Tag: doctors

  • ಕಿಲ್ಲರ್ ಕೊರೊನಾಗೆ ಸವಾಲ್ ಹಾಕಿ ಗುಣಮುಖರಾದ 106 ವರ್ಷದ ವೃದ್ಧ

    ಕಿಲ್ಲರ್ ಕೊರೊನಾಗೆ ಸವಾಲ್ ಹಾಕಿ ಗುಣಮುಖರಾದ 106 ವರ್ಷದ ವೃದ್ಧ

    ನವದೆಹಲಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ಗೆ ವಿಶ್ವಾದ್ಯಂತ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಅದರಲ್ಲೂ ಸಾವನ್ನಪ್ಪಿದವರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಭಾರತದಲ್ಲಿ 106 ವರ್ಷದ ವೃದ್ಧರೊಬ್ಬರು ಮಹಾಮಾರಿಗೆ ಸವಾಲ್ ಹಾಕಿ ಸೋಂಕಿನಿಂದ ಗುಣಮುಖರಾಗಿ ವೈದ್ಯರಿಗೇ ಅಚ್ಚರಿ ಮೂಡಿಸಿದ್ದಾರೆ.

    ಇಳಿ ವಯಸ್ಸಿನವರು ಕೊರೊನಾಗೆ ಬಹುಬೇಗ ತುತ್ತಾಗುತ್ತಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆದ್ದರಿಂದ ಸೋಂಕಿಗೆ ತುತ್ತಾದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ. ಆದರೆ ದೆಹಲಿಯ ನವಾಬ್‍ಗಂಜ್‍ನ ಮುಖ್ತರ್ ಅಹ್ಮದ್(106) ಅವರು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ ಇವರು ಭಾರತದಲ್ಲಿ ಕೊರೊನಾದಿಂದ ಗುಣಮುಖರಾದ ಮೊದಲ ಅತ್ಯಂತ ಹಿರಿಯ ವ್ಯಕ್ತಿ ಆಗಿದ್ದಾರೆ.

    ಏಪ್ರಿಲ್ 14ರಂದು ಮುಖ್ತರ್ ಅಹ್ಮದ್ ಅವರನ್ನು ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಮೇ 1ರಂದು ಅಹ್ಮದ್ ಅವರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಮಗನಿಗೆ ಸೋಂಕು ತಗುಲಿದ್ದ ಕಾರಣಕ್ಕೆ ಅದು ಅಹ್ಮದ್ ಅವರಿಗೂ ಹರಡಿತ್ತು. ಆದರೆ ಇತ್ತ ಕೊರೊನಾವನ್ನು ಗೆದ್ದು ಅಹ್ಮದ್ ಅವರು ಗುಣಮುಖರಾಗಿದ್ದಾರೆ. ಅತ್ತ ಮಗ ಮಾತ್ರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಹ್ಮದ್ ಅವರಲ್ಲಿ ಸೋಂಕು ದೃಢಪಟ್ಟ ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಆರಂಭಿಸಿದೆವು. ಆಹ್ಮದ್ ಅವರಿಗೆ 106 ವರ್ಷ ವಯಸ್ಸಾಗಿದ್ದ ಕಾರಣಕ್ಕೆ ಚಿಕಿತ್ಸೆ ನೀಡುವುದು ಸವಾಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಿದ ಪರಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಅವರು ಕೊರೊನಾದಿಂದ ಗುಣವಾಗಿದ್ದು ನಮಗೆ ಖುಷಿಯಾಗಿದೆ. ಈ ಪ್ರಕರಣ ನಮಗೆ ಕೆಲಸದಲ್ಲಿ ಉತ್ಸಹವನ್ನು ಹೆಚ್ಚಿಸಿದೆ. ಅಹ್ಮದ್ ಅವರು ನೂರು ವರ್ಷ ದಾಟಿದ ವೃದ್ಧರೂ ಕಿಲ್ಲರ್ ಕೊರೊನಾ ವಿರುದ್ಧ ಹೋರಾಡಿ ಗುಣಮುಖವಾಗಬಹುದು ಎನ್ನುವುದನ್ನ ನಿರೂಪಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

  • ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕ, ನರ್ಸಿಂಗ್ ವೃತ್ತಿಗೆ ಬಂದಿದ್ದಕ್ಕೆ ಹೆಮ್ಮೆ – ಹೂಮಳೆಗೆ ಸಿಬ್ಬಂದಿ ಸಂತಸ

    ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕ, ನರ್ಸಿಂಗ್ ವೃತ್ತಿಗೆ ಬಂದಿದ್ದಕ್ಕೆ ಹೆಮ್ಮೆ – ಹೂಮಳೆಗೆ ಸಿಬ್ಬಂದಿ ಸಂತಸ

    ಬೆಂಗಳೂರು: ದೇಶಕ್ಕಾಗಿ ಕೊರೊನಾ ತೊಲಗಿಸಲು ನಾವು ಸೇವೆ ಮಾಡಿದ್ದಕ್ಕೂ ಸಾರ್ಥಕವಾಯಿತು. ನಮ್ಮ ಸೇವೆಯನ್ನು ಗುರುತಿಸಿ ಇಂದು ಭಾರತೀಯ ವಾಯು ಸೇನೆ ಗೌರವ ಸರ್ಮಪಿಸಿದೆ. ನಿಜಕ್ಕೂ ಇದು ಹೆಮ್ಮೆಯ ವಿಚಾರವಾಗಿದೆ ಎಂದು ವಿಕ್ಟೋರಿಯ ಆಸ್ಪತ್ರೆಯ ನರ್ಸ್ ಮತ್ತು ವೈದ್ಯರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನರ್ಸ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫಿಸರ್ ಆಗಿ ಕೆಲಸ ಮಾಡಿದ್ದು, ಈ ವೃತ್ತಿಗೆ ಬಂದಿದ್ದಕ್ಕೂ ಹೆಮ್ಮೆಯಾಗುತ್ತದೆ. ನರ್ಸಿಂಗ್ ತುಂಬಾ ಜವಾಬ್ದಾರಿಯುತ ಕೆಲಸವಾಗಿದೆ. ಇಡೀ ದೇಶವೇ ಕೊರೊನಾ ಸಮಸ್ಯೆ ಬಗೆಹರಿಸಲು ಕಷ್ಟಪಡುತ್ತಿದೆ. ಈ ವೇಳೆ ನಾವು ಕೊರೊನಾ ವಿರುದ್ಧ ಹೋರಾಡಲು ಸೇವೆ ಸಲ್ಲಿಸುತ್ತಿದ್ದೀವಿ ಅನ್ನೋದು ತುಂಬಾ ಸಂತಸವಾಗುತ್ತಿದೆ ಎಂದರು.

    ಇಂದು ಕಮಾಂಡರ್ ಕೂಡ ಈ ರೀತಿ ನಮಗೆ ಗೌರವ ಸಲ್ಲಿಸಿದ್ದಾರೆ. ನಿಜಕ್ಕೂ ಇದು ತುಂಬಾ ಖುಷಿಯಾದ ವಿಚಾರ. ಸಾಮಾನ್ಯ ದಿನ ಕೆಲಸ ಮಾಡುವುದು ಬೇರೆ, ಆದರೆ ಕೊರೊನಾ ರೋಗಿಗಳನ್ನು ನೋಡಿಕೊಳ್ಳುವ ಮೂಲಕ ಇನ್ನೂ ನಮ್ಮ ಜವಾಬ್ದಾರಿಯನ್ನ ಹೆಚ್ಚಿಸಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಪೊಲೀಸರು, ವೈದ್ಯರು ಮತ್ತು ಮಾಧ್ಯಮದವರಿಗೆ ನರ್ಸ್ ಧನ್ಯವಾದ ತಿಳಿಸಿದರು.

    ಇತರೆ ನರ್ಸ್, ವೈದ್ಯರು ಮಾತನಾಡಿ, ಭಾರತೀಯ ವಾಯು ಸೇನೆ ನಮ್ಮ ಸೇವೆಯನ್ನು ಗುರುತಿಸಿ ಇಂದು ಗೌರವ ಸಲ್ಲಿಸಿದೆ. ಈ ಮೂಲಕ ನಾವು ಇಂತಹ ಕಷ್ಟದ ಸಂದರ್ಭದಲ್ಲಿ ಕೆಲಸ ಮಾಡಿದ್ದಕ್ಕೂ ಸಾರ್ಥಕ ಅನ್ನಿಸುತ್ತಿದೆ ಎಂದರು.

    ನಾನು ಒಂದೂವರೆ ತಿಂಗಳಿಂದ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂದು ಭಾರತೀಯ ಸೇನೆ ಗೌರವ ಸಲ್ಲಿಸಿದ್ದರಿಂದ ನಮಗೆ ಸ್ಫೂರ್ತಿ ಸಿಕ್ಕಿದಂತಾಗಿದೆ. ಇನ್ನೂ ಹೆಚ್ಚಾಗಿ ಕೆಲಸ ಮಾಡಲು ಉತ್ತೇಜನ ಸಿಕ್ಕಿದಂತಾಗಿದೆ ಎಂದು ಸಂತಸಪಟ್ಟರು.

    ನಾವು ನಮ್ಮ ಮಕ್ಕಳು, ಪತಿ ಎಲ್ಲರನ್ನೂ ಬಿಟ್ಟು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಒಂದು ರೀತಿ ನಾವು ಕೊರೊನಾ ಕ್ವಾರಂಟೈನ್‍ನಲ್ಲಿದ್ದೇವೆ. ನನ್ನ ಸೇವೆಯನ್ನು ಗುರುತಿಸಿ ಭಾರತೀಯ ವಾಯು ಸೇನೆ ಗೌರವ ಸಲ್ಲಿಸಿದ್ದು, ತುಂಬಾ ಹೆಮ್ಮೆಯಾಗುತ್ತಿದೆ ಎಂದು ನರ್ಸ್ ಮತ್ತು ವೈದ್ಯರು ಹರ್ಷ ವ್ಯಕ್ತಪಡಿಸಿದರು.

  • ಗದಗನಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಗುಣಮುಖವಾಗಿ ಮಹಿಳೆ ಡಿಸ್ಚಾರ್ಜ್

    ಗದಗನಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಗುಣಮುಖವಾಗಿ ಮಹಿಳೆ ಡಿಸ್ಚಾರ್ಜ್

    – ರೇಷ್ಮೆ ಸೀರೆ, ಮಾಸ್ಕ್, ಆಹಾರ ಸಾಮಗ್ರಿ ನೀಡಿದ ವೈದ್ಯರು

    ಗದಗ: ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತ ರೋಗಿ 304ರ 59 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು ಜಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

    ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿ ಚೆಪ್ಪಾಳೆ ತಟ್ಟುವುದರ ಮೂಲಕ ಆಸ್ಪತ್ರೆಯಿಂದ ಹೊರ ಕರೆತಂದರು. ನಂತರ ಮಹಿಳೆಗೆ ರೇಷ್ಮೆ ಸೀರೆ, ಮಾಸ್ಕ್, ಸ್ಯಾನಿಟೈಸರ್, ಆಹಾರ ಸಾಮಗ್ರಿಗಳನ್ನ ನೀಡಿದರು. ಆಸ್ಪತ್ರೆಯಿಂದ ಹೊರಗಡೆ ಬಂದ ಮಹಿಳೆ ವೈದ್ಯರಿಗೆ, ಜಿಲ್ಲಾಡಳಿತ ಸಿಬ್ಬಂದಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ಉಪಸ್ಥಿತಿ ಇದ್ದರು.

    ರಂಗನವಾಡಿ ಗಲ್ಲಿ ನಿವಾಸಿ 59 ವರ್ಷದ ಮಹಿಳೆಯಲ್ಲಿ ಏಪ್ರಿಲ್ 16 ರಂದು ಸೋಂಕು ದೃಢಪಟ್ಟಿತ್ತು. ಮಹಿಳೆ ಅದೇ ಗಲ್ಲಿಯ ಗೆಳತಿ ರೋಗಿ 166 80 ವರ್ಷದ ವೃದ್ಧೆಯ ಸಂಪರ್ಕದಲ್ಲಿದ್ದರು. ಹಾಗಾಗಿ ಇವರಿಗೆ ಗದಗ ಜಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ತಂಡಗಳು ನಿರಂತರವಾಗಿ ಅವರಿಗೆ ಸುಮಾರು 14 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ನಂತರ ಮತ್ತೆ ಎರಡು ಬಾರಿ ಮತ್ತೆ ಗಂಟಲು ದೃವ ಪರೀಕ್ಷೆ ಮಾಡಲಾಗಿದೆ. ಎರಡೂ ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಮಾಡಲಾಗಿದೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರೊಬ್ಬರು ಬಿಡುಗಡೆಯಾಗುತ್ತಿರುವುದು ಜಿಲ್ಲಾಡಳಿತ, ಜಿಲ್ಲಾ ವೈದ್ಯಕೀಯ ಸಿಬ್ಬಂದಿ ಮತ್ತು ಜಿಲ್ಲೆಯ ಜನತೆಯಲ್ಲಿ ಹರ್ಷ ಮೂಡಿಸಿದೆ.

  • ಕೊರೊನಾ ಸೋಂಕಿತ ಮಧ್ಯವಯಸ್ಕರು ಪಾರ್ಶ್ವವಾಯುವಿಗೆ ಬಲಿಯಾಗಬಹುದು ಎಚ್ಚರ!

    ಕೊರೊನಾ ಸೋಂಕಿತ ಮಧ್ಯವಯಸ್ಕರು ಪಾರ್ಶ್ವವಾಯುವಿಗೆ ಬಲಿಯಾಗಬಹುದು ಎಚ್ಚರ!

    ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಮಧ್ಯ ವಯಸ್ಕರಲ್ಲಿ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಮೂಲದ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ವೈದ್ಯರು ನಡೆಸಿದ ಸಂಶೋಧನಾ ವರದಿಯನ್ನು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದೆ.

    ಕೊರೊನಾ ಸೋಂಕು ಕೇವಲ ಶ್ವಾಸಕೋಶ ಮಾತ್ರವಲ್ಲದೇ ದೇಹದ ಇತರೆ ಯಾವುದೇ ಭಾಗಗಳನ್ನು ಘಾಸಿಗೊಳಿಸಬಹುದು ಎಂದು ವೈದ್ಯರು ಹೇಳಿದ್ದು, ಕೊರೊನಾ ಸೋಂಕಿಗೆ ಮೂರು ಹೊಸ ಗುಣಲಕ್ಷಣಗಳು ಸೇರಿಕೊಂಡ ಬೆನ್ನೆಲೆ ಈ ವರದಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

    ಅಮೆರಿಕದ ವೈದ್ಯರು ನೀಡಿರುವ ಈ ವರದಿಯಲ್ಲಿ, 30-40 ರ ವಯಸ್ಸಿನ ಕೊರೊನಾ ರೋಗಿಗಳು ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಈ ಪೈಕಿ ಹಲವರು ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದೇ ಮಾದರಿಯಲ್ಲಿ ಚೀನಾದಲ್ಲೂ ಹಲವು ರೋಗಿಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿರುವುದನ್ನು ನಾವು ಗಮನಿಸಬಹುದು. ಈ ಪ್ರಮಾಣ ಕಡಿಮೆ ಎಂದು ತಾತ್ಸರ ಮಾಡುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

    ವಯೋವೃದ್ದರು ಸೋಂಕಿನ ಬಳಿಕ ವಯೋಸಹಜ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ಆದರೆ ಮಧ್ಯ ವಯಸ್ಕರು ಬಹುತೇಕ ಗುಣ ಮುಖರಾಗುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ಸೋಂಕಿತ ವ್ಯಕ್ತಿಗಳು ಹೀಗೆ ಸಣ್ಣ ಪ್ರಮಾಣದಲ್ಲಿ ಪಾರ್ಶ್ವವಾಯು ಪೀಡಿತರಾಗಿ ಸಾಯುತ್ತಿರುವುದನ್ನು ಗಮನಿಸಬೇಕು ಎಂದಿದ್ದಾರೆ.

    ಶ್ವಾಸಕೋಶ ಸೇರುವ ವೈರಸನಿಂದ ಉಸಿರಾಟದ ತೊಂದರೆ ಉಂಟಾಗಬಹುದು. ಬಳಿಕ ಇದು ರಕ್ತಚಲನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಳಿಕ ಪಾರ್ಶ್ವವಾಯುವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ವೈದ್ಯರು ತಿಳಿಸಿದ್ದಾರೆ.

  • ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ಗಂಭೀರ

    ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ಗಂಭೀರ

    – ಮಾಹಿತಿಗಾಗಿ ಅಧಿಕಾರಿಗಳ ಹರಸಾಹಸ
    – ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆ

    ಬೆಂಗಳೂರು: ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೊರೊನಾ ವಿರುದ್ಧ ಹೋರಾಟ ಮಾಡಲು ಸೆಣಸಾಡುತ್ತಿದ್ದಾರೆ.

    ರೋಗಿ ನಂಬರ್ 419ರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಇವರ ಆರೋಗ್ಯ ತೀವ್ರ ಹದಗೆಡುತ್ತಲೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯ್ಲಲ್ಲಿ ಆತ ಎಲ್ಲೆಲ್ಲಿಗೆ ಭೇಟಿ ನೀಡಿದ್ದ, ಯಾರ ಯಾರ ಸಂಪರ್ಕಕ್ಕೆ ಬಂದಿದ್ದ ಅನ್ನೋದನ್ನ ತಿಳಿಯಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.

    ಸೋಂಕಿತ ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಮಾಹಿತಿ ಕಲೆಹಾಕಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಗೆ ಉಸಿರಾಟವೇ ದೊಡ್ಡ ಸವಾಲಾಗಿದೆ.

    ರೋಗಿ ನಂಬರ್ 419 ಬಿಹಾರಿ ಮೂಲದ ಹೊಂಗಸಂದ್ರ ವ್ಯಕ್ತಿಯಾಗಿದ್ದು, ಇದುವರೆಗೆ ಈತನಿಂದ 37 ಮಂದಿಗೆ ಕೊರೊನಾ ಸೋಂಕು ಬಂದಿದೆ ಎಂದು ಬಿಬಿಎಂಪಿ ವಾರ್ ರೂಂ ರಿಪೋರ್ಟ್ ನೀಡುತ್ತಿದೆ. ರಾಜ್ಯದಲ್ಲೇ ಅತಿಹೆಚ್ಚು ಜನರಿಗೆ ಕೊರೊನಾ ಹಚ್ಚಿದ 3ನೇ ವ್ಯಕ್ತಿಯಾಗಿದ್ದು, ಪರಿಣಾಮ ಹೊಂಗಸಂದ್ರದಲ್ಲಿ ಜನರಲ್ಲಿ ಆತಂಕ ಉಂಟಾಗಿದೆ.

    ಈವರೆಗೆ ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆಯಾಗಿದೆ. ಈ 3,400 ಜನರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ. ಆದರೂ ಹೊಂಗಸಂದ್ರದಲ್ಲಿ ಆತಂಕ ಮುಂದುವರಿದಿದೆ. ಸದ್ಯ ಹೊಂಗಸಂದ್ರದ ನಂಬರ್ 419 ಚೇತರಿಕೆಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಈ ರೋಗಿಗೆ 54 ವರ್ಷವಾಗಿದ್ದು, ಇದು ವೈದ್ಯರಿಗೆ ಸವಾಲಾಗಿದೆ.

  • ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    – ವೆಂಟಿಲೇಟರ್‌ನಲ್ಲಿದ್ದ ರೋಗಿಗೆ ಪ್ಲಾಸ್ಮಾ ಥೆರಪಿ
    – ಮೂರು ವಾರದ ಹಿಂದೆ ಗುಣಮುಖರಾದ ಮಹಿಳೆಯಿಂದ ಪ್ಲಾಸ್ಮಾ ದಾನ

    ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಒಂದು ಶುಭ ಸುದ್ದಿಯೊಂದು ಲಭ್ಯವಾಗಿದ್ದು, ಪ್ಲಾಸ್ಮಾ ಥೆರಪಿ ಸಹಾಯದಿಂದ ದೆಹಲಿಯ ಕೊರೊನಾ ಸೋಂಕಿತ ರೋಗಿಯೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಭಾರತದಲ್ಲಿಯೇ ಮೊದಲ ಪ್ರಕರಣವಾಗಿದೆ.

    ದೆಹಲಿಯ 49 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ಏಪ್ರಿಲ್ 4ರಂದು ದೃಢಪಟ್ಟಿತ್ತು. ರೋಗಿ ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರಿಗೆ ಉಸಿರಾಡಲು ಸಹಾಯವಾಗಲಿ ಎಂದು ವೆಂಟಿಲೇಟರ್ ಅಳವಡಿಸಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಏಪ್ರಿಲ್ 8ರಂದು ರೋಗಿಯ ಆರೋಗ್ಯ ತೀರ ಹದಗೆಟ್ಟಾಗ ಕುಟುಂಬಸ್ಥರು ರೋಗಿಗೆ ಪ್ಲಾಸ್ಮಾ ಥೆರಪಿ ನೀಡಿ ಜೀವ ಉಳಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಕುಟುಂಬಸ್ಥರೇ ಪ್ಲಾಸ್ಮಾ ಡೋನರ್ ಅನ್ನು ಕೂಡ ಹುಡಿಕಿದ್ದರು. ಮೂರು ವಾರದ ಹಿಂದೆಯಷ್ಟೇ ಕೊರೊನಾದಿಂದ ಗುಣಮುಖರಾದ ಮಹಿಳೆಯೊಬ್ಬರನ್ನು ಪತ್ತೆ ಮಾಡಿ, ಪ್ಲಾಸ್ಮಾ ಡೊನೇಟ್ ಮಾಡುವಂತೆ ಮನವಿ ಮಾಡಿಕೊಂಡರು. ಅವರ ಮನವಿಗೆ ದಾನಿ ಕೂಡ ಒಪ್ಪಿ ರೋಗಿಗೆ ಪ್ಲಾಸ್ಮಾ ದಾನ ಮಾಡಿದ್ದರು. ಏಪ್ರಿಲ್ 14ರ ರಾತ್ರಿ ಎಲ್ಲಾ ಸರ್ಕಾರಿ ಹಾಗೂ ವೈದ್ಯಕಿಯ ನಿಯಮದ ಪ್ರಕಾರ ರೋಗಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು.

    ಥೆರಪಿ ನೀಡಿದ ನಾಲ್ಕೇ ದಿನಕ್ಕೆ ಎಂದರೆ ಏಪ್ರಿಲ್ 18ರಂದು ರೋಗಿ ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಡಲು ಆರಂಭಿಸಿ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾ ಬಂದಿದ್ದರು. ಆ ಬಳಿಕ ಅವರನ್ನು ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಯ್ತು. ನಂತರ ಸೋಮವಾರ 24 ಗಂಟೆಗಳಲ್ಲಿ ಎರಡು ಭಾರಿ ರೋಗಿಯ ಕೋವಿಡ್-19 ಪರೀಕ್ಷೆ ಮಾಡಲಾಯ್ತು. ಎರಡು ಬಾರಿಯೂ ವರದಿ ನೆಗೆಟಿವ್ ಮಂದಿತ್ತು. ಕೆಲ ದಿನಗಳು ಚಿಕಿತ್ಸೆ ನೀಡಿ, ನಿಗಾ ವಹಿಸಿದ ಬಳಿಕ ಇಂದು ಕೂಡ ರೋಗಿಯ ವರದಿ ಕೊರೊನಾ ನೆಗೆಟಿವ್ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

    ಆದರೆ ಸರ್ಕಾರಿ ನಿಯಮದ ಪ್ರಕಾರ ಡಿಸ್ಚಾರ್ಜ್ ಆದ ವ್ಯಕ್ತಿ ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು. ಹೀಗಾಗಿ ಗುಣಮುಖರಾದ ವ್ಯಕ್ತಿಗೆ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ. ಡಾ. ಓಂಮೆಂದರ್ ಸಿಂಗ್ ನೇತೃತ್ವದ ವೈದ್ಯರ ತಂಡ ರೋಗಿಗೆ ಚಿಕಿತ್ಸೆ ನೀಡಿ, ರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

  • ಕೊರೊನಾ ವಿರುದ್ಧ ಅಜ್ಜನ ಸವಾಲು!

    ಕೊರೊನಾ ವಿರುದ್ಧ ಅಜ್ಜನ ಸವಾಲು!

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ 90 ವರ್ಷದ ವೃದ್ಧ ಸವಾಲು ಹಾಕಿದ್ದು, ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಅಜ್ಜ ಎಲ್ಲ ರೀತಿಯ ಹೋರಾಟ ನಡೆಸುತ್ತಿದ್ದಾನೆ.

    ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಿದ್ದ ಬಿಹಾರ ಮೂಲದ ಕಾರ್ಮಿಕ ರೋಗಿ-419ರ ಸಂಪರ್ಕದಿಂದ ವೃದ್ಧನಿಗೆ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿತ್ತು. ಹೀಗಾಗಿ ಸದ್ಯ ಆತನನ್ನು ಪ್ರತ್ಯೇಕವಾಗಿಸಿರಿ ಚಿಕಿತ್ಸೆ ಕೊಡಲಾಗುತ್ತಿದೆ.

    ವೃದ್ಧನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ವೈದ್ಯರಿಗೆ ಎಲ್ಲವೂ ಕಷ್ಟ ಕಷ್ಟವಾಗಿದೆ. ಆದರೂ ಅಜ್ಜ 90 ವರ್ಷ ವಯಸ್ಸಿನಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾನೆ. ಈ ನಿಟ್ಟಿನಲ್ಲಿ ವೈದ್ಯರು ವಯೋ ಸಹಜ ಕಾಯಿಲೆ ನೋಡಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಡಯಟ್ ಫುಡ್‍ನಲ್ಲೂ ಎಲ್ಲ ಭಿನ್ನವಾಗಿದೆ. ಡಯಾಬಿಟಿಕ್, ಬಿಪಿ ವ್ಯತ್ಯಾಸವಾಗದಂತೆ ನಿಗದಿತ ಪ್ರಮಾಣದಲ್ಲಿ ವೃದ್ಧನಿಗೆ ಊಟ ಕೊಡಲಾಗುತ್ತಿದೆ.

    ವೃದ್ಧನಿಗೆ ಮರುಜನ್ಮ ನೀಡುವುದು ವೈದ್ಯರಿಗೆ ಬಾರಿ ಸವಾಲಿನ ಕೆಲಸವಾಗಿದೆ. ಆದರೆ ವೈದ್ಯರ ಮಾತನ್ನು ಅಜ್ಜ ಚಾಚು ತಪ್ಪದೇ ಆರೋಗ್ಯಕ್ಕಾಗಿ ಪಾಲಿಸುತ್ತಿದ್ದಾನೆ. ಹೀಗಾಗಿ ವೃದ್ಧನಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಕೊಂಚ ಬ್ಯಾಲೆನ್ಸಿಂಗ್ ಬಂದಿದೆ.

  • ಆರೋಗ್ಯ ಸಿಬ್ಬಂದಿ ರಕ್ಷಣೆಗೆ ನಿಂತ ವಿದ್ಯಾ ಬಾಲನ್

    ಆರೋಗ್ಯ ಸಿಬ್ಬಂದಿ ರಕ್ಷಣೆಗೆ ನಿಂತ ವಿದ್ಯಾ ಬಾಲನ್

    ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ಹಲವು ನಟ, ನಟಿಯರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಕೆಲವರು ಧನಸಹಾಯ ಮಾಡಿದರೆ, ಇನ್ನೂ ಕೆಲವರು ಅಸಹಾಯಕರಿಗೆ ಅಗತ್ಯ ವಸ್ತುಗಳನ್ನು ನಿಡುತ್ತಿದ್ದಾರೆ. ಇನ್ನಷ್ಟು ಜನ ತಾವೇ ಕೊರೊನಾ ವಾರಿಯರ್ಸ್ ಆಗಿ ಹೋರಾಡುತ್ತಿದ್ದಾರೆ. ಆದರೆ ಬಾಲಿವುಡ್ ಖ್ಯಾತ ನಟಿ ವಿದ್ಯಾಬಾಲನ್ ಅವರು ಕೊರೊನಾ ವಾರಿಯರ್ಸ್‍ಗೆ ಸಹಾಯ ಮಾಡಲು ನಿಂತಿದ್ದಾರೆ.

    ಈಗಾಗಲೇ ದೇಶಾದ್ಯಂತ ಬಹುತೇಕ ನಟ, ನಟಿಯರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದು, ಹಲವರು ಪಿಎಂ ಕೇರ್ಸ್‍ಗೆ ಹಣ ಸಂದಾಯ ಮಾಡುವ ಮೂಲಕ ನೆರವಾಗುತ್ತಿದ್ದಾರೆ. ಇನ್ನೂ ಕೆಲವರು ಸಂಕಷ್ಟದಲ್ಲಿರುವ ಸಿನಿಮಾ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲಸ ನಟಿಯರು ತಾವೇ ವೈದ್ಯರಾಗಿ, ನರ್ಸ್‍ಗಳಾಗಿ ಕಾರ್ಯನಿರ್ವಹಿಸುವ ಮೂಲಕ ಜೀವ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ನಟಿ ವಿದ್ಯಾಬಾಲನ್ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲು ಮುಂದಾಗಿದ್ದಾರೆ.

    ಹಗಲು-ರಾತ್ರಿ ಎನ್ನದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಬೇಕಾಗುವ ಅಗತ್ಯ ಪಿಪಿಇ ಕಿಟ್‍ಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಪಿಪಿಇ ಕಿಟ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಮಸ್ತೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ರಕ್ಷಣೆಗಾಗಿ ಪಿಪಿಇ ಕಿಟ್‍ಗಳ ಅಗತ್ಯವಿದೆ. ಹೀಗಾಗಿ ನಾವು ಸಹಾಯ ಮಾಡಬೇಕು. ನಾನು 1000 ಪಿಪಿಇ ಕಿಟ್‍ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಅಲ್ಲದೆ ಟ್ರಿಂಗ್ ಜೊತೆಗಿನ ಸಹಭಾಗಿತ್ವದಲ್ಲಿ ಒಂದು ಸಾವಿರ ಪಿಪಿಇ ಕಿಟ್ ತಯಾರಿಗೆ ಸಿದ್ಧತೆ ನಡೆಸಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ಇದು ನಮ್ಮ ವೈದ್ಯರಿಗೆ ಅಗತ್ಯವಿದೆ. ಅಲ್ಲದೆ ನಿಮ್ಮಲ್ಲೂ ಮನವಿ ಮಾಡುತ್ತೇನೆ. ನೀವು ಸಹ ಸಹಾಯ ಮಾಡಿದಲ್ಲಿ ವಿಡಿಯೋ ಸಂದೇಶದ ಮೂಲಕ ವೈಯಕ್ತಿಕವಾಗಿ ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ವಿಡಿಯೋ ನಿಮ್ಮೊಂದಿಗೆ ಶಾಶ್ವತವಾಗಿ ನೆನಪಿನಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ವಿದ್ಯಾ ಬಾಲನ್ ಇದಕ್ಕಾಗಿ ಒಂದು ತಂಡವನ್ನೇ ಕಟ್ಟಿಕೊಂಡಿದ್ದು, ಮನಿಶ್ ಚಂದ್ರ ಮತ್ತು ನಿರ್ಮಾಪಕ ಅತುಲ್ ಕಸ್ಬೇಕರ್ ಸಹಭಾಗಿತ್ವದಲ್ಲಿ ಈ ಕಾರ್ಯವನ್ನು ಮಾಡಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ವಿದ್ಯಾಬಾಲನ್, ಇಂತಹ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ನಮಗೆ ಬಾರ್ಡರ್‍ನಲ್ಲಿ ಹೋರಾಡುವ ಸೈನಿಕರಿದ್ದಂತೆ. ಆದರೆ ಆರೋಗ್ಯ ಸೈನಿಕರಿಗೆ ಸದ್ಯ ಪಿಪಿಇ ಕಿಟ್‍ಗಳ ಕೊರತೆ ಕಾಡುತ್ತಿದ್ದು, ಇವುಗಳು ಹೆಚ್ಚು ಸಿಗುವಂತೆ ಮಾಡಬೇಕಿದೆ ಎಂದಿದ್ದಾರೆ.

    ಒಂದು ವೇಳೆ ಒಂದು ಯುನಿಟ್‍ನ ಒಬ್ಬರಿಗೆ ಕೊರೊನಾ ಸೋಂಕು ತಗುಲಿದರೂ 10-12 ಜನ ಆರೋಗ್ಯ ಸಿಬ್ಬಂದಿಯನ್ನು 2ರಿಂದ 3 ವಾರಗಳ ಕಾಲ ಕ್ವಾರಂಟೈನ್ ಮಾಡುತ್ತಾರೆ. ಆಗ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಕಾಡುತ್ತದೆ. ಹೀಗಾಗಿ ನನ್ನೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ. ನೀವು ಯಾವ ರೀತಿಯಾಗಿ ಸಹಾಯ ಮಾಡಬಹುದು ಎಂಬುದನ್ನು ಸಹ ವಿದ್ಯಾಬಾಲನ್ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

  • ಕಿಮ್ ಜಾಂಗ್-ಉನ್ ಆರೋಗ್ಯ ಗಂಭೀರ – ಉ.ಕೊರಿಯಾಗೆ ಬಂದಿಳಿದ ಚೀನಾ ವೈದ್ಯರು

    ಕಿಮ್ ಜಾಂಗ್-ಉನ್ ಆರೋಗ್ಯ ಗಂಭೀರ – ಉ.ಕೊರಿಯಾಗೆ ಬಂದಿಳಿದ ಚೀನಾ ವೈದ್ಯರು

    ಬೀಜಿಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚಿಕಿತ್ಸೆ ನೀಡಲು ಚೀನಾದ ನುರಿತ ವೈದ್ಯರ ತಂಡ ಉತ್ತರ ಕೊರಿಯಾಗೆ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.

    ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಅಂತರರಾಷ್ಟ್ರೀಯ ಸಂಪರ್ಕ ವಿಭಾಗದ ಹಿರಿಯ ಸದಸ್ಯರ ನೇತೃತ್ವದಲ್ಲಿ ವೈದ್ಯರ ನಿಯೋಗವು ಬೀಜಿಂಗ್‍ನಿಂದ ಪ್ಯೊಂಗ್ಯಾಂಗ್‍ಗೆ ಗುರುವಾರ ಹೋಗಿದೆ ಎನ್ನಲಾಗಿದೆ. ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಅವರ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಅವರ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ.

    ಈ ಮುಂಚೆಯಿಂದಲೂ ಚೀನಾ ಮತ್ತು ಉತ್ತರ ಕೊರಿಯಾದ ಸಂಬಂಧ ಉತ್ತಮವಾಗಿದೆ. ಕಳೆದ ಕೆಲ ವರ್ಷಗಳಿಂದ ಚೀನಾದ ರಹಸ್ಯ ಅಧಿಕಾರಿಗಳು ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಸೇರಿ ಹಲವಾರು ಬಾರಿ ಕಿಮ್ ಜಾಂಗ್-ಉನ್ ಅನ್ನು ಭೇಟಿಯಾಗಿ ಬಂದಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಕಿಮ್ ಜಾಂಗ್-ಉನ್ ಆರೋಗ್ಯ ಹದೆಗೆಟ್ಟ ಸಮಯದಲ್ಲಿ ಚೀನಾ ವೈದ್ಯರನ್ನು ಕಳುಹಿಸಿಕೊಟ್ಟಿದೆ. ಆದರೆ ಈ ಬಗ್ಗೆ ಚೀನಾ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

    ಕಿಮ್ ಜಾಂಗ್-ಉನ್ ಸರ್ವಾಧಿಕಾರಿಯಾಗಿದ್ದು, ಹೆಚ್ಚು ಹೆಚ್ಚು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವರದಿಗಳ ಪ್ರಕಾರ ಕಿಮ್ ಏಪ್ರಿಲ್ 15 ರಂದು ನಡೆದ ತನ್ನ ಅಜ್ಜ ಮತ್ತು ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಹುಟ್ಟುಹಬ್ಬದ ಆಚರಣೆಗೂ ಗೈರು ಹಾಜರಾಗಿದ್ದರು. ಅಧಿಕಾರಕ್ಕೆ ಏರಿದ ಬಳಿಕ ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ಗೈರಾಗಿರಲಿಲ್ಲ. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

    ಉತ್ತರ ಕೊರಿಯಾ ತಮ್ಮ ದೇಶದ ನಾಯಕರ ಆರೋಗ್ಯದ ವಿಚಾರವನ್ನು ರಾಷ್ಟ್ರದ ಭದ್ರತೆಯ ವಿಚಾರವೆಂದು ಪರಿಗಣಿಸುತ್ತದೆ. ಈ ಕಾರಣಕ್ಕೆ ಕಿಮ್ ಆರೋಗ್ಯ ಬಗ್ಗೆ ಎಲ್ಲಿಯೂ ಸುದ್ದಿ ಪ್ರಕಟವಾಗಿಲ್ಲ. ಆದರೆ ಈ ಎಲ್ಲದರ ಮಧ್ಯೆ ಸರ್ಕಾರಿ ಸ್ವಾಮ್ಯದ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆಯೊಂದು ಕಿಮ್ ಕಳೆದ ಬುಧವಾರ ಸಿರಿಯಾ ದೇಶದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ ಎಂದು ಸುದ್ದಿ ಮಾಡಿದೆ.

    ಈ ಹಿಂದೆ ಅಮೆರಿಕ ಮೂಲದ ಸುದ್ದಿ ಸಂಸ್ಥೆಯೊಂದು ಕಿಮ್ ಹೃದಯರಕ್ತನಾಳದ ಸರ್ಜರಿಗೆ ಒಳಗಾಗಿದ್ದರು ಎಂದು ಸುದ್ದಿ ಮಾಡಿತ್ತು. ಜೊತೆಗೆ ನಮಗೆ ಬಂದ ಗುಪ್ತ ಮಾಹಿತಿ ಪ್ರಕಾರ ಈ ಸರ್ಜರಿಯ ನಂತರ ಕಿಮ್ ಆರೋಗ್ಯ ಪರಿಸ್ಥಿತಿ ತುಂಬ ಹದಗೆಟ್ಟಿದೆ ಎಂದು ವರದಿ ಮಾಡಿತ್ತು. ಬುಧವಾರ ಈ ಬಗ್ಗೆ ಮಾಹಿತಿ ನೀಡಿದ್ದ ಚೀನಾ ರಾಯಭಾರಿ ಕಚೇರಿ ವಕ್ತಾರ, ನಮಗೆ ಕಿಮ್ ಆರೋಗ್ಯದ ಬಗ್ಗೆ ಮಾಹಿತಿ ಇದೆ. ಆದರೆ ಈ ಸಮಯದಲ್ಲಿ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  • ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್

    ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್

    ಬೀದರ್: ಕಳೆದ 23 ದಿನಗಳಿಂದ ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ 3 ಜನ ಕೊರೊನಾ ಶಂಕಿತರ ವರದಿ ನೆಗೆಟಿವ್ ಬಂದ ಹಿನ್ನೆಲೆ ಇಂದು ಮಧ್ಯಾಹ್ನ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

    ದೆಹಲಿ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿದ್ದ ದುಬಲಗುಂಡಿ ಗ್ರಾಮದ ಇಬ್ಬರು ಹಾಗೂ ಹಳ್ಳಿಖೇಡ ಬಿ ಪಟ್ಟಣದ ಒಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಅಂಬುಲೆನ್ಸ್ ಮೂಲಕ ಅವರ ಊರುಗಳಿಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಆಸ್ಪತ್ರೆಯ ಮೇಲ್ವಿಚಾರಕ ಡಾ. ನಾಗನಾಥ್ ಹುಲಸೂರೆ ಮಾತನಾಡಿ, ಈ ಮೂರು ಮಂದಿಗೆ ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು. 14 ದಿನಗಳ ಕಾಲ ಯಾವುದೇ ಕಡೆ ಸಂಚಾರ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ, ಪಿ.ಎಸ್.ಐ ರವಿಕುಮಾರ್, ಡಾ. ಬಸವಂತ ಗುಮ್ಮೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಡಾ. ಚೈತ್ರೇಶ್, ಡಾ. ರೋಹಿತ್ ರಗೋಜಿ, ಡಾ. ಇಂದ್ರಜೀತ್ ಚಂದಾ, ಡಾ. ದಿಲೀಪ್ ಡೊಂಗರೆ, ಡಾ. ನುಫೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.