Tag: doctor

  • ಸಿಬ್ಬಂದಿಯೆದುರೇ ಕೈ ಕೈ ಮಿಲಾಯಿಸಿದ ಗಂಗಾವತಿಯ ಸರ್ಕಾರಿ ಆಸ್ಪತ್ರೆ ವೈದ್ಯರು

    ಸಿಬ್ಬಂದಿಯೆದುರೇ ಕೈ ಕೈ ಮಿಲಾಯಿಸಿದ ಗಂಗಾವತಿಯ ಸರ್ಕಾರಿ ಆಸ್ಪತ್ರೆ ವೈದ್ಯರು

    ಕೊಪ್ಪಳ: ಸರ್ಕಾರಿ ಆಸ್ಪತ್ರೆಯ ವೈದ್ಯರಿಬ್ಬರು ಗಲಾಟೆ ಮಾಡಿಕೊಂಡು ಕೈ ಮಿಲಾಯಿಸಿದ ಘಟನೆ ಮಂಗಳವಾರ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವದಿ ಮತ್ತು ಇನ್ನೋರ್ವ ಹಿರಿಯ ವೈದ್ಯರಾದ ಡಾ.ಜುಬೇರ್ ಅಹಮ್ಮದ್ ಆಸ್ಪತ್ರೆಯಲ್ಲೆ ಗಲಾಟೆ ಮಾಡಿಕೊಂಡು ಸಾರ್ವಜನಿಕರು ಮತ್ತು ಸಿಬ್ಬಂದಿ ಎದುರೇ ನಗೆಪಾಟಲಿಗೀಡಾಗಿದ್ದಾರೆ.

    ಡಾ.ಜುಬೇರ್ ಅಹಮ್ಮದ್ ದಿನ ನಿತ್ಯ ಆಸ್ಪತ್ರೆಗೆ ತಡವಾಗಿ ಬರುತ್ತಿದ್ದು ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಅಧಿಕಾರಿ ಡಾ.ಈಶ್ವರ್ ಸವಡಿ ಅವರನ್ನು ತಮ್ಮ ಛೇಂಬರ್‍ಗೆ ಕರೆಸಿ, ಸರಿಯಾಗಿ ಕೆಲಸ ನಿರ್ವಹಿಸಿ ಎಂದು ಹೇಳಿದ್ದಾರೆ. ಇದಕ್ಕೆ ಕುಪಿತರಾದ ಡಾ.ಜುಬೇರ್ ನೀವು ಹೇಳಿದ ಹಾಗೆ ಕೇಳಬೇಕೆಂದೇನಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.

    ಈ ಇಬ್ಬರು ವೈದ್ಯಾಧಿಕಾರಿಗಳ ಜಗಳ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಮುಂದೆ ನಡೆದಿದೆ. ವೈದ್ಯಾಧಿಕಾರಿಗಳೇ ಈ ರೀತಿ ಜಗಳ ಮಾಡಿಕೊಂಡರೆ ಆಸ್ಪತ್ರೆಗೆ ಬರುವ ರೋಗಿಗಳನ್ನು ನೋಡುವರು ಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವಿಡಿಯೋ: ವೈದ್ಯರ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ!

    ವಿಡಿಯೋ: ವೈದ್ಯರ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ!

    – ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ವೈದ್ಯ

    ಮುಂಬೈ: ನರಶಸ್ತ್ರಚಿಕಿತ್ಸಕರು ಡ್ಯೂಟಿಯಲ್ಲಿಲ್ಲದ ಕಾರಣ ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ ರೋಗಿಯ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ನಡೆದಿದೆ.

    ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೂಳೆ ತಜ್ಞರಾದ ಡಾ.ರೋಹನ್ ಮಾಮುಂಕರ್ ಮೇಲೆ ಭಾನುವಾರದಂದು ಹಲ್ಲೆ ನಡೆದಿದೆ.

    ನಡೆದಿದ್ದೇನು?: ಭಾನುವಾರ ರಾತ್ರಿ ತಲೆಗೆ ತೀವ್ರ ಗಾಯವಾಗಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆತರಲಾಯಿತು. ಆದ್ರೆ ನರಶಸ್ತ್ರಚಿಕಿತ್ಸಕರು ಆಸ್ಪತ್ರೆಯಲ್ಲಿ ಇಲ್ಲದ ಕಾರಣ ರೋಗಿಯನ್ನು ಬೇರೊಂದು ಅಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ವೈದ್ಯ ರೋಹನ್ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದು ರೋಗಿಯ ಸಂಬಂಧಿಕರಾದ ಸುಮಾರು 20 ಮಂದಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ರೋಹನ್ ಅವರ ಮೇಲೆ ರಾಡ್ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ರೋಹನ್ ಅವರ ತಲೆ ಹಾಗೂ ಎದೆಯ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿವೆ. ವೈದ್ಯರ ಕಣ್ಣಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ವೈದ್ಯ ರೋಹನ್ ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದೀಗ ಮಹಾರಾಷ್ಟ್ರ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್, ವೈದ್ಯ ರೋಹನ್ ಮೇಲಿನ ಹಲ್ಲೆ ಖಂಡಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದು, ಮೊಂಬತ್ತಿ ಹಿಡಿದು ಮೆರವಣಿಗೆ ಮಾಡಲು ನಿರ್ಧರಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಮೂವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

    https://www.youtube.com/watch?v=8ver-Y2FgcQ

  • ಆಪರೇಷನ್ ಮಾಡದೆ 8 ತಿಂಗಳ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿ ಹೊರತೆಗೆದ ಕೊಪ್ಪಳದ ವೈದ್ಯರು

    ಆಪರೇಷನ್ ಮಾಡದೆ 8 ತಿಂಗಳ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿ ಹೊರತೆಗೆದ ಕೊಪ್ಪಳದ ವೈದ್ಯರು

    ಕೊಪ್ಪಳ: ಎಂಟು ತಿಂಗಳ ಮಗುವೊಂದು ಆಕಸ್ಮಿಕವಾಗಿ ನುಂಗಿದ್ದ ಮೆಂಥೋಪ್ಲಸ್ ಡಬ್ಬಿಯನ್ನ ಆಪರೇಷನ್ ಇಲ್ಲದೆ ಹೊರತೆಗೆಯುವಲ್ಲಿ ಕೊಪ್ಪಳದ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ.

    ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಎಂಟು ತಿಂಗಳ ಮಗು ಮೆಂಥೋಪ್ಲಸ್ ಡಬ್ಬಿ ನುಂಗಿದ ಪರಿಣಾಮ ಸಾವು ಬದುಕಿನ ಮಧ್ಯೆ ಹೋರಾಡ್ತಿತ್ತು. ವೈದ್ಯರು ಶಸ್ತ್ರಚಿಕಿತ್ಸೆಯಿಲ್ಲದೆ ಫಾರಿನ್ ಬಾಡಿ ರಿಮೂವಲ್ ಫೋರ್ಸೆಪ್ಸ್ ಸಾಧನವನ್ನ ಬಳಸಿ ಡಬ್ಬಿಯನ್ನ ಹೊರತೆಗೆಯೋ ಮೂಲಕ ಮಗುವನ್ನ ಬದುಕುಳಿಸಿದ್ದಾರೆ.

    ಯಲಬುರ್ಗಾ ತಾಲೂಕಿನ ಹುಣಿಸ್ಯಾಳ ಗ್ರಾಮದ ಶಿವಶರಣಪ್ಪ ಅವರ ಗಂಡು ಮಗು ಶುಕ್ರವಾರ ನಸುಕಿನ ಜಾವ ಆಟವಾಡ್ತಿದ್ದಾಗ ಮೆಂಥೋಪ್ಲಸ್ ಡಬ್ಬಿಯನ್ನ ನುಂಗಿತ್ತು. ನಿದ್ದೆ ಮಂಪರಿನಲ್ಲಿದ ಶಿವಶರಣಪ್ಪ ದಂಪತಿ ಮಗು ಅಳದಿದ್ದಾಗ, ಬಾಯಿಯಿಂದ ಜೋಲ್ಲು ಬರೋದನ್ನ ಗಮನಿಸಿ ಮಗು ಏನೋ ಪ್ಲಾಸ್ಟಿಕ್ ಡಬ್ಬಿಯನ್ನ ನುಂಗಿದೆ ಅಂತ ಕೈಯಿಂದ ತಗೆಯಲು ಪ್ರಯತ್ನಿಸಿದ್ರು. ಅದು ಮತ್ತಷ್ಟು ಒಳಗಡೆ ಹೋಗಿ ಸಿಲುಕಿಕೊಂಡಿತ್ತು. ಬಳಿಕ ಪೋಷಕರು ಕೊಪ್ಪಳದ ಜಿಲ್ಲಾಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆಗ ಡಾ. ಮಲ್ಲಿಕಾರ್ಜುನ್ ಹಾಗೂ ವೈದ್ಯರ ತಂಡ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿಯನ್ನ ಫಾರಿನ್ ಬಾಡಿ ರಿಮೂವಲ್ ಫೋರ್ಸೆಪ್ಸ್ ಮೂಲಕ ಹೊರ ತಗೆದು ಮಗುವಿನ ಜೀವ ಉಳಿಸಿದ್ದು, ಸದ್ಯ ಮಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

    ಮಗು ಮೆಂಥೋಪ್ಲಸ್ ಡಬ್ಬಿಯನ್ನು ನುಂಗಿದ್ದರಿಂದ ಅದು ಎಂಜಲನ್ನು ಕೂಡ ನುಂಗಾಲಾರದ ಸ್ಥಿತಿಯಲ್ಲಿತ್ತು. ಮಗು ಡಬ್ಬಿ ನುಂಗಿದ ನಂತರ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗೆ 3-4 ಗಂಟೆಗಳಾಗಿತ್ತು. ಇಷ್ಟು ಹೊತ್ತು ಎಂಜಲೂ ಕೂಡ ನುಂಗದೆ ಅದರ ದೇಹದಲ್ಲಿ ನಿರ್ಜಲೀಕರಣವಾಗಲು ಶುರುವಾಗಿತ್ತು. ಮೆಂಥೋಪ್ಲಸ್ ಡಬ್ಬಿ ಧ್ವನಿಪೆಟ್ಟಿಗೆಯ ಪಕ್ಕದಲ್ಲಿರುವ ಹೈಪೋಫ್ಯಾರಿಂಗ್ಸ್‍ನಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಮಗುವಿನ ಉಸಿರಾಟಕ್ಕೂ ತೊಂದರೆಯಾಗಿತ್ತು. ಗಂಟಲಿನಲ್ಲಿ ಮೆಂಥೋಪ್ಲಸ್ ಡಬ್ಬಿ ಅಡ್ಡವಿದ್ದರಿಂದ ಟ್ಯೂಬ್ ಹಾಕಲು ಕೂಡ ಆಗಿರಲಿಲ್ಲ. ನಂತರ ‘ಮ್ಯಾಕಿನ್‍ಟೊಶ್ ಲ್ಯಾರಿಂಗೋಸ್ಕೋಪ್’ ಸಾಧನವನ್ನ ಬಳಸಿ ಡಬ್ಬಿಯನ್ನು ಹೊರತೆಗೆಯಲಾಯ್ತು ಅಂತ ಮಗುವಿಗೆ ಚಿಕಿತ್ಸೆ ನೀಡಿದ ಡಾ. ಮಧುಸೂಧನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ವೈದ್ಯರ ಶ್ರಮದಿಂದ ನಮ್ಮ ಮಗು ಮತ್ತೆ ಹುಟ್ಟಿ ಬಂತು ಅಂತ ಪೋಷಕರು ಖುಷಿಯಲ್ಲಿದ್ದಾರೆ. ಕೊಪ್ಪಳದಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗೋಲ್ಲ ಅನ್ನೋ ಮಾತಿತ್ತು. ಆದ್ರೆ ಈಗ ಅಪರೂಪದ ಚಿಕಿತ್ಸೆ ನಡೆದು ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರ್ತಿವೆ.