ಬೆಳಗಾವಿ: ಬಿಮ್ಸ್ ಆಸ್ಪತ್ರೆಯ ಕಿರಿಯ ವೈದ್ಯನ ಮೇಲೆ ಮೃತ ಕೊರೊನಾ ಸೋಂಕಿತೆಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಉಸಿರಾಟ ತೊಂದರೆಯಿಂದ ಚಿಕ್ಕೋಡಿ ಮೂಲದ 36 ವರ್ಷದ ಮಹಿಳೆ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟಿದ್ದರು. ಈ ವೇಳೆ 150ಕ್ಕೂ ಹೆಚ್ಚು ಸಂಬಂಧಿಕರು ಕಿರಿಯ ವೈದ್ಯರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಖಂಡಿಸಿ ತಡರಾತ್ರಿ ಆಸ್ಪತ್ರೆಯಿಂದ ಹೊರಬಂದ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ದಂಡಗಿ ಸಿಬ್ಬಂದಿಯ ಮನವೊಲಿಸುವ ಕಾರ್ಯ ಮಾಡಿದರು. ಅಲ್ಲದೇ ಹಲ್ಲೆ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಭರವಸೆ ನೀಡಿದರು.
ಆಸ್ಪತ್ರೆಯ ಬೇರೆ ರೋಗಿಗಳಿಗೆ ತೊಂದರೆಯಾಗಬಾರದೆಂದು ವೈದ್ಯಕೀಯ ಸಿಬ್ಬಂದಿ ತಮ್ಮ ಪ್ರತಿಭಟನೆ ವಾಪಸ್ ಪಡೆದರು. ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
– ಮನವಿ ಮಾಡಿದ ಎರಡೇ ದಿನದಲ್ಲಿ ಸ್ಪಂದನೆ
– ಮತ್ತೊಂದು ಯಶಸ್ವಿ ಶಸ್ತ್ರಚಿಕಿತ್ಸೆ
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಕೊರೊನಾ ಹಿನ್ನೆಲೆ ಲಾಕ್‍ಡೌನ್ ಆದಾಗಿನಿಂದಲೂ ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ತಮ್ಮ ಬಳಿ ಸಹಾಯ ಕೇಳುವ ಪ್ರತಿಯೊಬ್ಬರಿಗೂ ಸಹಾಯದ ಹಸ್ತ ಚಾಚುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಮತ್ತೊಂದು ಮಾನವೀಯ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ತಾಯಿಯ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ಸೋನು ಸೂದ್
ಅರ್ಜುನ್ ಚೌಹಣ್ ಎಂಬವರ ಶಸ್ತ್ರ ಚಿಕಿತ್ಸೆಗೆ ನಟ ಸೋನು ಸೂದ್ ಸಹಾಯ ಮಾಡಿದ್ದಾರೆ. ಅರ್ಜುನ್ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಪರದಾಡುತ್ತಿದ್ದರು. ಯಾರೊಬ್ಬರು ಸಹಾಯಕ್ಕೆ ಬರದಿದ್ದಾಗ ಸೋನು ಸೂದ್ ಅವರ ಬಳಿ ಟ್ವಿಟ್ಟರ್ ಮೂಲಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಸೋನು ಸೋದ್ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ
Namaste Sonu Sir, I am requesting you for some medical help. I require a right knee surgery as soon as possible but at present I cannot afford it. Please see if you can help me. Also see the attached reports if needed.@SonuSood @GovindAgarwal_ pic.twitter.com/8VBpnWVRK6
ಅರ್ಜುನ್ ಚೌಹಣ್ ಸೆಪ್ಟೆಂಬರ್ 14 ರಂದು ಸೋನು ಸೂದ್‍ಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. “ನಮಸ್ತೆ ಸೂನು ಸರ್, ನಾನು ನಿಮಗೆ ಕೆಲವು ವೈದ್ಯಕೀಯ ಸಹಾಯವನ್ನು ಕೋರುತ್ತೇನೆ. ನನಗೆ ಆದಷ್ಟು ಬೇಗ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯವಿದೆ. ಆದರೆ ಪ್ರಸ್ತುತ ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸಲಾರೆ. ಆದ್ದರಿಂದ ನೀವು ನನಗೆ ಸಹಾಯ ಮಾಡಬಹುದೇ ಎಂದು ದಯವಿಟ್ಟು ನೋಡಿ. ಅಗತ್ಯವಿದ್ದರೆ ಲಗತ್ತಿಸಲಾದ ವರದಿಗಳನ್ನು ಸಹ ನೋಡಿ” ಎಂದು ವೈದ್ಯರ ವರದಿ ಲಗತ್ತಿಸಿ ತಿಳಿಸಿದ್ದರು. ಇದನ್ನೂ ಓದಿ: 30 ವರ್ಷ, 3 ಕಿ.ಮೀ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತನಿಗೆ ಆನಂದ್ ಮಹೀಂದ್ರಾ ಗಿಫ್ಟ್
ಎರಡು ದಿನದ ಬಳಿಕ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್ “ನಿಮ್ಮ ವರದಿಯನ್ನು ವೈದ್ಯರೊಂದಿಗೆ ಹಂಚಿಕೊಂಡಿದ್ದೇನೆ. ನಿಮ್ಮ ಬ್ಯಾಗ್‍ಗಳನ್ನು ಪ್ಯಾಕ್ ಮಾಡಿಕೊಳ್ಳಿ. ಸೋಮವಾರ ನಿಮ್ಮ ಶಸ್ತ್ರಚಿಕಿತ್ಸೆ” ಎಂದು ಭರವಸೆ ನೀಡಿದ್ದರು. ಅದರಂತೆಯೇ ಸೋನು ಸೂದ್ ಅವರ ಸಹಾಯದ ಪರಿಣಾಮ ಅರ್ಜುನ್ ಚೌಹಣ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಈ ಕುರಿತು ಸ್ವತಃ ಸೋನು ಸೂದ್ ಮಾಹಿತಿ ನೀಡಿದ್ದಾರೆ. ಮತ್ತೊಂದು ಯಶಸ್ವಿ ಶಸ್ತ್ರಚಿಕಿತ್ಸೆ, ಇದು ಭಾನುವಾರದ ವಿಶೇಷ. ನಿಮ್ಮಂತ ಸೂಪರ್ ಹೀರೋ ನಮಗೆ ಬೇಕು. ಎಂದು ಕರ್ನೂಲ್‍ನ ವಿರ್ಕ್ ಆಸ್ಪತ್ರೆಯ ವೈದ್ಯ ಅಮಾನ್ ಪ್ರೀತ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.
ಅರ್ಜುನ್ ಚೌಹಣ್ ಸಹ ಟ್ವೀಟ್ ಮಾಡುವ ಮೂಲಕ ಸೋನು ಸೂದ್ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸೋನು ಸೂದ್ ಸರ್ ಕಳೆದ 4 ತಿಂಗಳುಗಳಿಂದ ನನಗೆ ಎಲ್ಲಾ ಬಾಗಿಲುಗಳು ಮುಚ್ಚಿತ್ತು. ಯಾರಿಂದಲೂ ಒಂದೇ ಒಂದು ಪ್ರತಿಕ್ರಿಯೆ ಸಿಗಲಿಲ್ಲ. ನಂತರ ನಾನು ನಿಮ್ಮ ಸಹಾಯದ ಬಗ್ಗೆ ಕೇಳಿದ್ದೆ. ಆದ್ದರಿಂದ ನಿಮ್ಮನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದೆ. ನೀವು ವೈದ್ಯರೊಂದಿಗೆ ಮಾತನಾಡಿ ಕರ್ನೂಲ್‍ನಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದೀರಿ. ಇದನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ. ನೀವು ನಿಜಕ್ಕೂ ದೇವರ ತದ್ರೂಪಿ” ಎಂದು ಬರೆದುಕೊಂಡಿದ್ದಾರೆ.
– ಬೆಚ್ಚಿ ಬೀಳಿಸುವಂತ ರೈಸ್ ಕಹಾನಿ ಬಿಚ್ಚಿಟ್ಟ ವೈದ್ಯರ ಸರ್ವೆ
ಬೆಂಗಳೂರು: ಓವರ್ ಪಾಲಿಷ್ ಮಾಡಿದ ಅಕ್ಕಿ ಬಳಸುವುದರಿಂದ ಆಗ ತಾನೇ ಹುಟ್ಟಿದ ನವಜಾತ ಶಿಶುಗಳಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಆಗ ತಾನೇ ಹುಟ್ಟುವ ನವಜಾತ ಶಿಶುಗಳಿಗೆ ಹೃದಯಘಾತ, ಉಸಿರಾಟದ ತೊಂದರೆ, ರಕ್ತದೊತ್ತಡ, ಧ್ವನಿಯ ಸಮಸ್ಯೆ ಹೆಚ್ಚಳವಾಗಿದ್ದು, ಇದು ವೈದ್ಯರ ಗಮನಕ್ಕೆ ಬಂದಿದೆ. ಇದರಿಂದ ಭಯಗೊಂಡ ವೈದ್ಯರು ಇದಕ್ಕೆ ಕಾರಣ ಹುಡುಕಲು ಸಮೀಕ್ಷೆ ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಭಯಾನಕ ವಿಚಾರವೊಂದು ಬೆಳಕಿಗೆ ಬಂದಿದ್ದು, ಪಾಲಿಷ್ ಮಾಡಿದ ಅಕ್ಕಿಯನ್ನು ಹೆಚ್ಚು ತಿನ್ನುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಗೊತ್ತಾಗಿದೆ.
ರೈಸ್ ತಿನ್ನಲು ಚೆನ್ನಾಗಿ ಇರಬೇಕು. ಬೆಳ್ಳಗೆ ಕಾಣಬೇಕು ಎಂದು ಇತ್ತೀಚೆಗೆ ಪಾಲಿಷ್ ಮಾಡಿದ ಅಕ್ಕಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಇದರಿಂದ ಹುಟ್ಟುವ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ವೈದ್ಯರ ಸಮೀಕ್ಷೆ ಬಹಿರಂಗಪಡಿಸಿದೆ. ಓವರ್ ಪಾಲಿಷ್ ಮಾಡಿದ ಅಕ್ಕಿಯನ್ನು ತಿನ್ನೋದ್ರಿಂದ ವಿಟಮಿನ್ ಬಿ-1 ಕೊರತೆಯಾಗುತ್ತದೆ. ಈ ಜೀವಸತ್ವ ಕೊರತೆಯಿಂದ ಹುಟ್ಟುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ಅಕ್ಕಿಯ ಮೇಲ್ಪದರದಲ್ಲಿ ಈ ವಿಟಮಿನ್ ಬಿ-1 ಇರುತ್ತದೆ. ಆದರೆ ನಾವು ಅಕ್ಕಿಯನ್ನು ಪಾಲಿಷ್ ಮಾಡಿಸಿದಾಗ ಈ ವಿಟಮಿನ್ ಹೊರಟು ಹೋಗುತ್ತೆ. ಈ ಅಕ್ಕಿಯನ್ನು ಸೇವಿಸುವ ತಾಯಿಯರು ಮಕ್ಕಳಿಗೆ ಎದೆ ಹಾಲು ನೀಡಿದಾಗ ಇದರಲ್ಲಿ ವಿಟಮಿನ್ ಬಿ-1 ಕೊರೆತೆ ಬರುತ್ತದೆ. ಇದರಿಂದ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ. ಹೀಗಾಗಿ ಗರ್ಭಿಣಿಯರು ಪಾಲಿಷ್ ಮಾಡಿದ ಅಕ್ಕಿಯನ್ನು ಸೇವನೆ ಮಾಡದಂತೆ ಜಯದೇವ ಆಸ್ಪತ್ರೆಯಿಂದ ಗರ್ಭಿಣಿಯರಿಗೆ ಸಂದೇಶ ನೀಡಲಾಗಿದೆ.
ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ವಿಚಾರ ಬಯಲಾಗಿದೆ. ಸುಮಾರು 250 ನವಜಾತ ಶಿಶುಗಳನ್ನು ಈ ಸರ್ವೇಗೆ ಒಳಪಡಿಸಲಾಗಿದೆ ಎಂದು ಜಯದೇವ ಆಸ್ಪತ್ರೆ ವೈದ್ಯರ ತಂಡ ತಿಳಿಸಿದೆ. ಪಾಲಿಷ್ ಅಕ್ಕಿಯ ಬದಲು ಕುಚ್ಚಲಕ್ಕಿ, ರೆಡ್ ರೈಸ್ ಅಥವಾ ಹೆಚ್ಚು ಪಾಲಿಷ್ ಆಗದ ಅಕ್ಕಿಯ ಅನ್ನವನ್ನು ತಿನ್ನುವಂತೆ ಡಾ. ಮಂಜುನಾಥ್ ಅವರು ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸರ್ಕಾರಕ್ಕೆ ಯಾವುದೇ ತರನಾದ ರಿಪೋರ್ಟ್ ನೀಡದೆ ವೈದ್ಯರು ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸುವ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನೆ ವಿಚಾರದ ಸಂಬಂಧ ನಿನ್ನೆ ಹಾಗೂ ಮೊನ್ನೆ ವೈದ್ಯರ ಜೊತೆ ಸಿಎಂ ಸಮಾಲೋಚಿಸಿದ್ದಾರೆ. ಇಂದು ಮಧ್ಯಾಹ್ನ ನಾನು ಸಹ ವೈದ್ಯರ ಜೊತೆ ಮಾತನಾಡಿದ್ದೇನೆ. ಆರ್ಥಿಕ ಇಲಾಖೆ ಜೊತೆ ಮಾತುಕತೆ ನಡೆಸಿ ವೇತನ ಪರಿಷ್ಕರಣೆಗೆ ಸಿದ್ಧವಿದ್ದೇವೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಿದ್ದೇವೆ. ನಾನು, ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ ಸಭೆ ನಡೆಸಿದ್ದು, ವೈದ್ಯರ ಜೊತೆ ಯಶಸ್ವಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿದಿದೆ ಎಂದು ಮಾಹಿತಿ ನೀಡಿದರು.
ಅಭಿಯಂತರರ ದಿನಾಚರಣೆ ಅಂಗವಾಗಿ ಸರ್.ಎಂ ವಿಶ್ವೇಶ್ವರಯ್ಯನವರ ಹುಟ್ಟೂರು ಮುದ್ದೇನಹಳ್ಳಿಗೆ ಭೇಟಿ ನೀಡಿ, ಸರ್ ಎಂವಿ ಅವರ ಸಮಾಧಿ ಹಾಗೂ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ನಂದಿಬೆಟ್ಟದ ತಪ್ಪಲಲ್ಲಿ ಸರ್ ಎಂವಿ ರವರ ಸವಿನೆನೆಪಿನಲ್ಲಿ ಸರ್ ಎಂವಿ ಇಂಟರ್ ನ್ಯಾಷನಲ್ ಮಾಸ್ಟರ್ ಟ್ರೈನರ್ಸ್ ಕಟ್ಟಡದ ಕಾಮಗಾರಿ ಆರಂಭಕ್ಕೆ ಡಿಸಿಎಂ ಹಾಗೂ ಸಚಿವ ಸುಧಾಕರ್ ಗುದ್ದಲಿಪೂಜೆ ನೇರವೇರಿಸಿದರು.
ಈ ವೇಳೆ ಮಾತನಾಡಿದ್ದ ಡಿಸಿಎಂ ಅಶ್ವತ್ಥ್ ನಾರಾಯಣ್ ಡ್ರಗ್ಸ್ ಜಾಲ ಇಡೀ ವಿಶ್ವದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯದಲ್ಲಿ ಅಗೆದಷ್ಟು ಡ್ರಗ್ಸ್ ಜಾಲ ಪತ್ತೆಯಾಗುತ್ತಾ ಹೋಗ್ತಿದೆ. ಮಾದಕ ವಸ್ತುಗಳ ನಿಗ್ರಹಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಎದುರಾಗಲಿದೆ. ಕೊರೊನಾ ರಿಪೋರ್ಟ್ ಸೇರಿ ಬೇರೆ ಯಾವುದೇ ಆರೋಗ್ಯ ಸಂಬಂಧಿ ರಿಪೋರ್ಟ್ ಸಿಗಲ್ಲ. ಯಾಕಂದರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರು, ಇಂದಿನಿಂದ ಆರೋಗ್ಯ ಸೇವೆಯಲ್ಲಿ, ಕೆಲಸಗಳಲ್ಲಿ ತೊಡಗಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.
ಆರೋಗ್ಯ ವರದಿಗಳನ್ನ ಸರ್ಕಾರಕ್ಕೆ ಸಲ್ಲಿಸದೇ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ಒಂದು ವಾರದೊಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆ ಬಂದ್ ಮಾಡುತ್ತೇವೆ. ಕೇವಲ ಎಮರ್ಜೆನ್ಸಿ ಮಾತ್ರ ಓಪನ್ ಇರಲಿದೆ ಅನ್ನೋ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.
ಐಎಎಸ್ ಅಧಿಕಾರಿಗಳ ತಮ್ಮನ್ನು ಮುಕ್ತ ಮಾಡಬೇಕು. ನಂಜನಗೂಡು ಆಸ್ಪತ್ರೆ ವೈದ್ಯರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ವೈದ್ಯಕೀಯ ಸಂಘ ಸರ್ಕಾರದ ಮುಂದೆ ಇಟ್ಟಿದೆ.
ಬೇಡಿಕೆಗಳು ಏನೇನು?
* ಸರ್ಕಾರದಿಂದ ಡಾಕ್ಟರ್ಸ್ ಡೇ ಮಾಡುವಂತೆ ಬೇಡಿಕೆ
* ಕೋವಿಡ್ ವೇಳೆ ಮೃತ ಪಟ್ಟ ವೈದ್ಯರಿಗೆ ಸರ್ಕಾರ ಪರಿಹಾರ ನೀಡಿಲ್ಲ, ಪರಿಹಾರ ನೀಡುವಂತೆ ಬೇಡಿಕೆ
* ಪ್ರಮುಖವಾಗಿ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯ
* ಬಿಬಿಎಂಪಿಗೆ ನೀಡಿರುವ 48 ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನ ವಾಪಸ್ ನೀಡುವಂತೆ ಒತ್ತಾಯ
* ಡಿಸಿ ಮತ್ತು ಸಿಇಓಗಳ ದಬ್ಬಾಳಿಕೆಯನ್ನ ತಪ್ಪಿಸಿಬೇಕು
ಪ್ರತಿಭಟನೆ ಯಾವ ರೀತಿ ಇರುತ್ತೆ ?
* ಇಂದಿನಿಂದ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಆನ್‍ಲೈನ್ ಆಗಲಿ ಅಥವಾ ಆಫ್‍ಲೈನ್ ಆಗಲಿ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಕೋವಿಡ್ ರಿಪೋರ್ಟ್ ಗಳನ್ನು ಸಲ್ಲಿಸದಿರಲು ನಿರ್ಧಾರ
* ರಾಷ್ಟ್ರೀಯ ಕಾರ್ಯಕ್ರಮಗಳ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಮಲೇರಿಯಾ, ಜಂತುಹುಳು, ಕುಷ್ಟರೋಗ ಸೇರಿದಂತೆ ಇನ್ನಿತರ ವರದಿಗಳನ್ನ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಡಿಸಿ ಮತ್ತು ಸಿಇಓ ಮೀಟಿಂಗ್ ಗಳಲ್ಲಿ ಭಾಗವಹಿಸದಿರಲು ನಿರ್ಧಾರ
ಸರ್ಕಾರ ವೈದ್ಯರ ಪ್ರತಿಭಟನೆಯಿಂದ ಆಗುವ ಅನಾಹುತಗಳೇನು?
* ಕೋವಿಡ್ ವರದಿಗಳನ್ನ ನೀಡದಿದ್ದರೆ ಮತ್ತಷ್ಟು ಕೋವಿಡ್ ಕೇಸ್ ಹೆಚ್ಚಾಗ್ತಾವೆ
* ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆ ಕ್ಲೋಸ್ ಮಾಡಿದ್ರೆ ಕೋವಿಡ್ ಉಲ್ಬಣಗೊಳ್ಳುತ್ತೆ
* ರಾಜ್ಯದಲ್ಲಿ ಸಾವು ನೋವು ಹೆಚ್ಚಾಗುವ ಸಾಧ್ಯತೆ
* ರಾಷ್ಟ್ರೀಯ ಕಾರ್ಯಕ್ರಮಗಳ ವರದಿ ನೀಡದಿದ್ದರೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹೋಗುತ್ತೆ
* ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಲ್ಬಣಗೊಳ್ಳುತ್ತೆ
* ಡಿಸಿ ಮತ್ತು ಸಿಇಓ ಮೀಟಿಂಗ್‍ಗಳಿಗೆ ವೈದ್ಯರು, ವೈದ್ಯಾಧಿಕಾರಿಗಳು ಅಟೆಂಡ್ ಆಗದಿದ್ದರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಷ್ಟ
ಇಂದಿನಿಂದ ಒಂದು ವಾರದ ಒಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆಗಳನ್ನು ಕ್ಲೋಸ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಇದೇ ತಿಂಗಳ 21 ರಿಂದ ಆಸ್ಪತ್ರೆ ಕ್ಲೋಸ್ ಮಾಡಲು ನಿರ್ಧಾರ ಮಾಡಲಾಗಿದ್ದು, ಎಮರ್ಜೆನ್ಸಿ ಮಾತ್ರ ಓಪನ್ ಮಾಡಲಾಗುತ್ತಿದೆ. ಅಲ್ಲದೇ ಸೆಪ್ಟೆಂಬರ್ 21 ರಿಂದ ಬೆಂಗಳೂರು ಚಲೋ ಆರಂಭ ಮಾಡಲಿದ್ದಾರೆ. ಬೆಂಗಳೂರು ಚಲೋ ಆರಂಭ ಮಾಡಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು: ಕೊರೊನಾ ಮಹಾಸ್ಫೋಟದ ನಡುವೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಈ ಮೂಲಕ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಮಂಗಳವಾರದಿಂದ ಕೊರೊನಾ ವರದಿ ಸೇರಿದಂತೆ ಯಾವುದೇ ಹೆಲ್ತ್ ರಿಪೋರ್ಟ್ ಸಿಗೋದು ಡೌಟು. ಈ ಸಂಬಂಧ ಸರ್ಕಾರಿ ವೈದ್ಯರ ಸಂಘ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವುದೇ ರೀತಿಯ ಆರೋಗ್ಯ ಸೇವೆಯಲ್ಲಿ ಕೆಲಸಗಳಲ್ಲಿ ತೊಡಗಿಕೊಳ್ಳದಿರಲು ವೈದ್ಯರು ನಿರ್ಧಾರ ಮಾಡಿದ್ದಾರೆ. ಹೆಲ್ತ್ ರಿಪೋರ್ಟ್ ನೀಡದೇ ಆಸ್ಪತ್ರೆಗಳನ್ನ ಕ್ಲೋಸ್ ಮಾಡಲು ರಾಜ್ಯ ಸರ್ಕಾರಿ ವೈದ್ಯರ ಸಂಘದಿಂದ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಕಾರ್ಯಕ್ರಮಗಳ ವರದಿಗಳನ್ನ ಹಾಗೂ ಮಲೇರಿಯಾ, ಜಂತುಹುಳು, ಕುಷ್ಟರೋಗ ಸೇರಿದಂತೆ ಇನ್ನಿತರ ವರದಿಗಳನ್ನ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ ಮಾಡಲಾಗಿದೆ. ಅಲ್ಲದೆ ಡಿಸಿ ಮತ್ತು ಸಿಇಓ ಮೀಟಿಂಗ್ ಗಳಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಿ ವೈದ್ಯರ ಸಂಘ ಈ ನಿರ್ಧಾರ ತೆಗೆದುಕೊಂಡಿದ್ದು, ಇದೇ ತಿಂಗಳ 15 ರಿಂದ ಅಂದರೆ ಮಂಗಳವಾರದಿಂದ ವೈದ್ಯಕೀಯ ಸೇವೆ ಮಾಡದೆ, ಆರೋಗ್ಯ ವರದಿಗಳನ್ನ ಸರ್ಕಾರಕ್ಕೆ ಸಲ್ಲಿಸದೇ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ.
ಯಾವುದೇ ರೀತಿಯ ಆನ್‍ಲೈನ್ ಇರಬಹುದು ಆಫ್‍ಲೈನ್ ವರದಿಗಳನ್ನ ಸರ್ಕಾರ ಸಲ್ಲಿಸದಿರಲು ಹಾಗೂ ಕೆಲಸದಲ್ಲಿ ತೊಡಗಿಕೊಳ್ಳದಿರಲು ಸರ್ಕಾರಿ ವೈದ್ಯರ ಸಂಘ ನಿರ್ಧರಿಸಿದೆ. ಸೆಪ್ಟೆಂಬರ್ 15 ಅಂದರೆ ಮಂಗಳವಾರದಿಂದ ರಾಜ್ಯಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಪಕ್ಕಾ ಆಗಿದ್ದು, ರಾಜ್ಯದಲ್ಲಿ ಸರ್ಕಾರಿ ವೈದ್ಯರು ಕಾರ್ಯ ನಿರ್ವಹಿಸುತ್ತಿಲ್ಲ. ಈ ಹಿಂದೆ ಸರ್ಕಾರದ ಮುಂದೆ ಇಟ್ಟಿದ್ದ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ವೈದ್ಯರ ಸಂಘ ಪ್ರತಿಭಟನೆ ನಡೆಸಲಿದೆ.
ಬೇಡಿಕೆಗಳು ಏನೇನು?
* ಸರ್ಕಾರದಿಂದ ಡಾಕ್ಟರ್ಸ್ ಡೇ ಮಾಡುವಂತೆ ಬೇಡಿಕೆ
* ಕೋವಿಡ್ ವೇಳೆ ಮೃತ ಪಟ್ಟ ವೈದ್ಯರಿಗೆ ಸರ್ಕಾರ ಪರಿಹಾರ ನೀಡಿಲ್ಲ ಪರಿಹಾರ ನೀಡುವಂತೆ ಬೇಡಿಕೆ
* ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯ
* ಬಿಬಿಎಂಪಿಗೆ ನೀಡಿರುವ 48 ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನ ವಾಪಸ್ ನೀಡುವಂತೆ ಒತ್ತಾಯ
* ಡಿಸಿ ಮತ್ತು ಸಿಇಓಗಳ ದಬ್ಬಾಳಿಕೆಯನ್ನ ತಪ್ಪಿಸಬೇಕು.
ಪ್ರತಿಭಟನೆಯಿಂದ ಆಗುವ ಅನಾಹುತಗಳೇನು?
* ಕೊವಿಡ್ ವರದಿಗಳನ್ನ ನೀಡದಿದ್ದರೆ ಮತ್ತಷ್ಟು ಕೇಸ್ ಹೆಚ್ಚಾಗುವ ಸಾಧ್ಯತೆ
* ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆ ಕ್ಲೋಸ್ ಮಾಡಿದ್ರೆ ಕೋವಿಡ್ ಉಲ್ಬಣಗೊಳ್ಳುವ ಸಾಧ್ಯತೆ
* ರಾಜ್ಯದಲ್ಲಿ ಸಾವು ನೋವು ಹೆಚ್ಚಾಗುವ ಸಾಧ್ಯತೆ
* ರಾಷ್ಟ್ರೀಯ ಕಾರ್ಯಕ್ರಮಗಳ ವರದಿ ನೀಡಿದಿದ್ದರೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹೋಗುತ್ತೆ
* ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಲ್ಬಣಗೊಳ್ಳುತ್ತೆ
* ಡಿಸಿ ಮತ್ತು ಸಿಇಓ ಮೀಟಿಂಗ್ ಗಳಿಗೆ ವೈದ್ಯರು, ವೈದ್ಯಾಧಿಕಾರಿಗಳು ಅಟೆಂಡ್ ಆಗದಿದ್ರೆ ಆರೋಗ್ಯ ಸಮಸ್ಯೆ ಗಳಿಗೆ ಪರಿಹಾರ ಕಷ್ಟ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊರೊನಾದಿಂದ ಗುಣಮುಖರಾಗಿದ್ದು, ಸದ್ಯ ಕ್ವಾರಂಟೈನ್‍ನಲ್ಲಿದ್ದಾರೆ.
ನಳಿನ್ ಕುಮಾರ್ ಅವರಿಗೆ ಆಗಸ್ಟ್ 30 ರಂದು ಕೊರೊನಾ ಪಾಸಿಟಿವ್ ದೃಢವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೊರೊನಾದಿಂದ ಗುಣಮುಖರಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
“ಕಟೀಲು ದುರ್ಗಾಪರಮೇಶ್ವರಿ ದೇವಿಯ ಕೃಪೆ, ನಿಮ್ಮೆಲ್ಲರ ಪ್ರೀತಿ, ಹಾರೈಕೆಯ ಫಲವಾಗಿ ಕೊರೊನಾ ಕಾಯಿಲೆಯಿಂದ ಗುಣಮುಖನಾಗಿದ್ದೇನೆ. ಸದ್ಯ ಕೆಲವು ದಿನಗಳ ತನಕ ಕ್ವಾರಂಟೈನ್‍ನಲ್ಲಿ ಇರಲು ವೈದ್ಯರು ಸಲಹೆ ನೀಡಿದ್ದಾರೆ” ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
ಮೊತ್ತೊಂದು ಟ್ವೀಟ್ ಮಾಡಿದ್ದು, “ನಾನು ಭಗವಂತನನ್ನು ಕಣ್ಣಾರೆ ನೋಡಿದವನಲ್ಲ. ಆದರೆ ತಮ್ಮ ಅಮೂಲ್ಯ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಲ್ಲಿ, ದಾದಿಯರಲ್ಲಿ, ಆರೋಗ್ಯ ಸಿಬ್ಬಂದಿಯಲ್ಲಿ ದೇವರನ್ನು ಕಂಡೆ” ಎಂದು ವೈದ್ಯರು, ದಾದಿಯರಿಗೆ ಧನ್ಯವಾದ ತಿಳಿಸಿದ್ದಾರೆ.
ಕಟೀಲು ದುರ್ಗಾಪರಮೇಶ್ವರಿ ದೇವಿಯ ಕೃಪೆ, ನಿಮ್ಮೆಲ್ಲರ ಪ್ರೀತಿ, ಹಾರೈಕೆಯ ಫಲವಾಗಿ ಕೊರೊನಾ ಕಾಯಿಲೆಯಿಂದ ಗುಣಮುಖನಾಗಿದ್ದೇನೆ. ಸದ್ಯ ಕೆಲವು ದಿನಗಳ ತನಕ ಕ್ವಾರಂಟೈನ್ ನಲ್ಲಿ ಇರಲು ವೈದ್ಯರು ಸಲಹೆ ನೀಡಿದ್ದಾರೆ. 1/2
ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡುವ ಮೂಲಕ ತಮಗೆ ಕೊರೊನಾ ಪಾಸಿಟಿವ್ ಆಗಿರುವುದನ್ನು ತಿಳಿಸಿದ್ದರು. “ನಾನು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮ್ಮ ಶುಭಾಶಯಗಳು ಮತ್ತು ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರಿ” ಎಂದು ನಳಿನ್ ಕುಮಾರ್ ಅವರು ಮನವಿ ಮಾಡಿಕೊಂಡಿದ್ದರು.
ನಾನು ಭಗವಂತನನ್ನು ಕಣ್ಣಾರೆ ನೋಡಿದವನಲ್ಲ. ಆದರೆ ತಮ್ಮ ಅಮೂಲ್ಯ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಲ್ಲಿ, ದಾದಿಯರಲ್ಲಿ, ಆರೋಗ್ಯ ಸಿಬ್ಬಂದಿಗಳಲ್ಲಿ ದೇವರನ್ನು ಕಂಡೆ. 2/2
ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ಕಿಮ್ಸ್ ನ ಎಲ್ಲಾ ವೈದ್ಯರು ರೋಗಿಗಳ ಬಗೆಗೆ ಬಹಳ ಮುತುವರ್ಜಿ ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಗಂಭೀರ ಪ್ರಕರಣಗಳನ್ನು ಸಹ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ವೈದ್ಯಕೀಯ ವೃತ್ತಿ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಸರ್ಕ್ಯೂಟ್ ಹೌಸಿನಲ್ಲಿ ಇಂದು ಬೆಳಗಾವಿಯ ಏಕಸ್ ಇನ್ಫ್ರಾ ಮತ್ತು ಏಕಸ್ ಫೌಂಡೇಶನ್ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ನೀಡಿದ ಹೈ ಫ್ಲೋ ನಾಸಲ್ ಆಕ್ಸಿಜನ್ ಉಪಕರಣಗಳನ್ನು ಕಿಮ್ಸ್ ಸಂಸ್ಥೆಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಕಿಮ್ಸ್ ಸಂಸ್ಥೆಯನ್ನು ನಾಡಿಗೆ ಸಂಜೀವಿನಿಯಾಗುವಂತೆ ಮಾದರಿಯಾಗಿ ರೂಪಿಸಿದ್ದಾರೆ ಎಂದು ಹಾಡಿ ಹೊಗಳಿದರು.
ಕೋವಿಡ್‍ನಿಂದ ಗಂಭೀರವಾಗಿ ಬಳಲುತ್ತಿದ್ದ ರಾಜಕೀಯ ಪಕ್ಷದ ಜನಪ್ರತಿನಿಧಿಯೊಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿರಲಿಲ್ಲ. ಕೊನೆಗೆ ಕಿಮ್ಸ್ ನಲ್ಲಿ ಅವರು ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂತಹ ಸಹಸ್ರಾರು ಪ್ರಕರಣಗಳಲ್ಲಿ ಕಿಮ್ಸ್ ವೈದ್ಯರು ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ರೋಗಿಗಳ ಹೆಚ್ಚಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಇನ್ನಷ್ಟು ಸೌಲಭ್ಯಗಳ ಅವಶ್ಯಕತೆ ಮತ್ತು ಗಂಭೀರತೆ ಬಗ್ಗೆ ಜಿಲ್ಲಾಡಳಿತ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಏಕಸ್ ಸೇರಿದಂತೆ ನಾನಾ ಕಂಪನಿಗಳನ್ನು ಸಂಪರ್ಕಿಸಿ ಸಿಎಸ್‍ಆರ್ ಅಡಿ ಅನುದಾನ ಒದಗಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಏಕಸ್ ಫೌಂಡೇಶನ್ ನಿರ್ದೇಶಕ ಪ್ರವೀಣಕುಮಾರ್ ನಾಯಕ, ಏಕಸ್ ಕಂಪನಿ ಉಪಾಧ್ಯಕ್ಷ ಬಸವರಾಜ ಸುಗಂ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣಿ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಚವ್ಹಾಣ, ಡಾ.ಎಸ್.ವೈ. ಮುಲ್ಕಿಪಾಟೀಲ, ಡಾ.ರಾಜಶೇಖರ ದ್ಯಾಬೇರಿ, ಡಾ.ಲಕ್ಷ್ಮೀಕಾಂತ ಲೋಕರೆ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.
ಬೆಂಗಳೂರು/ಮೈಸೂರು: ಕೊರೊನಾ ವಾರಿಯರ್ ಆಗಿದ್ದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ಸದ್ಯ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದೆ. ಕೋವಿಡ್ ವಾರಿಯರ್ಸ್ ಮೇಲಿನ ಒತ್ತಡ ನಿವಾರಣೆಗೆ ಸರ್ಕಾರ ದೂರು ಪೆಟ್ಟಿಗೆ ವ್ಯವಸ್ಥೆ ಏರ್ಪಡಿಸುವ ಚಿಂತನೆಯಲ್ಲಿದೆ.
ಕೊರೊನಾ ವಾರಿಯರ್ಸ್ ಮೇಲಿನ ಒತ್ತಡ ನಿವಾರಣೆಗೆ ಸರ್ಕಾರದ ಕಂಪ್ಲೆಂಟ್ ಬಾಕ್ಸ್ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆಸುತ್ತಿದೆ. ಕೊರೊನಾ ಸೇವೆ ನಿರ್ವಹಿಸುತ್ತಿರುವ ಇಲಾಖೆ, ಕಚೇರಿ, ಆಸ್ಪತ್ರೆಗಳಲ್ಲಿ ಪ್ರತ್ಯೇಕ ದೂರು ಪೆಟ್ಟಿಗೆ ಏರ್ಪಡಿಸಿ ಆ ಮೂಲಕ ಸಿಬ್ಬಂದಿಗೆ ಅನಗತ್ಯವಾಗಿ ಹೆಚ್ಚಿನ ಒತ್ತಡ ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲು ಮುಂದಾಗಿದೆ.
ಹೇಗೆ ಕೆಲಸ ಮಾಡಲಿವೆ?
ಕೊರೊನಾ ಸೇವೆಯಲ್ಲಿರುವ ಸಿಬ್ಬಂದಿ ಮೇಲೆ ಯಾರಾದರೂ ಒತ್ತಡ, ಹಿಂಸೆ, ಅಕ್ರಮ, ಲೋಪ, ಕಂಡುಬಂದಲ್ಲಿ ದೂರು ಪೆಟ್ಟಿಗೆ ಪತ್ರ ಬರೆದು ಹಾಕಬಹುದು. ದೂರು ನೀಡುವ ವೇಳೆ ಯಾಕೆ? ಯಾವ ವಿಭಾಗ ಎಂಬ ವಿವರ ನೀಡಬೇಕಿದೆ. ಆದರೆ ದೂರು ಕೊಡುವವರು ತಮ್ಮ ಹೆಸರು ಹೇಳುವ ಅಗತ್ಯವಿರುವುದಿಲ್ಲ. ದೂರು ಬಾಕ್ಸ್ ನಲ್ಲಿ ಬರೆದು ಹಾಕಲು ಇಷ್ಟವಿಲ್ಲದಿದ್ದರೆ ಮೇಲ್ ಮೂಲಕವೂ ದೂರು ಸಲ್ಲಿಸಬಹುದಾಗಿದೆ.
ದೂರು ಪೆಟ್ಟಿಗೆ ಮೂಲಕ ಬಂದ ದೂರುಗಳ ಪರಿಶೀಲನೆಗೆ ಇಲಾಖಾವಾರು ಅಧಿಕಾರಿಗಳ ಕಮಿಟಿ ರಚನೆ ಮಾಡಿ, ಸಮಿತಿ ಪರಿಶೀಲನೆ ಬಳಿಕ ದೂರಿನಲ್ಲಿ ಸತ್ಯಾಂಶ ಇದ್ದರೆ ಸರ್ಕಾರದ ಗಮನಕ್ಕೆ ತರಬಹುದಾಗಿದೆ. ಆ ಬಳಿಕ ಸರ್ಕಾರದ ಮಟ್ಟದಲ್ಲಿ ಕ್ರಮ ಜರುಗಿಸಿಲು ಚಿಂತನೆ ನಡೆಸಲಾಗುತ್ತದೆ. ಆದರೆ ದೂರು ಪೆಟ್ಟಿಗೆ ದುರ್ಬಳಕೆ ಮಾಡಿಕೊಂಡರೆ ಅಂಥವರ ವಿರುದ್ಧವೂ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಹೊಸ ಸಂಕಷ್ಟ?
ಇತ್ತ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಾಧಿಕಾರಿಗಳಿಗೆ ‘ಟಾರ್ಗೆಟ್’ ಕೊಟ್ಟ ಸರ್ಕಾರಕ್ಕೆ ಇದೀಗ ವೈದ್ಯರ ಸಂಘ ಹೊಸ ನಿಬಂಧನೆಗಳನ್ನು ಹಾಕಿದೆ. ಮಾರ್ಕೆಟ್, ಬಸ್ ಸ್ಟಾಂಡ್, ಆಟೋ ಸ್ಟಾಂಡ್ ಹಾಗೂ ಗಣೇಶ ಪೆಂಡಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೂ ಕೊರೊನಾ ಟೆಸ್ಟ್ ಮಾಡಲ್ಲ. ಸೋಂಕಿತರ ಮನೆ ಬಳಿ ತೆರಳಿ ಬೇಕಿದ್ದರೆ ಟೆಸ್ಟ್ ಮಾಡುತ್ತೇವೆ ಎಂದು ವೈದ್ಯರ ಸಂಘ ಸ್ಪಷ್ಟಪಡಿಸಿದೆ. ವೈದ್ಯರ ಈ ಷರತ್ತಿನಿಂದ ಸರ್ಕಾರ ಸದ್ಯ ಇಕ್ಕಟ್ಟಿಗೆ ಸಿಲುಕಿದೆ.
ಸದ್ಯ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಣಾಮ ಕೊರೊನಾ ಟೆಸ್ಟಿಂಗ್ ಹೆಚ್ಚು ಮಾಡದಿದ್ದರೆ ಅಪಾಯ ಖಚಿತ ಎಂದು ಹೇಳಬಹುದಾಗಿದೆ. ಮಾರ್ಕೆಟ್, ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡಿದ್ದಕ್ಕೆ ಕೇಸ್ ಸಂಖ್ಯೆ ಹೆಚ್ಚಳವಾಗುತ್ತದೆ. ಆದರೆ, ಈಗ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟಿಂಗ್ ಮಾಡಲ್ಲ ಎಂದು ವೈದ್ಯರು ಹೊಸ ಷರತ್ತು ವಿಧಿಸಿದ್ದು, ಟೆಸ್ಟ್ ಮಾಡದಿದ್ದರೆ ಟೆಸ್ಟಿಂಗ್ ರೇಟ್ ಕಡಿಮೆ ಆಗುತ್ತದೆ. ಈ ಬೆಳವಣಿಗೆಯಿಂದ ಕೊರೊನಾ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೊದಲು ದಿನಕ್ಕೆ ಕೇವಲ 5 ಸಾವಿರ ಟೆಸ್ಟ್ ನಡೆಯುತ್ತಿತ್ತು. ಆದರೆ ಈಗ 25 ಸಾವಿರ ಟೆಸ್ಟ್ ಮಾಡುತ್ತಿದ್ದು, ಟೆಸ್ಟಿಂಗ್ ಸಂಖ್ಯೆ ಮತ್ತೆ ಐದು ಸಾವಿರಕ್ಕೆ ಬಂದು ನಿಂತರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಿಎಂ ಮನವೊಲಿಕೆ ಹಿನ್ನೆಲೆ ನಂಜನಗೂಡು ಟಿಹೆಚ್‍ಒ ಆತ್ಮಹತ್ಯೆ ಪ್ರಕರಣ ಸಂಬಂಧ ಎರಡು ದಿನಗಳಿಂದ ಮೈಸೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವೈದ್ಯಾಧಿಕಾರಿಗಳು ಹಿಂಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಸಿಎಂ ಮನವೊಲಿಕೆ-ಷರತ್ತು ವಿಧಿಸಿ ಪ್ರತಿಭಟನೆ ಹಿಂಪಡೆದ ವೈದ್ಯರು
ಸಚಿವ ಡಾ. ಸುಧಾಕರ್, ಶ್ರೀರಾಮುಲು ಮತ್ತು ಸಿಎಂ ಪುತ್ರ ವಿಜಯೇಂದ್ರ ಪ್ರತಿಭಟನೆ ಹಿಂಪಡೆದಿದ್ದಕ್ಕೆ ವೈದ್ಯರಿಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೈದ್ಯರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ನೆನ್ನೆ ಕರೆ ನೀಡಲಾಗಿದ್ದ ಮುಷ್ಕರ ವಾಪಸ್ ಪಡೆದಿರುವ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಧನ್ಯವಾದಗಳು” ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿದೆ. ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರು ವೈದ್ಯರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವ ಹಿನ್ನೆಯಲ್ಲಿ, ನೆನ್ನೆ ಕರೆ ನೀಡಲಾಗಿದ್ದ ಮುಷ್ಕರ ವಾಪಸ್ ಪಡೆದಿರುವ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಧನ್ಯವಾದಗಳು.
ನಂಜನಗೂಡು ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಹಾಗೂ ಕೆಲವು ಬೇಡಿಕೆಗಳೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದ ವೈದ್ಯಾಧಿಕಾರಿಗಳು, ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂಬ ನನ್ನ ಭರವಸೆಗೆ ಬೆಲೆ ಕೊಟ್ಟು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಇಲಾಖೆಯ ವೈದ್ಯಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ಹೇಳಿದ್ದಾರೆ.
2/2 ಇಲಾಖೆಯ ವೈದ್ಯಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಕೋವಿಡ್ ವ್ಯಾಪಿಸಿರುವ ಸನ್ನಿವೇಶದಲ್ಲಿ ಜನರ ಆರೈಕೆಗೆ ನಿಮ್ಮೆಲ್ಲರ ಸೇವೆ ಅತ್ಯಗತ್ಯ. ಈ ಜವಾಬ್ದಾರಿ ಅರಿತು, ಸಾರ್ವಜನಿಕ ಹಿತದೃಷ್ಟಿಯಿಂದ ಮುಷ್ಕರ ನಡೆಸುವ ನಿರ್ಧಾರ ಹಿಂಪಡೆದಿರುವ ಎಲ್ಲ ಆರೋಗ್ಯಾಧಿಕಾರಿಗಳಿಗೆ ಧನ್ಯವಾದಗಳು.
ಅಲ್ಲದೇ, ಕೋವಿಡ್ ವ್ಯಾಪಿಸಿರುವ ಸನ್ನಿವೇಶದಲ್ಲಿ ಜನರ ಆರೈಕೆಗೆ ನಿಮ್ಮೆಲ್ಲರ ಸೇವೆ ಅತ್ಯಗತ್ಯ. ಈ ಜವಾಬ್ದಾರಿ ಅರಿತು, ಸಾರ್ವಜನಿಕ ಹಿತದೃಷ್ಟಿಯಿಂದ ಮುಷ್ಕರ ನಡೆಸುವ ನಿರ್ಧಾರ ಹಿಂಪಡೆದಿರುವ ಎಲ್ಲ ಆರೋಗ್ಯಾಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಡಾ.ನಾಗೇಂದ್ರ ರ ಆತ್ಮ ಹತ್ಯೆ ದುರದೃಷ್ಟಕರ ಸಂಗತಿ.ತನಿಖೆಯಿಂದ ಹೊರಬರುವ ಸತ್ಯಾಂಶದ ಆಧಾರದ ಮೇಲೆ ಕ್ರಮ ಖಚಿತ ಎಂದು ಸರ್ಕಾರ ಹೇಳಿದೆ.’ವೈದ್ಯೋ ನಾರಾಯಣೋ ಹರಿ’ ಎನ್ನುವುದಕ್ಕೆ ಪೂರಕವೆಂಬಂತೆ, ಕೊರೊನಾ ಯುದ್ಧದ ಈ ಸಮಯದಲ್ಲಿ ಸೇನಾನಿಗಳಂತೆ ಹೋರಾಡುತ್ತಿರುವ ವೈದ್ಯಬಂಧುಗಳು ಮುಷ್ಕರದ ನಿರ್ಧಾರ ಕೈ ಬಿಟ್ಟು ಮಾನವೀಯ ಮೌಲ್ಯ ಎತ್ತಿ ಹಿಡಿದಿದ್ದಾರೆ🙏
ಡಾ.ನಾಗೇಂದ್ರರ ಆತ್ಮಹತ್ಯೆ ದುರದೃಷ್ಟಕರ ಸಂಗತಿ. ತನಿಖೆಯಿಂದ ಹೊರಬರುವ ಸತ್ಯಾಂಶದ ಆಧಾರದ ಮೇಲೆ ಕ್ರಮ ಖಚಿತ ಎಂದು ಸರ್ಕಾರ ಹೇಳಿದೆ. ‘ವೈದ್ಯೋ ನಾರಾಯಣೋ ಹರಿ’ ಎನ್ನುವುದಕ್ಕೆ ಪೂರಕವೆಂಬಂತೆ, ಕೊರೊನಾ ಯುದ್ಧದ ಈ ಸಮಯದಲ್ಲಿ ಸೇನಾನಿಗಳಂತೆ ಹೋರಾಡುತ್ತಿರುವ ವೈದ್ಯಬಂಧುಗಳು ಮುಷ್ಕರದ ನಿರ್ಧಾರ ಕೈ ಬಿಟ್ಟು ಮಾನವೀಯ ಮೌಲ್ಯ ಎತ್ತಿ ಹಿಡಿದಿದ್ದಾರೆ” ಎಂದು ವಿಜಯೇಂದ್ರ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.