Tag: doctors

  • ವೈದ್ಯರ ಪ್ರತಿಭಟನೆ- ಕರವೇ ಅಶ್ವಿನಿಗೌಡ ಸೇರಿ 15ಕ್ಕೂ ಹೆಚ್ಚು ಜನ ಶರಣಾಗಲು ನಿರ್ಧಾರ

    ವೈದ್ಯರ ಪ್ರತಿಭಟನೆ- ಕರವೇ ಅಶ್ವಿನಿಗೌಡ ಸೇರಿ 15ಕ್ಕೂ ಹೆಚ್ಚು ಜನ ಶರಣಾಗಲು ನಿರ್ಧಾರ

    ಬೆಂಗಳೂರು: ಕರವೇ ಅಶ್ವಿನಿ ಗೌಡ ಸೇರಿದಂತೆ 15 ಜನ ಕಾರ್ಯಕರ್ತರು ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ಡಿಸಿಪಿ ಕಚೇರಿಯಲ್ಲಿ ಶರಣಾಗಲಿದ್ದಾರೆ.

    ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ತಡರಾತ್ರಿ ಸಭೆ ನಡೆಸಿ ಪೊಲೀಸರಿಗೆ ಶರಣಾಗುವ ಬಗ್ಗೆ ತೀರ್ಮಾನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಾರಾಯಣಗೌಡ ಹಾಗೂ ಹಲ್ಲೆ ಆರೋಪಿ ಅಶ್ವಿನಿಗೌಡ, ವೈದ್ಯರಿಗೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ಜನರಿಗೆ ತೊಂದರೆಯಾಗಬಾರದೆಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕಳೆದ ಒಂದು ವಾರದಿಂದ ನಡೆಯುತ್ತಿರುವ ಸರ್ಕಾರಿ ಕಿರಿಯ ವೈದ್ಯರ ಪ್ರತಿಭಟನೆಗೆ ಐಎಂಎ ಕೈ ಜೋಡಿಸಿದೆ. ವೈದ್ಯರ ಮೇಲೆ ಹಲ್ಲೆ ಮಾಡಿರುವ ಕರವೇ ಕಾರ್ಯಕರ್ತರನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಯಲ್ಲಿ ವೈದ್ಯರು ಭಾಗಿಯಾಗಲಿದ್ದಾರೆ. ಸರ್ಕಾರಿ ಆಸ್ಪತ್ರೆಯ ಜೊತೆಗೆ ಇಂದು ರಾಜ್ಯದ ಖಾಸಗಿ ಆಸ್ಪತ್ರೆಯ ಹೊರ ರೋಗಿ ವಿಭಾಗವನ್ನ 24 ಗಂಟೆಗಳ ಸಂಪೂರ್ಣ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧರಾಗಿದ್ದಾರೆ.

    ಇಂದು ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6 ರವರೆಗೆ ಖಾಸಗಿ ಆಸ್ಪತ್ರೆಯ ಓಪಿಡಿ ಸೇರಿದಂತೆ ಬಹುತೇಕ ಕ್ಲಿನಿಕ್ ಗಳು ಸಹ ಬಂದ್ ಆಗಲಿದ್ದು, ರೋಗಿಗಳಿಗೆ ಚಿಕಿತ್ಸೆ ದೊರೆಯುವುದು ಅನುಮಾನವಾಗಿದೆ. ಇದರಿಂದ ರೋಗಿಗಳಿಗೆ ತೊಂದರೆ ಆಗಲಿದೆ.  ಇತ್ತ ಕರವೇ ಕಾರ್ಯಕರ್ತರು ಶರಣಾಗಲು ಒಪ್ಪಿಕೊಂಡಿದ್ದರಿಂದ ವೈದ್ಯರು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಪಾಕ್‍ನಲ್ಲಿ ಹಿಂದೂ ಯುವತಿ ಸಾವು – ಆತ್ಮಹತ್ಯೆ ಅಲ್ಲ ಇದು ರೇಪ್ ಆ್ಯಂಡ್ ಮರ್ಡರ್

    ಪಾಕ್‍ನಲ್ಲಿ ಹಿಂದೂ ಯುವತಿ ಸಾವು – ಆತ್ಮಹತ್ಯೆ ಅಲ್ಲ ಇದು ರೇಪ್ ಆ್ಯಂಡ್ ಮರ್ಡರ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

    ಸೆಪ್ಟೆಂಬರ್ 16 ರಂದು ಲಾರ್ಕಾನಾದ ಶಹೀದ್ ಮೊಹತರ್ಮಾ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದ (ಎಸ್‍ಎಂಬಿಬಿಎಂಯು) ಹಾಸ್ಟೆಲ್ ಕೋಣೆಯೊಂದರಲ್ಲಿ ಡೆಂಟಲ್ ಸರ್ಜರಿ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದ ನಮೃತ ಕುಮಾರಿಯ ಮೃತ ದೇಹವು ಸಿಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ನಮೃತ ಯಾಕೆ ಹೀಗೆ ಮಾಡಿಕೊಂಡಿದ್ದಳು ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ನಮೃತ ಸಹೋದರ ಮಾತ್ರ ನನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ದುರ್ಬಲವಾಗಿ ಇರಲಿಲ್ಲ. ಅಲ್ಲದೇ ಆಕೆ ಯಾವುದೇ ರೀತಿಯ ಖಿನ್ನತೆಯಿಂದ ಬಳಲುತ್ತಿರಲಿಲ್ಲ. ಆಕೆಯನ್ನು ಯಾರೋ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

    ನಮೃತ ಸಾವಿನ ಸುದ್ದಿ ಹೊರಬಂದ ಕೂಡಲೇ ಸಿಂಧ್ ಪ್ರಾಂತ್ಯದಲ್ಲಿ ಭಾರೀ ಪ್ರತಿಭಟನೆಯಾಗಿತ್ತು. ಪ್ರತಿಭಟನೆಕಾರರ ಹೋರಾಟಕ್ಕೆ ಮಣಿದ ಸಿಂಧ್ ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಸಿಂಧ್ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನಿರ್ದೇಶನದಂತೆ ಲರ್ಕಾನಾ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಕೊಲೆ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದರು.

    ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಮೃತ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಿದೆ. ನಮೃತ ಆತ್ಮಹತ್ಯೆಯನ್ನು ಮಾಡಿಕೊಂಡಿಲ್ಲ. ಆಕೆಯನ್ನು ಯಾರೋ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎನ್ನುವ ಅಂಶ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ಮಾಡಲು ನಮೃತ ಮೃತದೇಹವನ್ನು ಲರ್ಕಾನದಲ್ಲಿರುವ ಛಂಡ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನೀಡಲಾಗಿದ್ದು, ಅಲ್ಲಿನ ವೈದ್ಯರು ಬುಧವಾರದಂದು ವರದಿಯನ್ನು ಬಿಡುಗಡೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಛಂಡ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯೆ ಅಮೃತ, ನಮೃತ ಕುತ್ತಿಗೆ ಭಾಗ ಬಿಗಿದಿದ್ದ ಪರಿಣಾಮ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಯುವತಿಯ ಬಟ್ಟೆಯ ಮೇಲಿ ಇದ್ದ ವೀರ್ಯದ ಕಲೆಯ ಆಧಾರದ ಮೇಲೆ ಡಿಎನ್‍ಎ ಪರೀಕ್ಷೆ ಮಾಡಿದಾಗ ಅದು ಯಾವುದೋ ಪುರುಷನದ್ದು ಎಂದು ತಿಳಿದು ಬಂದಿದೆ. ಆಕೆಯ ಜನನಾಂಗವನ್ನು ಪರೀಕ್ಷೇ ಮಾಡಿದಾಗ ಯಾರೋ ಬಲವಂತಾಗಿ ಲೈಂಗಿಕ ಕ್ರಿಯೇ ನಡೆಸಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

  • ಗಮನಿಸಿ, ನಾಳೆ ರಾಜ್ಯಾದ್ಯಂತ ಆಸ್ಪತ್ರೆಗಳ ಒಪಿಡಿಗಳು ಬಂದ್

    ಗಮನಿಸಿ, ನಾಳೆ ರಾಜ್ಯಾದ್ಯಂತ ಆಸ್ಪತ್ರೆಗಳ ಒಪಿಡಿಗಳು ಬಂದ್

    ಬೆಂಗಳೂರು: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಕಿರಿಯ ವೈದ್ಯರು ಮಾಡುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆ ಅದೂ ತೀವ್ರ ಸ್ವರೂಪ ಪಡೆಯಲಿದೆ. ಹೀಗಾಗಿ ನಾಳೆ ರಾಜ್ಯಾದ್ಯಂತ ಹೊರ ರೋಗಿಗಳ ವಿಭಾಗ (ಒಪಿಡಿ) ಬಂದ್ ಆಗಲಿವೆ.

    ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಆಗ ಕರವೇ ಕಾರ್ಯಕರ್ತರು ವೈದ್ಯರ ವಾಗ್ವಾದ ಇಂಗ್ಲಿಷ್, ಕನ್ನಡ ಹೋರಾಟದ ರೂಪ ಪಡೆದಿತ್ತು. ಅಲ್ಲದೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಮಿಂಟೋ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರು.

    ಈಗ ಈ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದು, ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ವಿಚಾರವಾಗಿ ಬುಧವಾರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಂದು ಮನವಿ ಮಾಡಿದರು ವೈದ್ಯರು ಪ್ರತಿಭಟನೆಯಲ್ಲಿ ಕೈಬಿಟ್ಟಿಲ್ಲ. ಆಗಲೇ ಮಿಂಟೋ ಆಸ್ಪತ್ರೆ ವೈದ್ಯರು ಮಾಡುತ್ತಿದ್ದ ಪ್ರತಿಭಟನೆಗೆ ನಗರದ ವಿಕ್ಟೋರಿಯಾ, ವಾಣಿ ವಿಲಾಸ್, ಮಿಂಟೋ ಆಸ್ಪತ್ರೆ ಕಿರಿಯ ವೈದ್ಯರು ಮತ್ತು ವಿಧ್ಯಾರ್ಥಿಗಳು ಪ್ರತಿಭಟನೆಗೆ ಸಾಥ್ ನೀಡಿದ್ದು, ರಾಜ್ಯಾದ್ಯಂತ ಒಪಿಡಿ ಬಂದ್ ಮಾಡಲು ತೀರ್ಮಾನಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಐಎಂಎ ಕಾರ್ಯದರ್ಶಿ ಡಾ.ಶ್ರೀನಿವಾಸ್, ನಾಳೆ ಬೆಳಗ್ಗೆ 6 ರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಒಪಿಡಿಗಳು ಬಂದ್ ಆಗಲಿವೆ. ನಮ್ಮ ಬೇಡಿಕೆ ಈಡೇರಿಲ್ಲ. ಹಾಗಾಗಿ ನಾವೂ ಮೊನ್ನೆಯೆ ಹೇಳಿದಂತೆ ಶುಕ್ರವಾರದ ವರೆಗೆ ಸರ್ಕಾರಕ್ಕೆ ಸಮಯ ನೀಡುತ್ತೇವೆ. ಅಷ್ಟರಲ್ಲಿ ನಮ್ಮ ಬೇಡಿಕೆ ಈಡೇರಲಿಲ್ಲ ಅಂದರೆ ರಾಜ್ಯಾದ್ಯಂತ ಒಪಿಡಿ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.

    ನಾಳೆ ರಾಜ್ಯದಲ್ಲಿರುವ 23 ಸಾವಿರ ಖಾಸಗಿ ಆಸ್ಪತ್ರೆಗಳು ಹಾಗೂ ಬೆಂಗಳೂರಿನ 5 ಸಾವಿರಕ್ಕೂ ಹೆಚ್ಚು ಆಸ್ಪತ್ರೆ ಬಂದ್ ಆಗಲಿದ್ದು, ಈ ವಿಚಾರದಲ್ಲಿ ಯದ್ವಾತದ್ವಾ ಹೇಳಿಕೆ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಚಲಪತಿ, ಜನರಿಗೆ ಬುದ್ಧಿ ಕಲಿಸಲು ಒಪಿಡಿ ಸೇವೆ ಸ್ಥಗಿತ ಮಾಡುತ್ತಿದ್ದೇವೆ. ವೈದ್ಯರ ಮೇಲೆ ಹಲ್ಲೆ ಮಾಡಿದಾಗ ಜನ ಯಾಕೆ ಸುಮ್ಮನಿರುತ್ತಾರೆ? ವೈದ್ಯರ ಮೇಲೆ ಹಲ್ಲೆ ಮಾಡಿದಾಗ ಜನರು ಬೆಂಬಲಕ್ಕೆ ಬರಬೇಕು. ಜನರ ಬೆಂಬಲ ಇದ್ದರೆ ಈ ರೀತಿಯ ಹಲ್ಲೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

  • ಫೋನ್ ಮಾಡಿದ್ರು ಬಾರದ ಸರ್ಕಾರಿ ವೈದ್ಯರು- ನಿರ್ಲಕ್ಷ್ಯಕ್ಕೆ ವೃದ್ಧ ಬಲಿ

    ಫೋನ್ ಮಾಡಿದ್ರು ಬಾರದ ಸರ್ಕಾರಿ ವೈದ್ಯರು- ನಿರ್ಲಕ್ಷ್ಯಕ್ಕೆ ವೃದ್ಧ ಬಲಿ

    ರಾಯಚೂರು: ಜಿಲ್ಲೆಯ ಸಿರವಾರದ ಕವಿತಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರ ನಿರ್ಲಕ್ಷ್ಯಕ್ಕೆ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಕವಿತಾಳ ಸರ್ಕಾರಿ ಆಸ್ಪತ್ರೆಯಲ್ಲಿ ರಂಗಪ್ಪ(೭೦) ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ತಡರಾತ್ರಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರಂಗಪ್ಪ ಅವರನ್ನು ಕುಟುಂಬಸ್ಥರು ಕವಿತಾಳ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ಈ ಹಿನ್ನೆಲೆ ರಂಗಪ್ಪ ಅವರ ಕುಟುಂಬಸ್ಥರು ವೈದ್ಯರಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಮನವಿ ಮಾಡಿದ್ದರು. ಒಂದು ಗಂಟೆ ಕಾದರು ವೈದ್ಯರು ಆಸ್ಪತ್ರೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ರಂಗಪ್ಪ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

    ಇದೇ ಸಂದರ್ಭದಲ್ಲಿ ಇನ್ನೊಬ್ಬರು ವೃದ್ಧರ ಸ್ಥಿತಿ ಕೂಡ ಗಂಭಿರವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆ ಸಿಬ್ಬಂದಿ ಲಿಂಗಸುಗೂರು ತಾಲೂಕಾಸ್ಪತ್ರೆಗೆ ರವಾನಿಸಿದರು. ಹೀಗಾಗಿ ಚಿಕಿತ್ಸೆ ಪಡೆದು ಸದ್ಯ ವೃದ್ಧ ಚೇತರಿಸಿಕೊಳ್ಳುತ್ತಿದ್ದಾರೆ.

    ಇತ್ತ ರಂಗಪ್ಪ ಅವರ ಸಾವಿನಿಂದ ಸಿಟ್ಟಿಗೆದ್ದ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರು ಬಂದು ಚಿಕಿತ್ಸೆ ಕೊಟ್ಟಿದ್ದರೆ ರಂಗಪ್ಪ ಅವರು ಮೃತಪಡುತ್ತಿರಲಿಲ್ಲ. ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

  • ಸುಷ್ಮಾಗೆ ಚಿಕಿತ್ಸೆ ಕೊಡಲು ವೈದ್ಯರು ತಯಾರಿರಲಿಲ್ಲ- ಸತ್ಯಾಂಶ ಬಿಚ್ಚಿಟ್ಟ ಪತಿ ಕೌಶಲ್

    ಸುಷ್ಮಾಗೆ ಚಿಕಿತ್ಸೆ ಕೊಡಲು ವೈದ್ಯರು ತಯಾರಿರಲಿಲ್ಲ- ಸತ್ಯಾಂಶ ಬಿಚ್ಚಿಟ್ಟ ಪತಿ ಕೌಶಲ್

    ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಚಿಕಿತ್ಸೆ ಕೊಡಲು ಏಮ್ಸ್ ವೈದ್ಯರು ತಯಾರಿರಲಿಲ್ಲ. ಕೊನೆಗೆ ಒತ್ತಾಯದ ಮೇರೆಗೆ ಚಿಕಿತ್ಸೆ ಕೊಟ್ಟರು ಎಂದು ಸುಷ್ಮಾ ಅವರು ನಿಧನರಾಗುವ ಮುನ್ನ ಮಾಡಲಾಗಿದ್ದ ಶಸ್ತ್ರಚಿಕಿತ್ಸೆ ಬಗ್ಗೆ ಪತಿ ಸ್ವರಾಜ್ ಕೌಶಲ್ ಸತ್ಯಾಂಶ ಬಿಚ್ಚಿಟ್ಟಿದ್ದಾರೆ.

    ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರು ಸರಣಿ ಟ್ವೀಟ್ ಮಾಡಿ, ಪತ್ನಿಯ ಶಸ್ತ್ರಚಿಕಿತ್ಸೆ ಹಾಗೂ ಏಮ್ಸ್ ವೈದ್ಯರ ಬಗ್ಗೆ ತಿಳಿಸಿದ್ದಾರೆ. ಸುಷ್ಮಾ ನಿಧನ ಹೊಂದುವ ಮುನ್ನ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಏಮ್ಸ್ ವೈದ್ಯರು ಸುಷ್ಮಾಗೆ ಶಸ್ತ್ರಚಿಕಿತ್ಸೆ ಮಾಡಲು ತಯಾರಿರಲಿಲ್ಲ. ನೀವು ವಿದೇಶದಲ್ಲಿ ಕಿಡ್ನಿ ಕಸಿ ಮಾಡಿಸಿ ಎಂದು ಸಲಹೆ ನೀಡಿದ್ದರು. ಆದರೆ ಸುಷ್ಮಾ ಅದಕ್ಕೆ ಒಪ್ಪದೆ ಭಾರತದಲ್ಲೇ ನನಗೆ ಶಸ್ತ್ರಚಿಕಿತ್ಸೆ ನಡೆಯಬೇಕು ಎಂದು ಬಯಸಿದ್ದರು. ಜನರು ನಮ್ಮ ದೇಶದ ವೈದ್ಯರ ಮೇಲೆ ಬಹಳ ನಂಬಿಕೆ ಇಟ್ಟಿದ್ದಾರೆ. ಒಂದು ವೇಳೆ ನಾನು ನಮ್ಮ ವೈದ್ಯರನ್ನೇ ನಂಬದೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದರೆ ಜನರ ನಂಬಿಕೆಗೆ ಧಕ್ಕೆ ಉಂಟಾಗುತ್ತೆ. ಹೀಗಾಗಿ ನಮ್ಮ ವೈದ್ಯರೇ ನನಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು ಅಂತ ಪತ್ನಿ ದೇಶದ ಮೇಲಿಟ್ಟಿರುವ ಪ್ರೀತಿಯನ್ನು ತಿಳಿಸಿದ್ದಾರೆ. ಇದನ್ನೂ ಓದಿ:  ಸುಷ್ಮಾ ಸ್ವರಾಜ್ ಪ್ರೇಮ್ ಕಹಾನಿ – ಸ್ನೇಹಿತರು ಸತಿ, ಪತಿಗಳಾದ ಕಥೆ ಓದಿ

    https://twitter.com/governorswaraj/status/1191434693402644483

    ಏಮ್ಸ್ ವೈದ್ಯರು ತಮಗೆ ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕು ಎನ್ನುವುದನ್ನು ಸುಷ್ಮಾನೇ ನಿರ್ಧರಿಸಿದ್ದರು. ವಿದೇಶದಲ್ಲಿ ಚಿಕಿತ್ಸೆ ಪಡೆಯುವುದನ್ನು ನಿರಾಕರಿಸಿ, ಭಾರತದಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ನೀವು ಕೇವಲ ಶಸ್ತ್ರಚಿಕಿತ್ಸೆಗೆ ಬೇಕಾಗುವ ಉಪಕರಣಗಳನ್ನು ಹಿಡಿದು ನಿಲ್ಲಿ, ಉಳಿದದ್ದೆಲ್ಲಾ ಆ ಕೃಷ್ಣ ನೋಡಿಕೊಳ್ಳುತ್ತಾನೆ ಎಂದು ಸುಷ್ಮಾ ಸ್ವರಾಜ್ ವೈದ್ಯರಿಗೆ ಧೈರ್ಯ ತುಂಬಿದ್ದರು ಅಂತ ಕೌಶಲ್ ಟ್ವೀಟ್‌ನಲ್ಲಿ ಬರೆದು ಪತ್ನಿ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

    https://twitter.com/governorswaraj/status/1191436597255966721

    ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಸುಷ್ಮಾ ಕುರ್ಚಿಯಲ್ಲಿ ಕೂತು ಖುಷಿಯಿಂದ ಏಮ್ಸ್ ವೈದ್ಯರನ್ನು ಹೊಗಳಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸುವಲ್ಲಿ ವೈದ್ಯರು ಪಟ್ಟ ಶ್ರಮವನ್ನು ಶ್ಲಾಘಿಸಿದರು. ಹಾಗೂ ಅಲ್ಲಿನ ಸಿಬ್ಬಂದಿ ವರ್ಗಕ್ಕೂ ಅಭಿನಂದನೆ ತಿಳಿಸಿದ್ದರು. ಏಮ್ಸ್ ವೈದ್ಯರು ಜಗತ್ತಿನ ಬೆಸ್ಟ್ ವೈದ್ಯರು ಎಂದು ಹೊಗಿಳಿದ್ದನ್ನು ನೆನೆದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

    https://twitter.com/governorswaraj/status/1191450268027772929

    ಹಾಗೆಯೇ ಸುಷ್ಮಾ ಸ್ವರಾಜ್ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ. ಸುಷ್ಮಾ ಅವರು ಧೈರ್ಯ ತುಂಬುತ್ತಿದ್ದ ರೀತಿ, ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸುಷ್ಮಾ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ ಪರಿ ಹಾಗೂ ನಮಗೂ ಧೈರ್ಯ ಹೇಳಿದ್ದನ್ನು ನಾನು ಹಾಗೂ ಬನ್ಸುರಿ ಎಂದಿಗೂ ಮರೆಯಲ್ಲ. ಅವರಿಗೆ ನಾವು ಚಿರಋಣಿ ಎಂದು ಮೋದಿಗೆ ಧನ್ಯವಾದ ತಿಳಿಸಿದರು.

    https://twitter.com/governorswaraj/status/1191563447516979200

    ಆಗಸ್ಟ್ 6ರಂದು ಸುಷ್ಮಾ ಸ್ವರಾಜ್ ಅವರು ನಿಧರಾದರು. ಏಮ್ಸ್ ಆಸ್ಪತ್ರೆಯಲ್ಲಿಯೇ ತಮ್ಮ ಕೊನೆಯುಸಿರೆಳೆದಿದ್ದರು. ಸುಷ್ಮಾ ಅವರ ಅಗಲಿಕೆಯಿಂದ ದೇಶಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಆಘಾತವಾಗಿತ್ತು. ವಿದೇಶಾಂಗ ಸಚಿವೆಯಾಗಿ ದೇಶಕ್ಕಾಗಿ ಅವರು ನೀಡಿರುವ ಕೊಡುಗೆ, ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಜನರ ಸಮಸ್ಯೆಗೆ ಅವರು ಸ್ಪಂದಿಸುತ್ತಿದ್ದ ರೀತಿ ಇಂದಿಗೂ ಎಲ್ಲರ ಮನದಲ್ಲಿದೆ.

  • ಇಂದು ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆ ವೈದ್ಯರ ಪ್ರತಿಭಟನೆ

    ಇಂದು ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆ ವೈದ್ಯರ ಪ್ರತಿಭಟನೆ

    ಬೆಂಗಳೂರು: ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.

    ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಕರವೇ ಕಾರ್ಯಕರ್ತರು-ವೈದ್ಯರ ವಾಗ್ವಾದ ಇಂಗ್ಲಿಷ್-ಕನ್ನಡ ಹೋರಾಟದ ರೂಪ ಪಡೆದಿತ್ತು. ಅಲ್ಲದೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಮಿಂಟೋ ಆಸ್ಪತ್ರೆ ಸಿಬ್ಬಂದಿ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸಿದ್ದರು.

    ಇತ್ತ ವೈದ್ಯರ ನಡೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಲಿದ್ದಾರೆ. ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್ ವರೆಗೆ ಕರವೇ ರ‍್ಯಾಲಿ ನಡೆಸಲಿದ್ದಾರೆ. ರ‍್ಯಾಲಿ ಸಾಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿವೆ.

    ಡಿಸಿಎಂ ಅಶ್ವಥ್ ನಾರಾಯಣ ಅವರ ಸಂಧಾನಕ್ಕೂ ವೈದ್ಯರು ಒಪ್ಪಿಲ್ಲ. ಇದೀಗ ರಾಜ್ಯವ್ಯಾಪಿ ಪ್ರತಿಭಟನೆಗೆ ಮುಂದಾಗಿದ್ದು ಇಂದು ಒಪಿಡಿ ಬಂದ್ ಮಾಡಿದ್ದಾರೆ. ಈ ಮಧ್ಯೆ ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ಪರಿಹಾರ ಘೋಷಿಸಿರುವ ಅಶ್ವಥ್ ನಾರಾಯಣ, ದೃಷ್ಟಿ ದೋಷ ಇರುವವರಿಗೆ ಸರ್ಕಾರದಿಂದಲೇ ಚಿಕಿತ್ಸೆ ನೀಡುತ್ತೇವೆ ಅಂದಿದ್ದಾರೆ. ಆಸ್ಪತ್ರೆಯಲ್ಲಿ ಹೆಚ್ಚಿನ ಸಿಸಿಟಿವಿ ಅಳವಡಿಕೆ, ವೈದ್ಯರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆಗಳಿಂದ ಭದ್ರತೆ ನೀಡಲು ಡಿಸಿಎಂ ಸೂಚಿಸಿದ್ದಾರೆ.

  • ಇಂಜೆಕ್ಷನ್ ನೀಡಿ ಸೂಜಿ ದೇಹದೊಳಗೆ ಬಿಟ್ಟ ನರ್ಸ್

    ಇಂಜೆಕ್ಷನ್ ನೀಡಿ ಸೂಜಿ ದೇಹದೊಳಗೆ ಬಿಟ್ಟ ನರ್ಸ್

    ಕೋಲಾರ: ಇಂಜೆಕ್ಷನ್ ನೀಡಿ ಸೂಜಿ ದೇಹದೊಳಗೆ ಬಿಟ್ಟು ಸರ್ಕಾರಿ ಆಸ್ಪತ್ರೆಯ ನರ್ಸ್ ಎಡವಟ್ಟು ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    5 ವರ್ಷದ ಅಭಿಲಾಷ್ ಎನ್ನುವ ಬಾಲಕನ ಸೊಂಟಕ್ಕೆ ನರ್ಸ್ ಇಂಜೆಕ್ಷನ್ ನೀಡಿದ್ದಾರೆ. ಅಭಿಲಾಷ್ ಜ್ವರದಿಂದ ಬಳಲುತ್ತಿದ್ದನು. ಹೀಗಾಗಿ ಆತನ ಪೋಷಕರು ಚಿಕಿತ್ಸೆಗೆಂದು ಶನಿವಾರ ಸಂಜೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

    ವೈದ್ಯರು, ಅಭಿಲಾಷ್‍ನನ್ನು ತಪಾಸಣೆ ಮಾಡಿದ ನಂತರ ನರ್ಸ್ ಇಂಜೆಕ್ಷನ್ ನೀಡಿದ್ದರು. ಈ ವೇಳೆ ಇಂಜೆಕ್ಷನ್‍ನ ಸೂಜಿ ಮುರಿದು ನರ್ಸ್ ಬಾಲಕನ ದೇಹದೊಳಗೆ ಬಿಟ್ಟಿದ್ದಾಳೆ. ಆದರೆ ನೀಡಲ್ ಕಟ್ ಆದ ಮಾಹಿತಿಯನ್ನೂ ನೀಡದೆ ಸಿಬ್ಬಂದಿ ಹಾಗೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ.

    ಅಭಿಲಾಷ್ ಸೊಂಟ ನೋವಿನಿಂದ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಸತ್ಯ ಬಯಲಾಗಿದೆ. ಬಳಿಕ ಪೋಷಕರು ಕೆಜಿಎಫ್ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಭಿಲಾಷ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಗಳ ಶವ

    ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಗಳ ಶವ

    ಬಾಗಲಕೋಟೆ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರ ಮಾಡಿದರೆ ಶವಾಗಾರದಲ್ಲೇ ಎರಡು ನಾಯಿಗಳು ಸತ್ತು ಕೊಳೆತ ಸ್ಥಿತಿಯಲ್ಲಿರೋದು ಕಂಡು ಗ್ರಾಮಸ್ಥರು ದಂಗಾಗಿದ್ದಾರೆ.

    ಬಾಗಲಕೋಟೆ ತಾಲೂಕಿನ ರಾಂಪುರ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿ ಆಗಿದೆ. 25 ವರ್ಷದ ಪವಾಡೆಪ್ಪ ಗೌಡರ ಎಂಬ ವ್ಯಕ್ತಿ ರಾಂಪುರ ಗ್ರಾಮದ ಬಳಿ ಬೈಕ್ ನಿಂದ ಬಿದ್ದು ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದ. ಈತನ ಮರಣೋತ್ತರ ಪರೀಕ್ಷೆಗೆ ಎಂದು ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

    ಆದರೆ ಮರಣೋತ್ತರ ಪರೀಕ್ಷೆ ಮಾಡೋಕೆ ಯಾವುದೇ ವೈದ್ಯರು ಕೂಡ ಆಸ್ಪತ್ರೆಯಲ್ಲಿರಲಿಲ್ಲ. ಇದರಿಂದ ಸುಮಾರು ನಾಲ್ಕು ತಾಸುಗಳ ಕಾಲ ಸಂಬಂಧಿಕರು ಕಾಯಬೇಕಾಯಿತು. ನಂತರ ಸ್ಥಳಕ್ಕೆ ಬಂದ ವೈದ್ಯ ಎಸ್ ವಿ ಲೇಬಗಿರಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

    ಇದೊಂದು ಕಡೆಯಾದ್ರೆ ಶವಾಗಾರದಲ್ಲಿ ನಾಲ್ಕು ದಿನಗಳ ಹಿಂದೆಯೇ ಎರಡು ನಾಯಿಗಳು ಸತ್ತಿದ್ದು, ಕೊಳೆತ ಸ್ಥಿತಿಯಲ್ಲಿ ನಾಯಿಗಳ ದೇಹಗಳು ಬಿದ್ದಿವೆ. ಆದರೂ ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮಾಡಿಲ್ಲ. ರಾಂಪುರ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

  • ಅವ್ಯವಸ್ಥೆಯ ಆಗರ ರಿಮ್ಸ್ ಆಸ್ಪತ್ರೆಯಲ್ಲಿ ರಾಮುಲು ವಾಸ್ತವ್ಯ

    ಅವ್ಯವಸ್ಥೆಯ ಆಗರ ರಿಮ್ಸ್ ಆಸ್ಪತ್ರೆಯಲ್ಲಿ ರಾಮುಲು ವಾಸ್ತವ್ಯ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಇಂದು ರಾಯಚೂರಿನ ರಿಮ್ಸ್ ಆಸ್ಪತ್ರೆ ಪರಿಶೀಲಿಸಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

    ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಶ್ರೀರಾಮುಲು ರಿಮ್ಸ್ ನ ಕರ್ತವ್ಯ ನಿರತ ವೈದ್ಯರ ಕೊಠಡಿಯಲ್ಲಿ ತಂಗಲಿದ್ದಾರೆ. ಹೀಗಾಗಿ ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ ಸಚಿವರ ವಾಸ್ತವ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ.

    ಮಂತ್ರಿಗಳ ವಾಸ್ತವ್ಯದಿಂದ ಅದೆಷ್ಟೋ ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಸಿಗದಿದ್ದ ಕುಡಿಯುವ ನೀರು ಈಗ ದೊರೆಯುತ್ತಿದೆ. ಅಲ್ಲಲ್ಲಿ ಸುಣ್ಣ ಬಣ್ಣಗಳನ್ನು ಬಳಿದು ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಮಾಡಲು ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೆ ರೋಗಿಗಳ ಕಷ್ಟಗಳು ಮಾತ್ರ ತೀರಿಲ್ಲ. ಹಾವು ಕಡಿತಕ್ಕೆ ಔಷಧಿಯಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.

    ಆಸ್ಪತ್ರೆಯಲ್ಲಿ ಔಷಧಿ ಇಲ್ಲ ಎಂದು ಹೊರಗಡೆ ತರಲು ವೈದ್ಯರು ಹೇಳುತ್ತಿದ್ದಾರೆ ಎಂದು ರೋಗಿಗಳ ಕಡೆಯವರು ಆರೋಪಿಸಿದ್ದಾರೆ. ಬೆಡ್ ವ್ಯವಸ್ಥೆಯಿಲ್ಲದೆ ಕೆಲ ರೋಗಿಗಳು ಕಾರಿಡಾರ್ ನಲ್ಲೆ ಕಾಲಕಳೆಯುತ್ತಿದ್ದಾರೆ. ಕನಿಷ್ಠ ಆರೋಗ್ಯ ಸಚಿವರು ಬಂದು ಹೋದಮೇಲಾದರೂ ಇಲ್ಲಿನ ವ್ಯವಸ್ಥೆಗಳು ಬದಲಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • 1 ಗ್ರಾಂ ತೂಕದ ಮೀನಿನ ಆಪರೇಷನ್‍ಗೆ 9 ಸಾವಿರ ಖರ್ಚು

    1 ಗ್ರಾಂ ತೂಕದ ಮೀನಿನ ಆಪರೇಷನ್‍ಗೆ 9 ಸಾವಿರ ಖರ್ಚು

    ಇಂಗ್ಲೆಂಡ್: ಬರೀ ಮಾನವನಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಜಲಚರಗಳಿಗೂ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡುವಷ್ಟರ ಮಟ್ಟಿಗೆ ವೈದ್ಯ ಲೋಕ ಬೆಳೆದು ನಿಂತಿದೆ. ಯುಕೆಯಲ್ಲಿ ಕೇವಲ 1 ಗ್ರಾಂ ತೂಕದ ಮೀನಿಗೆ ವೈದ್ಯರು ಆಪರೇಷನ್ ಮಾಡಿ ಯಶಸ್ವಿಯಾಗಿರೋದು ಅದಕ್ಕೆ ಒಂದೊಳ್ಳೆ ಉದಾಹರಣೆಯಾಗಿದೆ.

    ಹೌದು. ಇಂಗ್ಲೆಂಡಿನ ಬ್ರಿಸ್ಟಸ್‍ನ ವೈದ್ಯೆ ಸೋನ್ಯಾ ಮೈಲ್ಸ್ ಇಂತಹದೊಂದು ಅಚ್ಚರಿಯ ಕೆಲಸ ಮಾಡಿದ್ದಾರೆ. ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್‍ಗೆ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ಯುಕೆ ಮಹಿಳೆಯೊಬ್ಬರಿಗೆ ಈ 1 ಗ್ರಾಂ ತೂಕದ ಗೋಲ್ಡ್ ಫಿಶ್ ಅನ್ನು ಯಾರೋ ಗಿಫ್ಟ್ ಮಾಡಿದ್ದರು. ಆದ್ದರಿಂದ ಮೀನಿನ ಒಡತಿ ಅದನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಮೀನು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಒಡತಿ, ಅದನ್ನು ವೈದ್ಯರ ಬಳಿ ಕರೆತಂದಿದ್ದರು.

    ಆಗ ಅದರ ಹೊಟ್ಟೆಯಲ್ಲಿ ಟ್ಯೂಮರ್ ಆಗಿರುವುದು ಬೆಳಕಿಗೆ ಬಂದು, ಮೀನಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ಒಡತಿ ಒಪ್ಪಿಗೆ ನೀಡಿದಾಗ, ವೈದ್ಯೆ ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ಮೀನಿನ ಹೊಟ್ಟೆಯಲ್ಲಿದ್ದ ಟ್ಯೂಮರ್ ಹೊರತೆಗೆದು ದಾಖಲೆ ಮಾಡಿದ್ದಾರೆ. ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಹೊಗ್ಗಳಿಕೆ ಪಡೆದುಕೊಂಡಿದೆ.

    ಒಂದು ಸಣ್ಣ ಪೈಪ್ ಮೂಲಕ ಮೀನಿನಲ್ಲಿದ್ದ ಟ್ಯೂಮರ್‌ನ್ನು ವೈದ್ಯೆ ಹೊರ ತೆಗೆದಿದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಲು ಬರೋಬ್ಬರಿ 40 ನಿಮಿಷಗಳ ಕಾಲ ವೈದ್ಯರು ಕಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಗೋಲ್ಡನ್ ಫಿಶ್‍ಗೆ ಮಾರುಕಟ್ಟೆಯಲ್ಲಿ 89 ರೂ. ಬೆಲೆ ಇದೆ. ಆದರೆ ಇದರ ಶಸ್ತ್ರಚಿಕಿತ್ಸೆಗೆ ಮೀನಿನ ಒಡತಿ ಬರೋಬ್ಬರಿ 9 ಸಾವಿರ ರೂ. ಖರ್ಚು ಮಾಡಿದ್ದಾರೆ. ಸದ್ಯ ಈ ಮೀನು ಆರೋಗ್ಯವಾಗಿದೆ ಎಂದು ಒಡತಿ ತಿಳಿಸಿದ್ದಾರೆ.