ಕೋಲ್ಕತ್ತಾ: ಆಗಸ್ಟ್‌ನಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರಿಗೆ ಬೆಂಬಲಿಸಿ ಪಶ್ಚಿಮ ಬಂಗಾಳದ ಆರ್‌ಜಿ ಕರ್ ಆಸ್ಪತ್ರೆಯ (RG Kar Hospital) 45 ಕ್ಕೂ ಹೆಚ್ಚು ಹಿರಿಯ ವೈದ್ಯರು (Doctors) ಮತ್ತು ಅಧ್ಯಾಪಕರು ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಸಲ್ಲಿಸುವಾಗ ಹಿರಿಯ ವೈದ್ಯರು, ಕಿರಿಯ ಸಹೋದ್ಯೋಗಿಗಳ ಬೇಡಿಕೆಗಳನ್ನು ಈಡೇರಿಸಿಲ್ಲ. ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ತನಿಖೆಯಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಸದ್ಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರತಿಭಟನಾ ನಿರತ ವೈದ್ಯರ ಆರೋಗ್ಯ ಹದಗೆಟ್ಟಿದೆ. ಪ್ರತಿಭಟನಾನಿರತ ವೈದ್ಯರು ಮತ್ತು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರ ಜೊತೆ ರಾಜಿ ಮಾಡಿಕೊಳ್ಳುವಂತೆ ಸರ್ಕಾರವನ್ನು ಕೋರುತ್ತೇವೆ ಎಂದು ಆರ್‌ಜಿ ಕರ್ ಆಸ್ಪತ್ರೆ ಆಡಳಿತಕ್ಕೆ ಬರೆದ ಪತ್ರದಲ್ಲಿ ವೈದ್ಯರು ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೈದ್ಯರ ಹದಗೆಟ್ಟ ಸ್ಥಿತಿಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವಂತೆ ತೋರುತ್ತಿದೆ. ಇದೇ ಕಾರಣಕ್ಕೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ಈ ಬೆಳವಣಿಗೆಯ ನಡುವೆ ಮತ್ತೊಂದು ವೈದ್ಯರ ಸಂಘಟನೆಯಾದ ಜಾಯಿಂಟ್ ಪ್ಲಾಟ್‌ಫಾರ್ಮ್ ಆಫ್ ಡಾಕ್ಟರ್ಸ್ (ಜೆಪಿಡಿ) ಸಹ ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಬೆಂಬಲವಾಗಿ ಹೇಳಿಕೆಯನ್ನು ನೀಡಿದೆ.
ಆರ್‌ಜಿ ಕರ್ ಅತ್ಯಾಚಾರ-ಹತ್ಯೆ ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ದುರ್ಗಾಪೂಜೆ ಸಂಭ್ರಮದ ನಡುವೆಯೂ ಕಿರಿಯ ವೈದ್ಯರು ಸತತ ನಾಲ್ಕನೇ ದಿನವೂ ಮಂಗಳವಾರ ತಮ್ಮ ಆಮರಣಾಂತ ಉಪವಾಸವನ್ನು ಮುಂದುವರೆಸಿದರು. ಸುಮಾರು 15 ಹಿರಿಯ ವೈದ್ಯರು ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ನಡೆಸುವ ಮೂಲಕ ಅವರೊಂದಿಗೆ ಸೇರಿ ಒಗ್ಗಟ್ಟು ಪ್ರದರ್ಶಿಸಿದರು.























