Tag: doctors

  • 3 ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ – ಬೇರೆ ವ್ಯಕ್ತಿಗಳಲ್ಲಿ ಮಗಳನ್ನು ಕಾಣುತ್ತಿದ್ದಾರೆ ತಾಯಿ

    3 ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ – ಬೇರೆ ವ್ಯಕ್ತಿಗಳಲ್ಲಿ ಮಗಳನ್ನು ಕಾಣುತ್ತಿದ್ದಾರೆ ತಾಯಿ

    – ಹಲವು ಜನರ ದೇಹದಲ್ಲಿ ಜೀವಂತವಾಗಿದೆ ಮಗಳ ಅಂಗಗಳು
    – ಈ ಕೆಲಸದಿಂದ ನೆಮ್ಮದಿ – ಭಾವನಾ

    ಗಾಂಧಿನಗರ: 2016ರಲ್ಲಿ ಬ್ರೈನ್ ಡೆಡ್ ಆಗಿದ್ದ 16 ವರ್ಷದ ಮಗಳ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದರು. ಇದಾದ ಬಳಿಕ ಮೂರು ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ ಮಾಡಲು ಬಾಲಕಿಯ ತಾಯಿ ಪ್ರೇರಣೆ ನೀಡಿದ್ದಾರೆ.

    2016ರಂದು ಭಾವನಾ ಬೇನ್ ಅವರ 16 ವರ್ಷದ ಮಗಳು ರಾಧಿಕಾ ಅನಾರೋಗ್ಯದಿಂದ ಬಳಲುತ್ತಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ರಾಧಿಕಾಳನ್ನು ಪರೀಕ್ಷಿಸಿದಾಗ ಆಕೆಯ ಮೆದುಳಿನಲ್ಲಿ ಉಂಡೆಯಂತೆ ಇರುವುದು ತಿಳಿದು ಬಂದಿತ್ತು. ಆಗ ವೈದ್ಯರು ರಾಧಿಕಾಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ ಕೆಲವು ಗಂಟೆಗಳ ನಂತರ ಆ ಉಂಡೆ ಒಡೆದು ಹೋಗಿದ್ದು, ರಾಧಿಕಾಳ ಬ್ರೈನ್ ಡೆಡ್ ಆಗಿತ್ತು.

    ಈ ದುಃಖದ ಸಮಯದಲ್ಲಿ ವೈದ್ಯರಾದ ವಿರೋಜಾ, ಕರಾಮಟ್ ಹಾಗೂ ವಂಜಾರ ಅವರು ಭಾವನಾ ಬಳಿ ಹೋಗಿ ರಾಧಿಕಾಳ ಅಂಗಾಂಗ ದಾನ ಮಾಡುವಂತೆ ಸಲಹೆ ನೀಡಿದ್ದರು. ಭಾವನಾ ವೈದ್ಯರ ಸಲಹೆಯನ್ನು ಕೇಳಿ ರಾಧಿಕಾಳ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಆಗ ವೈದ್ಯರು ರಾಧಿಕಾಳ ಹೃದಯ, ಕಿಡ್ನಿ, ಕಣ್ಣು ಹಾಗೂ ಲಿವರ್ ಅನ್ನು ಅವಶ್ಯಕತೆ ಇರುವ ಜನರಿಗೆ ನೀಡಲು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು.

    ರಾಧಿಕಾ ಈಗ ಬದುಕಿಲ್ಲ. ಆದರೆ ಇಂದಿಗೂ ಆಕೆಯ ಅಂಗಗಳು ಹಲವು ಜನರ ದೇಹದಲ್ಲಿ ಜೀವಂತವಾಗಿದೆ. ರಾಧಿಕಾಳ ಅಂಗಾಂಗ ದಾನ ಮಾಡಿದ ನಂತರ ವೈದ್ಯರು ಭಾವನಾ ಬಳಿ ಹೋಗಿ, ಅಂಗಾಂಗ ದಾನ ಮಾಡಲು ಜನರಿಗೆ ಪ್ರೇರಣೆ ನೀಡಿ. ಇದರಿಂದ ಹಲವು ಜನರ ಜೀವ ಉಳಿಯುತ್ತದೆ ಎಂದು ಹೇಳಿದ್ದರು. ವೈದ್ಯರ ಮಾತು ಕೇಳಿ ಭಾವನಾ ಹಲವು ಜನರಿಗೆ ಅಂಗಾಂಗ ದಾನದ ಬಗ್ಗೆ ಪ್ರೇರಣೆ ನೀಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಭಾವನಾ ಬೇನ್, ಯಾವುದೇ ರೋಗಿಯ ಬ್ರೈನ್ ಡೆಡ್ ಆಗಿದೆ ಎಂಬ ವಿಷಯ ನನಗೆ ತಿಳಿದ ತಕ್ಷಣ ನಾನು ಆಸ್ಪತ್ರೆಗೆ ಹೋಗುತ್ತೇನೆ. ಬಳಿಕ ರೋಗಿಯ ಕುಟುಂಬಸ್ಥರ ಜೊತೆ ಮಾತನಾಡಿ, ಅಂಗಾಂಗ ದಾನ ಮಾಡುವಂತೆ ಪೇರಣೆ ನೀಡುತ್ತೇನೆ. ನಾನು ಹಾಗೂ ನನ್ನ ಪತಿ ಮನ್‍ಸುಖ್ ಇಬ್ಬರು ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತೇವೆ. ನನ್ನ ಈ ಕೆಲಸಕ್ಕೆ ನನ್ನ ಪತಿ ಮಾತ್ರವಲ್ಲದೆ ನನ್ನ ಮಗ ಕೂಡ ಸಹಕರಿಸುತ್ತಾನೆ ಎಂದರು.

    ಇದೇ ವೇಳೆ 3 ವರ್ಷಗಳಲ್ಲಿ 32 ಮಂದಿಗೆ ಅಂಗಾಂಗ ದಾನ ಮಾಡಲು ಪ್ರೇರಣೆ ನೀಡಿದ್ದೇನೆ. ಈಗಲೂ ನಾವು ಈ ಕೆಲಸವನ್ನು ಮುಂದುವರಿಸುತ್ತಿದ್ದೇವೆ. ಈ ಕೆಲಸದಿಂದ ನೆಮ್ಮದಿ ಸಿಗುತ್ತದೆ. ಅದನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ನನ್ನ ಮಗಳು ರಾಧಿಕಾ ನಮ್ಮ ಜೊತೆಯಿಲ್ಲ. ಆದರೆ ಇಂದಿಗೂ ಆಕೆ ಹಲವು ಜನರ ದೇಹದಲ್ಲಿ ಜೀವಂತವಾಗಿದ್ದಾಳೆ ಎಂದು ಹೇಳುವ ಮೂಲಕ ಭಾವನಾ ಬೇನ್ ಭಾವುಕರಾದರು.

  • ನರ್ಸ್‌ಗಳಿಂದ ಹೆರಿಗೆ – ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವು

    ನರ್ಸ್‌ಗಳಿಂದ ಹೆರಿಗೆ – ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವು

    ಚಿಕ್ಕಮಗಳೂರು: ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ನರ್ಸ್‍ಗಳ ನಿರ್ಲಕ್ಷ್ಯದಿಂದ ಚೊಚ್ಚಲ ಹೆರಿಗೆಯಾಗಿದ್ದ ತಾಯಿ ತೀವ್ರ ರಕ್ತಸ್ರಾವಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇದೀಗ ಅಮ್ಮನಿಲ್ಲದೆ ಹಸುಗೂಸು ತಬ್ಬಲಿಯಾಗಿದೆ.

    ಸೋಮವಾರ ರಾತ್ರಿ ಕೊಪ್ಪ ತಾಲೂಕಿನ ನಾರ್ವೆ ಸಮೀಪದ ಹುಲುಗಾರು ಗ್ರಾಮದ ನಿವಾಸಿ 24 ವರ್ಷದ ಉಷಾ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬಸ್ಥರು ಉಷಾರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವವಹಿಸುತ್ತಿದ್ದ ಡಾ. ಬಾಲಕೃಷ್ಣ ಅವರ ಬೇಜವಾಬ್ದಾರಿಯಿಂದಲೇ ಗರ್ಭಿಣಿ ಮೃತಪಟ್ಟಿರುವುದು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ವೈದ್ಯರಲ್ಲಿ ಎಷ್ಟೇ ವಿನಂತಿಸಿಕೊಂಡರು ಎಚ್ಚರ ವಹಿಸದೇ ನರ್ಸ್‍ಗಳ ಕೈಯಲ್ಲಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವದಿಂದ ಉಷಾ ಸಾವನ್ನಪ್ಪಿದ್ದಾರೆ. ಮಹಿಳೆಗೆ ರಕ್ತ ಸ್ರಾವ ಹೆಚ್ಚಾಗಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಮಹಿಳೆಯನ್ನ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಉಷಾರ ಸಂಬಂಧಿಕರು ವೈದ್ಯರ ವಿರುದ್ಧ ದೂರು ನೀಡಿ, ಬಾಲಕೃಷ್ಣ ಅವರ ಅಮಾನತ್ತಿಗೆ ಒತ್ತಾಯಿಸಿದ್ದಾರೆ.

  • ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಾಚಿಕೆಯಾಗೋದಿಲ್ವಾ ನಿಮ್ಗೆ: ಮಾಧುಸ್ವಾಮಿ ಆಕ್ರೋಶ

    ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಾಚಿಕೆಯಾಗೋದಿಲ್ವಾ ನಿಮ್ಗೆ: ಮಾಧುಸ್ವಾಮಿ ಆಕ್ರೋಶ

    ಹಾಸನ: ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ. ನಾಚಿಕೆಯಾಗುವುದಿಲ್ವಾ ನಿಮಗೆ ಎಂದು ಸಚಿವ ಮಾಧುಸ್ವಾಮಿ ಹಾಸನ ಡಿಎಚ್‍ಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ತಮ್ಮ ಕ್ಷೇತ್ರದ ಆಸ್ಪತ್ರೆಯಲ್ಲಿ  ಸ್ತ್ರೀರೋಗತಜ್ಞರು, ಅನಸ್ತೇಷಿಯ ಸ್ಪೆಷಲಿಸ್ಟ್ ಇಲ್ಲದೇ ಇರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

    ಈ ವೇಳೆ ಕೋಪಗೊಂಡ ಸಚಿವರು ಹಾಸನ ಡಿಎಚ್‍ಓ ಸತೀಶ್ ಕುರಿತು, ನೀವು ಒಬ್ಬರು ಡಿಎಚ್‍ಓ ಎಂದು ನಿಂತಿದ್ದೀರಿ. ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಾಚಿಕೆಯಾಗುವುದಿಲ್ವಾ. ಈ ಸಂಬಂಧ ನೀವು ಯಾರಿಗೆ ಪತ್ರ ಬರೆದಿದ್ದೀರಿ. ಅದನ್ನು ತೆಗೆದುಕೊಂಡು ಬಾ ಇಲ್ಲಿ. ಉತ್ತರ ಕೊಡಿ ನನಗೆ ಎಂದು ಗರಂ ಆದರು.

    ಇದೇ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಒಂದು ಕಡೆ ಸರಿಯಾಗಿ ವೈದ್ಯರಿಲ್ಲ. ಮತ್ತೊಂದು ಕಡೆ ಇರುವ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ಕಾನೂನು ತರಬೇಕು ಎಂದು ಸೂಚಿಸಿದರು.

  • ಕರ್ನಾಟಕ ವೈದ್ಯ ಪರಿಷತ್ ಚುನಾವಣೆ: ಮತದಾರರ ಪಟ್ಟಿಯಲ್ಲಿ ವೈದ್ಯರ ಹೆಸರೇ ಮಾಯ

    ಕರ್ನಾಟಕ ವೈದ್ಯ ಪರಿಷತ್ ಚುನಾವಣೆ: ಮತದಾರರ ಪಟ್ಟಿಯಲ್ಲಿ ವೈದ್ಯರ ಹೆಸರೇ ಮಾಯ

    ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ವೈದ್ಯಕೀಯ ಪರಿಷತ್ ಚುನಾವಣೆಯಲ್ಲಿಯೂ ರಾಜಕೀಯ ಜೋರಾಗಿ ನಡದಿದೆ. ಕರ್ನಾಟಕ ವೈದ್ಯ ಪರಿಷತ್ ಚುನಾವಣೆಯಲ್ಲಿ ಅರ್ಧದಷ್ಟು ಮತಗಳು ನಾಪತ್ತೆಯಾಗಿವೆ. ಇದರಿಂದ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೋಧಕ ಹಾಗು ಬೋಧಕೇತರ ವಿಭಾಗಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮತಗಳು ಮಾಯವಾಗಿವೆ.

    ಬೋಧಕ ವಿಭಾಗದಲ್ಲಿ ಒಟ್ಟು 230 ಮತಗಳಿದ್ದು ಮತದಾರರ ಪಟ್ಟಿಯಲ್ಲಿ 143 ಮತಗಳು ಮಾತ್ರ ಇವೆ. ಬೋಧಕೇತರ ವಿಭಾಗದಲ್ಲಿ 930 ಮತಗಳಿದ್ದು ಅದರಲ್ಲಿ ಕೇವಲ 450 ಮತಗಳಿವೆ. ಇದರಿಂದ ಕುಪಿತರಾದ ವೈದ್ಯರು ತಮ್ಮ ಅನುಕೂಲಕ್ಕಾಗಿ ಕೆಲವರ ಮತಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ನೋಡೆಲ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು.

    ವೈದ್ಯರೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಬೇಕು ಅಂತ ಆಗ್ರಹಿಸಿ ಮತದಾನ ಮಾಡುತ್ತಿದ್ದಾರೆ. ಸಂಜೆ 6 ಗಂಟೆಯವರೆಗೂ ಚುನಾವಣೆ ನಡೆಯುತ್ತಿದ್ದು, ಬೋಧಕ ವಿಭಾಗಕ್ಕೆ 3 ಜನ, ಬೋಧಕೇತರು 4 ಜನ ಸ್ಪರ್ಧಿಸಿದ್ದಾರೆ.

    ರಾಯಚೂರಿನಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ ಮತದಾನ ನಡೆಯುತ್ತಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಎರಡು ವಿಭಾಗದಲ್ಲಿ ವೈದ್ಯರು ಮತದಾನ ಮಾಡಬೇಕಿದೆ. ಚುನಾವಣೆಯಲ್ಲಿ ಕಲಬುರಗಿ ವಿಭಾಗದ ವೈದ್ಯರು ಸಹ ಮತ ಹಾಕಬಹುದಾಗಿದೆ.

  • ಬೆಂಗ್ಳೂರಿನಲ್ಲಿ ಬರೋಬ್ಬರಿ 5.78 ಕೆಜಿ ತೂಕದ ಮಗು ಜನನ

    ಬೆಂಗ್ಳೂರಿನಲ್ಲಿ ಬರೋಬ್ಬರಿ 5.78 ಕೆಜಿ ತೂಕದ ಮಗು ಜನನ

    ಬೆಂಗಳೂರು: ಸಿಲಿಕಾನ್ ಸಿಟಿಯ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಪೆಷಲ್ ಮಗು ಡೆಲಿವರಿ ಆಗಿದೆ. ಈ ಮಗುವಿನ ತೂಕ ಭರ್ತಿ 5.78 ಕೆಜಿ ಇದ್ದು, ಬಲಭೀಮನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

    ವೈದ್ಯಲೋಕಕ್ಕೆ ಸವಾಲಾಗಿದ್ದ ಈ ಕಂದಮ್ಮ ಪಶ್ಚಿಮ ಬಂಗಾಳದ ಸರಸ್ವತಿ ಹಾಗೂ ಯೋಗೇಶ್ ದಂಪತಿ ಪುತ್ರ. ಜನವರಿ 18ರಂದು ಸಿಸೇರಿಯನ್ ಮಾಡಿ ವೈದ್ಯರು ಡೆಲಿವರಿ ಮಾಡಿದ್ದಾರೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಹುಟ್ಟಿದ ದಿನವೇ ಈ ಕಂದಮ್ಮ ಇತಿಹಾಸ ಸೃಷ್ಟಿಸಿದ್ದಾನೆ.

    ಈ ಮಗುವಿನ ತೂಕ ಎರಡು, ಮೂರು ತಿಂಗಳು ಇರುವ ಮಗುವಿಗೆ ಬರಬೇಕಾಗಿತ್ತು. ಆದರೆ ಈ ಮಗು ಮಾತ್ರ ಹುಟ್ಟುತ್ತಲೇ ಬರೋಬ್ಬರಿ 5.78 ಕೆಜಿ ತೂಕವಿದೆ. ತಾಯಿಗೆ ಡಯಾಬಿಟಿಸ್ ಇದ್ದಾಗ ಹೀಗಾಗುವ ಸಾಧ್ಯತೆ ಇರುತ್ತೆ. ಆದರೆ ಸರಸ್ವತಿಗೆ ಡಯಾಬಿಟಿಸ್ ಕೂಡ ಇಲ್ಲ. ದೈತ್ಯ ಮಗು ಹುಟ್ಟಿದಾಗ ಸಾಕಷ್ಟು ರಿಸ್ಕ್ ಹಾಗೂ ಆರೋಗ್ಯ ಸಮಸ್ಯೆ ಇರುತ್ತೆ. ಆದರೆ ವೈದ್ಯಲೋಕಕ್ಕೆ ಅಚ್ಚರಿ ಅನ್ನುವಂತೆ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖುಷಿಯಿಂದ ತಿಳಿಸಿದ್ದಾರೆ.

    ಹುಟ್ಟಿದ ತಕ್ಷಣ ಮಗು ಐಸಿಯುನಲ್ಲಿತ್ತು. ಸದ್ಯ ಮಗುವನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದು ಮೂರು ದಿನದಲ್ಲಿ ಡಿಸ್ಚಾರ್ಜ್ ಆಗಿ ಈ ಬಲಭೀಮ ಹೆತ್ತವರ ಜೊತೆ ಊರು ಸೇರಲಿದ್ದಾನೆ ಎಂದು ವೈದ್ಯ ಅಧೀಕ್ಷಕಿ ಗೀತಾ ಶಿವಮೂರ್ತಿ ಖುಷಿ ವ್ಯಕ್ತಪಡಿಸಿದ್ದಾರೆ.

  • ವೈದ್ಯರ ನಿರ್ಲಕ್ಷ್ಯಕ್ಕೆ ಡಿಸ್ಚಾರ್ಜ್ ಆಗಬೇಕಿದ್ದ ರೋಗಿ ಸಾವು

    ವೈದ್ಯರ ನಿರ್ಲಕ್ಷ್ಯಕ್ಕೆ ಡಿಸ್ಚಾರ್ಜ್ ಆಗಬೇಕಿದ್ದ ರೋಗಿ ಸಾವು

    ಬೆಂಗಳೂರು: ಸ್ಪರ್ಶ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದಕ್ಕೆ ರೋಗಿ ಸಾವನ್ನಪ್ಪಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ನಗರದ ಗೋರಗುಂಟೆಪಾಳ್ಯದ ಸ್ಪರ್ಶ್ ಆಸ್ಪತ್ರೆಗೆ ಕಳೆದ ಒಂದು ವಾರದ ಹಿಂದೆ ಧನಲಕ್ಷ್ಮಿ ಎಂಬವರು ಶ್ವಾಸಕೋಶ ಚಿಕಿತ್ಸೆಗೆ ಎಂದು ದಾಖಲಾಗಿದ್ದರು. ಚಿಕಿತ್ಸೆ ಯಶಸ್ವಿಯಾಗಿದ್ದು, ಧನಲಕ್ಷ್ಮಿ ಇಂದು ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ಹಬ್ಬ ಇರುವುದರಿಂದ ಕುಟುಂಬಸ್ಥರು ಇಂದು ಒಂದು ದಿನ ಆಸ್ಪತ್ರೆಯಲ್ಲಿಯೇ ಇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಬುಧವಾರ ಸಂಜೆ ರೋಗಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ಚಿಕಿತ್ಸೆ ನೀಡಲು ವೈದ್ಯರಿರಲಿಲ್ಲ. ಹಾಗಾಗಿ ಆಸ್ಪತ್ರೆಯ ನರ್ಸ್‍ಗಳೇ ಚಿಕಿತ್ಸೆ ನೀಡಿದ್ದಾರೆ. ನರ್ಸ್‍ಗಳು ಚಿಕಿತ್ಸೆ ನೀಡಿದ ಕೆಲ ಸಮಯದಲ್ಲಿಯೇ ರೋಗಿ ಧನಲಕ್ಷ್ಮಿ ಸಾವನ್ನಪ್ಪಿದ್ದಾರೆ. ರೋಗಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಸ್ಪತ್ರೆಯ ಅಧಿಕಾರಿಗಳ ಜೊತೆ ಕುಟುಂಬಸ್ಥರು ವಾಗ್ವಾದ ನಡೆಸಿದರು.

    ಈ ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆರ್ ಎಂಸಿ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಪೊಲೀಸರು ಬಂದರೂ ಆಸ್ಪತ್ರೆಯಲ್ಲಿ ಯಾವೊಬ್ಬ ವೈದ್ಯರು ಇರಲಿಲ್ಲ. ಇದರಿಂದ ಕುಟುಂಬಸ್ಥರು ಮತ್ತಷ್ಟು ಕೆರಳಿದರು.

  • ದೆಹಲಿ ವಿಧಾನಸಭೆ ಚುನಾವಣೆ – ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ವೈದ್ಯರೇ ಮೇಲುಗೈ

    ದೆಹಲಿ ವಿಧಾನಸಭೆ ಚುನಾವಣೆ – ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ವೈದ್ಯರೇ ಮೇಲುಗೈ

    ನವದೆಹಲಿ : ಪ್ರತಿಯೊಂದು ರಂಗದಲ್ಲಿ ಉನ್ನತ ಸ್ಥಾನಕ್ಕೇರಿದ ಮೇಲೆ ರಾಜಕೀಯದಲ್ಲೂ ಒಮ್ಮೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಕೆಲವರು ಬಯಸುತ್ತಾರೆ. ಹಿಂದೆ ಕೆಲವು ನಟ ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು ಸೇರಿ ಇತರೆ ವಲಯದ ಪ್ರಮುಖರು ರಾಜಕೀಯಕ್ಕೆ ಸೇರಿ ಚುನಾಯಿತರಾಗಿದ್ದಾರೆ. ಅದೇ ಮಾದರಿಯಲ್ಲಿ ಈಗ ದೆಹಲಿ ಚುನಾವಣೆಯಲ್ಲಿ ಮೆಗಾ ಆಪರೇಷನ್ ಮಾಡಲು ವೈದ್ಯರು ಮುಂದಾಗಿದ್ದಾರೆ.

    ದೆಹಲಿ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದು, ಈ ಪಟ್ಟಿಯಲ್ಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಹಲವರು ಈ ಬಾರಿ ಚುನಾವಣೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಒಂದು ಹಂತದ ಮಾತುಕತೆ ನಡೆಸಿದ್ದಾರೆ.

    2013 ರಲ್ಲಿ ಡಾ.ಹರ್ಷವರ್ಧನ್ ಕೃಷ್ಣನಗರದಿಂದ, ಲಕ್ಷ್ಮೀನಗರದಿಂದ ಡಾ.ಎ.ಕೆ.ವಾಲಿಯಾ, ಶಹದಾರಾದಿಂದ ಡಾ.ನರೇಂದ್ರನಾಥ್ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಮೂವರನ್ನು ಹೊರತಾಗಿ ಈ ಬಾರಿ ವೈದ್ಯ ಆಕಾಂಕ್ಷಿಗಳ ಪಟ್ಟಿ ಮತ್ತಷ್ಟು ಉದ್ದವಾಗಿದೆ.

    ಈ ಬಾರಿ ಡಾ.ಎ.ಕೆ.ವಾಲಿಯಾ ಕೃಷ್ಣನಗರದಿಂದ ಟಿಕೆಟ್ ಬಯಸಿದ್ದು, ಡಾ.ನರೇಂದ್ರ ನಾಥ್ ಶಹದಾರ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಡಾ.ವಿ.ಕೆ.ಮೊಂಗಾ ಮತ್ತು ಡಾ.ಅನಿಲ್ ಗೋಯಲ್ ಕೂಡಾ ಈ ಬಾರಿ ಟಿಕೆಟ್ ಬಯಸಿದ್ದಾರೆ. ಬಿಜೆಪಿ ಸೇರಿದ್ದ ಡಾ.ವಿ.ಕೆ.ಮೊಂಗಾ ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದರು. 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣನಗರದಿಂದ ಡಾ.ಹರ್ಷ್ ವರ್ಧನ್ ಎದುರು ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಈಗ ಪುನಃ ಬಿಜೆಪಿ ಸೇರಿರುವ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    ಇವರಲ್ಲದೇ ಹಿರಿಯ ಮೂತ್ರಶಾಸ್ತ್ರಜ್ಞ ಡಾ. ಅನಿಲ್ ಗೋಯಲ್ ಕೃಷ್ಣನಗರದಿಂದ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ದಂತ ತಜ್ಞ ಡಾ.ಕೆ.ಕೆ.ಚೌಧರಿ, ಮಹಿಳಾ ರೋಗಶಾಸ್ತ್ರಜ್ಞ ಡಾ. ವಂದನಾ ವಶಿಷ್ಠ ಹೂಡಾ ಸಿಟಿಯಿಂದ ಸ್ಪರ್ಧಿಸಲು ಕಸರತ್ತು ನಡೆಸಿದ್ದು, ಈ ಬಾರಿ ಒಟ್ಟು ಆರು ಮಂದಿ ವೈದ್ಯರು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

  • ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    – ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿ

    ಗುರುಗ್ರಾಮ್‍: ಹರಿಯಾಣದ ಗುರುಗ್ರಾಮ್‍ನ ಖಾಸಗಿ ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿಯನ್ನು ಮಾಡಲಾಗಿದೆ.

    ಸೌದಿ ಅರೇಬಿಯಾದ ಒಂದು ವರ್ಷದ ಬಾಲಕಿ ಬೇಬಿ ಹರ್ ಯಕೃತ್ ಕಸಿಗೆ ಹಸುವಿನ ರಕ್ತನಾಳಗಳನ್ನು ಬಳಸಲಾಗಿದೆ. 14 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ತಂಡವು ಬಾಲಕಿಯನ್ನು ಎರಡು ವಾರಗಳ ಕಾಲ ಮೇಲ್ವಿಚಾರಣೆಯಲ್ಲಿ ಇಟ್ಟು, ಬುಧವಾರ ಡಿಸ್ಚಾರ್ಜ್ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸಕ ಡಾ.ಗಿರಿರಾಜ್ ಬೋರಾ ಅವರು, ಸೌದಿ ಅರೇಬಿಯಾದ ಬೇಬಿ ಹರ್ ಪಿತ್ತರಸ ನಾಳಗಳಿಲ್ಲದೆ ಜನಿಸಿದೆ. ಬಳಿಕವೂ ಅವಳ ಪಿತ್ತರಸ ನಾಳ ಅಭಿವೃದ್ಧಿಯಾಗಲಿಲ್ಲ. ಆದ್ದರಿಂದ ಬೋವಿನ್ ಜುಗುಲಾರ್ ಸಿರೆ (ಹಸುವಿನ ಗಂಟಲು ಅಬಿಧಮನಿ) ಅನ್ನು ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗಿದೆ. ಈ ರಕ್ತನಾಳವು ಯಕೃತ್ತಿಗೆ ರಕ್ತವನ್ನು ತಲುಪಿಸಲು ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಗುವನ್ನು ನೋಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿತ್ತು. ಈ ಕೆಲಸವನ್ನು ವೈದ್ಯರ ತಂಡವು ಚೆನ್ನಾಗಿ ನಿರ್ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಾರಾ ಮತ್ತು ಅಹ್ಮದ್ ದಂಪತಿಯ ಮೂರನೇ ಮಗು ಬೇಬಿ ಹರ್. ಅವಳು ಜನಿಸಿದ ಮೂರು ತಿಂಗಳ ನಂತರ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಳು. ಸೌದಿ ಅರೆಬಿಯಾದ ವೈದ್ಯರು ಸಮಸ್ಯೆಯನ್ನು ಎದುರಿಸಲು ಮುಂದಾಗಲಿಲ್ಲ. ಬಳಿಕ ನಡೆಸಿದ ಬಿಲಿಯರಿ ಬೈಪಾಸ್ ಶಸ್ತ್ರಚಿಕಿತ್ಸೆ ವಿಫಲವಾದ ನಂತರ ಅಲ್ಲಿನ ವೈದ್ಯರು, ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಸಲಹೆ ನೀಡಿದರು. ಹೀಗಾಗಿ ಭಾರತಕ್ಕೆ ಕರೆತಂದ ಸಾರಾ ದಂಪತಿ ಹರಿಯಾಣದ ಗುರುಗ್ರಾಮ್‍ನ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರಚಿಕಿತ್ಸೆಗೆ ಯಶಸ್ವಿಯಾಗಿದ್ದು, ಮಗುವಿನ ತಂದೆ ಅಹ್ಮದ್ ಭಾರತ ಮತ್ತು ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಡಾ. ಗಿರಿರಾಜ್ ಬೋರಾ ಮಾತನಾಡಿ, ಸೌದಿ ಅರೆಬಿಯಾದ ವೈದ್ಯರು ದ್ವಿಪಕ್ಷೀಯ ಅಟ್ರೆಸಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯನ್ನು ಗುರುತಿಸಿದರು. ಈ ರೋಗವು 16 ಸಾವಿರದಲ್ಲಿ ಒಂದು ನವಜಾತ ಶಿಶುವಿನಲ್ಲಿ ಕಂಡುಬರುತ್ತದೆ. ಅಂತಹ ಮಕ್ಕಳಲ್ಲಿ ಪಿತ್ತರಸ ನಾಳಗಳು ಬೆಳೆಯುವುದಿಲ್ಲ. ಮಗುವಿನ ತೂಕ 5.2 ಕೆ.ಜಿ. ಇರುತ್ತದೆ ಎಂದು ಹೇಳಿದ್ದಾರೆ.

  • ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಮಾರಿದ ವೈದ್ಯರು

    ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಮಾರಿದ ವೈದ್ಯರು

    – ದೂರು ದಾಖಲಾಗುತ್ತಿದಂತೆ ವೈದ್ಯರು ಎಸ್ಕೇಪ್

    ಮಡಿಕೇರಿ: ಜೇಬು ತುಂಬಾ ಸಂಬಳ ಬಂದರೂ, ವೈದ್ಯ ವೃತ್ತಿಗೆ ಕಳಂಕವಾಗುವಂತಹ ಕೆಲಸವನ್ನು ಈ ವೈದ್ಯ ದಂಪತಿ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿ ಮಗುವನ್ನು ಲಕ್ಷ ಲಕ್ಷ ರೂ.ಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದು, ಸಿಕ್ಕಿ ಹಾಕಿಕೊಂಡಿದ್ದಾರೆ.

    ನಗರದ ಹೊಸ ಬಡಾವಣೆಯ ನಿವಾಸಿಗಳಾದ ಡಾ.ರಾಜೇಶ್ವರಿ ಹಾಗೂ ಡಾ.ನವೀನ್ ಆರೋಪಿಗಳಾಗಿದ್ದು, ಈ ದಂಪತಿ ಹಲವು ವರ್ಷಗಳಿಂದ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. 2019ರ ಆಗಸ್ಟ್ 22 ರಂದು ಅಪ್ರಾಪ್ತೆಯೊಬ್ಬಳು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ರಾಜೇಶ್ವರಿ ತನ್ನ ಪತಿಯೊಂದಿಗೆ ಸೇರಿಕೊಂಡು ಅಪ್ರಾಪ್ತೆಯನ್ನು ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದ್ದಾರೆ. ನಂತರ ಮಗುವನ್ನು ಅದೇ ಆಸ್ಪತ್ರೆಯಲ್ಲಿ ಗ್ರೂಪ್ ಡಿ. ದರ್ಜೆಯ ನೌಕರಳಾಗಿರುವ ಸೆನೆನಾಳ ಮಗನಾದ ರಾಬಿನ್‍ಗೆ 1.50 ಲಕ್ಷ ರೂ.ಗೆ ಮಾರಿದ್ದಾಳೆ.

    ಅಲ್ಲದೆ ಸೆನೆನಾ ಮಗ ರಾಬೀನ್ ಹಾಗೂ ಸೊಸೆ ಸರಳಾ ಮೇರಿಗೆ ಮಗು ಜನಿಸಿದೆ ಎನ್ನುವಂತೆ ನಗರಸಭೆಯಲ್ಲಿ ನಕಲಿ ಜನನ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದಾರೆ. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಭಾನುವಾರ ಮಡಿಕೇರಿಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಮಗುವನ್ನು ಮಾರಾಟ ಮಾಡಿದ್ದ ವೈದ್ಯರಾದ ಡಾ.ರಾಜೇಶ್ವರಿ, ಡಾ.ನವೀನ್ ಹಾಗೂ ಅಶ್ವಿನಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದ ಮೇರಿ, ರಮ್ಯ, ಕವಿತಾ ಹಾಗೂ ಮಗು ತೆಗೆದುಕೊಂಡ ಸೆನೆನಾ ಆಕೆಯ ಮಗ ರಾಬೀನ್, ಸೊಸೆ ಸರಳಾ ಮೇರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಡಿ.27 ರಂದು ಸೆನೆನಾ ಮನೆಗೆ ತೆರಳಿ ಪರಿಶೀಲಿಸಿದ್ದು, 4 ತಿಂಗಳ ಗಂಡು ಮಗು ಪತ್ತೆಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ವೈದ್ಯ ದಂಪತಿ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • 2 ಬಾರಿ ಆಪರೇಷನ್ ಮಾಡಿದ್ರೂ ಯುವತಿ ಸಾವು

    2 ಬಾರಿ ಆಪರೇಷನ್ ಮಾಡಿದ್ರೂ ಯುವತಿ ಸಾವು

    ಹೈದರಾಬಾದ್: ವೈದ್ಯರ ನಿರ್ಲಕ್ಷ್ಯದಿಂದ ಮಗಳು ಮೃತಪಟ್ಟಿದ್ದಾಳೆಂದು ಕುಟುಂಬದವರು ಆಸ್ಪತ್ರೆಯ ಮುಂದೆ ಯುವತಿಯ ಮೃತದೇಹವಿಟ್ಟು ಪ್ರತಿಭಟನೆ ಮಾಡಿರುವ ಘಟನೆ ನಗರದ ಮಿಯಾಪುರದಲ್ಲಿ ನಡೆದಿದೆ.

    ಪೂಜಿತಾ(18) ಮೃತ ಯುವತಿ. ಈ ಘಟನೆ ಮಂಗಳವಾರ ನಡೆದಿದ್ದು, ಮದಿನಗುಡ ಅರ್ಚನಾ ಆಸ್ಪತ್ರೆಯ ಮುಂದೆ ಮೃತ ದೇಹವಿಟ್ಟುಕೊಂಡು ಪ್ರತಿಭಟನೆ ಮಾಡಿದ್ದರು.

    ಮೃತ ಪೂಜಿತಾ ಕದ್ದನೂರ್ ಗ್ರಾಮದ ಪಾಂಡು ಮತ್ತು ಕವಿತಾ ದಂಪತಿಯ ಪುತ್ರಿಯಾಗಿದ್ದು, ಶ್ರೀಚೈತನ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಹೊಟ್ಟೆಯ ನೋವಿನಿಂದ ಬಳಲುತ್ತಿದ್ದ ಪೂಜಿತಾಳನ್ನು ಡಿಸೆಂಬರ್ 26 ರಂದು ಪಟಂನ್‍ಚೆರುವು ಸಾಯಿ ಗಣೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದರು. ಅಲ್ಲಿ ಈಕೆಯನ್ನು ಅರ್ಚನಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ಕೂಡಲೇ ಪೋಷಕರು ಅರ್ಚನಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅದೇ ರಾತ್ರಿ ವೈದ್ಯರು ಅಪೆಂಡಿಕ್ಸ್ ಆಪರೇಷನ್ ಮಾಡಿದ್ದಾರೆ. ಎರಡು ದಿನಗಳ ನಂತರ ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸಿದ್ದರು. ಆದರೆ ಸೋಮವಾರ ರಾತ್ರಿ ಮತ್ತೆ ಯುವತಿಗೆ ಆಪರೇಷನ್ ಮಾಡಿದ್ದಾನೆ. ಮಂಗಳವಾರ 11 ಗಂಟೆವರೆಗೂ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಅರ್ಚನಾ ಆ ಬಳಿಕ ಸಾವನ್ನಪ್ಪಿದ್ದಳು. ಬಿಪಿ ಹೆಚ್ಚಾದ ವೇಳೆ ವೈದರು ಶಸ್ತ್ರಚಿಕಿತ್ಸೆ ನಡೆಸಿದ್ದೆ ತಮ್ಮ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ವೈದ್ಯರು ಪೋಷಕರ ಆರೋಪವನ್ನು ಅಲ್ಲಗೆಳೆದಿದ್ದು,  ಅಪೆಂಡಿಕ್ಸ್ ನ ಸೋಂಕು ಹೆಚ್ಚಾಗಿದ್ದ ಕಾರಣ ಯುವತಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಮಿಯಾಪುರ ಪೊಲೀಸರು ಸ್ಥಳಕ್ಕೆ ಬಂದು ಮೃತ ಯುವತಿಯ ಕುಟುಂಬದವರನ್ನು ಸಮಾಧಾನ ಮಾಡಿದ್ದಾರೆ. ಈ ಕುರಿತು ಮಿಯಾಪುರ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.