Tag: doctors strike

  • ನಾಳೆ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ವೈದ್ಯಲೋಕದ ಬಂದ್ ಯಾಕೆ?

    ನಾಳೆ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ವೈದ್ಯಲೋಕದ ಬಂದ್ ಯಾಕೆ?

    ಬೆಂಗಳೂರು: ನಾಳೆ ಆಸ್ಪತ್ರೆಗೆ ಹೋಗಬೇಕು ಅಂತಾ ಪ್ಲಾನ್ ಮಾಡಿಕೊಂಡಿದ್ದರೆ ಅದನ್ನ ಒಂದು ದಿನ ಮುಂದಕ್ಕೆ ಹಾಕಿಕೊಳ್ಳಿ. ಎಮರ್ಜೆನ್ಸಿ ಹೊರತು ಉಳಿದ ಕಾಯಿಲೆಗಳಿಗೆ ನಾಳೆ ಚಿಕಿತ್ಸೆ ಸಿಗಲ್ಲ. ಶುಕ್ರವಾರ ಖಾಸಗಿ ಆಸ್ಪತ್ರೆಗಳ ಎಲ್ಲಾ ಓಪಿಡಿ (ಹೊರ ರೋಗಿಗಳ ವಿಭಾಗ)ಗಳು ಬಂದ್ ಆಗಲಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ವೈದ್ಯರು ನಾಳೆ ಬಂದ್ ಮಾಡ್ತಿದ್ದಾರೆ.

    ಕಳೆದ ಶನಿವಾರವಷ್ಟೇ ಕನ್ನಡ ಸಂಘಟನೆಗಳ ಬಂದ್ ಮಾಡಿದ್ದರು. ರೈತ ಸಂಘಟನೆಗಳಂತೂ 4 ದಿನಗಳಿಂದ ಬಂದ್, ಪ್ರತಿಭಟನೆ ನಡೆಸುತ್ತಿದ್ದಾರೆ ಇದೇ ಸಮಯ ಅಂತ ಇವತ್ತು ಸಾರಿಗೆ ನೌಕರರು ಕೂಡ ರೈತರ ಜೊತೆ ಸೇರ್ಕೊಂಡು ಬೀದಿಗಿಳಿದಿದ್ದರು. ಈ ಬೆನ್ನಿಗೆ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಮತ್ತೊಂದು ಗೆಜೆಟ್ ನೋಟಿಫಿಕೇಶನ್ ವಿರುದ್ಧ ವೈದ್ಯರು ಸಿಡಿದೆದ್ದಿದ್ದಾರೆ. ನಾಳೆ ದೇಶವ್ಯಾಪಿ ಓಪಿಡಿ ಬಂದ್ ಮಾಡೋ ಮೂಲಕ ಪ್ರತಿಭಟನೆ ಮಾಡಲು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕರೆ ನೀಡಿದೆ.

    ವೈದ್ಯಲೋಕದ ಬಂದ್ ಯಾಕೆ?: ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮೂಲಕ ಆಯುರ್ವೇದಿಕ್ ವ್ಯಾಸಂಗ ಮಾಡಿದ ವೈದ್ಯರು, ಅಲೋಪತಿ ವೈದ್ಯರು ಮಾಡುವ ಅನೇಕ ಶಸ್ತ್ರಚಿಕಿತ್ಸೆಯನ್ನು ಮಾಡಬಹುದೆಂದು ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರ ಮಾಡಲು ಮುಂದಾಗಿದ್ದಾರೆ. ಆಯುರ್ವೇದ ವೈದ್ಯರಿಗೆ ಸರ್ಜರಿ ಮಾಡಲು ಅವಕಾಶ ಕೊಡಬಾರದು. ಆ ಅಧಿಸೂಚನೆಯನ್ನ ತಿದ್ದುಪಡಿ ಮಾಡಬೇಕು ಎಂದು ಒತ್ತಡ ಹಾಕಲು ನಾಳೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಓಪಿಡಿ ಬಂದ್ ಮಾಡುತ್ತಿದ್ದಾರೆ.

    ಕೇಂದ್ರ ಸರ್ಕಾರದ ನೋಟಿಫಿಕೇಶನ್‍ಲ್ಲಿ ಈ ವರ್ಷದ ಪಿಜಿ ಕೋರ್ಸ್‍ಗಳಲ್ಲಿ 39 ಜನರಲ್ ಸರ್ಜರಿ ಮತ್ತು 19 ಸ್ಪೆಷಲ್ ಸರ್ಜರಿ ತರಬೇತಿಗೆ ಅವಕಾಶ ಮಾಡಿಕೊಟ್ಟಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್‍ನ ಇತ್ತೀಚಿನ ನಡೆಯಿಂದಾಗಿ ಇಡೀ ದೇಶದ ಆಧುನಿಕ ವೈದ್ಯಕೀಯ ವೃತ್ತಿಯು ಕಷ್ಟಕ್ಕೆ ಸಿಲುಕಿದೆ ಅನ್ನೋದು ವೈದ್ಯರ ಅಭಿಪ್ರಾಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ರೋಗಿಗಳಿಗೂ ಸಮಸ್ಯೆ ಆಗಲಿದೆ ಅನ್ನೋದು ವೈದ್ಯರ ಆತಂಕ.

    ನಾಳೆ ನಡೆಯಲಿರುವ ಬಂದ್‍ನಿಂದ ಹೊರರೋಗಿಗಳಿಗೆ ಸಮಸ್ಯೆ ಆಗಲಿದೆ. ತುರ್ತು ಸೇವೆ ಮತ್ತು ಕೋವಿಡ್ ಸೇವೆ ಎಂದಿನಂತೆ ಇರಲಿದೆ. ಆದರೆ ಕೆಮ್ಮು, ನೆಗಡಿ, ಜ್ವರ, ರೆಗ್ಯೂಲರ್ ಚೆಕ್‍ಪ್ ಹೋಗುವವರಿಗೆ ಓಪಿಡಿ ಸೇವೆ ಅಲಭ್ಯವಾಗಲಿದೆ. ಐಎಂಎ ನೀಡಿರುವ ಬಂದ್ ಕರೆಗೆ ಫನಾ ಸೇರಿದಂತೆ ಹಲವು ಸಂಘಟನೆಗಳು ಸಾಥ್ ನೀಡಿದ್ದಾರೆ.

    ಸರ್ಕಾರಿ ವೈದ್ಯರ ರಜೆ ರದ್ದು: ಖಾಸಗಿ ವೈದ್ಯರ ಮುಷ್ಕರಕ್ಕೆ ಎಚ್ಚೆತ್ತ ಸರ್ಕಾರ, ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ನಾಳೆ ರಜೆ ರದ್ದು ಮಾಡಿದೆ. ಕಡ್ಡಾಯವಾಗಿ ಸೇವೆಗೆ ಬರುವಂತೆ ಸೂಚಿಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಹಿಸಿದೆ.

  • ವೈದ್ಯರ ಮುಷ್ಕರ ಎಫೆಕ್ಟ್ – ಜೆಡಿಎಸ್ ಕಾರ್ಯಕರ್ತ ಸಾವು

    ವೈದ್ಯರ ಮುಷ್ಕರ ಎಫೆಕ್ಟ್ – ಜೆಡಿಎಸ್ ಕಾರ್ಯಕರ್ತ ಸಾವು

    ಬಾಗಲಕೋಟೆ: ವೈದ್ಯರ ಮುಷ್ಕರ ಎಫೆಕ್ಟ್ ನಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಜೆಡಿಎಸ್ ಕಾರ್ಯಕರ್ತನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ದಾವಲಸಾಬ್ ಕೊಣ್ಣೂರ (55) ಮೃತ ದುರ್ದೈವಿ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಇರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಮೃತ ದಾವಲಸಾಬ್ ಜ್ವರ, ಅಸ್ತಮಾದಿಂದ ಬಳಲುತ್ತಿದ್ದರು. ಇದರಿಂದ ಕುಟುಂಬಸ್ಥರು ದಾವಲಸಾಬ್ ನನ್ನು ಒಳ್ಳೆಯ ಆಸ್ಪತ್ರೆಯಲ್ಲಿ ತೋರಿಸಬೇಕು ಎಂದು ಬಾಗಲಕೋಟೆಯ ನಗರಕ್ಕೆ ಬಂದಿದ್ದಾರೆ.

    ಸೋಮವಾರ ವೈದ್ಯರ ಮುಷ್ಕರ ಇದ್ದ ಹಿನ್ನೆಲೆಯಲ್ಲಿ ದಾವಲಸಾಬ್ ಅವರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ದೊರೆತಿಲ್ಲ. ಹೀಗಾಗಿ ಎರಡು ಖಾಸಗಿ ಆಸ್ಪತ್ರೆಗೆ ಅಲೆದಾಟ ನಡೆಸಿದ ಬಳಿಕ ದಾವಲಸಾಬ್ ನನ್ನು ನಾವು ಜಿಲ್ಲಾಸ್ಪತ್ರೆಗೆ ಸಾಗಿಸಲು ಮುಂದಾಗಿದ್ದೆವು. ಆದರೆ ಜಿಲ್ಲಾಸ್ಪತ್ರೆ ತಲುಪುವ ಮಾರ್ಗದಲ್ಲೇ ದಾವಲಸಾಬ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದರೆ ದಾವಲಸಾಬ್ ಬದುಕುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ ಮಾಡಿದ್ದಾರೆ.

  • ವೈದ್ಯರ ಮುಷ್ಕರ ಎಫೆಕ್ಟ್- ಜೆಡಿಎಸ್ ಕಾರ್ಯಕರ್ತ ಸಾವು

    ವೈದ್ಯರ ಮುಷ್ಕರ ಎಫೆಕ್ಟ್- ಜೆಡಿಎಸ್ ಕಾರ್ಯಕರ್ತ ಸಾವು

    ಬಾಗಲಕೋಟೆ: ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದೆ ಓರ್ವ ಜೆಡಿಎಸ್ ಕಾರ್ಯಕರ್ತ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

    ಬಾದಾಮಿ ತಾಲೂಕು ಕೆರೂರು ಪಟ್ಟಣ ನಿವಾಸಿ ದಾವಲಸಾಬ್ ಕೊಣ್ಣೂರ (55) ಮೃತ ಜೆಡಿಎಸ್ ಕಾರ್ಯಕರ್ತ. ದಾವಲಸಾಬ್ ಜ್ವರ, ಅಸ್ತಮಾದಿಂದ ಬಳಲುತ್ತಿದ್ದರು. ಇಂದು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ವೈದ್ಯರು ಇರಲಿಲ್ಲ. ಹೀಗಾಗಿ ಮತ್ತೊಂದು ಆಸ್ಪತ್ರೆಗೆ ಸಾಗಿಸಿದರೂ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ದಾವಲ್‍ಸಾಬ್ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಜಿಲ್ಲಾಸ್ಪತ್ರೆ ತಲುಪುವ ಮಾರ್ಗದಲ್ಲೇ ಅವರು ಸಾವನ್ನಪ್ಪಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು, ಚಿಕಿತ್ಸೆ ನೀಡಿದ್ದರೆ ದಾವಲಸಾಬ್ ಬದುಕುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವೇ ಅವರ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪಿಸಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಮೃತ ರೋಗಿಯೊಬ್ಬರ ಸಂಬಂಧಿಕರು ಇತ್ತೀಚೆಗೆ ಇಬ್ಬರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ವೈದ್ಯರ ದೊಡ್ಡ ಮಟ್ಟದ ಚಳುವಳಿಗೆ ಕಾರಣವಾಯಿತು. ಆದರೆ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮಮತಾ ಬ್ಯಾನರ್ಜಿ ವೈದ್ಯರಿಗೆ ಎಚ್ಚರಿಕೆ ನೀಡಿದ್ದರು.

    ಮಮತಾ ಬ್ಯಾನರ್ಜಿ ಅವರ ಹೇಳಿಕೆಯಿಂದ ಅಸಮಾಧಾನ ಹೊರಹಾಕಿದ ವೈದ್ಯರು, ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಈ ಪ್ರತಿಭಟನೆಯನ್ನು ಬೆಂಬಲಿಸಿ ಕರ್ನಾಟಕದಲ್ಲಿಯೂ ಪ್ರತಿಭಟನೆ ನಡೆಸಲಾಗುತ್ತಿದೆ.

  • ನಿಮ್ಹಾನ್ಸ್ ಓಪಿಡಿ ಬಂದ್- ಚಿಕಿತ್ಸೆಗಾಗಿ ರೋಗಿಗಳು ನರಳಾಟ, ಇತ್ತ ವೈದ್ಯರ ಹೋರಾಟ

    ನಿಮ್ಹಾನ್ಸ್ ಓಪಿಡಿ ಬಂದ್- ಚಿಕಿತ್ಸೆಗಾಗಿ ರೋಗಿಗಳು ನರಳಾಟ, ಇತ್ತ ವೈದ್ಯರ ಹೋರಾಟ

    ಬೆಂಗಳೂರು: ಸಾರ್ವಜನಿಕರಿಗೆ ನಿಮ್ಹಾನ್ಸ್ ಆಸ್ಪತ್ರೆಯ ಓಪಿಡಿ ಇಂದು ಬಂದ್ ಆಗಿರುತ್ತದೆ ಎನ್ನುವ ಬಗ್ಗೆ ಮಾಹಿತಿ ಇರದ ಹಿನ್ನೆಲೆ ಆಸ್ಪತ್ರೆಯಲ್ಲಿ ರೋಗಿಗಳು ಕಿಕ್ಕಿರಿದು ತುಂಬಿದ್ದು, ವೈದ್ಯರಿಲ್ಲದೆ ಚಿಕಿತ್ಸೆಗಾಗಿ ನರಳಾಡುತ್ತಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಪ್ರತಿಭಟನೆಗೆ ಕರೆಕೊಟ್ಟಿದ್ದು, ರಾಜ್ಯದಲ್ಲೂ ವೈದ್ಯಕೀಯ ಸೇವೆ ವ್ಯತ್ಯಯವಾದ ಪರಿಣಾಮ ರೋಗಿಗಳು ಪರಡಾಡುತ್ತಿದ್ದಾರೆ.

    ನಿಮ್ಹಾನ್ಸ್ ಆಸ್ಪತ್ರೆ ಓಪಿಡಿ ಬಂದ್ ವಿಚಾರವಾಗಿ ಸಾರ್ವಜನಿಕರಿಗೆ ಮಾಹಿತಿ ಇರಲಿಲ್ಲ. ಹೀಗಾಗಿ ರೋಗಿಗಳು ಚಿಕಿತ್ಸೆಗೆಂದು ದೂರದ ಊರುಗಳಿಂದ ಬಂದಿದ್ದು, ವೈದ್ಯರು ಸಿಗದೆ ಗೋಳಾಡುತ್ತಿದ್ದಾರೆ. ಆದರೆ ಇಂದು ನಿಮ್ಹಾನ್ಸ್ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ಇರಲಿಲ್ಲ. ಆದರೂ ಕೂಡ ಹಲವು ವೈದ್ಯರು ಕರ್ತವ್ಯಕ್ಕೆ ಬಂದಿಲ್ಲ. ಹೀಗಾಗಿ ಓಪಿಡಿ ಕ್ಲೋಸ್ ಆಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಇಲ್ಲದೆ ದೂರದ ಗುಲ್ಬರ್ಗ, ಹುಬ್ಬಳ್ಳಿ ಹಾಗೂ ಇತರೆ ನಗರಗಳಿಂದ ರೋಗಿಗಳು ಬಂದು ವೈದ್ಯರು ಸಿಗದೇ ರೋಗಿಗಳು ಕಂಗಲಾಗಿದ್ದಾರೆ. ಭಾನುವಾರ ತಡರಾತ್ರಿಯಿಂದ ವೈದ್ಯರಿಗಾಗಿ ರೋಗಿಗಳು ಕಾದು ಕುಳಿತಿದ್ದಾರೆ.

    ಅಷ್ಟೇ ಅಲ್ಲದೆ ಆಸ್ಪತ್ರೆ ಒಳಗಿರುವ ರೋಗಿಗಳಿಗೂ ಕೂಡ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ ಎಂದು ನಿಮ್ಹಾನ್ಸ್ ಆಸ್ಪತ್ರೆ ಬಳಿ ವೈದ್ಯರ ವಿರುದ್ಧ ರೋಗಿಗಳು ಹಾಗೂ ಅವರ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು, ವಯಸ್ಸಾದವರ ಗೋಳು ಕೇಳೋರಿಲ್ಲದಂತಾಗಿದೆ. ಹೀಗಾಗಿ ಚಿಕಿತ್ಸೆಗಾಗಿ ರೋಗಿಗಳು ಕಲ್ಲುಗಳ ಮೇಲೆ ಕಾದು ಕುಳಿತಿದ್ದಾರೆ. ಅಲ್ಲದೆ ವೈದ್ಯರೇ ಒಪ್ಪಿ ನಮಗೆ ಚಿಕಿತ್ಸೆ ಕೊಡಿ ಪ್ಲೀಸ್. ವೈದ್ಯೋ ನಾರಾಯಣ ಹರೇ ಎನ್ನುವುದನ್ನ ಮರೆಯಬೇಡಿ ಎಂದು ರೋಗಿಗಳು ಮನವಿ ಮಾಡಿಕೊಂಡಿದ್ದಾರೆ.

    ಚಿಕಿತ್ಸೆಗಾಗಿ ರೋಗಿಗಳು ನರಳುತ್ತಿದ್ದರೆ ಅತ್ತ ವೈದ್ಯರು ನಿಮ್ಹಾನ್ಸ್ ಆಸ್ಪತ್ರೆ ಆವರಣದಲ್ಲಿ ರ್ಯಾಲಿ ಮಾಡುತ್ತಿದ್ದಾರೆ. ಹೊರ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನ ನೋಡಿದರೂ, ನೋಡದಂತೆ ವೈದ್ಯರು ಹೋಗುತ್ತಿದ್ದಾರೆ. ಜೀವ ಅಮೂಲ್ಯವಾದದ್ದು, ರಕ್ಷಿಸಿ ಎಂದು ಬೋರ್ಡ್ ಹಿಡಿದು ವೈದ್ಯರು ರ್ಯಾಲಿ ನಡೆಸುತ್ತಿದ್ದು, ನಿರ್ದೇಶಕರ ಭೇಟಿ ಮಾಡಿ ಮನವಿ ನೀಡಿದ ನಂತರ ಇಂದು ಕೆಲಸ ಮಾಡಬೇಕಾ ಇಲ್ಲವಾ ಎಂದು ತೀರ್ಮಾನ ಮಾಡಲಾಗುತ್ತದೆ ಎನ್ನಲಾಗಿದೆ.

  • ಇಂದು ದೇಶಾದ್ಯಂತ ವೈದ್ಯರ ಮುಷ್ಕರ- ಆಸ್ಪತ್ರೆಗಳ ಓಪಿಡಿ ಬಂದ್

    ಇಂದು ದೇಶಾದ್ಯಂತ ವೈದ್ಯರ ಮುಷ್ಕರ- ಆಸ್ಪತ್ರೆಗಳ ಓಪಿಡಿ ಬಂದ್

    ಬೆಂಗಳೂರು: ಇಂದು ರಾಜ್ಯಾದ್ಯಂತ ಆಸ್ಪತ್ರೆಗಳು ಸ್ತಬ್ಧವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಪ್ರತಿಭಟನೆಗೆ ಕರೆಕೊಟ್ಟಿದ್ದು, ರಾಜ್ಯದಲ್ಲೂ ವೈದ್ಯಕೀಯ ಸೇವೆ ವ್ಯತ್ಯಯವಾಗಲಿದೆ. ರಾಜ್ಯದ ಎಲ್ಲ ಆಸ್ಪತ್ರೆಗಳ ಓಪಿಡಿ (Outdoor Patient Department) ಸ್ತಬ್ಧವಾಗಲಿದೆ.

    ಪಶ್ಚಿಮ ಬಂಗಾಳದಲ್ಲಿ ಸೋಮವಾರ ರಾತ್ರಿ ನಡೆದಿದ್ದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಸೋಮವಾರ ದೇಶಾದ್ಯಂತ ವೈದ್ಯರ ಮುಷ್ಕರಕ್ಕೆ ಕರೆ ಕೊಟ್ಟಿದೆ. ಕರ್ನಾಟಕದ ವೈದ್ಯರು ಕೂಡ ‘ಸೇವ್ ಡಾಕ್ಟರ್ಸ್’ ಘೋಷಣೆಯಡಿ ಪ್ರತಿಭಟನೆಗೆ ಸಾಥ್ ಕೊಡಲಿದ್ದಾರೆ. ಹೀಗಾಗಿ ಇಂದು ಖಾಸಗಿ ಆಸ್ಪತ್ರೆ ನರ್ಸಿಂಗ್ ಹೋಂ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳಲ್ಲಿ ತೊಂದರೆ ಎದುರಾಗಲಿದೆ.

    ಬಂದ್ ಹೇಗಿರಲಿದೆ?:
    ರಾಜ್ಯದ್ಯಾಂತ ಸುಮಾರು 4500 ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗಲಿದೆ. ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ಗಂಟೆವರೆಗೆ ಬಹುತೇಕ ಬಂದ್ ಇರಲಿದ್ದು, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳು ಸೇರಿ ಒಟ್ಟು 600 ಆಸ್ಪತ್ರೆಗಳ ಓಪಿಡಿ ಬಂದ್ ಆಗಲಿದೆ. ಸರ್ಕಾರಿ ವೈದ್ಯರು ಹೋರಾಟಕ್ಕೆ ನೈತಿಕ ಬೆಂಬಲ ನೀಡಿದರೆ ಮಾತ್ರ ಓಪಿಡಿ ಕಾರ್ಯನಿರ್ವಹಿಸುತ್ತದೆ. ಮುಷ್ಕರದಿಂದ ಹೌಸ್ ಸರ್ಜನ್ಸ್, ಮಡಿಕಲ್ ವಿದ್ಯಾರ್ಥಿಗಳ ಮುಷ್ಕರದಿಂದ ರೋಗಿಗಳಿಗೆ ತೊಂದರೆ ಆಗಬಹುದು.

    ವೈದ್ಯರ ಬೇಡಿಕೆಗಳು:
    ವೈದ್ಯರ ಸುರಕ್ಷತೆಗಾಗಿ ದೇಶದ್ಯಾಂತ ಏಕರೂಪ ಕಾನೂನು ಜಾರಿಯಾಗಬೇಕು. ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ವೈದ್ಯರ ಮೇಲೆ ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾನೂನು ಜಾರಿಗೆ ತರಬೇಕು. ಕಾನೂನು ಉಲ್ಲಂಘನೆ ಮಾಡಿದವರಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕು. ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಅಲ್ಲದೆ ಸಿಎಂ ಮಮತಾ ಬ್ಯಾನರ್ಜಿ ವೈದ್ಯರಲ್ಲಿ ಬಹಿರಂಗ ಕ್ಷಮೆಯಾಚನೆ ಮಾಡಬೇಕು ಎಂಬುದು ವೈದ್ಯರ ಬೇಡಿಕೆಗಳಾಗಿವೆ.

  • ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಬೆಳಗಾವಿ: ವೈದ್ಯರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ(ಕೆಪಿಎಂಇ) ವಿಧಾನಸಭೆಯಲ್ಲಿ ಮಂಡನೆಯಾಗಿದೆ.

    ಖಾಸಗಿ ವೈದ್ಯರ ಮುಷ್ಕರದಿಂದ 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಠ ಸಾಧಿಸಿ ಕೊನೆಗೂ ಮಂಡಿಸಿದ್ದಾರೆ.

    ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
    ಮೂಲ ಮಸೂದೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೆ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಅಂಶವಿದೆ ಎಂದು ಹೇಳಲಾಗಿತ್ತು. ಆದರೆ ಮಂಡನೆಯಾಗಿರುವ ಮಸೂದೆಯಲ್ಲಿ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು, ಸರ್ಕಾರಿ ಯೋಜನೆಯಡಿ ನೀಡುವ ಚಿಕಿತ್ಸೆಗಳಿಗೆ ಸರ್ಕಾರವೇ ದರ ನಿಗದಿ ಪಡಿಸಬೇಕು ಎನ್ನುವ ಅಂಶವಿದೆ.

    ನಿಗದಿಯಾಗಿರುವ ದರ, ವೆಚ್ಚದ ಪಟ್ಟಿಯನ್ನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಬೇಕು. ನಿಗದಿತ ಅವಧಿಯೊಳಗೆ ಹೆಚ್ಚಿಗೆ ಕಾಯಿಸದೇ ರೋಗಿಗಳೊಂದಿಗೆ ಸಮಾಲೋಚನೆ ಮಾಡಬೇಕು. ಸಮಾಲೋಚನಾ ಕೊಠಡಿಗೆ ರೋಗಿಯ ಸಂಬಂಧಿ ಅಥವಾ ಸ್ನೇಹಿತರಿಗೆ ಅವಕಾಶ ನೀಡಬೇಕು ಎನ್ನುವ ಅಂಶಗಳು ಮಸೂದೆಯಲ್ಲಿದೆ.

    ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ದೂರು ಪ್ರಾಧಿಕಾರ ರಚನೆಯಾಗಲಿದ್ದು, ಈ ಸಮಿತಿಯಲ್ಲಿ ಡಿಎಚ್‍ಓ, ಜಿಲ್ಲಾ ಆಯುಷ್ ಅಧಿಕಾರಿ, ಐಎಂಎ ಓರ್ವ ಪ್ರತಿನಿಧಿ, ಜಿಲ್ಲಾಮಟ್ಟದ ಮಹಿಳಾ ಪ್ರತಿನಿಧಿ ಇರುತ್ತಾರೆ. ದೂರು ಪ್ರಾಧಿಕಾರದಲ್ಲಿ ವಾದಿಸಲು ಅವಕಾಶ ನೀಡಲಾಗಿದ್ದು, ಆರೋಪಿತ ವೈದ್ಯರು ಅಥವಾ ಸಂಸ್ಥೆ ವಕೀಲರನ್ನು ನೇಮಿಸಿಕೊಳ್ಳಬಹುದು. ತುರ್ತು ಚಿಕಿತ್ಸಾ ಸಮಯದಲ್ಲಿ ಮುಂಗಡ ಹಣಕ್ಕೆ ರೋಗಿಗಳ ಸಂಬಂಧಿಕರಿಗೆ ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರೆ ಶವ ನೀಡದೇ ಬಾಕಿ ಹಣಕ್ಕೆ ಒತ್ತಾಯಿಸಬಾರದು ಎನ್ನುವ ಅಂಶಗಳಿವೆ.

    ಮೂಲ ಮಸೂದೆಯಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲ ಚಿಕಿತ್ಸೆಗಳಿಗೆ ಆಸ್ಪತ್ರೆಗಳು ಎಷ್ಟು ದರವನ್ನು ವಿಧಿಸಬೇಕು ಎನ್ನುವ ಅಂಶವನ್ನು ಸರ್ಕಾರವೇ ನಿಗದಿ ಪಡಿಸಲಿದೆ. ಸರ್ಕಾರ ನಿಗದಿಪಡಿಸಿದ ಪಟ್ಟಿಯನ್ನು ಆಸ್ಪತ್ರೆಗಳು ಪ್ರದರ್ಶಿಸಬೇಕು ಮತ್ತು ಅಷ್ಟೇ ದರವನ್ನು ಪಡೆಯಬೇಕು ಎನ್ನುವ ಅಂಶವಿತ್ತು. ಆದರೆ ವೈದ್ಯರ ಜೊತೆಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆಸಿದ ಸಂಧಾನ ಸಭೆಯ ಬಳಿಕ ಈ ಅಂಶಗಳನ್ನು ಕೈಬಿಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • ಪರಿವರ್ತನಾ ಯಾತ್ರೆ ಅಟ್ಟರ್ ಫ್ಲಾಪ್, ಚುನಾವಣೆಗೆ ಬಿಜೆಪಿ ಬಳಿ ಅಭ್ಯರ್ಥಿಗಳಿಲ್ಲ – ಸಿಎಂ

    ಪರಿವರ್ತನಾ ಯಾತ್ರೆ ಅಟ್ಟರ್ ಫ್ಲಾಪ್, ಚುನಾವಣೆಗೆ ಬಿಜೆಪಿ ಬಳಿ ಅಭ್ಯರ್ಥಿಗಳಿಲ್ಲ – ಸಿಎಂ

    ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಅತ್ಯಂತ ದುರ್ಬಲ ಪಕ್ಷ. ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಲು ಅವರ ಬಳಿ ಅಭ್ಯರ್ಥಿಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಚನ್ನಗಿರಿಯಲ್ಲಿ ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಘೋಷಣೆ ಮಾಡ್ತೀವಿ. ಕಾಂಗ್ರೆಸ್ 224 ಕ್ಷೇತ್ರಗಳಿಗೆ ಮಾತ್ರವಲ್ಲ 480 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕಲು ಸಿದ್ಧ. ರಾಜ್ಯದಲ್ಲಿ ಬಿಜೆಪಿ ಅತ್ಯಂತ ದುರ್ಬಲ ಪಕ್ಷ. ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಲು ಅವರ ಬಳಿ ಅಭ್ಯರ್ಥಿಗಳಿಲ್ಲ. ಬಿಜೆಪಿ ಅವರ ಪರಿವರ್ತನಾ ಯಾತ್ರೆ ಅಟ್ಟರ್ ಪ್ಲಾಫ್ ಎಂದರು. ಸಂಸದ ಅನಂತ್ ಕುಮಾರ್ ಹೆಗ್ಡೆ ಬಗ್ಗೆ ಮಾತನಾಡಿ, ಅವರು ಸಂಸ್ಕೃತಿ ಇಲ್ಲದ ಮನುಷ್ಯ ಎಂದರು.

    ವೈದ್ಯರ ಮುಷ್ಕರದಿಂದ ರಾಜ್ಯದಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂಬ ಪ್ರತಿಪಕ್ಷಗಳು ಆರೋಪದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದಲ್ಲಿ ವೈದ್ಯರ ಮುಷ್ಕರದಿಂದ ಯಾರಾದರೂ ಸಾವನ್ನಪ್ಪಿದ್ದಾರೆ ಅಂತ ದೂರು ನೀಡಲಿ ಆಮೇಲೆ ನೋಡೋಣ ಅಂದ್ರು.

    ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಬಗ್ಗೆ ವೈದ್ಯರಿಗೆ ತಪ್ಪು ಗ್ರಹಿಕೆ ಇತ್ತು. ಅವರು ಅಂದುಕೊಂಡ ಹಾಗೆ ಕಾಯ್ದೆಯಲ್ಲಿ ಇರಲಿಲ್ಲ. ಯೂನಿವರ್ಸಲ್ ಹೆಲ್ತ್ ಸ್ಕೀಂ ಜಾರಿಗೆ ತರುತ್ತಿದ್ದೇವೆ. ಅದರ ಪ್ರಕಾರ ದರ ನಿಗದಿ ಮಾಡಲಾಗುವುದು. ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡಲಿದ್ದೇನೆ. ಏಪ್ರಿಲ್, ಮೇನಲ್ಲಿ ಚುನಾವಣೆ ನಡೆಯುತ್ತೆ ಅಂದ್ರು.

  • ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಹೈಕೋರ್ಟ್ ಖಾಸಗಿ ವೈದ್ಯರಿಗೆ ಚಾಟಿ ಬೀಸಿದ್ದು ಹೀಗೆ

    ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಹೈಕೋರ್ಟ್ ಖಾಸಗಿ ವೈದ್ಯರಿಗೆ ಚಾಟಿ ಬೀಸಿದ್ದು ಹೀಗೆ

    ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರು ತಕ್ಷಣವೇ ಮುಷ್ಕರವನ್ನು ಕೈಬಿಟ್ಟು ಸೇವೆಗೆ ಹಾಜರಾಗುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ.

    ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

    ಜನಸಾಮಾನ್ಯರು ಕೂಡ ಅನ್ಯಾಯ ಆದರೆ ಕೋರ್ಟ್‍ಗೆ ಬರುತ್ತಾರೆ. ಆದರೆ ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಒಂದು ವೇಳೆ ಅನ್ಯಾಯ ಆದರೆ ನ್ಯಾಯಾಲಯಕ್ಕೆ ಬನ್ನಿ. ಅದನ್ನು ಬಿಟ್ಟು ಆಸ್ಪತ್ರೆಗಳನ್ನು ಮುಚ್ಚಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ನ್ಯಾ. ಎಚ್.ಜಿ ರಮೇಶ್ ವೈದ್ಯರ ಪರ ವಕೀಲ ಬಸವರಾಜ್ ಅವರಿಗೆ ಪ್ರಶ್ನೆ ಮಾಡಿದರು.

    ಒಂದು ಬಾರಿ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ ಆದರೆ ಅದೇ ಅಂತಿಮ ಎಂದು ತಿಳಿದುಕೊಂಡಿದ್ದಾರಾ? ಎಲ್ಲರೂ ಅನ್ಯಾಯ ಆಗಿದೆ ಎಂದು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ಮಾಡಲು ಶುರುಮಾಡಿದರೆ ಕೋರ್ಟ್ ಗಳು ಇರವುದು ಏನಕ್ಕೆ? ವಕೀಲರು ಯಾಕೆ ಬೇಕು ಎಂದು ಖಾರವಾಗಿಯೇ ಪ್ರಶ್ನಿಸಿದರು.

    ವೈದ್ಯರು ಸಮಾಜದ ಉನ್ನತ ವರ್ಗದಲ್ಲಿ ಇರುವವರು. ಇವರೇ ಈ ರೀತಿ ಮಾಡಿದರೆ ರಾಜ್ಯದಲ್ಲಿ ಆಗಿರುವ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ಗುರುವಾರ ನಮ್ಮ ಮನವಿಯನ್ನು ನೀವು ಪರಿಗಣಿಸಬಹುದು ಎಂದು ಭಾವಿದ್ದೆವು. ಆದರೆ ಈಗ ನಾವು ಆದೇಶ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿ ಚಾಟಿ ಬೀಸಿದರು.

    ಮಸೂದೆ ಮಂಡನೆಯಾಗುವ ಮುನ್ನವೇ ಬೀದಿಗಿಳಿಯುವುದು ಎಷ್ಟು ಸರಿ? ಜನರ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವ ನೀವು ನಾಗರಿಕರೆ? ನಿಮ್ಮ ಬಗ್ಗೆ ನಮಗೆ ಗೌರವ ಇದೆ ಅದನ್ನು ಉಳಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

    ಈ ವೇಳೆ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಮುಷ್ಕರದ ಬಗ್ಗೆ ಅವರ ನಿಲುವೇನು? ನಿಮ್ಮ ಮುಖ್ಯಮಂತ್ರಿಗಳ ಬಳಿ ಈಗಲೇ ಫೋನ್ ಮಾಡಿ ಮಾತನಾಡಿ ಬನ್ನಿ ಎಂದು ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರಿಗೆ ಪೀಠ ಆದೇಶಿಸಿತು. ಫೋನ್ ಮಾಡಿದ ಬಳಿಕ ಕಲಾಪಕ್ಕೆ ಹಾಜರಾದ ಅಡ್ವೋಕೇಟ್ ಜನರಲ್ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ಮುಖ್ಯಮಂತ್ರಿಗಳು ಈಗ ಸಭೆಯಲ್ಲಿದ್ದಾರೆ ಎಂದು ತಿಳಿಸಿದರು.

    ಕೊನೆಗೆ ನ್ಯಾಯಮೂರ್ತಿಗಳು, ಮುಷ್ಕರ ಕೈಬಿಟ್ಟು ಸೇವೆಗೆ ಕೂಡಲೇ ವೈದ್ಯರು ಹಾಜರಾಗಬೇಕು. ಯಾವುದೇ ಸಮಸ್ಯೆಗಳಿದ್ದರೂ ನ್ಯಾಯಾಲಯದ ಮುಂದೆ ಬನ್ನಿ. ಒಂದು ವೇಳೆ ನಮ್ಮ ಆದೇಶವನ್ನು ಉಲ್ಲಂಘಿಸಿದ್ದೆ ಆದಲ್ಲಿ ಮುಂದೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಾಸಗಿ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

    ಇದನ್ನೂ ಓದಿ: ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

     

     

  • ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

    ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

    ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ ಸಿಎಂ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ವೈದ್ಯರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ.

    ಕನ್ನಡ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ವೈದ್ಯರ ಮುಖಂಡರೊಂದಿಗೆ ಮಾತುಕತೆ ನಡೆಸಿ, ಕಾಯ್ದೆ ಕುರಿತಂತೆ ಅವರಲ್ಲಿದ್ದ ಆತಂಕ ಮತ್ತು ಭಯವನ್ನು ನಿವಾರಿಸಿದ್ದಾರೆ.

    ಸಂಧಾನ ಸಭೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಕೆಪಿಎಂಇ ತಿದ್ದುಪಡಿ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಮಾರ್ಪಾಡು ಮಾಡಿ ಮಂಡಿಸಲಾಗುವುದು. ರಾಜ್ಯದ ಎಲ್ಲ ಜನರಿಗೆ ಕೈಗೆಟಕುವ ದರಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ರಾಜ್ಯದ ಜನ ಮತ್ತು ವೈದ್ಯರ ಹಿತ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಯಾರಿಗೂ ತೊಂದರೆಯಾಗದಂತೆ, ರಾಜ್ಯದ ಜನರ ಹಿತಾಸಕ್ತಿಗೂ ಧಕ್ಕೆಯಾಗದಂತೆ ಮಸೂದೆಯನ್ನು ಅಂಗೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

    ಸಭೆ ಬಳಿಕ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಆಸ್ಪತ್ರೆ ವಿರುದ್ಧ ಸುಳ್ಳು ದೂರು ಕೊಟ್ಟರೆ ದೂರು ಕೊಟ್ಟವರ ವಿರುದ್ಧ ಕ್ರಮಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಿದ್ದೇವೆ. ಇದನ್ನ ನಿವಾರಿಸಿ ಈಗ ಕಾಯ್ದಿಯನ್ನ ಜಾರಿಗೆ ತರಲು ಮುಂದಾಗಿದ್ದೇವೆ. ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರೆ ಶವ ನೀಡಲು ಹಣಕ್ಕಾಗಿ ಬಲವಂತ ಮಾಡುವಂತಿಲ್ಲ ಎಂದು ತಿಳಿಸಿದರು.

    ಸಭೆಯಲ್ಲಿ ಏನು ಚರ್ಚೆ ಆಯ್ತು?
    ಜಿಲ್ಲಾ ಕುಂದುಕೊರತೆ ಸಮಿತಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ವೈದ್ಯರು ವಕೀಲರನ್ನ ಇಟ್ಟುಕೊಳ್ಳಬಹುದು. ಬಿಪಿಎಲ್ ಕಾರ್ಡ್‍ದಾರರಿಗೆ ದರ ನಿಗದಿ ಮಾಡಬೇಕು ಎನ್ನುವ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

    ಹೈಕೋರ್ಟ್ ಆದೇಶ:
    ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದ್ದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವೇಳೆ ಹೈಕೋರ್ಟ್ ಇಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಷ್ಟೇ ಅಲ್ಲದೇ ಗುರುವಾರ ನಾವು ಪರಿ ಪರಿಯಾಗಿ ಮನವಿ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿದ್ದರೂ ಹಠ ಮುಂದುವರಿಸಿದ್ದಕ್ಕೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿತ್ತು. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದೇ ಇದ್ದಲ್ಲಿ ಮುಂದೆ ಕಠಿಣ ಆದೇಶ ಹೊರಡಿಸಬೇಕಾದಿತು ಎಂದು ಖಡಕ್ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ವೈದ್ಯರು ಸಂಧಾನಕ್ಕೆ ಬಗ್ಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: 1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

  • ಮದ್ವೆಯಾಗಿ 6 ವರ್ಷದ ನಂತ್ರ ಜನಿಸಿದ ಹಸುಗೂಸು ವೈದ್ಯರ ಮುಷ್ಕರಕ್ಕೆ ಬಲಿ

    ಮದ್ವೆಯಾಗಿ 6 ವರ್ಷದ ನಂತ್ರ ಜನಿಸಿದ ಹಸುಗೂಸು ವೈದ್ಯರ ಮುಷ್ಕರಕ್ಕೆ ಬಲಿ

    ಕೋಲಾರ: ಖಾಸಗಿ ವೈದ್ಯರ ಮುಷ್ಕರಕ್ಕೆ 4 ತಿಂಗಳ ಹಾಲುಗಲ್ಲದ ಹಸುಗೂಸು ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

    ಹಿರೇಕಟ್ಟಿಗೇನಹಳ್ಳಿಯ ಶ್ವೇತಾ ಹಾಗೂ ಮುನಿಕೃಷ್ಣ ದಂಪತಿಯ 4 ತಿಂಗಳ ಗಂಡು ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದೆ. ಅಂದಹಾಗೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಮಗುವಿನ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.

    ಚಿಂತಾಮಣಿ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಮುಷ್ಕರದ ಹಿನ್ನೆಲೆಯಲ್ಲಿ ಅಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಕೊನೆಗೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಹೋದರೂ ಅಲ್ಲೂ ಕೂಡ ಚಿಕಿತ್ಸೆ ದೊರೆತಿಲ್ಲ. ಇನ್ನೇನು ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಆಂಬುಲೆನ್ಸ್ ನಲ್ಲೇ ಮಗು ಪ್ರಾಣ ಬಿಟ್ಟಿದೆ.

    ಶ್ವೇತಾ-ಮುನಿಕೃಷ್ಣ ದಂಪತಿಗೆ ಮದುವೆಯಾದ 6 ವರ್ಷಗಳ ನಂತರ ಈ ಮುದ್ದಾದ ಮಗು ಜನಿಸಿತ್ತು.