H-1B ವೀಸಾ ಮೇಲೆ 88 ಲಕ್ಷ ರೂ. ಶುಲ್ಕ ವಿಧಿಸಿದ್ದ ಅಮೆರಿಕದ ಟ್ರಂಪ್ ಸರ್ಕಾರ ಇದೀಗ ಈ ಶುಲ್ಕ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿ ಮಾರ್ಗಸೂಚಿ ಹೊರಡಿಸಿದೆ. ವೀಸಾ ಸ್ಥಿತಿಗತಿ ಬದಲಿಸುವವರು ಹಾಗೂ ವೀಸಾ ವಿಸ್ತರಣೆ ಬಯಸುವವರಿಗೆ ಈ ಶುಲ್ಕ ಅನ್ವಯಿಸಲ್ಲ. 2025ರ ಸೆ.21ರ ನಂತರ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಅನ್ವಯವಾಗಲಿದೆ ಎಂದಿದೆ. ಇದರಿಂದ H-1B ವೀಸಾದ ಅತಿದೊಡ್ಡ ಫಲಾನುಭವಿಗಳಾದ ಭಾರತೀಯರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಹಾಗಿದ್ರೆ ಶುಲ್ಕ ವಿನಾಯಿತಿಯಿಂದ ಭಾರತೀಯರಿಗೆ ಏನು ಲಾಭ ಎಂಬ ಕುರಿತು ಈ ಕೆಳಗೆ ವಿವರಿಸಲಾಗಿದೆ.
H-1B ವೀಸಾ ಎಂದರೇನು?
H-1B ವೀಸಾ ಅಮೆರಿಕದ ತಾತ್ಕಾಲಿಕ ವೀಸಾ ಆಗಿದ್ದು, ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು 1990ರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಹೊಂದಿರುವ ಜನರಿಗಾಗಿ ರಚಿಸಲಾಯಿತು. ಆರಂಭದಲ್ಲಿ ವೀಸಾವನ್ನು ಮೂರು ವರ್ಷಗಳವರೆಗೆ ನೀಡಲಾಗುತ್ತದೆ. ಆದರೆ ಗರಿಷ್ಠ ಆರು ವರ್ಷಗಳವರೆಗೆ ವಿಸ್ತರಿಸಬಹುದು. ಗ್ರೀನ್ ಕಾರ್ಡ್ (ಶಾಶ್ವತ ನಿವಾಸ) ಪಡೆದವರಿಗೆ, ವೀಸಾವನ್ನು ಅನಿರ್ದಿಷ್ಟವಾಗಿ ನವೀಕರಿಸಬಹುದು. H-1B ವೀಸಾ ಹೊಂದಿರುವವರಲ್ಲಿ ಭಾರತೀಯರು ನಿರಂತರವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ 19, 2025ರಂದು ಡೊನಾಲ್ಡ್ ಟ್ರಂಪ್ ಸರ್ಕಾರ H-1B ವೀಸಾಗಳಿಗೆ ದುಬಾರಿ 1 ಲಕ್ಷ ಡಾಲರ್ ಶುಲ್ಕವನ್ನು (ಅಂದಾಜು 88 ಲಕ್ಷ ರೂ.) ಘೋಷಿಸಿತ್ತು. ಇದು ಉದ್ಯೋಗದಾತರು ಅಂದರೆ ಕಂಪನಿಗಳು ಮತ್ತು ವೀಸಾ ಹೊಂದಿರುವವರಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಈಗ ನೀಡಿರುವ ಸ್ಪಷ್ಟನೆಯಿಂದಾಗಿ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
H-1B ವೀಸಾ ಅರ್ಜಿಗಳ ಮೇಲೆ 1 ಲಕ್ಷ ಡಾಲರ್‌ಗಳಷ್ಟು ಭಾರಿ ಶುಲ್ಕ ವಿಧಿಸಿರುವ ಅಮೆರಿಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಯುಎಸ್ ಚೇಂಬರ್ ಆಫ್ ಕಾಮರ್ಸ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ಟ್ರಂಪ್ ಸರ್ಕಾರದ ಈ ನಡೆಯು ದೇಶದ ವಲಸೆ ಕಾನೂನಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿತ್ತು. ಈ ಬೆನ್ನಲ್ಲೇ ಟ್ರಂಪ್ ಸರ್ಕಾರ ಶುಲ್ಕ ನೀತಿಯಲ್ಲಿ ಬದಲಾವಣೆ ಮಾಡಿ ಹೊಸ ಮಾರ್ಗಸೂಚಿ ಹೊರಡಿಸಿದೆ.
ಹೊಸ ನಿಯಮ ಏನು ಹೇಳುತ್ತದೆ?
ಹೊಸ ಮಾರ್ಗಸೂಚಿಯ ಪ್ರಕಾರ, F -1 ವಿದ್ಯಾರ್ಥಿ ವೀಸಾದಿಂದ H-1B ವೀಸಾಕ್ಕೆ ಬದಲಾಗುವವರು ಅಥವಾ ಅಮೆರಿಕದೊಳಗೆ ತಮ್ಮ ವಾಸ್ತವ್ಯವನ್ನು ವಿಸ್ತರಿಸಲು ಕೋರುವವರು ಈ 1 ಲಕ್ಷ ಡಾಲರ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದರೆ, ಅಮೆರಿಕದ ಹೊರಗಿನಿಂದ ಹೊಸದಾಗಿ H-1B ವೀಸಾಗೆ ಅರ್ಜಿ ಸಲ್ಲಿಸುವ ಕೆಲಸಗಾರರಿಗೆ ಅಥವಾ ಅಮೆರಿಕದಲ್ಲಿದ್ದು, ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ದೇಶವನ್ನು ತೊರೆಯಬೇಕಾದವರಿಗೆ ಈ ಶುಲ್ಕ ಅನ್ವಯಿಸುತ್ತದೆ ಎಂದು ಯುಎಸ್‌ಸಿಐಎಸ್ ಸ್ಪಷ್ಟಪಡಿಸಿದೆ.
ಈಗಾಗಲೇ H-1B ವೀಸಾ ಹೊಂದಿರುವವರು ಅಮೆರಿಕವನ್ನು ಪ್ರವೇಶಿಸಲು ಅಥವಾ ಇಲ್ಲಿಂದ ನಿರ್ಗಮಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸಂಸ್ಥೆ ಖಚಿತಪಡಿಸಿದೆ. ಸೆಪ್ಟೆಂಬರ್ 21, 2025ರ ನಂತರ ಅಮೆರಿಕದ ಹೊರಗಿನಿಂದ, ಮಾನ್ಯ H-1B ವೀಸಾ ಇಲ್ಲದವರ ಪರವಾಗಿ ಸಲ್ಲಿಸಲಾದ ಹೊಸ ಅರ್ಜಿಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಶುಲ್ಕ ಪಾವತಿಗಾಗಿ ಆನ್‌ಲೈನ್ ಪೋರ್ಟಲ್ ಅನ್ನೂ ಸ್ಥಾಪಿಸಲಾಗಿದೆ.
ಯಾರಿಗೆಲ್ಲ 88 ಲಕ್ಷ ಶುಲ್ಕ ಅನ್ವಯಿಸಲ್ಲ?
– ಈಗಾಗಲೇ H-1B ವೀಸಾ ಪಡೆದು ಅಮೆರಿಕದಲ್ಲಿರುವವರು
– 2025ರ, ಸೆಪ್ಟೆಂಬರ್ 21ಕ್ಕಿಂತ ಮೊದಲು ವೀಸಾ ಪಡೆದಿರುವವರು
– ಅಮೆರಿಕದಲ್ಲಿದ್ದುಕೊಂಡು ವಿದ್ಯಾರ್ಥಿ ವೀಸಾದಿಂದ ಉದ್ಯೋಗಿ ವೀಸಾಗೆ ಬದಲಾವಣೆ ಮಾಡಿಕೊಳ್ಳುವವರು
– ಈಗಾಗಲೇ ಪಡೆದಿರುವ H-1B ವೀಸಾ ಅವಧಿ ವಿಸ್ತರಣೆ ಮಾಡಲು ಬಯಸುವವರು
– ಅಮೆರಿಕದಿಂದ ಹೊರ ಹೋಗಿದ್ದರೂ ಅದೇ H-1B ವೀಸಾದಡಿ ವಾಪಸ್ ಬರುವವರು
ಭಾರತೀಯರಿಗೆ ಹೇಗೆ ಅನುಕೂಲ?
H-1B ವೀಸಾದ ಅತಿದೊಡ್ಡ ಫಲಾನುಭವಿಗಳು ಭಾರತೀಯರೇ ಆಗಿದ್ದಾರೆ. ಅಮೆರಿಕದಿಂದ ವಿತರಿಸಲಾಗುವ ಶೇ.71ರಷ್ಟು H-1B ವೀಸಾ ಭಾರತೀಯರ ಪಾಲಾಗುತ್ತದೆ. ಎಂಜಿನಿಯರ್‌ಗಳು, ತಂತ್ರಜ್ಞರು ಅಥವಾ ಇತರೆ ವಿಶೇಷ ನೈಪುಣ್ಯ ಹೊಂದಿರುವ ವ್ಯಕ್ತಿಗಳಿಗೆ ಈ ವೀಸಾ ನೀಡಲಾಗುತ್ತದೆ.
ಕಳೆದ ತಿಂಗಳು ಟ್ರಂಪ್ ಸರ್ಕಾರ ಹೊರಡಿಸಿದ್ದ H-1B ವೀಸಾ ಮೇಲೆ 88 ಲಕ್ಷ ದಷ್ಟು ಶುಲ್ಕ ವಿಧಿಸುವ ಸುಗ್ರೀವಾಜ್ಞೆ ಭಾರತೀಯರಲ್ಲಿ ಭಾರೀ ಆತಂಕ ಮೂಡಿಸಿತ್ತು. ಇದೀಗ ಬಿಡುಗಡೆಯಾಗಿರುವ ಮಾನದಂಡದಿಂದ ಅವರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.
ಈ ಹೊಸ ನಿರ್ಧಾರವು ಅಮೆರಿಕದಲ್ಲಿನ ಟೆಕ್ ಕಂಪನಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಅಲ್ಲದೆ, F-1 ವೀಸಾದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಇದು ದೊಡ್ಡ ವರದಾನವಾಗಿದೆ. ಅಮೆರಿಕದ ಕಂಪನಿಗಳು ಇನ್ನು ಮುಂದೆ 1 ಲಕ್ಷ ಡಾಲರ್‌ಗಳಷ್ಟು ದೊಡ್ಡ ಮೊತ್ತದ ಶುಲ್ಕವನ್ನು ಪಾವತಿಸದೆ ಈ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಬಹುದು.
ಈ ನಿರ್ಧಾರ ಭಾರತೀಯ ಐಟಿ ಕಂಪನಿಗಳ ಮೇಲೆ ಅಷ್ಟಾಗಿ ಪರಿಣಾಮ ಬೀರಲ್ಲ. ಏಕೆಂದರೆ, ಈ ಕಂಪನಿಗಳು H-1B ವೀಸಾಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ. ವಿಪ್ರೋ, ಇನ್ಫೋಸಿಸ್, ಟಿಸಿಎಸ್‌ನಂತಹ ಪ್ರಮುಖ ಕಂಪನಿಗಳು ಈಗಾಗಲೇ ಅಮೆರಿಕದಲ್ಲಿ ಸ್ಥಳೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುತ್ತಿವೆ.
ವಿಪ್ರೋದ ಅಮೆರಿಕ ಉದ್ಯೋಗಿಗಳಲ್ಲಿ ಸುಮಾರು 80%ನಷ್ಟು ಸ್ಥಳೀಯರಾಗಿದ್ದಾರೆ. ಇನ್ಫೋಸಿಸ್‌ನ ಕೆಲವೇ ಉದ್ಯೋಗಿಗಳು ಮಾತ್ರ ವಲಸೆ ಸೇವೆಗಳನ್ನು ಬಳಸುತ್ತಾರೆ ಎಂದು ಅದರ ಸಿಇಒ ಸಲಿಲ್ ಪಾರೇಖ್ ಹೇಳಿದ್ದಾರೆ. ಇನ್ನು ಟಿಸಿಎಸ್ ಪ್ರತಿ ವರ್ಷ ಕೇವಲ 500 ಜನರನ್ನು ಮಾತ್ರ H-1B ವೀಸಾದಲ್ಲಿ ಅಮೆರಿಕಕ್ಕೆ ಕಳುಹಿಸುತ್ತಿದೆ. ಭಾರತ ಸೇರಿದಂತೆ ವಿದೇಶಗಳಿಂದ ಹೊಸದಾಗಿ H-1B ವೀಸಾದ ಮೇಲೆ ಉದ್ಯೋಗಿಗಳನ್ನು ಕರೆಸಿಕೊಳ್ಳುವ ಪ್ರಕ್ರಿಯೆಗೆ ಮಾತ್ರ 1 ಲಕ್ಷ ಡಾಲರ್ ಶುಲ್ಕ ಅನ್ವಯವಾಗಲಿದೆ.
ಭಾರತೀಯರೆಷ್ಟು ಇದ್ದಾರೆ?
USCIS ದತ್ತಾಂಶದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಅನುಮೋದಿಸಲಾದ ಎಲ್ಲಾ H-1B ಅರ್ಜಿಗಳಲ್ಲಿ ಸುಮಾರು 71% ಭಾರತೀಯರು ಪಾಲನ್ನು ಹೊಂದಿದ್ದಾರೆ. ಕಂಪನಿಗಳು ಸಾಮಾನ್ಯವಾಗಿ H-1B ಕಾರ್ಮಿಕರನ್ನು ಪ್ರಾಯೋಜಿಸುವ ವೆಚ್ಚವನ್ನು ಭರಿಸುತ್ತವೆ. H-1B ವೀಸಾಗಳಲ್ಲಿ ಹತ್ತಾರು ಸಾವಿರಕ್ಕೂ ಹೆಚ್ಚು ನುರಿತ ವೃತ್ತಿಪರರು ಪ್ರತಿ ವರ್ಷ ಅಮೆರಿಕದ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ.