Tag: doctors

  • ಕೊರೊನಾ ಟೆಸ್ಟ್ ಮಾಡದೆ ಮಾತ್ರೆ ಕೊಟ್ಟು ಕಳುಹಿಸಿದ್ರು – ಸೋಂಕಿನಿಂದ ವ್ಯಕ್ತಿ ಸಾವು

    ಕೊರೊನಾ ಟೆಸ್ಟ್ ಮಾಡದೆ ಮಾತ್ರೆ ಕೊಟ್ಟು ಕಳುಹಿಸಿದ್ರು – ಸೋಂಕಿನಿಂದ ವ್ಯಕ್ತಿ ಸಾವು

    – ಮೃತಪಟ್ಟ ನಂತರ ಕೊರೊನಾ ಟೆಸ್ಟ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಗೆ ಮತ್ತೊಂದು ಬಲಿಯಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

    ವಿರಾಜಪೇಟೆ ಪಟ್ಟಣದ ನಿವಾಸಿ ಸೈಯದ್ ಇಸ್ಮಾಯಿಲ್ ಮೃತಪಟ್ಟ ವ್ಯಕ್ತಿ. ಸೈಯದ್ ಇಸ್ಮಾಯಿಲ್ ಕಳೆದ 3 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ನೀಡದೆ ಕೊರೊನಾ ಟೆಸ್ಟ್ ಕೂಡ ಮಾಡದೆ, ಕೇವಲ ಮಾತ್ರೆ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದೆ.

    ಆದರೆ ಜ್ವರ ತೀವ್ರಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಅವರ ರಕ್ತ ಪರೀಕ್ಷೆ ನಡೆಸಲಾಗಿತ್ತು. ಅವರಿಗೆ ಡೆಂಗ್ಯೂ ಇದೆ ಎಂದು ವರದಿ ಬಂದಿತ್ತು. ಈ ಮಧ್ಯೆ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಗೆ ರ‍್ಯಾಪಿಡ್ ಕೋವಿಡ್ ಟೆಸ್ಟ್ ನಡೆಸುವಂತೆ ಮೃತ ವ್ಯಕ್ತಿಯ ಸಂಬಂಧಿಗಳು ಒತ್ತಾಯಿಸಿದ್ದರೂ ವೈದ್ಯರು ಟೆಸ್ಟ್ ಮಾಡುವುದಕ್ಕೆ ನಿರಾಕರಿಸಿದ್ದರು ಎಂದು ಸೋಂಕಿತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಶನಿವಾರ ರಾತ್ರಿ ವ್ಯಕ್ತಿಗೆ ಜ್ವರ ತೀವ್ರಗೊಂಡಿದ್ದರಿಂದ ಮತ್ತೆ ವಿರಾಜಪೇಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟೊತ್ತಿಗಾಗಲೇ ವ್ಯಕ್ತಿಗೆ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿಯೂ ವೈದ್ಯರು ನೋಡದೆ, ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹೀಗಾಗಿ ಮೃತ ವ್ಯಕ್ತಿಯ ಸಂಬಂಧಿಗಳು ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಇಸ್ಮಾಯಿಲ್ ಮೃತಪಟ್ಟಿದ್ದಾರೆ. ಬಳಿಕ ವೈದ್ಯರು ರ‍್ಯಾಪಿಡ್ ಟೆಸ್ಟ್ ನಡೆಸಿದಾಗ ಮೃತ ಸೈಯದ್ ಇಸ್ಮಾಯಿಲ್‍ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    ಒಟ್ಟಿನಲ್ಲಿ ವಿರಾಜಪೇಟೆ ತಾಲೂಕು ಆಸ್ಪತ್ರೆ ವೈದ್ಯರು ಶುಕ್ರವಾರವೆ ಕೊರೊನಾ ಟೆಸ್ಟ್ ಮಾಡಿದರೆ. ಮೃತ ವ್ಯಕ್ತಿ ಬದುಕುತ್ತಿದ್ದರು. ನಾವೇ ಕೇಳಿದರೂ ಕೋವಿಡ್ ಟೆಸ್ಟ್ ನಡೆಸದೆ ನಿರ್ಲಕ್ಷ್ಯವಹಿಸಿದ್ದೇ ತಮ್ಮ ಸಂಬಂಧಿ ಸಾವನ್ನಪ್ಪಲು ಕಾರಣ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

  • ಮಣಿಪಾಲ ಕೆಎಂಸಿ ವೈದ್ಯರಿಗೆ ಕೊರೊನಾ – ಒಂದು ವಾರ ಒಪಿಡಿ ಬಂದ್

    ಮಣಿಪಾಲ ಕೆಎಂಸಿ ವೈದ್ಯರಿಗೆ ಕೊರೊನಾ – ಒಂದು ವಾರ ಒಪಿಡಿ ಬಂದ್

    – ಎಮರ್ಜೆನ್ಸಿ ಕೇಸ್‍ಗಳಿಗೆ ಮಾತ್ರ ಅವಕಾಶ

    ಉಡುಪಿ: ಮಣಿಪಾಲ ಕೆಎಂಸಿಯ ಹದಿನೆಂಟು ವೈದ್ಯರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೇ 20ಕ್ಕಿಂತಲೂ ಹೆಚ್ಚು ನರ್ಸ್, ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಹೀಗಾಗಿ ಒಂದು ವಾರ ಒಪಿಡಿ ಬಂದ್ ಮಾಡಲಾಗಿದೆ.

    ಕೊರೊನಾ ವಾರಿಯರ್‌ಗಳಿಗೆ ಒಂದು ವಾರ ಒಪಿಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಒಂದು ವಾರಗಳ ಕಾಲ ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಎಲ್ಲಾ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಿದೆ.

    ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಕೆಎಂಸಿಗೆ ಆಗಮಿಸುವ ಎಲ್ಲ ಒಪಿಡಿ ರೋಗಿಗಳಿಗೆ ಸದ್ಯ ಆಸ್ಪತ್ರೆಗೆ ಬರುವ ಅವಕಾಶ ಇಲ್ಲ. ಎಮರ್ಜೆನ್ಸಿ ಕೇಸ್‍ಗಳನ್ನು ಮಾತ್ರ ಅಟೆಂಡ್ ಮಾಡುತ್ತೇವೆ. ಮಾಹಿತಿ ಇಲ್ಲದೇ ಇವತ್ತು ಬಂದ ಕೆಲ ರೋಗಿಗಳಿಗೆ ಆಸ್ಪತ್ರೆಯ ಹೊರಗೆ ಚಿಕಿತ್ಸೆ ಕೊಡುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು.

    ಆಸ್ಪತ್ರೆಗೆ ಬರುವ ರೋಗಿಗಳು, ಅವರ ಉಪಯೋಗಕ್ಕೆ ಕೋವಿಡ್ ಹೆಲ್ಪ್ ಡೆಸ್ಕ್ ತೆರೆದಿದ್ದೇವೆ. ಯಾವುದಾದರೂ ಲಕ್ಷಣಗಳು ಕಂಡು ಬಂದಲ್ಲಿ ಈ ಬಗ್ಗೆ ಸಲಹೆಗಳನ್ನು ಡೆಸ್ಕ್ ನಲ್ಲಿ ಕೊಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

    ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ತಿಂಗಳಿಂದ ಮಾನ್ಸೂನ್ ಅಬ್ಬರಿಸುತ್ತಿದೆ. ಸಹಜವಾಗಿ ಮಳೆಗಾಲದಲ್ಲಿ ಶೀತ, ಜ್ವರ, ಕೆಮ್ಮು, ನೆಗಡಿ ಜನರನ್ನು ಬಾಧಿಸುತ್ತದೆ. ಹೀಗಾಗಿ ಕೆಎಂಸಿಯ ಹೊರ ಭಾಗದಲ್ಲಿ ಒಂದು ಫಿವರ್ ಕ್ಲಿನಿಕ್ ಅನ್ನು ತೆರೆಯಲಾಗಿದೆ. ಒಂದು ವಾರಗಳ ಕಾಲ ಆಸ್ಪತ್ರೆಯ ಒಳಗೆ ಇರುವ ರೋಗಿಗಳು ಕೆಎಂಸಿಯ ಸಿಬ್ಬಂದಿ, ವೈದ್ಯರು ಎಲ್ಲರಿಗೂ ಕೊರೊನಾ ಟೆಸ್ಟ್ ನಡೆಯಲಿದೆ.

  • ನಂಬಿಕೆ ಕಳ್ಕೊಂಡಿದ್ರು- ಸುಶಾಂತ್‍ಗೆ ಚಿಕಿತ್ಸೆ ನೀಡಿದ್ದ ವೈದ್ಯರ ವಿಚಾರಣೆ

    ನಂಬಿಕೆ ಕಳ್ಕೊಂಡಿದ್ರು- ಸುಶಾಂತ್‍ಗೆ ಚಿಕಿತ್ಸೆ ನೀಡಿದ್ದ ವೈದ್ಯರ ವಿಚಾರಣೆ

    -ಸುಶಾಂತ್ ಚಿಕಿತ್ಸೆ ಪಡೆದುಕೊಳ್ತಿದ್ಯಾಕೆ?

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಾವಿನ ರಹಸ್ಯ ಇನ್ನೂ ನಿಗೂಢವಾಗಿದೆ. ಮುಂಬೈ ಪೊಲೀಸರು ಸಹ ಸುಶಾಂತ್ ಆಪ್ತ ವಲಯ, ವೃತ್ತಿಪರ ಗೆಳೆಯರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸುಶಾಂತ್ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವೈದ್ಯರೊಬ್ಬರು ಸುಶಾಂತ್ ಎಲ್ಲರ ಮೇಲಿನ ನಂಬಿಕೆ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

    2019 ನವೆಂಬರ್ ನಿಂದ ಸುಶಾಂತ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈ ಸಂಬಂಧ ಮೂವರು ಮನೋಚಿಕಿತ್ಸೆ ವೈದ್ಯರಿಂದ ಮುಂಬೈ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸುಶಾಂತ್ ಬಾಯಿಪ್ಲೊರ್ ಡಿಸ್ ಆರ್ಡರ್ ನಿಂದ ಬಳಲುತ್ತಿದ್ದರು. ಸುಶಾಂತ್ ತುಂಬಾನೇ ಒತ್ತಡದಲ್ಲಿರೋದು ನಮ್ಮ ಗಮನಕ್ಕೂ ಬಂದಿತ್ತು. ಆದ್ರೆ ಈ ಒತ್ತಡಕ್ಕೆ ಕಾರಣ ಏನು ಎಂಬುವುದು ನಮಗೆ ತಿಳಿದಿಲ್ಲ. ಸುಶಾಂತ್ ತಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ನಂಬಿಕೆ ಹೊಂದಿರಲಿಲ್ಲ. ಹಾಗಾಗಿ ವಿಷಯಗಳನ್ನು ಗುಟ್ಟಾಗಿ ಇಟ್ಟುಕೊಳ್ಳುತ್ತಿದ್ರು ಎಂದು ವೈದ್ಯರೊಬ್ಬರು ಪೊಲೀಸರ ಮುಂದೆ ಹೇಳಿದ್ದಾರೆ ಎಂದು ಪ್ರಕಟವಾಗಿದೆ.

    ವೈದ್ಯರ ಮೇಲೆ ವಿಶ್ವಾಸವಿಲ್ಲದ ಕಾರಣ ಮೂವರು ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇನ್ನೂ ಚಿಕಿತ್ಸೆಗೂ ಎರಡ್ಮೂರು ಬಾರಿ ಮಾತ್ರ ಭೇಟಿ ನೀಡಿದ್ದರು. ವೈದ್ಯರು ನೀಡಿದ ಮಾತ್ರೆಗಳನ್ನು ಸಹ ಸುಶಾಂತ್ ತೆಗೆದುಕೊಳ್ಳುತ್ತಿರಲಿಲ್ಲ. ಕೊನೆಯ ವೈದ್ಯರು ಸಹ ಸುಶಾಂತ್ ಗೆ ಬಾಯಿಪ್ಲೊರ್ ಡಿಸ್ ಆರ್ಡರ್ ಚಿಕಿತ್ಸೆ ನೀಡಿದ್ದರು. ವೈದ್ಯರ ಹೇಳಿಕೆ ಪ್ರಕಾರ, ಸುಶಾಂತ್ ಒತ್ತಡದಲ್ಲಿ ಸಿಲುಕಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಖಚಿತವಾಗಿದೆ.

  • ಗಂಡು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ತಾಯಂದಿರು

    ಗಂಡು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ತಾಯಂದಿರು

    ಬಳ್ಳಾರಿ: ನಗರದಲ್ಲಿ ಇಂದು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕೊರೊನಾ ಸೋಂಕಿತ ಗರ್ಭಿಣಿಯರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಬಳ್ಳಾರಿಯ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಗರ್ಭಿಣಿಯಾದ್ದರಿಂದ ತೀವ್ರ ನಿಗಾ ವಹಿಸಿ ನೋಡಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ ಗರ್ಭಿಣಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಮಗು ಕೂಡ ಆರೋಗ್ಯವಾಗಿದ್ದು, 2.7 ಕೆಜಿ ತೂಕ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    ಮತ್ತೊಬ್ಬ ಕಾರ್ಮಿಕ ಮಹಿಳೆ ಸಹ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಗರ್ಭಕೋಶದ ತೊಂದರೆಯಿಂದ ಸಹ ಬಳಲುತ್ತಿದ್ದರು. ಹೀಗಾಗಿ ಇಂದು ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ ನೇತೃತ್ವದ ತಂಡ ಸೋಂಕಿತ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಸೋಂಕಿತ ಮಹಿಳೆಯರಿಗೆ ಹೆರಿಗೆ ಮಾಡಿಸುವುದು ಸವಾಲಿನ ಕೆಲಸ. ಹೆಚ್ಚಿನ ಅಪಾಯ ಸಹ ಇರುತ್ತದೆ ಎಂದು ಹೇಳಿದ್ದಾರೆ.

  • ಬೆಂಗ್ಳೂರಿನಲ್ಲಿ ಕೊರೊನಾಗೆ 507 ಮಂದಿ ಬಲಿ- ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ತಿಳಿಸಿದ ವೈದ್ಯರು

    ಬೆಂಗ್ಳೂರಿನಲ್ಲಿ ಕೊರೊನಾಗೆ 507 ಮಂದಿ ಬಲಿ- ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ತಿಳಿಸಿದ ವೈದ್ಯರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮರಣ ನರ್ತನಕ್ಕೆ ಗುರುವಾರ 70 ಮಂದಿ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾಗೆ ಸಾವನ್ನಪ್ಪಿದ್ದವರ ಸಂಖ್ಯೆ 507ಕ್ಕೆ ಏರಿಕೆ ಆಗಿದೆ.

    ಬೆಂಗಳೂರಿನಲ್ಲಿ ಕೊರೊನಾಗೆ ದಿನೇ ದಿನೇ ಅಧಿಕ ಜನರು ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಿಕೊಳ್ಳಲು ವಿಳಂಬವಾಗುತ್ತಿರುವುದರಿಂದ ಕೆಲವರು ಸಾಯುತ್ತಿದ್ದಾರೆ. ಇನ್ನೂ ಕೆಲವರು ಈಗಾಗಲೇ ಕಿಡ್ನಿ ಸಮಸ್ಯೆ, ಹೈಪರ್ ಟೆನ್ಶನ್, ಶುಗರ್, ಕ್ಯಾನ್ಸರ್‌ನಂತಹ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಅಂತವಹರಿಗೆ ಕೊರೊನಾ ತಗುಲಿದ್ದು, ಬೇರೆ ಕಾಯಿಲೆ ಉಲ್ಬಣಗೊಂಡು ಮೃತಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಕೊರೊನಾದ ಅತಿಯಾದ ಭಯಕ್ಕೆ ಸೋಂಕಿತರು ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಹೀಗಾಗಿ ವೈದ್ಯರು, ತಜ್ಞ ವೈದ್ಯರು ಕೊರೊನಾದಿಂದ ರಕ್ಷಿಸಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಬೆಂಗಳೂರನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವನ್ನು ಕೂಡ ತಿಳಿಸಿದ್ದಾರೆ.

    ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡೋ ವೈದ್ಯರು ಹೇಳೋದೇನು?
    1. ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗೋದು ವಿಳಂಬವಾಗುತ್ತಿದೆ. ಅಷ್ಟರಲ್ಲಿ ಅವರ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿರುತ್ತೆ.
    2. ಈಗ ಸಾವನ್ನಪ್ಪಿದ ಶೇ.70 ರಷ್ಟು ಮಂದಿಗೆ ಬೇರೆ ಬೇರೆ ದೀರ್ಘಕಾಲಿಕ ಅನಾರೋಗ್ಯ ಇದೆ. ಕಿಡ್ನಿ ಸಮಸ್ಯೆ, ಹೈಪರ್ ಟೆನ್ಶನ್, ಶುಗರ್ ಕ್ಯಾನ್ಸರ್ ನಂತಹ ಕಾಯಿಲೆ ಇದ್ದವು.
    3. ಸೋಂಕಿತರಿಗೆ ಬೇರೆ ಕಾಯಿಲೆ ಇದ್ದಾಗ ಅದು ಉಲ್ಬಣಗೊಂಡು ಸಾವನ್ನಪ್ಪುತ್ತಿದ್ದಾರೆ.
    4. ಅತಿಯಾದ ಭಯಕ್ಕೆ ಹೃದಯಾಘಾತವಾಗುತ್ತಿದೆ.

    ತಜ್ಞರ ರಿಪೋರ್ಟ್ ಏನು?
    1. ಪರೀಕ್ಷಾ ವರದಿ ವಿಳಂಬ- ಪರೀಕ್ಷಾ ವರದಿ ಕೈ ಸೇರುವಷ್ಟರಲ್ಲಿ ಸೋಂಕಿತನ ಆರೋಗ್ಯ ಸಂಪೂರ್ಣ ಹದಗೆಟ್ಟಿರುತ್ತೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾವು.
    2. ಬೆಡ್ ಸಿಗುತ್ತಿಲ್ಲ- ಸಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆಯಾಗುತ್ತಿದೆ. ಹೈಫ್ಲೋ ಆಕ್ಸಿಜನ್ ಬೆಡ್ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ಕಡೆ ಖಾಲಿ ಬಿದ್ದಿದರೂ ರೋಗಿಗಳಿಗೆ ಸಂವಹನವಾಗುತ್ತಿಲ್ಲ.
    3 ಐಸಿಯು ವೆಂಟಿಲೇಟರ್ ತೀರಾ ಕೊರತೆ ಇದೆ. ಇದರಿಂದ ಸಾವನ್ನಪ್ಪುತ್ತಿದ್ದಾರೆ.
    4. ಶುಚಿತ್ವದ ಕೊರತೆ- ಗಾಳಿ ಬೆಳಕು ಸ್ವಚ್ಛವಾಗಿ ಬರುತ್ತಿಲ್ಲ. ಉಸಿರಾಟದ ಸಮಸ್ಯೆ ಉಲ್ಬಣಗೊಂಡು ಸಾವು.
    5. ಉಸಿರಾಟದ ತೊಂದರೆ ಇರುವ ರೋಗಿಗಳ ಸರ್ವೆಯನ್ನು ತಕ್ಷಣ ಮಾಡಬೇಕಿತ್ತು. ಅವರಿಗೆ ಟೆಸ್ಟ್ ಮಾಡಬೇಕಿತ್ತು. ಹೈರಿಸ್ಕ್ ಇರೋರಿಗೆ ಮೊದಲು ಟೆಸ್ಟ್ ಮಾಡಿಸಿದರೆ ಅನೇಕರ ಪ್ರಾಣ ಉಳಿಯಬಹುದಾಗಿತ್ತು. ಏಳು ಲಕ್ಷ ಜನ ಬೆಂಗಳೂರಿನಲ್ಲಿ ಹೈರಿಸ್ಕ್ ನಲ್ಲಿರುವವರು ಇದ್ದಾರೆ.
    6. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ನಿರಾಕರಣೆ- ಸೂಕ್ತ ಸಮಯಕ್ಕೆ ಬಾರದ ಅಂಬುಲೆನ್ಸ್ ನಿಂದ ಸಾವು ಹೆಚ್ಚಳ.

    ಬೆಂಗಳೂರು ಜನ ಮಾಡಬೇಕಾಗಿರೋದು ಏನು?
    1. ರೋಗ ನಿರೋಧಕ ಶಕ್ತಿ ಇರುವವರಲ್ಲಿ ರೋಗ ಲಕ್ಷಣ ಕಾಣಿಸುವುದು ಕಡಿಮೆ. ಆದರೆ ಅನಾರೋಗ್ಯ ಹೊಂದಿರುವವರೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸೋಂಕಿನ ಅಪಾಯದಲ್ಲಿರುವವರನ್ನು ಅಂದರೆ ಕಿಡ್ನಿ ಸಮಸ್ಯೆ, ಶುಗರ್, ಹೃದ್ರೋಗ ಸಮಸ್ಯೆ, ಹೈಪರ್ ಟೆನ್ಶನ್ ಸಮಸ್ಯೆ ಇರೋರನ್ನು ಹೋಂ ಐಸೋಲೇಷನ್ ಮಾಡಿ ಸೋಂಕು ತಗಲದಂತೆ ಮಾಡಬೇಕು. ಈ ಕಾಯಿಲೆ ಇದ್ದವರು ಈ ಸಮಯದಲ್ಲಿ ಸಾಧ್ಯವಾದಷ್ಡು ಹೊರಗಡೆ ಹೋಗದೆ ಮನೆಯಲ್ಲಿಯೇ ಕ್ವಾರಂಟೈನ್ ಆದರೆ ಉತ್ತಮ.
    2. ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ. ಹೊರಗಡೆ ಅಡ್ಡಾಡದಂತೆ ಎಚ್ಚರ ವಹಿಸಿ.
    3. ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು ಸಾಧ್ಯವಾದಷ್ಟು ಮನೆಯೊಳಗೆ ಇರಲು ಪ್ರಯತ್ನಿಸಿ.

  • ಭಾರತದ ಮೂಲದ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದ ಇಂಗ್ಲೆಂಡ್ ಕ್ರಿಕೆಟ್

    ಭಾರತದ ಮೂಲದ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದ ಇಂಗ್ಲೆಂಡ್ ಕ್ರಿಕೆಟ್

    ಸೌತಾಂಪ್ಟನ್: ಬರೋಬ್ಬರು 117 ದಿನಗಳ ಬಳಿಕ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದ್ದು, ಇಂಗ್ಲೆಂಡ್ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ಮಳೆಯ ಅಡೆತಡೆಯ ನಡುವೆಯೂ ಸಾಗುತ್ತಿದೆ. ಇತ್ತ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಮೂಲದ ನಾಲ್ವರು ವೈದ್ಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದೆ.

    ಕೋವಿಡ್-19 ಸಂದಿಗ್ಧ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದ ವೈದ್ಯರ ಹೆಸರಗಳನ್ನು ತಮ್ಮ ಜೆರ್ಸಿ ಮೇಲೆ ಮುದ್ರಿಸಿ ಕಣಕ್ಕೆ ಇಳಿಯುವ ಮೂಲಕ ವಿಶೇಷ ಗೌರವ ಅರ್ಪಿಸಿದೆ. ‘ರೈಸ್ ದಿ ಬ್ಯಾಟ್’ ಅಭಿಯಾನಕ್ಕೆ ಡಾ. ವಿಕಾಸ್ ಕುಮಾರ್ ಅವರು ನಾಮನಿರ್ದೇಶನ ಮಾಡಲಾಗಿದೆ. ವಿಕಾಸ್ ಕುಮಾರ್ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‍ಎಚ್‍ಎಸ್) ಟಸ್ಟ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು.

    35 ವರ್ಷದ ವಿಕಾಸ್ ಅವರ ಹೆಸರು ಮುದ್ರಿಸಿರುವ ಜೆರ್ಸಿಯನ್ನು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಧರಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಕಾಸ್ ಅವರು, ಸ್ಟೋಕ್ಸ್ ಹಾಗೂ ಇತರೇ ಆಟಗಾರರು ವೈದ್ಯರ ಸಂದೇಶದ ಜೆರ್ಸಿ ಧರಿಸಿದ್ದನ್ನು ಕಂಡಾಗ ಸಂತಸವಾಗಿತ್ತು. ಈ ಸಂದರ್ಭ ನಮಗೆಲ್ಲರಿಗೂ ತುಂಬಾ ಕಷ್ಟಕರವಾಗಿದೆ. ಎನ್‍ಎಚ್‍ಎಸ್ ಸಿಬ್ಬಂದಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ಗೌರವ ಭಾರತದ ವೈದ್ಯ ಸ್ನೇಹಿತರು ಸೇರಿದಂತೆ ಎಲ್ಲ ಸಿಬ್ಬಂದಿಗೂ ಸಲ್ಲುತ್ತದೆ ಎಂದು ಹೇಳಿದ್ದಾರೆ.

    ವಿಕಾಸ್ ಕುಮಾರ್ ದೆಹಲಿಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಮೌಲಾನಾ ಅಜಾದ್ ಮೆಡಿಕಲ್ ಕಾಲೇಜಿನಲ್ಲಿ ಅರಿವಳಿಕೆ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರೈಸಿದ್ದರು. 2019ರಲ್ಲಿ ಇಂಗ್ಲೆಂಡ್‍ಗೆ ಕುಟುಂಬದೊಂದಿಗೆ ತೆರಳಿದ್ದ ವಿಕಾಶ್ ಕುಮಾರ್ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

    ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಡಿಯೋ ಸಂದೇಶದ ಮೂಲಕ ವೈದ್ಯ ವಿಕಾಸ್ ಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ವಿಕಾಸ್ ಕುಮಾರ್ ಅವರೊಂದಿಗೆ ಭಾರತದ ಮೂಲದ ಡಾ.ಜಮಾಸ್ಲ್ ಕೈಕುಸ್ರೂ ದಸ್ತೂರ್, ಡಾ. ಹರಿಕೃಷ್ಣ ಶಾ, ಕ್ರಿಶನ್ ಅಘಾದಾ ಅವರ ಹೆಸರುಗಳನ್ನು ಆಟಗಾರರ ಜೆರ್ಸಿ ಮೇಲೆ ಮುದ್ರಿಸಿ ಗೌರವ ಸೂಚಿಸಲಾಗಿತ್ತು.

  • ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    – ಅವ್ಯವಸ್ಥೆಯ ಆಗರವಾಗಿದೆ ವಿಕ್ಟೋರಿಯಾ ಆಸ್ಪತ್ರೆ
    – ಮಾತ್ರೆಗಳನ್ನು ಕೊಡಿ ಎಂದು ನರ್ಸ್‍ಗೆ ಅವಾಜ್ ಆಕ್ತಿದ್ದಾರೆ ಸೋಂಕಿತರು

    ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದನ್ನು ರಾಜ್ಯದ ಆಸ್ಪತ್ರೆಗಳ ಸ್ಥಿತಿಗತಿಯೇ ಹೇಳುತ್ತವೆ. ವೈದ್ಯರು, ನರ್ಸ್, ಬೆಡ್ ಕೊರತೆ ಮಧ್ಯೆ ಈಗ ಮೆಡಿಸನ್ ಕೊರತೆ ಎದುರಾಗಿದ್ದು, ಇದರಿಂದಾಗಿ ಸೋಂಕಿತರು ತೀವ್ರ ಆತಂಕಕ್ಕೀಡಾಗಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರೆಗಳ ಕೊರತೆ ಉಂಟಾಗಿದ್ದು, ಇನ್ನೂ ಅಚ್ಚರಿಯ ಸಂಗತಿ ಎಂದರೆ ಎರಡು ದಿನದಿಂದ ಹೌಸ್ ಕೀಪಿಂಗ್‍ನವರು ಕೆಲಸಕ್ಕೆ ಬಾರದ್ದಕ್ಕೆ ಆಸ್ಪತ್ರೆ ಗಬ್ಬು ನಾರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು, ನರ್ಸ್‍ಗಳ ಕೊರತೆ ಮಧ್ಯೆ ಹೇಗೋ ಮಾತ್ರೆಗಳನ್ನು ನುಂಗಿ ಗುಣಮುಖರಾಗುತ್ತಿದ್ದ ಕೊರೊನಾ ಸೋಂಕಿತರಿಗೆ ಇದೀಗ ಮಾತ್ರೆಗಳ ಸಮಸ್ಯೆಯೂ ಎದುರಾಗಿದ್ದು, ಗುಣಮುಖರಾಗುವುದು ಹೇಗೆ ಎಂಬ ಭಯ ಎದುರಾಗಿದೆ.

    ಕೊರೊನಾಗೆ ವ್ಯಾಕ್ಸಿನ್ ಇಲ್ಲದಿದ್ದರೂ, ಗುಣ ಲಕ್ಷಣಗಳನ್ನು ಆಧರಿಸಿ ಮೆಡಿಸಿನ್ ನೀಡಲಾಗುತ್ತಿತ್ತು. ಆದರೆ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಸನ್ ಕೊರತೆ ಎದುರಾಗಿದೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ನರ್ಸ್‍ಗಳು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಮೆಡಿಸಿನ್ ತುಂಬಾ ಕಡಿಮೆ ಇದೆ. ದಯವಿಟ್ಟು ಪೂರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ. ಆದರೂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

    ಈ ಮಧ್ಯೆಯೇ ಎರಡು ಮೂರು ದಿನದಿಂದ ಆಸ್ಪತ್ರೆ ಸ್ವಚ್ಛಗೊಳಿಸಲು ಹೌಸ್ ಕೀಪಿಂಗ್ ನವರನ್ನೂ ಕಳುಹಿಸಿಲ್ಲ. ಇದರಿಂದಾಗಿ ವಾರ್ಡ್‍ಗಳು ಗಬ್ಬು ವಾಸನೆ ಹೊಡೆಯುತ್ತಿವೆ. ಮಾತ್ರೆಗಳು ಇಲ್ಲದ್ದಕ್ಕೆ ರೋಗಿಗಳು ಸುತ್ತುವರೆದು ನಮಗೆ ಬೆದರಿಕೆ ಹಾಕುತ್ತಿದ್ದಾರೆ, ನಾವೇನು ಮಾಡುವುದು. ನಮ್ಮ ಬಳಿ ಉತ್ತರವಿಲ್ಲ ದಯವಿಟ್ಟು ಮೆಡಿಸಿನ್ ಕಳುಹಿಸಿ ಎಂದು ನರ್ಸ್‍ಗಳು ಗೋಳಿಡುತ್ತಿದ್ದಾರೆ.

    ಆಸ್ಪತ್ರೆಗಳಲ್ಲಿ ಇಷ್ಟೆಲ್ಲ ಅವ್ಯವಸ್ಥೆ ತಾಂಡವಾಡುತ್ತಿದ್ದರೂ ಸರ್ಕಾರ ಮಾತ್ರ ಎಲ್ಲವೂ ಸರಿಯಿದೆ ಎಂದು ತೋರಿಸಿಕೊಳ್ಳುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆಯೂ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದ್ದು, ಈ ಕುರಿತು ಸಹ ಕ್ರಮ ಕೈಗೊಂಡಿಲ್ಲ.

  • ಒಂದೂರಿನ ಶವ ಮತ್ತೊಂದು ಊರಲ್ಲಿ – ಮೃತದೇಹ ಕಂಡು ಗ್ರಾಮಸ್ಥರು ಗಾಬರಿ

    ಒಂದೂರಿನ ಶವ ಮತ್ತೊಂದು ಊರಲ್ಲಿ – ಮೃತದೇಹ ಕಂಡು ಗ್ರಾಮಸ್ಥರು ಗಾಬರಿ

    – ವೈದ್ಯಾಧಿಕಾರಿಗಳು ಎಡವಟ್ಟು

    ಮಂಡ್ಯ: ಮಹಾಮಾರಿ ಕೊರೊನಾದಿಂದ ಜನರು ಈಗಾಗಲೇ ಭಯಭೀತರಾಗಿದ್ದಾರೆ. ಇದೀಗ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿದ್ದಾರೆ.

    ನಾಗರಾಜು (50) ಸಾವನ್ನಪ್ಪಿರುವ ವ್ಯಕ್ತಿ. ನಾಗರಾಜು ಮೂಲತಃ ಟಿ.ನರಸಿಪುರ ತಾಲೂಕಿನ ಮುಸುಕನಕೊಪ್ಪಲು ಗ್ರಾಮದವರು. ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹಚ್ಚಾಗುತ್ತಿದೆ. ಇದರಿಂದ ಗಾಬರಿಗೊಂಡು ನಾಗರಾಜು ಮಂಗಳವಾರ ಬೆಂಗಳೂರಿನಿಂದ ಹೊರಟ್ಟಿದ್ದಾರೆ. ಆದರೆ ತಮ್ಮ ಗ್ರಾಮಕ್ಕೆ ಹೋಗುವಷ್ಟಲ್ಲಿ ಕತ್ತಲಾಗುತ್ತದೆ ಎಂದು ತಮ್ಮ ಸಂಬಂಧಿಕರ ಮನೆಯಿದ್ದ ಹೊನಗನಹಳ್ಳಿಗೆ ಬಂದಿದ್ದರು.

    ಮಂಗಳವಾರ ರಾತ್ರಿ ಉಸಿರಾಟದ ಸಮಸ್ಯೆಯಿಂದ ಕೊಳ್ಳೆಗಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಂತರ ಸಂಬಂಧಿಕರು ನಾಗರಾಜು ಶವವನ್ನು ಮುಸುಕನಕೊಪ್ಪಲು ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಇವರಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. ಇಲ್ಲವಾದರೆ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಕೊನೆಗೆ ಸಂಬಂಧಿಕರು ಹೊನಗನಹಳ್ಳಿ ಗ್ರಾಮಕ್ಕೆ ಶವ ತೆಗೆದುಕೊಂಡು ಬಂದು ಮನೆಯೊಂದರ ಮುಂಭಾಗದಲ್ಲಿ ಇಟ್ಟಿದ್ದಾರೆ. ಈ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಅಲ್ಲದೇ ಇವರಿಗೆ ಕೊರೊನಾ ಪರೀಕ್ಷೆ ಮಾಡಿಸದೆ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಂತರ ಸಂಬಂಧಿಕರು ವೈದ್ಯರಿಗೆ ಫೋನ್ ಮಾಡಿ ಹೇಳಿದ್ದಾರೆ. ಆದರೆ ವೈದ್ಯರು ತಡವಾಗಿ ಬಂದಿದ್ದಲ್ಲದೇ, ನಾವು ಶವಕ್ಕೆ ಕೋವಿಡ್ ಪರೀಕ್ಷೆ ಮಾಡುವುದಿಲ್ಲ. ಬೇಕಿದ್ದರೆ ಅವರ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿ ಗ್ರಾಮದಿಂದ ಹೋಗಿದ್ದಾರೆ.

    ವೈದ್ಯಾಧಿಕಾರಿಗಳು ಎಡವಟ್ಟು:
    ಕೊನೆಗೆ ಮುಸುಕನಕೊಪ್ಪಲು ಗ್ರಾಮಸ್ಥರು ಊರಿನ ಹೊರಗಡೆ ಶವ ಸಂಸ್ಕಾರ ಮಾಡಲು ಒಪ್ಪಿಗೆ ನೀಡಿದ್ದಾರೆ. ಜಿಲ್ಲೆಯ ಹೊನಗನಹಳ್ಳಿಯಿಂದ ಮುಸುಕನಕೊಪ್ಪಲಿಗೆ ಶವ ರವಾನೆ ಮಾಡುವಾಗಲೂ ವೈದ್ಯಾಧಿಕಾರಿಗಳ ಮತ್ತೊಂದು ಎಡವಟ್ಟು ಮಾಡಿದ್ದಾರೆ.

    ವೈದ್ಯಾಧಿಕಾರಿಗಳು ಶವ ರವಾನೆಗೆ ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಯನ್ನು ಕಳಿಸದೆ ಎಡವಟ್ಟು ಮಾಡಿದ್ದಾರೆ. ಕುಟುಂಬಸ್ಥರಿಗೆ ಎರಡು ಪಿಪಿಇ ಕಿಟ್ ನೀಡಿ ನೀವೇ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಕೊನೆಗೆ ಸಂಬಂಧಿಕರು ಪಿಪಿಇ ಕಿಟ್ ಹಾಕಿಕೊಂಡು ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ಹೋಗಿದ್ದಾರೆ.

  • ಚಾಮರಾಜನಗರದ ಮೂವರು ವೈದ್ಯಾಧಿಕಾರಿಗಳಿಗೆ ಡಿಸಿ ನೋಟಿಸ್

    ಚಾಮರಾಜನಗರದ ಮೂವರು ವೈದ್ಯಾಧಿಕಾರಿಗಳಿಗೆ ಡಿಸಿ ನೋಟಿಸ್

    ಚಾಮರಾಜನಗರ: ಪ್ರಾಥಮಿಕ ಆರೋಗ್ಯ ಕೇಂದ್ರದ ಮೂವರು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.

    ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಸ್ವಾಮಿ, ಕಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೆಂಕಟಸ್ವಾಮಿ ಹಾಗೂ ಸಂತೇಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೇವರಾಜು ಅವರಿಗೆ ಡಿಸಿ ಈ ನೋಟಿಸ್ ನೀಡಿದ್ದಾರೆ.

    ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಈಗಾಗಲೇ ಹಲವು ಬಾರಿ ನಿರ್ದೇಶನ ಹಾಗೂ ತರಬೇತಿ ನೀಡಲಾಗಿದೆ. ಪ್ರತಿದಿನ ತಾಲೂಕು ಹಂತದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಗುರಿ ನಿಗದಿಪಡಿಸಲಾಗಿದೆ. ಆದರೆ ಜುಲೈ 2ರಂದು ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ವ್ಯಕ್ತಿಯ ಗಂಟಲು ದ್ರವ ಮಾದರಿ ಸಂಗ್ರಹಣೆ ಮಾಡದೇ ಶೂನ್ಯ ಪ್ರಗತಿ ಸಾಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

    ಅತ್ಯಂತ ಮಹತ್ತರವಾದ ಕೋವಿಡ್-19ರ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯತನ ತೋರಿರುವುದರಿಂದ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನ್ವಯ ಏಕೆ ಶಿಸ್ತಿನ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ನೋಟಿಸ್ ತಲುಪಿದ 24 ಗಂಟೆಯಲ್ಲಿ ವಿವರಣೆ ಸಲ್ಲಿಸಬೇಕು. ತಪ್ಪಿದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ನೋಟಿಸಿನಲ್ಲಿ ತಿಳಿಸಲಾಗಿದೆ.

  • ಜುಲೈ 8ರಿಂದ ಕರ್ತವ್ಯಕ್ಕೆ ಹಾಜರಾಗಲ್ಲ- ಸರ್ಕಾರಕ್ಕೆ ಗುತ್ತಿಗೆ ಆಧಾರದ ವೈದ್ಯರ ಎಚ್ಚರಿಕೆ

    ಜುಲೈ 8ರಿಂದ ಕರ್ತವ್ಯಕ್ಕೆ ಹಾಜರಾಗಲ್ಲ- ಸರ್ಕಾರಕ್ಕೆ ಗುತ್ತಿಗೆ ಆಧಾರದ ವೈದ್ಯರ ಎಚ್ಚರಿಕೆ

    ಹಾಸನ: ಕೊರೊನಾ ಸಂಕಷ್ಟದ ನಡುವೆ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ವೈದ್ಯರು ಜುಲೈ 8ರಿಂದ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.

    ವೈದ್ಯರ ದಿನದಂದೇ ಹಾಸನದ ಜಿಲ್ಲಾಧಿಕಾರಿ ಕಚೇರಿಕೆ ಆಗಮಿಸಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಗುತ್ತಿಗೆ ಆಧಾರಿತ ವೈದ್ಯರು, ನಾವು ರಾಜ್ಯಾದ್ಯಂತ 507 ಜನ ವೈದ್ಯರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಕೂಡ ಇಲ್ಲದೇ ನಿರಂತರವಾಗಿ ನಾವು ಪ್ರಾಣದ ಹಂಗು ತೊರೆದು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡಿದ್ದೇವೆ ಎಂದರು.

    ನಮ್ಮ ಕೆಲಸ ಖಾಯಂಗೊಳಿಸಿ ಎಂದು ನಾವು ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾರೂ ಕೂಡ ನಮ್ಮ ಮನವಿಗೆ ಸ್ಪಂಧಿಸಿಲ್ಲ. ಹೀಗಾಗಿ ಜುಲೈ 8ರಿಂದ ನಾವು ಕೆಲಸಕ್ಕೆ ಹಾಜರಾಗಲ್ಲ ಎಂದು ಸರ್ಕಾರಕ್ಕೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

    ಹಾಸನ ಜಿಲ್ಲಾಧಿಕಾರಿ ಗಿರೀಶ್ ಅವರನ್ನು ಭೇಟಿ ಮಾಡಿರುವ ಗುತ್ತಿಗೆ ಆಧಾರಿತ ವೈದ್ಯರು ತಮ್ಮ ಮನವಿ ಪತ್ರ ಸಲ್ಲಿಸಿದ್ದಾರೆ. ಇದರಿಂದ ಕೊರೊನಾ ಸಂಕಷ್ಟದ ನಡುವೆ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.