Tag: doctors

  • ಕೊರೊನಾ ಸೋಂಕಿತರಲ್ಲಿ ಕವಾಸಕಿ ಲಕ್ಷಣ – 5ರ ಒಳಗಿನ ಮಕ್ಕಳಿಗೆ ಅಪಾಯ ಜಾಸ್ತಿ

    ಕೊರೊನಾ ಸೋಂಕಿತರಲ್ಲಿ ಕವಾಸಕಿ ಲಕ್ಷಣ – 5ರ ಒಳಗಿನ ಮಕ್ಕಳಿಗೆ ಅಪಾಯ ಜಾಸ್ತಿ

    ಮುಂಬೈ: ಕೊರೊನಾ ಸೋಂಕಿರುವ ಮಕ್ಕಳಲ್ಲಿ ಕವಾಸಕಿ ಕಾಯಿಲೆಯಂತೆಯೇ ರೋಗಲಕ್ಷಣಗಳು ಕಂಡು ಬರುತ್ತಿರುವುದು ಮುಂಬೈ ನಗರದ ಚಿಂತೆಗೆ ಈಗ ಕಾರಣವಾಗಿದೆ. ಈ ಕಾಯಿಲೆ ಮೊದಲು ಪಾಶ್ಚಿಮಾತ್ಯ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಕಾಯಿಲೆಯ ಲಕ್ಷಣಗಳು ವರದಿಯಾಗುತ್ತಿವೆ.

    14 ವರ್ಷದ ಬಾಲಕಿ ಈ ವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ಬಂದಿದ್ದಳು. ತೀವ್ರ ಜ್ವರ ಮತ್ತು ಕವಾಸಕಿ ರೋಗಲಕ್ಷಣಗಳನ್ನು ಹೊಂದಿದ್ದಳು. ನಂತರ ಕೊರೊನಾ ಪಾಸಿಟಿವ್ ಬಂದಿದ್ದು, ಬಾಲಕಿಯ ಆರೋಗ್ಯ ಸ್ಥೀತಿ ಗಂಭೀರವಾಗಿದ್ದರಿಂದ ಶುಕ್ರವಾರ ರಾತ್ರಿ ಐಸಿಯುಗೆ ಶಿಫ್ಟ್ ಮಾಡಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ವಾರ ಬಾಲಕಿಯ ತಂದೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಆಕೆಯೂ ಸೋಂಕು ಹರಡಿದೆ.

    ಏಪ್ರಿಲ್‍ನಿಂದ ಅಮೆರಿಕ, ಇಂಗ್ಲೆಂಡ್, ಸ್ಪೇನ್, ಇಟಲಿ ಮತ್ತು ಚೀನಾಗಳಲ್ಲಿ ಕಾವಸಾಕಿ ಸಿಂಡ್ರೋಮ್‍ನಂತಹ ರೋಗಲಕ್ಷಣ ಹೊಂದಿರುವ ಕೋವಿಡ್ -19 ಮಕ್ಕಳ ಪ್ರಕರಣಗಳು ವರದಿಯಾಗುತ್ತಿವೆ.

    ದಿ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್‍ನಲ್ಲಿ ಕೋವಿಡ್ -19 ಮತ್ತು ಕವಾಸಕಿಯಂತಹ ರೋಗಲಕ್ಷಣಗಳನ್ನು ಹೊಂದಿರುವ 58 ಮಕ್ಕಳನ್ನು ಅಧ್ಯಯನ ಮಾಡಿದೆ. ಅಧ್ಯಯನದಲ್ಲಿ ಇದನ್ನು “ಪೀಡಿಯಾಟ್ರಿಕ್ ಇನ್ಫ್ಲಾಮೇಟರಿ ಮಲ್ಟಿಸಿಸ್ಟಮ್ ಸಿಂಡ್ರೋಮ್” (Paediatric Inflammatory Multisystem Syndrome) ಎಂದು ಕರೆಯಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್’ (Multisystem Inflammatory Syndrome) ಎಂದು ಹೆಸರಿಸಿದೆ.

    ಕವಾಸಕಿ ಕಾಯಿಲೆ ಹೇಗೆ ಬರುತ್ತೆ ಎಂಬುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಆದರೆ ಈ ಕವಾಸಕಿ ಸಿಂಡ್ರೋಮ್ ಮುಖ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡು ಬರುತ್ತದೆ. ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದರೆ ಜ್ವರ ಮತ್ತು ರಕ್ತನಾಳಗಳಲ್ಲಿ ಉರಿಯೂತ ಉಂಟಾಗುತ್ತದೆ. ಕೆಲವೊಮ್ಮೆ ಈ ಕಾಯಿಲೆಗೆ ಚಿಕಿತ್ಸೆ ನೀಡಿಲ್ಲವಾದರೆ ಕೊರನರಿ ಆರ್ಟರೀಸ್ (ಅಭಿಧಮನಿ ಮತ್ತು ಅಪಧಮನಿಗಳಿಗೆ) ಹಾನಿಯಾಗುವ ಸಾಧ್ಯತೆ ಇದೆ.

    ಮಹಾರಾಷ್ಟ್ರದ 14,474 ಕೋವಿಡ್-19 ಪ್ರಕರಣಗಳಲ್ಲಿ 5,103 ಪ್ರಕರಣಗಳು 10 ವರ್ಷದೊಳಗಿನವರು ಮತ್ತು 9,371 ಪ್ರಕರಣಗಳು 11 ರಿಂದ 20 ವರ್ಷದೊಳಗಿನವರು ಎಂದು ವರದಿಯಾಗಿದೆ.

    14 ವರ್ಷದ ಬಾಲಕಿಯ ತಂದೆ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದರು. ಬಾಲಕಿಯನ್ನು ಬುಧವಾರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಕವಾಸಕಿ ಸಿಂಡ್ರೋಮ್ ಮಕ್ಕಳ ಮೇಲೆ ಬೇಗ ಪರಿಣಾಮ ಬೀರುತ್ತವೆ. ಆದರೆ ಬಾಲಕಿ ತಕ್ಷಣ ನಮ್ಮ ಬಳಿಗೆ ಬಂದಳು. ಆದ್ದರಿಂದ ನಾವು ಅವಳನ್ನು ಎರಡು ದಿನಗಳವರೆಗೆ ಚಿಕಿತ್ಸೆಗೆ ಒಳಪಡಿಸಿದ್ದೆವು. ಆದರೆ ಆಕೆಯ ಸ್ಥಿತಿ ಮತ್ತೆ ಹದಗೆಟ್ಟಿದೆ ಎಂದು ಆಸ್ಪತ್ರೆಯ ಮಕ್ಕಳ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ತನು ಸಿಂಘಾಲ್ ಹೇಳಿದ್ದಾರೆ.

    ಕವಾಸಕಿ ರೋಗವು ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೊರೊನಾ ಸೋಂಕಿರುವ 10-14 ವರ್ಷ ವಯಸ್ಸಿನ ಮಕ್ಕಳಲ್ಲೂ ಅದರ ರೋಗಲಕ್ಷಣಗಳು ಕಂಡು ಬರುತ್ತಿದೆ. ಇದು ಕವಾಸಕಿ ಕಾಯಿಲೆಯಲ್ಲ, ಆದರೆ ಅದರಂತೆಯೇ ಇದೆ. ಕವಾಸಕಿ ರೋಗಿಗಳಲ್ಲಿ ಸಾಮಾನ್ಯವಾಗಿ ನಾಲಿಗೆ ಮತ್ತು ಕಣ್ಣುಗಳು ಕೆಂಪಾಗುತ್ತವೆ. ಕೊರೊನಾ ದೃಢಪಟ್ಟ ಎರಡು-ಮೂರು ವಾರಗಳ ನಂತರ ಮಕ್ಕಳಲ್ಲಿ ಹೆಚ್ಚಾಗಿ ಕವಾಸಕಿಯಂತಹ ರೋಗಲಕ್ಷಣ ಕಂಡು ಬರುತ್ತಿದೆ ಎಂದು ಡಾ.ಸಿಂಘಾಲ್ ಹೇಳಿದರು.

    ಮುಂಬೈಯಲ್ಲಿ ಇದೇ ರೀತಿಯ ಎರಡು ಪ್ರಕರಣಗಳನ್ನು ನಾನು ನೋಡಿದ್ದೇನೆ. ಒಂದು ಎಸ್‌ಆರ್‌ಸಿಸಿ ಆಸ್ಪತ್ರೆಯಲ್ಲಿ ಮತ್ತು ಇನ್ನೊಂದು ಜೋಗೇಶ್ವರಿಯ ಖಾಸಗಿ ಆಸ್ಪತ್ರೆಯಲ್ಲಿ. ಇಬ್ಬರಿಗೂ ಉರಿಯೂತ, ಜ್ವರ ಇತ್ತು. ಕೊರೊನಾ ವರದಿಯಲ್ಲಿ ನೆಗೆಟಿವ್ ಇದೆ. ಆದರೂ ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದು ಡಾ. ಸಿಂಘಾಲ್ ತಿಳಿಸಿದ್ದಾರೆ.

    ಕವಾಸಕಿಯ ರೋಗಲಕ್ಷಣಗಳೊಂದಿಗೆ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಲಾಗಿದೆ. ಕವಾಸಕಿಯಂತೆಯೇ ರೋಗಲಕ್ಷಣ ತೋರಿಸುತ್ತಿರುವ ನಾಲ್ಕು ಪ್ರಕರಣಗಳನ್ನು ನೋಡಿದ್ದೇನೆ. ಆದರೆ ಅವರಿಗೆ ಕೋವಿಡ್ -19 ನೆಗೆಟಿವ್ ಬಂದಿದೆ ಎಂದು ಡಾ. ಬಿಸ್ವಾ ಆರ್ ಪಾಂಡಾ ತಿಳಿಸಿದರು.

    ಕೊರೊನಾ ಸೋಂಕು ಪತ್ತೆಯಾದ ಮೂರು ವಾರಗಳ ನಂತರ ಕವಾಸಕಿ ಕಾಯಿಲೆ ಲಕ್ಷಣ ಕಂಡು ಬರುತ್ತಿದೆ. ಕವಾಸಕಿ ಕಾಯಿಲೆಗೆ ಕೊರೊನಾವೈರಸ್ ನೇರವಾಗಿ ಕಾರಣವಾಗಿದೆಯೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಕೆಇಎಂ ಆಸ್ಪತ್ರೆಯು ಇಂತಹ ಪ್ರಕರಣಗಳನ್ನು ಇನ್ನೂ ಗಮನಿಸಿಲ್ಲ ಎಂದು ಕೆಇಎಂ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮುಕೇಶ್ ಶರ್ಮಾ ಹೇಳಿದ್ದಾರೆ.

  • ಬೆಂಗ್ಳೂರಲ್ಲಿ ಒಂಬತ್ತೇ ದಿನದಲ್ಲಿ ಕೊರೊನಾ ಗೆದ್ದ 99 ವರ್ಷದ ಅಜ್ಜಿ

    ಬೆಂಗ್ಳೂರಲ್ಲಿ ಒಂಬತ್ತೇ ದಿನದಲ್ಲಿ ಕೊರೊನಾ ಗೆದ್ದ 99 ವರ್ಷದ ಅಜ್ಜಿ

    – ಮಗ, ಸೊಸೆ ಇನ್ನೂ ಆಸ್ಪತ್ರೆಯಲ್ಲಿ

    ಬೆಂಗಳೂರು: ತನ್ನ 99ನೇ ವಯಸ್ಸಿನಲ್ಲಿ ಅಜ್ಜಿಯೊಬ್ಬರು ಕೇವಲ ಒಂಬತ್ತೇ ದಿನಕ್ಕೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಈ ಅಜ್ಜಿ ಜೊತೆ ಆತನ ಮಗ ಮತ್ತು ಸೊಸೆಗೂ ಕೊರೊನಾ ಸೋಂಕು ತಗಲಿತ್ತು. ಆದರೆ ಶುಕ್ರವಾರ ಅಜ್ಜಿ ಕೊರೊನಾದಿಂದ ಸಂಪೂರ್ಣ ಗುಣವಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಜ್ಜಿಗಿಂತ ಚಿಕ್ಕವರಾದ ಆಕೆಯ ಮಗ ಮತ್ತು ಸೊಸೆ ಮಾತ್ರ ಇನ್ನೂ ಗುಣವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಿದ್ದ ಅಜ್ಜಿಯ ಸೊಸೆಗೆ ಮೊದಲು ಕೊರೊನಾ ಪಾಸಿಟಿವ್ ಅನ್ನೋದು ಗೊತ್ತಾಗಿತ್ತು. ಜೊತೆಗೆ ಅಜ್ಜಿಯ ಮಗ ಹಾಗೂ ಮೊಮ್ಮಗನಿಗೂ ಪಾಸಿಟಿವ್ ಇತ್ತು. ಇವರ ಜೊತೆ ಪ್ರಾಥಮಿಕ ಸಂಪರ್ಕದಲಿದ್ದ ಅಜ್ಜಿಗೂ ಕೊರೊನಾ ಪಾಸಿಟಿವ್ ಬಂದಿದೆ. ಆ ನಂತರ ಜೂನ್ 18ರಂದು ಇಡೀ ಕುಟುಂಬ ವಿಕ್ಟೋರಿಯಾ ಆಸ್ಪತ್ರೆಯ ಕೊರೊನಾ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈಗ ಅಜ್ಜಿ ಮಾತ್ರ ಗುಣಮುಖರಾಗಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು, ಅಜ್ಜಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಹೈಪರ್ ಟೆನ್ಶನ್ ಸಮಸ್ಯೆ ಬಿಟ್ಟರೆ ಬೇರೆ ಯಾವ ತೊಂದರೆಯೂ ಇರಲಿಲ್ಲ. ಅಜ್ಜಿಗೆ ಕೊರೊನಾ ಗುಣಲಕ್ಷಣವೂ ಇರಲಿಲ್ಲ. ಮೈಲ್ಡ್ ಆಕ್ಸಿಜನ್ ವ್ಯವಸ್ಥೆ ಅಜ್ಜಿಗೆ ನೀಡಲಾಯ್ತು. ಈಗ ನಿನ್ನೆ ಎರಡು ಬಾರಿ ಸ್ವಾಬ್ ಟೆಸ್ಟ್ ಮಾಡಿದಾಗ ರಿಪೋರ್ಟ್ ನೆಗೆಟಿವ್ ಬಂದಿದೆ. ಅಜ್ಜಿ ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಿದ್ದಾರೆ.

    ಅಜ್ಜಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ ಅವರ ಮಗ ಮತ್ತು ಸೊಸೆ ಮಾತ್ರ ಇನ್ನೂ ರಿಕವರಿಯಾಗದೇ ಆಸ್ಪತ್ರೆಯಲ್ಲೇ ಇದ್ದಾರೆ. ಆ ಊಟ ಕೊಡಿ ಈ ಊಟ ಕೊಡಿ ಎನ್ನುವ ಯಾವ ಡಿಮ್ಯಾಂಡ್ ಕೂಡ ಅಜ್ಜಿ ಮಾಡುತ್ತಿರಲಿಲ್ಲ. ತುಂಬಾ ಚೆನ್ನಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಅಜ್ಜಿಯ ಸ್ಪೀಡ್ ರಿಕವರಿ ನಮಗೂ ಖುಷಿ ಕೊಟ್ಟಿದೆ. ಆಕೆ ಚಿಕಿತ್ಸೆ ವೇಳೆ ತುಂಬಾ ಪಾಸಿಟಿವ್ ಆಗಿದ್ದರು ಎಂದು ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

  • ಜಾಲಪ್ಪ ಆಸ್ಪತ್ರೆ ಕೋಲಾರದ ಕೊರೊನಾ ಹಾಟ್ ಸ್ಪಾಟ್

    ಜಾಲಪ್ಪ ಆಸ್ಪತ್ರೆ ಕೋಲಾರದ ಕೊರೊನಾ ಹಾಟ್ ಸ್ಪಾಟ್

    – ಕ್ಯಾನ್ಸರ್ ಪೀಡಿತ 60 ವರ್ಷದ ವೃದ್ಧೆ ಕೊರೊನಾ ಸ್ಪ್ರೆಡರ್

    ಕೋಲಾರ: ಜಿಲ್ಲೆಯ ಅರ್.ಎಲ್.ಜಾಲಪ್ಪ ಆಸ್ಪತ್ರೆ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಕೇವಲ ಈ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿ 14 ಜನರಲ್ಲಿ ಕೊರೊನಾ ದೃಢಪಟ್ಟಿದೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೊಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ವೈದ್ಯರಿಗೂ ಮಹಾಮಾರಿ ವಕ್ಕರಿಸಿದ್ದು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಭಯಭೀತರನ್ನಾಗಿಸಿದೆ. ಜಿಲ್ಲೆಯಲ್ಲಿ ಈ ವರೆಗೆ 74 ಜನ ಸೋಂಕಿತರ ಪೈಕಿ, ಜಾಲಪ್ಪ ಆಸ್ಪತ್ರೆಯಲ್ಲಿಯೇ 14 ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.

    ಆಶ್ಚರ್ಯಕರ ರೀತಿಯಲ್ಲಿ ಜಾಲಪ್ಪ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದೆ ತಿಂಗಳು 18 ರಂದು ಅತಿಯಾದ ಹೊಟ್ಟೆನೋವಿನಿಂದ ತುರ್ತು ಚಿಕಿತ್ಸೆಗೆಂದು ಕೋಲಾರ ತಾಲೂಕು ಗುರ್ಜೇನಹಳ್ಳಿ ಗ್ರಾಮದ 60 ವರ್ಷದ ಮಹಿಳೆ ರೋಗಿ ನಂ.8810 ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಮಹಿಳೆಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಮಹಿಳೆಗೆ ಕೊರೊನಾ ತಗುಲಿರುವುದು ದೃಢವಾಗಿತ್ತು.

    ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದ 6 ಜನ ವೈದ್ಯರಿಗೂ ಕೊರೊನಾ ಪಾಸಿಟೀವ್ ಬಂದಿದ್ದು, ಇಡೀ ಆಸ್ಪತ್ರೆಯ ಸಿಬ್ಬಂದಿಯನ್ನು ಆತಂಕಕ್ಕೆ ದೂಡಿತ್ತು. ನಂತರ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕೋವಿಡ್-19 ಟೆಸ್ಟ್‍ಗೆ ಒಳಪಡಿಸಲಾಗಿತ್ತು. ಎಲ್ಲರ ರಕ್ತದ ಹಾಗೂ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.

    ಕಳೆದೊಂದು ವಾರದಿಂದ ಜಾಲಪ್ಪ ಆಸ್ಪತ್ರೆಯಲ್ಲಿ ಮಾತ್ರ 14 ಪ್ರಕರಣಗಳು ಕಾಣಿಸಿಕೊಂಡಿದೆ. ಕೋಲಾರದಲ್ಲಿ ಇಂದು ಎಂಟು ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಇದರಲ್ಲಿ ಜಾಲಪ್ಪ ಖಾಸಗಿ ಅಸ್ಪತ್ರೆಯ 7 ಸಿಬ್ಬಂದಿ ವೈದ್ಯರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

    23 ವರ್ಷದ ಯುವತಿ ರೋಗಿ ನಂ.9538, 44 ವರ್ಷದ ಮಹಿಳೆ ರೋಗಿ ನಂ.9539, 33 ವರ್ಷದ ಮಹಿಳೆ ರೋಗಿ ನಂ.9540, 25 ವರ್ಷದ ಮಹಿಳೆ ರೋಗಿ ನಂ.9541, 23 ವರ್ಷದ ಮಹಿಳೆ ರೋಗಿ ನಂ.9542, 35 ವರ್ಷದ ಪುರುಷ ರೋಗಿ ನಂ.9543, 29 ವರ್ಷದ ಪುರುಷ ರೋಗಿ ನಂ.9545 ಇವರು ಜಾಲಪ್ಪ ಆಸ್ಪತ್ರೆ ಸಿಬ್ಬಂದಿಯಾಗಿದ್ದಾರೆ. ಉಳಿದಂತೆ 40 ವರ್ಷದ ಪುರುಷ ರೋಗಿ ನಂ.9544 ಮುಳಬಾಗಲು ತಾಲೂಕಿನ ವ್ಯಕ್ತಿಯಾಗಿದ್ದಾನೆ.

    ಜಿಲ್ಲೆಯಲ್ಲಿ ಒಟ್ಟು 74 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 32 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 42 ಸಕ್ರಿಯ ಪ್ರಕರಣಗಳಿವೆ.

  • ಕೋವಿಡ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ!

    ಕೋವಿಡ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ!

    ವಿಜಯಪುರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂದು ಆಸ್ಪತ್ರೆಯ ವೈದ್ಯರು ಮಹಿಳೆಗೆ ಸಹಜ ಹೆರಿಗೆ ಮಾಡಿಸಿದ್ದಾರೆ.

    ನಿನ್ನೆಯಷ್ಟೇ ಗರ್ಭಿಣಿ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿ ದೃಢವಾಗಿತ್ತು. ರೋಗಿ ಸಂಖ್ಯೆ-8789 ಎಂಬ 20 ವರ್ಷದ ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕೊರೊನಾ ಸುರಕ್ಷತಾ ಕ್ರಮ ಕೈಗೊಂಡ ವೈದ್ಯರು ಗರ್ಭಿಣಿಗೆ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿದ್ದಾರೆ.

    ನವಜಾತ ಶಿಶುಗಳು 2 ಕೆಜಿ ಹಾಗೂ 2.1 ಕೆಜಿ ತೂಕ ಹೊಂದಿದ್ದು, ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶರಣಪ್ಪ ಕಟ್ಟಿ ಮಾಹಿತಿ ನೀಡಿದ್ದಾರೆ. ಅನೇಮಿಯಾ (ರಕ್ತಹೀನತೆ) ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಿದ ವೇಳೆ ಕೊರೊನಾ ಪಾಸಿಟಿವ್ ವರದಿ ದೃಢವಾಗಿತ್ತು.

  • ಕೊರೊನಾ ಶಂಕಿತ ಮಹಿಳೆ ಸಾವು- ಖಾಸಗಿ ಆಸ್ಪತ್ರೆ ಸ್ವಯಂ ಪ್ರೇರಿತ ಸೀಲ್‍ಡೌನ್

    ಕೊರೊನಾ ಶಂಕಿತ ಮಹಿಳೆ ಸಾವು- ಖಾಸಗಿ ಆಸ್ಪತ್ರೆ ಸ್ವಯಂ ಪ್ರೇರಿತ ಸೀಲ್‍ಡೌನ್

    ಚಾಮರಾಜನಗರ: ತೀವ್ರ ಉಸಿರಾಟದ ಸಮಸ್ಯೆಯಿಂದ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ ಮಹಿಳೆಗೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಜಿಲ್ಲೆಯ ಭ್ರಮರಾಂಬ ಬಡಾವಣೆಯಲ್ಲಿರುವ ಬಸವರಾಜೇಂದ್ರ ಆಸ್ಪತ್ರೆಗೆ ಭಾನುವಾರ ರಾತ್ರಿ ಉಸಿರಾಟದ ಸಮಸ್ಯೆಯಿದ್ದ ಬ್ಯಾಡಮೂಡ್ಲು ಗ್ರಾಮದ 29 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗೆಂದು ಬಂದಿದ್ದರು. ಇವರನ್ನು ತಪಾಸಣೆ ಮಾಡಿದ ಆಸ್ಪತ್ರೆಯ ವೈದ್ಯರು ಈಕೆಗೆ ಕೊರೊನಾ ಇರಬಹುದೆಂದು ಶಂಕಿಸಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.

    ಭಾನುವಾರ ರಾತ್ರಿಯೇ ಮಹಿಳೆಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಹಿಳೆಯ ಗಂಟಲು ದ್ರವ ಮಾದರಿಯನ್ನು ಚಾಮರಾಜನಗರದ ವೈದ್ಯಕೀಯ ವಿಜ್ಷಾನ ಸಂಸ್ಥೆಗಳ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ತೀವ್ರ ಉಸಿರಾಟದ ಸಮಸ್ಯೆಯಿದ್ದ ಮಹಿಳೆಯನ್ನು ತಪಾಸಣೆ ಮಾಡಿದ್ದ ಚಾಮರಾಜನಗರದ ಬಸವರಾಜೇಂದ್ರ ಆಸ್ಪತ್ರೆ ಈಕೆಗೆ ಕೊರೊನಾ ಇರಬಹುದೆಂದು ಶಂಕಿಸಿ ಸ್ವಯಂ ಪ್ರೇರಿತವಾಗಿ ಸೀಲ್‍ಡೌನ್ ಆಗಿದೆ. ಅಲ್ಲದೆ ಮುನ್ನೆಚರಿಕಾ ಕ್ರಮವಾಗಿ ಇಬ್ಬರು ವೈದ್ಯರು ಹಾಗೂ ಐದು ಮಂದಿ ವೈದ್ಯಕೀಯ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿದೆ.

  • ಅಜ್ಜಿಯನ್ನು ಯಾಮಾರಿಸಿ 6 ದಿನದ ಹಸುಳೆ ಹೊತ್ತೊಯ್ದ ಯುವತಿ

    ಅಜ್ಜಿಯನ್ನು ಯಾಮಾರಿಸಿ 6 ದಿನದ ಹಸುಳೆ ಹೊತ್ತೊಯ್ದ ಯುವತಿ

    ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಹಾಡುಹಗಲೇ ಆರು ದಿನಗಳ ಹಸುಳೆಯನ್ನು ಅಪಹರಿಸಿರುವ ಘಟನೆ ನಡೆದಿದೆ. ಅಪರಿಚಿತ ಯುವತಿಯೊಬ್ಬಳು ಮಗುವನ್ನು ವೈದ್ಯರ ಬಳಿ ತೋರಿಸಿ ಕೊಡುವುದಾಗಿ ನಾಟಕವಾಡಿ ಪೋಷಕರನ್ನು ಯಾಮಾರಿಸಿ ಮಗುವನ್ನು ಕದ್ದೊಯ್ದಿದ್ದಾಳೆ.

    ಕೊಳ್ಳೇಗಾಲ ತಾಲೂಕು ಪಾಳ್ಯ ಗ್ರಾಮದ ಗರ್ಭಿಣಿ ಮುತ್ತುರಾಜಮ್ಮ ಕಳೆದ ಆರು ದಿನಗಳ ಹಿಂದೆ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನನ ನೀಡಿದ್ದರು. ಇಂದು ಮಧ್ಯಾಹ್ನ ಮಗುವಿಗೆ ಬೇಧಿ ಆಗಿದ್ದರಿಂದ ಮಗುವಿನ ಅಜ್ಜಿ ರಾಜಮ್ಮ ವೈದ್ಯರ ಬಳಿ ತೋರಿಸಲು ಹೆರಿಗೆ ವಾರ್ಡಿನಿಂದ ಮಗುವನ್ನು ಕರೆದುಕೊಂಡು ಬಂದಿದ್ದಾರೆ.

    ಬೆಳಗ್ಗೆಯಿಂದ ಹೆರಿಗೆ ವಾರ್ಡಿನಲ್ಲೇ ಇದ್ದ ಯುವತಿ ತನಗೆ ವೈದ್ಯರು ಗೊತ್ತಿರುವುದಾಗಿ ಹೇಳಿ ಅಜ್ಜಿಯ ಜೊತೆ ಬಂದಿದ್ದಾಳೆ. ಮಗುವನ್ನು ತಾನೇ ಎತ್ತಿಕೊಂಡು ಇಲ್ಲಿಯೇ ವೈದ್ಯರು ಇದ್ದಾರೆಯೇ ನೋಡಿಕೊಂಡು ಬರುವಂತೆ ಅಜ್ಜಿಯನ್ನು ಹೊರ ರೋಗಿಗಳ ವಿಭಾಗಕ್ಕೆ ಕಳುಹಿಸಿದ್ದಾಳೆ. ಅಜ್ಜಿ ವೈದ್ಯರನ್ನು ನೋಡಿಕೊಂಡು ಬರುವಷ್ಟರಲ್ಲಿ ಯುವತಿ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ.

    ಆಸ್ಪತ್ರೆಯಿಂದ ಮಗುವಿನ ಸಹಿತ ಹೊರ ಬಂದ ಯುವತಿ ಆಟೋವೊಂದರ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್ ಹತ್ತಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ವಿಷಯ ತಿಳಿದ ಪಟ್ಟಣ ಠಾಣೆ ಪೊಲೀಸರು, ಆಸ್ಪತ್ರೆಯಲ್ಲಿರುವ ಸಿ.ಸಿ.ಟಿವಿಯನ್ನು ವಶಕ್ಕೆ ಪಡೆದು ಪರಿಶೀಲಿನೆ ನಡೆಸಿದ್ದಾರೆ. ಅಲ್ಲದೆ ಆಸ್ಪತ್ರೆಯ ಹೊರ ಭಾಗದಲ್ಲಿರುವ ಖಾಸಗಿ ಅಂಗಡಿ-ಮುಂಗಟ್ಟುಗಳ ಸಿಸಿಟಿವಿ ಗಳನ್ನು ಸಹ ಪರಿಶೀಲಿಸಿದ್ದಾರೆ.

  • ಆನೆಗಳಿಗೂ ಕೊರೊನಾ ಟೆಸ್ಟ್- ಕಣ್ಣು, ಗಂಟಲು ದ್ರವ ಸಂಗ್ರಹ

    ಆನೆಗಳಿಗೂ ಕೊರೊನಾ ಟೆಸ್ಟ್- ಕಣ್ಣು, ಗಂಟಲು ದ್ರವ ಸಂಗ್ರಹ

    – 7ರಿಂದ 10 ದಿನಗಳಲ್ಲಿ ಬರಲಿದೆ ವರದಿ
    – ಮಾವುತರೊಂದಿಗೆ ಸಂಪರ್ಕದ ಹಿನ್ನೆಲೆ ಪರೀಕ್ಷೆ

    ಜೈಪುರ: ರಾಜಸ್ಥಾನ ಒಂದೇ ದಿನದಲ್ಲಿ 25 ಸಾವಿರ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವ ಮೂಲಕ ದೆಹಲಿ ಹಾಗೂ ತಮಿಳುನಾಡು ನಂತರ ಒಂದೇ ದಿನ ಹೆಚ್ಚು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ದೇಶದಲ್ಲೇ ಮೊದಲು ಎಂಬಂತೆ ಆನೆಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    ಆನೆಗಳ ತಾಣವಾಗಿರುವ ಜೈಪುರದಲ್ಲಿ ಗುರುವಾರದಿಂದ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, 110ಕ್ಕೂ ಹೆಚ್ಚು ಆನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿಸ್ತಾರವಾದ ಪ್ರದೇಶದಲ್ಲಿ 63 ಆನೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಅಂಬರ್ ಕೋಟೆ ಬಳಿ ತಮ್ಮ ಮಾಲೀಕರ ಬಳಿ ಇರುವ ಆನೆಗಳಿಗೂ ಟೆಸ್ಟ್ ಮಾಡಿಸಲಾಗುತ್ತಿದೆ.

    ರಾಜಸ್ಥಾನದಲ್ಲಿ ಮೊದಲ ಬಾರಿಗೆ ಆನೆಗಳ ಕಣ್ಣು ಹಾಗೂ ಗಂಟಲು ದ್ರವ ಸಂಗ್ರಹಿಸಲಾಗಿದೆ. ಮಾದರಿಗಳನ್ನು ಬರೇಲಿಯ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗುತ್ತಿದೆ ಎಂದು ಮೂರು ದಿನಗಳ ಕ್ಯಾಂಪ್‍ನ ಮೊದಲ ದಿನದಲ್ಲಿ ಮೂವರು ಪಶು ವೈದ್ಯರೊಂದಿಗೆ 50 ಆನೆಗಳ ಪರೀಕ್ಷೆ ನಡೆಸಿದ ವೈದ್ಯ ಅರವಿಂದ್ ಮಾಥುರ್ ಅವರು ಮಾಹಿತಿ ನೀಡಿದ್ದಾರೆ.

    ಈ ಮೂರು ದಿನಗಳ ಕ್ಯಾಂಪ್‍ನ್ನು ಹಾಥಿಗಾಂವ್ ವಿಕಾಸ್ ಸಮಿತಿಯ ಸಹಯೋಗದಲ್ಲಿ ರಾಜಸ್ಥಾನ ಅರಣ್ಯ ಇಲಾಖೆ ಆಯೋಜಿಸಿದೆ. ವಿವಿಧ ಕಾಯಿಲೆಗಳ ಕುರಿತು ಪರೀಕ್ಷಿಸಲು ಪ್ರತಿ 6 ತಿಂಗಳಿಗೊಮ್ಮೆ ಇಂತಹದ್ದೇ ಕ್ಯಾಂಪ್‍ಗಳನ್ನು ಹಾಕಿಕೊಳ್ಳಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

    ಪ್ರವಾಸಿಗರು ಕೋಟೆಯ ಕಡಿದಾದ ಕಲ್ಲಿನ ಮಾರ್ಗಗಳಲ್ಲಿ ಸವಾರಿ ಮಾಡಲು ಜೈಪುರದ ಆನೆಗಳನ್ನು ಬಳಸುತ್ತಾರೆ. ಹೀಗಾಗಿ ಇವು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿವೆ. ಆನೆಗಳು ಮಾವುತನೊಂದಿಗೆ ಹತ್ತಿರದ ಸಂಪರ್ಕ ಹೊಂದಿರುತ್ತವೆ. ಹೀಗಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ.

    ಹಾಥಿಗಾಂವ್ ವಿಕಾಸ್ ಸಮಿತಿ ಅಧ್ಯಕ್ಷ ಬಲ್ಲು ಖಾನ್ ಈ ಕುರಿತು ಮಾಹಿತಿ ನೀಡಿ, ಆನೆಗಳನ್ನು ಆರೋಗ್ಯಕರವಾಗಿಡಲು ಹಾಗೂ ಪ್ರವಾಸಿಗರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ. ಸುಮಾರು 8 ಸಾವಿರಕ್ಕೂ ಅಧಿಕ ಕುಟುಂಬಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆನೆಗಳನ್ನೇ ಅವಲಂಬಿಸಿವೆ ಎಂದು ತಿಳಿಸಿದ್ದಾರೆ.

    ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸುವುದು ಶಿಷ್ಟಾಚಾರದ ಭಾಗವಾಗಿದ್ದು, ಕಣ್ಣು ಹಾಗೂ ಗಂಟಲು ದ್ರವವನ್ನು ಸಂಗ್ರಹಿಸಲಾಗಿದೆ. ಕಣ್ಣಿನ ದ್ರವ ಸಂಗ್ರಹಿಸಿ ಪರಿಚಯವಿಲ್ಲದ ಕಾರಣ 26 ವರ್ಷದ ಹೆಣ್ಣಾನೆಯೊಂದು ಈ ಸಂದರ್ಭದಲ್ಲಿ ಸ್ವಲ್ಪ ಭಯ ಪಟ್ಟಿತು. ಈಗಾಗಲೇ ಮಾದರಿ ಸಂಗ್ರಹಿಸಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ. 7ರಿಂದ 10 ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

  • ರಾಯಚೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ನಿಲ್ಲದ ಗಲಾಟೆ- 378ಕ್ಕೇರಿದ ಸೋಂಕಿತರ ಸಂಖ್ಯೆ

    ರಾಯಚೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ನಿಲ್ಲದ ಗಲಾಟೆ- 378ಕ್ಕೇರಿದ ಸೋಂಕಿತರ ಸಂಖ್ಯೆ

    ರಾಯಚೂರು: ಜಿಲ್ಲೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡವಾಗುವ ಮೂಲಕ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ 378ಕ್ಕೆ ಏರಿದೆ.

    ನಗರದ ಇಬ್ಬರು ವೈದ್ಯಕೀಯ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯ ಒಟ್ಟು 8 ಜನ ವೈದ್ಯಕೀಯ ಸಿಬ್ಬಂದಿ, ನಾಲ್ಕು ಜನ ಪೊಲೀಸರಿಗೆ ಸೋಂಕು ತಗುಲಿದಂತಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 82 ಜನ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 294 ಪ್ರಕರಣಗಳು ಸಕ್ರಿಯವಾಗಿವೆ.

    ರಾಯಚೂರಿನ ಕೋವಿಡ್ ಆಸ್ಪತ್ರೆ ಓಪೆಕ್‍ನಲ್ಲಿ ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಮಧ್ಯೆ ವಾಗ್ವಾದ ಪದೇ ಪದೇ ನಡೆಯುತ್ತಲೇ ಇದೆ. ಸೂಕ್ತ ಚಿಕಿತ್ಸೆ ಸಿಗದ್ದಕ್ಕೆ ಕೊರೊನಾ ಸೋಂಕಿತರು ವಾಗ್ವಾದಕ್ಕೆ ಇಳಿದಿದ್ದಾರೆ. ಸೂಕ್ತ ವ್ಯವಸ್ಥೆ ಮಾಡುವಂತೆ ಗಲಾಟೆ ಮಾಡಿದ್ದಾರೆ. ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಆಸ್ಪತ್ರೆ ಗೇಟ್ ಬಂದ್ ಮಾಡಿ ಹೊರಗಡೆ ಪೊಲೀಸರು ಕಾವಲಿಗೆ ನಿಂತರೂ ಸೋಂಕಿತರು ಹೊರಬರುವ ಪ್ರಯತ್ನ ಮಾಡಿದ್ದಾರೆ.

    ಪೊಲೀಸರು ಸೂಚನೆ ನೀಡಿದರೂ ಸೋಂಕಿತರು ಗುಂಪು ಗುಂಪಾಗಿ ಸೇರಿ ಗಲಾಟೆ ಮಾಡಿ ಅಧಿಕಾರಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಆಸ್ಪತ್ರೆಯಲ್ಲಿ ರಾದ್ಧಾಂತ ಮಾಡಿದ್ದಾರೆ. ಇವರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

  • ಮಾನವೀಯತೆ ಮರೆತ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ

    ಮಾನವೀಯತೆ ಮರೆತ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ

    ಬೆಂಗಳೂರು: ಹೊಟ್ಟೆನೋವು ಅಂತ ಆಸ್ಪತ್ರೆಗೆ ಬಂದ ರೋಗಿಗೆ ಚಿಕಿತ್ಸೆ ನೀಡದೇ ಆಸ್ಪತ್ರೆ ಸಿಬ್ಬಂದಿ ಕರ್ತವ್ಯದ ಜೊತೆ ಮಾನವೀಯತೆಯನ್ನು ಮರೆತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

    ಕಳೆದ ರಾತ್ರಿ ಹೊಟ್ಟೆನೋವು ಅಂತ ಓರ್ವ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ವೈದ್ಯರಿಲ್ಲ ಅಂತ ಹೇಳಿ ಸಿಬ್ಬಂದಿ ರೋಗಿಯನ್ನು ಆಸ್ಪತ್ರೆಯೊಳಗೆ ಸಹ ಕರೆದುಕೊಂಡಿಲ್ಲ. ಹೊರಗೆ ನಿಲ್ಲಿಸಿ ಖಾಸಗಿ ಆಸ್ವತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಉದ್ದಟತನನ ಮಾತುಗಳನ್ನಾಡಿದ್ದಾರೆ.

    ಖಾಸಗಿ ಆಸ್ವತ್ರೆಗೆ ಹೋಗಲು ಹಣವಿಲ್ಲ ಅಂತ ರಸ್ತೆಯಲ್ಲೆ ರೋಗಿಯ ನರಳಾಟ ಮಾಡಿದ್ರೂ ಆತನಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಮುಂದಾಗಿಲ್ಲ. ಆಸ್ಪತ್ರೆಯ ಪಕ್ಕದ ಕ್ವಾಟರ್ಸ್ ನಲ್ಲಿಯೇ ವೈದ್ಯರಿದ್ದರೂ ಕೊರೊನಾ ಹೆಸರು ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಆಸ್ಪತ್ರೆಯ ಮುಂದೆ ನಡೆದ ಘಟನೆಯ ದೃಶ್ಯದ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸರ್ಕಾರಿ ಆಸ್ವತ್ರೆ ವೈದ್ಯರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೊಟ್ಟೆನೋವು ಎಂದು ಬಂದವನ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್

    ಹೊಟ್ಟೆನೋವು ಎಂದು ಬಂದವನ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್

    – ಚಾರ್ಜರ್ ಒಳಹೋದ ಕಥೆ ಕೇಳಿ ಬೆಚ್ಚಿಬಿದ್ದ ವೈದ್ಯರು

    ದಿಶ್ಪೂರ್: ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್ ಇರುವುದನ್ನು ಕಂಡು ವೈದ್ಯರೇ ದಂಗಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಗುವಾಹಟಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ಬಂದ 30 ವರ್ಷದ ವ್ಯಕ್ತಿ ನನಗೆ ಹೊಟ್ಟೆನೋವು ಇದೆ ಎಂದು ದಾಖಲಾಗಿದ್ದಾನೆ. ಆದರೆ ನಾನು ಗೊತ್ತಿಲ್ಲದೇ ಮಿಸ್ ಆಗಿ ಮೊಬೈಲ್ ಹೆಡ್ ಫೋನ್ ಅನ್ನು ನುಂಗಿದ್ದೇನೆ ಎಂದು ಹೇಳಿದ್ದಾನೆ. ಆದರೆ ಅವನಿಗೆ ವೈದ್ಯರು ಎಂಡೋಸ್ಕೋಪಿ ಮಾಡಿದ್ದು, ಇದರಲ್ಲಿ ವೈಯರ್ ಇರುವುದು ಕಂಡು ಬಂದಿಲ್ಲ.

    ಈ ವಿಚಾರದ ಬಗ್ಗೆ ಮಾತನಾಡಿರುವ ವೈದ್ಯ ವಲಿಯಲ್ ಇಸ್ಲಾಂ, ಮೊದಲಿಗೆ ಆತ ನಮಗೆ ಹೆಡ್ ಫೋನ್ ನುಂಗಿರುವುದಾಗಿ ಹೇಳಿದ. ನಾವು ಈ ಕಾರಣದಿಂದ ಎಂಡೋಸ್ಕೋಪಿ ಮಾಡಿದವು. ಆದರೆ ಅವನ ಹೊಟ್ಟೆಯಲ್ಲಿ ಆದೂ ಕಾಣಿಸಿಕೊಳ್ಳಲಿಲ್ಲ. ನಂತರ ನಾವು ಅವನನ್ನು ಎಕ್ಸ್-ರೇ ಗೆ ಒಳಪಡಿಸಿದೆವು. ಈ ವೇಳೆ ಅವನ ಮೂತ್ರಕೋಶದಲ್ಲಿ 2 ಮೀಟರ್ ಉದ್ದದ ಮೊಬೈಲ್ ಚಾರ್ಚರ್ ಇರುವುದು ಕಂಡು ಬಂತು ಎಂದು ಹೇಳಿದ್ದಾರೆ.

    ರೋಗಿ ನಮಗೆ ಮೊದಲಿಗೆ ಸುಳ್ಳು ಹೇಳಿದ್ದಾನೆ. ಆತ ಮಿಸ್ ಆಗಿ ಹೆಡ್ ಫೋನ್ ಅನ್ನು ನುಂಗಿಲ್ಲ. ಆದರೆ ಆತನಿಗೆ ಹಸ್ತಮೈಥುನ ಮಾಡಿಕೊಳ್ಳುವ ಅಭ್ಯಾಸವಿದೆ. ಈ ಅಭ್ಯಾಸ ಅತೀರೇಕಕ್ಕೆ ತಿರುಗಿ ಆತ ಕೇಬಲ್ ಅನ್ನು ತನ್ನ ಮರ್ಮಾಂಗದ ಮೂಲಕ ತೂರಿಸಿಕೊಂಡಿದ್ದಾನೆ. ಹೀಗಾಗಿ ಅದು ಮೂತ್ರಕೋಶಕ್ಕೆ ಹೋಗಿ ಸೇರಿಕೊಂಡಿದೆ. ನನ್ನ 25 ವರ್ಷದ ಈ ವೃತ್ತಿಯಲ್ಲಿ ಇದೇ ಮೊದಲ ಬಾರಿಗೇ ಈ ರೀತಿಯ ವಿಚಿತ್ರ ಪ್ರಕರಣವನ್ನು ನೋಡುತ್ತಿದ್ದೇನೆ ಎಂದು ಇಸ್ಲಾಂ ತಿಳಿಸಿದ್ದಾರೆ.

    ವೈದ್ಯರ ಹೇಳುವ ಪ್ರಕಾರ, ರೋಗಿಯು ತನ್ನ ಮರ್ಮಾಂಗ ಮೂಲಕ ಕೇಬಲ್ ಮತ್ತು ಇತರ ವಸ್ತುಗಳನ್ನು ಲೈಂಗಿಕ ಆನಂದಕ್ಕಾಗಿ ಹಾಕಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದಾನೆ. ಈ ಸಂದರ್ಭದಲ್ಲಿ ಲೈಂಗಿಕ ಸುಖ ನಿಯಂತ್ರಣ ತಪ್ಪಿ ಕೇಬಲ್ ಅವನ ಮೂತ್ರಕೋಶವನ್ನು ತಲುಪಿದೆ. ಈಗ ನಾವು ಆಪರೇಷನ್ ಮಾಡಿ ಕೇಬಲ್ ಅನ್ನು ಹೊರಗೆ ತೆಗೆದಿದ್ದು, ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.

    ಮೂತ್ರನಾಳದ ಮೂಲಕ ವಸ್ತುಗಳನ್ನು ಮತ್ತು ದ್ರವವನ್ನು ಹಾಕಿಕೊಳ್ಳುವುದು ಕೂಡ ಒಂದು ರೀತಿಯ ಹಸ್ತಮೈಥುನ. ಈ ವ್ಯಕ್ತಿ ಈ ರೀತಿಯ ಹಸ್ತಮೈಥುನಕ್ಕೆ ದಾಸನಾಗಿದ್ದು, ಈ ರೀತಿ ಮಾಡಿಕೊಂಡಿದ್ದಾನೆ. ಕೇಬಲ್ ದೇಹ ಸೇರಿದ ಐದು ದಿನದ ಬಳಿಕ ವೈದ್ಯರ ಬಳಿ ಬಂದಿದ್ದಾನೆ. ಜೊತೆಗೆ ನಾನು ಬಾಯಿಯಿಂದ ಹೆಡ್ ಫೋನ್ ನುಂಗಿದೆ ಎಂದು ಪದೇ ಪದೇ ಹೇಳಿದ್ದಾನೆ. ಆದರೆ ಆತ ನಮ್ಮ ಬಳಿ ಯಾಕೆ ಸುಳ್ಳು ಹೇಳಬೇಕು ಎಂದು ಡಾ. ಇಸ್ಲಾಂ ಕಳವಳ ವ್ಯಕ್ತಪಡಿಸಿದ್ದಾರೆ.