Tag: doctors

  • ಕೈಯಲ್ಲಿ ಲಾಠಿ ಹಿಡಿದು ಬೀದಿ ಬೀದಿಗೆ ತೆರಳಿದ ವೈದ್ಯರು

    ಕೈಯಲ್ಲಿ ಲಾಠಿ ಹಿಡಿದು ಬೀದಿ ಬೀದಿಗೆ ತೆರಳಿದ ವೈದ್ಯರು

    ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಹಿಡಿದು ಅನಗತ್ಯವಾಗಿ ಮನೆಯಿಂದ ಹೊರ ಬಂದವರಿಗೆ ಲಾಠಿ ಏಟು ಕೊಡುತ್ತಿದ್ದಾರೆ. ಇತ್ತ ವೈದ್ಯರು ಕೂಡ ಲಾಠಿ ಹಿಡಿದು ಜಾಗೃತಿ ಮೂಡಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನಲ್ಲಿ ವೈದ್ಯರು ಲಾಠಿ ಹಿಡಿದು ಜಾಗೃತಿ ಮೂಡಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಜನರಿಗೆ ಅರಿವು ಮೂಡಿಸಲು ಬೀದಿ ಬೀದಿಗೆ ವೈದ್ಯರು ತೆರಳಿದ್ದರು.

    ತ್ಯಾಮಗೊಂಡ್ಲು ಪೊಲೀಸ್ ಇಲಾಖೆಯ ಜೊತೆಗೆ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಸೇರಿದಂತೆ ವೈದ್ಯರ ತಂಡ ಕೈಯಲ್ಲಿ ಲಾಠಿ ಹಿಡಿದು ತ್ಯಾಮಗೊಂಡ್ಲುವಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದಾರೆ. ಅಲ್ಲದೇ ಪ್ರತಿಯೊಂದು ಮನೆಗೂ ತೆರಳಿ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತ್ಯಾಮಗೊಂಡ್ಲು ಪೊಲೀಸರ ಜೊತೆ ವೈದ್ಯರ ಜಂಟಿ ಕಾರ್ಯಾಚರಣೆ ಮಾಡಿದ್ದು, ವಿಶೇಷವಾಗಿತ್ತು.

  • ಸಲಕರಣೆ ಸಾಲಲ್ಲ, ಕೂಡಲೇ ಚಿಕ್ಕಮಗಳೂರನ್ನು ಲಾಕ್‍ಡೌನ್ ಮಾಡಿ: ಐಎಂಎ ವೈದ್ಯರ ಮನವಿ

    ಸಲಕರಣೆ ಸಾಲಲ್ಲ, ಕೂಡಲೇ ಚಿಕ್ಕಮಗಳೂರನ್ನು ಲಾಕ್‍ಡೌನ್ ಮಾಡಿ: ಐಎಂಎ ವೈದ್ಯರ ಮನವಿ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರನ್ನು ಈ ಕೂಡಲೇ ಲಾಕ್‍ಡೌನ್ ಮಾಡುವುದು ಒಳ್ಳೆಯದು, ಕೂಡಲೇ ಲಾಕ್‍ಡೌನ್ ಮಾಡಿ ಪರಿಸ್ಥಿತಿ ತುಂಬಾ ಕೈ ಮೀರಿ ಹೋಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಂಘದ ವೈದ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

    ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡನ್ನೂ ಸೇರಿಸಿದ್ರು ಜಿಲ್ಲೆಯಲ್ಲಿ ಇರುವುದು ಹತ್ತೇ ಹತ್ತು ವೆಂಟಿಲೇಟರ್. ಉದಾಹರಣೆಗೆ ಹೇಳೋದಾದ್ರೆ, ನಗರದಲ್ಲಿ ಒಂದೂವರೆ ಲಕ್ಷ ಜನ ಎಂದು ಭಾವಿಸಿ, ಶೇ. 10ರಷ್ಟು ಜನಕ್ಕೆ ಇನ್ಫೆಕ್ಟ್ ಆದ್ರು 15 ಸಾವಿರ ಜನ ಆಗ್ತಾರೆ. ಅವರಲ್ಲಿ ಒಂದು ಪರ್ಸೆಂಟ್ ಜನಕ್ಕೆ ರೆಸ್ಪಿರೇಟರ್ ಪ್ರಾಬ್ಲಂ ಆದ್ರು 150 ಜನ ಆಗ್ತಾರೆ. ನಮ್ಮಲ್ಲಿ ಇರೋದು 10 ವೆಂಟಿಲೇಟರ್. ಬಂದವರೆಲ್ಲರನ್ನೂ ಹಾಸನ, ಮಂಗಳೂರು ಕಳುಹಿಸಲು ಸಾಧ್ಯವಿಲ್ಲ. ಹಾಗಾಗಿ ಕೂಡಲೇ ಜಿಲ್ಲೆಯನ್ನು ಲಾಕ್‍ಡೌನ್ ಮಾಡೋದು ಒಳ್ಳೆಯದು ಎಂದು ವೈದ್ಯರು ಮನವಿ ಮಾಡಿದ್ದಾರೆ.

    ಸೋಂಕಿತರ ಸಂಖ್ಯೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಡಿಟೆಕ್ಟ್ ಆಗಿಲ್ಲ. ಜನ ಹೇಗೆ ಬೇಕು ಹಾಗೇ ಓಡಾಡಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರಿದ್ರೆ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಚಿಕ್ಕಮಗಳೂರನ್ನು ಲಾಕ್ ಡೌನ್ ಮಾಡೋದು ಒಳ್ಳೆಯದು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ. ಈಗ ಇರೋ ಹತ್ತು ವೆಂಟಿಲೇಟರ್‍ಗಳ ಜೊತೆ ಇನ್ನತ್ತು ವೆಂಟಿಲೇಟರ್ ಬಂದ್ರೆ ಹೇಗೋ ನಿಭಾಯಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಅಲ್ಲದೆ ಸಿಬ್ಬಂದಿಗಳ ಕೊರತೆ ಇಲ್ಲ, ವೈದ್ಯರು ಇದ್ದಾರೆ. 50-100 ಜನಕ್ಕೆ ಸಮಸ್ಯೆಯಾದರೆ ನಿಬಾಯಿಸಬಹುದು. ಜಾಸ್ತಿಯಾದರೆ ಕಷ್ಟ. ಏನೂ ಮಾಡಲು ಆಗಲ್ಲ. ಹಾಗಾಗಿ ಕೂಡಲೇ ಜಿಲ್ಲೆಯನ್ನ ಲಾಕ್‍ಡೌನ್ ಮಾಡೋದು ಒಳ್ಳೆಯದು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

  • ‘ರಾಜ್ಯವನ್ನು ಸಂಪೂರ್ಣ ಶಟ್ ಡೌನ್ ಮಾಡಿ’- ಸಿಎಂಗೆ ವೈದ್ಯರ ಸಲಹೆ

    ‘ರಾಜ್ಯವನ್ನು ಸಂಪೂರ್ಣ ಶಟ್ ಡೌನ್ ಮಾಡಿ’- ಸಿಎಂಗೆ ವೈದ್ಯರ ಸಲಹೆ

    – ಕೊರೊನಾ ಸಂಬಂಧ ವೈದ್ಯರ ಜೊತೆ ಸಿಎಂ ಸಭೆ
    – ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ನಿಗಾ ಇಡುವುದೇ ಸಮಸ್ಯೆ

    ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಿಎಂ ಯಡಿಯೂರಪ್ಪ ಅವರು ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ.

    ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರನ್ನು ಸಿಎಂ ಮನವಿ ಮಾಡಿದರು. ಈ ವೇಳೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್‍ನಲ್ಲಿ ಇಡುವುದೇ ದೊಡ್ಡ ಸವಾಲು. ಹೀಗಾಗಿ ಸಂಪೂರ್ಣ ಶಟ್ ಡೌನ್ ಮಾಡುವುದೇ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಇದೇ ವೇಳೆ ವೈದ್ಯರು, ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ 30 ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಯವರು ಶೇ. 50ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. 100ಕ್ಕೂ ಹೆಚ್ಚು ವೆಂಟಿಲೇಟರ್‍ಗಳನ್ನು ಒದಗಿಸಲು ಮುಂದೆ ಬಂದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಪ್ರತ್ಯೇಕ ಬ್ಲಾಕ್ ಗುರುತಿಸುವ ಜೊತೆಗೆ ಖಾಸಗಿ ಆಸ್ಪತ್ರೆಯೊಂದನ್ನು ಸಹ ಗುರುತಿಸಲು ಸಹಕರಿಸುವುದಾಗಿ ತಿಳಿಸಿದ್ದಾರೆ.

    ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು “ಮನೆಯಲ್ಲೇ ಇದ್ದು, ಸೋಂಕು ಮುಕ್ತರಾಗಿರಿ” ಎಂಬ ಘೋಷವಾಕ್ಯವನ್ನು ಪಾಲಿಸಬೇಕಾಗಿದೆ. ಕೊರೊನಾ ತಡೆಯಲು, ಸರ್ಕಾರ-ಖಾಸಗಿ ಸಹಭಾಗಿತ್ವವನ್ನು ಬಲಪಡಿಸಲು ತೀರ್ಮಾನಿಸಲಾಯಿತು. ಸರ್ಕಾರ ಕೊರೊನಾ ತಡೆಯುವುದರೊಂದಿಗೆ ಸೋಂಕಿತರ ಚಿಕಿತ್ಸೆಗೂ ಪೂರ್ವ ಸಿದ್ಧತೆ ನಡೆಸುತ್ತಿದೆ. ಸರ್ಕಾರವು ಜನರಿಗೆ ಈ ಸೋಂಕಿನ ಗಂಭೀರತೆಯನ್ನು ಅರಿವು ಮೂಡಿಸಲು ತೀರ್ಮಾನಿಸಿದೆ. ನಗರ ಪ್ರದೇಶದಲ್ಲಿ ವಾಸವಾಗಿರುವ ಜನರು ದಯವಿಟ್ಟು ಇನ್ನೂ ಕೊರೊನಾ ಸೋಂಕು ಮುಕ್ತವಾಗಿರುವ ಹಳ್ಳಿಗಳಿಗೆ ತೆರಳಬಾರದು. ಕೊರೊನಾ ಹರಡುವುದನ್ನು ತಡೆಯಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

    ಸಭೆಯ ತೀರ್ಮಾನಗಳು
    1. ರಾಜ್ಯಾದ್ಯಂತ ಮಾರ್ಚ್ 31ರ ವರೆಗೆ ಮೊನ್ನೆ ತಿಳಿಸಿದ 9 ಜಿಲ್ಲೆಗಳಲ್ಲಿ ಸೆಕ್ಷನ್ 144ನ್ನು ಮುಂದುವರಿಸಲಾಗುವುದು. ಎಲ್ಲ ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
    2. ಸಾರಿಗೆ ಮತ್ತು ಗೃಹ ಇಲಾಖೆಯ ಸಭೆ ನಡೆಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ. ಹೋಮ್ ಕ್ವಾರಂಟೈನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನ
    3. ಜೀವನೋಪಾಯಕ್ಕೆ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಒದಗಿಸಲಾಗುವುದು.
    4. ಬೆಂಗಳೂರು ಕರಗ ಉತ್ಸವ ನಡೆಸಲು ಅವಕಾಶ ಇಲ್ಲ. ದೇವಾಲಯ, ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ.
    5. ಟೆಲಿಕನ್ಸಲ್ಟೇಶನ್ ಗೆ ಅವಕಾಶ. ಚಿಕಿತ್ಸೆ – ಸಲಹೆಗೆ ಹೊರಬರುವ ಅಗತ್ಯ ಇಲ್ಲ.

  • ದುಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಸೋಂಕು ಇಲ್ಲ- ನಿಟ್ಟುಸಿರು ಬಿಟ್ಟ ಕುಟುಂಬ, ವೈದ್ಯರು

    ದುಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಸೋಂಕು ಇಲ್ಲ- ನಿಟ್ಟುಸಿರು ಬಿಟ್ಟ ಕುಟುಂಬ, ವೈದ್ಯರು

    ಉಡುಪಿ: ದುಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಸೋಂಕಿನ ಸೋಂಕಿನ ಲಕ್ಷಣಗಳು ಇಲ್ಲ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಗರ್ಭಿಣಿಯ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮಾರ್ಚ್ 16ರಂದು ಗರ್ಭಿಣಿ ದಾಖಲಾಗಿದ್ದರು. ಆಕೆ ವಿಪರೀತ ಕಫದಿಂದ ನರಳಾಡುತ್ತಿದ್ದರು. ವಾರದ ಹಿಂದೆ ದುಬೈನಿಂದ ಬಂದಿರುವುದರಿಂದ ಗರ್ಭಿಣಿ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಣಿಪಾಲ ಕೆಎಂಸಿಗೆ ಆಕೆಯನ್ನು ಅಡ್ಮಿಟ್ ಮಾಡಿದ್ದರು.

    ಗರ್ಭಿಣಿಯ ಗಂಟಲಿನ ದ್ರವವನ್ನು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ಉಡುಪಿಯಿಂದ ರವಾನಿಸಲಾಗಿತ್ತು. ವೈದ್ಯಕೀಯ ವರದಿ ಉಡುಪಿ ಡಿಎಚ್‍ಒ ಕೈಸೇರಿದ್ದು, ಕೊರೊನ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ಉಲ್ಲೇಖವಾಗಿದೆ. ಇಡೀ ಕರ್ನಾಟಕದಲ್ಲಿ ಇದು ಗಮನ ಸೆಳೆದ ಪ್ರಕರಣವಾಗಿದ್ದು ವೈದ್ಯಕೀಯ ವರದಿ ಕೈಸೇರಿದ ಕೂಡಲೇ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಕೆಎಂಸಿಯ ವೈದ್ಯರು ಮಹಿಳೆಯ ಕಫ ಮತ್ತು ಶೀತ ನಿವಾರಣೆಗಾಗಿ ಚಿಕಿತ್ಸೆಯನ್ನು ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಮಹಿಳೆಯಲ್ಲಿ ಸೋಂಕಿನ ಲಕ್ಷಣ ಇದ್ದ ಕಾರಣ ಆಕೆಯನ್ನು 15 ದಿನ ನಿಗಾದಲ್ಲಿ ಇಡಲು ವೈದ್ಯರು ಸಲಹೆ ಕೊಟ್ಟಿದ್ದಾರೆ.

  • ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ

    ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ

    ನವದೆಹಲಿ: ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ ವೈರಸ್ ತಗುಲಿರುವುದು ವೈದ್ಯಕೀಯ ಪರೀಕ್ಷೆ ದೃಢಪಟ್ಟಿದೆ ಎಂದು ಭಾರತದಿಂದ ಹೋದ ವೈದ್ಯರ ತಂಡವು ತಿಳಿಸಿದೆ.

    ಇರಾನ್‍ಗೆ ತೆರಳಿದ್ದ ಕಾರ್ಗಿಲ್‍ನ 250 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು 800 ಮಂದಿಯ ಭಾರತೀಯ ನಿಯೋಗ ಇರಾನ್‍ಗೆ ತೆರಳಿತ್ತು. ಎಲ್ಲರೂ ಕೊರೊನಾ ಪೀಡಿತ ಇರಾನ್‍ನ ಖಾಮ್ ಎಂಬಲ್ಲಿದ್ದು, ಭಾರತೀಯರ ಚಿಕಿತ್ಸೆಗೆ ಇರಾನ್ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

    ಇರಾನ್‍ನ ಖಾಮ್‍ನಲ್ಲಿರುವ ಹೋಟೆಲ್ ಹಾಗೂ ವಸತಿ ಸೌಕರ್ಯ ಇರುವಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಭಾರತಕ್ಕೆ ಕರೆತರಲು ಭಾರತ ಸರ್ಕಾರವು ಪುಣೆಯ ವೈದ್ಯರ ತಂಡವನ್ನು ಕಳುಹಿಸಿದೆ.

    ಕೊರೊನಾ ವೈರಸ್ ಇಲ್ಲದೆ ಇರುವ ವ್ಯಕ್ತಿಗಳನ್ನು ವೈದ್ಯರು ಬ್ಯಾಚ್‍ಗಳನ್ನು ಮಾಡಿ ಕಳೆದ ವಾರದಿಂದ 200ಕ್ಕೂ ಹೆಚ್ಚು ಭಾರತೀಯರನ್ನು ಭಾರತಕ್ಕೆ ಕಳುಹಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಇರಾನ್‍ನ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವವರೇ ಆಗಿದ್ದಾರೆ.

    ಇರಾನ್‍ನಲ್ಲಿ ಸೋಂಕಿತ ಭಾರತೀಯರಲ್ಲಿ ಅವರ ಸಂಬಂಧಿಕರು ಸೇರಿದ್ದಾರೆ. ಇರಾನ್ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಬಿಕ್ಕಟ್ಟು ಉಲ್ಬಣಗೊಳಿಸಿದೆ ಎಂದು ಕಾರ್ಗಿಲ್‍ನ ವಕೀಲ ಹಾಜಿ ಮುಸ್ತಫಾ ಆರೋಪಿಸಿದ್ದಾರೆ.

    ಇರಾನ್‍ನಲ್ಲಿ 700ಕ್ಕೂ ಹೆಚ್ಚು ಜನರು ಕೊರೊನಾ ವೈರಸ್‍ಗೆ ಬಲಿಯಾಗಿದ್ದು, ಸುಮಾರು 14,000 ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಒಟ್ಟು 234 ಭಾರತೀಯರನ್ನು ಇರಾನ್‍ನಿಂದ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಇಟಲಿಯಲ್ಲಿ ನಿನ್ನೆ ಒಂದೇ ದಿನ 349 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 2,158 ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ಮೃತರ ಸಂಖ್ಯೆ ಡಬಲ್ ಆಗಿದೆ. ಮುಂದಿನ 15 ದಿನಗಳ ಕಾಲ ಮನೆಯಿಂದ ಯಾರು ಹೊರಗೆ ಬರಬಾರದು ಎಂದು ಫ್ರಾನ್ಸ್ ಸರ್ಕಾರ ಆದೇಶ ನೀಡಿದೆ.

    ಯುರೋಪ್‍ನ ಬಹುತೇಕ ದೇಶಗಳು ಪ್ರಜೆಗಳಿಗೆ ನಿರ್ಬಂಧ ಹೇರಿದೆ. ಸ್ಪೇನ್‍ನಲ್ಲಿ ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. 10 ಸಾವಿರ ಮಂದಿಗೆ ಸೋಂಕು ತಗುಲಿದೆ. 350 ಮಂದಿ ಬಲಿ ಆಗಿದ್ದಾರೆ. ಅಮೆರಿಕದಲ್ಲಿ 90ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದು, ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ. ಪಾಕಿಸ್ತಾನದಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನೂರು ದಾಟಿದೆ.

    ಕೊರೊನಾ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಬಹುದು ಎಂಬ ಆತಂಕವನ್ನು ಟ್ರಂಪ್ ಹೊರಹಾಕಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದೆ. ರಷ್ಯಾ, ಚಿಲಿ, ಉಕ್ರೇನ್, ಪೆರು ದೇಶಗಳು ವಿದೇಶಿಯರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಚೀನಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಆದರೆ ವಿದೇಶಿಯರಿಂದ ಸೋಂಕು ಹಬ್ಬಬಹುದು ಎಂಬ ಭಯದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಭದ್ರತಾ ಮಂಡಳಿಗೆ ಸಂಬಂಧಿಸಿದ ಎಲ್ಲಾ ಸಭೆಗಳನ್ನು ರದ್ದು ಮಾಡಲಾಗಿದೆ.

  • ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ, ಸುಳ್ಳು ಸುದ್ದಿ ಹರಡಿಸಬೇಡಿ: ವೈದ್ಯರ ಮನವಿ

    ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ, ಸುಳ್ಳು ಸುದ್ದಿ ಹರಡಿಸಬೇಡಿ: ವೈದ್ಯರ ಮನವಿ

    ಬೆಳಗಾವಿ/ಚಿಕ್ಕೋಡಿ: ವೈದ್ಯ ಓರ್ವರಿಗೆ ಕೊರೊನಾ ರೋಗ ಬಂದಿದೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಎಲ್ಲ ವೈದ್ಯರು ಪತ್ರಿಕಾಗೋಷ್ಠಿ ನಡೆಸಿ ನಮ್ಮಲ್ಲಿ ಯಾರಿಗೂ ಕೊರೊನಾ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಐಎಂಎ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು, ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ. ಈ ಬಗ್ಗೆ ಯಾರು ಸುಳ್ಳು ಸುದ್ದಿ ಹರಡದಂತೆ ವೈದ್ಯರು ಮನವಿ ಮಾಡಿಕೊಂಡರು.

    ಕೊರೊನಾಗೆ ಯಾರು ಹೆದರುವ ಅವಶ್ಯಕೆತೆಯಿಲ್ಲ. ಕೊರೊನಾ ಹೇಗೆ ಔಷಧಿ ಕಂಡು ಹಿಡಿದಿಲ್ಲವೋ ಅದೇ ರೀತಿ ಡೆಂಗ್ಯೂ, ಎಚ್1ಎನ್1 ಸೇರಿದಂತೆ ಅನೇಕ ರೋಗಗಳಿಗೆ ಇನ್ನೂ ಔಷಧಿ ಕಂಡು ಹಿಡಿಯಲು ಆಗಿಲ್ಲ. ಕೇವಲ ಸುಪ್ಪೋರ್ಟಿವ್ ಔಷಧಿ ನೀಡಿ ಈ ರೋಗಗಳ ರೋಗಿಗಳನ್ನು ಗುಣಮುಖರಾಗುತ್ತಾರೆ. ಅದೇ ರೀತಿ ಕೊರೊನಾಗೂ ಔಷಧಿ ನೀಡುವುದರಿಂದ ಶೇ. 97 ರೋಗಿಗಳು ಗುಣಮುಖರಾಗುತ್ತಾರೆ. ಕೊರೊನಾ ರೋಗಕ್ಕೂ ಈ ಮಟ್ಟಿಗೆ ಹೆದರುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಜನರಲ್ಲಿ ಮನವಿ ಮಾಡಿಕೊಂಡರು.

    ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲೂಕಾ ಆರೋಗ್ಯಾಧಿಕಾರಿ ಡಾ. ವಿ.ಬಿ ಶಿಂಧೆ, ಖ್ಯಾತ ವೈದ್ಯ ಡಾ. ಶ್ರೀಧರ ಕುಲಕರ್ಣಿ, ಡಾ. ರೋಹಿಣಿ ಕುಲ್ಕರ್ಣಿ, ಡಾ. ಪದ್ಮರಾಜ ಪಾಟೀಲ, ಡಾ. ವಿ.ಬಿ ನೂಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಬೆಳಗ್ಗೆಯಿಂದ ಸಂಜೆಯವರೆಗೆ ಬಾಣಂತಿಯರನ್ನ ಬಿಸಿಲಿನಲ್ಲಿ ಕಾಯಿಸಿದ ವೈದ್ಯರು: ಪುಟ್ಟ ಕಂದಮ್ಮಗಳ ಪರದಾಟ

    ಬೆಳಗ್ಗೆಯಿಂದ ಸಂಜೆಯವರೆಗೆ ಬಾಣಂತಿಯರನ್ನ ಬಿಸಿಲಿನಲ್ಲಿ ಕಾಯಿಸಿದ ವೈದ್ಯರು: ಪುಟ್ಟ ಕಂದಮ್ಮಗಳ ಪರದಾಟ

    – ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ವೈದ್ಯರ ಮಹಾ ನಿರ್ಲಕ್ಷ್ಯ
    – ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರತಿ ಬುಧವಾರ ನಿಗದಿಯಾಗಿದ್ದರೂ ಬೇಜವಾಬ್ದಾರಿ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ವೈದ್ಯಕೀಯ ಸೇವೆ ಹಳ್ಳ ಹಿಡಿದಿದೆ. ರಾಯಚೂರಿನಲ್ಲಿ ವೈದ್ಯರಿಗೆ ಬಾಣಂತಿಯರು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದೇ ಅಮಾನವೀಯತೆ ಮೆರೆದಿದ್ದಾರೆ. ಪುಟ್ಟ ಕಂದಮ್ಮಗಳೊಂದಿಗೆ ಬೆಳಗ್ಗೆಯಿಂದ ಸಂಜೆವರೆಗೆ ಕಾಯುತ್ತ ಕುಳಿತ ಬಾಣಂತಿಯರ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ.

    ರಾಯಚೂರು ನಗರದಲ್ಲಿರುವ ನಗರ ಪ್ರಸೂತಿ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಈ ಮೊದಲು ಬಾಣಂತಿಯರಿಗೆ ಶಸ್ತ್ರ ಚಿಕಿತ್ಸೆಗಾಗಿ ಸಮಯ ನಿಗಿದಿ ಮಾಡದೆ ಇರುವುದರಿಂದ ಪ್ರತಿವಾರ ನೂರಾರು ಬಾಣಂತಿಯರು ಶಸ್ತ್ರ ಚಿಕಿತ್ಸೆಗೆ ಬರುತ್ತಿದ್ದರು. ವಾರದಲ್ಲಿ ಕೇವಲ 30 ಜನರಿಗೆ ಮಾತ್ರ ಆಪರೇಷನ್ ಮಾಡುವದರಿಂದ ಉಳಿದವರು ವಾಪಸ್ ಆಗುತ್ತಿದ್ದರು. ಆಗಲು ಬಾಣಂತಿಯರ ಕಷ್ಟ ಹೇಳತೀರದಾಗಿತ್ತು. ಆ ನಂತರ ಪ್ರತಿ ವಾರ ಆಪರೇಷನ್ ಮಾಡಿಸಿಕೊಳ್ಳಲು ಬರುವವರಿಗೆ ಆಶಾ ಕಾರ್ಯಕರ್ತೆಯರ ಮುಖಾಂತರ ಮಾಹಿತಿ ನೀಡಲಾಗುತ್ತಿದೆ. ಅದೇ ರೀತಿ ಈ ಬುಧವಾರ ರಾಯಚೂರು ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಬಂದ 30 ಬಾಣಂತಿಯರು ಪರದಾಡುವಂತಾಗಿತ್ತು.

    ಶಸ್ತ್ರ ಚಿಕಿತ್ಸೆಗಾಗಿ ಬರುವ ತಾಯಂದಿರುವ ಏನು ತಿನ್ನದೆ ಬರಬೇಕು. ಅದರಂತೆ ಬೆಳಗ್ಗೆ ಗಂಟೆಗೆ ಬಂದ ಬಾಣಂತಿಯರಿಗೆ ಆಪರೇಷನ್ ಮಾಡಲು ವೈದ್ಯರು ಬರಲೇ ಇಲ್ಲ. ಇದರಿಂದ ಹಸಿವಿನಿಂದ ಬಾಣಂತಿಯರು ಹಾಗೂ ಶಿಶುಗಳು ಪರದಾಡುವಂತಾಯಿತು. ಆಸ್ಪತ್ರೆಯ ಹೊರಗಡೆ ಟಿನ್ ಶೆಡ್‍ಗೆ, ಮರ ಗಿಡಗಳಿಗೆ ಸೀರೆ ಕಟ್ಟಿಕೊಂಡು ಮಕ್ಕಳನ್ನು ಮಲಗಿಸಬೇಕಾದ ಪರಸ್ಥಿತಿ ಎದುರಿಸಿದ್ದಾರೆ. ಆಸ್ಪತ್ರೆಯಲ್ಲಿ ಕೇಳಿದರೆ ಸಿಬ್ಬಂದಿ ಆಪರೇಷನ್ ಮಾಡುವ ವೈದ್ಯರು ಬಂದಿಲ್ಲ ಅಂತ ಹೇಳಿ ತಲೆಕೆಡಿಸಿಕೊಂಡಿಲ್ಲ. ಇದರಿಂದಾಗಿ ಸಂಜೆ ವೇಳೆ ಬಾಣಂತಿಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಓರ್ವ ವೈದ್ಯ ಬಂದಿದ್ದಾರೆ. ಆದರೆ ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡಿ ಉಳಿದವರನ್ನ ವಾಪಸ್ ಕಳುಹಿಸಲಾಗಿದೆ.

    ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಾಗ ಶಸ್ತ್ರ ಚಿಕಿತ್ಸೆ ಮಾಡುವ ರಿಮ್ಸ್ ವೈದ್ಯ ಶಾಹ ಆಲಂ ಅವರನ್ನು ಸಂಪರ್ಕಿಸಿ ಕಳುಹಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ವೈದ್ಯರು ಕೊನೆಯ ಗಳಿಗೆಯಲ್ಲಿ ಬೇರೆ ಕೆಲಸವಿದೆ ಅಂತ ಆಸ್ಪತ್ರೆಗೆ ಬಂದಿಲ್ಲ. ಮತ್ತೊಬ್ಬ ವೈದ್ಯರನ್ನಾದರೂ ನೇಮಿಸಬೇಕಾದ ತಾಲೂಕು ವೈದ್ಯಾಧಿಕಾರಿ ಡಾ.ಶಾಕೀರ್ ಪ್ರತಿಬಾರಿಯಂತೆ ಈ ಬಾರಿಯೂ ನಿರ್ಲಕ್ಷ್ಯ ಮೆರೆದಿದ್ದಾರೆ. ಹೀಗಾಗಿ ತಾಲೂಕು ವೈದ್ಯಾಧಿಕಾರಿ ಹಾಗೂ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ.

    ಆರೋಗ್ಯ ಸಚಿವರೇ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ಪದೇ ಪದೇ ಇಂತಹ ಘಟನೆಗಳು ಮರುಕಳುಸುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಕೆಲಸ ಮಾಡಬೇಕಿದೆ. ಬಾಣಂತಿಯರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಚೀನಾದಿಂದ ಬಂದ ವ್ಯಕ್ತಿ – ಸ್ಥಳೀಯರಲ್ಲಿ ಆತಂಕ

    ಚೀನಾದಿಂದ ಬಂದ ವ್ಯಕ್ತಿ – ಸ್ಥಳೀಯರಲ್ಲಿ ಆತಂಕ

    ಮಂಗಳೂರು: ಚೀನಾದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

    ಚೀನಾ ದೇಶಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ತಾಯ್ನಾಡಿಗೆ ಮರಳಿದ್ದಾರೆ. ವ್ಯಕ್ತಿ ಇಲ್ಲಿಗೆ ಬಂದಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು.

    ತಪಾಸಣೆಗೆ ಒಳಪಡಿಸಿದಾಗ ವ್ಯಕ್ತಿಯ ದೇಹದಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಅವರ ಮನೆಯ ಪರಿಸರದಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದರಿಂದ ವ್ಯಕ್ತಿ ಬುಧವಾರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಮತ್ತೆ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಹಿಂತಿರುಗಿದ್ದಾರೆ.

    ಚೀನಾದಿಂದ ಆಗಮಿಸಿದ ವ್ಯಕ್ತಿ ಕಡಬಕ್ಕೆ ಆಗಮಿಸಿದ್ದು, ಸ್ಥಳೀಯರು ತಿಳಿಸಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಪಾಸಣೆ ನಡೆಸಲಾಗಿದ್ದು, ಕೊರೊನಾ ವೈರಸ್ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಕಳುಹಿಸಿಕೊಡಲಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ತಿಳಿಸಿದ್ದಾರೆ.

  • ಮೆಕ್ಕಾ ಮದೀನಾಕ್ಕೆ ಹೋಗಿದ್ದ ಮಹಿಳೆಗೆ ಕೊರೊನಾ ಶಂಕೆ

    ಮೆಕ್ಕಾ ಮದೀನಾಕ್ಕೆ ಹೋಗಿದ್ದ ಮಹಿಳೆಗೆ ಕೊರೊನಾ ಶಂಕೆ

    – ಮಣಿಪಾಲ ಕೆಎಂಸಿಗೆ ದಾಖಲು

    ಉಡುಪಿ: ಮಹಾಮಾರಿ ಕೊರೊನಾದ ಲಕ್ಷಣವಿರುವ ಮಹಿಳೆಯನ್ನು ಉಡುಪಿ ಜಿಲ್ಲೆ ಮಣಿಪಾಲ ನಗರದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾದ 68 ವರ್ಷದ ಮಹಿಳೆ, ಕೆಲ ದಿನಗಳ ಹಿಂದೆ ಮೆಕ್ಕಾ ಮದೀನಾ ಪ್ರವಾಸ ಮಾಡಿದ್ದರು. ಧಾರ್ಮಿಕ ಪ್ರವಾಸದ ಸಂದರ್ಭ ಮಹಿಳೆಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಸೌದಿಯ ಆಸ್ಪತ್ರೆಯಲ್ಲಿ ಜ್ವರ- ಕಫ ಮತ್ತು ಶೀತಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿ ಗುಣಮುಖರಾದ ನಂತರ ಮಹಿಳೆ ಬೆಂಗಳೂರಿಗೆ ವಾಪಸ್ಸಾಗಿದ್ದರು. ಬೆಂಗಳೂರಿನಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆಯನ್ನು ಪಡೆದು ಡಿಸ್ಚಾರ್ಜ್ ಆಗಿದ್ದರು.

    ಶಿವಮೊಗ್ಗಕ್ಕೆ ವಾಪಾಸ್ಸಾದಾಗ ಅಲ್ಲೂ ಮತ್ತದೇ ಸಮಸ್ಯ ಬಾಧಿಸಿತ್ತು. ಸಾಗರದ ಖಾಸಗಿ ಆಸ್ಪತ್ರೆಯಲ್ಲೂ ಮಹಿಳೆ ಚಿಕಿತ್ಸೆಯನ್ನು ಪಡೆದಿದ್ದರು. ಆದರೆ ಉಸಿರಾಟದ ಸಮಸ್ಯೆ ಉಲ್ಬಣವಾದ ಕಾರಣ ಮಹಿಳೆಯನ್ನು ಮಣಿಪಾಲದ ಕೆಎಂಸಿಗೆ ಕುಟುಂಬಸ್ಥರು ದಾಖಲು ಮಾಡಿದ್ದಾರೆ. ಜ್ವರ, ಶೀತ, ಸೀನು, ಉಸಿರಾಟ ಸಮಸ್ಯೆ ಮತ್ತು ಎದೆ ನೋವು ಇರುವುದರಿಂದ ಮಹಿಳೆಗಿರುವ ಸಮಸ್ಯೆ ಕೊರೊನಾ ಲಕ್ಷಣದ ಜೊತೆ ತಳಕು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿಯನ್ನು ವ್ಯವಸ್ಥೆ ಮಾಡಿ ಮಹಿಳೆಗೆ ಚಿಕಿತ್ಸೆ ಆರಂಭಿಸಲಾಗಿದೆ.

    ಇದೊಂದು ಶಂಕಿತ ಕೇಸ್ ಆಗಿರುವುದರಿಂದ ಈ ಬಗ್ಗೆ ಈಗಲೇ ಎಲ್ಲಾ ಮಾಹಿತಿ ಕೊಡಲು ಸಾಧ್ಯವಿಲ್ಲ. ಮಹಿಳೆಯ ಗಂಟಲ ದ್ರವವನ್ನು ಬೆಂಗಳೂರಿಗೆ ರವಾನೆ ಮಾಡುತ್ತೇವೆ. ಮೂರು ದಿನಗಳ ನಂತರ ವರದಿ ಬರಬಹುದು ಎಂದು ಉಡುಪಿ ಡಿಎಚ್‍ಒ ಡಾಕ್ಟರ್ ಸುಧೀರ್ ಚಂದ್ರ ಸೋಡಾ ಮಾಹಿತಿ ನೀಡಿದ್ದಾರೆ. ಮಹಿಳೆಗೆ 68 ವಯಸ್ಸಾಗಿರುವುದರಿಂದ ಆಕೆ ವಿದೇಶ ಪ್ರವಾಸ ಮಾಡಿರುವುದರಿಂದ ಉಸಿರಾಟ ಸಮಸ್ಯೆ ಬಂದಿರಬಹುದು, ರೋಗಗಳು ಶೀಘ್ರ ನಿವಾರಣೆ ಆಗುತ್ತಿಲ್ಲ ಎನ್ನಲಾಗಿದೆ.

  • ರಾಜೀವ್ ಗಾಂಧಿ ಐಸೋಲೇಷನ್ ವಾರ್ಡ್‍ನಲ್ಲಿ ವೈದ್ಯರಿಗೆ ಆತಂಕ

    ರಾಜೀವ್ ಗಾಂಧಿ ಐಸೋಲೇಷನ್ ವಾರ್ಡ್‍ನಲ್ಲಿ ವೈದ್ಯರಿಗೆ ಆತಂಕ

    ಬೆಂಗಳೂರು: ಅಮೆರಿಕದಿಂದ ಬಂದ ಟೆಕ್ಕಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ತಂಡ ಆತಂಕದಲ್ಲಿದೆ.

    ಇಷ್ಟು ದಿನ ಟ್ರಿಪಲ್ ಲೇಯರ್ ಮಾಸ್ಕ್ ಹಾಕಿಕೊಂಡು ಪ್ರಾಥಮಿಕ ಪರೀಕ್ಷೆ ಮಾಡುತ್ತಿದ್ದ ವೈದ್ಯರ ತಂಡ ಎನ್ 95 ಮಾಸ್ಕ್ ಬಳಸುತ್ತಿದ್ದಾರೆ. ಜೊತೆಗೆ ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುವ ಎಲ್ಲರಿಗೂ ಎನ್ 95 ಮಾಸ್ಕ್ ಬಳಸುವಂತೆ ತಿಳಿಸಿದ್ದಾರೆ.

    ಪ್ರತಿ ಒಂದು ಗಂಟೆಗೆ ಐಸೋಲೇಷನ್ ವಾರ್ಡ್‍ಗೆ ಕ್ರಿಮಿನಾಶಕ ಬಳಸಿ ಸ್ವಚ್ಚತೆ ಮಾಡುವಂತೆ ಸೂಚಿಸಿದ್ದಾರೆ. ಐಸೋಲೇಷನ್ ವಾರ್ಡ್‍ನಲ್ಲಿ 5 ಜನ ಸೋಂಕು ಶಂಕಿತರು ಇದ್ದು ಇದರಲ್ಲಿ ಈಗಾಗಲೇ ಒಬ್ಬರಿಗೆ ಪಾಸಿಟಿವ್ ಇರುವುದು ದೃಢವಾಗಿತ್ತು. ಟೆಕ್ಕಿಯ ಸ್ನೇಹಿತನಿಗೂ ಪಾಸಿಟಿವ್ ಇರುವುದು ಪಕ್ಕಾ ಆಗಿದ್ದು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಈ ಇಬ್ಬರು ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಉಳಿದ ಮೂವರನ್ನು ಬೇರೆ ಬೇರೆ ವಾರ್ಡ್‍ಗಳಲ್ಲಿ ದಾಖಲು ಮಾಡಿಕೊಂಡಿದ್ದಾರೆ. ಕೊರೊನಾ ಈಗ ವೈದ್ಯರಿಗೂ ಆತಂಕ ಉಂಟು ಮಾಡಿದೆ.

    ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಜನರಲ್ಲಿ ಭಯವನ್ನ ಹೆಚ್ಚು ಮಾಡ್ತಿದೆ. ಈಗಾಗಲೇ ಕರ್ನಾಟಕದಲ್ಲಿ 4 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದರು. ಹಾಗೆಯೇ ಬೆಂಗಳೂರಿನಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.