Tag: dog owner

  • ಬಾಲಕನಿಗೆ ನಾಯಿ ಕಚ್ಚಿದ್ದಕ್ಕೆ ಮಾಲೀಕನ ಮೇಲೆ ಬಿತ್ತು ಕೇಸ್

    ಬಾಲಕನಿಗೆ ನಾಯಿ ಕಚ್ಚಿದ್ದಕ್ಕೆ ಮಾಲೀಕನ ಮೇಲೆ ಬಿತ್ತು ಕೇಸ್

    ಚಂಡೀಗಢ: ನೆರೆ ಮನೆಯ ಬಾಲಕನಿಗೆ ನಾಯಿ ಕಚ್ಚಿದ್ದಕ್ಕೆ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಚಂಡೀಗಢದ ಶಿವಾಲಿಕ್ ಅವೆನ್ಯೂ ಪ್ರದೇಶದ ನಿವಾಸಿ ಅಮರಿಂದರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಮರಿಂದರ್ ಪಕ್ಕದ ಮನೆಯ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮರಿಂದರ್ ಸಾಕಿದ ಲಾಬ್ರಡರ್ ನಾಯಿ ನನ್ನ ಮಗ ರೆಹತ್‍ಪ್ರೀತ್(6)ಗೆ ಕಚ್ಚಿ ತೀವ್ರ ಗಾಯಗೊಳಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಶನಿವಾರ ಮನೆಯ ಮುಂದೆ ನನ್ನ ಮಗ ರೆಹತ್‍ಪ್ರೀತ್ ಆಟವಾಡುತ್ತಿದ್ದನು. ಈ ವೇಳೆ ಅಮರಿಂದರ್ ತಾನು ಸಾಕಿದ್ದ 1 ಲಾಬ್ರಡರ್ ಹಾಗೂ 1 ಪಿಟ್‍ಬುಲ್ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದನು. ಆಗ ಏಕಾಏಕಿ ಲಾಬ್ರಡರ್ ನಾಯಿ ನನ್ನ ಮಗನ ಮೇಲೆ ದಾಳಿ ಮಾಡಿತು. ಆತನ ಕಾಲು ಹಾಗೂ ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿತು ಎಂದು ಆರೋಪಿಸಿದ್ದಾರೆ.

    ತಕ್ಷಣ ಅಮರಿಂದರ್ ಕೂಡ ಮಗನ ರಕ್ಷಣೆಗೆ ಬಂದು ನಾಯಿಯನ್ನು ಎಳೆದುಕೊಂಡು ಹೋದ. ಬಳಿಕ ನಾನು ತಕ್ಷಣ ಮಗನನ್ನು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದೆ. ಅಮರಿಂದರ್ ನಿರ್ಲಕ್ಷ್ಯ ತೋರಿ, ನಾಯಿಯ ಚೈನ್ ಬಿಗಿಯಾಗಿ ಹಿಡಿದುಕೊಳ್ಳದೆ ವಾಕಿಂಗ್ ಬಂದಿದ್ದನು. ಆದ್ದರಿಂದ ನಾಯಿ ಆತನಿಂದ ಬಿಡಿಸಿಕೊಂಡು ಏಕಾಏಕಿ ಮಗನ ಮೇಲೆ ದಾಳಿ ಮಾಡಿತು ಎಂದು ಬಾಲಕನ ತಂದೆ ಆರೋಪಿಸಿದ್ದು, ಬುಧವಾರ ಅಮರಿಂದರ್ ವಿರುದ್ಧ ದೂರು ನೀಡಿದ್ದಾರೆ.

    ಈ ಸಂಬಂಧ ಪೊಲೀಸರು ಅಮರಿಂದರ್ ವಿರುದ್ಧ ಐಪಿಸಿ ಸೆಕ್ಷನ್ 323, 28 ಮತ್ತು 506 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆಗಳು ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ದೋರಣೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದೆ.

  • ನಾಯಿಗೆ ಬೈದ ವೃದ್ಧನನ್ನು ಹಿಗ್ಗಾಮುಗ್ಗಾ ಥಳಿಸಿದ ಮಾಲೀಕ

    ನಾಯಿಗೆ ಬೈದ ವೃದ್ಧನನ್ನು ಹಿಗ್ಗಾಮುಗ್ಗಾ ಥಳಿಸಿದ ಮಾಲೀಕ

    ಬೆಂಗಳೂರು: ತನ್ನ ಮನೆಯ ನಾಯಿಗೆ ವೃದ್ಧ ಅವಾಚ್ಯ ಪದ ಬಳಸಿ ಬೈದನೆಂದು ಮಾಲೀಕ ಸಿಟ್ಟಿಗೆದ್ದು ಆತನ ಮೇಲೆ ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಲಗ್ಗೆರೆಯ ಚೌಡೇಶ್ವರಿನಗರದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನನ್ನ ನೋಡಿ ನಾಯಿ ಬೊಗಳಿತ್ತು. ಇದರಿಂದ ಕೋಪಗೊಂಡ ವೃದ್ಧ ನಾಯಿಯನ್ನು ನೋಡಿ ಅವಾಚ್ಯ ಪದಗಳಿಂದ ಬೈದಿದ್ದರು. ಇದನ್ನು ಕಂಡ ನಾಯಿ ಮಾಲೀಕ ವೃದ್ಧನ ಜೊತೆ ಜಗಳಕ್ಕಿಳಿದಿದ್ದು, ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲೇ ಪರಸ್ಪರ ಕಿತ್ತಾಡಿದ್ದಾರೆ.

    ವಯಸ್ಸಾಗಿದೆ ಎನ್ನುವುದನ್ನು ನೋಡದೇ ವೃದ್ಧನಿಗೆ ನಾಯಿ ಮಾಲೀಕ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಮಧ್ಯ ಪ್ರವೇಶಿಸಿದ್ದರಿಂದ ಬೀದಿ ಗಲಾಟೆ ಅಂತ್ಯಕಂಡಿದೆ.