Tag: Doddaballapur

  • ಮೋಸ್ಟ್ ವಾಂಟೆಡ್ ಉಗ್ರ ದೊಡ್ಡಬಳ್ಳಾಪುರದಲ್ಲಿ ಅರೆಸ್ಟ್

    ಮೋಸ್ಟ್ ವಾಂಟೆಡ್ ಉಗ್ರ ದೊಡ್ಡಬಳ್ಳಾಪುರದಲ್ಲಿ ಅರೆಸ್ಟ್

    ಬೆಂಗಳೂರು: ದೊಡ್ಡಬಳ್ಳಾಪುರ ಮಸೀದಿಯೊಂದರಲ್ಲಿ ತಂಗಿದ್ದ ಮೋಸ್ಟ್ ವಾಂಟೆಡ್ ಶಂಕಿತ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

    ಬಾಂಗ್ಲಾದೇಶದ ಜಮತ್-ಉಲ್ಲಾ-ಮುಜ್ಜಾಹೀದಿನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬರ್ ರೆಹಮಾನ್ ಎಂಬ ಉಗ್ರನನ್ನು ಇಂದು ಮಧ್ಯಾಹ್ನ ಬೆಂಗಳೂರು ಹಾಗೂ ಕೊಲ್ಕತ್ತಾ ಎನ್‍ಐಎ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಸೀದಿಯೊಂದರ ಬಳಿ ಬಂಧಿಸಿದ್ದಾರೆ.

    ಬಂಧಿತ ಉಗ್ರ ಹಬೀಬರ್ 2013ರ ಭೋದಗಯಾ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಪಶ್ಚಿಮ ಬಂಗಾಳದ ಬುದ್ರ್ವಾನ್ ಸ್ಫೋಟದಲ್ಲಿ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ 8 ಜನ ಭಾಗಿಯಾಗಿದ್ದು ಮೂವರ ಬಂಧನವಾಗಿತ್ತು. ಉಳಿದ 5 ಜನಕ್ಕೆ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದರು. ಕಳೆದ ಐದು ದಿನಗಳಿಂದ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಸಲಿಗೆ ಬೆಂಗಳೂರಿನಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಅನ್ವರ್ ಎಂಬಾತನೊಂದಿಗೆ ಈತ ನಂಟು ಹೊಂದಿದ್ದು ಮಸೀದಿಗೆ ಬಂದು ಹೋಗುತ್ತಿದ್ದ. ಕೆಲ ಸಮಯದ ಬಳಿಕ ಮೌಲ್ವಿ ಅನ್ವರ್ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಮೌಲ್ವಿಯಾಗಿ ನೇಮಕಗೊಂಡಿದ್ದ. ಹೀಗಾಗಿ ಆಗಾಗ ಮೌಲ್ವಿ ಅನ್ವರ್ ಭೇಟಿ ಮಾಡಲು ಎಂದು ದೊಡ್ಡಬಳ್ಳಾಪುರದ ಮಸೀದಿಗೆ ಬರುತ್ತಿದ್ದ. ಇದೇ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಬಾಡಿಗೆ ಮನೆ ಮಾಡಲು ಉಗ್ರ ಪ್ಲಾನ್ ಮಾಡಿದ್ದನು ಮತ್ತು ಮನೆಯನ್ನು ಸಹ ನೋಡಿಕೊಂಡು ಬಂದಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ಸದ್ಯ ಬಂಧಿತ ಉಗ್ರ ಹಬೀಬುಲ್ ರೆಹಮಾನ್ ನನ್ನ ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗುತ್ತಿದ್ದು, ಮತ್ತೊಂದೆಡೆ ಮಸೀದಿಯ ಮೌಲ್ವಿ ಅನ್ವರ್ ನನ್ನ ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ. ಉಗ್ರನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಈ ಹಿಂದೆ ತಿಳಿಸಿತ್ತು.

  • ಪತ್ನಿಗೆ ಬೆಂಕಿ ಹಚ್ಚಿ ತಾನೂ ವಿಷ ಸೇವಿಸಿದ 70ರ ವೃದ್ಧ!

    ಪತ್ನಿಗೆ ಬೆಂಕಿ ಹಚ್ಚಿ ತಾನೂ ವಿಷ ಸೇವಿಸಿದ 70ರ ವೃದ್ಧ!

    ಬೆಂಗಳೂರು: 70 ವರ್ಷದ ವೃದ್ಧನೋರ್ವ ತನ್ನ 65 ವರ್ಷದ ಪತ್ನಿಯನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ದೊಡ್ಡಬಳ್ಳಾಪುರ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ. ವೃದ್ಧ ನಾರಾಯಣಪ್ಪ, ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.

    ಪತಿ, ಪತ್ನಿ ಬೇರೆ ಬೇರೆಯಾದ ಬಳಿಕ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ 32 ಗುಂಟೆ ಜಮೀನನ್ನು ಕಳೆದ ವರ್ಷ ಮಾರಾಟ ಮಾಡಿದ್ದರು. ಈ ಬಗ್ಗೆ ಮಗ ಹಾಗೂ ಮಗಳು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಇತ್ತ ಜಾಗ ಮಾರಿ ಹೋಗಿದ್ದ ನಾರಾಯಣಪ್ಪನ ಕೈಯಲ್ಲಿ ಹಣ ಖಾಲಿಯಾದ ಬಳಿಕ ಮತ್ತೆ ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದರು. ಈ ವೇಳೆ ಪತ್ನಿ, ಮಕ್ಕಳು ಸೇರಿ ನಾರಾಯಣಪ್ಪ ಅವರನ್ನು ಮನೆಯೊಳಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಅವರು ಅದೇ ಗ್ರಾಮದಲ್ಲಿರುವ ತಮ್ಮ ಅಣ್ಣನ ಮನೆಯಲ್ಲಿ ನಾರಾಯಣಪ್ಪ ವಾಸಿಸುತ್ತಿದ್ದರು.

    15 ದಿನಗಳ ಬಳಿಕ ಮತ್ತೆ ತನ್ನ ಮನೆಯತ್ತ ಬಂದ ನಾರಾಯಣಪ್ಪ, ನಿನ್ನ ಮಕ್ಕಳಲ್ಲಿ ಕೇಸ್ ಹಿಂತೆಗೆದುಕೊಳ್ಳಲು ಹೇಳು. ಇಲ್ಲವೆಂದಲ್ಲಿ ಕೊಲ್ಲುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳು ತನ್ನ ಕೇಸ್ ಹಾಕಲು ಪತ್ನಿಯೂ ಬೆಂಬಲ ನೀಡಿದ್ದಾಳೆ ಎಂದು ನಾರಾಯಣಪ್ಪಗೆ ಸಂಶಯ ಮೂಡಿತ್ತು. ಇದೇ ಸಿಟ್ಟಿನಲ್ಲಿ ನಾರಾಯಣಪ್ಪ ಶನಿವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೆ ಹಾಲ್ ನಲ್ಲಿ ಮಲಗಿದ್ದ ಪತ್ನಿ ಮೇಲೆ ಸೀಮೆ ಎಣ್ಣೆ ಸುರಿದು, ಆಕೆ ಓಡಿ ಹೋಗುವ ಮುಂಚೆ ಬೆಂಕಿ ಹಚ್ಚಿದ್ದಾರೆ.

    ಪರಿಣಾಮ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮಮ್ಮ ಮಗಳು ಮತ್ತು ಸೊಸೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಗಾಢ ನಿದ್ದೆಯಲ್ಲಿದ್ದ ಅವರಿಗೆ ಈ ವಿಚಾರ ಆ ಕೂಡಲೇ ತಿಳಿಯಲಿಲ್ಲ.

    ಇತ್ತ ಪತ್ನಿಯನ್ನು ಸಾಯಿಸಿದ ನಾರಾಯಣಪ್ಪ ತಾನೂ ವಿಷ ಸೇವಿಸಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

    ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

    ಚಿಕ್ಕಬಳ್ಳಾಪುರ: ಸರ್ಕಾರಿ ಸೌಲಭ್ಯ ಕೇಳಿಕೊಂಡು ಹೋದರೆ ಲಂಚ ಕೇಳುತ್ತಾರೆ ಇಲ್ಲ ಅಂದರೆ ಮಂಚಕ್ಕೆ ಕರೀತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಿಎಂ ಮುಂದೆ ಅಳಲು ತೋಡಿಕೊಂಡಿದ್ದಾರೆ.

    ರೈತರ ಸಾಲಮನ್ನಾ ಯೋಜನೆಯ ಋಣಮುಕ್ತ ಪತ್ರ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಮಹಿಳೆ ಸಿಎಂ ಬಳಿ ತಮ್ಮ ಅಳಲು ತೋಡಿಕೊಳ್ಳಲು ಪ್ರಯತ್ನಿಸಿದರು. ಸಿಎಂ ಅವರಿಗೆ ತಮ್ಮ ಮನವಿ ತಿಳಿಸಲು ತೆರಳಿದ್ದ ವೇಳೆ ಮಧ್ಯ ಪ್ರವೇಶಿದ ಪೊಲೀಸರು ಮಹಿಳೆಯನ್ನು ಕಾರ್ಯಕ್ರಮ ಸ್ಥಳದಿಂದ ಹೊರ ಕರೆತಂದರು.

    ದೊಡ್ಡಬಳ್ಳಾಪುರ ನಗರ ಶಾಂತಿ ನಗರದ ನಿವಾಸಿಯಾದ ಛಾಯಾ ಅವರು ಸಿಎಂ ಬಳಿ ತಮ್ಮ ಸಮಸ್ಯೆ ಮುಂದಿಟ್ಟು ಸಹಾಯ ಕೇಳಲು ಪ್ರಯತ್ನಿಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ನನ್ನ ಪತಿ ಅಪಘಾತವೊಂದರಲ್ಲಿ ಕೈ ಮುರಿದುಕೊಂಡು ಅಂಗವಿಕಲರಾಗಿದ್ದರು. ಈ ವೇಳೆ ಕುಟುಂಬವನ್ನು ನಿರ್ವಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರು. ನನಗೆ ಇಬ್ಬರು ಮಕ್ಕಳಿದ್ದು, ಅವರಿಗೆ ಶಿಕ್ಷಣ ಕೊಡಿಸಲು ಕೂಡ ನನಗೆ ಕಷ್ಟವಾಗಿದೆ ಎಂದರು.

    ಸ್ವಾಭಿಮಾನದಿಂದ ಬದಲು ಬಯಸಿ ಸರ್ಕಾರದ ಯೋಜನೆಗಳ ಸಹಾಯ ಪಡೆಯಲು ತೆರಳಿದರೆ ಲಂಚ ಕೇಳುತ್ತಾರೆ. ಹಣ ಇಲ್ಲ ಎಂದರೆ ನೀನೇ ಬಾ ಎಂದು ಕರೆಯುತ್ತಾರೆ ಎಂದು ಎಂದು ಹೇಳಿ ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಎಚ್‍ಡಿಕೆ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್

    ಸಿಎಂ ಎಚ್‍ಡಿಕೆ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್

    ಚಿಕ್ಕಬಳ್ಳಾಪುರ: ಇಂದು ಸಿಎಂ ಕುಮಾರಸ್ವಾಮಿ ಸಾಲಮನ್ನಾ ವ್ಯಾಪ್ತಿಗೆ ಒಳಪಟ್ಟಿರೋ ಫಲಾನುಭವಿ ರೈತರಿಗೆ ಋಣಭಾರ ಮುಕ್ತ ಪತ್ರವನ್ನು ವಿತರಿಸಲಿದ್ದಾರೆ.

    ಉತ್ತರ ಕರ್ನಾಟಕದ ಸೇಡಂ ಕ್ಷೇತ್ರದಲ್ಲಿ ಹಾಗೂ ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಪ್ರಾಯೋಗಿಕವಾಗಿ ರೈತರಿಗೆ ಋಣಭಾರ ಮುಕ್ತಪತ್ರ ವಿತರಣೆ ನಡೆಯಲಿದೆ.

    ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಸಚಿವ ಕೃಷ್ಣ ಭೈರೇಗೌಡ ಹಾಗೂ ಶಾಸಕ ವೆಂಕಟರಮಣಯ್ಯ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ರು. ಮೊದಲ ಹಂತದಲ್ಲಿ ರಾಜ್ಯಾದ್ಯಾಂತ 64 ಸಾವಿರ ಕೋಟಿ ರೂ. ಸಾಲಮನ್ನಾ ವ್ಯಾಪ್ತಿಗೆ ಓಳಪಟ್ಟಿರೋ ಫಲಾನುಭವಿ ರೈತರಿಗೆ ಋಣಭಾರ ಮುಕ್ತ ಪತ್ರ ಸಿಗಲಿದೆ. ಇನ್ನೂ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 17300 ಮಂದಿ ರೈತರು ಋಣಭಾರ ಮುಕ್ತ ಪತ್ರ ಪಡೆದುಕೊಳ್ಳಲಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಳ್ಳಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸ್ತೇವೆ- ರೈತಾಪಿ ವರ್ಗಕ್ಕೆ ಸಿಎಂ ಮನವಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನನ್ನು ಕರಿ ಇರುವೆಗಳು ಕಚ್ಚಿ-ಕಚ್ಚಿ ತಿಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಂತರಹಳ್ಳಿ ಗ್ರಾಮದ ತಿಮ್ಮರಾಜು ಇರುವೆಗಳ ದಾಳಿಗೆ ಒಳಗಾದ ವ್ಯಕ್ತಿ. ಅದೃಷ್ಟವಶಾತ್ ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಬದುಕುಳಿದಿದ್ದಾನೆ.

    ತಿಮ್ಮರಾಜು ಕುಡಿದ ಅಮಲಿನಲ್ಲಿ ಅಂತರಹಳ್ಳಿ ಗ್ರಾಮದ ದೇವಾಲಯವೊಂದರ ಮುಂದೆ ನಿದ್ದೆಗೆ ಜಾರಿದ್ದನು. ಈ ವೇಳೆ ತಿಮ್ಮರಾಜು ಮೈ ಮೇಲೆ ಮುತ್ತಿಕೊಂಡು ಕರಿ ಇರುವೆಗಳು, ಕಾಲು, ಕೈ, ಹೊಟ್ಟೆ, ಮೂಗು ಬಾಯಿ, ತಲೆ ಇಡೀ ದೇಹದ ಮೇಲೆ ದಾಳಿ ನಡೆಸಿದ್ದರಿಂದ ಅನೇಕ ಕಡೆ ಗಾಯಗಳಾಗಿವೆ. ಇರುವೆಗಳು ಕಚ್ಚುತ್ತಿವೆ ಎನ್ನುವ ಅರಿವು ಇಲ್ಲದೇ ತಿಮ್ಮರಾಜು ಬಿದ್ದಿದ್ದನು.

     

    ಇರುವೆ ಕಚ್ಚುತ್ತಿದ್ದರೂ ಹಾಗೇ ಮಲಗಿದ್ದನ್ನು ನೋಡಿದ ಗ್ರಾಮಸ್ಥರೊಬ್ಬರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ವಿಷಯ ತಿಳಿದು ಗುಂಪುಗೂಡಿದ ಗ್ರಾಮಸ್ಥರು, ತಿಮ್ಮರಾಜುನನ್ನು ಎಚ್ಚರಿಸಿದ್ದಾರೆ. ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಭಾರೀ ಅನಾಹುತದಿಂದ ಪಾರಾಗಿದ್ದಾನೆ. ರಾತ್ರಿ ವೇಳೆ ಜನ ಮಲಗಿರುವಾಗ ಘಟನೆ ನಡೆದಿದ್ದರೇ ತಿಮ್ಮರಾಜು ಬದುಕುಳಿಯುವುದು ಕಷ್ಟವಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಗಾಯಾಳು ತಿಮ್ಮರಾಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮದ ರೇಷನ್ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಇಂತಹ ಅನಾಹುತ ಸಂಭವಿಸಿದೆ. ಅಕ್ರಮ ಮದ್ಯ ಮಾರುವ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಅನ್ನ ಹಾಕಿದ್ದ ಮಹಿಳೆಯ ಕತ್ತು ಹಿಸುಕಿ ಕೊಲೆಗೈದು ಚಿನ್ನದೋಚಿದ್ದಾತನ ಬಂಧನ

    ಅನ್ನ ಹಾಕಿದ್ದ ಮಹಿಳೆಯ ಕತ್ತು ಹಿಸುಕಿ ಕೊಲೆಗೈದು ಚಿನ್ನದೋಚಿದ್ದಾತನ ಬಂಧನ

    ಬೆಂಗಳೂರು: ಉಂಡು ಹೋದ ಕೊಂಡು ಹೋದ ಅಂದವ ಇಂದು ಅಂದರ್ ಆಗಿದ್ದಾನೆ. ಪೊಲೀಸರ ಅತಿಥಿಯಾಗಿರುವ ಈ ಮಹಾನ್‍ಭಾವನ ಹೆಸರು ರಮೇಶ್ ಅಲಿಯಾಸ್ ಚೊಟ್ಟ ರಮೇಶ್.

    ಮೂಲತಃ ದೊಡ್ಡಬಳ್ಳಾಪುರದವನ್ನಾಗಿದ್ದು ಬಾಣಸಿಗನಾಗಿ ಕೆಲಸ ಮಾಡಿಕೊಂಡಿದ್ದ. ಇವನಿಗಿರೋ ದುಶ್ಚಟಕ್ಕೆ, ಅನ್ನ ಹಾಕಿದ್ದ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಈತ ಕೊಲೆಯಾದ ಚಂದ್ರಕಲಾ ಫ್ಯಾಮಿಲಿಗೆ 8 ವರ್ಷಗಳಿಂದ ಪರಿಚಯಸ್ಥನಾಗಿದ್ದ. ಕುಡಿತದ ಚಟಕ್ಕೆ ಬಿದ್ದಿದ್ದ ಈತ ಸಾಲ ಮಾಡಿಕೊಂಡಿದ್ದಲ್ಲದೇ, ಆ ಸಾಲ ತೀರಿಸಲು ಚಂದ್ರಕಲಾರನ್ನ ಕೊಲೆ ಮಾಡಿ ಮಾಂಗಲ್ಯ ಸರದೋಚಿದ್ದ.

    ಮಹಿಳೆಯ ಕೊಲೆ ನಡೆದು 24 ಗಂಟೆಯಲ್ಲೇ ಆರೋಪಿ ರಮೇಶ್‍ನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 75 ಗ್ರಾಂ ಚಿನ್ನ ಮತ್ತು ನಗದನ್ನ ವಶಕ್ಕೆ ಪಡೆದಿದ್ದಾರೆ.

    ಒಟ್ಟಿನಲ್ಲಿ ಹಣದಾಸೆಗೆ ಹಸಿವು ಅಂದಾಗ ಅನ್ನ ಹಾಕಿ ಹಸಿವು ನೀಗಿಸಿದ್ದ ಮಹಿಳೆಯನ್ನ ಹೀನಾಯವಾಗಿ ಕೊಂದ ಪಾಪಿ ಚೊಟ್ಟ ರಮೇಶ ಇದೀಗ ಜೈಲು ಸೇರಿದ್ದಾನೆ.

  • ಡೈವೋರ್ಸ್ ಕೇಳಿದ್ದಕ್ಕೆ ಹೆಂಡ್ತಿ ಮೇಲೆ ಮಚ್ಚಿನಿಂದ ಹಲ್ಲೆಗೈದ ಪತಿ

    ಡೈವೋರ್ಸ್ ಕೇಳಿದ್ದಕ್ಕೆ ಹೆಂಡ್ತಿ ಮೇಲೆ ಮಚ್ಚಿನಿಂದ ಹಲ್ಲೆಗೈದ ಪತಿ

    ಚಿಕ್ಕಬಳ್ಳಾಪುರ: ವಿಚ್ಛೇದನ ಕೇಳಿದ ಪತ್ನಿ ಜೊತೆ ಜಗಳ ತೆಗೆದ ಗಂಡ ಆಕೆ ಮೇಲೆ ಮಚ್ಚಿನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಶಾಂತಾನಾಯಕ್ ಎಂಬಾತನೇ ತನ್ನ ಪತ್ನಿಯ ಮೇಲೆ ಹಲ್ಲೆಗೈದ ಪತಿ. ಶಾಂತಾನಾಯಕ್ 6 ವರ್ಷಗಳ ಹಿಂದೆ ರೋಜಿಬಾಯ್ ಎಂಬವರನ್ನು ಮದುವೆಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರೋಜಿಬಾಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

    ಪತ್ನಿ ವಿಚ್ಛೇದನ ಅರ್ಜಿ ಸಲ್ಲಿಸಿದ ವಿಷಯ ತಿಳಿದ ಶಾಂತಾನಾಯಕ್ ಕೊಲೆಗೆ ಯತ್ನಿಸಿದ್ದಾನೆ. ಮಹಿಳೆಯ ಚೀರಾಟ ಕೇಳಿದ ಅಕ್ಕಪಕ್ಕದ ಜನ ಶಾಂತಕುಮಾರ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರೋಜಿಬಾಯ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಣ್ಣಿಲ್ಲದಿದ್ರೂ ಕೃಷಿಯಲ್ಲಿ ಸಾಧಕ: ಕೆಲಸದಾಳುಗಳಿಗೆ ಇವರೇ ಮಾರ್ಗದರ್ಶಕ

    ಕಣ್ಣಿಲ್ಲದಿದ್ರೂ ಕೃಷಿಯಲ್ಲಿ ಸಾಧಕ: ಕೆಲಸದಾಳುಗಳಿಗೆ ಇವರೇ ಮಾರ್ಗದರ್ಶಕ

    ಚಿಕ್ಕಬಳ್ಳಾಪುರ: ಕೆಲವರಿಗೆ ಎಲ್ಲಾ ಅಂಗಗಳೂ ಚೆನ್ನಾಗಿದ್ರೂ ದುಡಿದು ತಿನ್ನೋಕೆ ಸೋಮಾರಿತನ. ಆದರೆ ನಮ್ಮ ಈ ಪಬ್ಲಿಕ್ ಹೀರೋಗೆ ಎರಡೂ ಕಣ್ಣುಗಳಿಲ್ಲ. ಆದ್ರೂ ಕೃಷಿ ಮಾಡ್ತಿದ್ದಾರೆ. ಮಾದರಿ ರೈತನಾಗಿ ನಾಲ್ಕೈದು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ತಮ್ಮ ಅಂಧತ್ವವನ್ನೇ ಮೆಟ್ಟಿನಿಂತಿದ್ದಾರೆ.

    ಯಲ್ಲಪ್ಪ ನಮ್ಮ ಪಬ್ಲಿಕ್ ಹೀರೋ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದುರ್ಗೇನಹಳ್ಳಿಯವರು. ಇವರಿಗೆ 3 ವರ್ಷವಿದ್ದಾಗ ಅಪ್ಪ ತೀರಿ ಹೋದ್ರು. 5 ವರ್ಷವಿದ್ದಾಗ ಪೋಲಿಯೋ ಅಟ್ಯಾಕ್ ಆಗಿ ಎರಡೂ ಕಣ್ಣುಗಳ ದೃಷ್ಟಿ ಹೋಯ್ತು. ಇಂತ ಕಡುಕಷ್ಟದಲ್ಲಿ ತಾಯಿ ನೆರಳಲ್ಲಿ ಬೆಳೆದ ಯಲ್ಲಪ್ಪ ಇವತ್ತು ಮಾದರಿ ರೈತರಾಗಿದ್ದಾರೆ. ಎರಡು ಎಕರೆ ಬಂಜರು ಭೂಮಿಯನ್ನ ಫಲವತ್ತಾಗಿ ಮಾಡಿ ಪಾಲಿ ಹೌಸ್ ನಿರ್ಮಿಸಿ ಸೌತೆಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ.

    ಯಲ್ಲಪ್ಪರಿಗೆ ಮದುವೆಯಾಗಿದ್ದು, ಇವರ ಹೆಂಡತಿ ಇವರನ್ನು ಅರ್ಥಮಾಡಿಕೊಳ್ಳದೇ ದೂರವಾದ್ರು. 12 ವರ್ಷದ ಪುಟ್ಟ ಮಗನಿದ್ದಾನೆ. ಮಗ ಹಾಗೂ ಅಮ್ಮ ಯಲ್ಲಪ್ಪರಿಗೆ ಕೆಲಸದಲ್ಲಿ ಸಾಥ್ ನೀಡುತ್ತಾರೆ. ಕಣ್ಣಿಲ್ಲದಿದ್ರೂ ಯಲ್ಲಪ್ಪ ಸ್ವಾಭಿಮಾನದಿಂದ ಸಾರ್ಥಕತೆಯ ಜೀವನ ನಡೆಸುತ್ತಿದ್ದಾರೆ.

    https://www.youtube.com/watch?v=9e3K0CcFIIc

     

  • ಸಿಲಿಂಡರ್ ಸ್ಫೋಟ- ಮೂರು ಮನೆಗಳ ಮೇಲ್ಚಾವಣಿ ಕುಸಿತ

    ಸಿಲಿಂಡರ್ ಸ್ಫೋಟ- ಮೂರು ಮನೆಗಳ ಮೇಲ್ಚಾವಣಿ ಕುಸಿತ

    ಚಿಕ್ಕಬಳ್ಳಾಪುರ: ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಮನೆಗಳ ಮೇಲ್ಚಾವಣಿ ಕುಸಿದಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದಲ್ಲಿ ನಡೆದಿದೆ.

    ನಾಗರತ್ನಮ್ಮ ಎಂಬವರ ಮನೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಗಳಲ್ಲಿದ್ದ ಎಲ್ಲಾ ವಸ್ತುಗಳು ಜಖಂಗೊಂಡಿವೆ. ನಾಗರತ್ನಮ್ಮರ ಮನೆ ಸೇರಿದಂತೆ ಅಕ್ಕಪಕ್ಕದ ಎರಡು ಮನೆಗಳ ಮೇಲ್ಚಾವಣಿ ಕುಸಿದಿವೆ.

    ಮನೆಯ ಸದಸ್ಯರು ಹೊರಗಡೆ ಮಲಗಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

  • ಕಾಲಿಟ್ಟ ಮನೆಯಲ್ಲೇ ಕಳ್ಳಿಯಾದ ಸೊಸೆ- 1.8 ಕೆಜಿಯಷ್ಟು ಚಿನ್ನ ಕದ್ದವಳು ಜೈಲುಪಾಲು

    ಕಾಲಿಟ್ಟ ಮನೆಯಲ್ಲೇ ಕಳ್ಳಿಯಾದ ಸೊಸೆ- 1.8 ಕೆಜಿಯಷ್ಟು ಚಿನ್ನ ಕದ್ದವಳು ಜೈಲುಪಾಲು

    ದೊಡ್ಡಬಳ್ಳಾಪುರ: ಯಾರೋ ಅಪರಿಚಿತ ಮಹಿಳೆ ತನ್ನನ್ನ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದಳು ಅಂತ ಕಥೆ ಕಟ್ಟಿದ್ದ ಐನಾತಿ ಸೊಸೆ ಇದೀಗ ಜೈಲು ಸೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ.

    ಫೆಬ್ರವರಿ 19 ರಂದು ದೊಡ್ಡಬಳ್ಳಾಪುರದ ಶಾಂತಿ ನಗರದ ವಿಶ್ವನಾಥ್ ಎಂಬವರ ಮನೆಯಲ್ಲಿ ಸೊಸೆ ಕಾವ್ಯಾ ಒಂಟಿಯಾಗಿದ್ದಾಗ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳುವಾಗಿತ್ತು. ಘಟನೆ ನಡೆದ ದಿನ ಮನೆಯವರೆಲ್ಲರೂ ಸಂಬಂಧಿಕರ ಮದುವೆಗೆ ಅಂತ ತುಮಕೂರಿನ ಶಿರಾಗೆ ತೆರಳಿದ್ದರು. ಕಾವ್ಯಾ ಗಂಡ ವಿಶ್ವನಾಥ್ ತಿರುಪತಿಗೆ ತೆರಳಿದ್ರು. ಈ ಬಗ್ಗೆ ಕೇಳಿದ್ರೆ ಯಾರೋ ಅಪರಿಚಿತ ಮಹಿಳೆ ವಿವಾಹ ಅಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದು ದರೋಡೆ ಮಾಡಿದಳು ಅಂತ ಮನೆಯವರು ಹಾಗೂ ಪೊಲೀಸರ ಮುಂದೆ ಕಾವ್ಯಾ ಕಥೆ ಕಟ್ಟಿ ಹೇಳಿಕೆ ಕೊಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ಮನೆಯ ಸೊಸೆ ಕಾವ್ಯಾಳೇ ಕಳ್ಳಿ ಅಂತ ತಿಳಿದುಬಂದಿದೆ.

    ದರ್ಗಾಜೋಗಹಳ್ಳಿಯ ನಿವಾಸಿ ಮೆಹ್‍ಬೂಬ್ ಪಾಷಾ ಎಂಬವನ ಜೊತೆ ಸೇರಿ ಸಂಚು ರೂಪಿಸಿದ್ದ ಕಾವ್ಯಾ, ಮನೆಯಲ್ಲಿದ್ದ 1 ಕೆಜಿ 800 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ದೋಚಿ ಮೆಹ್‍ಬೂಬ್ ಪಾಷಾ ಮನೆಯಲ್ಲಿ ಇಟ್ಟಿದ್ದಳು. ಸದ್ಯ ಅಸಲಿ ಕಳ್ಳಿ ಕಾವ್ಯಾಳೇ ಅಂತ ತಿಳಿದುಬಂದಿದ್ದು, ಬಂಧಿತರಿಂದ 1 ಕೆಜಿ 800 ಗ್ರಾಂ ಚಿನ್ನಾಭರಣ ಹಾಗೂ 45,000 ಸಾವಿರ ರೂ. ನಗದು ಹಣವನ್ನ ಪೊಲೀಸರು ಜಪ್ತಿ ಮಾಡಿ ಕಾವ್ಯಾ ಹಾಗೂ ಮೆಹ್‍ಬೂಬ್ ಪಾಷಾನನ್ನ ಜೈಲಿಗೆ ಕಳುಹಿಸಿದ್ದಾರೆ.