ರಾಯಚೂರು: ತಾಯಿ ಹೆಸರು ಒಂದೇ ಆಗಿದ್ದರಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರು ಮಕ್ಕಳನ್ನು ಬದಲಿಸಿ ಎಡವಟ್ಟು ಮಾಡಿದ್ದಾರೆ.
ಪದ್ಮ ಜಯಪ್ಪ ಜನವರಿ 28ರಂದು ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತೂಕ ಕಡಿಮೆ ಇದ್ದ ಕಾರಣ ಅವರು ಮಗುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಪದ್ಮ ಮೋಹನ್ ಎಂಬವರು ಕೂಡ ಇಂದು ನಸುಕಿನ ಜಾವ 1.00 ಗಂಟೆಗೆ ಹೆಣ್ಣು ಮಗುವಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಜನನದ ಬಳಿಕ ಹೆಣ್ಣು ಮಗುವಿನ ಜನ್ಮ ದಾಖಲಾತಿ ಕೂಡ ನೀಡಿದ್ದು, ಆದರೆ ಆ ಮಗು ಪಾಶ್ರ್ವವಾಯುನಿಂದ ಬಳುತ್ತಿತ್ತು.

ಎಡವಟ್ಟು ಆಗಿದ್ದು ಎಲ್ಲಿ?
ಪದ್ಮ ಜಯಪ್ಪ ಹಾಗೂ ಪದ್ಮ ಮೋಹನ್ ಅವರ ಗಂಡು ಮತ್ತು ಹೆಣ್ಣು ಮಗುವನ್ನು ಮಕ್ಕಳನ್ನು ಎನ್‍ಐಸಿಯುನಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಎರಡು ಕಡೆಯೂ ಪದ್ಮ ಮಗು (Baby of Padma) ಎಂದು ಬರೆದುಕೊಂಡಿದ್ದರು. ಈ ಮಧ್ಯೆ ಇಂದು ನಸುಕಿನ ಜಾವ 3.50ರ ಸುಮಾರಿಗೆ ಪದ್ಮ ಜಯಪ್ಪ ಅವರ ಗಂಡು ಮಗು ಮೃತಪಟ್ಟಿದೆ.
ಆಸ್ಪತ್ರೆ ಸಿಬ್ಬಂದಿ ಪದ್ಮ ಜಯಪ್ಪ ಅವರ ಮಗುವನ್ನು ಪದ್ಮ ಮೋಹನ್ ಅವರಿಗೆ ನೀಡಿ ನಿಮ್ಮ ಮಗು ಮೃತಪಟ್ಟಿದೆ ಎಂದು ಶಿಶುವನ್ನು ಬಟ್ಟೆಯಿಂದ ಸುತ್ತಿ ನೀಡಿದ್ದಾರೆ. ಪದ್ಮ ಮೋಹನ್ ಹಾಗೂ ಅವರ ಕುಟುಂಬದವರು ತಮ್ಮದೇ ಮಗು ಎಂದು ತಿಳಿದು ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವಾಗ ಹೆಣ್ಣು ಮಗು ಬದಲಾಗಿ ಗಂಡು ಮಗುವನ್ನು ವೈದ್ಯರು ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪದ್ಮ ಮೋಹನ್ ಆಸ್ಪತ್ರೆಗೆ ತೆರಳಿ ಇದು ನಮ್ಮ ಮಗು ಅಲ್ಲ ಎಂದು ವೈದ್ಯರಿಗೆ ಹೇಳಿದ್ದಾರೆ. ಈ ವೇಳೆ ಪದ್ಮ ಜಯಪ್ಪ ಅವರಿಗೆ ತಮ್ಮ ಗಂಡು ಶಿಶು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಹೆಣ್ಣು ಮಗು ನಮ್ಮದು ಎಂದು ವೈದ್ಯರ ಬಳಿ ಗಲಾಟೆ ಮಾಡಿದ್ದಾರೆ. ಪದ್ಮ ಮೋಹನ್ ಅವರ ಹೆಣ್ಣು ಮಗು ಈಗ ಎನ್‍ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ.






















