ಬಿಗ್‌ಬಾಸ್ (Bigg Boss Kannada 12) ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿದ್ದ ಸತೀಶ್ (Satish) ಈಗ ಎಲಿಮಿನೇಶನ್ ಆಗುವ ಮೂಲಕ ಹೊರಬಂದಿದ್ದಾರೆ. ವೇದಿಕೆಯಲ್ಲೇ ಈ ಕಾರ್ಯಕ್ರಮಕ್ಕಾಗಿ 25 ಲಕ್ಷದ ಬಟ್ಟೆ ಖರೀದಿಸಿರುವುದಾಗಿ ಸತೀಶ್ ಹೇಳಿದ್ದರು. ಹಾಗಾದರೆ ಸ್ಪರ್ಧಿಯಾಗಿ ಒಳ ಹೋಗಲು ಅದೆಷ್ಟು ಸಂಭಾವನೆ ಪಡೆದಿರಬಹುದು ಅನ್ನೋ ಕುತೂಹಲ ಸಹಜ. ಆದರೆ, ‘ಪಬ್ಲಿಕ್ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಡಾಗ್ ಸತೀಶ್, ಬಿಗ್‌ಬಾಸ್ ತಮಗೆ ನೀಡಿರುವ ಸಂಭಾವನೆ ವಿಚಾರ ಬಿಚ್ಚಿಟ್ಟಿದ್ದಾರೆ. ಇದುವರೆಗೂ ಬಿಗ್‌ಬಾಸ್ ಕಾರ್ಯಕ್ರಮದಿಂದ ತಮಗೆ 1 ರೂಪಾಯಿ ಹಣ ತಮಗೆ ಬಂದಿಲ್ಲ ಅನ್ನೋದಾಗಿ ಹೇಳಿದ್ದಾರೆ.
ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೋಗುವ ವೇಳೆ ಪ್ರತಿ ಸ್ಪರ್ಧಿಯೂ ಒಂದೊಂದು ಮೊತ್ತದ ಸಂಭಾವನೆ ಪಡೆದಿರುತ್ತಾರೆ. ಪ್ರತಿ ವಾರವೂ ಅವರಿಗೆ ಹಣ ಸಂದಾಯವಾಗುತ್ತದೆ. ಆದರೆ, ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವ ಪೂರ್ವದಲ್ಲೂ ಅಡ್ವಾನ್ಸ್ ಹಣ ಹಾಗೂ ಬಳಿಕವೂ ತಮಗೆ ಹಣ ಬಂದಿಲ್ಲ ಎಂದಿದ್ದಾರೆ ಸತೀಶ್. ಇದನ್ನೂ ಓದಿ: 100 ಕೋಟಿ ನಾಯಿ ಲಾಂಚ್ ಮಾಡ್ತೀನಿ- ಸವಾಲೆಸೆದ ಬಿಗ್‌ಬಾಸ್ ಸ್ಪರ್ಧಿ ಸತೀಶ್
‘ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗಿಲ್ಲ. ನಿಮಗೆ ಹಣ ಟ್ರಾನ್ಸ್‌ಫರ್ ಆಗುತ್ತಿಲ್ಲ ಎಂದು ಟೀಮ್ ಹೇಳಿತ್ತು. ಆಗ ನಾನು ಹಣವನ್ನ ಕೊಡಿ ಅಂತ ನಿಮ್ಮನ್ನು ಕೇಳಿದ್ನಾ ಎಂದೆ. ನನಗೆ ಹಣ ಮುಖ್ಯವಲ್ಲ, ನನ್ನ ಟರ್ನ್ವೋವರ್ ಚೆನ್ನಾಗಿದೆ. ನನಗೆ ಜನರ ಮುಂದೆ ಗುರುತಿಸಿಕೊಳ್ಳುವುದು ಮುಖ್ಯ. ವೇದಿಕೆ ಮುಖ್ಯವಾಗಿತ್ತು. ನಾನು ಒಂದು ಸಿನಿಮಾ ಕಾರ್ಯಕ್ರಮಕ್ಕೆ ನಾಯಿ ಹಿಡಿದುಕೊಂಡು ಹೋದ್ರೆ ಸಾಕು ಲಕ್ಷ ಲಕ್ಷ ಹಣ ಕೊಡ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಇರೋವ್ರೆಲ್ಲ ಗೆಸ್ಟ್ ಆಗಿ ಹೋದ್ರೆ ಮೂವತ್ತೋ ನಲವತ್ತೋ ಸಾವಿರ ಕೊಡ್ತಾರಂತೆ’ ಎಂದಿದ್ದಾರೆ.
ಭಾರತದಲ್ಲಿ ಜನ ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೇ ಭಾವಿಸಿ ಸಾಕುತ್ತಾರೆ. ಮನುಷ್ಯರಂತೆ ಹೆಸರಿಟ್ಟು, ಮಗನೇ ಅಂತ ಕರೆಯೋದನ್ನ ನಾವೆಲ್ಲ ನೋಡಿದ್ದೇವೆ ಅಲ್ವಾ..?! ಅಷ್ಟೊಂದು ಮುದ್ದಾಗಿ ಸಾಕು ಪ್ರಾಣಿಗಳನ್ನು ನಮ್ಮ ಜನ ನೋಡಿಕೊಳ್ಳುತ್ತಾರೆ. ಇಷ್ಟೊಂದು ಮುದ್ದಾಗಿ ನೋಡಿಕೊಳ್ಳುವ ಪ್ರಾಣಿಗಳ ಆರೋಗ್ಯ ಸಹ ಮುಖ್ಯ ಅಲ್ವಾ..? ಇದೇ ಕಾರಣಕ್ಕೆ ಕೇಂದ್ರ ಸರ್ಕಾರ (Central Government) ಸಾಕುಪ್ರಾಣಿಗಳಿಗಾಗಿ ಬ್ಲಡ್ ಬ್ಯಾಂಕ್ (Pet Blood Banks), ರಕ್ತದ ಲಭ್ಯತೆಯ ಬಗ್ಗೆ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡಲು ಚಿಂತನೆ ನಡೆಸುತ್ತಿದೆ.
ಅಂದ ಹಾಗೆ ಭಾರತದಲ್ಲಿ (India) ಇತ್ತೀಚೆಗೆ ಜನ ಅತೀ ಹೆಚ್ಚು ಸಾಕುಪ್ರಾಣಿಗಳನ್ನು ಸಾಕುತ್ತಿದ್ದಾರೆ. ಸುಮಾರು 53.6 ಕೋಟಿ ಜಾನುವಾರುಗಳು ಭಾರತದಲ್ಲಿವೆ! ಅವುಗಳಿಗೆ ಅಗತ್ಯ ಚಿಕಿತ್ಸೆಗಾಗಿ, ವ್ಯವಸ್ಥಿತವಾದ ಪ್ರಮಾಣೀಕೃತ ರಕ್ತನಿಧಿಗಳು ಇಲ್ಲ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಸಾಕು ಪ್ರಾಣಿಗಳಿಗಾಗಿ ಸುಲಭವಾಗಿ ಹಾಗೂ ಪ್ರಮಾಣಿಕೃತವಾದ ರಕ್ತನಿಧಿಗಳನ್ನು ಸ್ಥಾಪಿಸಿ, ಅದರ ಮಾಹಿತಿಗಳು, ರಕ್ತದ ಲಭ್ಯತೆ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಮುಂದಾಗಿದೆ. ಇದಕ್ಕಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ (Department of Animal Husbandry & Dairying under the Ministry of Fisheries) ಸಾರ್ವಜನಿಕರ ಅಭಿಪ್ರಾಯವನ್ನೂ ಸಹ ಕೇಳಿದೆ. ಅಲ್ಲದೇ ರಕ್ತದಾನಕ್ಕೆ ಪ್ರಾಣಿಗಳಿಗೆ ಇರಬೇಕಾದ ಅರ್ಹತೆ ಹಾಗೂ ಮಾನದಂಡವನ್ನು ಮಾರ್ಗಸೂಚಿಯಲ್ಲಿ ಸರ್ಕಾರ ಪ್ರಕಟಿಸಿದೆ.
ಸಾಕುಪ್ರಾಣಿಗಳಿಗೆ ರಕ್ತ ನಿಧಿಯ ಅಗತ್ಯವೇನು?
2019 ರಲ್ಲಿ ನಡೆಸಿದ 20ನೇ ಜಾನುವಾರು ಜನಗಣತಿಯ ಪ್ರಕಾರ ಭಾರತದಲ್ಲಿ 53.6 ಕೋಟಿ ಜಾನುವಾರುಗಳಿವೆ. ಈಗ ಅದು ಮತ್ತಷ್ಟು ಜಾಸ್ತಿಯಾಗಿರುವ ಸಾಧ್ಯತೆ ಇದೆ. ಸಾಕು ಪ್ರಾಣಿಗಳಲ್ಲಿ ದನಗಳು, ಎಮ್ಮೆಗಳು, ಮೇಕೆಗಳು ಮತ್ತು ಕುರಿಗಳು, ಹಾಗೆಯೇ ಕುದುರೆಗಳು, ಕತ್ತೆಗಳು, ಒಂಟೆಗಳು ಮತ್ತು ಹಂದಿಗಳಂತಹ ಪ್ರಾಣಿಗಳು ಸೇರಿವೆ.
ಜಾನುವಾರುಗಳು ದೇಶದ ಕೃಷಿ ಆರ್ಥಿಕತೆ ಮತ್ತು ಗ್ರಾಮೀಣ ಜನರ ಉದ್ಯೋಗದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ವಲಯವು ಕೃಷಿ ವಲಯದ ಸುಮಾರು 30% ಆದಾಯ ನೀಡುತ್ತದೆ. ಇದೇ ಕಾರಣಕ್ಕೆ ಸಾಕು ಪ್ರಾಣಿಗಳ ಆರೋಗ್ಯ ಸಹ ಮುಖ್ಯವಾಗಿದೆ. ಅವುಗಳಿಗೆ ಉಂಟಾಗುವ ರಕ್ತ ಹೀನತೆ, ಗಾಯ, ರಕ್ತ ಹೆಪ್ಪುಗಟ್ಟುವಿಕೆ, ಸಾಂಕ್ರಾಮಿಕ ರೋಗ, ಅಸ್ವಸ್ಥತೆಯ ಸಂದರ್ಭದಲ್ಲಿ ಚಿಕಿತ್ಸೆಗಾಗಿ ರಕ್ತದ ಅಗತ್ಯ ಇರುತ್ತದೆ.
ಯಾವ ಸಾಕು ಪ್ರಾಣಿಗಳಲ್ಲಿ ಎಷ್ಟು ರಕ್ತ ಇರುತ್ತೆ?
ಪ್ರಾಣಿಗಳಲ್ಲಿ ರಕ್ತದ ಪ್ರಮಾಣ ದೇಹದ ತೂಕದ 7% ರಿಂದ 9% ವರೆಗೆ ಇರುತ್ತದೆ. ರಕ್ತದ ಪ್ರಮಾಣವು ಈ ಮಟ್ಟಕ್ಕಿಂತ ಕಡಿಮೆಯಾದಾಗ ರಕ್ತ ನೀಡುವ ಅಗತ್ಯ ಇರುತ್ತದೆ.
ದನಗಳು ದೇಹದ ತೂಕದ ಪ್ರತಿ ಕೆಜಿಗೆ 55 ml ರಕ್ತವನ್ನು ಹೊಂದಿರುತ್ತವೆ. ಸರಾಸರಿ 300 ಕೆಜಿ ತೂಕದ ದನ 16.5 ಲೀಟರ್ ರಕ್ತವನ್ನು ಹೊಂದಿರುತ್ತದೆ. ನಾಯಿಗಳು 86 ml/kg, ಕುದುರೆಗಳು 76 m;/kg, ಮೇಕೆಗಳು, ಕುರಿಗಳು, ಹಂದಿಗಳು 66 ml/kg ಮತ್ತು, ಹಂದಿಗಳು 65 ml /kg ಮತ್ತು ಬೆಕ್ಕುಗಳು 55ml / kg, ರಕ್ತದ ಪ್ರಮಾಣವನ್ನು ಹೊಂದಿರುತ್ತವೆ.
ಪ್ರಾಣಿಗಳಲ್ಲೂ ರಕ್ತದ ಗುಂಪುಗಳಿವೆ
ಮಾನವರಂತೆ, ಪ್ರಾಣಿಗಳಲ್ಲಿ ಹೆಚ್ಚಿನ ಸಂಖ್ಯೆಯ ರಕ್ತ ಗುಂಪುಗಳಿವೆ, ದನಗಳಲ್ಲಿ 11, ನಾಯಿಗಳಲ್ಲಿ 9, ಕುದುರೆಗಳಲ್ಲಿ 8 ಮತ್ತು ಬೆಕ್ಕುಗಳಲ್ಲಿ 4 ರಕ್ತ ಗುಂಪುಗಳಿವೆ.
ಪ್ರಾಣಿಗಳ ರಕ್ತ ದಾನಕ್ಕಿರೋ ಮಾನದಂಡಗಳೇನು?
ರಕ್ತ ದಾನ ಮಾಡುವ ಪ್ರಾಣಿಗಳು ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಬೇಕು. ಅವುಗಳಲ್ಲಿ ಅನಾರೋಗ್ಯದ ಸಮಸ್ಯೆಗಳಿರಬಾರದು. ಉಣ್ಣೆ, ಇನ್ನಿತರೆ ಕೀಟಗಳ ಸಮಸ್ಯೆಯಿಂದ ಅವು ಮುಕ್ತವಾಗಿರಬೇಕು.
ವಯಸ್ಸು & ತೂಕ
ನಾಯಿಗಳು 1 ರಿಂದ 8 ವರ್ಷ ವಯಸ್ಸಿನದ್ದಾಗಿರಬೇಕು, ಕನಿಷ್ಠ 25 ಕೆಜಿ ತೂಕ ಹೊಂದಿರಬೇಕು. ಬೆಕ್ಕುಗಳು 1 ರಿಂದ 5 ವರ್ಷ ವಯಸ್ಸಿನವಗಿರಬೇಕು, ಕನಿಷ್ಠ 4 ಕೆಜಿ ತೂಕ ಹೊಂದಿರಬೇಕು. ಅವುಗಳಿಗೆ ಬೊಜ್ಜು ಇರಬಾರದು.
ವ್ಯಾಕ್ಸಿನೇಷನ್
ದಾನಿ ಪ್ರಾಣಿಗೆ ವಿಶೇಷವಾಗಿ ರೇಬೀಸ್ ನಿರೋಧಕ ಲಸಿಕೆ ಹಾಕಿಸಬೇಕು. ನಿಯಮಿತವಾಗಿ ಜಂತುಹುಳು ನಿವಾರಣ ಔಷಧಿ ನೀಡಿರಬೇಕು. ಹೆಣ್ಣು ದಾನಿ ಪ್ರಾಣಿಗಳು ಗರ್ಭ ಧರಿಸಿರಬಾರದು. ಮರಿಗಳಿಗೆ ಹಾಲುಣಿಸುವ ಪ್ರಾಣಿಗಳಾಗಿರಬಾರದು.
ಎಷ್ಟು ದಿನಕ್ಕೊಮ್ಮೆ ದಾನ ಮಾಡ್ಬಹುದು?
ನಾಯಿಗಳು ಪ್ರತಿ 4-6 ವಾರಗಳಿಗೊಮ್ಮೆ, ಬೆಕ್ಕುಗಳು ಪ್ರತಿ 8-12 ವಾರಗಳಿಗೊಮ್ಮೆ ರಕ್ತ ದಾನಕ್ಕೆ ಅರ್ಹವಾಗಿವೆ.
ಪಶುವೈದ್ಯಕೀಯ ರಕ್ತನಿಧಿಗಳು ಎಲ್ಲಿವೆ?
ಪಶುವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು, ಉಲ್ಲೇಖಿತ ಆಸ್ಪತ್ರೆಗಳು ಮತ್ತು ಪಾಲಿಕ್ಲಿನಿಕ್‌ಗಳು, ದೊಡ್ಡ ಪಶುವೈದ್ಯಕೀಯ ರೋಗನಿರ್ಣಯ ಕೇಂದ್ರಗಳು ಮತ್ತು ಸರ್ಕಾರದಿಂದ ನಿರ್ವಹಿಸಲ್ಪಡುವ ಬಹು-ವಿಶೇಷ ಪ್ರಾಣಿ ಆಸ್ಪತ್ರೆಗಳಲ್ಲಿ ಪಶುವೈದ್ಯಕೀಯ ರಕ್ತನಿಧಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಪಶುವೈದ್ಯಕೀಯ ರಕ್ತನಿಧಿಗಳು 24/7 ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತದೆ.
ಡಿಜಿಟಲ್ ತಂತ್ರಜ್ಞಾನ ಬಳಕೆ
* ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸಂಯೋಜಿತ ದಾನಿಗಳ ನೋಂದಣಿ ಮಾಡಲಾಗುತ್ತದೆ. ಇದು ಪ್ರಾಣಿಗಳ ಜಾತಿಗಳು, ತಳಿ, ಸ್ಥಳ ಮತ್ತು ರಕ್ತದ ವಿಧದ ಮಾಹಿತಿಯನ್ನು ಒಳಗೊಂಡಿರುತ್ತದೆ.
* ರಕ್ತನಿಧಿಯಲ್ಲಿ ಘಟಕಗಳ ನಕ್ಷೆ, ನೈಜ-ಸಮಯದ ದಾಸ್ತಾನು, ನಿರ್ವಹಣಾ ವ್ಯವಸ್ಥೆಯ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ.
* ತುರ್ತು ಸಂದರ್ಭಗಳಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯಗಳು, ಆಸ್ಪತ್ರೆಗಳು ಮತ್ತು ದಾನಿಗಳನ್ನು ಸಂಪರ್ಕಿಸಲು ಸಹಾಯವಾಣಿ ಮತ್ತು ಆನ್‌ಲೈನ್ ಪೋರ್ಟಲ್ ವ್ಯವಸ್ಥೆ ಮಾಡಲಾಗುತ್ತದೆ.
* ಭವಿಷ್ಯದಲ್ಲಿ ದಾನ ಮಾಡುವ – ಸ್ವೀಕರಿಸುವವರ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವ ಗುರಿ ಇದೆ.
ಜಾನುವಾರುಗಳಿಂದ ಮಾಡಿದ ರಕ್ತದಾನಕ್ಕೆ ಹಣ ಪಡೆಯಬಹುದೇ?
ಸಾಕುಪ್ರಾಣಿಗಳ ಮಾಲೀಕರು ಅಥವಾ ಜಾನುವಾರು ಮಾಲೀಕರಿಗೆ ಪ್ರಾಣಿಗಳ ರಕ್ತದಾನಕ್ಕಾಗಿ ಹಣ ನೀಡಲಾಗುವುದಿಲ್ಲ. ಸಾಕುಪ್ರಾಣಿ ಮಾಲೀಕರು ಅಥವಾ ಜಾನುವಾರು ಸಾಕಣೆದಾರರಿಗೆ ಯಾವುದೇ ಹಣಕಾಸಿನ ಪ್ರೋತ್ಸಾಹವನ್ನು ನೀಡಬಾರದು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಪ್ರತಿ ದಾನಕ್ಕೂ ಮಾಲೀಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ.
ಬೆಂಗಳೂರು: ರಸ್ತೆಯಲ್ಲಿ ಮಲಗಿದ್ದ ನಾಯಿಯ (Dog) ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ನಡೆದಿದೆ.
ಜುಲೈ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಯ ಪಕ್ಕದ ಜಾಗದಲ್ಲಿ ನಾಯಿ ತನ್ನ ಪಾಡಿಗೆ ಮಲಗಿತ್ತು. ಈ ವೇಳೆ ಅಲ್ಲಿಗೆ ಬಂದ ಕಾರು, ಸ್ವಲ್ಪ ಹೊತ್ತು ಮುಂದೆಯೇ ನಿಂತಿತ್ತು. ನಂತರ ಚಾಲಕ ಏಕಾಏಕಿ ನಾಯಿಯ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಇದರಿಂದ ನಾಯಿ ಗಂಭೀರವಾಗಿ ಗಾಯಗೊಂಡಿದೆ. ಇದನ್ನೂ ಓದಿ: ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ
ಉದ್ದೇಶಪೂರ್ವಕವಾಗಿಯೇ ನಾಯಿಯ ಮೇಲೆ ಕಾರು ಹತ್ತಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶ್ವಾನಪ್ರಿಯರು ಸಿಸಿಟಿವಿ ಸಮೇತ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕಾರಿನ ಚಾಲಕನ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಜನಕ್ಕೆ ಆಟೋ ದರ ಏರಿಕೆ ಶಾಕ್ – ಕನಿಷ್ಠ ದರ 36 ರೂ.ಗೆ ಏರಿಕೆ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಮೇಘಸ್ಫೋಟ ಸಂಭವಿಸಿ ಸುಮಾರು 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದುರಂತದ ನಡುವೆ ಮಂಡಿ (Mandi) ಜಿಲ್ಲೆಯ ಹಳ್ಳಿಯೊಂದರಲ್ಲಿ ಶ್ವಾನವೊಂದು (Dog) ಬೊಗಳಿದ್ದರಿಂದ 20 ಕುಟುಂಬಗಳ 67 ಜನರು ಕೊನೆ ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಜೂನ್ 30 ರಂದು ಮಧ್ಯರಾತ್ರಿ ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿತ್ತು. ಈ ಗ್ರಾಮದ ನರೇಂದ್ರ ಅವರ ನಿವಾಸದ ಎರಡನೇ ಮಹಡಿಯಲ್ಲಿ ಮಲಗಿದ್ದ ಸಾಕು ನಾಯಿ ಇದ್ದಕ್ಕಿದ್ದಂತೆ ಬೊಗಳಲು ಆರಂಭಿಸಿದೆ.
ರಾತ್ರಿ ಇಷ್ಟೊಂದು ಬೊಗಳದ ನಾಯಿ ಯಾಕೆ ಈ ಪರಿ ಬೊಗಳುವುದನ್ನು ನೋಡಿ ಅಚ್ಚರಿಗೊಂಡು ನರೇಂದ್ರ ಎಚ್ಚರಗೊಂಡಿದ್ದಾರೆ. ನಂತರ ನಾಯಿ ಬೊಗಳಿದ ಜಾಗದ ಬಳಿ ಹೋದಾಗ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿದ್ದನ್ನು ನೋಡಿದ್ದಾರೆ. ನೋಡುತ್ತಿರುವಾಗಲೇ ಆ ಬಿರುಕಿನ ಮೂಲಕ ನೀರು ಮನೆ ಒಳಗಡೆ ಹರಿಯಲು ಆರಂಭಿಸಿತ್ತು. ಇದನ್ನೂಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ –ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ
ನರೇಂದ್ರ ಅವರು ನಂತರ ಸಮೀಪದಲ್ಲಿ ಇದ್ದ ನೆರೆ ಹೊರೆಯ ನಿವಾಸಿಗಳನ್ನು ಎಬ್ಬಿಸಿ ಮನೆಯಿಂದ ಹೊರ ಬಂದು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಜೋರು ಮಳೆ (Rain) ಸುರಿಯುತ್ತಲೇ ಇತ್ತು. ಕೂಡಲೇ ಗ್ರಾಮಸ್ಥರು ಮನೆಯನ್ನು ತೊರೆದು ಓಡಿದ್ದಾರೆ. ಮನೆ ತೊರೆದ ಕೆಲ ಸಮಯದಲ್ಲಿ ಈ ನಿವಾಸಿಗಳು ಮಲಗಿದ್ದ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.
ಗ್ರಾಮವು ಭೂಕುಸಿತಕ್ಕೆ ಒಳಗಿದ್ದು ಸುಮಾರು ಒಂದು ಡಜನ್ ಮನೆಗಳು ನೆಲಸಮವಾಗಿದೆ. ಗ್ರಾಮದಲ್ಲಿ ಈಗ ಕೇವಲ ನಾಲ್ಕೈದು ಮನೆಗಳು ಮಾತ್ರ ಗೋಚರಿಸುತ್ತಿವೆ. ಉಳಿದವು ಭೂಕುಸಿತದ ಅವಶೇಷಗಳ ಅಡಿಯಲ್ಲಿವೆ.
ಬದುಕುಳಿದವರು ಕಳೆದ 7 ದಿನಗಳಿಂದ ತ್ರಿಯಂಬಲ ಗ್ರಾಮದಲ್ಲಿರುವ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ನಾಯಿ ಸರಿಯಾದ ಸಮಯದಲ್ಲಿ ಬೊಗಳಿದ್ದರಿಂದ ಸುಮಾರು 67 ಮಂದಿ ಪಾರಾಗಿದ್ದಾರೆ.
ಬ್ಯಾಂಕಾಕ್: ಥಾಯ್ಲೆಂಡ್‍ನಲ್ಲಿ (Thailand) ಮನುಷ್ಯ ಪ್ರಪಂಚದ ಅರಿವೇ ಇಲ್ಲದೇ, ನಾಯಿಗಳ (Dog) ಜೊತೆಯೇ ಬೆಳೆದು ಮಾತನಾಡಲು ಬಾರದೇ ಸಂವಹನಕ್ಕಾಗಿ ನಾಯಿಯಂತೆಯೇ ಬೊಗಳುತ್ತಿದ್ದ ಬಾಲಕನೊಬ್ಬನನ್ನು (Boy) ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಬಾಲಕನ ತಾಯಿ (Mother ) ಹಾಗೂ ಆತನ ಸಹೋದರ ಡ್ರಗ್ಸ್ ಚಟಕ್ಕೆ ಬಿದ್ದಿದ್ದರು. ಇದರಿಂದ ಬಾಲಕನನ್ನು ನಿರ್ಲಕ್ಷಿಸಿ, ಸಮಾಜದಲ್ಲಿ ಬೆರೆಯಲು ಬಿಡದೇ, ಮನೆಯಲ್ಲಿದ್ದ 6 ನಾಯಿಗಳ ಜೊತೆ ಬಿಟ್ಟಿದ್ದರು. ಇದರ ಪರಿಣಾಮ ಬಾಲಕ ಮಾತನಾಡಲು ಕಲಿತಿಲ್ಲ. ಆತ ನಾಯಿಯಂತೆಯೇ ಬೊಗಳಿ ಸಂವಹನ ನಡೆಸುತ್ತಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ
ಶಾಲೆಯ ಪ್ರಾಂಶುಪಾಲರು ಮತ್ತು ಸ್ಥಳೀಯ ಕಾರ್ಯಕರ್ತರು ಬಾಲಕನ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಅಧಿಕಾರಿಗಳು, ಜೂ.30 ರಂದು ಥಾಯ್ಲೆಂಡ್‍ನ ಉತ್ತರಾದಿತ್ ಪ್ರಾಂತ್ಯದ ಲ್ಯಾಪ್ಲೇ ಜಿಲ್ಲೆಯಲ್ಲಿ ಬಾಲಕನನ್ನು ರಕ್ಷಿಸಿದ್ದಾರೆ. ರಕ್ಷಣೆ ವೇಳೆ, ಆತ ಮಾತನಾಡದೇ ನಾಯಿಯಂತೆಯೇ ಬೊಗಳುತ್ತಿದ್ದ ಎಂದು ಪವಿನಾ ಹಾಂಗ್‌ಸಕುಲ್ ಫೌಂಡೇಶನ್ ಫಾರ್ ಚಿಲ್ಡ್ರನ್ & ವುಮೆನ್‌ನ ಅಧ್ಯಕ್ಷೆ ಪವಿನಾ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯರು, ಬಾಲಕನ ತಾಯಿ ಆರು ನಾಯಿಗಳ ಜೊತೆ ಅವನನ್ನು ಬಿಟ್ಟು, ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದಳು. ತಾಯಿಯ ವರ್ತನೆಯಿಂದ ಬೇಸತ್ತ ನೆರೆಹೊರೆಯವರು ತಮ್ಮ ಮಕ್ಕಳು ಅವನೊಂದಿಗೆ ಆಟವಾಡುವುದನ್ನು ತಡೆದರು. ಇದರಿಂದ ಆತ ಸಾಮಾಜಿಕವಾಗಿ ಬೆರೆಯಲಿಲ್ಲ ಮತ್ತು ಮಾತನಾಡಲು ಕಲಿಯಲಿಲ್ಲ. ನಾಯಿಗಳ ಜೊತೆಗೆ ಇದ್ದು ಅವುಗಳಂತೆ ವರ್ತಿಸಲು ಶುರುಮಾಡಿದ್ದ ಎಂದು ತಿಳಿಸಿದ್ದಾರೆ.
ಬಾಲಕನಿಗೆ ಅಧಿಕಾರಿಗಳು ʻಬಾಯ್ ಎʼ ಎಂದು ಹೆಸರಿಟ್ಟಿದ್ದಾರೆ. ಅವನ ತಾಯಿ ಮತ್ತು ಅವನ 23 ವರ್ಷದ ಸಹೋದರ ಇಬ್ಬರೂ ಮಾದಕ ದ್ರವ್ಯ ಸೇವನೆ ಮಾಡುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇನ್ನೂ ಬಾಲಕನ ತಾಯಿ ಅವನ ಶಿಕ್ಷಣಕ್ಕಾಗಿ ಸರ್ಕಾರದಿಂದ 400 ಬಹ್ತ್ ನೆರವು ಪಡೆದಿದ್ದಳು. ಆದರೆ ಅವನನ್ನು ಶಾಲೆಗೆ ಸೇರಿಸಿರಲಿಲ್ಲ. ಒಂದು ದಿನ ಮಾತ್ರ ಶಾಲೆಗೆ ಹೋಗಿದ್ದ, ಆದರೆ ಮತ್ತೆ ಎಂದೂ ಶಾಲೆ ಕಡೆ ಮುಖಮಾಡಿರಲಿಲ್ಲ ಎಂದು ವರದಿಯಾಗಿದೆ.
ಬೆಂಗಳೂರು: ಮಹಿಳೆಯೊಬ್ಬಳು ತಾನೇ ಸಾಕಿದ್ದ ನಾಯಿಗೆ ಚಿತ್ರಹಿಂಸೆ ಕೊಟ್ಟು, ಬಳಿಕ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಮಹದೇವಪುರ (Mahadevpura) ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ಆರೋಪಿ ಮಹಿಳೆಯನ್ನು ತ್ರಿಪರ್ಣ ಪಾಯ್ಕ್ ಎಂದು ಗುರುತಿಸಲಾಗಿದೆ. ತಾನೇ ಸಾಕಿ, ಸಲುಹಿದ್ದ ನಾಯಿಗೆ ಚಿತ್ರಹಿಂಸೆ ಕೊಟ್ಟು, ಬರ್ಬರವಾಗಿ ಕೊಲೆ ಮಾಡಿ, ವಿಕೃತಿ ಮೆರೆದಿದ್ದಾಳೆ. ಮೂಕ ಶ್ವಾನ ದಾರುಣವಾಗಿ ಪ್ರಾಣಬಿಟ್ಟಿದ್ದು, ಬಳಿಕ ಸತ್ತ ನಾಯಿಯೊಂದಿಗೆ ಎರಡು ದಿನ ಅಲ್ಲೇ ವಾಸವಾಗಿದ್ದಳು. ಎರಡು ಮೂರು ದಿನದ ಬಳಿಕ ಅಪಾರ್ಟ್ಮೆಂಟ್‌ನ ಫ್ಲ್ಯಾಟ್‌ನಿಂದ ದುರ್ವಾಸನೆ ಬಂದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದೇ ವಿಜಯೇಂದ್ರ: ಮತ್ತೆ ಗುಡುಗಿದ ಯತ್ನಾಳ್
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯನ್ನು ಮಹಿಳೆ ಸಾಯಿಸಿರುವುದು ಬೆಳಕಿಗೆ ಬಂದಿದ್ದು, ಆಕೆ ಹತ್ಯೆಗೈದ ರೀತಿಯನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.
ಕೂಡಲೇ ಪೊಲೀಸರು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಬಂದು ನಾಯಿಯ ಮೃತದೇಹವನ್ನು ತೆರವುಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ, ನಾಯಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರೋದು ತಿಳಿದು ಬಂದಿದೆ.
ಈ ಬಗ್ಗೆ ಬಿಬಿಎಂಪಿ (BBMP) ಅಧಿಕಾರಿಗಳು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಇನ್ನೂ ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಮನೆಯಲ್ಲಿದ್ದ ಮತ್ತೆರಡು ನಾಯಿಗಳನ್ನ ರಕ್ಷಣೆ ಮಾಡಿದ್ದಾರೆ.ಇದನ್ನೂ ಓದಿ: ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ
ಕಾರವಾರ: ಅಂಕೋಲದ (Ankola) ವ್ಯಕ್ತಿಯೊಬ್ಬರು ಸೈನ್ಯ (Indian Army) ಸೇರಿ ದೇಶ ಸೇವೆ ಮಾಡಬೇಕು ಎಂಬ ಹಂಬಲ ಈಡೇರದಿದ್ದಿದ್ದಕ್ಕೆ, ತಾವು ಸಾಕಿದ್ದ ಶ್ವಾನದ ಸಂತತಿಯನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಇಲ್ಲಿಯವರೆಗೆ ಅವರು 30ಕ್ಕೂ ಹೆಚ್ಚು ಶ್ವಾನಗಳನ್ನು ದೇಶದ ಭದ್ರತೆಗಾಗಿ ನೀಡಿದ್ದಾರೆ. ಇದೀಗ ಎರಡು ಮರಿಗಳು ಸಿಆರ್‌ಪಿಎಫ್ (CRPF) ತುಕಡಿಗೆ ಸೇರಲು ಸಿದ್ಧವಾಗಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಅಂಕೋಲ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ಅವರಿಗೆ ಸೇನೆಗೆ ಸೇರಬೇಕೆಂಬ ಬಯಕೆ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಅದಕ್ಕಾಗಿಯೇ ಅವರು ಸಾಕಿದ್ದ ನಾಯಿಗಳನ್ನೇ ಕಳೆದ ಹಲವು ವರ್ಷಗಳಿಂದ ಸೇನೆ ಹಾಗೂ ಪೊಲೀಸ್ ಇಲಾಖೆಗೆ ಒಪ್ಪಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 30ಕ್ಕೂ ಹೆಚ್ಚು ಶ್ವಾನಗಳನ್ನು ಅವರು ದೇಶದ ಭದ್ರತೆಗೆ ಒಪ್ಪಿಸಿದ್ದಾರೆ.
ಹವ್ಯಾಸಕ್ಕಾಗಿ ಕಳೆದ 25 ವರ್ಷಗಳಿಂದ ಹಲವು ತಳಿಯ ಶ್ವಾನಗಳನ್ನು ಸಾಕುತ್ತಾ ಬಂದಿದ್ದಾರೆ. ಈಗ ಇವರ ಬಳಿ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಐದು ಶ್ವಾನಗಳಿದ್ದು, ಇವುಗಳಲ್ಲಿ ಮೂರು ಹೆಣ್ಣು ,ಎರಡು ಗಂಡುಗಳಿವೆ. ಇವುಗಳ ಮರಿಗಳೆಲ್ಲವೂ ದೇಶಸೇವೆಗೆ ಮುಡಿಪಾಗಿಡಲಾಗಿದೆ. ಲೀಸಾ ಶ್ವಾನದ ಎರಡು ಮರಿಗಳನ್ನು ಬೆಂಗಳೂರಿನ ಸಿಆರ್‌ಪಿಎಫ್‌ನ ಡಾಗ್ ಬ್ರೀಡ್ ಸೆಂಟರ್‌ಗೆ ಕರೆದೊಯ್ಯಲಾಗುತ್ತಿದೆ. ಇಲ್ಲಿ ಒಂದು ವರ್ಷಗಳ ತರಬೇತಿ ನೀಡಿದ ನಂತರ ಮಾದಕ ವಸ್ತು ಪತ್ತೆ, ಬಾಂಬ್ ಪತ್ತೆ ಕಾರ್ಯಕ್ಕೆ ಇವುಗಳ ನಿಯೋಜನೆಯಾಗಲಿವೆ. ನಕ್ಸಲ್ ನಿಗ್ರಹ ಪಡೆಯಲ್ಲಿ ಈ ಶ್ವಾನದ ಮರಿಗಳು ಕಾರ್ಯ ನಿರ್ವಹಿಸಲಿದೆ.
ವರ ಮನೆಯಲ್ಲಿ ಸಾಕಿರುವ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಶ್ವಾನಗಳ ವಿಶೇಷವೇನು ಗೊತ್ತಾ? ಇವುಗಳಿಗೆ ಚಿರತೆಯ ವೇಗ, ಹದ್ದಿನ ಕಣ್ಣು, ಚಾಣಾಕ್ಷ ಬುದ್ಧಿ, ಎಂಟೆದೆ ಬಂಟನಂತ ದೈರ್ಯ! ಇವು ನೋಟದಲ್ಲೇ ಶತ್ರುಗಳ ಹುಟ್ಟಡಗಿಸುವ ಶಕ್ತಿ ಹೊಂದಿವೆ. ಮೊದಲ ಬಾರಿಗೆ ತಾವು ಸಾಕಿದ್ದ ಲೀಸಾ ಮತ್ತು ಟೈನಿ ಎಂಬ ಎರಡು ಶ್ವಾನಗಳ ಸಂಪೂರ್ಣ ಸಂತತಿಯನ್ನ ದೇಶ ಮತ್ತು ರಾಜ್ಯದ ಸೇವೆಗೆ ಮುಡಿಪಾಗಿರಿಸಿದ್ದಾರೆ. ಮೊದಲ ಬಾರಿ ಹುಟ್ಟಿದ ಟೈನಿ ಶ್ವಾನದ -8 ಲೀಸಾ ಶ್ವಾನದ 9 ಮರಿಗಳನ್ನು ಆರ್ಮಿಗಳಿಗೆ ಒಪ್ಪಿಸಿದ್ದಾರೆ. ಇದರ ಜೊತೆಗೆ 6 ವರ್ಷಗಳಲ್ಲಿ ಹುಟ್ಟಿದ 15 ಮರಿಗಳನ್ನು ರಾಜ್ಯದ ಪೊಲೀಸ್ ಇಲಾಖೆಗೆ ನೀಡಿದ್ದಾರೆ.
ಅಸ್ಸಾಂ ರೈಫಲ್ ತುಕಡಿಯಲ್ಲಿ ಇವರು ನೀಡಿದ 16 ಶ್ವಾನಗಳು ದೇಶ ಸೇವೆ ಮಾಡುತ್ತಿವೆ. ಬಾಂಬ್ ಪತ್ತೆಕಾರ್ಯ, ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇನ್ನೂ ರಾಜ್ಯ ಪೊಲೀಸ್ ಇಲಾಖೆಯ ಬೆಳಗಾವಿಯ ಬಾಂಬ್ ನಿಷ್ಕ್ರಿಯ ದಳದಲ್ಲಿರುವ ಇವರ ಮಾಯಾ ಎಂಬ ಶ್ವಾನವು ಎಕ್ಸ್ ಪೊಲೀಸಿವ್ ಟ್ರೇಡ್‌ನಲ್ಲಿ ಪ್ರಥಮ ಸ್ಥಾನಗಳಿಸಿದೆ. ಬೆಂಗಳೂರಿನ ವಿಮಾನ ನಿಲ್ದಾಣ, ರಾಜ್ಯದ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿತ್ತಿವೆ.
ಲೀಸಾ ಶ್ವಾನವು ಈಗ ಮೂರು ಮರಿಗಳನ್ನು ಹಾಕಿದ್ದು ಪಹಲ್ಗಾವ್ ದಾಳಿಯ ನಂತರ ಮರಿಗಳನ್ನು ಸಿಆರ್‌ಪಿಎಫ್‌ಗೆ ನೀಡಬೇಕು ಎಂಬ ಹಂಬಲದಲ್ಲಿ ರಾಘವೇಂದ್ರ ಭಟ್, ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಉತ್ತಮ ಶ್ವಾನದ ಹುಡುಕಾಟದಲ್ಲಿದ್ದ ಸಿಆರ್‌ಪಿಎಫ್ ಅಧಿಕಾರಿಗಳು ತಕ್ಷಣ ಇವರ ಮನೆಗೆ ಆಗಮಿಸಿ ಮರಿಗಳನ್ನು ತಪಾಸಣೆ ಮಾಡಿದಾಗ ಉತ್ತಮ ಆರೋಗ್ಯ, ಚುರುಕುತನದಿಂದ ಕೂಡಿದ ಬಲಶಾಲಿಯಾದ ಬೆಲ್ಝಿಯಂ ಮೆಲಿನೋಯ್ಸ್‌ನ ಎರಡು ಮರಿಗಳು ಆಯ್ಕೆಯಾಗಿದ್ದು ಉಚಿತವಾಗಿ ದೇಶಸೇವೆಗಾಗಿ ಈ ಮರಿಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಸೈನ್ಯದ ಪ್ರತಿ ತುಕಡಿಗೆ 14 ಶ್ವಾನಗಳ ಅವಶ್ಯಕತೆ ಇರುತ್ತದೆ. ಇವುಗಳು ಯೋಧರ ಜೀವ ರಕ್ಷಣೆಯ ಹೊಣೆ ಹೊರುವ ಜೊತೆ ಬಾಂಬ್ ಪತ್ತೆ ಕಾರ್ಯ, ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಬೆಳಗಾವಿ: ಪ್ರಯಾಗ್‍ರಾಜ್‍ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವಡಗಾವಿಯ ಮೇಘಾ ಹತ್ತರವಾಟ ಹಾಗೂ ಜ್ಯೋತಿ ಹತ್ತರವಾಟ ಅವರ ಮನೆಯ ಶ್ವಾನ ಆಹಾರ ತೊರೆದು ಬೇಸರದಲ್ಲಿ ಕುಳಿತಿದೆ.
ಪ್ರಯಾಗರಾಜ್‍ಗೆ ಹೋದಾಗಿಂದಲೂ ಶ್ವಾನ ಸನ್ನಿ ಸಪ್ಪೆಯಾಗಿ ಕುಳಿತಿದೆ. ಅವರು ಕುಂಭಮೇಳಕ್ಕೆ ತೆರಳಿದ ದಿನ ಸಹ ಶ್ವಾನ ಆಹಾರ ತ್ಯಜಿಸಿತ್ತು. ಈ ಮೂಲಕ ಶ್ವಾನ ದುರಂತದ ಮುನ್ಸೂಚನೆ ನೀಡಿತ್ತು ಎಂದು ಮೃತ ಮೇಘಾಳ ಸಹೋದರಿ ಮಾನಸಿ ದುಃಖ ಹೊರ ಹಾಕಿದ್ದಾರೆ.
ಮೇಘಾಳ ಹಠಕ್ಕಾಗಿ ಪ್ರಯಾಗರಾಜ್ ಕಳಿಸುವಂತಾಯಿತು. ಶ್ವಾನದ ಮುನ್ಸೂಚನೆ ಬಗ್ಗೆ ಇದ್ದರೂ ನಾವು ನಿರ್ಲಕ್ಷ್ಯ ಮಾಡಿದೆವು ಎಂದು ಮೇಘಾಳ ತಂದೆ ದೀಪಕ ಹತ್ತರವಾಟ ದುಃಖ ಹೊರಹಾಕಿದ್ದಾರೆ.
ಮೇಘಾ ಹಠ ಹಿಡಿದು ಪ್ರಯಾಗರಾಜ್‍ಗೆ ಹೋಗಿದ್ದಳು. ಅವಳೊಟ್ಟಿಗೆ ತಾಯಿಯನ್ನು ಕಳಿಸಿ ಇಬ್ಬರನ್ನ ಕಳೆದುಕೊಳ್ಳುವಂತಾಯಿತು ಎಂದು ಅವರ ಅಜ್ಜಿ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರು: ನಾಯಿಯ (Dog) ಮೇಲೆ ಯುವಕನೋರ್ವ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ವಿದ್ಯಾರಣ್ಯಪುರದಲ್ಲಿ (Vidyaranyapura) ನಡೆದಿದೆ.
ನೆರೆಮನೆಯ ಯುವಕ ಮನೋಜ್ ಕುಮಾರ್ ಕೃತ್ಯವೆಸಗಿರುವುದಾಗಿ ಆರೋಪಿಸಲಾಗಿದೆ. ಮನೆಯೊಂದರ ಶೆಡ್‌ನಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಮನೋಜ್ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡು ನಿತ್ರಾಣವಾಗಿದ್ದ ನಾಯಿ 2-3 ದಿನಗಳಲ್ಲಿ ಸಾವನ್ನಪ್ಪಿದೆ. ಸಿಸಿಟಿವಿ ಪರಿಶೀಲನೆ ವೇಳೆ ಯುವಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯ ಎಕ್ಸ್ ಖಾತೆ ಹ್ಯಾಕ್
ಘಟನೆಯ ಬಗ್ಗೆ ವಿಚಾರಿಸಿದಾಗ ನಾಯಿ ಕೋಳಿ ಹಿಡಿದ ವಿಚಾರ ಬಯಲಾಗಿದೆ. ತನ್ನ ಕೋಳಿಯನ್ನು ನಾಯಿ ಹಿಡಿದಿದೆ ಎಂದು ಯುವಕ ಹೇಳಿದ್ದಾನೆ. ಅದೇ ವಿಚಾರಕ್ಕೆ ನಾಯಿಯ ತಲೆಗೆ ಹೊಡೆದು ಯುವಕ ಗಾಯಗೊಳಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ಇದನ್ನೂ ಓದಿ: ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ
ಬೆಂಗಳೂರು: ಮಾಲೀಕನೊಬ್ಬ ದ್ವಿಚಕ್ರ ವಾಹನದಲ್ಲಿ ನಾಯಿಯನ್ನು (Dog) ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಆರಂಭದಲ್ಲಿ ನಾಯಿಯ ಕತ್ತಿಗೆ ಸರಪಳಿ ಹಾಕಿ ದ್ವಿಚಕ್ರ ವಾಹನದಲ್ಲಿ ಕರೆತಂದಿದ್ದಾನೆ. ನಂತರ ರಸ್ತೆಯಲ್ಲಿ ನಾಯಿಯನ್ನ ಓಡಲು ಬಿಟ್ಟು ತಾನು ದ್ವಿಚಕ್ರವನ್ನು ಓಡಿಸಿದ್ದಾನೆ.
ಒಂದು ಕೈಯಲ್ಲಿ ನಾಯಿಯ ಚೈನ್, ಮತ್ತೊಂದು ಕೈಯಲ್ಲಿ ರೈಡಿಂಗ್ ಮಾಡಿ ಹುಚ್ಚಾಟ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ತಲೆಗೆ ಹೆಲ್ಮೆಟ್ ಹಾಕದೇ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾನೆ. ಇದನ್ನೂ ಓದಿ: ಬಫರ್ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್
ಹೆಣ್ಣೂರು ರೈಲ್ವೇ ಸ್ಟೇಷನ್ ಬಳಿ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಬೆಂಗಳೂರು ಪೊಲೀಸರ ಗಮನಕ್ಕೆ ವಿಡಿಯೋ ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.