Tag: doctors

  • ಹೆಸರನ್ನೇ ಹೇಳದೆ ಆಟೋ ಚಾಲಕರಿಗೆ ವೈದ್ಯರ ತಂಡದಿಂದ ಧನಸಹಾಯ

    ಹೆಸರನ್ನೇ ಹೇಳದೆ ಆಟೋ ಚಾಲಕರಿಗೆ ವೈದ್ಯರ ತಂಡದಿಂದ ಧನಸಹಾಯ

    – ವೈದ್ಯಕೀಯ ಸೇವೆಯ ಜೊತೆ ಸಮಾಜ ಸೇವೆ

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವನ್ನು ಲಾಕ್‍ಡೌನ್ ಮಾಡಿ ತಿಂಗಳು ಕಳೆಯುತ್ತಿದೆ. ಈ ನಡುವೆ ದುಡಿಮೆಯೂ ಇಲ್ಲದೆ ಆಟೋ ಚಾಲಕರ ಸ್ಥಿತಿಯೂ ಶೋಚನೀಯವಾಗಿದೆ.

    ಆಟೋಗಳನ್ನು ಬಾಡಿಗೆ ಪಡೆದು ದುಡಿಯುತ್ತಿದ್ದ ಚಾಲಕರ ಸ್ಥಿತಿಯಂತೂ ಇನ್ನೂ ಗಂಭೀರ. ಹೀಗಾಗಿಯೇ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಆಟೋ ಓಡಿಸಿಕೊಂಡು ಬದುಕು ನಡೆಸುತ್ತಿದ್ದ, 40 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಹೆಸರನ್ನು ಹೇಳದ ಮೂವರು ವೈದ್ಯರ ತಂಡವೊಂದು ಆರ್ಥಿಕ ನೆರವು ನೀಡಿದೆ.

    ಪ್ರತೀ ಚಾಲಕರಿಗೆ 1 ಸಾವಿರ ರೂಪಾಯಿ ಧನಸಹಾಯ ನೀಡಿ ನೊಂದವರಿಗೆ ಸಮಾಧಾನ ಮಾಡಿದೆ. ಸೇವಾ ಭಾರತಿ ಸಂಸ್ಥೆಯ ಮೂಲಕ ಈ ಆಟೋ ಚಾಲಕರಿಗೆ ತಲಾ ಒಂದು ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಿ ತಾತ್ಕಾಲಿಕ ವೆಚ್ಚಕ್ಕೆ ಸಹಾಯ ಮಾಡಿದ್ದಾರೆ. ಆ ಮೂಲಕ ವೈದ್ಯರು ಮಾನವೀಯತೆ ಮೆರೆದಿದ್ದಾರೆ. ವೈದ್ಯರ ಈ ಸಹಾಯಕ್ಕೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಧನ್ಯವಾದ ಅರ್ಪಿಸಿದೆ.

  • ಕರ್ನಾಟಕಕ್ಕೆ Be Careful ಎಂದ ಕೇಂದ್ರ ಆರೋಗ್ಯ ಇಲಾಖೆ

    ಕರ್ನಾಟಕಕ್ಕೆ Be Careful ಎಂದ ಕೇಂದ್ರ ಆರೋಗ್ಯ ಇಲಾಖೆ

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇತ್ತ ಸಾವಿನ ಸಂಖ್ಯೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಿ ಎಂದು ಕರ್ನಾಟಕಕ್ಕೆ ಎಚ್ಚರಿಕೆ ನೀಡಿದೆ.

    ಕೇರಳದಲ್ಲಿ ಕೊರೊನಾ ವೈರಸ್‍ನಿಂದ ಮೂವರು ಮೃತಪಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೇರಳಕ್ಕಿಂತ ಕರ್ನಾಟಕದಲ್ಲಿ ಕೊರೊನಾ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಕರ್ನಾಟಕಕ್ಕೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ತಜ್ಞ ವೈದ್ಯರ ಅಭಿಪ್ರಾಯ ಪಡೆದಿದೆ. ಇದನ್ನೂ ಓದಿ: ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಕೊರೊನಾದಿಂದ ಸಾವು ಹೇಗೆ ಸಂಭವಿಸುತ್ತೆ ಎನ್ನುವುದನ್ನು ಸಮರ್ಪಕವಾಗಿ ಇದುವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಶ್ವಾಸಕೋಶಕ್ಕೆ ಆಟ್ಯಾಕ್ ಆದಾಗ ಯಾವ ಸಂದರ್ಭದಲ್ಲಿ ರೋಗಿಯ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾನೆ ಎನ್ನುವುದು ಇನ್ನೂ ನಿಗೂಢವಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ವೈದ್ಯರ ಅಭಿಪ್ರಾಯ ಕಲೆಹಾಕಿದೆ.

    ಕರ್ನಾಟಕದಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಇದ್ದರೂ ರೋಗಿಗಳು ಸಾವನ್ನಪ್ಪುತ್ತಿರುವುದು ಆತಂಕವಾಗಿದೆ. ರೋಗ ಪತ್ತೆ ಮಾಡುವುದು ತಡವಾಗುತ್ತಿದೆ. ಸೋಂಕಿತ ವ್ಯಕ್ತಿಯ ಪರಿಸ್ಥಿತಿ ಕೈ ಮೀರಿದಾಗ ಪ್ರಕರಣ ತಿಳಿಯುತ್ತದೆ. ಕೊನೆ ಕ್ಷಣದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ಜ್ವರ ಪರೀಕ್ಷೆ ಇನ್ನಷ್ಟು ವೇಗದಲ್ಲಿ ಆಗಬೇಕು. ಮೃತ 14 ಮಂದಿಯಲ್ಲಿ ಬಹುತೇಕ ರೋಗಿಗಳು 60 ವರ್ಷ ಮೇಲ್ಪಟ್ಟವರು. ಹೆಚ್ಚಿನವರಲ್ಲಿ ಹೃದ್ರೋಗ, ಕಿಡ್ನಿ, ಸಕ್ಕರೆ ಕಾಯಿಲೆ ಇದೆ. ಅಲ್ಲದೇ ಶ್ವಾಸಕೋಸದ ತೊಂದರೆ ಇರುವ ಕೊರೊನಾ ರೋಗಿಗಳ ಮೇಲೆ ಇನ್ನಷ್ಟು ನಿಗಾ ವಹಿಸಬೇಕು ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕಾ ವರದಿ ಸಲ್ಲಿಸಿದ್ದಾರೆ.

    ಹಿರಿಯ ರೋಗಿಗಳಲ್ಲಿ ಯಾವಾಗ ಆಕ್ಸಿಜನ್ ಕಡಿಮೆಯಾಗುತ್ತೆ ಎನ್ನುವ ಮಾಹಿತಿ ಮಾನಿಟರ್ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಈ ಬಗ್ಗೆ ನಿಗಾ ವಹಿಸಬೇಕು. ಕೊರೊನಾ ರೋಗ ಪೀಡಿತರ ಚಿಕಿತ್ಸೆ ವೆಂಟಿಲೇಟರ್ ಹೆಚ್ಚಾಗಬೇಕು. ಜೊತೆಗೆ ಕೊರೊನಾದಿಂದ ಗುಣಮುಖರಾದವರ ರೋಗ ನಿರೋಧಕ ಶಕ್ತಿ ಬಗ್ಗೆ ಅಧ್ಯಯನ ಮಾಡಬೇಕು. ಸಂಪೂರ್ಣ ಕೇರಳ ಮಾದರಿಗೆ ಮೊರೆ ಹೋಗಬೇಕು ಅಂತ ತಜ್ಞರು ಶಿಫಾರಸ್ಸು ಮಾಡಿದ್ದಾರೆ.

  • ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿದ್ರು: ಕೊರೊನಾ ಗೆದ್ದವರ ಮಾತು

    ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿದ್ರು: ಕೊರೊನಾ ಗೆದ್ದವರ ಮಾತು

    -ಬರುವಾಗ ಅವರೇ ಬಟ್ಟೆ, ಚಪ್ಪಲಿ ತಂದುಕೊಟ್ರು

    ಕಾರವಾರ: ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ ಜೀವನ ಪಡೆದುಕೊಂಡ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಇಬ್ಬರು ನಿವಾಸಿಗಳು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆಯೇ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಇಂದು ಡಿಸ್ಚಾರ್ಜ್ ಆಗಿರುವ ಸೋಂಕಿತ ರೋಗಿ ಸಂಖ್ಯೆ 98 ಮತ್ತೆ ಆರೋಗ್ಯವಂತರಾಗಿ ಮರಳಿರುವುದಕ್ಕೆ ದೇವರು, ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

    ದೇವರ ದಯೆಯಿಂದ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಂತೋಷದ ಅನುಭವವಾಗುತ್ತಿದೆ. ಆಸ್ಪತ್ರೆಯಲ್ಲೂ ನಮಗೆ ಯಾವುದೇ ತೊಂದರೆಯಾಗಿಲ್ಲ. ಆರೋಗ್ಯಾಧಿಕಾರಿ, ಡಿಸಿ, ಪೊಲೀಸ್ ಅಧಿಕಾರಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಹಳ ಉತ್ತಮವಾಗಿ ನಮಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರವೂ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದು, ಒಳ್ಳೆಯ ಸೌಲಭ್ಯಗಳನ್ನೂ ಒದಗಿಸಿದೆ.

    ತೊಟ್ಟ ಬಟ್ಟೆಯಲ್ಲೇ ಕಾರವಾರದ ಪತಂಜಲಿ ಆಸ್ಪತ್ರೆಗೆ ತೆರಳಿದ್ದವು, ಬರುವಾಗ ಅವರ ಬಟ್ಟೆ ಹಾಕಿಕೊಂಡು ಬಂದಿದ್ದೆವು. ಅವರೇ ಚಪ್ಪಲಿಯನ್ನೂ ಕೊಟ್ಟಿದ್ದರು, ಮಹಿಳೆಯರಿಗೂ ಬಟ್ಟೆ ನೀಡಿದ್ದಾರೆ. ವೈದ್ಯಾಧಿಕಾರಿಗಳು ನಮ್ಮಲ್ಲಿ ಬಹಳಷ್ಟು ಚೆನ್ನಾಗಿದ್ದರು. ಉತ್ತಮ ಚಿಕಿತ್ಸೆ ನೀಡಿದರು. ನಮಗಾಗಿ ವೈದ್ಯಾಧಿಕಾರಿಗಳು ದೇವರಲ್ಲಿ ಪ್ರಾರ್ಥನೆ ಕೂಡಾ ಮಾಡಿದ್ದಾರೆ. ಅತ್ಯುತ್ತಮವಾಗಿ ನಮ್ಮ ಜತೆ ಬೆರೆತುಕೊಂಡು ಗುಣಮುಖಗೊಳಿಸಿದರು ಎಂದು ಡಿಸ್ಟಾರ್ಜ್ ಗೊಂಡ ಸೋಂಕಿತ ಸಂಖ್ಯೆ 98 ಹಾಗೂ ಸೋಂಕಿತ 36 ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಇಂದು ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸೋಂಕಿತ ರೋಗಿ ಸಂಖ್ಯೆ 98, ಭಟ್ಕಳದ 26 ವರ್ಷದ ಯವಕನಾಗಿದ್ದು, ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದ. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ ಮೂಲಕ ಭಟ್ಕಳಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿತ್ತು.

    ಅಲ್ಲದೇ ಈ ಯುವಕನಲ್ಲಿ ಸೋಂಕು ಪತ್ತೆಯಾಗುವ ಮುನ್ನ ಮೂರು ದಿನಗಳ ಹಿಂದೆ ಆತನ ಸಹೋದರನಲ್ಲೂ ಸೋಂಕು ಪತ್ತೆಯಾಗಿತ್ತು. ಈ ಯುವಕನಲ್ಲಿ ಸೋಂಕು ದೃಢಪಟ್ಟ ಬಳಿಕ ಯುವಕನನ್ನು ಮಾರ್ಚ್ 31ರಂದು ಕಾರವಾರದ ನೌಕಾ ನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 19 ದಿನಗಳ ಬಳಿಕ ಕೊರೊನಾ ವೈರಸ್ ಕಾಟದಿಂದ ಯುವಕ ಗುಣಮುಖನಾಗಿದ್ದಾನೆ.

    ಈ ಹಿಂದೆಯೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತ ಸಂಖ್ಯೆ 36 ದುಬೈನಿಂದ ಮಾ. 19ಕ್ಕೆ ಮುಂಬೈಗೆ ತಲುಪಿದ್ದರು. ರೈಲಿನ ಮೂಲಕ ಮಾ. 20ಕ್ಕೆ ಭಟ್ಕಳಕ್ಕೆ ಬಂದಿದ್ದ 65 ವರ್ಷದ ಸೋಂಕಿತ ಸಂಖ್ಯೆ 36 ರಿಗೆ, ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾ. 21ರಂದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಪರೀಕ್ಷೆ ವರದಿಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಬಳಿಕ ಈ ಹಿಂದೆಯೇ ಪತಂಜಲಿ ಆಸ್ಪತ್ರೆಯಿಂದ ಸೋಂಕಿತ ಸಂಖ್ಯೆ 36 ಬಿಡುಗಡೆಯಾಗಿದ್ದರು.

  • ರಾಗಿಣಿ ಕಿಚನ್‍ನಿಂದ ಸರ್ಕಾರಿ ಆಸ್ಪತ್ರೆಯ 150 ವೈದ್ಯರಿಗೆ ರುಚಿಕರವಾದ ಊಟ

    ರಾಗಿಣಿ ಕಿಚನ್‍ನಿಂದ ಸರ್ಕಾರಿ ಆಸ್ಪತ್ರೆಯ 150 ವೈದ್ಯರಿಗೆ ರುಚಿಕರವಾದ ಊಟ

    ಬೆಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ನಟಿ ರಾಣಿಗಿಯವರು ತಮ್ಮ ಮನೆಯಿಂದ ರುಚಿಕರವಾದ ಅಡುಗೆ ತಯಾರಿಸಿ ರವಾನಿಸಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಪೊಲೀಸ್, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಮನೆಗೂ ಹೋಗದೆ ದಿನಪೂರ್ತಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಸೇವೆ ಮಾಡುವ ವೈದ್ಯರಿಗಾಗಿ ರಾಗಿಣಿಯವರು ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಗಿಣಿಯವರು, ಆರ್.ಡಿ ಕಿಚ್ಚನ್ ವತಿಯಿಂದ ಆರೋಗ್ಯ ರಕ್ಷಣಾ ಹೀರೋಗಳಿಗೆ ಮನೆಯಲ್ಲೇ ಊಟ ತಯಾರಿಸಿ ನೀಡಲಾಗುತ್ತಿದೆ. ಈ ಮೂಲಕ 150 ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ರುಚಿಕರವಾದ ಊಟವನ್ನು ನಾವು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅವರಿಗಾಗಿ ಸ್ವಲ್ಪ ಪ್ರೀತಿಯಿಂದ ಏನಾದರೂ ಮಾಡೋಣ ಎಂದು ಬರೆದುಕೊಂಡಿದ್ದಾರೆ.

    ಕೊರೊನಾ ವಿರುದ್ಧ ಯುದ್ಧ ಮಡುತ್ತಿರುವ ಸರ್ಕಾರಿ ವೈದ್ಯರಿಗಾಗಿ ರಾಗಿಣಿ ಮನೆಯಲ್ಲೇ ಊಟವನ್ನು ತಯಾರಿಸಿದ್ದಾರೆ. ರಾಗಿಣಿಯವರ ಈ ಕೆಲಸಕ್ಕೆ ಅವರ ಮನೆಯವರು ಕೂಡ ಸಾಥ್ ನೀಡಿದ್ದಾರೆ. ಮನೆಮಂದಿಯೆಲ್ಲ ಸೇರಿ ರುಚಿಕರವಾದ ಅಡುಗೆ ಮಾಡಿ ಅದನ್ನು ಮಾಸ್ಕ್ ಧರಿಸಿಯೇ ಪ್ಯಾಕ್ ಮಾಡಿದ್ದಾರೆ. ಕುಟುಂಬಸ್ಥರೆಲ್ಲ ಸೇರಿ ಊಟ ಸಿದ್ಧಗೊಳಿಸುತ್ತಿರುವ ಫೋಟೋವನ್ನು ರಾಗಿಣಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

    https://www.instagram.com/p/B-4ept2ASbM/

    ಕೊರೊನಾ ವೈರಸ್ ಭೀತಿಯ ಮೊದಲ ದಿನಗಳಿಂದ ಈ ರೀತಿಯ ಕೆಲಸಗಳನ್ನು ಮಾಡಿಕೊಂಡು ಬಂದಿರುವ ರಾಗಿಣಿ, ಇತ್ತೀಚೆಗಷ್ಟೇ ಬಿಬಿಎಂಪಿ ಯಲಹಂಕದ ಪೌರ ಕಾರ್ಮಿಕರೊಂದಿಗೆ ಚಾಯ್ ಪೇ ಚರ್ಚಾ ಮಾಡಿದ್ದರು. ಕಸ ಸ್ವಚ್ಛಗೊಳಿಸಲು ಹಾಗೂ ಗಾರ್ಬೇಜ್ ಕೊಂಡೊಯ್ಯಲು ಎರಡು ದಿನಕ್ಕೊಮ್ಮೆ ಇವರು ಬರುತ್ತಾರೆ. ಈ ಹಿಂದೆ ಸಹ ಇವರನ್ನು ನೋಡುತ್ತಿದ್ದೆ, ಆದರೆ ಇವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇಂತಹ ಅದ್ಭುತ ವ್ಯಕ್ತಿಗಳು ಯಾವುದೇ ಸ್ವಾರ್ಥವಿಲ್ಲದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

    https://www.instagram.com/p/B-TuifogBJE/

    ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಈ ಹಿಂದೆ ರಸ್ತೆಗೆ ಇಳಿದಿದ್ದ ರಾಗಿಣಿ, ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅಲ್ಲ ಗ್ಲೌಸ್‍ಗಳನ್ನು ಧರಿಸಿ ಎಂದು ಹೇಳುವ ಮೂಲಕ ಜನರಿಗೆ ಉಚಿತವಾಗಿ ಕೈ ಗ್ಲೌಸ್‍ಗಳನ್ನು ವಿತರಿಸಿದ್ದರು. ಯಾವುದಾದರೂ ವಸ್ತುಗಳನ್ನು ಮುಟ್ಟಿದ್ದರೆ ಅದರಿಂದ ಕೊರೊನಾ ಬರುತ್ತೆ. ಹಾಗಾಗಿ ಮಾಸ್ಕ್ ಬದಲು ಕೈ ಗ್ಲೌಸ್‍ಗಳನ್ನು ಕಡ್ಡಾಯವಾಗಿ ಧರಿಸಿ ಎಂದು ರಾಗಿಣಿ ಜನರ ಬಳಿ ಮನವಿ ಮಾಡಿಕೊಂಡಿದ್ದರು.

  • ನಟಿ ಶ್ರೇಯಾ ಪತಿಗೆ ಕೊರೊನಾ ಲಕ್ಷಣ- ಆಸ್ಪತ್ರೆಗೆ ಬರಬೇಡಿ ಎಂದ ವೈದ್ಯರು

    ನಟಿ ಶ್ರೇಯಾ ಪತಿಗೆ ಕೊರೊನಾ ಲಕ್ಷಣ- ಆಸ್ಪತ್ರೆಗೆ ಬರಬೇಡಿ ಎಂದ ವೈದ್ಯರು

    ಮ್ಯಾಡ್ರಿಡ್: ನಟಿ ಶ್ರೇಯಾ ಶರಣ್ ಪತಿ ಆಂಡ್ರೆ ಅವರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

    ಶ್ರೇಯಾ ಶರಣ್ 2018ರ ಮಾರ್ಚ್ ತಿಂಗಳಲ್ಲಿ ವಿದೇಶಿಗರಾದ ಆಂಡ್ರೆ ಕೋಶಿವ್‍ನನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಸ್ಪೇನ್‍ನಲ್ಲಿಯೇ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಶ್ರೇಯಾ ಪತಿ ಆಂಡ್ರೆಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿ ಮನೆಗೆ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಶ್ರೇಯಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

    ಆಂಡ್ರೆಗೆ ಒಣ ಕೆಮ್ಮು, ತಲೆ ನೋವು, ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಿಮಗೆ ಕೊರೊನಾ ಬಂದಿಲ್ಲವಾದರೂ ಆಸ್ಪತ್ರೆಗೆ ಬಂದರೆ ಕೊರೊನಾ ಬರುವ ಸಾಧ್ಯತೆ ಇದೆ. ಆದ್ದರಿಂದ ನೀವು ಆಸ್ಪತ್ರೆಗೆ ಬರುವುದು ಬೇಡ, ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿ ಇರಿ ಎಂದು ಹೇಳಿ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.

    ಕೊನೆಗೆ ನಾವು ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿದ್ದೆವು. ನಾವಿಬ್ಬರು ಬೇರೆ ಬೇರೆ ರೂಂಗಳಲ್ಲಿ ಮಲಗುತ್ತಿದ್ದೆವು. ಅಷ್ಟೇ ಅಲ್ಲದೇ ಪರಸ್ಪರ ಅಂತರವನ್ನು ಕಾಯ್ದುಕೊಂಡಿದ್ದೆವು. ಸದ್ಯ ಆಂಡ್ರೆ ಈಗ ಚೇತರಿಸಿಕೊಳ್ಳತ್ತಿದ್ದಾರೆ ಎಂದು ಶ್ರೇಯಾ ತಿಳಿಸಿದ್ದಾರೆ.

    ಶ್ರೇಯಾ ಮತ್ತು ಆಂಡ್ರೆ ಅವರು ಮದುವೆಯಾಗಿ ಎರಡು ವರ್ಷಗಳಾಗಿದ್ದು, ಮಾರ್ಚ್ 13 ರಂದು ಎರಡನೇ ವಿವಾಹ ವಾರ್ಷಿಕೋತ್ಸವ ಇತ್ತು. ನಾವಿಬ್ಬರು ಈ ಖುಷಿಯನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದು, ಅದರಂತೆಯೇ ಸ್ಪೇನ್ ಹೋಟೆಲ್ ಸಹ ಬುಕ್ ಮಾಡಿದೆವು. ಆದರೆ ಅಷ್ಟರಲ್ಲೇ ಕೊರೊನಾ ವ್ಯಾಪಿಸಿದ ಕಾರಣ ಇಡೀ ಸ್ಪೇನ್ ದೇಶವೇ ಲಾಕ್‍ಡೌನ್ ಆಗಿತ್ತು. ಆಗಲೇ ನಮಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದು. ಪೊಲೀಸರು ಕೂಡ ಮನೆಯಿಂದ ಹೊರಬಾರದೆಂದು ಸೂಚಿಸಿದ್ದರು ಎಂದು ಹೇಳಿದ್ದಾರೆ.

  • ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ

    ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ

    – ಸಂಪರ್ಕಕ್ಕೆ ಬಂದಿದ್ದ 20 ಮಂದಿಗೆ ಕ್ವಾರಂಟೈನ್
    – ಟಾಯ್ಲೆಟ್‍ನಲ್ಲೇ ಕುಸಿದು ಬಿದ್ದಿದ್ದ ವೃದ್ಧ
    – ಸೋಮವಾರ ಸಂಜೆ ಕೊರೊನಾ ದೃಢ

    ಬೆಂಗಳೂರು: ಕೊರೊನಾ ಸೋಂಕಿತರ ಸಾವು ಕರ್ನಾಟಕದಲ್ಲಿ 8ಕ್ಕೆ ಏರಿದ್ದು, ಕಳೆದ ದಿನವೇ ಇಬ್ಬರು ಒಂದೇ ದಿನ ಮೃತಪಟ್ಟಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯ 65 ವರ್ಷದ ವೃದ್ಧ ಮೂರು ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಮೃತಪಟ್ಟಿದ್ದಾರೆ.

    ಭಾನುವಾರ ಮೃತ ವೃದ್ಧ ಕಫ, ಕೆಮ್ಮು ಎಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಆತನಿಗೆ ನ್ಯೂಮೋನಿಯಾ ಲಕ್ಷಣ ಕಾಣಿಸಿಕೊಂಡಿದೆ ಅಂತ ವೈದ್ಯರು ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಈ ವೇಳೆ ವೈದ್ಯರು ವೃದ್ಧನಿಗೆ ಅಡ್ಮಿಟ್ ಆಗಿ ಎಂದು ತಿಳಿಸಿದ್ದಾರೆ. ಆದರೆ ವೃದ್ಧ ಅಡ್ಮಿಟ್ ಆಗಲ್ಲ, ನಾನು ಜಯದೇವ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾರೆ.

    ವೃದ್ಧ ಜಯದೇವದ ರೆಗ್ಯೂಲರ್ ರೋಗಿ ಆಗಿದ್ದರು. ಆದರೆ ಜಯದೇವ ಆಸ್ಪತ್ರೆಯಲ್ಲೂ ರಾಜೀವ್ ಗಾಂಧಿಗೆ ಹೋಗಿ ಎಂದು ರೆಫರ್ ಮಾಡಿದ್ದಾರೆ. ಆದರೂ ವೃದ್ಧ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಬಳಿಕ ಅಲ್ಲಿಯೂ ರಾಜೀವ್ ಗಾಂಧಿಗೆ ರೆಫರ್ ಮಾಡಿದ್ದಾರೆ. ಕೊನೆಗೆ ವೃದ್ಧ ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಎರಡನೇ ಬಾರಿ ಆಸ್ಪತ್ರೆಗೆ ಬಂದಾಗ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಕೊನೆಗೆ ವೃದ್ಧ ಭಾನುವಾರ ರಾತ್ರಿ 8:30 ರ ವೇಳೆಗೆ ಅಡ್ಮಿಟ್ ಆಗಿದ್ದಾರೆ.

    ಅಡ್ಮಿಟ್ ಆದ ಬಳಿಕ ವೃದ್ಧ ಸೋಮವಾರ ಬೆಳಗ್ಗೆ ವಾರ್ಡಿನಲ್ಲಿದ್ದ ಟಾಯ್ಲೆಟ್‍ಗೆ ತೆರಳಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ವೈದ್ಯರು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ವೃದ್ಧ ವಾರ್ಡ್ ನಂಬರ್ 132ರ ನಿವಾಸಿಯಾಗಿದ್ದು, ಸೋಮವಾರ ಸಂಜೆ ಪರೀಕ್ಷಾ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಸದ್ಯಕ್ಕೆ ವೃದ್ಧ ಭೇಟಿ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ಆತ ಯಾವುದರಲ್ಲಿ ಪ್ರಯಾಣ ಬೆಳೆಸಿದ್ದ ಎಂಬ ಎಲ್ಲ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

    ಕೊರೊನಾಗೆ 65 ವರ್ಷದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಜೊತೆ 20 ಜನ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವವರನ್ನ ಕ್ವಾರಂಟೈನ್‍ನಲ್ಲಿ ಇಡಲು ಬಿಬಿಎಂಪಿ ಮುಂದಾಗಿದೆ. ಅಲ್ಲದೇ ವೃದ್ಧ ಮೃತಪಟ್ಟ ಬೆನ್ನಲ್ಲೇ ಟಿಪ್ಪು ನಗರದ ಮನೆಗೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಮೃತ ವೃದ್ಧ ಸೀಲ್‍ಡೌನ್ ಆಗಿರುವ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಗಳ ಪಕ್ಕದಲ್ಲೇ ನೆಲೆಸಿದ್ದು ಆತಂಕ ಹೆಚ್ಚಾಗಿದೆ.

    ಮೊದಲು ಮೊದಲು ಎದೆನೋವು ಬಂದಾಗ ನಿರ್ಲಕ್ಷ್ಯ ಮಾಡಿದ್ದೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೆ ಅಸಡ್ಡೆ ತೋರಿ, ಸಾವಿನ ಅಂಚಿನಲ್ಲಿದ್ದಾಗ ಕೊರೊನಾ ಟೆಸ್ಟ್ ಮಾಡಲಾಗಿದೆ. ಸಾವಿಗೂ ಮುನ್ನ ಹಲವರನ್ನು ಸಂಪರ್ಕಿಸಿರುವುದರಿಂದ ಇದೀಗ ವೃದ್ಧನ ಸಾವು ತಲೆನೋವಾಗಿದೆ. ಸದ್ಯಕ್ಕೆ ಆರೋಗ್ಯ ಇಲಾಖೆ ಮನೆಯಲ್ಲಿರುವ ಮಕ್ಕಳು ಸೇರಿದಂತೆ ಅಕ್ಕಪಕ್ಕದವರ ಮೇಲೆ ನಿಗಾ ಇಟ್ಟಿದೆ.

    ಹೃದಯಸಂಬಂಧಿ ಕಾಯಿಲೆ ಇರುವಲ್ಲಿ ಈಗ ಕೊರೊನಾ ಪಾಸಿಟಿವ್ ಹೆಚ್ಚಾಗಿ ಕಾಣಿಸುತ್ತಿದೆ. ಉಸಿರಾಟದ ತೊಂದರೆಯಂತೆ ಹೃದಯ ಸಂಬಂಧಿ ಕಾಯಿಲೆ ಕೂಡ ಈಗ ಅಪಾಯಕಾರಿಯಾಗುತ್ತಿದೆ ಎಂದು ಜಯದೇವ ನಿರ್ದೇಶಕ ಡಾ ಮಂಜುನಾಥ್ ಸರ್ಕಾರದ ಗಮನಕ್ಕೆ ತಂದಿದ್ದರು. ಬಹುತೇಕರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರೋರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಭಾನುವಾರ ದಾಖಲಾಗಿ ಸೋಮವಾರ ಸಾವನ್ನಪ್ಪಿದ ವೃದ್ಧ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

  • ಕೊರೊನಾಗೆ ಹೆದರಿ ವೈದ್ಯರು ಆಸ್ಪತ್ರೆಯಿಂದ ಪರಾರಿ – ನೋಟಿಸ್ ಜಾರಿ

    ಕೊರೊನಾಗೆ ಹೆದರಿ ವೈದ್ಯರು ಆಸ್ಪತ್ರೆಯಿಂದ ಪರಾರಿ – ನೋಟಿಸ್ ಜಾರಿ

    ಕಾರವಾರ: ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ತರಬೇತಿ ಪಡೆಯುತ್ತಿದ್ದ ಇಬ್ಬರು ವೈದ್ಯರು ಕೊರೊನಾಗೆ ಹೆದರಿ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ನಡೆದಿದೆ.

    ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಗೆ ಕೊರೊನಾ ಸೋಂಕಿತ ಆರು ಜನ ರೋಗಿಗಳಿದ್ದು ಇವರಿಗೆ ಚಿಕಿತ್ಸೆ ಕೊಡಲು ತರಬೇತಿ ನೀಡಿ ಇಬ್ಬರು ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಕಾರ್ ಪಾರ್ಕ್ ಮಾಡಿ ಬರುವುದಾಗಿ ಹೇಳಿ ಹೋದ ಈ ವೈದರು ಮೊಬೈಲ್ ಸ್ವಿಚ್ ಆಫ್ ಮಾಡಿ ಪತಂಜಲಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

    ಕರ್ತವ್ಯ ಲೋಪ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ಆರ್.ರೋಷನ್ ರಿಂದ ನೋಟಿಸ್ ನೀಡಿದ್ದು ಏಳು ದಿನದಲ್ಲಿ ಉತ್ತರ ನೀಡದಿದ್ದರೆ ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯವರು ಸಹ ಕೊರೊನಾ ರೋಗಿಗಳನ್ನು ಹೊರತುಪಡಿಸಿ ಇತರ ಕಾಯಿಲೆ ರೋಗಿಗಳಿಗೆ ಚಿಕಿತ್ಸೆ ನೀಡುತಿಲ್ಲ. ಹೀಗೆ ಮಾಡಿದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಇಂತವರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಸತತ ಏಳೂವರೆ ಗಂಟೆ ಸರ್ಜರಿ – ಪಂಜಾಬ್ ಎಎಸ್‍ಐ ಕೈ ಜೋಡಿಸಿದ ವೈದ್ಯರು

    ಸತತ ಏಳೂವರೆ ಗಂಟೆ ಸರ್ಜರಿ – ಪಂಜಾಬ್ ಎಎಸ್‍ಐ ಕೈ ಜೋಡಿಸಿದ ವೈದ್ಯರು

    – ವೈದ್ಯರಿಗೆ ಮುಖ್ಯಮಂತ್ರಿ ಧನ್ಯವಾದ

    ಪಟಿಯಾಲ: ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು ಪೊಲೀಸ್ ಅಧಿಕಾರಿಯೊಬ್ಬರ ಕೈ ಕತ್ತರಿಸಿತ್ತು. ಇದೀಗ ಅಧಿಕಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಕೈಯನ್ನು ಜೋಡಿಸಲಾಗಿದೆ.

    ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದನು. ತಕ್ಷಣ ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಏಳೂವರೆ ಗಂಟೆ ಶಸ್ತ್ರ ಚಿಕಿತ್ಸೆ ಮಾಡಿ ಕತ್ತರಿಸಿದ್ದ ಪೊಲೀಸ್ ಅಧಿಕಾರಿಯ ಕೈಯನ್ನು ಯಶಸ್ವಿಯಾಗಿ ಮರಳಿ ಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    ಈ ಬಗ್ಗೆ ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್ ಅವರು, “ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ. ಎಎಸ್‍ಐ ಹರ್ಜೀತ್ ಸಿಂಗ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಇದೇ ವಿಚಾರವಾಗಿ ಪಂಜಾಬ್ ಪೊಲೀಸ್ ಮುಖ್ಯಸ್ಥ ದಿನಕರ್ ಗುಪ್ತಾ ಕೂಡ ಟ್ವೀಟ್ ಮಾಡಿದ್ದು, ಹಂಜೀತ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, “ನಮ್ಮ ಕೆಚ್ಚೆದೆಯ ಕೊರೊನಾ ಯೋಧ ಎಎಸ್‍ಐ ಹರ್ಜೀತ್ ಸಿಂಗ್ ಅವರಿಗೆ ಯುಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಪ್ರಮುಖ ಪ್ಲಾಸ್ಟಿಕ್ ಸರ್ಜನ್ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಹರ್ಜೀತ್ ಅವರೊಂದಿಗೆ ಮಾತನಾಡಿದೆ. ಸದ್ಯಕ್ಕೆ 5 ದಿನಗಳವರೆಗೂ ಅವರು ಆಸ್ಪತ್ರೆಯಲ್ಲಿಯೇ ಇರುಬೇಕು” ಎಂದು ಗುಪ್ತಾ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಈ ವೇಳೆ ಭಾನುವಾರ ಬೆಳಗ್ಗೆ 6 ಗಂಟೆಗೆ ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಪೊಲೀಸರು ವಾಹವನ್ನು ಸುತ್ತುವರಿದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು.

    ನಿಹಾಂಗ್ ಸಿಖ್ಖರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಬಿಕರ್ ಸಿಂಗ್ ಮತ್ತು ಓರ್ವ ಪೇದೆ ಸಹ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 9 ಜನರನ್ನು ಬಂಧಿಸಲಾಗಿದೆ.

  • ಕ್ವಾರಂಟೈನ್ ಸೇವೆ ನೀಡಿದ ಪ್ರಪ್ರಥಮ NIMA ವೈದ್ಯ

    ಕ್ವಾರಂಟೈನ್ ಸೇವೆ ನೀಡಿದ ಪ್ರಪ್ರಥಮ NIMA ವೈದ್ಯ

    ಹುಬ್ಬಳ್ಳಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ (NIMA) ಸಂಸ್ಥೆಯ ಹಿರಿಯ ಸದಸ್ಯರಾದ ಡಾ.ಗುರುನಾಥ ಕಂಠಿಯವರು ಏಪ್ರಿಲ್ 4ರಂದು ಹುಬ್ಬಳ್ಳಿಯ ಕ್ವಾರಂಟೈನ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಕ್ವಾರಂಟೈನ್ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಪ್ರಪ್ರಥಮ NIMA ವೈದ್ಯಕೀಯ ಸಂಸ್ಥೆಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಆಯುರ್ವೇದ ವೈದ್ಯರುಗಳಾದ ಡಾ.ಗುರುನಾಥ ಕಂಠಿ, ಡಾ.ಎನ್.ಎನ್.ಭರದ್ವಾಡ ಮತ್ತು ಡಾ.ಎಂ.ಸಿ.ಪಾಟೀಲ್ ಇವರು ಮಾರ್ಚ್ 9 ರಂದು ಕೊವಿಡ್-19 ಸೇವೆಗಾಗಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‍ವೊಂದರ ಕ್ವಾರಂಟೈನ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ‘ಕ್ವಾರಂಟೈನ್ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಪ್ರಪ್ರಥಮ NIMA ವೈದ್ಯಕೀಯ ಸಂಸ್ಥೆಯ ತಂಡವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ಸಂಸ್ಥೆಗೂ ಮತ್ತು ವೈದ್ಯರಿಗೂ ಇವರಿಂದ ಇಡೀ ಆಯುಷ್ ಕ್ಷೇತ್ರಕ್ಕೆ ಗೌರವ, ಹೆಮ್ಮೆಯನ್ನು ತಂದಿದ್ದಾರೆ. ಈ ತಂಡವಲ್ಲದೇ NIMA ಸಂಸ್ಥೆಯ ಅನೇಕ ವೈದ್ಯರು ಕೊವಿಡ್-19 ತಡೆಗಟ್ಟುವ ಸೇವೆಗಾಗಿ ಸನ್ನದ್ಧರಾಗಿದ್ದಾರೆ.

    NIMA ಜಿಲ್ಲಾ ಅಧ್ಯಕ್ಷರಾದ ಡಾ.ಪಾಟೀಲ್ ಮತ್ತು ಜಿಲ್ಲಾ ಕಾರ್ಯದರ್ಶಿ ಡಾ.ತ್ಯಾಗರಾಜ್ ಇನ್ನಿತರ ಪದಾಧಿಕಾರಿಗಳ ಪ್ರೇರಣೆ, ಪ್ರೋತ್ಸಾಹ ಹಾಗೂ ಪರಿಶ್ರಮದಿಂದಾಗಿ ಆಯುಷ್ ಕ್ಷೇತ್ರ ಮತ್ತು NIMA ಸಂಸ್ಥೆಗಳ ಘನತೆಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ಆಯುಷ್ ವೈದ್ಯರಿಗೆಲ್ಲಾ ಸ್ಪೂರ್ತಿ ತುಂಬಿದ್ದಾರೆ.

    ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಕ್ಕೆ ಜಿಲ್ಲೆಯ ಆಯುಷ್ ಖಾಸಗಿ ವೈದ್ಯರ ಸೇವೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಆಯುಷ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 12 ಸಾವಿರ ಕ್ರೀಡಾ ವೈದ್ಯರೊಂದಿಗೆ ಕ್ರಿಕೆಟ್ ದಂತಕಥೆ ಸಂವಾದ

    12 ಸಾವಿರ ಕ್ರೀಡಾ ವೈದ್ಯರೊಂದಿಗೆ ಕ್ರಿಕೆಟ್ ದಂತಕಥೆ ಸಂವಾದ

    – ವೈದ್ಯ ಸಮುದಾಯದ ಸೇವೆಗೆ ಕೃತಜ್ಞರಾಗಿರುವೆ: ಸಚಿನ್

    ಮುಂಬೈ: ಕೊರೊನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಆರೋಗ್ಯ ಹಾಗೂ ಫಿಟ್‍ಸೆಸ್ ಕುರಿತು ಯುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರು ಕ್ರೀಡಾ ಗಾಯಗಳ ಕುರಿತು ಲೈವ್ ವೆಬ್‌ನಾರ್‌ನಲ್ಲಿ ಶನಿವಾರ ಭಾಗವಹಿಸಿದರು. ಈ ವೇಳೆ ಅವರು ದೇಶಾದ್ಯಂತದ 12 ಸಾವಿರ ಯುವ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಸಚಿನ್ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಹಲವಾರು ಆರೋಗ್ಯ ಸಮಸ್ಯೆ, ಗಾಯಗಳಿಂದ ಬಳಲುತ್ತಿದ್ದರು. ಅದರಲ್ಲಿ ಪ್ರಮುಖವಾದುದು ಮೊಣಕೈ ಗಾಯ ಕೂಡ ಒಂದು.

    ಈ ಕುರಿತು ಮಾಹಿತಿ ನೀಡಿರುವ ಮೂಳೆ ತಜ್ಞ ಸುಧೀರ್ ವಾರಿಯರ್ ಅವರು, ಲಾಕ್‍ಡೌನ್ ಸಮಯದಲ್ಲಿ ದೇಶಾದ್ಯಂತದ ಅನೇಕ ಯುವ ವೈದ್ಯರು ಸಚಿನ್ ಅವರೊಂದಿಗೆ ಕ್ರೀಡಾ ಸಂಬಂಧಿತ ಗಾಯಗಳ ಬಗ್ಗೆ ಪರಸ್ಪರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಕ್ರೀಡಾ ಗಾಯಗಳಿಗೆ ಸಂಬಂಧಿಸಿದಂತೆ ಶನಿವಾರ ಸಂವಾದ ನಡೆಸಲಾಗಿದ್ದು, ಸಚಿನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತದ ಮಾಜಿ ಬ್ಯಾಟ್ಸ್‍ಮನ್, ನಿಮ್ಮ ಸೇವೆಗಾಗಿ ವೈದ್ಯ ಸಮುದಾಯಕ್ಕೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ. ಕಾರ್ಯಕ್ರಮವು ಯುವ ವೈದ್ಯರಿಗೆ ಕಲಿಯಲು ಸಹಾಯ ಮಾಡುತ್ತದೆ ಎಂದು ಸುಧೀರ್ ವಾರಿಯರ್ ಹೇಳಿದ್ದಾರೆ.

    ಭಾರತೀಯ ಕ್ರಿಕೆಟ್ ತಂಡದ ಫಿಸಿಯೋ ನಿತಿನ್ ಪಟೇಲ್ ಅವರೊಂದಿಗೆ ಸುಧೀರ್ ವಾರಿಯರ್ ಸಂವಹನ ನಡೆಸಿದರು. ಪಟೇಲ್ ಅವರು ಈ ಹಿಂದೆ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಜೊತೆ ಕೆಲಸ ಮಾಡಿದ್ದರು.