Tag: doctors

  • ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿದ ಕರಡಿಯ ರಕ್ಷಣೆ

    ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿದ ಕರಡಿಯ ರಕ್ಷಣೆ

    ರಾಮನಗರ: ಕಾಡು ಹಂದಿಗಳ ಬೇಟೆಗಾಗಿ ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಕರಡಿಯೊಂದು ಸಿಕ್ಕಿಬಿದ್ದು, ನರಕಯಾತನೆ ಅನುಭವಿಸಿದ ಘಟನೆ ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ನಡೆದಿದೆ.

    ಬಿಳಗುಂಬ ಗ್ರಾಮದ ರಮೇಶ್ ಎಂಬವರ ಗಂಧ ಹಾಗೂ ಮಾವಿನ ಮರದ ತೋಪಿನಲ್ಲಿ ಕಿಡಿಗೇಡಿಗಳು ರಾತ್ರಿ ಹಂದಿ ಬೇಟೆಗಾಗಿ ಬೈಕ್‍ನ ಕ್ಲಚ್ ವೈರ್‍ಗಳ ಉರುಳನ್ನು ಹಾಕಿದ್ದಾರೆ. ಬೆಳಗ್ಗಿನ ಜಾವದ ವೇಳೆ ಆಹಾರ ಅರಸಿ ಬಂದ ಒಂದೂವರೆ ವರ್ಷದ ಹೆಣ್ಣು ಕರಡಿ ಉರುಳಿನಲ್ಲಿ ಸಿಕ್ಕಿಬಿದ್ದಿದೆ. ಉರುಳಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಹರಸಾಹಸ ಮಾಡಿದೆ. ಆದದೂ ಏನು ಪ್ರಯೋಜನವಾಗಿಲ್ಲ. ಈ ವೇಳೆ ತೋಟದ ಕಡೆಗೆ ಬಂದಿದ್ದ ಗ್ರಾಮದ ಜನ ಅರಣ್ಯ ಇಲಾಖೆಗೆ ಕರಡಿ ಸಿಲುಕಿಬಿದ್ದಿರುವ ಮಾಹಿತಿಯನ್ನ ರಾಮನಗರ ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ನೀಡಿದ್ದಾರೆ.

    ಮಾಹಿತಿ ತಿಳಿದ ಬನ್ನೇರುಘಟ್ಟ ವನ್ಯಜೀವಿಧಾಮದ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನು ಉರುಳಿನಿಂದ ಬಿಡಿಸಿದ್ದಾರೆ. ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ನೀಡಿ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲು ರವಾನಿಸಲಾಯಿತು. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಆತಂಕದಲ್ಲೇ ಕಾಲ ಕಳೆಯುತ್ತಿರುವುದಾಗಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ಹೈದರಾಬಾದ್: ಹನ್ನೊಂದು ತಿಂಗಳ ಹೆಣ್ಣು ಶಿಶು ಆಕಸ್ಮಿಕವಾಗಿ ಇಯರ್ ಫೋನ್ ನುಂಗಿ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಪೂರ್ವ ಗೋದಾವರಿ ಜಿಲ್ಲೆಯ ಪರ್ಸಲಾಪುದಿ ಗ್ರಾಮದಲ್ಲಿ ಈ ಘಟನೆ ನಡೆದೆ. ಶಸ್ತ್ರ ಚಿಕಿತ್ಸೆಯ ಮೂಲಕ ಇಯರ್ ಫೋನನ್ನು ದೇಹದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಗಿದ್ದು ಏನು?
    ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಇಯರ್ ಫೋನ್ ನುಂಗಿದ ಬಳಿಕ ಮಗು ಒಂದೇ ಸಮನೆ ಅಳುತ್ತಿದ್ದಳು. ಏನು ಮಾಡಬೇಕೆಂದು ತೋಚದ ಹೆತ್ತವರು ಮಗಳನ್ನು ಅಮಲಾಪುರಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಪ್ರಾಥಮಿಕ ಪರೀಕ್ಷೆಯ ವೇಳೆ ವೈದ್ಯರು ದೇಹದ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೂ ಮಗು ಆಳುತ್ತಿದ್ದ ಕಾರಣ ಎಕ್ಸ್-ರೇ ಮಾಡಿಸಿದ್ದಾರೆ. ಈ ವೇಳೆ ಮೊಬೈಲ್ ಇಯರ್ ಫೋನ್ ಇರುವುದು ಪತ್ತೆಯಾಗಿದೆ.

    ಕೂಡಲೇ ನಮ್ಮ ತಂಡ ಶಸ್ತ್ರಚಿಕಿತ್ಸೆ ನಡೆಸಿ ದೇಹದಿಂದ ಇಯರ್ ಫೋನ್ ಹೊರ ತೆಗೆದಿದ್ದೇವೆ. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ಅಮಲಾಪುರಂ ಆಸ್ಪತ್ರೆಯ ವೈದ್ಯ ಚಕ್ರವರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

     

  • ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಉಡುಪಿ: ಜಿಲ್ಲೆಯ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರಿಂದ 11 ದಿನಗಳ ಹಸುಗೂಸಿಗೆ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಹುಟ್ಟಿನಲ್ಲೇ ಇದ್ದ ಕಂಟಕದಿಂದ ಮಗುವಿನ ಪ್ರಾಣ ಉಳಿದಿದೆ.

    ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹುಟ್ಟಿದ ಮಗುವಿನ ಉಸಿರಾಟದಲ್ಲಿ ಸಮಸ್ಯೆ ಕಾಣುತ್ತಿತ್ತು. ಹೃದಯದ ಬಡಿತ ವಿಪರೀತವಾಗಿತ್ತು. ದೇಹದ ಎಲ್ಲಾ ಭಾಗದ ಚರ್ಮ ತಣ್ಣಗಾಗಿತ್ತು. ಕೂಡಲೇ ಮಗುವನ್ನು ಕೆಎಂಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ, ದೊಡ್ಡ ರಕ್ತನಾಳ ಸ್ಥಾನ ಪಲ್ಲಟವಾಗಿದೆ. ಮಗುವಿನ ತಾಯಿ ಗರ್ಭ ಧರಿಸಿದ ಸಂದರ್ಭ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

    ಹೀಗಾಗಿ ಹೃದಯದ ಆಪರೇಶನ್ ಮಾಡಲು ನಿರ್ಧಾರ ಮಾಡಿದ್ದಾರೆ. ಪುಟ್ಟ ಮಗು ಆಗಿದ್ದರಿಂದ 10 ದಿನಗಳ ಕಾಲ ನಿಗಾ ಘಟಕದಲ್ಲಿಟ್ಟು, ಬಳಿಕ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ಈ ಆಪರೇಷನ್ ಯಶಸ್ವಿಯಾಗಿ ನಡೆದಿದೆ. ಮಣಿಪಾಲ ಕಾರ್ಡಿಯಾಕ್ ಸರ್ಜನ್ ಡಾ. ಅರವಿಂದ ಬಿಷ್ಣೋಯ್ ಬಹಳ ಮುತುವರ್ಜಿಯಿಂದ ಆಪರೇಶನ್ ಮಾಡಿದ್ದಾರೆ.  ಇದನ್ನೂ ಓದಿ: ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಮಕ್ಕಳ ತಜ್ಞ ಡಾ, ಲೆಸ್ಲೀ ಲೂಯೀಸ್, ಹೃದ್ರೋಗ ತಜ್ಞ ಪದ್ಮಕುಮಾರ್, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ ವೈದ್ಯರು ಬಹಳ ರಿಸ್ಕ್ ತೆಗೆದುಕೊಂಡು ಮಗುವಿನ ಜೀವ ಉಳಿಸಿದ್ದಾರೆ. ಈಗ ಮಗು ಆರೋಗ್ಯಯುತವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಕ್ಕಳ ಆರೋಗ್ಯ ವಿಮೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

    ಉಡುಪಿಯ ಆಸ್ಪತ್ರೆಯಲ್ಲಿ ಮಗು ಹುಟ್ಟಿದಾಗ ಮಗುವಿನಲ್ಲಿ ಸಮಸ್ಯೆ ಇರುವುದಾಗಿ ತಂದೆ ತಾಯಿಯವರಿಗೆ ಕಂಡು ಬಂತು. ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಹ ಹೆಚ್ಚಿನ ಚಿಕಿತ್ಸೆ ಸೂಚಿಸಿದರು. ಮಗು ವೇಗವಾಗಿ ಉಸಿರಾಡುತ್ತಿತ್ತು, ಕೆಲವೊಮ್ಮೆ ಉಸಿರಾಡಲು ಕಷ್ಟಪಡುತ್ತಿತ್ತು, ಹೃದಯ ಬಡಿತ ತೀವ್ರವಾಗಿತ್ತು ಮತ್ತು ಚರ್ಮ ತಣ್ಣಗಿತ್ತು. ತಕ್ಷಣ ಮಗುವಿನ ಹೆತ್ತವರು ಕಸ್ತೂರ್ಬಾ ಆಸ್ಪತ್ರೆಯ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಶಿಶುರೋಗ ತಜ್ಞರಾದ ಡಾ. ಲೆಸ್ಲಿ ಲೂಯಿಸ್‍ವರನ್ನು ಕಂಡರು. ಹೃದ್ರೋಗ ತಜ್ಞರಾದ ಡಾ. ಪದ್ಮಕುಮಾರ್‍ರವರು ತಪಾಸಣೆ ನಡೆಸಿ `ಮಗು ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರೀಸ್ (ಟಿಜಿಎ) ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಗಂಭೀರ ಜನ್ಮಜಾತ ಹೃದಯ ನ್ಯೂನತೆಯಿಂದ ಬಳಲುತ್ತಿದೆ’ ಎಂದು ಅಭಿಪ್ರಾಯಪಟ್ಟರು.

    ಆರಂಭಿಕ ಹಂತಗಳಲ್ಲಿ ಇದನ್ನು ಕಂಡುಕೊಳ್ಳುವ ಏಕೈಕ ಮಾರ್ಗವೆಂದರೆ ಭ್ರೂಣದ ಹೃದಯ ಎಕೋಕಾರ್ಡಿಯೋಗ್ರಫಿ, ಇದನ್ನು ಹೆಚ್ಚು ಅಪಾಯದ ಗರ್ಭಧಾರಣೆ ಹೊಂದಿರುವ ಗರ್ಭಿಣಿ ರೋಗಿಗಳಿಗೆ ಅಂದರೆ ಹೈ ರಿಸ್ಕ್ ಪ್ರೆಗ್ನೆನ್ಸಿ ಪೇಶೆಂಟುಗಳಿಗೆ ಮಾಡಲಾಗುವುದು. ಈ ಸೌಲಭ್ಯ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಿಬ್ಬಂದಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಾತ್ರ ಇರುವುದು ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಟಾಮ್ ಅಭಿಪ್ರಾಯಪಟ್ಟರು. ವೈದ್ಯರ ಮೀಟಿಂಗ್ ನಲ್ಲಿ ಏನು ಮಾಡಬಹುದು ಎಂಬ ಚರ್ಚೆ ಅಂದು ಆರಂಭವಾಯ್ತು.

    ಗರ್ಭ ಧರಿಸಿದ ಮೊದಲ 8 ವಾರಗಳಲ್ಲಿ ಭ್ರೂಣದ ಹೃದಯದ ಅಸಹಜ ಬೆಳವಣಿಗೆಯಿಂದಾಗಿ ಹೃದಯದಿಂದ ಶ್ವಾಸಕೋಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತವನ್ನು ಕೊಂಡೊಯ್ಯುವ ದೊಡ್ಡ ರಕ್ತನಾಳಗಳು ಅದಲು ಬದಲಾಗುತ್ತವೆ. ದೇಹದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಸಮರ್ಪಕವಾಗಿರಲಿಲ್ಲ ಮತ್ತು ಶಿಶುಗಳ ಸುಸಜ್ಜಿತ ತೀವ್ರ ನಿಘಾ ಘಟಕದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಅವಶ್ಯಕ ಆರೈಕೆಯನ್ನು ಒದಗಿಸಿದ ನಂತರ ಮಗುವನ್ನು ಹೃದಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಈ ರೀತಿಯ ಪ್ರಕರಣಗಳನ್ನು ಮೊದಲು ಬೆಂಗಳೂರಿಗೆ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗುತ್ತಿತ್ತು. ಆದರೆ ಬೆಂಗಳೂರಿಗೆ ಹೋಗುವ ತನಕ ಶಿಶು ಬದುಕುಳಿಯುವ ಭರವಸೆ ಇರುತ್ತಿರಲಿಲ್ಲ. ಇದಲ್ಲದೆ, ಸಾರಿಗೆ ವ್ಯವಸ್ಥೆಗಳಿಗೆ, ವೈದ್ಯರು, ದಾದಿಯರು ಮತ್ತು ಇತರೆ ಅಗತ್ಯ ವೆಚ್ಚವು ಸುಮಾರು 60000 – ವರೆಗೆ ಆಗುತ್ತದೆ ಎಂದು ಮನಗಂಡ ವೈದ್ಯರು ಮಗುವನ್ನು ಉಳಿಸಲು ಮುಂದಾದರು.

    ತಜ್ಞರ ಪ್ರಕಾರ, ಇಂತಹ ಶಿಶುಗಳು ಒಂದು ತಿಂಗಳು ಮೀರಿ ಬದುಕುವುದಿಲ್ಲ. ಮತ್ತು ಶಿಶುಗಳ ಉಳಿವಿಗಾಗಿ ಶಸ್ತ್ರಚಿಕಿತ್ಸೆಯೊಂದೇ ಏಕೈಕ ಮಾರ್ಗವಾಗಿದೆ. ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಕನ್ಸಲ್ಟಂಟ್ ಕಾರ್ಡಿಯಾಕ್ ಸರ್ಜನ್ ಆಗಿರುವ ಡಾ. ಅರವಿಂದ ಬಿಷ್ಣೋಯ್‍ಯವರು ಸಾಮಾನ್ಯವಾಗಿ, ಕಡಿಮೆ ಆಮ್ಲಜನಕಯುಕ್ತ ರಕ್ತ (ನೀಲಿ) ದೇಹದ ಭಾಗಗಳಿಂದ ಬಲ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ, ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಅಲ್ಲಿಂದ ಅದನ್ನು ಹೃದಯವು ಪಲ್ಮನರಿ ಅಪಧಮನಿಗೆ ಪಂಪ್ ಮಾಡುತ್ತದೆ ಮತ್ತು ಅಲ್ಲಿ ಅದು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ. ಆಮ್ಲಜನಕದಿಂದ ಸಮೃದ್ಧವಾದ ರಕ್ತವು (ಕೆಂಪು) ಶ್ವಾಸಕೋಶಗಳಿಂದ ಎಡ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ ಮತ್ತು ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಬಳಿಕ ಹೃದಯವು ಅದನ್ನು ಅಯೋರ್ಟಾಕ್ಕೆ ಪಂಪ್ ಮಾಡಿ ದೇಹದ ಉಳಿದ ಭಾಗಗಳಿಗೆ ಕಳುಹಿಸುತ್ತದೆ. ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರಿ ಅಥವಾ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿಯಲ್ಲಿ ಅಯೋರ್ಟಾವು ಬಲ ಹೃತ್ಕುಕ್ಷಿಗೆ ಮತ್ತು ಪಲ್ಮನರಿ ಅಪಧಮನಿ ಎಡ ಹೃತ್ಕುಕ್ಷಿಗೆ ಜೋಡಣೆಯಾಗಿರುತ್ತದೆ. ಅಂದರೆ ಇದು ಹೃದಯದ ಸಾಮಾನ್ಯ ಚಟುವಟಿಕೆಗೆ ವಿರುದ್ಧವಾಗಿತ್ತು. ಅಪಧಮನಿಗಳನ್ನು ಅದಲು ಬದಲು ಮಾಡುವುದನ್ನು ಒಳಗೊಂಡಿರುವ ಬಹಳ ಸಂಕೀರ್ಣವಾದ ಟಿಜಿಎ ಶಸ್ತ್ರಚಿಕಿತ್ಸೆಗೆ ಒಳಗಾದ ಶಿಶುಗಳು ಸಹಜ ಬೆಳವಣಿಗೆ ಹೊಂದುತ್ತಾರೆ. ಎಂಬುದಾಗಿ ಡಾ. ಅರವಿಂದ ಬಿಷ್ಣೋಯ್ ಹೇಳಿದರು.

    11 ದಿನದ ಮಗುವಿನ ಶಸ್ತ್ರಚಿಕಿತ್ಸೆಯ ಬಳಿಕ ಡಾ. ಲೆಸ್ಲಿ ಲೂಯಿಸ್‍ರವರ ನೇತೃತ್ವದಲ್ಲಿ ಶಿಶುರೋಗ ತಜ್ಞರು ಮಗು ಚೇತರಿಸಿಕೊಳ್ಳಲು ಅಗತ್ಯವಿರುವ ಆರೈಕೆಯನ್ನು ಒದಗಿಸಿದರು. ಈಗ ಮಗು ಈಗ ಚೆನ್ನಾಗಿ ಚೇತರಿಸಿಕೊಂಡಿದೆ. ಆಪರೇಶನ್ ಆಗಿ ಒಂದು ವಾರ ನಿಗಾ ಘಟಕದಲ್ಲಿ ಮಗುವಿಗೆ ಶುಶ್ರೂಶೆ ನೀಡಲಾಗಿದೆ. ಈಗ ಮಗು ಶೇ. 90 ಸುಧಾರಿಸಿದೆ ದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಮಾಹಿತಿ ನೀಡಿದರು.

    ಟಿಜಿಎ ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿ ಬಹಳ ಅಪರೂಪವಾಗಿ ಸಂಭವಿಸುತ್ತದೆ. ಇಂಥ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ವಿಶೇಷ ಕೌಶಲ ಮತ್ತು ನಿಖರತೆಯ ಅವಶ್ಯಕತೆ ಇರುತ್ತದೆ. ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮುಂಚೆ ಮತ್ತು ನಂತರ ನೀಡುವ ಆರೈಕೆಯು ಮಗು ಚೇತರಿಸಿಕೊಳ್ಳುವಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ ಎಂದು ಹೇಳಿದರು.

  • ಆಸ್ಪತ್ರೆಯಲ್ಲಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದ ವೈದ್ಯರು: ವೈರಲ್ ವಿಡಿಯೋ

    ಆಸ್ಪತ್ರೆಯಲ್ಲಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದ ವೈದ್ಯರು: ವೈರಲ್ ವಿಡಿಯೋ

    ಭೋಪಾಲ್: ಆಸ್ಪತ್ರೆಯಲ್ಲಿ ರೋಗಿಗಳ ಮುಂದೆಯೇ ವೈದ್ಯರು ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿದ ಘಟನೆ ಮಧ್ಯ ಪ್ರದೇಶದ ಔಷಂಗಾಬಾದ್‍ನಲ್ಲಿ ನಡೆದಿದೆ.

    ಆಸ್ಪತ್ರೆಯಲ್ಲಿ ಸೈಲಂಟ್ ಆಗಿ ಇರಬೇಕು ಎಂದು ಹೇಳಿದ್ದರೂ ರೋಗಿಗಳ ಮುಂದೆಯೇ ಜಿಲ್ಲಾಸ್ಪತ್ರೆಯ ವೈದ್ಯರು ಕುಣಿದು ಕುಪ್ಪಳಿಸುವುದನ್ನು ಕಂಡು ರೋಗಿಗಳು ಬೇಸತ್ತು ಹೋಗಿದ್ದಾರೆ. ಡಿಜೆ ಶಬ್ಧ ಅತಿಯಾಗಿ ಜೋರಾಗಿದ್ದರಿಂದ ರೋಗಿಯೊಬ್ಬರು ವೈದ್ಯರ ಬಳಿ ಹೋಗಿ ದೂರು ನೀಡಿದ್ದರು. ಆದರೆ ವೈದ್ಯ ರೋಗಿಯನ್ನೇ ಬೈದು ವಾಪಸ್ ಕಳುಹಿಸಿದ್ದಾನೆ.

    ಇಷ್ಟೆಲ್ಲ ನಡೆದರೂ ವೈದರು ಯಾರ ಮಾತನ್ನೂ ಕೆಳದೇ, ರೋಗಿಗಳ ಬಗ್ಗೆ ಯೋಚನೆ ಮಾಡದೆ ಜೋರಾಗಿ ಹಾಡು ಹಾಕಿ, ಮತ್ತಷ್ಟು ಕುಣಿಯಲು ಆರಂಭಿಸಿದ್ದರು. ಈ ಬಗ್ಗೆ ಔಷಂಗಾಬಾದ್‍ನ ಸಿಎಮ್‍ಎಚ್‍ಒ ಅವರನ್ನು ಕೇಳಿದ್ದಾಗ ಇದರ ಬಗ್ಗೆ ಸರಿಯಾಗಿ ಪ್ರತಿಕ್ರಿಯೇ ನೀಡಿಲ್ಲ.

    ಈ ಹಿಂದೆ ವೈದ್ಯರು, ಸಿಬ್ಬಂದಿ ಕೆಲಸ ಬಿಟ್ಟು ದುಡ್ಡಿಗಾಗಿ ಎಕ್ಕಾ ರಾಜಾ ರಾಣಿ ಆಟ ಆಡಿರುವ ಘಟನೆ ಕರ್ನಾಟಕದ ವಿಜಯಪುರದಲ್ಲಿ ನಡೆದಿತ್ತು.

    ಆಸ್ಪತ್ರೆಯ ಕಂಪೌಂಡರ್ ರಾಜೀವ್ ಬಳ್ಳಾರಿ ಹಾಗೂ ಅಂಬುಲೆನ್ಸ್ ಡ್ರೈವರ್ ಪಾಂಡು ನೇತೃತ್ವದಲ್ಲಿ ಕೆಲಸ ಮಾಡದೇ ಇಸ್ಪೀಟ್ ಆಟದಲ್ಲಿ ಮಗ್ನನಾಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ರಾಜೀವ್ ಬಳ್ಳಾರಿ ಜೊತೆಗೆ ಅಂಬುಲೆನ್ಸ್ ಡ್ರೈವರ್ ಪಾಂಡು ಸೇರಿದಂತೆ ನಿವೃತ್ತರಾದ ಡಾಕ್ಟರ್‍ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗಿಯಾಗಿದ್ದರು. ಪ್ರತಿನಿತ್ಯ ಏನಿಲ್ಲ ಎಂದರೂ ಸಾವಿರಾರು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ವಿಜಯಪುರ ಸೇರಿದಂತೆ ಸೊಲ್ಲಾಪುರ ಹಾಗೂ ಮಹಾರಾಷ್ಟ್ರದಿಂದ ಕೂಡ ರೋಗಿಗಳು ವಿಜಯಪುರ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಇಷ್ಟೆಲ್ಲ ರೋಗಿಗಳ ಪಾಲಿಗೆ ದೇವರು ಆಗೋ ಬದಲು ಕ್ಷಣಿಕ ವೇಳೆಯಲ್ಲಿ ಹಣಗಳಿಸುವ ಸಲುವಾಗಿ ಸರ್ಕಾರಿ ಆಸ್ಪತ್ರೆಯನ್ನೇ ಇಸ್ಪೀಟು ಅಡ್ಡಾವನ್ನಾಗಿ ಮಾಡಿಕೊಂಡಿದ್ದರು.

    https://www.youtube.com/watch?v=pi9cRo4oSqY

  • ಸಿದ್ದಗಂಗಾ ಶ್ರೀ ಆರೋಗ್ಯದ ಬಗ್ಗೆ ಯಾರೂ ಆತಂಕಪಡೋ ಅಗತ್ಯವಿಲ್ಲ: ಬಿಜಿಎಸ್ ವೈದ್ಯರು

    ಸಿದ್ದಗಂಗಾ ಶ್ರೀ ಆರೋಗ್ಯದ ಬಗ್ಗೆ ಯಾರೂ ಆತಂಕಪಡೋ ಅಗತ್ಯವಿಲ್ಲ: ಬಿಜಿಎಸ್ ವೈದ್ಯರು

    ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ವಾಮೀಜಿ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಬಿಪಿಯಲ್ಲಿ ಬದಲಾವಣೆಯಾಗಿದೆ ಅಷ್ಟೇ. ಯಾರೂ ಹೆದರಬೇಡಿ. ಶ್ರೀಗಳ ಆರೋಗ್ಯ ಬೇಗ ಸುಧಾರಿಸುತ್ತದೆ ಎಂದು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಹೇಳಿದ್ದಾರೆ.

    ಶ್ರೀಗಳಿಗೆ ಗುರುವಾರ ರಾತ್ರಿ ಸುಮಾರು 1 ಗಂಟೆಗೆ ಜ್ವರ, ಬಿಪಿ, ಕಫ ಕಂಡುಬಂದಿತ್ತು. ಈಗಾಗಲೇ ರಕ್ತ ಪರೀಕ್ಷೆ, ಎಕ್ಸ್ ರೇ ಮಾಡಲಾಗಿದೆ. ಇದರಲ್ಲಿ ನಿಮೋನಿಯಾ ಕಂಡು ಬಂದಿದೆ. ರಕ್ತ ಪರೀಕ್ಷೆಯ ಮಾಡಿದ್ದೇವೆ. ರಿಪೋರ್ಟ್ ನಲ್ಲಿ ಸ್ವಾಮೀಜಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ತುಮಕೂರಿನಿಂದಲೂ ಕೂಡಾ ವೈದ್ಯರ ತಂಡ ಬಂದಿದೆ. ಸ್ಟಂಟ್‍ನ ಪರೀಕ್ಷೆಯ ವರದಿ ಬರಬೇಕಿದೆ ಎಂದು ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಹೇಳಿದ್ದಾರೆ.

    ಶ್ರೀಗಳಿಗೆ ಈಗಾಗಲೇ 5 ಸ್ಟಂಟ್ ಅಳವಡಿಸಲಾಗಿದೆ. ಈಗ ಶ್ರೀಗಳು ನಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಿಡ್ನಿ ಫಂಕ್ಷನ್‍ನಲ್ಲಿ ಒಂದಷ್ಟು ವ್ಯತ್ಯಯವಾಗಿದೆ. ಆದ್ದರಿಂದ ಸಿಟಿ ಸ್ಕ್ಯಾನ್ ಮಾಡಬೇಕಿದೆ. ಅದರ ವರದಿ ಬಂದ ನಂತರ ಆರೋಗ್ಯದ ಬಗ್ಗೆ ಮತ್ತಷ್ಟು ವಿಚಾರ ತಿಳಿಯುತ್ತದೆ. ಆದರೂ ಯಾರೂ ಆತಂಕ ಪಡಬೇಕಾಗಿಲ್ಲ. ಅವರಿಗೆ 110 ವರ್ಷ ವಯಸ್ಸಾಗಿದೆ. ಹಾಗಾಗಿ ಈ ಸಮಸ್ಯೆಗಳು ಬರುವುದು ಸಾಮಾನ್ಯ ಎಂದು ಅವರು ತಿಳಿಸಿದರು.

    ಶ್ರೀಗಳನ್ನ ವಾರ್ಡ್‍ನಲ್ಲಿರಿಸಲಾಗಿದೆ. ಅವರಿಗೆ ಪೂಜೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗಿದೆ. ಸದ್ಯಕ್ಕೆ ಶ್ರೀಗಳಿಗೆ ಆಹಾರ ನೀಡುತ್ತಿಲ್ಲ. ಬಿಪಿ ಕಡಿಮೆ ಇದೆ. ಅದಕ್ಕಾಗಿ ಡ್ರಿಪ್ಸ್ ಹಾಕಲಾಗಿದೆ. ದ್ರವಾಹಾರಗಳನ್ನು ನೀಡಲಾಗುತ್ತಿದೆ. ಆಸ್ಪತ್ರೆಯ ಒಳಗಡೆ ಶ್ರೀಗಳು ಪೂಜೆ ಕೈಂಕರ್ಯದಲ್ಲಿ ತೊಡಗಿದ್ದು, ಪೂಜೆ ಮುಗಿದ ನಂತರ ಚಿಕಿತ್ಸೆ ಆರಂಭವಾಗುತ್ತದೆ. ಸೊಗಡು ಶಿವಣ್ಣ, ರೇವಣ ಸಿದ್ಧಯ್ಯ, ಕಣ್ಣೂರು ಶ್ರೀಗಳು, ಡಾ. ಪರಮೇಶ್ ಮತ್ತವರ ತಂಡ ಶ್ರೀಗಳೊಂದಿಗೆ ಇದ್ದಾರೆ ಎಂದು ರವೀಂದ್ರ ಅವರು ತಿಳಿಸಿದ್ದಾರೆ.

    ಬಿಜಿಎಸ್ ಆಸ್ಪತ್ರೆಗೆ ಕೂಡಲಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿದ್ದು, ಅವರ ಆರ್ಶಿವಾದ ಪಡೆದು ಶ್ರೀಗಳು ಚೆನ್ನಾಗಿ ಮಾತನಾಡುತ್ತಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶ್ರೀಗಳು ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

  • ಕರ್ನಾಟಕ ಬಂದ್- ಸರ್ಕಾರಿ ವೈದ್ಯರಿಗೆ ರಜೆ ಇಲ್ಲ, ಎಲ್ರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ

    ಕರ್ನಾಟಕ ಬಂದ್- ಸರ್ಕಾರಿ ವೈದ್ಯರಿಗೆ ರಜೆ ಇಲ್ಲ, ಎಲ್ರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ

    ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಇಂದು ಎಲ್ಲಾ ಸರ್ಕಾರಿ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ.

    ಎಲ್ಲರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆಯನ್ನು ನೀಡಿದೆ. ಬಂದ್ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಅಹಿತಕರ ಘಟನೆಗಳು ನಡೆದಾಗ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ಯಾರೂ ರಜೆ ಹಾಕುವುಂತಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಇದನ್ನು ಓದಿ: ಮಹದಾಯಿಗಾಗಿ ಕರ್ನಾಟಕ ಬಂದ್- ರಸ್ತೆಗಿಳಿಯದ BMTC, KSRTC ಬಸ್

  • ಹೊಟ್ಟೆಯಲ್ಲೆ ಮಗು ಸತ್ತಿದೆ ಅಂದ್ರು ವೈದ್ಯರು- ಸ್ಥಳೀಯರ ಸಹಾಯದಿಂದ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ

    ಹೊಟ್ಟೆಯಲ್ಲೆ ಮಗು ಸತ್ತಿದೆ ಅಂದ್ರು ವೈದ್ಯರು- ಸ್ಥಳೀಯರ ಸಹಾಯದಿಂದ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ

    ಭೋಪಾಲ್: ಹೊಟ್ಟೆಯಲ್ಲೇ ಮಗು ಸತ್ತಿದೆ ಅಂತ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳೀಯರ ಸಹಾಯದಿಂದ ತೆರೆದ ಜಾಗದಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ನಡೆದಿದೆ.

    ಈ ಘಟನೆ ಸೋಮವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯೊಂದರ ಪುಟ್ಟ ಗ್ರಾಮದ ನಿವಾಸಿ ಸಮರ್ವತಿ ದೇವಿ(24) ಎಂಬ 8 ತಿಂಗಳ ಗರ್ಭಿಣಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು ಮಗು ಹೊಟ್ಟೆಯಲ್ಲಿಯೇ ಪ್ರಾಣಬಿಟ್ಟಿದೆ ಅಂತ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಮಹಿಳೆ, ನಾನು ಆಸ್ಪತ್ರೆಗೆ ತೆರಳಿ ಹೊಟ್ಟೆ ನೋವಾಗುತ್ತಿದೆ ಅಂತ ಹೇಳಿದೆ. ಆದ್ರೆ ಅಲ್ಲಿನ ವೈದ್ಯರು ನನ್ನ ಸರಿಯಾಗಿ ಪರೀಕ್ಷೆ ಮಾಡದೇ ಹೊಟ್ಟೆಯಲ್ಲಿಯೇ ಮಗು ಸತ್ತಿದೆ ಅಂತ ಹೇಳಿದ್ರು. ವೈದ್ಯರ ಮಾತಿನಿಂದ ಗಾಬರಿಗೊಂಡ ನನಗೆ ಒಂದು ಬಾರಿ ದಿಕ್ಕುತೋಚದಂತಾಗಿದ್ದು, ಕೂಡಲೇ ಆಸ್ಪತ್ರೆಯಲ್ಲಿಯೇ ಜೋರಾಗಿ ಕಿರುಚಾಡಿದೆ. ಈ ವೇಳೆ ಅಲ್ಲಿನ ನರ್ಸ್ ನನ್ನ ಕೆನ್ನೆಗೆ ಹೊಡೆದರು. ಅಲ್ಲದೇ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳದೇ ಕೂಡಲೇ ಇಲ್ಲಿಂದ ತೊಲಗುವಂತೆ ಎಚ್ಚರಿಸಿದ್ದಾರೆ. ಹೀಗಾಗಿ ಬೇರೆ ದಾರಿ ಕಾಣದೇ ನಾನು ಆಸ್ಪತ್ರೆಯಿಂದ ಹೊರಬಂದೆ ಅಂತ ಆರೋಪಿಸಿದ್ದಾರೆ.

    ಅಂತೆಯೇ ತನ್ನ ಸಂಬಂಧಿಕರೊಂದಿಗೆ ಮರಳಿ ಮನೆಗೆ ಹಿಂದುರುತ್ತಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಸಂಬಂಧಿಕರು ಹಾಗೂ ಕೆಲ ಮಹಿಳೆಯರ ಸಹಾಯದಿಂದ ಮಾರ್ಗ ಮಧ್ಯೆಯೇ ಮುಂಜಾನೆ 5 ಗಂಟೆ ಸುಮಾರಿಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯರು ಸಾರಿ ಮತ್ತು ಹೊದಿಕೆಯಿಂದ ಗರ್ಭಿಣಿಯನ್ನು ಸುತ್ತುವರಿದ್ರು. ಉಳಿದ ಮಹಿಳೆಯರು ನೀರು ತರಲು ಸಹಾಯ ಮಾಡಿದ್ರು. ಒಟ್ಟಿನಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಆಕೆಯನ್ನು ಅದೇ ಆಸ್ಪತ್ರೆಗೆ ದಾಖಲಿಸಿ ತಾಯಿ- ಮಗುವನ್ನು ಪರೀಕ್ಷಿಸಲು ಕರೆದುಕೊಂಡು ಹೋಗಿದ್ದಾರೆ.

    ಇನ್ನು ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಮುಖ್ಯ ವೈದ್ಯಾಧಿಕಾರಿ ಆರ್ ಕೆ ಮೆಹ್ರಾ ಅವರು, ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯಿಂದ ಹೇಳಿಕೆಗಳನ್ನು ಪಡೆದುಕೊಳ್ಳುತ್ತೇವೆ. ಅಲ್ಲದೇ ಈ ಕುರಿತು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ಬಿದ್ದರೆ ಅಂತಹ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುತ್ತೇವೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    ಸದ್ಯ ಸಮರ್ವತಿ ಮತ್ತು ಮುದ್ದಾದ ಗಂಡು ಮಗು ಸಂಬಂಧಿಕರ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಅಲ್ಲದೇ ತನ್ನ ಗಂಡು ಮಗುವಿನೊಂದಿಗೆ ಸಮರ್ವತಿ ಕೂಡ ಸಂತೋಷದಿಂದಿದ್ದಾರೆ ಎಂಬುದಾಗಿ ವರದಿಯಾಗಿದೆ.

  • NMC ವಿಧೇಯಕಕ್ಕೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ- ಎಂದಿನಂತೆ ಕಾರ್ಯನಿರ್ವಹಿಸಲಿವೆ ಸರ್ಕಾರಿ ಆಸ್ಪತ್ರೆಗಳು

    NMC ವಿಧೇಯಕಕ್ಕೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ- ಎಂದಿನಂತೆ ಕಾರ್ಯನಿರ್ವಹಿಸಲಿವೆ ಸರ್ಕಾರಿ ಆಸ್ಪತ್ರೆಗಳು

    ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017ನ್ನು ವಿರೋಧಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ವೈದ್ಯಕೀಯ ಪರಿಷತ್ ಮುಷ್ಕರಕ್ಕೆ ಕರೆ ನೀಡಿದೆ.

    ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸತತ 12 ಗಂಟೆಗಳ ಕಾಲ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಇರಲಿದೆ. ಇನ್ನು ರಾಜ್ಯದಲ್ಲೂ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ. ಆದ್ರೆ ತುರ್ತು ಚಿಕಿತ್ಸಾ ವಿಭಾಗ, ಮೆಡಿಕಲ್ ಸ್ಟೋರ್  ಗಳು ಮತ್ತು ಒಳರೋಗಿಗಳ ವಿಭಾಗ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

    ಈ ವಿಚಾರವಾಗಿ ಸೋಮವಾರ ಕೇಂದ್ರ ವೈದ್ಯಕೀಯ ಸಚಿವ ಜೆಪಿ ನಡ್ಡಾರೊಂದಿಗೆ ವೈದ್ಯಕೀಯ ಸಂಘ ನಡೆಸಿದ ಮಾತುಕತೆಯೂ ವಿಫಲವಾಗಿದೆ. ಈ ಹಿಂದೆ ವೈದ್ಯಕೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಭಾರತೀಯ ವೈದ್ಯಕೀಯ ಪರಿಷತ್ ಮೇಲಿತ್ತು. ಆದ್ರೆ ಎಂಸಿಐ ಮೇಲೆ ಭ್ರಷ್ಟಾಚಾರ ಆರೋಪವಿದ್ದು, ಈ ಹಿಂದೆ ಚೇರ್‍ಮನ್ ಆಗಿದ್ದ ಕೇತನ್ ದೇಸಾಯಿಯವರನ್ನು ಸಿಬಿಐ ಬಂಧಿಸಿತ್ತು. ಅಂದಿನಿಂದಲೂ ಈ ಸಂಸ್ಥೆಯ ಜಾಗದಲ್ಲಿ ಹೊಸ ಸಂಸ್ಥೆ ಸ್ಥಾಪನೆಗೆ ಬೇಡಿಕೆ ಇತ್ತು. ಹೀಗಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರ ಮತ್ತು ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಮುಂದಾಗಿದೆ.

    ಡಿಸೆಂಬರ್ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಬೆಂಬಲ ದೊರೆತಿದ್ದು, ಕಳೆದ ಡಿಸೆಂಬರ್ 19ರಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇನ್ನು ಇಂದು ಈ ಮಸೂದೆ ಸಂಬಂಧ ಚರ್ಚೆ ನಡೆಯಲಿದ್ದು, ಖಾಸಗಿ ವೈದ್ಯರು ಕರಾಳ ದಿನ ಆಚರಣೆಗೆ ಕರೆ ಕೊಟ್ಟಿದ್ದಾರೆ.

  • ಐವರು ಅಪ್ರಾಪ್ತರು ಸೇರಿ 6 ಜನರಿಂದ 8 ವರ್ಷದ ಬಾಲಕಿ ಮೇಲೆ ಗ್ಯಾಂಗ್‍ರೇಪ್

    ಐವರು ಅಪ್ರಾಪ್ತರು ಸೇರಿ 6 ಜನರಿಂದ 8 ವರ್ಷದ ಬಾಲಕಿ ಮೇಲೆ ಗ್ಯಾಂಗ್‍ರೇಪ್

    ಪುಣೆ: 8 ವರ್ಷದ ಬಾಲಕಿಯ ಮೇಲೆ ಐದು ಅಪ್ರಾಪ್ತ ಬಾಲಕರು ಸೇರಿದಂತೆ ಆರು ಮಂದಿ ಅತ್ಯಾಚಾರ ಎಸಗಿರುವ ಆಫಾತಕಾರಿ ಘಟನೆ ಮಹಾರಾಷ್ಟ್ರ ನಗರದಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಆರೋಪಿಯನ್ನು ಬಂಧಿಸಿಲಾಗಿದ್ದು, ಉಳಿದ 5 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಘಟನೆಯಿಂದ ನಗರವೇ ಬೆಚ್ಚಿಬಿದ್ದಿದೆ.

    ಪೊಲೀಸರ ಪ್ರಕಾರ ಆರೋಪಿಗಳು 12 ರಿಂದ 19 ವರ್ಷದ ವಯೋಮಿತಿಯವರು ಎಂದು ತಿಳಿದುಬಂದಿದೆ. ಸಂತ್ರಸ್ತ ಬಾಲಕಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ತಂದೆ ಆಸ್ಪತ್ರೆಗೆ ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿಗಳು ಬಾಲಕಿಯ ಮೇಲೆ ಈ ಹಿಂದೆಯೂ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ಆರೋಪಿಗಳು ತನಗೆ ಬೆದರಿಕೆ ಹಾಕಿದ್ದರು ಎಂದು ಬಾಲಕಿ ವೈದ್ಯರ ಬಳಿ ಹೇಳಿದ್ದಾಳೆ. ಚಾಕ್ಲೇಟ್ ಕೊಡಿಸುವುದಾಗಿ ಹೇಳಿ ಆರೋಪಿಗಳು ಬಾಲಕಿಯನ್ನ ಕರೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.

  • ಉಡುಪಿಯ ವಿದ್ಯಾರ್ಥಿನಿ ಬದುಕಿಸಲು 150 ಕಿ.ಮೀ ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗ್ಳೂರಿಗೆ ರವಾನೆ

    ಉಡುಪಿಯ ವಿದ್ಯಾರ್ಥಿನಿ ಬದುಕಿಸಲು 150 ಕಿ.ಮೀ ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗ್ಳೂರಿಗೆ ರವಾನೆ

    ಉಡುಪಿ: ರಾಜ್ಯದ ಅತೀದೊಡ್ಡ ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಆರನೇ ತರಗತಿ ವಿದ್ಯಾರ್ಥಿನಿಯನ್ನು ಉಡುಪಿಯಿಂದ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

    ಉಡುಪಿಯ ಬೈಂದೂರಿನ ಗ್ರಾಮದ ಆರನೇ ತರಗತಿ ವಿದ್ಯಾರ್ಥಿನಿ ಅನುಶಾ. ಈಕೆ ಗಂಭೀರವಾದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಹೀಗಾಗಿ ಗುರುವಾರ ಅನುಶಾಳನ್ನು ಬೈಂದೂರು ತಾಲೂಕಿನ ಅರೆಶೀರೂರಿನಿಂದ ಉಡುಪಿ-ಮಂಗಳೂರು ಮಾರ್ಗವಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಉಡುಪಿ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಅನಾರೋಗ್ಯ ಪೀಡಿತೆಯನ್ನು ಬೆಂಗಳೂರಿಗೆ ರವಾನೆ ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಸುಮಾರು 140 ಕಿಲೋ ಮೀಟರ್ ದೂರದವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಝೀರೋ ಟ್ರಾಫಿಕ್ ರಸ್ತೆಯನ್ನು ನಿರ್ಮಾಣ ಮಾಡಿದ್ದರು.

    ಒಂದು ಪೊಲೀಸ್ ವಾಹನ ಮತ್ತು ಆಂಬುಲೆನ್ಸ್ ಅತೀ ವೇಗದಲ್ಲಿ ಮಂಗಳೂರಿನ ಬಜ್ಪೆ ನಿಲ್ದಾಣಕ್ಕೆ ತಲುಪಿ ಅಲ್ಲಿಂದ 1 ಗಂಟೆಯ ಜೆಟ್ ಏರ್ ವೇಸ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಅನುಶಾಳನ್ನು ರವಾನೆ ಮಾಡಲಾಯಿತು. ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್ ನಲ್ಲಿ ಆಪರೇಷನ್ ನಡೆಸಲಾಗುವುದು. ಬೆಂಗಳೂರು ವೈದ್ಯರು ಉಡುಪಿಗೆ ಬಂದು ಶಸ್ತ್ರಚಿಕಿತ್ಸೆ ಕೊಡಲು 48 ಗಂಟೆ ತಗಲುವುದರಿಂದ ವೈದ್ಯರು ಅನುಶಾಳನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

    ಮಧ್ಯಾಹ್ನ ಸುಮಾರು 2 ಗಂಟೆಗೆ ಬಂದ ಅನುಶಾಗೆ ಬೆಂಗಳೂರಿನಲ್ಲಿ ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಅನುಶಾಳಿಗೆ ಚಿಕಿತ್ಸೆ ಶುರುಮಾಡಲಾಗಿದೆ. ಅರೆಶೀರೂರು ಹೈಸ್ಕೂಲಿನ ಮುಖ್ಯ ಶಿಕ್ಷಕರ ಮಗಳು ಅನುಶಾ ಕಡು ಬಡತನದಿಂದ ಬಂದವಳು. ಆಕೆಯ ಶಸ್ತ್ರಚಿಕಿತ್ಸೆಗೆ ಹಣಕಾಸಿನ ಅವಶ್ಯಕತೆಯಿದೆ ಎಂದು ಕುಟುಂಬ ಮನವಿ ಮಾಡಿಕೊಂಡಿದೆ.

    ಬೈಂದೂರಿನಿಂದ ಕುಂದಾಪುರ- ಉಡುಪಿ, ಪಡುಬಿದ್ರೆ ಮಾರ್ಗವಾಗಿ ಮೂಲ್ಕಿವರೆಗೆ ಉಡುಪಿ ಜಿಲ್ಲಾ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಉಡುಪಿಯ ಗಡಿ ದಾಟಿ ಮಂಗಳೂರಿಗೆ ಬಂದ ಕೂಡಲೇ ಪೊಲೀಸರು ಅಸಹಾಕಾರ ತೋರಿದ್ದಾರೆ. ಮಾಮೂಲಿಯಂತೆ ಟ್ರಾಫಿಕ್ ರಸ್ತೆಯಲ್ಲಿ ಆಂಬುಲೆನ್ಸ್ ಗೆ ಕಿರಿಕಿರಿ ಮಾಡಿದೆ. ವೇಗವಾಗಿ ಮಂಗಳೂರು ವಿಮಾನ ನಿಲ್ದಾಣ ರೀಚ್ ಆಗಬೇಕಿದ್ದ  ಆಂಬುಲೆನ್ಸ್ ತಡವಾಗಿ ತಲುಪಿತು.

    ಮಂಗಳೂರು ಜಿಲ್ಲಾ ಪೊಲೀಸರು ಅನುಶಾ ಇದ್ದ ಆಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ. ವಾಹನ ದಟ್ಟಣೆಯ ನಡುವೆ ನಡುವೆ ಆಂಬುಲೆನ್ಸ್ ನಿಧಾನಗತಿಯಲ್ಲಿ ವಿಮಾನ ನಿಲ್ದಾಣ ತಲುಪದ್ದು, ಸುಮಾರು 15 ನಿಮಿಷಗಳ ಕಾಲ ನಾವು ವಿಳಂಬವಾಗಿ ವಿಮಾನ ನಿಲ್ದಾಣ ತಲುಪಬೇಕಾಯಿತು. ಏರ್ ಪೋರ್ಟ್ ನಿಂದ ಹತ್ತಾರು ಫೋನ್ ಕರೆಗಳು ಬಂದವು ಎಂದು ಆಂಬುಲೆನ್ಸ್ ಜೊತೆಗಿದ್ದ ರವಿಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.