Tag: donald trump

  • ಮೋದಿ-ಟ್ರಂಪ್‌ ಫ್ರೆಂಡ್ಸ್‌, ಆದ್ರೂ ಭಾರತ-ಅಮೆರಿಕ ಮುಸುಕಿನ ಗುದ್ದಾಟ; ಯುಎಸ್‌ ಜೊತೆಗಿನ ರಾಜತಾಂತ್ರಿಕ ಸವಾಲು ಹೊಸದೇನಲ್ಲ!

    ಮೋದಿ-ಟ್ರಂಪ್‌ ಫ್ರೆಂಡ್ಸ್‌, ಆದ್ರೂ ಭಾರತ-ಅಮೆರಿಕ ಮುಸುಕಿನ ಗುದ್ದಾಟ; ಯುಎಸ್‌ ಜೊತೆಗಿನ ರಾಜತಾಂತ್ರಿಕ ಸವಾಲು ಹೊಸದೇನಲ್ಲ!

    – ಯುರೋಪ್‌ನಿಂದಲೇ ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿ ಆಗ್ತಿದ್ಯಾ?

    ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟೀಕೆ, ಟ್ಯಾರಿಫ್, ನಿರ್ಬಂಧಗಳ ಬೆದರಿಕೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಭಾರತದ ಕೂಡ ಅದಕ್ಕೆ ಬಲವಾದ ಪ್ರತಿದಾಳಿ ಒಡ್ಡುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಭಾರತ-ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಾರ್ಯತಂತ್ರದ ಪಾಲುದಾರಿಕೆಯು ಹೊಸ ತಿರುವನ್ನು ಪಡೆದುಕೊಂಡಿದೆ. ಉಕ್ರೇನ್ ವಿರುದ್ಧ ಯುದ್ಧ ನಡೆಯುತ್ತಿರುವ ರಷ್ಯಾ ಜೊತೆ ಭಾರತ ಸಂಬಂಧ ಚೆನ್ನಾಗಿದೆ. ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳ ನಡುವೆಯೂ ರಷ್ಯಾದಿಂದ ಭಾರತ (India) ರಕ್ಷಣಾ ಮತ್ತು ಇಂಧನ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಟ್ರಂಪ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಮಾತು ಕೇಳದ ಭಾರತದ ಮೇಲೆ ಸುಂಕದ (Tariff) ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿದೆ.

    ಭಾರತದ ಜೊತೆಗಿನ ಅಮೆರಿಕದ (US) ಮುಸುಕಿನ ಗುದ್ದಾಟ ಇದೇ ಮೊದಲೇನಲ್ಲ. ಶತಮಾನಗಳ ಹಿಂದಿನಿಂದಲೂ ಉಭಯ ದೇಶಗಳ ರಾಜತಾಂತ್ರಿಕತೆಯು ಅನೇಕ ಸವಾಲುಗಳನ್ನು ಕಂಡಿದೆ. ಯುರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಹಿಂದೆ ಹೇಗಿತ್ತು? ಈಗಿನ ಸವಾಲುಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಭಾರತದ ಮೇಲೆ 50% ಟ್ಯಾರಿಫ್!
    ರಷ್ಯಾದಿಂದ (Russia) ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಟ್ರಂಪ್ 50% ಟ್ಯಾರಿಫ್ ವಿಧಿಸಿದ್ದಾರೆ. ಟ್ರಂಪ್ ನಡೆಗೆ ಭಾರತ ಅಸಮಾಧಾನ ಹೊರಹಾಕಿದೆ. ‘ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅಸಮಂಜಸ. ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಟ್ರಂಪ್ ಬೆದರಿಕೆಗೆ ಡೋಂಟ್ ಕೇರ್ ಎಂದಿರುವ ಅಜಿತ್ ದೋವಲ್ ರಷ್ಯಾಗೆ ಭೇಟಿ ನೀಡಿದ್ದರೆ. ಉಭಯ ದೇಶಗಳ ನಡುವಿನ ಸಂಬಂಧ ಬಲಪಡಿಸಲು ಮುಂದಾಗಿದ್ದಾರೆ. ಇತ್ತ ಹಲವು ವರ್ಷಗಳ ಬಳಿಕ ಪ್ರಧಾನಿ ಮೋದಿ ಅವರು ಚೀನಾಗೆ ಭೇಟಿ ನೀಡಲಿದ್ದಾರೆ.

    ಯುರೋಪ್‌ನಿಂದಲೇ ರಷ್ಯಾದಿಂದ ಹೆಚ್ಚು ತೈಲ ಖರೀದಿ!
    * ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕಳೆದ ಮೂರು ವರ್ಷಗಳಿಂದ ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ. 2022ರ ಮಾರ್ಚ್‌ನಲ್ಲಿ ಆಗಿನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರ ಸಮ್ಮುಖದಲ್ಲಿ ಮಾತನಾಡಿದ್ದ ಜೈಶಂಕರ್, ನಿರ್ಬಂಧಗಳ ಬಗ್ಗೆ ಮಾತನಾಡುವುದು ಒಂದು ಅಭಿಯಾನದಂತೆ ಕಾಣುತ್ತದೆ. ಯುರೋಪ್ ವಾಸ್ತವವಾಗಿ ಉಕ್ರೇನ್ ಯುದ್ಧಕ್ಕಿಂತ ಮೊದಲು ರಷ್ಯಾದಿಂದ ಹೆಚ್ಚು ತೈಲವನ್ನು ಖರೀದಿಸಿದೆ. ಆ ಸಂದರ್ಭದಲ್ಲಿ ಯುರೋಪ್ ಹಿಂದಿನ ತಿಂಗಳಿಗಿಂತ ಶೇ.15 ಕ್ಕಿಂತ ಹೆಚ್ಚು ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸಿದೆ ಎಂದು ಗಮನಸೆಳೆದಿದ್ದರು. ರಷ್ಯಾದಿಂದ ತೈಲ ಮತ್ತು ಅನಿಲದ ಪ್ರಮುಖ ಖರೀದಿದಾರರನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಯುರೋಪಿನಲ್ಲಿದ್ದಾರೆ. ನಾವು ನಮ್ಮ ಇಂಧನ ಪೂರೈಕೆಯ ಬಹುಪಾಲು ಮಧ್ಯಪ್ರಾಚ್ಯದಿಂದ ಪಡೆಯುತ್ತೇವೆ. ಹಿಂದೆ ನಮ್ಮ ತೈಲದ ಸುಮಾರು 7.5-8% ಯುಎಸ್‌ನಿಂದಲೇ ಬಂದಿದೆ. ಬಹುಶಃ ಇದು ರಷ್ಯಾದಿಂದ ಶೇಕಡ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚಿದೆ ಎಂದು ಜೈಶಂಕರ್ ತಿಳಿಸಿದ್ದರು.

    * 2022ರ ಏಪ್ರಿಲ್‌ನಲ್ಲಿ ಜೈಶಂಕರ್ ವಾಷಿಂಗ್ಟನ್ ಡಿಸಿಯಲ್ಲಿ ಮಾತನಾಡುತ್ತಾ, ಯುರೋಪ್ ಕೇವಲ ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಖರೀದಿಸಿದ್ದಕ್ಕಿಂತಲೂ ಕಡಿಮೆ ತೈಲವನ್ನು ಭಾರತವು ಒಂದು ತಿಂಗಳಲ್ಲಿ ರಷ್ಯಾದಿಂದ ಖರೀದಿಸಿದೆ. ರಷ್ಯಾದಿಂದ ಇಂಧನ ಖರೀದಿಯನ್ನು ನೋಡುವುದಾದರೆ, ನಿಮ್ಮ ಗಮನ ಯುರೋಪಿನ ಮೇಲೆ ಕೇಂದ್ರೀಕರಿಸಬೇಕು. ನಾವು ಸ್ವಲ್ಪವನ್ನಷ್ಟೇ ಖರೀದಿಸುತ್ತೇವೆ. ಅದು ನಮ್ಮ ಇಂಧನ ಸುರಕ್ಷತೆಗೆ ಅವಶ್ಯಕವಾಗಿದೆ. ಆದರೆ ಅಂಕಿಅಂಶಗಳನ್ನು ನೋಡಿದಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಗಳು, ಯುರೋಪ್ ಒಂದೇ ದಿನಕ್ಕೆ ಮಧ್ಯಾಹ್ನದ ವೇಳೆ ಮಾಡುವ ಖರೀದಿಗಿಂತ ಕಡಿಮೆಯಿದೆ ಎಂದು ತಿಳಿಸಿದ್ದಾರೆ. ಯುರೋಪಿನ ಸಮಸ್ಯೆಗಳು ಪ್ರಪಂಚದ ಸಮಸ್ಯೆಗಳು. ಆದರೆ, ಪ್ರಪಂಚದ ಸಮಸ್ಯೆಗಳು ಯುರೋಪಿನ ಸಮಸ್ಯೆಗಳಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು ಎಂದಿದ್ದರು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

    * 2022ರ ಡಿಸೆಂಬರ್‌ನಲ್ಲಿ ಜೈಶಂಕರ್ ಮಾತನಾಡಿ, ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದ ಒಂಬತ್ತು ತಿಂಗಳಲ್ಲಿ ಭಾರತದ ಖರೀದಿಗಳು ಯುರೋಪ್‌ನ ಆರನೇ ಒಂದು ಭಾಗದಷ್ಟಿದೆ. ಪ್ರಸ್ತುತ ಯುರೋಪ್ ಮಧ್ಯಪ್ರಾಚ್ಯದಿಂದ ಬಹಳಷ್ಟು [ಕಚ್ಚಾ] ತೈಲವನ್ನು ಖರೀದಿಸುತ್ತಿದೆ ಎಂಬುದನ್ನು ನೆನಪಿನಲ್ಲಿಡಿ. ಭಾರತದಂತಹ ಆರ್ಥಿಕತೆಗೆ ಮಧ್ಯಪ್ರಾಚ್ಯವು ಸಾಂಪ್ರದಾಯಿಕವಾಗಿ ಪೂರೈಕೆದಾರರಾಗಿದ್ದರು. ಆದ್ದರಿಂದ ಇದು ಮಧ್ಯಪ್ರಾಚ್ಯದಲ್ಲಿಯೂ ಬೆಲೆಗಳ ಮೇಲೆ ಒತ್ತಡ ಹೇರುತ್ತದೆ. ಯುರೋಪಿಯನ್ ಒಕ್ಕೂಟದಲ್ಲಿ ತೈಲ ಆಮದು, ಭಾರತ ಮಾಡಿಕೊಂಡಿದ್ದಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

    ಭಾರತ-ಯುಎಸ್ ಸಂಬಂಧದ ಸವಾಲು
    ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ದಶಕಗಳಿಂದ ಹಲವಾರು ಸವಾಲುಗಳನ್ನು ಎದುರಿಸಿದೆ. 1971 ರ ಯುದ್ಧದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರು. ಆಗಿನಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಭಾರತ-ಯುಎಸ್ ಸಂಬಂಧಗಳಲ್ಲಿ ಏರಿಳಿತವನ್ನು ಗುರುತಿಸಬಹುದು. ಯುಎಸ್ ನೌಕಾಪಡೆಯು ಬಂಗಾಳ ಕೊಲ್ಲಿಗೆ ಎಂಟ್ರಿ ಕೊಟ್ಟಿತ್ತು. ಆದರೆ, ಸೋವಿಯತ್ ಒಕ್ಕೂಟದೊಂದಿಗಿನ ಭಾರತದ ಸ್ನೇಹ ಒಪ್ಪಂದವು ಅಮೆರಿಕನ್ನರು ನೇರವಾಗಿ ಯುದ್ಧಕ್ಕೆ ಪ್ರವೇಶಿಸುವುದನ್ನು ತಡೆಯಿತು.

    1998ರ ಮೇ ತಿಂಗಳಲ್ಲಿ ಪೋಖ್ರಾನ್‌ನಲ್ಲಿ ನಡೆದ ಪರಮಾಣು ಪರೀಕ್ಷೆಗಳ ನಂತರ ಅಮೆರಿಕ ಮತ್ತು ಹೆಚ್ಚಿನ ಪಶ್ಚಿಮ ದೇಶಗಳು ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದವು. ಭಾರತವು ಅಮೆರಿಕದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಬಿಕ್ಕಟ್ಟಿನಿಂದ ಹೊರಬಂದಿತು. ಜಸ್ವಂತ್ ಸಿಂಗ್ ಮತ್ತು ಆಗಿನ ಅಮೆರಿಕದ ವಿದೇಶಾಂಗ ಉಪ ಕಾರ್ಯದರ್ಶಿ ಸ್ಟ್ರೋಬ್ ಟಾಲ್ಬಾಟ್ ನಡುವಿನ ಮಾತುಕತೆಗಳು ಅಂತಿಮವಾಗಿ ಒಂದು ದಶಕದ ನಂತರ 2008 ರಲ್ಲಿ ಭಾರತ-ಯುಎಸ್ ಪರಮಾಣು ಒಪ್ಪಂದಕ್ಕೆ ಕಾರಣವಾಯಿತು.

    2013ರ ಡಿಸೆಂಬರ್‌ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರಿಗೆ ಸಾಕಷ್ಟು ಸಹಾಯ ನೀಡುತ್ತಿಲ್ಲ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿ ತಪಾಸಣೆ ನಡೆಸಲಾಯಿತು. ಈ ಘಟನೆಯು ಭಾರತೀಯ ರಾಜತಾಂತ್ರಿಕರನ್ನು ಕೆರಳಿಸಿತು. ಸರ್ಕಾರವು ಒಂದು ಅಂಶವನ್ನು ಸ್ಪಷ್ಟಪಡಿಸಲು ಕ್ರಮಗಳನ್ನು ತೆಗೆದುಕೊಂಡಿತು. ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸುತ್ತಲಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕುವುದು ಮತ್ತು ಭಾರತದಲ್ಲಿನ ಅಮೆರಿಕದ ರಾಜತಾಂತ್ರಿಕರಿಗೆ ರಾಜತಾಂತ್ರಿಕ ಸವಲತ್ತುಗಳನ್ನು ಪರಿಶೀಲಿಸುವ ಕ್ರಮಕೈಗೊಂಡಿತು. ಆ ಸಮಯದಲ್ಲಿ ಜೈಶಂಕರ್ ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. ಖೋಬ್ರಗಡೆ ಅವರ ಬಿಡುಗಡೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಯುಪಿಎ II ಸರ್ಕಾರದ ಕೊನೆಯ ಆರು ತಿಂಗಳಲ್ಲಿ ಅಮೆರಿಕದೊಂದಿಗಿನ ಸಂಬಂಧಗಳು ತೀವ್ರ ಹಿನ್ನಡೆಯನ್ನು ಅನುಭವಿಸಿದವು. ಸಂಬಂಧಗಳನ್ನು ಮತ್ತೆ ಹಳಿಗೆ ತರಲು 2014 ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆ ನಡೆಯಿತು. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್‌

    ಅಧ್ಯಕ್ಷ ಟ್ರಂಪ್ ಜೊತೆ ವ್ಯವಹಾರ
    ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಟ್ರಂಪ್ ಆಡಳಿತದ ದ್ವಂದ್ವ ಮಾನದಂಡಗಳಿಗೆ ಭಾರತ ಕನ್ನಡಿ ಹಿಡಿದಿದೆ. ರಷ್ಯಾ ಜೊತೆಗಿನ ಭಾರತದ ತೈಲ ಖರೀದಿ ಒಪ್ಪಂದವನ್ನು ಖಂಡಿಸುತ್ತಿರುವ ಟ್ರಂಪ್, ಭಾರತದ ಮೇಲೆ ಒಟ್ಟಾರೆ 50% ಸುಂಕ ವಿಧಿಸಿದ್ದಾರೆ. ಆ ಮೂಲಕ ಬೆದರಿಸುವ ತಂತ್ರವನ್ನು ಅನುಸರಿಸಿದ್ದಾರೆ. ಆದರೆ, ಭಾರತ ಇದಕ್ಕೆ ಡೋಂಟ್ ಕೇರ್ ಎಂದಿದೆ. ಪ್ರಧಾನಿ ಮೋದಿ ಕೂಡ ಸುಂಕದ ಬಗ್ಗೆ ಮೌನ ಮುರಿದಿದ್ದಾರೆ. ಇತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಗೆ ಭೇಟಿ ನೀಡಿ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಶತಮಾನಗಳಿಂದ ಭಾರತದ ಜೊತೆ ಸ್ನೇಹಿತನಂತೆ ರಷ್ಯಾ ನಿಂತಿದೆ. ಆ ದೇಶದ ಜೊತೆಗಿನ ಸಂಬಂಧ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಟ್ಟಿದೆ.

    ಟ್ರಂಪ್ ಅವರ ಮಾತುಗಳು ಮತ್ತು ಕಾರ್ಯಗಳು, ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಅವರ ಮಾತುಗಳು ಸತ್ಯ ಎಂಬುದನ್ನು ಸಾಬೀತುಪಡಿಸುವಂತಿದೆ. ಅಮೆರಿಕದ ಶತ್ರುವಾಗುವುದು ಅಪಾಯಕಾರಿ, ಆದರೆ ಸ್ನೇಹಿತನಾಗಿರುವುದು ಮಾರಕವಾಗಬಹುದು ಎಂದು ಹೆನ್ರಿ ಹೇಳಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, ಟ್ರಂಪ್ ಅವರನ್ನು ನಿಭಾಯಿಸುವುದು 1998 ರ ನಂತರದ ಭಾರತೀಯ ರಾಜತಾಂತ್ರಿಕತೆಗೆ ಇರುವ ದೊಡ್ಡ ಸವಾಲಾಗಿದೆ.

  • ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗೆ ಮೋದಿ ಸ್ವಾಗತಿಸಿದ ಚೀನಾ; ಗಲ್ವಾನ್‌ ಘರ್ಷಣೆ ಬಳಿಕ ಮೊದಲ ಭೇಟಿ

    ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗೆ ಮೋದಿ ಸ್ವಾಗತಿಸಿದ ಚೀನಾ; ಗಲ್ವಾನ್‌ ಘರ್ಷಣೆ ಬಳಿಕ ಮೊದಲ ಭೇಟಿ

    – ಟ್ರಂಪ್ ಜೊತೆ ಹೇಗೆ ಡೀಲ್ ಮಾಡಬೇಕೆಂದು ಮೋದಿಗೆ ಹೇಳಿಕೊಡ್ತೀವಿ; ಇಸ್ರೇಲ್‌ ಪ್ರಧಾನಿ

    ಬೀಜಿಂಗ್‌: ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಗೆ ಚೀನಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ (Chinese Foreign Ministry) ತಿಳಿಸಿರುವುದಾಗಿ ವರದಿಯಾಗಿದೆ.

    ಇದೇ ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 1ರ ವರೆಗೆ ಟಿಯಾಂಜಿನ್‌ನಲ್ಲಿ ಶೃಂಗ ಸಭೆ ನಡೆಯಲಿದೆ. 2020ರಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಗಲ್ವಾನ್‌ ಘರ್ಷಣೆ ಬಳಿಕ ಚೀನಾಕ್ಕೆ ಮೋದಿ (Narendra Modi) ಅವರ ಮೊದಲ ಭೇಟಿ ಇದಾಗಲಿದೆ. ಟ್ರಂಪ್‌ ಸುಂಕ ಸಮರದ ನಡುವೆ ಬ್ರಿಕ್ಸ್‌ ಒಕ್ಕೂಟ ಭಾಗವಾಗಿರು ಚೀನಾ ಮೋದಿ ಅವರಿಗೆ ಆಹ್ವಾನ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಈ ಸಭೆಯು ಉಭಯ ರಾಷ್ಟ್ರಗಳ ಅಭಿವೃದ್ಧಿಯ ಮಾತುಕತೆಗಳ ಮೇಲೆ ಕೇಂದ್ರೀಕೃತವಾಗಿದೆ. ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಒಪ್ಪಂಗಳು ಆಗುವ ಸಾಧ್ಯತೆಯಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ.

    ಕಳೆದ ಜೂನ್‌ನಲ್ಲಿ ನಡೆದ ಶೃಂಗ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಭಾರತವನ್ನು ಪ್ರತಿನಿಧಿಸಿದ್ದರು. ಇದನ್ನೂ ಓದಿ: ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತಗೊಳಿಸಿಲ್ಲ: ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ

    ಅಮೆರಿಕದಲ್ಲಿ ಆಂತರಿಕೆ ಭಿನ್ನಮತ ಸ್ಫೋಟ
    ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ, ಅಮೆರಿಕದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಅಮೆರಿಕದ ಅನೇಕ ರಾಜಕಾರಣಿಗಳು, ಆರ್ಥಿಕ ತಜ್ಞರು ಕಿಡಿಕಾರಿದ್ದಾರೆ. ಅಮೆರಿಕ ಕಾಂಗ್ರೆಸ್‌ನ ಡೆಮಾಕ್ರೆಟಿಕ್ ಸದಸ್ಯ ಗ್ರೆಗೊರಿ ಮೀಕ್ಸ್ ಮಾತಾಡಿ, ಟ್ರಂಪ್ ಅನಗತ್ಯ ಸುಂಕಗಳು ಎರಡು ದೇಶಗಳ ನಡುವೆ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ನಡೆಸಿದ್ದ 2 ದಶಕಗಳ ಪ್ರಯತ್ನವನ್ನು ಅಪಾಯಕ್ಕೆ ಸಿಲುಕಿಸಿದೆ. ರಾಜತಾಂತ್ರಿಕ ಸಂಬಂಧ ಮೇಲೆ ಪರಿಣಾಮ ಬೀರಲಿದೆ ಅಂತ ಟೀಕಿಸಿದ್ದಾರೆ.

    ಹೇಗೆ ಡೀಲ್‌ ಮಾಡಬೇಕೆಂದು ಹೇಳಿಕೊಡ್ತೇವೆ: ನೆತನ್ಯಾಹು
    ಈ ಬೆನ್ನಲ್ಲೇ ಭಾರತದ ಪರ ಬ್ಯಾಟ್ ಮಾಡಿರುವ ಚೀನಾ, ಶೇ.50ರಷ್ಟು ಸುಂಕ ವಿಧಿಸಿರುವ ಟ್ರಂಪ್ ನಡೆಯನ್ನು ಖಂಡಿಸಿದೆ. ಟ್ರಂಪ್ ಜೊತೆ ಹೇಗೆ ಡೀಲ್ ಮಾಡಬೇಕು ಅಂತ ಮೋದಿಗೆ ಸಲಹೆ ಕೊಡ್ತೇವೆ ಅಂತ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ:  ಆದಾಯ ತೆರಿಗೆ ಮಸೂದೆ-2025 ಹಿಂಪಡೆದ ಕೇಂದ್ರ – ಆ.11ರಂದು ಹೊಸ ಆವೃತ್ತಿ ಪರಿಚಯ

    ಮೋದಿಗೆ ಪುಟಿನ್‌ ಫೋನ್‌ ಕಾಲ್‌
    ಇನ್ನೂ ಭಾರತ ಭೇಟಿಗೆ ಆಹ್ವಾನ ನೀಡಿದ ಬೆನ್ನಲ್ಲೇ ಮೋದಿ ಜೊತೆ ರಷ್ಯಾ ಅಧ್ಯಕ್ಷ ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಜೈಲಿಂದ ಬಂದ ಮರುದಿನವೇ ಮತ್ತೆ ಸಹೋದ್ಯೋಗಿ ಯುವತಿಗೆ ಕಿರುಕುಳ – ಕೇರಳ ಯುವಕ ಯುಕೆಯಿಂದ ಗಡೀಪಾರು ಸಾಧ್ಯತೆ

  • ಟ್ರಂಪ್‌ ಸುಂಕ ಸಮರಕ್ಕೆ ಭಾರತ ತಿರುಗೇಟು – ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತ

    ಟ್ರಂಪ್‌ ಸುಂಕ ಸಮರಕ್ಕೆ ಭಾರತ ತಿರುಗೇಟು – ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತ

    ನವದೆಹಲಿ: ಭಾರತದ ಆಮದುಗಳ ಮೇಲೆ 50% ಸುಂಕ (Tariff) ವಿಧಿಸಿದ ಬೆನ್ನಲ್ಲೇ ಭಾರತ ತಿರುಗೇಟು ನೀಡಿದೆ. ಅಮೆರಿಕದಿಂದ ಹೊಸ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳನ್ನು ಖರೀದಿಸುವ ಯೋಜನೆಯನ್ನ (US Weapon Deal Plan) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಕೆಲ ಶಸ್ತ್ರಾಸ್ತ್ರಗಳನ್ನು ಖರೀಸುವ ಒಪ್ಪಂದಗಳಿಗಾಗಿ ಮುಂದಿನ ವಾರಗಳಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರನ್ನು ವಾಷಿಂಗ್ಟನ್‌ಗೆ ಕಳುಹಿಸುವ ಯೋಜನೆ ಇತ್ತು. ಆದ್ರೆ ಟ್ರಂಪ್‌ (Donald Trump) ಸುಂಕ ಏರಿಕೆ ಬೆನ್ನಲ್ಲೇ ಪ್ರವಾಸವನ್ನ ಮೊಟಕುಗೊಳಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಆದ್ರೆ ಕೆಲ ಉನ್ನತ ಮೂಲಗಳು ರಕ್ಷಣಾ ಒಪ್ಪಂದಗಳನ್ನ ರದ್ದುಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಒಪ್ಪಂದಗಳು, ಶಸ್ತ್ರಾಸ್ತ್ರ ಸರಬರಾಜು ಮುಂದುವರಿಯುತ್ತದೆ ಎಂದು ತಿಳಿಸಿವೆ. ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    trade war India Halts Procurement of Six usa Boeing P 8I Aircraft

    ಜನರಲ್ ಡೈನಾಮಿಕ್ಸ್ ಲ್ಯಾಂಡ್ ಸಿಸ್ಟಮ್ಸ್ ತಯಾರಿಸಿದ ಸ್ಟ್ರೈಕರ್ ಯುದ್ಧ ಟ್ಯಾಂಕರ್‌ ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳ ಖರೀದಿಗೆ ಭಾರತ ಆಸಕ್ತಿ ತೋರಿತ್ತು. ಇದನ್ನೂ ಓದಿ: ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

    P-8I ವಿಮಾನ ಖರೀದಿಸಲ್ಲ
    ಇದಕ್ಕೂ ಮುನ್ನವೇ ಬೋಯಿಂಗ್‌ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿತ್ತು. 6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. 2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ

    ಆಮದು ಸುಂಕ 50% ಏರಿಕೆ
    ಇದೇ ತಿಂಗಳ ಆಗಸ್ಟ್‌ 6ರಂದು ರಷ್ಯಾದ ತೈಲ ಖರೀದಿಗೆ ಶಿಕ್ಷೆಯಾಗಿ ಭಾರತದ ಆಮದು ಸರಕುಗಳ ಮೇಲೆ 25% ಸುಂಕ ವಿಧಿಸಿ ಟ್ರಂಪ್‌ ಆದೇಶ ಹೊರಡಿಸಿದ್ದರು. ಆದ್ರೆ ಭಾರತ ರಷ್ಯಾದ ತೈಲ ಖರೀದಿಯಿಂದ ಹಿಂದೆ ಸರಿಯದ ಹಿನ್ನೆಲೆ ಸುಂಕದ ಪ್ರಮಾಣವನ್ನು 50%ಗೆ ಏರಿಕೆ ಮಾಡಿದ್ದಾರೆ. ಇದು ಶೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.  ಇದನ್ನೂ ಓದಿ: ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್

  • ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ನವದೆಹಲಿ: ಸುಂಕ ಸಮರ ಆರಂಭಿಸಿದ ಅಮೆರಿಕಕ್ಕೆ (USA) ಭಾರತ (India) ಮತ್ತೆ ತಿರುಗೇಟು ನೀಡಿದ್ದು, ಬೋಯಿಂಗ್‌ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

    6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

    2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ.  ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

    ಮೇ 2021 ರಲ್ಲಿ ಆರು ಹೆಚ್ಚುವರಿ ವಿಮಾನಗಳ ಮಾರಾಟಕ್ಕೆ ಅಮೆರಿಕ ಸರ್ಕಾರ ಅನುಮೋದನೆ ನೀಡಿತ್ತು. ಆರಂಭದಲ್ಲಿ ಈ ವಿಮಾನ ಖರೀದಿಗೆ 2.42 ಬಿಲಿಯನ್ ಡಾಲರ್‌ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಮತ್ತು ಇತರ ಜಾಗತಿಕ ಸಮಸ್ಯೆಯಿಂದ ಖರೀದಿ ವೆಚ್ಚ 3.6 ಬಿಲಿಯನ್‌ ಡಾಲರ್‌ಗೆ ಈಗ ಏರಿಕೆಯಾಗಿದೆ. ಇದನ್ನೂ ಓದಿ: ಟ್ರಂಪ್ಸುಂಕ ಶಾಕ್ಬೆನ್ನಲ್ಲೇವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ್ದಕ್ಕೆ ಡೊನಾಲ್ಡ್‌ ಟ್ರಂಪ್‌ (Donald Trump) ಭಾರತದ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ್ದರು. ಈಗ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದ್ದಾರೆ. ಹೀಗಾಗಿ ಈಗ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕೆಲ ವಸ್ತುಗಳ ಮೇಲೆ 50% ಸುಂಕ ವಿಧಿಸಲಾಗಿದೆ.

  • ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

    ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

    ನವದೆಹಲಿ: ಭಾರತೀಯ ಆಮದುಗಳ ಮೇಲೆ ಟ್ರಂಪ್‌ ಹೆಚ್ಚುವರಿ 25% ಸುಂಕ (Tariff) ವಿಧಿಸಿದ ಪರಿಣಾಮ ಚಿನ್ನದ ಬೆಲೆ (Gold Price) ಏರಿಕೆ ಕಂಡಿದೆ.

    ಭಾರತದ ಮೇಲೆ ಟ್ರಂಪ್‌ ಸುಂಕ ಘೋಷಿಸಿದ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳನ್ನು ಮುಖ ಮಾಡಿದ್ದಾರೆ. ಹೀಗಾಗಿ, ಚಿನ್ನದ ಬೆಲೆ 3,600 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,02,620 ರೂ.ಗೆ ತಲುಪಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.‌ ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9% ಶುದ್ಧತೆಯ ಚಿನ್ನವು ಬುಧವಾರ 10 ಗ್ರಾಂಗೆ 99,020 ರೂ.ಗೆ ತಲುಪಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಶೇ.99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ 3,600 ರುಪಾಯಿ ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳು ಸೇರಿದಂತೆ) 1,02,200 ರು. ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ.

    ಆ.1 ರಿಂದಲೇ ಜಾರಿಗೆ ಬರುವಂತೆ ಭಾರತದ ಆಮದುಗಳ ಮೇಲೆ ಅಮೆರಿಕವು ಶೇ.25 ರಷ್ಟು ಸುಂಕ ವಿಧಿಸಿತ್ತು. ರಷ್ಯಾ ಜೊತೆಗಿನ ಒಪ್ಪಂದ ಕೊನೆಗಾಣಿಸದಿದ್ದಕ್ಕೆ ಹೆಚ್ಚುವರಿಯಾಗಿ ಶೇ.25 ಸುಂಕವನ್ನು ಭಾರತದ ಮೇಲೆ ವಿಧಿಸಿದೆ. ಆ ಮೂಲಕ 50% ಸುಂಕವನ್ನು ಅಮೆರಿಕ ಹಾಕಿದೆ. ಇದು ಎರಡು ಆರ್ಥಿಕತೆಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

    ಗುರುವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,500 ರೂ. ಏರಿಕೆಯಾಗಿ 1,14,000 ರೂ.ಗೆ ತಲುಪಿದೆ (ಎಲ್ಲಾ ತೆರಿಗೆಗಳು ಸೇರಿದಂತೆ). ಬುಧವಾರ ಬಿಳಿ ಲೋಹ ಬೆಲೆ ಪ್ರತಿ ಕೆಜಿಗೆ 1,12,500 ರೂ. ಇತ್ತು.

  • ಟ್ರಂಪ್ ಸುಂಕ ಮೋದಿ ವಿದೇಶಾಂಗ ನೀತಿಯ ದುರಂತ: ಮಲ್ಲಿಕಾರ್ಜುನ ಖರ್ಗೆ ಆರೋಪ

    ಟ್ರಂಪ್ ಸುಂಕ ಮೋದಿ ವಿದೇಶಾಂಗ ನೀತಿಯ ದುರಂತ: ಮಲ್ಲಿಕಾರ್ಜುನ ಖರ್ಗೆ ಆರೋಪ

    ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ಸುಂಕವು ಮೋದಿ ವಿದೇಶಾಂಗ ನೀತಿಯ ದುರಂತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪ ಮಾಡಿದ್ದಾರೆ.

    ಭಾರತದ ರಾಜತಾಂತ್ರಿಕತೆ ವಿನಾಶಕಾರಿಯಾಗಿ ಹದಗೆಡುತ್ತಿರುವ ಸಮಯದಲ್ಲಿ ಟ್ರಂಪ್ ಶೇ.50 ರಷ್ಟು ಸುಂಕ ವಿಧಿಸಿದ್ದಾರೆಂದು ಖರ್ಗೆ ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಈ ದುರಂತವನ್ನು ನೀವು 70 ವರ್ಷದ ಕಾಂಗ್ರೆಸ್ ಮೇಲೆ ಹಾಕಲು ಸಾಧ್ಯವಿಲ್ಲ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾತುಕತೆ ನಡೆಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಟೀಕಿಸಿದ್ದಾರೆ.

    ಈಗ ಟ್ರಂಪ್ ನಮ್ಮನ್ನು ಬೆದರಿಸುತ್ತಿದ್ದಾರೆ. ಆದರೆ, ನೀವು ಸುಮ್ಮನಿದ್ದೀರಿ. ಭಾರತದಿಂದ ಅಮೆರಿಕಕ್ಕೆ ರಫ್ತು ಸುಮಾರು 7.51 ಲಕ್ಷ ಕೋಟಿ ರೂ. (2024). ಶೇ.50 ರಷ್ಟು ಸುಂಕ ವಿಧಿಸುವುದರಿಂದ 3.75 ಲಕ್ಷ ಕೋಟಿ ರೂ. ಆರ್ಥಿಕ ಹೊರೆ ಬೀಳುತ್ತದೆ. ಎಂಎಸ್‌ಎಂಇಗಳು, ಕೃಷಿ, ಡೈರಿ ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ ಸರಕುಗಳು, ರತ್ನಗಳು ಮತ್ತು ಆಭರಣಗಳು, ಔಷಧ ಸೂತ್ರೀಕರಣಗಳು ಮತ್ತು ಜೈವಿಕ ವಸ್ತುಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಹತ್ತಿ ತಯಾರಿಸಿದ ಬಟ್ಟೆಗಳಂತಹ ನಮ್ಮ ವಲಯಗಳಿಗೆ ಹೊಡೆತ ಬೀಳುತ್ತದೆ. ಅದನ್ನು ಹೇಗೆ ಎದುರಿಸಬೇಕೆಂದು ನಿಮ್ಮ ಸರ್ಕಾರಕ್ಕೆ ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಟ್ರಂಪ್ ತಿಂಗಳುಗಳಿಂದ ಯೋಜಿಸುತ್ತಿದ್ದ ಪ್ರತಿಸುಂಕದ ಪರಿಣಾಮಗಳಿಂದ ಪಾರಾಗಲು ಕೃಷಿ ಮತ್ತು ಎಂಎಸ್‌ಎಂಇಗಳು ಸೇರಿದಂತೆ ಪ್ರಮುಖ ವಲಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ಏನನ್ನೂ ಘೋಷಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

  • ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶೀಘ್ರದಲ್ಲೇ ಭಾರತಕ್ಕೆ (India) ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಗುರುವಾರ ತಿಳಿಸಿದ್ದಾರೆ.

    ಮಾಸ್ಕೋದಲ್ಲಿರುವ ದೋವಲ್, ಪುಟಿನ್‌ ಭೇಟಿ ದಿನವನ್ನು ನಿರ್ದಿಷ್ಟಪಡಿಸಿಲ್ಲ. ಆದರೆ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅವರು ಭೇಟಿ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

    ನಮ್ಮದು ವಿಶೇಷವಾದ, ದೀರ್ಘವಾದ ಸಂಬಂಧ. ನಾವು ಈ ಸಂಬಂಧವನ್ನು ಗೌರವಿಸುತ್ತೇವೆ. ನಾವು ಉನ್ನತ ಮಟ್ಟದ ಸಂಬಂಧಗಳನ್ನು ಹೊಂದಿದ್ದೇವೆ. ಈ ಉನ್ನತ ಮಟ್ಟದ ಸಂಬಂಧಗಳು ಗಣನೀಯವಾಗಿ ಕೊಡುಗೆ ನೀಡಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿದು ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದು ದೋವಲ್‌ ಹೇಳಿದ್ದಾರೆ.

    ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತು ಭಾರತ ಮತ್ತು ಅಮೆರಿಕ ನಡುವೆ ತಿಕ್ಕಾಟ ಹೆಚ್ಚುತ್ತಿರುವ ಹೊತ್ತಲ್ಲೇ ಈ ಪ್ರವಾಸದ ಘೋಷಣೆ ಕೇಳಿಬಂದಿದೆ. ರಷ್ಯಾದಿಂದ ಇಂಧನ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಮಾಸ್ಕೋ ಯುದ್ಧಕ್ಕೆ ಭಾರತ ಸಹಾಯ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಇದು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳನ್ನು ಹಳಿತಪ್ಪಿಸಿದೆ. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್‌

    ಟ್ರಂಪ್ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದು, ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಭಾರತದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ 50% ಸುಂಕ ವಿಧಿಸುವುದಾಗಿ ತಿಳಿಸಿದ್ದಾರೆ.

    ಭಾರತ ಮತ್ತು ರಷ್ಯಾ ದೀರ್ಘಕಾಲದ ಸಂಬಂಧ ಹೊಂದಿವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಸೋವಿಯತ್ ಯುಗದಿಂದಲೂ ಇವೆ. ಎರಡೂ ರಾಷ್ಟ್ರಗಳು ತಮ್ಮ ಆರ್ಥಿಕ ಸಹಕಾರವನ್ನು ಬಲಪಡಿಸಿಕೊಂಡಿವೆ. ಇದನ್ನೂ ಓದಿ: ಟ್ರಂಪ್‌ ಬೆದರಿಕೆಗೆ ಡೋಂಟ್‌ ಕೇರ್‌ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ

  • ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

    ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

    ನವದೆಹಲಿ: ರೈತರು (Faramers) ಮತ್ತು ಮೀನುಗಾರರಿಗೆ (Fishermen) ಸಮಸ್ಯೆಯಾಗುವ ಯಾವುದೇ ಹಿತಾಸಕ್ತಿಯ ಜೊತೆ ಭಾರತ (India) ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi)  ಸ್ಪಷ್ಟವಾಗಿ ಹೇಳಿದ್ದಾರೆ.

    ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸುಂಕ ಸಮರವನ್ನು ಆರಂಭಿಸಿದ ಮರುದಿನವೇ ನರೇಂದ್ರ ಮೋದಿ ಈ ಹೇಳಿಕೆ ನೀಡುವ ಮೂಲಕ ಅಮೆರಿಕಕ್ಕೆ (USA) ಬಲವಾದ ಸಂದೇಶ ಕಳುಹಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ದುಬಾರಿ ಬೆಲೆ ತೆರಬೇಕಾಗುತ್ತದೆ ಎನ್ನುವುದು ತಿಳಿದಿದ್ದರೂ ರೈತರಿಗಾಗಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳದಲ್ಲಿ ಮಾತನಾಡಿದ ಅವರು, ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಭಾರತ ತನ್ನ ರೈತರು, ಜಾನುವಾರು ಮಾಲೀಕರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸರ್ಕಾರದ ನಿರ್ಧಾರದಿಂದ ಭಾರೀ ಬೆಲೆ ತೆರಬೇಕಾಗುತ್ತದೆ ಎನ್ನುವುದು ನನಗೆ ತಿಳಿದಿದೆ. ಇದಕ್ಕೆ ನಾನು ಸಿದ್ಧನಿದ್ದೇನೆ. ದೇಶದ ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರ ಹಿತದೃಷ್ಟಿಯಿಂದ ಭಾರತ ಎಲ್ಲದ್ದಕ್ಕೂ ಸಿದ್ಧವಾಗಿದೆ ಎಂದು ತಿಳಿಸಿದರು.

    ಜುಲೈ 20 ರಂದು ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ಸುಂಕವನ್ನು ವಿಧಿಸಿತ್ತು. ಈಗ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಮತ್ತೆ 25% ಸುಂಕವನ್ನು ಡೊನಾಲ್ಡ್‌ ಟ್ರಂಪ್‌ ಹಾಕಿದ್ದಾರೆ.

    ಭಾರತ ಸಹಿ ಹಾಕದ್ದು ಯಾಕೆ?
    ಟ್ರಂಪ್‌ ಸುಂಕ ಸಮರ ಆರಂಭಿಸಿದ ಕೂಡಲೇ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ ಮೇಲೆ ತೆರಿಗೆ ಸಮರ ಆರಂಭಿಸಿದ್ದರು. ನಂತರ ಉಳಿದ ದೇಶಗಳು ವ್ಯಾಪಾರ ಸಂಬಂಧ ಮಾತುಕತೆ ನಡೆಸಲು ಆಸಕ್ತಿ ತೋರಿದ ಬೆನ್ನಲ್ಲೇ ಅಮೆರಿಕ ಸುಂಕ ಸಮರವನ್ನು ತಡೆ ಹಿಡಿದಿತ್ತು. ಈ ಸಂದರ್ಭದಲ್ಲಿ ಭಾರತ ಅಮೆರಿಕದ ಜೊತೆ ವ್ಯಾಪಾರ ಮಾತುಕತೆ ನಡೆಸತೊಡಗಿತು.

    ಬಹುತೇಕ ವಿಚಾರಗಳ ಮಧ್ಯೆ ಭಾರತ ಮತ್ತು ಅಮೆರಿಕ ಒಪ್ಪಿಗೆ ನೀಡಿದರೂ ಮಹತ್ವದ ಕೆಲ ವಿಚಾರಗಳ ಭಾರತಕ್ಕೆ ಒಪ್ಪಿಗೆ ನೀಡಿಲ್ಲ. ಮುಖ್ಯವಾಗಿ ಕೃಷಿ, ಹೈನು ಉತ್ಪನ್ನಗಳ ವಲಯ. ಮೀನುಗಾರಿಕೆ ಸಂಬಂಧಿಸಿದಂತೆ ಅಮೆರಿಕದ ಉತ್ಪನ್ನಗಳಿಗೆ ಮುಕ್ತವಾಗಿಸಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿಲ್ಲ. ಅಮೆರಿಕ ಉಕ್ಕು, ಅಲ್ಯೂಮಿನಿಯಂ ಮತ್ತು ಆಟೊಮೊಬೈಲ್‌ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಬಾರದು ಎಂದು ಭಾರತ ಇರಿಸಿರುವ ಬೇಡಿಕೆಯನ್ನು ಒಪ್ಪಿಲ್ಲ.

    ಅಮೆರಿಕದ ಡೈರಿ ಉತ್ಪನ್ನಗಳಿಗೆ ಭಾರತ ಅನುಮತಿ ನೀಡಿಲ್ಲ ಯಾಕೆ ಎನ್ನುವುದಕ್ಕೆ ಕಾರಣ ಇದೆ. ಭಾರತದಲ್ಲಿ ದನಗಳಿಗೆ ಹುಲ್ಲು, ಒಣಗಿದ ಮೇವು, ಧಾನ್ಯಗಳು, ಮತ್ತು ಪಶು ಆಹಾರವನ್ನು ನೀಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಹಾಗಲ್ಲ. ಅಮೆರಿಕದಲ್ಲಿ ಜಾನುವಾರುಗಳಿಗೆ ಆಹಾರವಾಗಿ ನಾನ್‌ ವೆಜ್‌ ಆಹಾರಗಳನ್ನು ನೀಡಲಾಗುತ್ತದೆ. ಮಾಂಸ ಮತ್ತು ಮೂಳೆ ಊಟ, ಒಣಗಿದ ರಕ್ತ ಮತ್ತು ಕೋಳಿ ತ್ಯಾಜ್ಯ ಸೇರಿದಂತೆ ಪ್ರಾಣಿ ಉತ್ಪನ್ನಗಳನ್ನು ಜಾನುವಾರು ಆಹಾರದಲ್ಲಿ ಬಳಸಲು ಅವಕಾಶ ನೀಡುತ್ತವೆ. ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮೇವಿನ ವೆಚ್ಚವನ್ನು ಕಡಿಮೆ ಮಾಡಲು ಅಮೆರಿಕದ ರೈತರು ಈ ಆಹಾರವನ್ನು ನೀಡುತ್ತಾರೆ. ಈ ರೀತಿಯ ಆಹಾರ ನೀಡಲು ಅಮೆರಿಕದ ಕಾನೂನಿನಲ್ಲಿ ಅನುಮತಿ ಇದೆ.

    ಭಾರತದಲ್ಲಿ ಹಸುಗಳನ್ನು ಪವಿತ್ರ ಮತ್ತು ಪೂಜ್ಯ ಭಾವದಿಂದ ನೋಡಲಾಗುತ್ತದೆ. ಹಸುಗಳು ತಿಂದ ಪ್ರಾಣಿ ಉತ್ಪನ್ನಗಳಿಂದ ಬರುವ ಹಾಲು ಸೇವಿಸುವುದನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸುಮಾರು 8 ಕೋಟಿಗೂ ಅಧಿಕ ಮಂದಿ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿದ್ದಾರೆ. ಭಾರತದ ಜಿಡಿಪಿಗೆ ಹೈನುಗಾರಿಕೆ 5% ಕೊಡುಗೆ ನೀಡುತ್ತದೆ.

    ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣ ಭಾರತದ ಮಾರುಕಟ್ಟೆ ಪ್ರವೇಶಿಲು ಅಮೆರಿಕ ಮೊದಲಿನಿಂದಲೂ ಭಾರೀ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಭಾರತ ಅನುಮತಿ ನೀಡಿದರೆ ರೈತರು ಬೀದಿಗೆ ಇಳಿಯುವ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರವೇ ಪತನ ಹೊಂದುವ ಸಾಧ್ಯತೆಯಿದೆ. ಈ ಕಾರಣಕ್ಕೆ ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಭಾರತದ ಮಾರುಕಟ್ಟೆಗೆ ಅಮೆರಿಕದ ಡೈರಿ ಉತ್ಪನ್ನ ಪ್ರವೇಶಕ್ಕೆ ಅನುಮತಿ ನೀಡಿಲ್ಲ.

  • ಟ್ರಂಪ್‌ ಬೆದರಿಕೆಗೆ ಜಗ್ಗದ ಭಾರತ – ರಷ್ಯಾದ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

    ಟ್ರಂಪ್‌ ಬೆದರಿಕೆಗೆ ಜಗ್ಗದ ಭಾರತ – ರಷ್ಯಾದ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

    ನವದೆಹಲಿ: ಅಮೆರಿಕದ (USA) ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಬೆದರಿಕೆಗೆ ಜಗ್ಗದ ಭಾರತ (India) ರಷ್ಯಾದ (Russia) ಜೊತೆ ಮಹತ್ವದ ಅಲ್ಯೂಮಿನಿಯಂ, ರಸಗೊಬ್ಬರಗಳು, ರೈಲ್ವೆಗಳು ಮತ್ತು ಗಣಿಗಾರಿಕೆ ತಂತ್ರಜ್ಞಾನದಲ್ಲಿ ಸಹಕಾರವನ್ನು ಬಲಪಡಿಸುವ ಶಿಷ್ಟಾಚಾರಕ್ಕೆ ಸಹಿ ಹಾಕಿದೆ.

    ಆಧುನೀಕರಣ ಮತ್ತು ಕೈಗಾರಿಕಾ ಸಹಕಾರದ ಕುರಿತಾದ ಭಾರತ-ರಷ್ಯಾ ಕಾರ್ಯಕಾರಿ ಗುಂಪಿನ 11 ನೇ ಸಭೆ ಬುಧವಾರ ದೆಹಲಿಯ ವಾಣಿಜ್ಯ ಭವನದಲ್ಲಿ ನಡೆಯಿತು.

    ಈ ಸಭೆಯಲ್ಲಿ ಭಾರತ-ರಷ್ಯಾ ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರದ ಬಗ್ಗೆ 10ನೇ ಸಭೆಯಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿತು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

     

    ಭಾರತದ ಪರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (DPIIT) ಕಾರ್ಯದರ್ಶಿ  ಅಮರದೀಪ್ ಸಿಂಗ್ ಭಾಟಿಯಾ ಮತ್ತು ರಷ್ಯಾದ ಪರವಾಗಿ ರಷ್ಯಾ ಒಕ್ಕೂಟದ ಕೈಗಾರಿಕೆ ಮತ್ತು ವ್ಯಾಪಾರದ ಉಪ ಸಚಿವ ಅಲೆಕ್ಸಿ ಗ್ರುಜ್‌ದೇವ್ ಭಾಗಿಯಾಗಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ

    ಸಣ್ಣ ವಿಮಾನ ಪಿಸ್ಟನ್ ಎಂಜಿನ್‌ಗಳ ಉತ್ಪಾದನೆ ಮತ್ತು ಕಾರ್ಬನ್ ಫೈಬರ್ ತಂತ್ರಜ್ಞಾನ, ಸಂಯೋಜಕ ಉತ್ಪಾದನೆ ಮತ್ತು ಜಂಟಿ 3D ಮುದ್ರಣ ಅಭಿವೃದ್ಧಿ, ಅಪರೂಪದ ಭೂಮಿ ಖನಿಜಗಳ (Rare Earth Minerals) ಹೊರತೆಗೆಯುವಿಕೆ, ಭೂಗತ ಕಲ್ಲಿದ್ದಲು ಅನಿಲೀಕರಣ ಮತ್ತು ಆಧುನಿಕ ಕೈಗಾರಿಕಾ ಮೂಲಸೌಕರ್ಯಗಳ ಸೃಷ್ಟಿಯಲ್ಲಿನ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು.

  • ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

    ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

    ವಾಷಿಂಗ್ಟನ್: ಭಾರತ (India) ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿ ಮುಂದುವರಿಸಿದ್ದಕ್ಕೆ ಪ್ರತಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತಕ್ಕೆ 50% ಸುಂಕ (Tariff) ವಿಧಿಸಿ ಶಾಕ್ ಕೊಟ್ಟಿದ್ದಾರೆ.

    ಭಾರತಕ್ಕೆ ಹೆಚ್ಚುವರಿಯಾಗಿ 25% ಸುಂಕ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಸಹಿ ಹಾಕಿದ್ದಾರೆ. ಆದೇಶದ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳು ಹೆಚ್ಚುವರಿಯಾಗಿ 25% ಆಮದು ಸುಂಕವನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಪ್ರಸಾದ್‌ ಯೋಜನೆಯಡಿ ಕೊಲ್ಲೂರು ದೇವಸ್ಥಾನ ಸೇರಿಸಿ: ನಿರ್ಮಲಾ ಸೀತಾರಾಮನ್‌ಗೆ ಬಿ.ವೈ.ರಾಘವೇಂದ್ರ ಮನವಿ

    ಭಾರತವು ನಮ್ಮ ಉತ್ತಮ ವ್ಯಾಪಾರ ಪಾಲುದಾರನಲ್ಲ. ಏಕೆಂದರೆ ಭಾರತ ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದ್ರೆ ನಾವು ಅವರೊಂದಿಗೆ ವ್ಯಾಪಾರ ಮಾಡಲ್ಲ. ಆದ್ದರಿಂದ ನಾವು 25 ಪ್ರತಿಶತದಷ್ಟು ಇತ್ಯರ್ಥಪಡಿಸಿಕೊಂಡಿದ್ದೇವೆ. ಆದ್ರೆ ನಾವು ಹೇಳಿದ ಮೇಲೂ ರಷ್ಯಾದಿಂದ ನಿರಂತರವಾಗಿ ತೈಲ ಖರೀದಿ ಮಾಡಲಾಗುತ್ತಿದೆ. ಈ ಮೂಲಕ ಭಾರತ ರಷ್ಯಾದ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ಆಮದುಗಳ ಮೇಲೆ ಸುಂಕವನ್ನು ಗಣನೀಯವಾಗಿ ಏರಿಕೆ ಮಾಡುವುದಾಗಿ ಟ್ರಂಪ್ ಬೆದರಿಕೆಯೊಡ್ಡಿದ್ದರು. ಅದರಂತೆ ಭಾರತದ ಮೇಲೆ 50% ಸುಂಕ ವಿಧಿಸಿ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಕೊಪ್ಪಳ ಮೂಲದ ಓರ್ವ ವಶಕ್ಕೆ

    ಒಂದು ದಿನದ ಹಿಂದಷ್ಟೇ ಸುಂಕ ಗಣನೀಯ ಏರಿಕೆ ಕುರಿತು ಟ್ರಂಪ್ ಮಾತನಾಡಿದ್ದರು. ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾದ ಯುದ್ಧ ಟ್ಯಾಂಕರ್‌ಗಳಿAದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ದರ್ಶನ್‌ಗೆ ಅಪರಾಧ ಹಿನ್ನೆಲೆ ಇದೆ, ಸಾಕ್ಷ್ಯಗಳು ಸಿಕ್ಕಿವೆ – ಜಾಮೀನು ರದ್ದು ಮಾಡಿ: ಬೆಂಗಳೂರು ಪೊಲೀಸರ ವಾದ ಏನು?

    ಈ ಮೊದಲು ಆಗಸ್ಟ್ 1 ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ 25% ನಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧಾರ: ದಿನೇಶ್ ಗುಂಡೂರಾವ್