Tag: don bradman

  • ಬ್ರಾಡ್ಮನ್ ಬಿಟ್ರೆ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾಗಬಹುದು- ಸಂಗಕ್ಕಾರ

    ಬ್ರಾಡ್ಮನ್ ಬಿಟ್ರೆ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾಗಬಹುದು- ಸಂಗಕ್ಕಾರ

    ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ಅವರು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಹಾಡಿ ಹೊಗಳಿದ್ದಾರೆ.

    ಸಂಗಕ್ಕಾರ ‘ಆರ್‍ಕೆ ಶೋ’ನಲ್ಲಿ ಮಾತನಾಡುತ್ತಾ, “ಕ್ರಿಕೆಟ್ ದಂತಕಥೆ, ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್ ಬಿಟ್ಟರೆ ವಿರಾಟ್ ಕೊಹ್ಲಿ ಎರಡನೇ ಶ್ರೇಷ್ಠ ಕ್ರಿಕೆಟರ್ ಆಗಬಹುದು. ಆ ಹಂತವನ್ನು ತಲುಪುವ ಸಂಪೂರ್ಣ ಸಾಮರ್ಥ್ಯ ಹಾಗೂ ಪರಿಶ್ರಮವನ್ನು ಅವರು ಹೊಂದಿದ್ದಾರೆ” ಎಂದು ಹೇಳಿದ್ದಾರೆ.

    ಕೊಹ್ಲಿಯ ಫಿಟ್‍ನೆಸ್ ಬಗ್ಗೆ ಪ್ರತಿಕ್ರಿಯಿಸಿದ ಸಂಗಕ್ಕಾರ, ನಾನು ಆಟದ ಬಗ್ಗೆ ವಿರಾಟ್ ಉತ್ಸಾಹವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಇನ್ನೂ ಮೈದಾನದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬಹುದು. ಕೊಹ್ಲಿ ದೈಹಿಕವಾಗಿ, ಮಾನಸಿಕವಾಗಿ ತುಂಬಾ ಪ್ರಬಲರಾಗಿದ್ದಾರೆ. ಹೀಗಾಗಿ ಡಾನ್ ಬ್ರಾಡ್ಮನ್ ನಂತರ ಎರಡನೇ ಶ್ರೇಷ್ಠ ಆಟಗಾರನಾಗಲು ಅವರಿಗೆ ಅವಕಾಶವಿದೆ ಎಂದಿದ್ದಾರೆ.

    ಪ್ರಸ್ತುತ ಕ್ರಿಕೆಟ್‍ನಲ್ಲಿ ಅವರಂತಹ ಆಟಗಾರರು ಬಹಳ ಕಡಿಮೆ ಇದ್ದಾರೆ. ನನ್ನ ವೃತ್ತಿಜೀವನದಲ್ಲಿ ನಾನು ನೋಡಿದ ಎಲ್ಲ ಆಟಗಾರರಲ್ಲಿ ಕೊಹ್ಲಿ ಅತ್ಯುತ್ತಮ ಆಟಗಾರ. ಅವರಲ್ಲಿ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ಕ್ರೀಡೆಗಳ ಬಗ್ಗೆ ಅವರ ಉತ್ಸಾಹ. ವಿರಾಟ್ ನಾಯಕನಾಗಿರಲಿ ಅಥವಾ ಆಟಗಾರನಾಗಿರಲಿ ತಂಡವನ್ನು ಗೆಲ್ಲಿಸುವ ಹೋರಾಟದ ವೇಳೆ ಭಾವನೆಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಬ್ಯಾಟಿಂಗ್ ಸಮಯದಲ್ಲಿ ಹೆಚ್ಚು ಅಪಾಯಕಾರಿ ಹೊಡೆತಗಳನ್ನು ತೆಗೆದುಕೊಳ್ಳುವುದಿಲ್ಲ. ಹೀಗಿದ್ದರೂ ಅದು ಪರಿಣಾಮಕಾರಿಯಾಗಿ ಕಾಣುತ್ತದೆ ಎಂದು ಸಂಗಾಕ್ಕರ ಹೊಗಳಿದ್ದಾರೆ.

    ಸಂಗಕ್ಕಾರ ಅವರಿಗೂ ಮುನ್ನ ನ್ಯೂಜಿಲೆಂಡ್ ನಾಯಕ ಕೆನ್ ವಿಲಿಯಮ್ಸನ್ ಅವರು ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ವಿರಾಟ್ ವಿರುದ್ಧ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಭೇಟಿಯಾಗುವುದು ಹಾಗೂ ಕ್ರಿಕೆಟ್ ಜರ್ನಿಯನ್ನು ಹತ್ತಿರದಿಂದ ನೋಡುವುದು ನಿಜಕ್ಕೂ ಅದ್ಭುತವಾಗಿದೆ” ಎಂದಿದ್ದರು.

    ಡಾನ್ ಬ್ರಾಡ್ಮನ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಆದಾಗ್ಯೂ ಅವರು ಟೆಸ್ಟ್ ಕ್ರಿಕೆಟ್ ಮಾತ್ರ ಆಡಿದ್ದಾರೆ. ಅದರಲ್ಲೂ ಅವರ ಸರಾಸರಿ 99.94 ಆಗಿದೆ. ಇದನ್ನು ಸಾಧಿಸುವುದು ತುಂಬಾ ಕಷ್ಟ. ಆದರೆ ಟೆಸ್ಟ್ ಕ್ರಿಕೆಟ್‍ನಲ್ಲಿ ರನ್‍ಗಳ ವಿಷಯದಲ್ಲಿ ಕೊಹ್ಲಿ ಬ್ರಾಡ್ಮನ್ ಅವರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 86 ಟೆಸ್ಟ್ ಪಂದ್ಯಗಳಲ್ಲಿ 53.62 ಸರಾಸರಿಯಲ್ಲಿ 7,240 ರನ್ ಗಳಿಸಿದ್ದಾರೆ.

    ವಿರಾಟ್ ಟೆಸ್ಟ್ ನಲ್ಲಿ 27 ಶತಕಗಳನ್ನು ಗಳಿಸಿದ್ದಾರೆ. ಇತ್ತ ಡಾನ್ ಬ್ರಾಡ್ಮನ್ 52 ಟೆಸ್ಟ್ ಗಳಲ್ಲಿ 99.94 ಸರಾಸರಿಯಲ್ಲಿ 6,996 ರನ್ ಗಳಿಸಿದ್ದಾರೆ. ಕೊಹ್ಲಿ ಎಲ್ಲಾ ಮೂರು ಮಾದರಿಯಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ 20) ಸರಾಸರಿ 50ಕ್ಕಿಂತ ಹೆಚ್ಚು ಹೊಂದಿದ್ದಾರೆ. ಜೊತೆಗೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಒಟ್ಟುಗೂಡಿಸಿ 70 ಶತಕಗಳನ್ನು ಗಳಿಸಿದ್ದಾರೆ.

  • ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಹಿಟ್‍ಮ್ಯಾನ್

    ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಹಿಟ್‍ಮ್ಯಾನ್

    ಹೈದರಾಬಾದ್: ಬುಧವಾರ ಆರಂಭಗೊಂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್‍ರ ದಾಖಲೆಗೆ ಸಮಾನರಾಗಿದ್ದಾರೆ.

    ಬುಧವಾರ ವೈಝಾಗ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಓಪನರ್ ಗಳಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್ ಆಗರವಾಲ್ ಉತ್ತಮ ಆಟವಾಡಿದರು. ಆರಂಭಿಕ ಜೊತೆಯಾಟದಲ್ಲಿ ಈ ಜೋಡಿ ಮೊದಲ ದಿನದ ಅಂತ್ಯಕ್ಕೆ 202 ರನ್‍ಗಳ ಜೊತೆಯಾಟವಾಡಿತು. ಈ ಇನ್ನಿಂಗ್ಸ್‍ನಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿಯಲ್ಲಿ ಡಾನ್ ಬ್ರಾಡ್ಮನ್‍ರಿಗೆ ಸಮಾನದ ದಾಖಲೆ ಮಾಡಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನ 50 ಕ್ಕೂ ಹೆಚ್ಚಿನ ಇನ್ನಿಂಗ್ಸ್ ಗಳಲ್ಲಿ ಡಾನ್ ಬ್ರಾಡ್ಮನ್ 98.22 ಸರಾಸರಿಯನ್ನು ಹೊಂದಿದ್ದರು. ಟೆಸ್ಟ್ ಕ್ರಿಕೆಟ್‍ನಲ್ಲಿ ಕಳೆದ 15 ಇನ್ನಿಂಗ್ಸ್ ನಲ್ಲಿ ರೋಹಿತ್ 4 ಶತಕ ಮತ್ತು 5 ಅರ್ಧಶತಕದೊಂದಿದೆ ಒಟ್ಟು 884 ರನ್ ಗಳಿಸಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ 10 ಕ್ಕೂ ಹೆಚ್ಚು ಇನ್ನಿಂಗ್ಸ್ ಗಳಲ್ಲಿ 98.22 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, ರೋಹಿತ್ ಶರ್ಮಾ ಬ್ರಾಡ್ಮನ್ ಅವರ ದಾಖಲೆಗೆ ಸಮಾನರಾಗಿದ್ದಾರೆ.

    ಇದರ ಜೊತೆಗೆ ರೋಹಿತ್ ಶರ್ಮಾ ಇನ್ನೊಂದು ದಾಖಲೆ ಬರೆದಿದ್ದು, ಶಿಖರ್ ಧವನ್, ಕೆ.ಎಲ್ ರಾಹುಲ್ ಮತ್ತು ಪೃಥ್ವಿ ಶಾ ಅವರ ರೀತಿಯಲ್ಲಿ ಓಪನರ್ ಆಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಮೂರು ಮಾದರಿಯ ಪಂದ್ಯಗಳಲ್ಲಿ ಆರಂಭಿಕನಾಗಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

    ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗುಪ್ಟಿಲ್, ತಿಲಕರತ್ನ ದಿಲ್ಶನ್, ಅಹ್ಮದ್ ಶೆಹಜಾದ್, ಶೇನ್ ವ್ಯಾಟ್ಸನ್, ಮತ್ತು ತಮೀಮ್ ಇಕ್ಬಾಲ್ ಅವರ ನಂತರ ರೋಹಿತ್ ಶರ್ಮಾ ಓಪನರ್ ಆಗಿ ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಶತಕ ಗಳಿಸಿದ ವಿಶ್ವದ ಏಳನೇ ಬ್ಯಾಟ್ಸ್ ಮನ್ ಆಗಿದ್ದಾರೆ.

    ವೈಝಾಗ್ ಟೆಸ್ಟ್ ನ ಮೊದಲ ದಿನದಲ್ಲಿ ಸೌತ್ ಅಫ್ರಿಕಾ ಬೌಲರ್ ಗಳ ಬೆವರಿಳಿಸಿದ ಭಾರತದ ಆರಂಭಿಕ ಜೋಡಿ ಔಟ್ ಆಗದೆ ದ್ವಿಶತಕದ ಜೊತೆಯಾಟವಾಡಿದರು. ಇದರಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಶರ್ಮಾ 174 ಎಸೆತದಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ ನೊಂದಿಗೆ 115 ರನ್ ಗಳಿಸಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಆಗರವಾಲ್ 183 ಎಸೆತದದಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 84 ರನ್ ಸಿಡಿಸಿ ಔಟಾಗದೆ ಉಳಿದಿದ್ದಾರೆ.

  • ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ

    ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ

    ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು(ಆಗಸ್ಟ್, 14) ಅಪರೂಪದಲ್ಲಿ ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ. ಈ ದಿನ ಕೇವಲ 4 ರನ್ ಗಳಿಸಿದ್ದರೆ ಡಾನ್ ಬ್ರಾಡ್ಮನ್ ವಿಶಿಷ್ಟವಾದ ದಾಖಲೆ ಬರೆಯುತ್ತಿದ್ದರು.

    69 ವರ್ಷದ ಹಿಂದೆ ಈ ದಿನ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 4 ರನ್ ಗಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೆ ನೂರಷ್ಟು ಸರಾಸರಿ ಹೊಂದಿದ್ದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ವಿಶೇಷ ದಾಖಲೆಯಿಂದ ಬ್ರಾಡ್ಮನ್ ವಂಚಿತರಾದರು.

    1948 ಆಗಸ್ಟ್ 14, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವದು. ಕ್ರಿಕೆಟ್ ಲೋಕದ ಏಕೈಕ ಡಾನ್, ಸರ್ ಬ್ರಾಡ್ಮನ್ ಕ್ರೀಸ್‍ಗಿಳಿದಿದ್ದರು. ಸರ್ವಶ್ರೇಷ್ಠ ಜೀವಮಾನ ಸಾಧನೆಗೆ ಬ್ರಾಡ್ಮನ್‍ಗೆ ಬೇಕಾಗಿದ್ದಿದ್ದು ಕೇವಲ 4 ರನ್. 4 ರನ್‍ಗಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೆ ನೂರಷ್ಟು ಸರಾಸರಿ ಹೊಂದಿದ್ದ ಏಕೈಕ ಆಟಗಾರ ಎಂಬ ಕೀರ್ತಿಗೆ ಬ್ರಾಡ್ಮನ್ ದೊರೆಯಾಗುತ್ತಿದ್ದರು.

    ಈ ಪಂದ್ಯದಲ್ಲಿ ತಾನು ಎದುರಿಸಿದ ಹೋಲಿ ಬೌಲಿಂಗ್‍ನ ಎರಡನೇ ಎಸೆತದಲ್ಲಿ ಬ್ರಾಡ್ಮನ್ ಕ್ಲೀನ್ ಬೌಲ್ಡ್ ಆದರು. ಅದು ಬ್ರಾಡ್ಮನ್ ಕ್ರಿಕೆಟ್ ಇತಿಹಾಸದ ಕೊನೆಯ ಇನ್ನಿಂಗ್ಸ್ ಆಗಿತ್ತು. ಈ ಪಂದ್ಯವನ್ನು ಆಸ್ಟ್ರೇಲಿಯಾ ಒಂದು ಇನ್ನಿಂಗ್ಸ್ ಮತ್ತು 149 ರನ್‍ಗಳಿಂದ ಗೆದ್ದುಕೊಂಡಿತ್ತು.

    52 ಟೆಸ್ಟ್ ಪಂದ್ಯಗಳ 80 ಇನ್ನಿಂಗ್ಸ್ ಮೂಲಕ ಡಾನ್ ಬ್ರಾಡ್ಮನ್ 99.94 ಸರಾಸರಿಯೊಂದಿಗೆ 6996 ರನ್ ಗಳಿಸಿದ್ದರು. 10 ಬಾರಿ ನಟೌಟ್ ಆಗಿದ್ದ ಇವರು ಗರಿಷ್ಠ 334 ರನ್ ಹೊಡೆದಿದ್ದರು. 29 ಶತಕ, 13 ಅರ್ಧಶತಕ ಹೊಡೆದಿದ್ದ ಇವರು 32 ಕ್ಯಾಚ್ ಹಿಡಿದಿದ್ದರು.

    ಇದನ್ನೂ ಓದಿ: ಕ್ಲೀನ್ ಸ್ವೀಪ್‍ನೊಂದಿಗೆ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕೊಹ್ಲಿ ಪಡೆ

    https://youtu.be/hvrOHYp8nRY