Tag: doctors

  • ಬೆಂಗ್ಳೂರಿನಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಶಂಕೆ- ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿ ಮಂದಿ

    ಬೆಂಗ್ಳೂರಿನಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಶಂಕೆ- ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿ ಮಂದಿ

    ಬೆಂಗಳೂರು: ಕೊರೊನಾ ವೈರಸ್ ಶಂಕೆಯಿಂದ ದಾಖಲಾಗಿದ್ದ ನಾಲ್ವರ ವರದಿ ನೆಗೇಟಿವ್ ಬಂದಿದ್ದು, ಇದರಿಂದ ಸಿಲಿಕಾನ್ ಸಿಟಿ ಮಂದಿಗೆ ಇದ್ದ ಕೊರೊನಾ ಭಯ ಕೊಂಚ ದೂರವಾಗಿದೆ.

    ಮಂಗಳವಾರ ಒಂದೇ ದಿನ ನಾಲ್ಕು ಜನರನ್ನು ಕೊರೊನಾ ಸೊಂಕು ತಗುಲಿರುವ ಲಕ್ಷಣಗಳು ಕಂಡ ಬಂದಿದ್ದು, ಬೆಂಗಳೂರಿನ ಜನರಿಗೆ ಆತಂಕ ಮೂಡಿಸಿತ್ತು. ಟೆಕ್ಕಿಯ ಸಂಪರ್ಕದಲ್ಲಿದ್ದ ರೂಂ ಮೇಟ್, ಟೆಕ್ಕಿಯ ಸಹದ್ಯೋಗಿ, ಸೌದಿಯಿಂದ ಹಾಗೂ ಜಪಾನ್ ನಿಂದ ಭಾರತಕ್ಕೆ ಹಿಂತಿರುಗಿ ಬಂದಿದ್ದ ವ್ಯಕ್ತಿಗಳಲ್ಲಿ ಕೊರೊನಾ ಸೊಂಕು ತಗುಲಿರುವ ಲಕ್ಷಣಗಳ ಮೇಲೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿತ್ತು.

    ಜೊತೆಗೆ ಇರಾನ್ ಮೂಲದ ವಿದ್ಯಾರ್ಥಿಯನ್ನು ಸಹ ಕಳೆದ ನಾಲ್ಕು ದಿನದ ಹಿಂದೆ ದಾಖಲು ಮಾಡಿಕೊಂಡು ರಕ್ತ ಮತ್ತು ಕಫದ ಪರೀಕ್ಷೆ ಮಾಡಿಸಲಾಗಿತ್ತು. ಈತನ ತಾಯಿಗೆ ಕೊರೊನಾ ವೈರಸ್ ಪಾಸಿಟವ್ ಇದ್ದ ಹಿನ್ನೆಲೆಯಲ್ಲಿ ಈತನಿಗೂ ಕೊರೊನಾ ವೈರಸ್ ಸೊಂಕು ತಗುಲಿರುವ ಅನುಮಾನ ಹೆಚ್ಚಾಗಿತ್ತು.

    ಸದ್ಯ ವಿದ್ಯಾರ್ಥಿಯ ವರದಿ ಎರಡು ದಿನಗಳ ಹಿಂದೆಯೇ ಬಂದಿದ್ದು ಕೊರೊನಾ ವೈರಸ್ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ಮಂಗಳವಾರ ದಾಖಲು ಮಾಡಿಕೊಂಡಿದ್ದ ನಾಲ್ಕು ಜನರ ವರದಿ ಬಂದಿದ್ದು, ಯಾರಿಗೂ ಕೋವಿಂಡ್ 19 ವೈರಸ್ ಇಲ್ಲ ಎಂದು ದೃಢಪಟ್ಟಿದೆ. ಬುಧವಾರ ಮೂರು ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಉಳಿದ ಇಬ್ಬರನ್ನ ಇಂದು ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ ಎಂದು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ ನಿರ್ದೇಶಕರಾದ ಡಾ. ನಾಗರಾಜ್ ತಿಳಿಸಿದ್ದಾರೆ.

    ಮಹಾಮಾರಿ ಕೊರೊನಾಗೆ ಇಡೀ ವಿಶ್ವವೇ ಆತಂಕದಲ್ಲಿದೆ. ಮಂಗಳವಾರವಷ್ಟೇ ಹೈದರಾಬಾದ್ ಮೂಲದ ಬೆಂಗಳೂರಿನ ಟೆಕ್ಕಿಗೆ ಕೊರೊನಾ ಇರೋದು ಪಕ್ಕವಾದ ಮೇಲೆ ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆಯಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರಿಗಾಗಿ ವಿಶೇಷ ಪ್ರತ್ಯೇಕ ವಾರ್ಡ್‍ಗಳನ್ನು ತೆರೆದು ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಸೊಂಕು ಇರುವ ಲಕ್ಷಣಗಳು ಕಂಡುಬಂದವರನ್ನು ದಾಖಲಿಸಿಕೊಂಡು ಚಿಕಿತ್ಸೆ ಕೊಡುವುದಕ್ಕೆ ವೈದ್ಯರ ತಂಡವನ್ನು ರೆಡಿ ಮಾಡಿಕೊಳ್ಳಲಾಗಿದೆ.

  • ಏನು ಆಗಿಲ್ಲ, ನಾನು ಫಸ್ಟ್ ಕ್ಲಾಸ್ ಆಗಿ ಇದ್ದೀನಿ: ದರ್ಶನ್

    ಏನು ಆಗಿಲ್ಲ, ನಾನು ಫಸ್ಟ್ ಕ್ಲಾಸ್ ಆಗಿ ಇದ್ದೀನಿ: ದರ್ಶನ್

    ಮೈಸೂರು: ನನಗೆ ಏನು ಆಗಿಲ್ಲ, ನಾನು ಫಸ್ಟ್ ಕ್ಲಾಸ್ ಆಗಿ ಇದ್ದೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಇಂದು ಮುಂಜಾನೆ ಅನಾರೋಗ್ಯದ ಸಮಸ್ಯೆಯಿಂದ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ಡಿಸ್ಚಾರ್ಜ್ ಆಗಿರುವ ಅವರು ನನಗೆ `ಏನೂ ಆಗಿಲ್ಲ ನಾನು ಫಸ್ಟ್ ಕ್ಲಾಸ್ ಆಗಿ ಇದ್ದೀನಿ. ಸ್ವಲ್ಪ ಗ್ಯಾಸ್ಟ್ರಿಕ್ ಆಗಿತ್ತು ಅಷ್ಟೇ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.

    ಇಂದು ಚಿಕಿತ್ಸೆ ಪಡೆದು ಹೊರ ಬಂದ ಡಿ ಬಾಸ್, ಸರಿಯಾದ ಸಮಯಕ್ಕೆ ಊಟ ತಿಂಡಿ ನೋಡಿಕೊಳ್ಳದ ಕಾರಣ ಸ್ವಲ್ಪ ಗ್ಯಾಸ್ಟ್ರಿಕ್ ಆಗಿತ್ತು. ನಮ್ಮ ಅಜೇಯ್ ಹೆಗಡೆ ಡಾಕ್ಟರ್ ಇದ್ದಾರೆ ಅವರು ನೋಡಿಕೊಂಡಿದ್ದಾರೆ. ಈಗ ಏನು ಅಗಿಲ್ಲ. ನಾನು ಆರಾಮಾಗಿ ಇದ್ದೀನಿ ಎಂದು ತಿಳಿಸಿದರು. ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರೋ ಎಂಟರಾಲಜಿಸ್ಟ್ ತಜ್ಞರಾದ ಡಾ.ಅನೂಪ್ ಆಳ್ವಾ ಅವರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದರು.

    ಇಂದು ಮುಂಜಾನೆ 4 ಗಂಟೆ ವೇಳೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ದರ್ಶನ್ ಅವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ದರ್ಶನ್ ಅವರಿಗೆ ಒಂದು ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಇಂದು ಆಸ್ಪತ್ರೆಯಲ್ಲೇ ಡಿ ಬಾಸ್ ಸಂಜೆವರೆಗೂ ಉಳಿದಿದ್ದು ವಿಶ್ರಾಂತಿ ಪಡೆದಿದ್ದಾರೆ.

  • ಒಂದೇ ದಿನ ಬೆಂಗ್ಳೂರಿನ ನಾಲ್ಕು ಮಂದಿಗೆ ಕೊರೊನಾ ಸೋಂಕು ಶಂಕೆ – ಆಸ್ಪತ್ರೆಗೆ ದಾಖಲು

    ಒಂದೇ ದಿನ ಬೆಂಗ್ಳೂರಿನ ನಾಲ್ಕು ಮಂದಿಗೆ ಕೊರೊನಾ ಸೋಂಕು ಶಂಕೆ – ಆಸ್ಪತ್ರೆಗೆ ದಾಖಲು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕಿನ ಶಂಕೆ ವ್ಯಕ್ತವಾಗುತ್ತಿದೆ. ಮಂಗಳವಾರ ಒಂದೇ ದಿನ 97 ಜನರು ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 4 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಟೆಸ್ಟ್ ನಡೆಯುತ್ತಿದೆ. ಮಂಗಳವಾರ ಒಂದೇ ದಿನ 97 ಜನರು ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 4 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ನಾಲ್ಕು ಜನರಲ್ಲಿ ಒಬ್ಬರು ಸೌದಿಯಿಂದ ಆಗಮಿಸಿದ್ದರೆ ಇನ್ನೊಬ್ಬರು ಜಪಾನ್ ದೇಶದಿಂದ ಬಂದಿದ್ದಾರೆ. ಇನ್ನು ಇಬ್ಬರ ಮಾಹಿತಿ ಲಭ್ಯವಾಗಿಲ್ಲ.

    ಒಟ್ಟು ರಾಜೀವ್ ಗಾಂಧಿ ಕೊರೊನಾ ಪ್ರತ್ಯೇಕ ವಾರ್ಡ್‍ನಲ್ಲಿ 5 ಜನ ಸೊಂಕು ಶಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಮಂದಿ ರಕ್ತ ಪರೀಕ್ಷೆ ಮಾಡಲಾಗಿದ್ದು, ವೈದ್ಯರು ವರದಿಗಾಗಿ ಕಾಯುತ್ತಿದ್ದಾರೆ. ಸದ್ಯ ಕಳೆದ 10 ದಿನಗಳಿಂದ ಇರಾನ್‍ನಿಂದ ಬಂದ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

    ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ಜ್ವರ, ನೆಗಡಿ ಆಗಿ ಕೊರೊನಾದಂತ ಲಕ್ಷಣಗಳು ಕಂಡು ಬಂದಿದೆ. ತಕ್ಷಣ ವ್ಯಕ್ತಿ ಮಂಗಳವಾರ ರಾತ್ರಿ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲು ಹೋಗಿದ್ದು, ಈ ವೇಳೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಕೊರೊನಾ ವೈರಸ್ ಆತಂಕದ ನಡುವೆ ಬೆಂಗಳೂರಿಗೆ ತಂಪೆರೆದ ಮಳೆರಾಯ

    ಕೊರೊನಾ ವೈರಸ್ ಆತಂಕದ ನಡುವೆ ಬೆಂಗಳೂರಿಗೆ ತಂಪೆರೆದ ಮಳೆರಾಯ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಕೊರೊನಾ ವೈರಸ್ ಬಗ್ಗೆನೇ ಮಾತು. ಈ ನಡುವೆ ರಾತ್ರಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಹಾಟ್ ಹಾಟ್ ಆಗಿದ್ದ ಬೆಂಗಳೂರು ಸ್ಪಲ್ಪ ಮಟ್ಟಿಗೆ ಕೂಲ್ ಆಗಿದೆ.

    ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಳೆ ಬರುವುದು ತುಂಬಾನೇ ಕಡಿಮೆ. ಆದರೆ ಮಾರ್ಚ್ ಮೊದಲ ವಾರದಲ್ಲೇ ಮಳೆಯಾಗಿರುವುದು ಸಿಲಿಕಾನ್ ಸಿಟಿ ಮಂದಿಗೆ ಕೂಲ್ ಕೂಲ್ ವಾತವಾರಣ ನಿರ್ಮಾಣ ಮಾಡಿದೆ. ಈ ಖುಷಿಯ ನಡುವೆಯೂ ಒಂದಷ್ಟು ಮಹಾಮಾರಿ ಕೊರೊನಾ ವೈರಸ್ ಆತಂಕಕ್ಕೆ ಕಾರಣವಾಗಿದೆ.

    ಬೆಂಗಳೂರು ಸೇರಿದಂತೆ ವೈರಸ್ ಹರಡುವ ಭೀತಿಯಲ್ಲಿರುವ ಜನರಿಗೆ ಮಳೆ ಬಂದಿರೋದು ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಕೊರೊನಾ ವೈರಸ್ ತಂಪಾದ ವಾತವಾರಣದಲ್ಲಿ ಹೆಚ್ಚಾಗಿ ಹರಡುವ ಸಾಧ್ಯತೆ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಕೊರೊನಾ ವೈರಸ್ ಬೇಸಿಗೆಯಲ್ಲಿ ಹರಡುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತಿದ್ದರು. ಆದರೆ ಮಳೆ ಬಂದ ಕಾರಣ, ವಾತವಾರಣದಲ್ಲಿ ಬದಲಾವಣೆ ಆಗುವ ಹಿನ್ನೆಲೆಯಲ್ಲಿ ಮಳೆಯ ಕೂಲ್ ವಾತವಾರಣದ ನಡುವೆ ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.

  • ರಾಜ್ಯದಲ್ಲಿ ಹೆಚ್ಚುತ್ತಿದೆ ಕಿಡ್ನಿ ಸಮಸ್ಯೆ- ರೋಗಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ ಬೆಂಗ್ಳೂರಿಗರು

    ರಾಜ್ಯದಲ್ಲಿ ಹೆಚ್ಚುತ್ತಿದೆ ಕಿಡ್ನಿ ಸಮಸ್ಯೆ- ರೋಗಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ ಬೆಂಗ್ಳೂರಿಗರು

    ಬೆಂಗಳೂರು: ರಾಜ್ಯದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಚಿಕ್ಕ ವಯಸ್ಸಿಗೇನೆ ಕಿಡ್ನಿಗಳನ್ನ ಕಳೆದುಕೊಂಡು ಜನರ ಜೀವನ ನರಕವಾಗುತ್ತಿದೆ. ಅದರಲ್ಲೂ ಕಿಡ್ನಿ ಡ್ಯಾಮೇಜ್ ಮಾಡಿಕೊಳ್ಳೋರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಿದ್ದು, ಪ್ರತಿ ವರ್ಷಕ್ಕೆ 2 ಲಕ್ಷ ಮಂದಿ ಹೊಸ ಕಿಡ್ನಿ ಸಮಸ್ಯೆಯ ರೋಗಿಗಳು ಆಸ್ಪತ್ರೆ ಸೇರುತ್ತಿದ್ದಾರೆ ಎನ್ನಲಾಗಿದೆ.

    ಬದಲಾಗುತ್ತಿರುವ ಜನರ ಜೀವನ ಶೈಲಿಯಿಂದ ಒಂದಲ್ಲ ಒಂದು ಕಾಯಿಲೆಗೆ ತುತ್ತಾಗ್ತಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಮಂದಿ ನೀರನ್ನು ಕುಡಿಯುವುದು ಕೂಡ ಕಮ್ಮಿ, ಹೀಗಾಗಿ ಇತ್ತೀಚೆಗೆ ಸಾರ್ವಜನಿಕರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗ್ತಿದೆ. ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುವ ಪ್ರಕರಣಗಳು ಜಾಸ್ತಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಅದರಲ್ಲೂ ಬೇಸಿಗೆ ಕಾಲ ಬಂದರೆ ಈ ಪ್ರಕರಣಗಳ ಸಂಖ್ಯೆ ಶೇ. 20ರಷ್ಟು ಹೆಚ್ಚಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಅದರಲ್ಲೂ ಕಳೆದ ಹದಿನೈದು ತಿಂಗಳುಗಳಿಂದ ಕಿಡ್ನಿ ಸ್ಟೋನ್ ಇರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ನಗರದ ವಿಕ್ಟೋರಿಯಾ ಆವರಣದಲ್ಲಿರುವ ನೆಪ್ರೋಯುರಾಲಜಿ ಆಸ್ಪತ್ರೆಯಲ್ಲಿ ಬೆಡ್ ಕೂಡ ಸಿಗುತ್ತಿಲ್ಲ. ಇದಕ್ಕೆ ನಮ್ಮ ಜೀವನ ಶೈಲಿಯೇ ಕಾರಣ ಎಂದು ವೈದ್ಯರು ತಿಳಿಸಿದರು.

    ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಒಳ್ಳೆದು:
    ಸಿಕ್ಕಾಪಟ್ಟೆ ಹೆಚ್ಚಾಗ್ತಿದ್ದಾರೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಜಂಕ್ ಫುಡ್, ಬಿಯರ್ ಕುಡಿತದಿಂದ ಕಿಡ್ನಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಹೆಚ್ಚು ನೀರು ಕುಡಿಯುವವರ ಸಂಖ್ಯೆ ಕಡಿಮೆ ಆಗಿರುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಆಗುತ್ತಿರುವ ರೋಗಿಗಳ ಸಂಖ್ಯೆ ಶೇ. 20ರಷ್ಟು ಹೆಚ್ಚಳವಾಗಿದೆ. ಬಿಪಿ, ಶುಗರ್ ಇರುವ ಮಂದಿಗೆ ಕಿಡ್ನಿ ವೈಫಲ್ಯವಾಗುತ್ತಿದೆ. ದಿನಕ್ಕೆ ಕನಿಷ್ಟ 3ರಿಂದ 4 ಲೀಟರ್ ನೀರನ್ನ ಕುಡಿಯಲೇ ಬೇಕು. ಅದರಲ್ಲೂ ಬೇಸಿಗೆ ಬಂದರೆ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಉಪ್ಪಿನಾಂಶ, ರೆಡ್ ಮೀಟ್‍ನಿಂದಲೂ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ನೆಪ್ರೋಯುರಾಲಜಿ ಆಸ್ಪತ್ರೆ ನಿರ್ದೇಶಕ ಡಾ. ಕೇಶವ್ ಮೂರ್ತಿ ಹೇಳಿದರು.

    ಕಳೆದ ಹದಿನೈದು ದಿನಗಳಿಂದ ನೆಪ್ರೋಯುರಾಲಜಿಗೆ ಬರುವ ರೋಗಿಗಳು ಹೆಚ್ಚುತ್ತಿದ್ದಾರೆ. ಇತ್ತೀಚೆಗೆ ನಾವು ತಿನ್ನೋ ಪದಾರ್ಥಗಳೇ ನಮ್ಮ ಕಿಡ್ನಿ ಸಮಸ್ಯೆ ಕಾರಣ. ಸರಿಯಾಗಿ ನೀರು ಕುಡಿಯದ ಪರಿಣಾಮ ಕಿಡ್ನಿಯಲ್ಲಿ ಕಲ್ಲು ಬೆಳೆಯುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ದೇಹದ ಅತ್ಯಮೂಲ್ಯ ಅಂಗವಾಗಿರುವ ಕಿಡ್ನಿಗೆ ಇತ್ತೀಚೆಗೆ ಹೆಚ್ಚು ಸಮಸ್ಯೆ ಆಗ್ತಿದೆ.

  • ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿಯಿಟ್ಟ ಪಾಪಿ ಪತಿ

    ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿಯಿಟ್ಟ ಪಾಪಿ ಪತಿ

    -ಇಡೀ ರಾತ್ರಿ ಮನೆಯಲ್ಲಿ ಕೂಡಿ ಹಾಕಿ ವಿಕೃತಿ

    ಬೆಂಗಳೂರು: ವರದಕ್ಷಿಣೆಯ ದಾಹಕ್ಕೆ ಪಾಪಿ ಪತಿಯೊಬ್ಬ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ ಅಮಾನುಷ ಘಟನೆ ತಡವಾಗಿ ಬೆಳಕಿದೆ ಬಂದಿದೆ.

    ಮಂಡ್ಯದ ಅರೆಚಾಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪತಿಯ ಕ್ರೌರ್ಯಕ್ಕೆ ನಲುಗಿ ಪತ್ನಿ ಗೀತಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಇದೇ ಫೆ. 21ರಂದು ರಾತ್ರಿ 9 ಗಂಟೆಗೆ ಮಂಡ್ಯದ ಅರೆಚಾಕನಹಳ್ಳಿಯಲ್ಲಿ ವರದಕ್ಷಿಣೆ ವಿಚಾರಕ್ಕೆ ಮನೆಯಲ್ಲಿ ಪತಿ, ಗೀತಾಳೊಂದಿಗೆ ಮಹಾದೇವಸ್ವಾಮಿ ಗಲಾಟೆ ತೆಗೆದಿದ್ದಾನೆ. ಇದ್ದಕ್ಕಿದ್ದಂತೆ ಪತ್ನಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ್ದಾನೆ.

    ಬೆಂಕಿಯ ಕೆನ್ನಾಲಿಗೆ ಬೆಂದು ಗೀತಾ ಕಿರುಚಾಡುವಾಗ ಪಾಪಿ ಪತಿಯೇ ನೀರು ಸುರಿದು ಬೆಂಕಿ ನಂದಿಸಿದ್ದಾನೆ. ನಂತರ ಈ ವಿಷಯ ಬೇರೆಯವರಿಗೆ ತಿಳಿಸಿದರೆ ಸಾಯಿಸಿಬಿಡ್ತಿನಿ. ಬೆಳಗ್ಗೆ ಮೈಗೆ ಬ್ಯಾಂಡೇಜ್ ಹಾಕ್ತೇನೆ ಏನಾಗಲ್ಲ ಎಂದು ಹೆದರಿಸಿ, ಆ ರಾತ್ರಿಯೆಲ್ಲಾ ಮನೆಯಲ್ಲೇ ಕೂಡಿ ಹಾಕಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾಗೆ ಚಿಕಿತ್ಸೆ ನಡೆಯುತ್ತಿದೆ. ಶೇ. 40ಕ್ಕೂ ಹೆಚ್ಚರಷ್ಟು ದೇಹ ಸುಟ್ಟಿದ್ದರಿಂದ ವೈದ್ಯರು ಅಸಹಾಯಕತೆ ವ್ಯಕ್ತಪಡಿಸ್ತಿದ್ದಾರೆ.

    ಪತಿ, ಗೀತಾಳಿಗೆ ಬೆಂಕಿ ಹಚ್ಚಿದ ಮರುದಿನ ಬೆಳಗ್ಗೆ ಮನೆಯಿಂದ ವಾಸನೆ ಬರುವುದನ್ನು ಕಂಡು ಪಕ್ಕದ ಮನೆಯವರು ಆಕೆಯ ಮನೆಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯ ಗೀತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯರು ಕೂಡ ತಮ್ಮ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದಾರೆ. ಗೀತಾ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದ್ದ ಒಬ್ಬ ಮಗಳಿಗೆ ಹೀಗಾಯ್ತಾಲ್ಲ ಎಂದು ಹೆತ್ತ ತಾಯಿ ಕರುಳ ಬಳ್ಳಿಯ ಸಂಕಟಪಡುತ್ತಿದ್ದಾರೆ.

    ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಗೀತಾಳ ಆರೋಗ್ಯವನ್ನು ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ. ಸಿ.ಎನ್ ಜಯಂತಿ ವಿಚಾರಿಸಿದರು. ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರುಗಳಾದ ಡಾ. ರಮೇಶ್, ಡಾ. ಸ್ಮಿತಾ ಸೇರಿದಂತೆ ಒಟ್ಟು 12 ವೈದ್ಯರ ತಂಡದಿಂದ ಚಿಕಿತ್ಸೆ ನಡೆಯುತ್ತಿದೆ. ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಾ. ಜಯಂತಿ ಶೇ. 45ರಷ್ಟು ದೇಹ ಸುಟ್ಟಿದೆ. ಸದ್ಯ ಗೀತಾ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ. ಇಂದು ಅವರು ಮಾತನಾಡ್ತಿದ್ದಾರೆ. ಸರ್ಕಾರ ಹಾಗೂ ಆಸ್ಪತ್ರೆಯೇ ಈ ಚಿಕಿತ್ಸೆಯ ವೆಚ್ಚವನ್ನ ಭರಿಸಲಿದೆ. ಎಲ್ಲಾ ವೈದ್ಯರು ಕೂಡ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

  • 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು: ಜನ್ಯ ಆರೋಗ್ಯದ ಬಗ್ಗೆ ವೈದ್ಯರ ಪ್ರತಿಕ್ರಿಯೆ

    2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು: ಜನ್ಯ ಆರೋಗ್ಯದ ಬಗ್ಗೆ ವೈದ್ಯರ ಪ್ರತಿಕ್ರಿಯೆ

    ಮೈಸೂರು: ಮ್ಯಾಜಿಕಲ್ ಮ್ಯೂಸಿಕ ಕಂಪೋಸರ್ ಅರ್ಜುನ್ ಜನ್ಯ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು ಎಂದು ಹೇಳಿದರು.

    ಅರ್ಜುನ್ ಅವರ ಆರೋಗ್ಯದ ಬಗ್ಗೆ ಅಪೋಲೋ ಹೃದ್ರೋಗ ತಜ್ಞ ಆದಿತ್ಯ ಉಡುಪ ಪ್ರತಿಕ್ರಿಯಿಸಿ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಅವರಿಗೆ ಚಿಕಿತ್ಸೆ ನೀಡಿದಾಗ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಸರಿ ಹೋಯಿತು. ಮಂಗಳವಾರ ರಾತ್ರಿ ಮತ್ತೆ ಅವರಿಗೆ ಇಸಿಜಿ ಮಾಡಿಸಿದಾಗ ವರದಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂತು. ಅಲ್ಲದೆ ಅರ್ಜುನ್ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಿಸಿದ್ದೇವು ಎಂದರು. ಇದನ್ನೂ ಓದಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

    ಇಸಿಜಿ ವರದಿ ಬಂದಾಗ ಅರ್ಜುನ್ ಅವರ ಬಳಿ ಹೋಗಿ ಆರೋಗ್ಯ ಹೇಗಿದೆ ಎಂದು ಕೇಳಿದ್ದೇವು. ಆಗ ಅವರು ಹೊಟ್ಟೆ ನೋವು ಕಡಿಮೆ ಆಗಿದೆ. ಆದರೆ ತುಂಬಾ ಬೆನ್ನು ಹಾಗೂ ತಲೆ ನೋವು ಇದೆ, ಸ್ವಲ್ಪ ಎದೆ ನೋವಾಗುತ್ತಿದೆ ಎಂದರು. ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ದರಿಂದ ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದ್ವಿ. ಆಗಲೇ ಶೇ. 99% ಹಾರ್ಟ್ ಬ್ಲಾಕೇಜ್ ಆಗಿದೆ ಎಂಬುದು ತಿಳಿಯಿತು. ತಕ್ಷಣ ಅವರ ಕುಟುಂಬಸ್ಥರು ಜೊತೆ ಮಾತನಾಡಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಚಿಕಿತ್ಸೆ ನಡೆದ ಅವರು ಸಂಪೂರ್ಣ ನಿರಾಳರಾದರು ಎಂದು ಮಾಹಿತಿ ನೀಡಿದರು.

    ಮಂಗಳವಾರ ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ನಿಜವಾಗಿಯೂ 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವು ಸರಿಯಾಗಿದೆ. ಚಿಕಿತ್ಸೆ ಪಡೆದು ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ. ಸದ್ಯಕ್ಕೆ ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ ಎಂದು ಹೃದ್ರೋಗ ತಜ್ಞ ಆದಿತ್ಯ ಉಡುಪ ಹೇಳಿದ್ದಾರೆ.

  • ಸಾವಿನ ದವಡೆಯಿಂದ ಕ್ಯಾನ್ಸರ್ ರೋಗಿ ಪಾರು – 3 ಕೆ.ಜಿ ಗಡ್ಡೆಯನ್ನ ಹೊರ ತೆಗೆದ ವೈದ್ಯರು

    ಸಾವಿನ ದವಡೆಯಿಂದ ಕ್ಯಾನ್ಸರ್ ರೋಗಿ ಪಾರು – 3 ಕೆ.ಜಿ ಗಡ್ಡೆಯನ್ನ ಹೊರ ತೆಗೆದ ವೈದ್ಯರು

    ರಾಯಚೂರು: ಸುಮಾರು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧೆಯ ಹೊಟ್ಟೆಯಿಂದ ಮೂರು ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯನ್ನ ರಾಯಚೂರಿನ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದ್ದು ರಾಯಚೂರಿನಲ್ಲಿ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಬಳಗಾನೂರು ಗ್ರಾಮದ 60 ವರ್ಷದ ವೃದ್ಧೆ ಬೇಗಂ ಬೀ ಸುಮಾರು 8 ತಿಂಗಳುಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಹೊಟ್ಟೆಯಲ್ಲಿದ್ದ ಗಡ್ಡೆಯ ಗಾತ್ರ ನೋಡಿ ಸುಮಾರು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ. ಹುಬ್ಬಳ್ಳಿ, ಬಾಗಲಕೋಟೆ ಸೇರಿ ವಿವಿಧೆಡೆ ತೋರಿಸಿದರು ಪ್ರಯೋಜನವಾಗಿರಲಿಲ್ಲ. ಕುಟುಂಬದವರಿಗೆ ಬೇಗಂ ಬೀಯನ್ನು ಉಳಿಸಿಕೊಳ್ಳುವ ಭರವಸೆಯೇ ಹೊರಟುಹೋಗಿತ್ತು. ವೈದ್ಯರು ಸಹ ಕೈ ಚೆಲ್ಲಿದ್ದರು. ಆದರೆ ಈಗ ರಾಯಚೂರಿನ ಭಂಡಾರಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಮೂರು ಕೆ.ಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ.

    ಇದಕ್ಕಿಂತಲೂ ದೊಡ್ಡ ಗಾತ್ರದ ಗಡ್ಡೆಗಳನ್ನು ಗರ್ಭಕೋಶ ಸೇರಿ ದೇಹದ ಇತರ ಭಾಗದಿಂದ ಯಶಸ್ವಿಯಾಗಿ ಹೊರ ತೆಗೆದ ಉದಾಹರಣೆಗಳಿವೆ. ಆದರೆ ಜಠರ, ಸಣ್ಣಕರಳು ಸೇರಿದಂತೆ ದೇಹದ ಬಹು ಅಂಗಗಳ ರಕ್ತನಾಳಗಳಿಗೆ ತೊಂದರೆಯಾಗದಂತೆ ದೊಡ್ಡದಾಗಿ ಬೆಳೆದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವುದೇ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ತಜ್ಞ ವೈದ್ಯ ಡಾ.ರಮೇಶ್ ಸಿ ಸಾಗರ್ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ.

    ಶಸ್ತ್ರಚಿಕಿತ್ಸೆ ಮಾಡದಿದ್ದರೆ ಕೆಲವೇ ದಿನಗಳಲ್ಲಿ ಪ್ರಾಣಾಪಾಯ ಎದುರಿಸಬೇಕಿದ್ದ ವೃದ್ಧೆ ಈಗ ಗುಣಮುಖಳಾಗುತ್ತಿದ್ದಾರೆ. ರಾಯಚೂರಿನಲ್ಲಿ ಈ ಮೊದಲು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸೌಲಭ್ಯ ಇರಲಿಲ್ಲ. ಬೆಂಗಳೂರು, ಹೈದ್ರಾಬಾದ್‍ಗೆ ಹೋಗಬೇಕಿದ್ದ ರೋಗಿಗಳಿಗೆ ಈಗ ಜಿಲ್ಲೆಯಲ್ಲೇ ಚಿಕಿತ್ಸೆ ಸಿಗುವಂತಾಗಿದೆ.

  • ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಮಗು ಆರೋಗ್ಯವಾಗಿ ಡಿಸ್ಚಾರ್ಜ್

    ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಮಗು ಆರೋಗ್ಯವಾಗಿ ಡಿಸ್ಚಾರ್ಜ್

    ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಮಗು ಆರೋಗ್ಯವಾಗಿ ಇಂದು ಡಿಸ್ಚಾರ್ಜ್ ಆಗಿದೆ.

    ಮಗು ಸೈಫುಲ್ ಅಝ್ಮಾನ್‍ನ ಓಪನ್ ಹಾರ್ಟ್ ಸರ್ಜರಿ ಮಾಡುವಲ್ಲಿ ಯಶಸ್ವಿಯಾಗಿರುವ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಇಂದು ಮಗು ಹಾಗೂ ಪೋಷಕರನ್ನು ಇಂದು ಆತ್ಮೀಯವಾಗಿ ಆಸ್ಪತ್ರೆಯಿಂದ ಕಳುಹಿಸಿದರು. ಇದನ್ನೂ ಓದಿ: ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ

    ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್, ಫೆಬ್ರವರಿ 6ರಂದು 40 ದಿನದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. 7ರಂದು 12 ಜನರ ವೈದ್ಯರ ತಂಡದಿಂದ ಆಪರೇಷನ್ ಮಾಡಲಾಯಿತು. ಬಹಳ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಆಪರೇಷನ್ ಮಾಡಲಾಗಿತ್ತು. ಮಗುವಿನ ಹೃದಯದ ಎಡಭಾಗಕ್ಕೆ 4 ರಕ್ತನಾಳಗಳು ಕನೆಕ್ಟ್ ಆಗಬೇಕಿತ್ತು. ಆದರೆ ಬಲಭಾಗಕ್ಕೆ ಕನೆಕ್ಟ್ ಆಗಿತ್ತು. ಹೀಗಾಗಿ ಈ ಚಿಕಿತ್ಸೆ ಸವಾಲಾಗಿತ್ತು. ಆದರೆ ನಮ್ಮ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ. ಮಗು ಕೂಡ ಆರೋಗ್ಯವಾಗಿದೆ ಎಂದರು.

    ಮಗುವಿನ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ಖರ್ಚಾಗಿದೆ. ಇದರಲ್ಲಿ ಬಿಪಿಎಲ್ ಕ್ಯಾಟಗರಿಯಿಂದ 1,20,000 ಬಿಪಿಎಲ್ ಕ್ಯಾಟಗರಿಯಿಂದ ಸಿಕ್ಕಿದೆ. ಉಳಿದ ಹಣವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ. ಮಗುವಿನ ಶಸ್ತ್ರಚಿಕಿತ್ಸೆಯ ಖರ್ಚು ಸಂಪೂರ್ಣವಾಗಿ ಉಚಿತವಾಗಿದ್ದು, ಪೋಷಕರು ಈ ಚಿಕಿತ್ಸೆಯಿಂದ ಖುಷಿಯಾಗಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಮಗುವಿನ ಪೋಷಕರು, ಮಂಗಳೂರಿಂದ ಬೆಂಗಳೂರಿಗೆ ಕರೆದುಕೊಂಡು ಬರುವಾಗ ಮಗುವಿನ ಜೀವದ ಮೇಲೆ ಆಸೆ ಕೈ ಬಿಟ್ಟಿದ್ದೇವು. ಆದರೆ ವೈದ್ಯರು ನಮ್ಮ ಮಗುವನ್ನು ಉಳಿಸಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ವೈದ್ಯರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯೇ ಎಂದು ವೈದ್ಯರ ಕಾರ್ಯವನ್ನ ಶ್ಲಾಘಿಸಿದರು.

  • 11 ತಿಂಗಳಿನಿಂದ ಸರ್ಕಾರಿ ವೈದ್ಯರಿಗೆ ವೇತನ ನೀಡದ ರಾಜ್ಯ ಸರ್ಕಾರ

    11 ತಿಂಗಳಿನಿಂದ ಸರ್ಕಾರಿ ವೈದ್ಯರಿಗೆ ವೇತನ ನೀಡದ ರಾಜ್ಯ ಸರ್ಕಾರ

    – ಮಂಗ್ಳೂರಿನಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಸರ್ಕಾರಿ ವೈದ್ಯರು

    ಮಂಗಳೂರು: ಕಳೆದ ಹನ್ನೊಂದು ತಿಂಗಳಿನಿಂದ ವೇತವೇ ಆಗದ ಹಿನ್ನೆಲೆಯಲ್ಲಿ ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಸರ್ಕಾರಿ ಆಸ್ಪತ್ರೆಗಳಿಗೆ ಇತ್ತೀಚಿನ ದಿನಗಳಲ್ಲಿ ವೈದ್ಯರು ಬರುವುದೇ ಕಡಿಮೆಯಾಗಿದೆ. ಸಿಇಟಿ ರ‌್ಯಾಂಕ್ ಪಡೆದು ಬರುವ ಕೆಲವು ವೈದ್ಯರು ಮಾತ್ರ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾರೆ. ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಗದೇ ಇರುವುದರಿಂದಲೇ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಬರೋದು ಕಡಿಮೆ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರಿನಲ್ಲಿ ಬುಧವಾರ ವೈದ್ಯರು ವೇತನಕ್ಕಾಗಿ ಬೀದಿಗೆ ಇಳಿದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟ್ ಪಡೆದು ಕಷ್ಟ ಪಟ್ಟು ಓದಿ ವೈದ್ಯರಾದವರು, ಸರ್ಕಾರಿ ನಿಯಮದಂತೆ ನೇಮಕಾತಿಗೆ ಮುನ್ನ ಜಿಲ್ಲಾಸ್ಪತ್ರೆಗಳಲ್ಲಿ ಇಂಟರ್ನ್ ಶಿಪ್ ಮಾಡುಬೇಕು. ಆದರೆ ಮಂಗಳೂರಿನ ಸರ್ಕಾರಿ ವೆನಗಲಾಕ್ ಹಾಗೂ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರು ಕಳೆದ ಹನ್ನೊಂದು ತಿಂಗಳಿಂದ ಸಂಭಾವನೆ ಸಿಗದೆ ಈಗ ವೇತನಕ್ಕಾಗಿ ಧರಣಿ ಕುಳಿತಿದ್ದಾರೆ.

    ಸುಮಾರು 52 ವಿದ್ಯಾರ್ಥಿಗಳು ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಇವರ ಸೇವೆಗಾಗಿ ಮಾಸಿಕ ಸಂಭಾವನೆ ನೀಡುತ್ತದೆ. ಆದರೆ ರಾಜ್ಯ ಸರ್ಕಾರ ಹನ್ನೊಂದು ತಿಂಗಳಿನಿಂದ ಪುಡಿಗಾಸನ್ನೂ ನೀಡದೆ ಸತಾಯಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರಿಗೆ ವೈದ್ಯರು ಮನವಿ ಮಾಡಿದ್ದಾರೆ. ಆದರೆ ಇವರ ಮನವಿಗೆ ಸರ್ಕಾರ ಮಾತ್ರ ಕ್ಯಾರೇ ಅಂದಿರಲಿಲ್ಲ.

    ಸಿಎಂ ಯಡಿಯೂರಪ್ಪ ಅವರು ಕಳೆದ ಡಿಸೆಂಬರ್ 24ರಂದು ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನವಿಗೆ ಸ್ಪಂದಿಸಿ, ವೆನ್ಲಾಕ್ ಆಸ್ಪತ್ರೆಯ ಎಮರ್ಜೆನ್ಸಿ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಆದರೆ ಇನ್ನೂ ಪುಡಿಗಾಸು ಸಿಕ್ಕಿಲ ಒಟ್ಟಿನಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯ ಮತ್ತು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿಯ ಅಸಡ್ಡೆಗೆ ಯುವ ವೈದ್ಯರು ಹೈರಾಣಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಸರಿಯಾಗಿ ವೈದ್ಯರ ನೇಮಕವೇ ಆಗದ ಸಂದರ್ಭದಲ್ಲಿ ಕಷ್ಟ ಪಟ್ಟು ಓದಿ, ವೈದ್ಯರಾದವರು ಸರ್ಕಾರದ ಪುಡಿಗಾಸಿಗಾಗಿ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಬೇಕಾದ ಸ್ಥಿತಿ ಬಂದಿರುವುದು ಮಾತ್ರ ವಿಪರ್ಯಾಸ.