Tag: doctors

  • ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ನೂರ್ ಸುಲ್ತಾನ್: ಮಹಿಳೆಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 11 ವಾರದಲ್ಲೇ ಮತ್ತೊಂದು ಶಿಶುವಿಗೆ ಜನ್ಮ ನೀಡಿದ ಘಟನೆ ಕಜಾಖಸ್ತಾನದಲ್ಲಿ ನಡೆದಿದೆ.

    ಲಿಲಿಯಾ ಕೋನೋವಾಲೋವಾ ಮೊದಲ ಮಗುವಿಗೆ ಜನ್ಮ ನೀಡಿದ 11 ವಾರದಲ್ಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದರೆ ಇಬ್ಬರು ಅವಳಿ ಮಕ್ಕಳು. ಲಿಲಿಯಾ ಆರೋಗ್ಯದ ಪರಿಸ್ಥಿತಿ ತಿಳಿದ ವೈದ್ಯರು ಡೆಲಿವರಿಗೆ ಮೊದಲೇ ಎಲ್ಲಾ ತಯಾರಿ ನಡೆಸಿದ್ದರು. ಈಗಾಗಲೇ ಲಿಲಿಯಾ ಅವರಿಗೆ 7 ವರ್ಷದ ಮಗಳಿದ್ದಾಳೆ. ಲಿಲಿಯಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ, ಅವರಿಗೆ ಎರಡು ಗರ್ಭಕೋಶ ಇರುವುದಾಗಿ ವೈದ್ಯರು ಹೇಳಿದ್ದರು.

    ಎರಡನೇ ಬಾರಿಗೆ ಲಿಲಿಯಾ ಗರ್ಭಿಣಿಯಾಗಿದ್ದಾಗ, ಅವಳಿ ಮಕ್ಕಳಿಗೆ ಜನ್ಮ ನೀಡುವುದಾಗಿ ವೈದ್ಯರು ತಿಳಿಸಿದ್ದರು. ಇಬ್ಬರು ಮಕ್ಕಳು ಲಿಲಿಯಾಳ ಬೇರೆ ಬೇರೆ ಗರ್ಭದಲ್ಲಿ ಬೆಳೆಯುತ್ತಿತ್ತು. ಮೇ 24ರಂದು ಲಿಲಿಯಾ 6 ತಿಂಗಳ ಗರ್ಭಿಣಿಯಾಗಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗ ಮಗುವಿನ ತೂಕ ಕೇವಲ 850 ಗ್ರಾಂ ಇತ್ತು. ಲಿಲಿಯಾ ಅವರ ಮತ್ತೊಂದು ಗರ್ಭದಲ್ಲಿ ಬೆಳೆಯುತ್ತಿದ್ದ ಮಗು 9 ತಿಂಗಳು ನಂತರ ಜನಿಸಿದೆ. ಇಬ್ಬರು ಮಕ್ಕಳು ಈಗ ಆರೋಗ್ಯದಿಂದ ಇದ್ದಾರೆ.

    ವೈದ್ಯರು ನನ್ನ ಆರೋಗ್ಯದ ಸ್ಥಿತಿ ಬಗ್ಗೆ ಹೇಳಿದ್ದಾಗ ನಾನು ಆತಂಕಗೊಂಡಿದೆ. 9 ತಿಂಗಳು ಆಗುವ ಮೊದಲೇ ಮಗಳು ಜನಿಸಿದರಿಂದ ನಾನು ಚಿಂತೆಗೊಳಗಾಗಿದೆ. ಆದರೆ ವೈದ್ಯರು ದೊಡ್ಡವರು. ಅವರು ನನ್ನ ಮಗುವನ್ನು ಉಳಿಸಿದರು. ಅಗಸ್ಟ್ 9ರಂದು ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ನಾನು ಈಗ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತೇನೆ ಎಂದು ಲಿಲಿಯಾ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಬೇರೆ ಬೇರೆ ಸಮಯದಲ್ಲಿ ಅವಳಿ ಮಕ್ಕಳು ಜನಿಸಿರುವುದು ಇದು ಕಜಾಖಸ್ತಾನದ ಇತಿಹಾಸದಲ್ಲೇ ಮೊದಲ ಬಾರಿ ಆಗಿದೆ. ಅವಳಿ ಮಕ್ಕಳು ಇಬ್ಬರು ಅಣ್ಣ-ತಂಗಿಯಾಗಿದ್ದು, ಇಬ್ಬರ ನಡುವೆ 11 ವಾರ ಅಂತರವಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ಅನಿತಾ ಕುಮಾರಸ್ವಾಮಿಯವರ ಕ್ಷೇತ್ರದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ- ಗ್ರಾಮಸ್ಥರ ಪರದಾಟ

    ಅನಿತಾ ಕುಮಾರಸ್ವಾಮಿಯವರ ಕ್ಷೇತ್ರದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ- ಗ್ರಾಮಸ್ಥರ ಪರದಾಟ

    – ಕಟ್ಟಡ ನಿರ್ಮಾಣವಾಗಿ 2 ವರ್ಷವಾದರೂ ವೈದ್ಯರಿಲ್ಲ

    ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲೇ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಚಿಕಿತ್ಸೆ ಸಿಗದಂತಾಗಿದ್ದು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಮನಗರ ತಾಲೂಕಿನ ಅಕ್ಕೂರು ಗ್ರಾಮದಲ್ಲಿನ ಆರೋಗ್ಯ ಕೇಂದ್ರ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಹಾಳು ಕೊಂಪೆಯಾಗಿದೆ ಎಂದು ಗ್ರಾಮಸ್ಥರು ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಈವರೆಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಈ ಆಸ್ಪತ್ರೆಗೆ ವೈದ್ಯರು ಯಾರೂ ಬರುತ್ತಿಲ್ಲ, ಸಿಬ್ಬಂದಿ ಕೂಡ ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ಸುತ್ತಮುತ್ತಲಿನ 4-5 ಗ್ರಾಮಗಳ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಆರೋಗ್ಯ ಕೇಂದ್ರವನ್ನು ತೆರೆಯಲಾಗಿತ್ತು. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಆರೋಗ್ಯ ಕೇಂದ್ರ ಇದ್ದರೂ ಇಲ್ಲದಂತಾಗಿದೆ. ರೋಗಿಗಳಿಗೆ ನೀಡುವ ಮಾತ್ರೆಗಳು ಕೂಡ ಅವಧಿ ಮುಗಿದು ಹೋಗಿದ್ದು, ಅಂತಹ ಮಾತ್ರೆಗಳನ್ನೆ ಇಟ್ಟುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ವೈದ್ಯಾಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ತಾಲೂಕು ಅಧಿಕಾರಿಗಳ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಲಕ್ಷಾಂತರ ರೂ. ವೆಚ್ಚ ಮಾಡಿ ಆಸ್ಪತ್ರೆ ಕಟ್ಟಡ ಕಟ್ಟಿದರೂ ಸಹ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಹಾಳು ಬಿದ್ದಿದೆ. ಈ ಕುರಿತು ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರವಾಗಿದೆ.

  • ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೆ ಕೆಲವರಿಗೆ ಗೌರವ ಕಡಿಮೆ: ರಮೇಶ್ ಕುಮಾರ್

    ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೆ ಕೆಲವರಿಗೆ ಗೌರವ ಕಡಿಮೆ: ರಮೇಶ್ ಕುಮಾರ್

    ಕೋಲಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಕೆಲವರಿಗೆ ಗೌರವ ಕಡಿಮೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಅಲ್ಲೆ ಸತ್ತರೂ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ವಿ ಅಂತಾರೆ ಎಂದು ಶಾಸಕ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ವೈದ್ಯರು ಕಾಪಿ ಹೊಡೆದು ಪರೀಕ್ಷೆ ಬರೆದು ಬಂದು ಚಿಕಿತ್ಸೆ ಕೊಡುತ್ತಿಲ್ಲ. ಅವರೆಲ್ಲಾ ಮೆಡೆಲ್ ತೆಗೆದುಕೊಂಡ ಉತ್ತಮ ವೈದ್ಯರು. ನಮ್ಮ ಜನರಲ್ಲಿ ಸರ್ಕಾರಿ ಆಸ್ಪತ್ರೆಗಳೆಂದರೆ ತಾತ್ಸಾರ ಮನೋಭಾವನೆ ಮೂಡಿದೆ ಇದನ್ನು ಮೊದಲು ಹೋಗಲಾಡಿಸಬೇಕಿದೆ ಎಂದರು.

    ಸರ್ಕಾರಿ ಆಸ್ಪತ್ರೆಗಳ ಕುರಿತು ಜನರಿಗೆ ಮಾನಸಿಕವಾಗಿ ಬಂದಿರುವ ಕಾಯಿಲೆಯನ್ನು ವಾಸಿ ಮಾಡಲು ಸಾಧ್ಯವಿಲ್ಲ. ಜನ ಜಾಗೃತರಾಗದಿದ್ದಲ್ಲಿ ನಾವೇನು ಮಾಡಲು ಸಾಧ್ಯವಿಲ್ಲ. ನಾನೇನು ಅರೋಗ್ಯ ಸಚಿವನಾ, ಎಲ್ಲವನ್ನೂ ಸರಿ ಮಾಡಕ್ಕಾಗುತ್ತಾ? ಎಲ್ಲಾ ಸರಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರಿ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವ ಜನರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

    ಫೋನ್ ಟ್ಯಾಪಿಂಗ್ ಕುರಿತು ಪ್ರತಿಕ್ರಿಯಿಸಲ್ಲ:
    ಸಭಾದ್ಯಕ್ಷ ಸ್ಥಾನ ದೊಡ್ಡದು, ನಾವು ಸಣ್ಣವರು, ಅಂತಹ ಸ್ಥಾನಕ್ಕೆ ಹೋಗಿ ಕುಳಿತುಕೊಂಡು ಬಂದ ಮೇಲೆ ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಜನ ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಗೌರವಯುತವಾಗಿ ನಡೆದುಕೊಳ್ಳಬೇಕು, ಜನರು ನಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಾವು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹೀಗಾಗಿ ಫೋನ್ ಕದ್ದಾಲಿಕೆ ಕುರಿತು ಪ್ರತಿಕ್ರಿಯಿಸಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

  • ಡೆಂಗ್ಯೂ ಮಹಾಮಾರಿಗೆ ರಾಮನಗರ ಜನತೆ ತತ್ತರ – ಎರಡು ಜೀವ ಬಲಿ

    ಡೆಂಗ್ಯೂ ಮಹಾಮಾರಿಗೆ ರಾಮನಗರ ಜನತೆ ತತ್ತರ – ಎರಡು ಜೀವ ಬಲಿ

    ರಾಮನಗರ: ಜಿಲ್ಲೆಯ ಜನ ಡೆಂಗ್ಯೂ ಮಹಾಮಾರಿಗೆ ಬೆಚ್ಚಿ ಬೀಳುವಂತಾಗಿದ್ದು, ದಿನೇ ದಿನೇ ಡೆಂಗ್ಯೂ ಶಂಕಿತ ಪ್ರಕರಣಗಳು ಹಾಗೂ ಡೆಂಗ್ಯೂ ಜ್ವರಕ್ಕೆ ಒಳಗಾದವರ ಸಂಖ್ಯೆ ಹೆಚ್ಚಾಗುತ್ತಿದೆ.

    ಈಗಾಗಲೇ ಸದ್ದಿಲ್ಲದೆ ಎರಡು ಜೀವಗಳು ಡೆಂಗ್ಯೂ ಮಹಾಮಾರಿಗೆ ಬಲಿಯಾಗಿವೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಜನವರಿಯಿಂದ ಕಳೆದ ಜುಲೈ ತಿಂಗಳ ಅಂತ್ಯದವರೆಗೆ 210 ಶಂಕಿತ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ.

    ರಾಮನಗರ ತಾಲೂಕಿನಲ್ಲೇ 173 ಶಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದು, ಚನ್ನಪಟ್ಟಣ ತಾಲೂಕಿನಲ್ಲಿ 24, ಕನಕಪುರ ತಾಲೂಕಿನಲ್ಲಿ 2 ಹಾಗೂ ಮಾಗಡಿ ತಾಲೂಕಿನಲ್ಲಿ 11 ಶಂಕಿತ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ 10 ಡೆಂಗ್ಯೂ ಪ್ರಕರಣಗಳು ರಕ್ತ ಪರೀಕ್ಷೆಯಿಂದ ದೃಢಪಟ್ಟಿವೆ. ರಾಮನಗರ ತಾಲೂಕಿನ ಪಾದರಹಳ್ಳಿಯಲ್ಲಿ ಓರ್ವ ಬಾಲಕಿ ಹಾಗೂ ವಡೇರಹಳ್ಳಿಯಲ್ಲಿ ಮಗುವೊಂದು ಡೆಂಗ್ಯೂನಿಂದ ಮೃತಪಟ್ಟಿದ್ದು, ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

    ಇತ್ತೀಚೆಗೆ ಮಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿದ್ದವು, ಇದೀಗ ರಾಮನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯಾದ್ಯಂತ ಮಹಾಮಾರಿ ಆವರಿಸುವ ಭೀತಿ ಎದುರಾಗಿದೆ.

    ಡೆಂಗ್ಯೂ ಜ್ವರದ ಲಕ್ಷಣಗಳು:
    * ಅಧಿಕ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತವೆ.
    * ಮಾಂಸಖಂಡಗಳಲ್ಲಿ, ಕೈ, ಕಾಲುಗಳ ಕೀಲುಗಳಲ್ಲಿ ನೋವು ಉಂಟಾಗುತ್ತದೆ.
    * ಕಣ್ಣಿನಲ್ಲಿ ಹೇಳಲಾಗದ ನೋವು, ಉರಿಯಾಗುತ್ತದೆ.
    * ಕೆಮ್ಮು, ಗಂಟಲು ಕೆರೆತ ಬರುತ್ತದೆ.
    * ಕೆಲವರಿಗೆ ವಾಂತಿ, ತಲೆ ಸುತ್ತು ಕಾಣಿಸಿಕೊಳ್ಳುತ್ತವೆ.

    ಡೆಂಗ್ಯೂ ಜ್ವರಕ್ಕೆ ಮನೆ ಮದ್ದು: ಈ ಜ್ವರ ಇರುವ ಬಗ್ಗೆ ಗೊತ್ತಾದ ಮೇಲೆ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿ ಪಡೆದು ವಿಶ್ರಾಂತಿಗೆ ಸೂಚಿಸಲಾಗುತ್ತದೆ. ಜೊತೆಗೆ ಸಾಕಷ್ಟು ನೀರು ಮತ್ತು ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ, ಸಿಟ್ರಸ್ ಅಂಶ ಇರುವ, ನೀರಿನಾಂಶ ಜಾಸ್ತಿ ಇರುವ ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಆದರೆ ಎಣ್ಣೆ, ಮಸಾಲೆಯುಕ್ತ ಆಹಾರವನ್ನು ವರ್ಜಿಸಿದರೆ ಉತ್ತಮ.

    ಯಾವ ಆಹಾರಗಳನ್ನು ಸೇವಿಸಬೇಕು:
    * ಕಿತ್ತಳೆ ಹಣ್ಣು ಸೇವನೆಯಿಂದ ಡೆಂಗ್ಯೂ ಬೇಗ ಗುಣವಾಗುತ್ತದೆ. ವಿವಿಧ ವಿಟಮಿನ್ ಮತ್ತು ಖನಿಜಾಂಶ ಭರಿತ ಪೌಷ್ಟಿಕ ಹಣ್ಣು, ಅಧಿಕ ನಾರಿನಂಶ, ವಿಟಮಿನ್ ಸಿ ಇರುವ ಮೂಸಂಬಿ, ನಿಂಬೆ ರಸ, ಅನಾನಸ್, ಕಿವಿ ಫ್ರೂಟ್, ದ್ರಾಕ್ಷಿ, ಚಕ್ಕೋತ ಹಣ್ಣುಗಳ ರಸ, ಹಣ್ಣು ಸೇವನೆಯಿಂದ ಅವಶ್ಯ ಪೋಷಕಾಂಶ ದೊರೆಯುತ್ತದೆ.
    * ಎಳನೀರು ಸೇವನೆಯಿಂದ ದೇಹದಲ್ಲಿ ಡೆಂಗ್ಯೂನಿಂದ ಕಡಿಮೆ ಆಗಿದ್ದ ನೀರಿನಾಂಶ ಹೆಚ್ಚಳವಾಗುತ್ತದೆ. ದಿನಕ್ಕೆ 2-3 ಎಳನೀರು ಕುಡಿಯಿರಿ.
    * ದಾಳಿಂಬೆ ಹಣ್ಣಿನ ಬೀಜಗಳು ಕಬ್ಬಿಣಾಂಶದ ಪ್ರಮುಖ ಮೂಲವಾಗಿವೆ. ದಾಳಿಂಬೆ ರಸ, ಹಣ್ಣು ಸೇವನೆಯಿಂದ ರಕ್ತಕಣಗಳನ್ನು ನಿಯಂತ್ರಣದಲ್ಲಿಡಬಹುದು. ಆಯಾಸವನ್ನೂ ಕಡಿಮೆಗೊಳಿಸುತ್ತದೆ.
    * ಡೆಂಗ್ಯೂದಿಂದ ಬಳಲುತ್ತಿರುವವರಿಗೆ ಪಪ್ಪಾಯ ಎಲೆ ಮತ್ತು ಬೀಜಗಳ ರಸವೂ ಅತ್ಯುತ್ತಮ ಔಷಧಿ. ಪಪ್ಪಾಯ ಎಲೆಯ ರಸ, ಪಪ್ಪಾಯ ಹಣ್ಣಿನ ಜ್ಯೂಸ್ ಸೇವನೆ ಉತ್ತಮ.
    * ಮೊಳಕೆ ಕಾಳುಗಳ ಸೇವನೆ ಉತ್ತಮ.
    * ಗಂಟೆಗೊಂದು ಲೋಟ ನೀರು ಕುಡಿಯುವುದು.
    * ಡೆಂಗ್ಯೂ ಜ್ವರ ಕಡಿಮೆ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.
    * ತರಕಾರಿ ಜ್ಯೂಸ್, ಸೂಪ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

    ಮುಂಜಾಗ್ರತಾ ಕ್ರಮಗಳೇನು?:
    * ಡೆಂಗ್ಯೂ ಹರಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ನೀವು ಎಚ್ಚರಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಬೇಕು.
    * ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು.
    * ಮನೆಯ ಸುತ್ತಮುತ್ತ ನಿಂತಿರುವ ನೀರಿನ ನೆಲೆಗಳನ್ನು ನಾಶ ಪಡಿಸಬೇಕು.
    * ತೆಂಗಿನ ಚಿಪ್ಪು, ಟಯರ್ಗಳು, ಚಿಕ್ಕ ಗುಂಡಿಗಳು, ಬೇಡ ಎಂದು ಬಿಸಾಡಿದ ಪ್ಲಾಸ್ಟಿಕ್ ಬಕೆಟ್, ಜಗ್ ಇತ್ಯಾದಿಗಳ ಸಂಗ್ರಹ ಬೇಡ.
    * ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಸಿಂಪಡಿಸಿ.
    * ಮಕ್ಕಳಿಗೆ ಉದ್ದ ತೋಳಿನ ಬಟ್ಟೆ, ಸಾಕ್ಸ್ ಹಾಕಿರಿ.
    * ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿರಿ.

    ಒಟ್ಟಿನಲ್ಲಿ ಡೆಂಗ್ಯೂ ಜ್ವರ ಬಂತೆಂದರೆ ಭಯ ಪಡುವುದು ಬೇಡ. ದಿನ ನಿತ್ಯದ ಆಹಾರ ಕ್ರಮ, ನಾಲಿಗೆ ರುಚಿಯನ್ನು ನಿಯಂತ್ರಣದಲ್ಲಿಡುವುದರಿಂದ ಡೆಂಗ್ಯೂವನ್ನು ಹೊಡೆದೋಡಿಸಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಭೇಟಿ ಮಾಡಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ಮನೆ ಮದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಸಲಹೆಗಳನ್ನೂ ಪಾಲಿಸಿದರೆ ನೀವು ಡೆಂಗ್ಯೂ ಜ್ವರದಿಂದ ಪಾರಾಗಬಹುದು.

  • ಬುಧವಾರ ವೈದ್ಯರ ಮುಷ್ಕರ – ಖಾಸಗಿ ಆಸ್ಪತ್ರೆ ಓಪಿಡಿ ಬಂದ್ ಸಾಧ್ಯತೆ

    ಬುಧವಾರ ವೈದ್ಯರ ಮುಷ್ಕರ – ಖಾಸಗಿ ಆಸ್ಪತ್ರೆ ಓಪಿಡಿ ಬಂದ್ ಸಾಧ್ಯತೆ

    ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ) ವಿಧೇಯಕವನ್ನು ವಿರೋಧಿಸಿ ಬುಧವಾರ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

    ಕೇಂದ್ರ ಸರ್ಕಾರದ ಎನ್‍ಎಂಸಿ ಬಿಲ್ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಷಿಯೇಷನ್(ಐಎಂಎ) ದೇಶಾದ್ಯಂತ ವೈದ್ಯರ ಮುಷ್ಕರಕ್ಕೆ ಕರೆ ನಿಡಿದ್ದು, ಸುಮಾರು 24 ಗಂಟೆಗಳ ಕಾಲ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.

    ನಾಳೆಯಿಂದ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯರ ಮುಷ್ಕರ ನಡೆಯಲಿದ್ದು, ಬಹುತೇಕ ಖಾಸಗಿ ಆಸ್ಪತ್ರೆಯ ಒಪಿಡಿ ಸಾರ್ವಜನಿಕ ಸೇವೆಗೆ ಲಭ್ಯವಾಗುವುದಿಲ್ಲ. ಬುಧವಾರ ಬೆಳಗ್ಗೆ ಆರು ಗಂಟೆಯಿಂದ ಗುರುವಾರ ಬೆಳಗ್ಗೆ ಆರು ಗಂಟೆಯವರೆಗೆ ಮುಷ್ಕರ ನಡೆಯಲಿದ್ದು, ವೈದ್ಯರ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

    ಬಂದ್ ಹೇಗಿರಲಿದೆ?
    ರಾಜ್ಯದ್ಯಾಂತ ಸುಮಾರು 4500 ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ 6 ಗಂಟೆಯಿಂದ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ಬಹುತೇಕ ಬಂದ್ ಇರಲಿದ್ದು, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳು ಸೇರಿ ಒಟ್ಟು 600 ಆಸ್ಪತ್ರೆಗಳ ಓಪಿಡಿ ಬಂದ್ ಆಗಲಿದೆ. ಮುಷ್ಕರದಿಂದ ಹೌಸ್ ಸರ್ಜನ್ಸ್, ಮಡಿಕಲ್ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ತೊಂದರೆಯಾಗಲಿದೆ.

  • ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ಮಂಗಳೂರು: ತೀವ್ರ ಜ್ವರ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೇರಳ ಮೂಲದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಸಿಧ್ರಾತುಲ್ ಮುನ್ತಾಹ (8) ಮತ್ತು ಸೋದರಿ 6 ತಿಂಗಳ ಮಗು ಶಿನಾಜ್ ಮೃತ ಕಂದಮ್ಮಗಳು. ಇವರು ಸಿದ್ದಿಕ್ ಮತ್ತು ನಿಶಾ ದಂಪತಿಯ ಮಕ್ಕಳಾಗಿದ್ದು, ಕಾಸರಗೋಡು ಜಿಲ್ಲೆಯ ಬದಿಯಡ್ಕ ಕನ್ಯಾಪಡಿಯ ನಿವಾಸಿಗಳಾಗಿದ್ದಾರೆ.

    ಇಬ್ಬರು ಮಕ್ಕಳು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ ಮುನ್ತಾಹ ಮಂಗಳವಾರ ಮೃತಪಟ್ಟಿದ್ದಾನೆ. ಶಿನಾಜ್ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ.

    ಮಕ್ಕಳ ತಾಯಿ ನಿಶಾ ಕೂಡ ಈಗ ಅದೇ ಆಸ್ಪತ್ರೆಯಲ್ಲಿ ಜ್ವರದಿಂದ ದಾಖಲಾಗಿದ್ದಾರೆ ಎಂದು ಕುಟುಂಬ ತಿಳಿಸಿದೆ. ಈ ಪ್ರಕರಣಗಳ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ರಸ್ತೆಯಲ್ಲಿರುವ ತಮ್ಮ ತಾಯಿಯ ಮನೆಯಲ್ಲಿದ್ದಾಗ ಮಕ್ಕಳು ಸೋಂಕಿಗೆ ಒಳಗಾಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಜ್ವರಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ವೈದ್ಯಕೀಯ ಅಧಿಕಾರಿ ನೇತೃತ್ವದ ವೈದ್ಯರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಹೇಳಿದರು.

  • ಮಹಿಳೆಯ ಹೊಟ್ಟೆಯಲ್ಲಿ 1.5 ಕೆ.ಜಿ.ಆಭರಣ, 90 ನಾಣ್ಯಗಳು ಪತ್ತೆ

    ಮಹಿಳೆಯ ಹೊಟ್ಟೆಯಲ್ಲಿ 1.5 ಕೆ.ಜಿ.ಆಭರಣ, 90 ನಾಣ್ಯಗಳು ಪತ್ತೆ

    ಕೊಲ್ಕತ್ತಾ: ಮಹಿಳೆಯ ಹೊಟ್ಟೆಯಿಂದ ಸುಮಾರು 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಹೊರ ತೆಗೆದಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ನಡೆದಿದೆ.

    ಮಾನಸಿಕ ಅಸ್ವಸ್ಥ ಮಹಿಳೆಯ ಹೊಟ್ಟೆಯಿಂದ 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರು ಹೊರ ತೆಗೆದಿದ್ದಾರೆ. 5 ಹಾಗೂ 10 ರೂ.ಗಳ ನಾಣ್ಯಗಳು, ಸರ, ಕಿವಿಯ ಓಲೆಗಳು, ಬಳೆ, ಕಡಗ, ಬ್ರಾಸ್ಲೆಟ್ಸ್ ಹಾಗೂ ವಾಚ್ ಸೇರಿದಂತೆ ವಿವಿಧ ಆಭರಣಗಳನ್ನು 26 ವರ್ಷದ ಮಹಿಳೆಯ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ ಎಂದು ರಾಂಪುರಾತ್‍ನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬಿಸ್ವಾಸ್ ತಿಳಿಸಿದ್ದಾರೆ.

    ಕೆಲವು ಬಂಗಾರದ ಆಭರಣಗಳೂ ಸೇರಿದಂತೆ ತಾಮ್ರ ಹಾಗೂ ಹಿತ್ತಾಳೆಯ ಆಭರಣಗಳು ಮಹಿಳೆಯ ಹೊಟ್ಟೆಯಲ್ಲಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.

    ಮನೆಯಲ್ಲಿನ ಆಭರಣಗಳು ಕಾಣೆಯಾಗುತ್ತಿದ್ದನ್ನು ಗಮನಿಸಿದ್ದೆ. ಇವಳೇ ತೆಗೆದುಕೊಂಡು ಹೋಗಿರಬಹುದು ಎಂದು ಪ್ರಶ್ನಿಸಿದಾಗ ಅಳಲು ಪ್ರಾರಂಭಿಸುತ್ತಿದ್ದಳು. ಹೀಗಾಗಿ ನಾವು ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಮಗಳು ಮಾನಸಿಕವಾಗಿ ಅಸ್ವಸ್ಥೆಯಾಗಿದ್ದು, ಕೆಲವು ದಿನಗಳಿಂದ ಊಟವಾದ ನಂತರ ತಟ್ಟೆಯನ್ನು ಜೋರಾಗಿ ಎಸೆಯುತ್ತಿದ್ದಾಳೆ ಎಂದು ಮಾನಸಿಕ ಅಸ್ವಸ್ಥ ಯುವತಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.

    ನಾಣ್ಯಗಳನ್ನು ತನ್ನ ಸಹೋದರ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದಳು. ನಾವು ಅವಳ ಮೇಲೆ ನಿಗಾ ವಹಿಸುತ್ತಿದ್ದರೂ, ಕಣ್ಣು ತಪ್ಪಿಸಿ ಇಷ್ಟೊಂದು ನಾಣ್ಯ ಹಾಗೂ ಆಭರಣಗಳನ್ನು ನುಂಗಿದ್ದಾಳೆ. ಖಾಯಿಲೆ ಕುರಿತು ವಿವಿಧ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯರು ನೀಡಿದ ಔಷಧಗಳನ್ನು ಕೊಡುತ್ತಿದ್ದೇವೆ. ಆದರೂ ಸಹ ಈ ವೆರೆಗೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಅನುಮತಿ ಪಡೆಯದೇ ಉಚಿತ ಕಣ್ಣಿನ ತಪಾಸಣೆ – ಹಾಸನದ ಆಸ್ಪತ್ರೆಯ ಬಾಗಿಲು ಬಂದ್

    ಅನುಮತಿ ಪಡೆಯದೇ ಉಚಿತ ಕಣ್ಣಿನ ತಪಾಸಣೆ – ಹಾಸನದ ಆಸ್ಪತ್ರೆಯ ಬಾಗಿಲು ಬಂದ್

    ಹಾಸನ: ಸರ್ಕಾರಿ ಯೋಜನೆಯ ಅನ್ವಯ ವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ನಗರ ಖಾಸಗಿ ಆಸ್ಪತ್ರೆ ಅಮಾನುಷವಾಗಿ ನಡೆಸಿಕೊಂಡಿದೆ.

    ನಗರದ ಬಿಎಂ ರಸ್ತೆಯಲ್ಲಿ ಇರುವ ವರ್ಧಮಾನ್ ಜೈನ್ ಹೆಸರಿನ ಆಸ್ಪತ್ರೆ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯದ ನರ್ಸಿಂಗ್ ಹೋಂ ಈ ಅಚಾತುರ್ಯ ನಡೆಸಿ ಇದೀಗ ಸಿಕ್ಕಿಬಿದ್ದಿದೆ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯ ಕ್ಯಾಂಪ್ ನಡೆಸಿ ವಯೋವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆ ತರಲಾಗಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಯಾವುದೇ ಮಂಚ, ದಿಂಬು ಹೊದಿಕೆ ಇಲ್ಲದೆ ಅಮಾನುಷವಾಗಿ ನೋಡಿಕೊಳ್ಳಲಾಗಿದೆ.

    ಸಿಬ್ಬಂದಿ ನಡವಳಿಕೆಯಿಂದ ಅಸಮಧಾನಗೊಂಡ ರೋಗಿಯ ಕಡೆಯವರು ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬಂದು ವಿಚಾರಿಸಿದಾಗ ನರ್ಸಿಂಗ್ ಹೋಂ ಸ್ಥಳೀಯ ಆಡಳಿತದ ಅನುಮತಿ ಪಡೆಯದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

    ಮಂಡ್ಯ ಜಿಲ್ಲೆಯ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಹಾಸನದಲ್ಲಿ ಕ್ಯಾಂಪ್‍ಗಳನ್ನು ನಡೆಸಿ ಈ ರೀತಿ ಯಾವುದೇ ಸೌಕರ್ಯ ಇಲ್ಲದೆ ವಯೋವೃದ್ಧರ ಶಸ್ತ್ರ ಚಿಕಿತ್ಸೆ ನಡೆಸುತಿದ್ದ ನರ್ಸಿಂಗ್ ಹೋಂಗೆ ಬಾಗಿಲು ಮುಚ್ಚಿಸಲಾಗಿದೆ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಎಲ್ಲಾ ರೋಗಿಗಳನ್ನು ಸದ್ಯ ಅಂಬುಲೆನ್ಸ್ ಗಳ ಮೂಲಕ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಲ್ಲದೆ ನರ್ಸಿಂಗ್ ಹೋಂ ಮಾಲೀಕರಿಗೆ ಆರೋಗ್ಯ ಇಲಾಖೆಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.

  • ಮೊದಲ ಸಾಲಿನಲ್ಲಿ ಮಹಿಳೆಯರಿದ್ದ ಕಾರಣಕ್ಕೆ ಭಾಷಣ ತೊರೆದ ಸ್ವಾಮೀಜಿ

    ಮೊದಲ ಸಾಲಿನಲ್ಲಿ ಮಹಿಳೆಯರಿದ್ದ ಕಾರಣಕ್ಕೆ ಭಾಷಣ ತೊರೆದ ಸ್ವಾಮೀಜಿ

    ಜೈಪುರ: ಕಾರ್ಯಕ್ರಮವೊಂದರಲ್ಲಿ ಮೊದಲ ಸಾಲಿನಲ್ಲಿ ಮಹಿಳೆಯರು ಕುಳಿತಿದ್ದ ಕಾರಣಕ್ಕೆ ಪ್ರೇರಕ ಗುರು ಭಾಷಣ ಮಾಡದೇ ಸ್ಥಳದಿಂದ ಹೊರನಡೆದ ವಿಲಕ್ಷಣ ಘಟನೆ ನದೆದಿದೆ.

    ರಾಜ್ ಮೆಡಿಕಾನ್ 2019ರ ಕೊನೆಯ ದಿನವಾದ ಭಾನುವಾರದಂದು ದಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮತ್ತು ಆಲ್ ರಾಜಸ್ಥಾನ್ ಇನ್ ಸರ್ವಿಸ್ ಡಾಕ್ಟರ್ಸ್ ಅಸೋಸಿಯೇಶನ್ (ಎಆರ್‍ಐಎಸ್‍ಡಿಎ) ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಸ್ವಾಮಿ ಜ್ಞಾನವತ್ಸಲ್ಯ ಅವರನ್ನು ಆಹ್ವಾನಿಸಲಾಗಿತ್ತು.

    ಜೈಪುರದ ಬಿರ್ಲಾ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವೇಳೆ ಸ್ವಾಮಿ ಜ್ಞಾನವತ್ಸಲ್ಯ ಅವರು ಭಾಷಣ ಮಾಡಲು ಬಂದಾಗ, ಮೊದಲ ಮೂರು ಸಾಲಿನಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತಿದ್ದ ಕಾರಣಕ್ಕೆ ಭಾಷಣ ಮಾಡದೆ ಹಾಗೆಯೇ ಹೊರ ನಡೆದರು. ಪ್ರೇರಕ ಗುರುಗಳು ನಂತರ ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳುವಂತಿಲ್ಲ ಎಂದು ಘೋಷಿಸಲು ಸಂಘಟಕರನ್ನು ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.

    ಗುರುಗಳ ಈ ವರ್ತನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳಾ ವೈದ್ಯೆ ಡಾ.ರುತು ಚೌಧರಿ, ಕೆಲವು ಮಹಿಳಾ ವೈದ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮೊದಲ ಮೂರು ಸಾಲುಗಳಲ್ಲಿ ಬಹುತೇಕ ಮಹಿಳೆಯರು ಕುಳಿತು, ಸ್ವಾಮಿ ಜ್ಞಾನವತ್ಸಲ್ ಅವರ ಭಾಷಣ ಕೇಳಲು ಉತ್ಸಾಹದಿಂದ ಕಾಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮೊದಲ ಏಳು ಸಾಲುಗಳಲ್ಲಿ ಮಹಿಳೆಯರು ಕೂರಬಾರದು ಎಂದು ಘೋಷಿಸಲಾಯಿತು. ಬಳಿಕ ಕೆಲವು ಸಮಯದ ನಂತರ, ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳಬಾರದು ಎಂದು ಘೋಷಿಸಲಾಯಿತು.

    ಯಾಕೆಂದರೆ ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಗೆ ಕುಳಿತುಕೊಳ್ಳಲು ಅವಕಾಶ ನೀಡದಂತೆ ಸ್ವಾಮಿ ಜ್ಞಾನವತ್ಸಲ್ಯ ಸಂಘಟಕರನ್ನು ಕೇಳಿಕೊಂಡಿದ್ದರು ಎನ್ನಲಾಗಿದ್ದು, ಮಹಿಳಾ ವೈದ್ಯರು ಈ ಆಜ್ಞೆಯ ಹಿಂದಿನ ಕಾರಣವನ್ನು ಕೇಳಿದಾಗ, ಇದು ಸ್ವಾಮಿಜಿಯವರ ಪ್ರೋಟೋಕಾಲ್ ಎಂದು ಅವರಿಗೆ ತಿಳಿಸಲಾಗಿದೆ.

    ಗುರುಗಳ ಈ ಷರತ್ತಿನ ಬಗ್ಗೆ ಮಹಿಳಾ ವೈದ್ಯರು ತಿಳಿದಾಗ, ಈ ನಡೆಯನ್ನು ವಿರೋಧಿಸಲು ಪ್ರಾರಂಭಿಸಿದರು. ಅಲ್ಲದೆ ಕೆಲವು ವೈದ್ಯರು ಸೇರಿಕೊಂಡು ಸ್ವಾಮಿ ಜ್ಞಾನವತ್ಸಲ್ಯ ಅವರ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದರು. ಈ ವೇಳೆ ವೈದ್ಯರು ಮತ್ತು ಸಂಘಟಕರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಸಂಘಟಕರು ಮೊದಲ ಎರಡು ಸಾಲುಗಳನ್ನು ಖಾಲಿ ಬಿಡುವಂತೆ ನಿರ್ಧರಿಸಿದರು. ಆ ನಂತರ ಕಾರ್ಯಕ್ರಮ ನಡೆಸಲಾಯಿತು ಎನ್ನಲಾಗಿದೆ.

  • ಮಗುವಿಗೆ ಚಿಕಿತ್ಸೆ ಕೊಡದ ವೈದ್ಯರು – ಮೊಬೈಲಿನಲ್ಲಿ ಶೂಟ್ ಮಾಡೋ ವೇಳೆ ಲೈಟ್ ಆಫ್

    ಮಗುವಿಗೆ ಚಿಕಿತ್ಸೆ ಕೊಡದ ವೈದ್ಯರು – ಮೊಬೈಲಿನಲ್ಲಿ ಶೂಟ್ ಮಾಡೋ ವೇಳೆ ಲೈಟ್ ಆಫ್

    ಮೈಸೂರು: ಚಿಕಿತ್ಸೆಗಾಗಿ ಬಂದಿದ್ದ ಮಗುವಿಗೆ ಚಿಕಿತ್ಸೆ ನೀಡದ ವೈದ್ಯರನ್ನು ಮಗುವಿನ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದೆ.

    ಭಾನುವಾರದಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವನ್ನು ತಾಯಿ ಆಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಈ ವೇಳೆ ವೈದ್ಯರು ಚಿಕಿತ್ಸೆ ಕೊಡಲು ನಿರಾಕರಿಸಿದ್ದಾರೆ. ಸತತ 2 ಗಂಟೆಗಳ ಕಾಲ ರೋಗಿಗೆ ಚಿಕಿತ್ಸೆ ನೀಡದೇ ಕೆ.ಆರ್.ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯಿಸಿದ್ದಾರೆ. ಅಲ್ಲದೆ ವೈದ್ಯರು ಚಿಕಿತ್ಸೆ ನೀಡಲು ಆಗಲ್ಲ ಎನ್ನುತ್ತಿರುವುದನ್ನ ಮಗುವಿನ ಸಂಬಂಧಿಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ವಿಡಿಯೋದಲ್ಲಿ ಮಗುವನ್ನು ತಾಯಿ ಎತ್ತುಕೊಂಡು ಚಿಕಿತ್ಸೆ ಕೊಡದ ವೈದ್ಯರ ನಡೆಯಿಂದ ಕಂಗಾಲಾಗಿ ನಿಂತಿರುವುದು ಕೂಡ ಸೆರೆಯಾಗಿದೆ. ಜೊತೆಗೆ ವೈದ್ಯರು, ನಾವು ಚಿಕಿತ್ಸೆ ನೀಡಲ್ಲ, ಹೊರಗಡೆ ಹೋಗಿ ಎಂದಿದ್ದಾರೆ. ಆಗ ಯಾಕೆ ನಾವು ಹೋಗಬೇಕು? ಚಿಕಿತ್ಸೆ ನೀಡಲು ಆಗಲ್ಲ ಎಂದು ಬರೆದು ಕೊಡಿ ಎಂದು ಮಗುವಿನ ಸಂಬಂಧಿಕರು ವೈದ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಯನ್ನು ಕರೆಸಿ ಅವರನ್ನು ಹೊರಗೆ ಕಳಿಹಿಸುವಂತೆ ವೈದ್ಯರು ಹೇಳಿದ್ದಾರೆ.

    ವಿಡಿಯೋ ಸೆರೆಹಿಡಿಯುವ ವೇಳೆ ಕ್ಯಾಮೆರಾ ಕಿತ್ತುಕೊಳ್ಳಲು ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಮುಂದಾಗಿದ್ದಾರೆ. ಇದ್ಯಾವುದ್ದಕ್ಕೂ ರೋಗಿಯ ಸಂಬಂಧಿಕರು ಕೇಳದ ಹಿನ್ನೆಲೆಯಲ್ಲಿ ಕೊಠಡಿಯ ಲೈಟ್ ಆಫ್ ಮಾಡಿ ಏನಾದರೂ ಮಾಡಿಕೊಳ್ಳಿ ಎಂದು ತಮ್ಮ ಪಾಡಿಗೆ ವೈದ್ಯರು ಹಾಗೂ ಸಿಬ್ಬಂದಿ ಹೋಗಿದ್ದಾರೆ. ಈ ಏಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಆರೋಗ್ಯ ಸಚಿವರೇ ಕೆ.ಆರ್.ಆಸ್ಪತ್ರೆಯತ್ತ ನೋಡಿ, ನಿರ್ಲಕ್ಷ್ಯ ತೋರುವ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮಗುವಿನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.