Tag: donald trump

  • ಭಾರತೀಯ ವೃತ್ತಿಪರರಿಗೆ ಹೆಚ್‌-1ಬಿ ವೀಸಾ ಏಕೆ ಮುಖ್ಯ? – ವೀಸಾ ಬಗ್ಗೆ ಅಮೆರಿಕದ ನಿಲುವೇನು?

    ಭಾರತೀಯ ವೃತ್ತಿಪರರಿಗೆ ಹೆಚ್‌-1ಬಿ ವೀಸಾ ಏಕೆ ಮುಖ್ಯ? – ವೀಸಾ ಬಗ್ಗೆ ಅಮೆರಿಕದ ನಿಲುವೇನು?

    ಡೊನಾಲ್ಡ್ ಟ್ರಂಪ್ (Donald Trump) ಅವರ ‘ಅಮೆರಿಕ ಫಸ್ಟ್’ ನೀತಿ ಮತ್ತು ‘ವೀಸಾ’ ಕುರಿತ ಖ್ಯಾತ ಉದ್ಯಮಿ ಎಲಾನ್ ಮಸ್ಕ್ (Elon Musk) ಹೇಳಿಕೆಯೊಂದು ಅಮೆರಿಕದಲ್ಲಿ ‘ಹೆಚ್-1ಬಿ’ ವೀಸಾ ಬಗೆಗಿನ ಚರ್ಚೆ ಜೋರಾಗಿದೆ. ಹೆಚ್-1ಬಿ ವೀಸಾ ಎಂದೊಡನೆ ಭಾರತೀಯ ಮತ್ತು ಚೀನಾ ಮೂಲದ ಟೆಕ್ಕಿಗಳ ಗಮನ ವಿಶ್ವದ ದೊಡ್ಡಣನ ಕಡೆ ವಾಲುತ್ತದೆ. ಏಕೆಂದರೆ, ಈ ವೀಸಾಗೆ ಅಷ್ಟೊಂದು ಮಹತ್ವವಿದೆ. ಹೆಚ್-1ಬಿ ವೀಸಾ ವಿದೇಶಿ ವೃತ್ತಿಪರರಿಗೆ, ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಲು ಹೆಚ್ಚು ಬೇಡಿಕೆಯಿರುವ ಕೆಲಸದ ಪರವಾನಗಿಗಳಲ್ಲಿ ಒಂದಾಗಿದೆ. ಹೀಗಾಗಿ, ಆ ವೀಸಾ ಬಗ್ಗೆ ದೇಶದ ಇಬ್ಬರು ಗಣ್ಯ ವ್ಯಕ್ತಿಗಳು ತಳೆದಿರುವ ನಿಲುವು ವಿಶ್ವಮಟ್ಟದಲ್ಲಿ ಕುತೂಹಲ ಹೆಚ್ಚಿಸಿದೆ.

    ಅಷ್ಟಕ್ಕೂ ಏನಿದು ಹೆಚ್-1ಬಿ ವೀಸಾ? ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತೀಯರಿಗೆ ಏಕೆ ಮುಖ್ಯವಾಗಿದೆ ಎಂಬುದರ ಸರಳೀಕೃತ ವಿವರಣೆ ಇಲ್ಲಿದೆ.

    ಹೆಚ್-1ಬಿ ವೀಸಾ ಎಂದರೇನು?
    ಹೆಚ್-1ಬಿ (H-1b Visa) ಎಂಬುದು ವಲಸಿಗಯೇತರ ನೀಡುವ ವೀಸಾ ಆಗಿದೆ. ಇದು ತಾತ್ಕಾಲಿಕ ಯುಎಸ್ ಕೆಲಸದ ವೀಸಾವಾಗಿದ್ದು, ತಂತ್ರಜ್ಞಾನ, ಎಂಜಿನಿಯರಿಂಗ್, ಹಣಕಾಸು ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅವಕಾಶ ನೀಡುತ್ತದೆ. ವೀಸಾ ಅವಧಿಯನ್ನು ಆರಂಭದಲ್ಲಿ ಮೂರು ವರ್ಷಗಳವರೆಗೆ ಮಂಜೂರು ಮಾಡಲಾಗಿದ್ದು, ಇದನ್ನು ಗರಿಷ್ಠ ಆರು ವರ್ಷಗಳ ವರೆಗೆ ವಿಸ್ತರಿಸಬಹುದು. ಗ್ರೀನ್ ಕಾರ್ಡ್ (ಶಾಶ್ವತ ರೆಸಿಡೆನ್ಸಿ) ಅನ್ನು ಅನುಸರಿಸುವ ವ್ಯಕ್ತಿಗಳಿಗೆ, ವೀಸಾವನ್ನು ಅನಿರ್ದಿಷ್ಟವಾಗಿ ನವೀಕರಿಸಬಹುದು. ಇದು ಯುಎಸ್‌ನಲ್ಲಿ ದೀರ್ಘಾವಧಿಯ ಉದ್ಯೋಗ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

    ಅಪ್ಲಿಕೇಶನ್ ಪ್ರಕ್ರಿಯೆ ಹೇಗಿರುತ್ತೆ?
    ಪ್ರತಿ ವರ್ಷ ಯುಎಸ್ ಸರ್ಕಾರವು 65,000 ಹೆಚ್-1ಬಿ ವೀಸಾಗಳನ್ನು ನೀಡುತ್ತದೆ. ಜೊತೆಗೆ ಯುಎಸ್ ವಿಶ್ವವಿದ್ಯಾನಿಲಯಗಳಿಂದ ಉನ್ನತ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 20,000 ವೀಸಾಗಳನ್ನು ಕಾಯ್ದಿರಿಸಲಾಗಿದೆ. ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳೊಂದಿಗೆ (ಯುಎಸ್‌ಸಿಐಎಸ್) ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಲಾಟರಿ ವ್ಯವಸ್ಥೆಯು ನಂತರ ಯಾದೃಚ್ಛಿಕವಾಗಿ ಅರ್ಜಿದಾರರನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ನಂತರ, ಅಂತರರಾಷ್ಟ್ರೀಯ ಉದ್ಯೋಗಿಗಳ ಪರವಾಗಿ ಸಂಬಂಧಪಟ್ಟ ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ವಿಶೇಷವಾಗಿ ಟೆಕ್ ಕಂಪನಿಗಳಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ. ಪ್ರತಿ ವರ್ಷ ಸಾವಿರಾರು ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳಲು ಈ ವೀಸಾವನ್ನು ಬಳಸಲಾಗುತ್ತದೆ.

    ವೀಸಾದ ಪ್ರಯೋಜನಗಳೇನು?
    ಹೆಚ್-1ಬಿ ವೀಸಾವು ವೃತ್ತಿಪರರಿಗೆ ಮತ್ತು ಉದ್ಯೋಗದಾತರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

    6 ವರ್ಷಗಳ ಕೆಲಸದ ಅವಧಿ: ಹೆಚ್-1ಬಿ ವೀಸಾ ಪಡೆದ ನಂತರ, ಆರು ವರ್ಷಗಳ ಕೆಲಸದ ಪರವಾನಗಿ ಪಡೆಯಲಾಗುತ್ತದೆ. ಸಾಮಾನ್ಯ ಕೆಲಸದ ವೀಸಾ 3 ವರ್ಷಗಳು. ಅದಾದ ನಂತರ ವೀಸಾವನ್ನು ನವೀಕರಿಸಬೇಕಾಗುತ್ತದೆ. ಈ ವೀಸಾ ಹೊಂದಿರುವವರು ಅಮೆರಿಕ ಮೂಲದ ವೃತ್ತಿಪರರಿಗೆ ಸಮಾನ ವೇತನ ಮತ್ತು ಕೆಲಸದ ಸ್ಥಾನಮಾನಗಳನ್ನು ಖಾತ್ರಿಪಡಿಸಿಕೊಳ್ಳಬಹುದು. ಈ ವೀಸಾ ಹೊಂದಿರುವವರಿಗೆ ತಮ್ಮ ಅನುಭವ, ಶಿಕ್ಷಣ, ಉದ್ಯೋಗದ ಆಧಾರದ ಮೇಲೆ ಕನಿಷ್ಠ ವೇತನ ಖಾತ್ರಿಪಡಿಸಲಾಗುತ್ತದೆ.

    ಉದ್ಯೋಗ ಬದಲಾಯಿಸಲು ಸಹಕಾರಿ: ಹೆಚ್-1ಬಿ ವೀಸಾ ಪಡೆದ ನಂತರ ವೃತ್ತಿಪರರು ಸುಲಭವಾಗಿ ಉದ್ಯೋಗಗಳನ್ನು ಬದಲಾಯಿಸಿಕೊಳ್ಳಬಹುದು. ಪ್ರಯೋಜಕತ್ವ ಬದಲಾಯಿಸಲು ಉದ್ಯೋಗ ನೀಡುವ ಕಂಪನಿಗಳು ಅರ್ಜಿ ಸಲ್ಲಿಸಬಹುದು. ನಂತರ ಅನುಮೋದನೆ ಸಿಗುವವರೆಗೂ ಕಾಯುವ ಅಗತ್ಯವಿಲ್ಲ. ಹೊಸ ಸ್ಥಳದಲ್ಲಿ ತಕ್ಷಣವೇ ಕೆಲಸ ಪ್ರಾರಂಭಿಸಬಹುದು.

    ಡ್ಯುಯೆಲ್ ಇಂಟೆಂಡ್ ಸ್ಟೇಟಸ್: ಹೆಚ್-1ಬಿ ಡ್ಯುಯೆಲ್ ಇಂಟೆಂಡ್ ವೀಸಾ ಆಗಿದೆ. ಅಂದರೆ, ವೀಸಾ ಹೊಂದಿರುವವರು ತಾತ್ಕಾಲಿಕ ವೀಸಾದಲ್ಲಿರುವಾಗಲೂ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಯಾವುದೇ ವಿದೇಶಿ ವೃತ್ತಿಪರರು ಅಮೆರಿಕ ಪ್ರಜೆಯಾಗಲು ಇದು ದಾರಿ ಮಾಡಿಕೊಡುತ್ತದೆ.

    ಭಾರತೀಯರಿಗೆ ಇದು ಏಕೆ ಮುಖ್ಯ?
    ಅಮೆರಿಕದ ಹೆಚ್-1ಬಿ ವೀಸಾ ಪಡೆಯುವ ರಾಷ್ಟçಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಭಾರತದಿಂದ ಹೆಚ್ಚು ನುರಿತ ವೃತ್ತಿಪರರು ಅಗಾಧ ಸಂಖ್ಯೆಯಲ್ಲಿ ಹೆಚ್-1ಬಿ ವೀಸಾ ಪಡೆದುಕೊಳ್ಳುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಚೀನಾ ಮತ್ತು ಮೂರನೇ ಸ್ಥಾನದಲ್ಲಿ ಕೆನಡಾ ದೇಶಗಳಿವೆ. ಯುಎಸ್‌ನಲ್ಲಿ ವೃತ್ತಿ ಅವಕಾಶಗಳನ್ನು ಬಯಸುವ ಭಾರತೀಯ ವೃತ್ತಿಪರರಿಗೆ ಈ ವೀಸಾ ನಿರ್ಣಾಯಕ ಮಾರ್ಗವಾಗಿದೆ. ಆದಾಗ್ಯೂ, ವಲಸೆಯ ಬಗ್ಗೆ ನಡೆಯುತ್ತಿರುವ ನೀತಿ ಬದಲಾವಣೆಗಳು ಮತ್ತು ಚರ್ಚೆಗಳು ಭಾರತೀಯ ವೃತ್ತಿಪರರಿಗೆ ಅವಕಾಶ ಮತ್ತು ಸವಾಲಾಗಿದೆ.

    ಯಾವ ಕಂಪನಿಗಳು ಹೆಚ್-1ಬಿ ವೀಸಾದಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ?
    ಅಮೆಜಾನ್ ಇ-ಕಾಮರ್ಸ್ ಕಂಪನಿಯು 2024ರಲ್ಲಿ ಆರಂಭಿಕ ಉದ್ಯೋಗಕ್ಕಾಗಿ 3,871 ಸಂಖ್ಯೆಯೊಂಹದಿಗೆ ಹೆಚ್ಚು ಅನುಮೋದಿತ ಹೆಚ್-1ಬಿ ವೀಸಾಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿ ಕಾಗ್ನಿಜೆಂಟ್, ಮೂರನೇ ಸ್ಥಾನದಲ್ಲಿ ಇನ್ಫೋಸಿಸ್ ಕಂಪನಿಗಳಿವೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಟಿಸಿಎಸ್, ಐಬಿಎಂ, ಮೈಕ್ರೋಸಾಫ್ಟ್, ಹೆಚ್‌ಸಿಎಲ್ ಅಮೆರಿಕ, ಗೂಗಲ್ ಸ್ಥಾನ ಪಡೆದಿವೆ.

    ವೀಸಾ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರೋದ್ಯಾಕೆ?
    2016ರ ಅಧ್ಯಕ್ಷೀಯ ಚುನಾವಣೆ ವೇಳೆಯೂ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾ ರದ್ದು ಮಾಡುವುದಾಗಿ ಶಪಥ ಮಾಡಿದ್ದರು. ‘ಅಮೆರಿಕ ಫಸ್ಟ್’ ಎಂಬುದು ಅವರ ನಿಲುವು. ಅಮೆರಿಕದಲ್ಲಿ ಪ್ರತಿಭೆಗಳಿಗೇನು ಕಡಿಮೆಯಿಲ್ಲ ಅನ್ನೋದು ಅವರ ವಾದ. ಈಗ ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಶೀಘ್ರದಲ್ಲೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹೊತ್ತಿನಲ್ಲಿ ವೀಸಾ ವಿಚಾರದಲ್ಲಿ ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ.

    ಇದರ ನಡುವೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲಾನ್ ಮಸ್ಕ್ ಅವರು ಕೂಡ ವೀಸಾ ಬಗ್ಗೆ ಮಾತನಾಡಿದ್ದಾರೆ. ‘ಹೆಚ್-1ಬಿ’ ವೀಸಾ ವ್ಯವಸ್ಥೆಯಲ್ಲಿ ಭಾರಿ ದೋಷವಿದ್ದು, ಶೀಘ್ರ ಅದರಲ್ಲಿ ಸುಧಾರಣೆ ತರಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಮಾತು ದೇಶದಲ್ಲಿ ವೀಸಾ ಬಗ್ಗೆ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

    ಹೆಚ್-1ಬಿ ವೀಸಾ, ಯುಸ್‌ನಲ್ಲಿ ಮಹತ್ವದ ರಾಜಕೀಯ ಮತ್ತು ಆರ್ಥಿಕ ಚರ್ಚೆಯ ವಿಷಯವಾಗಿದೆ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ಭಾರತೀಯ-ಅಮೆರಿಕನ್ ಸಾಹಸೋದ್ಯಮ ಬಂಡವಾಳಗಾರ ಶ್ರೀರಾಮ ಕೃಷ್ಣನ್ ಅವರನ್ನು ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಿಸಿದಾಗ ವಿವಾದ ಹುಟ್ಟಿಕೊಂಡಿತು. ಅವರ ನೇಮಕಾತಿಯು ಹೆಚ್-1ಬಿ ವೀಸಾಗಳ ಮೇಲಿನ ದೇಶ-ನಿರ್ದಿಷ್ಟ ಮಿತಿಯನ್ನು ತೆಗೆದುಹಾಕುವ ಕುರಿತು ಚರ್ಚೆಗಳೊಂದಿಗೆ ಹೊಂದಿಕೆಯಾಯಿತು. ಈ ಬದಲಾವಣೆಯು ಟೆಕ್ ವಲಯದಲ್ಲಿ ಭಾರತೀಯ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಬಹುದು. ಹೀಗಾಗಿ, ಈ ವಿವಾದ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

  • ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ | ನೀವು ತಪ್ಪಾದ ವಾಹನ ಆಯ್ಕೆ ಮಾಡಿದ್ದೀರಿ – ಉಗ್ರರಿಗೆ ಮಸ್ಕ್ ಟಾಂಗ್‌

    ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ | ನೀವು ತಪ್ಪಾದ ವಾಹನ ಆಯ್ಕೆ ಮಾಡಿದ್ದೀರಿ – ಉಗ್ರರಿಗೆ ಮಸ್ಕ್ ಟಾಂಗ್‌

    ನ್ಯೂಯಾರ್ಕ್‌: ಲಾಸ್ ವೇಗಾಸ್‌ನಲ್ಲಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟವು (Tesla Cybertruck) ಭಯೋತ್ಪಾದನಾ ಕೃತ್ಯ ಎಂದು ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.

    ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನದ ವಿನ್ಯಾಸವು ಸ್ಫೋಟದ ಪ್ರಭಾವವನ್ನು ಕಡಿಮೆ ಮಾಡಿದೆ. ಹೋಟೆಲ್‌ನ್ನು ಭಾರೀ ಹಾನಿಯಿಂದ ರಕ್ಷಿಸಿದೆ. ಭಯೋತ್ಪಾದಕರು ದಾಳಿಗೆ ತಪ್ಪು ವಾಹನವನ್ನು ಆರಿಸಿಕೊಂಡಿದ್ದಾರೆ. ಸ್ಫೋಟದಿಂದ ಗಾಜಿನ ಬಾಗಿಲುಗಳು ಸಹ ಮುರಿದಿಲ್ಲ ಎಂದು ಅವರು ಪೋಸ್ಟ್‌ ಬರೆದುಕೊಂಡಿದ್ದಾರೆ.

    ಗುರುವಾರ ಮುಂಜಾನೆ ಈ ಸ್ಫೋಟ ಸಂಭವಿಸಿದೆ. ಟ್ರಂಪ್ ಇಂಟರ್‌ನ್ಯಾಶನಲ್ ಹೋಟೆಲ್‌ನ ಮುಖ್ಯ ದ್ವಾರದ ಹೊರಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದಲ್ಲಿ ಒಬ್ಬ ಸಾವನ್ನಪ್ಪಿದ್ದು, ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಪಟಾಕಿ, ಗ್ಯಾಸ್ ಟ್ಯಾಂಕ್‌ಗಳು ಮತ್ತು ಕ್ಯಾಂಪಿಂಗ್ ಇಂಧನ ಸೇರಿದಂತೆ ಟ್ರಕ್‌ನ ಬೆಡ್‌ನಲ್ಲಿ ಸಂಗ್ರಹಿಸಲಾದ ವಸ್ತುಗಳಿಂದ ಸ್ಫೋಟ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ.

    ಹೋಟೆಲ್ ಪ್ರವೇಶದ್ವಾರದಲ್ಲಿ ನಿಲ್ಲಿಸಿದ ಸ್ಟೇನ್‌ಲೆಸ್ ಸ್ಟೀಲ್ ಟ್ರಕ್‌ಗೆ ಬೆಂಕಿ ಹೊತ್ತಿ ಉರಿಯುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿತ್ತು.

  • ಟ್ರಂಪ್‌ ಹೋಟೆಲ್‌ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ – ಓರ್ವ ಸಾವು

    ಟ್ರಂಪ್‌ ಹೋಟೆಲ್‌ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ – ಓರ್ವ ಸಾವು

    ನ್ಯೂಯಾರ್ಕ್‌: ಲಾಸ್ ವೇಗಾಸ್‌ನಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದ್ದಾರೆ.

    ಎಲೆಕ್ಟ್ರಿಕ್ ವಾಹನದ ಸ್ಫೋಟಕ್ಕೂ ಮೊದಲು ಟ್ರಂಪ್ ಇಂಟರ್ನ್ಯಾಷನಲ್ ಹೋಟೆಲ್ ಗಾಜಿನ ಪ್ರವೇಶದ್ವಾರಕ್ಕೆ ಎಳೆದಿದೆ ಎಂದು ಲಾಸ್ ವೇಗಾಸ್ ಶೆರಿಫ್ ಕೆವಿನ್ ಮೆಕ್‌ಮಹಿಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಹೋಟೆಲ್ ಪ್ರವೇಶದ್ವಾರದಲ್ಲಿ ನಿಲ್ಲಿಸಿದ ಸ್ಟೇನ್‌ಲೆಸ್ ಸ್ಟೀಲ್ ಟ್ರಕ್‌ಗೆ ಬೆಂಕಿ ಹೊತ್ತಿ ಉರಿಯುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿದೆ.

    ಸೈಬರ್‌ಟ್ರಕ್‌ನೊಳಗಿದ್ದ ಮ್ಯಾಕ್‌ಮಹಿಲ್‌ ಹೆಸರಿನ ವ್ಯಕ್ತಿ ಮೃತಪಟ್ಟಿದ್ದಾನೆ. ಇನ್ನೂ 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ದೊಡ್ಡ ಪಟಾಕಿಗಳನ್ನು ಟ್ರಕ್‌ನಲ್ಲಿ ಸಾಗಿಸುವಾಗ ಸ್ಫೋಟ ಸಂಭವಿಸಿದೆ. ಟ್ರಕ್‌ನಿಂದ ಉಂಟಾದ ಸಮಸ್ಯೆ ಇದಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಸ್ಪಷ್ಟಪಡಿಸಿದ್ದಾರೆ.

  • ಚೀನಾ ವಿರುದ್ಧ ಅಸಮಾಧಾನ – WHO ನಿಂದ ಹೊರನಡೆಯಲು ಟ್ರಂಪ್‌ ನಿರ್ಧಾರ?

    ಚೀನಾ ವಿರುದ್ಧ ಅಸಮಾಧಾನ – WHO ನಿಂದ ಹೊರನಡೆಯಲು ಟ್ರಂಪ್‌ ನಿರ್ಧಾರ?

    ಮೆರಿಕದ (America) ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ (Donald Trump) ಅಧಿಕಾರ ವಹಿಸಿಕೊಳ್ಳುವ ಮುನ್ನವೇ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ನೆರೆಯ ರಾಷ್ಟ್ರಗಳನ್ನು ಎದುರುಹಾಕಿಕೊಳ್ಳುವ ದುಸ್ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಪನಾಮ ಕಾಲುವೆ ವಿಚಾರದಲ್ಲಿ ಚೀನಾವನ್ನು ಎಳೆದು ತಂದಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರಕ್ಕೂ ಟ್ರಂಪ್‌ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    ಮುಂದಿನ ತಿಂಗಳು ಶ್ವೇತಭವನದಲ್ಲಿ ಟ್ರಂಪ್‌ ತಮ್ಮ 2ನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಈ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸುವುದು ಟ್ರಂಪ್‌ ಆದ್ಯತೆಯಾಗಿದೆ. ಅವುಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವುದೂ ಒಂದಾಗಿದೆ. ಟ್ರಂಪ್‌ ತಮ್ಮ ಮೊದಲ ಅವಧಿಯಲ್ಲೂ ಈ ನಿರ್ಧಾರ ಪ್ರಕಟಿಸಿದ್ದರು. ಈ ಬಾರಿ ಅದನ್ನು ಸಾಕಾರಗೊಳಿಸಬೇಕೆಂಬ ನಿಲುವು ಹೊಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾ ಮಾತನ್ನು ಕೇಳುತ್ತಿದೆ, ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿರುವ ಸಹಾಯಧನ ನಿಲ್ಲಿಸಲು ಟ್ರಂಪ್‌ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂತರ ಕಾಯ್ದುಕೊಂಡರೆ, ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ವಿವಾದದ ಹಿನ್ನೆಲೆ ಏನು ಅನ್ನೋದನ್ನ ಮೊದಲು ತಿಳಿಯೋಣ… ಇದನ್ನೂ ಓದಿ: 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    who

    ಟ್ರಂಪ್‌ ಸಿಟ್ಟು ಈಗಿನದ್ದಲ್ಲ
    ಟ್ರಂಪ್‌ ಮೊದಲ ಅಧಿಕಾರವಧಿಯಲ್ಲೂ ವಿಶ್ವ ಆರೋಗ್ಯ ಸಂಸ್ಥೆಯನ್ನು ದೂರವಿಡಲು ಪ್ರಯತ್ನಿಸಿದ್ದರು. ಚೀನಾದಿಂದಾಗಿ ಕೋವಿಡ್ ಪ್ರಪಂಚದಾದ್ಯಂತ ಹರಡಿತ್ತು. ಇದು ತಿಳಿದಿದ್ದರೂ ಡಬ್ಲ್ಯೂಹೆಚ್‌ಓ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಕಾರಣ ಚೀನಾ ಎಂದು ಗೊತ್ತಿದ್ದರೂ, ಚೀನಾ ಹೆಸರು ಪ್ರಸ್ತಾಪಿಸಲಿಲ್ಲ. WHO ಚೀನಾ ಕಡೆಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಈಗಲೂ ವಿಶ್ವದ ಹಲವು ದೇಶಗಳನ್ನು ಅಸಮಾಧಾನಗೊಳಿಸಿದೆ. ಟ್ರಂಪ್‌ ಕೊರೊನಾವನ್ನು ʻಚೀನಾ ವೈರಸ್‌ʼ ಎಂದೇ ಕರೆದಿದ್ದರು. WHO ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ಟ್ರಂಪ್‌ನ ಅಸಮಾಧಾನ ಹಾಗೆಯೇ ಉಳಿದಿದೆ.

    ತಾತ್ಕಾಲಿಕ ಅಂತರ ಕಾಯ್ದುಕೊಂಡಿದ್ದ ಟ್ರಂಪ್‌
    ಚೀನಾ ಮಾತನ್ನು ಕೇಳುತ್ತಿದೆ ಎಂಬ ಅಸಮಾಧಾನದಿಂದಲೇ ಅಮೆರಿಕ 2020ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗುತ್ತಿದ್ದ ಧನಸಹಾಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಡಬ್ಲ್ಯೂಹೆಚ್‌ಒನಲ್ಲಿ ರಚನಾತ್ಮಕ ಸುಧಾರಣೆ ಜಾರಿಗೆಯಾಗುವವರೆಗೂ ಅಮೆರಿಕ ಈ ಸಂಸ್ಥೆಗೆ ಹಣ ಸಹಾಯ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿತ್ತು. ಅಲ್ಲದೇ ಮುಂದಿನ ನಾಲ್ಕು ತಿಂಗಳಲ್ಲಿ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದಾಗಿಯೂ ಔಪಚಾರಿಕವಾಗಿ ಘೋಷಣೆ ಮಾಡಿತ್ತು. ಅದೇ ವರ್ಷದಲ್ಲಿ ಕೊರೊನಾ ವೈರಸ್‌ ವಿಶ್ವಾದ್ಯಂತ ಹರಡಿತು. ಇದನ್ನೂ ಓದಿ: ಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ನಿಧನ

    ಗಮನಿಸಬೇಕಾದ ಸಂಗತಿಯೆಂದರೆ, ಆರಂಭದಿಂದಲೂ ಅಮೆರಿಕವೇ ವಿಶ್ವ ಆರೋಗ್ಯ ಸಂಸ್ಥೆಗೆ ಅತ್ಯಧಿಕ ಧನಸಹಾಯ ಮಾಡುತ್ತಾ ಬಂದಿತ್ತು. ಆದರೂ ವಿಶ್ವ ಆರೋಗ್ಯ ಸಂಸ್ಥೆ ಕಡಿಮೆ ದೇಣಿಗೆ ನೀಡುತ್ತಿದ್ದ ಚೀನಾ ಪರ ಇದೆ, ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ ಎಂಬುದು ಟ್ರಂಪ್‌ ಆರೋಪವಾಗಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆಗೆ ಹಣ ಸಹಾಯ ನಿಲ್ಲಿಸುವುದು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಹಲವು ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಉದ್ಯಮಿ ಬಿಲ್‌ಗೇಟ್ಸ್‌ ಕೂಡ, ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಅಧಿಕವಿದೆ, ಡಬ್ಲೂಎಚ್‌ಓ ಪ್ರಯತ್ನದಿಂದಾಗಿ ಕೋವಿಡ್‌-19 ಹರಡುವಿಕೆ ತಗ್ಗುತ್ತಿದೆ ಎಂದು ಹೇಳಿದ್ದರು. ಈ ವೇಳೆ ಟ್ರಂಪ್‌ ವಿರುದ್ಧ ಹಲವು ದೇಶಗಳು ಆಕ್ರೋಶ ಹೊರಹಾಕಿದ್ದವು.

    ಮುಂದಿನ ಅವಧಿಯಲ್ಲಿ ಜೋ ಬೈಡನ್‌ ಅವರು ಅಧಿಕಾರ ವಹಿಸಿಕೊಂಡಾಕ್ಷಣ, ಟ್ರಂಪ್‌ ಅವರ ನಿರ್ಧಾರವನ್ನು ಹಿಂತೆದುಕೊಂಡರು. ಅಮೆರಿಕವನ್ನು ಡಬ್ಲ್ಯೂಹೆಚ್‌ಒಗೆ ಪುನಃ ಸೇರಿಸಿಕೊಂಡರು. ಈಗ 2ನೇ ಅವಧಿಗೆ ನಿಯೋಜಿತ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಟ್ರಂಪ್‌ ಈ ಕುರಿತು ಇತ್ತೀಚೆಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಅದು ಅವರ ಹಳೆಯ ನಡವಳಿಕೆ ಎಂದು ಕೆಲವು ವರದಿಗಳು ಹೇಳಿವೆ. ಇದನ್ನೂ ಓದಿ: ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಎಚ್ಚರಿಕೆ

    ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ವಿವಾದ ಏನು?
    ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವಸಂಸ್ಥೆಯ ಒಂದು ಭಾಗವಾಗಿದೆ. 1948ರಲ್ಲಿ ಜಿನೀವಾದಲ್ಲಿ ಇದಕ್ಕೆ ಅಡಿಪಾಯ ಹಾಕಲಾಯಿತು. ಆರೋಗ್ಯ ಸಂಬಂಧಿತ ಸಂಶೋಧನೆಗಳನ್ನು ನೋಡಿಕೊಳ್ಳುವುದು, ಕೋವಿಡ್‌ನಂತಹ ಸಾಂಕ್ರಾಮಿಕ ಸಂರ್ಭದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವುದು ಇದರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ವಿಶ್ವಮಟ್ಟದಲ್ಲಿ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತದೆ. ಹಾಗೂ ಅಗತ್ಯವಿರುವ ದೇಶಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವುದು ಸಹ ಇದರ ಕೆಲಸವಾಗಿದೆ. ಪ್ರಸ್ತುತ ವಿಶ್ವ ಆರೋಗ್ಯಸಂಸ್ಥೆ 194 ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ.

    WHO ನಿಂದ ಅಮೆರಿಕ ಹೊರನಡೆದರೆ ಏನಾಗುತ್ತದೆ?
    * ಕೋವಿಡ್ ನಂತರ, ಜಗತ್ತು ಮತ್ತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಹುದು ಎಂಬ ಆತಂಕ ನಿರಂತರವಾಗಿದೆ.
    * ಅಮೆರಿಕ ಮಾತ್ರವಲ್ಲದೇ ಅಮೆರಿಕ ಹಾದಿಯನ್ನು ಅನುಸರಿಸುವ ದೇಶಗಳ ಮೇಲೂ ಪರಿಣಾಮ ಬೀರುತ್ತದೆ.
    * ಜಗತ್ತು ಈಗ ಯುದ್ಧದ ಭಯದಲ್ಲಿದೆ. ಅನೇಕ ರಾಷ್ಟ್ರಗಳು ರಕ್ಷಣಾವೆಚ್ಚಗಳನ್ನು ಹೆಚ್ಚಿಸುತ್ತಿವೆ. ಹೀಗಾಗಿ ಅಮೆರಿಕವನ್ನು ತೋರಿಸಿ ಇತರ ರಾಷ್ಟ್ರಗಳು ಡಬ್ಲ್ಯೂಹೆಚ್‌ಒಗೆ ಧನಸಹಾಯ ನಿಲ್ಲಿಸಬಹುದು.
    * ಅಲ್ಲದೇ ಅಮೆರಿಕ ಹೊರನಡೆದು ಚೀನಾ ಆ ಸ್ಥಾನವನ್ನು ಪಡೆದುಕೊಂಡರೆ, ಸರ್ವಾಧಿಕಾರಿ ಧೋರಣೆ ನಡೆಯಬಹುದು. ಚೀನಾ ತನ್ನ ಇಚ್ಛೆಯಂತೆ ಅದರ ನೀತಿಗಳನ್ನು ಅಲ್ಲಿಯೂ ಜಾರಿಗೆ ತರುತ್ತದೆ. ಇದು ವಿಶ್ವದ ಇತರ ರಾಷ್ಟ್ರಗಳಿಗೆ ಅಪಾಯ ಎಂದು ಹೇಳಲಾಗಿದೆ.

  • ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ಗೆ ಕಣ್ಣೇಕೆ? ಲಾಭವೇನು?

    ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ಗೆ ಕಣ್ಣೇಕೆ? ಲಾಭವೇನು?

    ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುವ ಮುನ್ನವೇ ಕೆಲವೊಂದು ದೇಶಗಳಿಗೆ ಆತಂಕ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಪನಾಮ ಕಾಲುವೆಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಮತ್ತೊಮ್ಮೆ ಗ್ರೀನ್‌ಲ್ಯಾಂಡ್‌ ಅನ್ನು ಖರೀದಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ದೇಶಗಳ ಮೇಲೆ ಅಮೆರಿಕದ ನಿಯಂತ್ರಣ ಇರಬೇಕು ಎಂದು ಟ್ರಂಪ್‌ ಹೇಳಿಕೆ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಕೆನಡಾದಿಂದ ಗ್ರೀನ್‌ಲ್ಯಾಂಡ್‌ವರೆಗೆ ಎಲ್ಲವೂ ಅಮೆರಿಕದ ನಿಯಂತ್ರಣದಲ್ಲಿ ಇರಬೇಕು ಎಂದು ಟ್ರಂಪ್‌ ಬಯಸುತ್ತಿರುವುದು, ಆ ದೇಶಗಳಿಗೆ ನುಂಗಲಾರದ ತುತ್ತಾಗಿದೆ. ಅದಲ್ಲದೇ ಹೆಚ್ಚಿನ ಸುಂಕ ವಿಧಿಸುವ ಬೆದರಿಕೆಯನ್ನು ಕೂಡ ಟ್ರಂಪ್‌ ಹಾಕಿದ್ದಾರೆ.

    ಹಾಗಿದ್ರೆ ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ ಕಣ್ಣೇಕೆ? ಗ್ರೀನ್‌ಲ್ಯಾಂಡ್‌ ತನ್ನಾದಾಗಿಸಿಕೊಳ್ಳುವುದರಿಂದ ಅಮೆರಿಕಗೆ ಲಾಭವೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಕೆಲದಿನಗಳ ಹಿಂದಷ್ಟೇ ಪನಾಮಾ ಕಾಲುವೆಯ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು. ಪನಾಮಾ ಕಾಲುವೆ ಹೆಚ್ಚಿನ ಸುಂಕ ವಿಧಿಸುತ್ತಿದೆ. ಜೊತೆಗೆ ಇಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗಿದೆ ಎಂಬ ಅಂಶಗಳು ಟ್ರಂಪ್‌ ಅನ್ನು ಕಾಡಿವೆ. ಈ ಹಿನ್ನೆಲೆ ಅಮೆರಿಕ ಪನಾಮಾ ಕಾಲುವೆಯನ್ನು ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಯಸುತ್ತದೆ ಎಂದು ಡೊನಾಲ್ಡ್‌ ಟ್ರಂಪ್‌ ಬಹಿರಂಗವಾಗಿ ಘೋಷಿಸಿದ್ದರು. ಇದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಗ್ರೀನ್‌ ಲ್ಯಾಂಡ್‌ ಕೂಡ ಅಮೆರಿಕದ ಹಿಡಿತದಲ್ಲಿರಬೇಕು ಎಂದು ಟ್ರಂಪ್‌ ಹೇಳಿದ್ದರು. ಇದು ಕೂಡ ವಿವಾದ ಸೃಷ್ಟಿಸಿದೆ. ಇದಕ್ಕೂ ಮುನ್ನ ಕೆನಡಾ ಅಮೆರಿಕದ 51ನೇ ರಾಜ್ಯ ಆಗಬೇಕಿದೆ. ಅಲ್ಲಿನ ಜನರು ಅಮೆರಿಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಟ್ರಂಪ್‌ ಹೇಳಿದ್ದರು.

    2019ರಲ್ಲಿಯೇ ಗ್ರೀನ್‌ ಲ್ಯಾಂಡ್‌ ಅನ್ನು ಖರೀದಿಸಲು ಟ್ರಂಪ್‌ ಮುಂದಾಗಿದ್ದರು. ಆದರೆ, ಡೆನ್ಮಾರ್ಕ್‌ ಮತ್ತು ಗ್ರೀನ್‌ ಲ್ಯಾಂಡ್‌ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದವು. ಟ್ರಂಪ್‌ಗೂ ಮೊದಲೇ ಅಮೆರಿಕದ ಇತರೆ ನಾಯಕರು ಈ ಪ್ರಸ್ತಾಪ ಮಾಡಿದ್ದರು.

    ಗ್ರೀನ್‌ಲ್ಯಾಂಡ್‌ ಎಲ್ಲಿದೆ?
    ಗ್ರೀನ್‌ಲ್ಯಾಂಡ್‌ ಆರ್ಕ್ಟಿಕ್‌ ಮತ್ತು ಉತ್ತರ ಅಟ್ಲಾಂಟಿಕ್‌ ಸಾಗರಗಳ ನಡುವೆ ಇರುವ ದ್ವೀಪವಾಗಿದ್ದು, ಸುಮಾರು 80%ನಷ್ಟು ಮಂಜಿನಿಂದ ಕೂಡಿದೆ. ವಿಶ್ವದ ಅತಿದೊಡ್ಡ ದ್ವೀಪವಾದ ಗ್ರೀನ್‌ಲ್ಯಾಂಡ್, ಡೆನ್ಮಾರ್ಕ್‌ನ ಅರೆಸ್ವಾಯತ್ತ ಭಾಗವಾಗಿದೆ. ಗ್ರೀನ್‌ಲ್ಯಾಂಡ್‌ ತನ್ನದೇ ಆದ ಸ್ವಂತ ಸರ್ಕಾರವನ್ನು ಹೊಂದಿದೆಯಾದರೂ, ಅದರ ರಕ್ಷಣೆ ಮತ್ತು ವಿದೇಶಾಂಗ ನೀತಿಯ ಜವಾಬ್ದಾರಿಯನ್ನು ಡೆನ್ಮಾರ್ಕ್ ಹೊತ್ತಿದೆ. ಈ ದ್ವೀಪವನ್ನು ಸುಮಾರು 10ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು. ಬಳಿಕ ಇಲ್ಲಿ ಯುರೋಪಿಯನ್‌ ವಸಾಹತುಶಾಹಿಯನ್ನು ಸ್ಥಾಪಿಸಲು ಪ್ರಯತ್ನಿಸಲಾಯಿತು. ಆದರೆ ಅಲ್ಲಿನ ಪರಿಸ್ಥಿತಿ ಕಷ್ಟಕರವಾಗಿದ್ದರಿಂದ ಇದನ್ನು ಕೈಬಿಡಲಾಯಿತು. ಸುಮಾರು 14ನೇ ಶತಮಾನದಲ್ಲಿ ಡೆನ್ಮಾರ್ಕ್‌ ಮತ್ತು ನಾರ್ವೆ ಒಕ್ಕೂಟವನ್ನು ರಚಿಸಿ ಜಂಟಿ ಆಡಳಿತವನ್ನು ಪ್ರಾರಂಭಿಸಿತು. 19ನೇ ಶತಮಾನದಿಂದ ಗ್ರೀನ್‌ಲ್ಯಾಂಡ್‌ನ ರಕ್ಷಣೆ ಮತ್ತು ವಿದೇಶಾಂಗ ನೀತಿ ಡೆನ್ಮಾರ್ಕ್‌ನ ನಿಯಂತ್ರಣದಲ್ಲಿದೆ. ಡೆನ್ಮಾರ್ಕ್‌ ಭಾಗವಾಗಿದ್ದ ಗ್ರೀನ್‌ ಲ್ಯಾಂಡ್‌ 2009ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದೆ

    ಗ್ರೀನ್‌ಲ್ಯಾಂಡ್ ಸುಮಾರು 50,000 ಜನಸಂಖ್ಯೆನ್ನು ಹೊಂದಿದೆ. ಇಲ್ಲಿನ ಜನರು ಡ್ಯಾನಿಶ್‌ ಭಾಷೆಯನ್ನು ಮಾತನಾಡುತ್ತಾರೆ. ಆದರೆ ಅವರ ಸಂಸ್ಕೃತಿ ಡೆನ್ಮಾರ್ಕ್‌ಗಿಂತ ಭಿನ್ನವಾಗಿದೆ. ಹಿಮ ಮತ್ತು ಬಂಡೆಗಳಿಂದ ತುಂಬಿರುವ ಈ ಪ್ರದೇಶದಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ಯಾವುದೇ ವಿಶೇಷ ಆದಾಯದ ಮೂಲವನ್ನು ಹೊಂದಿಲ್ಲ. ಇಲ್ಲಿನ ಸ್ಥಳೀಯರನ್ನು ಇನ್ಯೂಟ್‌ ಎಂದು ಕರೆಯಲಾಗುತ್ತದೆ. ಇವರು ತಮ್ಮ ಅಂಗಡಿಗಳಲ್ಲಿ ಪ್ರವಾಸಿಗರಿಗೆ ಕೇಕ್‌ಗಳು, ಹೆಪ್ಪುಗಟ್ಟಿದ ಮೀನುಗಳು ಮತ್ತು ಹಿಮಸಾರಂಗದ ಕೊಂಬಿನಿಂದ ಮಾಡಿದ ಶೋಪೀಸ್‌ಗಳನ್ನು ಮಾರಾಟ ಮಾಡುವ ಮೂಲಕ ಹಣಗಳಿಸುತ್ತಾರೆ.

    ಗ್ರೀನ್‌ಲ್ಯಾಂಡ್‌ ಖರೀದಿಯಿಂದ ಲಾಭವೇನು?
    ಆರ್ಕ್ಟಿಕ್ ಮತ್ತು ಅಟ್ಲಾಂಟಿಕ್ ಸಾಗರಗಳ ನಡುವೆ ನೆಲೆಗೊಂಡಿರುವ ಗ್ರೀನ್‌ಲ್ಯಾಂಡ್, ಗಮನಾರ್ಹವಾದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. ಡೆನ್ಮಾರ್ಕ್‌ನಲ್ಲಿ ಈಗಾಗಲೇ ಅಮೆರಿಕದ ಏರ್‌ಬೇಸ್‌ ಕೂಡ ಇದೆ. ನ್ಯೂಯಾರ್ಕ್‌ಗೆ ಹತ್ತಿರವಾಗುತ್ತೆ ಎನ್ನುವ ಕಾರಣಕ್ಕೆ ಟ್ರಂಪ್‌ ಇದರ ಮೇಲೆ ಕಣ್ಣಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ನೆರೆಹೊರೆಯ ಹಾಗೂ ಶತ್ರುದೇಶಗಳ ಮೇಲೆ ಕಣ್ಣಿಡಬಹುದು. ಗ್ರೀನ್‌ಲ್ಯಾಂಡ್‌ನಿಂದ ರಷ್ಯಾ, ಚೀನಾ, ಉತ್ತರ ಕೊರಿಯಾದಿಂದ ಬರುವ ಕ್ಷಿಪಣಿ ಚಟುವಟಿಕೆ ಮೇಲೆ ಕಣ್ಣಿಡಬಹುದಾಗಿದೆ. ಅಂತೆಯೇ ಇಲ್ಲಿಂದ ಏಷ್ಯಾ ಅಥವಾ ಯುರೋಪ್‌ಗೆ ಕ್ಷಿಪಣಿಗಳನ್ನು ಕಳುಹಿಸಬಹುದು.

    ಇನ್ನು ಗ್ರೀನ್‌ಲ್ಯಾಂಡ್‌ ಖನಿಜಗಳಿಂದ ತುಂಬಿರುವ ಸಮೃದ್ಧ ದೇಶವಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಆರ್ಕಿಕ್ಟ್‌ ಮಂಜುಗಡ್ಡೆ ಕರಗುತ್ತಿದೆ. ಇದರಿಂದ ಇಲ್ಲಿ ಖನಿಜ ಮತ್ತು ಇಂಧನ ಸಂಪನ್ಮೂಲಗಳ ಗಣಿಗಾರಿಕೆಯೂ ಹೆಚ್ಚುತ್ತಿದೆ. ಮೊಬೈಲ್‌, ಎಲೆಕ್ಟ್ರಿಕ್‌ ವಾಹನಗಳು ಮತ್ತು ಶಸ್ತ್ರಾಸ್ತ್ರಗಳಲ್ಲಿ ಬಳಸುವ ಕೆಲವೊಂದು ಖನಿಜವನ್ನು ಗ್ರೀನ್‌ಲ್ಯಾಂಡ್‌ ಹೊಂದಿದೆ. ಪ್ರಸ್ತುತ ಚೀನಾ ಈ ಖನಿಜಗಳ ಪೂರೈಕಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಗ್ರೀನ್‌ಲ್ಯಾಂಡ್‌ ಖರೀದಿಸುವ ಮೂಲಕ ಚೀನಾವನ್ನು ಹಿಂದಿಕ್ಕಿ ತಾನು ಮುಂಬರುವ ಪ್ಲ್ಯಾನ್‌ ಅಮೆರಿಕದ್ದಾಗಿದೆ. 2021 ರಲ್ಲಿ, ಗ್ರೀನ್ಲ್ಯಾಂಡ್ ಯುರೇನಿಯಂ ಗಣಿಗಾರಿಕೆಯನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಿತು

    ಹೊಸ ಜಲಮಾರ್ಗಗಳ ರಚನೆ: ಆರ್ಕ್ಟಿಕ್‌ನಲ್ಲಿ ಮಂಜುಗಡ್ಡೆ ಕರಗಿದರೆ ಹೊಸ ಜಲಮಾರ್ಗಗಳನ್ನು ಸೃಷ್ಟಿಸಬಹುದು. ಇದೇ ಕಾರಣಕ್ಕೆ ಗ್ರೀನ್‌ಲ್ಯಾಂಡ್‌ ಖರೀದಿಸಲು ಅಮೆರಿಕ ಮಾತ್ರವಲ್ಲದೇ ಹಲವು ದೇಶಗಳು ಮಹತ್ವಾಂಕಾಕ್ಷೆಯನ್ನು ಹೊಂದಿದೆ.

    ಮೀನುಗಾರಿಕೆ ಮತ್ತು ಸಮುದ್ರಾಹಾರ ಉದ್ಯಮ:
    ಗ್ರೀನ್‌ಲ್ಯಾಂಡ್‌ನ ನೀರು ಮೀನು ಮತ್ತು ಇತರ ಸಮುದ್ರಾಹಾರಗಳಲ್ಲಿ ಸಮೃದ್ಧವಾಗಿದೆ, ಇದು ಅಮೇರಿಕನ್ ಮೀನುಗಾರಿಕೆ ಮತ್ತು ಸಮುದ್ರಾಹಾರ ಕಂಪನಿಗಳಿಗೆ ಅವಕಾಶಗಳನ್ನು ಒದಗಿಸುತ್ತದೆ.

    ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿ: ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ ತನ್ನ ಹಕ್ಕು ಸಾಧಿಸುವುದರಿಂದ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ಕೈಗಾರಿಕೆಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದು.

    ಇದಕ್ಕೆ ತಿರುಗೇಟು ನೀಡಿರುವ ಗ್ರೀನ್‌ಲ್ಯಾಂಡ್‌ನ ಪ್ರಧಾನಿ ಮ್ಯೂಟ್‌ ಎಜ್ಡೆ, ಗ್ರೀನ್‌ಲ್ಯಾಂಡ್‌ ನಮ್ಮದು, ನಾವು ಮಾರಾಟಕ್ಕಿಲ್ಲ, ಮುಂದೆಯೂ ಮಾರಾಟಕ್ಕಿರಲ್ಲ. ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ನಾವು ಇಷ್ಟಪಡಲ್ಲ ಎಂದು ಹೇಳಿದ್ದಾರೆ.

    ಪನಾಮ ವಿವಾದ: ದಕ್ಷಿಣ ಅಮೆರಿಕ ಹಾಗೂ ಉತ್ತರ ಅಮೆರಿಕದ ನಡುವೆ ಇರುವ ಪನಾಮಾ ಕಾಲುವೆಯಿದ್ದು, ಅಂಟ್ಲಾಟಿಕ ಹಾಗೂ ಪೆಸಿಫಿಕ್‌ ಸಾಗರಗಳ ನಡುವೆ ಇದೆ. ಇಲ್ಲಿ ಈಗ ಚೀನಾದ ಪ್ರಾಬಲ್ಯ ಹೆಚ್ಚುತ್ತಿದೆ. ಅಮೆರಿಕದ ತುತ್ತ ತುದಿಯಲ್ಲಿ ಚೀನಾ ಪ್ರಾಬಲ್ಯ ಹೆಚ್ಚುತ್ತಿರುವುದು ಹಾಗೂ ಹೆಚ್ಚಿನ ಸುಂಕ ವಿಧಿಸುತ್ತಿರುವ ಹಿನ್ನೆಲೆ ಪನಾಮಾ ಕಾಲುವೆಯನ್ನು ಅಮೆರಿಕ ವಶಪಡಿಸಿಕೊಳ್ಳಲಿದೆ. ಜೊತೆಗೆ ಪನಾಮಾ ಕಾಲುವೆಯನ್ನು ರಾಂಗ್‌ ಹ್ಯಾಂಡ್‌ಗಳ ಕೈಗೆ ಸಿಗಲು ಬಿಡಲ್ಲ ಎಂದು ಟ್ರಂಪ್‌ ಭಾನುವಾರ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಪನಾಮಾ ಅಧ್ಯಕ್ಷ ಜೋಸ್‌ ರಾಲ್‌ ಮುಲಿನೋ ಅವರು, ಪನಾಮಾ ಕಾಲುವೆಯ ಪ್ರತಿ ಚದರ ಮೀಟರ್‌ ಹಾಗೂ ಅದರ ಸುತ್ತಲಿನ ಪ್ರದೇಶಗಳು ಪನಾಮಾಗೆ ಸೇರಿದ್ದು, ಮತ್ತೆ ಪನಾಮಾಗೆ ಸೇರಿರುತ್ತವೆ ಎಂದು ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ.

    ಇದಕ್ಕೂ ಮುನ್ನ ಕೆನಡಾದ ಮೂಲಕ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಧ್ವಜಕ್ಕೆ ಮತ್ತೊಂದು ನಕ್ಷತ್ರವನ್ನು ಸೇರಿಸಲು ಮುಂದಾಗಿದ್ದರು. ಕೆನಡಾ ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ಟ್ರಂಪ್‌ ಸಲಹೆ ನೀಡಿದ್ದರು. ನಾವು ಕೆನಡಾಕ್ಕೆ ವರ್ಷಕ್ಕೆ ಲಕ್ಷಾಂತರ ಕೋಟಿ ಡಾಲರ್‌ ಸಬ್ಸಿಡಿಯನ್ನು ಏಕೆ ನೀಡುತ್ತಿದ್ದೇವೆ ಎಂದು ಯಾರು ಉತ್ತರಿಸುವುದಿಲ್ಲ. ಆದ್ದರಿಂದ ಕೆನಡಾ ಅಮೆರಿಕದ 51ನೇ ರಾಜ್ಯ ಆಗಬೇಕು. ಇದು ಉತ್ತಮ ಕಲ್ಪನೆ ಅಲ್ಲವಾ ಎಂದು ಬರೆದಿದ್ದರು. ಇದಕ್ಕೆ ಕೆನಡಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    ಇದಕ್ಕೂ ಮುನ್ನ ಭಾರತಕ್ಕೆ ಟ್ರಂಪ್‌ ಪ್ರತೀಕಾರದ ಸುಂಕ ಹಾಕುವ ಬೆದರಿಕೆಯನ್ನು ಹಾಕಿದ್ದರು. ನೀವು ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಸುಂಕ ವಿಧಿಸಿದರೆ, ನಾವು ಹೆಚ್ಚಿನ ಸುಂಕ ವಿಧಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದರು.

  • ಉಕ್ರೇನ್‌ ಯುದ್ಧ ಸಂಬಂಧ ಟ್ರಂಪ್‌ ಜೊತೆ ಮಾತುಕತೆಗೆ ಸಿದ್ಧ: ಪುಟಿನ್‌

    ಉಕ್ರೇನ್‌ ಯುದ್ಧ ಸಂಬಂಧ ಟ್ರಂಪ್‌ ಜೊತೆ ಮಾತುಕತೆಗೆ ಸಿದ್ಧ: ಪುಟಿನ್‌

    ಮಾಸ್ಕೋ: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್‌ (Donald Trump) ಅವರೊಂದಿಗೆ ಉಕ್ರೇನ್ ಯುದ್ಧ ಸಂಬಂಧ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ (Vladimir Putin) ತಿಳಿಸಿದ್ದಾರೆ.

    ವರ್ಷಾಂತ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟಿನ್‌ ಟ್ರಂಪ್‌ ಅವರೊಂದಿಗೆ ಎಂದಾದರೂ ಚರ್ಚೆ ನಡೆಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಉಕ್ರೇನ್ (Ukraine) ಒಪ್ಪಂದದ ಕುರಿತು ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್‌ ಭಾಗವತ್‌

    ನಾನು ಟ್ರಂಪ್ ಅವರನ್ನು ಯಾವಾಗ ಭೇಟಿಯಾಗಲಿದ್ದೇನೆ ಎಂಬುದು ತಿಳಿದಿಲ್ಲ. ಅವರು ಕೂಡ ಯಾವುದಕ್ಕೂ ಖಚಿತಪಡಿಸಿಲ್ಲ. ಕಳೆದ 4 ವರ್ಷಗಳಿಂದ ಅವರ ಜೊತೆ ಮಾತುಕತೆ ನಡೆಸಿಲ್ಲ. ಆದರೆ ಯಾವಾಗ ಬೇಕಾದರೂ ಭೇಟಿಯಾಗಲು ಸಿದ್ಧವಿದ್ದೇನೆ, ಜೊತೆಗೆ ಉಕ್ರೇನ್‌ ಯುದ್ಧದ ಸಂಬಂದು ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದಾರೆ.

    ಮುಂದಿನ ವರ್ಷ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ʻನರಮೇಧʼ ಕೊನೆಗೊಳಿಸಲು ಪುಟಿನ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ

    ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಮೇಲುಗೈ ಸಾಧಿಸಿದೆ. ಆದ್ರೆ ಬಹಳ ಹಿಂದೆಯೇ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಜೊತೆಗೆ ಈಗ ಏನಾಗುತ್ತಿದೆ ಎಂದು ಗಮನಿಸಿದಾಗ ಆ ನಿರ್ಧಾರ ಹಿಂದೆಯೇ ತೆಗೆದುಕೊಳ್ಳಬೇಕಿತ್ತು ಎಂದೂ ಸಹ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್

  • ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್‌ ಸಂದೇಶ

    ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್‌ ಸಂದೇಶ

    ವಾಷಿಂಗ್ಟನ್‌: ಭಾರತ (India) ನಮ್ಮ ಮೇಲೆ ತೆರಿಗೆ (Tax) ವಿಧಿಸಿದರೆ ನಾವು ಅವರ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ವಿಧಿಸುತ್ತೇವೆ ಎಂಬ ಸಂದೇಶವನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ರವಾನಿಸಿದ್ದಾರೆ.

    ಫ್ಲೋರಿಡಾ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಅವರು ನಮ್ಮ ಮೇಲೆ ತೆರಿಗೆ ವಿಧಿಸುತ್ತಾರೆ. ನಾವು ಅವರಿಗೆ ತೆರಿಗೆ ವಿಧಿಸುತ್ತಿಲ್ಲ. ಆದರೆ ಇನ್ನು ಮುಂದೆ ನಾವು ತೆರಿಗೆ ವಿಧಿಸುತ್ತೇವೆ ಎಂದು ಹೇಳಿದರು.

    ಚೀನಾದೊಂದಿಗಿನ (China) ಸಂಭಾವ್ಯ ವ್ಯಾಪಾರ ಒಪ್ಪಂದದ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಅವರು ಈ ಹೇಳಿಕೆಗಳನ್ನು ನೀಡಿದರು. ಅಮೆರಿಕ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವ ಕೆಲ ದೇಶಗಳಲ್ಲಿ ಭಾರತ ಮತ್ತು ಬ್ರೆಜಿಲ್ ಸೇರಿವೆ ಎಂದು ಟ್ರಂಪ್ ಹೇಳಿದರು.

    ನಮಗೆ ಅಲ್ಲಿಂದ ಮೋಟಾರ್‌ ಸೈಕಲ್‌ ಬರುತ್ತೆ ನಾವು ಮೋಟಾರ್‌ ಸೈಕಲ್‌ ಕಳುಹಿಸುತ್ತೇವೆ. ಅವರು ನಮ್ಮ ಉತ್ಪನ್ನದ ಮೇಲೆ 100% ಮತ್ತು 200% ಶುಲ್ಕ ವಿಧಿಸುತ್ತಾರೆ. ಬ್ರೆಜಿಲ್‌ ಸಹ ಈದೇ ರೀತಿ ತೆರಿಗೆ ಹಾಕುತ್ತದೆ. ಅವರು ನಮಗೆ ಶುಲ್ಕ ವಿಧಿಸಿದರೆ ನಾವು ಅಷ್ಟೇ ಪ್ರಮಾಣದ ಶುಲ್ಕವನ್ನು ವಿಧಿಸುತ್ತೇವೆ ಎಂದು ತಿಳಿಸಿದರು.

    ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿದ್ದ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಕಿಡಿಕಾರಿದ್ದರು. ನಾವು ಹಾರ್ಲೆಯನ್ನು ಭಾರತಕ್ಕೆ ಕಳುಹಿಸಿದರೆ ಅವರು 100% ತೆರಿಗೆ ವಿಧಿಸುತ್ತಾರೆ. ಭಾರತದವರು ಸಾಕಷ್ಟು ಸಂಖ್ಯೆಯ ಮೋಟಾರ್ ಸೈಕಲ್ ತಯಾರಿಸಿ ನಮಗೆ ಕಳುಹಿಸಿದಾಗ ಯಾವುದೇ ತೆರಿಗೆ ಇಲ್ಲ. ನಾನು ಮೋದಿ ಅವರಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ತಿಳಿಸಿದ್ದೆ ಎಂದು ಹೇಳಿದ್ದರು.

    ಮಾತುಕತೆಯ ವೇಳೆ ಮೋದಿ ಕೇವಲ 75% ಆಮದು ಸುಂಕ ವಿಧಿಸುತ್ತೇವೆ ಎಂದಿದ್ದರು. ಕೆಲ ದಿನಗಳ ನಂತರ 50% ವಿಧಿಸಲಾಗುವುದು ಎಂದರು. ಆದರೆ ಭಾರತದಿಂದ ಮೋಟಾರ್ ಸೈಕಲ್ ಆಮದು ಮಾಡಿಕೊಂಡರೆ ನಮಗೆ ಸಿಗುವ ಲಾಭ 0% ಎಂದಿದ್ದರು.

     

  • ಭಾರತದ ಜೊತೆ ಚೇಷ್ಟೆ ಮಾಡಿದ್ದ ಟ್ರುಡೋ ಶೀಘ್ರವೇ ರಾಜೀನಾಮೆ?

    ಭಾರತದ ಜೊತೆ ಚೇಷ್ಟೆ ಮಾಡಿದ್ದ ಟ್ರುಡೋ ಶೀಘ್ರವೇ ರಾಜೀನಾಮೆ?

    ಒಟ್ಟಾವಾ: ಖಲಿಸ್ತಾನ (Khalistan) ಉಗ್ರ ಸಂಘಟನೆಯ ವಿಚಾರ ಹಿಡಿದುಕೊಂಡು ಭಾರತದೊಂದಿಗೆ ಚೇಷ್ಟೆ ಮಾಡುತ್ತಿರುವ ಕೆನಡಾದ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

    ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ (Chrystia Freeland) ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಟ್ರುಡೋ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ.

    ಉಪಪ್ರಧಾನಿ ಹುದ್ದೆಯೊಂದಿಗೆ ಹಣಕಾಸು ಖಾತೆಯನ್ನು ಹೊಂದಿದ್ದ ಫ್ರೀಲ್ಯಾಂಡ್ ಟ್ರುಡೋ ಸರ್ಕಾರದಲ್ಲಿ ಅತ್ಯಂತ ಶಕ್ತಿಶಾಲಿ ಸಚಿವರಾಗಿದ್ದರು. ಕಳೆದ 4 ವರ್ಷಗಳಲ್ಲಿ ಸರ್ಕಾರದಿಂದ ಹೊರಬಂದ ಎರಡನೇ ಹಣಕಾಸು ಸಚಿವೆ ಇವರಾಗಿದ್ದಾರೆ.

    ಟ್ರುಡೋ ರಾಜೀನಾಮೆ ನೀಡಲು ಚಿಂತನೆ ಮಾಡಿದ್ದಾರೆ ಮತ್ತು ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಡಾ ಮಾಧ್ಯಮವೊಂದು ವರದಿ ಮಾಡಿದೆ.

    ಕೆನಡಾದಿಂದ ಅಕ್ರಮವಾಗಿ ವಲಸಿಗರು ಅಮೆರಿಕಕ್ಕೆ ನುಸುಳುತ್ತಿದ್ದಾರೆ. ನುಸುಳುಕೋರರ ವಿರುದ್ಧ ಕೆನಡಾ ಕ್ರಮ ಕೈಗೊಳ್ಳುತ್ತಿಲ್ಲ. ತಾನು ಅಧಿಕಾರಕ್ಕೆ ಏರಿದ ಬಳಿಕ ಕೆನಡಾದಿಂದ ಆಮದಾಗುವ ವಸ್ತುಗಳ ಮೇಲೆ 25% ಆಮದು ತೆರಿಗೆ ವಿಧಿಸುವುದಾಗಿ ಟ್ರಂಪ್‌ (Donald Trump) ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಸ್ಟಿನ್‌ ಟ್ರುಡೋ ಕೆನಡಾದ ಗವರ್ನರ್‌ ಎಂದು ಟ್ರಂಪ್‌ ವ್ಯಂಗ್ಯವಾಡಿದ್ದಾರೆ. ಅಮೆರಿಕ ಕೆನಡಾದ ಸಂಬಂಧ ಹಾಳಾಗುತ್ತಿರುವ ಬೆನ್ನಲ್ಲೇ ಟ್ರುಡೋ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ.

    ಕೆನಡಾದ ಪ್ರಮುಖ ವ್ಯಾಪಾರ ಪಾಲುದಾರ ಅಮೆರಿಕವಾಗಿದ್ದು ಪ್ರತಿ ವರ್ಷ ಅದರ ರಫ್ತಿನ 75 ಪ್ರತಿಶತವು ಅಮೆರಿಕಕ್ಕೆ ಹೋಗುತ್ತಿದೆ. ಕೆಲ ದಿನಗಳ ಹಿಂದೆ ಜಸ್ಟಿನ್‌ ಟ್ರುಡೋ ಟ್ರಂಪ್‌ ಅವರನ್ನು ಫ್ಲೋರಿಡಾದಲ್ಲಿ ಭೇಟಿಯಾಗಿ ಮಾತನಾಡಿದ್ದರು. ಆಮದು ಸುಂಕದ ಬಗ್ಗೆ ಟ್ರುಡೋ ಮಾತುಕತೆ ನಡೆಸಿದ್ದರೂ ಟ್ರಂಪ್‌ ಕಡೆಯಿಂದ ಯಾವುದೇ ಧನಾತ್ಮಕ ನಿರ್ಧಾರ ಪ್ರಕಟವಾಗಿಲ್ಲ.

    ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಾಡದ ಮಾಧ್ಯಮಗಳು ವರದಿ ಮಾಡಿವೆ.

    ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಅ.16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಕೆ ಜಸ್ಟಿನ್‌ ಟ್ರುಡೋ (Justin Trudeau) ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.

  • ಟ್ರಂಪ್‌ ರೆಸಾರ್ಟ್‌ನಲ್ಲಿ ಆಪಲ್‌ ಸಿಇಒ ಟಿಮ್‌ ಕುಕ್‌, ಡಿನ್ನರ್‌ನಲ್ಲಿ ಭಾಗಿ

    ಟ್ರಂಪ್‌ ರೆಸಾರ್ಟ್‌ನಲ್ಲಿ ಆಪಲ್‌ ಸಿಇಒ ಟಿಮ್‌ ಕುಕ್‌, ಡಿನ್ನರ್‌ನಲ್ಲಿ ಭಾಗಿ

    ವಾಷಿಂಗ್ಟನ್‌: ಅಧಿಕೃತವಾಗಿ ಅಮೆರಿಕದ ಅಧ್ಯಕ್ಷ ಪಟ್ಟವನ್ನು ಅಲಂಕರಿಸುವ ಮೊದಲೇ ಡೊನಾಲ್ಡ್‌ ಟ್ರಂಪ್‌ (Donald Trump) ಉದ್ಯಮಿಗಳು, ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲು ಆರಂಭಿಸಿದ್ದಾರೆ.

    ಆಪಲ್ ಸಿಇಒ ಟಿಮ್ ಕುಕ್ (Apple CEO Tim Cook) ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರೆ.

    ಚುನಾವಣೆಯಲ್ಲಿ ಜಯಗಳಿಸಿದ ನಂತರ ಟ್ರಂಪ್‌ ಅವರ ಜೊತೆಗಿನ ಮೊದಲ ಭೇಟಿ ಇದಾಗಿದೆ. ಮೊದಲ ಅವಧಿಯಲ್ಲಿ ಟ್ರಂಪ್‌ ಉದ್ಯಮಿಗಳ ಜೊತೆ ನೇರ ಸಂಬಂಧ ಹೊಂದಿದ್ದರು. ತನ್ನ ಎರಡನೇ ಅವಧಿಯಲ್ಲೂ ಟ್ರಂಪ್‌ ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದುವ ಭಾಗವಾಗಿ ಈ ಭೇಟಿ ನಡೆದಿದೆ ಎಂದು ವರದಿಯಾಗಿದೆ.

    ನವೆಂಬರ್‌ನಲ್ಲಿ ಟ್ರಂಪ್‌ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನು ಭೇಟಿಯಾಗಿದ್ದರೆ ಮುಂದಿನ ವಾರ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಟ್ರಂಪ್‌ ಅವರನ್ನು ಭೇಟಿಯಾಗಲಿದ್ದಾರೆ.

    ಮೆಟಾ, ಅಮೆಜಾನ್‌, OpenAI ಸೇರಿದಂತೆ ಹಲವು ಟೆಕ್‌ ಕಂಪನಿಗಳು ಮತ್ತು ನಾಯಕರು ಟ್ರಂಪ್‌ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ 1 ಮಿಲಿಯನ್‌ ಡಾಲರ್‌ ನೀಡುವುದಾಗಿ ಘೋಷಿಸಿವೆ.

  • ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ ಆರಂಭಿಸುವ ನಿರ್ಧಾರ ಕೈಗೊಂಡಿಲ್ಲ: ಜೈಶಂಕರ್‌

    ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ ಆರಂಭಿಸುವ ನಿರ್ಧಾರ ಕೈಗೊಂಡಿಲ್ಲ: ಜೈಶಂಕರ್‌

    ದೋಹಾ: ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ಅಮೆರಿಕ ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ (New Currency) ಆರಂಭಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ (S Jaishankar) ಕತಾರ್‌ನಲ್ಲಿ ಮಾತನಾಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತ ಸೇರಿದಂತೆ ಬ್ರಿಕ್ಸ್ (BRICS) ರಾಷ್ಟ್ರಗಳಿಗೆ 100 ಪ್ರತಿಶತ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: 16ನೇ ವರ್ಷಕ್ಕೆ ಸ್ಕೂಲ್‌ ಡ್ರಾಪ್‌ಔಟ್‌ – ಬಿಲಿಯನೇರ್‌, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!

    ಅಕ್ಟೋಬರ್‌ನಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಡಾಲರ್ ಹೊರತಾದ ವಹಿವಾಟುಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿತ್ತು. BRICS ಗುಂಪು ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳನ್ನು ಒಳಗೊಂಡಿದೆ. ಅವರು ಹೊಸ ಬ್ರಿಕ್ಸ್ ಕರೆನ್ಸಿಯನ್ನು ರಚಿಸುವುದಿಲ್ಲ ಅಥವಾ ಪ್ರಬಲವಾದ ಯುಎಸ್ ಡಾಲರ್ ಬದಲಿಗೆ ಯಾವುದೇ ಇತರ ಕರೆನ್ಸಿಗೆ ಬೆಂಬಲಿಸುವುದಿಲ್ಲ ಎನ್ನುವ ಬಗ್ಗೆ ಈ ದೇಶಗಳಿಂದ ನಮಗೆ ಬದ್ಧತೆಯ ಅಗತ್ಯವಿದೆ. ಇಲ್ಲದಿದ್ದರೆ ಅವರು 100% ಟ್ಯಾಕ್ಸ್ ಎದುರಿಸುತ್ತಾರೆ ಎಂದು ಟ್ರಂಪ್‌ ಹೇಳಿದ್ದರು.

    ಈ ಕುರಿತು ಮಾತನಾಡಿರುವ ಜೈ ಶಂಕರ್‌, ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದ್ದಾರೆ. ಭಾರತ – ಅಮೆರಿಕದೊಂದಿಗೆ ಉತ್ತಮ ಮತ್ತು ಬಹಳ ಗಟ್ಟಿಯಾದ ಸಂಬಂಧ ಹೊಂದಿದೆ. ಕೆಲವು ಸಮಸ್ಯೆಗಳಾಗಿ ವ್ಯಾಪಾರ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಆದ್ರೆ ಟ್ರಂಪ್ ಅಡಿಯಲ್ಲಿ QUAD ಅನ್ನು ಮರುಪ್ರಾರಂಭಿಸಲಾಗಿದೆ ಎಂದು ಜೈಶಂಕರ್‌ ಹೇಳಿದ್ದಾರೆ. ಇದನ್ನೂ ಓದಿ: ಸಿರಿಯಾದಲ್ಲಿ ಹೆಚ್ಚಿದ ಹಿಂಸಾಚಾರ – ಕೂಡಲೇ ದೇಶವನ್ನು ತೊರೆಯಿರಿ; ಭಾರತೀಯರಿಗೆ ಸೂಚನೆ

    ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ವೈಯಕ್ತಿಕ ಸಂಬಂಧವಿದೆ. ಇದು ಉಭಯ ದೇಶಗಳ ನಡುವಿನ ಬಲವಾದ ದ್ವಿಪಕ್ಷೀಯ ಬಾಂಧವ್ಯಕ್ಕೆ ಕೊಡುಗೆ ನೀಡಿದೆ. ಭಾರತವು ಡಾಲರೀಕರಣಕ್ಕೆ ಎಂದಿಗೂ ಮುಂದಾಗಿಲ್ಲ. ಏಕೆಂದರೆ ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ. ಡಾಲರ್‌ ದುರ್ಬಲಗೊಳಿಸುವ ಆಸಕ್ತಿ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿಯೆಟ್ನಾಂ ಯುವತಿಯರಿಗೆ ಬಾಡಿಗೆಗೆ ಬಾಯ್‌ಫ್ರೆಂಡ್‌ ಬೇಕಂತೆ..; ಸೃಷ್ಟಿಯಾಗಿದೆ ಹೊಸ ಟ್ರೆಂಡ್‌ – ಯಾಕೆ ಗೊತ್ತಾ?