಷದಲ್ಲಿ ಓಡಾಟ ನಡೆಸಿದ್ದರು. ಜೇರೆಡ್ ಐಸಾಕ್‌ಮನ್‌ ಖಾಸಗಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದ ಮೊದಲ ವ್ಯಕ್ತಿಯಾಗಿದ್ದರು.

     

  • ಒತ್ತೆಯಾಳುಗಳನ್ನ ಬಿಡುಗಡೆ ಮಾಡದಿದ್ರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ: ಹಮಾಸ್‌ಗೆ ಟ್ರಂಪ್‌ ವಾರ್ನಿಂಗ್

    ಒತ್ತೆಯಾಳುಗಳನ್ನ ಬಿಡುಗಡೆ ಮಾಡದಿದ್ರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ: ಹಮಾಸ್‌ಗೆ ಟ್ರಂಪ್‌ ವಾರ್ನಿಂಗ್

    ನ್ಯೂಯಾರ್ಕ್‌: ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಮಾಸ್‌ (Hamas) ಬಂಡುಕೋರರಿಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದಾರೆ.

    2025ರ ಜ.20ರ ಒಳಗಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತೆ. ಮಧ್ಯಪ್ರಾಚ್ಯ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ವಾರ್ನಿಂಗ್‌ ನೀಡಿದ್ದಾರೆ. ಟ್ರಂಪ್ ಇಸ್ರೇಲ್‌ಗೆ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ. ಬೈಡೆನ್ ಅವರ ಸಾಂದರ್ಭಿಕ ಟೀಕೆಗಳನ್ನು ತ್ಯಜಿಸಲು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ | ಭದ್ರತಾ ಪಡೆ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆ

    2023ರ ಅ.7 ರಂದು ಹಮಾಸ್, ಇಸ್ರೇಲ್ ಮೇಲೆ ಅತ್ಯಂತ ಭೀಕರ ದಾಳಿಯನ್ನು ನಡೆಸಿತು. ಈ ದಾಳಿಯಲ್ಲಿ 1,208 ಮಂದಿ ಮೃತಪಟ್ಟರು. ದಾಳಿಯ ಸಂದರ್ಭದಲ್ಲಿ ಉಗ್ರರು 251 ಒತ್ತೆಯಾಳುಗಳನ್ನು ವಶಕ್ಕೆ ಪಡೆದಿದ್ದರು. ಅವರಲ್ಲಿ ಕೆಲವರು ಈಗಾಗಲೇ ಮೃತಪಟ್ಟಿದ್ದಾರೆ. ಆ ಪೈಕಿ 97 ಮಂದಿಯನ್ನು ಇನ್ನೂ ಗಾಜಾದಲ್ಲಿ ಬಂಧಿಸಲಾಗಿದ್ದು, ಇದರಲ್ಲಿ 35 ಮಂದಿ ಸಾವಿಗೀಡಾಗಿದ್ದಾರೆ ಎಂದು ಸೇನೆ ಹೇಳಿದೆ.

    ಇಸ್ರೇಲ್‌ನ ಪ್ರತೀಕಾರದ ಅಭಿಯಾನವು ಗಾಜಾದಲ್ಲಿ 44,429 ಜನರ ಸಾವಿಗೆ ಕಾರಣವಾಗಿದೆ ಎಂದು ಪ್ರದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: Kerala| ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಐವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ, ಇಬ್ಬರು ಗಂಭೀರ

  • ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷಾಗಿ 2ನೇ ಬಾರಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಭಾರತ (Indian American) ಮೂಲದ ಕಶ್ಯಪ್ ʻಕಶ್ʼ ಪಟೇಲ್ ಅವರನ್ನ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಈ ಮೂಲಕ ಟ್ರಂಪ್‌ ಸಂಪುಟಕ್ಕೆ ಆಯ್ಕೆಯಾದ ಭಾರತೀಯ ಮೂಲದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಕಶ್ಯಪ್ ಅವರದ್ದಾಗಿದೆ.

    ಈ ಮಾಹಿತಿಯನ್ನು ಟ್ರಂಪ್‌ (Donald Trump) ತಮ್ಮ ಟ್ರೂಥ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ಕಶ್‌, ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಎಫ್‌ಬಿಐಗೆ ಇನ್ನಷ್ಟು ಸಮಗ್ರತೆಯನ್ನು ತರಲಿದ್ದಾರೆ. ಕಶ್ ಪಟೇಲ್ ಅವರು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಪ್ರಕಟಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.

    ಯಾರು ಈ ಕಶ್‌?
    ಕಾಶ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯವನ್ನು ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ರಷ್ಯಾದ ಹುಸಿ ಬೆದರಿಕೆ ಅನಾವರಣಗೊಳಿಸುವಲ್ಲಿ ಕಶ್ಯಪ್‌ ಅವರ ಪಾತ್ರ ದೊಡ್ಡದಿದೆ. ಸತ್ಯದ ಪರ ವಕೀಲರಾಗಿ, ಬದ್ಧತೆ ಮತ್ತು ಸಂವಿಧಾನದ ಪರವಾಗಿ ಸದಾ ನಿಂತವರು. ನನ್ನ ಮೊದಲ ಅವಧಿಯಲ್ಲಿ ಕಶ್ ರಕ್ಷಣಾ ವಿಭಾಗದ ಸಿಬ್ಬಂದಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ ನಿರ್ದೇಶಕರಾಗಿ ಮತ್ತು ಭಯೋತ್ಪಾದೆ ವಿರೋಧಿ ವಿಭಾಗದ ಹಿರಿಯ ನಿರ್ದೇಶಕರಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಸಾಧಾರಣ ಕೆಲಸ ಮಾಡಿದ್ದಾರೆ ಎಂದು ಟ್ರಂಪ್‌ ಗುಣಗಾನ ಮಾಡಿದ್ದಾರೆ.

    ಬರಾಕ್ ಒಬಾಮಾ ಅವರ ಅವಧಿಯಲ್ಲಿ ನ್ಯಾಯ ವಿಭಾಗದಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದ್ದ ಕಶ್ಯಪ್‌ ಅವರು 2 ವರ್ಷಗಳ ಕಾಲ ಡೆವಿನ್ ನ್ಯೂನ್ಸ್, ಆರ್-ಕ್ಲಿಫ್ ಪರ ಹಿರಿಯ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 2017 ಮತ್ತು 2018ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಎಫ್‌ಬಿಐ ರಷ್ಯಾ ತನಿಖೆಗೆ ನೆರವಾಗಿದ್ದರು.

    44 ವರ್ಷದ ಕಶ್ಯಪ್‌ ಪಟೇಲ್‌ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತಿ ಮೂಲದ ದಂಪತಿಗೆ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಜನಿಸಿದರು. ಕಾನೂನು ಪದವಿ ಪಡೆದ ನಂತರ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.

  • ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಡೊನಾಲ್ಡ್‌ ಟ್ರಂಪ್ (Donald Trump) ಚೀನಾ, ಮೆಕ್ಸಿಕೋ ಮತ್ತು ಕೆನಡಾಗೆ ಶಾಕ್ ನೀಡಿದ್ದಾರೆ.

    ಜ.20 ರಂದು ತಾನು ಅಧಿಕಾರ ಸ್ವೀಕರಿಸಿದ ಕೂಡಲೇ ಮೆಕ್ಸಿಕೋ, ಕೆನಡಾದಿಂದ ಆಮದಾಗುವ ಉತ್ಪನ್ನಗಳ ಮೇಲೆ 25% ರಷ್ಟು ತೆರಿಗೆ ವಿಧಿಸುವ ಕಡತಕ್ಕೆ ಸಹಿ ಹಾಕುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ.

    ಕಾನೂನುಬಾಹಿರವಾದ ಮಾದಕವಸ್ತು ಸರಬರಾಜು, ವಲಸೆಗಳಿಗೆ ವಿರುದ್ಧವಾಗಿ ತಾನು ಈ ನಿರ್ಧಾರ ತೆಗೆದುಕೊಳ್ಳೋದಾಗಿ ಟ್ರಂಪ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಚೀನಾ (China) ಉತ್ಪನ್ನಗಳ ಮೇಲೆ ಹೆಚ್ಚುವರಿ 10% ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಹಿಂಸಾಚಾರಕ್ಕೆ ನಾಲ್ವರು ಸೈನಿಕರು ಸೇರಿ 5 ಸಾವು – ಸೇನೆಯಿಂದ ಕಂಡಲ್ಲಿ ಗುಂಡು ಆದೇಶ

    ಅಮೆರಿಕ (USA) ವಿಶ್ವದ ದೊಡ್ಡ ಆಮುದುದಾರ ದೇಶವಾಗಿದೆ. ಅಮರಿಕಕ್ಕೆ ಆಮದಾಗುವ ವಸ್ತುಗಳ ಪೈಕಿ ಕೆನಡಾ, ಚೀನಾ, ಮೆಕ್ಸಿಕೋದ ಪಾಲು 40% ಇದೆ.

    ಟ್ರಂಪ್ ಘೋಷಣೆ ಮಾಡಿದ ನಂತರ, ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರೊಂದಿಗೆ ಸುಮಾರು 10 ನಿಮಿಷಗಳ ಕಾಲ ವ್ಯಾಪಾರ ಮತ್ತು ಗಡಿ ಭದ್ರತೆಯ ಬಗ್ಗೆ ಚರ್ಚಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಗೆ ಹೋಲಿಸಿದರೆ ಕೆನಡಾದ ಗಡಿಯನ್ನು ದಾಟುವ ವಲಸಿಗರ ಸಂಖ್ಯೆ ಬಹಳ ಸಣ್ಣದು ಎಂದು ಟ್ರುಡೋ ಹೇಳಿರುವುದಾಗಿ ವರದಿಯಾಗಿದೆ.

     

  • ರಷ್ಯಾ ಮೇಲೆ ಕ್ಷಿಪಣಿ ದಾಳಿಗೆ ಅಮೆರಿಕ ಒಪ್ಪಿಗೆ – ಉಕ್ರೇನ್‌ಗೆ ಜೋ ಬೈಡನ್‌ ಬಲ

    ರಷ್ಯಾ ಮೇಲೆ ಕ್ಷಿಪಣಿ ದಾಳಿಗೆ ಅಮೆರಿಕ ಒಪ್ಪಿಗೆ – ಉಕ್ರೇನ್‌ಗೆ ಜೋ ಬೈಡನ್‌ ಬಲ

    ವಾಷಿಂಗ್ಟನ್: ರಷ್ಯಾ-ಉಕ್ರೇನ್‌ (Russia- Ukraine) ಯುದ್ಧವನ್ನು ನಿಲ್ಲಿಸುತ್ತೇನೆ ಎಂದು ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದರೂ ಈಗ ಯದ್ಧ ಮತ್ತಷ್ಟು ತೀವ್ರಗೊಳ್ಳುತ್ತಾ ಎಂಬ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ (Joe Biden) ಅವರು ರಷ್ಯಾ ವಿರುದ್ಧ ಯುದ್ಧ ಮಾಡುವಂತೆ ಉಕ್ರೇನ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ.

    ಈ ಹಿಂದೆ ಅಮೆರಿಕ ಉಕ್ರೇನ್‌ಗೆ ದೂರ ಸಾಗಬಲ್ಲ ಕ್ಷಿಪಣಿಯನ್ನು ನೀಡಿತ್ತು. ಆದರೆ ಈ ಕ್ಷಿಪಣಿಯ ಬಳಕೆಗೆ ನಿರ್ಬಂಧ ಹೇರಿತ್ತು. ಎರಡು ತಿಂಗಳು ಅಧಿಕಾರದಲ್ಲಿರುವ ಜೋ ಬೈಡೆನ್‌ ಸರ್ಕಾರ ಕೊನೆ ಗಳಿಗೆಯಲ್ಲಿ ಈ ನಿರ್ಬಂಧವನ್ನು ತೆಗೆದುಹಾಕಿದೆ. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

    ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ದಾಳಿಯನ್ನು ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾದ ಪಡೆಗಳನ್ನು ರಷ್ಯಾ ನಿಯೋಜಿಸಿದ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ.

    ಮೂಲಗಳ ಪ್ರಕಾರ 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ದಾಳಿಯನ್ನು ಉಕ್ರೇನ್‌ ನಡೆಸುವ ಸಾಧ್ಯತೆಯಿದೆ.

    ಡೊನಾಲ್ಡ್‌ ಟ್ರಂಪ್‌ ಅವರು ಈಗಾಗಲೇ ಉಕ್ರೇನ್‌ಗೆ ನೀಡುತ್ತಿರುವ ಸೇನಾ ನೆರವನ್ನು ನಿಲ್ಲಿಸುವುದಾಗಿ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.

    120 ಮಂದಿ ಬಲಿ: ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

     

  • ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

    ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

    ಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಚೀನಾಗೆ (China) ತಲೆನೋವು ತಂದಿದೆ. ಟ್ರಂಪ್ ಮತ್ತೆ ಅಧಿಕಾರಕ್ಕೆ ಮರಳಿರುವುದು ಇಡೀ ವಿಶ್ವದಲ್ಲಿ ರಾಜಕೀಯ ಮತ್ತು ಆರ್ಥಿಕ ಸಮೀಕರಣಗಳನ್ನು ಬದಲಿಸಿದೆ. ಇತರೆ ದೇಶಗಳೊಂದಿಗಿನ ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಬದಲಾವಣೆಯ ಸುಳಿಗಾಳಿ ಬೀಸಿದೆ. ‘ಅಮೆರಿಕ ಫಸ್ಟ್’ ಎಂಬುದು ಟ್ರಂಪ್ ಪಾಲಿಸಿ. ಇದು ಆರ್ಥಿಕವಾಗಿ ಪ್ರಬಲವಾಗಿರುವ ಇತರೆ ರಾಷ್ಟ್ರಗಳಿಗೆ ಪೆಟ್ಟು ನೀಡುವುದಂತೂ ಖಂಡಿತು. ಅದಕ್ಕಾಗಿ ನೂತನ ಅಮೆರಿಕ ಅಧ್ಯಕ್ಷರು ‘ವಾಣಿಜ್ಯ ಯುದ್ಧ’ (Trade War) ಎಂಬ ‘ಟ್ರಂಪ್’ ಕಾರ್ಡ್ ಅನ್ನು ಮತ್ತೆ ಬಳಸಲು ಮುಂದಾಗಿದ್ದಾರೆ. ಈ ಹಿಂದೆ ಜಪಾನ್ ಮೇಲೆ ಈ ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿತ್ತು. ಈಗ ಅದನ್ನು ಚೀನಾ ಮೇಲೆ ಪ್ರಯೋಗಿಸಲು ಮುಂದಾಗಿದೆ. ಜಾಗತಿಕ ಆರ್ಥಿಕತೆಯಾಗಿ ಬೆಳೆಯುತ್ತಿರುವ ಭಾರತ ಕೂಡ ಟಾರ್ಗೆಟ್ ಲಿಸ್ಟ್‌ನಲ್ಲಿದೆ ಎಂಬುದು ತಜ್ಞರ ಅಭಿಪ್ರಾಯ.

    ಪಾಶ್ಚಿಮಾತ್ಯ ನೇತೃತ್ವದ ರಾಜಕೀಯ-ಆರ್ಥಿಕ ಕ್ರಮವನ್ನು ಅನುಸರಿಸದೆಯೇ ಕೆಲವೇ ದಶಕಗಳಲ್ಲಿ ಉತ್ಪಾದನಾ ಶಕ್ತಿ ಮತ್ತು ಪ್ರಮುಖ ಜಾಗತಿಕ ರಫ್ತುದಾರನಾಗಿ ಚೀನಾ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಚೀನಾದ ಈ ಕ್ರಮವು ದೇಶದ ಕೋಟ್ಯಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿತು. ಆದಾಗ್ಯೂ, ಜಾಗತಿಕ ಪ್ರಾಬಲ್ಯಕ್ಕಾಗಿ ನಡೆಯುವ ‘ವಾಣಿಜ್ಯ ಯುದ್ಧ’ವು ಚೀನಾ ಬಾಗಿಲಿಗೆ ಬಂದು ನಿಂತಿದೆ. ಏಕೆಂದರೆ, ಮುಕ್ತ ವ್ಯಾಪಾರ ತತ್ವಗಳ ವಿರೋಧಿಯೇ ಆಗಿರುವ ಡೊನಾಲ್ಡ್ ಟ್ರಂಪ್ ಯುಎಸ್ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿದ್ದಾರೆ.

    ಅಷ್ಟಕ್ಕೂ ಏನಿದು ವಾಣಿಜ್ಯ ಯುದ್ಧ? ಈ ಅಸ್ತ್ರ ಪ್ರಯೋಗ ಯಾಕೆ? ಒಂದು ರಾಷ್ಟ್ರಕ್ಕೆ ಇದರಿಂದಾಗುವ ಅನುಕೂಲ ಅನಾನುಕೂಲಗಳೇನು? ತಿಳಿಯೋಣ ಬನ್ನಿ..

    ವಾಣಿಜ್ಯ ಯುದ್ಧ ಅಂದ್ರೇನು?
    ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ಅಥವಾ ಇತರ ದೇಶದ ಆಮದಿನ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಒಂದು ದೇಶ ಮತ್ತೊಂದು ದೇಶದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದೇ ವಾಣಿಜ್ಯ ಯುದ್ಧ.

    ವಾಣಿಜ್ಯ ಯುದ್ಧದ ಇತಿಹಾಸವೇನು?
    * ಬ್ರಿಟಿಷ್ ಸಾಮ್ರಾಜ್ಯವು ಇಂತಹ ವ್ಯಾಪಾರ ಯುದ್ಧಗಳ ಇತಿಹಾಸವನ್ನು ಹೊಂದಿದೆ. 19ನೇ ಶತಮಾನದ ಚೀನಾದೊಂದಿಗಿನ ಅಫೀಮು ಯುದ್ಧಗಳಲ್ಲಿ ಇಂತಹ ಒಂದು ಉದಾಹರಣೆ ಕಾಣಬಹುದು.
    * 1930 ರಲ್ಲಿ ಯುನೈಟೆಡ್ ಸ್ಟೇಟ್ಸ್ ಸ್ಮೂಟ್-ಹಾಲೆ ಸುಂಕ ಕಾಯ್ದೆಯನ್ನು ಜಾರಿಗೆ ತಂದಿತು. ಅಮೆರಿಕದ ರೈತರನ್ನು ಯುರೋಪಿಯನ್ ಕೃಷಿ ಉತ್ಪನ್ನಗಳಿಂದ ರಕ್ಷಿಸಲು ಸುಂಕವನ್ನು ಹೆಚ್ಚಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಹಲವಾರು ರಾಷ್ಟ್ರಗಳು ತಮ್ಮದೇ ಆದ ಹೆಚ್ಚಿನ ಸುಂಕಗಳನ್ನು ವಿಧಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಪ್ರತೀಕಾರ ತೀರಿಸಿಕೊಂಡವು. ಇದರಿಂದ ಜಾಗತಿಕ ವ್ಯಾಪಾರವು ವಿಶ್ವಾದ್ಯಂತ ಕುಸಿಯಿತು. ವಿನಾಶಕಾರಿ ವ್ಯಾಪಾರ ನೀತಿಗಳಿಂದ ಅಮೆರಿಕ ಮಹಾ ಆರ್ಥಿಕ ಕುಸಿತಕ್ಕೆ ಪ್ರವೇಶಿಸುತ್ತಿದ್ದಂತೆ, ಅಧ್ಯಕ್ಷ ರೂಸ್ವೆಲ್ಟ್ ಪರಸ್ಪರ ವ್ಯಾಪಾರ ಒಪ್ಪಂದಗಳ ಕಾಯ್ದೆ ಸೇರಿದಂತೆ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಹಲವಾರು ಕಾರ್ಯಗಳನ್ನು ಜಾರಿಗೆ ತರಲು ಪ್ರಾರಂಭಿಸಿದರು.
    * 2016 ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡೊನಾಲ್ಡ್ ಟ್ರಂಪ್ ಉಕ್ಕು ಮತ್ತು ಅಲ್ಯೂಮಿನಿಯಂನಿಂದ ಹಿಡಿದು ಸೌರ ಫಲಕಗಳ ವರೆಗೂ ಎಲ್ಲದಕ್ಕೂ ಸುಂಕ ವಿಧಿಸಿದರು. ಇದು ಯುರೋಪಿಯನ್ ಯೂನಿಯನ್ ಕೆನಡಾ, ಚೀನಾ ಮತ್ತು ಮೆಕ್ಸಿಕೊದ ಸರಕುಗಳ ಮೇಲೆ ಪರಿಣಾಮ ಬೀರಿತು. ವಾಣಿಜ್ಯ ಯುದ್ಧಕ್ಕೆ ಇಂತಹ ಹಲವಾರು ಉದಾಹರಣೆಗಳಿವೆ.

    ಜಪಾನ್ ಮೇಲೆ ವಾಣಿಜ್ಯ ಯುದ್ಧ
    ‘ಅಗ್ಗದ’ ಚೀನಿ ರಫ್ತುಗಳನ್ನು ಗುರಿಯಾಗಿಸಿ ಟ್ರಂಪ್ ಚುನಾವಣಾ ಪ್ರಚಾರ ನಡೆಸಿದ್ದರು. ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರಿಗೆ ಲಾಭವನ್ನು ತಂದುಕೊಟ್ಟಿದೆ. ಆರ್ಥಿಕ ಪ್ರಾಬಲ್ಯದ ಉದ್ದೇಶದಿಂದ ‘ಅಮೆರಿಕ ಮೊದಲು’ ಎಂಬ ಹಳೆಯ ಪ್ಲೇಕಾರ್ಡ್ ಅನ್ನೇ ಪ್ರಯೋಗಿಸಲಾಯಿತು. 1970 ರ ದಶಕದಲ್ಲಿ, ಯುಎಸ್ ಜಪಾನ್ ವಿರುದ್ಧ ಗಮನಾರ್ಹವಾದ ರೀತಿಯ ವಾಣಿಜ್ಯ ಯುದ್ಧ ನಡೆಸಿತ್ತು. ಸೋನಿ ಮತ್ತು ಟೊಯೋಟಾದಂತಹ ಬ್ರ‍್ಯಾಂಡ್‌ಗಳು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್‌ಗಳಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸಿದಾಗಿನಿಂದ ‘ವಾಣಿಜ್ಯ ಯುದ್ಧ’ ಜಪಾನ್‌ಗೆ ಬೆದರಿಕೆಯಾಗಿ ಹೊರಹೊಮ್ಮಿದೆ. 2019ರ ಅವಧಿಯಲ್ಲೂ ಟ್ರಂಪ್ ಅಧ್ಯಕ್ಷರಾಗಿದ್ದಾಗ ಯೂರೋಪ್ ಮತ್ತು ಜಪಾನ್‌ನಂತಹ ಮಿತ್ರರು ತಯಾರಿಸುವ ಉಕ್ಕಿನ ಮೇಲೆ ಸುಂಕ ಹೇರಿದ್ದರು.

    ವಾಣಿಜ್ಯ ತಜ್ಞರು ಹೇಳೋದೇನು?
    ಚೀನಾ ಟ್ರಂಪ್‌ನ ಮೊದಲ ಟಾರ್ಗೆಟ್ ಆಗಬಹುದು. ಏಷ್ಯಾದಲ್ಲಿನ ತನ್ನ ಕಾರ್ಯತಂತ್ರದ ಸ್ಥಾನದಿಂದಾಗಿ ಭಾರತಕ್ಕೆ ಲಾಭವಾಗಬಹುದು ಎಂದು ಟ್ರೇಡ್ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (ಡಬ್ಲ್ಯೂಟಿಒ) ಸುಧಾರಣೆಗೆ ಸಲಹೆ ನೀಡುವುದು ಮತ್ತು ಸಕ್ರಿಯ ಪಾತ್ರವನ್ನು ವಹಿಸುವುದು ಭಾರತದ ಹಿತಾಸಕ್ತಿಯಾಗಿದೆ. ಆದರೆ, ಯುಎಸ್ ಮತ್ತು ಭಾರತ ನಿಕಟ ಪ್ರತಿಸ್ಪರ್ಧಿಗಳಾದಾಗ ಭಾರತದ ಔಷಧೀಯ ಮತ್ತು ಸೇವಾ ಕ್ಷೇತ್ರಗಳ ಮೇಲೆ ಪೆಟ್ಟು ಬೀಳುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    ಟ್ರಂಪ್ 2ನೇ ಅವಧಿಯಲ್ಲೂ ಇರುತ್ತಾ ಲೈಟ್ಹೈಸರ್ ಪಾತ್ರ?
    ಟ್ರಂಪ್‌ನ ಮೊದಲ ಆಡಳಿತದಲ್ಲಿ ರಾಬರ್ಟ್ ಲೈಟ್ಹೈಜರ್ ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ ಆಗಿದ್ದರು. ಎರಡನೇ ಅವಧಿಯಲ್ಲಿ ಇದೇ ರೀತಿಯ ಪಾತ್ರವು, ಟ್ರಂಪ್ ನೇತೃತ್ವದ ವಾಣಿಜ್ಯ ಯುದ್ಧವು ಅಮೆರಿಕಕ್ಕೆ ಉತ್ಪಾದನಾ ಉದ್ಯೋಗಗಳನ್ನು ಮರಳಿ ತರುವ ಗುರಿಯನ್ನು ಹೊಂದಿದೆ. ಹೊಸ ವ್ಯಾಪಾರದ ಆದ್ಯತೆಯಾಗಿ ಪರಿಣಮಿಸುತ್ತದೆ. ಇದರಿಂದ ಭಾರತ ಸೇರಿದಂತೆ ಎಲ್ಲಾ ದೇಶಗಳು ಅಡ್ಡಹಾಯುವ ಸಾಧ್ಯತೆಯಿದೆ. ಲೈಟ್ಹೈಜರ್‌ನ ನಾಯಕತ್ವದಲ್ಲಿ, ಭಾರತವು 2019 ರಲ್ಲಿ ತನ್ನ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್ (ಜಿಎಸ್‌ಪಿ) ಸ್ಥಾನಮಾನವನ್ನು ಕಳೆದುಕೊಂಡಿತ್ತು. ಇದು ಯುಎಸ್‌ಗೆ 5.7 ಶತಕೋಟಿ ಮೌಲ್ಯದ ಭಾರತೀಯ ರಫ್ತುಗಳ ಲಾಭವನ್ನು ತಂದುಕೊಟ್ಟಿದೆ.

    ಮುಕ್ತ ವ್ಯಾಪಾರವು ಸುಲಭವಾದ ಆಮದುಗಳನ್ನು ಸಕ್ರಿಯಗೊಳಿಸುತ್ತದೆ. ಕಾರ್ಪೊರೇಟ್ ಲಾಭಗಳನ್ನು ಹೆಚ್ಚಿಸುತ್ತದೆ. ಇದು ಅಂತಿಮವಾಗಿ ಸ್ಥಳೀಯ ಸಮುದಾಯಗಳಿಗೆ ಉದ್ಯೋಗ ನಷ್ಟದಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದು ಲೈಟ್ಹೈಜರ್ ವಾದವಾಗಿದೆ.

    ಯುಎಸ್ ಉತ್ಪಾದನಾ ಕಂಪನಿಗಳಿಗೆ ಇತರೆ ರಾಷ್ಟ್ರಗಳ ಕಂಪನಿಗಳು ‘ಅನ್ಯಾಯ’ದ ಸ್ಪರ್ಧೆ ಒಡ್ಡುವುದರ ವಿರುದ್ಧ ಸುಂಕದ ರಕ್ಷಣೆಯನ್ನು ಪಡೆಯಲು ದಶಕಗಳ ಕಾಲ ಸಹಾಯ ಮಾಡಿದ ಲೈಟ್ಹೈಜರ್, ಡಬ್ಲ್ಯೂಟಿಒ ನಿಯಮಗಳು ಯುಎಸ್‌ಗೆ ಹಾನಿಕಾರಕವಾಗಿದೆ ಎಂದು ನಂಬುತ್ತಾರೆ. ಏಕೆಂದರೆ ಡಬ್ಲ್ಯೂಟಿಒ, ಸುಂಕದ ಮೂಲಕ ತನ್ನ ಕೈಗಾರಿಕೆಗಳನ್ನು ರಕ್ಷಿಸಲು ಅಮೆರಿಕಾದ ಸಾರ್ವಭೌಮ ಹಕ್ಕನ್ನು ನಿರ್ಬಂಧಿಸಿದೆ ಎಂದು ಪ್ರತಿಪಾದಿಸಿದ್ದರು. 2019 ರಲ್ಲಿ ಅವರು, ಕೋರಮ್‌ಗೆ ಅಗತ್ಯವಾದ ನ್ಯಾಯಾಧೀಶರ ನೇಮಕಾತಿಯನ್ನು ನಿರ್ಬಂಧಿಸುವ ಮೂಲಕ ಡಬ್ಲ್ಯೂಟಿಒ ವಿವಾದ ಇತ್ಯರ್ಥ ಮಂಡಳಿಯನ್ನು ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸಿದರು. ಉನ್ನತ ವ್ಯಾಪಾರ ಸಂಸ್ಥೆಯಿಂದ ಯಾವುದೇ ಪರಿಣಾಮಗಳಿಲ್ಲದೆ ದೇಶಗಳ ಮೇಲೆ ಸುಂಕಗಳನ್ನು ವಿಧಿಸಲು ಇದು ಟ್ರಂಪ್‌ಗೆ ಅವಕಾಶ ಮಾಡಿಕೊಟ್ಟರು.

    ಜಾಗತಿಕ ಪ್ರಾಬಲ್ಯಕ್ಕಾಗಿ ಶ್ರೀಮಂತ ರಾಷ್ಟ್ರಗಳು ವಾಣಿಜ್ಯ ನಿಯಮವನ್ನು ತಮಗೆ ಬೇಕಾದಂತೆ ಬಗ್ಗಿಸುವುದು ಭಾರತದಂತಹ ಅಭಿವೃದ್ಧಿಶೀಲ ರಾಷ್ಟçಗಳಿಗೆ ಪೆಟ್ಟು ನೀಡಬಹುದು ಎಂದು ವಾಣಿಜ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಭಾರತ ಟಾರ್ಗೆಟ್ ಆಗುತ್ತಾ?
    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ (ಐಐಎಫ್‌ಟಿ) ಯ ಡಬ್ಲ್ಯುಟಿಒ ಅಧ್ಯಯನ ಕೇಂದ್ರದ ಮಾಜಿ ಮುಖ್ಯಸ್ಥ ಅಭಿಜಿತ್ ದಾಸ್, ಟ್ರಂಪ್ ಅವರ ಎರಡನೇ ಅವಧಿಯು ಡಬ್ಲ್ಯುಟಿಒ ನಿಯಮಗಳನ್ನು ಉಲ್ಲಂಘಿಸುವ ಕ್ರಮಗಳ ರಾಂಪ್-ಅಪ್ ಅನ್ನು ನೋಡಬಹುದು. ಯುಎಸ್‌ನಿಂದ ವಿಧಿಸಲಾದ ಯಾವುದೇ ಹೆಚ್ಚುವರಿ ತೆರಿಗೆಗಳಿಗೆ ಪ್ರತಿಕ್ರಿಯಿಸುವುದು ಭಾರತದ ಏಕೈಕ ಪರಿಣಾಮಕಾರಿ ವಿಧಾನವಾಗಿದೆ. ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಯುಎಸ್ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಯುಎಸ್ ಕೃಷಿ ಉತ್ಪನ್ನಗಳ ಮೇಲೆ ಸುಂಕವನ್ನು ಹೆಚ್ಚಿಸಿದಾಗ ಈ ವಿಧಾನವು ಯಶಸ್ವಿಯಾಗಿದೆ ಎಂದು ಹೇಳುತ್ತಾರೆ.

    ಚೀನಾ ವಿರುದ್ಧದ ಯುಎಸ್ ವಾಣಿಜ್ಯ ಯುದ್ಧವು, ವ್ಯಾಪಾರಕ್ಕಿಂತ ಮುಖ್ಯವಾಗಿ ಚೀನಾದ ತಾಂತ್ರಿಕ ಮತ್ತು ಹೈಟೆಕ್ ವಲಯಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಶ್ರೀಮಂತರು ಮತ್ತು ಶಕ್ತಿಶಾಲಿಗಳು ನಿಯಮಗಳನ್ನು ಉಲ್ಲಂಘಿಸಿದರೆ ಖಂಡಿತವಾಗಿಯೂ ಭಾರತಕ್ಕೆ ಪರಿಣಾಮ ಉಂಟಾಗುತ್ತವೆ. ಇಂದು, ಚೀನಾ ಗುರಿಯಾಗಿದೆ. ದಶಕಗಳ ಹಿಂದೆ ಜಪಾನ್ ಗುರಿಯಾಗಿತ್ತು. ನಾಳೆ ಭಾರತವೂ ಟಾರ್ಗೆಟ್ ಆಗಬಹುದು. ಯುಎಸ್ ಭಾರತವನ್ನು ಕೆಲವು ವಲಯಗಳಲ್ಲಿ ಸ್ಪರ್ಧಾತ್ಮಕ ಬೆದರಿಕೆ ಎಂದು ಗ್ರಹಿಸಿದೆ. ಫಾರ್ಮಾಸ್ಯುಟಿಕಲ್‌ಗಳಲ್ಲಿ ಭಾರತ ಈಗಾಗಲೇ ಅಮೆರಿಕದ ಹದ್ದಿನ ಕಣ್ಣಿಗೆ ಗುರಿಯಾಗಿದೆ ಎಂದು ದಾಸ್ ಅವರು ವಿಶ್ಲೇಷಿಸಿದ್ದಾರೆ.

    ಈಚೆಗೆ ಚೀನಾದ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ಒಮ್ಮೆ ಜಪಾನ್ ವಿರುದ್ಧ ಮಾಡಿದ ಆರೋಪಗಳಿಗೆ ಹೋಲುತ್ತವೆ. ಕಡಿಮೆ ಗುಣಮಟ್ಟದ ಸರಕುಗಳು, ಬೌದ್ಧಿಕ ಆಸ್ತಿ ಕಳ್ಳತನ, ಡಂಪಿಂಗ್.. ಈ ರೀತಿಯ ಆರೋಪಗಳು ಒಂದೇ ರೀತಿ ಇವೆ. ವ್ಯತ್ಯಾಸವೆಂದರೆ ಜಪಾನ್ ಭದ್ರತೆಗಾಗಿ ಯುಎಸ್ ಅನ್ನು ಅವಲಂಬಿಸಿದೆ. ಆದರೆ ಚೀನಾ ಮಾತ್ರ ಅದನ್ನು ಅವಲಂಬಿಸಿಲ್ಲ. ಯುಎಸ್ ತನ್ನ ಇಚ್ಛೆಗೆ ಜಪಾನ್ ಅನ್ನು ಬಗ್ಗಿಸಬಹುದು, ಆದರೆ ಚೀನಾದೊಂದಿಗೆ ಅದೇ ರೀತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ.

    ಔಷಧ ಮತ್ತು ಸೇವಾ ವಲಯ ಟಾರ್ಗೆಟ್?
    ಯುಎಸ್‌ಗೆ ಹೆಚ್ಚು ಅನುಕೂಲಕರ ಮತ್ತು ದೇಶೀಯ ಕೈಗಾರಿಕೆಗಳನ್ನು ರಕ್ಷಿಸಲು ಅಮೆರಿಕದ ಟ್ರಂಪ್ ಆಡಳಿತವು ತನ್ನ ಟ್ರೇಡ್ ಪಾಲುದಾರರ ಮೇಲೆ ಸುಂಕಗಳನ್ನು ಅಸ್ತ್ರವಾಗಿ ಪ್ರಯೋಗಿಸಿದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ (ಎಫ್‌ಐಇಒ) ಮಹಾನಿರ್ದೇಶಕ ಮತ್ತು ಸಿಇಒ ಅಜಯ್ ಸಹಾಯ್ ತಿಳಿಸಿದ್ದಾರೆ.

    ಯುಎಸ್‌ನೊಂದಿಗಿನ ಭಾರತದ ವ್ಯಾಪಾರ ಕೊರತೆಯು 2019 ರಲ್ಲಿ 25 ಶತಕೋಟಿಯಿಂದ 2023 ರ ಹೊತ್ತಿಗೆ 50 ಶತಕೋಟಿಗೆ ಹೆಚ್ಚಳವಾಗಿರುವುದು ಟ್ರಂಪ್‌ಗೆ ಇಷ್ಟವಾಗುವುದಿಲ್ಲ. ಚಿಕ್ಕ ಆರ್ಥಿಕತೆಯ ಹೊರತಾಗಿಯೂ, ಭಾರತವು ಚೀನಾದೊಂದಿಗೆ 100 ಶತಕೋಟಿ ವ್ಯಾಪಾರ ಕೊರತೆಯನ್ನು ನಿರ್ವಹಿಸುತ್ತಿದೆ. ಟ್ರಂಪ್‌ರ ಹಿಂದಿನ ಸುಂಕಗಳು ಮುಖ್ಯವಾಗಿ ಚೀನಾ, ಮೆಕ್ಸಿಕೊ, ಕೆನಡಾ ಮತ್ತು ಇಯು ಅನ್ನು ಟಾರ್ಗೆಟ್ ಮಾಡಿದ್ದು, ಭಾರತದ ಮೇಲೆ ಸೀಮಿತ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

    ವಿಶಾಲ ಸುಂಕದ ನೀತಿಯು ಔಷಧಗಳು, ಐಟಿ ಸೇವೆಗಳು, ಜವಳಿ ಮತ್ತು ಉಕ್ಕಿನಂತಹ ಎರಡೂ ದೇಶಗಳು ಪೈಪೋಟಿ ನಡೆಸುವ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತೀಯ ಸರಕುಗಳ ಶ್ರೇಣಿಯ ಮೇಲೆ ಸುಂಕಗಳನ್ನು ವಿಧಿಸಿದರೆ, ಇದು ಜವಳಿ, ಔಷಧಗಳು, ರತ್ನಗಳು, ಆಭರಣಗಳು ಮತ್ತು ಐಟಿ ಸೇವೆಗಳಂತಹ ಪ್ರಮುಖ ಕೈಗಾರಿಕೆಗಳಿಂದ ರಫ್ತುಗಳನ್ನು ಕಡಿಮೆ ಮಾಡಬಹುದು. ಏಕೆಂದರೆ ಈ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಭಾರತೀಯ ರಫ್ತಿಗೆ ಯುಎಸ್ ಪ್ರಮುಖ ತಾಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

  • ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

    ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

    ವಾಷಿಂಗ್ಟನ್‌: ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿಯಾಗಿ ತುಳಸಿ ಗಬ್ಬಾರ್ಡ್ (Tulsi Gabbard) ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಯ್ಕೆ ಮಾಡಿದ್ದಾರೆ.

    ತುಳಸಿ ಗಬ್ಬಾರ್ಡ್ ಅಮೆರಿಕದ ಮೊದಲ ಹಿಂದೂ ಸಂಸದೆಯಾಗಿದ್ದು ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. 2022 ರಲ್ಲಿ ರಿಪಬ್ಲಿಕನ್‌ ಪಕ್ಷ ಸೇರಿದ ಇವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.

    ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಸೆಪ್ಟೆಂಬರ್ 11 , 2001 ರಂದು ದಾಳಿ ನಡೆದ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ವೈಫಲ್ಯಗಳನ್ನು ತಡೆಯಲು ಸಹಾಯ ಮಾಡಲು ರಾಷ್ಟ್ರೀಯ ಗುಪ್ತಚರ ವಿಭಾಗವನ್ನು 2004 ರಲ್ಲಿ ರಚಿಸಲಾಯಿತು. ವಿದೇಶಿ ಚುನಾವಣಾ ಹಸ್ತಕ್ಷೇಪ, ಸೈಬರ್ ಸಮಸ್ಯೆಗಳು, ಭಯೋತ್ಪಾದನೆ ಮತ್ತು ಬೇಹುಗಾರಿಕೆಯಂತಹ ಬೆದರಿಕೆಗಳ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತದೆ.  ಇದನ್ನೂ ಓದಿ: ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    ಯಾರು ತುಳಸಿ ಗಬ್ಬಾರ್ಡ್‌?
    ಸುಮಾರು 20 ವರ್ಷದಗಳ ಸೈನ್ಯದ ಶಾಖೆಯಾದ ನ್ಯಾಷನಲ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಭಾರತದ ಜೊತೆ ನೇರವಾದ ಸಂಬಂಧ ಇಲ್ಲ. ಆದರೆ ಇವರ ತಾಯಿ ಹಿಂದೂ (Hindu) ಧರ್ಮವನ್ನು ಪಾಲಿಸುತ್ತಿದ್ದ ಹಿನ್ನೆಲೆಯಲ್ಲಿ ಪುತ್ರಿಗೆ ತುಳಸಿ ಎಂದು ಹೆಸರನ್ನು ಇರಿಸಿದ್ದರು.

    ಬಾಲ್ಯದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದ ಇವರು ಭಗವದ್ಗೀತೆಯಿಂದ ಆಧ್ಯಾತ್ಮಿಕ ವಿಷಯಗಳನ್ನು ಕಲಿತ್ತಿದ್ದಾರೆ. ವೈಷ್ಣವ ಹಿಂದೂ ಸಂಘಟನೆಯಾದ ಸೈನ್ಸ್ ಆಫ್ ಐಡೆಂಟಿಟಿ ಫೌಂಡೇಶನ್ ಮತ್ತು ಇಸ್ಕಾನ್‌ ಸಂಸ್ಥೆಯ ಪ್ರಭಾವದಿಂದಾಗಿ ತುಳಸಿ ಅವರು ಹಿಂದೂ ಜೀವನ ಪದ್ದತಿಯಂತೆ ಜೀವಿಸುತ್ತಿದ್ದಾರೆ.

    2015ರಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಅಬ್ರಹಾಂ ವಿಲಿಯಮ್ಸ್ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಪತಿಯೂ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಭಗವತ್ ಗೀತೆಯ ಮೇಲೆ ಕೈಯಿಟ್ಟು ತುಳಸಿ ಪ್ರಮಾಣ ವಚನ ಸ್ವೀಕರಿಸಿದ್ದರು.

    2014ರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನಿಯವರ ಪ್ರಸ್ತಾವನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದರು.

  • ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    – ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಅಧ್ಯಯನಗಳಿಗೆ ಬೀಳುತ್ತಾ ಬ್ರೇಕ್‌?

    ವಾಷಿಂಗ್ಟನ್‌: ನಿರೀಕ್ಷೆಯಂತೆ ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಅವರಿಗೆ ಟ್ರಂಪ್‌ ಸರ್ಕಾರದಲ್ಲಿ ಮಹತ್ವದ ಹುದ್ದೆ ಸಿಕ್ಕಿದೆ. ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರೊಂದಿಗೆ ಎಲೋನ್ ಮಸ್ಕ್ ಅವರು ಸರ್ಕಾರಿ ದಕ್ಷತೆಯ ಇಲಾಖೆಯನ್ನು (Department of Government Efficiency) ಮುನ್ನಡೆಸಲಿದ್ದಾರೆ.

    ಇಬ್ಬರೂ ಸರ್ಕಾರಕ್ಕೆ ಹೊರಗಿನಿಂದ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಇವರಿಬ್ಬರಿಂದ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಯಾಗಲಿದೆ ಎಂದು ಟ್ರಂಪ್‌ (Donald Trump) ಹೇಳಿದ್ದಾರೆ.

    Department of Government Efficiency ಇಲಾಖೆಯನ್ನು ಸಂಕ್ಷಿಪ್ತವಾಗಿ DOGE ಎಂದು ಕರೆಯಲಾಗುತ್ತಿದೆ. ಈ ಇಲಾಖೆ ರಚನೆಯಾಗುವ ಮೊದಲೇ ಅಮೆಕದಲ್ಲಿ DOGE ಫೇಮಸ್‌ ಆಗಿತ್ತು. ಇದು ಕ್ರಿಪ್ಟೋ ಕರೆನ್ಸಿಯಾಗಿದ್ದು ಹಲವು ಬಾರಿ ಮಸ್ಕ್‌ ಅವರು Dogecoin ಬಗ್ಗೆ ಪ್ರಚಾರ ಮಾಡಿದ್ದರು.

    ಏನಿದು ಸರ್ಕಾರಿ ದಕ್ಷತೆಯ ಇಲಾಖೆ?
    ಟ್ರಂಪ್‌ ಸರ್ಕಾರ ಹೊಸ ಇಲಾಖೆ ಇದಾಗಿದ್ದು ಮಸ್ಕ್‌ ಅವರು ಚುನಾವಣೆಯ ಸಮಯದಲ್ಲಿ ಇಲಾಖೆಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ಇಲಾಖೆ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ತಕ್ಷಣವೇ ಸ್ಪಷ್ಟವಾಗಿಲ್ಲ.ಆದರೂ ಟ್ರಂಪ್‌ ಪ್ರಕಾರ, ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯುವುದು, ಹೆಚ್ಚುವರಿ ನಿಯಮ ಮತ್ತು ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲಿದೆ. ಇದರ ಜೊತೆ ಫೆಡರಲ್ ಏಜೆನ್ಸಿಗಳನ್ನು ಪುನರ್‌ರಚಿಸಲಿದೆ.

    ಮುಖ್ಯವಾಗಿ ಈ ಇಲಾಖೆ ಅಮೆರಿಕ ಸರ್ಕಾರ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಧ್ಯಯನಗಳಿಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್‌ ಭವಿಷ್ಯ


    ಈ ಇಲಾಖೆ ಸರ್ಕಾರಿ ಹಣವನ್ನು ದುರುಪಯೋಗ ಮಾಡುವವರಿಗೆ ಶಾಕ್‌ ನೀಡಲಿದೆ. ಯಾವುದಾದರೂ ಮುಖ್ಯವಾಗಿರುವುದನ್ನು ತೆಗೆಯುತ್ತಿದ್ದೇವೆ ಎಂದು ನೀವು ಭಾವಿಸಿದರೆ ನಮಗೆ ತಿಳಿಸಿ ಎಂದು ಮಸ್ಕ್‌ ಅಮೆರಿಕ ಜನರಲ್ಲಿ ಮನವಿ ಮಾಡಿದ್ದಾರೆ.

    ಸರ್ಕಾರ ಹೇಗೆ ಪ್ರಯೋಜನಕ್ಕೆ ಬಾರದ ವಿಷಯಗಳಿಗೆ ಕೋಟ್ಯಂತರ ಡಾಲರ್‌ ಹಣವನ್ನು ಖರ್ಚು ಮಾಡುತ್ತದೆ ಎನ್ನುವುದಕ್ಕೆ ಮಸ್ಕ್‌ ಎಕ್ಸ್‌ ಬಳಕೆದಾರರೊಬ್ಬರ ಪೋಸ್ಟ್‌ ಅನ್ನು ರೀ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ಅಮೆರಿಕ ತೆರಿಗೆಯ ಅಸಂಬದ್ಧ ಕಸ ಇಲ್ಲಿದೆ. ಆಡುಗಳ ಮೇಲೆ ಯೋಗದ ಪರಿಣಾಮಗಳನ್ನು ಅಧ್ಯಯನ ಮಾಡಲು 1.5 ಮಿಲಿಯನ್‌ ಡಾಲರ್‌, ಖಾಲಿ ಕಟ್ಟಡ ನಿರ್ವಹಣೆಗೆ 1.7 ಬಿಲಿಯನ್‌ ಡಾಲರ್‌, ಧೂಮಪಾನವನ್ನು ನಿಲ್ಲಿಸಲು ಪರ್ಯಾಯ ಸಂಗೀತದ ದೃಶ್ಯವನ್ನು ಪ್ರಚಾರ ಮಾಡುವ ಅಭಿಯಾನಕ್ಕೆ 5 ಮಿಲಿಯನ್ ಡಾಲರ್‌, ಕೃಷಿ ಇಲಾಖೆಯಲ್ಲಿ ಒಬ್ಬ ಪೂರ್ಣ-ಸಮಯದ ಉದ್ಯೋಗಿಯ ನೇಮಕಕ್ಕೆ 2 ಮಿಲಿಯನ್‌ ಡಾಲರ್‌ನ ಇಂಟರ್ನ್‌ಶಿಪ್‌ ಯೋಜನೆ, ಡೈರಿ ಹಸುಗಳ ಮೇಲೆ ಸಂಗೀತದ ಪರಿಣಾಮಗಳನ್ನು ಅಧ್ಯಯನ ಮಾಡಲು 1 ಮಿಲಿಯನ್ ಡಾಲರ್‌, ಮೀನಿನ ಮೇಲೆ ಮದ್ಯದ ಪರಿಣಾಮಗಳನ್ನು ಅಧ್ಯಯನ ಮಾಡಲು 1.7 ಮಿಲಿಯನ್ ಡಾಲರ್‌.

     

    ಮಸ್ಕ್‌ ಅವರು ವೆಚ್ಚ ಕಡಿತದ ಬಗ್ಗೆ ಮೊದಲಿನಿಂದಲೂ ಮಾತನಾಡಿಕೊಂಡೇ ಬಂದಿದ್ದಾರೆ. ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದ ನಂತರ 90% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದುಹಾಕಿದ್ದರು. 6 ಸಾವಿರ ಮಂದಿ ಇದ್ದ ಉದ್ಯೋಗಿಗಳ ಸಂಖ್ಯೆಯನ್ನು 1 ಸಾವಿರಕ್ಕೆ ಇಳಿಸಿದ್ದರು. ಈ ವಿಚಾರ ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಟ್ವಿಟ್ಟರ್‌ ಸಾಮರ್ಥ್ಯ ಕುಂಠಿತವಾಗಲಿದೆ ಎಂದು ವರದಿಯಾಗಿತ್ತು. ಇದಕ್ಕೆ ಮಸ್ಕ್‌ ಟ್ವಿಟ್ಟರ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಂಚಿಕೊಳ್ಳುವ ವೇದಿಕೆ. ಇಲ್ಲಿ ಎಡಪಂಥೀಯ ಸಿದ್ಧಾಂತವನ್ನು ಹಂಚಿಕೊಳ್ಳುವವರಿಗೆ ಜಾಗ ಇಲ್ಲ. ಸಂಸ್ಥೆ ನಡೆಸಲು ಎಷ್ಟು ಉದ್ಯೋಗಿಗಳು ಬೇಕು ಅಷ್ಟು ಉದ್ಯೋಗಿಗಳು ಇದ್ದರೆ ಸಾಕು. ಅನಗತ್ಯ ಉದ್ಯೋಗಿಗಳ ಅಗತ್ಯವಿಲ್ಲ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

     

  • ಅಮೆರಿಕದಲ್ಲಿ ನೋ ಸೆಕ್ಸ್‌, ನೋ ಮ್ಯಾರೆಜ್‌, ನೋ ಗಿವಿಂಗ್‌ ಬರ್ತ್‌ – ಏನಿದು ‘4ಬಿ ಮೂವ್‌ಮೆಂಟ್‌’?

    ಅಮೆರಿಕದಲ್ಲಿ ನೋ ಸೆಕ್ಸ್‌, ನೋ ಮ್ಯಾರೆಜ್‌, ನೋ ಗಿವಿಂಗ್‌ ಬರ್ತ್‌ – ಏನಿದು ‘4ಬಿ ಮೂವ್‌ಮೆಂಟ್‌’?

    ಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಟ್‌ ಟ್ರಂಪ್‌ (Donald Trump) 2ನೇ ಬಾರಿಗೆ ಗೆಲುವು ಕಂಡಿದ್ದಾರೆ. ಇದು ಕೆಲವರಲ್ಲಿ ಸಂತಸ ತಂದಿದ್ದರೆ ಅಲ್ಲಿನ ಕೆಲ ಮಹಿಳೆಯರಲ್ಲಿ ಆಕ್ರೋಶ ತರಿಸಿದೆ. ಟ್ರಂಪ್‌ ಗೆಲುವಿಗೆ ಪುರುಷರೇ ಕಾರಣ ಎಂದು ದೂಷಿಸುತ್ತಿರುವ ಮಹಿಳೆಯರು ಇದೀಗ ʻ4ಬಿ ಮೂವ್‌ಮೆಂಟ್‌ʼ (4ಬಿ ಚಳವಳಿ) ಶುರು ಮಾಡಿದ್ದಾರೆ.

    ದಕ್ಷಿಣ ಕೊರಿಯಾ ಮೂಲದ ʻ4ಬಿ ಮೂವ್‌ಮೆಂಟ್‌ʼ (4B Movement) ಈಗ ಅಮೆರಿಕದಲ್ಲಿ ಜನಪ್ರಿಯವಾಗಿದೆ. ಇದರ ಪ್ರಕಾರ, ಮಹಿಳೆಯರು ಪುರುಷರ ಜೊತೆ ಸೆಕ್ಸ್‌ ಮಾಡದೇ ಇರುವ ಪ್ರತಿಜ್ಞೆ ಮಾಡಿದ್ದಾರೆ. ಜೊತೆಗೆ ಅದರೊಂದಿಗೆ ನೋ ರಿಲೇಷನ್‌ಶಿಪ್‌, ನೋ ಮ್ಯಾರೇಜ್‌ ಹಾಗೂ ನೋ ಗಿವಿಂಗ್‌ ಬರ್ತ್‌ ಎನ್ನುವ ಪ್ರತಿಜ್ಞೆಯೊಂದಿಗೆ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. ಅಂದ್ರೆ ಸೆಕ್ಸ್‌ನಲ್ಲಿ ಭಾಗಿಯಾಗದೇ ಇರೋದು, ರಿಲೇಷನ್‌ಶಿಪ್‌ನಲ್ಲಿ ಇರದೇ ಇರೋದು, ಮದುವೆ ಆಗದೇ ಇರೋದು ಹಾಗೂ ಮಕ್ಕಳನ್ನು ಹೆರದೇ ಇರುವುದು ಈ ಚಳವಳಿಯ ಮುಖ್ಯ ಉದ್ದೇಶ. ಇದು ಪುರುಷರ ಮೇಲೆ ತಮ್ಮ ಸೇಡು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ನಿಂದನೆ – ವಿವಾದದ ಬಳಿಕ ಪ್ರೀತಿಯಿಂದ ಕರೆದಿದ್ದು ಅಂತ ಸ್ಪಷ್ಟನೆ

    ಚುನಾವಣೆ ವೇಳೆ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ಕಮಲಾ ಹ್ಯಾರಿಸ್ ಅವರ ಡೆಮಾಕ್ರಟಿಕ್ ಕ್ಯಾಂಪ್ ಟ್ರಂಪ್ ಅವರ ಸ್ತ್ರೀವಾದಿ ವಿರೋಧಿ ಚಿತ್ರಣವನ್ನು ಪ್ರಚಾರ ಮಾಡಿತ್ತು. ಇದೇ ವೇಳೆ ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್‌ ಜೊತೆಗಿನ ʻಹಶ್‌ ಮನಿʼ ಪ್ರಕರಣದ ಬಗ್ಗೆಯೂ ಆರೋಪ ಮಾಡಿತ್ತು. ಇದರ ಹೊರತಾಗಿಯೂ ಟ್ರಂಪ್‌ ಗೆಲುವು ಸಾಧಿಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಮಹಿಳೆಯರು ಟ್ರಂಪ್ ಗೆಲುವಿನ ಬಗ್ಗೆ ಕಣ್ಣೀರಿಡುತ್ತಿರುವ ವೀಡಿಯೊಗಳು ಹಾಗೂ ʻನೋ ಸೆಕ್ಸ್‌ʼ ಎಂಬ ಪೋಸ್ಟರ್‌ಗಳನ್ನ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ 4ಬಿ ಚಳವಳಿಯ ಇತಿಹಾಸ ಏನು ಎಂಬುದನ್ನು ನೋಡೋಣ ….

    4ಬಿ ಎಂದರೇನು?
    4ಬಿ ಅಂದ್ರೆ ಕೊರಿಯನ್‌ ಭಾಷೆಯಲ್ಲಿ 4 ಬಿಸ್‌ ಎಂದರ್ಥ, ಇದನ್ನು ಬಿಹೊನ್, ಬಿಚುಲ್ಸನ್, ಬೈಯೋನೇ ಮತ್ತು ಬೈಸೆಕ್ಸೆಯು ಎಂಬ ಪದಗಳಿಂದ ಗುರುತಿಸುತ್ತಾರೆ. ಅಂದ್ರೆ ಮದುವೆ, ಹೆರಿಗೆ, ಪ್ರಣಯ ಮತ್ತು ಲೈಂಗಿಕ ಸಂಬಂಧಗಳ ನಿರಾಕರಣೆ. ಈಗಲೂ ಅಲ್ಲಿನ ಮಹಿಳೆಯರು ತಾವು ನಿಜವಾಗಿ ಸ್ವತಂತ್ರದಿಂದ ಮತ್ತು ಸಂತೋಷದಿಂದ ಇರಲು ಅವುಗಳಿಂದ ಮುಕ್ತರಾಗಬೇಕು ಎಂದು ನಂಬುತ್ತಾರೆ. ಅಲ್ಲದೇ ವಿವಾಹಿತ ಮನೆಯನ್ನು ನಡೆಸುವ ಜವಾಬ್ದಾರಿ, ಮಗುವಿಗೆ ಜನ್ಮ ನೀಡಿ ಬೆಳೆಸುವ ಹೊಣೆ, ಇವೆಲ್ಲವು ಅಸಮಂಜಸವಾದ ಕ್ರಮ. ಮಾತೃತ್ವದ ಕರ್ತವ್ಯಗಳಿಗಾಗಿ ಅನೇಕ ಮಹಿಳೆಯರು ದಂಡನೆಗೆ ಒಳಗಾಗುತ್ತಿದ್ದಾರೆ. ಇಷ್ಟೆಲ್ಲಾ ಸಹಿಸಿಕೊಂಡರು ಹಣ ಸಂಪಾದಿಸಬೇಕೆನ್ನುವುದು ಮಾತ್ರವೇ ನಾವು ಪುರುಷರಿಂದ ಮಾಡುವ ನಿರೀಕ್ಷೆ. ಆದ್ದರಿಂದ ಮದುವೆ, ಹೆರಿಗೆ, ಪ್ರಣಯ ಮತ್ತು ಲೈಂಗಿಕ ಸಂಬಂಧಗಳಿಂದ ನಾವು ಮುಕ್ತವಾಗಿರಬೇಕು ಅನ್ನೋದು ಈ ಚಳವಳಿಯ ಉದ್ದೇಶ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

    ದಕ್ಷಿಣ ಕೊರಿಯಾದಲ್ಲಿ ಚಳವಳಿ ಹುಟ್ಟಿಕೊಂಡಿದ್ದು ಯಾವಾಗ?
    4ಬಿ ಚಳವಳಿ ಮೊದಲು ದಕ್ಷಿಣ ಕೊರಿಯಾದಲ್ಲಿ ಹುಟ್ಟಿಕೊಂಡಿದ್ದು, 2016ರ ಸುಮಾರಿಗೆ. ಸಿಯೋಲ್‌ ಸುರಂಗಮಾರ್ಗ ನಿಲ್ದಾಣದಲ್ಲಿ ಯುವತಿಯೊಬ್ಬಳ ಕೊಲೆಯಾಗಿತ್ತು. ಆಗ ಕೊಲೆಗಾರ ನಾನು ಮಹಿಳೆಯರಿಂದ ನಿರ್ಲಕ್ಷಿಸಲ್ಪಟ್ಟಿದ್ದೇನೆ ಎಂದು ಹೇಳಿಕೊಂಡಿದ್ದ. ಇದೇ ಸಮಯದಲ್ಲಿ ಕೊರಿಯಾದಲ್ಲಿ ಮಹಿಳೆಯರ ಔಚಾಲಯದಲ್ಲಿ ಹಾಗೂ ಲೈಂಗಿಕ ಕ್ರಿಯೆ ನಡೆಸುವಂತಹ ಸಂದರ್ಭದಲ್ಲಿ ಸ್ಪೈಕ್ಯಾಮ್‌ಗಳನ್ನಿಟ್ಟು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಇದರಿಂದಾಗಿ ಮಹಿಳೆಯರು ಪುರುಷರ ವಿರುದ್ಧ ಸೇಡು ತೀರಿಸಿಕೊಳ್ಳಲು 4ಬಿ ಚಳವಳಿಗೆ ಮುಂದಾದರು. ಇದೇ ವೇಳೆ ಮೀಟೂ ಆಂದೋಲನ ಮಹಿಳೆಯರ ಈ ಹೋರಾಟಕ್ಕೆ ಪುಷ್ಟಿ ನೀಡಿತು.

    4ಬಿ ಮೂವ್‌ಮೆಂಟ್‌ ಮಹಿಳೆಯರಿಗೆ ಅನುಕೂಲವೇ?
    4ಬಿ ಚಳವಳಿ ಮಹಿಳೆಯರಿಗೆ ವೈಯಕ್ತಿಕವಾಗಿ ಅನುಕೂಲವಾದರೂ ಪುರುಷರೊಂದಿಗಿನ ದ್ವೇಷ ಸಾಧಿಸುವ ಉದ್ದೇಶ ಹೊಂದಿದೆ ಎಂದು ಕೆಲವು ಸ್ತ್ರೀವಾದಿಗಳು ನಂಬುತ್ತಾರೆ. ಈ ಚಳವಳಿಯು ಪುರುಷರನ್ನು ಮತ್ತು ಕೌಟುಂಬಿಕ ಜೀವನದಿಂದ ಮಹಿಳೆಯರು ಹಿಂದೆ ಸರಿಯುವಂತೆ ಮಾಡುತ್ತದೆ. ಹೆಂಡತಿ ಮತ್ತು ತಾಯಿ ಪಾತ್ರಕ್ಕಿಂತ ಸಮಾಜದಲ್ಲಿ ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಬೇಕು ಎಂದು ಪ್ರಚೋದನೆ ನೀಡುತ್ತದೆ. ಮುಖ್ಯವಾಗಿ ಪುರುಷರಿಂದ ನಿಯಂತ್ರಿಸಲ್ಪಡುವ ಕರ್ತವ್ಯಗಳಿಂದ ಮುಕ್ತರಾಗಿ, ತಮ್ಮ ಸ್ವಂತ ಗುರಿ, ಹವ್ಯಾಸ, ಸಂತೋಷಗಳತ್ತ ಕೇಂದ್ರೀಕರಿಸಬಹುದು. ಸ್ತ್ರೀದ್ವೇಷಿ ಸಂಸ್ಥೆಗಳಿಂದ ದೂರ ಇರಬಹುದು. ಮಹಿಳೆಯರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ, ಸಲಿಂಗ ಸಂಬಂಧಗಳಲ್ಲೇ ಸಂತೋಷ ಕಾಣಬಹುದು. ಜೊತೆಗೆ ಒಟ್ಟಾಗಿ ಕೆಲಸ ಮಾಡುವುದರಿಂದ ಮಹಿಳೆಯರ ಉತ್ತಮ ಒಡನಾಟ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ಪರಸ್ಪರ ಅವಲಂಬಿತರಾಗಬಹುದು ಎಂದು ಸ್ತ್ರೀವಾದಿಗಳು ಪ್ರತಿಪಾದಿಸುತ್ತಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

    4ಬಿ ಹೊಸ ಕಲ್ಪನೆಯೇ?
    ಅಮೆರಿಕದಲ್ಲಿ ಸದ್ಯ ಹುಟ್ಟಿಕೊಂಡಿರುವ 4ಬಿ ಚಳವಳಿ ಹೊಸದೇನಲ್ಲ. ಈ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ʻಬಾಯ್ಸೋಬರ್‌ʼ ಎಂಬ ಕ್ಯಾಂಪೇನ್‌ ಅಮೆರಿಕನ್ನರು ಆರಂಭಿಸಿದ್ದರು. ಈ ಮೂಲಕ ಮಹಿಳೆಯರು ತಮ್ಮ ವೈಯಕ್ತಿಕ ಸಂತೋಷ, ಯೋಗಕ್ಷೇಮ, ಸುರಕ್ಷತೆಗೆ ಅದ್ಯತೆ ನೀಡಲು ಪುರುಷರೊಂದಿಗಿನ ಎಲ್ಲಾ ರೀತಿಯ ಲೈಂಗಿಕ ಸಂಬಂಧಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದರು. ಇದಕ್ಕು ಮುನ್ನ 1960 ರಿಂದ 1980ರ ದಶಕದಲ್ಲಿ ಮತ್ತೊಮ್ಮೆ ಸ್ತ್ರೀವಾದಿಗಳ ಚಳವಳಿ ಆರಂಭಗೊಂಡಿತ್ತು. ಈ ವೇಳೆ ಮಹಿಳೆಯರು ʻಪ್ರತ್ಯೇಕ ಸ್ತ್ರೀವಾದವನ್ನು ಪ್ರತಿಪಾದನೆ ಮಾಡಿದ್ದರು. ಆಗ ತಮ್ಮ ಮೇಲೆ ದಬ್ಬಾಳಿಕೆ ಮಾಡುವ, ತಮ್ಮನ್ನು ನಿಯಂತ್ರಿಸಲ್ಪಡುವ ಪುರುಷರಿಂದ ದೂರ ಉಳಿಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು 1973ರಲ್ಲಿ ʻಲವ್‌ ಯುವರ್‌ ಎನಿಮಿʼ ಪ್ರಸಿದ್ಧ ಪತ್ರಿಕೆ ಬಿತ್ತರ ಮಾಡಿತ್ತು. ಅಲ್ಲದೇ ಇದು ಸ್ತ್ರೀವಾದಿಗೆ ಬೆಂಬಲ ನೀಡಿ, ಮದುವೆ, ಸೆಕ್ಸ್‌, ಪುರುಷರೊಂದಿಗಿನ ಸಂಬಂಧಗಳಿಂದ ದೂರವಿರುವಂತೆ ಉತ್ತೇಜನ ನೀಡಿತ್ತು.

    ಏನಿದು ಸೆಲ್‌-16?
    1930-70ರ ದಶಕದಲ್ಲಿ ಅಮೆರಿಕದಲ್ಲಿ ಈ ಸೆಲ್‌-16 ಚಳವಳಿ ಆರಂಭಗೊಂಡಿತ್ತು. ಇದು ಮಹಿಳೆಯರು ಬ್ರಹ್ಮಚಾರಿಯಾಗಿಯೇ ಉಳಿಬೇಕು, ಪುರುಷರಿಂದ ಜೀವನ ಪರಿಯಂತ ದೂರವಿರಬೇಕು, ಆತ್ಮ ರಕ್ಷಣೆಗಾಗಿ ಕರಾಟೆ ಸೇರಿದಂತೆ ಸಮರ ಕಲೆಗಳನ್ನು ಕಲಿಯಬೇಕು ಈ ಚಳವಳಿ ಪ್ರತಿಪಾದಿಸಿತ್ತು.

    ಸದ್ಯ ಈಗ ನಡೆಯುತ್ತಿರುವ ಹೋರಾಟ ಯಾವ ರೀತಿ ಅಂತ್ಯ ಕಾಣುತ್ತದೆ ಎಂಬುದನ್ನು ಕಾದುನೋಡಬೇಕಿದೆ.