Tag: doctors

  • ಆಟೋದಲ್ಲೇ ಗಂಡು ಮಗುವಿಗೆ ಜನ್ಮ- ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು

    ಆಟೋದಲ್ಲೇ ಗಂಡು ಮಗುವಿಗೆ ಜನ್ಮ- ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು

    ಮಂಡ್ಯ: ಒಂದೆಡೆ ರಾಜ್ಯದಲ್ಲಿ ಖಾಸಗಿ ವೈದ್ಯರು ಮುಷ್ಕರ ಮಾಡುತ್ತಿದ್ದು, ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಆದರೆ ಮಂಡ್ಯದಲ್ಲಿ ಗರ್ಭಿಣಿಯೊಬ್ಬರಿಗೆ ಆಟೋದಲ್ಲೇ ಹೆರಿಗೆಯಾಗಿದ್ದು, ವಿಚಾರ ತಿಳಿದು ಚಿಕಿತ್ಸೆ ನೀಡಿ ಸರ್ಕಾರಿ ವೈದ್ಯರು ಮಾನವೀಯತೆಯನ್ನು ಮೆರೆದಿದ್ದಾರೆ.

    ಜಿಲ್ಲೆಯ ಷುಗರ್ ಟೌನ್ ನಿವಾಸಿ ರವಿಯವರ ಪತ್ನಿ ಸವಿತ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಕುಟುಂಬದವರು ಅವರನ್ನು ಆಟೋದಲ್ಲಿ ಕರೆದುಕೊಂಡು ಮಿಮ್ಸ್ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ಚೀಟಿಗಾಗಿ ಸರತಿ ಸಾಲಿನಲ್ಲಿ ಸವಿತ ಮನೆಯವರು ಕ್ಯೂ ನಿಂತಿದ್ದಾರೆ. ಆದರೆ ಮುಷ್ಕರದಿಂದ ವೈದ್ಯರ ಕೊರತೆ ಇರುವುದರಿಂದ ರೋಗಿಗಳ ಸಂಖ್ಯೆ ಅಧಿಕವಾಗಿದ್ದು, ಕ್ಯೂ ತುಂಬಾ ಉದ್ದವಿತ್ತು.

    ಆಟೋದಲ್ಲಿದ್ದ ಸವಿತಾ ಅವರಿಗೆ ಚೀಟಿ ಪಡೆಯುವಷ್ಟರಲ್ಲೇ ಹೆರಿಗೆ ನೋವು ತುಂಬಾ ಕಾಣಿಸಿಕೊಂಡಿದೆ. ಪರಿಣಾಮ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ವಿಚಾರ ತಿಳಿದ ವೈದ್ಯರು ಆಟೋ ಬಳಿಯೇ ಧಾವಿಸಿ ಚಿಕಿತ್ಸೆ ನೀಡಿದ್ದಾರೆ.

    ಮುಷ್ಕರದಿಂದ ಹೆರಿಗೆಗಾಗಿ ಮಿಮ್ಸ್ ಆಸ್ಪತ್ರೆಗೆ ಬರುತ್ತಿರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದ್ದು, ಪ್ರ್ರತಿನಿತ್ಯ ಸುಮಾರು 17 ಹೆರಿಗೆಗಳು ಮಿಮ್ಸ್ ಆಸ್ಪತ್ರೆಯಲ್ಲಿ ಆಗುತ್ತಿತ್ತು. ಆದರೆ ಮುಷ್ಕರದಿಂದ ದಿನಕ್ಕೆ 20ಕ್ಕಿಂತ ಹೆಚ್ಚು ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

  • ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ?

    ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ?

    ಬೆಂಗಳೂರು: ರಾಜ್ಯದಲ್ಲಿ ಈಗ ಆರೋಗ್ಯ ಎಮರ್ಜೆನ್ಸಿ ನಿರ್ಮಾಣವಾಗಿದೆ. ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ(ಕೆಪಿಎಂಇ) ವೈದ್ಯರ ಪ್ರತಿರೋಧ ಗುರುವಾರದಿಂದ ಮತ್ತಷ್ಟು ಜೋರಾಗಲಿದೆ. ಅನಿರ್ಧಿಷ್ಟಾವಧಿವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಯ ಒಪಿಡಿಗಳು ಕ್ಲೋಸ್ ಆಗಲಿದ್ದು, ಜನರಿಗೆ ಚಿಕಿತ್ಸೆ ಸಿಗುವುದಿಲ್ಲ. ಇದೆಲ್ಲ ಎಲೆಕ್ಷನ್ ಗಿಮಿಕ್ ಅಂತಾ ವೈದ್ಯರು ರಮೇಶ್ ಕುಮಾರ್ ರತ್ತ ಬೊಟ್ಟು ಮಾಡಿದ್ರೆ, ಸಚಿವರು ಪ್ರಾಣ ಹೋದ್ರು ಕಾಯ್ದೆ ಮಂಡಿಸುತ್ತೇನೆ ಅಂತಾ ಪಟ್ಟು ಹಿಡಿದಿದ್ದಾರೆ.

    ಇಂದು ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರ ವಿಧೇಯಕ ವಾಪಸು ಪಡೆಯುವವರೆಗೆ ಬೆಂಗಳೂರಿನಲ್ಲಿ ಸುಮಾರು ಆರು ಸಾವಿರ ಖಾಸಗಿ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆ ಎಂಟು ಗಂಟೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಸಚಿವರ ವಿರುದ್ಧ ಕಿಡಿಕಾರಿರುವ ವೈದ್ಯರು ರಮೇಶ್ ಕುಮಾರ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಹಠಮಾರಿ ಧೋರಣೆ ಮಾಡಿದ್ದಾರೆ ಜನ್ರ ಸಾವಿನ ಹೊಣೆ ಅವ್ರೇ ವಹಿಸಿಕೊಳ್ಳಲಿ ಅಂತಾ ಹೇಳಿದ್ದಾರೆ.

    ಫನಾ ಕಾರ್ಯದರ್ಶಿ, ಡಾ ರವೀಂದ್ರ ಅವರು ಹೊಸ ಬಾಂಬ್ ಹಾಕಿದ್ದು ಸಚಿವ ರಮೇಶ್ ಕುಮಾರ್ ಈ ಮಸೂದೆ ಜಾರಿಗೆ ಚುನಾವಣೆ ಕಾರಣ. ಇದಕ್ಕೆ ತರಾತುರಿಯಲ್ಲಿ ಮಸೂದೆ ಮಂಡನೆಗೆ ಹೊರಟಿದ್ದಾರೆ ಇದನ್ನು ಖುದ್ದು ನನ್ನ ಬಳಿಯೇ ಹೇಳಿಕೊಂಡಿದ್ದಾರೆ ಎಂದರು.

    ಸರ್ಕಾರ ಮೊದಲು ಆರು ಕೋಟಿ ಕನ್ನಡಿಗರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಭರವಸೆ ನೀಡಲಿ ಎಂದು ಆಗ್ರಹಿಸಿದರು.


     

  • ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗ್ತಾರೆ: ಎಚ್‍ಡಿಡಿ ಪ್ರಶ್ನೆ

    ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗ್ತಾರೆ: ಎಚ್‍ಡಿಡಿ ಪ್ರಶ್ನೆ

    ಹಾಸನ: ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುತ್ತಾರೆ ಎಂದು ರಾಜ್ಯ ಸರ್ಕಾರವನ್ನು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದ್ದಾರೆ.

    ರಾಜ್ಯ ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಈಗ ಮಸೂದೆ ತರುವ ಅವಶ್ಯಕತೆ ಇದೆಯೇ? ಕೆಲವರು ಒಳ್ಳೆಯ ವೈದ್ಯರಿದ್ದಾರೆ. ಕೆಲವರು ಕೆಟ್ಟವರೂ ಇದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುವುದಿಲ್ಲ ಎಂದು ಹೇಳಿದರು.

    ವೈದ್ಯರಿಗೆ ವಕೀಲರ ನೇಮಕಕ್ಕೂ ಅವಕಾಶ ಇಲ್ಲದಂತಹ ಹೊಸ ಕಾನೂನು ಬೇಕಾ? ಸಾಲ ಮಾಡಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಅದೆಲ್ಲವನ್ನು ದುಡಿಯಬೇಕಲ್ಲವೆ ಎಂದು ಪ್ರಶ್ನಿಸಿದರು. ಔಷಧಿ ಕಂಪನಿಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇದೆ. ಕೆಲವು ಕಡೆ ಗ್ರಾಮಗಳಿಗೆ ವೈದ್ಯರು ಹೋಗುವುದಕ್ಕೆ ಹೆದರುತ್ತಾರೆ. ವೈದ್ಯರಿಗೂ ಹಲವಾರು ಸಮಸ್ಯೆಗಳಿವೆ ಅವೆಲ್ಲವನ್ನೂ ಸರಿದೂಗಿಸುವ ಕಾನೂನು ಮಾಡಲಿ ಎಂದು ತಿಳಿಸಿದರು.

    ಪಕ್ಷಾಂತರ ಆಗುತ್ತೆ: ಈಗಾಗಲೇ ಎರಡೂ ರಾಜಕೀಯ ಪಕ್ಷಗಳ ಬಗ್ಗೆ ಜನರಲ್ಲಿ ನಿರಾಸೆ ಭಾವನೆ ಇದೆ. ಗುಜರಾತ್ ಚುನಾವಣೆಯ ನಂತರ ಯಾರು ಯಾರು ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ನ ಹಲವು ನಾಯಕರು ಪಕ್ಷ ಬಿಡುವ ಸೂಚನೆ ಇದೆ. ನಾವು ವಿಕಾಸ ಯಾತ್ರೆ ಮುಖಾಂತರ ಜನರ ಬಳಿ ತಲುಪುವ ಪ್ರಯತ್ನ ಮಾಡುತಿದ್ದೇವೆ ಎಂದರು.

    ಅಂಬರೀಶ್ ಪಕ್ಷ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಅವರು, ಇದೂವರೆಗೂ ನಾವು ಭೇಟಿ ಆಗಿಲ್ಲ. ಈಗಲೇ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾದರೆ ಬಿಜೆಪಿಗೆ ಪಕ್ಷಾಂತರ ಆಗುತ್ತೆ. ಹಾಗೆಯೇ ಬಿಜೆಪಿಗೆ ಹಿನ್ನಡೆ ಆದಲ್ಲಿ ಕಾಂಗ್ರೆಸ್ ಕಡೆ ವಲಸೆ ನಡೆಯುವ ಸಂಭವ ಇರುತ್ತದೆ. ಗುಜರಾತ್ ನಲ್ಲಿ ಎರಡೂ ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಮಾತಿಗೂ ಕೃತಿಗೂ ಬಹಳ ವ್ಯತ್ಯಾಸ ಇದೆ ಎಂದು ಹೇಳಿದರು.

    ಮೌಢ್ಯ ಪ್ರತಿಬಂಧಕ ಮಸೂದೆ ಮಂಡನೆ ವಿಚಾರವಾಗಿ ಮಾತನಾಡಿದ ಅವರು, ಅದೆಲ್ಲ ನಂಬಿಕೆ ಮೇಲೆ ನಡೆಯುತ್ತದೆ. ಶೋಷಣೆ ನಡೆಯದಂತೆ ಕಾನೂನು ತರಲಿ ಎಂದರು.

    ಶ್ರವಣಬೆಳಗೊಳದ ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ಕೆಲಸಗಳು ಚೆನ್ನಾಗಿ ನಡೆಯುತ್ತಿದೆ. ಕೇಂದ್ರದ ಅನುದಾನಕ್ಕೆ ನಾನು ಪ್ರಯತ್ನಿಸಿದೆ. ಆದರೆ ನಿರ್ಲಕ್ಷ್ಯ ಮಾಡಿದ್ದು ಯಾಕೆ ಗೊತ್ತಾಗಿಲ್ಲ ಎಂದು ಹೇಳಿದರು.

     

  • ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಬೆಂಗಳೂರು: ಮಂಗಳವಾರ ಮಕ್ಕಳ ದಿನಾಚರಣೆ ಒಂದು ಕಡೆಯಾದರೆ ಮತ್ತೊಂದು ಕಡೆ, ವೈದ್ಯರು ಮತ್ತು ಸರ್ಕಾರ ನಡುವಿನ ಹೋರಾಟ ಮಕ್ಕಳ ಜೀವವನ್ನೇ ಪರೋಕ್ಷವಾಗಿ ಬಲಿ ಪಡೆದಿದೆ.

    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಜಟಾಪಟಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಎನ್ನುವುದು ದುರದೃಷ್ಟಕರ ಸಂಗತಿ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಬಿಗಿಪಟ್ಟು ಹಿಡಿದಿದ್ದರೆ, ಮಸೂದೆ ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಪರಿಣಾಮ ಅಮಾಯಕರು ಪರಿತಪಿಸುವಂತಾಗಿದೆ.

    ರಾಜ್ಯದ ವಿವಿಧೆಡೆ ವೈದ್ಯರು ಲಭ್ಯವಿಲ್ಲದಿರುವುದರಿಂದ, ಸೂಕ್ತ ಸೌಲಭ್ಯಗಳಿಲ್ಲದೇ ಜನಸಾಮಾನ್ಯರು ಜೀವ ತೆತ್ತಿದ್ದಾರೆ. ವಿಧೇಯಕ ವಿಚಾರದಲ್ಲಿ ವೈದ್ಯರೊಂದಿಗೆ ಜಿದ್ದಿಗೆ ಬಿದ್ದಿರುವ ಸರ್ಕಾರ, ರಾಜ್ಯದ ಜನತೆಗೆ ಸಾವಿನ ಭಾಗ್ಯ ಕರುಣಿಸಿದೆ.

    ಎಲ್ಲಿ ಯಾರು ಮೃತಪಟ್ಟಿದ್ದಾರೆ?
    ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ.

    ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 52 ವರ್ಷದ ಶೇಖಪ್ಪ ಎಂಬುವರು ಹೃದಯಾಘಾತದಿಂದ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಪರಿಷತ್‍ನಲ್ಲಿ ಕಣ್ಣೀರಿಟ್ಟ ರಮೇಶ್ ಕುಮಾರ್: ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?

  • ರಾಜ್ಯದಲ್ಲಿ ಖಾಸಗಿ ಆಸ್ಪತ್ರೆ ಬಂದ್: ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ ಗರ್ಭಿಣಿಯರು

    ರಾಜ್ಯದಲ್ಲಿ ಖಾಸಗಿ ಆಸ್ಪತ್ರೆ ಬಂದ್: ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ ಗರ್ಭಿಣಿಯರು

    ಬೀದರ್: ಖಾಸಗಿ ಆಸ್ಪತ್ರೆ ಬಂದ್ ಆಗಿದ್ದರಿಂದ ನೂರಾರು ಗರ್ಭಿಣಿಯರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹುಮ್ನಾಬಾದ್, ಔರಾದ್, ಭಾಲ್ಕಿ, ಬಸವಕಲ್ಯಾಣದ ದೂರದ ಹಳ್ಳಿಗಳಿಂದ ಬಂದಿದ್ದರೂ ಯಾರು ಚಿಕಿತ್ಸೆಗೆ ಸ್ಪಂದಿಸಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತು ಗರ್ಭಿಣಿಯರು ಚಿಕಿತ್ಸೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

    ಹೀಗಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಚಿಕಿತ್ಸೆ ಸಿಗದೆ ಇದ್ದಾಗ ನೂರಾರು ಗರ್ಭಿಣಿಯರು ಸೇರಿ ಆಸ್ಪತ್ರೆಯ ಸೂಪರ್ ಇಂಡೆಟ್ ರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡಾ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತ್ತು.

    ನಾವು ಪ್ರತಿದಿನ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ಇಂದೂ ಕೂಡಾ ಯಾವ ವೈದ್ಯರು ನಮಗೆ ಚಿಕ್ಸಿತ್ಸೆ ನೀಡುತ್ತಿಲ್ಲವಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

  • ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ- ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿನಿ

    ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ- ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿನಿ

    ಕಾರವಾರ: ಖಾಸಗಿ ಆಸ್ಪತ್ರೆಯ ವೈದ್ಯರು ಸರ್ಕಾರದ ವಿರುದ್ಧ ಶುಕ್ರವಾರ ಮುಷ್ಕರ ಮಾಡಿದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗೋರ್ಸಗದ್ದೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ 21 ವರ್ಷದ ರಾಜೇಶ್ವರಿ ಮೃತ ದುರ್ದೈವಿ. ರಾಜೇಶ್ವರಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯನ್ನು ಮಂಚಿಕೇರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಚಕ್ಕರ್ ಹಾಕಿ ಆಸ್ಪತ್ರೆಗೆ ಬೀಗ ಜಡಿದಿದ್ದರು. ಖಾಸಗಿ ಆಸ್ಪತ್ರೆಗೆ ಹೋಗೋಣ ಅಂದ್ರೆ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಬಂದ್ ಆಗಿದ್ದವು. ಇದರಿಂದ ವಿದ್ಯಾರ್ಥಿನಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಆಸ್ಪತ್ರೆಯ ಬಾಗಿಲಲ್ಲೇ ಜೀವ ಬಿಟ್ಟಿದ್ದಾರೆ.

    ಘಟನೆ ನಡೆದ ಸ್ಥಳಕ್ಕಾಗಮಿಸಿದ ಸಿಬ್ಬಂದಿಯನ್ನು ರಾಜೇಶ್ವರಿ ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷಯ ರೋಗಿಗಳಿಗೆ ಮನೆಗೆ ಹೋಗಿ ಚಿಕಿತ್ಸೆ ನೀಡಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

  • ಬಿಸ್ಕೆಟ್ ತಿಂದು 100 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

    ಬಿಸ್ಕೆಟ್ ತಿಂದು 100 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

    ಲಕ್ನೋ: ಶಾಲೆಯಲ್ಲಿ ಬಿಸ್ಕೆಟ್ ತಿಂದು ಸುಮಾರು 100 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಜಿಲ್ಲೆಯ ಉತ್ತರ ಪ್ರದೇಶದ ರಾಯಾ ಪ್ರದೇಶದಲ್ಲಿ ಬುಧವಾರ ನಡೆದಿದೆ.

    ಅಸ್ವಸ್ಥಗೊಂಡ ಮಕ್ಕಳು ರಾಯಾ ಪ್ರದೇಶದ ದೀನ್‍ದಯಾಳ್ ಸರ್ಕಾರಿ ವಸತಿ ಶಾಲೆಗೆ ಸೇರಿದವರಾಗಿದ್ದು, ಬುಧವಾರ ಸಂಜೆ ಮಕ್ಕಳಿಗೆ ಬಿಸ್ಕೆಟ್ ನೀಡಲಾಗಿದೆ. ಮಕ್ಕಳು ಬಿಸ್ಕೆಟ್ ತಿಂದು ಕೆಲವೇ ನಿಮಿಷಗಳಲ್ಲಿ ಮಕ್ಕಳಿಗೆ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಶಾಲಾ ಸಿಬ್ಬಂದಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ಮಕ್ಕಳೂ 10-14 ವರ್ಷದೊಳಗಿನವರಾಗಿದ್ದು, 100 ಮಕ್ಕಳ ಪೈಕಿ 45 ಮಕ್ಕಳ ಸ್ಥಿತಿ ಗಂಭೀರವಾಗಿದೆ. ಇನ್ನುಳಿದ 55 ಮಕ್ಕಳನ್ನು ಪರೀಕ್ಷಿಸಲಾಗುತ್ತಿದೆ ಎಂದು ವೈದ್ಯಕೀಯ ಅಧಿಕಾರಿ ಸತೀಶ್ ಸಿಂಗ್ ಅವರು ಹೇಳಿದ್ದಾರೆ.

    ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಘಟನೆಗೆ ಖಚಿತ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ ಎಂದು ಜಿಲ್ಲಾಧಿಕಾರಿ ವಿಶಾಕ್ ಜಿ ಹೇಳಿದ್ದಾರೆ.

  • ನ.3 ರಂದು ಕರ್ನಾಟಕದ ಖಾಸಗಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

    ನ.3 ರಂದು ಕರ್ನಾಟಕದ ಖಾಸಗಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

    ಬೆಂಗಳೂರು: ದುಬಾರಿ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು `ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017′ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3 ರಂದು ಮುಷ್ಕರ ನಡೆಸಲಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಡಾ. ರವೀಂದ್ರ, ಇದೇ ವಿಚಾರವಾಗಿ ಜೂನ್ 16 ರಂದೇ ಪ್ರತಿಭಟನೆ ನಡೆಸಿದ್ದೇವೆ. ಅಂದು ಸಿಎಂ ಸೇರಿದಂತೆ ಆರೋಗ್ಯ ಸಚಿವರನ್ನೂ ಸಹ ಭೇಟಿ ಮಾಡಿದ್ದು, ಆದರೆ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನವೆಂಬರ್ 3 ರಂದು ನಾವು ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

    ಸರ್ಕಾರ ಈಗ ಹೊಸದಾಗಿ ಕುಂದು ಕೊರತೆ ಪರಿಹಾರ ಸಮಿತಿ ಜಾರಿ ತರಲು ನಿರ್ಧಾರ ಮಾಡಿದ್ದಾರೆ. ಆದರೆ ಇದರಲ್ಲಿ ಯಾವ ವೈದ್ಯರ ವಿರುದ್ಧ ದೂರು ಹೂಡಿದ್ದಾರೋ, ಆ ವೈದ್ಯರು ಲಾಯರ್ ನೇಮಕ ಮಾಡುವ ಹಾಗಿಲ್ಲ. ಅಂದರೆ ಕಸಬ್ ನಂತಹ ದೇಶ ದ್ರೋಹಿಗೆ ಲಾಯರ್ ಇಟ್ಟುಕೊಳ್ಳಲು ಅವಕಾಶ ಇರುವ ನಮ್ಮ ದೇಶದಲ್ಲಿ, ವೈದ್ಯರಿಗೆ ಯಾಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

    ವೈದ್ಯರಿಗೆ ದಂಡ ಹಾಗೂ ಜೈಲಿಗಟ್ಟುವ ನೀವು ವೈದ್ಯರಿಗೆ ಯಾವ ರೀತಿ ಗೌರವ ನೀಡುತ್ತೀರಾ? ನವೆಂಬರ್ 3 ರಂದು ಸಾಂಕೇತಿಕವಾಗಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಸರ್ಕಾರ ಆಗಲೂ ಮಾತುಕತೆಗೆ ಮುಂದಾಗದಿದ್ದರೆ. ನವೆಂಬರ್ 9 ಮತ್ತು 10 ರಂದು ವೈದ್ಯ ವೃತ್ತಿಯನ್ನು ತ್ಯಜಿಸುತ್ತೇವೆ. ಕರ್ನಾಟಕದಲ್ಲಿ 40 ರಿಂದ 50 ಸಾವಿರ ಖಾಸಗಿ ಆಸ್ಪತ್ರೆಗಳಿವೆ. ಆದರೆ ಸರ್ಕಾರಿ ಆಸ್ಪತ್ರೆಯನ್ನೇ ಸರಿಯಾಗಿ ವ್ಯವಸ್ಥಿತವಾಗಿ ಕಾಪಾಡಿಕೊಳ್ಳದ ಸರ್ಕಾರ, ಖಾಸಗಿ ಆಸ್ಪತ್ರೆಯತ್ತ ಬೊಟ್ಟುಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಸಿದ್ದರಾಮಯ್ಯನವರ ಮಗ ಡಾ. ಯತೀಂದ್ರ ಅವರೂ ವೈದ್ಯರೇ, ನಾನು ಅವರ ಜೊತೆಯಲ್ಲಯೂ ಮಾತನಾಡಿದ್ದೇನೆ. ಆಯಾಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ. ಯಾವುದೇ ಶಸ್ತ್ರ ಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆ ಸರಿ ಇದ್ದಿದ್ದರೆಜನರು ಏಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ನಮ್ಮ ಪ್ರತಿಭಟನೆ ವಿಚಾರವನ್ನು ಯತೀಂದ್ರ ಅವರು ತಂದೆಯ ಜೊತೆಗೆ ಮಾತಾನಾಡೋದಾಗಿ ಹೇಳಿದ್ದಾರೆಂದು ರವೀಂದ್ರ ಅವರು ತಿಳಿಸಿದ್ದಾರೆ.

    ಮಗ ಯತೀಂದ್ರ ಮಾತಿಗೆ ಮಣಿದ ಸಿಎಂ ಸಿದ್ದರಾಮಯ್ಯ ಈಗ ಮಾತುಕತೆಗೆ ಮುಂದಾಗಿದ್ದು, ನವೆಂಬರ್ 2 ರಂದು 10 ಗಂಟೆಯ ವೇಳೆಗೆ ವೈದ್ಯರ ಜೊತೆ ಮಾತುಕತೆಗೆ ಅವಕಾಶ ನೀಡಿದ್ದಾರೆ.

  • 6 ಲಕ್ಷ ಬಿಲ್ ಕಟ್ಟದ್ದಕ್ಕೆ ಹೆರಿಗೆಯಾಗಿ ವಾರವಾದ್ರೂ ಬಾಣಂತಿಗೆ ತ್ರಿವಳಿ ಮಕ್ಕಳನ್ನ ತೋರಿಸ್ಲಿಲ್ಲ ವೈದ್ಯರು

    6 ಲಕ್ಷ ಬಿಲ್ ಕಟ್ಟದ್ದಕ್ಕೆ ಹೆರಿಗೆಯಾಗಿ ವಾರವಾದ್ರೂ ಬಾಣಂತಿಗೆ ತ್ರಿವಳಿ ಮಕ್ಕಳನ್ನ ತೋರಿಸ್ಲಿಲ್ಲ ವೈದ್ಯರು

    ಬೆಂಗಳೂರು: ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ 6 ಲಕ್ಷ ರೂ. ಆಸ್ಪತ್ರೆ ಬಿಲ್ ಕಟ್ಟಿಲ್ಲವೆಂದರೆ ಮಕ್ಕಳನ್ನು ಕೊಡಲ್ಲ ಎಂದು ಆಸ್ಪತ್ರೆ ವೈದ್ಯರು ಗೂಂಡಾಗಿರಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೋಸಕೋಟೆಯ ನಿವಾಸಿ ರೇಷ್ಮಾ ಮಲ್ಲೇಶ್ವರಂ 9ನೇ ಕ್ರಾಸ್‍ನಲ್ಲಿರುವ ನಾರಾಯಣ ಹೆಲ್ತ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದ ವಾರ ಅವರಿಗೆ ಹೆರಿಗೆಯಾಗಿದ್ದು, ಇಂದಿಗೂ ವೈದ್ಯರು ಮಕ್ಕಳನ್ನು ಪೋಷಕರಿಗೆ ತೋರಿಸಿಲ್ಲ. ಈಗಾಗಲೇ 3 ಲಕ್ಷ ರೂ. ಬಿಲ್ ಕಟ್ಟಿದ್ರೂ ಮತ್ತೆ 3 ಲಕ್ಷ ರೂ. ಹಣ ಕೇಳಿದ್ದಾರೆ. ಮಕ್ಕಳನ್ನ ತೋರಿಸುವುದಾಗಿ ಐಸಿಯುಗೆ ಕರೆದೊಯ್ಯುವ ವೇಳೆಯಲ್ಲಿ ಬಾಕಿ ಮೂರು ಲಕ್ಷ ಕಟ್ಟುವವರೆಗೂ ಮಕ್ಕಳನ್ನು ನೀಡೋದಿಲ್ಲ ಎಂದು ವೈದ್ಯರು ಗೂಂಡಾಗಿರಿ ನಡೆಸಿದ್ದಾರೆ. ಬಾಣಂತಿಗೆ ಊಟ ನೀಡದೆ, ಮಕ್ಕಳನ್ನು ತೋರಿಸಿದೆ ಆಸ್ಪತ್ರೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಕ್ಕೆ ಬಾಣಂತಿ, ಮಕ್ಕಳನ್ನು ಹೊರಹಾಕಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಾಧ್ಯಮಗಳ ಮೇಲೂ ಗೂಂಡಾಗಿರಿ ನಡೆಸಿ ಕ್ಯಾಮೆರಾ ಒಡೆಯಲು ಮುಂದಾಗಿದ್ದರು.

    ನಂತರ ಪೋಷಕರು ಬಾಣಂತಿ ಹಾಗೂ ಮಕ್ಕಳನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಡಿಸ್ಜಾರ್ಜ್ ಮಾಡದೆ ಬಂದಿರೋದ್ರಿಂದ ಅಡ್ಮಿಟ್ ಮಾಡಿಕೊಳ್ಳೋಕೆ ಆಗಲ್ಲ ಎಂದು ಕೆಸಿ ಜರ್ನಲ್ ಆಸ್ಪತ್ರೆಯಿಂದ ಕೂಡ ವಾಪಸ್ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಿಳೆಯನ್ನು ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಡಿಸ್ಚಾರ್ಜ್ ಆದ ನಂತರ ಬಾಣಂತಿ ಮಕ್ಕಳೊಂದಿಗೆ ಹೊಸಕೋಟೆಗೆ ತೆರಳಿದ್ದಾರೆ.

    https://youtu.be/6e7unazDKdI

  • ಯುವಕನ ತೋಳು ಯುವತಿಗೆ ಜೋಡಣೆ: ಮಣಿಪಾಲದ ವಿದ್ಯಾರ್ಥಿನಿಗೆ ಸಿಕ್ತು ಕೈ

    ಯುವಕನ ತೋಳು ಯುವತಿಗೆ ಜೋಡಣೆ: ಮಣಿಪಾಲದ ವಿದ್ಯಾರ್ಥಿನಿಗೆ ಸಿಕ್ತು ಕೈ

    ಕೊಚ್ಚಿ: ಕಳೆದ ವರ್ಷ ರಸ್ತೆ ಅಪಘಾತ ಸಂಭವಿಸಿ ಮಣಿಪಾಲದ 19 ವರ್ಷದ ಎಂಜಿನಿಯರ್ ವಿದ್ಯಾರ್ಥಿನಿ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು. ಆದರೆ ಈಗ ಕೇರಳದ ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ವೈದ್ಯರು ಆಪರೇಷನ್ ಮಾಡಿ ಯುವಕನ ತೋಳನ್ನು ಕಸಿ ಮಾಡಿ ಜೋಡಿಸಿದ್ದಾರೆ.

    ಇದು ಇಡೀ ಏಷ್ಯವೇ ಹೆಮ್ಮೆ ಪಡುವ ಸಂಗತಿಯಾಗಿದ್ದು, ವಿಶ್ವದಲ್ಲಿ ಇಂತಹ 9 ಕಸಿಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಏಷ್ಯಾದಲ್ಲಿ ಮಾಡಿರುವ ಆಪರೇಷನ್ ಇದಾಗಿದೆ. ಅದರಲ್ಲೂ ಹುಡುಗನ ತೋಳುಗಳನ್ನು ಇದೇ ಪ್ರಥಮ ಬಾರಿಗೆ ಯುವತಿಗೆ ಜೋಡಿಸಲಾಗಿದೆ.

    ಪ್ಲಾಸ್ಟಿಕ್ ಮತ್ತು ಪುನಃ ನಿರ್ಮಾಣದ ಸರ್ಜರಿ ಇಲಾಖೆಯ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಅಯ್ಯರ್ ನೇತೃತ್ವದಲ್ಲಿ ಸುಮಾರು 20 ವೈದ್ಯರು ಮತ್ತು 16 ಅರವಳಿಕೆ ತಜ್ಞರು ಸೇರಿ ಸುಮಾರು 13 ಗಂಟೆಗಳ ಕಾಲ ಈ ಆಪರೇಷನ್ ಮಾಡಿದ್ದಾರೆ.

    ಆಗಿದ್ದೇನು?: ಪುಣೆಯ ಟಾಟಾ ಮೋಟರ್ಸ್ ಕಂಪೆನಿಯ ಹಿರಿಯ ವ್ಯವಸ್ಥಾಪಕರಾದ ಫಕೀರಗೌಡ ಮತ್ತು ಸುಮಾ ನುಗ್ಗಿಹಳ್ಳಿ ದಂಪತಿಯ ಪುತ್ರಿ ಶ್ರೇಯಾ ಸಿದ್ದನಗೌಡ ಮಣಿಪಾಲ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಳು. ಒಮ್ಮೆ ಪುಣೆಯಿಂದ ಮಣಿಪಾಲಕ್ಕೆ ಬಸ್‍ನಲ್ಲಿ ಬರುತ್ತಿದ್ದಾಗ ಅಪಘಾತಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಶ್ರೇಯಾ ಬಸ್ ಕೆಳಗಡೆ ಸಿಲುಕೊಂಡಿದ್ದು, ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು.

    ಕೈ ಯಾರದ್ದು? ಶ್ರೇಯಾಗೆ ಕೈಗಳನ್ನು ದಾನ ಮಾಡಿದ ವ್ಯಕ್ತಿ ಸಚಿನ್ (20). ಎರ್ನಾಕುಲಂನ ರಾಜಗಿರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸಚಿನ್ ರಸ್ತೆ ಅಪಘಾತ ಉಂಟಾಗಿ ತೀವ್ರವಾಗಿ ಗಾಯಗೊಂಡಿದ್ದ. ಈತನ ಬ್ರೈನ್ ಡೆಡ್ ಆಗಿದ್ದ ಕಾರಣ ಸಚಿನ್ ಪೋಷಕರು ಕೈಗಳನ್ನು ದಾನ ಮಾಡಲು ಅನುಮತಿ ನೀಡಿದ್ದರು. ಅನುಮತಿ ಸಿಕ್ಕಿದ ಕಾರಣ ಆತನ ತೋಳುಗಳನ್ನೇ ಶ್ರೇಯಾಗೆ ಈಗ ಯಶಸ್ವಿಯಾಗಿ ಜೋಡಿಸಲಾಗಿದೆ.

    ಶ್ರೇಯಾಳ ದೇಹವು ಕಸಿ ಮಾಡಿದ ಕೈಗಳನ್ನು ಒಪ್ಪಿಕೊಂಡಿವೆ. ಅಷ್ಟೇ ಅಲ್ಲದೇ ಉತ್ತಮ ಚೇತರಿಕೆ ಲಕ್ಷಣಗಳು ಕಂಡುಬರುತ್ತಿವೆ. ಪ್ರಸ್ತುತ ಶ್ರೇಯಾಳ ಬೆರಳುಗಳು, ಮಣಿಕಟ್ಟುಗಳು ಹಾಗೂ ಭುಜಗಳು ಚಲನೆಯಾಗುತ್ತಿವೆ. ಮುಂದಿನ ಒಂದುವರೆ ವರ್ಷದಲ್ಲಿ ಶೇ.85 ರಷ್ಟು ಚಲನೆಯನ್ನು ಕಾಣಬಹುದು ಎಂದು ವೈದ್ಯರು ಹೇಳಿದ್ದಾರೆ.

    ಮುಂದಿನ ವರ್ಷ ನಾನು ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತೇನೆ ಎಂಬ ಭರವಸೆ ಇದೆ ಎಂದು ಶ್ರೇಯಾ ಸಂತಸ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಮೃತಾ ಇನ್ಸ್ ಟಿಟ್ಯೂಟ್ ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿ ಯಶಸ್ವಿಯಾಗಿದೆ.

     

     

    <iframe src=”https://www.facebook.com/plugins/post.php?href=https%3A%2F%2Fwww.facebook.com%2FAmritaInstitute%2Fposts%2F1975062659374610&width=500″ width=”500″ height=”770″ style=”border:none;overflow:hidden” scrolling=”no” frameborder=”0″ allowTransparency=”true”></iframe>