Tag: DOGE

  • ಟ್ರಂಪ್‌ ನೀತಿಯನ್ನು ಟೀಕಿಸಿದ ಬೆನ್ನಲ್ಲೇ DOGE ಮುಖ್ಯಸ್ಥ ಪಟ್ಟದಿಂದ ಇಳಿದ ಮಸ್ಕ್‌

    ಟ್ರಂಪ್‌ ನೀತಿಯನ್ನು ಟೀಕಿಸಿದ ಬೆನ್ನಲ್ಲೇ DOGE ಮುಖ್ಯಸ್ಥ ಪಟ್ಟದಿಂದ ಇಳಿದ ಮಸ್ಕ್‌

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ನೀತಿಯನ್ನು ಟೀಕಿಸಿದ ಒಂದು ದಿನದ ಬಳಿಕ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್‌ ಮಸ್ಕ್ (Elon Musk) ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ ಹುದ್ದೆಯಿಂದ ಕೆಳಗೆ ಇಳಿದಿದಿದ್ದಾರೆ.

    ಎಲಾನ್ ಮಸ್ಕ್ ಅವರು ಎಕ್ಸ್‌ನಲ್ಲಿ ನನ್ನ DOGE ಅವಧಿ ಕೊನೆಯಾಗಿದೆ ಎಂದು ಘೋಷಿಸಿದರು. ಸರ್ಕಾರದ ವ್ಯರ್ಥ ಖರ್ಚುಗಳನ್ನು ಕಡಿಮೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ ಮುಂದೆ ಬಲಗೊಳ್ಳಲಿದ್ದು, ಸರ್ಕಾರದ ಕಾರ್ಯವಿಧಾನ ಭಾಗವಾಗಿದೆ ಎಂದು ಹೇಳಿದ್ದಾರೆ.

     

    ತೆರಿಗೆ ಬಿಲ್‌ಗೆ ಸಂಬಂಧಿಸಿದಂತೆ ಟ್ರಂಪ್‌ ಜೊತೆ ಉಂಟಾಗಿರುವ ಭಿನ್ನಭಿಪ್ರಾಯದಿಂದ DOGE ಹುದ್ದೆಯನ್ನು ಮಸ್ಕ್‌ ತೊರೆದಿದ್ದಾರೆ. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಡಿಒಜಿಇ ದಕ್ಷತೆಯ ಮೇಲೆ ಪರಿಣಾಮ ಬೀರಲಿದ್ದು ಇಲಾಖೆಯನ್ನು ದುರ್ಬಲಗೊಳಿಸಲಿದೆ ಎಂದು ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ಡೊನಾಲ್ಡ್‌ ಟ್ರಂಪ್‌ ಅವರು ವೆಚ್ಚ ಕಡಿತಗೊಳಿಸಲು ಬಿಗ್‌ ಬ್ಯುಟಿಫುಲ್‌ ಮಸೂದೆಯನ್ನು ಪರಿಚಯಿಸಿದ್ದರು. ಈ ಮಸೂದೆಯ ಬಗ್ಗೆ ಅಮೆರಿಕದ ಆರ್ಥಿಕ ತಜ್ಞರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಸ್ಕ್‌, ಈ ಮಸೂದೆ ಬಜೆಟ್‌ ಕೊರತೆಯನ್ನು ಹೆಚ್ಚಿಸುತ್ತದೆ. ಮಸೂದೆ ದೊಡ್ಡದಾಗಿರಬಹುದು ಅಥವಾ ಸುಂದರವಾಗಿರಬಹುದು. ಆದರೆ ಅದು ಎರಡೂ ಆಗಬಹುದೇ ಎಂದು ನನಗೆ ತಿಳಿದಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದರು. ಇದನ್ನೂ ಓದಿ: ಭಾರತಕ್ಕೆ ಬಂದೇ ಬಿಡ್ತು ಸ್ಟಾರ್‌ಲಿಂಕ್‌ – ಇದರ ಬೆಲೆ, ಇಂಟರ್ನೆಟ್‌ ಸ್ಪೀಡ್‌ ಎಷ್ಟು ಗೊತ್ತಾ?

     

    ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸ್ಕ್‌ ಅವರು ಡೊನಾಲ್ಡ್‌ ಟ್ರಂಪ್‌ ಪರ ಮತಯಾಚನೆ ಮಾಡಿದ್ದರು. ನಂತರ ಟ್ರಂಪ್‌ DOGE ಮುಖ್ಯಸ್ಥರನ್ನಾಗಿ ಮಸ್ಕ್‌ ಅವರನ್ನು ನೇಮಿಸಿದ್ದರು. ನೇಮಿಸಿದ ನಂತರ ಹಲವಾರು ಸರ್ಕಾರಿ ಇಲಾಖೆಗಳನ್ನು ಮುಚ್ಚಿದ್ದರು. ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರು. ಅಮೆರಿಕದ ಹಲವು ದೇಶಗಳಿಗೆ ನೀಡುತ್ತಿದ್ದ USAID ನಿಲ್ಲಿಸಿದ್ದರು. ಇದರಿಂದಾಗಿ ಸರ್ಕಾರಿ ಇಲಾಖೆಯ ಕೆಂಗಣ್ಣಿಗೆ ಮಸ್ಕ್‌ ಗುರಿಯಾಗಿದ್ದರು. ಇದನ್ನೂ ಓದಿ: ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಟ್ರಂಪ್‌ ಆಡಳಿತದಲ್ಲಿ ಮಸ್ಕ್‌ ಅವರ ಪಾತ್ರ ಹೆಚ್ಚಾಗುತ್ತಿದ್ದಂತೆ ಅಮೆರಿಕದ ಹಲವು ಕಡೆ ಟೆಸ್ಲಾ ಶೋರೂಂ ಮೇಲೆ ದಾಳಿಗಳು ಆಗುತ್ತಿತ್ತು. ಇದರಿಂದಾಗಿ ಟೆಸ್ಲಾ ಕಂಪನಿಗೆ ಭಾರೀ ನಷ್ಟವಾಗಿತ್ತು.

  • ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಎಲಾನ್‌ ಮಸ್ಕ್‌ ಹೊರಕ್ಕೆ?

    ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಎಲಾನ್‌ ಮಸ್ಕ್‌ ಹೊರಕ್ಕೆ?

    ವಾಷಿಂಗ್ಟನ್‌: ವಿಶ್ವದ ನಂ.1 ಶ್ರೀಮಂತನೂ ಆಗಿರುವ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರು ಶೀಘ್ರದಲ್ಲೇ ಟ್ರಂಪ್‌ ಸಂಪುಟದಿಂದ ಹೊರನಡೆಯಲಿದ್ದಾರೆ. ಈ ವಿಷಯವನ್ನು ಖುದ್ದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕ್ಯಾಬಿನೆಟ್ ಸದಸ್ಯರು ಮತ್ತು ನಿಕಟವರ್ತಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

    ಹೌದು. ಅಮೆರಿಕದ ಅಧ್ಯಕ್ಷನಾಗಿ 2ನೇ ಬಾರಿಗೆ ಅಧಿಕರವಹಿಸಿಕೊಂಡ ಬಳಿಕ ಟ್ರಂಪ್ (Donald Trump) ಹಲವು ಆಪ್ತರಿಗೆ ಸರ್ಕಾರದಲ್ಲಿ ಮಹತ್ತರ ಜವಾಬ್ದಾರಿ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಟ್ರಂಪ್ ಆತ್ಮೀಯ ಎಲಾನ್ ಮಸ್ಕ್‌ಗೆ DOGE ಮುಖ್ಯಸ್ಥನಾಗಿ ನೇಮಕ ಮಾಡಿದ್ದರು. ಆದರೆ ಇದೀಗ DOGE ಸ್ಥಾನದಿಂದ ಮಸ್ಕ್‌ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

    elon musk and donald trump

    ಎಲಾನ್ ಮಸ್ಕ್ ಟ್ರಂಪ್ ಸರ್ಕಾರದ ಭಾಗವಾಗಿ ಹೆಚ್ಚು ದಿನ ಇರುವುದಿಲ್ಲ ಎಂದಿದೆ. ಶೀಘ್ರದಲ್ಲೇ ಎಲಾನ್ ಮಸ್ಕ್ ತಮ್ಮ ಉದ್ಯಮಕ್ಕೆ ಮರಳಲಿದ್ದಾರೆ ಎಂದಿದೆ. ಆದರೆ ಯಾವಾಗ ಅಥವಾ ನಿಖರ ಕಾರಣಗಳನ್ನು ಉಲ್ಲೇಖಿಸಿಲ್ಲ ಎಂದು ಅಮೆರಿಕದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಅಮೆರಿಕ ಸರ್ಕಾರ ಅನಗತ್ಯವಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಉಳಿಸಲು, ಅನಗತ್ಯ ಯೋಜನೆಗಳನ್ನು ಕಡಿತಗೊಳಿಸಲು, ಸರ್ಕಾರದ ಅನಗತ್ಯ ಉದ್ಯೋಗ-ಹುದ್ದೆ ಕಡಿತಗೊಳಿಸುವಿಕೆ, ಕೆಲ ಅನಗತ್ಯ ಏಜೆನ್ಸಿಗಳ ಸೇವೆ ಅಂತ್ಯಗೊಳಿಸಲು ಮಸ್ಕ್‌ ಅವರಿಗೆ ಡಾಜ್‌ ಹೊಣೆ ನೀಡಲಾಗಿತ್ತಯ. ಅದರಂತೆ ಮಸ್ಕ್‌ ಈ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು.

    ಅಲ್ಲದೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, DOGE ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ನಮ್ಮ ಅಧಿಕಾರಶಾಹಿ ವಿರೋಧಿಗಳು ವಾರಕ್ಕೆ 40 ಗಂಟೆಗಳ ಕಾಲ ಆಶಾವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಸೋಲುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದರು.

  • ನನ್ನ DOGE ಇಲಾಖೆ ವಾರಕ್ಕೆ 120 ಗಂಟೆ ಕೆಲಸ ಮಾಡುತ್ತಿದೆ: ಮಸ್ಕ್‌

    ನನ್ನ DOGE ಇಲಾಖೆ ವಾರಕ್ಕೆ 120 ಗಂಟೆ ಕೆಲಸ ಮಾಡುತ್ತಿದೆ: ಮಸ್ಕ್‌

    ವಾಷಿಂಗ್ಟನ್‌: ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ, ವಿಶ್ವದ  ಶ್ರೀಮಂತ ವ್ಯಕ್ತಿ ಎಲೋನ್‌ ಮಸ್ಕ್ (Elon Musk) ತಮ್ಮ ವಿಭಾಗದ ಕಠಿಣ ಕೆಲಸದ ಸಮಯವನ್ನು ಸಮರ್ಥಿಸಿಕೊಂಡಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು DOGE ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ನಮ್ಮ ಅಧಿಕಾರಶಾಹಿ ವಿರೋಧಿಗಳು ವಾರಕ್ಕೆ 40 ಗಂಟೆಗಳ ಕಾಲ ಆಶಾವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಸೋಲುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

    ಅಧಿಕಾರ ಸ್ವೀಕರಿಸಿದ ಮೊದಲ ಎರಡು ಎರಡು ವಾರಗಳಲ್ಲಿ ಅಮೆರಿಕದ ತೆರಿಗೆ ಡಾಲರ್‌ ದುರುಪಯೋಗವನ್ನು ಬಹಿರಂಗಪಡಿಸುವಲ್ಲಿ DOGE ಮಾಡಿದ ಕೆಲಸವನ್ನು ಅವರು ಶ್ಲಾಘಿಸಿದ್ದಾರೆ.

    ಅಮೆರಿಕ ಸರ್ಕಾರದ ದುಂದು ವೆಚ್ಚಗಳನ್ನು ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು DOGE ಇಲಾಖೆಯನ್ನು ಸೃಷ್ಟಿಸಿ ಮುಖ್ಯಸ್ಥರನ್ನಾಗಿ ಎಲಾನ್‌ ಮಸ್ಕ್‌ ಅವರನ್ನು ನೇಮಿಸಿದ್ದಾರೆ.

    ಮಸ್ಕ್‌ ಅವರು ವಾರಕ್ಕೆ 120 ಗಂಟೆ ಕೆಲಸದ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ವಾರಕ್ಕೆ 120 ಗಂಟೆ ಅಂದರೆ 7 ದಿನ 17 ಗಂಟೆ ಕೆಲಸ ಮಾಡಬೇಕು. ಒಂದು ದಿನ ರಜೆ ತೆಗೆದುಕೊಂಡರೂ 20 ಗಂಟೆ ಕೆಲಸ ಮಾಡಬೇಕಾಗುತ್ತದೆ. ಇಷ್ಟೊಂದು ದೀರ್ಘ ಅವಧಿ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ.  ಇದನ್ನೂ ಓದಿ: ತನ್ನನ್ನು ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ US ಗುಪ್ತಚರ ವಿಭಾಗದ ಬಾಸ್‌ ಕೆಂಡಾಮಂಡಲ

    ಅಮೆರಿಕ ಸರ್ಕಾರ ವಿದೇಶಗಳಿಗೆ ನೀಡುತ್ತಿರುವ USAID ಅನ್ನು ಕ್ರಿಮಿನಲ್‌ ಸಂಘಟನೆ ಎಂದು ಮಸ್ಕ್‌ ಕರೆದಿದ್ದಾರೆ. ಈ ಅನುದಾನ ನಿಜವಾಗಿಯೂ ಬಡ ದೇಶಗಳಿಗೆ ತಲುಪುತ್ತಿಲ್ಲ. ಇದು ಅಮೆರಿಕ ಸರ್ಕಾರವನ್ನು ಬೆಂಬಲಿಸುವ ಸರ್ಕಾರೇತರ ಸಂಸ್ಥೆಗಳಿಗೆ ಹೋಗುತ್ತದೆ. ಈ ಎನ್‌ಜಿಒಗಳು ಆ ಹಣವನ್ನು ಸರ್ಕಾರದಲ್ಲಿರುವವರಿಗೆ ಕಳುಹಿಸುತ್ತಾರೆ. ಅಕ್ರಮ ಹಣ ವರ್ಗಾವಣೆ ಮಾಡಲು USAID ಇದನ್ನು ಬಳಸಲಾಗುತ್ತದೆ ಎಂದು ಕಿಡಿಕಾರಿದ್ದಾರೆ.

    ನಷ್ಟದಲ್ಲಿದ್ದ ಟ್ವಿಟ್ಟರ್‌ (Twitter) ಕಂಪನಿಯನ್ನು ಖರೀದಿಸಿದ ಬಳಿಕ ಮಸ್ಕ್‌ ಮಾಡಿದ ಮೊದಲ ಕೆಲಸ ಏನೆಂದರೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದರು. ಟ್ವಿಟ್ಟರ್‌ ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಬಳಿಕ 80% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದು ಹಾಕಿದ್ದನ್ನು ಮಸ್ಕ್‌ ಸಮರ್ಥಿಸಿಕೊಂಡಿದ್ದರು.

    ನಾವು ಯಾವುದೇ ಕಾರ್ಯಕರ್ತರ ಸಂಘಟನೆಯನ್ನು ನಡೆಸುತ್ತಿಲ್ಲ. ಸೆನ್ಸರ್‌ಶಿಪ್‌ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು. ಹೀಗಾಗಿ 80% ರಷ್ಟು ಉದ್ಯೋಗವನ್ನು ಕಡಿತ (Job Cut) ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದ್ದರು.

    ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದಾಗ ಸುಮಾರು 8 ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದು 80% ರಷ್ಟು ಮಂದಿಗೆ ಗೇಟ್‌ಪಾಸ್‌ ನೀಡಲಾಗಿದೆ.

     

  • ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    – ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಅಧ್ಯಯನಗಳಿಗೆ ಬೀಳುತ್ತಾ ಬ್ರೇಕ್‌?

    ವಾಷಿಂಗ್ಟನ್‌: ನಿರೀಕ್ಷೆಯಂತೆ ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಅವರಿಗೆ ಟ್ರಂಪ್‌ ಸರ್ಕಾರದಲ್ಲಿ ಮಹತ್ವದ ಹುದ್ದೆ ಸಿಕ್ಕಿದೆ. ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರೊಂದಿಗೆ ಎಲೋನ್ ಮಸ್ಕ್ ಅವರು ಸರ್ಕಾರಿ ದಕ್ಷತೆಯ ಇಲಾಖೆಯನ್ನು (Department of Government Efficiency) ಮುನ್ನಡೆಸಲಿದ್ದಾರೆ.

    ಇಬ್ಬರೂ ಸರ್ಕಾರಕ್ಕೆ ಹೊರಗಿನಿಂದ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಇವರಿಬ್ಬರಿಂದ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಯಾಗಲಿದೆ ಎಂದು ಟ್ರಂಪ್‌ (Donald Trump) ಹೇಳಿದ್ದಾರೆ.

    Department of Government Efficiency ಇಲಾಖೆಯನ್ನು ಸಂಕ್ಷಿಪ್ತವಾಗಿ DOGE ಎಂದು ಕರೆಯಲಾಗುತ್ತಿದೆ. ಈ ಇಲಾಖೆ ರಚನೆಯಾಗುವ ಮೊದಲೇ ಅಮೆಕದಲ್ಲಿ DOGE ಫೇಮಸ್‌ ಆಗಿತ್ತು. ಇದು ಕ್ರಿಪ್ಟೋ ಕರೆನ್ಸಿಯಾಗಿದ್ದು ಹಲವು ಬಾರಿ ಮಸ್ಕ್‌ ಅವರು Dogecoin ಬಗ್ಗೆ ಪ್ರಚಾರ ಮಾಡಿದ್ದರು.

    ಏನಿದು ಸರ್ಕಾರಿ ದಕ್ಷತೆಯ ಇಲಾಖೆ?
    ಟ್ರಂಪ್‌ ಸರ್ಕಾರ ಹೊಸ ಇಲಾಖೆ ಇದಾಗಿದ್ದು ಮಸ್ಕ್‌ ಅವರು ಚುನಾವಣೆಯ ಸಮಯದಲ್ಲಿ ಇಲಾಖೆಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ಇಲಾಖೆ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ತಕ್ಷಣವೇ ಸ್ಪಷ್ಟವಾಗಿಲ್ಲ.ಆದರೂ ಟ್ರಂಪ್‌ ಪ್ರಕಾರ, ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯುವುದು, ಹೆಚ್ಚುವರಿ ನಿಯಮ ಮತ್ತು ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲಿದೆ. ಇದರ ಜೊತೆ ಫೆಡರಲ್ ಏಜೆನ್ಸಿಗಳನ್ನು ಪುನರ್‌ರಚಿಸಲಿದೆ.

    ಮುಖ್ಯವಾಗಿ ಈ ಇಲಾಖೆ ಅಮೆರಿಕ ಸರ್ಕಾರ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಧ್ಯಯನಗಳಿಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್‌ ಭವಿಷ್ಯ


    ಈ ಇಲಾಖೆ ಸರ್ಕಾರಿ ಹಣವನ್ನು ದುರುಪಯೋಗ ಮಾಡುವವರಿಗೆ ಶಾಕ್‌ ನೀಡಲಿದೆ. ಯಾವುದಾದರೂ ಮುಖ್ಯವಾಗಿರುವುದನ್ನು ತೆಗೆಯುತ್ತಿದ್ದೇವೆ ಎಂದು ನೀವು ಭಾವಿಸಿದರೆ ನಮಗೆ ತಿಳಿಸಿ ಎಂದು ಮಸ್ಕ್‌ ಅಮೆರಿಕ ಜನರಲ್ಲಿ ಮನವಿ ಮಾಡಿದ್ದಾರೆ.

    ಸರ್ಕಾರ ಹೇಗೆ ಪ್ರಯೋಜನಕ್ಕೆ ಬಾರದ ವಿಷಯಗಳಿಗೆ ಕೋಟ್ಯಂತರ ಡಾಲರ್‌ ಹಣವನ್ನು ಖರ್ಚು ಮಾಡುತ್ತದೆ ಎನ್ನುವುದಕ್ಕೆ ಮಸ್ಕ್‌ ಎಕ್ಸ್‌ ಬಳಕೆದಾರರೊಬ್ಬರ ಪೋಸ್ಟ್‌ ಅನ್ನು ರೀ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ಅಮೆರಿಕ ತೆರಿಗೆಯ ಅಸಂಬದ್ಧ ಕಸ ಇಲ್ಲಿದೆ. ಆಡುಗಳ ಮೇಲೆ ಯೋಗದ ಪರಿಣಾಮಗಳನ್ನು ಅಧ್ಯಯನ ಮಾಡಲು 1.5 ಮಿಲಿಯನ್‌ ಡಾಲರ್‌, ಖಾಲಿ ಕಟ್ಟಡ ನಿರ್ವಹಣೆಗೆ 1.7 ಬಿಲಿಯನ್‌ ಡಾಲರ್‌, ಧೂಮಪಾನವನ್ನು ನಿಲ್ಲಿಸಲು ಪರ್ಯಾಯ ಸಂಗೀತದ ದೃಶ್ಯವನ್ನು ಪ್ರಚಾರ ಮಾಡುವ ಅಭಿಯಾನಕ್ಕೆ 5 ಮಿಲಿಯನ್ ಡಾಲರ್‌, ಕೃಷಿ ಇಲಾಖೆಯಲ್ಲಿ ಒಬ್ಬ ಪೂರ್ಣ-ಸಮಯದ ಉದ್ಯೋಗಿಯ ನೇಮಕಕ್ಕೆ 2 ಮಿಲಿಯನ್‌ ಡಾಲರ್‌ನ ಇಂಟರ್ನ್‌ಶಿಪ್‌ ಯೋಜನೆ, ಡೈರಿ ಹಸುಗಳ ಮೇಲೆ ಸಂಗೀತದ ಪರಿಣಾಮಗಳನ್ನು ಅಧ್ಯಯನ ಮಾಡಲು 1 ಮಿಲಿಯನ್ ಡಾಲರ್‌, ಮೀನಿನ ಮೇಲೆ ಮದ್ಯದ ಪರಿಣಾಮಗಳನ್ನು ಅಧ್ಯಯನ ಮಾಡಲು 1.7 ಮಿಲಿಯನ್ ಡಾಲರ್‌.

     

    ಮಸ್ಕ್‌ ಅವರು ವೆಚ್ಚ ಕಡಿತದ ಬಗ್ಗೆ ಮೊದಲಿನಿಂದಲೂ ಮಾತನಾಡಿಕೊಂಡೇ ಬಂದಿದ್ದಾರೆ. ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದ ನಂತರ 90% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದುಹಾಕಿದ್ದರು. 6 ಸಾವಿರ ಮಂದಿ ಇದ್ದ ಉದ್ಯೋಗಿಗಳ ಸಂಖ್ಯೆಯನ್ನು 1 ಸಾವಿರಕ್ಕೆ ಇಳಿಸಿದ್ದರು. ಈ ವಿಚಾರ ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಟ್ವಿಟ್ಟರ್‌ ಸಾಮರ್ಥ್ಯ ಕುಂಠಿತವಾಗಲಿದೆ ಎಂದು ವರದಿಯಾಗಿತ್ತು. ಇದಕ್ಕೆ ಮಸ್ಕ್‌ ಟ್ವಿಟ್ಟರ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಂಚಿಕೊಳ್ಳುವ ವೇದಿಕೆ. ಇಲ್ಲಿ ಎಡಪಂಥೀಯ ಸಿದ್ಧಾಂತವನ್ನು ಹಂಚಿಕೊಳ್ಳುವವರಿಗೆ ಜಾಗ ಇಲ್ಲ. ಸಂಸ್ಥೆ ನಡೆಸಲು ಎಷ್ಟು ಉದ್ಯೋಗಿಗಳು ಬೇಕು ಅಷ್ಟು ಉದ್ಯೋಗಿಗಳು ಇದ್ದರೆ ಸಾಕು. ಅನಗತ್ಯ ಉದ್ಯೋಗಿಗಳ ಅಗತ್ಯವಿಲ್ಲ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.