Tag: doctors strike

  • ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

    ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

    ಮಂಡ್ಯ: ರಾಜ್ಯಾದ್ಯಂತ ವೈದ್ಯರು ಮುಷ್ಕರ ಮಾಡುತ್ತಿದ್ದರೆ, ಮಂಡ್ಯದ ಡಾಕ್ಟರ್ ಶಂಕರೇಗೌಡ ಮಾತ್ರ ತಮ್ಮ ಪಾಡಿಗೆ ತಾವು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾಗಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಬಡ ಜನರಿಗೆ ಅನುಕೂಲವಾಗುವಂತೆ ಸೇವೆ ಸಲ್ಲಿಸುತ್ತಿರುವ ಶಂಕರೇಗೌಡರು 5 ರೂಪಾಯಿ ಡಾಕ್ಟರ್ ಎಂದೇ ಚಿರಪರಿಚಿತರು. ಇವರು ಸ್ವಗ್ರಾಮ ಶಿವಳ್ಳಿಯಲ್ಲಿ ಉಚಿತವಾಗಿ ರೋಗಿಗಳನ್ನು ಪರೀಕ್ಷೆ ಮಾಡ್ತಾರೆ. ಮಂಡ್ಯದ ತಮ್ಮ ಕ್ಲೀನಿಕ್‍ನಲ್ಲಿ ಮಾತ್ರ ಪ್ರತಿಯೊಬ್ಬರಿಗೆ 5 ರೂಪಾಯಿ ಪಡೆಯುತ್ತಾರೆ.

    ಮಂಡ್ಯದ ತಮ್ಮ ಕ್ಲಿನಿಕ್ ನಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ರಮೇಶ್ ಕುಮಾರ್ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು ತರಲು ಮುಂದಾಗಿರೋದು ಒಳ್ಳೆಯದೇ ಆಗಿದೆ. ರಮೇಶ್ ಕುಮಾರ್ ಅವರು ಬಡ ಜನರ ಮೇಲೆ ಕಾಳಜಿ ತೋರಿಸುತ್ತಿರುವುದು ನನಗೆ ಸಂತೋಷವುಂಟು ಮಾಡಿದೆ ಅಂತ ಖಾಸಗಿ ವೈದ್ಯರ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಮುಷ್ಕರ ಒಂದು ಲಾಬಿ. ಮುಷ್ಕರದಲ್ಲಿ ಪಾಲ್ಗೊಳ್ಳಲು ನನಗೆ ಇಷ್ಟವಿಲ್ಲ. ಅಲ್ಲದೆ ಸರ್ಕಾರ ಈ ರೀತಿ ಕಾಯ್ದೆಯನ್ನ ಈ ಹಿಂದೆಯೇ ಮಾಡಬೇಕಿತ್ತು. ಆದ್ರೆ ಈಗ ತಿದ್ದುಪಡಿ ಮಾಡಲು ಹೊರಟಿರೋದು ಪ್ರತಿಭಟನೆಗೆ ಕಾರಣವಾಗಿದೆ. ನೂರಕ್ಕೆ ಎಪ್ಪತ್ತು ಭಾಗ ಜನರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿ ಇಲ್ಲದಿರುವುದೇ ಕಾರಣ ಅಂದ್ರು.

    ಖಾಸಗಿ ವೈದ್ಯರು ಮುಷ್ಕರ ಶುರುಮಾಡಿದಾಗಿನಿಂದ್ಲೂ, 5 ರೂ ಶಂಕರೇಗೌಡ್ರು ಮಾತ್ರ ಒಂದು ದಿನವು ರಜೆ ಮಾಡದೇ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಗಾಗಿ ಇವರ ಸೇವೆಗೆ ಮಂಡ್ಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ: ಆಂಬುಲೆನ್ಸ್ ನಲ್ಲಿ ಪರದಾಡಿದ ಗರ್ಭಿಣಿ

    ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ: ಆಂಬುಲೆನ್ಸ್ ನಲ್ಲಿ ಪರದಾಡಿದ ಗರ್ಭಿಣಿ

    ಬಾಗಲಕೋಟೆ: ಆಂಬುಲೆನ್ಸ್ ನಲ್ಲಿ ಹೆರಿಗೆ ನೋವಿನಿಂದ ನರಳುತ್ತ, ಚಿಕಿತ್ಸೆಗಾಗಿ ಪರದಾಡುತ್ತಿದ್ದ ಮಹಿಳೆಗೆ ಕೊನೆಗೂ ಸೂಸೂತ್ರವಾಗಿ ಬಾಗಲಕೋಟೆ ನಗರದ ಕುಮಾರೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

    ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದ 22 ವರ್ಷದ ಚೈತ್ರ ಪವಾರ್ ಬೆಳ್ಳಂಬೆಳಿಗ್ಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಆದರೆ ಆಂಬುಲೆನ್ಸ್ ಮೂಲಕ ಗರ್ಭಿಣಿ ಚೈತ್ರರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದಾಗ ರಾಜ್ಯಾದ್ಯಂತ ವೈದ್ಯರ ಮುಷ್ಕರ ಇರುವ ಕಾರಣ ಆಸ್ಪತ್ರೆ ಸಿಬ್ಬಂದಿಗಳು ಚಿಕಿತ್ಸೆ ನೀಡಿರಲಿಲ್ಲ.

    ಈ ವಿಚಾರವಾಗಿ ಚೈತ್ರ ಮನೆಯವರು ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ಮಧ್ಯೆ ವಾಗ್ವಾದ ಕೂಡ ನಡೆಯಿತು. ಕೊನೆಗೆ ಸಮಯ ಪ್ರಜ್ಞೆ ಮೆರೆದ ಆಂಬ್ಯುಲೆನ್ಸ್ ಚಾಲಕ ಗರ್ಭಿಣಿ ಚೈತ್ರರನ್ನು ನೇರವಾಗಿ ಬಾಗಲಕೋಟೆ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ತಂದಾಗ, ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ಚೈತ್ರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ವೈದ್ಯರು ಚಿಕಿತ್ಸೆ ನೀಡಿ ನನ್ನ ಹಾಗೂ ಮಗುವಿನ ಪ್ರಾಣ ಉಳಿಸಿದರು ಎಂದ ಭಾವಕಾರಾದ ಚೈತ್ರ ಧನ್ಯವಾದ ತಿಳಿಸಿದರು. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯ ಡಾ. ಪಾಟೀಲ್ ಹೇಳಿದರು.

     

  • ರಾಜ್ಯಾದ್ಯಂತ ಇಂದು ಖಾಸಗಿ ವೈದ್ಯರ ಮುಷ್ಕರ – ಆರೋಗ್ಯ ಸೇವೆಗಳಲ್ಲಿ ಆಗಲಿದೆ ವ್ಯತ್ಯಯ

    ರಾಜ್ಯಾದ್ಯಂತ ಇಂದು ಖಾಸಗಿ ವೈದ್ಯರ ಮುಷ್ಕರ – ಆರೋಗ್ಯ ಸೇವೆಗಳಲ್ಲಿ ಆಗಲಿದೆ ವ್ಯತ್ಯಯ

    ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯರು ಸರ್ಕಾರದ ವಿರುದ್ಧ ಇಂದು ಮುಷ್ಕರಕ್ಕೆ ಇಳಿದಿದ್ದಾರೆ.

    ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ಮುಷ್ಕರಕ್ಕೆ ಇಳಿದಿದ್ದಾರೆ. ಕಳೆದ ಜುಲೈನಲ್ಲಿ ಮುಷ್ಕರಕ್ಕೆ ಇಳಿದಿದ್ದ ವೈದ್ಯರು ಈಗ ಮತ್ತೆ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಹೊರಟ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ.

    ಚಿಕ್ಕ ಕ್ಲಿನಿಕ್‍ನಿಂದ ಹಿಡಿದು ಕಾರ್ಪೊರೇಟ್ ಆಸ್ಪತ್ರೆಗಳು ಇಂದು ಬಂದ್ ಆಗಲಿವೆ. ಒಪಿಡಿ, ಒಟಿ ಸಂಪೂರ್ಣ ಸ್ಥಗಿತವಾಗಲಿದೆ. ಕೇವಲ ಆಕ್ಸಿಡೆಂಟ್ ಹಾಗೂ ಗರ್ಭಿಣಿಯರ ಕೇಸ್ ಮಾತ್ರ ಆಟೆಂಡ್ ಮಾಡೋದಾಗಿ ವೈದ್ಯರು ಹೇಳಿದ್ದಾರೆ.

    ಚಿಕಿತ್ಸೆ ವಿಫಲವಾದ್ರೆ ವೈದ್ಯರನ್ನು ಜೈಲಿಗಟ್ಟುವ ಕಾಯ್ದೆ ಹಾಗೂ ದಂಡ ಪ್ರಯೋಗಕ್ಕೆ ವಿರೋಧ. ಜಿಲ್ಲಾಮಟ್ಟದಲ್ಲಿ ಮತ್ತೆ ಕುಂದು ಕೊರತೆ ಪರಿಹಾರ ಸಮಿತಿ ಸ್ಥಾಪನೆಗೆ ವಿರೋಧ. ಚಿಕಿತ್ಸಾ ದರವನ್ನು ಸರ್ಕಾರವೇ ನಿಗಧಿ ಮಾಡುವ ನಿರ್ಧಾರ – ಈ ಎಲ್ಲಾ ನೀತಿಗಳ ವಿರುದ್ಧ ನಾವು ಮುಷ್ಕರ ಮಾಡುತ್ತೇವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ರವೀಂದ್ರ ತಿಳಿಸಿದ್ದಾರೆ.

    ವೈದ್ಯರ ಪ್ರತಿಭಟನೆ ಕುರಿತಂತೆ ಮಾತಾನಾಡಿದ ಸಿಎಂ ಸಿದ್ದರಾಮಯ್ಯ, ವೈದ್ಯರು ಮುಷ್ಕರ ಮಾಡೋದು ಸರಿಯಲ್ಲ. ಈಗಾಗಲೇ ಅವರ ಜೊತೆ ಮಾತನಾಡಿದ್ದೇವೆ. ಮುಷ್ಕರ ಮಾಡೋದು ಸರಿಯಾದ ಕ್ರಮವಲ್ಲ. ಅವಶ್ಯಕತೆ ಇದ್ದರೆ ಮತ್ತೊಂದು ಸಾರಿ ವೈದ್ಯರ ಜೊತೆ ಮಾತನಾಡುತ್ತೇನೆ. ಬಡವರಿಗೆ ಅನುಕೂಲವಾಗಲಿ ಎಂದು ಬಿಲ್ ವ್ಯವಸ್ಥೆಯನ್ನು ತರಲಾಗುತ್ತಿದೆ. ಆದ್ದರಿಂದ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಇಂದು ವೈದ್ಯರ ಮುಷ್ಕರದಿಂದ ಸಾಕಷ್ಟು ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.