ಶಿವಮೊಗ್ಗ: ಕೊರೊನಾ ವೈರಸ್ ವಿರುದ್ಧ ವೈದ್ಯರು, ನರ್ಸ್ ಮತ್ತು ಪೊಲೀಸರು ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅಗತ್ಯ ಸೇವೆ ಸಲ್ಲಿಸುತ್ತಿರುವವರಿಗೆ ಜಿಲ್ಲೆಯಲ್ಲಿ ಉಚಿತವಾಗಿ ಪೆಟ್ರೋಲ್ ವಿತರಣೆ ಮಾಡಲಾಗುತ್ತಿದೆ.
ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್‍ನ ಮಾಲೀಕರು ಕೊರೊನಾ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ಸಲ್ಲಿಸುತ್ತಿರುವ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಪೊಲೀಸರಿಗೆ ಉಚಿತ ಪೆಟ್ರೋಲ್ ವಿತರಣೆ ಮಾಡುತ್ತಿದ್ದಾರೆ.
ಪ್ರತಿಯೊಬ್ಬರ ದ್ವಿ-ಚಕ್ರ ವಾಹನಕ್ಕೆ ಅವರವರ ಇಲಾಖೆಯ ಗುರುತಿನ ಚೀಟಿ ನೋಡಿ ತಲಾ 1 ಲೀಟರ್ ಪೆಟ್ರೋಲ್‍ಅನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂಲಕ ಪೆಟ್ರೋಲ್ ಬಂಕ್‍ನ ಮಾಲೀಕರು ಅಗತ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ ಹಾಗೂ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಅಲ್ಲದೇ ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರು, ಸೆಕ್ಯೂರಿಟಿ ಸಿಬ್ಬಂದಿ ಮತ್ತು ಹೋಂಗಾರ್ಡ್ ಗಳಿಗೆ ಉಚಿತ ಪೆಟ್ರೋಲ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ರಾಜ್ಯದ ಇತರೆ ಪೆಟ್ರೋಲ್ ಬಂಕ್ ಮಾಲೀಕರು ಸಹ ಇದೇ ರೀತಿ ಉಚಿತ ವಿತರಣೆ ಮಾಡಲು ಮುಂದಾಗಿ, ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಕೈಲಾದ ಸೇವೆ ಮಾಡಿ ಎಂದು ಪೆಟ್ರೋಲ್ ಬಂಕ್ ಮಾಲೀಕರಾದ ಸುಹಾಸ್ ಮನವಿ ಮಾಡಿದ್ದಾರೆ.
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಅನ್ನು ಮಣಿಸಿ ಯುವಕನಿಗೆ ಮರುಜನ್ಮ ನೀಡಿದ್ದಷ್ಟೇ ಅಲ್ಲದೆ, ವೈದ್ಯರು, ನರ್ಸ್‍ಗಳು ಚಪ್ಪಾಳೆ ಮೂಲಕ ಆತನನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.
ಹೌದು. ಇಂತಹ ಹೃದಯಸ್ಪರ್ಶಿ ಸನ್ನಿವೇಶ ಕಂಡು ಬಂದಿದ್ದು ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ. ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾದ ಯುವಕ ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ. ಯುವಕ ಆಸ್ಪತ್ರೆಯಿಂದ ಮನೆಗೆ ಹೊರಡುವ ಮುನ್ನ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಚಪ್ಪಾಳೆ ತಟ್ಟಿ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್
ವಿಶೇಷವೆಂದರೆ ಆಸ್ಪತ್ರೆಯ ಆವರಣದಲ್ಲಿನ ಹೂಗಳನ್ನು ಬಳಸಿ ಪುಷ್ಪಗುಚ್ಚ ಮಾಡಿ ಯುವಕನಿಗೆ ನೀಡಿದ್ದಾರೆ. ಚಿಕಿತ್ಸೆ ನೀಡಿ ಮರುಜನ್ಮ ನೀಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಡುವುದನ್ನು ಕಂಡು ಯುವಕ ಭಾವುಕನಾಗಿದ್ದ. ಈ ವೇಳೆ ವೈದ್ಯರ ಕಾಲುಗಳಿಗೆ ನಮಸ್ಕರಿಸಿ ಅಲ್ಲಿಂದ ಮನೆಗೆ ತೆರಳಿದ್ದಾನೆ.
ರಾಜ್ಯದಲ್ಲಿ ಶನಿವಾರ ಕೂಡ 8 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ. ನಂಜನಗೂಡು ನೌಕರನಿಂದ ಮತ್ತೆ ಐವರಿಗೆ ಕೊರೊನಾ ಹಬ್ಬಿದೆ. ಬೆಂಗಳೂರಲ್ಲಿ ಡಾಕ್ಟರ್ ಹಾಗೂ 10 ವರ್ಷದ ಬಾಲಕನಿಗೆ ಕೊರೊನಾ ಬಂದಿರುವುದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಈ ಮೂಲಕ ಬೆಂಗಳೂರಲ್ಲಿ 73 ಪಾಸಿಟಿವ್ ಕೇಸ್ ದಾಖಲಾಗಿದೆ. ಇದರಲ್ಲಿ ಪುರುಷರ ಸಂಖ್ಯೆ 47 ಇದ್ದರೆ ಮಹಿಳೆಯರ ಸಂಖ್ಯೆ 25 ಇದೆ. ಬೀದರ್ ನಲ್ಲಿ ದೆಹಲಿ ಜಮಾತ್ ಹೋಗಿದ್ದ ವ್ಯಕ್ತಿಯ ಅತ್ತಿಗೆಗೆ ಪಾಸಿಟಿವ್ ಬಂದಿದೆ.
ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ರೋಗಿ ಗುಣಮುಖನಾಗಿ ವೆಂಟಿಲೇಟರ್ ನಿಂದ ಎದ್ದರೆ ಐಸಿಯುನಲ್ಲಿರುವ ವೈದ್ಯರ ತಂಡ ಡ್ಯಾನ್ಸ್ ಮಾಡಿ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಗೆಲವು ಸಾಧಿಸಲು ವಿಶ್ವಾದ್ಯಂತ ವೈದ್ಯರು ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ. ಈ ನಡುವೆ ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‍ನಲ್ಲಿರುವ ರೊನಾಲ್ಡ್ ರೇಗನ್ ಯುಸಿಎಲ್‍ಎ ಆಸ್ಪತ್ರೆಯ ಐಸಿಯುನಲ್ಲಿರುವ ವೈದ್ಯರ ತಂಡವು ಕೊರೊನಾ ವೈರಸ್ ನಿಂದ ರೋಗಿ ಗುಣಮುಖವಾದರೆ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿದೆ.
ವೈದ್ಯರು ಡ್ಯಾನ್ಸ್ ಮಾಡುವ ವಿಡಿಯೋವನ್ನು ಅಮೆರಿಕದ ವೈದ್ಯೆ ಡಾ. ನಿಡಾ ಖಾದಿರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು, ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖವಾದರೆ, ವೆಂಟಿಲೇಟರ್ ನಿಂದ ಎದ್ದು ಬಂದರೆ ನಮ್ಮ ಐಸಿಯು ಸಿಬ್ಬಂದಿ ಡ್ಯಾನ್ಸ್ ಮಾಡುತ್ತಾರೆ. ಈ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಪೋಸ್ಟ್ ಅನ್ನು ಶೇರ್ ಮಾಡಿರುವ ಖಾದಿರ್ ಅವರು ಸಹೋದ್ಯೋಗಿ, ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಸಿಬ್ಬಂದಿ ಸಣ್ಣ ಗೆಲುವನ್ನು ಕೂಡ ಆಚರಣೆ ಮಾಡುತ್ತಿದ್ದಾರೆ. ನಿನ್ನೆ ನಮ್ಮ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ವೆಂಟಿಲೇಟರ್ ನಿಂದ ಎದ್ದು ಸ್ವತಃ ತಾವೇ ಉಸಿರಾಡುತ್ತಿದ್ದಾರೆ. ಇದರಿಂದ ನಮಗೆ ಸಂತೋಷವಾಗಿ ಸ್ವಲ್ಪ ಡ್ಯಾನ್ಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
That’s wonderful news. Thank you for your selfless sacrifice ❤️
ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋವನ್ನು 8 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಜೊತೆ 30 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಎಲ್ಲರೂ ಆರೋಗ್ಯ ಯೋಧರ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅಮೆರಿಕದ ಜನರಿಗೆ ನೀವು ಮಾಡಿದ ಕೆಲಸಕ್ಕೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ನೀವು ನಿಜವಾದ ಹೀರೋಗಳು ಎಂದು ಜನ ಕಮೆಂಟ್ ಮಾಡಿದ್ದಾರೆ.
ಮುಂಬೈ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಹೋರಾಟ ನಡೆಸುತ್ತಿದೆ. ಬಾಲಿವುಡ್‍ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರು ಈ ಹಿಂದೆ ಪಿಎಂ ಕೇರ್ಸ್ ಫಂಡ್‍ಗೆ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡಿದ್ದರು. ಇದೀಗ ಮತ್ತೆ ಅಕ್ಷಯ್ ಕುಮಾರ್ ಮೂರು ಕೋಟಿ ದೇಣಿಗೆ ನೀಡಿದ್ದಾರೆ.
ನಟ ಅಕ್ಷಯ್ ಕುಮಾರ್ ಈ ಬಾರಿ ಪಿಎಂ ಕೇರ್ಸ್ ಫಂಡ್‍ಗೆ ದೇಣಿಗೆ ನೀಡಿಲ್ಲ. ಬದಲಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ)ಗೆ ಹೆಚ್ಚುವರಿಯಾಗಿ ಮೂರು ಕೋಟಿ ಹಣವನ್ನು ನೀಡಿದ್ದಾರೆ. ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು ಜನರ ಜೀವ ರಕ್ಷಣೆಗಾಗಿ ಕಷ್ಟಪಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ಅವರ ಸುರಕ್ಷತೆಯನ್ನು ಕಾಪಾಡಬೇಕು. ಹೀಗಾಗಿ ಅವರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕಿಟ್ ಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಪಿಪಿಇ ಕಿಟ್‍ಗಳನ್ನು ತಯಾರಿಸಲು ಸಹಾಯ ಮಾಡುವ ಉದ್ದೇಶದಿಂದ ಮೂರು ಕೋಟಿ ದೇಣಿಗೆಯಾಗಿ ನೀಡಿದ್ದಾರೆ.
ಜೊತೆಗೆ ಅಕ್ಷಯ್ ‘ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದಿರುವ ಪತ್ರವನ್ನು ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ, ಪೊಲೀಸ್, ವೈದ್ಯರು, ನರ್ಸ್, ಎನ್‍ಜಿಒಗಳು, ಸ್ವಯಂ ಸೇವಕರು, ಪೌರ ಕಾರ್ಮಿಕರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನೇಕರಿಗೆ ಧನ್ಯವಾದ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ “ನಮ್ಮನ್ನು, ನಮ್ಮ ಕುಟುಂಬದವರನ್ನು ಸುರಕ್ಷಿತವಾಗಿರಿಸಲು ಹಗಲಿರುಳು ಕೆಲಸ ಮಾಡುವ ಜನರ ಸೈನ್ಯವಿದೆ. ಅವರಿಗಾಗಿ ನಾವೆಲ್ಲರೂ ಒಟ್ಟಿಗೆ ಸೇರಿ ಧನ್ಯವಾದ ತಿಳಿಸೋಣ” ಎಂದಿದ್ದಾರೆ.
Name : Akshay Kumar City : Mumbai
Mere aur mere parivaar ki taraf se… Police, Nagar Nigam ke workers, doctors, nurses, NGOs, volunteers, government officials, vendors, building ke guards ko #DilSeThankYou 🙏🏻 pic.twitter.com/N8dnb4Na63
ಮಹಾಮಾರಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕೂಡ ಕಷ್ಟ ಪಡುತ್ತಿದ್ದು, ಇದನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನರಿಂದಲೇ ದೇಣಿಗೆ ಸ್ವೀಕರಿಸಲು ಮುಂದಾಗಿದ್ದಾರೆ. PM-CARES Fund ಮೂಲಕ ಹಣ ಸಂಗ್ರಹ ಮಾಡುವುದಾಗಿ ಮೋದಿ ಅವರು ತಿಳಿಸಿದ್ದಾರೆ. ಇತ್ತ ಮೋದಿ ಅವರು PM-CARES Fund ದೇಣಿಗೆ ನೀಡುವಂತೆ ಕೋರುತ್ತಿದ್ದಂತೆ ಅಕ್ಷಯ್ ಕುಮಾರ್ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡುವುದಾಗಿ ಟ್ವೀಟ್ ಮಾಡಿದ್ದರು.
‘ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನಾನು ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ PM-CARES Fund ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು’ ಎಂದು ಬರೆದು ಪ್ರಧಾನಿಗಳ ಟ್ವೀಟ್‍ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದರು.
ಪಟ್ನಾ: ಒಂದುಕಡೆ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯಕೀಯ ಇಲಾಖೆ ಹಗಲಿರುಳು ಎನ್ನದೇ ಸೇವೆ ಮಾಡುತ್ತಿದ್ದಾರೆ. ಆದರೆ ಬಿಹಾರದಲ್ಲಿ ವೈದ್ಯರು ಐಸೋಲೇಷನ್ ವಾರ್ಡಿನಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ನಂತರ ಸಂತ್ರಸ್ತೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಸಂತ್ರಸ್ತೆಯ ಅತ್ತೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಮಂಗಳವಾರ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಕೊರೊನಾದಿಂದ ಇಡೀ ದೇಶವೇ 21 ದಿನ ಲಾಕ್‍ಡೌನ್ ಆಗಿದೆ. 25 ವರ್ಷದ ಸಂತ್ರಸ್ತೆ ಪಂಜಾಬ್‍ನ ಲೂಧಿಯಾನದಿಂದ ಬಿಹಾರದ ಗಯಾಕ್ಕೆ ಮಾರ್ಚ್ 25ರಂದು ಪತಿಯೊಂದಿಗೆ ಬಂದಿದ್ದರು. ಮೃತ ಸಂತ್ರಸ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವಾಗಿತ್ತು. ಗರ್ಭಪಾತದ ಕಾರಣದಿಂದಾಗಿ ಸಂತ್ರಸ್ತೆಗೆ ಹೆಚ್ಚು ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆಯನ್ನು ಗಯಾದ ಮಾರ್ಚ್ 27ರಂದು ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಸಂತ್ರಸ್ತೆಯನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಬಳಿಕ ಏಪ್ರಿಲ್ 1 ರಂದು ಕೊರೊನಾ ವೈರಸ್ ಶಂಕೆ ಇದೆ ಎಂದು ಸಂತ್ರಸ್ತೆಯನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಲಾಗಿತ್ತು. ಪ್ರತ್ಯೇಕ ವಾರ್ಡಿನಲ್ಲಿ ಸಂತ್ರಸ್ತೆ ಒಬ್ಬಂಟಿಯಾಗಿದ್ದಳು. ಇದೇ ವೇಳೆ ತಪಾಸಣೆ ಮಾಡಲು ಬರುತ್ತಿದ್ದ ವೈದ್ಯರು ಏಪ್ರಿಲ್ 2 ಮತ್ತು 3ರಂದು ಸತತ ಎರಡು ರಾತ್ರಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ.
ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿತ್ತು. ಆದರೆ ಆಕೆ ಮನೆಯಲ್ಲಿ ಒಬ್ಬಳೇ ಮೌನವಾಗಿ ಇರುತ್ತಿದ್ದು, ಭಯಪಡುತ್ತಿದ್ದಳು. ಆಗ ಮನೆಯವರು ಪದೇ ಪದೇ ಕೇಳಿದಾಗ ಆಸ್ಪತ್ರೆಯಲ್ಲಿ ವೈದ್ಯರು ಅತ್ಯಾಚಾರ ಎಸಗಿರುವ ವಿಚಾರವನ್ನು ಹೇಳಿದ್ದಾಳೆ. ಆದರೆ ಚಿಕಿತ್ಸೆ ಪಡೆದರೂ ರಕ್ತಸ್ರಾವ ನಿಂತಿರಲಿಲ್ಲ. ಕೊನೆಗೆ ತೀವ್ರ ರಕ್ತಸ್ರಾವದಿಂದ ಏಪ್ರಿಲ್ 6 ರಂದು ಸೊಸೆ ಮೃತಪಟ್ಟಳು ಎಂದು ಅತ್ತೆ ತಿಳಿಸಿದ್ದಾರೆ.
ಸಂತ್ರಸ್ತೆಯ ಅತ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸಂತ್ರಸ್ತೆಯ ಅತ್ತೆಗೆ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ವಿ.ಕೆ.ಪ್ರಸಾದ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರಂತೆ ನಟಿಸಿ ಆಸ್ಪತ್ರೆಯ ಪ್ರತ್ಯೇಕವಾದ ವಾರ್ಡಿಗೆ ಹೋಗಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಭಯಾನಕ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ರಜ್ಯದಲ್ಲಿ ಸಹ 181ಕ್ಕೆ ತಲುಪಿದೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕೊರೊನಾ ವೈರಸ್ ಲಕ್ಷಣಗಳಿರುವವರ ಬಗ್ಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಶರತ್.ಬಿ ಎಚ್ಚರಿಕೆ ನೀಡಿದ್ದು, ಶಂಕಿತ ಕೊರೋನಾ ರೋಗಿಗಳನ್ನು ಬಹಳ ದಿನಗಳ ಕಾಲ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ರೋಗ ಉಲ್ಬಣಿಸಿದ ಬಳಿಕ ಇಎಸ್‍ಐ ಮತ್ತು ಜಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಸಾವು ಸಂಭವಿಸುತ್ತದೆ. ಹೀಗಾಗಿ ಇಂತಹ ಆಸ್ಪತ್ರೆಗಳನ್ನು ಬಂದ್ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಸ್ಟಾರ್ ಆಸ್ಪತ್ರೆ ಸಿಬ್ಬಂದಿ ಕೊರೊನಾ ರೋಗ ಲಕ್ಷಣವುಳ್ಳ ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸ್ಟಾರ್ ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ. ಅದೇ ರೀತಿ ಬಹಮನಿ ಆಸ್ಪತ್ರೆಯನ್ನು ಬಂದ್ ಮಾಡಿ, ಸಿಬ್ಬಂದಿಯನ್ನು ಕ್ವಾರೈಂಟೀನ್ ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವ ಯತ್ನ ನಗರದಲ್ಲಿ ನಡೆದಿದೆ. ಇದು ಸ್ವತಃ ಜಿಲ್ಲಾಡಳಿತ ಅಥವಾ ಜಿಲ್ಲಾಧಿಕಾರಿಗಳ ಮೇಲೆ ನಡೆಸಿರುವ ಹಲ್ಲೆಯಂತಾಗಿದೆ. ಹಲ್ಲೆನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಆಶಾ ಕಾರ್ಯಕರ್ತೆಯರು ಸರ್ಕಾರದ ಆದೇಶದ ಮೇರೆಗೆ ಆರೋಗ್ಯ ತಪಾಸಣೆಗೆ ಮನೆ-ಮನೆಗೆ ಭೇಟಿ ನೀಡುತ್ತಾರೆ. ಜನಗಣತಿ, ಎನ್‍ಪಿಆರ್ ಮತ್ತಿತರ ಯಾವುದೇ ಸರ್ವೇ ಮಾಡಿಸುತ್ತಿಲ್ಲ. ಅವರಿಗೆ ಸಹಕಾರ ನೀಡಬೇಕೆಂದು ಎಂದು ಅವರು ಕೋರಿದ್ದಾರೆ.
ದೆಹಲಿ ಮತ್ತು ಇತರೆಡೆ ತೆರಳಿದ್ದ ಜಮಾತ್ ತಬ್ಲೀಘಿ ಸದಸ್ಯರು ಮುಕ್ತವಾಗಿ ಮುಂದೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದರು. ಇನ್ನು ನಗರದ ಆಸ್ಪತ್ರೆಗಳಲ್ಲಿರುವ ಆರೋಗ್ಯ ಕಾರ್ಯಕರ್ತೆಯರು ರೋಗಿಗಳನ್ನು ಸರಿಯಾಗಿ ಪ್ರಾಥಮಿಕ ಪರೀಕ್ಷೆ ಕೂಡ ನಡೆಸದೆ, ಇಎಸ್‍ಐ ಆಸ್ಪತ್ರೆಗೆ ಹೋಗುವಂತೆ ಶಿಫಾರಸು ಮಾಡುತ್ತಿರುವುದು ತಿಳಿದು ಬಂದಿದೆ. ಈ ಸಂಬಂಧ ನಿರ್ಲಕ್ಷ್ಯ ತೋರುವ “ಡಿ” ಗ್ರೂಪ್ ನಿಂದ ಹಿಡಿದು ವೈದ್ಯರ ವರೆಗೆ ಆರೋಗ್ಯ ತುರ್ತುಪರಿಸ್ಥಿತಿ ಉಲ್ಲಂಘನೆ ಆರೋಪದ ಮೇಲೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಮದು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು: ಆಸ್ಪತ್ರೆಗೆ ಬಂದಿದ್ದ ರೋಗಿಗೆ ವೈದ್ಯರು ಡ್ರಿಪ್ ಹಾಕಿ ಆತನ ಸಂಬಂಧಿಯ ಕೈಯಲ್ಲೇ ಗ್ಲೂಕೋಸ್ ಬಾಟಲಿಯನ್ನ ಕೊಟ್ಟು ಕಳುಹಿಸಿರುವ ಅಮಾನವೀಯ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ತೀವ್ರ ಜ್ವರ, ಕೈಕಾಲು ನಡುಕ ಹಾಗೂ ಸುಸ್ತು ಎಂದು ಜಿಲ್ಲಾಸ್ಪತ್ರಗೆ ದಾಖಲಾಗಿದ್ದರು. ಆಸ್ಪತ್ರೆಗೆ ಬಂದವರಿಗೆ ಎಮರ್ಜೆನ್ಸಿ ವಾರ್ಡ್ ನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ನರ್ಸ್ ಗಳು ಕೈಗೆ ಸೂಜಿ ಚುಚ್ಚಿ ಡ್ರಿಪ್ ಹಾಕಿದ್ದಾರೆ. ಚಿಕಿತ್ಸೆಯ ಬಳಿಕ ಅಡ್ಮಿಟ್ ಆಗಬೇಕೆಂದು ಸೂಚಿಸಿದ್ದಾರೆ. ಬಳಿಕ ವೈದ್ಯರು ರೋಗಿಯ ಸಂಬಂಧಿಯ ಕೈಯಲ್ಲೇ ಡ್ರಿಪ್ ಬಾಟಲಿ ಕೊಟ್ಟು ವಾರ್ಡಿಗೆ ಕಳುಹಿಸಿದ್ದಾರೆ.
ರೋಗಿಗೆ ವ್ಹೀಲ್‍ಚೇರ್ ಅಥವಾ ಸ್ಟ್ರೆಚ್ಚರ್ ಕೂಡ ಕೂಡದೇ ವೈದ್ಯರು ಹಾಗೂ ಸಿಬ್ಬಂದಿ ಕಳಿಸಿದ್ದಾರೆ. ಎಮರ್ಜೆನ್ಸಿ ವಾರ್ಡಿನಿಂದ ಸುಮಾರು ನೂರು ಮೀಟರ್ ದೂರದ ವಾರ್ಡಿಗೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆ ನಡೆದೇ ಹೋಗಿದ್ದು, ಇದನ್ನ ಕಂಡ ಸ್ಥಳೀಯರು ಜಿಲ್ಲಾಸ್ಪತ್ರೆ, ವೈದ್ಯರು ಹಾಗೂ ನರ್ಸ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಇದೇ ಜಿಲ್ಲಾಸ್ಪತ್ರೆಯಲ್ಲಿ ವೃದ್ಧೆಯೊಬ್ಬರಿಗೂ ಕೂಡ ವ್ಹೀಲ್‍ಚೇರ್ ನೀಡಿರಲಿಲ್ಲ. ಹೀಗಾಗಿ ಸಂಬಂಧಿಕರು ವೃದ್ಧೆಯನ್ನು ಹೊತ್ತುಕೊಂಡೇ ಹೋಗಿದ್ದರು. ಇದನ್ನ ಕಣ್ಣಾರೆ ಕಂಡ ಆಸ್ಪತ್ರೆಯ ಇತರ ರೋಗಿಗಳು ಹಾಗೂ ಸ್ಥಳೀಯರು ಜಿಲ್ಲಾಸ್ಪತ್ರೆಯಲ್ಲಿ ಸ್ಟ್ರೆಚ್ಚರ್ ಕೂಡ ಇಲ್ವಾ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು: ಕೊರೊನಾ ವಿರುದ್ಧ ದೇಶದ ಹೋರಾಟಕ್ಕೆ ಎಲ್ಲರೂ ಸಾಥ್ ನೀಡಿ, ಸರ್ಕಾರದ ಆದೇಶಕ್ಕೆ ಸಹಕರಿಸಿ, ಮನೆಯಲ್ಲಿಯೇ ಇದ್ದು ಸೋಂಕು ಹರಡುವಿಕೆಗೆ ಕಡಿವಾಣ ಹಾಕಿ ಎಂದು ಸ್ಯಾಂಡಲ್‍ವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಅನೇಕ ಸಿನಿಮಾ ಕಲಾವಿದರು, ನಟ, ನಟಿಯರು ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕೆಲ ಜನರು ಮಾತ್ರ ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ಭೀಕರತೆ ಅರಿಯದೆ ಮುರ್ಖತನ ಪ್ರದರ್ಶಿಸುತ್ತಿದ್ದಾರೆ. ಇದನ್ನು ಕಂಡು ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮದೇ ಶೈಲಿಯಲ್ಲಿ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಕೊರೊನಾ ವೈರಸ್ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ನಾವು ಏನು ಮಾಡಬೇಕು? ನಮ್ಮ ಜವಾಬ್ದಾರಿಗಳೇನು ಎಂದು ಬೆಂಗಳೂರು ಸಿಟಿ ಪೊಲೀಸರ ಸಹಯೋಗದಲ್ಲಿ ಸಿದ್ಧಪಡಿಸಿರುವ ವಿಡಿಯೋದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಈ ಕೊರೊನಾಗೆ ತಿಥಿ ಮಾಡ್ಬೇಕು ಅಂದ್ರೆ ನೀವು ಮನೆಯಲ್ಲೇ ಇದ್ದು ಸುರಕ್ಷಿತರಾಗಿರಿ. ಸುಮ್ಮನೆ ಹೊರಬಂದು ಸೋಂಕಿಗೆ ಅತಿಥಿ ಆಗಬೇಡಿ ಎಂದು ಮಲ್ಲ ಕಿವಿ ಮಾತು ಹೇಳಿದ್ದಾರೆ.
ವಿಡಿಯೋದಲ್ಲಿ ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ವಿಡಿಯೋದಲ್ಲಿ ಮನೋರಂಜನ್ ಮತ್ತು ವಿಕ್ರಂ ಕೂಡ ತಂದೆಗೆ ಸಾಥ್ ಕೊಟ್ಟಿದ್ದಾರೆ. ಕೊರೊನಾಗೆ ಬೆಂಕಿ ಹಚ್ಚಬೇಕು ಅಂದರೆ ನಿಮ್ಮನೆ ದೀಪ ಆರಬಾರದು. ಹೀಗಾಗಿ ನೀವಷ್ಟೂ ಜನ ಮನೆಯಲ್ಲಿರಬೇಕು. ದೇವಸ್ಥಾನಗಳೆಲ್ಲವೂ ಮುಚ್ಚಿದೆ ಅಂದರೆ ದೇವರು ಇಲ್ಲ ಅಂತಾನಾ? ಡಾಕ್ಟರ್ಸ್‍ಗಳಲ್ಲಿ, ನರ್ಸ್‍ಗಳಲ್ಲಿ, ಪೊಲೀಸರಲ್ಲಿ ಹಾಗೂ ಈ ಸಂದರ್ಭದಲ್ಲಿ ಸೇವೆ ಮಾಡುತ್ತಿರುವ ಪ್ರತಿಯೊಬ್ಬರಲ್ಲಿಯೂ ಆ ದೇವರು ಇದ್ದಾನೆ. ಆ ದೇವರ ಮೇಲೆ ನಿಮಗೆ ನಂಬಿಕೆ ಇದ್ದರೆ ನೀವು ಮಾಡಬೇಕಿರುವುದು ಇಷ್ಟೇ. ಅವರಷ್ಟೂ ಜನರಕ್ಕೆ ಒಂದು ಸಲ್ಯೂಟ್, ನಮಸ್ಕಾರ, ಒಂದು ಫ್ಲೈಯಿಂಗ್ ಕಿಸ್ ಕೊಟ್ಟು ಧ್ಯನವಾದ ಹೇಳಿ ಎಂದಿದ್ದಾರೆ.
ಎಷ್ಟು ಜನ್ಮವೆತ್ತಿದರೂ ನಮಗಾಗಿ ಈ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವವರ ಋಣ ತೀರಿಸಲು ಆಗೊಲ್ಲ. ಅದನ್ನು ತೀರಿಸಬೇಕು ಅಂತ ನಿಮಗೆ ಅನಿಸಿದರೆ ನೀವು ಮನೆಯಲ್ಲಿಯೇ ಇರಿ. ವೈದ್ಯರು, ಪೊಲೀಸರಿಗೆ ಕೊರೊನಾ ವಿರುದ್ಧ ಹೋರಾಡಲು ಬಿಡಿ. ನಿಮ್ಮ ಜೊತೆ ಹೋರಾಡುವುದಲ್ಲ ಪೊಲೀಸರ ಕೆಲಸವಲ್ಲ ಎಂದು ತಿಳಿ ಹೇಳಿದ್ದಾರೆ.
ಕೊರೊನಾಗೆ ತಿಥಿ ಮಾಡಬೇಕು ಅಂದರೆ ನೀವು ಅದಕ್ಕೆ ಅತಿಥಿಯಾಗಬಾರದು. ಮನುಷ್ಯನಿಗೆ ಕಷ್ಟ ಬಂದಾಗಲೇ ಆ ಪರಿಸ್ಥಿತಿಯನ್ನು ಆತ ಹೇಗೆ ನಿಭಾಯಿಸುತ್ತಾನೆ ಎನ್ನೋದರ ಮೇಲೆ ಆತನ ವ್ಯಕ್ತಿತ್ವ ಗೊತ್ತಾಗುತ್ತೆ. ಅಂತಹದೊಂದು ಪರೀಕ್ಷೆ ನಮ್ಮೆಲ್ಲರಿಗೂ ಬಂದಿದೆ. ಈ ಪರೀಕ್ಷೆಯನ್ನು ನಾವು ಪಾಸು ಮಾಡಬೇಕು ಎಂದರೆ ನೀವೆಲ್ಲರೂ ಮನೆಯಲ್ಲಿ ಇರಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ಆದರೆ ಫೇಲ್ ಆಗಬೇಕು ಎಂದರೆ ನಿಮ್ಮಿ ಇಷ್ಟ. ನೀವು ಮನೆಯಿಂದ ಹೊರಗೆ ಬನ್ನಿ. ಆಗ ನಿಮಗೆ ನಿಮ್ಮ ಹೆಸರು ಕೂಡ ನೆನಪಿರೊಲ್ಲ. ಏಕೆಂದರೆ ಅದೊಂದು ಪೇಷೆಂಟ್ ನಂಬರ್ ಆಗಿಬಿಡುತ್ತದೆ. ನೀವು ಪೇಷೆಂಟ್ ಆಗಲು ಬಯಸಿದ್ದೀರಾ ಅಥವಾ ಮನೆಯಲ್ಲಿ ಪೇಷೆನ್ಸ್ ನಿಂದ ಇರಲು ಬಯಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ಕೊನೆಯಲ್ಲಿ ಕ್ರೇಜಿ ಸ್ಟಾರ್ ಮತ್ತೊಮ್ಮೆ ಡಾಕ್ಟರ್‍ಗಳಿಗೆ, ನರ್ಸ್‍ಗಳಿಗೆ, ಪೊಲೀಸರಿಗೆ, ಅವರ ಕುಟುಂಬದವರಿಗೆ, ಸರ್ಕಾರದವರಿಗೆ ಹಾಘೂ ನಮಗಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರಿಗೂ ನಮ್ಮ ಕಡೆಯಿಂದೊಂದು ಸಲ್ಯೂಟ್ ಎಂದು ಧನ್ಯವಾದ ತಿಳಿಸಿದ್ದಾರೆ.
ಈ ವಿಡಿಯೋವನ್ನು ರವಿಚಂದ್ರನ್ ಪುತ್ರ ನಟ ಮನೋರಂಜನ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾವು ಮನೆಯಲ್ಲೇ ಉಳಿದರೆ ಮಾತ್ರ ಕೋವಿಡ್-19 ಅರೆಸ್ಟ್ ಆಗಲು ಸಾಧ್ಯ, ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಉಡುಪಿ: ಮದ್ಯವ್ಯಸನಿಗಳ ಹಿತ ಕಾಯ್ದು ಸರ್ಕಾರದ ಬೊಕ್ಕಸ ತುಂಬಿಸುವುದು ಅಬಕಾರಿ ಇಲಾಖೆಯ ಕೆಲಸ. ಆದರೆ ಕೊರೊನಾ ವೈರಸ್‍ನಿಂದ ಭಾರತ ಲಾಕ್‍ಡೌನ್ ಆಗಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿ ಅಬಕಾರಿ ಇಲಾಖೆ ಜನ ಮೆಚ್ಚುವ ಕೆಲಸ ಮಾಡಿದೆ.
ಉಡುಪಿ ಅಬಕಾರಿ ಇಲಾಖೆ ಮಹಾಮಾರಿ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸರ್ಕಾರಿ ಸಿಬ್ಬಂದಿಗಾಗಿ 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರು ಮಾಡಿದೆ. ಪೈಲೆಟ್ ಪ್ರಾಜೆಕ್ಟ್ ಆಗಿ ಉಡುಪಿಯಲ್ಲಿ ತಯಾರು ಮಾಡಿದ ಸ್ಯಾನಿಟೈಸರ್ ರಾಜ್ಯಕ್ಕೆ ಮಾದರಿಯಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ವಿಪರೀತ ಹರಡಲು ಶುರುವಾದಾಗ ಸ್ಯಾನಿಟೈಸರ್ ಮತ್ತು ಮಾಸ್‍ಗಾಗಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕಲಾಗಿತ್ತು. ಕಂಪನಿಗಳಲ್ಲೂ ಸ್ಟಾಕ್ ಸಂಪೂರ್ಣ ಖಾಲಿಯಾಯಿತು. ರಾಜ್ಯ ಸಂಪೂರ್ಣ ಲಾಕ್‍ಡೌನ್ ಆದ ಸಂದರ್ಭ ಅಬಕಾರಿ ಇಲಾಖೆಗೆ ಪರ್ಯಾಯ ಜವಾಬ್ದಾರಿಯೊಂದನ್ನು ಹೊತ್ತುಕೊಂಡಿತು. ತನ್ನ ಇಲಾಖೆಯ ಮೂಲಕ ವೈದ್ಯಕೀಯ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸ್ಯಾನಿಟೈಸರ್ ತಯಾರು ಮಾಡಿಕೊಡಲು ಇಲಾಖೆ ಪಣ ತೊಟ್ಟಿತ್ತು.
ಕೊರೊನಾ ವಿರುದ್ಧ ಹೋರಾಡುವ ವೈದ್ಯರು, ನರ್ಸ್, ಆರೋಗ್ಯ ಸಹಾಯಕರು, ಕಂದಾಯ ಇಲಾಖೆ ಹೀಗೆ ಎಲ್ಲಾ ಸರ್ಕಾರಿ ಸಿಬ್ಬಂದಿಗೆ, ಪೊಲೀಸರಿಗೆ ಅಗತ್ಯವಾದ ಸ್ಯಾನಿಟೈಸರ್ ತಯಾರು ಮಾಡಿ ಉಡುಪಿಯ ಅಬಕಾರಿ ಇಲಾಖೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉಡುಪಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಬಕಾರಿ ಇಲಾಖೆ ಔಷಧ ನಿಯಂತ್ರಣ ಇಲಾಖೆಯಿಂದ ಸ್ಯಾನಿಟೈಸರ್ ತಯಾರಿಸಲು ಐದು ವರ್ಷಕ್ಕೆ ಪರವಾನಗಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಈಗಾಗಲೇ 4,000 ಲೀಟರ್ ಸ್ಯಾನಿಟೈಸರನ್ನು ತಯಾರು ಮಾಡಿಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಇನ್ನೂ 2,000 ಲೀಟರ್ ಸ್ಯಾನಿಟೈಸರ್ ಗೆ ಬೇಡಿಕೆಯಿದೆ.
375 ml ಸ್ಯಾನಿಟೈಸರ್ ಬಾಟಲಿಗೆ ಮಾರುಕಟ್ಟೆಯಲ್ಲಿ 197.50 ರೂಪಾಯಿ ವೆಚ್ಚ ತಗುಲುತ್ತದೆ. ಆದರೆ ಅಬಕಾರಿ ಇಲಾಖೆ ಸ್ಯಾನಿಟೈಸರ್ ಬಾಟಲಿಗೆ 96 ರೂಪಾಯಿ ಮಾತ್ರ ನಿಗದಿ ಮಾಡಿದೆ. ಇದರ ಖರ್ಚನ್ನು ಉಡುಪಿ ಜಿಲ್ಲಾಡಳಿತವು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಭರಿಸುತ್ತಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಬಕಾರಿ ಇಲಾಖೆಯ ಉಪ ಆಯುಕ್ತ ನಾಗೇಶ್ ಕುಮಾರ್, ಪಡುಬಿದ್ರೆಯ ಡಿಸ್ಟಿಲರಿ ಘಟಕದಲ್ಲಿ ನಾವು ಸ್ಯಾನಿಟೈಸರ್ ತಯಾರು ಮಾಡುತ್ತಿದ್ದೇವೆ. ಸರ್ಕಾರಿ ಇಲಾಖೆಗೆ ನಾವು ನಿಗದಿತ ಪ್ರಮಾಣದಲ್ಲಿ ಇದನ್ನು ಪೂರೈಕೆ ಮಾಡುತ್ತಿದ್ದೇವೆ. ಕಳ್ಳಬಟ್ಟಿ ಸಾರಾಯಿ ಮತ್ತು ಅಕ್ರಮ ಮದ್ಯ ಮಾರಾಟವನ್ನು ತಡೆಯುವ ಜವಾಬ್ದಾರಿ ಜೊತೆ ಸರ್ಕಾರಿ ಎಂಎಸ್‍ಐಎಲ್‍ಗೆ ರಕ್ಷಣೆ ಕೊಡುತ್ತಿದ್ದೇವೆ. ಈ ನಡುವೆ ಜನ ಹಿತವಾದ ಕೆಲಸ ಮಾಡುತ್ತಿದ್ದೇವೆ ಎಂಬ ತೃಪ್ತಿ ಇಲಾಖೆಗೆ ಇದೆ. ಯಾವುದೇ ಕಾರಣಕ್ಕೂ ಇದನ್ನು ದುರುಪಯೋಗ ಮಾಡಬಾರದು. ಸ್ಯಾನಿಟೈಸರ್ ನಲ್ಲಿ ವಿಷಕಾರಿ ಅಂಶಗಳು ಇವೆ ಎಂದು ಅವರು ಮಾಹಿತಿ ನೀಡಿದರು.
ಬೀದರ್: ಮಹಾಮಾರಿ ಕೊರೊನಾಗೆ ಈಗಾಗಾಲೇ ವಿಶ್ವವೇ ತಲ್ಲಣವಾಗಿದ್ದು, ದೇಶದಲ್ಲಿ ಕೂಡಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಗಡಿ ಜಿಲ್ಲೆ ಬೀದರ್ ನಿಂದ ಜಮಾತ್‍ಗೆ 28 ಜನ ಹೋಗಿದ್ದಾರೆ ಎಂದು ಮೊದಲು ಮಾಹಿತಿ ಸಿಕ್ಕಿತ್ತು. ಆದರೆ ಈಗ 25 ಜನರಲ್ಲ ಈ ಸಂಖ್ಯೆ ಬಹಳ ಜಾಸ್ತಿಯಿದೆ ಎನ್ನುವ ವಿಚಾರ ಜಿಲ್ಲಾಡಳಿತಕ್ಕೆ ಸಿಕ್ಕಿದೆ.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ವಿದೇಶದಿಂದ ಹಾಗೂ ದೆಹಲಿಯ ಜಮಾತ್‍ನಿಂದ ಬಂದವರ ತಲಾಶ್‍ಗೆ ವೈದ್ಯರ ಹಾಗೂ ಆಶಾ ಕಾರ್ಯಕರ್ತೆಯರು ಫೀಲ್ಡಿಗೆ ಇಳಿದಿದ್ದಾರೆ. ಆದರೆ ಈ ವೈದ್ಯರ ಟೀಂಗೆ ಜನರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ವೈದ್ಯರ ಹಾಗೂ ಆಶಾ ಕಾರ್ಯಕರ್ತೆಯರು ಆತಂಕದಲ್ಲಿ ದೆಹಲಿಯಿಂದ ಬಂದ ಜನರನ್ನು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಜಮಾತ್ ಗೆ ಹೋಗಿದ್ದ 28 ಜನರ ಪೈಕಿ 10 ಜನಕ್ಕೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ಭಯದಿಂದ ಜಿಲ್ಲಾಡಳಿತ ಮಾಹಿತಿ ಸಂಗ್ರಹಣೆಗೆ ಹೋದರೆ ಜನರು ಸಾಥ್ ನೀಡದೆ ವಿನಾಕಾರಣ ವೈದ್ಯರ ಬಳಿ ಸಿಕ್ಕಾಪಟ್ಟೆ ಪ್ರಶ್ನೆ ಕೇಳುತ್ತಿದ್ದಾರೆ. ಜೀವದ ಹಂಗು ತೊರೆದು ಕೊರೊನಾ ನಿಯಂತ್ರಿಸಲು ಶ್ರಮ ಪಡುತ್ತಿದ್ದಾಗ ಜನ ನಮಗೆ ಸಹಕಾರ ನೀಡುತ್ತಿಲ್ಲ ಎಂದು ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಝಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ಉಚಿತ ಆರೋಗ್ಯ ಸಹಾಯ 080-29711171ಕ್ಕೆ ಕರೆ ಮಾಡಿ ಸಂಪರ್ಕಿಸಬೇಕೆಂದು ಹೇಳಿದೆ.
ದೇಶಾದ್ಯಂತ ತಬ್ಲಿಘಿ ಜಮಾತ್‍ಗೆ ತೆರಳಿದವರು ಮತ್ತು ಅವರ ಸಂಪರ್ಕಕ್ಕೆ ಬಂದ ಒಟ್ಟು 26 ಸಾವಿರ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.