Tag: doctors

  • ಗಮನಿಸಿ: ಶನಿವಾರ ಖಾಸಗಿ ಆಸ್ಪತ್ರೆ ಒಪಿಡಿ ಬಂದ್

    ಗಮನಿಸಿ: ಶನಿವಾರ ಖಾಸಗಿ ಆಸ್ಪತ್ರೆ ಒಪಿಡಿ ಬಂದ್

    ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಮಸೂದೆಯನ್ನು ಜಾರಿಗೆ ತರದಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘವು ದೇಶದಾದ್ಯಂತ ಶನಿವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಗೆ ಕರೆ ಕೊಟ್ಟಿವೆ.

    ಕೇಂದ್ರ ಸರ್ಕಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಒಂದು ದಿನ ಸಾಂಕೇತಿಕ ಮುಷ್ಕರ ನಡೆಯಲಿದೆ. ಹೀಗಾಗಿ ಅಂದು ತುರ್ತು ಸೇವೆ ಹೊರತುಪಡಿಸಿ, ಉಳಿದ ಒಪಿಡಿ, ಪ್ರಯೋಗಾಲಯ ಸೇರಿದಂತೆ ವೈದ್ಯಕೀಯ ಸೇವೆ ಅಲಭ್ಯವಾಗಲಿದೆ.

    ಎನ್‍ಎಂಸಿ ಮಸೂದೆ ಕೈ ಬಿಡುವಂತೆ ಒತ್ತಾಯಿಸಿ ವೈದ್ಯರು ಈ ಹಿಂದೆಯೂ ಸಾಕಷ್ಟು ಬಾರಿ ಹೋರಾಟ ಕೈಗೊಂಡಿದ್ದರು. ಈಗ ಮತ್ತೆ ಹೋರಾಟ ತೀವ್ರಗೊಳಿಸಲು ನಿರ್ಧಾರ ಕೈಗೊಂಡಿದ್ದಾರೆ.

    ಏನಿದು ಎನ್‍ಎಂಸಿ ಮಸೂದೆ?: ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ರಾಷ್ಟ್ರೀಯ ವೈದ್ಯಕೀಯ ಆಯೋಗ-2017’ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ಅನ್ನು ವಿಸರ್ಜಿಸಿ ಅದರ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.

  • ಬೆನ್ನು ನೋವು, ಜ್ವರ ಅಂತ ಆಸ್ಪತ್ರೆಗೆ ಹೋದ್ರೆ ಕಿಡ್ನಿಯಲ್ಲಿ ಬರೋಬ್ಬರಿ 3 ಸಾವಿರ ಕಲ್ಲು ಪತ್ತೆ

    ಬೆನ್ನು ನೋವು, ಜ್ವರ ಅಂತ ಆಸ್ಪತ್ರೆಗೆ ಹೋದ್ರೆ ಕಿಡ್ನಿಯಲ್ಲಿ ಬರೋಬ್ಬರಿ 3 ಸಾವಿರ ಕಲ್ಲು ಪತ್ತೆ

    ಬೀಜಿಂಗ್: ಇತ್ತೀಚೆಗೆ 56 ವರ್ಷದ ಮಹಿಳೆಯೊಬ್ಬಳು ಬೆನ್ನು ನೋವು ಮತ್ತು ಜ್ವರ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅವರ ಮೂತ್ರಪಿಂಡದಲ್ಲಿ 3 ಸಾವಿರ ಕಲ್ಲುಗಳು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಪಟ್ಟಿದ್ದಾರೆ.

    ಈ ಘಟನೆ ಚೀನಾದ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಝೌದಲ್ಲಿನ ವುಜಿನ್ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆಯ ಹೆಸರು ಜಾಂಗ್ ಎಂದು ತಿಳಿದು ಬಂದಿದೆ. ಇವರು ಕಳೆದ ವಾರ ನಿರಂತರ ಬೆನ್ನುನೋವಿದೆ ಎಂದು ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ಹೇಳಿಕೊಂಡಿದ್ದರು.

    ವೈದ್ಯರು ಮಹಿಳೆಯನ್ನು ಪರೀಕ್ಷೆ ಮಾಡಿದ್ದಾರೆ. ನಂತರ ಮಹಿಳೆಯ ಬಲಭಾಗದಲ್ಲಿರುವ ಮೂತ್ರಪಿಂಡದ ತುಂಬಾ ಕಲ್ಲುಗಳಿರುವುದು ಪತ್ತೆಯಾಗಿದೆ. ಬಳಿಕ ವೈದ್ಯರು ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿಯಲ್ಲಿದ್ದ ಕಲ್ಲುಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಆಪರೇಷನ್ ಮಾಡಿ ತೆಗೆದ ಕಲ್ಲುಗಳನ್ನು ಎಣಿಸಲು ವೈದ್ಯರು ಸುಮಾರು ಒಂದು ಗಂಟೆ ಸಮಯವನ್ನು ತೆಗೆದುಕೊಂಡಿದ್ದಾರೆ. ಮಹಿಳೆಯ ದೇಹದಲ್ಲಿ ಒಟ್ಟು 2,980 ಕಿಡ್ನಿ ಸ್ಟೋನ್ ಗಳು ಪತ್ತೆಯಾಗಿವೆ.

    ಮಹಾರಾಷ್ಟ್ರ ಧನರಾಜ್ ವಾಡಿಲೆಯಲ್ಲಿ ರೋಗಿಯೊಬ್ಬರ ಕಿಡ್ನಿಯಲ್ಲಿ ಬರೋಬ್ಬರಿ 1,72,155 ಕಲ್ಲುಗಳನ್ನು ತೆಗೆಯಲಾಗಿದ್ದು, ಗಿನ್ನಿಸ್ ದಾಖಲೆ ನಿರ್ಮಾಣವಾಗಿದೆ.

  • ಕರ್ತವ್ಯದ ಸಮಯ ಮರೆತ ವೈದ್ಯರಿಗೆ ನೋಟಿಸ್ ಜಾರಿ

    ಕರ್ತವ್ಯದ ಸಮಯ ಮರೆತ ವೈದ್ಯರಿಗೆ ನೋಟಿಸ್ ಜಾರಿ

    ಚಿತ್ರದುರ್ಗ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವೈದ್ಯರಿಗೆ ಜಿಲ್ಲಾಧಿಕಾರಿಯೊಬ್ಬರು ನೋಟಿಸ್ ಜಾರಿಗೊಳಿಸಿದ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲಾ ವೈದ್ಯಾಧಿಕಾರಿ ಜಯಪ್ರಕಾಶ್, ಡಾ.ರವೀಂದ್ರ, ಡಾ.ಬಸವರಾಜ್, ಡಾ.ಮೋಹನ್, ಡಾ.ವೆಂಕಟೇಶ್, ಡಾ.ಸತೀಶ್ ಹಾಗೂ ಡಾ.ಆನಂದಪ್ರಕಾಶ್ ವಿರುದ್ಧ ಜಿಲ್ಲಾಧಿಕಾರಿ ವಿ.ವಿ.ಜೋತ್ನ್ನಾ ನೋಟಿಸ್ ನೀಡಿದ್ದಾರೆ.

    ಇಂದು ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಸುಮಾರು 10.30 ಗಂಟೆಯಾದರೂ ಆಸ್ಪತ್ರೆಗೆ ಹಾಜರಾಗದ 7 ವೈದ್ಯರ ವಿರುದ್ಧ ಗರಂ ಆಗಿದ್ದರು. ಅಷ್ಟೇ ಅಲ್ಲದೆ ಅವರಿಗೆ ನೋಟಿಸ್ ನೀಡಿದ್ದು, ಸಂಜೆಯ ಒಳಗಾಗಿ ನೋಟಿಸ್‍ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

  • ಶಿರೂರು ಶ್ರೀಗಳಿಗೆ ವಿಷ ಪ್ರಾಶನ: ವೈದ್ಯರ ಶಂಕೆ

    ಶಿರೂರು ಶ್ರೀಗಳಿಗೆ ವಿಷ ಪ್ರಾಶನ: ವೈದ್ಯರ ಶಂಕೆ

    ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ರಕ್ತವಾಂತಿ ಮಾಡಿಕೊಂಡು ಸಾವು ಕಂಡಿರುವುದು ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

    ಸ್ವಾಮೀಜಿಗಳನ್ನು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ನಮ್ಮ ವೈದ್ಯರ ತಂಡವೆಲ್ಲರೂ ಸೇರಿ ಚಿಕಿತ್ಸೆ ಕೊಟ್ಟಿದ್ದೆವು. ಆದರೆ ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ನಂತರ ಹೊಟ್ಟೆಯಲ್ಲಿ ವಿಷಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೊಟ್ಟೆಯೊಳಗೆ ತೀವ್ರ ರಕ್ತಸ್ರಾವವಾಗಿತ್ತು. ನಮ್ಮ ಸಂಶಯವನ್ನ ಪೊಲೀಸರಿಗೆ ತಿಳಿಸಿದ್ದೇವೆ. ಮುಂದಿನ ಕ್ರಮ ಪೊಲೀಸರು ಕೈಗೊಳ್ಳುತ್ತಾರೆ. ಕೆಎಂಸಿ. ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯ ಡಾ.ಅವಿನಾಶ್ ಹೇಳಿದ್ದಾರೆ.

    ಫುಡ್ ಪಾಯಿಸನಿಂಗ್ ಎಂದು ಹೇಳಲಾಗುತ್ತಿದೆಯಾದರೂ ಹಲವಾರು ಅನುಮಾನಗಳು ಎದ್ದಿವೆ. ಇನ್ನೊಂದೆಡೆ ಬುಧವಾರ ಸಂಜೆಯೇ ರಕ್ತ ವಾಂತಿ ಕಾರಿರುವ ಶ್ರೀಗಳು ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಅನ್ನೋ ಸಂದೇಶ ಹರಿದಾಡಿತ್ತು. ಆದರೆ ಆಸ್ಪತ್ರೆ ವೈದ್ಯಾಧಿಕಾರಿ ಈ ಸುದ್ದಿಯನ್ನು ಅಲ್ಲಗಳೆದಿದ್ದು, ಆರೋಗ್ಯ ಸುಧಾರಣೆ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದರು.

    ಇತ್ತೀಚೆಗೆ ತಮ್ಮ ಪಟ್ಟದ ದೇವರನ್ನು ನೀಡದಿರುವುದನ್ನು ಪ್ರಶ್ನಿಸಿ ಇತರೇ ಮಠಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಅಲ್ಲದೇ ಉಳಿದ ಮಠಾಧೀಶರು ತನ್ನ ಮೇಲೆ ಉತ್ತರಾಧಿಕಾರಿ ಹೊಂದುವಂತೆ ಹಾಕುತ್ತಿರುವ ಒತ್ತಡದಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್ ತೆರಳಿ ತಡೆಯಾಜ್ಞೆ ತಂದಿದ್ದರು. ಶಿರೂರು ಮಠದ `ಶ್ರೀ ಅನ್ನವಿಠಲ’ ಪಟ್ಟದ ದೇವರನ್ನು ಹಿಂದಿರುಗಿಸುವಂತೆ ಸ್ಬಾಮೀಜಿ, ಪರ್ಯಾಯ ಮಠಾಧೀಶರಿಗೆ ಕೇಳಿಕೊಂಡಿದ್ದರೂ ನೀಡದ ಪರ್ಯಾಯ ಪೀಠಾಧಿಪತಿಗಳು ಉತ್ತರಾಧಿಕಾರಿ ಹೊಂದುವಂತೆ ಸೂಚಿಸಿದ್ದರು. ಕೃಷ್ಣಮಠದಲ್ಲಿ ಈ ಬಗ್ಗೆ ಗುಪ್ತ ಸಭೆ ನಡೆದು ಶಿರೂರು ಸ್ವಾಮೀಜಿಗಳನ್ನು ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರವೂ ನಡೆದಿತ್ತು ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಅವರು ಏಕಾಏಕಿ ಅನಾರೋಗ್ಯ ಪೀಡಿತರಾಗಿದ್ದಲ್ಲದೆ, ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿರುವುದು ಭಕ್ತರ ಅನುಮಾನಕ್ಕೆ ಕಾರಣವಾಗಿದೆ.

    ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶಿರೂರು ಶ್ರೀಗಳು ಉಡುಪಿಯಲ್ಲಿ ಜನಸಾಮಾನ್ಯರ ಸ್ವಾಮೀಜಿ ಎಂದೇ ಹೆಸರು ಗಳಿಸಿದ್ದರು. ಸಂಗೀತ, ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಶಿರೂರು ಶ್ರೀಗಳು ತನ್ನ ಎರಡು ಅವಧಿಯ ಪರ್ಯಾಯದಲ್ಲಿ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಹಾಗೂ ಅವ್ಯವಹಾರ ತಡೆಯುವಲ್ಲೂ ಯಶಸ್ವಿಯಾಗಿದ್ದರು. ಶಿರೂರು ಸ್ವಾಮೀಜಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶ್ರೀಗಳು ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

    55ನೇ ವಯಸ್ಸಿನ ಶಿರೂರು ಶ್ರೀಗಳ ವಿಧಿವಶದಿಂದ ಶಿರೂರು ಮಠ ಅನಾಥವಾಗಿದ್ದು, ಹಲವು ಗಣ್ಯರು, ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ. ಕೇವಲ ಫುಡ್ ಪಾಯ್ಸನಿಂಗ್ ಆಗಿರುತ್ತಿದ್ದರೆ ಹಠಾತ್ ಸಾವು ಸಂಭವಿಸುತ್ತಿರಲಿಲ್ಲ. ಆಹಾರದ ರೂಪದಲ್ಲಿ ಬೇರೇನೋ ಸೇವನೆ ಆಗಿರುವ ಶಂಕೆ ಭಕ್ತರಲ್ಲಿದೆ.

  • ಆಸ್ಪತ್ರೆಯ ವಿಲೀನ ಖಂಡಿಸಿ ಗದಗ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ

    ಆಸ್ಪತ್ರೆಯ ವಿಲೀನ ಖಂಡಿಸಿ ಗದಗ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ

    ಗದಗ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಗದಗ ಜಿಮ್ಸ್ ಸಂಸ್ಥೆಗೆ ವಿಲೀನಗೊಳಿಸಿರುವುದನ್ನು ವಿರೋಧಿಸಿ ವೈದ್ಯರು ಹಾಗೂ ಸಿಬ್ಬಂದಿ ನಗರದ ಹೆರಿಗೆ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ.

    ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಗದಗ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯಕ್ಕೆ ವಿಲೀನಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಕೂಡಲೇ ಹಿಂಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಸ್ಟಾಫ್ ನರ್ಸ್ ಅಸೋಸಿಯೇಷನ್, ಫಾರ್ಮಸಿ ಅಸೋಸಿಯೇಷನ್, ಲ್ಯಾಬ್ ಟೆಕ್ನಿಷಿಯನ್, ಆರೋಗ್ಯ ಇಲಾಖೆಯ ವಿವಿಧ ವರ್ಗ ಹಾಗೂ ನೌಕರರ ಸಂಘದಿಂದ ಹೆರಿಗೆ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಹೆರಿಗೆ ಆಸ್ಪತ್ರೆಯನ್ನು ಗದಗ ಜಿಮ್ಸ್ ನೊಂದಿಗೆ ವಿಲೀನ ಮಾಡಿದರೆ ರೋಗಿಗಳು ಹಾಗೂ ಸಿಬ್ಬಂದಿಗೆ ಸಾಕಷ್ಟು ತೊಂದರೆಯಾಗುತ್ತದೆ. ತಾಲೂಕು ಮಟ್ಟದ ಆಸ್ಪತ್ರೆ, ಸಾರ್ವಜನಿಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಪದೋನ್ನತಿ ಅಥವಾ ವರ್ಗಾವಣೆಗೊಂಡು ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅವಕಾಶದಿಂದ ವಂಚಿತರಾಗುತ್ತಾರೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯೇ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

  • ಅನ್ನಭಾಗ್ಯ ಜಾಹೀರಾತಿನ ಅನ್ನದಾತನೊಂದಿಗೆ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ

    ಅನ್ನಭಾಗ್ಯ ಜಾಹೀರಾತಿನ ಅನ್ನದಾತನೊಂದಿಗೆ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಅನ್ನಭಾಗ್ಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅನ್ನದಾತನನ್ನು ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪಶುವಿನಂತೆ ನೋಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಎಂ.ಸಿ.ರಾಜು ಆಸ್ಪತ್ರೆ ಸಿಬ್ಬಂದಿಯಿಂದ ಅವಮಾನಕ್ಕೊಳದ ರೈತ. ಇವರು ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆಯ ಮಾರಹಳ್ಳಿ ನಿವಾಸಿಯಾಗಿದ್ದಾರೆ. ಇವರು ಮಾಜಿ ಸಿಎಂ ಸಿದ್ದರಾಮಯ್ಯನ ಕನಸಿನ ಯೋಜನೆಯಾಗಿದ್ದ ಅನ್ನಭಾಗ್ಯ ಜಾಹೀರಾತಿನಲ್ಲಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು.

    ರೈತ ರಾಜು ತನ್ನ ಮಗನನ್ನು ಕಿಡ್ನಿ ತೊಂದರೆಯ ಕಾರಣದಿಂದ ನಗರದ ವಾಣಿವಿಲಾಸ ಆಸ್ಪತ್ರೆಗೆ ಕರೆತಂದಿದ್ದರು. ಮಗ ನಂದರಾಜು ಕಿಡ್ನಿ ತೊಂದರೆಯಿಂದಾಗಿ ಅವನ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಜೂನ್ 11ಕ್ಕೆ ಮಗನನ್ನು ವಾಣಿವಿಲಾಸ ಆಸ್ಪತ್ರೆಗೆ ಕರೆತಂದಿದ್ದರು. ಮಗನ ಅವಸ್ಥೆ ಕಂಡರೂ ಆಸ್ಪತ್ರೆಯ ಸಿಬ್ಬಂದಿಗಳು ಕ್ಯಾರೇ ಎನ್ನದೇ ಅಲ್ಲಿಂದ ಇಲ್ಲಿಗೆ ಓಡಾಡಿಸಿ ಕೊನೆಗೆ ದಾಖಲು ಮಾಡಿಕೊಂಡಿದ್ದಾರೆ.

    ವಾಣಿವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿಸಿದ್ದರೂ ಸಹ ಮಗ ನಂದರಾಜುವಿನ ತೊಂದರೆ ಕಡಿಮೆಯಾಗಿಲ್ಲ. ಹೀಗಾಗಿ ರೈತ ರಾಜಪ್ಪ ವಾಣಿವಿಲಾಸ ಆಸ್ಪತ್ರೆಯ ವೈದ್ಯರಾದ ಮೂರ್ತಿ ಹಾಗೂ ರಘುರವರನ್ನು ವಿಚಾರಿಸಿದಾಗ, ಬೇಜವಾಬ್ದಾರಿತನದಿಂದ ನಿಮಗೇನು ಹೊಟ್ಟೆ ಕೊಯ್ಯಬೇಕಾ, ಇಲ್ಲಿಂದ ಹೊರಡಿ ಎಂದು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡದಿಂದ ಬೇಸತ್ತ ರೈತ ತನ್ನ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡಿ ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

  • ಅಮೆರಿಕದಲ್ಲಿ ಮಕ್ಕಳ ಡಾಕ್ಟರ್ – ಬೆಂಗಳೂರಿನ ಬೀದಿಗಳಲ್ಲಿ ಅನಾಥ!

    ಅಮೆರಿಕದಲ್ಲಿ ಮಕ್ಕಳ ಡಾಕ್ಟರ್ – ಬೆಂಗಳೂರಿನ ಬೀದಿಗಳಲ್ಲಿ ಅನಾಥ!

    ಬೆಂಗಳೂರು: ವಾಷಿಂಗ್ಟನ್ ನಲ್ಲಿ ಮಕ್ಕಳ ಡಾಕ್ಟರ್ ಆಗಿದ್ದ ವ್ಯಕ್ತಿಯೊಬ್ಬರು ನಗರದಲ್ಲಿ ಭಿಕ್ಷುಕನ ರೀತಿ ಬದುಕುತ್ತಿದ್ದಾರೆ. ಇದು ಎಂಥವರಿಗೂ ಆಶ್ಚರ್ಯವಾಗದೇ ಇರದು.

    `ನಾನು ಡಾಕ್ಟರ್ ಮೌರಿಸ್, ವಾಷಿಂಗ್ಟನ್. ಕ್ಯಾಲಿಫೋರ್ನಿಯಾದಲ್ಲಿ ಮಕ್ಕಳ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ’ ಅಂತ ಹೇಳಿಕೊಳ್ಳುವ ಈ ವ್ಯಕ್ತಿ ಶುದ್ಧ ಇಂಗ್ಲಿಷ್ ನಲ್ಲೇ ಮಾತಾಡೋದು. ಪೆನ್ನು ಪೇಪರ್ ತಗೊಂದು ಡಾ. ಮೌರಿಸ್ ವಾಷಿಂಗ್ಟನ್ ಅಂತ ಇಂಗ್ಲಿಷ್ ನಲ್ಲೇ ಬರೆದು, ತೋಚಿದ್ದನ್ನೆಲ್ಲಾ ಗೀಚುತ್ತಾರೆ. ಅವರಿವರು ಕೊಡುವ ಬ್ರೆಡ್, ಆಹಾರ ಪದಾರ್ಥಗಳನ್ನ ತೆಗೆದುಕೊಂಡು ಬೆಂಗಳೂರಿನ ರಾಜಾಜಿನಗರ ಮೂರನೇ ಬ್ಲಾಕ್ ನಲ್ಲಿ, ರಸ್ತೆ ಬದಿಯಲ್ಲೇ ಜೀವನ ಕಳಿಯುತ್ತಿದ್ದರು. ಇವರನ್ನು ನೋಡಿ ಮೇ 31 ರಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಸಮಾಜ ಸೇವಕ ರಾಜಣ್ಣ ಅವರು ಹೇಳಿದ್ದಾರೆ.

    ನಿಮ್ಹಾನ್ಸ್ ನಲ್ಲಿ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮುಖರಾಗುತ್ತಿರುವ ಈ ವ್ಯಕ್ತಿ `ನಾನು ಮೌರಿಸ್, ವಾಷಿಂಗ್ಟನ್’ ಅಂತಲೇ ಹೇಳುತ್ತಿದ್ದಾರೆ. ಮನೆ ವಿಳಾಸ ಕೇಳಿದರೆ ರೆಸಿಡೆನ್ಸಿ ರೋಡ್, ಬೆನ್ಸನ್ ಟೌನ್, ಮಿಲ್ಲರ್ಸ್ ರೋಡ್ ಅಂತೆಲ್ಲಾ ವಿವರ ನೀಡುತ್ತಿದ್ದಾರೆ. ತನಗೆ ಒಬ್ಬ ಮಗನಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ ಅಂತ ಹೇಳುತ್ತಿದ್ದಾರೆ. ನನ್ನ ಮಗ ಸಿನಿಮಾ ತಾರೆ ಅಂತ ಮಾಹಿತಿ ನೀಡಿದ್ದು, ಕಳೆದ ಒಂದು ವರ್ಷದಿಂದಲೂ ರಾಜಾಜಿನಗರದ ಜನ ಈ ವ್ಯಕ್ತಿಯನ್ನ ಗಮನಿಸಿದ್ದಾರೆ ಎಂದು ಸ್ಥಳಿಯ ಮಂಜುನಾಥ್ ಹೇಳಿದ್ದಾರೆ.

    ಸದ್ಯಕ್ಕೆ ನಿಮ್ಹಾನ್ಸ್ ನ ವೈದ್ಯರು ಹೇಳುವ ಪ್ರಕಾರ ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಇದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಎಲ್ಲಿಂದಲೋ ಬಂದವರು ಇಲ್ಲಿ ನಿಗರ್ತಿಕರಾಗಿದ್ದು ಹೇಗೆ? ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಗುಣಮುಖರಾಗುತ್ತಿರುವ ಈ ವ್ಯಕ್ತಿ ಆದಷ್ಟು ಬೇಗ ತಮ್ಮ ಕುಟುಂಬದವರನ್ನು ಸೇರುವಂತಾಗಲೀ ಎಂಬುದು ವೈದ್ಯರ ಆಶಯವಾಗಿದೆ.

  • ಸಚಿವ ಡಿಕೆ ಶಿವಕುಮಾರ್ ಬಂದು ಹೋದ ಅರ್ಧ ಗಂಟೆಯಲ್ಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಮಾನವೀಯತೆ ಪ್ರದರ್ಶನ

    ಸಚಿವ ಡಿಕೆ ಶಿವಕುಮಾರ್ ಬಂದು ಹೋದ ಅರ್ಧ ಗಂಟೆಯಲ್ಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಮಾನವೀಯತೆ ಪ್ರದರ್ಶನ

    ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ ಬೆನ್ನಲ್ಲೆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ವಹಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ದೂರು ಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾದ ಡಿಕೆ ಶಿವಕುಮಾರ್ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಸಚಿವರು ಆಸ್ಪತ್ರೆ ಭೇಟಿ ನೀಡಿ ತೆರಳಿದ ಅರ್ಧ ಗಂಟೆ ಸಮಯದಲ್ಲೇ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ದಾಖಲಿಸಿಕೊಳ್ಳಲು ನಿರ್ಲಕ್ಷ ತೋರಿದ್ದು, ಈ ಕುರಿತು ರೋಗಿಯ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಘಟನೆ: ನಗರದ ಕೆಂಗೇರಿ ಬಳಿ ನಿಶಾಂತ್(28) ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಸಚಿವರು ಭೇಟಿ ನೀಡಿ ತೆರಳಿದ ಬಳಿಕವೂ ಎಚ್ಚೆತ್ತುಕೊಳ್ಳದ ವೈದ್ಯರು ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ರೋಗಿ ನರಳುತ್ತಿದ್ದ ನಿಶಾಂತ್ ನನ್ನು ಆಸ್ಪತೆಗೆ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿ ರೋಗಿಯನ್ನು ಅಂಬುಲೆನ್ಸ್ ನಲ್ಲೇ ಇರಿಸಿದ್ದಾರೆ.

    ಇದಕ್ಕೂ ಮುನ್ನ ಗಂಭೀರವಾಗಿ ಗಾಯಗೊಂಡಿದ್ದ ನಿಶಾಂತ್ ನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲು ಪೋಷಕರು ಮುಂದಾಗಿದ್ದರು. ಆದರೆ ಅಲ್ಲಿಯ ವೈದ್ಯರು ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದ ವೇಳೆ ಈ ಅಮಾನವೀಯ ಘಟನೆ ನಡೆದಿದೆ. ನಿಶಾಂತ್ ಹಾಗೂ ಆತನ ಸ್ನೇಹಿತ ಅರುಣ್ ಜೊತೆ ಬೈಕ್‍ನಲ್ಲಿ ಬರುತ್ತಿರುವಾಗ, ಕೆಂಗೇರಿ ಚೆಕ್‍ಪೋಸ್ಟ್ ಬಳಿ ಟಾಟಾ ಸುಮೊ ಹಾಗೂ ಅಪಾಚಿ ಬೈಕ್ ನಡುವೆ ಅಪಘಾತ ಸಂಭವಿಸಿತ್ತು.

  • ಗದಗ ಜಿಲ್ಲೆಗೂ ಕಾಲಿಟ್ಟಿದೆ ನಿಪಾ ವೈರಸ್!

    ಗದಗ ಜಿಲ್ಲೆಗೂ ಕಾಲಿಟ್ಟಿದೆ ನಿಪಾ ವೈರಸ್!

    ಗದಗ: ಮಾರಣಾಂತಿಕ ಮಹಾಮಾರಿ ಶಂಕಿತ ನಿಪಾ ವೈರಸ್ ಗದಗ ಜಿಲ್ಲೆಗೂ ಕಾಲಿಟ್ಟಿದೆ ಎನ್ನಲಾಗುತ್ತಿದ್ದು, ಇದೀಗ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

    ಜಿಲ್ಲೆಯ ರೋಣ ತಾಲೂಕಿನ ವ್ಯಕ್ತಿಯೊಬ್ಬರಿಗೆ ನಿಪಾ ವೈರಸ್ ಇದೆ ಎಂದು ಶಂಕಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಗದಗ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕೆಲ ತಿಂಗಳ ಕಾಲ ಕೇರಳದ ಕ್ಯಾಲಿಕಟ್ ಸಮೀಪದಲ್ಲಿ ಕೆಲಸದಲ್ಲಿದ್ದರು.

    ಇತ್ತೀಚೆಗೆ ಗದಗ ಜಿಲ್ಲೆಯ ತವರೂರಿಗೆ ಮರಳಿದಾಗ ಕಳೆದ ಒಂದೆರಡು ವಾರಗಳಿಂದ ಜ್ವರ, ತಲೆನೋವು, ವಾಂತಿ, ಕೆಮ್ಮು, ಸುಸ್ತು ಹೀಗೆ ನಿಪಾ ವೈರಸ್ ನ ಲಕ್ಷಣಗಳು ಗೋಚರವಾಗಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಗದಗ ಜಿಮ್ಸ್ ವೈದ್ಯರು ತಪಾಸಣೆಗೊಳಪಡಿಸಿದ್ದಾರೆ.

    ಈ ಹಿನ್ನಲೆಯಲ್ಲಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಯ ಎನ್‍ಐವಿ ಲ್ಯಾಬ್ ಗೆ ರಕ್ತ ಪರೀಕ್ಷೆಗಾಗಿ ರವಾನಿಸಿದ್ದಾರೆ. 48 ಗಂಟೆಗಳಲ್ಲಿ ಪ್ರಯೋಗಾಲಯದ ವರದಿ ಬರಲಿದ್ದು, ಆನಂತರ ಹೆಚ್ಚಿನ ಚಿಕಿತ್ಸೆ ನೀಡುವುದಾಗಿ ಜಿಮ್ಸ್ ಆಡಳಿತ ವೈದ್ಯಾಧಿಕಾರಿ ಎ.ಬಿ ಪಾಟೀಲ್ ಹೇಳಿದ್ದಾರೆ.

  • ಮಂಗಳೂರಲ್ಲಿ ನಿಪಾ ಸೋಂಕು ಶಂಕೆ – ಹೈ ಅಲರ್ಟ್ ಜಾರಿ

    ಮಂಗಳೂರಲ್ಲಿ ನಿಪಾ ಸೋಂಕು ಶಂಕೆ – ಹೈ ಅಲರ್ಟ್ ಜಾರಿ

    ಮಡಿಕೇರಿ: ಕೇರಳದಲ್ಲಿ ಹಲವರನ್ನು ಬಲಿ ತೆಗೆದುಕೊಂಡಿರುವ ನಿಪಾ ವೈರಸ್ ರಾಜ್ಯಕ್ಕೂ ಆಗಮಿಸುವ ಶಂಕೆ ವ್ಯಕ್ತವಾಗಿದ್ದು, ಮಂಗಳೂರಿನ ಇಬ್ಬರಲ್ಲಿ ನಿಪಾ ವೈರಸ್ ಲಕ್ಷಣ ಕಂಡು ಬಂದಿದೆ.

    ಕೇರಳ ಮತ್ತು ಮಂಗಳೂರು ಮೂಲದ ಇಬ್ಬರಲ್ಲಿ ನಿಪಾ ವೈರಸ್ ಲಕ್ಷಣ ಕಾಣಿಸಿದ್ದು, ಇಬ್ಬರ ರಕ್ತವನ್ನು ಮಣಿಪಾಲದ ಕೆಎಂಸಿ ಸೆಂಟರ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಶಂಕಿತರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ತೀವ್ರ ಎಚ್ಚರಿಕೆಯನ್ನು ವಹಿಸಲಾಗಿದೆ.

    ಈಗಾಗಲೇ ಸೋಂಕು ವ್ಯಾಪಿಸದಂತೆ ಎಚ್ಚರಿಕೆ ಕ್ರಮವಹಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಂದ ವರದಿ ತರಿಸಿಕೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಸೂಚನೆ ನೀಡಿದೆ. ಇದನ್ನು ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ಈ ನಡುವೆ ಮಂಗಳೂರಿನ ಆಸ್ಪತ್ರೆಗಳಿಗೆ ಕೇರಳ ಮೂಲದ ರೋಗಿಗಳೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸೋಂಕು ಹರಡುವ ಆತಂಕ ಎದುರಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ರೋಗದ ಲಕ್ಷಣ ಕಂಡು ಬಂದರೆ ತಕ್ಷಣ ಕ್ರಮಕ್ಕಾಗಿ ವಾಟ್ಸಪ್ ಗ್ರೂಪ್ ಗಳನ್ನು ತೆರೆದಿದ್ದು, ಮುನ್ನಚ್ಚೆರಿಕಾ ಕ್ರಮವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವಾರ್ಡ್ ತೆರೆಯಲಾಗಿದೆ.ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಇನ್ನು ಕೇರಳದಲ್ಲಿ ಸಾವಿನ ಸಂಖ್ಯೆ ಏರಿಕೆ ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕೇರಳದಲ್ಲಿ ಹೆಚ್ಚಾಗಿ ವೈರಾಣು ವ್ಯಾಪಿಸಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. 50ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ ಅಂತ ಕೇರಳ ಆರೋಗ್ಯ ಸಚಿವಾಲಯ ತಿಳಿಸಿದೆ.