Tag: Domestic Airlines

  • ಬೆಂಗ್ಳೂರಿನಿಂದ ವಿಮಾನದಲ್ಲಿ ಕೊಯಮತ್ತೂರಿಗೆ ತೆರಳಿದ 6 ಮಂದಿಗೆ ಸೋಂಕು

    ಬೆಂಗ್ಳೂರಿನಿಂದ ವಿಮಾನದಲ್ಲಿ ಕೊಯಮತ್ತೂರಿಗೆ ತೆರಳಿದ 6 ಮಂದಿಗೆ ಸೋಂಕು

    ನವದೆಹಲಿ: ದೇಶದಲ್ಲಿ ದೇಶೀಯ ವಿಮಾನಯಾನ ಸೇವೆ ಪುನರಾರಂಭವಾದ ಬಳಿಕ ಕೋವಿಡ್-19 ಸೋಂಕಿಗೆ ತುತ್ತಾದ ಪ್ರಯಾಣಿಕರ ಸಂಖ್ಯೆ 23ಕ್ಕೇರಿದೆ.

    ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನಿಂದ ಕೊಯಮತ್ತೂರಿಗೆ ಮೇ 26 ರಂದು ಆಗಮಿಸಿದ್ದ ವಿಮಾನದಲ್ಲಿ ಆರು ಮಂದಿ, ದೆಹಲಿಯಿಂದ ಜಮ್ಮುವಿಗೆ ಮೇ 27 ರಂದು ಆಗಮಿಸಿದ್ದ ಮೂವರು, ದೆಹಲಿಯಿಂದ ಕೊಯಮತ್ತೂರಿಗೆ ಮೇ 27 ಮಂದಿಗೆ ಆಗಮಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರ ವರದಿಯಲ್ಲೂ ಕೊರೊನಾ ಪಾಸಿಟಿವ್ ಆಗಮಿಸಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ವಿಮಾನಯಾನ ಸಂಸ್ಥೆ, ಎಲ್ಲಾ ಪ್ರಯಾಣಿಕರಿಗೂ ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಧರಿಸಿಯೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಎಲ್ಲಾ ವಿಮಾನಗಳನ್ನು ಪ್ರಯಾಣಿಕರಿಗೆ ಸೇವೆ ನೀಡಿದ ಬಳಿಕ ತಪ್ಪದೇ ನಿರಂತರವಾಗಿ ಸ್ಯಾನಿಟೈಸ್ ಮಾಡಿ ಮರುಸೇವೆ ನೀಡಲಾಗುತ್ತಿದೆ. ಅಲ್ಲದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ 14 ದಿನಗಳ ಹೋ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಸರ್ಕಾರ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದಿದ್ದಾರೆ.

    ದೇಶೀಯ ವಿಮಾನಯಾನ ಆರಂಭವಾದ ಬಳಿಕ ಮೇ 26 ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಇಂಡಿಗೋ ವಿಮಾನದಲ್ಲಿ ಚೆನ್ನೈನಿಂದ ಕೊಯಮತ್ತೂರಿಗೆ ಮೇ 25 ರಂದು ವ್ಯಕ್ತಿ ಪ್ರಯಾಣ ಮಾಡಿದ್ದ. ಆ ಬಳಿಕ ಮೇ 25 ರಂದು ದೆಹಲಿಯಿಂದ ಲೂದಿಯಾನಕ್ಕೆ ಅಲೈಯನ್ಸ್ ಏರ್ ವಿಮಾನ(91837)ದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈ ಎರಡು ವಿಮಾನದಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಮೇ 27 ರಂದು ಸ್ಪೈಸ್ ಜೆಟ್ 8194 ವಿಮಾನದಲ್ಲಿ ಅಹಮಾಬಾದ್‍ನಿಂದ ದೆಹಲಿಗೆ ಹಾಗೂ ಮೇ 25 ರಂದು ಎಸ್‍ಜಿ 8152 ವಿಮಾನದಲ್ಲಿ ದೆಹಲಿಯಿಂದ ಗುವಾಹಟಿಗೆ ಪ್ರಯಾಣಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಇಂಡಿಗೋ 6ಇ 7214 ವಿಮಾನದಲಿ ಬೆಂಗಳೂರಿನಿಂದ ಮಧುರೈಗೆ ಆಗಮಿಸಿದ್ದ ರೋಗ ಲಕ್ಷಣಗಳು ಕಂಡುಬಾರದ ವ್ಯಕ್ತಿಯ ವರದಿ ಕೊರೊನಾ ಪಾಸಿಟಿವ್ ಆಗಮಿಸಿತ್ತು.

    ಟ್ರೂಜೆಟ್ ಏರ್ ಲೈನ್ಸ್ ವಿಮಾನದಲ್ಲಿ ಚೆನ್ನೈನಿಂದ ಸೇಲಂಗೆ ಮೇ 27 ರಂದು ಪ್ರಯಾಣಿಸಿದ್ದ 6 ಮಂದಿಗೂ ಕೊರೊನಾ ಕಂಡು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಏರ್ ಪ್ಯಾಸೆಂಜರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಿ ಸುಧಾಕರ ರೆಡ್ಡಿ, ಇದುವರೆಗೂ 23 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಎಲ್ಲಾ ಸುರಕ್ಷತಾ ವ್ಯವಸ್ಥೆ ಕೈಗೊಂಡ ಬಳಿಕವೂ ಪ್ರಕರಣಗಳು ಕಂಡು ಬಂದಿರುವುದು ದುರದೃಷ್ಟಕರ. ಇದು ನಮಗೆ ಮತ್ತೊಮ್ಮೆ ನಮ್ಮ ವ್ಯವಸ್ಥೆಯನ್ನು ಪುನರ್ ವಿಮರ್ಶೆ ಮಾಡಿ ಬದಲಾವಣೆ ತರುವ ಸಮಯ ಅನ್ನಿಸುತ್ತದೆ ಎಂದಿದ್ದಾರೆ.

    ಆರೋಗ್ಯ ಸೇತು ಮತ್ತು ಥರ್ಮಲ್ ಪರೀಕ್ಷೆಗಳು ಕೋವಿಡ್-19 ರೋಗಿಗಳನ್ನು ಗುರುತಿಸಲು ನಿರೀಕ್ಷಿತ ಸಹಕಾರಿ ಆಗಿಲ್ಲ ಎಂದು ಏರ್ ಇಂಡಿಯಾ ಮಾಜಿ ಕಾರ್ಯನಿರ್ವಾಹಕ ಜೀತಿಂದರ್ ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಮೊದಲ ನಾಲ್ಕು ದಿನಗಳ ಅವಧಿಯಲ್ಲಿ ಕಡಿಮೆ ಪ್ರಯಾಣಿಕರೊಂದಿಗೆ ವಿಮಾನಯಾನ ಆರಂಭವಾದರೂ ಕೋವಿಡ್ ಪ್ರಕರಣಗಳು ವರದಿಯಾಗಿರುವುದು ಮತ್ತಷ್ಟು ಪ್ರಯಾಣಿಕರು ವಿಮಾನ ಸಂಚಾರದಿಂದ ದೂರ ಉಳಿಯುವಂತೆ ಮಾಡಿದೆ. ಇದು ವಿಮಾನ ಪ್ರಯಾಣಿಕರ ಸಂಖ್ಯೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ. ಉಳಿದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ 50 ವಿಮಾನಗಳು 16 ನಗರಕ್ಕೆ ಸಂಚರಿಸಿದೆ. ಒಟ್ಟು 5,583 ಪ್ರಯಾಣಿಕರ ಪೈಕಿ 4,255 ಮಂದಿ ಪ್ರಯಾಣಿಸಿದ್ದಾರೆ.

  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮನಮಿಡಿಯುವ ದೃಶ್ಯಗಳು- ಮಗನನ್ನು ನೋಡಿ ಕಣ್ಣೀರಿಟ್ಟ ತಾಯಿ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮನಮಿಡಿಯುವ ದೃಶ್ಯಗಳು- ಮಗನನ್ನು ನೋಡಿ ಕಣ್ಣೀರಿಟ್ಟ ತಾಯಿ

    ಬೆಂಗಳೂರು: ಲಾಕ್‍ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ದೇಶೀಯ ವಿಮಾನ ಹಾರಾಟ ಆರಂಭವಾಗಿದೆ. ಇತ್ತ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕೇಂದ್ರ ಸರ್ಕಾರ ಮರಳಿ ಕರೆತರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ ಹಲವು ಮನಮಿಡಿಯುವ ದೃಶ್ಯಗಳಿಗೆ ಸಾಕ್ಷಿಯಾಗಿದೆ.

    ಮೆಡಿಕಲ್ ಶಿಕ್ಷಣ ಪಡೆಯಲು ಫಿಲಿಫೈನ್ಸ್ ತೆರಳಿದ್ದ ಮಗ 6 ತಿಂಗಳ ಬಳಿಕ ಇಂದು ಮತ್ತೆ ವಾಪಸ್ ಆಗಿದ್ದ. ಬಹು ಸಮಯದ ಬಳಿಕ ಮಗನನ್ನು ನೋಡಿದ್ದ ಯುವಕನ ತಾಯಿಯ ಕಣ್ಣಲ್ಲಿ ಆನಂದ ಬಾಷ್ಪ ಮೂಡಿತ್ತು. ಇತ್ತ ಮಗ ಆರೋಗ್ಯವಾಗಿ ಹಿಂದಿರುಗಿದರೇ ತಿರುಪತಿಗೆ ಭೇಟಿ ನೀಡಿ ಕೂದಲು ನೀಡುವುದಾಗಿ ಕುಟುಂಬಸ್ಥರು ಹರಕೆ ಹೊತ್ತಿದ್ದರು. ಮಗ ಹಿಂದಿರುಗಿದ್ದನ್ನು ನೋಡಿದರೂ ತಾಯಿ ಆತನೊಂದಿಗೆ ಹತ್ತಿರದಿಂದ ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ದೂರದಿಂದಲೇ ಮಗನನ್ನು ಕಣ್ತುಂಬಿಕೊಂಡ ತಾಯಿ ಮಗನನ್ನು ಕ್ವಾರಂಟೈನ್‍ಗೆ ಕಳುಹಿಸಿಕೊಟ್ಟರು.

    ಜೈಪುರದಿಂದ ಆಗಿಸಿದ್ದ ಪತ್ನಿ ಹಾಗೂ ಮಗನನ್ನು ನೋಡಿ ವ್ಯಕ್ತಿಯೊಬ್ಬರು ಖುಷಿ ಹಂಚಿಕೊಂಡರು. ಕಳೆದ 3 ತಿಂಗಳಿನಿಂದ ಇಬ್ಬರು ಜೈಪುರದಲ್ಲಿ ಸಿಲುಕಿದ್ದರು. ಇಂದು ಪತ್ನಿ, ಮಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದಂತೆ ಸಂತಸಗೊಂಡಿದ್ದ ವ್ಯಕ್ತಿ ಮಗಳಿಗೆ ಸಿಹಿ ತಿಂಡಿ ನೀಡಿ ಹರ್ಷ ವ್ಯಕ್ತಪಡಿಸಿದ್ದರು. ಸದ್ಯ ಬಾಲಕ ಜೊತೆಗಿರುವ ಕಾರಣ ಇಬ್ಬರಿಗೂ ಗಂಟಲು ದ್ರವ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದರೇ ಹೋಂ ಕ್ವಾರಂಟೈನ್ ಮಾಡಲು ಅವಕಾಶ ನೀಡಲಾಗಿದೆ.

    ಮುಂಬೈಯಿಂದ 3 ವರ್ಷಗಳ ಬಳಿಕ ಆಗಮಿಸಿದ್ದ ಮಗಳನ್ನು ಕಂಡ ಅಪ್ಪ ಸಂತಸಗೊಂಡಿದ್ದರು. ಫೋನ್ ಮೂಲಕ ಮಗಳನ್ನು ದೂರದಿಂದಲೇ ಮಾತನಾಡಿಸಿ ಬಳಿಕ ಮಗಳನ್ನು ಕ್ವಾರಂಟೈನ್‍ಗೆ ಕಳುಹಿಸಿಕೊಟ್ಟರು.

    ವಿವಿಧ ಪ್ರದೇಶಗಳಿಂದ ಪ್ರಯಾಣಿಕರು ಆಗಮಿಸುತ್ತಿರುವ ಕುರಿತು ಮಾಹಿತಿ ನೀಡಿದ ಡಿಸಿಪಿ ಭೀಮಾಶಂಕರ ಅವರು, ಈಗಾಗಲೇ 2 ಅಂತಾರಾಷ್ಟ್ರೀಯ ವಿಮಾನಗಳು ಈಗಾಗಲೇ ಬಂದಿವೆ. ವಿದೇಶದಿಂದ ಆಗಮಿಸಿದ್ದ ಒಟ್ಟು 177 ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಉಳಿದಂತೆ 18 ದೇಶೀಯ ವಿಮಾನಗಳು ಆಗಮಿಸಿದ್ದು, ಇವುಗಳಲ್ಲಿ ಸುಮಾರು 750 ಪ್ರಯಾಣಿಕರು ಆಗಮಿಸಿದ್ದಾರೆ. ಎಲ್ಲರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುತ್ತಿರುವುದಾಗಿ ಹಾಗೂ ಕೆಲವರು ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದರು. ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ 80 ದೇಶೀಯ ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲು ಬುಕ್ ಆಗಿವೆ. ಆದರೆ ಕ್ವಾರಂಟೈನ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಪ್ರಯಾಣಿಕರು ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ನಿನ್ನೆಯೂ ಕೂಡ ಅನೇಕ ವಿಮಾನಗಳು ಕ್ಯಾನ್ಸಲ್ ಆಗಿವೆ. ಹೀಗಾಗಿ ಎಷ್ಟು ಜನ ಆಗಮಿಸುತ್ತಾರೆ ಎಂಬ ಮಾಹಿತಿಯನ್ನು ಸಂಗ್ರಹ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ದೆಹಲಿಯಿಂದ ಬರುವ ಪ್ರಯಾಣಿಕರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್. ಈ ಆರು ರಾಜ್ಯಗಳನ್ನ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ.