Tag: Doddaballapur

  • ಮಾನವೀಯತೆ ಮರೆತ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ

    ಮಾನವೀಯತೆ ಮರೆತ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ

    ಬೆಂಗಳೂರು: ಹೊಟ್ಟೆನೋವು ಅಂತ ಆಸ್ಪತ್ರೆಗೆ ಬಂದ ರೋಗಿಗೆ ಚಿಕಿತ್ಸೆ ನೀಡದೇ ಆಸ್ಪತ್ರೆ ಸಿಬ್ಬಂದಿ ಕರ್ತವ್ಯದ ಜೊತೆ ಮಾನವೀಯತೆಯನ್ನು ಮರೆತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

    ಕಳೆದ ರಾತ್ರಿ ಹೊಟ್ಟೆನೋವು ಅಂತ ಓರ್ವ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ವೈದ್ಯರಿಲ್ಲ ಅಂತ ಹೇಳಿ ಸಿಬ್ಬಂದಿ ರೋಗಿಯನ್ನು ಆಸ್ಪತ್ರೆಯೊಳಗೆ ಸಹ ಕರೆದುಕೊಂಡಿಲ್ಲ. ಹೊರಗೆ ನಿಲ್ಲಿಸಿ ಖಾಸಗಿ ಆಸ್ವತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಉದ್ದಟತನನ ಮಾತುಗಳನ್ನಾಡಿದ್ದಾರೆ.

    ಖಾಸಗಿ ಆಸ್ವತ್ರೆಗೆ ಹೋಗಲು ಹಣವಿಲ್ಲ ಅಂತ ರಸ್ತೆಯಲ್ಲೆ ರೋಗಿಯ ನರಳಾಟ ಮಾಡಿದ್ರೂ ಆತನಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಮುಂದಾಗಿಲ್ಲ. ಆಸ್ಪತ್ರೆಯ ಪಕ್ಕದ ಕ್ವಾಟರ್ಸ್ ನಲ್ಲಿಯೇ ವೈದ್ಯರಿದ್ದರೂ ಕೊರೊನಾ ಹೆಸರು ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಆಸ್ಪತ್ರೆಯ ಮುಂದೆ ನಡೆದ ಘಟನೆಯ ದೃಶ್ಯದ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸರ್ಕಾರಿ ಆಸ್ವತ್ರೆ ವೈದ್ಯರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೆಂಗ್ಳೂರಿನ ಮೂವರು ಯುವಕರು ದೊಡ್ಡಬಳ್ಳಾಪುರದಲ್ಲಿ ನೀರು ಪಾಲು

    ಬೆಂಗ್ಳೂರಿನ ಮೂವರು ಯುವಕರು ದೊಡ್ಡಬಳ್ಳಾಪುರದಲ್ಲಿ ನೀರು ಪಾಲು

    – ಹುಟ್ಟುಹಬ್ಬ ಆಚರಿಸಲು ಲಾಂಗ್ ಡ್ರೈವ್
    – ನಾಲ್ಕು ಬೈಕ್‍ನಲ್ಲಿ ಬಂದಿದ್ದ ಯುವಕರು, ಯುವತಿಯರು

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್ ಸಡಿಲಿಕೆಯ ಬಳಿಕ ಬೆಂಗಳೂರಿನಿಂದ ಲಾಂಗ್ ಡ್ರೈವ್ ಬಂದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತಿಪ್ಪಗಾನಹಳ್ಳಿ ಕೆರೆಯಲ್ಲಿ ನಡೆದಿದೆ.

    ಬೆಂಗಳೂರಿನ ರಾಮಮೂರ್ತಿನಗರದ ಚಂದ್ರು(20), ರಾಜು(19) ಹಾಗೂ ನವೀನ್ (24) ಮೃತ ದುರ್ದೈವಿಗಳು. ರಾಮಮೂರ್ತಿ ನಗರದಿಂದ ನಾಲ್ಕು ಬೈಕ್‍ಗಳ ಮೂಲಕ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು ಲಾಂಗ್ ಡ್ರೈವ್ ಬಂದಿದ್ದರು.

    ನವೀನ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಯುವಕ, ಯುವತಿಯರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ದೇವಾಲಯದ ಬಾಗಿಲು ಮುಚ್ಚಿದ್ದರಿಂದ ಹೊರಗೆ ನಿಂತು ಕೈ ಮುಗಿದು ತದನಂತರ ಕೆರೆ ಬಳಿ ಬಂದಿದ್ದರು. ಈ ವೇಳೆ ಈಜಲು ಹೋದ ಮೂವರು ಕೆರೆಯ ಪಾಲಾಗಿದ್ದಾರೆ.

    ಈ ಸಂಬಂಧ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

  • ದೊಡ್ಡಬಳ್ಳಾಪುರಕ್ಕೂ ಕಾಲಿಟ್ಟ ಕೊರೊನಾ- ರೈಲ್ವೇ ಉದ್ಯೋಗಿಗೆ ಸೋಂಕು

    ದೊಡ್ಡಬಳ್ಳಾಪುರಕ್ಕೂ ಕಾಲಿಟ್ಟ ಕೊರೊನಾ- ರೈಲ್ವೇ ಉದ್ಯೋಗಿಗೆ ಸೋಂಕು

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇಷ್ಟು ದಿನ ನಿರಾಳವಾಗಿದ್ದ ದೊಡ್ಡಬಳ್ಳಾಪುರ ತಾಲೂಕಿಗೂ ಕೊರೊನಾ ಕಾಲಿಟ್ಟಿದ್ದು, 39 ವರ್ಷದ ವ್ಯಕ್ತಿ (ರೋಗಿ ನಂಬರ್-246) ಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಕೊರೊನಾ ಸೋಂಕಿತ ರೈಲ್ವೆ ಇಲಾಖೆಯಲ್ಲಿ ಟ್ರಾಕ್ ಮಿಷಿನ್ ಮೈಂಟೈನರ್ ಆಗಿದ್ದು, ಮಾರ್ಚ್ 14 ರಿಂದ 18ರ ನಡುವೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ನಿಜಾಮುದ್ದೀನ್ ನಿಂದ ವಾಪಸ್ಸಾಗಿದ್ದರು. ಈ ವೇಳೆ ಇವರು ಪ್ರಯಾಣಿಸಿದ ರೈಲಿನಲ್ಲೇ ಕಾಚಿಗುಡವರೆಗೂ ಜಮಾತ್ ನಲ್ಲಿ ಭಾಗಿಯಾಗಿದ್ದ ತಬ್ಲಘಿಯೋರ್ವ ಸಹ ಪ್ರಯಾಣಿಸಿದ್ದ ಎನ್ನಲಾಗಿದೆ. ಹೀಗಾಗಿ ತಬ್ಲಿಘಿಯಿಂದಲೇ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಮಾರ್ಚ್ 18ರಂದು ವಾಪಸ್ಸಾದ ಸೋಂಕಿತ ಎಂದಿನಂತೆ ಓಡಾಡಿಕೊಂಡಿದ್ದರು. ಆದರೆ ಮಾರ್ಚ್ 26ರಂದು ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಸ್ವತಃ ತಾವೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆದರೆ ಕೊರೊನಾ ಲಕ್ಷಣಗಳು ಅಂತ ಭಾವಿಸಿರಲಿಲ್ಲ. ವೈದ್ಯರು ದೆಹಲಿ ಟ್ರಾವೆಲ್ ಹಿಸ್ಟರಿ ಕೇಳಿದಾಗ ಅನುಮಾನಗೊಂಡು ಹೋಮ್ ಕ್ವಾರಂಟೈನ್ ಗೆ ಸೂಚಿಸಿದ್ರು. ಇನ್ನೂ ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರವೂ ಇವರಲ್ಲಿ ಜ್ವರ ಇತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಸ್ಪತ್ರೆಗೆ ಐಸೋಲೇಷನ್ ಮಾಡಲಾಗಿತ್ತು.

    ಏಪ್ರಿಲ್ 11 ಹಾಗೂ 12 ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿ ಕೊರೊನಾ ಪಾಸಿಟಿವ್ ಅಂತ ದೃಢಪಟ್ಟಿದೆ. ಸದ್ಯ ಸೋಂಕಿತನ ಪತ್ನಿ ಹಾಗೂ ಮಗುವನ್ನ ಸಹ ಕ್ವಾರಂಟೈನ್ ಮಾಡಲಾಗಿದೆ. 40 ರಿಂದ 50 ಮನೆ ಇರುವ ಇವರ ಗ್ರಾಮಕ್ಕೆ ಆರೋಗ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ಪಬ್ಲಿಕ್ ಟಿವಿಗೆ ತಿಳಿಸಿದರು.

  • ನನ್ನ ಮೈಮುಟ್ಟಿ ಹಲ್ಲೆ ಮಾಡಿದ್ರು- ತೇಜಸ್ವಿನಿ ರಮೇಶ್ ಆರೋಪ

    ನನ್ನ ಮೈಮುಟ್ಟಿ ಹಲ್ಲೆ ಮಾಡಿದ್ರು- ತೇಜಸ್ವಿನಿ ರಮೇಶ್ ಆರೋಪ

    – ಸ್ವಗ್ರಾಮದವರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯೆ

    ಚಿಕ್ಕಬಳ್ಳಾಪುರ: ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಬದಲಾಗಿ ನನ್ನ ಹಾಗೂ ನಮ್ಮ ಹಿರಿಯರ ಮೇಲೆ ಕುಡಿದು ಹಲ್ಲೆ ಮಾಡಲು ಅವರೇ ಬಂದಿದ್ರು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್, ದೊಡ್ಡರಾಯಪ್ಪನಹಳ್ಳಿ ಸ್ವಗ್ರಾಮದವರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರನ್ನೂ ಹೊಡೆದಿಲ್ಲ. ಅವರೇ ಕುಡಿದು ಬಂದು ನನ್ನ ಹೊಡೆಯೋಕೆ ಬಂದರು. ಆಗ ನಾನು ತಡೆದೆ ಅಷ್ಟೇ. ಮೇಳೆಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷನೇ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾನೆ. ಈಗ ಊರಲ್ಲಿ ಸರ್ಕಾರಿ ಶಾಲೆ ಕಟ್ಟೋಕೆ ಹೋದರೆ ಅಡ್ಡಿಪಡಿಸುತ್ತಿದ್ದಾನೆ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂಬಂಧ ಮೇಳೆಕೋಟೆ ಗ್ರಾಮ ಪಂಚಾಯತಿ ಪಿಡಿಓ ರಮಿತಾ ಅವರನ್ನು ಕೇಳಿದರೆ, ಸರ್ಕಾರಿ ಶಾಲೆ ಕಟ್ಟಡ ಕಟ್ಟೋಕೆ 178-88 ಅಳತೆಯ ನಿವೇಶನವನ್ನ ಮಂಜೂರು ಮಾಡಿದ್ದೇವೆ. ಆದರೆ ಅದನ್ನು ಹೊರತುಪಡಿಸಿ ಗ್ರಾಮ ಪಂಚಾಯತಿ ಅಧ್ಯಕ್ಷರ ಮನೆಗೆ ಹೊಂದಿಕೊಂಡಂತೆ ಅಲ್ಲಿ ಅಂದಾಜು ಇನ್ನೂ 20 ಅಡಿ ಜಾಗ ಉಳಿದಿತ್ತು. ಈಗ ಎಲ್ಲಾ ಜಾಗವನ್ನ ಸೇರಿಸಿ ಶಾಲಾ ಕಟ್ಟಡ ಕಟ್ಟಲಾಗುತ್ತಿದೆ. ಈ ಬಗ್ಗೆ ನಾವು ಶಾಲಾ ಮುಖ್ಯೋಪಾಧ್ಯಾಯರಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ?:
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಸ್ವಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆ ಅಡಿ ಸರ್ಕಾರಿ ನೂತನ ಶಾಲಾ ಕಟ್ಟಡ ಕಟ್ಟುವುದಕ್ಕೆ ತೇಜಸ್ವಿನಿ ರಮೇಶ್ ಮುಂದಾಗಿದ್ದಾರೆ. ಶಾಲಾ ಕಟ್ಟಡಕ್ಕೆ ಗ್ರಾಮದಲ್ಲಿನ ಸರ್ಕಾರಿ ಕರಾಬು ಜಾಗ 178-88 ಅಡಿ ಅಳತೆಯ ನಿವೇಶನವನ್ನ ಗ್ರಾಮಪಂಚಾಯತಿ ವತಿಯಿಂದ ಮಂಜೂರು ಮಾಡಿಸಿಕೊಂಡಿದ್ದಾರೆ. ಶಾಲಾ ಕಟ್ಟಡ ಕಟ್ಟುವುದಕ್ಕೆ ಬಂದಿದ್ದ ಒಂದು ಕೋಟಿ ರೂ. ಅನುದಾನ ಸಹ ವಾಪಸ್ ಆಗಿದೆಯಂತೆ. ಆದರೆ ಹೇಗೋ ಕಾಮಗಾರಿ ಆರಂಭ ಮಾಡಿಸಿರುವ ತೇಜಸ್ವಿನಿ ರಮೇಶ್ ಜಾಗದಲ್ಲಿ ಶಾಲಾ ಕಟ್ಟಡದ ಕಾಮಗಾರಿ ಆರಂಭಿಸಿದ್ದಾರೆ.

    ಶಾಲಾ ಕಟ್ಟಡ ಕಟ್ಟುವುದಕ್ಕೆ ನೀಡಿದ್ದ 178-88 ಅಡಿ ಜಾಗದ ಜೊತೆಗೆ ಹೆಚ್ಚುವರಿ ಜಾಗವನ್ನ ಆಕ್ರಮಿಸಿಕೊಳ್ಳಲಾಗಿದೆ. ಇದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಎಂಬವರ ಮನೆಗೆ ಹೋಗಿ ಬರುವುದಕ್ಕೆ ರಸ್ತೆಯೇ ಇಲ್ಲದಂತಾಗಿದೆ. ಹೀಗಾಗಿ ಶಾಲಾ ಕಟ್ಟಡ ಕಾಮಗಾರಿಯನ್ನ ಸ್ಥಗಿತ ಮಾಡುವಂತೆ ಗ್ರಾಮ ಪಂಚಾಯತಿ ಆಧ್ಯಕ್ಷರೇ ಸ್ವತಃ ಪಿಡಿಓಗೆ ದೂರು ನೀಡಿದ್ದಾರೆ.

    ಈ ಮಧ್ಯ ಶಾಲಾ ಕಟ್ಟಡ ವಿವಾದ ತಾರಕಕ್ಕೇರಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಅವರ ಕಡೆಯವರು ಮತ್ತು ತೇಜಸ್ವನಿ ರಮೇಶ್ ಅವರ ಬೆಂಬಲಿಗರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ತೇಜಸ್ವಿನಿ ರಮೇಶ್ ಗ್ರಾಮ ಪಂಚಾಯತಿ ಅಧ್ಯಕ್ಷರ ಕಡೆಯವರ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಸದ್ಯ ಗ್ರಾಮದಲ್ಲಿ ಶಾಲಾ ಕಟ್ಟಡ ಕಟ್ಟುವ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಗ್ರಾಮಪಂಚಾಯತಿ ಆಧ್ಯಕ್ಷ ಹಾಗೂ ತೇಜಸ್ವಿನಿ ರಮೇಶ್ ನಡುವೆ ಜಟಾಪಟಿ ಮುಂದುವರಿದಿದೆ. ಹೀಗಾಗಿ ಗ್ರಾಮದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸಹ ಮೊಕ್ಕಾಂ ಹೂಡಿದ್ದಾರೆ.

  • ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿದ 30 ಜನರಿದ್ದ ಬಸ್

    ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿದ 30 ಜನರಿದ್ದ ಬಸ್

    – ತಪ್ಪಿದ ಭಾರೀ ಅನಾಹುತ, 20 ವಿದ್ಯಾರ್ಥಿಗಳು ಬಜಾವ್

    ಚಿಕ್ಕಬಳ್ಳಾಪುರ: ಕೆಎಸ್ಆರ್‌ಟಿಸಿ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಬಳಿ ನಡೆದಿದೆ.

    ಅದೃಷ್ಟವಶಾತ್ ಬಸ್‍ನಲ್ಲಿದ್ದ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಅಂದಹಾಗೆ ತೂಬಗೆರೆ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊರಡಿದ್ದ ಕೆಎಸ್ಆರ್‌ಟಿಸಿ ಬಸ್ ಮಾರ್ಗ ಮಧ್ಯದಲ್ಲಿನ ತಿರುಮಗೊಂಡನಹಳ್ಳಿಯ ಬಳಿ ಬರುವಾಗ ಬಸ್‍ನ ಸ್ಟೇರಿಂಗ್ ಕಟ್ಟಾಗಿತ್ತು. ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯಲ್ಲಿ ಕಟ್ಟಲಾಗಿದ್ದ ಹಸುವಿಗೆ ಗುದ್ದಿ ನಂತರ ಕೊಟ್ಟಿಗೆಯನ್ನು ನೆಲ ಸಮ ಮಾಡಿದೆ.

    ರಸ್ತೆ ಬದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿನ ಹಳ್ಳಕ್ಕೆ ನುಗ್ಗಿದೆ. ಬಸ್‍ನಲ್ಲಿ ಕಾಲೇಜು ಮತ್ತು ಶಾಲೆಗೆ ಹೊರಟ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಯಾರಿಗೂ ಸಣ್ಣ ಪುಟ್ಟ ಗಾಯಗಳು ಸಹ ಆಗದೆ ಪ್ರಾಣಾಪಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಬಸ್ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಹಸುವಿನ ಕಣ್ಣಿನ ಹತ್ತಿರ ಪೆಟ್ಟಾಗಿದೆ. ಮತ್ತೊಂದೆಡೆ ಬೆಳೆಗ್ಗೆ ಘಟನೆ ನಡೆದಿದ್ದರಿಂದ ತಿರುಮಗೊಂಡನಹಳ್ಳಿಯ ಬಳಿ ಜನಜಂಗುಳಿ ಇರಲಿಲ್ಲ. ಒಂದು ವೇಳೆ ಜನಜಂಗುಳಿ ಇದ್ದ ವೇಳೆ ಘಟನೆ ಸಂಬಂಧಿಸಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಕೆಎಸ್ಆರ್‌ಟಿಸಿ ಡಿಪೋ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಡಕೋಟ ಬಸ್‍ಗಳನ್ನ ಹಾಕುತ್ತಾರೆ. ಇದರಿಂದ ದಾರಿ ಮಧ್ಯೆ ಬಸ್ ಕೆಟ್ಟು ನಿಲ್ಲುವುದು. ಇಂತಹ ಘಟನೆಗಳು ನಡೆಯುವುದು ಸಾಮಾನ್ಯವಾಗಿದೆ ಅಂತ ಗ್ರಾಮಸ್ಥರು ಡಿಪೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಲರ್ ಫುಲ್ ಅಂಗನವಾಡಿ ಹಬ್ಬ

    ಕಲರ್ ಫುಲ್ ಅಂಗನವಾಡಿ ಹಬ್ಬ

    ಬೆಂಗಳೂರು: ಪ್ರತಿ ದಿನ ಮುಂಜಾನೆ ಎದ್ದು ಶಿಸ್ತಾಗಿ ರೆಡಿಯಾಗಿ ಅಂಗನವಾಡಿಗೆ ಹೋಗ್ತಿದ್ದ ಮಕ್ಕಳು. ಮಕ್ಕಳು ಅಂಗನವಾಡಿ ಬಾಗಿಲಿಗೆ ಬರ್ತಿದ್ದ ಹಾಗೆ ಅವರನ್ನ ತಾಯಿಯಂತೆ ಪೋಷಿಸಿ ಮಧ್ಯಾಹ್ನದವರೆಗೆ ಅವರ ಕಾಳಜಿ ಮಾಡೋ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಇವರೆಲ್ಲ ಒಟ್ಟು ಸೇರಿ ವಿಶೇಷ ಹಬ್ಬ ಅಚರಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ, ಸರ್ಕಾರೇತರ ಸಂಸ್ಥೆಗಳಾದ ಮಕ್ಕಳ ಜಾಗೃತಿ ಹಾಗೂ ಸೇವ್ ದಿ ಚಿಲ್ಡರ್ನ್ ಸಂಸ್ಥೆಗಳು ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದ ಬೃಹತ್ ವೇದಿಕೆಯಲ್ಲಿ ಅಂಗನವಾಡಿ ಹಬ್ಬ ಆಚರಿಸಿದರು.

    ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಂಗನವಾಡಿಯ ಪುಟ್ಟ ಮಕ್ಕಳು ಹಾಗೂ ಪೋಷಕರು ಅಂಗನವಾಡಿ ಹಬ್ಬದಲ್ಲಿ ಭಾಗಿಯಾಗಿದ್ದರು. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಕಾರ್ಯಕ್ರಮಕ್ಕ ಚಾಲನೆ ಕೊಟ್ಟರು. ಅಷ್ಟೇ ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಹಾಗೂ ಐ.ಎ.ಎಸ್ ಅಧಿಕಾರಿಯಾದ ದಯಾನಂದ್, ಅನಿತಾ ಲಕ್ಷ್ಮಿ, ಸಿ.ಡಿ.ಪಿ.ಓ, ಪುಪ್ಪಲತಾ.ಡಿ.ರಾಯರ್, ಡೆಪ್ಯೂಟಿ ಡೈರೆಕ್ಟರ್, ದೊಡ್ಡಬಳ್ಳಾಪುರ, ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್, ಮಕ್ಕಳ ಜಾಗೃತಿ ಸಂಸ್ಥಾಪಕರಾದ ಜಾಯ್ ಶ್ರೀನಿವಾಸನ್, ಮಕ್ಕಳ ಜಾಗೃತಿಯ ಸಿ.ಇ.ಓ ಮುರಳಿ ಹಾಗೂ ಇನ್ನು ಇತರೆ ಸರ್ಕಾರಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಇನ್ನು ಹಬ್ಬದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಅಂಗನವಾಡಿಗಳ ಉತ್ತಮ ಕಾರ್ಯವೈಖರಿಯ ಪ್ರದರ್ಶನ, 0-6 ವರ್ಷ ವಯಸ್ಸಿನ ಮಕ್ಕಳಿಗೆ ಬಾಲ್ಯದ ಆರೈಕೆ, ಶಾಲಾ ಪೂರ್ವ ಶಿಕ್ಷಣದ ಮಹತ್ವ ತಿಳಿಸಲಾಯಿತು. ಜೊತೆಗೆ ಮಕ್ಕಳು ಹಾಗೂ ಪೋಷಕರು ಆಯೋಜಿಸಲಾಗಿದ್ದ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾದ್ರು. ಅಷ್ಟೇ ಅಲ್ಲದೆ ಅಂಗನವಾಡಿ ಮಕ್ಕಳು ಬಣ್ಣ ಬಣ್ಣದ ಉಡುಪು ತೊಟ್ಟು ಸ್ಟೇಜ್ ಮೇಲೆ ಕುಣಿದು ಕುಪ್ಪಳಿಸಿದ್ರೆ ಇತ್ತ ಅಂಗನವಾಡಿ ಕಾರ್ಯಕರ್ತೆಯರು ಹೆಜ್ಜೆ ಹಾಕಿದ್ರು. ಅಂಗನವಾಡಿ ಮಕ್ಕಳು ಮಾತ್ರವಲ್ಲದೆ ವಿಶೇಷ ಚೇತನ ಮಕ್ಕಳು ಕೂಡ ಸ್ಟೇಜ್ ಹತ್ತಿ ಕ್ಯಾಟ್ ವಾಕ್ ಮಾಡಿದ್ರು. ಒಟ್ಟಾರೆ ದೊಡ್ಡಬಳ್ಳಾಪುರದಲ್ಲಿ ನಡೆದ ಅಂಗನವಾಡಿ ಹಬ್ಬ ಫುಲ್ ಕಲರ್ ಫುಲ್ ಆಗಿತ್ತು.

  • ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಸೆಲ್ಫಿಗೆ ಪೋಸ್ ಕೊಟ್ಟ ಬಿಎಸ್‍ವೈ

    ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಸೆಲ್ಫಿಗೆ ಪೋಸ್ ಕೊಟ್ಟ ಬಿಎಸ್‍ವೈ

    – ಯೇಸು ಪ್ರತಿಮೆ ವಿವಾದಕ್ಕೆ ಪ್ರತಿಕ್ರಿಯಿಸಲು ಸಿಎಂ ನಕಾರ

    ಚಿಕ್ಕಬಳ್ಳಾಪುರ: ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರ ಸೆಲ್ಫಿಗೆ ಪೋಸ್ ಕೊಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ತುಟಿ ಸಹ ಬಿಚ್ಚದೆ ಹೊರಟು ಹೋದ ಪ್ರಸಂಗ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆಯಿತು.

    ದೊಡ್ಡಬಳ್ಳಾಪುರ ಹೊರವಲಯದ ಡಾ.ಅನಿಬೆಸೆಂಟ್ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ 28ನೇ ಸ್ಕೌಟ್ಸ್ ಅಂಡ್ ಗೈಡ್ಸ್ ಜಾಂಬೋರೇಟ್‍ಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಕಾರ್ಯಕ್ರಮ ಮುಗಿದ ನಂತರ ಬೆಂಗಳೂರಿನತ್ತ ಹೊರಟ ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಿಎಂ ಸರ್ ಅಂತ ಕೂಗಿದರೂ ಕೇಳಿಯೂ ಕೇಳದಂತೆ ಬಿ.ಎಸ್.ಯಡಿಯೂರಪ್ಪ ಅವರು ಕಾರು ಹತ್ತಿದರು. ಆದರೆ ಕಾರು ಹತ್ತಿದ ಮೇಲೆ ಅಲ್ಲಿಗೆ ಬಂದ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಸಾರ್ ಒಂದು ಸೆಲ್ಫಿ ಅಂದಿದ್ದೇ ತಡ ನಸುನಗುತ್ತಾ ಸಿಎಂ ಸೆಲ್ಫಿಗೆ ಪೋಸ್ ಕೊಟ್ಟರು. ಹೀಗಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಯೇಸು ಪ್ರತಿಮೆ ವಿವಾದಕ್ಕೆ ಪ್ರತಿಕ್ರಿಯಿಸದೇ ಇರಲು ಸಿಎಂ ಅಂತರ ಕಾದುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.

    ಬಸವಳಿದಂತೆ ಭಾಸವಾದ ಸಿಎಂ:
    ಸಂಜೆ 4 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರು ಯಾಕೋ ಒಂಥರ ಬಸವಳಿದಂತೆ ಕಂಡು ಬಂದರು. ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಕ್ರೀಯಾಶೀಲರಾಗಿ ಇರಬೇಕಾದ ಸಿಎಂ ಯಾಕೋ ಏನೋ ಯಾರ ಜೊತೆಯೂ ಬಹಳಷ್ಟು ಮಾತನಾಡದೆ ಮೌನಿಯಾಗಿದ್ದರು. ಯಾರಾದರು ಮಾತನಾಡಿದರೆ ಅಷ್ಟೇ ಮಾತನಾಡಿ ಸುಮ್ಮನಾಗುತ್ತಿದ್ದರು. ಸಿಎಂ ಯಡಿಯೂರಪ್ಪ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಂತೆ ಕಂಡುಬಂತು. ಇತ್ತ ಮಾಜಿ ಸಚಿವ ಯುಟಿ ಖಾದರ್ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಮವಸ್ತ್ರ ಧರಿಸಿ ಕುಳಿತಿದ್ದರು. ಸಿಎಂ ಸೌಜನ್ಯಕ್ಕಾದರೂ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ.

    ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಶಿಸ್ತು ಸಂಯಮದಿಂದ ಬಹಳಷ್ಟು ಸಮಯ ಕೂತಿದ್ದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. 5 ನಿಮಿಷ ಭಾಷಣ ಮಾಡಿದ ಅವರು, ರಾಜ್ಯದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗೆ 10 ಕೋಟಿ ರೂಪಾಯಿಗಳ ಅನುದಾನ ಕೊಡುವ ಭರವಸೆ ನೀಡಿದರು. ಸಂಜೆ 5:30ರ ನಂತರ ಕಾರ್ಯಕ್ರಮದಿಂದ ನಿರ್ಗಮಿಸಿದರು.

  • ಮೊಪೆಡ್ ಚೇಸ್‍ಗೆ ಯತ್ನಿಸಿ ಡಿಕ್ಕಿ ಹೊಡೆದ ಬೈಕ್- ದಂಪತಿ ಸೇರಿ ನಾಲ್ವರ ಮೇಲೆ ಹರಿದ ಟ್ರಕ್

    ಮೊಪೆಡ್ ಚೇಸ್‍ಗೆ ಯತ್ನಿಸಿ ಡಿಕ್ಕಿ ಹೊಡೆದ ಬೈಕ್- ದಂಪತಿ ಸೇರಿ ನಾಲ್ವರ ಮೇಲೆ ಹರಿದ ಟ್ರಕ್

    ಬೆಂಗಳೂರು: ಟ್ರಕ್, ಮೊಪೆಡ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ದಂಪತಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ಸಮೀಪದ ಮೆಣಸಿ ಗ್ರಾಮದ ಬಳಿ ನಡೆದಿದೆ.

    ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿಯ ಶಾಂತಮ್ಮ, ಸತೀಶ್ ದಂಪತಿ ಹಾಗೂ ಅಜ್ಜನಕಟ್ಟೆ ಗ್ರಾಮದ ಮಂಜುನಾಥ್, ನರಸಿಂಹಮೂರ್ತಿ ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 207ರ ಡಾಬಸ್ ಪೇಟೆ ಹಾಗೂ ದೊಡ್ಡಬಳ್ಳಾಪುರ ಬಳಿಯ ಮೆಣಸಿ ಗ್ರಾಮದ ಬಳಿ ದುರಂತ ಸಂಭವಿಸಿದ್ದು, ಸ್ಥಳದಲ್ಲಿಯೇ ನಾಲ್ವರೂ ಮೃತಪಟ್ಟಿದ್ದಾರೆ.

    ಶಾಂತಮ್ಮ ಹಾಗೂ ಸತೀಶ್ ದಂಪತಿ ಮೊಪೆಡ್‍ನಲ್ಲಿ ಗೊಲ್ಲಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಹೋಗುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ವೇಗವಾಗಿ ಬಂದ ಯುವಕರು ಮೊಪೆಡ್ ಹಿಂದಿಕ್ಕಲು ಯತ್ನಿಸಿದ್ದರು. ಆದರೆ ಸವಾರನ ನಿಯಂತ್ರಣ ಸ್ಕೂಟಿ ಮೊಪೆಡ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಷಣಾರ್ಧದಲ್ಲಿ ಹಿಂಬದಿಯಿಂದ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದ ಎರಡು ಬೈಕ್‍ಗಳ ಮೇಲೆ ಹರಿದಿದೆ. ಇದರಿಂದಾಗಿ ದಂಪತಿ ಹಾಗೂ ಯುವಕರು ಗಂಭೀರವಾಗಿ ಗಾಯಗೊಂಡು ಪ್ರಾಣಬಿಟ್ಟಿದ್ದಾರೆ.

    ಲಾರಿ ಹರಿದ ಪರಿಣಾಮ ಸ್ಕೂಟಿ ಛಿದ್ರ ಛಿದ್ರವಾಗಿದೆ. ಈ ಘಟನೆ ಆಘಾತಕ್ಕೆ ಒಳಗಾದ ಚಾಲಕ ಸ್ಥಳದಲ್ಲೇ ಟ್ರಕ್ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗ್ಳೂರು ಟೆಕ್ಕಿಗಳ ರಕ್ಷಣೆ

    ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗ್ಳೂರು ಟೆಕ್ಕಿಗಳ ರಕ್ಷಣೆ

    ಕಾರವಾರ: ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಮೂವರು ಎಂಜಿನಿಯರ್‍ ಗಳನ್ನು ಲೈಫ್ ಗಾರ್ಡ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

    ಬೆಂಗಳೂರು ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಹರೀಶ್ (24), ಆನಂದ್ (24) ಮತ್ತು ಸುರೇಶ್ (24) ರಕ್ಷಣೆಗೊಳಗಾದವರಾಗಿದ್ದು, ಶಶಿಧರ್ ನಾಯ್ಕ, ಚಂದ್ರಶೇಖರ್ ಹರಿಕಾಂತ್ ರಕ್ಷಿಸಿದ್ದಾರೆ.

    ಬೆಂಗಳೂರಿನಿಂದ ಐದು ಜನ ಗೆಳೆಯರೊಂದಿಗೆ ಮುರುಡೇಶ್ವರಕ್ಕೆ ಆಗಮಿಸಿದ್ದ ಇವರು ಸಮುದ್ರದಲ್ಲಿ ಅಲೆಗಳ ಅಬ್ಬರವಿದ್ದರೂ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗೆ ಮೂರು ಜನರು ಕೊಚ್ಚಿಹೋಗಿದ್ದಾರೆ. ಇದನ್ನು ಗಮನಿಸಿದ ಲೈಫ್ ಗಾರ್ಡ್ ತಮ್ಮ ಜೀವದ ಹಂಗು ತೊರೆದು ರಭಸದ ಅಲೆಯಲ್ಲಿಯೂ ಮೂರು ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಮನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಗ್ರೆನೇಡ್ ಪತ್ತೆ

    ರಾಮನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಗ್ರೆನೇಡ್ ಪತ್ತೆ

    ರಾಮನಗರ: ನಿನ್ನೆ ಬಂಧಿಸಿದ ಹಬೀಬುರ್ ರೆಹಮಾನ್ ಅವರನ್ನು ವಿಚಾರಣೆ ನಡೆಸಿದ ವೇಳೆ ಆತನ ಹೇಳಿಕೆಯ ಆಧಾರದ ಮೇಲೆ ಎನ್‍ಐಎ ಎರಡು ಐಇಡಿಗಳನ್ನು ಇಂದು ವಶಪಡಿಸಿಕೊಂಡಿದೆ.

    ಬಾಂಬ್ ನಿಷ್ಕ್ರೀಯ ದಳದ ಸಹಾಯದಿಂದ ರಾಮನಗರದ ಬಳಿಯ ರೇಲ್ವೆ ಹಳಿಯ ರಾಜಕಾಲುವೆಯಲ್ಲಿದ್ದ ಎರಡು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೆಂಗಳೂರು ಪೊಲೀಸರು ಐಇಡಿಗಳನ್ನು ಪತ್ತೆ ಹಚ್ಚಿದ್ದಾರೆ.

    ಬೆಂಗಳೂರಿನಲ್ಲಿ ಹಲವು ದುಷ್ಕøತ್ಯಗಳಲ್ಲಿ ಭಾಗಿಯಗಿರುವ ಕುರಿತು ಆರೋಪಿ ಬಹಿರಂಗಪಡಿಸಿದ್ದು, ಜೆಎಂಬಿ ಕಾರ್ಯ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸಲು 2018ರಲ್ಲಿ ಬೆಂಗಳೂರಿಗೆ ಆಗಮಿಸಿದ್ದಾನೆ.

    ದೊಡ್ಡಬಳ್ಳಾಪುರ ಮಸೀದಿಯೊಂದರಲ್ಲಿ ತಂಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ಕಾರ್ಯಾಚರಣೆ ನಡೆಸಿ ಮಂಗಳವಾರ ಬಂಧಿಸಿತ್ತು.

    ಬಾಂಗ್ಲಾದೇಶದ ಜಮತ್-ಉಲ್ಲಾ-ಮುಜ್ಜಾಹೀದಿನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬರ್ ರೆಹಮಾನ್ ಎಂಬ ಉಗ್ರನನ್ನು ಮಂಗಳವಾರ ಮಧ್ಯಾಹ್ನ ಬೆಂಗಳೂರು ಹಾಗೂ ಕೋಲ್ಕತಾ ಎನ್‍ಐಎ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಸೀದಿ ಬಳಿ ಬಂಧಿಸಿದ್ದರು.

    ಬಂಧಿತ ಉಗ್ರ ಹಬೀಬುಲ್ಲಾ 2013ರ ಭೋದಗಯಾ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಪಶ್ಚಿಮ ಬಂಗಾಳದ ಬುದ್ರ್ವಾನ್ ಸ್ಫೋಟದ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ 8 ಜನ ಭಾಗಿಯಾಗಿದ್ದು, ಮೂವರ ಬಂಧನವಾಗಿತ್ತು. ಉಳಿದ 5 ಜನಕ್ಕೆ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದರು. ಕಳೆದ ಐದು ದಿನಗಳಿಂದ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ಬೆಂಗಳೂರಿನಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಅನ್ವರ್ ಎಂಬಾತನೊಂದಿಗೆ ಈತ ನಂಟು ಹೊಂದಿದ್ದು, ಮಸೀದಿಗೆ ಬಂದು ಹೋಗುತ್ತಿದ್ದ. ಕೆಲ ಸಮಯದ ಬಳಿಕ ಅನ್ವರ್ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಮೌಲ್ವಿಯಾಗಿ ನೇಮಕಗೊಂಡಿದ್ದ. ಹೀಗಾಗಿ ಆಗಾಗ ಮೌಲ್ವಿ ಅನ್ವರ್ ಭೇಟಿ ಮಾಡಲು ದೊಡ್ಡಬಳ್ಳಾಪುರದ ಮಸೀದಿಗೆ ಬರುತ್ತಿದ್ದ. ಇದೇ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಬಾಡಿಗೆ ಮನೆ ಮಾಡಲು ಉಗ್ರ ಪ್ಲಾನ್ ಮಾಡಿದ್ದನು ಮತ್ತು ಮನೆಯನ್ನು ಸಹ ನೋಡಿಕೊಂಡು ಬಂದಿದ್ದ.

    ಬಂಧಿತ ಉಗ್ರ ಹಬೀಬುಲ್ಲಾ ರೆಹಮಾನ್‍ನನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ ಮಸೀದಿಯ ಮೌಲ್ವಿ ಅನ್ವರ್‍ನನ್ನು ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ. ಉಗ್ರನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಈ ಹಿಂದೆ ತಿಳಿಸಿತ್ತು.