ಭೋಪಾಲ್: ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಕೀ ಸಿಗದೇ ಹೋಗಿದ್ದಕ್ಕೆ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ ವೃದ್ಧೆಯನ್ನು ಗುರುವಾರ ರಾತ್ರಿ ಉಜ್ಜಯಿನಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದರಿಂದ ಅಲ್ಲಿನ ವೈದ್ಯರು ಆಕೆಯ ಕೊರೊನಾ ಪರೀಕ್ಷೆಗೆ ಮಾದರಿಯನ್ನು ತೆಗೆದುಕೊಂಡ ನಂತರ ಮಾಧವ್ ನಗರದ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.
ಆಕೆಯನ್ನು ಅಲ್ಲಿನಿಂದ ಆರ್.ಡಿ ಗಾರ್ಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ ಎಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 55 ವರ್ಷ ವಯಸ್ಸಿನ ವೃದ್ಧೆಯನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಲಾಕ್ ಆಗಿದ್ದು, ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ.
ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಕೀಯನ್ನು ಹುಡುಕಿದ್ದಾರೆ ಆದರೆ ಸಿಕ್ಕಿಲ್ಲ. ಹಾಗಾಗಿ ಐಸಿಯುನ ಬೀಗ ಮುರಿಯಲಾಗಿದೆ. ಬೀಗ ಮುರಿಯಲು ತಡವಾದ ಕಾರಣ ರೋಗಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬೀಗ ಮುರಿದ ನಂತರ ಆಕೆಯನ್ನು ಐಸಿಯುಗೆ ಸ್ಥಳಾಂತರಿಸಿ ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಜ್ಜಯಿನಿ ಮುಖ್ಯ ವೈದ್ಯಾಧಿಕಾರಿ ಅನುಸುಯಾ ಗವ್ಲಿ ಅವರು, ವೃದ್ಧೆ ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದರು. ನಮ್ಮ ತಜ್ಞರು ಕೊರೊನಾ ಪರೀಕ್ಷೆಗಾಗಿ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದ ಕಾರಣ ವೃದ್ಧೆ ನಿಧನರಾಗಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಉಡುಪಿ: ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ. ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊರೊನಾ ರೋಗಿ ವೈದ್ಯರನ್ನು ತಬ್ಬಿಕೊಳ್ಳುತ್ತಾರೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಧಮ್ಕಿ ಹಾಕಿದ್ದಾರೆ. ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕ್ವಾರಂಟೈನ್‍ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾ ವಿಚಾರದಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಕೊರೊನಾ ಹಬ್ಬಿಸುವ ದುರ್ಬುದ್ಧಿಯವರನ್ನು ಜನತೆಯ ಮುಂದೆ ತೆರೆದಿಡುತ್ತಿದ್ದೇನೆ ಎಂದು ಮಾಜಿ ಸಚಿವ ಯುಟಿ ಖಾದರ್ ಗೆ ತಿರುಗೇಟು ನೀಡಿದರು. ಸಾಧಿಕ್ ನಗರದ ಆಶಾ ಕಾರ್ಯಕರ್ತೆಯ ಮನೆಗೆ ಭೇಟಿ ಕೊಟ್ಟಿದ್ದೇನೆ. ಆಕೆಯ ಸ್ಥಿತಿ ಕಂಡು ನನಗೆ ದುಃಖ ಆಯಿತು ಎಂದರು.
ಕೇರಳ ಕೊರೊನಾ ರೆಡ್ ಜೋನ್ ಏರಿಯಾ ಆಗಿದೆ. ಕಾಸರಗೋಡು ಇಡೀ ದೇಶದ ರೆಡ್ ಜೋನ್ ಏರಿಯಾ. ಕೇರಳದವರು ನಮ್ಮ ರಾಜ್ಯದಲ್ಲಿ ಕೊರೋನಾ ಹಬ್ಬಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಸರಗೋಡಿಗೆ ಚಿಕ್ಕಮಗಳೂರಿನಿಂದ ತರಕಾರಿ ರವಾನೆ ಮಾಡಿದ್ದೇವೆ. ಮಾನವೀಯತೆ ವಿಚಾರದಲ್ಲಿ ನಾವು ಹಿಂದೆ ಮುಂದೆ ನೋಡುವುದಿಲ್ಲ. ಅಗತ್ಯ ಸೇವೆ ಮತ್ತು ವೈದ್ಯಕೀಯ ಸೇವೆ ನೀಡಲು ಸಿದ್ಧವಿದೆ. ವೈದ್ಯರು, ನರ್ಸ್‍ಗಳು ಅಲ್ಲಿಗೆ ಕಳುಹಿಸುತ್ತೇವೆ. ಆದರೆ ಕೇರಳ ಕಾಸರಗೋಡಿನ ಜನ ಕರ್ನಾಟಕಕ್ಕೆ ಬರಬಾರದು. ನಾವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು. ಇಲ್ಲಿನ ವಾಹನ ಹೋಗುವ ಬರುವ ಸಂದರ್ಭದಲ್ಲಿ ಕ್ರಿಮಿನಾಶಕ ಸಿಂಪಡಣೆ ಆಗತ್ಯ ಎಂದು ತಿಳಿಸಿದರು.
ಮೈಸೂರು: ಎರಡು ದಿನಗಳ ಹಿಂದಷ್ಟೇ ನಿರ್ಮಾಣ ಮಾಡಲಾಗಿದ್ದ ಕೆಮಿಕಲ್ ಟನಲ್ ಪ್ರಯೋಜನಕ್ಕೆ ಬಾರದಂತಾಗಿದೆ.
ನಗರದ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಈ ಟನಲ್ ನಿರ್ಮಾಣ ಮಾಡಲಾಗಿತ್ತು. ಜನರಿಗೆ ಈ ಟನಲ್ ಬಳಸಲು ಅಸಡ್ಡೆಯಾದರೆ, ಪಾಲಿಕೆ ಅಧಿಕಾರಿಗಳಿಗೂ ಈ ಬಗ್ಗೆ ಅಸಡ್ಡೆ. ಹೀಗಾಗಿ ಜನರು ಟನಲ್ ಒಳಗೆ ಹೋಗದೆ ಎಂದಿನಂತೆ ನೇರವಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಜನರು ಟನಲ್ ಒಳಗೆ ಹೋದರೆ ಅವರ ಮೈ ಮೇಲೆ ಸ್ಯಾನಿಟೈಸರ್ ಮಾದರಿಯ ನೀರು ಸಿಂಪಡಣೆ ಆಗುತ್ತೆ. ಆಗ ಸಾಮೂಹಿಕವಾಗಿ ಜನರ ಮೇಲಿನ ವೈರಾಣು ನಾಶಕ್ಕೆ ಅನುಕೂಲವಾಗುತ್ತದೆ. ಈ ಉದ್ದೇಶದಿಂದ ಟನಲ್ ಮಾಡಲಾಗಿತ್ತು. ಆದರೆ ಜನರ ಅಸಡ್ಡೆಯಿಂದ, ಅಧಿಕಾರಿಗಳ ಕಾಟಾಚಾರದ ಮನಃಸ್ಥಿತಿಯಿಂದ ಟನಲ್ ಪ್ರಯೋಗ ಎರಡೇ ದಿನಕ್ಕೆ ನಿರುಪಯುಕ್ತವಾಗಿದೆ.
ವೈದ್ಯರಿಗಾಗಿ ವಿಶೇಷ ರಕ್ಷಾ ಕವಚ
ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಆತಂಕದಲ್ಲಿದೆ. ಜ್ವರ, ಕೆಮ್ಮು, ನೆಗಡಿಗೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕ ದೂರು ಮಾಡಲು ಮೈಸೂರಿನ ಅನಘ ಆಸ್ಪತ್ರೆ ವಿಶೇಷ ರಕ್ಷಾ ಕವಚಗಳನ್ನು ರೂಪಿಸಿದೆ. ವೈದ್ಯರು, ನರ್ಸ್, ಸಿಬ್ಬಂದಿ ಮಾಸ್ಕ್ ಮೇಲೆ ರಕ್ಷಾ ಕವಚಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಂತೆ ಎಚ್ಚರವಹಿಸಲಾಗುತ್ತಿದೆ. ಈ ರಕ್ಷಾ ಕವಚಗಳನ್ನು ಆಸ್ಪತ್ರೆಯಲ್ಲೇ ತಯಾರಿಸಲಾಗುತ್ತಿದೆ.
ಮಾಂಸದೂಟ ಮಾಡಬೇಕಷ್ಟೆ
ಭಾನುವಾರ ನಾವು ಮಾಂಸದೂಟ ಮಾಡಬೇಕು ಅಷ್ಟೆ, ನಮಗೆ ಸಾಮಾಜಿಕ ಅಂತರ, ಕೊರೊನಾ ವೈರಸ್ ವಿರುದ್ಧ ಹೋರಾಟ, ಆರೋಗ್ಯ, ಸಮಾಜದ ಆರೋಗ್ಯ ಯಾವುದು ಮುಖ್ಯ ಅಲ್ಲ ಎನ್ನುವಂತೆ ಜನ ವರ್ತಿಸುತ್ತಿದ್ದಾರೆ. ಈ ಮೂಲಕ ಮಾಂಸದೂಟ ಮಾತ್ರ ಮುಖ್ಯ ಎಂಬ ಮನಃಸ್ಥಿತಿಗೆ ಮೈಸೂರಿನ ಜನ ತಲುಪಿದದ್ದು, ಮಾಂಸದ ಮಾರುಕಟ್ಟೆಯಲ್ಲಿ ಸಾಲುಗಟ್ಟಿ ಖರೀದಿ ಮಾಡಿದ್ದಾರೆ. ಕೊರೊನಾ ಪಾಸಿಟಿವ್ ಸಂಖ್ಯೆ ಮೈಸೂರಲ್ಲಿ ದಿನ ದಿನಕ್ಕೂ ಏರುತ್ತಿದೆ. ಜನ ಮಾತ್ರ ಇದನ್ನು ಲೆಕ್ಕಿಸುತ್ತಿಲ್ಲ.
ನವದೆಹಲಿ: ಏಮ್ಸ್ ವೈದ್ಯನ ಪತ್ನಿ ತುಂಬು ಗರ್ಭಿಣಿಯಲ್ಲೂ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಅವರನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ವೈದ್ಯನ ಪತ್ನಿ ಆರೋಗ್ಯಯುತವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಸೋಂಕು ಬಂದಿರುವುದು ಧೃಡಪಟ್ಟಿತ್ತು. ನಂತರ ಅವರ ಮನೆಯವರನ್ನು ತಪಾಸಣೆ ಮಾಡಲಾಗಿತ್ತು. ಆಗ 39 ವಾರಗಳ ತುಂಬು ಗರ್ಭಿಣಿ ವೈದ್ಯನ ಪತ್ನಿಯಲ್ಲೂ ಕೊರೊನಾ ಪಾಸಿಟಿವ್ ಬಂದಿತ್ತು. ತಕ್ಷಣ ಅವರನ್ನು ಪ್ರತ್ಯೇಕವಾಗಿ ವಿಶೇಷ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ವೈದ್ಯನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ. ಮಗುವಿಗೆ ಯಾವುದೇ ಕೊರೊನಾ ಲಕ್ಷಣ ಕಾಣಿಸಿಕೊಂಡಿಲ್ಲ. ಆದರೂ ಮಗುವನ್ನು ಐಸಿಯುನಲ್ಲಿರಿಸಲಾಗಿದೆ. ಮಗುವಿಗೆ ಯಾವುದೇ ಪರೀಕ್ಷೆಯನ್ನು ಮಾಡಿಲ್ಲ ಎಂದು ವೈದ್ಯರಾದ ನೀರ್ಜಾ ಭಟ್ಲಾ ಹೇಳಿದ್ದಾರೆ.
ಇದೊಂದು ಸವಾಲಿನ ಕೇಸಾಗಿತ್ತು. ಯಾಕೆಂದರೆ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಇದ್ದ ಕಾರಣ ನಾವು ತುಂಬಾ ಅಂಶಗಳನ್ನು ಪರಿಗಣಿಸಬೇಕಾಗಿತ್ತು. ಆದರೆ ಏಮ್ಸ್ ನಲ್ಲಿ ಹೆರಿಗೆ ಮಾಡುವುದು ಎಂದು ಮೊದಲೇ ನಿರ್ಧರಿಸಲಾಗಿತ್ತು. ಅದಕ್ಕಾಗಿ ಐಸೋಲೇಷನ್ ರೂಮನ್ನೇ ಆಪರೇಷನ್ ಥಿಯೇಟರ್ ಆಗಿ ಬದಲಾಯಿಸಿದ್ದೆವು. ಅದರಂತೆಯೇ ನಾವು ಸಮಯವನ್ನು ವ್ಯರ್ಥ ಮಾಡದೆ ತಕ್ಷಣ ಅವರಿಗೆ ಹೆರಿಗೆ ಮಾಡಿಸಿದ್ದೇವೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ವಿವಿಧ ವಿಭಾಗಗಳ 10 ಮಂದಿ ವೈದ್ಯರ ತಂಡ ವೈದ್ಯನ ಪತ್ನಿಗೆ ಹೆರಿಗೆ ಮಾಡಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಮಗುವಿಗೆ ತಾಯಿಯೇ ಸ್ತನ್ಯಪಾನ ಮಾಡಿಸುತ್ತಿದ್ದಾರೆ. ಮಗುವಿಗೆ ಕೊರೊನಾದ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಮಾತ್ರ ಮಗುವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ನವದೆಹಲಿ: ಚಿಕಿತ್ಸೆ ನೀಡಲು ಬಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯೊಂದಿಗೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು ಅಸಭ್ಯ ವರ್ತಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ದೆಹಲಿಯ ಮರ್ಕಜ್ ಮಸೀದಿಯಲ್ಲಿ ನಡೆದಿದ್ದ ಕಾರ್ಯಕ್ರಮವು ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ತಮಿಳುನಾಡು, ಕರ್ನಾಟಕ, ಕೇರಳ ಸೇರಿದಂತೆ ಅನೇಕ ರಾಜ್ಯದ ಸಾವಿರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ 300ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಜೊತೆಗೆ ಕೆಲವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.
ನಿಜಾಮುದ್ದೀನ್‍ನ ತಬ್ಲಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 167 ಜನರನ್ನು ತುಘಲಕಾಬಾದ್‍ನಲ್ಲಿ 2,140 ಗಂಟೆಗಳ ಕಾಲ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಈ ಪೈಕಿ 97 ಜನರನ್ನು ಡೀಸೆಲ್ ಶೆಡ್ ತರಬೇತಿ ಶಾಲೆಯ ಹಾಸ್ಟೆಲ್ ಕ್ಯಾರೆಂಟೈನ್ ಸೆಂಟರ್ ಮತ್ತು 70 ಜನರಿಗೆ ಆರ್‍ಪಿಎಫ್ ಬ್ಯಾರಕ್ ಕ್ಯಾರಂಟೈನ್ ಸೆಂಟರ್ ನಲ್ಲಿ ಇರಿಸಲಾಗಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ ಕ್ವಾರಂಟೈನ್‍ನಲ್ಲಿರುವ ಕೆಲವರು ಬೆಳಗ್ಗೆಯಿಂದ ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಆಹಾರ ಪದಾರ್ಥಗಳಿಗೆ ಅಸಮಂಜಸ ಬೇಡಿಕೆ ಇಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ಯಾರೆಂಟೈನ್ ಸೆಂಟರ್ ನಲ್ಲಿರುವ ಸಿಬ್ಬಂದಿ, ವೈದ್ಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ಅವರ ಮೇಲೆ ಉಗಿಯುತ್ತಿದ್ದಾರೆ. ಜೊತೆಗೆ ಹಾಸ್ಟೆಲ್ ಕಟ್ಟಡದ ಸುತ್ತಲೂ ತಿರುಗಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
Occupants were unruly since morning&made unreasonable demand for food items. They misbehaved&abused staff at Quarantine Centre.Also they started spitting all over&on persons working/attending them incl doctors.They also started roaming around hostel building:CPRO Northern Railway https://t.co/mKLP1UQgJg
ಮಸೀದಿಯಲ್ಲಿ ನಡೆದ ಕಾರ್ಯಕ್ರಮ ಏನು?
ತಬ್ಲಿಘಿ-ಎ-ಜಮಾತ್ ಎಂಬ ಧಾರ್ಮಿಕ ಸಂಸ್ಥೆ ಮಾರ್ಚ್ 1ರಿಂದ ಮಾರ್ಚ್ 15ರವರೆಗೂ ದೆಹಲಿ ಹೊರವಲಯದಲ್ಲಿರುವ ನಿಜಾಮುದ್ದೀನ್ ಪ್ರಾಂತ್ಯದ ಮರ್ಕಜ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿವಿಧ ರಾಜ್ಯಗಳಿಂದ 2,500ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂಡೋನೇಷಿಯಾ, ಮಲೇಷಿಯಾ, ಥಾಯ್ಲೆಂಡ್, ಸೌದಿ ಅರೇಬಿಯಾ, ಕಜಕಿಸ್ತಾನ ಸೇರಿದಂತೆ ಒಟ್ಟು 16 ದೇಶಗಳ ಧರ್ಮಗುರುಗಳಿಂದ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅವಧಿಯಲ್ಲಿ ಮರ್ಕಜ್ ಮಸೀದಿಯಲ್ಲೇ 280 ಧರ್ಮಗುರುಗಳು ಉಳಿದುಕೊಂಡಿದ್ದರು. 8 ಸಾವಿರಕ್ಕೂ ಹೆಚ್ಚು ಭಾರತೀಯ ಮುಸ್ಲಿಮರಿಂದಲೂ ಅದೇ 6 ಅಂತಸ್ತಿನ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊರೋನಾ ವೈರಸ್ ಪಾಲ್ಗೊಂಡವರಿಗೆ ಕೊರೊನಾ ವೈರಸ್ ಹಬ್ಬಿದೆ.
ಉಲ್ಲಂಘನೆ ಯಾಕೆ?
ಈ ಕಾರ್ಯಕ್ರಮದ ಆಯೋಜಕರು ಮತ್ತು ಬೆಂಬಲಿಸುವ ವ್ಯಕ್ತಿಗಳು ಯಾವುದೇ ಉಲ್ಲಂಘನೆ ಆಗಿಲ್ಲ. ಜನತಾ ಕಫ್ರ್ಯೂ ಮತ್ತು 21 ದಿನಗಳ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಅಲ್ಲಿದ್ದ ಮಂದಿಗೆ ಊರಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಈ ಕಾರ್ಯಕ್ರಮ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ನಡೆಸಲಾಗಿದೆ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ.
ಉಲ್ಲಂಘನೆ -1: ಪ್ರವಾಸಿ ವೀಸಾದಡಿ ಬಂದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಪ್ರವಾಸಿ ವೀಸಾ ಪಡೆದುಕೊಂಡಿದ್ದರು. ಈಗ ಈ ವೀಸಾ ಪಡೆದು ಬಂದವನ್ನು ಬಂದವರನ್ನು ಕಪ್ಪು ಪಟ್ಟಿಗೆ ಸೇರಿಸಲು ಗೃಹ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ.
ಕಳೆದ 2 ದಿನಗಳಿಂದ ಈ ಜಾಗದಲ್ಲಿ 281 ವಿದೇಶಿ ಪ್ರಜೆಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನೇಪಾಳ 19, ಮಲೇಷ್ಯಾ 20, ಅಫ್ಘಾನಿಸ್ಥಾನ 1, ಮ್ಯಾನ್ಮಾರ್ 33, ಕಿರ್ಗಿಸ್ಥಾನ 28, ಇಂಡೋನೇಷ್ಯಾ 72, ಥಾಯ್ಲೆಂಡ್ 7, ಶ್ರೀಲಂಕಾ 34, ಬಾಂಗ್ಲಾದೇಶ 19, ಇಂಗ್ಲೆಂಡ್ 3, ಫಿಜಿ 4, ಫ್ರಾನ್ಸ್, ಸಿಂಗಾಪುರ, ಕುವೈತ್, ಅಫ್ಘಾನಿಸ್ಥಾನ, ಅಲ್ಜೀರಿಯಾದಿಂದ ತಲಾ ಒಬ್ಬೊಬ್ಬರು ಭಾಗವಹಿಸಿದ್ದಾರೆ. ಇದು ಪತ್ತೆಯಾದವರ ಸಂಖ್ಯೆ, ಇಲ್ಲಿಂದ ಹಲವು ರಾಜ್ಯಗಳಿಗೆ ವಿದೇಶಿಯರು ಪ್ರಯಾಣಿಸಿದ್ದು ಅದರ ಲೆಕ್ಕ ಸಿಗಬೇಕಿದೆ.
ಉಲ್ಲಂಘನೆ – 2: ವಿದೇಶದಿಂದ ಬಂದಂತಹ ವ್ಯಕ್ತಿಗಳು ಹೋಮ್ ಕ್ವಾರಂಟೈನ್ ನಲ್ಲಿ ಇರುವುದು ಕಡ್ಡಾಯ. ಎಲ್ಲ ರಾಜ್ಯ ಸರ್ಕಾರಗಳು ಈ ವಿಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು ಮನೆಗೆ ತೆರಳಿ ನೋಟಿಸ್ ಅಂಟಿಸಿ ಬರುತ್ತಿದ್ದಾರೆ. ಆದರೆ ಇಲ್ಲಿ ವಿದೇಶದಿಂದ ಬಂದವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ವಿದೇಶಿ ವ್ಯಕ್ತಿಗಳ ಪೈಕಿ ಎಷ್ಟು ಜನ ಆದೇಶ ಉಲ್ಲಂಘಿಸಿದ್ದಾರೆ ಎನ್ನುವುದು ಮುಂದೆ ತಿಳಿದು ಬರಲಿದೆ. ಈ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 271(ಸೋಂಕು ಇದ್ದರೂ ಕ್ವಾರಂಟೈನ್ ನಿಯಮ ಉಲ್ಲಂಘನೆ) ಅಡಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಹಲವು ರಾಜ್ಯ ಸರ್ಕಾರಗಳು ವಿದೇಶದಿಂದ ಪ್ರವಾಸಕ್ಕೆ ಬಂದವರ ಮಾಹಿತಿ ಸಿಗುತ್ತಿಲ್ಲ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದವು. ಈಗ ನಾಪತ್ತೆಯಾದ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರಬಹುದೇ ಎನ್ನುವ ಅನುಮಾನ ಎದ್ದಿದೆ.
ಉಲ್ಲಂಘನೆ – 3: ದೆಹಲಿ ಸರ್ಕಾರ ಫೆ.13 ರಂದು 200ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ನಿಷೇಧ ಹೇರಿತ್ತು. ಅಂದು ಸುದ್ದಿಗೋಷ್ಠಿ ನಡೆಸಿದ್ದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಐಪಿಎಲ್ ಸೇರಿದಂತೆ ಎಲ್ಲ ಸಭೆ ಸಮಾರಂಭಗಳಿಗೆ ಸರ್ಕಾರ ನಿಷೇಧ ಹೇರಿದೆ ಎಂದು ತಿಳಿಸಿದ್ದರು. ನಿಷೇಧ ಹೇರಿದ್ದರೂ ಈ ಕಾರ್ಯಕ್ರಮ ಮಾ.15 ರವರೆಗೆ ಹೇಗೆ ನಡೆಯಿತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಉಲ್ಲಂಘನೆ – 4: 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಸೆಕ್ಷನ್ 3 ಉಲ್ಲಂಘನೆಯಾಗಿದೆ. ಈ ಕಾಯ್ದೆ ಅಡಿ ಸಾಂಕ್ರಾಮಿಕ ರೋಗವನ್ನು ಹರಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಕೊರೊನಾ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಚ್ 13 ರಂದು ಈ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.
ಉಲ್ಲಂಘನೆ – 5 : ಈ ಕಾರ್ಯಕ್ರಮದ ಆಯೋಜಕರು ಐಪಿಸಿ ಸೆಕ್ಷನ್ ಗಳನ್ನು ಸಹ ಉಲ್ಲಂಘನೆ ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269(ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡಿರುವುದು), 270(ಉದ್ದೇಶಪೂರ್ವಕವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕನ್ನು ಹರಡಿರುವುದು) ಮತ್ತು 120 ಬಿ(ಕ್ರಿಮಿನಲ್ ಒಳಸಂಚು) ಉಲ್ಲಂಘಿಸಿದ್ದು ದೆಹಲಿ ಪೊಲೀಸರು ಈಗ 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಮತ್ತು ಈ ಮೇಲೆ ತಿಳಿಸಿದ ಐಪಿಸಿ ಸೆಕ್ಷನ್ ಅಡಿ ಆಯೋಜಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ನವದೆಹಲಿ: ಕೊರೊನಾ ವೈರಸ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವವರು “ದೇಶವನ್ನು ರಕ್ಷಿಸುವ ಸೈನಿಕರಿಗಿಂತ ಕಡಿಮೆಯಿಲ್ಲ”. ಹೀಗಾಗಿ ಕೊವೀಡ್-19 ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
“ಯುದ್ಧದ ಸಮಯದಲ್ಲಿ ಸೈನಿಕ ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾನೆ. ಆದ್ದರಿಂದ ನಮ್ಮ ಇಡೀ ರಾಷ್ಟ್ರವು ಅವರಿಗೆ ಋಣಿಯಾಗಿದೆ. ಇಂದು ಆರೋಗ್ಯ ಕಾರ್ಯಕರ್ತರು ಕೂಡ ದೇಶದ ಜನರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿಯ ಕೆಲಸವು ಸೈನಿಕರ ಕೆಲಸಕ್ಕಿಂತ ಕಡಿಮೆಯಿಲ್ಲ” ಎಂದು ಕೇಜ್ರಿವಾಲ್ ಹೇಳಿದರು.
If anyone loses their life while serving any #COVID19 patient, be it sanitation workers, doctors or nurses or any other staff, temporary or permanent, from private or government sector, their family will be given Rs 1 crore as our mark of respect for their service.
“ಈ ಹಿಂದೆ ದೆಹಲಿ ಸರ್ಕಾರ ದೇಶಕ್ಕಾಗಿ ಹೋರಾಡುವಾಗ ಯಾವುದೇ ಸೈನಿಕ ಹುತಾತ್ಮರಾದರೆ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿತ್ತು. ಈಗ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ದುರಾದೃಷ್ಟವಶಾತ್ ಯಾವುದೇ ಆರೋಗ್ಯ ಕಾರ್ಯಕರ್ತ, ವೈದ್ಯ, ನೈರ್ಮಲ್ಯ ಕಾರ್ಮಿಕರು ಅಥವಾ ನರ್ಸ್ ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ಕೇಜ್ರಿವಾಲ್ ಅವರು ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲವು ವೈದ್ಯಕೀಯ ವೃತ್ತಿಪರರೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ಕೊರೊನಾ ವೈರಸ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
Interacted with Delhi govt doctors and paramedic staff on COVID-19 duty over video conference. I salute their courage and dedication. Have assured them full govt support. They had some excellent suggestions which we will implement immediately pic.twitter.com/tQ2jM2wzLs
ನಿಮ್ಮ ಸ್ಥೈರ್ಯ ಮತ್ತು ಕರ್ತವ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ವೈದ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಬೆಂಬಲಕ್ಕೆ ಸರ್ಕಾರ ಇರುತ್ತದೆ. ನೀವು ನೀಡಿರುವ ಸಲಹೆಗಳನ್ನು ಶೀಘ್ರದಲ್ಲಿಯೇ ದೆಹಲಿ ಸರ್ಕಾರ ಕಾರ್ಯಗತಗೊಳಿಸುತ್ತದೆ ಎಂದು ಭರವಸೆ ಕೂಡ ನೀಡಿದರು. ದೆಹಲಿಯಲ್ಲಿ ಇದುವರೆಗೂ 120 ಕೊರೊನಾ ಸೋಂಕಿತ ರೋಗಿಗಳಿದ್ದಾರೆ ಎಂದು ವರದಿಯಾಗಿದೆ .
ರಾಮನಗರ: ಕೊರೊನಾ ತಡೆಗೆ ರಾಮನಗರ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ಜಿಲ್ಲೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 26 ಮಂದಿ ವೈದ್ಯಾಧಿಕಾರಿಗಳು ಇದ್ದು, 4 ಜನ ವೈದ್ಯರ ಕೊರತೆ ಇದೆ. ವೈದ್ಯರ ಮೂರು ಬ್ಯಾಚ್‍ಗಳನ್ನು ಮಾಡಿ ಕೆಲಸ ಮಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೋವಿಡ್- 19 ವಿರುದ್ಧ ಹೋರಾಟಕ್ಕೆ ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದಿದ್ದಾರೆ. ದೇಶವೇ ಲಾಕ್‍ಡೌನ್ ಆಗಿರುವುದರಿಂದ ರಾಮನಗರ ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು, ನಿರ್ಗತಿಕರಿಗೆ ಸಂಕಷ್ಟ ಎದುರಾಗಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿನ ನಿರ್ಗತಿಕರಿಗೆ ಎನ್‍ಜಿಓ ಮೂಲಕ ಸಹಾಯವಾಗುತ್ತಿದೆ. ಈ ಕುರಿತು ನಮ್ಮಿಂದ ಹೇಗೆ ಸಹಾಯ ಮಾಡಬಹುದು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಎಪಿಎಂಸಿಯಲ್ಲಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಈಗಾಗಲೇ ಬೆಳಗಾವಿ ಚಿಂಚೊಳ್ಳಿಯಲ್ಲಿ ಕಲ್ಲಂಗಡಿ ಬೆಳೆದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಸಹ ನಾನು ಮಾಹಿತಿ ಕಲೆ ಹಾಕಿದ್ದೇನೆ. ರೇಷ್ಮೆ ಗೂಡು ಬೆಳೆಗಾರರ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ರಾಮನಗರ ಮಾತ್ರವಲ್ಲದೆ ರಾಜ್ಯದಲ್ಲಿ ಬೆಳೆಗಾರರ ಅನುಕೂಲಕ್ಕಾಗಿ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಳೆದ ಮೂರು ದಿನಗಳಿಂದ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಕ್ರಮಕ್ಕೆ ಅನುವು ಮಾಡಿಕೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಕೆಲ ಸಾರ್ವಜನಿಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವರು ಮದ್ಯ ವ್ಯಸನಿಗಳಿದ್ದಾರೆ. ಏಕಾಏಕಿ ಮದ್ಯ ನಿಲ್ಲಿಸಿದ್ದರಿಂದ ಮದ್ಯವ್ಯಸನಿಗಳ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದರು. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನಕ್ಕೆ ಮುಂದಾಗಿದೆ. ಮದ್ಯವ್ಯಸನಿಗಳಿಗೆ ನಿಮಾನ್ಸ್ ನಲ್ಲಿ ಕೌನ್ಸಿಲಿಂಗ್ ಮಾಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮ ಹಾಗೂ ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ನಿರ್ಗತಿಕರು, ಬಡವರ ಅನುಕೂಲಕ್ಕಾಗಿ ಜನಪ್ರತಿನಿಧಿಗಳಿಂದ ಕೂಲಿ ಕಾರ್ಮಿಕರಿಗೆ ನೆರವು ನೀಡಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ್, ಸಂಸದ ಡಿ.ಕೆ ಸುರೇಶ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬೀದರ್: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಕ್ಲಿನಿಕಗಳು ಮುಚ್ಚಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಎಲ್ಲಾ ಖಾಸಗಿ ಕ್ಲಿನಿಕ್‍ಗಳು ತೆರೆದು ಸಾಮಾನ್ಯ ಲಕ್ಷಣ ಕಂಡು ಬರುವ ರೋಗಿಗಳಿಗೆ ಚಿಕಿತ್ಸೆ ಒದಗಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಆರ್ ಮಹಾದೇವ್ ಅವರು ಡಿಎಚ್‍ಓ ಅವರಿಗೆ ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ತಾಲೂಕಿನ ತಹಶೀಲ್ದಾರ್ ಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಡಿಸಿ ವಿಡಿಯೋ ಸಂವಾದ ನಡೆಸಿದರು. ಕೊರೊನಾ ವೈರಾಣು ತೀವ್ರ ಹರಡುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ವಹಿಸುವ ನಿಟ್ಟಿನಲ್ಲಿ ಜನತೆಗೆ ಈಗ ಸಕಾಲಕ್ಕೆ ಚಿಕಿತ್ಸೆ ಕೊಡಬೇಕಿದೆ. ಹೀಗಿದ್ದರೂ ಖಾಸಗಿ ಕ್ಲಿನಿಕ್‍ಗಳು ಮುಚ್ಚಿದಲ್ಲಿ ಅಂತಹ ಕ್ಲಿನಿಕ್‍ಗಳ ಪರವಾನಿಗೆಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿದೇಶ, ಹೊರ ರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿ ಇರುವ ಜನರ ಬಗ್ಗೆ ಸರಿಯಾದ ರೀತಿಯಲ್ಲಿ ಗಮನ ಕೊಡಬೇಕು ಎಂದು ಎಲ್ಲಾ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸಾಮಾನ್ಯ ರೋಗಿಗಳು ಬಂದರೂ ಕೂಡ ಅಂತರ ಕಾಯ್ದುಕೊಂಡು ಅವರಿಗೆ ತಪಾಸಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಈ ವೇಳೆ ಸಿಇಓ ಗ್ಯಾನೇಂದ್ರಕುಮಾರ್ ಗಂಗವಾರ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ ರೆಡ್ಡಿ, ಬ್ರಿಮ್ಸ್ ನಿರ್ದೇಶಕರಾದ ಡಾ. ಶಿವಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ನಗರಸಭೆ ಪೌರಾಯುಕ್ತರಾದ ಬಸಪ್ಪ, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ. ರತಿಕಾಂತ ಸ್ವಾಮಿ, ಇಂದುಮತಿ ಪಾಟೀಲ್, ಜಿಲ್ಲಾ ಕಣ್ಗಾವಲು ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಕೃಷ್ಣಾರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.
ರಾಮನಗರ: ಜಿಲ್ಲಾಸ್ಪತ್ರೆಯ 15 ವೈದ್ಯರು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕರ್ತವ್ಯಕ್ಕೆ ಗೈರಾಗಿದ್ದಾರೆ.
ಮಹಾಮಾರಿ ಕಿಲ್ಲರ್ ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ನಿನ್ನೆಯಷ್ಟೇ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಮನಗರದಲ್ಲಿ ವೈದ್ಯರು ಯಾರೂ ಸಹ ಕರ್ತವ್ಯಕ್ಕೆ ಗೈರಾಗಬೇಡಿ ಎಂದು ಮನವಿ ಮಾಡಿದ್ದರು. ಆದ್ರೆ ಇಂದು ಬರೋಬ್ಬರಿ 15 ಜನ ಜಿಲ್ಲಾಸ್ಪತ್ರೆಯ ವೈದ್ಯರು ಕರ್ತವ್ಯಕ್ಕೆ ಗೈರಾಗುವ ಮೂಲಕ ಬೇಜವ್ದಾರಿತನ ತೋರಿದ್ದಾರೆ.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 26 ಜನ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಕೇವಲ 8 ಜನ ವೈದ್ಯರು ಮಾತ್ರವೇ ಕರ್ತವ್ಯಕ್ಕೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದರೇ, ಮೂರು ಜನ ರಾತ್ರಿ ಪಾಳಿಗೆ ಸಹಿ ಮಾಡಿದ್ದಾರೆ. ಆದ್ರೆ ಮಧ್ಯಾಹ್ನವಾದರೂ ಕೇವಲ ಐದಾರು ವೈದ್ಯರು ಮಾತ್ರ ಕರ್ತವ್ಯದಲ್ಲಿದ್ದಾರೆ.
ಕೆಲವು ವೈದ್ಯರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಮನೆಗೆ ಹೋಗಿದ್ದರೆ, 15 ಜನ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಉದ್ದಟತನ ತೋರಿದ್ದಾರೆ. ಆರೋಗ್ಯ ಸಚಿವರೇ ಕೈ ಮುಗಿದು ಮನವಿ ಮಾಡಿದ್ರು ಸಹ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಬೇಜವಾಬ್ದಾರಿತನ ತೋರಿದ್ದಾರೆ.
ಇನ್ನೂ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಸ್ಪತ್ರೆಯ ಸರ್ಜನ್ ಗೂ ಸಹ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದ ಬಳಿಕ ಜಿಲ್ಲಾ ಸರ್ಜನ್ ಡಾ.ಪದ್ಮಾ ರವರು ಕರ್ತವ್ಯಕ್ಕೆ ಹಾಜರಾಗದ ವೈದ್ಯರ ಮಾಹಿತಿ ಪಡೆದು ಕೂಡಲೇ ನೋಟಿಸ್ ನೀಡಲಾಗುವುದು. ಅಲ್ಲದೇ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ರು.
ರಿಯಾದ್: ಸೌದಿ ಅರೇಬಿಯಾದಲ್ಲಿ ವೈದ್ಯ ತಂದೆಯೊಬ್ಬರು ಆಸ್ಪತ್ರೆಯಿಂದ ಬಂದ ತಕ್ಷಣ ತನ್ನ ಮಗನನ್ನು ತಬ್ಬಿಕೊಳ್ಳುವುದಕ್ಕೆ ಆಗದೇ ಕಣ್ಣೀರಿಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ವೈದ್ಯರು ತಮ್ಮ ಮನೆಗೆ ಬರುತ್ತಾರೆ. ಬಂದ ತಕ್ಷಣ ಮುಗ್ಧ ಬಾಲಕ ಓಡುತ್ತಾ ತನ್ನ ತಂದೆಯನ್ನು ತಬ್ಬಿಕೊಳ್ಳಲು ಬರುತ್ತಾನೆ. ಮಗ ಓಡಿ ಬರುತ್ತಿರುವುದನ್ನು ನೋಡಿದ ಬಾಲಕ ತಕ್ಷಣ ಆತನನ್ನು ತಡೆದು ಕಣ್ಣೀರು ಹಾಕುತ್ತಾ ಕೆಳಗೆ ಕುಳಿತರು. ಮೈಕ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, ‘ಸೌದಿ ಅರೇಬಿಯಾದಲ್ಲಿ ವೈದ್ಯರೊಬ್ಬರು ಆಸ್ಪತ್ರೆಯಿಂದ ತಮ್ಮ ಮನೆಗೆ ಹೋಗುತ್ತಾರೆ. ಆಗ ಅವರು ತಮ್ಮ ಮಗನನ್ನು ದೂರ ಇರು ಎಂದು ಹೇಳಿ ಅಳುತ್ತಾ ಕೆಳಗೆ ಕೂತರು ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಮಾಧ್ಯಮವೊಂದರ ಪ್ರಕಾರ ಈ ವಿಡಿಯೋವನ್ನು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಾಸಿರ್ ಅಲಿ ಎಂಬವರು ಚಿತ್ರೀಕರಿಸಿದ್ದಾರೆ. ಸದ್ಯ ನಾಸೀರ್ ಕಿಂಗ್ ಸಲ್ಮಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಇದು ಹೊರತಾಗಿ ಅವರದೇ ಆದ ಸ್ವಂತ ಕ್ಲಿನಿಕ್ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲು ಮನೆಗೆ ಹೋದ ತಕ್ಷಣ ನನ್ನ ಪತ್ನಿಯನ್ನು ಕರೆದು ಮಗನನ್ನು ತಡೆಯಲು ಹೇಳುತ್ತೇನೆ. ಈ ವೇಳೆ ವೈದ್ಯಕೀಯ ಬಟ್ಟೆಯನ್ನು ಬದಲಿಸಿ ಸ್ವತಃ ಸ್ಯಾನಿಟೈಸ್ ಮಾಡಿ ಸ್ನಾನ ಮಾಡುತ್ತೇನೆ. ಇದು ಆದ ಬಳಿಕ ನಾನು ನನ್ನ ಮಗನನ್ನು ಭೇಟಿ ಮಾಡಿ ಆತನ ಜೊತೆ ಕಾಲ ಕಳೆಯುತ್ತೇನೆ ಎಂದರು.
ಈ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಭಾವುಕರಾಗಿದ್ದಾರೆ. ಕೊರೊನಾ ಸೋಂಕಿತರ ಪ್ರಾಣ ಉಳಿಸಲು ವೈದ್ಯರಿಗೆ ಸಮಯ ಹೋಗುತ್ತಿರುವುದೇ ಗೊತ್ತಿಲ್ಲ. ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೂ ಸೋಂಕು ತಗಲುವ ಸಾಧ್ಯತೆಗಳಿವೆ. ಹಾಗಾಗಿ ಜನರಿಗೆ ಜಾಗೃತಿ ಮೂಡಿಸಲು ನಾಸಿರ್ ಈ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.
This hurts the heart to watch. That doctor is such a hero.